Wednesday, November 14, 2012

ಅನುಗ್ರಹ ಸದನದಲ್ಲಿ ಸಂತಸದ ಕ್ಷಣಗಳು

ಛಲ ಎನ್ನುವುದು ಜೀವನದಲ್ಲಿ ಸುಂದರ ಬದಲಾವಣೆ ತರುತ್ತದೆ..ಅದಕ್ಕೆ ತಾಳ್ಮೆ ಇರಬೇಕು..ಧೃಡ ಮನಸ್ಸು ಇರಬೇಕು..ನಮ್ಮ ಅಪ್ಪ ಏನು ಹೇಳಲಿಲ್ಲ..ಆ ಹಾದಿಯಲ್ಲಿ ಪಯಣಿಸಿದರು..ಅಂತಹ ಹಾದಿಯಲ್ಲಿ ಪಯಣಿಸುತ್ತಿರುವ ನಮ್ಮ ಕುಟುಂಬಕ್ಕೆ ಆಲದ ಮರದ ಹಾಗೆ ನಿಂತಿರುವ ನಮ್ಮ ಅಕ್ಕನ ಬಾಳಿನಲ್ಲಿ ಇಂದು ಇನ್ನೊಂದು ಹೊಸ ಅಧ್ಯಾಯ..

ಇಸವಿ 2008ರಲ್ಲಿ ನನ್ನ ಅಕ್ಕ ಮೊದಲ ದ್ವಿಚಕ್ರ ವಾಹನ ಕೊಂಡುಕೊಂಡಾಗ, ನನಗೆ ಅಚ್ಚರಿಯಾಗಿತ್ತು ಹೇಗೆ ಓಡಿಸುತ್ತಾಳೆ, ತುಂಬಾ ಹೆದರಿಕೆ ಸ್ವಭಾವದವಳಾದ ಅಕ್ಕ  ಬೆಂಗಳೂರು ಮಹಾನಗರದ ಜಾತ್ರೆಯಲ್ಲಿ ಹೇಗೆ ಗಾಡಿ ಓಡಿಸುತ್ತಾಳೆ ಎನ್ನುವ ಆತಂಕವಿತ್ತು.  ಧೈರ್ಯ ಮಾಡಿ ಟಿ.ವಿ.ಎಸ್ ಸ್ಕೂಟಿ..ತೆಗೆದುಗೊಂಡಳು. ಮೊದಲನೇ ತಪಾಸಣೆಗೆ ಹೋದಾಗ ಗಾಡಿ ಓದಿದ್ದು ಕೇವಲ ನೂರು ಕಿಲೋಮೀಟರು ಗಳು ಮಾತ್ರ..

ಒಮ್ಮೆ ನಾನು ಬಲವಂತ ಮಾಡಿ, ನೀನು ಮುಂದೆ ಓಡಿಸಿಕೊಂಡು ಹೋಗು..ನಾನು ನಿನ್ನ ಹಿಂಬಾಲಿಸುತ್ತೇನೆ ಎಂದು ಧೈರ್ಯ ಹೇಳಿ ಮಲ್ಲೇಶ್ವರಂಗೆ ಸಂಜೆಯ ವಾಹನ ದಟ್ಟಣೆಯಲ್ಲಿ ಓಡಿಸಲು ಹುರಿದುಂಬಿಸಿದೆ.  ಹೇಗೋ ಕಷ್ಟ ಪಟ್ಟು, ನನ್ನ ಚೆನ್ನಾಗಿ ಬಯ್ದುಕೊಂಡು ಓಡಿಸಿಕೊಂಡು ಬಂದಳು. 

ಹೀಗೆ ಕಳೆಯಿತು ದಿನಗಳು, ವಾರಗಳು, ತಿಂಗಳುಗಳು.  ಕಳೆದದ್ದು ಸುಮಾರು ಐದು ವರ್ಷಗಳು, ಒಮ್ಮೆ ನಾನು ಅಕ್ಕನ ಗಾಡಿ ತೆಗೆದುಕೊಂಡು ಓಡಿಸುತ್ತಾ ಇರುವಾಗ ಯಾಕೋ ಮೀಟರ್ ಕಡೆ ಗಮನ ಹೋಯಿತು.  ಆಶ್ಚರ್ಯ ...ಹತ್ತಿರ ಹತ್ತಿರ ಐವತ್ತು ಸಾವಿರ ಕಿ.ಮಿ.ಗಳು ಐದು ವರ್ಷದಲ್ಲಿ....ತಲೆ ತಿರುಗತೊಡಗಿತು.

ಅಕ್ಕನ, ಧೈರ್ಯ, ಜೀವನದಲ್ಲಿ ಮುಂದೆ ಸಾಗಬೇಕೆನ್ನುವ ಛಲ, ಆತ್ಮ ವಿಶ್ವಾಸ, ಎಲ್ಲ ನೆನೆದು ಮೈ ಜುಮ್ ಎಂದಿತು. ಯಾವಾಗಲೂ ಅಕ್ಕ ಹೇಳುವುದು ನಾವೆಲ್ಲಾ ಜೊತೆಯಲ್ಲೇ ಹೋಗೋಣ..ಅವಳು ತಂದ ಗಾಡಿಯ ಹೆಸರು ನೋಡಿ...ಅದನ್ನೇ ಹೇಳುತ್ತೆ...ಈ ಭಾಂದವ್ಯವೇ ನಮ್ಮ ಅನುಗ್ರಹ ಸದನದ ಬುನಾದಿ!!!   

ನಾವು ಬಂದೆವಾ !!!!

ಇಂದಿನ ಬಲಿಪಾಡ್ಯಮಿ ದಿವಸ, ಮನೆಯಲ್ಲಿ ಹಬ್ಬದ ಸಡಗರವಿರಲಿಲ್ಲ (ಅಪ್ಪ ನಮ್ಮನ್ನು ದೈಹಿಕವಾಗಿ ಅಗಲಿ ಒಂದು ವರ್ಷ ಕಳೆದಿರದ ಕಾರಣ), ಆದರೆ ಒಂದು ಹೊಸ ವಾಹನ ಮನೆಗೆ ಬಂದದ್ದು ಹಬ್ಬದ ಕಲರವ ಮೂಡಿಸಲು ಸಹಾಯ ಮಾಡಿತ್ತು.  

ಅಕ್ಕನ ಹೊಸ ವಾಹನ....ಹೊಸ ಹುಮ್ಮಸ್ಸು!
ಪಿತೃ ಸಮಾನರಾದ ಕುಮಾರ ಚಿಕ್ಕಪ್ಪ ವಾಹನ ಪೂಜೆ ಮಾಡಲು ಬಂದದ್ದು ಎಲ್ಲರಿಗು ಸಂತಸ ತಂದಿತ್ತು.  
ಪಿತೃ ಸಮಾನರಾದ ಕುಮಾರ ಚಿಕ್ಕಪ್ಪ...

ಸರಳವಾಗಿ, ಅರ್ಥಗರ್ಭಿತ ಪೂಜೆ ಮಾಡಿ, ಅದರ ಅರ್ಥ, ವಿಸ್ತಾರ ತಿಳಿಸಿ, ನಮ್ಮನ್ನೆಲ್ಲ ಹರಸಿದ್ದು ನೋಡಿ ಅಮ್ಮನ ಕಣ್ಣಲ್ಲಿ ಹೊರಬರಲಾರದೆ ಕುಳಿತಿದ್ದ ಆನಂದಭಾಷ್ಪ ಭರಿತ ಕಣ್ಣೀರನ್ನು ನೋಡಿದೆ.  ಅಣ್ಣ ಇದ್ದಿದ್ದರೆ.....ಛೆ ಎಂತಹ ಮಾತು ಇಲ್ಲೇ ನಮ್ಮ ಜೊತೆಯಲ್ಲಿ ಇದ್ದಾರೆ. ನಮ್ಮನ್ನೆಲ್ಲ ಹರಸಿದ್ದಾರೆ.

ಕುಮಾರ ಚಿಕ್ಕಪ್ಪ...ಪೂಜಾ ಧಿರಸಿನಲ್ಲಿ 
ನಮ್ಮ ಮನೆಯ ಕಲಾವಿದ ವಿಷ್ಣು, ತನ್ನ ಇಷ್ಟ ದೈವ ಗಣಪನನ್ನು ಗಾಡಿಯ ಮೇಲೆ ಬಿಡಿಸಿದ ಕ್ಷಣಗಳು ಅಮೋಘ..ಅವನಿಗೆ ಒಂದು ಕಾನ್ವಾಸ ಬೇಕು ಅಷ್ಟೇ...ಇವತ್ತು ಗಾಡಿಯ ಸಂಖ್ಯಾ ಫಲಕದ ಮೇಲೆ ತನ್ನ ಕಲೆಯನ್ನು ಅರಳಿಸಿದ..
ವಿಷ್ಣು ಕಶ್ಯಪನ ಕಲೆ ಅರಳಿತು 

.ಮಗ ಬರೆದ ಚಿತ್ರಕ್ಕೆ  ಅಪ್ಪ..  ಅಂತಿಮ ಸ್ಪರ್ಶ ನೀಡಿದ್ದು 

ಹೊಸ ಗಾಡಿ ಹೊಸ ಚಿತ್ರ...

ಅಪ್ಪ ಅಕ್ಕನಿಗೆ ಕಿವಿ ಮಾತು ಹೇಳಿದ್ದು ಪಿಸುಮಾತಿನಲ್ಲಿ ಕೇಳಿದ ಅನುಭವ  ತಂದಿತ್ತು.
ತಂದೆಯ ಭಾವಚಿತ್ರದೊಂದಿಗೆ ಪರಿವಾರ...

.."ಮಗು ಜೀವನದಲ್ಲಿ ನೀನು ಕಷ್ಟ ಬಂದರು, ಅದನ್ನು ದೂರ ಸರಿಸುವ ಧೈರ್ಯ, ಸ್ಥೈರ್ಯ ನಿನ್ನಲ್ಲಿದೆ...ವಾಹನ ಬಂತು..ಮುಂದಿನ ಕೆಲವು ವರುಷಗಳಲ್ಲಿ   "ಅನುಗ್ರಹ ಸದನ" ನಮ್ಮದಾಗಲಿ...ನನ್ನ ಆಶೀರ್ವಾದ ನನ್ನ ಕುಟುಂಬದ ಮೇಲೆ ಇದೆ.ಮುನ್ನುಗ್ಗು ಮಗು..ಮುನ್ನಡೆಸಲು ನನ್ನ ವಿಶಾಲು ಇದ್ದಾಳೆ" 

18 comments:

  1. ಅಕ್ಕ - ತಂದೆ ತಾಯಿ ಇದ್ದರೂ ಒಂದು ವಿಶೇಷ ಸ್ಥಾನಕ್ಕೆ ಹಕ್ಕುದಾರಳು ಎಂದು ಮೊನ್ನೆ ನಮ್ಮಲ್ಲಿಗೆ ಬಂದು ಕುವೈತ್ ಕನ್ನಡ ಕೂಟದ ರಾಜ್ಯ್ಯೋತ್ಸವ ಉದ್ಘಾಟನಾ ಭಾಷಣ ಮಾಡಿದ ಡಾ. ನಾರಾಯಣ ಮೂರ್ತಿಯವರ ಮಾತು ನೆನಪಾಯಿತು ನಿಮ್ಮ ಲೇಖನ ನೋಡಿ... ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭಹಾರೈಕೆಗಳು ಶ್ರೀಮನ್..

    ReplyDelete
    Replies
    1. ಅಜಾದ್ ಸರ್.ಸುಂದರ ಪ್ರತಿಕ್ರಿಯೆ.ನನ್ನ ಜೀವನವನ್ನು ಈ ಮಟ್ಟದಲ್ಲಿ ನಿಲ್ಲಿಸಲು ನನ್ನ ಅಕ್ಕನ ಪಾಲೂ ತುಂಬಾ ಇದೆ.ಆ ಕೃತಜ್ಞತೆ ಹೊಮ್ಮಿಸಲು ಕಾಯುತಿದ್ದೆ.ಕ್ಷಣಗಳು ಬಂದವು..ಧನ್ಯ್ವವಾದಗಳು ನಿಮ್ಮ ಹಾರೈಕೆಗೆ

      Delete
  2. ಅಕ್ಕ ತಾಯಿ ಸಮಾನ... ಅವರ ಸ್ಥೈರ್ಯ ನಿಜಕ್ಕೊ ಮೆಚ್ಚಬೇಕು.. ಅಪ್ಪನ ನೆನಪಲ್ಲಿ ಹೊಸ ವಸ್ತು ಮನೆ ಅಲಂಕರಿಸಿದೆ ಶುಭವಾಗಲಿ

    ReplyDelete
    Replies
    1. Dhanyavaadgalu akkayya...sundara pratikriyege...hego nimma comment ge reply maadodu miss aagi bittide...kshame irali..

      Delete
  3. ಒಂದು ಹೃದಯ ಸ್ಪರ್ಶಿ ಲೇಖನ. ಕುಟುಂಬದಲ್ಲಿ ಸಂಬಂಧಗಳ ಮಹತ್ವ ತಿಳಿಸುವ ನಿಮ್ಮ ಲೇಖನ ಓದಲು ಖುಷಿಯಾಗುತ್ತೆ.ಮುಂದಿನ ಪೀಳಿಗೆಗೂ ತನ್ನ ಸುತ್ತ ಇರುವ ಸಂಬಂಧಗಳ ಪರಿಚಯವಾಗುತ್ತೆ. ದೊಡ್ಡ ನಗರಗಳಲ್ಲಿ ಇಂತಹ ದೃಶ್ಯಗಳು ಸಿಗುವುದು ಅಪರೂಪ , ಥ್ಯಾಂಕ್ಸ್ ಶ್ರೀಕಾಂತ್.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಸಂಬಂಧಗಳು ಬೆಸೆಯುವ ಅನುಬಂಧ...ಯಾವಾಗಲು ಸುಂದರ..ಆ ತುಂಬು ಕುಟುಂಬದ ಭಾವನೆಯನ್ನು ಬಿತ್ತಿದವರು ನಮ್ಮ ತಾತ.ಅದನ್ನ ನಮ್ಮ ಅಪ್ಪ ನಮ್ಮಲ್ಲಿ ಬೆಳೆಸಿದರು..ಅದು ಮರವಾಗಿ ನಿಲ್ಲಲು ಸಹಕರಿಸುತ್ತಿದೆ.ತುಂಬು ಹೃದಯದ ನಿಮ್ಮ ಅಭಿಮಾನ ಪೂರ್ವಕ ಹಾರೈಕೆಗೆ ನಾನು ಸದಾ ಚಿರಋಣಿ..

      Delete
  4. ಚಂದದ ಬರಹ ಅಣ್ಣಯ್ಯ...
    ತುಂಬು ಕುಟುಂಬದ ಚಂದವೇ ಚಂದ.. ಇಂತಹ ಹೊತ್ತಿನಲ್ಲಿ ಮಾರ್ಗದರ್ಶಿಯಾಗಿರೋ ಅಪ್ಪನ ಮಾತುಗಳು ಮತ್ತು ಆಶೀರ್ವಾದ.. ನಿಮ್ಮ ಸಂಸಾರ ನೋಡಿದಾಗ ಬಹಳ ಖುಷಿಯಾಗುತ್ತದೆ..

    ReplyDelete
    Replies
    1. ಸುಷ್ಮಾ ಪುಟ್ಟಿ..ಎಂತಹ ಚಂದದ ಮಾತುಗಳು..ಖುಷಿಯಾಗುತ್ತದೆ ಇಂತಹ ತುಂಬು ಕುಟುಂಬದಲ್ಲಿ ಇರಲು. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

      Delete
  5. ಆತ್ಮೀಯ ಶ್ರೀಕಾಂತ,
    ಮನೆಯಲ್ಲಿ ಸಂಭ್ರಮ ಪಡಲು ಮನಸ್ಸು ಬೇಕು ಅಷ್ಟೇ! ಕಾರಣಗಳು ಕೇವಲ ನೆವ. ನಿನ್ನ ಪ್ರತಿ ಲೇಖನ ಓದುವಾಗಲು ನನಗನಿಸುವ ಭಾವನೆ ಇದು. ಕೆಲವರಿಗೆ ಎಷ್ಟೇ ಸಂತೋಷವಿದ್ದರು ಹಂಚಿಕೊಳ್ಳಲು ಅರಿಯದ ಜಿಪುಣರು. ಆದರೆ ನೀನೇ ಬೇರೆ, ನಿನ್ನ ಸ್ಟೈಲೇ ಬೇರೆ. ಉತ್ತಮವಾದ ಭಾವನೆಗಳೊಡನೆ, ಚಿತ್ರಗಳನ್ನು ಸೇರಿಸಿ ರಸಾನುಭವ ನೀಡುವುದರಲ್ಲಿ ಎತ್ತಿದ ಕೈ.
    ಉತ್ತಮ ನಿರೂಪಣೆ.

    ReplyDelete
    Replies
    1. ಚಿಕ್ಕಪ್ಪ.ನಿಮ್ಮ ಪ್ರತಿಕ್ರಿಯೆಗಳು ಯಾವಾಗಲು ವಿಶೇಷವೆನಿಸುತ್ತದೆ.ಮತ್ತು ಸೊಗಸಾಗಿರುತ್ತದೆ.ಧನ್ಯವಾದಗಳು ಸುಂದರ ವಿವರಣೆಗೆ ಹಾಗು ಹಾರೈಕೆಗೆ..ಅಪ್ಪ ಬೆಳೆಸಿದ ಈ ಘಟದಲ್ಲಿ ಇನ್ನು ಏನೇನು ಭಾವಗಳು ಇವೆಯೋ ಅರಿಯದು..ಅರಿವಿಗೆ ಬಂದದ್ದನ್ನು ಇಳಿಸುತಿದ್ದೇನೆ..

      Delete
  6. ನಾನಂತು ನಿಮ್ಮನ್ನು ಶ್ರೀಕಾಂತ್ ಅಂತಾನೆ ಕರಿತೆನೆ..... ನಿಮ್ಮ ಮನೆಗೆ ಹೊಸ ಗಾಡಿ ಬಂದಿದೆ...ನಿಜ...ಅದು ನನ್ನ ಮನೆಗೆ ಬಂದಷ್ಟೇ ಸಂತಸ...ಅಕ್ಕನಿಗೆ ಹೊಸ ಗಾಡಿಯ ಸವಾರಿ ಮುದ ನೀಡಲಿ... ಪ್ರೀತಿಯಿಂದ ಸುದೀಪ... :)

    ReplyDelete
    Replies
    1. ಧನ್ಯವಾದಗಳು ಸಹೋದರಿ...ಮಗುವನ್ನು ಹೇಗೆ ಕರೆದರೂ ಅದು ತಿರುಗಿ ನೋಡುತ್ತದೆ..
      ನಿಮ್ಮ ಸುಂದರ ಅನಿಸಿಕೆಗೆ, ಹಾರೈಕೆಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳು

      Delete
  7. ಇಂತಹ ಹೊಸ ಹೊಸ ಸಂಭ್ರಮಗಳು ನಿಮ್ಮ ಕುಟುಂಬದ ದಿನ ನಿತ್ಯದ ಅಚ್ಚರಿಗಳಾಗಲಿ.

    ಸುಮ್ಮನೆ ತುಟಿ ತೆರೆದರೂ ಅದು ನಗುವಿನ ಹೂ ಬಿರಿದಂತಾಗಲಿ.

    ಖುಷಿಯಷ್ಟೇ ನಿಮ್ಮಲ್ಲಿ ತುಂಬಲಿ.

    ReplyDelete
    Replies
    1. ಬದರಿ ಸರ್ ತುಂಬು ಹೃದಯದ ಹಾರೈಕೆಗಳಿಗೆ ಧನ್ಯವಾದಗಳು, ತುಂಬಾ ಸುಂದರ ನಿಮ್ಮ ಮಾತುಗಳು..

      Delete
  8. ಚೆಂದದ ಬರಹ ಭೈಯ ....ಹೊಸ ಗಾಡಿಯ ಮೇಲೆ ಮೂಡಿರುವ ಗಣಪನ ಚಿತ್ರ ಮುದ್ದಾಗಿದೆ.ಹೀಗೆ ಸದಾ ಅರಳುತಿರಲಿ ನಿಮ್ಮೆಲ್ಲರ ಬಾಂಧವ್ಯ.

    ReplyDelete
    Replies
    1. ಧನ್ಯವಾದಗಳು ವೈಶು..ಮೊದಲ ಬಾರಿಗೆ ನನ್ನ ಬ್ಲಾಗ್ ಲೋಕದಲ್ಲಿ ನಿಮ್ಮ ಪ್ರತಿಕ್ರಿಯೆ ಸಂತಸ ತಂದಿತು..ನಿಮ್ಮ ಹಾರೈಕೆಗೆ ನನ್ನ ನಮನಗಳು

      Delete
  9. ನನಗೂ ಗಾಡಿ ಹೊಡಿಯೋದು ಅಂದ್ರೆ ಭಯ.
    ನಿಮ್ಮ ಕುಟುಂಬವನ್ನು ನೋಡಿದಾಗ ಖುಷಿಯಾಗತ್ತೆ.
    ಹೀಗೆ ಇರಿ, ಹೆಚ್ಚಿನ ಅನುಗ್ರಹ ನಿಮ್ಮದಾಗಲಿ.

    ReplyDelete
    Replies
    1. ನಿಮ್ಮ ಶುಭ ಹಾರೈಕೆಗೆ ಹಾಗೂ ಪ್ರತಿಕ್ರಿಯೆಗೆ ನನ್ನ ಕುಟುಂಬದ ಪರವಾಗಿ ಧನ್ಯವಾದಗಳು ಸ್ವರ್ಣ ಮೇಡಂ.

      Delete