Thursday, March 21, 2013

ಕಗ್ಗ ರಸಧಾರೆಯಲ್ಲಿ ರವಿ ತಿರುಮಲೈ ಮತ್ತು ಅಜ್ಜ!!!

"ಅಜ್ಜ ಅಜ್ಜ" 

ಗಂಧರ್ವ ಕಿನ್ನರರು ದೇವಪುರುಷರು ಕೂಗುತ್ತ ಓಡಿಬರುತ್ತಿದ್ದರು

"ಯಾರಪ್ಪ...ಯಾಕಪ್ಪ... ಏನಾಯ್ತು?

"ಅಜ್ಜ ಹೊರಟಾಗ ಎಲ್ಲಿಗೆ ಅಂತ ಕೇಳಬಾರದು ನಿಮ್ಮ ಹಿಂದೆಯೇ ಬರುತ್ತೇವೆ.. "

"ಅಲ್ಲಪ್ಪಾ ನಿಮ್ಮ ಜೊತೆಯಲ್ಲಿ ಕಳೆದ ೩೮ ವಸಂತಗಳಿಂದ ನಿಮ್ಮ ಜೊತೆಯಲ್ಲೇ ಇದ್ದೀನಿ.. ಹೀಗೆ ಸುಮ್ಮನೆ ಒಂದು ಸಣ್ಣ ವಾಕಿಂಗ್ ಮಾಡಿ ಬರುತ್ತೇನೆ"

"ಸರಿ ಅಜ್ಜ..ಹೋಗಿ ಬನ್ನಿ ನಾವು ಇಲ್ಲೇ ನಿಮಗಾಗಿ ಕಾಯುತ್ತಿರುತ್ತೇವೆ"

ಹೋಗಿ ಸುಮಾರು ಘಂಟೆಗಳಾದರೂ ಅಜ್ಜ ಬರಲಿಲ್ಲ... ಸ್ವರ್ಗದಲ್ಲಿ ಗಾಬರಿ ಶುರುವಾಯಿತು.. ಎಲ್ಲರೂ ಚಿಂತಾಕ್ರಾಂತರಾಗಿ ಶತಪಥ ತಿರುಗುತಿದ್ದರು

ಕಿನ್ನರ ಪುರುಷನೊಬ್ಬ ಏದುಸಿರು ಬಿಡುತ್ತ.. "ಅಜ್ಜ ಬರುತಿದ್ದಾರೆ ಅಜ್ಜ ಬರುತಿದ್ದಾರೆ" ಎಂದು ಕೂಗುತ್ತ ಒಳಗೆ ಓಡಿ ಬಂದ!

ಎಲ್ಲರೂ ಅಜ್ಜನನ್ನು ಸುತ್ತುವರಿದು "ಅಜ್ಜ ಎಲ್ಲಿ ಹೋಗಿದ್ದಿರಿ... ನಿಮಗೆ ಈಗ ೧೨೬ ವರ್ಷ.... ನೀವು ತುಂಬಾ ದೂರ ನೆಡೆದು ಹೋಗಬೇಕೆಂದಿದ್ದರೆ ನಮ್ಮ ಪುಷ್ಪಕ ವಿಮಾನವನ್ನು ತೆಗೆದುಕೊಂಡು ಹೋಗಬಹುದಿತ್ತಲ್ಲವೇ?.. ನಮಗೆ ಗಾ.... "

ಸುಸ್ತಾಗಿ ಕೂತು..ಕಥೆ ಹೇಳಲು ಶುರುಮಾಡಿದ ಅಜ್ಜ !
ಅಷ್ಟರಲ್ಲಿಯೇ ಅಜ್ಜ ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿ 

"ಏನಿಲ್ಲಪ್ಪ ಹೀಗೆ ನಡೆಯುತ್ತ ಹೋಗುತಿದ್ದೆ.. ಒಂದು ಕಾಗದದ ತುಂಡಿನ ಆಹ್ವಾನ ಪತ್ರಿಕೆ ತೇಲುತ್ತ ಬಂದು ಇಲ್ಲಿ ಬಿದ್ದಿತ್ತು..
ತೇಲುತ್ತಾ ಬಂದ ಆಹ್ವಾನ ಪತ್ರಿಕೆ!
 ನೋಡಿದೆ ಸಂತಸವಾಯಿತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಸಮಾರಂಭ ಮುಗಿದುಹೋಗಿತ್ತು. 
ಸಮಾರಂಭದ ಒಂದು ಝಲಕ್ !

ಸುಂದರ ಪುಸ್ತಕಗಳ ಸಂಕಲನವೇ ಅಲ್ಲಿತ್ತು. ನೋಡಿದೆ ಖುಷಿಯಾಯಿತು. ಅದನ್ನು ಓದುತ್ತ ಕುಳಿತೆ ಸಮಯ ಹೋದದ್ದು ಅರಿವಿಗೆ ಬರಲಿಲ್ಲ.  
ಹರಿದ ರಸಧಾರೆ 
ನಂತರ  ಆ ಸಮಾರಂಭದ ಕತೃವಿನ ಮನೆಗೆ ಹೋದರೆ ಆಶ್ಚರ್ಯ.. ಅಲ್ಲಿ ಎಲ್ಲರೂ ನನ್ನ ಬಗ್ಗೆಯೇ ಮಾತಾಡುತ್ತಿದ್ದರು. ಅವರ ಜೊತೆ ನಾನು ಸ್ವಲ್ಪ ಮಾತನಾಡುತ್ತ ಕುಳಿತೆ..  ಆ ಪುಸ್ತಕದ ಕತೃವಿಗೆ ಆಶೀರ್ವಾದ ಮಾಡೋಣ ಎಂದು ಬಳಿಗೆ ಕರೆದೆ. 
ಆಶ್ಚರ್ಯಭರಿತ ನೋಟದಿಂದ ನನ್ನನ್ನು ಕಂಡ ರವಿ ನನ್ನ ಬಳಿಗೆ ಓಡಿ ಬಂದು.... 
ಅರೆ ಅಜ್ಜ ಬಂದಿದ್ದಾರೆ! (ಆಶ್ಚರ್ಯ ಚಕಿತರಾದ ರವಿ ಸರ್ )
(ಚಿತ್ರಕೃಪೆ  - ಪ್ರವರ ಕೊಟ್ಟುರ್ )
 "ಅಜ್ಜ ನಿಮ್ಮ ಪಾದಧೂಳಿಯಿಂದ ನಮ್ಮ ಜೀವನ ಪಾವನವಾಯಿತು." ಎಂದು ಕಾಲಿಗೆರಗಿದ ರವಿಯನ್ನು ಮೈತಡವಿ ಎಬ್ಬಿಸಿ "ಮಗು ರವಿ.. ಏಳಿ .. ಇಂದು ನಿಮ್ಮ ಜನುಮದಿನ ಎಂದು ನನ್ನ ಕ್ಯಾಲೆಂಡರ್ ನಲ್ಲಿ ಗುರುತು ಮಾಡಿಕೊಂಡಿದ್ದೆ.  ನಾನು ದಶಕಗಳ ಹಿಂದೆ ಬರೆದ ನಾಲ್ಕು ಸಾಲುಗಳ ಪದ ಪುಂಜಗಳಿಗೆ ಎಷ್ಟು  ಚೆನ್ನಾಗಿ ಅರ್ಥ ವಿಸ್ತಾರ ಕೊಡುತಿದ್ದೀರಾ ತುಂಬಾ ಸಂತಸವಾಗುತ್ತಿದೆ. ನನ್ನ ಕಗ್ಗಗಳನ್ನು ಅನೇಕರು ವಿಶ್ಲೇಷಣೆ ಮಾಡಿದ್ದಾರೆ. ಅನೇಕರು ಸಾಗಿದ ಹಾದಿಯಲ್ಲಿ ನೀವು ಸಾಗಿದರೂ ಅದಕ್ಕೆ ನಿಮ್ಮದೇ ಆದ ವಿಶಿಷ್ಟ ವಿಶ್ಲೇಷಣೆಯನ್ನೂ, ಅನುಭವದ ಮೂಸೆಯಲ್ಲಿ ಅರಳಿದ ಪಾಠಗಳನ್ನೂ , ಓದಿದ ವಿಷಯಗಳನ್ನೂ,  ಪ್ರತಿಯೊಂದಕ್ಕೂ ಹೊಂದಿಸಿ ಬರೆದಿರುವ ಪರಿ ಸೊಗಸಾಗಿದೆ. ಬರೆದ ಸಾಲುಗಳು ಇನ್ನಷ್ಟು ಮಂದಿಗೆ ತಲುಪುವುದರಲ್ಲಿ ಸಂದೇಹವೇ ಇಲ್ಲ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ... "

"ಅಜ್ಜ ಅಜ್ಜ ನಿಮ್ಮ ಆಶೀರ್ವಾದ ನನಗೆ ಶ್ರೀರಕ್ಷೆ.    ನನ್ನ ಜನುಮದಿನಕ್ಕೆ ನೀವೇ ಬಂದಿರುವುದು ನನಗೆ ಬಹಳ ಖುಷಿಯಾಯಿತು. ನನ್ನ ಜನ್ಮ ಸಾರ್ಥಕವಾಯಿತು.. ನಿಮ್ಮ ಆಶೀರ್ವಾದದ ಬಲದಿಂದ ನಿಮ್ಮ ನೂರಾ  ಇಪ್ಪತ್ತಾರನೇ ಜನುಮದ ದಿನದಂದು "ಕಗ್ಗ ರಸಧಾರೆ ಸಂಪುಟ - ೧" ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರ ಮಾರ್ಗದರ್ಶನದಲ್ಲಿ ಲೋಕಾರ್ಪಣಗೊಂಡಿತು" 
ಕಗ್ಗ ರಸಧಾರೆ ಲೋಕಾರ್ಪಣಗೊಂಡ ಸಂತಸದ ಘಳಿಗೆ 
"ಅವರ ಮಾತುಗಳಲ್ಲಿ   ನಿಮ್ಮ ಜೊತೆಯಲ್ಲಿನ ಒಡನಾಟವನ್ನು, ಮಾರ್ಗದರ್ಶಿ ಸಂದೇಶಗಳನ್ನು ತಿಳಿದುಕೊಂಡೆವು . ನಿಮ್ಮ ಕುಟುಂಬದ ಕುಡಿ ಶ್ರೀ ಚಂದ್ರಮೌಳಿ ಅವರು ನಿಮ್ಮ ಕಾಲದ ದಿನಗಳನ್ನು ನೆನೆಸಿಕೊಂಡರು. ಶ್ರೀ ರಾಜಗೋಪಾಲ್ ಅವರು ಕಗ್ಗಕ್ಕೆ ನೊಬೆಲ್ ಪ್ರಶಸ್ತಿ ಕೊಟ್ಟಿದ್ದರೇ ಆ ಪ್ರಶಸ್ತಿಗೆ ಗೌರವ ಸಿಕ್ಕುತ್ತಿತ್ತು ಎಂದರು. ಶ್ರೀ ಸುಬ್ಬುಕೃಷ್ಣ ಅವರು ಕಗ್ಗದ ಬಗ್ಗೆ ಆಡಿದ ಕಿರು ಮಾತುಗಳು ಮುದ ಕೊಟ್ಟವು. ಇನ್ನೂ ಸರಕಾರದ ಶ್ರೀ ವಿಶು ಕುಮಾರ್ ಅವರು ಎಲ್ಲರ ಸಹಕಾರ ಕೋರಿ ಈ ರೀತಿಯಲ್ಲಿ ಹಿರಿಯ ಸಾಹಿತಿಗಳನ್ನು ನೆನೆಸಿಕೊಂಡು ಅವರು ಮಾಡಿರುವ ಸೇವೆಯನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸುವ ಪರಿಚಯಿಸುವ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಇಚ್ಚಿಸುತ್ತೇನೆ ಎಂದರು. ಕಗ್ಗದ ಭಟ್ಟರೆಂದೇ ಹೆಸರಾದ ಶ್ರೀ ಲಕ್ಷ್ಮಿನಾರಾಯಣ ಭಟ್ಟರು ಕಗ್ಗದ ಬಗ್ಗೆ ವಿವರಿಸುತ್ತ ಹೋದಂತೆ ಮೂಕ ವಿಸ್ಮಿತರಾಗಿ ಕುಳಿತಿದ್ದೆವು. ನನ್ನ ಬಂಧುಗಳು ಮಿತ್ರರು ಎಲ್ಲರೂ ಸೇರಿ ಈ ಸಮಾರಂಭವನ್ನು ವ್ಯವಸ್ಥಿತವಾಗಿ ಏರ್ಪಡಿಸಿ ಅದರ ಗೆಲುವಿಗೆ ಕಾರಣರಾದರು" 
"ಹೌದೆ ಕಂದ. ಬಹಳ ಸಂತೋಷವಾಯಿತು.  ನಿಮ್ಮ ಕಗ್ಗ ರಸಧಾರೆ ಎರಡನೇ ಸಂಪುಟದ ಬಿಡುಗಡೆಗೆ ಸಮಯ ಮಾಡಿಕೊಂಡು ಬರುತ್ತೇನೆ. ಮಗು ರವಿ ನಿಮ್ಮ ಜನುಮದಿನಕ್ಕೆ ನನ್ನ ಆಶೀರ್ವಾದಗಳು. ಕಗ್ಗವನ್ನು ಇನ್ನಷ್ಟು ಜನರಿಗೆ ತಲುಪಿಸಲು ಮಾಡುತ್ತಿರುವ ಕೆಲಸದಲ್ಲಿ ಇನ್ನಷ್ಟು ಯಶಸ್ಸು, ಕೀರ್ತಿ ನಿಮ್ಮದಾಗಲಿ.  ಹೋಗಿ ಬರುವೆ ಮಗು. ಶುಭವಾಗಲಿ"

"ಸರಿ ಅಜ್ಜ ನಿಮ್ಮೊಡನೆ ಇನ್ನಷ್ಟು ಮಾತಾಡುವ ಆಸೆ ಇತ್ತು... ನಿಮ್ಮ ಆಶೀರ್ವಾದ ಸದಾ ಇರಲಿ " ಎನ್ನುವಷ್ಟರಲ್ಲಿ ಅಲಾರಂ ಕಿರುಚಿಕೊಳ್ಳುತ್ತಾ ಬೆಳಗಾಯಿತು ಎಂದು ಎಚ್ಚರಿಸಿತು. ಕಣ್ಣು ಉಜ್ಜಿಕೊಂಡು "ಕರಾಗ್ರೆ ವಸತೇ ಲಕ್ಷ್ಮಿ......" ಹೇಳಿಕೊಂಡು ಪ್ರಾತಃ ಕರ್ಮಗಳನ್ನು ಮುಗಿಸಿ ನುಡಿಮುತ್ತುಗಳನ್ನು ಹಾಗೂ ಕಗ್ಗದ ರಸಧಾರೆಯ ಮುಕ್ತಕ - ೩೬೧ ಫೇಸ್ ಬುಕ್ಕಿಗೆ ಹಾಕಲು ಕಂಪ್ಯೂಟರ್ ಚಾಲನೆ ಮಾಡಿದರು. ಅಷ್ಟರಲ್ಲಿಯೇ ಹಲವಾರು ಬಂಧು ಮಿತ್ರರಿಂದ ಜನುಮದಿನಕ್ಕೆ ಶುಭಾಶಯಗಳನ್ನು ಹೊತ್ತ ಸಂದೇಶ ಕಾಯುತ್ತಿತ್ತು. ಜೊತೆಯಲ್ಲಿ ಈ ಬ್ಲಾಗ್ ಲೇಖನ ಕೂಡ.
ಸುಂದರ ಹುಲ್ಲು ಹಾಸಿನ ಮೇಲೆ ವಿಶ್ರಮಿಸುತ್ತಿರುವ ಅಜ್ಜ!
"ವಾಹ್ ಅಜ್ಜನೊಡನೆ ಮಾತು, ಅವರ ಆಶೀರ್ವಾದ, ಮೈತಡವಿದ ಅವರ ಸ್ಪರ್ಶ ಅನುಭವಿಸಿದ ನಾನೇ ಧನ್ಯ ಎಂದಿತು ರವಿ ಅವರ ಮನಸ್ಸು... ಶುಭಾಶಯಗಳನ್ನು ಕೋರಿದ ಎಲ್ಲಾ ಬಂಧು ಮಿತ್ರರಿಗೆ ಧನ್ಯವಾದಗಳನ್ನು ಹೇಳುತ್ತಾ ನಿತ್ಯ ದಿನಚರಿಯ ಕಡೆ ಗಮನ ಕೊಡಲು ಮಗು ರವಿ ಹೊರಟರು ನಂತರ ನಾನು ಇಲ್ಲಿಗೆ ಬಂದೆ ಹಾಗಾಗಿ ತಡವಾಯಿತು ಕಣ್ರಪ್ಪ...ನಾನು ಸ್ವಲ್ಪ ಹೊತ್ತು ಇಲ್ಲೇ ಕೂತಿದ್ದು ನಂತರ ಬರುವೆ... "


"ಸರಿ ಅಜ್ಜ ಒಳ್ಳೆ ಕೆಲಸವನ್ನೇ ಮಾಡಿದ್ದೀರಾ. ಓಹ್ ನಮಗಾಗಿ ಕಗ್ಗ ರಸಧಾರೆ ಸಂಪುಟ - ೧ ತಂದಿದ್ದೀರ. ಓದೋಣ ಬಿಡಿ ಅಜ್ಜ. ಬನ್ನಿ ನಿಮಗಾಗಿ ಬೋಂಡ, ಆಂಬೋಡೆ, ಕಾಫಿ ಎಲ್ಲವೂ ಸಿದ್ಧವಾಗಿದೆ. ಅಲ್ಲಿಯೇ ಪೆನ್ನು ಪೇಪರ್ ಕೂಡ ಇಟ್ಟಿದ್ದೇವೆ.. ಇನ್ನಷ್ಟು ಬರೆಯಿರಿ.. ಹಸಿರ ಹಾಸಿನಮೇಲೆ ಕುಳಿತು ಕೊಂಚ ಘಳಿಗೆ ವಿಶ್ರಮಿಸಿಕೊಳ್ಳಿ" ಎಂದು ಹೇಳಿ ಎಲ್ಲಾ ಗಣದೇವತೆಗಳು "ಪುಷ್ಪ"ವೃಷ್ಟಿಮಾಡುತ್ತಾ, ಆಶೀರ್ವಾದದ "ಪ್ರಸಾದ" ನೀಡುತ್ತಾ ಮಧುರ ಮಧುರವೀ "ಮಂಜುಳಾ" ಗಾನ ಹೇಳುತ್ತಾ ರವಿಯವರಿಗೆ ಜನುಮದ ದಿನದ ಶುಭಾಶಯಗಳನ್ನು ಕೋರಿದರು!!!

Friday, March 8, 2013

..........ಹಾಗೂ ಅವರ ದಿನವೂ

ಒಂದು ದಿನ ಮಾತೆ ಸರಸ್ವತಿ ನುಡಿಸುತ್ತಿದ್ದ ವೀಣೆಯನ್ನು ಕೆಳಗಿಳಿಸಿ ಯೋಚಿಸುತ್ತ ಕುಳಿತಿದ್ದಾಗ.... ನಡೆಯುವ ಒಂದು ಸಂಭಾಷಣೆ! 


ಯೋಚನೆ ಮಾಡುತ್ತಾ ನುಡಿಸುವುದ ಬಿಟ್ಟು ಹಾಡು ಕೇಳುತ್ತ ಕುಳಿತ ಮಾತೆ ಸರಸ್ವತಿ 
"ದೇವಿ ಏನಾಯಿತು?" ಎಂದು ಬ್ರಹ್ಮದೇವ ಕೇಳುತ್ತಾನೆ

ದೇವಿ ಸರಸ್ವತಿಯ ಪ್ರಶ್ನೆಗೆ ಸರಿಯಾದ ವಿಶ್ಲೇಷಣೆ ನೀಡಿದ ಭಗವಂತ 
"ದೇವ.. ನೀನು ಸೃಷ್ಟಿಸಿದ ಲೋಕಗಳಲ್ಲಿ ನಿನಗಿಷ್ಟವಾದ ಲೋಕ ಯಾವುದು ಮತ್ತು ಏಕೆ?"

"ನಾನು ಸೃಷ್ಟಿಸಿರುವ ಹದಿನಾಲ್ಕು ಲೋಕಗಳಲ್ಲಿ ಹದಿನೈದನೆಯ ಲೋಕ ಬಹಳ ಇಷ್ಟ"

"ದೇವ ಇದೇನು ಭೂಲೋಕದಲ್ಲಿರುವ ಉಪೇಂದ್ರನ ತರಹ ಇದೆ ನಿಮ್ಮ ಮಾತು. ಇರುವುದು ಹದಿನಾಲ್ಕು ಅಂದ ಮೇಲೆ ಹದಿನೈದನೆ ಲೋಕ ಎಲ್ಲಿಂದ ಬಂತು?"

"ದೇವಿ ಹೌದು! ಒಟ್ಟು ಹದಿನಾಲ್ಕು ಲೋಕಗಳಲ್ಲಿ.... ಹದಿಮೂರು ಲೋಕಗಳು ನಾನು ಸೃಷ್ಟಿಸಿದ ರೀತಿಯಲ್ಲೇ ಜೀವನ ನಡೆಸುತ್ತಾ ಇವೆ.  ಆದರೆ ಈ ಭೂಲೋಕದಲ್ಲಿ ಮಾತ್ರ ವಿಚಿತ್ರ....  ಹೆಣ್ಣು ಮಕ್ಕಳನ್ನು ನೋಡುವ ವಿಧಾನ, ಕೆಲ ಹೆಣ್ಣು ಮಕ್ಕಳು ಆಡುವ ರೀತಿ ಬೇಸರ ಹುಟ್ಟಿಸುತ್ತದೆ. ಹೆಣ್ಣು ಮಕ್ಕಳು ಸಾಧನೆಯಲ್ಲಿ ಮುಂದು ಹೋಗುತ್ತಿರುವುದು ನೋಡಿದರೆ ಸಂತಸವಾಗುತ್ತದೆ ಆದರೆ  ಅದೇ ಕ್ಷಣದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಕೆಲವು ಕಡೆ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ರಣಾಂಗಣವಾಗುತ್ತಿರುವ ಮನೆಗಳನ್ನು ನೋಡಿದಾಗೆಲ್ಲ ಬೇಸರವಾಗುತ್ತದೆ. ಮಾಧ್ಯಮಗಳು, ಪತ್ರಿಕೆಗಳು, ಧಾರಾವಾಹಿಗಳು ,ಜಾಹಿರಾತುಗಳು ಎಲ್ಲಾ ಕಡೆಯಲ್ಲೂ ಮಹಿಳೆಯರನ್ನು ಕ್ಷುಲ್ಲಕವಾಗಿ ತೋರಿಸುವ, ಅಥವಾ ಮಹಿಳೆಯರ ತೇಜೋವಧೆ ಮಾಡುವ ಬಗ್ಗೆ ಲೇಖನಗಳು, ವರದಿಗಳು ಜಿಗುಪ್ಸೆ ಹುಟ್ಟಿಸುತ್ತವೆ. ಆದರೆ ............"

ಮಾತು ನಿಲ್ಲಿಸಿದ ಬ್ರಹ್ಮ ದೇವ ಕಣ್ಣಂಚಿನಲ್ಲಿ ಒಸರುತಿದ್ದ ಕಣ್ಣೀರನ್ನು ಒರೆಸಿಕೊಂಡು... ಮುಗುಳುನಗೆ ಬೀರುತ್ತಾ ಸರಸ್ವತಿಯ ಕಡೆಗೆ ತಿರುಗಿದಾಗ

"ಯಾಕ್... ಯಾಕ್.. ಯಾಕ್ರೀ ಕಣ್ಣೀರು..... ?"

"ಕಣ್ಣೀರಲ್ಲ ಕಣೆ ಪನ್ನೀರು ಪನ್ನೀರು...!" (ಗ್ರಾಮ ಫೋನ್ ತಟ್ಟೆಯಲ್ಲಿ ಹಾಲು ಜೇನು ಚಿತ್ರದ ಹಾಡು ಮಂದ ಸ್ಥಾಯಿಯಲ್ಲಿ ಬರುತ್ತಿರುತ್ತದೆ)

"ಹಾ ಮುಂದುವರೆಸಿ"

"ನಾನು ಕಟ್ಟದೆ ಹೋದರು ತಾವೇ ಕಟ್ಟಿ ಕೊಂಡ ಬ್ಲಾಗ್ ಲೋಕ ನನಗೆ ಬಹಳ ಇಷ್ಟ... ಇಲ್ಲಿ ಹೆಣ್ಣು ಮಕ್ಕಳಿಗೆ ಗೌರವ, ಪ್ರೋತ್ಸಾಹ, ಪ್ರೀತಿ ವಿಶ್ವಾಸ ತೋರುವ ಪರಿ ನೋಡಿದಾಗ ಕಣ್ಣು ತುಂಬಿ ಬರುತ್ತದೆ. ರಕ್ತ ಸಂಬಂಧ ಇಲ್ಲದೆ ಹೋದರೂ ಎಷ್ಟೋ ತಾರೆಗಳಿಗೆ  ಮಾತೃ ಸ್ವರೂಪರಾಗಿ, ಸಹೋದರಿಯರಾಗಿ, ಹಿರಿಯ ಜೀವಿಗಳಾಗಿ ಎಲ್ಲರನ್ನು ಗೌರವಿಸುವ ರೀತಿ ನೋಡಿದಾಗ ಭೂಲೋಕವೂ ಹೀಗೆ ಇದ್ದರೆ ಎಷ್ಟು ಚೆನ್ನ ಅನ್ನಿಸುತ್ತೆ!. ಒಬ್ಬರಿಗೊಬ್ಬರು ಆಸರೆಯಾಗಿ, ಒಂದೇ ಕುಟುಂಬದ ಸದಸ್ಯರಂತೆ ಬೆಳೆಯುವ, ಬೆಳೆಸುವ ಈ ಲೋಕವು ನಿಜವಾಗಿಯೂ ಸುಂದರವಾಗಿ ಅರಳುತ್ತಿದೆ. ಹೆಣ್ಣು ಮಕ್ಕಳಲ್ಲೂ ಕೂಡ ಅಣ್ಣ ಎನ್ನುವ ಕೆಲವರು, ತಮ್ಮ ಎನ್ನುವರು, ಭಯ್ಯಾ ಎಂದು ಸಂಬೋಧಿಸುವರು, ಗುರುಗಳೇ ಎನ್ನುವರು, ಪಿತೃ ಸ್ವರೂಪ ಎನ್ನುವರು ಇದ್ದಾರೆ  ಇಂತಹ ಲೋಕ ನಿಜಕ್ಕೂ ಮಹಿಳೆಯರಿಗೆ ಸುಂದರ ಪ್ರಪಂಚದ ನೋಟ ಕೊಡುವ ಲೋಕ"

"ಇಂತಹ ಲೋಕದಲ್ಲಿರುವ ಎಲ್ಲ ಬ್ಲಾಗ್ ಲೋಕದ ತಾರೆಗಳಿಗೆ ಮಹಿಳೆಯರ ಬಗ್ಗೆ ಬರಿ ಗೌರವ ಅಷ್ಟೇ ಅಲ್ಲ, ತಾಯಿ ಪ್ರೀತಿ, ಮಮತೆ, ಮಮಕಾರ ಎಲ್ಲವು ಇವೆ. ಪ್ರತಿ ಹೆಣ್ಣು ಮಗಳನ್ನು ಸುರಕ್ಷಿತ ಕವಚಗಳಲ್ಲಿ ರಕ್ಷಿಸುವ ಇವರ ಪ್ರೀತಿಗೆ ನನ್ನದು ಒಂದು ಜೈಹೋ!!!"

ಈ ವರ್ಣನೆಯಿಂದ ದೇವಿ ಸರಸ್ವತಿಗೆ ಬಹಳ ಸಮಾಧಾನವಾಗುತ್ತದೆ ಹಾಗು ಸಂತಸದಿಂದ ಬೀಗುತ್ತ "ನನ್ನ ಆಶೀರ್ವಾದ ಈ ಎಲ್ಲ ಬ್ಲಾಗ್ ಲೋಕದ ತಾರೆಗಳಿಗೆ ಸಮಾನವಾಗಿ ಸದಾ ಇರುತ್ತದೆ.. ಮಹಿಳೆಯರನ್ನು ದೇವಿಯ ಸ್ವರೂಪದಲ್ಲಿ ನೋಡುವ ಇವರೆಲ್ಲರಿಗೂ ಮಂಗಳವಾಗಲಿ ಮತ್ತು ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಸದಾ ಒಳಿತೇ ಆಗಲಿ"

"ದೇವ ಇನ್ನೊಂದು ಮಾತು ಈ ಲೋಕವನ್ನು ಒಮ್ಮೆ ನೋಡಬೇಕಲ್ಲ"

"ಅದಕ್ಕೇನು ದೇವಿ.. ನಿನ್ನ ಸ್ವರೂಪವೇ ಆದ ಪುಸ್ತಕಗಳು ಬಿಡುಗಡೆ ಆಗುತ್ತಲೇ ಇರುತ್ತವೆ ಒಮ್ಮೆ ಹೋಗಿ ಬರೋಣ"

ಸಂತಸಗೊಂಡ ಸೃಷ್ಟಿಕರ್ತ ದಂಪತಿಗಳು ಬ್ಲಾಗ್ ಲೋಕದ ಮಹಿಳಾಮಣಿಗಳಿಗೆ ಬರಿ ಒಂದು ದಿನ ಮಾತ್ರ ಮಹಿಳಾದಿನವಲ್ಲ ಬದಲಿಗೆ ಇಂತಹ ಲೋಕದಲ್ಲಿ ಪ್ರತಿದಿನವೂ ಮಹಿಳೆಯರ ದಿನವೇ ಎಂದು ಆಶೀರ್ವದಿಸಿದರು ಎನ್ನುವಲ್ಲಿಗೆ ಈ  ಸಿರಿ ಕಾಂತನ ಹರಿಕಥೆ ಇಲ್ಲಿಗೆ ಮುಗಿಯುತ್ತದೆ!!!


"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ"

Saturday, March 2, 2013

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು ...!

"ಅಕ್ಕ... ಯಾಕೋ @#$# ಊಟ ಮಾಡಬೇಕು ಅನ್ನಿಸುತ್ತಿದೆ!"
"ಯಾಕೆ ವಿಶಾಲು?.. ಸರಿ ತುಂಬಿದ ದಿನಗಳ ಬಸುರಿ ಬಯಕೆ... ಊರಿನಲ್ಲಿ ಒಂದು ಶ್ರಾದ್ಧ ಇದೆ ಇವತ್ತು ಅಲ್ಲಿಗೆ ಹೋಗೋಣ!"

ಇದು ನಲವತ್ತು ವರ್ಷಗಳ ಹಿಂದೆ ಜನುಮ ನೀಡಿದ ಜನುಮದಾತೆ ನನ್ನ ಧರೆಗಿಳಿಸುವ ಮುನ್ನಾ ದಿನ ಇಚ್ಛೆ ಪಟ್ಟ "ಆಸೆ"
ಕಿತ್ತಾನೆಯಲ್ಲಿನ ದೊಡ್ದಮಾವ ಅವರ ಮನೆ
ಕಿತ್ತಾನೆಯಲ್ಲಿನ ಸಣ್ಣ ಮಾವ ಅವರ ಮನೆ!  

ಅಕ್ಕ..ಶ್ರೀಮತಿ ಲಕ್ಷ್ಮೀದೇವಮ್ಮ ... ಅಂದ್ರೆ ನನ್ನ ಮುತ್ತಜ್ಜಿ (ಅಮ್ಮನ ಅಜ್ಜಿ).. ಕಿತ್ತಾನೆಯ ಪ್ರಮುಖರಲ್ಲಿ ಒಬ್ಬರಾದ ಶ್ರೀ ರಾಮಯ್ಯನವರ ಧರ್ಮಪತ್ನಿ. ಸುಮಾರು ೯೫ಕ್ಕೂ ಹೆಚ್ಚಿನ ವಸಂತಗಳನ್ನು ಕಂಡ ಈ ಹಿರಿಯ ಜೀವ ತಾಯಿಯ ಮಮತೆಯ ಸಿರಿ. ಕಣ್ಣು ಕಿವಿ ಚುರುಕಾಗಿತ್ತು, ಹಲ್ಲುಗಳು ಗಟ್ಟಿ ಮುಟ್ಟಾಗಿತ್ತು! ಅದು ಅವರ ಸುಂದರ ಧೀರ್ಘಾಯುಷ್ಯದ ರಹಸ್ಯ!

ಇಂತಹ ಸುಂದರ ಮನಸ್ಸಿನ ಮುತ್ತಜ್ಜಿ, ನಮ್ಮ ತಾಯಿಯ ಮೇಲೆ ತೋರಿದ ಮಮತೆ, ಪ್ರೀತಿ, ಅಕ್ಕರೆ,  ಪ್ರಾಯಶಃ ನಮ್ಮ ತಾಯಿಯ ತಾಯಿಯು ತೋರುತ್ತಿರಲಿಲ್ಲವೇನೋ!. ನಮ್ಮ ಅಮ್ಮ ಕೇವಲ ಎರಡು ವರ್ಷದ ಕೂಸಾಗಿದ್ದಾಗ ಅಮ್ಮನ ಅಮ್ಮ ಇಹಲೋಕ ತ್ಯಜಿಸಿದ ಮೇಲೆ, ಬೆಳೆದದ್ದು ತನ್ನ ಅಜ್ಜಿಯ ಮಡಿಲಲ್ಲೇ.

ಮುತ್ತಜ್ಜಿ ಶ್ರೀಮತಿ ಲಕ್ಷ್ಮೀದೇವಿ 
ಅಂಥಹ ತಾಯಿಯ ಗುಣ ಹೊತ್ತ ಮುತ್ತಜ್ಜಿ, ತನ್ನ ಮೊಮ್ಮಗಳ ಬಯಕೆಯನ್ನು ಈಡೇರಿಸುವುದಕ್ಕೆ ಕಿತ್ತಾನೆಯ ನೆಂಟರ ಮನೆಯಲ್ಲಿ ನಡೆಯುತ್ತಿದ್ದ ಶ್ರಾದ್ಧದ ಊಟಕ್ಕೆ ಕರೆದೊಯ್ದರು. ಊಟ ಮಾಡಿ ಬಂದ ರಾತ್ರಿ ಅಮ್ಮನಿಗೆ ಪ್ರಸವ ಬೇನೆ ಶುರುವಾಯಿತು.

ಅಂದಿನ ರಾತ್ರಿ ನನ್ನ ಮುತ್ತಜ್ಜಿಗೆ ಊಟವಿಲ್ಲ. ಮೊಮ್ಮಗಳ ಆರೈಕೆಯಲ್ಲಿ ರಾತ್ರಿ ಊಟ ಸೇರಲಿಲ್ಲ. ಮರುದಿನ ಸೂರ್ಯೋದಯದ ಹೊತ್ತಿಗೆ ಗಂಡು ಮಗುವಿಗೆ ಜನ್ಮ ಕೊಟ್ಟರು ನನ್ನ ತಾಯಿ! ಅಂದಿನ ದಿನ ಮತ್ತೆ ಊಟ ಮಾಡಲಾಗಲಿಲ್ಲ ನನ್ನ ಮುತ್ತಜ್ಜಿಗೆ.

ಮಾರನೆ ದಿನ ಶಿವರಾತ್ರಿ ಮತ್ತೆ ಉಪವಾಸ ನನ್ನ ಮುತ್ತಜ್ಜಿಗೆ!. ನನ್ನ ಜನನ ಕಾಲದಲ್ಲಿ ಮೂರು ದಿನ ಆಹಾರವಿಲ್ಲದೆ  ತನ್ನ ಮೊಮ್ಮಗಳ ಆರೈಕೆ ಮಾಡಿದ ಆ ಮಹಾತಾಯಿಗೆ ಈ ಬ್ಲಾಗಿನ ಮೂಲಕ ನನ್ನ ನಮನಗಳನ್ನು ಸಲ್ಲಿಸುತ್ತಿದ್ದೇನೆ.

ಜನನವಾದಮೇಲೆ ಆ ವಿಷಯವನ್ನು ನನ್ನ ತಾಯಿಯ ಸೋದರಮಾವನ ಮಗ "ಶಾಮಣ್ಣ"ನ ಜೊತೆ ತೋಟಕ್ಕೆ ಹೋಗಿದ್ದ ನನ್ನ ಅಣ್ಣ ವಿಜಯನಿಗೆ... ಶಾಮಣ್ಣ ಹೇಳಿದ
"ಲೋ ವಿಜಯ ತಮ್ಮ ಹುಟ್ಟಿದ್ದಾನೆ ಕಣೋ"
"ಯಾರಿಗೆ ತಮ್ಮನೋ..!"
"ಲೋ ನಿನ್ನ ಅಮ್ಮನಿಗೆ ಇಂದು ಬೆಳಿಗ್ಗೆ ಹೆರಿಗೆ ಆಯಿತು.. ತಮ್ಮ ಹುಟ್ಟಿದ್ದಾನೆ ನಿನಗೆ"
ನನ್ನ ಅಣ್ಣನಿಗೆ ಖುಷಿಯಾಯಿತು!

ಅಕ್ಕನ ಮಗಳಾದ ನನ್ನ ಅಮ್ಮನ ಬಾಣಂತನಕ್ಕೆ, ಆರೈಕೆಗೆ ಹಾಲು ಜಾಸ್ತಿ ಬೇಕು ಅಂತ ಅನ್ನಿಸಿ ಹಸುವನ್ನೇ ತಂದ ಅಮ್ಮನ ಸೋದರಮಾವ ಶ್ರೀ ಶಂಕ್ರಣ್ಣ  ಮತ್ತು ಅವರ ಅಗ್ರಜ ಶ್ರೀ ಕೃಷ್ಣಪ್ಪ ಅವರ ಕುಟುಂಬಕ್ಕೆ ಈ ಮೂಲಕ ಕೃತಜ್ಞತೆಗಳನ್ನು  ಸಲ್ಲಿಸುತ್ತಿದ್ದೇನೆ. .

ಅಮ್ಮನ ಹಿರಿಯ ಸೋದರ ಮಾವ ಮತ್ತು ಅತ್ತೆ (ದೊಡ್ಡ ಮಾವ ಮತ್ತು ಅತ್ತೆ)

ಕಿರಿಯ ಸೋದರ ಮಾವ ಮತ್ತು ಅತ್ತೆ (ಸಣ್ಣ ಮಾವ ಮತ್ತು ಅತ್ತೆ)
ಆಗ ಹುಟ್ಟಿದ ಮಗುವನ್ನು ಪ್ರಪಂಚದಲ್ಲಿ ಗುರುತಿಸಿಕೊಳ್ಳಲು "ಶ್ರೀಕಾಂತ್" ಎಂಬ ಸುಂದರ ಹೆಸರನ್ನು ಕೊಟ್ಟ ನನ್ನ ಅಜ್ಜ (ಅಪ್ಪನ ಅಪ್ಪ).. ಬಾಲ್ಯದಲ್ಲಿ ನನ್ನ ಬರವಣಿಗೆಯನ್ನು, ಊಟಮಾಡುವುದನ್ನು ಎಡಗೈಯಿಂದ ಬಲಗೈಗೆ ಬದಲಿಸಲು ಶ್ರಮಿಸಿದ ಅಜ್ಜಿಗೆ(ಅಪ್ಪನ ಅಮ್ಮ) ನನ್ನ ಕೃತಜ್ಞತೆಗಳು.
ಅಜ್ಜ ಮತ್ತು ಅಜ್ಜಿ (ಅಪ್ಪನ ತಂದೆ ತಾಯಿ)
ಸಾಹಸದ ಬದುಕಲ್ಲಿ ತಾಳ್ಮೆಯಿಂದ ಹೆಜ್ಜೆ ಇಟ್ಟ ಅಪ್ಪನಿಗೂ.. ಅಷ್ಟೇ ಛಲದಿಂದ ಸಂಸಾರವನ್ನು ಕಷ್ಟದ ಅಲೆಗಳಲ್ಲೂ ಕೂಡ ಧೃತಿಗೆಡದೆ ದಡಕ್ಕೆ ತಲುಪಿಸಿದ ಅಮ್ಮನಿಗೂ,ಇಷ್ಟೆಲ್ಲಾ ಬರೆಯಲು ಸ್ಪೂರ್ತಿನೀಡುವ, ನನ್ನೊಳಗೆ ಕೂತು ಬರೆಸುತ್ತಿರುವ ಮಾತಾ ಪಿತೃಗಳ ಋಣಭಾರ ತೀರಿಸಲು ಸಾಧ್ಯವೇ ಇಲ್ಲ. ಅಪ್ಪ ಅಮ್ಮ ಹೆಜ್ಜೆ  ಇಟ್ಟು ಸಾಗುತ್ತಿರುವ ಸುವರ್ಣ ಪಥದಲ್ಲಿ ಸಾಗುವ, ಮಾಗುವ ಮನಸ್ಸು ಸದಾ ನನ್ನೊಳಗೆ ಇರಲಿ ಎಂದು ಆಶಿಸುತ್ತೇನೆ. ಆ ಕಾರ್ಯದಲ್ಲಿ ಯಶಸ್ವಿಯಾದರೆ ಅದೇ ಅವರಿಗೆ ಸಲ್ಲಿಸುವ ಕೃತಜ್ಞತೆಗಳು!

ನನ್ನ ಅಪ್ಪ ಅಮ್ಮ

ಸದಾ ಕಾಲ ನೆರಳಾಗಿರುವ ಅಕ್ಕನಿಗೆ, ಗೆಳೆಯನಾಗಿ, ಅಕ್ಕರೆಯಿಂದ ಕಾಣುವ ಅಣ್ಣನಿಗೆ, ಸ್ನೇಹಿತನಾಗಿ ಜೊತೆಯಲ್ಲಿ ನಿಂತಿರುವ ತಮ್ಮನಿಗೆ, ಮಾತೃ ಸ್ವರೂಪ ಅತ್ತಿಗೆಯವರಿಗೆ , ಮನದನ್ನೆಗೆ , ಮುದ್ದಾದ ಮಕ್ಕಲೈಗೆ...  ಎಲ್ಲಾರಿಗೂ  ಈ ಸಮಯದಲ್ಲಿ ನನ್ನ ಕೃತಜ್ಞತೆಗಳು.

ನನ್ನ ತುಂಬು ಕುಟುಂಬ!
ಬಂದು ಬಳಗದ ಪ್ರತಿಯೊಬ್ಬರೂ ಈ ನಲವತ್ತು ವರ್ಷಗಳ ಜೀವನದ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಅವರಿಗೆ ನನ್ನ ನಮಸ್ಕಾರಗಳು.

ಅನವರತ ಜೊತೆಯಾಗಿ ಸಹಕಾರ ನೀಡುತ್ತಿರುವ ಬಂಧುಗಳು 
ಗೆಳೆತನ ಎಂಬುದು ಒಂದು ಸುವಾಸಿತ ಪರಿಮಳವುಳ್ಳ ಹೂವಿನ ಹಾಗೆ.  ಅಂಥಹ ಪರಿಮಳಕ್ಕೆ ನನ್ನನ್ನು ಸೇರಿಸಿಕೊಂಡು ಅರಳಿಸುತ್ತಿರುವ ನನ್ನ ಬಾಲ್ಯ ಸ್ನೇಹಿತರಿಗೆ, ಬ್ಲಾಗ್ ಲೋಕದ ನಕ್ಷತ್ರಗಳಿಗೆ, ಫೇಸ್ ಬುಕ್ ನ ತಾರೆಗಳಿಗೆ, ಸಹೋದ್ಯೋಗಿಗಳಿಗೆ  ತುಂಬು ಹೃದಯದ ಧನ್ಯವಾದಗಳು. ಪ್ರತಿಯೊಬ್ಬರೂ ಸಿಗುವ ಒಂದೇ ಸ್ಥಳ ಅದೇ ಗೂಗಲ್!

ಸ್ನೇಹದ ತಾಣ ಗೂಗಲ್!
ನಲವತ್ತು ವರ್ಷ....  ಮನುಜನ ಜೀವನದಲ್ಲಿ ಒಂದು ಮುಖ್ಯ ಘಟ್ಟ. ತಾನು ನಡೆದುಬಂದ ದಾರಿಯನ್ನು ಅವಲೋಕಿಸುತ್ತ ಮುಂದಿನ ದಾರಿಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಾ ಸಾಗುವ, ಮಾಗಿದ ಮನಸ್ಸಿನ ಹಾದಿಯಲ್ಲಿ ನಡೆಯಬೇಕು. ಇದು ನನ್ನ ಆಸೆ ಇದಕ್ಕೆ ನಿಮ್ಮ ಆಶೀರ್ವಾದ ನೆರಳಂತೆ ಕಾಯುತ್ತಿರಲಿ!

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು....!