Thursday, November 1, 2012

ಬ್ಲಾಗಿಗರ ಜೊತೆ ವಿಶಿಷ್ಟ ರೀತಿಯ ಕನ್ನಡ ರಾಜ್ಯೋತ್ಸವ!

ಭಗವಂತ ಏನೇ ಕೊಟ್ಟರು ಸರಿಯಾದ ಸಮಯದಲ್ಲಿ ಕೊಡುತ್ತಾನೆ.  ಇದು ಅನೇಕರ ಜೀವನದಲ್ಲಿ ಅನೇಕ ಘಟನೆಗಳ ಮೂಲಕ ನಿರೂಪಣೆಯಾಗಿದೆ....ಹಾಗೂ  ಸಾಕ್ಷಾತ್ಕಾರವಾಗಿದೆ.   

ಸರಿಯಾದ ಸಮಯದಲ್ಲಿ...ಸರಿಯಾದ ರೀತಿಯಲ್ಲಿ ನಿಲ್ಲುವರು ಸ್ನೇಹಿತರು ಎನ್ನುತ್ತಾರೆ. ಇಂದು ಕನ್ನಡಾಂಬೆಯ ಹಬ್ಬದ  ಹರುಷ ನೂರು ಪಟ್ಟು ಹೆಚ್ಚಿಸಿತು. ಇದಕ್ಕೆ ಕಾರಣ ಒಂದೇ ಎರಡೇ... ಸಂತಸ ತುಂಬಿ ಹರಿಯುತಿತ್ತು.  

ಅಮೆರಿಕಾದಲ್ಲಿ "ಸ್ಯಾಂಡಿ" ಚಂಡಿಯ ಅವತಾರ ತಾಳಿದ್ದರೆ, "ಚಂಡಿ"ಯ ಜನುಮ ಭೂಮಿ ನಮ್ಮ ಭಾರತ ಜನನಿಯ ತನುಜಾತೆಯಾದ ಕರುನಾಡಿನಲ್ಲಿ  ನೀಲಂ (ಸೌಮ್ಯ ರೂಪದ) ಪರಿಣಾಮ, ತಾಯಿಯ ಮಮತೆ ಸದಾ ಸುರಿಯುವಂತೆ ತುಂತುರು  ಮಳೆಯ ಧಾರೆ ದೇಹಕ್ಕೆ ಚಳಿ ತಂದರೂ, ಇಂದಿನ ದಿನಚರಿ ಸಂತಸ ತಂದಿತ್ತು 

"ನಿಮ್ಮೊಳಗೊಬ್ಬ ಬಾಲು" ಬ್ಲಾಗಿನ ಬಾಲೂ ಸರ್ ಕೆಂಗೇರಿಯ ಬಳಿ ಕಾರನ್ನು ನಿಲ್ಲಿಸಿ "ಬನ್ನಿ ಗುರು"  ಅಂದರು. ಹಸ್ತ ಲಾಘವವಾಯಿತು ಹಾಗೂ  ಅವರ ಶಿಷ್ಯ "ನವೀನ" ಅವರ ಪರಿಚಯ ಆಯಿತು.  ಶರವೇಗದಲ್ಲಿ ವಾಹನ ಕನ್ನಡಾಂಬೆಯ ಹೆಮ್ಮೆಯ ಕಲಾರತ್ನ "ಬಾಲಣ್ಣ" ಅವರ ಅಭಿಮಾನ ಸ್ಟುಡಿಯೋ ಬಳಿ ಬಂತು.  ನನ್ನ                 ಕ್ರಿಯಾಶೀಲತೆಗೆ ಸ್ಫೂರ್ತಿ ನೀಡುವ ಬಾಲಣ್ಣನ ಚಿರನಿದ್ರಾ ಸ್ಥಳದ ದರ್ಶನ ಮನಸಿಗೆ ಆಹ್ಲಾದಕರ ಕಂಪನ್ನು ಕೊಟ್ಟಿತು. 

ಕರುನಾಡಿನ ಹೆಮ್ಮೆಯ ಬಾಲಣ್ಣ 

ಬಾಲಣ್ಣನಿಗೆ ಮನದಲ್ಲೇ ವಂದಿಸಿ, ಇನ್ನೊಂದು ಸ್ಪೂರ್ತಿಯ ವ್ಯಕ್ತಿತ್ವ ಮೈಸೂರಿನ ಬಾಲೂ ಸರ್ ಜೊತೆಗೆ ವಾಹನ ಓಡಿತು ಯಲಹಂಕದ ಕಡೆಗೆ.

ಬಾಗಿಲಲ್ಲೇ ನಿಂತಿದ್ದ "ಗಿರಿ ಶಿಖರ"ದ ಮಾಲೀಕ ಗಿರೀಶ್ ಸೋಮಶೇಖರ್ ನಮ್ಮನ್ನು ಬರ ಮಾಡಿಕೊಂಡರು.  "ಪದ್ಯ, ಗಧ್ಯಗಳ ಬ್ಲಾಗಿನ ಕವಿ ಬದರಿನಾಥ್ ಪಲವಲ್ಲಿ,   ಕುವೈತ್ನಲ್ಲಿ ಕನ್ನಡ ಪತಾಕೆ ಹಾರಿಸುತ್ತಿರುವ ", "ಮೃದು ಮನಸು"  ಮಹೇಶ್ ಸರ್,  "ಮನಸು" ಸುಗುಣ ಮೇಡಂ ಅವರ ಪರಿವಾರ, "ಜಲನಯನ" ಆಜಾದ್ ಸರ್ ಮತ್ತು ಅವರ ಪರಿವಾರ,  ಚಟ-ಪಟಾಕಿ ಜ್ಯೋತಿ ಅಕ್ಕಯ್ಯ ಮತ್ತು ಮಕ್ಕಳು (ಅವರು ಸಂಚರಿಸುತಿದ್ದ ಬಿ.ಎಂ,ಟಿ ಸಿ. ಬಸ್ಸಿಗೆ ಪೂಜೆ ಸಲ್ಲಿಸಿ ಬಂದಿದ್ದರು),   ಸುಂದರ ನಗುವಿನ ಚೆಲುವ ಶಿವಪ್ರಕಾಶ್ ಇವರನೆಲ್ಲ ಭೇಟಿ ಮಾಡುವ ಅವಕಾಶ ಸುಗುಣ ಮೇಡಂ ಅವರ ಕುಟುಂಬದ ಮದುವೆ ಮನೆಯಲ್ಲಿ ಸಿಕ್ಕಿತು. 

ಸುಂದರ ಅನುಭವಗಳನ್ನೂ ಮೆಲುಕು ಹಾಕುತ್ತ, ಗಿರೀಶ್  ಕೃಪಾಪೋಷಿತ ಮಸಾಲೆ ಭರಿತ "ಚಟ್ನಿ" ಮತ್ತು  ದೋಸೆಯನ್ನು ಮೆಲ್ಲುತ್ತ ಹರಟಿದೆವು.  ಅಜಾದ್ ಸರ್ ಅವರ ಹಾಸ್ಯ, ಬಾಲೂ ಸರ್ ಅವರ ಮೃದು ಮಾತುಗಳು, ಬದರಿಯವರ ಕೀಟಲೆ, ಗಿರೀಶ್  ನಗೆ ಚಟಾಕಿಗಳು, ಜ್ಯೋತಿಯ ಅಕ್ಕರೆ ಭರಿತ ಮಾತುಗಳು, ಸುಂದರ ನಗುವಿನ ಸರದಾರ ಶಿವಪ್ರಕಾಶ್ ...ಆಹಾ ಸುಮಧುರ ಘಳಿಗೆಗಳು.  ನವ ದಂಪತಿಗಳಿಗೆ  ಶುಭಾಶಯಗಳನ್ನು ಕೋರಿ ಅಲ್ಲಿಂದ ಹೊರಟೆವು.

ನವೀನ ಅವರ ರಥಕ್ಕೆ ಅಡ್ಡಿಯಾಗಿ ಇನ್ನೊಂದು ವಾಹನ ನಿಂತಿತ್ತು, ಬಾಲೂ ಸರ್ ಅವರ ಸಮಯಪ್ರಜ್ಞೆಯಿಂದ ಆ ಅಡ್ಡಿಯನ್ನು ನಿವಾರಿಸಿಕೊಂಡು,  ಜಯನಗರದ ಕಡೆಗೆ ವಾಯುವೇಗದಲ್ಲಿ ಸಾಗಿತು. ಮಾರ್ಗದಲ್ಲಿ ನವೀನ ಅವರ ವಾಹನ ಚಲಿಸುವ ಪ್ರತಿಭೆಕಂಡು ಮೂಕ ವಿಸ್ಮಿತನಾದೆ. ಬದರಿ, ಮತ್ತು ಬಾಲೂ ಸರ್ ತಮ್ಮ ಜೀವನದ ಯಶೋಗಾಥೆಗಳನ್ನು  ಹಂಚಿಕೊಂಡರು. ಬಾಲೂ ಸರ್ ಅನ್ವೇಷಣೆಯ ಗಮ್ಮತ್ತಿನ ಹಿಂದಿನ ಕಥಾನಕವನ್ನು ಅವರಿಂದ ಕೇಳಿದಾಗ ರೋಮಾಂಚನವಾಯಿತು.  ಈ ಕಡೆ ನಗೆ ಬುಗ್ಗೆ ಬದರಿ, ಆ ಕಡೆ ವಿಷಯಗಳ ಕಣಜ ಬಾಲೂ ಸರ್..ಇದಕ್ಕಿಂತ ಸಂಗಾತಿಗಳು ಬೇಕೇ ಒಂದು ಸುಂದರ ಸಮಯವನ್ನು ಕಳೆಯಲು. 

ಮದುವೆ ಮಂಟಪದ ಮುಂದೆ ಕಾರನ್ನು ನಿಲ್ಲಿಸಲು ಪ್ರಯತ್ನ ಪಡುತಿದ್ದಾಗ ದೂರದಲ್ಲಿ ಪೋಲಿಸ್ ಪೇದೆ ನೋಡ್ತಾ ಇದ್ದರು, ನವೀನ ಸರಿಯಾ ಸ್ಥಳದಲ್ಲಿ  ಕಾರನ್ನು ನಿಲ್ಲಿಸಿ ಇಳಿದಾಗ, ನಿಧಾನವಾಗಿ ಹತ್ತಿರ ಬಂದ ಪೇದೆ, ಇಲ್ಲಿ ಅಲ್ಲ, ಆ ಕಡೆ ನಿಲ್ಲಿಸಿ  ಎಂದರು. ನಾನೂ ಬಾಲೂ ಸರ್, ಇಬ್ಬರು ಮನಸಾರೆ ನಕ್ಕೆವು.  

ಮದುವೆ ಮಂಟಪದ ಒಳಗೆ ಹೊಕ್ಕಾಗ, "ಕೊಳಲು" ಬ್ಲಾಗಿನ ಡಾಕ್ಟರ್ ಕೃಷ್ಣಮೂರ್ತಿ (ಡಿ.ಟಿ.ಕೆ) ನಿಂತಿದ್ದನ್ನು ನೋಡಿ ನಮ್ಮ ಕೀಟಲೆಕುಮಾರ ಬದರಿ..ಮೆಲ್ಲಗೆ ಅವರ ಕೈಯನ್ನು ಹಿಡಿದು ಎಳೆದರು. ಸಂತಸಭರಿತ ಡಾಕ್ಟರ್ ನಮ್ಮನ್ನು ನೋಡಿ ಖುಷಿಯಿಂದ ಮಾತಾಡಿಸಿದರು. ಬಾಲೂ ಸರ್ ಮತ್ತು ಬದರಿಯವರನ್ನು ಮಾತಾಡಿಸಿದ ಅವರು, ನನ್ನ ನೋಡಿ, ತಾಯಿ ಮಗುವನ್ನು ಕರೆದು ಮಾತಾಡಿಸುವಂತೆ, ಎರಡು ಕೈಗಳಿಂದ ನನ್ನ ಕೆನ್ನೆಯನ್ನು ಸವರಿ ನೀವು ಬಂದದ್ದು ತುಂಬಾ ಸಂತೋಷವಾಯಿತು ಎಂದರು.  ನನಗೆ ಪರಮಾಶ್ಚರ್ಯ ಇದೆ ಮೊದಲ ಭೇಟಿ..ಬರಿ ಬ್ಲಾಗ್ ಲೋಕದ ಸಂಬಂಧ..ಬಲು ಸಂತಸತಂದಿತು.  ನವ ದಂಪತಿಗಳಿಗೆ ಶುಭಾಶಯಗಳನ್ನು ಸಲ್ಲಿಸಿ ಅಲ್ಲಿಂದ ಊಟದ ಮನೆಗೆ ಬಂದೆವು. ಆಹಾ ಎಂತಹ ಭೋಜನ, ಒಂದಾದಮೇಲೆ ಒಂದು ಹೊಟ್ಟೆಯೊಳಗೆ ಹೋಗಿ ಶರಣಾದವು .  ಡಾಕ್ಟರಿಂದ ಬೀಳ್ಕೊಡುಗೆ ತೆಗೆದುಕೊಂಡು ಹೊರಟೆವು.

ಮದುವೆ ಮಂಟಪದಿಂದ ಹೊರಗೆ ಬಂದಾಗ ಇನ್ನೊಂದು ಅಚ್ಚರಿ ಕಾಡಿತ್ತು.          ಶ್ರೀ ಡಿ ವಿ,ಜಿ.ಅವರ  ಕಗ್ಗದ ಸಿರಿಯನ್ನು ಫೇಸ್-ಬುಕ್ಕಿನಲ್ಲಿ ಪಸರಿಸುತ್ತಿರುವ ತಿರುಮಲೈ ರವಿ ಸರ್, ಮತ್ತು ಎಂ.ಎಸ್.ಪಿ ಪ್ರಸಾದ್ ಬದರಿಯವರಿಗೆ ಕಾಯುತ್ತ  ನಿಂತಿದ್ದರು. ಅವರೊಡನೆ ಸ್ವಲ್ಪ ಹೊತ್ತು ಮಾತುಕತೆ, ಸ್ವಲ್ಪ ಕೀಟಲೆ, ನಗು, ಎಲ್ಲವು ಸೊಗಸಾಗಿ ಕಳೆಯಿತು.  

ನಂತರ ಬಾಲೂ ಸರ್ ಅವರ ನಾದಿನಿಯ ಮನೆಗೆ ಹೋಗಿ ಅಲ್ಲಿ ಶ್ರೀ ಶ್ರೀಧರ್ ಮತ್ತು ಶ್ರೀಮತಿ ಬೃಂದಾ ಮತ್ತು ಅವರ ಪರಿವಾರದ ಪರಿಚಯವಾಯಿತು.  ಬಿಸಿ ಬಿಸಿ ಚಹಾ ಚಳಿಗೆ ರಕ್ಷಣೆ ಒದಗಿಸಿತು. ಹಿಂದಿನ ವಾರವಷ್ಟೇ  ಮುಗಿಸಿ ಬಂದಿದ್ದ ಪ್ರವಾಸದ ಚಿತ್ರಗಳನ್ನು ನೋಡಿ ಅವರ ಮನೆಯಿಂದ ಹೊರಟು ಸೀದಾ ನಮ್ಮ ಮನೆಗೆ ಬಂದೆವು.  ನನ್ನ ಪರಿವಾರದ ಕಿರು ಪರಿಚಯದ ನಂತರ ಬಾಲೂ ಸರ್ ಅವರ ಪಯಣ ಮೈಸೂರಿನ ಕಡೆಗೆ ಸಾಗಿತು. ನನ್ನ ಪಯಣ ಕಂಪ್ಯೂಟರ್ ಮುಂದೆ ಈ ಲೇಖನವನ್ನು ಬರೆಸಿತು. 
 
ಕೆಲವು ಬ್ಲಾಗಿಗರ ಭೇಟಿ ಮಾಡಿದ ಸುವರ್ಣ ಸಂದರ್ಭ-ಕನ್ನಡ ರಾಜ್ಯೋತ್ಸವ 

ಈ ಲೇಖನವನ್ನು ಬ್ಲಾಗಿಗರೊಂದಿಗೆ ಹಂಚಿಕೊಂಡು ದೂರದರ್ಶನ ಚಾಲೂ ಮಾಡಿದೆ ಅರೆ, ಜಿ ಕನ್ನಡದಲ್ಲಿ ಅಣ್ಣಾವ್ರ ಮಯೂರದ ವೀರ ಪ್ರತಿಜ್ಞೆಯ ದೃಶ್ಯ ಬರುತಿತ್ತು...ತಲೆ ಎತ್ತಿ ನೋಡಿದೆ ಮನೆಯಲ್ಲಿ ತೂಗು ಹಾಕಿದ ಅಣ್ಣಾವ್ರ ಚಿತ್ರ ನನ್ನ ನೋಡಿ ಒಂದು ಕಿರುನಗೆ ಕೊಟ್ಟಹಾಗೆ ಅನ್ನಿಸಿತು. 

ಅಣ್ಣಾವ್ರು ಮಯೂರನ ವೇಷದಲ್ಲಿ!!!

ಇದಲ್ಲವೇ ಸುಂದರ ಕರುನಾಡ ರಾಜ್ಯೋತ್ಸವದ ದಿನ ಕಳೆಯುವ ರೀತಿ ಎಂದು ನನ್ನ ಮನಸು ನನ್ನ ಬೆನ್ನನ್ನು ತಟ್ಟಿತು. 



ಕನ್ನಡಾಂಬೆಯ ಹಬ್ಬದ ದಿನವನ್ನು  ಕನ್ನಡ ಕಂಪನ್ನು ವಿಶ್ವಕ್ಕೆ ಪಸರಿಸುತ್ತಿರುವ ಹಲವು ಸುಂದರ ಪ್ರತಿಭೆಗಳ ಜೊತೆ ಕಳೆದದ್ದು ಸಾರ್ಥಕ ಎನಿಸಿತು.  ಈ ಸಂತಸದ ಘಳಿಗೆಗಳನ್ನು ಸವಿಯಲು ನನ್ನನು ಆಹ್ವಾನಿಸಿದ ಬಾಲೂ ಸರ್ ಅವರಿಗೆ ಈ ಲೇಖನದ ಮೂಲಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಧನ್ಯವಾದಗಳು ಬಾಲೂ ಸರ್.

12 comments:

  1. ವಾವ್ ಖುಷಿಯಾಯ್ತು ಶ್ರೀ....

    ReplyDelete
  2. ನಿಮ್ಮನ್ನೆಲ್ಲ ಭೇಟಿಯಾದದ್ದೇ ನನಗೆ ನಿಜ ರಾಜ್ಯೋತ್ಸವ ಸಂಭ್ರಮಾಚರಣೆ ಆಯಿತು.

    ReplyDelete
  3. ಚಿನ್ಮಯ್ ನಮಸ್ಕಾರಗಳು..ಮತ್ತು ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ಹಾಗು ಪ್ರತಿಕ್ರಿಯೆಗಳಿಗೆ

    ReplyDelete
  4. ಸಂದೀಪ್ ಧನ್ಯವಾದಗಳು..ಈ ಸಂತಸಕ್ಕೆ ನೀವೇ ಕಾರಣ ಪುರುಷ..ನೀವು ಪರಿಚಯ ಮಾಡಿಕೊಟ್ಟ ಈ ಬಳಗಕ್ಕೆ ನಾನು ಚಿರ ಋಣಿ

    ReplyDelete
  5. ಬದರಿ ನಿಮ್ಮ ಮಾತು ಬಾಲೂ ಸರ್ ಅವರ ಪ್ಲಾನ್ ಸೂಪರ್ ಆಗಿತ್ತು..ಒಂದೇ ದಿನ ಹಲವಾರು ತಾರೆಗಳನ್ನ ನೋಡಲು ಸಾಧ್ಯವಾಯಿತು..ಧನ್ಯವಾದಗಳು ನಿಮಗೆ

    ReplyDelete
  6. ಚಂದದ ರಾಜ್ಯೋತ್ಸವ.
    ಇಂತಹ ದಿನಗಳು ಮತ್ತು ಬರಹಗಳು ವೃಧ್ಧಿಯಾಗಲಿ
    ಸ್ವರ್ಣಾ

    ReplyDelete
  7. ಸ್ವರ್ಣ ಮೇಡಂ..ಧನ್ಯವಾದಗಳು.. ನಿಮ್ಮ ಹಾರೈಕೆಗೆ ನನ್ನ ನಮನಗಳು..

    ReplyDelete
  8. ಸರ್ ಅವತ್ತು ನಿಮ್ಮನ್ನೆಲ್ಲ ಭೇಟಿ ಆಗಿದ್ದು ನಿಜಕ್ಕೂ ಮನಸ್ಸಿಗೆ ಸಂತೋಷವಾಯಿತು... ಬ್ಲಾಗ್ ಲೋಕದ ಸಂಭಂದಗಳು ಎಷ್ಟೋ ಜನ್ಮದ ಸಂಭಂದ ದಂತೆ ಬೆಸೆದು ಬಿಟ್ಟಿದೆ ಅಲ್ಲವೇ? And nice article..

    ReplyDelete
  9. ಹೌದು ಗಿರೀಶ್..ನಿಮ್ಮ ಮಾತು ನಿಜ.ಬ್ಲಾಗ್ ಲೋಕದ ಬಂಧ ಬಿಡಿಸಲಾರದ ಅನುಬಂಧ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..ಹಾಗೆಯೇ ಸೋಗಾಸದ ಚಟ್ನಿ, ಹಾಗು ದೋಸೆಗೆ ಕೂಡ...

    ReplyDelete
  10. ಶ್ರೀಕಾಂತ್ ನಿಮ್ಮನ್ನೆಲ್ಲ ಭೇಟಿಯಾಗಿದ್ದು ನಿಜಕ್ಕೂ ಸಂತಸ ತಂದಿದೆ. ಎಷ್ಟೇಲ್ಲಾ ಓಡಾಟ ಮಾಡಿದ್ದೀರಿ ನವೆಂಬರ್ ಒಂದರಂದು.. ಭೇಷ್

    ReplyDelete
  11. ಸುಗುಣ ಮೇಡಂ ಧನ್ಯವಾದಗಳು..ಅನೇಕ ಬ್ಲಾಗ್ ಲೋಕದ ತಾರೆಗಳನ್ನು ನೋಡಿ ಸಂಭ್ರಮಿಸಿದ ಸಂತಸ ನನ್ನದು..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete