Tuesday, September 20, 2016

ರಂಗ ಸಾಹಿತ್ಯದ ಹವಾ .. ನಮ್ಮ ಗೋಪಾಲ ವಾಜಪೇಯಿ ಗುರುಗಳು

ಇಂದು ನನ್ನ ರಂಗಭೂಮಿಯ ಅನುಭವಗಳ ಮಾಲಿಕೆ ಪುಸ್ತಕವಾಗಿದೆ.. ಈ ಸಮಯದಲ್ಲಿ ನನ್ನ ಕೆಲವು ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವ ಜೊತೆಯಲ್ಲಿ ಈ ಪುಸ್ತಕದ ಒಂದು ಪ್ರತಿಯನ್ನು ಪ್ರೀತಿಪೂರ್ವಕವಾಗಿ ಕೊಡಬೇಕೆಂದು ಬಯಸಿದ್ದೇನೆ..

ಅವರ ಹತ್ತಿರದ ಮಿತ್ರರ ಹೆಸರು ಹೇಳಿ ಕರೆದು ಆತ್ಮೀಯವಾಗಿ ಪುಸ್ತಕದ ಒಂದು ಪ್ರತಿಯನ್ನು ಕೊಟ್ಟರು..
.. ನಂತರ ಮೈಸೂರಿನ ಬಾಲೂ ಅವರು..
ಬೆಂಗಳೂರಿನ ರಾಘವ ಶರ್ಮ ಅಂದರು..
ನಾ ಫೋಟೋ ಕ್ಲಿಕ್ಕಿಸುತ್ತಲೇ ಇದ್ದೆ..
ನನ್ನ ಆತ್ಮೀಯ ಮಿತ್ರರಾದ "ಶ್ರೀಕಾಂತ್ ಮಂಜುನಾಥ್"  ಅವರಿಗೆ ಪುಸ್ತಕದ ಪ್ರತಿ.. ಅಂದಾಗ.. ಮೈ ಹಾಗೆ ಬೆವರಿತು.. ನಾ ನಂಬಲಿಲ್ಲ..

ನನಗೂ ಅವರಿಗೂ ಅಜಗಜಾಂತರ ವ್ಯತ್ಯಾಸ.. ನಾ ನಂಬಲಿಲ್ಲ.. ಸುಮ್ಮನೆ ಫೋಟೋ ಕ್ಲಿಕ್ಕಿಸುತ್ತಲೇ ಇದ್ದೆ..

ಮತ್ತೊಮ್ಮೆ ಶ್ರೀಕಾಂತ್ ಮಂಜುನಾಥ್ ಬನ್ನಿ ಅಂದರು..

ನನ್ನ ಮಗಳು ಅಪ್ಪಾ ನಿಮ್ಮನ್ನೇ ಅಂದಳು.. ನನಗೆ ಒಂದು ಕಡೆ ನಾಚಿಕೆ, ಇನ್ನೊಂದು ಕಡೆ ಸ್ಟೇಜ್ ಫಿಯರ್.. ನನ್ನ ಜನುಮದಲ್ಲಿಯೇ ತುಂಬಿದ ಅಂಗಣದಲ್ಲಿ ವೇದಿಕೆ ಹೋದವನಲ್ಲ/ಕರೆಸಿಕೊಳ್ಳುವಂಥಹ ಸಾಧನೆ ಮಾಡಿದವನಲ್ಲ..

ನಡುಗುವ ಕೈಯಿಂದಲೇ ಆ ಪುಸ್ತಕದ ಪ್ರತಿಯನ್ನು ಸ್ವೀಕರಿಸಿ ಅದೇ ವೇಗದಲ್ಲಿ ಕೆಳಗೆ ಜಿಗಿದು ಓಡಿ ಬಂದೆ.. ಎದೆ ಬಡಿತ ಬಹುಶಃ ನನ್ನ ಕಿವಿಗೆ ಕೇಳಿಸುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು..
ಈ ಘಟನೆ ಹೇಳುವ ಕಾರಣ ಎಂದರೆ.. ಗುರುಗಳಾದ ಗೋಪಾಲ ವಾಜಪೇಯಿಯವರು ಹಿರಿಯರು ಕಿರಿಯರು ಎನ್ನದೇ ಎಲ್ಲರನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದ ರೀತಿಗೆ ಇದು ಒಂದು ಉದಾಹರಣೆ.

ನನ್ನ ಮತ್ತು ಅವರ ಒಡನಾಟ ಕಳೆದ ಎರಡು ವರ್ಷಗಳಿಂದ ಇತ್ತು.. ಶ್ರೀಕಾಂತ್  ಅಂತ ಅಭಿಮಾನಪೂರಿತ ಕಣ್ಣುಗಳಿಂದ ಅವರ ಮಿತ್ರ ವೃಂದದಲ್ಲಿ ನನ್ನನ್ನು ಗುರುತಿಸಿಕೊಂಡದ್ದು ನನಗೆ ಸಿಕ್ಕ ಒಂದು ದೊಡ್ಡ ಗೌರವ..

ಅವರ ಮಗನ ಮದುವೆಯ ಸಂದರ್ಭದಲ್ಲಿ ಬಿಡದೆ ನನಗೆ ಕರೆ ಮಾಡಿ.. ಫೇಸ್ಬುಕ್ ನಲ್ಲಿ ಸಂದೇಶ ಕಳಿಸಿ ಪದೇ ಪದೇ ನೆನಪಿಸುತ್ತಾ ಇದ್ದರು... ಆ ಸಮಾರಂಭಕ್ಕೆ ಹೊರಟಿದ್ದ ನಾನು ಮತ್ತು ನನ್ನ ಕುಟುಂಬ.. ನನ್ನ ಕಾರು ಅವರ ಮನೆಗೆ ತುಸು ಹತ್ತಿರದಲ್ಲಿಯೇ ಬಸವಳಿದು ನಿಂತಾಗ ಅದನ್ನು ಸರಿ ಮಾಡುವ ಭರದಲ್ಲಿ ಮೊಬೈಲ್ ಬಿದ್ದು ಒಡೆದು ಹೋಗಿ.. ಅವರ ಮನೆಗೆ ಹೋಗಲಾಗಲೇ ಇಲ್ಲ..

ಬಹಳ ಬೇಸರ ಮಾಡಿಕೊಂಡು ಕ್ಷಮೆ ಕೇಳಿದಾಗ.. ಇನ್ನೊಮ್ಮೆ ಬರುವಿರಂತೆ ಅಂದರು.. ಎರಡನೇ ಬಾರಿಯೂ ಆ ಅವಕಾಶ ನನಗೆ ಆಗದೆ ಹೋಯಿತು.

ಇವರ ಮೂರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ.. ಅವರ ಅನೇಕ ಹಿರಿಯ ಮಿತ್ರರ ಸಂಗದಲ್ಲಿ ಇದ್ದರೂ ಕೂಡ.. ನಮ್ಮ ಕುಟುಂಬವನ್ನು ಕಂಡೊಡನೇ ಪ್ರೀತಿಯಿಂದ ಮಾತಾಡಿಸುವ ಅವರ ಪ್ರೀತಿಗೆ ನಾ ಸೋತಿದ್ದೆ..

ಗುರುಗಳೇ.. ನಿಮ್ಮ ಹೆಸರು ನಿಮ್ಮ ನೆನಪು.. ನಿಮ್ಮ ಜೊತೆಯಲ್ಲಿ ಕಳೆದ ಮಧುರ ಕ್ಷಣಗಳು ಅಮೋಘ ಮತ್ತು ಅಜರಾಮರ.
ನಿಮ್ಮನಂಥಹ ಸರಸ್ವತಿ ಪುತ್ರರ ಜೊತೆಯಲ್ಲಿ ನಾವು ಹೆಜ್ಜೆ ಹಾಕಿದ್ದು, ಒಡನಾಡಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ ಎನ್ನಬೇಕು.

ಇವರ ಪರಿಚಯವಾದ ಮೇಲೆಯೇ ನಾಗಮಂಡಲ ಚಿತ್ರಕ್ಕೆ ಅದ್ಭುತ ಹಾಡುಗಳನ್ನು ಬರೆದದ್ದು ಇವರೇ ಎಂದು ಗೊತ್ತಾಗಿದ್ದು. ಇಂತಹ ಸಜ್ಜನ, ಕಲಾವಿದ, ಸಾಹಿತಿ ಇವೆಲ್ಲಕ್ಕೂ ಮಿಗಿಲಾಗಿದ್ದು ಇವರ ಸ್ನೇಹ ಪರ ಮನಸ್ಸು. ಯುವಕರು ನಾಚಿಸುವಂತಹ ಕ್ರಿಯಾಶೀಲತೆ ಹೊಂದಿದ್ದ ನಮ್ಮ ಗುರುಗಳು ಇಂದು ನಮ್ಮೆಲ್ಲರ ಮನದಲ್ಲಿ ಪಟವಾಗಿದ್ದಾರೆ.
ರಂಗದ ಒಳಗೆ ಹೊರಗೆ ಹೇಗಿದೆ ಎಂದು ದೇವನಿಗೆ ಹೇಳಲು ಹೊರಟೆ ಬಿಟ್ಟರು ನಮ್ಮ ಗುರುಗಳು 

ಗುರುಗಳೇ ಬಹುಶಃ ಆ ದೇವರಿಗೂ ಆತನ "ಅಂತ"ರಂಗದ ಹೊರಗೂ ಒಳಗೂ ನೆಡೆಯುವ ತುಮುಲಗಳ ಅನಾವರಣ ಮಾಡಿಕೊಳ್ಳಬೇಕಿತ್ತು ಎನ್ನಿಸುತ್ತದೆ.. ನಮ್ಮೆಲ್ಲರಿಂದ ನಿಮ್ಮನ್ನು ಕಸಿದುಕೊಂಡುಬಿಟ್ಟಿದ್ದಾನೆ..

ಗುರುಗಳೇ ನಿಮ್ಮ ಆಶೀರ್ವಾದ ನಿಮ್ಮ ಈ ಸ್ನೇಹದ ಕಡಲಿನಲ್ಲಿ ಸದಾ ತಂಗಾಳಿ ಬೀಸುವಂತೆ ಬೀಸುತ್ತಲೇ ಇರಲಿ....

ಹೋಗಿ ಬನ್ನಿ ಗುರುಗಳೇ.. ನೀವು ನಮ್ಮ ಹೃದಯ ಕಮಲದಲ್ಲಿ ಸದಾ ಅರಳಿ ನಿಂತು ಕಂಪು ಸೂಸುವ ಪುಷ್ಪವಾಗಿಯೇ ಸದಾ ಇರುತ್ತೀರಾ..

ಗುರುಗಳೇ ನಿಮ್ಮ ದಿವ್ಯ ಚೈತನ್ಯವುಳ್ಳ ಚೇತನಕ್ಕೆ ಶಿರಬಾಗಿ ನಮನಗಳು..

:-(


Thursday, September 8, 2016

ದೇವರ ಇರುವನ್ನು ಅನುಭವಿಸಿದ ಸುಂದರ ಕ್ಷಣ ...!


ವಿಚಿತ್ರ ಆದರೂ ಸತ್ಯ

ಈ ಬಾರಿಯ ಗಣಪನ ಹಬ್ಬಕ್ಕೆ ಗಣಪನ ಮೂರ್ತಿ ತರಲು ಅಮ್ಮನ ಮನೆಯ ಹತ್ತಿರದ ಒಂದು ಅಂಗಡಿಗೆ ಹೋಗಿದ್ದೆವು. ನಾನು, ತಮ್ಮ , ಅಣ್ಣ ಮತ್ತು ಅಣ್ಣನ ಮಗ.

ನನಗೆ ಅರಿವು ಮೂಡಿದ ದಿನದಿಂದ ಅಂದರೆ ಸುಮಾರು ೩೫ ವರ್ಷಗಳಿಂದ ನಮ್ಮ ಮನೆಯಲ್ಲಿ ಬಣ್ಣ ಬಣ್ಣದ ಗಣಪನದೇ ದರ್ಬಾರು.

ಈ ಬಾರಿ ಯಾಕೋ ಗೊತ್ತಿಲ್ಲ.. ಅಂಗಡಿಗೆ ಹೋದೊಡನೆ.. ಬರಿ ಮಣ್ಣಿನ ಮತ್ತು ತುಸುವೇ ಬಣ್ಣ ಹಚ್ಚಿದ ಗಣಪ ನನ್ನ ಕೈ ಬೀಸಿ ಕರೆದಂತೆ ಆಯಿತು.

ಅಣ್ಣನಿಗೆ ಹೇಳಿದೆ.. ಈ ಸಾರಿ ಈ ಗಣೇಶನ ತಗೊಳೋಣ..

ಅವನು ಮತ್ತು ತಮ್ಮ ಒಪ್ಪಿ.. ಗಣಪನ ಮೂರ್ತಿಯ ದರವನ್ನು ವಿಚಾರಿಸಿದರು..
ಇನ್ನೇನು ದುಡ್ಡು ಕೊಟ್ಟು ಮೂರ್ತಿಯನ್ನು ತಗೋಬೇಕು ಅಷ್ಟೇ..

ಅಷ್ಟರಲ್ಲಿ ಅಣ್ಣನ ಮಗ.. ಅಪ್ಪ ವಿಜಯನಗರಕ್ಕೆ ಹೋಗೋಣ ಅಲ್ಲಿ ಬೇರೆ ಬೇರೆ ಗಣೇಶ ಇರುತ್ತದೆ ಅಂದ..
ಅಣ್ಣ ಎರಡನೇ ಮಾತಿಲ್ಲದೆ.. ಸರಿ ನೆಡೆಯಿರಿ ಅಲ್ಲಿಗೆ ಹೋಗೋಣ ಅಂದ..

ನಾ ಗಣಪನ ಕಡೆ ನೋಡಿದೆ.. ತುಸು ಬೇಸರಿಸಿಕೊಂಡ ಹಾಗೆ ಕಾಣಿಸಿತು

ನನ್ನ ಜೀವದ ಅಂಶವೇ ತುಸು ಹೊರಗೆ ಹೋಗುತ್ತಿದೆಯೇನೋ ಎನ್ನುವ ಅನುಭವ..

ಹಾಗೆ.. ಗಣಪನ ಮೂರ್ತಿಯ ಮೈ ತಡವಿ.. ಅಣ್ಣನ ಜೊತೆ ಭಾರವಾದ ಹೆಜ್ಜೆ ಹಾಕುತ್ತ ಹೋದೆ.. ಹಾಗೆ ಒಮ್ಮೆ ತಿರುಗಿ ನೋಡಿದೆ.. ಗಣಪ ಹಾಗೆ ಬೇಸರದಲ್ಲಿಯೇ ಇದ್ದ ಹಾಗೆ ಅನ್ನಿಸಿತು..

ವಿಜಯನಗರಕ್ಕೆ ಹೋದೆವು.. ಅಲ್ಲಿ ಒಂದು ಮೂರ್ತಿಯನ್ನು ಕೊಂಡು ಮನೆಗೆ ಬಂದೆವು..

ಬೆಳಿಗ್ಗೆ ಪುರೋಹಿತರು (ಅಮ್ಮನ ಸೋದರಮಾವನ ಮಗ) ಬಂದು.. ಎಲ್ಲವೂ ಸಿದ್ಧವೇ ಎಂದು ಕೇಳಿ.. ಪೂಜೆ ಆರಂಭಿಸಲು.. ಅಣ್ಣನಿಗೆ ಆ ಮೂರ್ತಿಯನ್ನು ಮಂಟಪದಲ್ಲಿ ಇಡು ಎಂದರು..

ಅಣ್ಣ ಎದ್ದು ಹೋಗಿ (ಪ್ರತಿ ಬಾರಿಯೂ ಗಣಪನ ಮೂರ್ತಿಯನ್ನು ಅವನೇ ಮಂಟಪದಲ್ಲಿ ಕೂರಿಸೋದು)
ಗಣಪನನ್ನು ನಿಧಾನವಾಗಿ ಜರುಗಿಸಿದ.. ಟಪಕ್ ಅಂತ ಗಣಪನ ಒಂದು ಕೈಯಲ್ಲಿದ್ದ ಪಾಶಾಂಕುಶ ಹಾಗೆ ಕೆಳಗೆ ಬಿತ್ತು..

ಎಲ್ಲರಿಗೂ ಬೇಸರ.. ಕಣ್ಣಲ್ಲಿ ನೀರು..

ತಕ್ಷಣ ಪುರೋಹಿತರು.. ಸರಿ ಸರಿ.. ಶ್ರೀಕಾಂತಾ ಬೇಗನೆ ಹೋಗಿ ಹತ್ತಿರದ ಅಂಗಡಿಯಿಂದ ಒಂದು ಮೂರ್ತಿ ತಗೊಂಡು ಬಾ.. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.. ನೀವೇನು ಬೇಕಂತಲೇ ಮುರಿದಿಲ್ಲ .. ಅಚಾನಕ್ ಆಗಿದೆ.. ಏರ್ ಕ್ರ್ಯಾಕ್ ಇರಬೇಕು.. ಬಿಟ್ಟುಕೊಂಡಿದೆ.. ತಲೆ ಬಿಸಿ ಮಾಡಿಕೋಬೇಡಿ.. ಶ್ರೀಕಾಂತಾ ನೀ ಹೋಗು ತಗೊಂಡು ಬಾ ಅಂದ..

ನಾನು ನನ್ನ ತಮ್ಮ ಇಬ್ಬರೂ.. ದ್ವಿ ಚಕ್ರ ವಾಹನದಲ್ಲಿ ಹೋದೆವು.. ನಮಗೆ ಅರಿವಿಲ್ಲದೆ ಅದೇ ಅಂಗಡಿಗೆ ಹೋಗಿ.. ನಿಂತರೆ.. ಗಣಪ.. ಮಕ್ಕಳು ತಮ್ಮ ತಂದೆ ತಾಯಿಯರನ್ನು ಕರೆಯುವ ಹಾಗೆ... ಹೂಂ ಹೂಂ ಅಂತ ಅಳುತ್ತಾ ಇರುವ ಹಾಗೆ ಅನ್ನಿಸಿತು...

ನಾ ನನ್ನ ತಮ್ಮನಿಗೆ ಹೇಳಿದೆ.. ಹೇ ಅಲ್ಲಿ ನೋಡು ಅದೇ ಗಣೇಶ ಅಂದೇ..

ಅಲ್ಲಿದ್ದದ್ದು ಐದೇ ನಿಮಿಷ..

ಮುಂದಿನ ಆರನೇ ನಿಮಿಷ.. ಅದೇ ಗಣಪ.. ನನ್ನ ಮಡಿಲಲ್ಲಿ ದ್ವಿ ಚಕ್ರ ವಾಹನದಲ್ಲಿ.. ಮನಸಲ್ಲಿ "ಓಂ ಗಂ ಗಣಪತೆಯೇ ನಮಃ"

ಗಣಪ... ಶ್ರೀಕಾಂತಾ ನಿನ್ನ ಆಸೆ ಈಡೇರಿತು.... ನಾ ನಿಮ್ಮ ಮನೆಗೆ ಬರುತ್ತಿದ್ದೇನೆ.. ನಿನ್ನ ಎಲ್ಲಾ ಆಸೆಯೂ ಈಡೇರುತ್ತದೆ... ನನ್ನ ಆಶೀರ್ವಾದ ಈ ಅನುಗ್ರಹ ಸದನದ ಮೇಲೆ ಸದಾ ಇರುತ್ತದೆ.. ನಿಮ್ಮ ಅಪ್ಪ ನನ್ನ ಮೂರ್ತಿಯನ್ನು ಹುಡುಕಿ ಹುಡುಕಿ ತರುತ್ತಿದ್ದರು... ಅವರ ಪರಂಪರೆಯನ್ನೇ ನೀವೆಲ್ಲರೂ ಮುಂದುವರೆಸುತ್ತಿದ್ದೀರಿ.. ನಿಮಗೆಲ್ಲಾ ಶುಭವೇ ಆಗುತ್ತದೆ .. ಅಂತ ಅಂದ ಹಾಗೆ ಭಾಸವಾಯಿತು..

ಅದ್ಭುತ ಅನುಭವ.. !

ಪುರೋಹಿತರು ಹೇಳಿದರು.. "ಗಣೇಶ ಹೇಳುತ್ತಿದ್ದ ಅನ್ಸುತ್ತೆ ಅಲ್ಲಾ ಲೇ.. ನಾ ಬರುತ್ತೇನೆ ಎಂದು ಹೇಳಿದ ಮೇಲೂ ನನ್ನ ಬಿಟ್ಟು ಹೋದಿರಿ.. ನಾ ಬಿಡುತ್ತೇನೆಯೇ.. ನೋಡು ನಾನೇ ಬಂದು ಬಿಟ್ಟೆ.. ನಿಮ್ಮ ಕೈಯಲ್ಲಿ ನಾನೇ ಪೂಜೆ ಮಾಡಿಸಿಕೊಳ್ಳಬೇಕು ಅಂತ ಹಠ ತೊಟ್ಟು ಬಂದಿದ್ದೇನೆ ಅನ್ನುತ್ತಿದ್ದಾನೆ ಕಣೋ"

ನಾ ಹಾಗೆ ಗಣಪನ ಮುಖ ನೋಡಿದೆ.. ಸೊಂಡಿಲಲ್ಲಿ ಮೋದಕ ತಿನ್ನುತ್ತಲೇ.. ಹಾಗೆ ಲಬಕ್ ಅಂತ ಕಣ್ಣು ಹೊಡೆದ ಅನುಭವ..
ಆಶೀರ್ವಾದ ಮಾಡಲು ಹಠ ತೊಟ್ಟು ಬಂದ ಗಣಪ!!!

ಓಂ ಗಂ ಗಣಪತಯೇ ನಮಃ!!!!

Tuesday, July 26, 2016

ಕಾಡುವ ....೧ :-)

ಯಾಕಪ್ಪ ಕತ್ತಲಾಗುತ್ತೆ.. ?



ಮನದೊಳಗೆ ಬೇಡವೆಂದರೂ ಬಿಡದೆ ತೊಂದರೆ ಕೊಡುತ್ತಿದ್ದ ಪ್ರಶ್ನೆ.. ಯಾಕೋ ತಲೆ ಎತ್ತಿ ನೋಡಿದ.. ಏನೂ ಕಾಣಲಿಲ್ಲ.. ಆ ಭಯಕ್ಕೆ ಠಕ್ಕರ್ ಕೊಡಬೇಕು ಎಂದು.. ಬೆಳಿಗ್ಗೆತಾನೇ ಕೊಂಡು ಕೊಂಡ ಮೊಬೈಲ್ ನಲ್ಲಿ ಇದ್ದ ಹಾಡನ್ನು ಕೇಳೋಣ ಅಂತ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡ.. 

"ಪೂರ್ಣ ಚಂದಿರಾ ರಜಾ ಹಾಕಿದ.. ನಿನ್ನಯ ಮೊಗವನು ಕಂಡ ಕ್ಷಣ".. ಅಯ್ಯೋ ಮತ್ತೆ ತಲೆ ಎತ್ತಿದ... ಚಂದಿರ ಆಗಲೇ ಓಡಿ ಹೋಗಿ ದಿನಗಳಾಗಿತ್ತು. ಬೆಳಿಗ್ಗೆ ಸಂಧ್ಯಾವಂದನೆ ಮಾಡುವಾಗ ಮಾಡಿದ ಸಂಕಲ್ಪ ನೆನೆಸಿಕೊಂಡ.. 

".... ಶಾಲಿವಾಹನ ಶಕೆ.... ರಾಮಕ್ಷೇತ್ರೇ.. .... ಕಲಿಯುಗೇ.. ಪ್ರಥಮಪಾದೆ... " ಮೈ ಸಣ್ಣಗೆ ನಡುಗಲು ಶುರುವಾಯಿತು. ಹಣೆಯಲ್ಲಿ.. ಬರ ಕಾಡುವ ಹಳ್ಳಿಗಳಲ್ಲಿ ನೀರು ಬಾರದ ನಲ್ಲಿಯ ಮುಂದೆ ಇಟ್ಟ ಸಾಲು ಸಾಲು ಕೊಡಗಳ ತರಹ ಬೆವರು ಮೂಡಿತ್ತು.  ಎದೆ "ಕಬಾಲಿ" ಚಿತ್ರದ ಆರಂಭಿಕ ದೃಶ್ಯಗಳ ಬೀಟ್ಸ್ಗಿಗಿಂತ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಒದ್ದೆಯಾಗಿದ್ದ ಕೈ ಗಡಿಯಾರ ನೋಡಿಕೊಂಡ ಆಗಲೇ ಎರಡು ಮೂವತ್ತು ಎಂದು ಅದು ಕೂಡ ಅದುರುತ್ತಿತ್ತು .. ಮುಳ್ಳು ಮೆಲ್ಲಗೆ ನಡುಗುತ್ತಲೇ, ಬೇಗ ಹೋದರೆ ಸಾಕು, ಎಂದು ತಿರುಗಿ ನೋಡದೆ ಓಡುತ್ತಲೇ ಇತ್ತು. 

ಮತ್ತೆ ರಸ್ತೆ ಕಡೆ ನೋಡಿದ, ಪಶ್ಚಿಮ ಘಟ್ಟಗಳ ರಸ್ತೆ.. ದಿನವೆಲ್ಲ ಸುರಿದ ಮಳೆಯಿಂದ ರಸ್ತೆ ಬಾಲಿವುಡ್ ಸಿನಿಮಾದ ನಾಯಕಿತರಹ ಒದ್ದೆ ಮುದ್ದೆಯಾಗಿತ್ತು, ಬೃಹದಾಕಾರದ ಮರದ ಎಲೆಗಳಿಂದ ತೊಟ್ಟಿಕ್ಕುತ್ತಿದ್ದ ಪ್ಲಕ್ ಪ್ಲಕ್ ಎಂದು ಸಡ್ಡು ಮಾಡುತ್ತಿದ್ದ ಹನಿಗಳು, ಒದ್ದೆಯಾಗಿದ್ದ ಬಿದ್ದಿದ್ದ ಎಲೆಗಳ ಮೇಲೆ ಬಿದ್ದು ನೀರವ ಮೌನದ ಭಯವನ್ನು ಇನ್ನಷ್ಟು ಹೆಚ್ಚು ಮಾಡುತ್ತಿತ್ತು. ಮೊದಲೇ ಪಶ್ಚಿಮ ಘಟ್ಟಗಳ ಹಾದಿ, ಎತ್ತ ನೋಡಿದರೂ ಅಲೆ ಅಲೆಯಾಗಿ ಗೆರೆ ಗೆರೆಗಳ ತರಹ ಕಾಣುವ ಬೆಟ್ಟಗಳ ಸಾಲು ಕರ್ರಗೆ ಇನ್ನಷ್ಟು ಭೀಕರತೆ ಉಂಟು ಮಾಡುತ್ತಿತ್ತು, ಅತ್ತ ಕಡೆ, ಕಣ್ಣಿಗೆ ಕಾಣದಷ್ಟು ಆಳದ ಕಂದರಗಳಲ್ಲಿ ಜುಳು ಜುಳು ಹರಿಯುವ ಝರಿ.. ಜೊತೆಯಲ್ಲಿ ಕತ್ತಲೆ, ಹನಿಯುತ್ತಿದ್ದ ಮಳೆರಾಯ. 

ಒಂದೇ ಒಂದು ವಾಹನವೂ ಕಾಣುತ್ತಿರಲಿಲ್ಲ. ಹನುಮಾನ್ ಚಾಲೀಸ್, ಗಾಯತ್ರಿ ಮಂತ್ರ.. ಮುಕ್ಕೋಟಿ ದೇವರು ಎಲ್ಲರನ್ನೂ ಕರೆದಾಗಿತ್ತು, ಇವನ ಹೆದರಿಕೆಗೆ, ದೇವರುಗಳೇ ಒಮ್ಮೆ.. ಅಯ್ಯೋ ಬಿಡಪ್ಪ ಹೆದರಿ ಆಗಲೇ ಮುದ್ದೆಯಾಗಿದ್ದಾನೆ, ಮುದ್ದೆಯಾಗಲು ಇನ್ನೆಲ್ಲಿದೆ ಅವಕಾಶ.. ಅನ್ನುವಷ್ಟರ ಮಟ್ಟಿಗೆ ಆ ಮಳೆಯ ಕಾಲದಲ್ಲೂ ಬೆವತು ನೀರಾಗಿದ್ದ.. 

ಯಾರೋ ನೆಡೆದು ಬರುತ್ತಿದ್ದ ಸದ್ದು ಅಸ್ಪಷ್ಟವಾಗಿ ಕೇಳಿಬಂತು.. ಕಿವಿಯನ್ನು ಅತ್ತ ಕಡೆಗೆ ಹರಿಸಿದ.. 

"ಹಹಹ.. ಏನೂ ಹೇಳಿದಿರಿ ಸರ್.. ಸೂಪರ್ ಸೂಪರ್"

"ಅದೇನು ಸೂಪರ್.. ಇನ್ನೊಂದು ಕಥೆ ಕೇಳಿ.. ಅದನ್ನು ಕೇಳಿದರೆ ಮೈಯೆಲ್ಲಾ ಜುಮ್ ಎನ್ನುತ್ತದೆ"

"ಅರೆ ಹೌದೇ.. ಹೇಳಿ ಸರ್.. ಪ್ಲೀಸ್"

"ಸರಿ.. ಒಂದು ಬೀಡಿ ಕೊಡಿ.. ಹಾಗೆ ಒಂದು ದಮ್ ಎಳೆದರೆ.. ಕಥೆ ಕೂಡ ಹೊಗೆಯ ರೀತಿ ಹೊರಗೆ ಬರುತ್ತದೆ... "

.. ಚರ್ ಶಬ್ಧ ಮಾಡಿ ಹೊತ್ತಿಕೊಂಡ ಬೆಂಕಿ ಕಡ್ಡಿಯ ಬೆಳಕಿನಲ್ಲಿ..  ಚಳಿಯಲ್ಲಿ ತರ ತರ ನಡುಗುತ್ತಾ ನಿಂತಿದ್ದ ವ್ಯಕ್ತಿ ಕಾಣಿಸಿತು.  

"ಏನ್ ಸಾರ್ ಎಲ್ಲಿಗೆ ಹೋಗಬೇಕು.. ಇಷ್ಟು ಹೊತ್ತಿಗೆ ಯಾಕೆ ಇಲ್ಲಿ ನಿಂತಿದ್ದೀರಿ.. ಇಲ್ಲಿ ಯಾವ ಬಸ್ಸು ನಿಲ್ಲೋಲ್ಲ.. ಮೊದಲೇ ಸಾರಿಗೆ ಮುಷ್ಕರ ನೆಡೆಯುತ್ತಿದೆ.. ಯಾವ ಬಸ್ಸುಗಳು ಬರೋಲ್ಲ.. "

ಹೆದರಿಕೆ,  ಜೊತೆಗೆ ಚಳಿ.. ಆ ಇಬ್ಬರ ಧ್ವನಿ ಕೇಳಿ ಇವನಿಗೆ ಜೀವ ಬಂದಂತೆ ಆಯಿತು... ಸದ್ಯಕ್ಕೆ ಯಾರೋ ಸಿಕ್ಕಿದರಲ್ಲ.. 

"ಹೌದಾ ಸಾರ್.. ನನಗೆ ಗೊತ್ತೇ ಇಲ್ಲ.. ಹೊಸ ಕಂಪನಿ ಕೆಲಸಕ್ಕೆ ಸೇರಿಕೊಳ್ಳಬೇಕು.. ನಾಳೆ ಹೋಗಲೇ ಬೇಕು.. ಬರುವಾಗ ನಾ ಬಂದಿದ್ದ ಕಾರು ಕೆಟ್ಟು ಹೋಯಿತು.. ಡ್ರೈವರ್ ಹೇಳಿದ ಕಾರು ಸರಿ ಹೋಗೋಲ್ಲ.. ಹಾಗೆ ಆ ತಿರುವಿನ ತನಕ ಹೋಗಿ.. ಅಲ್ಲಿ ಇನ್ನೊಂದು ಹೆದ್ದಾರಿ ಸೇರುತ್ತದೆ.. ಅಲ್ಲಿ ಯಾವುದಾದರೂ ಲಾರಿ, ಅಥವಾ ಯಾವುದಾದರೂ ವಾಹನ ಸಿಗಬಹುದು ಎಂದು ... ಅದಕ್ಕೆ ಇಲ್ಲಿ ನಿಂತಿದ್ದೆ"

"ಸರ್.. ನಿಮ್ಮ ಗುಂಡಿಗೆ ದೊಡ್ಡದು ಸರ್.. ಇಲ್ಲಿ ಹಗಲು ಹೊತ್ತಿನಲ್ಲಿಯೇ ಯಾರೂ ನಿಲ್ಲೋಲ್ಲ.. ಇನ್ನೂ ಈ ಸರಿ ಹೊತ್ತಿನಲ್ಲಿ.. ಯಪ್ಪಾ.. ಸರಿ ಬನ್ನಿ ಹೆದರಬೇಡಿ.. ನಾವುಗಳು ನಿಮ್ಮ ಜೊತೆಯಲ್ಲಿ ಹೆಜ್ಜೆ ಹಾಕುತ್ತೇವೆ.. ಇಲ್ಲೇ ೭ ಕಿಮಿ ದೂರದಲ್ಲಿ ಇವನ ಮನೆ ಇದೆ... ಅಲ್ಲಿದ್ದು ಬೆಳಿಗ್ಗೆ ಯಾವುದಾದರೂ ವ್ಯವಸ್ಥೆ ಮಾಡಿಕೊಂಡು ಹೋಗೋರಂತೆ.. ಇಲ್ಲೆಲ್ಲಾ ಇಷ್ಟು ಹೊತ್ತಿಗೆ   ಇರಬಾರದು.. ನಡೀರಿ ನಡೀರಿ.. " 

ಬಲವಂತವಾಗಿ ಅಲ್ಲಿಯೇ ತರಗೆಲೆಯಂತೆ ನಡುಗುತ್ತಿದ್ದ ಆ ವ್ಯಕ್ತಿಯನ್ನು ಎಳೆದುಕೊಂಡು ಹೊರಟೆ ಬಿಟ್ಟರು.. 

"ಸರ್... ಇನ್ನೊಂದು ಕಥೆ ಹೇಳುತ್ತೀನಿ ಅಂದ್ರಿ.. ಅದನ್ನು ಹೇಳಿ ಸರ್.. ದಾರಿ ಸವೆಯುತ್ತೆ.. " ಕಥೆ ಕೇಳುವ ಹುಚ್ಚಿನವ ಮತ್ತೆ ಕಥೆಗೆ ತಿದಿ ಒತ್ತಿದ. 

"ಹಾ ಹೌದು.. ಇವರು ಸಿಕ್ಕಿದ ಸಮಯಕ್ಕೆ ಅದು ಮರೆತೇ ಹೋಯಿತು.. ಆ ಎಲ್ಲಿದ್ದೆ ನಾನು" 

ಕೋಪದಿಂದ ಕಥೆ ಹೇಳಿ ಎಂದವ  "ಆ ಸಮಾಧಿಯೊಳಗೆ ಮಲಗಿದ್ದಿರಿ.. ಶೆಕೆ ಅಂತ ಹೊರಗೆ ವಾಕಿಂಗ್ ಬಂದಿದ್ದೀರಾ.. ಸುಮ್ನೆ ಕಥೆ ಹೇಳ್ರಿ ಅಂದ್ರೆ.. ಕಥೆ ಬಿಡ್ತಾರೇ... !"

"ಸರಿ ಮಾರಾಯ.. ಕೋಪ ಬೇಡ ಹೇಳ್ತೀನಿ ಇರಿ.. ಎಲ್ಲಿದ್ದೆ.. ಆಆಹ್ ನೆನಪಿಗೆ ಬಂತು ... " ಬೀಡಿಯಿಂದ ಮತ್ತೊಂದು ಧಮ್ ಎಳೆದು ಮತ್ತೆ ಶುರುಮಾಡಿದ.. 

"ಒಮ್ಮೆ ಕಾಡೊಳಗೆ ಒಬ್ಬನೇ ಹೋಗುತ್ತಿದ್ದೆ.. ಕೆಟ್ಟ ಧೈರ್ಯ.. ಯಾರಿಗೂ ಹೆದರುತ್ತಿರಲಿಲ್ಲ.. ಜೋರಾಗಿ "ಯಾರೇ ಕೂಗಾಡಲಿ ಊರೇ ಹೋರಾಡಲಿ ಎಮ್ಮೆ ನಿನಗೆ ಭಂಗವಿಲ್ಲಾ " ಹಾಡು ಹೇಳಿಕೊಂಡು.. ಹೋಗುತ್ತಿದ್ದೆ.. "ಅಣ್ಣ ಅಣ್ಣಾ" ಎಂದು ಯಾರೂ ಕೂಗಿದಂತೆ ಆಯಿತು.. ಯಾರಪ್ಪ ಎಂದು ಅತ್ತಿತ್ತ ನೋಡಿದೆ.. ಅದು ರಾತ್ರಿ ಅಂತ ಮತ್ತೆ ನಾ ಏನು ಹೇಳಬೇಕಾಗಿಲ್ಲ.. 
"ಅಣ್ಣಾ ಅಣ್ಣಾ" ಮತ್ತೆ ಕೂಗು ಕೇಳಿಸಿತು.. ಸೂಕ್ಷವಾಗಿ ಆ ಕತ್ತಲಲ್ಲೂ ದೃಷ್ಟಿ ಇಟ್ಟು ನೋಡಿದೆ.. ತುಸು ದೂರದಲ್ಲಿ. ಒಂದು ವ್ಯಕ್ತಿ ಕೂಗುತ್ತಿದ್ದ.. ಬಿರಬಿರನೆ ಹತ್ತಿರ ಹೋದೆ.. "

ಮತ್ತೊಂದು ಬೀಡಿ ಹಚ್ಚಿ ದಂ ಎಳೆದು ಮತ್ತೆ ಕಥೆ ಮುಂದುವರೆಸಿದ "ಆ ವ್ಯಕ್ತಿಯ ಹತ್ತಿರ ಹೋದೆ.. ಏನಪ್ಪಾ.. ಯಾಕೆ ಏನಾಯಿತು.. ?.. ಎಂದೇ.. ಅಣ್ಣಾ ಇದೇ ದಿನ ಊರಿಗೆ ಹೋಗಬೇಕಿತ್ತು.. ಬಸ್ಸು ಇದೆ ಅಂತ ಬಂದೆ.. . ಬಸ್ಸು ಬರಲೇ ಇಲ್ಲ . ಯಾವುದೋ  ಕಾರಿನಲ್ಲಿ ಇಲ್ಲಿ ತನಕ ಬಂದೆ.. ಆ ಕಾರು ಕೆಟ್ಟು ಹೋಯಿತು.. ಡ್ರೈವರ್ ಆ ಕೊನೆ ತನಕ ನೆಡೆದುಕೊಂಡು ಹೋಗಿ ಹೆದ್ದಾರಿ ಸಿಗುತ್ತೆ.. ಅಲ್ಲಿ ಯಾವುದಾದರೂ ಲಾರಿ, ಕಾರು ಸಿಗುತ್ತೆ.. ಇವತ್ತು ಸಾರಿಗೆ ಮುಷ್ಕರ ಹಾಗಾಗಿ ಅವೇ ನಿಮಗೆ ಗಟ್ಟಿ ಅಂತ.. ಆ ಡ್ರೈವರ್.. ಕಾರಿನೊಳಗೆ ಹೋಗಿ ಮಲಗಿಯೇ ಬಿಟ್ಟಾ.. ನಾನು ಅಲ್ಲೇ ಮಲಗೋಣ ಅಂದರೆ.. ಆ ಡ್ರೈವರ್ ಹೆದರಿಸಿದ.. ಸಾರ್ ನಾವೇನೋ ಇಲ್ಲಿಯವರೇ.. ನಮಗೆ ತೊಂದರೆ ಇಲ್ಲ.. ಹೊರಗಿನವರಿಗೆ ಅದು ಬಿಡುವುದಿಲ್ಲ.. ಬೇಗ ಹೋಗಿ ಬಿಡಿ" 

ಕಥೆ ಹೇಳು ಎಂದು ಪೀಡಿಸಿದ ವ್ಯಕ್ತಿಗೆ ಯಾಕೋ ಅನುಮಾನ ಶುರುವಾಯಿತು.. ಜೊತೆಯಲ್ಲಿಯೇ ಹೆದರಿಕೆ.. ಬೀಡಿ ಸೇದಿ ಕಥೆ ಹೇಳುತ್ತಿದ್ದ ವ್ಯಕ್ತಿಯನ್ನು ತುಸು ಈ ಕಡೆ ಕರೆದು.. "ಸರ್  .. ಆ ವ್ಯಕ್ತಿ ಕೂಡ ಇದೆ ಕಥೆ ಹೇಳಿದ.. ನೀವು ಹೇಳುವ ಕಥೆಯ ತರಹಾನೇ ಇದೇ ಅವನ ಕಥೆ ಕೂಡ.. "

ಇಬ್ಬರಿಗೂ ಬೆನ್ನಿನಲ್ಲಿ ಛಳಕ್ ಎಂದು ಚಳಿ ಮೂಡಿತು.. ಯಾಕೋ ಇಬ್ಬರೂ ತಿರುಗಿ ನೋಡಿದರು.. ಆ ಮೂರನೇ ವ್ಯಕ್ತಿ.. ಅಚಾನಕ್ ದೊಡ್ಡದಾಗಿ ಬೆಳೆದೆ ಬಿಟ್ಟಾ.. ಜೋರಾಗಿ ಗಹಗಹಿಸಿ ನಕ್ಕ.. 

ಇಬ್ಬರು ಮೂರ್ಛೆ ಬಿದ್ದರು.. ಫಳ್ ಫಳ್ ಮಿಂಚು ಬಂದಂತೆ ಭಾಸವಾಯಿತು.. ತುಂತುರು ಮಳೆ ನೀರು ಮುಖದ ಮೇಲೆ ಬಿದ್ದಿತು.. ತಿರುಗಿ ನೋಡದೆ.. ಓಡಲು ಶುರು ಮಾಡಿದರು.. ಅನತಿ ದೂರದಲ್ಲಿಯೇ.. ಯಾರೋ ಕರೆದ ಹಾಗೆ ಆಯಿತು.. 

"ಅಣ್ಣ ಅಣ್ಣಾ ಅಣ್ಣಾ ಅಣ್ಣಾ ...... !"

Tuesday, July 5, 2016

ಬೇತಾಳನ ಕಥೆಗಳು - ಸ್ನೇಹ ವಲಯ ಬೇತಾಳನಂತೆ !!!


ಅದೊಂದು ಗುರುಕುಲ..

ಹೊಸ ವಿದ್ಯಾಭ್ಯಾಸಕ್ಕೆ ಸೇರಿದ  ಒಂದು ಮುಗ್ಧ ಹುಡುಗ ಹನುಮ. ಮೊದಲೇ ಸೇರಿದ್ದ ಒಬ್ಬ ಹುಡುಗ ಕೃಷ್ಣ, ಈ ಹುಡುಗನ ವಿದ್ಯಾ ಕಲಿಕೆಯ ಆಸಕ್ತಿಯನ್ನು ಕಂಡು ಬೆರಗಾಗಿದ್ದ. ಅವನಲ್ಲಿ ತನ್ನನ್ನೇ ನೋಡಿದ್ದ ಅಂದರೂ ಸುಳ್ಳಾಗಿರಲಿಲ್ಲ.

ಹೊಸದಾಗಿ ಗುರುಕುಲ ಸೇರಿದ್ದ ಆ ಹನುಮನ ಮಾತು ಬಾಣದಷ್ಟೇ ಬಿರುಸು ಆದರೆ ಮನಸ್ಸು ಹಾಲಿನಷ್ಟೇ ಬಿಳಿ. ಹಲವಾರು ಬಾರಿ ಕೃಷ್ಣ ಹೇಳುತ್ತಲೇ ಇರುತ್ತಿದ್ದ ಯಾಕೋ ಅಷ್ಟು ಬಿರುಸಾಗಿ ಉತ್ತರ ಕೊಡುತ್ತೀಯ, ಎಲ್ಲಾ ಸಮಯವೂ ಒಂದೇ ತರಹ ಇರೋದಿಲ್ಲ.. ,ಆಗೆಲ್ಲಾ ಹನುಮ ಹಾರಿಕೆಯ ಉತ್ತರ ಕೊಟ್ಟು, ಅಯ್ಯೋ ನನ್ನ ಮಾತು ಬಿಡಿ, ನಮ್ಮ ಹಳ್ಳಿಗೆ ಬನ್ನಿ, ಅಲ್ಲಿ ಎಲ್ಲರೂ ಬ್ರಹ್ಮಾಸ್ತ್ರ ಬಿಡುವವರೆ!!! .... ಕೃಷ್ಣ ಹೋಗ್ಲಿ ಬಿಡು.. ಎಂದು ತನ್ನನ್ನೇ ತಾನು ಸಮಾಧಾನ ಮಾಡಿಕೊಂಡಿದ್ದ .

ಕೃಷ್ಣನ  ಮಾತು ಹಾಸ್ಯ ಭರಿತವಾಗಿರುತ್ತಿತ್ತು, ಇನ್ನೊಬ್ಬರಿಗೆ ನೋವು ಮಾಡುವ ಮಾತು ಅವನಿಂದ ಬರುತ್ತಲೇ ಇರುತ್ತಿರಲಿಲ್ಲ. ತನಗೆ ನೋವಾದರೂ, ಇನ್ನೊಬ್ಬರಿಗೆ ನೋವು ಕೊಡಬಾರದು ಎನ್ನುವ ತತ್ವದವನು.

ಹೊಸ ವಿಷಯ ಕಲಿಯೋದು, ಅಭ್ಯಸಿಸುವುದು ಅಂದರೆ ಅಂದ್ರೆ ಇಬ್ಬರಿಗೂ ಹಬ್ಬ, ಯಾವುದಕ್ಕೂ ಹೆದರುತ್ತಲೇ ಇರಲ್ಲಿಲ್ಲ. ಹೊಸ ಗೋಣಿಚೀಲನ ಎತ್ತಿ ಎತ್ತಿ ಒಗೆದ ಎನ್ನುವ ವ್ಯಕ್ತಿತ್ವ ಇಬ್ಬರದೂ ಅಲ್ಲ. ಮೊದಲನೇ ದಿನವಿದ್ದ ಉತ್ಸಾಹ ಪ್ರತಿದಿನವೂ ಇದ್ದೆ ಇತ್ತು.

ಒಂದು  ರೀತಿಯಲ್ಲಿ ತನ್ನದೇ ಪ್ರತಿಬಿಂಬ ಎನ್ನುವ ರೀತಿಯಲ್ಲಿ ಇದ್ದ ಹನುಮನನ್ನು ಕಂಡರೆ ತಮ್ಮನಷ್ಟೇ ಪ್ರೀತಿ ವಿಶ್ವಾಸ. ಹನುಮನು ಕೂಡ ಹಾಗೆ, ಕೃಷ್ಣನನ್ನು ಗುರುವಿನ ಸ್ಥಾನದಲ್ಲಿಟ್ಟು ನೋಡುತ್ತಿದ್ದ ಹೀಗೆ ಅವರಿಬ್ಬರ ಬಾಂಧ್ಯವ ಚೆನ್ನಾಗಿ ಬೆಳೆಯುತ್ತಿತ್ತು.

ಒಬ್ಬರ ಕೆಲಸವನ್ನು ಇನ್ನೊಬ್ಬರು ಹಂಚಿಕೊಂಡು ಮಾಡುವಷ್ಟು ವೃತ್ತಿ ಪರತೆ ಇಬ್ಬರಿಗೂ ಇತ್ತು. ಕಲ್ಮಶವಿಲ್ಲದ ಅನುಬಂಧ ಅವರಿಬ್ಬರದು. ಗುರುಕುಲದ ಆಚಾರ್ಯರಿಗೆ ಒಂದು ಕೆಲಸವನ್ನು ಈ ಇಬ್ಬರಲ್ಲಿ ಯಾರೊಬ್ಬರಿಗೆ ಕೊಟ್ಟರೂ ಸಾಕು,  ಆ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವುದು ತಿಳಿದು ಹೋಗಿತ್ತು.

ಗುರುಕುಲದ ಜವಾಬ್ಧಾರಿ, ಬಂದು ಹೋಗುವ ಅತಿಥಿಗಳನ್ನು ನೋಡಿಕೊಳ್ಳುವ ಪರಿ, ಗುರುಕುಲವನ್ನು ಚೊಕ್ಕವಾಗಿ ಇಟ್ಟುಕೊಳ್ಳುವ ರೀತಿ, ಇದು ತಮ್ಮದೇ ಮನೆ ಎಂದು ತಲೆಯ ಮೇಲೆ ಹೊತ್ತು ಆ ಗುರುಕುಲವನ್ನು ನೋಡಿಕೊಳ್ಳುತ್ತಿದ್ದ ಬಗ್ಗೆ ಇತರ ಗುರುಕುಲದ ವಿದ್ಯಾರ್ಥಿಗಳ ಕಣ್ಣು ಕೆಂಪು ಮಾಡಿದ್ದರೂ, ಅದಕ್ಕೆ ತಲೆ ಕೆಡಿಸಿಕೊಳ್ಳದೆ, ಇದು ನಮ್ಮದು, ನಮ್ಮ ಜವಾಬ್ಧಾರಿ ಎನ್ನುವ ಮನೋಭಾವ ಹೊತ್ತು, ಮೂದಲಿಕೆ, ಏಳು, ಬೀಳುಗಳು ಇದ್ದರೂ, ಒಬ್ಬರ ಕೈ ಹಿಡಿದು ಇನ್ನೊಬ್ಬರು ನಡೆಯುತ್ತಾ, ತಮ್ಮ ಬೇಸರಗಳನ್ನ ಹಂಚಿಕೊಂಡು ನಗು ನಗುತ್ತಲೇ ವಿದ್ಯಾಭ್ಯಾಸ ಮುಂದುವರೆಸಿದ್ದರು.

ಎಲ್ಲಾ ಸಹಪಾಟಿಗಳ ಮಧ್ಯೆ ಬರುವ ಸಣ್ಣ ಸಣ್ಣ ಸಂಗತಿಗಳನ್ನು ದೊಡ್ಡದು ಮಾಡದೆ ಒಂದೇ ಬಳ್ಳಿಯ ಹೂವುಗಳ ಹಾಗೆ ಬೆಳೆಯುತ್ತಿದ್ದರು. ಅನೇಕ ಎಚ್ಚರಿಕೆ ಮಾತುಗಳು ಇಬ್ಬರ ಮದ್ಯೆ ಇದ್ದರೂ, ಎಷ್ಟೋ ಬಾರಿ, ಹನುಮ, ಕೃಷ್ಣನ ಹಾಸ್ಯ ಭರಿತ ಮಾತುಗಳಿಗೆ, "ಹೀಗೆ ಆಡುತ್ತಿರು, ಪಾಂಡವರು ಶಸ್ತ್ರಾಸ್ತ್ರಗಳನ್ನು ಬನ್ನಿ ಮರದ ಮೇಲೆ ಕಟ್ಟಿದ್ದರಲ್ಲಾ, ಹಾಗೆಯೇ ನಿನ್ನನ್ನು ಕಟ್ಟಿ ಬಿಡುತ್ತೇನೆ, ಮರಕ್ಕೆ ಕಟ್ಟಿ ಹಾಕುತ್ತೇನೆ, ನೀರಿಗೆ ತಳ್ಳುತ್ತೇನೆ" ಎಂದು ಪ್ರೀತಿಯಿಂದ ಗದರುತ್ತಲೇ  ಇದ್ದನು.  ಕೃಷ್ಣ ನಗುವಿಗೆ ಇನ್ನೊಂದು ಹೆಸರು, ನೀನು ಹಂಗೆ ಮಾಡು, ಅವಾಗಿರೋದು ಹಬ್ಬ ಎಂದು ತೆಳುವಾಗಿ ಆ ವಾತಾವರಣವನ್ನು ತಿಳಿ ಮಾಡುತ್ತಿದ್ದನು. ಗುರುಕುಲಕ್ಕೆ ತಾನೇ ಹಿರಿಯ ಎನ್ನುವ ಹಮ್ಮು ಬಿಮ್ಮು ಯಾವುದು ಇರಲಿಲ್ಲ, ತಾನು ಎಲ್ಲರೊಳಗೆ ಒಬ್ಬ ಎನ್ನುವ ತತ್ವದವನು.

ಹನುಮ ಕೂಡ, ಮಾತು ಬಿರುಸಾಗಿದ್ದರೂ, ಕೃಷ್ಣನ ಕಷ್ಟ ಸುಖಗಳನ್ನು ಅರಿತಿದ್ದ.. ಏನೇ ಆಗಲಿ ನಾವಿಬ್ಬರೂ ಜೊತೆಯಲ್ಲಿಯೇ ಕಲಿಕೆ ಮಾಡೋಣ ಅನ್ನುವ ನಂಬಿಕೆ ವಿಶ್ವಾಸವನ್ನು ಹನುಮ ಕೃಷ್ಣನಿಗೆ ಕೊಟ್ಟಿದ್ದ.

ಎಷ್ಟೋ ಬಾರಿ ಹನುಮ ಉಲ್ಟಾ ಪಲ್ಟ ಮಾತಾಡಿದ್ದರೂ, ಯಾಕೆ ಗೊತ್ತಾಗಬೇಕು ಎಂಬ ದಿಟ್ಟತನದ ಉತ್ತರ ಕೊಟ್ಟಿದ್ದರೂ, ಕೃಷ್ಣನಿಗೆ ಬೇಸರವಾಗಿದ್ದರೂ ಕೂಡ, ಮೆಲ್ಲಗೆ, ಮತ್ತು ಸಮಾಧಾನ ಚಿತ್ತದಿಂದ ಹೀಗಲ್ಲ ಹೀಗೆ ಎಂದು ಉತ್ತರಿಸಿ, ಸಾಂತ್ವನ ಹೇಳಿ, ಮತ್ತೆ ತಮ್ಮ ತಮ್ಮ ಅನುಬಂಧಗಳನ್ನು ಗಟ್ಟಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದನು..

ಯಾರೋ ಕೊಬ್ಬರಿಯಾಕಾರದ ಜುಟ್ಟನ್ನು ಎಳೆದ, ಆಟವಾಡುತ್ತಿದ್ದಾರೆ ಎಂಬ ಅನುಭವ.. ಏನಾಯ್ತು ಅಂತ ತಿರುಗಿ ನೋಡಿದರೆ, ಬೇತಾಳ, ವಿಕ್ರಮನ ತಲೆಗೂದಲಿನ  ಜೊತೆ ಆಟವಾಡುತ್ತಾ, "ವಿಕ್ರಮ ಕಥೆ ಒಂದು ರೀತಿಯಲ್ಲಿ ನನ್ನ ರೀತಿಯೇ ವಿಚಿತ್ರವಾಗಿದೆ.. ಹಾ ಬೇಗ ಮುಂದುವರೆಸು .. ಮುಂದುವರೆಸು" ಎಂದಿತು.

​ವಿಕ್ರಮ "ಅರೆ ಇದೇನಾಗುತ್ತಿದೆ.. ಬೇತಾಳ ಕಥೆ ಹೇಳುವ ಬದಲು, ಬೇತಾಳನನ್ನು ನಾನು ಎತ್ತಿಕೊಳ್ಳುವ ಬದಲು, ಬೇತಾಳವೆ ತನ್ನ ಬೆನ್ನ ಮೇಲೆ ನನ್ನನ್ನು ಎತ್ತುಕೊಂಡಿದೆ.. ಏನಿಡು ಕಸಿವಿಸಿ.." ಆಗ ಬೇತಾಳನಿಗೆ, "ಕೊಂಚ ಹೊತ್ತು ಇಲ್ಲಿಯೇ ಇಬ್ಬರೂ ಕೂರೋಣ.. ಏನೋ ಹಿಂಸೆ ಅನ್ನಿಸುತ್ತಿದೆ".. ಎಂದು ಅಲ್ಲಿಯೇ ಇದ್ದ ಸಮಾಧಿಯ ಮೇಲ್ಭಾಗವನ್ನು ಕೈಯಿಂದ ಶುದ್ಧ ಮಾಡಿ, ಬೇತಾಳ ನೀನು ಎದುರು ಮರದಲ್ಲಿ ನೇತಾಡಿಕೊಂಡು ಇರು, ನಾ ಇಲ್ಲಿಯೇ ಕೂತಿರ್ತೇನೆ.. ಹಾಗೆ ಮಾತಾಡಿ ಬಗೆ ಹರೆಸಿಕೊಳ್ಳೋಣ"

ವಿಕ್ರಮ.. "ಅಯ್ಯಾ ಬೇತಾಳ.. ಹನುಮ  ಮತ್ತು ಕೃಷ್ಣ ಹೀಗೆ ಅನ್ಯೋನ್ಯವಾಗಿರಲು ಒಂದು ನಿನ್ನ ತರಹವೇ ವಿಚಿತ್ರ ಘಟನೆ ನಡೆಯಿತು. ಗುರುಕುಲದ ಕೆಲಸದ ಒತ್ತಡ ಕೊಂಚ ಮಟ್ಟಿಗೆ ಹನುಮನನ್ನು ಕಂಗೆಡಿಸಿತ್ತು.. ಆಗ ಕೃಷ್ಣ ಹನುಮನ ಸಹಾಯಕ್ಕೆ ಎಂದಿನಂತೆ ಧಾವಿಸಿದಾಗ, ಯಾವುದೋ ಒತ್ತಡದಲ್ಲಿ ಹನುಮ ಕೃಷ್ಣನಿಗೆ ಬೇಸರವಾಗುವಂತೆ ಕಿರಿದಾದ ನುಡಿ ಹೇಳಿಬಿಟ್ಟ.. ಶಾಂತ ಸ್ವಭಾವದ ಕೃಷ್ಣನಿಗೂ ಯಾಕೋ ಮನಸ್ಸು ಸರಿಯಿರಲಿಲ್ಲ.. ಅವನು ಒಂದು ಬಿರು ನುಡಿಯ ಬಾಣ ಬಿಟ್ಟ.. "

"ಅಷ್ಟೇ ಸಾಕಾಗಿತ್ತು ..  ಸುಂದರವಾದ ಮನಸ್ಸಿನ ಕನ್ನಡಿಯಲ್ಲಿ ಒಂದು ಚೂರು ಕೊಳೆ ಕೂರಲು.. "

"ಒಂದಷ್ಟು ದಿನ.. ಇಬ್ಬರಲ್ಲೂ ಮಾತಿಲ್ಲ, ಕಥೆಯಿಲ್ಲ.. ಒಬ್ಬರ ಸಹಾಯಕ್ಕೆ ಇನ್ನೊಬ್ಬರು ಬರುವುದು ಕಮ್ಮಿಯಾಗಿತ್ತು.. ಆದರೆ ಕೃಷ್ಣನಿಗೆ ಪ್ರಚಂಡ ಆತ್ಮ ವಿಶ್ವಾಸ.. ಮತ್ತೆ ಹನುಮನ ಸ್ನೇಹ ಮುಂದುವರೆಯುತ್ತದೆ ಎಂದು. ಆದರೆ ಹನುಮನಿಗೆ ಏನೋ ಒಂದು ತರಹಾ ಹಿಂಸೆ.. ಗುರು ಸ್ಥಾನದಲ್ಲಿ ಇದ್ದವರು ಹೀಗೆ ಮಾತಾಡಿಬಿಟ್ಟರಲ್ಲ.. ಅಲ್ಲಿ ತನ್ನ ತಪ್ಪು ಇತ್ತೋ ಇಲ್ಲವೋ ಆ ಕ್ಷಣಕ್ಕೆ ಹನುಮನಿಗೆ ಅರಿವಾಗಲಿಲ್ಲ.. ಆದರೆ ಇಬ್ಬರ ನಡುವಿನ ಮೌನದ ಕಣಿವೆ ಅಗಲವಾಗುತ್ತಲೇ ಹೋಗಿದ್ದು ಮಾತ್ರ ಸುಳ್ಳಲ್ಲ .".

ಇಷ್ಟು ಹೇಳಿ ವಿಕ್ರಮ ಸುಮ್ಮನಾಗಿಬಿಟ್ಟ! ಹಾಗೆಯೇ ಸಮಾಧಿಯ ಮೇಲೆ ಒರಗಿ ಕುಳಿತುಬಿಟ್ಟ

ಬೇತಾಳ ತನ್ನ ಬಿಳಿದಾದ ರೇಷ್ಮೆ ಕೂದಲನ್ನು ಕೆರೆದುಕೊಳ್ಳಲು ಶುರುಮಾಡಿತು..
"ಅರೆ ವಿಕ್ರಮ ಕಥೆ ಮುಂದುವರೆಸು.. ದಯಮಾಡಿ ಮುಂದುವರೆಸು.. ಏನಾಯಿತು ಅವರಿಬ್ಬರಿಗೂ, ಮತ್ತೆ ಸ್ನೇಹ ಮುಂದುವರೆಯಿತೆ ಇಲ್ಲವೇ ಅವರಿಬ್ಬರೂ ಕಡು ವೈರಿಗಳಾದರೆ..ಹೇಳಪ್ಪ .. ನೀ ಹೇಳದೆ ಹೋದರೆ ನಿನ್ನ ತಲೆ........ "

"ಎಲೈ ಬೇತಾಳವೇ.. ನನ್ನ ತಲೆ ಹೋಳಾಗುವುದಿರಲಿ... ಈ ಕಥೆಯನ್ನು ನೀ ಈಗ ಮುಂದುವರೆಸಬೇಕು.. ಇಲ್ಲವೇ ಗಣಪನ ಗುಡಿಗೆ ನಿನ್ನನ್ನು ಎಳೆದೊಯ್ದು ಬಿಡ್ತೀನಿ.. ಈಗ ನಿನ್ನ ಸಮಯ ಶುರುವಾಯಿತು.. ಇಲ್ಲಿಂದ ನೀ ಕಥೆ ಮುಂದುವರೆಸಬೇಕು"

ಬೇತಾಳಕ್ಕೆ ಚಿಂತೆ ಶುರುವಾಯಿತು.. ತಲೆ ಕೆಳಗೆ ಮಾಡಿತು.. ರೆಂಬೆ ಹತ್ತಿ ಜೋತಾಡಿತು.. ತಲೆ ಕೆರೆದು ಕೊಂಡಿತು..ಹುಣಿಸೆ ಮರದಲ್ಲಿದ್ದ ತನ್ನ ಬಂಧು ಬಾಂಧವರ ಸಹಾಯ ಬೇಡಿತು.. ಆ ಸ್ಮಶಾನದಲ್ಲಿದ್ದ ಅರಳಿ ಮರದಿಂದ ತಣ್ಣನೆ ಗಾಳಿಯಲ್ಲಿ ಒಂದು ಹಸಿರಾದ ನವಿರಾದ ಅರಳಿ ಎಲೆ ತೇಲಿ ಬಂತು.. ಆ ಅರಳಿ ಎಲೆಯನ್ನೇ ನೋಡುತ್ತಾ ಒಂದು ಕ್ಷಣ ಹಾಗೆ ಯೋಚಿಸಿತು ಬೇತಾಳ.. ತಲೆಯಲ್ಲಿ ದಿಗ್ಗನೆ ವಿದ್ಯುತ್ ದೀಪ ಹತ್ತಿಕೊಂಡಂತೆ ಮುಖವೆಲ್ಲಾ ಬೆಳ್ಳಗೆ ಹೊಳೆಯಿತು.. "ಗೊತ್ತಾಯಿತು ಗೊತ್ತಾಯಿತು".. ಅಂತ ಅಲ್ಲಿದ್ದ ಸಮಾಧಿಯ ಮೇಲೆಲ್ಲಾ ಕುಣಿದಾಡಿತು . ಹುಣಿಸೇಮರವನ್ನು ಹತ್ತಿ ಇಳಿದು ಜೀಕಾಡಿತು..

ವಿಕ್ರಮನಿಗೆ ಹೇಳಿತು.. "ಅಯ್ಯಾ ರಾಜ ವಿಕ್ರಮ.. ನೀ ದಣಿವಿಲ್ಲದೆ ನನಗೆ ಇವತ್ತು ಕಥೆ ಹೇಳಿದೆ.. ಈಗ ಕೇಳು ಅದರ ಮುಂದುವರೆದ ಭಾಗವನ್ನು"

ವಿಕ್ರಮ ಮೈಯೆಲ್ಲಾ ಕಿವಿಯಾಗಿ ಬೇತಾಳದ ಬಾಯಿಂದ ಹೊರಬರುವ ಕಥೆಯ ಮುಂದಿನ ಭಾಗಕ್ಕೆ ಕಾದು ಕೂತ..

"ಹನುಮನ ಮತ್ತು ಕೃಷ್ಣನ ಸ್ನೇಹ ಗಾಜಿನದಾಗಿರಲಿಲ್ಲ.. ಅದು ಥಳ ಥಳ ಹೊಳೆಯುವ ಬೆಳ್ಳಿಯ ಅಥವಾ ಚಿನ್ನದ ಲೋಹದಾಗಿತ್ತು.. ಹೌದು ಕೆಲ ಕಾಲ ಗಾಳಿ ಬೆಳಕು ನೀರು ಸೋಕಿ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳು ಮಾಸುವ ಹಾಗೆ, ಅವರ ಸ್ನೇಹ ಕೂಡ ಪರೀಕ್ಷೆಯ ಘಟ್ಟಕ್ಕೆ ಬಂದು ನಿಂತಿತ್ತು.. ಆದರೆ ಅವರಿಬ್ಬರ ಮನಸ್ಸು ಮಾತ್ರ ಸ್ನೇಹಕ್ಕೆ ಹಾತೊರೆಯುತ್ತಿತ್ತು... ಅವರು ಮೊದಲು ಬರಲಿ ಎನ್ನುವ ಚಿಕ್ಕ ಅಹಂ ಇಬ್ಬರಲ್ಲೂ ಇತ್ತು.. ಹಾಗಾಗಿ ಮನಸ್ಸಿನ ಪಾತ್ರೆಗಳು ಕೊಂಚ ಕಾಲ ಮಂಕಾಗಿದ್ದು ನಿಜ .. ಆದರೆ ಅವರಲ್ಲಿನ ಸ್ನೇಹ ಜ್ಯೋತಿ ಅಸಮಾಧಾನ ಎನ್ನುವ ಗಾಳಿಗೆ ಸಿಕ್ಕಿದ್ದರೂ ನಲುಗದೆ, ಆರದೆ ಬೆಳಗುತಿತ್ತು.

"ಸರಿ ಮುಂದಕ್ಕೆ ಹೇಳು ಬೇತಾಳವೇ"

ಆ  ಹೊತ್ತಿನಲ್ಲಿ ಕೃಷ್ಣನಿಗೆ ಒಂದು ಅರಳಿ ಎಲೆಯ ಮೇಲೆ ಸಂದೇಶ ಬಂತು.. "ಕೃಷ್ಣ ಇಂದು ಗುರುಕುಲದಲ್ಲಿ ಬಹಳ ಕಷ್ಟವಾಯಿತು, ವಿಪರೀತ ಕೆಲಸ.. ಸಾಕಪ್ಪ ಅನಿಸಿತು.. .. ಹೇಗಪ್ಪ ಮುಂದುವರೆಯುವುದು ಎನ್ನಿಸಿತು.. ಆದರೆ ಏನು ಮಾಡೋದು ಕೆಲಸ ಹೊತ್ತಿದ್ದೇನೆ ಮಾಡಲೇ ಬೇಕು.. "

ಕೃಷ್ಣ ಅದಕ್ಕೆ ಉತ್ತರಿಸಿ " ಏನೂ ಮಾಡೋಕೆ ಆಗೋಲ್ಲ ಹನುಮ ಪುಟ್ಟಾ.. ಇದೆ ಜೀವನ.. ಹೊಡೆದಾಡುತ್ತಾ ಬಡಿದಾಡುತ್ತ ನಮ್ಮ ತನವನ್ನು ಉಳಿಸಿಕೊಂಡು ಮುಂದುವರೆಯಬೇಕು... "

ಹೀಗೆ ಸುಮಾರು ಹೊತ್ತು ಇಬ್ಬರೂ ಒಬ್ಬರನ್ನು ಒಬ್ಬರು ಸಂತೈಸಿದರು.. ಜೊತೆಯಲ್ಲಿ ತಮ್ಮಿಬ್ಬರ ಒಂದು ಚಿಕ್ಕ ಅಹಂ ಸುಂದರ ಗೆಳೆತನ ಕವಲು ಹಾದಿಗೆ ಹೊರಳುವ ಹೊತ್ತಿನಲ್ಲಿ ಈ ಮಾತುಗಳು ಮತ್ತೆ ಯಥಾ ಸ್ಥಿತಿ ಮರಳಲು ಅನುಕೂಲ ಮಾಡಿಕೊಟ್ಟಿತು. ಕೃಷ್ಣ ಹೇಳುತ್ತಾನೆ ಹನುಮ ನನ್ನ ಮಾತಿಂದ ನಿನಗೆ ನೋವಾಗಿದ್ದರೆ ಕ್ಷಮೆ ಇರಲಿ.. ಹನುಮ ಕೂಡ ಇದೆ ಮಾತನ್ನು ಉಚ್ಚರಿಸುತ್ತಾನೆ..

ಇಬ್ಬರೂ ತಮ್ಮ ತಮ್ಮ ತಪ್ಪಿನ ಅರಿವಾಗಿ, ಎಂಥಹ ಕ್ಷುಲ್ಲಕ ಕಾರಣಕ್ಕೆ ನಾವಿಬ್ಬರೂ ಗೆಳೆತನದ ದೀಪಕ್ಕೆ ಗಾಳಿ ಬೀಸಲು ಹೊರಟಿದ್ದೆವು.. ಎಂದು ಕೊಂಚ ನಾಚಿಕೆಯೂ ಆಯಿತು. ಆದರೆ ಕಾಲದ ಯಜಮಾನನ ಹತ್ತಿರ  ಉತ್ತರ ಇದ್ದೆ ಇರುತ್ತದೆ ಅಲ್ಲವೇ..

ಆ ಕಾಲನ ಯಜಮಾನನ ಕೃಪೆಯಲ್ಲಿ ಮತ್ತೆ ಎರಡು ಸುಂದರ  ಹಾಯಿದೋಣಿಗಳು ಗೆಳೆತನದ ದಿಕ್ಕಿನತ್ತ ಪಯಣಿಸಲು ಶುರುಮಾಡಿದವು.. !

ಬೇತಾಳ ನಿಲ್ಲಿಸಿತು.. "ಈಗ ನೀ ಹೇಳು ವಿಕ್ರಮ.. "

೧) ಮೊದಲು ನೀನೇಕೆ ಕಥೆ ನನಗೆ ಹೇಳಿದೆ.. ?
೨) ನಿನ್ನ ತಲೆಗೂದಲನ್ನು ನಾ ಎಳೆದದ್ದು ಏಕೆ?
೩) ಸಮಾಧಿಯನ್ನು ಒರೆಸಿ ಕೂತಿದ್ದೇಕೆ?
೪) ಹನುಮ ಮತ್ತು ಕೃಷ್ಣನ ಸ್ನೇಹಕ್ಕೆ ಕೊಂಚ ಘಾಸಿಯಾಗಿದ್ದರೂ ಕೂಡ ಅವರ ಸ್ನೇಹ ಜ್ಯೋತಿ ಬೆಳಗುತ್ತಿತು ಇದು ಏಕೆ?
೫) ಅರಳಿ ಎಲೆ ಮತ್ತು ಆ ಸಂದೇಶ ಮತ್ತೆ ಅವರನ್ನು ಸ್ನೇಹ ಲೋಕದಲ್ಲಿ ಒಂದು ಮಾಡಿದ್ದು ಹೇಗೆ ಮತ್ತು ಏಕೆ?
೬) ಮತ್ತೆ ಇವರಿಬ್ಬರ ಮಧ್ಯೆ ಈ ರೀತಿಯ ಬಿರುಕು ಬರಲು ಸಾಧ್ಯವೇ?
೭) ನೀ ಕ್ಷತ್ರಿಯನಾದರೂ ಬ್ರಾಹ್ಮಣನ ತರಹ ಕೊಬ್ಬರಿಯಾಕಾರದ ಜುಟ್ಟನ್ನು ಬಿಟ್ಟು ಕೊಂಡಿರುವುದು ಏಕೆ?

ಈ ಮೇಲಿನ ಪ್ರಶ್ನೆಗಳಿಗೆ ನೀ ಉತ್ತರ ಹೇಳದಿದ್ದರೆ ನಿನ್ನ ಜುಟ್ಟನ್ನು ಎಳೆದು ಎಳೆದು ಗೋಳು ಹುಯ್ದುಕೊಳ್ಳುತ್ತೇನೆ.. !

"ಎಲೈ ಬೇತಾಳವೇ.. ತಗೋ ನಿನ್ನ ಪ್ರಶ್ನೆಗಳಿಗೆ ಉತ್ತರ.. "

"ನಾ ಕ್ಷತ್ರಿಯ ಆಗಿರಬಹುದು, ಆದರೆ ಶಾಸ್ತ್ರಗಳನ್ನು ಕಲಿಯುವುದಕ್ಕೆ ಈ ರೀತಿಯ ಜುಟ್ಟು ಅವಶ್ಯಕ ಎನ್ನಿಸಿತು.. ಏಕಾಗ್ರತೆ ಬರುತ್ತದೆ.. ಅಂದಕ್ಕೆ ಬೆಲೆ ಕೊಡಬೇಕಾಗುವುದಿಲ್ಲ.. ಅಲಂಕಾರದ ಕಡೆಗೆ ಗಮನ ಹರಿಯುವುದಿಲ್ಲ.. ಇಲ್ಲಿ ಹನುಮ ಮತ್ತು ಕೃಷ್ಣನು ಗುರುಕುಲದಲ್ಲಿ ಇದ್ದದರಿಂದ ಅವರ ಕಥೆಯನ್ನು ನಾ ಹೇಳಬೇಕಾದ್ದರಿಂದ ಈ ರೀತಿಯ ಕೇಶ ವಿನ್ಯಾಸ..

ಅಂದಕ್ಕೆ ಬೆಲೆ ಕೊಡದೆ ಸ್ನೇಹಕ್ಕೆ ಬೆಲೆ ಕೊಡುವ ಮನಸ್ಸು ಕೃಷ್ಣ ಮತ್ತು ಹನುಮನದು ಎನ್ನುವ ಸಾಂಕೇತಿಕ ಭಾಷೆ ಇಲ್ಲಿದೆ

"ನೀನಗೆ ಕಥೆ ಹೇಳಿ ಹೇಳಿ ಏಕಾತನತೆ ಬಂದಿರುತ್ತದೆ, ನಾ ನಿನ್ನ ಪ್ರಶ್ನೆಗೆ ಉತ್ತರ ಹೇಳಿ ಹೇಳಿ ನನಗೂ ಬೇಸರವಾಗಿರುತ್ತದೆ, ಅದಕ್ಕೆ ಒಂದು ಕ್ಷಣ ಸ್ಥಾನ ಪಲ್ಲಟ ಮಾಡಿಕೊಂಡಾಗ, ಒಬ್ಬರ  ಕಷ್ಟ ಇನ್ನೊಬ್ಬರಿಗೆ ಅರ್ಥವಾಗುತ್ತದೆ. ಕೃಷ್ಣ ಮತ್ತು ಹನುಮನ ವಿಚಾರದಲ್ಲಿಯೂ ಹಾಗೆ ಆಗಿದ್ದು.. ಇಬ್ಬರೂ ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿದರು, ಆಗ ತಮ್ಮಿಬ್ಬರ ತಪ್ಪು ಅರಿವಾಯಿತು. ಸ್ನೇಹಕ್ಕೆ ಮಿಗಿಲಾದದ್ದು ಏನಿದೆ..ಅದಕ್ಕೆ ನಾ ನಿನ್ನ ಬದಲು ನಾ ಕಥೆ ಹೇಳಿದ್ದು.. "

ಒಬ್ಬರ ಜೊತೆಯಲ್ಲಿ ಒಬ್ಬರು ನಿಂತಾಗ, ಇಬ್ಬರೂ ನನ್ನದೇ ಕಷ್ಟ ದೊಡ್ಡದು ಅಂದು ಕೊಳ್ಳುವ ಬದಲು, ಎಲ್ಲರಿಗೂ ಅವರವರದೇ ಕಷ್ಟ ಸುಖ ಇರುತ್ತದೆ.. ಕನ್ನಡಿ ಮತ್ತು  ಬಿಂಬ ಒಂದೇ ಆದರೂ ಅದರ ಎಡ ಬಲ ಬದಲಾಗುವ ಹಾಗೆ.. ಒಳ್ಳೆಯ ಮನೋಭಾವ ಬೆಳೆಸಿಕೊಳ್ಳಬೇಕು ಎನ್ನುವ ಸಂದೇಶ ಇಲ್ಲಿದೆ

ನಿನಗೆ ಕಥೆ ಹೇಳುತ್ತಾ ಹೇಳುತ್ತಾ, ಒಂದು ಕ್ಷಣ ನನ್ನೇ ನಾ ಮರೆತಿದ್ದೆ, ನೀನು ನನ್ನ ಜುಟ್ಟನ್ನು ಎಳೆಯುವ ಮೂಲಕ ಮತ್ತೆ ನನ್ನನ್ನು ಈ ಲೋಕಕ್ಕೆ ಕರೆತಂದೆ.. ನಿನ್ನ ಚೇಷ್ಟೆ ನನಗೆ ಮತ್ತೆ ಈ ಲೋಕಕ್ಕೆ ಮರಳಲು ಅವಕಾಶವಾಯಿತು.

ನಗು ಎಂಬುದು ಮಂಜಿನ ಹನಿ ಇದ್ದ ಹಾಗೆ.. ಅದು ಎಲೆಯ ಮೇಲೆ ಇದ್ದಾಗ ಮುದ್ದಾಗಿ .. ಸುಂದರವಾಗಿ ಕಾಣುತ್ತದೆ. ಆ ನಗುವಿನ ಬಿಂದುವನ್ನು ಅನುಭವಿಸಬೇಕು, ಬೆಳಗಿನ ಮಂಜಿನ ಹನಿಯಂತೆ. ಅದು ನೀ ಜುಟ್ಟನ್ನು ಎಳೆದಾಗ ಮತ್ತೆ ನನ್ನನ್ನು ಈ ಲೋಕಕ್ಕೆ ಕರೆತಂದಂತೆ.. ನಗು ಮತ್ತೆ ನಮ್ಮನ್ನು ಉತ್ಸಾಹದ ಚಿಲುಮೆಗೆ ಒಡ್ಡುತ್ತದೆ.

ನಾ ಸಮಾಧಿಯನ್ನು ಒರೆಸಿದ್ದು, ಒಳಗೆ ಯಾರೋ ಮಲಗಿರುತ್ತಾರೇ, ಜೀವನದಲ್ಲಿ ನೋವು ನಲಿವು ಎಲ್ಲವನ್ನು ಕಂಡಿರುತ್ತಾರೆ, ಅಂಥವರ ಸಮಾಧಿಯ ಮೇಲೆ ನಾವು ಕೂತಾಗ ಅವರ ಜೀವನದ ನೋವು ನಲಿವುಗಳು ನಮ್ಮ ಮೇಲೆ ಪರಿಣಾಮ ಬೀರಬಾರದು, ಹಾಗೆಯೇ, ನಮ್ಮ ಜೀವನದಲ್ಲಿ ನಡೆವ ಸಣ್ಣ ಪುಟ್ಟ ತಪ್ಪುಗಳು ನಮ್ಮಜೀವನದ ನೆಮ್ಮದಿಯನ್ನು ಹಾಳು ಮಾಡಬಾರದು. ನಾವಿಲ್ಲಿ ಕೂತದ್ದೇಕೆ, ವಿಶ್ರಮಿಸಲು ತಾನೇ, ವಿಶ್ರಮಿಸಲು ಕೂತಾಗ ಮನಸ್ಸಿನ ಹಳೆಯ ಕಸಗಳನ್ನು ಗುಡಿಸಿ ವಿಶ್ರಮಿಸಬೇಕು, ಅದಕ್ಕೆ ಸಾಂಕೇತಿಕವಾಗಿ ಸಮಾಧಿ ಗುಡಿಸಿ ಕೂತಂತೆ ,ನಮ್ಮ ಮನಸ್ಸನ್ನು  ತಪ್ಪುಗಳು ಎನ್ನುವ ಆ ಕಸದಿಂದ ಮುಕ್ತಿಗೊಳಿಸಿ ಮುಂದುವರೆಯಬೇಕು.

ಕಸ ಕಟ್ಟಿಕೊಂಡ ಕೊಳವೆ ಎಂದೂ ತನ್ನ ಹಿಂದೆ ಬರುವ ಸಿಹಿ ನೀರನ್ನು ಮುಂದಕ್ಕೆ ಕಳಿಸಲಾಗದು, ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಿ ಮುಂದಕ್ಕೆ ಹೋಗಿ ಎಂದು ಹೇಳಲು ನಾ ಹಾಗೆ ಮಾಡಿದೆ

ಹನುಮ ಮತ್ತು ಕೃಷ್ಣ ಮಂಜಿನಗಡ್ಡೆ ರೀತಿ. ಮಂಜಿನಗಡ್ಡೆ ಕಷ್ಟ, ಕೋಪ ಎನ್ನುವ ಬಿಸಿಲಿಗೆ ಕರುಗುತ್ತದೆ, ಅಹಂ ಎನ್ನುವ ನೀರಾಗಿ ಬೇರೆ ಕಡೆಗೆ ಹರಿಯುತ್ತದೆ, ಮತ್ತೆ ತಂಗಾಳಿ ಎನ್ನುವ ಸ್ನೇಹದ ಸಂಕೊಲೆಗೆ ಗಟ್ಟಿಯಾಗಿ ಮಂಜಾಗುತ್ತದೆ, ಹೀಗಿರುವಾಗ ಹನುಮ ಮತ್ತು ಕೃಷ್ಣನ ಮಧ್ಯೆ ಬಂದ ಮುನಿಸು ಕೇವಲ ಕ್ಷಣ ಮಾತ್ರ.. ಹಾಗಾಗಿ ಅವರ ಸ್ನೇಹದ ಜ್ಯೋತಿ ಆರದೆ ಉರಿಯುತ್ತಲೇ ಇತ್ತು.

ಒತ್ತಡ ಅಥವಾ ಪರಿಸ್ಥಿತಿ ನಮ್ಮನ್ನು ಬದಲಿಸಿದರೂ, ನಾವು ನಮ್ಮ ಮೂಲ ಗುಣವನ್ನು ಬದಲಿಸಿಕೊಳ್ಳಬಾರದು..

ಅರಳಿ ಎಲೆಯನ್ನು ನೀ ನೋಡಿದ್ದೀಯ ಅಲ್ಲವೇ, ಒಂದು ಕೊನೆಯಿಂದ ಒಂದಾಗಿ ಶುರುವಾಗುತ್ತದೆ, ನಿಧಾನವಾಗಿ ಅರಳಿ ಕವಲಾಗುತ್ತದೆ, ನಂತರ ಮತ್ತೆ ಒಂದಾಗಿ ಮುಂದೆ ಸಾಗುತ್ತದೆ. ಹನುಮ ಮತ್ತು ಕೃಷ್ಣನ ಸ್ನೇಹ ಕೂಡ ಹಾಗೆಯೇ ಒಂದಾಗಿ ಸೇರಿತ್ತು, ಕಾರಣಾಂತರಗಳಿಂದ ಕವಲಾಯಿತು ಮತ್ತೆ ಒಂದಾಯಿತು.

ಬದುಕು ಕವಲಾಗಬಹುದು, ಆದರೆ ಕವಲೇ ಬದುಕಾಗಬಾರದು

ಒಂದು ಬಾಣ ತನ್ನ ಮೊನಚನ್ನು ಕಳೆದುಕೊಂಡಾಗ, ಮತ್ತೆ ಅದನ್ನು ಸಾಣೆ ಹಿಡಿದು ಮೊನಚು ಮಾಡುತ್ತಾರೆ, ಆಗ ಬಾಣಕ್ಕೆ ಅರಿವಾಗುತ್ತದೆ, ಹೌದು, ನಾ ತೀಕ್ಷ್ಣತೆ ಕಳೆದುಕೊಂಡಾಗ, ಮತ್ತೆ ನನ್ನನ್ನು ಮರಳಿ ಯಥಾಸ್ಥಾನಕ್ಕೆ ತರುತ್ತಾರೆ, ಹಾಗೆಯೇ ಬಿಲ್ಲಿನ ಹೆದೆ ಬಾಗಿದಾಗ ಮಾತ್ರವೇ ಬಾಣ ಮುಂದಕ್ಕೆ ಹೋಗಿ ಗುರಿ ಮುಟ್ಟಲು ಸಾಧ್ಯ.. ಬಿಲ್ಲು ಬಾಣ ಜೊತೆಯಾಗಿದ್ದಾಗ ಮಾತ್ರ ಎರಡಕ್ಕೂ ಬೆಲೆ ಎನ್ನುವ ರೀತಿಯಲ್ಲಿ  ಹನುಮ ಮತ್ತು ಕೃಷ್ಣ ಇಬ್ಬರಿಗೂ ಕೊಂಚ ಸಮಯ ದೂರಾಗಿದ್ದಾಗ,  ತಮ್ಮ ತಮ್ಮ ಸ್ನೇಹದ ಬೆಲೆ ಅರಿವಾಯಿತು.. ಮತ್ತೆ ಬಿರುಕು ಮೂಡಲು ಸಾಧ್ಯವೇ ಇಲ್ಲ ಎನ್ನುವಂತೆ ಸ್ನೇಹದ ಸಂಕೋಲೆಯಲ್ಲಿ ಮುಂದುವರೆದರು.

ಬಿಲ್ಲಿನ ಹೆದೆ ಎಂಬ ಕಷ್ಟಗಳು ನಮ್ಮನ್ನು ಬಾಗಿಸುವಂತೆ ಆ ಕ್ಷಣದಲ್ಲಿ ಬಾಗಬೇಕು  ಆಗಲೇ ಗುರಿ ಎನ್ನುವ ಮೊನಚಾದ ಬಾಣ ತನ್ನ ಸ್ಥಾನವನ್ನು ಸೇರಲು ಸಾಧ್ಯವಾಗುವುದು.

ಬೇತಾಳ ಇಷ್ಟೂ ಉತ್ತರಗಳನ್ನು ಕೇಳಿ, ವಿಕ್ರಮನ ಬೆನ್ನನ್ನು ಏರಿ, ಶಭಾಶ್ ವಿಕ್ರಮ, ಕಥೆ ನೀ ಹೇಳಿದೆ, ಅದನ್ನು ನಾ ಮುಂದುವರೆಸಿದೆ, ಮತ್ತೆ ನೀ ನನ್ನ ಸಂದೇಹಗಳನ್ನ ನಿವಾರಿಸಿದೆ. ನಮ್ಮಿಬ್ಬರ ಗೆಳೆತನ ಒಂದು ಮಾದರಿಯಾಗುತ್ತದೆ. ಸಂಕಷ್ಟ ಎನ್ನುವ ಬೇತಾಳವನ್ನು ನೀ ಹೊತ್ತು ತರುವೆ.. ನಾ ನಿನಗೆ ಕಷ್ಟದ ಅರಿವಾಗಬಾರದು ಎಂದು ತುಂಟತನ, ಹಾಸ್ಯ ಮಾಡುವೆ, ಅದರಿಂದ ನಿನಗೂ ಖುಷಿ ನನಗೂ ಸಂತೋಷ..

ಹೌದು ಬೇತಾಳ ನಮ್ಮಿಬ್ಬರ ಗೆಳೆತನ ಕೃಷ್ಣ ಹನುಮನ ಸ್ನೇಹದಂತೆ ಸದಾ ಬೆಳಗುತ್ತಲಿರಲಿ ಎಂದು ಹೇಳಿದ್ದೆ ತಡ ಬೇತಾಳ ಸೊಯ್ಯ್ ಎಂದು ಹಾರಿ ತೇಲುತ್ತಾ ಎದುರಿಗೆ ಇದ್ದ ಹುಣಿಸೆ ಮರಕ್ಕೆ ಜೋತು ಬಿದ್ದಿತು.


Thursday, May 5, 2016

ಪಾಸಿಟೀವ್ ಫೋಟೋ.....!

ಒಂಭತ್ತನೇ ತರಗತಿ ಮೊದಲ ಹಂತದ ಪರೀಕ್ಷೆ 

ಮೊದಲಿಂದಲೂ ಓದು ಆ ಪಾಟಿ  ಹತ್ತುತ್ತಲೇ ಇರಲೇ ಇಲ್ಲ  ನನ್ನ ತಲೆಗೆ ಹೋದಷ್ಟು ಓದಿ,.. ಪರೀಕ್ಷೆ ಕೊಠಡಿಗೆ ಬಂದೆ..

ಇಬ್ಬರು ಒಂಭತ್ತನೇ ತರಗತಿ ಪರೀಕ್ಷೆ ಬರೆಯುವವರ ಮಧ್ಯೆ ಒಬ್ಬ ಎಂಟನೆ ಅಥವಾ ಹತ್ತನೇ ತರಗತಿ ವಿಧ್ಯಾರ್ಥಿಯನ್ನು  ಕೂರಿಸುತ್ತಿದ್ದರು. 

ನನ್ನ ಗೆಳೆಯ ಬಂದು, "ಆಲ್ ದಿ ಬೆಸ್ಟ್ ಕಣೋ ಶ್ರೀಕಾಂತಾ" ಅಂದ.. 

" ಅಯ್ಯೋ ಬಿಡು..ಏನೇ ಆದರೂ ಓದು ಹತ್ತಿಲ್ಲ ಬರೆಯೋದು ಕಷ್ಟ.. ಹಣೆ ಬರಹ" ಅಂತ ನಕರಾತ್ಮಕವಾಗಿ ಉತ್ತರಿಸಿದೆ 

ನನ್ನ ಹಿಂದೆ ಬೆಂಚಲ್ಲಿ ಕೂತಿದ್ದ ನನ್ನ ಸಹಪಾಟಿ ನಗುಮೊಗದ "ಕೆ. ಸುಕುಮಾರ್" .." ಒಬ್ಬರು ವಿಶ್ ಮಾಡಿದಾಗ ಹಾಗೆ ತಗೋ..ಒಳ್ಳೆಯದಾಗುತ್ತೆ" ಅಂದ.. 

(ನನ್ನ ಇಡಿ ಪ್ರೌಢ ಶಾಲಾ ದಿನಗಳಲ್ಲಿ ಅದೇ ಮೊದಲು ಮತ್ತು ಅದೇ ಕಡೆ ಅನ್ನಿಸುತ್ತೆ ಸುಕುಮಾರ್ ಜೊತೆ ನಾನು ಮಾತಾಡಿದ್ದು. ಅವನು ತುಂಬಾ ಕಡಿಮೆ ಮಾತಾಡುತ್ತಿದ್ದ. ನನ್ನ ಕೀಳರಿಮೆ ಜಗತ್ತಿಗೆ ಹಂಚುವಷ್ಟು ಇತ್ತು ಆ ದಿನಗಳಲ್ಲಿ.. ಹಾಗಾಗಿ ನಾ ಮೂಕ ಪ್ರೇಕ್ಷಕ ಶಾಲೆಯಲ್ಲಿ)

ಸುಕುಮಾರ್ ನಗು ನಗುತ್ತಾ ಹೇಳಿದ ಮಾತು ತುಂಬಾ ತುಂಬಾ ಪರಿಣಾಮ ಬೀರಿತು.. ಯಾಕೇ  ಕಾರಣ ಗೊತ್ತಿಲ್ಲ?. 

"ಸರಿ ಕಣೋ" ಅಂತ ಅಷ್ಟೇ ನಾ ಹೇಳಿದ್ದು. 

ವಿಜ್ಞಾನ ವಿಷಯ, ಸರಿಯಾಗಿ ಓದಿರಲಿಲ್ಲ (ಅಥವಾ ತಲೆಗೆ ಹತ್ತಿರಲಿಲ್ಲ).. ಅವನು ಹೇಳಿದ ಮಾತನ್ನೇ ಮೆಲುಕು ಹಾಕುತ್ತಾ.. ಹಾಗೇ ಪರೀಕ್ಷೆ ಬರೆದೆ. 

ಎಲ್ಲಾ ಪರೀಕ್ಷೆ  ಮುಗಿದು ನಮ್ಮ ಅಧ್ಯಾಪಕರು ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ಎಲ್ಲರಿಗೂ ಕೊಟ್ಟಾಗ, ನನಗೆ ಆಶ್ಚರ್ಯ.. ಲಾಗ ಹೊಡೆದರೂ ಪಾಸಾಗುವಷ್ಟು ಅಂಕ ಪಡೆದುಕೊಳ್ಳಲು ಒದ್ದಾಡುತ್ತಿದ್ದ ನಾನು, ಆ ತರಗತಿ ಪರೀಕ್ಷೆಯಲ್ಲಿ ಪಾಸು ಮಾಡುವ ಅಂಕಕ್ಕಿಂಥ ೫ ಅಂಕಗಳು ಹೆಚ್ಚಾಗಿಯೇ ಬಂದಿದ್ದವು. 


ಪ್ರಾಯಶಃ ನನ್ನ Positive Atttitude ಶುರು ಆಗಿದ್ದು ಅಲ್ಲಿಂದ ಇರಬಹುದು. 

ನಂತರದ ಕಾಲೇಜು, ವೃತ್ತಿಜೀವನದಲ್ಲಿ ಏಳು ಬೀಳುಗಳು ಇದ್ದರೂ, ಹಲವಾರು ಬಾರಿ ನನ್ನ ಕೀಳರಿಮೆ ಕೋಟೆಯೊಳಗೆ ನಾನೇ ಬಂಧಿಯಾಗಿದ್ದರೂ, ಇದರಿಂದ ಹೊರಗೆ ಬರುವ ಪ್ರಯತ್ನ .. ಪ್ರಾಯಶಃ ಆ ನನ್ನ ಗೆಳೆಯ ಸುಕುಮಾರ್ ಹೇಳಿದ ಒಂದು ಮಾತಿಂದ ಶುರುವಾಗಿತ್ತೋ ಏನೋ. 

ಈಗ ನನ್ನ ಪರಿಸ್ಥಿತಿ ಹೇಗಿದೆ ಅಂದರೆ, ನಾನು ಋಣಾತ್ಮಕವಾಗಿ ಅಥವಾ ನೆಗೆಟಿವ್  ಆಗಿ ಯೋಚಿಸಬೇಕು ಎಂದರೂ, ನನಗೆ ಆಗುತ್ತಿಲ್ಲ.. ಅಥವಾ ನನಗೆ ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕೀಳರಿಮೆ, ನೆಗೆಟಿವ್ ಯೋಚನೆಗಳಿಂದ ಮುಕ್ತನಾಗಿದ್ದೇನೆ. 

ಕೆಲವೊಮ್ಮೆ ಮತ್ತೆ ಅದೇ ಆಳಕ್ಕೆ ಬಿದ್ದರೂ, ಮೇಲೆ ಏಳಲಾಗದಷ್ಟು ಆಳಕ್ಕೆ ಬೀಳದೆ ಇರುವಂತೆ ನನ್ನ ಧನಾತ್ಮಕ ಶಕ್ತಿ  ನನ್ನನ್ನು ಮೇಲಕ್ಕೆ ಎತ್ತುತ್ತದೆ. 

ಕೆಲವೊಮ್ಮೆ ಒಂದು ಮಾತು ಹೇಗೆ ಬದಲಾವಣೆಯ ದಾರಿಗೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಸುಕುಮಾರ್ ಹೇಳಿದ ಒಂದು ಮಾತು ಸಾಕ್ಷಿ ಎನ್ನಿಸುತ್ತದೆ. 

ನಾಗರಹೊಳೆ ಚಿತ್ರದಲ್ಲಿ ಬರುವ ಹಾಡಿನಂತೆ "ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ.. ಮುಂದೆ ನುಗ್ಗಿ ಹೋದ್ರೆ ತಾನೇ ದಾರಿ ಕಾಣೋದ್ ನಮಗೆ.. . " ಮುನ್ನುಗ್ಗು ಶ್ರೀ ಎಂದು ನನ್ನ ಅಂತರಾತ್ಮ ಸದಾ ಎಚ್ಚರಿಸುತ್ತಿರುತ್ತದೆ. 

ನನಗೆ ಯಾವಾಗಲೂ ಸ್ಫೂರ್ತಿ ಕೊಡುವ ದೃಶ್ಯ ಅಂದರೆ.. ತನಗೆ ಅರಿಯದೆ ತಾನೇ ತೊಳಲಾಡುವ ಪಾತ್ರದಲ್ಲಿ  ಅಣ್ಣಾವ್ರು        "ಕಾಮನ ಬಿಲ್ಲು" ಚಿತ್ರದಲ್ಲಿ  ಸ್ನೇಹಿತನ ಒಂದು ಸಾಂತ್ವನದ ಮತ್ತು ಪ್ರೋತ್ಸಾಹಕರ ಮಾತಿಗೆ ಮಣಿದು ಸ್ಪೂರ್ತಿಗೊಂಡು ತನ್ನ ಮನೆಯಲ್ಲಿನ ಬಡತನವನ್ನು, ದಾರಿದ್ರ್ಯವನ್ನು ತೊಡೆದಾಕಲು ಮುನ್ನುಗ್ಗುವುದು.  ಒಂದು ಕ್ಷಣ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.. ಈ ದೃಶ್ಯ ಮುಗಿದ ನಂತರ ಅರೆ.. ಅಸಾಧ್ಯ ಎನ್ನುವ ಮಾತೆ ಇಲ್ಲ.. ನುಗ್ಗೋಣ.. ನುಗ್ತೀನಿ ಎನುತ್ತ ಮನಸ್ಸು ಸಿದ್ಧವಾಗಿಬಿಡುತ್ತದೆ. 

ಯಾರೋ ಒಬ್ಬರು ಯಾಕೆ ಮತ್ತು ಹೆಂಗೆ ಶ್ರೀ ಇಷ್ಟೊಂದು ಪಾಸಿಟೀವ್ ಯೋಚನೆಗಳು ಸಾಧ್ಯ ಎಂದಾಗ ತಲೆಗೆ ಬಂದ್ದದ್ದು ಮೂವತ್ತು ವರ್ಷಗಳ ಹಿಂದೆ ನಡೆದಿದ್ದ ಒಂದು ಚಿಕ್ಕ ಘಟನೆ... 

Monday, March 7, 2016

ಜನುಮದಿನಕ್ಕೆ ಶುಭಾಶೀರ್ವಾದ .. ಶಿವಾರ್ಪಣ ಮಸ್ತು!!!

ಅಣ್ಣಾವ್ರ ಭಕ್ತ ಕುಂಬಾರ ಚಿತ್ರ ಬಾರಿ ಬಾರಿ ನೆನಪಿಗೆ ಬರುತ್ತಿತ್ತು.

ಕಳೆದ ವಾರವಷ್ಟೇ ನನ್ನ ಜನುಮದಿನಕ್ಕೆ ಸಾಗರೋಪಾದಿಯಾಗಿ ಹರಿದು ಬಂದ ಶುಭಾಶಯಗಳ ನೆರೆ ನನ್ನ ಮನವನ್ನು ತೋಯಿಸಿತ್ತು. ನನ್ನ ಕೈಲಾದ ಮಟ್ಟಿಗೆ ಪ್ರತಿ ಸಂದೇಶಕ್ಕೂ ಪ್ರತಿಕ್ರಿಯೆ ನೀಡಿದ್ದೆ. ಆದರೂ ಮನದಲ್ಲಿ ಯಾಕೋ ಖಾಲಿ ಖಾಲಿ ಅನುಭವ. ಇನ್ನೂ ಏನೋ ಹೇಳಬೇಕಿತ್ತು ಅನ್ನುವ ಭಾವ ಕಾಡುತ್ತಿತ್ತು.

ಇಂದು ಶಿವರಾತ್ರಿ. ಕಳೆದ ವಾರವಷ್ಟೇ ನನ್ನ ಮನೆಗೆ ಅಮ್ಮ ಬಂದಿದ್ದರು. ನೀನು ಶಿವರಾತ್ರಿ ಹಿಂದಿನ ದಿನ ಹುಟ್ಟಿದ್ದು. ನೀನು ಹುಟ್ಟಿದೆ, ನಿನ್ನ ಮುತ್ತಜ್ಜಿಗೆ ಮೂರು ದಿನ ಉಪವಾಸ ಎಂದಿದ್ದರು. ಇದರ ಬಗ್ಗೆ ಎರಡು ವರ್ಷದ ಹಿಂದೆ ಬರೆದಿದ್ದೆ. ಅಮ್ಮನಿಗೆ ಹೆರಿಗೆ ನೋವು ಶುರುವಾಗಿತ್ತು. ಅಂದಿನ ದಿನ ರಾತ್ರಿ ಪೂರ ನನ್ನ ಮುತ್ತಜ್ಜಿ ನಿದ್ದೆ ಗೆಟ್ಟು ತಾಯಿಯಿಲ್ಲದ ನನ್ನ ತಾಯಿಗೆ ತಾಯಿಯಾಗಿ ಉಪಚರಿಸಿದ್ದರು.

ನಾ ಭುವಿಗೆ ಬಂದ ದಿನ.. ಪುರುಡು ಕಾರಣಕ್ಕೆ ಆಚಾರ ವಿಚಾರ ಮಡಿ ಮಾಡುತ್ತಿದ್ದ ನನ್ನ ಮುತ್ತಜ್ಜಿ ಊಟವಿಲ್ಲದೆ ದಿನ ಕಳೆದಿದ್ದರು. ಮಾರನೆ ದಿನ ಶಿವರಾತ್ರಿ. ಮತ್ತೆ ಉಪವಾಸ. ಒಮ್ಮೆ ಮುತ್ತಜ್ಜಿ ನಗು ನಗುತ್ತಾ ಯಾವ ಸಮಯದಲ್ಲಿ ಭುವಿಗೆ ಬಂದೆಯೋ ಮೂರು ದಿನ ಉಪವಾಸ ನನಗೆ ಎಂದಿದ್ದರು.

ಇದೆಲ್ಲಾ ಹಾಗೆ ಕಣ್ಣ ಮುಂದೆ ಬಂದು ಹೋಯ್ತು.

ಕಚೇರಿಯಲ್ಲಿ ಲೆಕ್ಕ ಪತ್ರ ಪರಿಶೀಲನೆ ಕಾರಣ ಅಧಿಕ ಕೆಲಸದ ಒತ್ತಡ. ಕಳೆದ  ಒಂದು ತಿಂಗಳಿಂದ ಎಡಬಿಡದೆ ಶನಿವಾರ ಭಾನುವಾರ ಎನ್ನದೆ ಕಚೇರಿಗೆ ಹೋಗಿದ್ದೆ. ದಣಿವಾಗಿರಲಿಲ್ಲ ಆದರೆ ಉತ್ಸಾಹ ಕಡಿಮೆಯೇನೋ ಅನ್ನಿಸಿತು. ಆಗ ಅಣ್ಣಾವ್ರ ಶಂಕರ್ ಗುರು ಚಿತ್ರದ ಸಂಭಾಷಣೆ ನೆನಪಿಗೆ ಬಂತು.

"ವಿಶ್ರಾಂತಿ ಬೇಕಾಗಿರುವುದು ದೇಹಕ್ಕಲ್ಲ ಮನಸ್ಸಿಗೆ ಮನಸ್ಸಿಗೆ..... "

ಅದನ್ನೇ  ಅರಸಿಕೊಂಡು ಇಂದು ಸಂಜೆಮನೆಯ ಹತ್ತಿರ ಇರುವ ಕಾಶಿ ವಿಶ್ವಾನಾಥನ ಗುಡಿಗೆ ಹೋದೆ. ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳು ಸರತಿಯಲ್ಲಿ ನಿಂತು ಕಾಯುತ್ತಿದ್ದರು. ನಾನು ನಿಂತೇ.

ಮನಸ್ಸಲ್ಲೇ ಭಕ್ತ ಕುಂಬಾರ ಚಿತ್ರದ ದೃಶ್ಯ ಓಡುತ್ತಿತ್ತು. ಸಂತ ನಾಮದೇವರು ಗೋರನ ಮಾತಿಂದ ಕೋಪಗೊಂಡು ಹೊರಗೆ ಬಂದಾಗ, ಒಂದು ದೇಗುಲದಲ್ಲಿ ಶಿವಲಿಂಗದ ಮೇಲೆ ಕಾಲನ್ನಿಟ್ಟು ಮಲಗಿದ್ದ ಒಬ್ಬ ಸಂತನನ್ನು ಕಂಡು ಕೋಪದಿಂದ ಬಯ್ಯುತ್ತಾರೆ. ಆಗ ಆ ವೃದ್ಧ ಸಂತ, ಶಿವನಿಲ್ಲದ ಜಾಗದಲ್ಲಿ ನನ್ನ ಕಾಲನ್ನಿಡು ಎಂದು ಹೇಳುತ್ತಾರೆ. ಆದರೆ ಪ್ರತಿ ತಾಣದಲ್ಲೂ ಶಿವ ಕಾಣುತ್ತಾನೆ, ಕಡೆಗೆ ಸೋತು ಮುಖ ಹಾಕಿಕೊಂಡು ಅಜ್ಞಾನ, ಅಹಂಕಾರ ತುಂಬಿಕೊಂಡ ನನ್ನ ತಲೆಯೇ ಶಿವನಿಲ್ಲದ ತಲೆ ಎಂದು ಸಾಧುವಿನ ಕಾಲನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ ಮತ್ತು ಗುರು ಕಟಾಕ್ಷದಿಂದ ಪುನೀತನಾಗುತ್ತಾನೆ.

ಹಾಗೆ ನನ್ನ ಮನಸ್ಸು ಹೇಳುತ್ತಿತ್ತು, ಶಿವನೆ, ನನ್ನ ಇಷ್ಟ ಪಡುವ, ಪ್ರೀತಿಸುವ ಅನೇಕ ನೂರಾರು ಹೃದಯವಂತ ಸ್ನೇಹಿತರಿದ್ದಾರೆ, ಇವರ ಸ್ನೇಹ, ಪ್ರೀತಿಗಳಿಂದ ನನಗೆ ಅಹಂ ಬರದೆ, ನೀ ನನ್ನ ಮನದಲ್ಲಿ ತಲೆಯಲ್ಲಿ ಯಾವಗಾಲೂ ನೆಲೆಸಿರುವ ತಂದೆ ಎಂದು ಬೇಡಿಕೊಂಡು ದೇಗುಲದೊಳಗೆ ಹೋದೆ.

ನನಗೆ ತೋಚಿದಷ್ಟು ಮಂತ್ರಗಳನ್ನು ಹೇಳಿಕೊಂಡು ಶಿವನಿಗೆ ನಮಸ್ಕರಿಸಿ ಹೊರಬರಲು ಅನುವಾದಾಗ ಅರ್ಚಕರು ಸಿಕ್ಕರು. ನಗುಮೊಗದ ಅವರನ್ನು
"ಚೆನ್ನಾಗಿದ್ದೀರಾ ಗುರುಗಳೇ"  ಎಂದೇ.
"ನಮಸ್ಕಾರ ಚೆನ್ನಾಗಿದ್ದೀರಾ? ಎಲ್ಲಿ ನಿಮ್ಮ ಮನೆಯವರು ಬರಲಿಲ್ಲ"
"ಬೆಳಿಗ್ಗೆ ಬಂದು ಪೂಜೆ ಮಾಡಿಸಿಕೊಂಡು ಹೋದರು" ಎಂದೇ
ಸ್ವಲ್ಪ ಹೊತ್ತು ಇಲ್ಲೇ ನಿಲ್ಲಿ ಎಂದು ಗರ್ಭ ಗುಡಿಯ ಒಳಗೆ ಹೋದರು.
ನಾ ಅಲ್ಲೇ ಧ್ಯಾನಿಸುತ್ತಾ ನಿಂತೇ.
ತಗೊಳ್ಳಿ ಪ್ರಸಾದ ಎಂದು ನನಗೆ ಇಷ್ಟವಾದ ಗೊಜ್ಜು ಅವಲಕ್ಕಿ ಮತ್ತು ಪ್ರಸಾದ ಎಂದು ದೇವರಿಗೆ ಅರ್ಚಿಸಿದ್ದ ಹೂವನ್ನು ಕೊಟ್ಟರು. ನಾ ಆಶ್ಚರ್ಯಚಕಿತನಾದೆ. ಭಕ್ತಿ ಪೂರ್ವಕವಾಗಿ ಅವರಿಗೆ ಪ್ರವರ ಹೇಳಿ ನಮಸ್ಕರಿಸಿದೇ.

ಹೊರಗೆ ಬಂದೆ.. ದೇವ ನಾ ಒಂದು ಚಿಕ್ಕ ಕೋರಿಕೆಯನ್ನು ಕೇಳಿದೆ.. ನೀ ಪ್ರಸಾದ ರೂಪದಲ್ಲಿ ಕರುಣಿಸಿದ್ದೀಯ.. ನಿನ್ನ ಮಹಿಮೆ ಅಪಾರ ಎಂದು ಮನದಲ್ಲೇ ಗುನುಗುನಿಸಿತು.

ಮನಸ್ಸು ಹಾಗೆ ಮಾರ್ಗಶಿರ ಮಾಸವಾದರೂ ಅಣ್ಣಾವ್ರ ಶ್ರಾವಣ ಬಂತು ಚಿತ್ರದ ಹಾಡು ನೆನಪಿಗೆ ಬಂತು.
"ಆ ಮಂಜುನಾಥನ ಕೃಪಾಕಟಾಕ್ಷವು ಎಂದೆಂದೂ ನಿಮಗಿರಲಿ"

ಹೊರಗೆ ಬಂದೆ,

ಕತ್ತೆತ್ತಿ ನೋಡಿದೆ. ದೇವಸ್ಥಾನದ ಮೇಲೆ ಮಂಜುನಾಥ ವಿಶಾಲಾಕ್ಷಿ ಅರ್ಥಾತ್ ಶಿವ ಪಾರ್ವತೀ ಪ್ರತಿಮಾ ರೂಪದಲ್ಲಿ ನಿಂತಿದ್ದರು. ಯಾಕೋ ಮತ್ತೆ ಇನ್ನಷ್ಟು ಕತ್ತನ್ನು ಆನಿಸಿ ನೋಡಿದೆ.. ಮಂಜುನಾಥ ಕೂಡ ಅಂದರೆ ನನ್ನ ಅಣ್ಣ (ಅಪ್ಪ) ನಿಂತು ಮುಗುಳು ನಕ್ಕರು.

ಅಣ್ಣಾವ್ರ ಸಂಭಾಷಣೆ ನೆನಪಿಗೆ ಬಂತು "ನಿಮ್ಮನ್ನು ಪಡೆದ ನನ್ನ ಜನ್ಮ ಸಾರ್ಥಕ ಸಾರ್ಥಕ"  ಇದನ್ನು ನನ್ನ ಮನಸ್ಸು ನನ್ನ ಮನಸ್ಸಿನ ಶಿವ ಅಂದರೆ ನನ್ನ ಅಣ್ಣ(ಪ್ಪ) ಮಂಜುನಾಥ್ ಕೂಗಿ ಕೂಗಿ ಹೇಳಿತು.

ತಿಥಿ ನಕ್ಷತ್ರದ ಪ್ರಕಾರ ಹುಟ್ಟು ಹಬ್ಬಕ್ಕಾಗಿ ಶಿವನ ಪ್ರಸಾದ ಈ ರೀತಿಯಲ್ಲಿ ಬಂದದ್ದು ನನ್ನ ಬದುಕು ಸಾರ್ಥಕ ಎನ್ನಿಸಿತು. ಒಂದು ದಿಟ್ಟ ಹೆಜ್ಜೆ ಇಡಲು ಇಂದಿನ ದಿನ ನನಗೆ ಸ್ಫೂರ್ತಿ ನೀಡಿದ್ದು ದೃಷ್ಟಿ ಯಾಗಬಾರದೆಂದು ಪಾರ್ವತೀ ಹೇಳಿದಳು ಶ್ರೀಕಾಂತ ನಿನ್ನ ಏಳಿಗೆಗೆ "ಚಷ್ಮೆ ಬದ್ದೂರ್" ಅಲಿಯಾಸ್ ದೃಷ್ಟಿ ಬೀಳದಿರಲಿ ಎಂದು.

ನನ್ನ ಮನ ಹೇಳಿತು... ನನ್ನ ಮೇಲೆ ವಿಶ್ವಾಸ ಪ್ರೀತಿಯಿಂದ ಸ್ನೇಹದ ಸಂಕೋಲೆಯನ್ನು ತೊಡಿಸಿ ಶುಭಕೋರಿದ ಎಲ್ಲಾ ಶುಭಹಾರೈಕೆಗಳು ನನ್ನ  ಶಿವನಿಗೆ "ಅರ್ಪಿತ"ವಾಯಿತು!!!!

Tuesday, January 5, 2016

ಹರಿಣಿ ಅಮ್ಮ ಎನ್ನುವ ಅಕ್ಷರಶಃ ಜಿಂಕೆಯಂಥಹ ಉತ್ಸಾಹದ ಚಿಲುಮೆ

ವಸಿಷ್ಠ ವಿಶ್ವಾಮಿತ್ರ ಯಥಾ ಪ್ರಕಾರ ವಾದ ವಾಗ್ವಾದದಲ್ಲಿ ತೊಡಗಿದ್ದರು.. ಇಬ್ಬರೂ ಸಾಧಕರೆ. ಒಬ್ಬ ಶಾಂತ ಸ್ವಭಾವ, ಇನ್ನೊಬ್ಬರದು ಹಠ ಸ್ವಭಾವ. ತಮ್ಮ ತಪಶಕ್ತಿಯಿಂದ ಬ್ರಹ್ಮರ್ಷಿಗಳಾದವರು.

ವಿಶ್ವಾಮಿತ್ರರದು ಒಂದೇ ವಾದ "ಭೂಲೋಕದಲ್ಲಿ ಯಾಕೆ ಹೀಗೆ.  ಯಾಕೆ ಒಬ್ಬರನ್ನು ಒಬ್ಬರು ಇಷ್ಟು ಹಚ್ಚಿಕೊಳ್ಳುತ್ತಾರೆ. ನಮ್ಮ ತರಹ ಕಾರ್ಯೇಷು ತಸ್ಮೈ ನಮಃ ಎಂದು ಯಾಕೆ ಇರೋಲ್ಲ. ಒಬ್ಬರನ್ನು ಒಬ್ಬರು ಇಷ್ಟಪಡುತ್ತಾರೆ, ಗೌರವಿಸುತ್ತಾರೆ, ಮಾತಾಡದೆ ಇರಲಾರೆ, ನೋಡದೆ ಬದುಕಲಾರೆ ಎನ್ನುವಷ್ಟು ಪ್ರೀತಿ ವಿಶ್ವಾಸ ತೋಡಿಕೊಳ್ಳುತ್ತಾರೆ., ಒಮ್ಮೆಲೆ ಮರೆಯಾದ ಮೇಲೆ ಬಳಲುತ್ತಾರೆ, ತೊಳಲಾಡುತ್ತಾರೆ, ಒದ್ದಾಡುತ್ತಾರೆ, ಮರುಗುತ್ತಾರೆ, ಜೀವನದ ಅಂತ್ಯಕ್ಕೆ ಬಂದು ಬಿಟ್ಟಿದ್ದೇವೆ ಎನ್ನುತ್ತಾರೆ, ಯಾಕೆ ಹೀಗೆ"

ವಸಿಷ್ಠ ಮಹರ್ಷಿ "ವಿಶ್ವಾಮಿತ್ರರೆ.. ನಿಮ್ಮ ಸಂದೇಹಕ್ಕೆ ನಾ ಉತ್ತರ ಕೊಡುವೆ.. ಆದರೆ ಅದಕ್ಕೆ ಮುಂಚೆ ನೀವು ಈ ಕಥೆಯನ್ನೊಮ್ಮೆ ಕೇಳಿ, ನಂತರ ನಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಆಮೇಲೆ ನಿಮಗೆ ಬೇಕಾದ ವಿವರ ಕೊಡುವೆ"

"ಆಗಲಿ, ಹಾಗೆ ಆಗಲಿ" ತಮ್ಮ ಕಮಂಡಲ, ಬ್ರಹ್ಮ  ದಂಡವನ್ನು ಪಕ್ಕಕ್ಕೆ ಇತ್ತು, ವಸಿಷ್ಠರ ಮುಖವನ್ನೇ ನೋಡುತ್ತಾ ಕಥೆಗಾಗಿ ತೀವ್ರತೆಯಿಂದ ಮಾತುಗಳನ್ನು ಕೇಳಲು ಅಣಿಯಾಗುತ್ತಾರೆ. 

"ಒಂದೂರಿನಲ್ಲಿ ಒಬ್ಬ ರಾಜ ಇದ್ದ.. ಅವನಿಗೆ ತನ್ನ ಪ್ರಜೆಗಳ ಮೇಲೆ ಅಪಾರ ಮೋಹ, ಬೇರೆ ಊರಿನಿಂದ ಯಾವುದೇ ಪ್ರಜೆ ತನ್ನ ಊರಿಗೆ ಬಂದರೂ.. ರಾಜ ಸಹಿಸುತ್ತಿರಲಿಲ್ಲ, ಆದರೆ ಶಿಕ್ಷಿಸುತ್ತಿರಲಿಲ್ಲ, ಬದಲಿಗೆ ತನ್ನ ಊರಿನ ರೀತಿ ರಿವಾಜು, ಉಡುಗೆ ತೊಡುಗೆ ಆಹಾರ ವಿಚಾರಗಳನ್ನು ವಿವರವಾಗಿ ತಾನೇ ಖುದ್ದಾಗಿ ತಿಳಿಸಿ ಅವರನ್ನು ತನ್ನ ಊರಿನ ನೀತಿ ನಿಯಮಗಳಿಗೆ ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತಿದ್ದ, ಹೀಗೆ ಬೇರೆ ಊರಿನಿಂದ ಯಾರೇ ಬಂದರೂ ಕೆಲವೇ ವಾರಗಳಲ್ಲಿ ಅವರು ಈ ಊರಿನಲ್ಲಿಯೇ ಹುಟ್ಟಿದ್ದಾರೆನೋ ಅನ್ನುವಷ್ಟು ಬದಲಾಗಿಬಿಡುತ್ತಿದ್ದರು. 

"ಅಲ್ಲಿನ ಪ್ರಜೆಗಳು ಅಷ್ಟೇ, ಆ ರಾಜನನ್ನು ತಮ್ಮ ಮನೆಯ ಹಿರಿಯ ಎಂಬ ಭಾವನೆಯಲ್ಲಿಯೇ ಆದರಿಸುತ್ತಿದ್ದರು.  ಆ ಊರಿನಲ್ಲಿ ಭಯ ಎಂಬ ಪದಕ್ಕೆ ಅರ್ಥವೇ ಇರಲಿಲ್ಲ, ಬದಲಿಗೆ ಪ್ರೀತಿ,  ಮಮತೆ,  ವಿಶ್ವಾಸ, ಕರುಣೆ ತುಂಬಿತುಳುಕಾಡುತ್ತಿತ್ತು. ಕಾರಣ ರಾಜನೇ ಅದಕ್ಕೆ ಆ ಎಲ್ಲಾ ಗುಣಗಳಿಗೆ ಯಜಮಾನನಾಗಿದ್ದ.  ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಆ ಓರೆ ಒಂದು ಕರುಣೆಯ ಬೀಡಾಗಿತ್ತು"

"ಹೀಗಿರುವಾಗ ಒಮ್ಮೆ ರಾಜನ ಆಸ್ಥಾನಕ್ಕೆ ದೂರದ ದೇಶದಿಂದ ವಿದ್ವಾಂಸ ಬಂದು, ರಾಜನನ್ನು ಮತ್ತು ಅಲ್ಲಿನ ಸಭಿಕರನ್ನು ಪರೀಕ್ಷಿಸಲು ಅನುವಾದ. ಆಗ ರಾಜನು ಎದ್ದು ನಿಂತು, ಪಂಡಿತರೆ, ನೀವು ಎಲ್ಲರನ್ನು ಪರೀಕ್ಷಿಸುವ ಬದಲು, ಒಂದು ತಪ್ಪಲೆಯಲ್ಲಿ ಅನ್ನದ ಅಗುಳು ಬೆಂದಿದೆಯೇ ಎಂದು ನೋಡಲು, ಒಂದು ಅಗುಳನ್ನು ಪರೀಕ್ಷಿಸುವಂತೆ, ಒಬ್ಬರನ್ನು  ಪರೀಕ್ಷಿಸಿ ಸಾಕು, ನಂತರವೂ ನಿಮಗೆ ಇತರರನ್ನು ಪರೀಕ್ಷಿಸಬೇಕು ಎನ್ನಿಸಿದರೆ ನನಗೆ ಅಡ್ಡಿಯಿಲ್ಲ"

"ನನಗೆ ನಿಮ್ಮ ಸವಾಲು ಒಪ್ಪಿಗೆ ಇದೆ ಮಹಾ ಪ್ರಭು, ಆ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇನೆ, ನೀವೇ ಆರಿಸಿ"

ರಾಜ, ತನ್ನ ಹಿರಿದಾದ ಕಣ್ಣುಗಳನ್ನು ಒಮ್ಮೆಲೇ ಎಲ್ಲಾ ಕಡೆ ಬೀರಿದ.. ನಿಧಾನಕ್ಕೆ ನೆಡೆದು ಬಂದು.. ಒಂದು ದೊಡ್ಡ ನಿಲುವುಗನ್ನಡಿಯ ಮುಂದೆ ನಿಂತು, ಪಂಡಿತರೆ, ಈ ಪ್ರತಿಬಿಂಬವೇ ನೀವು ಪರೀಕ್ಷಿಸಬೇಕಾದ ಅನ್ನದ ಅಗುಳು, ಬನ್ನಿ ದಯಮಾಡಿ ಬನ್ನಿ"

ಪಂಡಿತನಿಗೆ ಆಶ್ಚರ್ಯವಾದರೂ, ಅದನ್ನು ತೋರಗೊಡದೆ, ಹಲವಾರು ಪ್ರಶ್ನೆಗಳನ್ನು ಹಾಕಿದ!

"ವಿಶ್ವಾಮಿತ್ರರೆ, ಆ ಪ್ರಶ್ನೆಗಳು ಉತ್ತರಗಳು ಇಲ್ಲಿ ಅನವಶ್ಯಕ ಅನ್ನಿಸಿದ್ದರಿಂದ ಅದನ್ನು ಕಥೆಯಲ್ಲಿ ಹೇಳುತ್ತಿಲ್ಲ.. ಮುಂದುವರೆಸಲೇ"

"ಓಹೋ ಆಗಬಹುದು ಆಗಬಹುದು... ಮುಂದುವರೆಸಿರಿ ವಸಿಷ್ಠರೆ"

ಸರಿ.. ಸುಮಾರು ಘಂಟೆಗಳ ಕಾಲ ಪ್ರಶ್ನೋತ್ತರ ನಡೆದಮೇಲೆ, ಪಂಡಿತ ಮಂಡಿಯೂರಿ ರಾಜನ ಪ್ರತಿಬಿಂಬಕ್ಕೆ ನಮಸ್ಕರಿಸಿ, ರಾಜನ್, ನನ್ನದು ಮಹಾಪರಾಧವಾಯಿತು, ನಿಮ್ಮ ಪ್ರತಿಬಿಂಬವೇ ಇಷ್ಟು ಪ್ರಚಂಡ ಅಂದ ಮೇಲೆ, ನೀವು, ನಿಮ್ಮ ಸಭಿಕರು, ರಾಜ್ಯದ ಪ್ರಜೆಗಳು ಆಹಾ... ನಾ ಹೋಗಿಬರುವೆ.. ಎಂದು ಅಪ್ಪಣೆಗೂ ಕಾಯದೆ ಹೊರತು ಹೋಗುತ್ತಾನೆ. 

"ವಿಶ್ವಾಮಿತ್ರರೆ ನಾ ಕಥೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ.. ಈಗ ನನಗೆ ಉತ್ತರ ಕೊಡಿ.. "

ಇನ್ನೂ ವಸಿಷ್ಠರು ಪ್ರಶ್ನೆಗಳನ್ನು ಕೇಳಿರಲೇ ಇಲ್ಲ.. ಸಾಮಾನ್ಯವಾಗಿ ಹಠಾತ್ ಸೋಲು ಒಪ್ಪಿಕೊಳ್ಳದ ವಿಶ್ವಾಮಿತ್ರರು "ವಸಿಷ್ಠರೆ.. ನಿಮ್ಮ ಕಥೆ ನನಗೆ ಅರ್ಥವಾಯಿತು... ಹಾಗೆಯೇ ನಾ ಕೇಳಿದ ಪ್ರಶ್ನೆಗೆ ಉತ್ತರವೂ ತಿಳಿಯಿತು.. ಅಲ್ಲಿ ನೋಡಿ.. ಒಂದು ಬಟ್ಟೆಯ ಚೀಲ ಹಿಡಿದು ಕೈಯಲ್ಲಿ ಒಂದು ಟ್ಯಾಬ್ ಹಿಡಿದು ನಿಧಾನವಾಗಿ ನಡೆದುಬರುತ್ತಿರುವ ಹರಿಣಿ ಅಮ್ಮನನ್ನು ನೋಡಿ.. ಅವರು ಇಲ್ಲಿಗೆ ಬರುತ್ತಿದ್ದರೆ ಎಂದ ಮೇಲೆ, ಅನುಮಾನಕ್ಕೆ ಎಡೆಯೇ ಇಲ್ಲಾ.. "

ಎಲ್ಲಾ ಗೊತ್ತಿದ್ದರೂ ವಸಿಷ್ಠರು ಏನೂ ಅರಿಯದಂತೆ "ವಿಶ್ವಾಮಿತ್ರರೆ.. ಸ್ವಲ್ಪ ಬಿಡಿಸಿ ಹೇಳಬಾರದೆ"

ನಸುನಗುತ್ತಾ ವಿಶ್ವಾಮಿತ್ರರು "ಬ್ರಹ್ಮರ್ಷಿಗಳೇ.. ಹರಿಣಿ ಅಮ್ಮನೆ ಆ ಊರಿನ ರಾಜ, ಆ ಊರು ಕರುನಾಡು, ಬೇರೆ ಊರಿನಿಂದ ಬಂದ ಪಂಡಿತನೆ  ಆಂಗ್ಲ ಭಾಷೆ. ಹರಿಣಿ ಅಮ್ಮನ ಪ್ರತಿಬಿಂಬ ಪದಾರ್ಥ ಚಿಂತಾಮಣಿಯ ಸದಸ್ಯರು, ಪದ ಕಮ್ಮಟ ಎಂಬ ಅದ್ಭುತ ಕಾರ್ಯಕ್ರಮಕ್ಕೆ ಹರಿಣಿ ಅಮ್ಮನ ಕೊಡುಗೆ ಅಪಾರ, ಆ ಇಳಿ ವಯಸ್ಸಿನಲ್ಲಿ ತಾರುಣ್ಯವೇ ನಾಚುವಂಥಹ ಚಟುವಟಿಕೆ, ಅವರ ಬಳಿ ಉತ್ತರ ಸಿಗದ ಪ್ರಶ್ನೆಗಳೇ ಇಲ್ಲಾ.. ಹಾಗೆ ಭುವಿಯಲ್ಲಿ ಯಾಕೆ ಅಷ್ಟು ಪ್ರೀತಿ ವಿಶ್ವಾಸ ಇದೆ ಎಂದು ನನ್ನ ಪ್ರಶ್ನೆಗೆ ಉತ್ತರ, ಹರಿಣಿ ಅಮ್ಮನವರ ಮುಖ ಪುಸ್ತಕದ ಖಾತೆಯ ಸಮಯದ ಗೆರೆಯಲ್ಲಿ ಅವರನ್ನು ಅಪಾರವಾಗಿ ಪ್ರೀತಿಸುವ, ಅಮ್ಮ ಅಕ್ಕ, ಅಜ್ಜಿ, ಮೇಡಂ, ಮಾ ಎಂದೇ ಖ್ಯಾತರಾಗಿರುವ ಅವರ ಅಗಲುವಿಕೆಯ ಶೋಕವನ್ನು ತಡೆಯಲಾರದೆ ಹರಿದು ಬರುತ್ತಿರುವ ಸಂದೇಶಗಳ ಮಹಾಪೂರವೇ ಇದಕ್ಕೆ ಸಾಕ್ಷಿ.. ನನಗೆ ಇನ್ನೇನು ಅನುಮಾನವಿಲ್ಲ"

ವಸಿಷ್ಠರು "ಹರಿಣಿ ಅಮ್ಮ ನೀವು  ಇಲ್ಲಿಗೆ ಬಂದದ್ದು ನಮಗೆ ಸಂತಸವಾದರೂ, ನೀವು ಭುವಿಯಲ್ಲಿ ನಿಮ್ಮ ಅಪಾರ ಅಭಿಮಾನಿಗಳ ಬಳಗವನ್ನು, ನಿಮ್ಮ ಬಂಧು ವರ್ಗದವರನ್ನು ಬಿಟ್ಟು ಬಂದದ್ದು ನಮಗೆ ಬೇಸರ ತಂದಿದೆ, ಆದರೆ ಏನು ಮಾಡುವುದು, ಈ ನಾಕದಲ್ಲಿ ಕನ್ನಡ ಬಳಸುವುದು ಹೇಗೆ, ಪ್ರವಾಸ ಮಾಡುವುದು ಹೇಗೆ, ಅದನ್ನು ಎಲ್ಲರಿಗೂ ತಿಳಿಸುವುದು ಹೇಗೆ ಈ ವಿಚಾರಗಳನ್ನು ಹೇಳಿಕೊಡಲಿಕ್ಕೆ ನಮಗೆ ನೀವು ಬೇಕಿತ್ತು, ಹಾಗಾಗಿ ನಿಮ್ಮನ್ನು ಹಠಾತ್ ಕರೆಸಿಕೊಳ್ಳಬೇಕಾಯಿತು..ಅಲ್ಲಿ  ನೋಡಿ ನಿಮ್ಮ ಯಜಮಾನರು ಮತ್ತೊಮ್ಮೆ ಬಾಗ್ದಾದ್ ಕಥೆಯನ್ನು ನಿಮ್ಮ ಬಾಯಿಂದ ಕೇಳಲು ಇತ್ತಲೇ ಬರುತ್ತಿದ್ದಾರೆ"


ನಿಧಾನವಾಗಿ ವಸಿಷ್ಠರು, ವಿಶ್ವಾಮಿತ್ರರು, ಹಾಗೂ ಹರಿಣಿ ಅಮ್ಮ ನಡೆಯುತ್ತಾ ಸಾಗಿದರು, ಅವರು ನಡೆಯುತ್ತಾ ನಡೆಯುತ್ತಾ ಹೋದಂತೆ ಚಿಕ್ಕ ಚಿಕ್ಕದಾಗಿ ಕಡೆಯಲ್ಲಿ ತಾರೆಗಳಾಗಿ ಹೊಳೆಯಲು ಶುರುಮಾಡಿದರು. 


*****************

ಬೆಳಿಗ್ಗೆ ಎದ್ದ ಕೂಡಲೇ, ವಾತ್ಸಾಪ್ ಸಂದೇಶ ನೋಡಿದಾಗ ಗಾಬರಿ ಆಯಿತು, ಫೇಸ್ಬುಕ್ ಖಾತೆಯನ್ನು ಜಾಲಾಡಿದೆ, ಅಜಾದ್ ಅವರ ಪೋಸ್ಟ್ ನೋಡಿದೆ, ಎದೆ ಹೊಡೆದುಕೊಳ್ಳಲು ಶುರುಮಾಡಿತು. ಅಯ್ಯೋ ದೇವರೇ ನೀ ಯಾಕೆ ಇಷ್ಟು ಕ್ರೂರಿ ಆದೆ ಎಂದು. ಕೆಲಸಕ್ಕೆ ಹೋಗಲು ಮನಸ್ಸಿಲ್ಲ, ಆದರೆ ಹರಿಣಿ ಅಮ್ಮ ಯಾವಾಗಲೂ ತಮ್ಮ ಕೆಲಸದಲ್ಲಿ ಕ್ರೀಯಾಶೀಲರಾಗಿದ್ದು ನೆನಪಾಗಿ, ಆಅ ನೆನಪು ನನ್ನನ್ನೇ ಅಣುಕಿಸಿತು. ಕೆಲಸದ ಒತ್ತಡ, ಒಲ್ಲದ ಮನಸ್ಸಿಂದ ಕಚೇರಿಗೆ ಹೋದೆ. 

ಕಣ್ಣು ಕೆಂಪಾಗಿಯೇ ಇತ್ತು, ಸಾಮಾನ್ಯ ಎಂದೂ ಅಳದ ನಾನು, ಒಳಗೊಳಗೇ ಅತ್ತು ಅತ್ತು, ಕಣ್ಣೀರು ಆವಿಯಾಗಿ ಕಣ್ಣಿಂದ ಹೊರಗೆ ಬರುತ್ತಿತ್ತು  ಅನ್ನಿಸುತ್ತದೆ. ಭಾರವಾದ ಮನಸ್ಸಿಂದ ಕೆಲಸ ಶುರುಮಾಡಿದೆ, ಯಾಕೋ ತಡೆಯಲಾಗಲಿಲ್ಲ, ಕಚೇರಿಯಲ್ಲಿ ನಾನು ಮಗೂ ಎಂದೇ ಕರೆಯುವ ಶೈಲಜಾ ಸುಬ್ರಮಣಿಯನ್ನು ಕರೆದೆ, ಮಗೂ ನಿನ್ನ ಮಾತುಗಳು ನಿನ್ನ ಒಂದು ಅಪ್ಪುಗೆ ಬೇಕು ಕಣೋ ಅಂದೇ.. ಶ್ರೀ ನಾನಿದ್ದೇನೆ ನಿಮ್ಮ ಜೊತೆ, ಬೇಜಾರಾಗಬೇಡಿ ಎಂದು ಒಂದಷ್ಟು ಹೊತ್ತು ಮಾತಾಡಿದಳು ಮತ್ತು ಸಮಾಧಾನ ಮಾಡಿದಳು. ಮನಸ್ಸು ಎಷ್ಟೋ ಹಗುರವಾಯಿತು. 

ಸ್ವಲ್ಪ ಹೊತ್ತಿನ ನಂತರ ಪ್ರಕಾಶಣ್ಣ (ಪ್ರಕಾಶ್ ಹೆಗ್ಡೆ) ಕರೆ ಮಾಡಿದರು, ತಮ್ಮಯ್ಯ, ನೀನು ಅಂದು ಅವರ ಮನೆಗೆ ಹೋದೆ, ನಾ ಕೂಡ ಬಂದೆ, ಅಂದಿನಿಂದ ಹರಿಣಿ ಅಮ್ಮ ನಮ್ಮ ಕುಟುಂಬಕ್ಕೆ ಇನ್ನಷ್ಟು ಹತ್ತಿರವಾದರು. ಇಂಥಹ ಅಗಲಿಕೆ ನಿಜವಾಗಿಯೂ ಆಘಾತವೇ ಸರಿ, ನನಗೆ ಇನ್ನು ನಡುಕ ನಿಂತಿಲ್ಲ ಎಂದರು. ಅವರ ಹತ್ತಿರ ಇನ್ನಷ್ಟು ಹೊತ್ತು ಮಾತಾಡಿದೆ, ಸ್ವಲ್ಪ ಸಮಾಧಾನವಾಯಿತು. ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ ಪರಿವಾರ ಈ ಸುದ್ದಿ ಸುಳ್ಳು ಆಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುವಂತಾಗಿತ್ತು. 

ನನ್ನ ಬೆಸ್ಟ್ ಗೆಳತಿ ನಿವಿ (ನಿವೇದಿತ ಚಿರಂತನ್), ಅದ್ಭುತ ಮಾತುಗಳನ್ನು ಹೇಳಿದರು, ಸುಮಾರು ಹೊತ್ತು ಚಾಟ್ ಮಾಡಿದೆವು, ನನ್ನ ನೋವು, ನಲಿವುಗಳನ್ನು ಕರಾರುವಾಕ್ ಆಗಿ ಪತ್ತೆ ಹಚ್ಚುವ ನಿವಿ, ನನ್ನ ನೋವುಗಳಿಗೆ, ಮನಸ್ಸಿನ   ಭಾವಗಳಿಗೆ  ಉತ್ತರ ಮತ್ತು  ಸಾಂತ್ವನ ಹೇಳಿದರು. ಅವರ ಮಾತುಗಳು ನಾ ಮರಳಿ ಬರಲು ಸಹಾಯ ಮಾಡಿದವು. 

ಗುರು ಸಮಾನರಾದ ಗೆಳೆಯ ಅಜಾದ್ ಸರ್ ಹೇಳಿದ್ದು ಬತ್ತಿದ ಕಣ್ಣೀರು ಮತ್ತೆ ಹೊರ ಚಿಮ್ಮಿತು.. ಕೆಲವಷ್ಟು ದಿನ ಫೇಸ್ ಬುಕ್ ಖಾತೆಯಿಂದ ಹೊರಬಿದ್ದಿದ್ದೆ. ಹರಿಣಿ ಅಮ್ಮ ಸುಮಾರು ಮಂದಿಯ ಹತ್ತಿರ ಕೇಳಿದ್ದರಂತೆ ಶ್ರೀಕಾಂತ್ ನನ್ನನ್ನು ಬ್ಲಾಕ್ ಮಾಡಿದ್ದರೆ ಯಾಕೆ ಏನಾಯಿತು ಅಂತ. ಅವರು ತಮ್ಮ ಮಿತ್ರರನ್ನು ನೋಡಿಕೊಳ್ಳುತ್ತಿದ್ದ ಬಗೆ ಹಾಗಿತ್ತು. ಯಾರಿಗಾದರೂ ನೋವಾಯಿತೇ, ಆರೋಗ್ಯವಾಗಿದ್ದಾರ, ಹೇಗಿದ್ದಾರೆ ಹೀಗೆ ಎಲ್ಲರ ಬಗೆಯೂ ಕಳಕಳಿಯಿದ್ದ ಅವರನ್ನು ದೇವರು ಕೂಡ ಬಿಟ್ಟಿರಲಾರದೇ ಕರೆಸಿಕೊಂಡನೇನೋ ಎನ್ನಿಸಿತು. ಅಜಾದ್ ಸರ್ ಅಕ್ಕ ಎಂದೇ ಕರೆಯುತ್ತಿದ್ದ ಹರಿಣಿ ಅಮ್ಮನನ್ನು ಕಳೆದುಕೊಂಡು ಎಷ್ಟು ವ್ಯಥೆ ಪಡುತ್ತಿದರು ಎಂದು ಅವರು ದೂರದ ಕುವೈತ್ ನಲ್ಲಿದ್ದರು ಅವರ ಬರಹಗಳಿಂದ ಅರ್ಥವಾಗುತ್ತಿತ್ತು. ಎಲ್ಲರ ಜೊತೆಯಲ್ಲಿ ನಗುನಗುತ್ತಾ ಮಾತಾಡುವ ಅಜಾದ್ ಸರ್ ಅವರ ಇನ್ನೊಂದು ಮುಖವನ್ನು ಇಂದು ನೋಡಿದೆ. 

ಕಡೆಯಲ್ಲಿ ನನ್ನ ಹಾಸನದಲ್ಲಿರುವ ಪ್ರಕಾಶ್ ಚಿಕ್ಕಪ್ಪ "ಶ್ರೀಕಾಂತ.. ನಿಜವಾಗಿಯೂ ಅವರು ಜೀವನವನ್ನು ಸಾಧಿಸಿ ಬದುಕಿದರು, ನೀವೆಲ್ಲ ಅವರ ಬಗ್ಗೆ ಇಷ್ಟು ಹಚ್ಚಿಕೊಂಡಿದ್ದೀರಾ ಮತ್ತು ಅವರು ನಿಮ್ಮೆನ್ನೆಲ್ಲ ಅಷ್ಟು ಪ್ರೀತಿ ವಿಶ್ವಾಸಗಳಿಂದ ನೋಡುತ್ತಿದ್ದರು ಎಂದರೆ ಅವರ ಬದುಕಿನ ಸಾಧನೆ ಮತ್ತು ಸಾರ್ಥಕತೆ ನೋಡು. ಅಂಥಹ ಅದ್ಭುತ ಜೀವಿಯ ಜೊತೆಯಲ್ಲಿ ನೀವೆಲ್ಲ ಇದ್ದೀರಿ ಎಂದರೆ, ಅದು ನಿಮ್ಮ ಪೂರ್ವ ಜನ್ಮದ ಪುಣ್ಯ ಎನ್ನದೆ ಬೇರೆ ನನಗೆ ಕಾಣುತ್ತಿಲ್ಲ. ಅವರ ಜೀವನಕ್ಕೆ ಮತ್ತು ಬಾಳಿದ ಜೀವನದ ಪಥಕ್ಕೆ ನನ್ನ ನಮನಗಳು" ಎಂದರು. ಎಂಥಹ ಅದ್ಭುತ ಮಾತುಗಳು. 
ಹರಿಣಿ ಅಮ್ಮನ ಪ್ರೀತಿಯ ಸೆಳೆತಕ್ಕೆ ಸಿಕ್ಕದವರೇ ಇರಲಿಲ್ಲ. ಅವರ ಜೊತೆ ಒಂದಷ್ಟು ವರ್ಷಗಳು, ಮಾಸಗಳು ಮಾತಾಡಿದ್ದು, ಒಡನಾಡಿದ್ದು, ನಕ್ಕಿದ್ದು, ಹರಟಿದ್ದು, ಅವರ ಕೈ ರುಚಿ ಕಂಡದ್ದು ಇವೆ ನಮಗೆ ಉಳಿದಿರುವ ನೆನಪುಗಳು. 

ಹರಿಣಿ ಅಮ್ಮ ನಿಮ್ಮ ಬಗ್ಗೆ ಬರೆದಷ್ಟು ಬರೆಸುತ್ತಲೇ ಇದ್ದಾಳೆ ಆ ತಾಯಿ ಶಾರದೆ. ಅವಳಿಗೂ ಕೂಡ ನಿಮ್ಮ ಪ್ರವಾಸಿ ಕಥನ, ದೇವಾಲಯಗಳ ಬಗ್ಗೆ ಮಾಹಿತಿ, ಶ್ಲೋಕಗಳು, ಮಂತ್ರಗಳು ಇವೆಲ್ಲಾ ಬೇಕಾಗಿದ್ದವು ಅನ್ನಿಸುತ್ತದೆ. 

ಆ ಶಾರದ ಮಾತೆಯ ಸನ್ನಿಧಾನದಲ್ಲಿ ಅಮರ ಜೀವಿಯಾಗಿರಿ ಹರಿಣಿ ಅಮ್ಮಾ!!!