ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
ಕನ್ನಡ ಕನ್ನಡ ಹ! ಸವಿಗನ್ನಡ
ಕನ್ನಡದಲಿ ಹರಿ ಬರೆಯುವನು
ಕನ್ನಡದಲಿ ಹರ ತಿರಿಯುವನು
ಕನ್ನಡದಲ್ಲಿಯೇ ಬಿನ್ನಹ ಗೈದೊಡೆ
ಹರಿ ವರಗಳ ಮಳೆ ಕರೆಯುವನು
ಹರ ಮುರಿಯದೆ ತಾ ಪೊರೆಯುವನು
ಬಾಳುಹುದೇತಕೆ ? ನುಡಿ, ಎಲೆ ಜೀವ
ಸಿರಿಗನ್ನದದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ
ಕನ್ನಡ ತಾಯಿಯ ಸೇವೆಯ ಮಾಡೆ
ಮಿತ್ರ ಸಂದೀಪ್ ಕೆ.ಬಿ ಕೈಚಳಕ! |
ಇದು ನಾ ಕಂಡ ಅತಿ ಉತ್ತಮ ಕರುನಾಡಿನ ಹುಟ್ಟು ಹಬ್ಬದ ಆಚರಣೆಗಳಲ್ಲಿ ಒಂದು. ಗ್ರಾಮೀಣ ಕ್ರೀಡೆಯನ್ನು ಕೇಂದ್ರೀಕರಿಸಿ ಸಿದ್ಧ ಪಡಿಸಿದ ಆ ಪಟ ನನ್ನ ಮನಸನ್ನು ಇನ್ನಷ್ಟು ಭಾವನಾತ್ಮಕವಾಗಿ ಮಾಡಿತು. ಕಂಬಳ, ಕಬಡ್ಡಿ, ಕುಂಟೆ ಬಿಲ್ಲೆ, ಜಟ್ಟಿಗಳ ಮಲ್ಲಯುದ್ಧ, ಗೋಲಿಯಾಟ, ಬುಗುರಿ, ಜೀಕಾಟ..ಆಹಾ ಗ್ರಾಮೀಣ ಬದುಕೇ ಚಂದ..
ನಾಡಗೀತೆಯೊಂದಿಗೆ ಕಾರ್ಯಕ್ರಮ ಶುರುವಾಗಿತ್ತು..ನಾ ಹೋದಾಗ ಚುಟುಕು ಕವಿ ಚಕ್ರವರ್ತಿ ಶ್ರೀ ಡುಂಡಿರಾಜರು ಮುಖ್ಯ ಅತಿಥಿಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದರು. ಅವರ ಪಕ್ಕದಲ್ಲಿ ಸಿಸ್ಕೋ ಕಂಪನಿಯ ಹೃದಯ ಎನ್ನಬಹುದಾದ ಶ್ರೀ ಅರವಿಂದ ಸೀತಾರಾಮನ್ ಉಪಸ್ಥಿತರಿದ್ದರು.
ಶ್ರೀ ಡುಂಡಿರಾಜರಿಗೆ ಇದು ಮಗಳ ಮನೆ ಅರ್ಥಾತ್ ಅವರ ಮಗಳು, ಮತ್ತು ಅಳಿಯ ಸಿಸ್ಕೋ ಸಂಸ್ಥೆಯಲ್ಲಿಯೇ ಕೆಲಸ ಮಾಡುವುದು ಎನ್ನುವ ವಿಚಾರ ಅವರಿಂದಲೇ ತಿಳಿಯಿತು.
ಚುಟುಕುಗಳ ಧಣಿ ಶ್ರೀ ಡುಂಡಿರಾಜ್ |
ಹಾಗಾಗಿ ನಿರರ್ಗಳವಾಗಿ ಪುಂಕಾನುಪುಂಕವಾಗಿ ಚುಟುಕು ಕವಿತೆಗಳು ಹರಿದಾಡಿದವು, ಕೊಟ್ಟ ಸಮಯ ಬರಿ ಗಡಿಯಾರದಲ್ಲಿತ್ತು ಅಷ್ಟೇ..ಆದರೆ ಆ ಸಮಯದ ಪರಿಧಿಯನ್ನು ಧಾಟಿ ನಮ್ಮನ್ನೆಲ್ಲ ರಂಜಿಸಿದರು. ನಗಲು ನಮಗೆ ಇನ್ನಷ್ಟು ಸಮಯ ಬೇಕಿತ್ತು ಅನ್ನಿಸಿದ್ದರೆ ಅದು ಯಾರ ತಪ್ಪು ಅಲ್ಲ...ಏಕೆಂದರೆ ಅವರ ಬಳಿ ಕಂ"ಬಳಿ"ಗಿಂತ ನವಿರಾದ, ಬೆಚ್ಚಗಿನ ಕವಿತೆಗಳ ಅಸ್ತ್ರಗಳೇ ಬೇಕಷ್ಟು ಇದ್ದವು. ಅವರು ನಮ್ಮನ್ನು ಕಂ "ಬಳಿ" ಎಂದು ಕರೆಯದಿದ್ದರೂ..ಅವರ ನವಿರಾದ ಹಾಸ್ಯ, ಬಾರಿಸಿದ ಎಚ್ಚರಿಕೆಯ ಘಂಟೆ, ಎಲ್ಲವು ಅನಾಮತ್ತಾಗಿ ನಮ್ಮನ್ನು ಅವರ ಬಳಿಯೇ ಕರೆದೊಯ್ದಿತು...
ಅವರ ನಂತರ ಶ್ರೀ ಅರವಿಂದ ಸೀತಾರಾಮನ್ ಅವರು ಕನ್ನಡದಲ್ಲಿ ಮಾತಾನಾಡಿ ತಮ್ಮ ಅಭಿಮಾನದ ಮೆಚ್ಚುಗೆಯ ನುಡಿಮುತ್ತುಗಳನ್ನು ಸುರಿಸಿದರು.
ಶ್ರೀ ಅರವಿಂದ ಸೀತಾರಾಮನ್ |
ಪ್ರಶಸ್ತಿ ಪ್ರಧಾನ ಸಮಾರಂಭದ ದೃಶ್ಯಾವಳಿ
ನಂತರ ಸಾಂಸ್ಕೃತಿಕ ನದಿಯ ಆಣೆಕಟ್ಟು ಒಡೆದು ಪ್ರವಾಹದಂತೆ ನೆರೆದಿದ್ದ ಅಭಿಮಾನಿಗಳ ಮೇಲೆ ಅಪ್ಪಳಿಸಿತು. ಒಂದಲ್ಲ ಎರಡಲ್ಲ ಸರಿ ಸುಮಾರು ಮೂರು ಘಂಟೆಗಳ ಕಾಲ ಒಂದಾದ ಮೇಲೆ ಒಂದರಂತೆ.ನೃತ್ಯ, ಚಿಕ್ಕ ಚಿಕ್ಕ ಪ್ರಹಸನಗಳು, ಗ್ರಾಮೀಣ ಬದುಕು ಏಕೆ ಚಂದ ಎನ್ನುವ ರೂಪಕ, ಬೇರೆ ಭಾಷೆ ಮಾತಾಡುವ ಪ್ರಾಂತ್ಯದಿಂದ ಬಂದರೂ..ನೆಲ ಜಲ ಕೊಟ್ಟ ಭೂಮಿಯನ್ನು ಅಪ್ಪಿ, ಅಲ್ಲಿನ ಭಾಷೆಯನ್ನ ಕಲಿಯುವ ಪ್ರಯತ್ನ ಮಾಡಿ ಯಶಸ್ವಿಯಾದ ಒಂದು ತಂಡದಿಂದ ಮೂಡಿಬಂದ ದೃಶ್ಯಗಳು ಎಲ್ಲವು ಮನರಂಜಿಸಿದವು ಹಾಗು ಸಂದೇಶವನ್ನು ರವಾನಿಸಿದವು.
ಸಿಸ್ಕೋ ಸಂಸ್ಥೆಯ ಕೆಲವು ಕಲಾವಿದರು ನಡೆಸಿಕೊಟ್ಟ ಸಂಗೀತ ರಸಸಂಜೆ, ಕನ್ನಡ ಚಿತ್ರರಂಗದ ಕೆಲ ಧ್ರುವತಾರೆಗಳ ಮೆಲುಕು ಹಾಕುವ ಹಾಡುಗಳನ್ನು ಇಂಪಾಗಿ ಹಾಡಿ, ಅದಕ್ಕೆ ತಕ್ಕ ನೃತ್ಯಗಳನ್ನೂ ಮಾಡಿದರು..ಎಲ್ಲವು ಸೊಗಸಾಗಿ ಮೂಡಿಬಂದವು. ಬಾಳೆಹಣ್ಣನ್ನು ಜೀನು ತುಪ್ಪದಲ್ಲಿ ಅದ್ದಿ, ಅದಕ್ಕೆ ಸಕ್ಕರೆಯನ್ನು ಬೆರೆಸಿದಂತೆ ಎಲ್ಲ ಕಾರ್ಯಕ್ರಮಗಳು ಹುಣ್ಣಿಮೆ ಚಂದ್ರನಂತೆ ಮೂಡಿಬಂದವು.
ಅದಕ್ಕೆ ಕಳಶಪ್ರಾಯವಿಟ್ಟಂತೆ ಲಘು ಉಪಹಾರ ಹಸಿದ ದೇಹಕ್ಕೆ ಸವಿರುಚಿಯನ್ನು ತೋರಿಸಿತು.
ಕೊರವರ ನೃತ್ಯ, ರಂಗೋಲಿ ಸ್ಪರ್ಧೆ, ಲಗೋರಿ, ಚೌಕಭಾರಃ, ಕುಂಟೆ ಬಿಲ್ಲೆ ಮುಂತಾದ ಸುಂದರ ಕಾರ್ಯಕ್ರಮಗಳು ಬೆಳಿಗ್ಗೆ ಇಂದ ನಡೆದಿತ್ತು ಎಂದು ನಂತರ ತಿಳಿಯಿತು.
ಸಿಸ್ಕೋ ಸಂಸ್ಥೆಯನ್ನು ಬಿಟ್ಟು ಸರಿ ಸುಮಾರು ಒಂದುವರೆ ವರುಷವಾದರೂ ಅನೇಕ ಸ್ನೇಹಿತರ ಸ್ನೇಹದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ.ಅಂತಹ ಅನೇಕ ಸ್ನೇಹಿತರನ್ನು ನೋಡಿದ್ದು, ಮಾತಾಡಿಸಿದ್ದು, ಹರಟಿದ್ದು ಎಲ್ಲವನ್ನು ಕಂಡ ನನ್ನ ಮನ ಭಲೇ ಕಾಂತಾ ಶ್ರೀಕಾಂತ ಭಲೇ..ನನ್ನ ಮನಸಿಗೆ ಇನ್ನಷ್ಟು ಹುರುಪನ್ನು ತಂದಿದ್ದೀಯ ಅಂತ ಹೇಳಿದಾಗ ನನಗೆ ನಾನೇ ಬೆನ್ನನ್ನು ತಟ್ಟಿ ಕೊಂಡೆ..ಹಹಹಹ..
ಸಂದೀಪ್ ಕೆ.ಬಿ, ರವಿ ಆರ್, ಛಾಯ, ವಿನೋದ್ ಕೃಷ್ಣ, ರಘುನಂದನ್, ಜೀವೆಂದರ್, ವಿನಯ್ ಕುಮಾರ್, ವಸಂತ್ ಶೆಟ್ಟಿ, ಸಂತೋಷ್ ಕುಮಾರ್, ಶ್ರೀಶೈಲ, ಶ್ರೀದೇವಿ ಸುಬ್ರಮಣ್ಯಮ್, ಜಗದೀಶ್ ಮಲ್ಪುರ , ಜಗದೀಶ್ ಪಂಚಣ್ಣ, ಮಂಜು ಶಂಕರ್, ಪೂರ್ಣಪ್ರಜ್ಞ , ಸತ್ಯನಾರಾಯಣ ಉಡುಪ, ಸುರೇಶ ಬಾಬು ಕೆ.ಪಿ, ಮಲ್ಲಿಕಾರ್ಜುನ, ಜಾರ್ಜ್, ಡಾರ್ವಿನ್, ದೂರವಾಣಿಯಲ್ಲೇ ಮಾತಾಡಿಸಲು ಸಾಧ್ಯವಾದ ಶರ್ಮಿಳ ದಾಮ್ಲೆ , ಮನೋಜ್ಞ (ಅಣ್ಣಾವ್ರು), ಒಂದೇ ಎರಡೇ ಎಲ್ಲ ಮೃದು ಸ್ನೇಹ ಜೀವಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಇಂತಹ ಒಂದು ಸುಂದರ ಸಂಜೆಯನ್ನು ಅಚ್ಚುಕಟ್ಟಾಗಿ ನೇಯ್ದು ಸುಂದರ ಪೋಷಾಕನ್ನು ಮಾಡಿ ತಾಯಿ ಭುವನೇಶ್ವರಿಗೆ ಮುಕುಟವನ್ನು ತೊಡಿಸಿದ "ಸಂಭ್ರಮ" ತಂಡಕ್ಕೆ ಅಭಿನಂದನೆಗಳು!!!