Tuesday, July 26, 2016

ಕಾಡುವ ....೧ :-)

ಯಾಕಪ್ಪ ಕತ್ತಲಾಗುತ್ತೆ.. ?



ಮನದೊಳಗೆ ಬೇಡವೆಂದರೂ ಬಿಡದೆ ತೊಂದರೆ ಕೊಡುತ್ತಿದ್ದ ಪ್ರಶ್ನೆ.. ಯಾಕೋ ತಲೆ ಎತ್ತಿ ನೋಡಿದ.. ಏನೂ ಕಾಣಲಿಲ್ಲ.. ಆ ಭಯಕ್ಕೆ ಠಕ್ಕರ್ ಕೊಡಬೇಕು ಎಂದು.. ಬೆಳಿಗ್ಗೆತಾನೇ ಕೊಂಡು ಕೊಂಡ ಮೊಬೈಲ್ ನಲ್ಲಿ ಇದ್ದ ಹಾಡನ್ನು ಕೇಳೋಣ ಅಂತ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡ.. 

"ಪೂರ್ಣ ಚಂದಿರಾ ರಜಾ ಹಾಕಿದ.. ನಿನ್ನಯ ಮೊಗವನು ಕಂಡ ಕ್ಷಣ".. ಅಯ್ಯೋ ಮತ್ತೆ ತಲೆ ಎತ್ತಿದ... ಚಂದಿರ ಆಗಲೇ ಓಡಿ ಹೋಗಿ ದಿನಗಳಾಗಿತ್ತು. ಬೆಳಿಗ್ಗೆ ಸಂಧ್ಯಾವಂದನೆ ಮಾಡುವಾಗ ಮಾಡಿದ ಸಂಕಲ್ಪ ನೆನೆಸಿಕೊಂಡ.. 

".... ಶಾಲಿವಾಹನ ಶಕೆ.... ರಾಮಕ್ಷೇತ್ರೇ.. .... ಕಲಿಯುಗೇ.. ಪ್ರಥಮಪಾದೆ... " ಮೈ ಸಣ್ಣಗೆ ನಡುಗಲು ಶುರುವಾಯಿತು. ಹಣೆಯಲ್ಲಿ.. ಬರ ಕಾಡುವ ಹಳ್ಳಿಗಳಲ್ಲಿ ನೀರು ಬಾರದ ನಲ್ಲಿಯ ಮುಂದೆ ಇಟ್ಟ ಸಾಲು ಸಾಲು ಕೊಡಗಳ ತರಹ ಬೆವರು ಮೂಡಿತ್ತು.  ಎದೆ "ಕಬಾಲಿ" ಚಿತ್ರದ ಆರಂಭಿಕ ದೃಶ್ಯಗಳ ಬೀಟ್ಸ್ಗಿಗಿಂತ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಒದ್ದೆಯಾಗಿದ್ದ ಕೈ ಗಡಿಯಾರ ನೋಡಿಕೊಂಡ ಆಗಲೇ ಎರಡು ಮೂವತ್ತು ಎಂದು ಅದು ಕೂಡ ಅದುರುತ್ತಿತ್ತು .. ಮುಳ್ಳು ಮೆಲ್ಲಗೆ ನಡುಗುತ್ತಲೇ, ಬೇಗ ಹೋದರೆ ಸಾಕು, ಎಂದು ತಿರುಗಿ ನೋಡದೆ ಓಡುತ್ತಲೇ ಇತ್ತು. 

ಮತ್ತೆ ರಸ್ತೆ ಕಡೆ ನೋಡಿದ, ಪಶ್ಚಿಮ ಘಟ್ಟಗಳ ರಸ್ತೆ.. ದಿನವೆಲ್ಲ ಸುರಿದ ಮಳೆಯಿಂದ ರಸ್ತೆ ಬಾಲಿವುಡ್ ಸಿನಿಮಾದ ನಾಯಕಿತರಹ ಒದ್ದೆ ಮುದ್ದೆಯಾಗಿತ್ತು, ಬೃಹದಾಕಾರದ ಮರದ ಎಲೆಗಳಿಂದ ತೊಟ್ಟಿಕ್ಕುತ್ತಿದ್ದ ಪ್ಲಕ್ ಪ್ಲಕ್ ಎಂದು ಸಡ್ಡು ಮಾಡುತ್ತಿದ್ದ ಹನಿಗಳು, ಒದ್ದೆಯಾಗಿದ್ದ ಬಿದ್ದಿದ್ದ ಎಲೆಗಳ ಮೇಲೆ ಬಿದ್ದು ನೀರವ ಮೌನದ ಭಯವನ್ನು ಇನ್ನಷ್ಟು ಹೆಚ್ಚು ಮಾಡುತ್ತಿತ್ತು. ಮೊದಲೇ ಪಶ್ಚಿಮ ಘಟ್ಟಗಳ ಹಾದಿ, ಎತ್ತ ನೋಡಿದರೂ ಅಲೆ ಅಲೆಯಾಗಿ ಗೆರೆ ಗೆರೆಗಳ ತರಹ ಕಾಣುವ ಬೆಟ್ಟಗಳ ಸಾಲು ಕರ್ರಗೆ ಇನ್ನಷ್ಟು ಭೀಕರತೆ ಉಂಟು ಮಾಡುತ್ತಿತ್ತು, ಅತ್ತ ಕಡೆ, ಕಣ್ಣಿಗೆ ಕಾಣದಷ್ಟು ಆಳದ ಕಂದರಗಳಲ್ಲಿ ಜುಳು ಜುಳು ಹರಿಯುವ ಝರಿ.. ಜೊತೆಯಲ್ಲಿ ಕತ್ತಲೆ, ಹನಿಯುತ್ತಿದ್ದ ಮಳೆರಾಯ. 

ಒಂದೇ ಒಂದು ವಾಹನವೂ ಕಾಣುತ್ತಿರಲಿಲ್ಲ. ಹನುಮಾನ್ ಚಾಲೀಸ್, ಗಾಯತ್ರಿ ಮಂತ್ರ.. ಮುಕ್ಕೋಟಿ ದೇವರು ಎಲ್ಲರನ್ನೂ ಕರೆದಾಗಿತ್ತು, ಇವನ ಹೆದರಿಕೆಗೆ, ದೇವರುಗಳೇ ಒಮ್ಮೆ.. ಅಯ್ಯೋ ಬಿಡಪ್ಪ ಹೆದರಿ ಆಗಲೇ ಮುದ್ದೆಯಾಗಿದ್ದಾನೆ, ಮುದ್ದೆಯಾಗಲು ಇನ್ನೆಲ್ಲಿದೆ ಅವಕಾಶ.. ಅನ್ನುವಷ್ಟರ ಮಟ್ಟಿಗೆ ಆ ಮಳೆಯ ಕಾಲದಲ್ಲೂ ಬೆವತು ನೀರಾಗಿದ್ದ.. 

ಯಾರೋ ನೆಡೆದು ಬರುತ್ತಿದ್ದ ಸದ್ದು ಅಸ್ಪಷ್ಟವಾಗಿ ಕೇಳಿಬಂತು.. ಕಿವಿಯನ್ನು ಅತ್ತ ಕಡೆಗೆ ಹರಿಸಿದ.. 

"ಹಹಹ.. ಏನೂ ಹೇಳಿದಿರಿ ಸರ್.. ಸೂಪರ್ ಸೂಪರ್"

"ಅದೇನು ಸೂಪರ್.. ಇನ್ನೊಂದು ಕಥೆ ಕೇಳಿ.. ಅದನ್ನು ಕೇಳಿದರೆ ಮೈಯೆಲ್ಲಾ ಜುಮ್ ಎನ್ನುತ್ತದೆ"

"ಅರೆ ಹೌದೇ.. ಹೇಳಿ ಸರ್.. ಪ್ಲೀಸ್"

"ಸರಿ.. ಒಂದು ಬೀಡಿ ಕೊಡಿ.. ಹಾಗೆ ಒಂದು ದಮ್ ಎಳೆದರೆ.. ಕಥೆ ಕೂಡ ಹೊಗೆಯ ರೀತಿ ಹೊರಗೆ ಬರುತ್ತದೆ... "

.. ಚರ್ ಶಬ್ಧ ಮಾಡಿ ಹೊತ್ತಿಕೊಂಡ ಬೆಂಕಿ ಕಡ್ಡಿಯ ಬೆಳಕಿನಲ್ಲಿ..  ಚಳಿಯಲ್ಲಿ ತರ ತರ ನಡುಗುತ್ತಾ ನಿಂತಿದ್ದ ವ್ಯಕ್ತಿ ಕಾಣಿಸಿತು.  

"ಏನ್ ಸಾರ್ ಎಲ್ಲಿಗೆ ಹೋಗಬೇಕು.. ಇಷ್ಟು ಹೊತ್ತಿಗೆ ಯಾಕೆ ಇಲ್ಲಿ ನಿಂತಿದ್ದೀರಿ.. ಇಲ್ಲಿ ಯಾವ ಬಸ್ಸು ನಿಲ್ಲೋಲ್ಲ.. ಮೊದಲೇ ಸಾರಿಗೆ ಮುಷ್ಕರ ನೆಡೆಯುತ್ತಿದೆ.. ಯಾವ ಬಸ್ಸುಗಳು ಬರೋಲ್ಲ.. "

ಹೆದರಿಕೆ,  ಜೊತೆಗೆ ಚಳಿ.. ಆ ಇಬ್ಬರ ಧ್ವನಿ ಕೇಳಿ ಇವನಿಗೆ ಜೀವ ಬಂದಂತೆ ಆಯಿತು... ಸದ್ಯಕ್ಕೆ ಯಾರೋ ಸಿಕ್ಕಿದರಲ್ಲ.. 

"ಹೌದಾ ಸಾರ್.. ನನಗೆ ಗೊತ್ತೇ ಇಲ್ಲ.. ಹೊಸ ಕಂಪನಿ ಕೆಲಸಕ್ಕೆ ಸೇರಿಕೊಳ್ಳಬೇಕು.. ನಾಳೆ ಹೋಗಲೇ ಬೇಕು.. ಬರುವಾಗ ನಾ ಬಂದಿದ್ದ ಕಾರು ಕೆಟ್ಟು ಹೋಯಿತು.. ಡ್ರೈವರ್ ಹೇಳಿದ ಕಾರು ಸರಿ ಹೋಗೋಲ್ಲ.. ಹಾಗೆ ಆ ತಿರುವಿನ ತನಕ ಹೋಗಿ.. ಅಲ್ಲಿ ಇನ್ನೊಂದು ಹೆದ್ದಾರಿ ಸೇರುತ್ತದೆ.. ಅಲ್ಲಿ ಯಾವುದಾದರೂ ಲಾರಿ, ಅಥವಾ ಯಾವುದಾದರೂ ವಾಹನ ಸಿಗಬಹುದು ಎಂದು ... ಅದಕ್ಕೆ ಇಲ್ಲಿ ನಿಂತಿದ್ದೆ"

"ಸರ್.. ನಿಮ್ಮ ಗುಂಡಿಗೆ ದೊಡ್ಡದು ಸರ್.. ಇಲ್ಲಿ ಹಗಲು ಹೊತ್ತಿನಲ್ಲಿಯೇ ಯಾರೂ ನಿಲ್ಲೋಲ್ಲ.. ಇನ್ನೂ ಈ ಸರಿ ಹೊತ್ತಿನಲ್ಲಿ.. ಯಪ್ಪಾ.. ಸರಿ ಬನ್ನಿ ಹೆದರಬೇಡಿ.. ನಾವುಗಳು ನಿಮ್ಮ ಜೊತೆಯಲ್ಲಿ ಹೆಜ್ಜೆ ಹಾಕುತ್ತೇವೆ.. ಇಲ್ಲೇ ೭ ಕಿಮಿ ದೂರದಲ್ಲಿ ಇವನ ಮನೆ ಇದೆ... ಅಲ್ಲಿದ್ದು ಬೆಳಿಗ್ಗೆ ಯಾವುದಾದರೂ ವ್ಯವಸ್ಥೆ ಮಾಡಿಕೊಂಡು ಹೋಗೋರಂತೆ.. ಇಲ್ಲೆಲ್ಲಾ ಇಷ್ಟು ಹೊತ್ತಿಗೆ   ಇರಬಾರದು.. ನಡೀರಿ ನಡೀರಿ.. " 

ಬಲವಂತವಾಗಿ ಅಲ್ಲಿಯೇ ತರಗೆಲೆಯಂತೆ ನಡುಗುತ್ತಿದ್ದ ಆ ವ್ಯಕ್ತಿಯನ್ನು ಎಳೆದುಕೊಂಡು ಹೊರಟೆ ಬಿಟ್ಟರು.. 

"ಸರ್... ಇನ್ನೊಂದು ಕಥೆ ಹೇಳುತ್ತೀನಿ ಅಂದ್ರಿ.. ಅದನ್ನು ಹೇಳಿ ಸರ್.. ದಾರಿ ಸವೆಯುತ್ತೆ.. " ಕಥೆ ಕೇಳುವ ಹುಚ್ಚಿನವ ಮತ್ತೆ ಕಥೆಗೆ ತಿದಿ ಒತ್ತಿದ. 

"ಹಾ ಹೌದು.. ಇವರು ಸಿಕ್ಕಿದ ಸಮಯಕ್ಕೆ ಅದು ಮರೆತೇ ಹೋಯಿತು.. ಆ ಎಲ್ಲಿದ್ದೆ ನಾನು" 

ಕೋಪದಿಂದ ಕಥೆ ಹೇಳಿ ಎಂದವ  "ಆ ಸಮಾಧಿಯೊಳಗೆ ಮಲಗಿದ್ದಿರಿ.. ಶೆಕೆ ಅಂತ ಹೊರಗೆ ವಾಕಿಂಗ್ ಬಂದಿದ್ದೀರಾ.. ಸುಮ್ನೆ ಕಥೆ ಹೇಳ್ರಿ ಅಂದ್ರೆ.. ಕಥೆ ಬಿಡ್ತಾರೇ... !"

"ಸರಿ ಮಾರಾಯ.. ಕೋಪ ಬೇಡ ಹೇಳ್ತೀನಿ ಇರಿ.. ಎಲ್ಲಿದ್ದೆ.. ಆಆಹ್ ನೆನಪಿಗೆ ಬಂತು ... " ಬೀಡಿಯಿಂದ ಮತ್ತೊಂದು ಧಮ್ ಎಳೆದು ಮತ್ತೆ ಶುರುಮಾಡಿದ.. 

"ಒಮ್ಮೆ ಕಾಡೊಳಗೆ ಒಬ್ಬನೇ ಹೋಗುತ್ತಿದ್ದೆ.. ಕೆಟ್ಟ ಧೈರ್ಯ.. ಯಾರಿಗೂ ಹೆದರುತ್ತಿರಲಿಲ್ಲ.. ಜೋರಾಗಿ "ಯಾರೇ ಕೂಗಾಡಲಿ ಊರೇ ಹೋರಾಡಲಿ ಎಮ್ಮೆ ನಿನಗೆ ಭಂಗವಿಲ್ಲಾ " ಹಾಡು ಹೇಳಿಕೊಂಡು.. ಹೋಗುತ್ತಿದ್ದೆ.. "ಅಣ್ಣ ಅಣ್ಣಾ" ಎಂದು ಯಾರೂ ಕೂಗಿದಂತೆ ಆಯಿತು.. ಯಾರಪ್ಪ ಎಂದು ಅತ್ತಿತ್ತ ನೋಡಿದೆ.. ಅದು ರಾತ್ರಿ ಅಂತ ಮತ್ತೆ ನಾ ಏನು ಹೇಳಬೇಕಾಗಿಲ್ಲ.. 
"ಅಣ್ಣಾ ಅಣ್ಣಾ" ಮತ್ತೆ ಕೂಗು ಕೇಳಿಸಿತು.. ಸೂಕ್ಷವಾಗಿ ಆ ಕತ್ತಲಲ್ಲೂ ದೃಷ್ಟಿ ಇಟ್ಟು ನೋಡಿದೆ.. ತುಸು ದೂರದಲ್ಲಿ. ಒಂದು ವ್ಯಕ್ತಿ ಕೂಗುತ್ತಿದ್ದ.. ಬಿರಬಿರನೆ ಹತ್ತಿರ ಹೋದೆ.. "

ಮತ್ತೊಂದು ಬೀಡಿ ಹಚ್ಚಿ ದಂ ಎಳೆದು ಮತ್ತೆ ಕಥೆ ಮುಂದುವರೆಸಿದ "ಆ ವ್ಯಕ್ತಿಯ ಹತ್ತಿರ ಹೋದೆ.. ಏನಪ್ಪಾ.. ಯಾಕೆ ಏನಾಯಿತು.. ?.. ಎಂದೇ.. ಅಣ್ಣಾ ಇದೇ ದಿನ ಊರಿಗೆ ಹೋಗಬೇಕಿತ್ತು.. ಬಸ್ಸು ಇದೆ ಅಂತ ಬಂದೆ.. . ಬಸ್ಸು ಬರಲೇ ಇಲ್ಲ . ಯಾವುದೋ  ಕಾರಿನಲ್ಲಿ ಇಲ್ಲಿ ತನಕ ಬಂದೆ.. ಆ ಕಾರು ಕೆಟ್ಟು ಹೋಯಿತು.. ಡ್ರೈವರ್ ಆ ಕೊನೆ ತನಕ ನೆಡೆದುಕೊಂಡು ಹೋಗಿ ಹೆದ್ದಾರಿ ಸಿಗುತ್ತೆ.. ಅಲ್ಲಿ ಯಾವುದಾದರೂ ಲಾರಿ, ಕಾರು ಸಿಗುತ್ತೆ.. ಇವತ್ತು ಸಾರಿಗೆ ಮುಷ್ಕರ ಹಾಗಾಗಿ ಅವೇ ನಿಮಗೆ ಗಟ್ಟಿ ಅಂತ.. ಆ ಡ್ರೈವರ್.. ಕಾರಿನೊಳಗೆ ಹೋಗಿ ಮಲಗಿಯೇ ಬಿಟ್ಟಾ.. ನಾನು ಅಲ್ಲೇ ಮಲಗೋಣ ಅಂದರೆ.. ಆ ಡ್ರೈವರ್ ಹೆದರಿಸಿದ.. ಸಾರ್ ನಾವೇನೋ ಇಲ್ಲಿಯವರೇ.. ನಮಗೆ ತೊಂದರೆ ಇಲ್ಲ.. ಹೊರಗಿನವರಿಗೆ ಅದು ಬಿಡುವುದಿಲ್ಲ.. ಬೇಗ ಹೋಗಿ ಬಿಡಿ" 

ಕಥೆ ಹೇಳು ಎಂದು ಪೀಡಿಸಿದ ವ್ಯಕ್ತಿಗೆ ಯಾಕೋ ಅನುಮಾನ ಶುರುವಾಯಿತು.. ಜೊತೆಯಲ್ಲಿಯೇ ಹೆದರಿಕೆ.. ಬೀಡಿ ಸೇದಿ ಕಥೆ ಹೇಳುತ್ತಿದ್ದ ವ್ಯಕ್ತಿಯನ್ನು ತುಸು ಈ ಕಡೆ ಕರೆದು.. "ಸರ್  .. ಆ ವ್ಯಕ್ತಿ ಕೂಡ ಇದೆ ಕಥೆ ಹೇಳಿದ.. ನೀವು ಹೇಳುವ ಕಥೆಯ ತರಹಾನೇ ಇದೇ ಅವನ ಕಥೆ ಕೂಡ.. "

ಇಬ್ಬರಿಗೂ ಬೆನ್ನಿನಲ್ಲಿ ಛಳಕ್ ಎಂದು ಚಳಿ ಮೂಡಿತು.. ಯಾಕೋ ಇಬ್ಬರೂ ತಿರುಗಿ ನೋಡಿದರು.. ಆ ಮೂರನೇ ವ್ಯಕ್ತಿ.. ಅಚಾನಕ್ ದೊಡ್ಡದಾಗಿ ಬೆಳೆದೆ ಬಿಟ್ಟಾ.. ಜೋರಾಗಿ ಗಹಗಹಿಸಿ ನಕ್ಕ.. 

ಇಬ್ಬರು ಮೂರ್ಛೆ ಬಿದ್ದರು.. ಫಳ್ ಫಳ್ ಮಿಂಚು ಬಂದಂತೆ ಭಾಸವಾಯಿತು.. ತುಂತುರು ಮಳೆ ನೀರು ಮುಖದ ಮೇಲೆ ಬಿದ್ದಿತು.. ತಿರುಗಿ ನೋಡದೆ.. ಓಡಲು ಶುರು ಮಾಡಿದರು.. ಅನತಿ ದೂರದಲ್ಲಿಯೇ.. ಯಾರೋ ಕರೆದ ಹಾಗೆ ಆಯಿತು.. 

"ಅಣ್ಣ ಅಣ್ಣಾ ಅಣ್ಣಾ ಅಣ್ಣಾ ...... !"

8 comments:

  1. ರಾಮ್ ಗೋಪಾಲ್ ವರ್ಮಾ ನ ಮುಂದಿನ ಚಿತ್ರ...

    ReplyDelete
    Replies
    1. ಧನ್ಯವಾದಗಳು ಶಶಿ.. ಈ ಪ್ರತಿಕ್ರಿಯೆಗೆ ಶರಣಾದೆ

      Delete
  2. ಅಬ್ಬ ಒಮ್ಮೆ ಮೈ ಜುಮ್ ಅಂತು. ಅಂತು ನೀವು ಭಯಾನಕ ಕಥೆಗಳನ್ನು ಬರೆಯಲು ಶುರು ಮಾಡಿದ್ರಿ. ಮುಂದಿನ ಕಥೆಗೆ ಕಾತರದಿಂದ ಕಾಯುತ್ತಿರುವೆ :)

    ReplyDelete
    Replies
    1. ಹಾಗೆ ಸುಮ್ಮನೆ ಬರೆದದ್ದು.. ಆದರೆ ಈ ಬರಹಕ್ಕೆ ಪ್ರೇರಣೆ ನೀವೇ.. ನೀವು ಬರೆಯಿರಿ ಎಂದು ಪ್ರೋತ್ಸಾಹಿಸಿದಿರಿ ನಾ ಬರೆದೆ..

      ಧನ್ಯವಾದಗಳು ಸಿಬಿ

      Delete
  3. Replies
    1. ಎಸ್ ಪಿ

      ಮತ್ತೆ ಸ್ವಾಗತ

      ಮುಂದೆ ಗೊತ್ತಿಲ್ಲಾ.. ಒಂದೇ ಕಂತು ಅಂತ ಬರೆದದ್ದು.. ಸುಮಾರು ಓದುಗರು ಇದನ್ನು ಮುಂದುವರೆಸಲು ಕೇಳುತ್ತಿದ್ದಾರೆ.. ನೋಡೋಣ ದೆವ್ವ ನನಗೆ ಹೇಗೆ ಸಹಾಯಕ್ಕೆ ನಿಲ್ಲುತ್ತದೆ ಎಂದು.

      Delete
  4. "ಅಣ್ಣ..ಅಣ್ಣಾ..ಅಣ್ಣಾ...ಅಣ್ಣಾ!"

    ReplyDelete
    Replies
    1. ಗುರುಗಳೇ ವಾಹ್

      ಅನಂತ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆ ಟಾನಿಕ್ ಸಿಕ್ಕಿದ ಹಾಗೆ ನನಗೆ

      Delete