ಅದೊಂದು ಗುರುಕುಲ..
ಹೊಸ ವಿದ್ಯಾಭ್ಯಾಸಕ್ಕೆ ಸೇರಿದ ಒಂದು ಮುಗ್ಧ ಹುಡುಗ ಹನುಮ. ಮೊದಲೇ ಸೇರಿದ್ದ ಒಬ್ಬ ಹುಡುಗ ಕೃಷ್ಣ, ಈ ಹುಡುಗನ ವಿದ್ಯಾ ಕಲಿಕೆಯ ಆಸಕ್ತಿಯನ್ನು ಕಂಡು ಬೆರಗಾಗಿದ್ದ. ಅವನಲ್ಲಿ ತನ್ನನ್ನೇ ನೋಡಿದ್ದ ಅಂದರೂ ಸುಳ್ಳಾಗಿರಲಿಲ್ಲ.
ಹೊಸದಾಗಿ ಗುರುಕುಲ ಸೇರಿದ್ದ ಆ ಹನುಮನ ಮಾತು ಬಾಣದಷ್ಟೇ ಬಿರುಸು ಆದರೆ ಮನಸ್ಸು ಹಾಲಿನಷ್ಟೇ ಬಿಳಿ. ಹಲವಾರು ಬಾರಿ ಕೃಷ್ಣ ಹೇಳುತ್ತಲೇ ಇರುತ್ತಿದ್ದ ಯಾಕೋ ಅಷ್ಟು ಬಿರುಸಾಗಿ ಉತ್ತರ ಕೊಡುತ್ತೀಯ, ಎಲ್ಲಾ ಸಮಯವೂ ಒಂದೇ ತರಹ ಇರೋದಿಲ್ಲ.. ,ಆಗೆಲ್ಲಾ ಹನುಮ ಹಾರಿಕೆಯ ಉತ್ತರ ಕೊಟ್ಟು, ಅಯ್ಯೋ ನನ್ನ ಮಾತು ಬಿಡಿ, ನಮ್ಮ ಹಳ್ಳಿಗೆ ಬನ್ನಿ, ಅಲ್ಲಿ ಎಲ್ಲರೂ ಬ್ರಹ್ಮಾಸ್ತ್ರ ಬಿಡುವವರೆ!!! .... ಕೃಷ್ಣ ಹೋಗ್ಲಿ ಬಿಡು.. ಎಂದು ತನ್ನನ್ನೇ ತಾನು ಸಮಾಧಾನ ಮಾಡಿಕೊಂಡಿದ್ದ .
ಕೃಷ್ಣನ ಮಾತು ಹಾಸ್ಯ ಭರಿತವಾಗಿರುತ್ತಿತ್ತು, ಇನ್ನೊಬ್ಬರಿಗೆ ನೋವು ಮಾಡುವ ಮಾತು ಅವನಿಂದ ಬರುತ್ತಲೇ ಇರುತ್ತಿರಲಿಲ್ಲ. ತನಗೆ ನೋವಾದರೂ, ಇನ್ನೊಬ್ಬರಿಗೆ ನೋವು ಕೊಡಬಾರದು ಎನ್ನುವ ತತ್ವದವನು.
ಹೊಸ ವಿಷಯ ಕಲಿಯೋದು, ಅಭ್ಯಸಿಸುವುದು ಅಂದರೆ ಅಂದ್ರೆ ಇಬ್ಬರಿಗೂ ಹಬ್ಬ, ಯಾವುದಕ್ಕೂ ಹೆದರುತ್ತಲೇ ಇರಲ್ಲಿಲ್ಲ. ಹೊಸ ಗೋಣಿಚೀಲನ ಎತ್ತಿ ಎತ್ತಿ ಒಗೆದ ಎನ್ನುವ ವ್ಯಕ್ತಿತ್ವ ಇಬ್ಬರದೂ ಅಲ್ಲ. ಮೊದಲನೇ ದಿನವಿದ್ದ ಉತ್ಸಾಹ ಪ್ರತಿದಿನವೂ ಇದ್ದೆ ಇತ್ತು.
ಒಂದು ರೀತಿಯಲ್ಲಿ ತನ್ನದೇ ಪ್ರತಿಬಿಂಬ ಎನ್ನುವ ರೀತಿಯಲ್ಲಿ ಇದ್ದ ಹನುಮನನ್ನು ಕಂಡರೆ ತಮ್ಮನಷ್ಟೇ ಪ್ರೀತಿ ವಿಶ್ವಾಸ. ಹನುಮನು ಕೂಡ ಹಾಗೆ, ಕೃಷ್ಣನನ್ನು ಗುರುವಿನ ಸ್ಥಾನದಲ್ಲಿಟ್ಟು ನೋಡುತ್ತಿದ್ದ ಹೀಗೆ ಅವರಿಬ್ಬರ ಬಾಂಧ್ಯವ ಚೆನ್ನಾಗಿ ಬೆಳೆಯುತ್ತಿತ್ತು.
ಒಬ್ಬರ ಕೆಲಸವನ್ನು ಇನ್ನೊಬ್ಬರು ಹಂಚಿಕೊಂಡು ಮಾಡುವಷ್ಟು ವೃತ್ತಿ ಪರತೆ ಇಬ್ಬರಿಗೂ ಇತ್ತು. ಕಲ್ಮಶವಿಲ್ಲದ ಅನುಬಂಧ ಅವರಿಬ್ಬರದು. ಗುರುಕುಲದ ಆಚಾರ್ಯರಿಗೆ ಒಂದು ಕೆಲಸವನ್ನು ಈ ಇಬ್ಬರಲ್ಲಿ ಯಾರೊಬ್ಬರಿಗೆ ಕೊಟ್ಟರೂ ಸಾಕು, ಆ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವುದು ತಿಳಿದು ಹೋಗಿತ್ತು.
ಗುರುಕುಲದ ಜವಾಬ್ಧಾರಿ, ಬಂದು ಹೋಗುವ ಅತಿಥಿಗಳನ್ನು ನೋಡಿಕೊಳ್ಳುವ ಪರಿ, ಗುರುಕುಲವನ್ನು ಚೊಕ್ಕವಾಗಿ ಇಟ್ಟುಕೊಳ್ಳುವ ರೀತಿ, ಇದು ತಮ್ಮದೇ ಮನೆ ಎಂದು ತಲೆಯ ಮೇಲೆ ಹೊತ್ತು ಆ ಗುರುಕುಲವನ್ನು ನೋಡಿಕೊಳ್ಳುತ್ತಿದ್ದ ಬಗ್ಗೆ ಇತರ ಗುರುಕುಲದ ವಿದ್ಯಾರ್ಥಿಗಳ ಕಣ್ಣು ಕೆಂಪು ಮಾಡಿದ್ದರೂ, ಅದಕ್ಕೆ ತಲೆ ಕೆಡಿಸಿಕೊಳ್ಳದೆ, ಇದು ನಮ್ಮದು, ನಮ್ಮ ಜವಾಬ್ಧಾರಿ ಎನ್ನುವ ಮನೋಭಾವ ಹೊತ್ತು, ಮೂದಲಿಕೆ, ಏಳು, ಬೀಳುಗಳು ಇದ್ದರೂ, ಒಬ್ಬರ ಕೈ ಹಿಡಿದು ಇನ್ನೊಬ್ಬರು ನಡೆಯುತ್ತಾ, ತಮ್ಮ ಬೇಸರಗಳನ್ನ ಹಂಚಿಕೊಂಡು ನಗು ನಗುತ್ತಲೇ ವಿದ್ಯಾಭ್ಯಾಸ ಮುಂದುವರೆಸಿದ್ದರು.
ಎಲ್ಲಾ ಸಹಪಾಟಿಗಳ ಮಧ್ಯೆ ಬರುವ ಸಣ್ಣ ಸಣ್ಣ ಸಂಗತಿಗಳನ್ನು ದೊಡ್ಡದು ಮಾಡದೆ ಒಂದೇ ಬಳ್ಳಿಯ ಹೂವುಗಳ ಹಾಗೆ ಬೆಳೆಯುತ್ತಿದ್ದರು. ಅನೇಕ ಎಚ್ಚರಿಕೆ ಮಾತುಗಳು ಇಬ್ಬರ ಮದ್ಯೆ ಇದ್ದರೂ, ಎಷ್ಟೋ ಬಾರಿ, ಹನುಮ, ಕೃಷ್ಣನ ಹಾಸ್ಯ ಭರಿತ ಮಾತುಗಳಿಗೆ, "ಹೀಗೆ ಆಡುತ್ತಿರು, ಪಾಂಡವರು ಶಸ್ತ್ರಾಸ್ತ್ರಗಳನ್ನು ಬನ್ನಿ ಮರದ ಮೇಲೆ ಕಟ್ಟಿದ್ದರಲ್ಲಾ, ಹಾಗೆಯೇ ನಿನ್ನನ್ನು ಕಟ್ಟಿ ಬಿಡುತ್ತೇನೆ, ಮರಕ್ಕೆ ಕಟ್ಟಿ ಹಾಕುತ್ತೇನೆ, ನೀರಿಗೆ ತಳ್ಳುತ್ತೇನೆ" ಎಂದು ಪ್ರೀತಿಯಿಂದ ಗದರುತ್ತಲೇ ಇದ್ದನು. ಕೃಷ್ಣ ನಗುವಿಗೆ ಇನ್ನೊಂದು ಹೆಸರು, ನೀನು ಹಂಗೆ ಮಾಡು, ಅವಾಗಿರೋದು ಹಬ್ಬ ಎಂದು ತೆಳುವಾಗಿ ಆ ವಾತಾವರಣವನ್ನು ತಿಳಿ ಮಾಡುತ್ತಿದ್ದನು. ಗುರುಕುಲಕ್ಕೆ ತಾನೇ ಹಿರಿಯ ಎನ್ನುವ ಹಮ್ಮು ಬಿಮ್ಮು ಯಾವುದು ಇರಲಿಲ್ಲ, ತಾನು ಎಲ್ಲರೊಳಗೆ ಒಬ್ಬ ಎನ್ನುವ ತತ್ವದವನು.
ಹನುಮ ಕೂಡ, ಮಾತು ಬಿರುಸಾಗಿದ್ದರೂ, ಕೃಷ್ಣನ ಕಷ್ಟ ಸುಖಗಳನ್ನು ಅರಿತಿದ್ದ.. ಏನೇ ಆಗಲಿ ನಾವಿಬ್ಬರೂ ಜೊತೆಯಲ್ಲಿಯೇ ಕಲಿಕೆ ಮಾಡೋಣ ಅನ್ನುವ ನಂಬಿಕೆ ವಿಶ್ವಾಸವನ್ನು ಹನುಮ ಕೃಷ್ಣನಿಗೆ ಕೊಟ್ಟಿದ್ದ.
ಎಷ್ಟೋ ಬಾರಿ ಹನುಮ ಉಲ್ಟಾ ಪಲ್ಟ ಮಾತಾಡಿದ್ದರೂ, ಯಾಕೆ ಗೊತ್ತಾಗಬೇಕು ಎಂಬ ದಿಟ್ಟತನದ ಉತ್ತರ ಕೊಟ್ಟಿದ್ದರೂ, ಕೃಷ್ಣನಿಗೆ ಬೇಸರವಾಗಿದ್ದರೂ ಕೂಡ, ಮೆಲ್ಲಗೆ, ಮತ್ತು ಸಮಾಧಾನ ಚಿತ್ತದಿಂದ ಹೀಗಲ್ಲ ಹೀಗೆ ಎಂದು ಉತ್ತರಿಸಿ, ಸಾಂತ್ವನ ಹೇಳಿ, ಮತ್ತೆ ತಮ್ಮ ತಮ್ಮ ಅನುಬಂಧಗಳನ್ನು ಗಟ್ಟಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದನು..
ಯಾರೋ ಕೊಬ್ಬರಿಯಾಕಾರದ ಜುಟ್ಟನ್ನು ಎಳೆದ, ಆಟವಾಡುತ್ತಿದ್ದಾರೆ ಎಂಬ ಅನುಭವ.. ಏನಾಯ್ತು ಅಂತ ತಿರುಗಿ ನೋಡಿದರೆ, ಬೇತಾಳ, ವಿಕ್ರಮನ ತಲೆಗೂದಲಿನ ಜೊತೆ ಆಟವಾಡುತ್ತಾ, "ವಿಕ್ರಮ ಕಥೆ ಒಂದು ರೀತಿಯಲ್ಲಿ ನನ್ನ ರೀತಿಯೇ ವಿಚಿತ್ರವಾಗಿದೆ.. ಹಾ ಬೇಗ ಮುಂದುವರೆಸು .. ಮುಂದುವರೆಸು" ಎಂದಿತು.
ವಿಕ್ರಮ "ಅರೆ ಇದೇನಾಗುತ್ತಿದೆ.. ಬೇತಾಳ ಕಥೆ ಹೇಳುವ ಬದಲು, ಬೇತಾಳನನ್ನು ನಾನು ಎತ್ತಿಕೊಳ್ಳುವ ಬದಲು, ಬೇತಾಳವೆ ತನ್ನ ಬೆನ್ನ ಮೇಲೆ ನನ್ನನ್ನು ಎತ್ತುಕೊಂಡಿದೆ.. ಏನಿಡು ಕಸಿವಿಸಿ.." ಆಗ ಬೇತಾಳನಿಗೆ, "ಕೊಂಚ ಹೊತ್ತು ಇಲ್ಲಿಯೇ ಇಬ್ಬರೂ ಕೂರೋಣ.. ಏನೋ ಹಿಂಸೆ ಅನ್ನಿಸುತ್ತಿದೆ".. ಎಂದು ಅಲ್ಲಿಯೇ ಇದ್ದ ಸಮಾಧಿಯ ಮೇಲ್ಭಾಗವನ್ನು ಕೈಯಿಂದ ಶುದ್ಧ ಮಾಡಿ, ಬೇತಾಳ ನೀನು ಎದುರು ಮರದಲ್ಲಿ ನೇತಾಡಿಕೊಂಡು ಇರು, ನಾ ಇಲ್ಲಿಯೇ ಕೂತಿರ್ತೇನೆ.. ಹಾಗೆ ಮಾತಾಡಿ ಬಗೆ ಹರೆಸಿಕೊಳ್ಳೋಣ"
ವಿಕ್ರಮ.. "ಅಯ್ಯಾ ಬೇತಾಳ.. ಹನುಮ ಮತ್ತು ಕೃಷ್ಣ ಹೀಗೆ ಅನ್ಯೋನ್ಯವಾಗಿರಲು ಒಂದು ನಿನ್ನ ತರಹವೇ ವಿಚಿತ್ರ ಘಟನೆ ನಡೆಯಿತು. ಗುರುಕುಲದ ಕೆಲಸದ ಒತ್ತಡ ಕೊಂಚ ಮಟ್ಟಿಗೆ ಹನುಮನನ್ನು ಕಂಗೆಡಿಸಿತ್ತು.. ಆಗ ಕೃಷ್ಣ ಹನುಮನ ಸಹಾಯಕ್ಕೆ ಎಂದಿನಂತೆ ಧಾವಿಸಿದಾಗ, ಯಾವುದೋ ಒತ್ತಡದಲ್ಲಿ ಹನುಮ ಕೃಷ್ಣನಿಗೆ ಬೇಸರವಾಗುವಂತೆ ಕಿರಿದಾದ ನುಡಿ ಹೇಳಿಬಿಟ್ಟ.. ಶಾಂತ ಸ್ವಭಾವದ ಕೃಷ್ಣನಿಗೂ ಯಾಕೋ ಮನಸ್ಸು ಸರಿಯಿರಲಿಲ್ಲ.. ಅವನು ಒಂದು ಬಿರು ನುಡಿಯ ಬಾಣ ಬಿಟ್ಟ.. "
"ಅಷ್ಟೇ ಸಾಕಾಗಿತ್ತು .. ಸುಂದರವಾದ ಮನಸ್ಸಿನ ಕನ್ನಡಿಯಲ್ಲಿ ಒಂದು ಚೂರು ಕೊಳೆ ಕೂರಲು.. "
"ಒಂದಷ್ಟು ದಿನ.. ಇಬ್ಬರಲ್ಲೂ ಮಾತಿಲ್ಲ, ಕಥೆಯಿಲ್ಲ.. ಒಬ್ಬರ ಸಹಾಯಕ್ಕೆ ಇನ್ನೊಬ್ಬರು ಬರುವುದು ಕಮ್ಮಿಯಾಗಿತ್ತು.. ಆದರೆ ಕೃಷ್ಣನಿಗೆ ಪ್ರಚಂಡ ಆತ್ಮ ವಿಶ್ವಾಸ.. ಮತ್ತೆ ಹನುಮನ ಸ್ನೇಹ ಮುಂದುವರೆಯುತ್ತದೆ ಎಂದು. ಆದರೆ ಹನುಮನಿಗೆ ಏನೋ ಒಂದು ತರಹಾ ಹಿಂಸೆ.. ಗುರು ಸ್ಥಾನದಲ್ಲಿ ಇದ್ದವರು ಹೀಗೆ ಮಾತಾಡಿಬಿಟ್ಟರಲ್ಲ.. ಅಲ್ಲಿ ತನ್ನ ತಪ್ಪು ಇತ್ತೋ ಇಲ್ಲವೋ ಆ ಕ್ಷಣಕ್ಕೆ ಹನುಮನಿಗೆ ಅರಿವಾಗಲಿಲ್ಲ.. ಆದರೆ ಇಬ್ಬರ ನಡುವಿನ ಮೌನದ ಕಣಿವೆ ಅಗಲವಾಗುತ್ತಲೇ ಹೋಗಿದ್ದು ಮಾತ್ರ ಸುಳ್ಳಲ್ಲ .".
ಇಷ್ಟು ಹೇಳಿ ವಿಕ್ರಮ ಸುಮ್ಮನಾಗಿಬಿಟ್ಟ! ಹಾಗೆಯೇ ಸಮಾಧಿಯ ಮೇಲೆ ಒರಗಿ ಕುಳಿತುಬಿಟ್ಟ
ಬೇತಾಳ ತನ್ನ ಬಿಳಿದಾದ ರೇಷ್ಮೆ ಕೂದಲನ್ನು ಕೆರೆದುಕೊಳ್ಳಲು ಶುರುಮಾಡಿತು..
"ಅರೆ ವಿಕ್ರಮ ಕಥೆ ಮುಂದುವರೆಸು.. ದಯಮಾಡಿ ಮುಂದುವರೆಸು.. ಏನಾಯಿತು ಅವರಿಬ್ಬರಿಗೂ, ಮತ್ತೆ ಸ್ನೇಹ ಮುಂದುವರೆಯಿತೆ ಇಲ್ಲವೇ ಅವರಿಬ್ಬರೂ ಕಡು ವೈರಿಗಳಾದರೆ..ಹೇಳಪ್ಪ .. ನೀ ಹೇಳದೆ ಹೋದರೆ ನಿನ್ನ ತಲೆ........ "
"ಎಲೈ ಬೇತಾಳವೇ.. ನನ್ನ ತಲೆ ಹೋಳಾಗುವುದಿರಲಿ... ಈ ಕಥೆಯನ್ನು ನೀ ಈಗ ಮುಂದುವರೆಸಬೇಕು.. ಇಲ್ಲವೇ ಗಣಪನ ಗುಡಿಗೆ ನಿನ್ನನ್ನು ಎಳೆದೊಯ್ದು ಬಿಡ್ತೀನಿ.. ಈಗ ನಿನ್ನ ಸಮಯ ಶುರುವಾಯಿತು.. ಇಲ್ಲಿಂದ ನೀ ಕಥೆ ಮುಂದುವರೆಸಬೇಕು"
ಬೇತಾಳಕ್ಕೆ ಚಿಂತೆ ಶುರುವಾಯಿತು.. ತಲೆ ಕೆಳಗೆ ಮಾಡಿತು.. ರೆಂಬೆ ಹತ್ತಿ ಜೋತಾಡಿತು.. ತಲೆ ಕೆರೆದು ಕೊಂಡಿತು..ಹುಣಿಸೆ ಮರದಲ್ಲಿದ್ದ ತನ್ನ ಬಂಧು ಬಾಂಧವರ ಸಹಾಯ ಬೇಡಿತು.. ಆ ಸ್ಮಶಾನದಲ್ಲಿದ್ದ ಅರಳಿ ಮರದಿಂದ ತಣ್ಣನೆ ಗಾಳಿಯಲ್ಲಿ ಒಂದು ಹಸಿರಾದ ನವಿರಾದ ಅರಳಿ ಎಲೆ ತೇಲಿ ಬಂತು.. ಆ ಅರಳಿ ಎಲೆಯನ್ನೇ ನೋಡುತ್ತಾ ಒಂದು ಕ್ಷಣ ಹಾಗೆ ಯೋಚಿಸಿತು ಬೇತಾಳ.. ತಲೆಯಲ್ಲಿ ದಿಗ್ಗನೆ ವಿದ್ಯುತ್ ದೀಪ ಹತ್ತಿಕೊಂಡಂತೆ ಮುಖವೆಲ್ಲಾ ಬೆಳ್ಳಗೆ ಹೊಳೆಯಿತು.. "ಗೊತ್ತಾಯಿತು ಗೊತ್ತಾಯಿತು".. ಅಂತ ಅಲ್ಲಿದ್ದ ಸಮಾಧಿಯ ಮೇಲೆಲ್ಲಾ ಕುಣಿದಾಡಿತು . ಹುಣಿಸೇಮರವನ್ನು ಹತ್ತಿ ಇಳಿದು ಜೀಕಾಡಿತು..
ವಿಕ್ರಮನಿಗೆ ಹೇಳಿತು.. "ಅಯ್ಯಾ ರಾಜ ವಿಕ್ರಮ.. ನೀ ದಣಿವಿಲ್ಲದೆ ನನಗೆ ಇವತ್ತು ಕಥೆ ಹೇಳಿದೆ.. ಈಗ ಕೇಳು ಅದರ ಮುಂದುವರೆದ ಭಾಗವನ್ನು"
ವಿಕ್ರಮ ಮೈಯೆಲ್ಲಾ ಕಿವಿಯಾಗಿ ಬೇತಾಳದ ಬಾಯಿಂದ ಹೊರಬರುವ ಕಥೆಯ ಮುಂದಿನ ಭಾಗಕ್ಕೆ ಕಾದು ಕೂತ..
"ಹನುಮನ ಮತ್ತು ಕೃಷ್ಣನ ಸ್ನೇಹ ಗಾಜಿನದಾಗಿರಲಿಲ್ಲ.. ಅದು ಥಳ ಥಳ ಹೊಳೆಯುವ ಬೆಳ್ಳಿಯ ಅಥವಾ ಚಿನ್ನದ ಲೋಹದಾಗಿತ್ತು.. ಹೌದು ಕೆಲ ಕಾಲ ಗಾಳಿ ಬೆಳಕು ನೀರು ಸೋಕಿ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳು ಮಾಸುವ ಹಾಗೆ, ಅವರ ಸ್ನೇಹ ಕೂಡ ಪರೀಕ್ಷೆಯ ಘಟ್ಟಕ್ಕೆ ಬಂದು ನಿಂತಿತ್ತು.. ಆದರೆ ಅವರಿಬ್ಬರ ಮನಸ್ಸು ಮಾತ್ರ ಸ್ನೇಹಕ್ಕೆ ಹಾತೊರೆಯುತ್ತಿತ್ತು... ಅವರು ಮೊದಲು ಬರಲಿ ಎನ್ನುವ ಚಿಕ್ಕ ಅಹಂ ಇಬ್ಬರಲ್ಲೂ ಇತ್ತು.. ಹಾಗಾಗಿ ಮನಸ್ಸಿನ ಪಾತ್ರೆಗಳು ಕೊಂಚ ಕಾಲ ಮಂಕಾಗಿದ್ದು ನಿಜ .. ಆದರೆ ಅವರಲ್ಲಿನ ಸ್ನೇಹ ಜ್ಯೋತಿ ಅಸಮಾಧಾನ ಎನ್ನುವ ಗಾಳಿಗೆ ಸಿಕ್ಕಿದ್ದರೂ ನಲುಗದೆ, ಆರದೆ ಬೆಳಗುತಿತ್ತು.
"ಸರಿ ಮುಂದಕ್ಕೆ ಹೇಳು ಬೇತಾಳವೇ"
ಆ ಹೊತ್ತಿನಲ್ಲಿ ಕೃಷ್ಣನಿಗೆ ಒಂದು ಅರಳಿ ಎಲೆಯ ಮೇಲೆ ಸಂದೇಶ ಬಂತು.. "ಕೃಷ್ಣ ಇಂದು ಗುರುಕುಲದಲ್ಲಿ ಬಹಳ ಕಷ್ಟವಾಯಿತು, ವಿಪರೀತ ಕೆಲಸ.. ಸಾಕಪ್ಪ ಅನಿಸಿತು.. .. ಹೇಗಪ್ಪ ಮುಂದುವರೆಯುವುದು ಎನ್ನಿಸಿತು.. ಆದರೆ ಏನು ಮಾಡೋದು ಕೆಲಸ ಹೊತ್ತಿದ್ದೇನೆ ಮಾಡಲೇ ಬೇಕು.. "
ಕೃಷ್ಣ ಅದಕ್ಕೆ ಉತ್ತರಿಸಿ " ಏನೂ ಮಾಡೋಕೆ ಆಗೋಲ್ಲ ಹನುಮ ಪುಟ್ಟಾ.. ಇದೆ ಜೀವನ.. ಹೊಡೆದಾಡುತ್ತಾ ಬಡಿದಾಡುತ್ತ ನಮ್ಮ ತನವನ್ನು ಉಳಿಸಿಕೊಂಡು ಮುಂದುವರೆಯಬೇಕು... "
ಹೀಗೆ ಸುಮಾರು ಹೊತ್ತು ಇಬ್ಬರೂ ಒಬ್ಬರನ್ನು ಒಬ್ಬರು ಸಂತೈಸಿದರು.. ಜೊತೆಯಲ್ಲಿ ತಮ್ಮಿಬ್ಬರ ಒಂದು ಚಿಕ್ಕ ಅಹಂ ಸುಂದರ ಗೆಳೆತನ ಕವಲು ಹಾದಿಗೆ ಹೊರಳುವ ಹೊತ್ತಿನಲ್ಲಿ ಈ ಮಾತುಗಳು ಮತ್ತೆ ಯಥಾ ಸ್ಥಿತಿ ಮರಳಲು ಅನುಕೂಲ ಮಾಡಿಕೊಟ್ಟಿತು. ಕೃಷ್ಣ ಹೇಳುತ್ತಾನೆ ಹನುಮ ನನ್ನ ಮಾತಿಂದ ನಿನಗೆ ನೋವಾಗಿದ್ದರೆ ಕ್ಷಮೆ ಇರಲಿ.. ಹನುಮ ಕೂಡ ಇದೆ ಮಾತನ್ನು ಉಚ್ಚರಿಸುತ್ತಾನೆ..
ಇಬ್ಬರೂ ತಮ್ಮ ತಮ್ಮ ತಪ್ಪಿನ ಅರಿವಾಗಿ, ಎಂಥಹ ಕ್ಷುಲ್ಲಕ ಕಾರಣಕ್ಕೆ ನಾವಿಬ್ಬರೂ ಗೆಳೆತನದ ದೀಪಕ್ಕೆ ಗಾಳಿ ಬೀಸಲು ಹೊರಟಿದ್ದೆವು.. ಎಂದು ಕೊಂಚ ನಾಚಿಕೆಯೂ ಆಯಿತು. ಆದರೆ ಕಾಲದ ಯಜಮಾನನ ಹತ್ತಿರ ಉತ್ತರ ಇದ್ದೆ ಇರುತ್ತದೆ ಅಲ್ಲವೇ..
ಆ ಕಾಲನ ಯಜಮಾನನ ಕೃಪೆಯಲ್ಲಿ ಮತ್ತೆ ಎರಡು ಸುಂದರ ಹಾಯಿದೋಣಿಗಳು ಗೆಳೆತನದ ದಿಕ್ಕಿನತ್ತ ಪಯಣಿಸಲು ಶುರುಮಾಡಿದವು.. !
ಬೇತಾಳ ನಿಲ್ಲಿಸಿತು.. "ಈಗ ನೀ ಹೇಳು ವಿಕ್ರಮ.. "
೧) ಮೊದಲು ನೀನೇಕೆ ಕಥೆ ನನಗೆ ಹೇಳಿದೆ.. ?
೨) ನಿನ್ನ ತಲೆಗೂದಲನ್ನು ನಾ ಎಳೆದದ್ದು ಏಕೆ?
೩) ಸಮಾಧಿಯನ್ನು ಒರೆಸಿ ಕೂತಿದ್ದೇಕೆ?
೪) ಹನುಮ ಮತ್ತು ಕೃಷ್ಣನ ಸ್ನೇಹಕ್ಕೆ ಕೊಂಚ ಘಾಸಿಯಾಗಿದ್ದರೂ ಕೂಡ ಅವರ ಸ್ನೇಹ ಜ್ಯೋತಿ ಬೆಳಗುತ್ತಿತು ಇದು ಏಕೆ?
೫) ಅರಳಿ ಎಲೆ ಮತ್ತು ಆ ಸಂದೇಶ ಮತ್ತೆ ಅವರನ್ನು ಸ್ನೇಹ ಲೋಕದಲ್ಲಿ ಒಂದು ಮಾಡಿದ್ದು ಹೇಗೆ ಮತ್ತು ಏಕೆ?
೬) ಮತ್ತೆ ಇವರಿಬ್ಬರ ಮಧ್ಯೆ ಈ ರೀತಿಯ ಬಿರುಕು ಬರಲು ಸಾಧ್ಯವೇ?
೭) ನೀ ಕ್ಷತ್ರಿಯನಾದರೂ ಬ್ರಾಹ್ಮಣನ ತರಹ ಕೊಬ್ಬರಿಯಾಕಾರದ ಜುಟ್ಟನ್ನು ಬಿಟ್ಟು ಕೊಂಡಿರುವುದು ಏಕೆ?
ಈ ಮೇಲಿನ ಪ್ರಶ್ನೆಗಳಿಗೆ ನೀ ಉತ್ತರ ಹೇಳದಿದ್ದರೆ ನಿನ್ನ ಜುಟ್ಟನ್ನು ಎಳೆದು ಎಳೆದು ಗೋಳು ಹುಯ್ದುಕೊಳ್ಳುತ್ತೇನೆ.. !
"ಎಲೈ ಬೇತಾಳವೇ.. ತಗೋ ನಿನ್ನ ಪ್ರಶ್ನೆಗಳಿಗೆ ಉತ್ತರ.. "
"ನಾ ಕ್ಷತ್ರಿಯ ಆಗಿರಬಹುದು, ಆದರೆ ಶಾಸ್ತ್ರಗಳನ್ನು ಕಲಿಯುವುದಕ್ಕೆ ಈ ರೀತಿಯ ಜುಟ್ಟು ಅವಶ್ಯಕ ಎನ್ನಿಸಿತು.. ಏಕಾಗ್ರತೆ ಬರುತ್ತದೆ.. ಅಂದಕ್ಕೆ ಬೆಲೆ ಕೊಡಬೇಕಾಗುವುದಿಲ್ಲ.. ಅಲಂಕಾರದ ಕಡೆಗೆ ಗಮನ ಹರಿಯುವುದಿಲ್ಲ.. ಇಲ್ಲಿ ಹನುಮ ಮತ್ತು ಕೃಷ್ಣನು ಗುರುಕುಲದಲ್ಲಿ ಇದ್ದದರಿಂದ ಅವರ ಕಥೆಯನ್ನು ನಾ ಹೇಳಬೇಕಾದ್ದರಿಂದ ಈ ರೀತಿಯ ಕೇಶ ವಿನ್ಯಾಸ..
ಅಂದಕ್ಕೆ ಬೆಲೆ ಕೊಡದೆ ಸ್ನೇಹಕ್ಕೆ ಬೆಲೆ ಕೊಡುವ ಮನಸ್ಸು ಕೃಷ್ಣ ಮತ್ತು ಹನುಮನದು ಎನ್ನುವ ಸಾಂಕೇತಿಕ ಭಾಷೆ ಇಲ್ಲಿದೆ
"ನೀನಗೆ ಕಥೆ ಹೇಳಿ ಹೇಳಿ ಏಕಾತನತೆ ಬಂದಿರುತ್ತದೆ, ನಾ ನಿನ್ನ ಪ್ರಶ್ನೆಗೆ ಉತ್ತರ ಹೇಳಿ ಹೇಳಿ ನನಗೂ ಬೇಸರವಾಗಿರುತ್ತದೆ, ಅದಕ್ಕೆ ಒಂದು ಕ್ಷಣ ಸ್ಥಾನ ಪಲ್ಲಟ ಮಾಡಿಕೊಂಡಾಗ, ಒಬ್ಬರ ಕಷ್ಟ ಇನ್ನೊಬ್ಬರಿಗೆ ಅರ್ಥವಾಗುತ್ತದೆ. ಕೃಷ್ಣ ಮತ್ತು ಹನುಮನ ವಿಚಾರದಲ್ಲಿಯೂ ಹಾಗೆ ಆಗಿದ್ದು.. ಇಬ್ಬರೂ ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿದರು, ಆಗ ತಮ್ಮಿಬ್ಬರ ತಪ್ಪು ಅರಿವಾಯಿತು. ಸ್ನೇಹಕ್ಕೆ ಮಿಗಿಲಾದದ್ದು ಏನಿದೆ..ಅದಕ್ಕೆ ನಾ ನಿನ್ನ ಬದಲು ನಾ ಕಥೆ ಹೇಳಿದ್ದು.. "
ಒಬ್ಬರ ಜೊತೆಯಲ್ಲಿ ಒಬ್ಬರು ನಿಂತಾಗ, ಇಬ್ಬರೂ ನನ್ನದೇ ಕಷ್ಟ ದೊಡ್ಡದು ಅಂದು ಕೊಳ್ಳುವ ಬದಲು, ಎಲ್ಲರಿಗೂ ಅವರವರದೇ ಕಷ್ಟ ಸುಖ ಇರುತ್ತದೆ.. ಕನ್ನಡಿ ಮತ್ತು ಬಿಂಬ ಒಂದೇ ಆದರೂ ಅದರ ಎಡ ಬಲ ಬದಲಾಗುವ ಹಾಗೆ.. ಒಳ್ಳೆಯ ಮನೋಭಾವ ಬೆಳೆಸಿಕೊಳ್ಳಬೇಕು ಎನ್ನುವ ಸಂದೇಶ ಇಲ್ಲಿದೆ
ನಿನಗೆ ಕಥೆ ಹೇಳುತ್ತಾ ಹೇಳುತ್ತಾ, ಒಂದು ಕ್ಷಣ ನನ್ನೇ ನಾ ಮರೆತಿದ್ದೆ, ನೀನು ನನ್ನ ಜುಟ್ಟನ್ನು ಎಳೆಯುವ ಮೂಲಕ ಮತ್ತೆ ನನ್ನನ್ನು ಈ ಲೋಕಕ್ಕೆ ಕರೆತಂದೆ.. ನಿನ್ನ ಚೇಷ್ಟೆ ನನಗೆ ಮತ್ತೆ ಈ ಲೋಕಕ್ಕೆ ಮರಳಲು ಅವಕಾಶವಾಯಿತು.
ನಗು ಎಂಬುದು ಮಂಜಿನ ಹನಿ ಇದ್ದ ಹಾಗೆ.. ಅದು ಎಲೆಯ ಮೇಲೆ ಇದ್ದಾಗ ಮುದ್ದಾಗಿ .. ಸುಂದರವಾಗಿ ಕಾಣುತ್ತದೆ. ಆ ನಗುವಿನ ಬಿಂದುವನ್ನು ಅನುಭವಿಸಬೇಕು, ಬೆಳಗಿನ ಮಂಜಿನ ಹನಿಯಂತೆ. ಅದು ನೀ ಜುಟ್ಟನ್ನು ಎಳೆದಾಗ ಮತ್ತೆ ನನ್ನನ್ನು ಈ ಲೋಕಕ್ಕೆ ಕರೆತಂದಂತೆ.. ನಗು ಮತ್ತೆ ನಮ್ಮನ್ನು ಉತ್ಸಾಹದ ಚಿಲುಮೆಗೆ ಒಡ್ಡುತ್ತದೆ.
ನಾ ಸಮಾಧಿಯನ್ನು ಒರೆಸಿದ್ದು, ಒಳಗೆ ಯಾರೋ ಮಲಗಿರುತ್ತಾರೇ, ಜೀವನದಲ್ಲಿ ನೋವು ನಲಿವು ಎಲ್ಲವನ್ನು ಕಂಡಿರುತ್ತಾರೆ, ಅಂಥವರ ಸಮಾಧಿಯ ಮೇಲೆ ನಾವು ಕೂತಾಗ ಅವರ ಜೀವನದ ನೋವು ನಲಿವುಗಳು ನಮ್ಮ ಮೇಲೆ ಪರಿಣಾಮ ಬೀರಬಾರದು, ಹಾಗೆಯೇ, ನಮ್ಮ ಜೀವನದಲ್ಲಿ ನಡೆವ ಸಣ್ಣ ಪುಟ್ಟ ತಪ್ಪುಗಳು ನಮ್ಮಜೀವನದ ನೆಮ್ಮದಿಯನ್ನು ಹಾಳು ಮಾಡಬಾರದು. ನಾವಿಲ್ಲಿ ಕೂತದ್ದೇಕೆ, ವಿಶ್ರಮಿಸಲು ತಾನೇ, ವಿಶ್ರಮಿಸಲು ಕೂತಾಗ ಮನಸ್ಸಿನ ಹಳೆಯ ಕಸಗಳನ್ನು ಗುಡಿಸಿ ವಿಶ್ರಮಿಸಬೇಕು, ಅದಕ್ಕೆ ಸಾಂಕೇತಿಕವಾಗಿ ಸಮಾಧಿ ಗುಡಿಸಿ ಕೂತಂತೆ ,ನಮ್ಮ ಮನಸ್ಸನ್ನು ತಪ್ಪುಗಳು ಎನ್ನುವ ಆ ಕಸದಿಂದ ಮುಕ್ತಿಗೊಳಿಸಿ ಮುಂದುವರೆಯಬೇಕು.
ಕಸ ಕಟ್ಟಿಕೊಂಡ ಕೊಳವೆ ಎಂದೂ ತನ್ನ ಹಿಂದೆ ಬರುವ ಸಿಹಿ ನೀರನ್ನು ಮುಂದಕ್ಕೆ ಕಳಿಸಲಾಗದು, ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಿ ಮುಂದಕ್ಕೆ ಹೋಗಿ ಎಂದು ಹೇಳಲು ನಾ ಹಾಗೆ ಮಾಡಿದೆ
ಹನುಮ ಮತ್ತು ಕೃಷ್ಣ ಮಂಜಿನಗಡ್ಡೆ ರೀತಿ. ಮಂಜಿನಗಡ್ಡೆ ಕಷ್ಟ, ಕೋಪ ಎನ್ನುವ ಬಿಸಿಲಿಗೆ ಕರುಗುತ್ತದೆ, ಅಹಂ ಎನ್ನುವ ನೀರಾಗಿ ಬೇರೆ ಕಡೆಗೆ ಹರಿಯುತ್ತದೆ, ಮತ್ತೆ ತಂಗಾಳಿ ಎನ್ನುವ ಸ್ನೇಹದ ಸಂಕೊಲೆಗೆ ಗಟ್ಟಿಯಾಗಿ ಮಂಜಾಗುತ್ತದೆ, ಹೀಗಿರುವಾಗ ಹನುಮ ಮತ್ತು ಕೃಷ್ಣನ ಮಧ್ಯೆ ಬಂದ ಮುನಿಸು ಕೇವಲ ಕ್ಷಣ ಮಾತ್ರ.. ಹಾಗಾಗಿ ಅವರ ಸ್ನೇಹದ ಜ್ಯೋತಿ ಆರದೆ ಉರಿಯುತ್ತಲೇ ಇತ್ತು.
ಒತ್ತಡ ಅಥವಾ ಪರಿಸ್ಥಿತಿ ನಮ್ಮನ್ನು ಬದಲಿಸಿದರೂ, ನಾವು ನಮ್ಮ ಮೂಲ ಗುಣವನ್ನು ಬದಲಿಸಿಕೊಳ್ಳಬಾರದು..
ಅರಳಿ ಎಲೆಯನ್ನು ನೀ ನೋಡಿದ್ದೀಯ ಅಲ್ಲವೇ, ಒಂದು ಕೊನೆಯಿಂದ ಒಂದಾಗಿ ಶುರುವಾಗುತ್ತದೆ, ನಿಧಾನವಾಗಿ ಅರಳಿ ಕವಲಾಗುತ್ತದೆ, ನಂತರ ಮತ್ತೆ ಒಂದಾಗಿ ಮುಂದೆ ಸಾಗುತ್ತದೆ. ಹನುಮ ಮತ್ತು ಕೃಷ್ಣನ ಸ್ನೇಹ ಕೂಡ ಹಾಗೆಯೇ ಒಂದಾಗಿ ಸೇರಿತ್ತು, ಕಾರಣಾಂತರಗಳಿಂದ ಕವಲಾಯಿತು ಮತ್ತೆ ಒಂದಾಯಿತು.
ಬದುಕು ಕವಲಾಗಬಹುದು, ಆದರೆ ಕವಲೇ ಬದುಕಾಗಬಾರದು
ಒಂದು ಬಾಣ ತನ್ನ ಮೊನಚನ್ನು ಕಳೆದುಕೊಂಡಾಗ, ಮತ್ತೆ ಅದನ್ನು ಸಾಣೆ ಹಿಡಿದು ಮೊನಚು ಮಾಡುತ್ತಾರೆ, ಆಗ ಬಾಣಕ್ಕೆ ಅರಿವಾಗುತ್ತದೆ, ಹೌದು, ನಾ ತೀಕ್ಷ್ಣತೆ ಕಳೆದುಕೊಂಡಾಗ, ಮತ್ತೆ ನನ್ನನ್ನು ಮರಳಿ ಯಥಾಸ್ಥಾನಕ್ಕೆ ತರುತ್ತಾರೆ, ಹಾಗೆಯೇ ಬಿಲ್ಲಿನ ಹೆದೆ ಬಾಗಿದಾಗ ಮಾತ್ರವೇ ಬಾಣ ಮುಂದಕ್ಕೆ ಹೋಗಿ ಗುರಿ ಮುಟ್ಟಲು ಸಾಧ್ಯ.. ಬಿಲ್ಲು ಬಾಣ ಜೊತೆಯಾಗಿದ್ದಾಗ ಮಾತ್ರ ಎರಡಕ್ಕೂ ಬೆಲೆ ಎನ್ನುವ ರೀತಿಯಲ್ಲಿ ಹನುಮ ಮತ್ತು ಕೃಷ್ಣ ಇಬ್ಬರಿಗೂ ಕೊಂಚ ಸಮಯ ದೂರಾಗಿದ್ದಾಗ, ತಮ್ಮ ತಮ್ಮ ಸ್ನೇಹದ ಬೆಲೆ ಅರಿವಾಯಿತು.. ಮತ್ತೆ ಬಿರುಕು ಮೂಡಲು ಸಾಧ್ಯವೇ ಇಲ್ಲ ಎನ್ನುವಂತೆ ಸ್ನೇಹದ ಸಂಕೋಲೆಯಲ್ಲಿ ಮುಂದುವರೆದರು.
ಬಿಲ್ಲಿನ ಹೆದೆ ಎಂಬ ಕಷ್ಟಗಳು ನಮ್ಮನ್ನು ಬಾಗಿಸುವಂತೆ ಆ ಕ್ಷಣದಲ್ಲಿ ಬಾಗಬೇಕು ಆಗಲೇ ಗುರಿ ಎನ್ನುವ ಮೊನಚಾದ ಬಾಣ ತನ್ನ ಸ್ಥಾನವನ್ನು ಸೇರಲು ಸಾಧ್ಯವಾಗುವುದು.
ಬೇತಾಳ ಇಷ್ಟೂ ಉತ್ತರಗಳನ್ನು ಕೇಳಿ, ವಿಕ್ರಮನ ಬೆನ್ನನ್ನು ಏರಿ, ಶಭಾಶ್ ವಿಕ್ರಮ, ಕಥೆ ನೀ ಹೇಳಿದೆ, ಅದನ್ನು ನಾ ಮುಂದುವರೆಸಿದೆ, ಮತ್ತೆ ನೀ ನನ್ನ ಸಂದೇಹಗಳನ್ನ ನಿವಾರಿಸಿದೆ. ನಮ್ಮಿಬ್ಬರ ಗೆಳೆತನ ಒಂದು ಮಾದರಿಯಾಗುತ್ತದೆ. ಸಂಕಷ್ಟ ಎನ್ನುವ ಬೇತಾಳವನ್ನು ನೀ ಹೊತ್ತು ತರುವೆ.. ನಾ ನಿನಗೆ ಕಷ್ಟದ ಅರಿವಾಗಬಾರದು ಎಂದು ತುಂಟತನ, ಹಾಸ್ಯ ಮಾಡುವೆ, ಅದರಿಂದ ನಿನಗೂ ಖುಷಿ ನನಗೂ ಸಂತೋಷ..
ಹೌದು ಬೇತಾಳ ನಮ್ಮಿಬ್ಬರ ಗೆಳೆತನ ಕೃಷ್ಣ ಹನುಮನ ಸ್ನೇಹದಂತೆ ಸದಾ ಬೆಳಗುತ್ತಲಿರಲಿ ಎಂದು ಹೇಳಿದ್ದೆ ತಡ ಬೇತಾಳ ಸೊಯ್ಯ್ ಎಂದು ಹಾರಿ ತೇಲುತ್ತಾ ಎದುರಿಗೆ ಇದ್ದ ಹುಣಿಸೆ ಮರಕ್ಕೆ ಜೋತು ಬಿದ್ದಿತು.
ಚಿಕ್ಕವಳಿದ್ದಾಗ ಚಂದಮಾಮ ಕಥೆಗಳನ್ನ ಓದುವಾಗ, ವಿಕ್ರಮ ಬೇತಾಳ ನನ್ನ ಅಚ್ಚುಮೆಚ್ಸಿನದು. ಮತ್ತೆ ಆ ನೆನಪನ್ನು ಮೆಲುಕು ಹಾಕಿದ ಹಾಗಾಯಿತು. ಕಥೆ ಸುಂದರವಾಗಿ ಬಂದಿದೆ, ಯಾವುದೇ ಮಾತಿಗಿಂತ ಸ್ನೇಹ ಸಂಬಂಧ ಹೆಚ್ಚು ಮುಖ್ಯ ಮತ್ತೆ ನಾವು ಇನ್ನೊಬರ ಜಾಗದಲ್ಲಿ ನಿಂತು ಯೋಚಿಸಿದಾಗ ಮಾತ್ರ ಅವರ ನೋವು ನಲಿವಿನ ಅರಿವಾಗುತ್ತೆ ಅನ್ನೋದನ್ನ ಸೊಗಸಾಗಿ ತೋರಿಸಿದ್ದೀರಿ
ReplyDeleteನಾನು ಓದಿದ ಬೇತಾಳ ಕಥೆಗಳಲ್ಲಿ ಇದೇ ಅತ್ಯುತ್ತಮವಾದ ಕಥೆಯಾಗಿದೆ!
ReplyDelete