Saturday, March 2, 2013

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು ...!

"ಅಕ್ಕ... ಯಾಕೋ @#$# ಊಟ ಮಾಡಬೇಕು ಅನ್ನಿಸುತ್ತಿದೆ!"
"ಯಾಕೆ ವಿಶಾಲು?.. ಸರಿ ತುಂಬಿದ ದಿನಗಳ ಬಸುರಿ ಬಯಕೆ... ಊರಿನಲ್ಲಿ ಒಂದು ಶ್ರಾದ್ಧ ಇದೆ ಇವತ್ತು ಅಲ್ಲಿಗೆ ಹೋಗೋಣ!"

ಇದು ನಲವತ್ತು ವರ್ಷಗಳ ಹಿಂದೆ ಜನುಮ ನೀಡಿದ ಜನುಮದಾತೆ ನನ್ನ ಧರೆಗಿಳಿಸುವ ಮುನ್ನಾ ದಿನ ಇಚ್ಛೆ ಪಟ್ಟ "ಆಸೆ"
ಕಿತ್ತಾನೆಯಲ್ಲಿನ ದೊಡ್ದಮಾವ ಅವರ ಮನೆ
ಕಿತ್ತಾನೆಯಲ್ಲಿನ ಸಣ್ಣ ಮಾವ ಅವರ ಮನೆ!  

ಅಕ್ಕ..ಶ್ರೀಮತಿ ಲಕ್ಷ್ಮೀದೇವಮ್ಮ ... ಅಂದ್ರೆ ನನ್ನ ಮುತ್ತಜ್ಜಿ (ಅಮ್ಮನ ಅಜ್ಜಿ).. ಕಿತ್ತಾನೆಯ ಪ್ರಮುಖರಲ್ಲಿ ಒಬ್ಬರಾದ ಶ್ರೀ ರಾಮಯ್ಯನವರ ಧರ್ಮಪತ್ನಿ. ಸುಮಾರು ೯೫ಕ್ಕೂ ಹೆಚ್ಚಿನ ವಸಂತಗಳನ್ನು ಕಂಡ ಈ ಹಿರಿಯ ಜೀವ ತಾಯಿಯ ಮಮತೆಯ ಸಿರಿ. ಕಣ್ಣು ಕಿವಿ ಚುರುಕಾಗಿತ್ತು, ಹಲ್ಲುಗಳು ಗಟ್ಟಿ ಮುಟ್ಟಾಗಿತ್ತು! ಅದು ಅವರ ಸುಂದರ ಧೀರ್ಘಾಯುಷ್ಯದ ರಹಸ್ಯ!

ಇಂತಹ ಸುಂದರ ಮನಸ್ಸಿನ ಮುತ್ತಜ್ಜಿ, ನಮ್ಮ ತಾಯಿಯ ಮೇಲೆ ತೋರಿದ ಮಮತೆ, ಪ್ರೀತಿ, ಅಕ್ಕರೆ,  ಪ್ರಾಯಶಃ ನಮ್ಮ ತಾಯಿಯ ತಾಯಿಯು ತೋರುತ್ತಿರಲಿಲ್ಲವೇನೋ!. ನಮ್ಮ ಅಮ್ಮ ಕೇವಲ ಎರಡು ವರ್ಷದ ಕೂಸಾಗಿದ್ದಾಗ ಅಮ್ಮನ ಅಮ್ಮ ಇಹಲೋಕ ತ್ಯಜಿಸಿದ ಮೇಲೆ, ಬೆಳೆದದ್ದು ತನ್ನ ಅಜ್ಜಿಯ ಮಡಿಲಲ್ಲೇ.

ಮುತ್ತಜ್ಜಿ ಶ್ರೀಮತಿ ಲಕ್ಷ್ಮೀದೇವಿ 
ಅಂಥಹ ತಾಯಿಯ ಗುಣ ಹೊತ್ತ ಮುತ್ತಜ್ಜಿ, ತನ್ನ ಮೊಮ್ಮಗಳ ಬಯಕೆಯನ್ನು ಈಡೇರಿಸುವುದಕ್ಕೆ ಕಿತ್ತಾನೆಯ ನೆಂಟರ ಮನೆಯಲ್ಲಿ ನಡೆಯುತ್ತಿದ್ದ ಶ್ರಾದ್ಧದ ಊಟಕ್ಕೆ ಕರೆದೊಯ್ದರು. ಊಟ ಮಾಡಿ ಬಂದ ರಾತ್ರಿ ಅಮ್ಮನಿಗೆ ಪ್ರಸವ ಬೇನೆ ಶುರುವಾಯಿತು.

ಅಂದಿನ ರಾತ್ರಿ ನನ್ನ ಮುತ್ತಜ್ಜಿಗೆ ಊಟವಿಲ್ಲ. ಮೊಮ್ಮಗಳ ಆರೈಕೆಯಲ್ಲಿ ರಾತ್ರಿ ಊಟ ಸೇರಲಿಲ್ಲ. ಮರುದಿನ ಸೂರ್ಯೋದಯದ ಹೊತ್ತಿಗೆ ಗಂಡು ಮಗುವಿಗೆ ಜನ್ಮ ಕೊಟ್ಟರು ನನ್ನ ತಾಯಿ! ಅಂದಿನ ದಿನ ಮತ್ತೆ ಊಟ ಮಾಡಲಾಗಲಿಲ್ಲ ನನ್ನ ಮುತ್ತಜ್ಜಿಗೆ.

ಮಾರನೆ ದಿನ ಶಿವರಾತ್ರಿ ಮತ್ತೆ ಉಪವಾಸ ನನ್ನ ಮುತ್ತಜ್ಜಿಗೆ!. ನನ್ನ ಜನನ ಕಾಲದಲ್ಲಿ ಮೂರು ದಿನ ಆಹಾರವಿಲ್ಲದೆ  ತನ್ನ ಮೊಮ್ಮಗಳ ಆರೈಕೆ ಮಾಡಿದ ಆ ಮಹಾತಾಯಿಗೆ ಈ ಬ್ಲಾಗಿನ ಮೂಲಕ ನನ್ನ ನಮನಗಳನ್ನು ಸಲ್ಲಿಸುತ್ತಿದ್ದೇನೆ.

ಜನನವಾದಮೇಲೆ ಆ ವಿಷಯವನ್ನು ನನ್ನ ತಾಯಿಯ ಸೋದರಮಾವನ ಮಗ "ಶಾಮಣ್ಣ"ನ ಜೊತೆ ತೋಟಕ್ಕೆ ಹೋಗಿದ್ದ ನನ್ನ ಅಣ್ಣ ವಿಜಯನಿಗೆ... ಶಾಮಣ್ಣ ಹೇಳಿದ
"ಲೋ ವಿಜಯ ತಮ್ಮ ಹುಟ್ಟಿದ್ದಾನೆ ಕಣೋ"
"ಯಾರಿಗೆ ತಮ್ಮನೋ..!"
"ಲೋ ನಿನ್ನ ಅಮ್ಮನಿಗೆ ಇಂದು ಬೆಳಿಗ್ಗೆ ಹೆರಿಗೆ ಆಯಿತು.. ತಮ್ಮ ಹುಟ್ಟಿದ್ದಾನೆ ನಿನಗೆ"
ನನ್ನ ಅಣ್ಣನಿಗೆ ಖುಷಿಯಾಯಿತು!

ಅಕ್ಕನ ಮಗಳಾದ ನನ್ನ ಅಮ್ಮನ ಬಾಣಂತನಕ್ಕೆ, ಆರೈಕೆಗೆ ಹಾಲು ಜಾಸ್ತಿ ಬೇಕು ಅಂತ ಅನ್ನಿಸಿ ಹಸುವನ್ನೇ ತಂದ ಅಮ್ಮನ ಸೋದರಮಾವ ಶ್ರೀ ಶಂಕ್ರಣ್ಣ  ಮತ್ತು ಅವರ ಅಗ್ರಜ ಶ್ರೀ ಕೃಷ್ಣಪ್ಪ ಅವರ ಕುಟುಂಬಕ್ಕೆ ಈ ಮೂಲಕ ಕೃತಜ್ಞತೆಗಳನ್ನು  ಸಲ್ಲಿಸುತ್ತಿದ್ದೇನೆ. .

ಅಮ್ಮನ ಹಿರಿಯ ಸೋದರ ಮಾವ ಮತ್ತು ಅತ್ತೆ (ದೊಡ್ಡ ಮಾವ ಮತ್ತು ಅತ್ತೆ)

ಕಿರಿಯ ಸೋದರ ಮಾವ ಮತ್ತು ಅತ್ತೆ (ಸಣ್ಣ ಮಾವ ಮತ್ತು ಅತ್ತೆ)
ಆಗ ಹುಟ್ಟಿದ ಮಗುವನ್ನು ಪ್ರಪಂಚದಲ್ಲಿ ಗುರುತಿಸಿಕೊಳ್ಳಲು "ಶ್ರೀಕಾಂತ್" ಎಂಬ ಸುಂದರ ಹೆಸರನ್ನು ಕೊಟ್ಟ ನನ್ನ ಅಜ್ಜ (ಅಪ್ಪನ ಅಪ್ಪ).. ಬಾಲ್ಯದಲ್ಲಿ ನನ್ನ ಬರವಣಿಗೆಯನ್ನು, ಊಟಮಾಡುವುದನ್ನು ಎಡಗೈಯಿಂದ ಬಲಗೈಗೆ ಬದಲಿಸಲು ಶ್ರಮಿಸಿದ ಅಜ್ಜಿಗೆ(ಅಪ್ಪನ ಅಮ್ಮ) ನನ್ನ ಕೃತಜ್ಞತೆಗಳು.
ಅಜ್ಜ ಮತ್ತು ಅಜ್ಜಿ (ಅಪ್ಪನ ತಂದೆ ತಾಯಿ)
ಸಾಹಸದ ಬದುಕಲ್ಲಿ ತಾಳ್ಮೆಯಿಂದ ಹೆಜ್ಜೆ ಇಟ್ಟ ಅಪ್ಪನಿಗೂ.. ಅಷ್ಟೇ ಛಲದಿಂದ ಸಂಸಾರವನ್ನು ಕಷ್ಟದ ಅಲೆಗಳಲ್ಲೂ ಕೂಡ ಧೃತಿಗೆಡದೆ ದಡಕ್ಕೆ ತಲುಪಿಸಿದ ಅಮ್ಮನಿಗೂ,ಇಷ್ಟೆಲ್ಲಾ ಬರೆಯಲು ಸ್ಪೂರ್ತಿನೀಡುವ, ನನ್ನೊಳಗೆ ಕೂತು ಬರೆಸುತ್ತಿರುವ ಮಾತಾ ಪಿತೃಗಳ ಋಣಭಾರ ತೀರಿಸಲು ಸಾಧ್ಯವೇ ಇಲ್ಲ. ಅಪ್ಪ ಅಮ್ಮ ಹೆಜ್ಜೆ  ಇಟ್ಟು ಸಾಗುತ್ತಿರುವ ಸುವರ್ಣ ಪಥದಲ್ಲಿ ಸಾಗುವ, ಮಾಗುವ ಮನಸ್ಸು ಸದಾ ನನ್ನೊಳಗೆ ಇರಲಿ ಎಂದು ಆಶಿಸುತ್ತೇನೆ. ಆ ಕಾರ್ಯದಲ್ಲಿ ಯಶಸ್ವಿಯಾದರೆ ಅದೇ ಅವರಿಗೆ ಸಲ್ಲಿಸುವ ಕೃತಜ್ಞತೆಗಳು!

ನನ್ನ ಅಪ್ಪ ಅಮ್ಮ

ಸದಾ ಕಾಲ ನೆರಳಾಗಿರುವ ಅಕ್ಕನಿಗೆ, ಗೆಳೆಯನಾಗಿ, ಅಕ್ಕರೆಯಿಂದ ಕಾಣುವ ಅಣ್ಣನಿಗೆ, ಸ್ನೇಹಿತನಾಗಿ ಜೊತೆಯಲ್ಲಿ ನಿಂತಿರುವ ತಮ್ಮನಿಗೆ, ಮಾತೃ ಸ್ವರೂಪ ಅತ್ತಿಗೆಯವರಿಗೆ , ಮನದನ್ನೆಗೆ , ಮುದ್ದಾದ ಮಕ್ಕಲೈಗೆ...  ಎಲ್ಲಾರಿಗೂ  ಈ ಸಮಯದಲ್ಲಿ ನನ್ನ ಕೃತಜ್ಞತೆಗಳು.

ನನ್ನ ತುಂಬು ಕುಟುಂಬ!
ಬಂದು ಬಳಗದ ಪ್ರತಿಯೊಬ್ಬರೂ ಈ ನಲವತ್ತು ವರ್ಷಗಳ ಜೀವನದ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಅವರಿಗೆ ನನ್ನ ನಮಸ್ಕಾರಗಳು.

ಅನವರತ ಜೊತೆಯಾಗಿ ಸಹಕಾರ ನೀಡುತ್ತಿರುವ ಬಂಧುಗಳು 
ಗೆಳೆತನ ಎಂಬುದು ಒಂದು ಸುವಾಸಿತ ಪರಿಮಳವುಳ್ಳ ಹೂವಿನ ಹಾಗೆ.  ಅಂಥಹ ಪರಿಮಳಕ್ಕೆ ನನ್ನನ್ನು ಸೇರಿಸಿಕೊಂಡು ಅರಳಿಸುತ್ತಿರುವ ನನ್ನ ಬಾಲ್ಯ ಸ್ನೇಹಿತರಿಗೆ, ಬ್ಲಾಗ್ ಲೋಕದ ನಕ್ಷತ್ರಗಳಿಗೆ, ಫೇಸ್ ಬುಕ್ ನ ತಾರೆಗಳಿಗೆ, ಸಹೋದ್ಯೋಗಿಗಳಿಗೆ  ತುಂಬು ಹೃದಯದ ಧನ್ಯವಾದಗಳು. ಪ್ರತಿಯೊಬ್ಬರೂ ಸಿಗುವ ಒಂದೇ ಸ್ಥಳ ಅದೇ ಗೂಗಲ್!

ಸ್ನೇಹದ ತಾಣ ಗೂಗಲ್!
ನಲವತ್ತು ವರ್ಷ....  ಮನುಜನ ಜೀವನದಲ್ಲಿ ಒಂದು ಮುಖ್ಯ ಘಟ್ಟ. ತಾನು ನಡೆದುಬಂದ ದಾರಿಯನ್ನು ಅವಲೋಕಿಸುತ್ತ ಮುಂದಿನ ದಾರಿಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಾ ಸಾಗುವ, ಮಾಗಿದ ಮನಸ್ಸಿನ ಹಾದಿಯಲ್ಲಿ ನಡೆಯಬೇಕು. ಇದು ನನ್ನ ಆಸೆ ಇದಕ್ಕೆ ನಿಮ್ಮ ಆಶೀರ್ವಾದ ನೆರಳಂತೆ ಕಾಯುತ್ತಿರಲಿ!

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು....!

30 comments:

  1. ನೆನಸಿಕೊಂಡರೇನೇ
    ಅವರ ಋಣದ ಭಾರವು
    ತುಸು ಸವೆದೀತು ನಮಗೂ

    ಚಿತ್ರಗಳು ನೆನಪಿನ ಪುಟಗಳು
    ಎರಡೂ ಅಮೋಘ

    ಜನುಮ ದಿನದ ಶುಭಾಶಯಗಳು

    ReplyDelete
    Replies
    1. ಸುಂದರ ಮಾತುಗಳು ನಿಮ್ಮದು ಬದರಿ ಸರ್. ಧನ್ಯವಾದಗಳು

      Delete
  2. ಚೆನ್ನಾಗಿದೆ ಶ್ರೀಕಾಂತ್ ಲೇಖನ ಎಲ್ಲರನ್ನೂ ನೆನೆದಿದ್ದೀರಿ. ಮೂರು ದಿನ ಉಪವಾಸ ಮಾಡಿಸಿದಿರಿ ಮುತ್ತಜ್ಜಿಗೆ ಹಹಹ..:) ಹುಟ್ಟು ಹಬ್ಬದ ಶುಭಾಶಯಗಳು... ಶುಭವಾಗಲಿ

    ReplyDelete
    Replies
    1. ಹ ಹ ಸೂಪರ್ ಅಕ್ಕಯ್ಯ. ಮುತ್ತಜ್ಜಿ ಅಮ್ಮನ ಮೇಲೆ ಇಟ್ಟಿದ್ದ ಮಮತೆಗೆ ಸಾಕ್ಷಿ ಅದು. ಧನ್ಯವಾದಗಳು ಸುಂದರ ಶುಭಾಶಯಗಳಿಗೆ

      Delete
  3. ಶ್ರೀಕಾಂತ್ ಜೀ -
    ಬಾಳ ದಾರಿಯ ಉದ್ದಕ್ಕೂ ನೆರಳಾಗಿ ಕಾದವರ ನೆನೆದ ಪರಿ ಇಷ್ಟವಾಯಿತು...
    ಜನುಮ ದಿನದ ಹಾರ್ದಿಕ ಶುಭಾಶಯಗಳು...

    ReplyDelete
    Replies
    1. ಶ್ರೀವತ್ಸ ನಿಮ್ಮ ಹಾರೈಕೆಗೆ ಧನ್ಯವಾದಗಳು. ಜೀವನದಿ ಹರಿದೆಡೆಯೆಲ್ಲ ಇಂತಹ ಸುಂದರ ಮನಸ್ಸುಗಳ ನಮ್ಮನ್ನು ಹರಸುತ್ತ ಇರುತ್ತವೆ

      Delete
  4. ಎಲ್ಲಾ ಸೂಪರ್ ...... ಹಾಗೆ ನಿಮ್ಮಂತ ಸಹೃದಯಿ, ಗುಣವಂತ, ನಿಷ್ಕಲ್ಮಶ ಮನಸ್ಸಿನ ಸ್ನೇಹಿತನನ್ನು ಕೊಟ್ಟ ಬ್ಲಾಗ್ ಲೋಕಕ್ಕೆ ನನ್ನದೊಂದು ನಮನ ....

    ಜನ್ಮದಿನದ ಹಾರ್ದಿಕ ಶುಭಾಶಯಗಳು ಶ್ರೀ ಸರ್ ..... ಸದಾ ನಗು ನಗುತ್ತಾ ಇರಿ....

    ReplyDelete
    Replies
    1. ಬ್ಲಾಗ್ ಲೋಕದ ಸುಂದರ ಹೂವುಗಳ ಸ್ನೇಹ ನನಗೆ ದೊರಕಿದ್ದು ನನ್ನ ಭಾಗ್ಯ. ಅಶೋಕ್ ಸರ್ ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ, ಹಾರೈಕೆಗಳಿಗೆ

      Delete
  5. ಎಲ್ಲರನ್ನೂ ಆದರಿಸುವ, ಭಾಂದವ್ಯಗಳಿಗೆ ಹೆಚ್ಚು ಒತ್ತು ನೀಡುವ ಎಲ್ಲರನ್ನೂ ಪ್ರೋತ್ಸಾಹಿಸುವ ನಿಮ್ಮ ಗುಣ ಬಹಳ ದೊಡ್ಡದ್ದು ಸರ್...

    ಜೇನುಗೂಡಿನೊಂದಿಗಿನ ನಿಮ್ಮ ಈ ಒಡನಾಟ ಹೀಗೆಯೇ ಸದಾ ಕಾಲ ಸಂತೋಷದಿಂದ ಕೂಡಿರಲಿ... ಮತ್ತೊಮ್ಮೆ ಜನುಮ ದಿನದ ಶುಭಾಶಯಗಳು ಶ್ರೀಕಾಂತ್ ಸರ್....

    ReplyDelete
    Replies
    1. ಫ್ರೆಂಡ್ ಜೇನುಗೂಡಿನಂತ ಈ ಲೋಕದಲ್ಲಿ ಸಿಹಿ ಘಳಿಗೆಗಳನ್ನು ಹೆಕ್ಕಿ ಎಲ್ಲರಲ್ಲೂ ಹಂಚಿಕೊಳ್ಳುವ ಆಸೆ. ಸುಂದರ ಶುಭಾಶಯಗಳಿಗೆ ಧನ್ಯವಾದಗಳು ಫ್ರೆಂಡ್

      Delete
  6. ಎಲ್ಲರಿಗೂ ಕೃತಜ್ಞತೆ ಅರ್ಪಿಸುವ ರೀತಿ ತುಂಬಾ ಇಷ್ಟ ಆಯ್ತು ಶ್ರೀಕಾಂತ್... ಮುಂದಿನ ಜೀವನ ಸುಖ, ಶಾಂತಿ, ನೆಮ್ಮದಿಯೊಂದಿಗೆ ಸಾಗಲಿ ಎನ್ನುವ ಪ್ರೀತಿಯ ಹಾರೈಕೆ. ಹುಟ್ಟು ಹಬ್ಬದ ಶುಭಾಶಯಗಳು..... :))

    ReplyDelete
    Replies
    1. ಧನ್ಯವಾದಗಳು ಸಹೋದರಿ. ಜೀವನದ ಹಾದಿಯಲ್ಲಿ ಗೆಳೆತನದ ಸಂತಸದಲ್ಲಿ ಸಿಗುವ ಖುಶಿಯ ಘಳಿಗೆಗಳು ಸದಾ ಅಮರ!

      Delete
  7. ಒಲುಮೆಯ ಜೀವದ ಗೆಳೆಯನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಆ ಚೇತನ ಅಜರಾಮರವಾಗಿರಲಿ ಎಂದು ಆಶಿಸುವ ... ಜೆ.ಎಂ.

    ReplyDelete
    Replies
    1. ಗೆಳೆತನದ ಅನೇಕ ಮಜಲುಗಳನ್ನು ಕಂಡ ನಮ್ಮ ಲೋಕ ಎಂತಹ ಸುವರ್ಣ ಪಥವನ್ನು ನಮಗೆ ಕೊಟ್ಟಿದೆ.
      ಧನ್ಯವಾದಗಳು ಗುರು..

      Delete
  8. ಜನುಮದಿನದ ಶುಭಾಷಯಗಳು....
    ದೊಡ್ಡವರನ್ನು ನೆನೆಸಿಕೊಳ್ಳುವುದರೊಂದಿಗೆ ನೀವು ಇನ್ನೂ ದೊಡ್ಡವರಾದಿರಿ ಶ್ರೀ :)...
    ಅಭಿನಂದನೆಗಳು...

    ReplyDelete
    Replies
    1. ಒಹ್ ದೊಡ್ಡಮಾತು ಚಿನ್ಮಯ್. ಹೂವಿಂದ ನಾರು ಧನ್ಯತೆ ಪಡೆಯುವಂತೆಅನ್ನಿಸುತ್ತಿದೆ ಧನ್ಯವಾದಗಳು.

      Delete
  9. ದೊಡ್ಡ ಕುಟುಂಬದ ಪ್ರೀತಿಯ ಸವಿಯಲ್ಲಿ ಮಿಂದೆದ್ದೀದೀರಿ .... ಎಲ್ಲರನ್ನೂ ಅದರಿಸೋ ,ಪ್ರೀತಿಸೋ ನಿಮ್ಮೀ ಆತ್ಮೀಯತೆಗೆ ಶರಣು ... ಜನುಮ ದಿನದ ಪ್ರೀತಿಯ ಶುಭಾಶಯಗಳು .... ಚಿರಾಯುವಾಗಿ :)

    ReplyDelete
    Replies
    1. ಭಾಗ್ಯ ಪುಟ್ಟಿ ಮನಸ್ಸು ಒಂದು ಹಸಿರು ಹುಲ್ಲಿನ ಹಾಸು ಇದ್ದಂತೆ. ಇದುವ ಹೆಜ್ಜೆ ನಮ್ಮ ನಡೆಯನ್ನು ಗುರುತಿಸುತ್ತದೆ ಅಲ್ಲವೇ. ಧನ್ಯವಾದಗಳು ನಿನ್ನ ಸುಂದರ ಹಾರೈಕೆಗಳಿಗೆ

      Delete
  10. ಸೂಪರ್.. ಜನ್ಮದಿನದ ಹಾರ್ದಿಕ ಶುಭಾಶಯಗಳು ಶ್ರೀಕಾಂತ್ ಅಣ್ಣ:)

    ReplyDelete
    Replies
    1. ಎಸ್ ಎಸ್ ಸುಂದರ ಶುಭಾಶಯಗಳಿಗೆ ನನ್ನ ನಗುವಿನ ಅಭಿನಂದನೆಗಳು

      Delete
  11. ಹೆತ್ತವರ ಸೇವೆ, ಹಿರಿಯರನ್ನು ನೆನೆವುದು, ಸ್ನೇಹಿತ-ಹಿತವರನ್ನು ಸ್ಮರಿಸುವುದು, ನಡೆದು ಬಂದ ದಾರಿಯ ಅವಲೋಕನ... ಎಲ್ಲಾ ನಮ್ಮ ನಡೆ ನುಡಿಗಳನ್ನು ಸಾಣೆ ಹಿಡಿಯುವ ಸಲಕರಣೆ-ದಾರಿಗಳು.
    ಬಹಳ ಚನ್ನಾಗಿ ಎಲ್ಲರನ್ನೂ ಸ್ಮರಿಸಿಕೊಂಡು ಆಭಾರ ವ್ಯಕ್ತಪಡಿಸಿದ್ದೀರಿ ಶ್ರೀಮನ್... ದೇವರು ನಿಮ್ಮ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೆ ಆಯುರಾರೋಗ್ಯ ಸಂತೋಷ ನೀಡಲೆಂದು ಹಾರೈಸುತ್ತೇನೆ.

    ReplyDelete
    Replies
    1. ನಮಗಿಂತಲೂ ಚೆನ್ನಾಗಿ, ಮುಂಚಿತವಾಗಿ ಪ್ರಪಂಚದ ಸುಂದರ ಸಂಗತಿಗಳನ್ನು ನೋಡಿ ಅನುಭವಿಗಲಾಗಿರುವ ಅವರ ಮುಂದೆ ತಲೆಬಾಗಿ ನಿಂತಾಗ ಆಶೀರ್ವಾದದ ರಕ್ಷಾ ಕವಚ ಸದಾ ನಮ್ಮ ಬೆನ್ನು ಕಾಯುತ್ತದೆ ಎಂದು ಅಪ್ಪ ಹೇಳುತ್ತಿದ್ದರು. ಆ ನೆನಪಲ್ಲಿ ಈ ಲೇಖನ.
      ಸುಂದರವಾದ ನಿಮ್ಮ ನುಡಿಗಳಿಗೆ ಧನ್ಯವಾದಗಳು ಅಜಾದ್ ಸರ್

      Delete
  12. ನೀವು ಬದುಕನ್ನ ನೋಡುವ ಪರಿ ಮತ್ತದನ್ನ ಬರೆವ ರೀತಿ ಎರಡೂ ಸೊಗಸು ನಿಮ್ಮಂತ ಸಹೃದಯ ಮಿತ್ರರನ್ನ ಪರಿಚಯಿಸಿದ ಬ್ಲಾಗ್ ಲೋಕಕ್ಕೆ ಧನ್ಯವಾದಗಳು , ನಿಮ್ಮ ಬಂಧು ಮಿತ್ರರಿಗೆ ವಂದನೆಗಳು .

    ReplyDelete
    Replies
    1. ಸ್ನೇಹ ಲೋಕ ಈ ಬ್ಲಾಗ್ ಲೋಕ ತಾರೆಗಳ ಹೊಳಪಲ್ಲಿ ನಮ್ಮ ಮೇಲೆ ತುಸು ಕಿರಣಗಳು ಬಿದ್ದರೂ ಧನ್ಯತಾ ಭಾವ ಮೂಡಿ ಬರುತ್ತೆ. ಧನ್ಯವಾದಗಳು ಸ್ವರ್ಣ ಮೇಡಂ

      Delete
  13. ಹಿರಿಯರನ್ನು, ಸ್ನೇಹಿತರನ್ನು, ಕಿರಿಯರನ್ನೂ ಬಿಡದಂತೆ ನೆನೆಸಿಕೊಂಡು ಹುಟ್ಟಿನ ದಿನಗಳನ್ನು, ಮುತ್ತಜ್ಜಿಯನ್ನು ನೆನೆಸಿಕೊಂಡು ಬರೆದ ಲೇಖನ ಬೊಂಬಾಟ್ ಅಣ್ಣಯ್ಯ...
    ಬ್ಲಾಗ್ ನಲ್ಲಿ ವಿಶ್ ಮಾಡೋದು ತಡವಾಯಿತು... ಹುಟ್ಟು ಹಬ್ಬದ ಶುಭಾಶಯಗಳು..

    ReplyDelete
    Replies
    1. ಅಂದು ಮಧ್ಯರಾತ್ರಿಯಲ್ಲಿ ಬಂದ ಶುಭಾಶಯದ ಸಂದೇಶ ಸಂತಸಕೊಟ್ಟಿತು. ಲೇಖನದ ಮೆಚ್ಚುಗೆಯಾಗಿದೆ ಎಂದರೆ ಅದು ಹಿರಿಯರಿಗೆ ಸಂದ ಗೌರವ. ಧನ್ಯವಾದಗಳು ಪಿ.ಎಸ್

      Delete
  14. ಶ್ರೀ ಸಾರ್..

    ನಿಮ್ಮ ಕರುಳು ಬಳ್ಳಿಗಳು ಕೇವಲ ನಿಮ್ಮನ್ನಷ್ಟೇ ಸುತ್ತಿ ಕೊಂಡದ್ದಲ್ಲ.. ಈಗ ನಮ್ಮನ್ನೂ..!!
    ಯಾರಿಗಾದರು ಅಜ್ಜಿ ಯಾಕೆ ಇಷ್ಟ ಆಗಬೇಕು ಅನ್ನೋ ಸಂದೇಹ ಇದ್ರೆ ನಿಮ್ಮ ಈ ಲೇಖನವನ್ನ ಸಂದೆಶವನ್ನಾಗಿ ಕೊಡಬಹುದು.. ನಿಮ್ಮ ಮುತ್ತಜ್ಜಿಗೆ ನನ್ನ ಅನಂತ ಪ್ರಣಾಮಗಳು..

    ಬರವಣಿಗೆ ಬಹಳ ಹಿಡಿಸ್ತು ಸಾರ್..
    ನಲವತ್ತು ವರ್ಷವೇ ನಿಮಗೆ..?? ನಂಬುವಂಥ ವಿಚಾರ ಅಲ್ಲ ಬಿಡಿ ಇದು..!!

    ReplyDelete
    Replies
    1. ಸತೀಶ್ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ದೂರದ ನಮ್ಮ ತಾಣಕ್ಕೆ ತಲುಪಿಸುವ ಆ ಚಾಲಕರಿಗೂ ನಿರ್ವಾಹಕರಿಗೂ ಧನ್ಯವಾದ ಹೇಳುವುದನ್ನು ನೆನೆದಾಗ ಈ ಲೇಖನದ ಅಚ್ಚು ಮೂಡಿಬಂತು. ಧನ್ಯವಾದಗಳು ನಿಮಗೆ

      Delete
  15. ಆತ್ಮೀಯ ಶ್ರೀಕಾಂತ,
    ಜನ್ಮ ರಹಸ್ಯದ ಜೊತೆಗೆ ಎಲ್ಲರನ್ನು ಜನ್ಮದಿನದ ಸಂಧರ್ಭದಲ್ಲಿ ನೆನೆಸಿದ್ದು ಆಪ್ಯಾಯಮಾನವಾಗಿದೆ. ಸುಖ ಹಂಚಿಕೊಂಡಷ್ಟು ಅಧಿಕ ಎನ್ನುವುದು ಇದನ್ನೇ! ನಿನ್ನ ಸುಖದ ಕ್ಷಣಗಳು ಇಮ್ಮಡಿಯಾಗಲಿ, ಶಾಂತಿ ನಿನ್ನದಾಗಲಿ, ನಿನ್ನ ಸುಂದರ ಕನಸು ನನಸಾಗಲಿ. ಶುಭಂ ಭವತು.

    ReplyDelete
    Replies
    1. ಧನ್ಯವಾದಗಳು ಚಿಕ್ಕಪ್ಪ ಹಿರಿಯರ ಮಾರ್ಗ, ಅವರನ್ನು ಸಾಧನೆಗಳ ದರ್ಶನ ಮಾಡುವ ಭಾಗ್ಯ ನಮಗಿದೆ. ನಾವೇ ಭಾಗ್ಯವಂತರು. ಸುಂದರ ಆಶೀರ್ವಾದಕ್ಕೆ ಧನ್ಯವಾದಗಳು

      Delete