Friday, March 8, 2013

..........ಹಾಗೂ ಅವರ ದಿನವೂ

ಒಂದು ದಿನ ಮಾತೆ ಸರಸ್ವತಿ ನುಡಿಸುತ್ತಿದ್ದ ವೀಣೆಯನ್ನು ಕೆಳಗಿಳಿಸಿ ಯೋಚಿಸುತ್ತ ಕುಳಿತಿದ್ದಾಗ.... ನಡೆಯುವ ಒಂದು ಸಂಭಾಷಣೆ! 


ಯೋಚನೆ ಮಾಡುತ್ತಾ ನುಡಿಸುವುದ ಬಿಟ್ಟು ಹಾಡು ಕೇಳುತ್ತ ಕುಳಿತ ಮಾತೆ ಸರಸ್ವತಿ 
"ದೇವಿ ಏನಾಯಿತು?" ಎಂದು ಬ್ರಹ್ಮದೇವ ಕೇಳುತ್ತಾನೆ

ದೇವಿ ಸರಸ್ವತಿಯ ಪ್ರಶ್ನೆಗೆ ಸರಿಯಾದ ವಿಶ್ಲೇಷಣೆ ನೀಡಿದ ಭಗವಂತ 
"ದೇವ.. ನೀನು ಸೃಷ್ಟಿಸಿದ ಲೋಕಗಳಲ್ಲಿ ನಿನಗಿಷ್ಟವಾದ ಲೋಕ ಯಾವುದು ಮತ್ತು ಏಕೆ?"

"ನಾನು ಸೃಷ್ಟಿಸಿರುವ ಹದಿನಾಲ್ಕು ಲೋಕಗಳಲ್ಲಿ ಹದಿನೈದನೆಯ ಲೋಕ ಬಹಳ ಇಷ್ಟ"

"ದೇವ ಇದೇನು ಭೂಲೋಕದಲ್ಲಿರುವ ಉಪೇಂದ್ರನ ತರಹ ಇದೆ ನಿಮ್ಮ ಮಾತು. ಇರುವುದು ಹದಿನಾಲ್ಕು ಅಂದ ಮೇಲೆ ಹದಿನೈದನೆ ಲೋಕ ಎಲ್ಲಿಂದ ಬಂತು?"

"ದೇವಿ ಹೌದು! ಒಟ್ಟು ಹದಿನಾಲ್ಕು ಲೋಕಗಳಲ್ಲಿ.... ಹದಿಮೂರು ಲೋಕಗಳು ನಾನು ಸೃಷ್ಟಿಸಿದ ರೀತಿಯಲ್ಲೇ ಜೀವನ ನಡೆಸುತ್ತಾ ಇವೆ.  ಆದರೆ ಈ ಭೂಲೋಕದಲ್ಲಿ ಮಾತ್ರ ವಿಚಿತ್ರ....  ಹೆಣ್ಣು ಮಕ್ಕಳನ್ನು ನೋಡುವ ವಿಧಾನ, ಕೆಲ ಹೆಣ್ಣು ಮಕ್ಕಳು ಆಡುವ ರೀತಿ ಬೇಸರ ಹುಟ್ಟಿಸುತ್ತದೆ. ಹೆಣ್ಣು ಮಕ್ಕಳು ಸಾಧನೆಯಲ್ಲಿ ಮುಂದು ಹೋಗುತ್ತಿರುವುದು ನೋಡಿದರೆ ಸಂತಸವಾಗುತ್ತದೆ ಆದರೆ  ಅದೇ ಕ್ಷಣದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಕೆಲವು ಕಡೆ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ರಣಾಂಗಣವಾಗುತ್ತಿರುವ ಮನೆಗಳನ್ನು ನೋಡಿದಾಗೆಲ್ಲ ಬೇಸರವಾಗುತ್ತದೆ. ಮಾಧ್ಯಮಗಳು, ಪತ್ರಿಕೆಗಳು, ಧಾರಾವಾಹಿಗಳು ,ಜಾಹಿರಾತುಗಳು ಎಲ್ಲಾ ಕಡೆಯಲ್ಲೂ ಮಹಿಳೆಯರನ್ನು ಕ್ಷುಲ್ಲಕವಾಗಿ ತೋರಿಸುವ, ಅಥವಾ ಮಹಿಳೆಯರ ತೇಜೋವಧೆ ಮಾಡುವ ಬಗ್ಗೆ ಲೇಖನಗಳು, ವರದಿಗಳು ಜಿಗುಪ್ಸೆ ಹುಟ್ಟಿಸುತ್ತವೆ. ಆದರೆ ............"

ಮಾತು ನಿಲ್ಲಿಸಿದ ಬ್ರಹ್ಮ ದೇವ ಕಣ್ಣಂಚಿನಲ್ಲಿ ಒಸರುತಿದ್ದ ಕಣ್ಣೀರನ್ನು ಒರೆಸಿಕೊಂಡು... ಮುಗುಳುನಗೆ ಬೀರುತ್ತಾ ಸರಸ್ವತಿಯ ಕಡೆಗೆ ತಿರುಗಿದಾಗ

"ಯಾಕ್... ಯಾಕ್.. ಯಾಕ್ರೀ ಕಣ್ಣೀರು..... ?"

"ಕಣ್ಣೀರಲ್ಲ ಕಣೆ ಪನ್ನೀರು ಪನ್ನೀರು...!" (ಗ್ರಾಮ ಫೋನ್ ತಟ್ಟೆಯಲ್ಲಿ ಹಾಲು ಜೇನು ಚಿತ್ರದ ಹಾಡು ಮಂದ ಸ್ಥಾಯಿಯಲ್ಲಿ ಬರುತ್ತಿರುತ್ತದೆ)

"ಹಾ ಮುಂದುವರೆಸಿ"

"ನಾನು ಕಟ್ಟದೆ ಹೋದರು ತಾವೇ ಕಟ್ಟಿ ಕೊಂಡ ಬ್ಲಾಗ್ ಲೋಕ ನನಗೆ ಬಹಳ ಇಷ್ಟ... ಇಲ್ಲಿ ಹೆಣ್ಣು ಮಕ್ಕಳಿಗೆ ಗೌರವ, ಪ್ರೋತ್ಸಾಹ, ಪ್ರೀತಿ ವಿಶ್ವಾಸ ತೋರುವ ಪರಿ ನೋಡಿದಾಗ ಕಣ್ಣು ತುಂಬಿ ಬರುತ್ತದೆ. ರಕ್ತ ಸಂಬಂಧ ಇಲ್ಲದೆ ಹೋದರೂ ಎಷ್ಟೋ ತಾರೆಗಳಿಗೆ  ಮಾತೃ ಸ್ವರೂಪರಾಗಿ, ಸಹೋದರಿಯರಾಗಿ, ಹಿರಿಯ ಜೀವಿಗಳಾಗಿ ಎಲ್ಲರನ್ನು ಗೌರವಿಸುವ ರೀತಿ ನೋಡಿದಾಗ ಭೂಲೋಕವೂ ಹೀಗೆ ಇದ್ದರೆ ಎಷ್ಟು ಚೆನ್ನ ಅನ್ನಿಸುತ್ತೆ!. ಒಬ್ಬರಿಗೊಬ್ಬರು ಆಸರೆಯಾಗಿ, ಒಂದೇ ಕುಟುಂಬದ ಸದಸ್ಯರಂತೆ ಬೆಳೆಯುವ, ಬೆಳೆಸುವ ಈ ಲೋಕವು ನಿಜವಾಗಿಯೂ ಸುಂದರವಾಗಿ ಅರಳುತ್ತಿದೆ. ಹೆಣ್ಣು ಮಕ್ಕಳಲ್ಲೂ ಕೂಡ ಅಣ್ಣ ಎನ್ನುವ ಕೆಲವರು, ತಮ್ಮ ಎನ್ನುವರು, ಭಯ್ಯಾ ಎಂದು ಸಂಬೋಧಿಸುವರು, ಗುರುಗಳೇ ಎನ್ನುವರು, ಪಿತೃ ಸ್ವರೂಪ ಎನ್ನುವರು ಇದ್ದಾರೆ  ಇಂತಹ ಲೋಕ ನಿಜಕ್ಕೂ ಮಹಿಳೆಯರಿಗೆ ಸುಂದರ ಪ್ರಪಂಚದ ನೋಟ ಕೊಡುವ ಲೋಕ"

"ಇಂತಹ ಲೋಕದಲ್ಲಿರುವ ಎಲ್ಲ ಬ್ಲಾಗ್ ಲೋಕದ ತಾರೆಗಳಿಗೆ ಮಹಿಳೆಯರ ಬಗ್ಗೆ ಬರಿ ಗೌರವ ಅಷ್ಟೇ ಅಲ್ಲ, ತಾಯಿ ಪ್ರೀತಿ, ಮಮತೆ, ಮಮಕಾರ ಎಲ್ಲವು ಇವೆ. ಪ್ರತಿ ಹೆಣ್ಣು ಮಗಳನ್ನು ಸುರಕ್ಷಿತ ಕವಚಗಳಲ್ಲಿ ರಕ್ಷಿಸುವ ಇವರ ಪ್ರೀತಿಗೆ ನನ್ನದು ಒಂದು ಜೈಹೋ!!!"

ಈ ವರ್ಣನೆಯಿಂದ ದೇವಿ ಸರಸ್ವತಿಗೆ ಬಹಳ ಸಮಾಧಾನವಾಗುತ್ತದೆ ಹಾಗು ಸಂತಸದಿಂದ ಬೀಗುತ್ತ "ನನ್ನ ಆಶೀರ್ವಾದ ಈ ಎಲ್ಲ ಬ್ಲಾಗ್ ಲೋಕದ ತಾರೆಗಳಿಗೆ ಸಮಾನವಾಗಿ ಸದಾ ಇರುತ್ತದೆ.. ಮಹಿಳೆಯರನ್ನು ದೇವಿಯ ಸ್ವರೂಪದಲ್ಲಿ ನೋಡುವ ಇವರೆಲ್ಲರಿಗೂ ಮಂಗಳವಾಗಲಿ ಮತ್ತು ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಸದಾ ಒಳಿತೇ ಆಗಲಿ"

"ದೇವ ಇನ್ನೊಂದು ಮಾತು ಈ ಲೋಕವನ್ನು ಒಮ್ಮೆ ನೋಡಬೇಕಲ್ಲ"

"ಅದಕ್ಕೇನು ದೇವಿ.. ನಿನ್ನ ಸ್ವರೂಪವೇ ಆದ ಪುಸ್ತಕಗಳು ಬಿಡುಗಡೆ ಆಗುತ್ತಲೇ ಇರುತ್ತವೆ ಒಮ್ಮೆ ಹೋಗಿ ಬರೋಣ"

ಸಂತಸಗೊಂಡ ಸೃಷ್ಟಿಕರ್ತ ದಂಪತಿಗಳು ಬ್ಲಾಗ್ ಲೋಕದ ಮಹಿಳಾಮಣಿಗಳಿಗೆ ಬರಿ ಒಂದು ದಿನ ಮಾತ್ರ ಮಹಿಳಾದಿನವಲ್ಲ ಬದಲಿಗೆ ಇಂತಹ ಲೋಕದಲ್ಲಿ ಪ್ರತಿದಿನವೂ ಮಹಿಳೆಯರ ದಿನವೇ ಎಂದು ಆಶೀರ್ವದಿಸಿದರು ಎನ್ನುವಲ್ಲಿಗೆ ಈ  ಸಿರಿ ಕಾಂತನ ಹರಿಕಥೆ ಇಲ್ಲಿಗೆ ಮುಗಿಯುತ್ತದೆ!!!


"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ"

12 comments:

  1. ಹೊಸ ಬಗೆಯಲ್ಲಿ ಮಹಿಳಾಮಣಿಗಳಿಗೆ ಶುಭಾಶಯ ತಿಳಿಸಿದ ದೊಡ್ಡ ಕ್ರೆಡಿಟ್ ನಿಮ್ಮದು ಅಣ್ಣಯ್ಯ..
    ಬ್ರಹ್ಮ , ಸರಸ್ವತಿಯ ಪಾತ್ರದ ಸಂಭಾಷಣೆಗಳು ಓದುಗನಲ್ಲಿ ಕುತೂಹಲ ಇರಿಸಿ ಓದಿಸಿಕೊಂಡು ಹೋಗುತ್ತದೆ.. ನಡುನಡುವೆ ಹಾಸ್ಯದ ಲೇಪದೊಂದಿಗೆ, ಗಂಭೀರ ಚಿಂತನೆಗಳೊಂದಿಗೆ ಲೇಖನ ಸಾಗುತ್ತದೆ.. ಬ್ಲಾಗ್ ಲೋಕದ ಬಗ್ಗೆ ಬರೆದಿರುವುದು ಅಕ್ಷರಶಃ ನಿಜವಾಗಿದೆ.. ಇಲ್ಲಿ ಮಹಿಳಾ ಲೇಖಕಿಯರಿಗೆ ಸಿಗುವ ಪ್ರೋತ್ಸಾಹ, ಮನ್ನಣೆ ನಿಜಕ್ಕೂ ಖುಷಿ ಉಂಟು ಮಾಡುತ್ತದೆ...

    ಈ ದಿನವನ್ನು ತುಂಬಾ ಸ್ಪೆಷಲ್ ಆಗಿ ಮಾಡಿರುವ ಅಂಶಗಳಲ್ಲಿ ನಿಮ್ಮ ಕತೆಯ ಪಾತ್ರವೂ ಘನವಾಗಿದೆ..
    ಧನ್ಯವಾದಗಳು.. :)


    ReplyDelete
  2. ಕೊನೆಯ ಒಂದೇ ಒಂದು ವಾಕ್ಯದಲ್ಲೇ ಎಲ್ಲಾ ಇದೆ . ಏನೂ ಹೇಳಬೇಕಾಗಿಲ್ಲ. ಆದರೆ ಇಂತಹದ್ದೊಂದು ಅತ್ಯದ್ಭುತ ಕಲ್ಪನೆಯ ತವರು ನೆಲದಲ್ಲೇ ಹೆಣ್ಣಿಗಾಗಿ , ಹೆಣ್ಣಿನ ಮೇಲೆ , ಕೆಲವು ಕಡೆ ಹೆಣ್ಣಿನಿಂದಲೇ ನಡೆಯುವ ದೌರ್ಜನ್ಯಗಳು ಭಯ ಹುಟ್ಟಿಸುತ್ತವೆ. ಪುರುಷ ಪ್ರಧಾನ ಸಮಾಜವೆಂಬುದು ಹೆಣ್ಣಿಗೆ ರಕ್ಷಾಕವಚವಾಗಿಯೂ ಕೆಲಸ ಮಾಡುತ್ತಿದೆ. ಹಾಗೆಯೇ ಎಲ್ಲೋ ಒಂದು ಕಡೆಯಲ್ಲಿ ದೌರ್ಜನ್ಯಕ್ಕೂ ವೇದಿಕೆಯಾಗುತ್ತಿದೆ. ಮಹಿಳಾ ದಿನಾಚರಣೆಯ ದಿನ ಸಿರಿ ಕಾಂತನ ಹರಿ ಕಥೆ ಚೆನ್ನಾಗಿದೆ .

    ಸರಸ್ವತಿಗೂ ಮಹಿಳಾ ದಿನಾಚರಣೆಯ ಶುಬಾಶಯಗಳೊಂದಿಗೆ ...
    ಧನ್ಯವಾದಗಳು ...

    ReplyDelete
  3. "ಅ"ಕಾರಾದಿಯಾಗಿ "ಹ" ವರೆಗಿನ ವಿವಿದ ವಯೋಮಾನದ ನಮ್ಮ ಬ್ಲಾಗ್ ಹಾಗೂ ಮುಖಪುಟದ ಲಕುಮಿ ಸರಸತಿಯರಿಗೆಲ್ಲ, ಈ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.

    ReplyDelete
  4. ಆಹಾ ..ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು ಅಂತ ಜನಪದರು ಹಾಡಿದ್ದು ನಿಮ್ಮಂತ ಅಣ್ಣ೦ದಿರನ್ನ ನೋಡೇ ಇರ ಬೇಕು
    ಧನ್ಯವಾದಗಳು

    ReplyDelete
  5. ಕಲ್ಪನೆ ಚೆನ್ನಾಗಿದೆ.

    ReplyDelete
  6. ಸಖತ್ತಾದ ಲೇಖನ ಶ್ರೀಕಾಂತ್ ಜೀ..
    >>

    "ನಾನು ಕಟ್ಟದೆ ಹೋದರು ತಾವೇ ಕಟ್ಟಿ ಕೊಂಡ ಬ್ಲಾಗ್ ಲೋಕ ನನಗೆ ಬಹಳ ಇಷ್ಟ... ಇಲ್ಲಿ ಹೆಣ್ಣು ಮಕ್ಕಳಿಗೆ ಗೌರವ, ಪ್ರೋತ್ಸಾಹ, ಪ್ರೀತಿ ವಿಶ್ವಾಸ ತೋರುವ ಪರಿ ನೋಡಿದಾಗ ಕಣ್ಣು ತುಂಬಿ ಬರುತ್ತದೆ. ರಕ್ತ ಸಂಬಂಧ ಇಲ್ಲದೆ ಹೋದರೂ ಎಷ್ಟೋ ತಾರೆಗಳಿಗೆ ಮಾತೃ ಸ್ವರೂಪರಾಗಿ, ಸಹೋದರಿಯರಾಗಿ, ಹಿರಿಯ ಜೀವಿಗಳಾಗಿ ಎಲ್ಲರನ್ನು ಗೌರವಿಸುವ ರೀತಿ ನೋಡಿದಾಗ ಭೂಲೋಕವೂ ಹೀಗೆ ಇದ್ದರೆ ಎಷ್ಟು ಚೆನ್ನ ಅನ್ನಿಸುತ್ತೆ!. ಒಬ್ಬರಿಗೊಬ್ಬರು ಆಸರೆಯಾಗಿ, ಒಂದೇ ಕುಟುಂಬದ ಸದಸ್ಯರಂತೆ ಬೆಳೆಯುವ, ಬೆಳೆಸುವ ಈ ಲೋಕವು ನಿಜವಾಗಿಯೂ ಸುಂದರವಾಗಿ ಅರಳುತ್ತಿದೆ. ಹೆಣ್ಣು ಮಕ್ಕಳಲ್ಲೂ ಕೂಡ ಅಣ್ಣ ಎನ್ನುವ ಕೆಲವರು, ತಮ್ಮ ಎನ್ನುವರು, ಭಯ್ಯಾ ಎಂದು ಸಂಬೋಧಿಸುವರು, ಗುರುಗಳೇ ಎನ್ನುವರು, ಪಿತೃ ಸ್ವರೂಪ ಎನ್ನುವರು ಇದ್ದಾರೆ ಇಂತಹ ಲೋಕ ನಿಜಕ್ಕೂ ಮಹಿಳೆಯರಿಗೆ ಸುಂದರ ಪ್ರಪಂಚದ ನೋಟ ಕೊಡುವ ಲೋಕ"
    <<
    ಮನಸ್ಸಿಗೆ ತಟ್ಟಿತು :-)

    ReplyDelete
  7. ಅರೆ ಶ್ರೀಕಾಂತ್ ನಾನಿದನ್ನು ನೋಡೇ ಇರ್ಲಿಲ್ಲ , ವಾರೆವ್ವ ಒಳ್ಳೆಯ ಬರಹ. ಇವೆಲ್ಲಾ ರೀತಿಯ ಯೋಚನೆ ಆಲೋಚನೆಗಳು ಶ್ರೀಕಾಂತ್ ಗೆ ಮಾತ್ರ ಬರಲಿ ಅಂತಾ ಆ ಸರಸ್ವತಿ ನಿಮ್ಮನ್ನೇ ಹರಸಿದ್ದಾಳೆ. ಬ್ಲಾಗ್ ಲೋಕದ ನನ್ನ ಎಲ್ಲಾ ಸಹೋದರಿಯರಿಗೆ ಒಳ್ಳೆಯ ಕೊಡುಗೆ ನೀಡಿದ್ದೀರಾ. ಅಭಿನಂದನೆಗಳು. ನನ್ನ ಪರವಾಗಿ ಎಲ್ಲರಿಗೂ ಶುಭಾಶಯಗಳು

    ReplyDelete
  8. ಲೇಖನ ಓದಿದ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು. ಮಹಿಳಮಣಿಗಳಿಗೆ ಅನವರತ ಸಂತಸದಾಯಕ ಕ್ಷಣಗಳನ್ನು ಅನುಭವಿಸುವ ಕೃಪೆಯನ್ನು ಆ ದೇವರು ಕೊಡುತ್ತಿರಲಿ

    ReplyDelete