Friday, November 23, 2012

ಸಿಸ್ಕೋದಲ್ಲಿ ಸಂಭ್ರಮದ ಉತ್ಸವ ರಾಜ್ಯೋತ್ಸವ..23.11.2012

ಕನ್ನಡ ಎನೆ ಕುಣಿದಾಡುವುದೆನ್ನೆದೆ 
ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು 

ಕನ್ನಡ ಕನ್ನಡ ಹ! ಸವಿಗನ್ನಡ 
ಕನ್ನಡದಲಿ ಹರಿ ಬರೆಯುವನು 
ಕನ್ನಡದಲಿ ಹರ ತಿರಿಯುವನು

ಕನ್ನಡದಲ್ಲಿಯೇ ಬಿನ್ನಹ ಗೈದೊಡೆ 
ಹರಿ ವರಗಳ ಮಳೆ ಕರೆಯುವನು 
ಹರ ಮುರಿಯದೆ ತಾ ಪೊರೆಯುವನು

ಬಾಳುಹುದೇತಕೆ ? ನುಡಿ, ಎಲೆ ಜೀವ 
ಸಿರಿಗನ್ನದದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ
ಕನ್ನಡ ತಾಯಿಯ ಸೇವೆಯ ಮಾಡೆ 


ಮಿತ್ರ ಸಂದೀಪ್ ಕೆ.ಬಿ ಕೈಚಳಕ!

ಸಿಸ್ಕೋ ಸಭಾಂಗಣಕ್ಕೆ ಕಾಲಿಟ್ಟ ಕೂಡಲೇ ನನ್ನ ಆತ್ಮೀಯ ಗೆಳೆಯ ಸಂದೀಪ್ ಕೆ.ಬಿ. ಸಿದ್ಧಪಡಿಸಿದ ವೇದಿಕೆಯ ಮೇಲಿದ್ದ ಚಿತ್ರದಲ್ಲಿ  ಕನ್ನಡದ ಆದಿಕವಿ ಪಂಪನ  ಅಮರವಾಣಿ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಕಿವಿಯಲ್ಲಿ ಹಾಗು ಕಣ್ಣಲ್ಲಿ ಮಾರ್ಧನಿಸಿತು..ಆ ಮತ್ತಿನಲ್ಲಿಯೇ ಒಳಗೆ ಬಂದಾಗ ರಾಷ್ಟ್ರ ಕವಿ ಕುವೆಂಪು ಬರೆದ ಮೇಲಿನ ಗೀತೆಯನ್ನು ಹೃದಯದಲ್ಲಿ ತಾನೇ ತಾನಾಗಿ ಹಾಡುತ್ತಿತ್ತು..

ಇದು ನಾ ಕಂಡ ಅತಿ ಉತ್ತಮ ಕರುನಾಡಿನ ಹುಟ್ಟು ಹಬ್ಬದ ಆಚರಣೆಗಳಲ್ಲಿ ಒಂದು.  ಗ್ರಾಮೀಣ ಕ್ರೀಡೆಯನ್ನು ಕೇಂದ್ರೀಕರಿಸಿ ಸಿದ್ಧ ಪಡಿಸಿದ  ಆ ಪಟ ನನ್ನ ಮನಸನ್ನು ಇನ್ನಷ್ಟು ಭಾವನಾತ್ಮಕವಾಗಿ ಮಾಡಿತು. ಕಂಬಳ, ಕಬಡ್ಡಿ, ಕುಂಟೆ ಬಿಲ್ಲೆ, ಜಟ್ಟಿಗಳ ಮಲ್ಲಯುದ್ಧ, ಗೋಲಿಯಾಟ, ಬುಗುರಿ, ಜೀಕಾಟ..ಆಹಾ ಗ್ರಾಮೀಣ ಬದುಕೇ ಚಂದ..

ನಾಡಗೀತೆಯೊಂದಿಗೆ ಕಾರ್ಯಕ್ರಮ ಶುರುವಾಗಿತ್ತು..ನಾ ಹೋದಾಗ ಚುಟುಕು ಕವಿ ಚಕ್ರವರ್ತಿ ಶ್ರೀ ಡುಂಡಿರಾಜರು ಮುಖ್ಯ ಅತಿಥಿಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದರು. ಅವರ ಪಕ್ಕದಲ್ಲಿ ಸಿಸ್ಕೋ ಕಂಪನಿಯ ಹೃದಯ ಎನ್ನಬಹುದಾದ ಶ್ರೀ ಅರವಿಂದ ಸೀತಾರಾಮನ್ ಉಪಸ್ಥಿತರಿದ್ದರು.  

ಶ್ರೀ ಡುಂಡಿರಾಜರಿಗೆ ಇದು ಮಗಳ ಮನೆ ಅರ್ಥಾತ್ ಅವರ ಮಗಳು, ಮತ್ತು ಅಳಿಯ ಸಿಸ್ಕೋ ಸಂಸ್ಥೆಯಲ್ಲಿಯೇ ಕೆಲಸ ಮಾಡುವುದು ಎನ್ನುವ ವಿಚಾರ ಅವರಿಂದಲೇ ತಿಳಿಯಿತು. 
ಚುಟುಕುಗಳ ಧಣಿ ಶ್ರೀ ಡುಂಡಿರಾಜ್

ಹಾಗಾಗಿ ನಿರರ್ಗಳವಾಗಿ ಪುಂಕಾನುಪುಂಕವಾಗಿ ಚುಟುಕು ಕವಿತೆಗಳು ಹರಿದಾಡಿದವು, ಕೊಟ್ಟ ಸಮಯ ಬರಿ ಗಡಿಯಾರದಲ್ಲಿತ್ತು ಅಷ್ಟೇ..ಆದರೆ ಆ ಸಮಯದ ಪರಿಧಿಯನ್ನು ಧಾಟಿ ನಮ್ಮನ್ನೆಲ್ಲ ರಂಜಿಸಿದರು.  ನಗಲು ನಮಗೆ ಇನ್ನಷ್ಟು ಸಮಯ ಬೇಕಿತ್ತು ಅನ್ನಿಸಿದ್ದರೆ ಅದು ಯಾರ ತಪ್ಪು ಅಲ್ಲ...ಏಕೆಂದರೆ ಅವರ ಬಳಿ ಕಂ"ಬಳಿ"ಗಿಂತ ನವಿರಾದ, ಬೆಚ್ಚಗಿನ ಕವಿತೆಗಳ ಅಸ್ತ್ರಗಳೇ ಬೇಕಷ್ಟು ಇದ್ದವು. ಅವರು ನಮ್ಮನ್ನು ಕಂ "ಬಳಿ" ಎಂದು ಕರೆಯದಿದ್ದರೂ..ಅವರ ನವಿರಾದ   ಹಾಸ್ಯ, ಬಾರಿಸಿದ ಎಚ್ಚರಿಕೆಯ ಘಂಟೆ, ಎಲ್ಲವು ಅನಾಮತ್ತಾಗಿ ನಮ್ಮನ್ನು ಅವರ ಬಳಿಯೇ ಕರೆದೊಯ್ದಿತು...

ಅವರ ನಂತರ ಶ್ರೀ ಅರವಿಂದ ಸೀತಾರಾಮನ್ ಅವರು ಕನ್ನಡದಲ್ಲಿ ಮಾತಾನಾಡಿ ತಮ್ಮ ಅಭಿಮಾನದ ಮೆಚ್ಚುಗೆಯ  ನುಡಿಮುತ್ತುಗಳನ್ನು ಸುರಿಸಿದರು. 


ಶ್ರೀ ಅರವಿಂದ ಸೀತಾರಾಮನ್ 
ಈ  ವರ್ಷ ಅವರಿಗೆ ಸುಮಧುರ ರಾಜ್ಯೋತ್ಸವ ಕಾರಣ ಎಂದರೆ..ಅವರಿಗೆ ಸಮಾಜ ಸೇವೆಗಾಗಿ ಈ ವರುಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಪ್ರಧಾನ ಮಾಡಿರುವುದು.  ಇದು ಸಿಸ್ಕೋ ಸಂಸ್ಥೆಯ ಹಾಗು ಕರುನಾಡಿನ ಎಲ್ಲರಿಗೂ ಸಂತಸದ ವಿಷಯ.


 ಪ್ರಶಸ್ತಿ ಪ್ರಧಾನ ಸಮಾರಂಭದ ದೃಶ್ಯಾವಳಿ 

ನಂತರ ಸಾಂಸ್ಕೃತಿಕ ನದಿಯ ಆಣೆಕಟ್ಟು ಒಡೆದು ಪ್ರವಾಹದಂತೆ ನೆರೆದಿದ್ದ ಅಭಿಮಾನಿಗಳ ಮೇಲೆ ಅಪ್ಪಳಿಸಿತು. ಒಂದಲ್ಲ ಎರಡಲ್ಲ ಸರಿ ಸುಮಾರು ಮೂರು ಘಂಟೆಗಳ ಕಾಲ ಒಂದಾದ ಮೇಲೆ ಒಂದರಂತೆ.ನೃತ್ಯ, ಚಿಕ್ಕ ಚಿಕ್ಕ ಪ್ರಹಸನಗಳು, ಗ್ರಾಮೀಣ ಬದುಕು ಏಕೆ ಚಂದ ಎನ್ನುವ ರೂಪಕ, ಬೇರೆ ಭಾಷೆ ಮಾತಾಡುವ ಪ್ರಾಂತ್ಯದಿಂದ ಬಂದರೂ..ನೆಲ ಜಲ ಕೊಟ್ಟ ಭೂಮಿಯನ್ನು ಅಪ್ಪಿ, ಅಲ್ಲಿನ ಭಾಷೆಯನ್ನ ಕಲಿಯುವ ಪ್ರಯತ್ನ ಮಾಡಿ ಯಶಸ್ವಿಯಾದ ಒಂದು ತಂಡದಿಂದ ಮೂಡಿಬಂದ ದೃಶ್ಯಗಳು ಎಲ್ಲವು ಮನರಂಜಿಸಿದವು ಹಾಗು ಸಂದೇಶವನ್ನು ರವಾನಿಸಿದವು.

ಸಿಸ್ಕೋ ಸಂಸ್ಥೆಯ ಕೆಲವು ಕಲಾವಿದರು ನಡೆಸಿಕೊಟ್ಟ ಸಂಗೀತ ರಸಸಂಜೆ,  ಕನ್ನಡ ಚಿತ್ರರಂಗದ ಕೆಲ ಧ್ರುವತಾರೆಗಳ ಮೆಲುಕು ಹಾಕುವ ಹಾಡುಗಳನ್ನು ಇಂಪಾಗಿ ಹಾಡಿ, ಅದಕ್ಕೆ ತಕ್ಕ ನೃತ್ಯಗಳನ್ನೂ ಮಾಡಿದರು..ಎಲ್ಲವು ಸೊಗಸಾಗಿ ಮೂಡಿಬಂದವು. ಬಾಳೆಹಣ್ಣನ್ನು ಜೀನು ತುಪ್ಪದಲ್ಲಿ ಅದ್ದಿ, ಅದಕ್ಕೆ ಸಕ್ಕರೆಯನ್ನು ಬೆರೆಸಿದಂತೆ ಎಲ್ಲ ಕಾರ್ಯಕ್ರಮಗಳು ಹುಣ್ಣಿಮೆ ಚಂದ್ರನಂತೆ ಮೂಡಿಬಂದವು.

ಅದಕ್ಕೆ ಕಳಶಪ್ರಾಯವಿಟ್ಟಂತೆ ಲಘು ಉಪಹಾರ ಹಸಿದ ದೇಹಕ್ಕೆ ಸವಿರುಚಿಯನ್ನು ತೋರಿಸಿತು.  

ಕೊರವರ ನೃತ್ಯ, ರಂಗೋಲಿ ಸ್ಪರ್ಧೆ,  ಲಗೋರಿ, ಚೌಕಭಾರಃ, ಕುಂಟೆ ಬಿಲ್ಲೆ ಮುಂತಾದ ಸುಂದರ ಕಾರ್ಯಕ್ರಮಗಳು ಬೆಳಿಗ್ಗೆ ಇಂದ ನಡೆದಿತ್ತು ಎಂದು ನಂತರ ತಿಳಿಯಿತು.

ಸಿಸ್ಕೋ ಸಂಸ್ಥೆಯನ್ನು ಬಿಟ್ಟು ಸರಿ ಸುಮಾರು ಒಂದುವರೆ ವರುಷವಾದರೂ ಅನೇಕ ಸ್ನೇಹಿತರ ಸ್ನೇಹದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ.ಅಂತಹ ಅನೇಕ ಸ್ನೇಹಿತರನ್ನು ನೋಡಿದ್ದು,  ಮಾತಾಡಿಸಿದ್ದು, ಹರಟಿದ್ದು ಎಲ್ಲವನ್ನು ಕಂಡ ನನ್ನ ಮನ ಭಲೇ ಕಾಂತಾ ಶ್ರೀಕಾಂತ ಭಲೇ..ನನ್ನ ಮನಸಿಗೆ ಇನ್ನಷ್ಟು ಹುರುಪನ್ನು ತಂದಿದ್ದೀಯ ಅಂತ ಹೇಳಿದಾಗ ನನಗೆ ನಾನೇ ಬೆನ್ನನ್ನು ತಟ್ಟಿ ಕೊಂಡೆ..ಹಹಹಹ..

ಸಂದೀಪ್ ಕೆ.ಬಿ, ರವಿ ಆರ್, ಛಾಯ, ವಿನೋದ್ ಕೃಷ್ಣ, ರಘುನಂದನ್, ಜೀವೆಂದರ್, ವಿನಯ್ ಕುಮಾರ್,  ವಸಂತ್ ಶೆಟ್ಟಿ, ಸಂತೋಷ್ ಕುಮಾರ್, ಶ್ರೀಶೈಲ, ಶ್ರೀದೇವಿ ಸುಬ್ರಮಣ್ಯಮ್,  ಜಗದೀಶ್ ಮಲ್ಪುರ , ಜಗದೀಶ್ ಪಂಚಣ್ಣ, ಮಂಜು ಶಂಕರ್, ಪೂರ್ಣಪ್ರಜ್ಞ , ಸತ್ಯನಾರಾಯಣ ಉಡುಪ, ಸುರೇಶ ಬಾಬು ಕೆ.ಪಿ, ಮಲ್ಲಿಕಾರ್ಜುನ, ಜಾರ್ಜ್, ಡಾರ್ವಿನ್, ದೂರವಾಣಿಯಲ್ಲೇ ಮಾತಾಡಿಸಲು ಸಾಧ್ಯವಾದ ಶರ್ಮಿಳ ದಾಮ್ಲೆ , ಮನೋಜ್ಞ (ಅಣ್ಣಾವ್ರು), ಒಂದೇ ಎರಡೇ ಎಲ್ಲ ಮೃದು ಸ್ನೇಹ ಜೀವಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.


ಇಂತಹ ಒಂದು ಸುಂದರ ಸಂಜೆಯನ್ನು ಅಚ್ಚುಕಟ್ಟಾಗಿ ನೇಯ್ದು ಸುಂದರ ಪೋಷಾಕನ್ನು ಮಾಡಿ ತಾಯಿ ಭುವನೇಶ್ವರಿಗೆ ಮುಕುಟವನ್ನು ತೊಡಿಸಿದ "ಸಂಭ್ರಮ" ತಂಡಕ್ಕೆ ಅಭಿನಂದನೆಗಳು!!!  

14 comments:

  1. ನಾಡಹಬ್ಬದ ಸಂಭ್ರಮ ಹಂಚಿಕೊಂಡದ್ದು ಮತ್ತೆ ನಾಡಹಬ್ಬ ಆಚರಿಸಿದಂತೆ ಅನ್ನ್ನಿಸ್ತು... ಚನ್ನಾಗಿದೆ...

    ReplyDelete
    Replies
    1. ನಮ್ಮ ಮನೆ ಅನ್ನುವ ವಾತಾವರಣ..ಖುಷಿ ಕೊಟ್ಟ ಸ್ನೇಹಿತರು, ಮೆಚ್ಚುಗೆ ಸೂಸಿದ ಸಂಭ್ರಮ ತಂಡ..ಇವೆಲ್ಲದರ ಸಮಾಗಮ ಈ ರಾಜ್ಯೋತ್ಸವ..ಧನ್ಯವಾದಗಳು ಅಜಾದ್ ಸರ್ ಸುಂದರ ಪ್ರತಿಕ್ರಿಯೆಗೆ

      Delete
  2. ಆಹಾ...ನಾಡಹಬ್ಬದ ಸಂಭ್ರಮದ ಕಾರ್ಯಕ್ರಮಕ್ಕೆ ನಮ್ಮನ್ನು ಕೊಂಡೊಯ್ದಿದ್ದಕ್ಕೆ ಧನ್ಯವಾದಗಳು ಶ್ರೀ....
    ನಿಮ್ಮ ಬರಹದ ಆರಂಭವಂತೂ ಅದ್ಭುತ...ನಿಮ್ಮ ಮಾತುಗಳಲ್ಲೇ ಹೇಳಬೇಕು ಅಂದ್ರೆ "ಆಪರೇಷನ್ ಡೈಮಂಡ್ ರಾಕೇಟ್ಟಿನಲ್ಲಿ ಅಣ್ಣಾವ್ರು ಬಂದ ತರಹ...ಒಂದು ಸಲ ರೋಮಾಂಚನ...ಆ ಹಾಡು ಕೇಳದೇ ಎಷ್ಟೋ ದಿನವಾಗಿತ್ತು...ಧನ್ಯವಾದಗಳು..ಕನ್ನಡಶಾಲೆಯ ನೆನಪಾಯಿತು ಒಮ್ಮೆ :)
    ...

    ಈ ತರಹದ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ..ಕನ್ನಡ ನುಡಿ ಎಲ್ಲೆಡೆ ಪಸರಿಸಲಿ...

    ಬರೆಯುತ್ತಿರಿ...ಖುಷಿಯಾಯ್ತು ಓದಿ...ನಾಳೆಯ ಪರೀಕ್ಷೆಯನ್ನೂ ಮರೆತು ಓದಿದೆ..ಉಹು ಓದಿಸಿಕೊಂಡು ಹೋಯ್ತು....
    ಚೆನಾಗಿದೆ :)
    (ಸುಮ್ನೆ:ಹಾಂ ಉಪಹಾರದ ಪಟ್ಟಿನೂ ಕೊಡಬಹುದಿತ್ತೇನೋ..ಚಟ್ನಿ ಬಂತು,ಬಜ್ಜಿ ಬಂತು,ಕೇಸರಿಬಾತ್ ಬಂತು ಅಂತಾ...!!!)
    ನಮಸ್ತೆ :)

    ReplyDelete
    Replies
    1. ಚಿನ್ಮಯ್ ಸೂಪರ್ ಸೂಪರ್..ಚಿಕ್ಕ ಕಾವ್ಯವನ್ನೇ ಸೃಷ್ಟಿಮಾಡಿದ್ದೀರಿ...ತುಂಬಾ ಸಂತೋಷ...ನಿಮಗೆ ಇಷ್ಟವಾಗಿದ್ದು...ತಿಂಡಿ ತಿನಿಸುಗಳ ಪಟ್ಟಿ ಮಾಡಬಹುದಿತ್ತು ಆದ್ರೆ ಅಲ್ಲಿ ತಿನ್ನೋಕೆ ಹೊಟ್ಟೆಯಲ್ಲಿ ಜಾಗವೇ ಇರಲಿಲ್ಲ.ಆತ್ಮೀಯ ಗೆಳೆಯರನ್ನು ನೋಡಿ ಸಂತಸದಿಂದ ಹೊಟ್ಟೆ ತುಂಬಿತ್ತು...ಧನ್ಯವಾದಗಳು

      Delete
  3. ಸಂಸ್ಥೆಗಲು ಕನ್ನಡಮಯವಾಗಲಿ. ಅಲ್ಲಿ ಕನ್ನಡೇತರರೂ ಕನ್ನಡವನ್ನು ಸವಿಯಲಿ, ಆಸ್ವಾದಿಸಲಿ. ಇಂತಹ ಕನ್ನಡ ರಾಜ್ಯೋತ್ಸವಗಳು ಕನ್ನಡತನವನ್ನು ಉಣಬಡಿಸುವ ಜೊತೆಜೊತೆಗೆ ಸಂಸ್ಥೆಯು ನಮ್ಮ ತಾಯ್ನೆಲವನ್ನು ಗೌರವಿಸುತ್ತದೆ ಎನ್ನುವುದನ್ನೂ ತೋರಿಸುತ್ತವೆ.

    ಮುಖ್ಯವಗಿ ಬಹು ದಿನಗಳ ನಂತರ ನಿಮ್ಮ ಹಳೇ ಸಂಸ್ಥೆಯಲ್ಲಿ ಹಳೇ ಮಿತ್ರರೆಲ್ಲ ದೊರೆತದ್ದು ಖುಷಿಯ ವಿಚಾರ.

    ReplyDelete
    Replies
    1. ಬದರಿ ಸರ್..ಆ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳ ಕಾಳಜಿ ಮೆಚ್ಚುವಂತದ್ದು..ಕನ್ನಡ ಸಮೂಹದಲ್ಲಿ ಎಲ್ಲವನ್ನು ಚರ್ಚಿಸಿ ತಿಳಿ ಹೇಳುವ ಗುಂಪೇ ಇದೆ, ಕನ್ನಡ ಕಲಿ ಎನ್ನುವ ತಂಡ ಕನ್ನಡ ಕಲಿಯುವ ಆಸಕ್ತಿ ಉಳ್ಳವರಿಗಾಗಿ ಭಾಷೆ ಕಲಿಸುವ ಪ್ರಯತ್ನದಲ್ಲಿ ಯಶಸ್ವೀ ಕೂಡ ಆಗಿದೆ.ಹೀಗೆ ಒಂದೇ ಎರಡೇ..ಅನೇಕ ಸಂತಸದ ಕೆಲಸಗಳನ್ನು "ಸಂಭ್ರಮ" ತಂಡದ ಸದಸ್ಯರು ಮಾಡುತಿದ್ದಾರೆ...ನಿಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  4. ಭಲೇ ಭಲೇ.. ನಾವು ನಿಮ್ಮ ಜೊತೆ ರಾಜ್ಯೋತ್ಸವದ ಸವಿ ಅನುಭವಿಸಿದೆವು... ಧನ್ಯವಾದಗಳು

    ReplyDelete
    Replies
    1. ಸುಗುಣ ಮೇಡಂ..ತುಂಬಾ ಸಂತಸ ತರುತ್ತದೆ.ಮಿತ್ರರು, ಅವರ ಹಬ್ಬದ ಸಡಗರ..ನಮ್ಮ ಮನೆ ಎನ್ನುವಷ್ಟು ಆತ್ಮೀಯತೆ..ಧನ್ಯವಾದಗಳು

      Delete
  5. ರಾಜ್ಯೋತ್ಸವವನ್ನು ಮನೆಯಲ್ಲಿ ಕುಳಿತೆ ಆನುಭವಿಸಿದೆ...ಶ್ರೀಕಾಂತ್..... :)

    ReplyDelete
    Replies
    1. ತಂತ್ರಜ್ಞಾನ ಜಗತ್ತನ್ನು ಒಂದು ಗ್ರಾಮವನ್ನಾಗಿ ಮಾಡಿದೆ ಎನ್ನುತ್ತಾರೆ..ಈ ನಿಟ್ಟಿನಲ್ಲಿ ದಾಪುಗಾಲು ಇಟ್ಟಿರುವ ಸಿಸ್ಕೋ ಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ನೆಡೆದು ಬರುತ್ತಿದೆ.ಸಂತಸದ ಸಂಗತಿ ಎಂದರೆ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಒಂದು ಉತ್ತಮ ಕಾರ್ಯಕ್ರಮ ಇದಾಗಿತ್ತು ಎಂದು ಹೇಳಬಹುದು...ಪ್ರತಿವರ್ಷವೂ ಹೊಸತನದಿಂದ ಮೂಡಿಬರುತ್ತಿದೆ...ಧನ್ಯವಾದಗಳು

      Delete
  6. ಸಿಸ್ಕೋ ಸಂಭ್ರಮ ಓದಿ,ನೋಡಿ ಖುಷಿಯಾಯಿತು. ಜೊತೆಗೆ ಎಲ್ಲರಿಗೂ ಸಂತಸವನೀವ ಪ್ರತಿಕ್ರಿಯೆ ನೀಡುವ ನಿಮ್ಮ ವ್ಯವಧಾನಕ್ಕೆ ವಂದನೆಗಳು.

    ReplyDelete
    Replies
    1. ಧನ್ಯವಾದಗಳು ಸ್ವರ್ಣ ಮೇಡಂ...ನಿಮ್ಮ ಅಭಿಪ್ರಾಯಕ್ಕೆ ಸಂತಸವಾಗುತ್ತದೆ..ಹೌದು ಮೇಡಂ ಫೋನಿನಲ್ಲಿ ಒಬ್ಬರೇ ಮಾತಾಡಲು ಸಾಧ್ಯವೇ.ಹಾಗೆಯೇ ಒಬ್ಬರ ಪ್ರತಿಕ್ರಿಯೆಗೆ ನಾವು ಪ್ರತಿಕ್ರಿಯಸಿದರೆ ಅನುಭವ ವಿನಿಮಯವಾಗುತ್ತದೆ..

      Delete
  7. ಅದ್ಭುತವಾಗಿ ನಮ್ಮ ಸಂಬ್ರಮದ ಸಂಬ್ರಮವನ್ನು ಬರೆದ್ದಿದೀರ ಶ್ರೀ :)

    ReplyDelete
    Replies
    1. ಧನ್ಯವಾದಗಳು ಕಾರ್ತಿಕ್..ಸಂತಸವಾಯಿತು ನಿಮ್ಮ ಪ್ರತಿಕ್ರಿಯೆ ನೋಡಿ...

      Delete