Thursday, July 31, 2025

ಕೊರವಂಗಲದ ಡಿಂಡಿಮ ಕವಿ

 ಭೋಜರಾಜನ ಆಸ್ಥಾನ 

ಕಾಳಿದಾಸ ಕವಿ 

ಡಿಂಡಿಮ ಕವಿ 

ಕಮಲೆ ಕಮಲೋತ್ಪತ್ತಿಹಿ 

ಡಿಂಡಿಮ 

ಇದೆಲ್ಲ ಎಲ್ಲರಿಗೂ ತಿಳಿದ ವಿಷಯ ಅದರಲ್ಲೂ ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರ ನೋಡದವರಿಲ್ಲ ಅಂತ ಧೈರ್ಯವಾಗಿ ಹೇಳಬಹುದು.. 

ನಮ್ಮ ಅದ್ಭುತ ಕೊರವಂಗಲದ ಬೇರು ಇಷ್ಟೊಂದು ಗಟ್ಟಿಯಾಗಿ ನಿಂತಿರೋದಕ್ಕೆ ಕಾರಣ ಅಜ್ಜಯ್ಯ ಅಜ್ಜಿ ನೆಟ್ಟ ಸಂಸ್ಕಾರ ಎಂಬ ಬೃಹತ್ ವೃಕ್ಷ .. ನಾವುಗಳು ಆ ಬೃಹತ್ ವೃಕ್ಷದ ರೆಂಬೆ ಕೊಂಬೆಗಳು.. 

ಸಾಕಪ್ಪ ಕೊರೆತ ಅಂದ್ರಾ.. ಸರಿ ವಿಷಯಕ್ಕೆ ಬರ್ತೀನಿ 

ಅಲ್ಲಿ ಡಿಂಡಿಮ ಕವಿ ಸರಸ್ವತಿಯನ್ನು ತನ್ನ ಡಮರುಗದಲ್ಲಿ ಸಾಕ್ಷತ್ಕರಿಸಿಕೊಂಡು ಆತ ಪ್ರಶ್ನೆ ಕೇಳಿದಾಗ ಪ್ರತಿದ್ವಂದಿಗಳು  ಉತ್ತರಕ್ಕೆ ತಡಕಾಡುವಂತೆ ಆ ಡಮರುಗದ ಶಬ್ದದಿಂದ ಎಲ್ಲರ ಬುದ್ದಿಯನ್ನು ಮಂಕು ಮಾಡಿ ಬಿಡುತ್ತಾನೆ.. 

ಗೊತ್ತೋ ಗುರು ಮುಂದಕ್ಕೆ ಹೇಳು 

ಹೌದು ನಮ್ಮ ರಜನೀಶನೂ ಹಾಗೆ.. ಅನೇಕಾನೇಕ ವಿಷಯಗಳನ್ನು ತಿಳಿದುಕೊಂಡು, ಅದನ್ನು ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸುವ ಅವನ ಜಾಣ್ಮೆಗೆ ತಲೆದೂಗದವರಿಲ್ಲ.. 

ಭೋಜರಾಜನ ಆಸ್ಥಾನದಲ್ಲಿದ್ದ ಏಕಸಂಧಿಗ್ರಾಹಿ ತರಹ ಇವನು ಕೂಡ. ಒಮ್ಮೆ ಇವನಿಗೆ ವಿಷಯ ತಾಕಿತೆಂದರೆ ಮುಗಿಯಿತು.. ಬ್ರಹ್ಮ ಮತ್ತು ವಿಷ್ಣು ಶಿವನ ಆದಿ ಅಂತ್ಯವನ್ನು ಹುಡುಕುತ್ತಾ ಹೋಗಿ ಕಡೆಯಲ್ಲಿ ಇದು ಚಿದಂಬರ ರಹಸ್ಯ ಎನ್ನುವ ಹಾಗೆ.. ಇವನು ವಿಷಯದ ಆಳಕ್ಕೆ ಇಳಿದು, ಅದರ ಹೂರಣವನ್ನು ಅರಿತು, ಅದನ್ನು ತಕ್ಕ ಹಾಗೆ ಬಳಸುವ ಜಾಣ್ಮೆಕಾರ (ಜಾಣ್ಮೆಕಾರ ಹೊಸ ಶಬ್ದ.. ನನಗೆ ಅನಿಸಿದ್ದು)

ರಜನೀಶನಿಗೆ ಗುಡಿ ಕೊಟ್ಟು ಇದನ್ನು ಸಿಂಗರಿಸು ಎಂದರೆ ಸಾಕು ಅದಕ್ಕೆ ಅದ್ಭುತವಾದ ಕಳಸ ಇಡುವ ಚತುರ.. ನಮಗೆ ಅನಿಸೋದಕ್ಕೆ ಸಾಧ್ಯವೇ ಇಲ್ಲ ಅನ್ನಿಸುವಂತೆ ಆ ಕಾರ್ಯಕ್ಕೆ ಸುವರ್ಣ ಚೌಕಟ್ಟು ಹಾಕಿಕೊಟ್ಟು ಮನಸ್ಸಿಗೆ ಸಂತಸ ನೀಡುವ ಸಂತ ಇವನು.. 

ನನಗೆ ಅನೇಕ ಬಾರಿ ಅನುಭವಕ್ಕೆ ಬಂದಿದೆ.. ಗುರು ಇದಕ್ಕೆ ಒಂದು ದಾರಿ ತೋರಿಸು ಎಂದರೆ, ಆತ ಆ ಹಾದಿಯನ್ನು ರಹದಾರಿ ಮಾಡಿ, ಅದಕ್ಕೆ ಬೆಳಕು ಕೊಟ್ಟು... ಎಲ್ಲರೂ ತಲೆದೂಗುವಂತೆ ಮಾಡುವಷ್ಟು ಶಕ್ತ ಇವನು.. ಅಕ್ಷರಗಳನ್ನು ಈತನೆಡೆಗೆ ಇಟ್ಟರೆ ಸಾಕು ಅದನ್ನು ಸುಂದರವಾದ ಪದಗಳ ಮಾಲಿಕೆ ಮಾಡುವ ಚಾಣಾಕ್ಷ.. 

ಏಕಲವ್ಯ ಶಬ್ದವೇದಿ ವಿದ್ಯೆಯನ್ನು ದ್ರೋಣಾಚಾರ್ಯರ ಮೂರ್ತಿ ನೋಡುತ್ತಾ ಕಲಿತ.. ನಮ್ಮ ರಜನೀಶ ಛಲದಂಕ ಮಲ್ಲ.. ಒಮ್ಮೆ ಅದರ ಕಡೆಗೆ ಗಮನ ಮತ್ತು ಮನ ಹರಿದರೆ ಸಾಕು.. ಅದರ ತಳ ಬುಡ ಜಾಲಾಡಿಸಿ ಅದನ್ನು ಕಲಿತು, ಕಲೆತು ಒಪ್ಪವಾಗಿಸುವವನು ನಮ್ಮ ರಜನೀಶ.. 

ಭೋಜರಾಜ ಕಂಬದ ಮರೆಯಲ್ಲಿ ನಿಂತು ಕಾಳಿದಾಸನ ಅಮರವಾಣಿಗಳನ್ನು ಕೇಳಿದಂತೆ, ಎಲ್ಲರ ಮಾತುಗಳನ್ನು ವಿಷಯಗಳನ್ನು ಕೇಳಿಸಿಕೊಂಡು ತನ್ನದೇ ದಾಟಿಯಲ್ಲಿ ಅದಕ್ಕೆ ಉತ್ತರ ನೀಡುವ ನಿಷ್ಣಾತ.. 

ಇದಕ್ಕೊಂದು ಉದಾಹರಣೆ : ಒಂದು ಸುಂದರ ಸಮಾರಂಭಕ್ಕೆ ಬ್ಯಾನರ್ ಮತ್ತು ಕಾರ್ಡ್ ಬೇಕಿತ್ತು.. ಏನು ಮಾಡೋದು.. ಅರಿವಿಗೆ ಬಂದಿರಲಿಲ್ಲ.. ಸುಮ್ಮನೆ ಗಾಳಿಯಲ್ಲಿ ಗುದ್ದಿದಂತೆ ಗುರು ಹೀಗೆ ಬೇಕು ಅಂದೇ... ವಿಷಯ ಕೊಡು ಏನಾದರೂ ಮಾಡೋಣ ಅಂದ.. ಮುಂದಿನ ಹತ್ತು ಹದಿನೈದು ನಿಮಿಷಗಳಲ್ಲಿ ಸಿಕ್ಕಿದ್ದು ಅನರ್ಘ್ಯ ರತ್ನದಂತಹ ಬ್ಯಾನರ್ ಮತ್ತು ಕಾರ್ಡು.. ಈ ರೀತಿಯ ಅನುಭವಗಳು ಎಲ್ಲರಿಗೂ ರಜನೀಶನಿಂದ ಸಿಕ್ಕಿದೆ.. ನನ್ನ ಅನುಭವ ರಜನೀಶ ಎಂಬ ಸಾಗರದಂತಹ ವ್ಯಕ್ತಿತ್ವದಲ್ಲಿ ಒಂದೆರಡು ಆಣಿಮುತ್ತುಗಳು... ಅವನ ಬಳಿ ಆಣಿಮುತ್ತುಗಳ ಖಜಾನೆಯೇ ಇದೆ.. 

ಇಂದು ಸುವರ್ಣ ಸಂಭ್ರಮದಲ್ಲಿ ತೇಲುತ್ತಿರುವ ರಜನೀಶನಿಗೆ.. ತಮಸ್ಸನ್ನು ಓಡಿಸುವ ಕಲೆಗಾರಿಕೆ ಹೊಂದಿರುವ ನಮ್ಮೆಲ್ಲರ ಪ್ರೀತಿಯ ರಜನೀಶನಿಗೆ ಸುವರ್ಣ ಸಂಭ್ರಮದ ಶುಭಾಶಯಗಳು.. 

ಪ್ರತಿ ಯಶಸ್ಸಿನ ಹಿಂದೆ ಮಾತೃ ಹೃದಯಿಯ ಉಪಸ್ಥಿತಿ ಇದ್ದೆ ಇರುತ್ತದೆ.. ಕೌಶಿಕ ಅಜ್ಜಿಯ ಬದುಕಿನ ಅನುಭವ, ತಮ್ಮ ಮೌನವೇ ಸಾಧನೆಯ ಶಿಖರ ಎಂದು ಸುಂದರ ಬದುಕು ಕಟ್ಟಿಕೊಂಡ ಕೌಶಿಕದ  ಅಜ್ಜಯ್ಯ,  ಬದುಕಿನ ಸಾರಾಮೃತ್ಯವನ್ನು ಧಾರೆಯೆರೆದ ರಜನೀಶನ ಸೋದರ ಮಾವಂದಿರು, ಅತ್ತೆಯರು ಹಾಗೂ ಚಿಕ್ಕಮ್ಮಂದಿರು, ತುಂಬು ಕುಟುಂಬದ ಕೊರವಂಗಲದ ಅಜ್ಜಯ್ಯ, ಅಜ್ಜಿ, ಚಿಕ್ಕಪ್ಪ,ಚಿಕ್ಕಮಂದಿರು, ಅತ್ತೆ ಮಾವಂದಿರು.. ಅಷ್ಟೇನಾ ಅಂದರೆ ಇರ್ರಪ್ಪ ಮುಖ್ಯವಾಗಿ ತಂದೆ ನಾಗರಾಜ .. ಅವರ ಜ್ಞಾನಾಮೃತ್ಯವನ್ನು ಹಾಗೆ ಧಾರೆಯೆರೆದು ಅವರ ವಿಶ್ಲೇಷಣೆ, ಅವರ ಜ್ಞಾನದ ಆಳ, ಅದರ ಪರಿಭಾಷೆ ಎಲ್ಲವನ್ನೂ ಧಾರೆಯೆರೆದು ಜ್ಞಾನದ ಬೆಳಕಿನಿಂದ ರಜನಿಯನ್ನು ದೂರ ಮಾಡಿ ಅದಕ್ಕೆ ಈಶನಾಗಲು ಸಹಕರಿಸಿದ ಅಪ್ಪ.. ತಾಳ್ಮೆಗೆ ಇನ್ನೊಂದು ಹೆಸರು ತನ್ನ ತಾಯಿ ಪದ್ಮ ಎಂದು ಸದಾ ಹೇಳುವ.. ರಜನೀಶನಿಗೆ ಬೆಂಗಾವಲಾಗಿ ನಿಂತಿದ್ದು ಮನದನ್ನೆ ರೂಪ.. ಜೊತೆಯಲ್ಲಿ ಸಹೋದರರ ಕುಟುಂಬ ನರೇಂದ್ರ, ಸುಮಾ. ಮತ್ತು ಜ್ಞಾನೇಶ ಮತ್ತು ಆಶಾ.. ಇಷ್ಟೇನೆ ಅಂದರೆ ಇಲ್ಲ ಮುಂದಿನ ತಲೆಮಾರುಗಳ ಸರದಾರರು ವೈಷ್ಣವಿ, ಭರತ, ಸುರಭಿ, ಸರಯೂ, ಸೌರವಿ.. ಇವರುಗಳ ಜೊತೆಯಲ್ಲಿ ತನ್ನ ಮಡದಿ, ಮತ್ತು ಸಹೋದರರ ಪತ್ನಿಯರ ಮಾತಾ ಪಿತೃಗಳ ಕುಟುಂಬ.. ಎಲ್ಲರೂ ಇವನ ಯಶಸ್ಸಿನ ಹಾದಿಯಲ್ಲಿ ಬೆಳಕು ತುಂಬಿದವರೇ ಹೌದು.. 

ನಮ್ಮೆಲ್ಲರ ಪ್ರೀತಿಯ ರಜನೀಶನಿಗೆ ಬಹುಪರಾಕ್ ಬಹುಪರಾಕ್..

Monday, July 28, 2025

ಸಡಗರದಿಂದ ಗಗನದ ಅಂಚಿಂದ .... !

ಅಣ್ಣ ಪದೇ ಪದೇ ತಮ್ಮ ಸ್ಟೀಲ್ ಕೇಸ್ ವಾಚ್ ನೋಡುತ್ತಿದ್ದರು.. ಸದಾ ತಮ್ಮ ಭಾವಗಳನ್ನು ಮನದೊಳಗೆ ಇಟ್ಟುಕೊಂಡು ಖುಷಿ ಪಡುವ ಅಣ್ಣನ ಸ್ವಭಾವವನ್ನು ಸರಿಯಾಗಿ ಅರಿತಿದ್ದ ಅಮ್ಮ ಅವರೊಡನೆ ಐವತ್ತೆರಡು ವಸಂತಗಳನ್ನು ಕಳೆದ ಅನುಭವ ವರವಾಗಿತ್ತು.. 

ಆದರೂ ಇರಲಿ ಅಣ್ಣನೇ ಹೇಳುತ್ತಾರೆ ಅಂತ ಕಾದು ಕಾದು ಕಡೆಗೆ ಅಮ್ಮನ ಸಾತ್ವಿಕ ಸಿಟ್ಟು "ಏನು ಅವಾಗಿಂದ ಗಡಿಯಾರ ನೋಡ್ತಾ ಇದ್ದೀರಿ.. "

"ಇಲ್ಲ ಕಣೆ ವಾಚನ್ನು ಮೆಲ್ಲನೆ ಹಿಂದಕ್ಕೆ ತಿರುಗಿಸೋಕೆ ಪ್ರಯತ್ನ ಪಟ್ಟಿದ್ದೆ ಅದು ಮೆಲ್ಲನೆ ಹಿಂದಕ್ಕೆ ಹೋಗುತ್ತಿದೆ.. ಅದು ನನಗೆ ಕಾಣುತ್ತಿದೆ.. ಆದರೆ ನನಗೆ ಬೇಕಾಗಿದ್ದ ಕಾಲಕ್ಕೆ ಹೋಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ ಅಷ್ಟೇ.. "

"ನೀವೋ ನಿಮ್ಮ ವಾಚೋ.. ಅದೇನು ಕತೆ ಸರಿಯಾಗಿ ಹೇಳಿ.. ಆ ಶ್ರೀಕಾಂತನೂ ಹಿಂಗೇ ಮುರುಳಿಯನ್ನು ಗೋಳು ಹುಯ್ಕೋತಾ ಇದ್ದ.. ಮುರುಳಿ ನೀರು ಬಾವಿಯಿಂದ ಸೇದಿ ಸೇದಿ ಕೊಡುತ್ತಿದ್ದ, ಶ್ರೀಕಾಂತ ಮನೆಯಲ್ಲಿನ ತೊಟ್ಟಿ, ಬಕೆಟ್, ಕುಡಿಯಲು ನೀರು ಎಲ್ಲದಕ್ಕೂ ತುಂಬುತಿದ್ದ.. ಆದರೆ ಮುರುಳಿಗೆ ಬೇಗ ಕೆಲಸ ಮುಗಿಯಬೇಕು.. ಆದರೆ ಶ್ರೀಕಾಂತ ಅದು ಮುಗಿಯೋ ತನಕ ಹೇಳುತ್ತಿರಲಿಲ್ಲ.. ಯಾವಾಗಲೂ ಇದೆ ಗಲಾಟೆ ಅವರಿಬ್ಬರ ಮಧ್ಯೆ.. ಅದೇ ತರಹ ನೀವು ಇರೋ ವಿಷಯ ಸರಿಯಾಗಿ ಹೇಳಲ್ಲ.. ಆಮೇಲೆ ನಾ ಹೇಳಿದ್ದು ಕೇಳಲ್ಲ ಅಂತ ಕೂಗಾಡ್ತೀರಾ.. "

"ಇಲ್ಲ ಕಣೆ ಬಾ ಇಲ್ಲಿ.. ನೋಡು ಇತ್ತೀಚಿಗೆ ತಾನೇ ಭಾರತದಿಂದ ಶುಭಾಂಶು ಶುಕ್ಲ ಅಂತರಿಕ್ಷಕ್ಕೆ ಹಾರಿ ಹದಿನಾಲ್ಕು ದಿನಗಳ ನಂತರ ಭಾರತಕ್ಕೆ ಮರಳಿದ್ದ .. ಅವನು ಕಳಿಸಿದ್ದ ಭಾರತದ ಚಿತ್ರದಲ್ಲಿ ಬಸವಾಪಟ್ಟಣದ ಚಿತ್ರವೂ ಕಂಡಿತ್ತು .. ಅದನ್ನು ನೋಡುತ್ತಾ ನೋಡುತ್ತಾ ಹಾಗೆ ಬಸವಾಪಟ್ಟಣದ ಯಾಗದ ದೃಶ್ಯ ಕಣ್ಣಿಗೆ ಕಾಣತೊಡಗಿತು.. ಅದನ್ನ ಮತ್ತೊಮ್ಮೆ ನೋಡಲು ನನ್ನ ವಾಚನ್ನು ಹಿಂದಕ್ಕೆ ತಿರುಗಿಸುತ್ತಿದ್ದೆ.. ಆಗೋ ನೋಡು ನೋಡು.. ಆ ದಿನ ಬಂದೆ ಬಿಟ್ಟಿತು.. 

ಒಂದು ಮರ.. ಅಲ್ಲಿ ಸಾವಿರಾರು ಜನರು ಓಡಾಡುವ ಪ್ರದೇಶ.. ನನ್ನ ತೊಡೆಯ ಮೇಲೆ ಸುಮಾರು ಹನ್ನೊಂದು ವರ್ಷದ ವಿಜಯ ತೊಡೆಯ ಮೇಲೆ ಮಲಗಿದ್ದಾನೆ.. ಮೈಯೆಲ್ಲಾ ಬಿಸಿಯಾಗಿತ್ತು.. ಜ್ಞಾನವಿಲ್ಲ.. ಆದರೆ ಅವನ ಉಪನಯನ ನೆಡೆಯಬೇಕಿತ್ತು.. ಬಂದವರೆಲ್ಲ.. ಮರದ ನೆರಳಲ್ಲಿ ಮಲಗಿಸಿಕೊಂಡಿದ್ದ ವಿಜಯನನ್ನು ಕಂಡು .. ಇದೇನು.. ಉಪನಯನ ಮಾಡಲು ಬಂದಿದ್ದೀರೋ ಒಪ್ಪ ಮಾಡಲು ಕರೆದುಕೊಂಡು ಬಂದಿದ್ದೀರೋ.. ಅಂತ ಕೇಳುತ್ತಲೇ ಇದ್ದರು.. ಆದರೂ ಆ ಬಸವಾಪಟ್ಟಣದ ರಾಘವೇಂದ್ರ ಸ್ವಾಮಿಗಳ ಅನುಗ್ರಹ.. ಶಿವಮೊಗ್ಗದ ಕೋಟೆ ಆಂಜನೇಯನ ಆಶೀರ್ವಾದ.. ನನ್ನ ಅಮ್ಮ ಹಾಗೂ ಅಪ್ಪನ ಅಭಯ ಹಸ್ತ ಮತ್ತು ಹೇಳಿದ ಮಾತು "ಮಂಜಣ್ಣ ನಿನ್ನ ಇಚ್ಛೆಯಂತೆ ಎಲ್ಲವೂ ನೆಡೆಯುತ್ತೆ.. " ಆ ಮಾತುಗಳು ವಿಜಯನನ್ನು ಗೆಲ್ಲಿಸುತ್ತಿದೆ .. ಅವನ ಹೆಸರಿನಂತೆ ಗೆಲ್ಲುತ್ತಲೇ ಇರುತ್ತಾನೆ..  ಅಂತ ನನ್ನ ಅಣ್ಣ ಅಂದರೆ ನನ್ನ ಅಪ್ಪ ಹೇಳಿದ್ದು ನೆನಪಾಯಿತು ಕಣೆ.. 

ಸುಯ್ ಸುಯ್ ಅಂತ ಗಡಿಯಾರ ಮುಂದೆ ಓಡಲು ಶುರುವಾಯಿತು.. ೨೭ನೇ ಜುಲೈ ೨೦೨೫.. ಸುಲಗ್ನ  ಸಾವಧಾನ ... ಸುಮೂಹೂರ್ತ ಸಾವಧಾನ.. ಮಂತ್ರಗಳು ತಾರಕದಲ್ಲಿ ಸಾಗಿತ್ತು.. ಮಂಗಳ ವಾದ್ಯದಲ್ಲಿ ಇಬ್ಬರು ಹೆಣ್ಣು ಮಕ್ಕಳು ಸಾಕ್ಸೋಫೋನ್ವಾ ನುಡಿಸುತ್ತಿದ್ದದ್ದು ..  ಅಂತರಪಟ.. ನಂತರ ಇಪ್ಪತ್ತು ವರ್ಷದ ಮಗು ಅರವತ್ತ್ತರ ಹೊಸ್ತಿಲಿಗೆ ಬರುತ್ತಿರುವ ಅಪ್ಪನ ತೊಡೆಯ ಮೇಲೆ ಕೂತು ಗಾಯತ್ರಿ ಮಂತ್ರದ ಉಪದೇಶ.. ಆಹಾ ಆ ದಿನಗಳ ನೆನಪು ಬಂತು.. 

ನನ್ನ ನಾಲ್ಕನೇ ಮೊಮ್ಮಗ ವಿಷ್ಣುವಿನ ಬ್ರಹ್ಮೋಪದೇಶದ ಕಾರ್ಯಕ್ರಮ.. ನನ್ನ ಬಂಧು ಮಿತ್ರರು ಸಡಗರದಿಂದ ಸಭಾಂಗಣಕ್ಕೆ ಬರುತ್ತಿದ್ದಾಗ ರಾಜಕುಮಾರ್ ಅವರ ಜೀವನ ಚಿತ್ರದ ಹಾಡು ನೆನಪಿಗೆ ಬಂತು.. "ಸಡಗರದಿಂದ ಗಗನದ ಅಂಚಿಂದ ಸುರರು ಬಂದು ಹರಿ(ವಿಷ್ಣು)ಯ ಕಂಡು ಅನುಗ್ರಹ ಸದನವೇ ಸ್ವರ್ಗ .. ಅನುಗ್ರಹವೇ ಸ್ವರ್ಗವೆನುತಿರಲು "ಕೌಸ್ತುಭ"ಮಯ ಅನುಗ್ರಹವೆಲ್ಲ ಕೌಸ್ತುಭಮಯ.. 

ಇದು ಅಲ್ಲವೇ ನನ್ನ ಮಕ್ಕಳ ಸಾಧನೆ.. 

ಶಿವಮೊಗ್ಗದ ಸೋಮಣ್ಣ .. ಮಂಜಣ್ಣ ನೀನು ಬೆಂಗಳೂರಿಗೆ ಹೋಗು ಮಕ್ಕಳಿಗೆ ಏಳಿಗೆಯಾಗುತ್ತದೆ ಎಂದಿದ್ದು ನೆನಪಾಯ್ತು 

ನನ್ನ ಸೋದರ ಮಾವನ ಮಗ ಗುಂಡ ಆತ್ಮೀಯವಾಗಿ ದೊರೆ ದೊರೆ ನೀನು ಯಾವಾಗಲೂ ದೊರೆ ಕಣೋ.. ನಿನ್ನ ಮಕ್ಕಳು ರತ್ನಗಳು ಅನ್ನುವುದು 

ಶಿವಮೊಗ್ಗದ ಸೀತಣ್ಣ ನಿನ್ನ ಮಕ್ಕಳು ಅಂದರೆ ಮಕ್ಕಳು ಮಂಜಣ್ಣ ಎಂದಿದ್ದು 

ನನ್ನನ್ನು ತಾಯಿಯಂತೆ ನೋಡಿಕೊಂಡ ನರ್ಸ್ ಸೌಮ್ಯ ಶ್ರೀಕಾಂತನಿಗೆ ಹೇಳಿದ್ದು ನಿಮ್ಮಂಥ ಮಕ್ಕಳನ್ನು ಪಡೆಯಲು ನಿಮ್ಮ ಅಪ್ಪ ಪುಣ್ಯ ಮಾಡಿದ್ದರು ಎಂದಾಗ...  ಅವನು ಕಣ್ಣು ತುಂಬಿಕೊಂಡು "ಇಂತಹ ತಂದೆಯನ್ನು ಪಡೆಯಲು ನಾವುಗಳು ಪುಣ್ಯ ಮಾಡಿದ್ದೇವೆ" ಅಂತ ಹೇಳಿದ್ದನ್ನು ಕೇಳಿಸಿಕೊಂಡಾಗ ಮನಸ್ಸು ತುಂಬಿ ಬಂದಿತ್ತು, 

ವೇದಘೋಷಗಳು.. ಅಚ್ಚುಕಟ್ಟಾಗಿ ಸಜ್ಜಾದ ವೇದಿಕೆ.. ಹೋಮದ ಧೂಮ.. ಬಂಧು ಮಿತ್ರರು ಅಪರೂಪವಾಗಿ ಸಿಕ್ಕಿ ಆತ್ಮೀಯವಾಗಿ ಹರಟುತಿದ್ದದ್ದು.. ಅನೇಕ ಬಾರಿ ಪುರೋಹಿತರು ಮಾತಾಡಬೇಡಿ ಆಶೀರ್ವಚನ ನೆಡೆಯುತ್ತಿದೆ.. ಉಪನಯನದ ಮಹತ್ವ ಹೇಳುತ್ತಿದ್ದಾರೆ ಎಂದಾಗಾಲೂ ಕೂಡ ಒಂದು ಕ್ಷಣ ನಿಶ್ಯಬ್ಧ ಮತ್ತೆ ಅದೇ ಮಾತುಗಳು.. ನಗು.. 

ಮಾತೃ ಭೋಜನ.. ಯಶೋದೆ ಕೃಷ್ಣನನ್ನ ತೊಡೆಯ ಮೇಲೆ ಕೂರಿಸಿಕೊಂಡು ಭೋಜನ ಮಾಡಿಸಿದಂತೆ.. ವಾಣಿ ಮತ್ತು ವಿಷ್ಣುವಿನ ಜೊತೆ ಮತ್ತಷ್ಟು ವಟುಗಳು ಕೂತು ಉಪಹಾರದ ಸಡಗರ.. 

ನಂತರ ಕೇಶ ಮುಂಡನದ ಸಂಸ್ಕಾರ.. ಹಿಂದೆ ವಟುಗಳು ಕೊಬ್ಬರಿಯಾಗುತ್ತಿದ್ದದ್ದು ಮಾಮೂಲಾಗಿತ್ತು.. ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಲ್ಯದ ಅವಸ್ಥೆಯಲ್ಲಿ ಉಪನಯನ ಕಷ್ಟಕಾರ್ಯ.. ಹಾಗಾಗಿ ಹದಿಹರೆಯ ಬಂದಾಗ.. ಅಥವ ದಾಟಿದ ಪ್ರೌಢಾವಸ್ಥೆಯಲ್ಲಿ ಕೊಬ್ಬರಿ ಕಷ್ಟ.. ಹಾಗೆ ಅಸಾಧ್ಯ ಅನ್ನಬಹುದು.. ಶಾಸ್ತ್ರಕ್ಕೆ ಒಂದೆರಡು ಕೂದಲು ತೆಗೆಯುವ ಶಾಸ್ತ್ರ ಮಾಡೋದು ಮಾಮೂಲು.. ಆದರೆ ಶ್ರದ್ಧೆ ಭಕ್ತಿ   ನನ್ನ ಸಂಸಾರದ ಹೆಮ್ಮೆಯ ಗುರುತು .. ವಿಷ್ಣು ಒಪ್ಪಿದ್ದು .. ಕೊಬ್ಬರಿಯಾಗಿದ್ದು ಖುಷಿಯಾಗಿತ್ತು.. ಬಾಲ್ಯದಲ್ಲಿ ಅವನಿಗೆ ಚೌಲ ಮಾಡಿದಾಗ ಕಾರ್ತಿ ನೆನಪಿಸಿಕೊಂಡಂತೆ ;"ಅಯ್ಯೋ ನನ್ನ ಜುಟ್ಟು ಹೋಯ್ತು ಹೋಯ್ತು" ಅಂತ ಅಳುತ್ತಿದ್ದ ಮಗು ಇಂದು ಸ್ವಯಂ ಇಚ್ಛೆಯಿಂದ ಬ್ರಹ್ಮಚರ್ಯದ ಸಂಕೇತ ಶಿಕೆಯನ್ನು ಬಿಟ್ಟುಕೊಂಡು ನಿಂತಿದ್ದು ವಾಹ್ ವಾಹ್ ನನ್ನ ಅನುಗ್ರಹ ಸದನದ ಮಕ್ಕಳೇ ಎನ್ನುವಂತೆ ಮಾಡಿತ್ತು.. 

ಅನೇಕ ಬಾರಿ ಅಕ್ಷತೆ ತಂದು ತಂದು ಕೊಟ್ಟು ಆಶೀರ್ವಾದ ಮಾಡಿ ಅಂತ ಹೇಳಿದಾಗ ಅದೆಷ್ಟು ಬಾರಿ ಅಕ್ಷತೆ ಬರುತ್ತಿದೆ.. ಎಂದು ಹೇಳಿದಾಗ ಕುಮಾರ ಹೇಳಿದ "ಕೊಬ್ಬರಿ ಸಕ್ಕರೆ ಕೊಡಬೇಕು ಅದೇಕೆ ಇಷ್ಟೊಂದು ಬಾರಿ ಅಕ್ಷತೆ ಕೊಡುತ್ತಿದ್ದಾರೆ" ಅಂದು ತಕ್ಷಣವೇ "ಕೊಬ್ಬರಿ ಸಕ್ಕರೆ ಎಸೆಯೋಕೆ ಆಗೋಲ್ಲ.. ಆಶೀರ್ವಾದ ಮಾಡೋಕೆ ಅಕ್ಷತೆ ಅಲ್ಲವೇ" ಅಂತ ತನ್ನ ವಾಗ್ದೇವಿ ಅನುಗ್ರಹಿತ ವಾಕ್ಝರಿಯನ್ನು ಹರಿಸಿಯೇ ಬಿಟ್ಟ!

ತಮಾಷೆಯ ಜ್ಞಾನೇಶ "ಅಕ್ಷತೆ ಹಾಕಿ ಹಾಕಿ ವಿಷ್ಣು ಸಂಜೆ ಮನೆಯಲ್ಲಿ ತನ್ನ ತಲೆಯನ್ನು ನೋಡಿಕೊಂಡಾಗ ಬುಗುರಿ ಆಟದಲ್ಲಿ ಮೂಡುವ ಗುನ್ನದ  ತರಹ ಅಕ್ಷತೆಯು ತಾಕಿ ತಾಕಿ ವಿಷ್ಣು ತಲೆಯ ತುಂಬಾ ಗುನ್ನ ಆಗಿರುತ್ತದೆ" ಎಂದಾಗ ಎಲ್ಲರಿಗೂ ನಗು.. 

ಶಾರ್ವರಿ ವಿಷ್ಣುವಿನ ಭಾವಚಿತ್ರವನ್ನು ಬಿಡಿಸಿ ಕೊಟ್ಟಾಗ ನರೇಂದ್ರ "ವಿಷ್ಣು .... ಸೂರ್ಯನಿಗೆ ಟಾರ್ಚು" ಅಂತ ಹೇಳಿ ವಿಷ್ಣುವಿನ ಚಿತ್ರಕಲೆಯನ್ನು ಪ್ರಶಂಶಿಸಿದ.. 

ರಜನೀಶ ಹೇಳಿದ್ದು ವಿಷ್ಣುವಿನ ಪುಣ್ಯ ಬರದವರು ಕೂಡ ಬಂದಿದ್ದು ಅಂತ ಹೇಳಿದ್ದು... 

ಬಂದವರೆಲ್ಲ ಸಂತಸದಿಂದ ನಕ್ಕು ನಲಿದು.. ಹರಸಿದ್ದು.... ತರಲೆ ಸುಬ್ಬಿಗಳು ಆಶಾ, ರೂಪ, ಸುಮ, ಸೀಮಾ ..ಮೈಕ್ ಹಿಡಿದು ಒಂದಷ್ಟು ತಮಾಷೆ ಮಾತನಾಡಿದ್ದು.. ಅದಕ್ಕೆ ಸಹಯೋಗ ನೀಡಿ ಹುರುಪು ತುಂಬಿದ ರಮ್ರ್ಯ ಮಧುರ..ಜೊತೆಯಲ್ಲಿ ಸಂತಸದಿಂದ ಬೀಗಿದ ಕೋರವಂಗಲದ ಮುದ್ದು ಮೊಮ್ಮಕ್ಕಳು..ಕಾರ್ಯಕ್ರಮವನ್ನು ಎತ್ತರಕ್ಕೆ ಏರಿಸಿತು ಹಾಗೂ ಅಂತಿಮ ಹಂತ ಮುಟ್ಟಿದ್ದು ತೋರಿಸಿತು... 

ದುಂಬಿಗಳ ಹಾಗೆ ಹನಿ ಹನಿಯನ್ನು ಸೇರಿಸಿ, ಸೇರಿಸಿ. ಜೇನುಗೂಡನ್ನು ಕಟ್ಟುವಂತೆ ಕೌಸ್ತುಭ V4 we are for all ಎನ್ನುವ ಹಾಗೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ರೂಪಿಸಿದ್ದು ವಿಜಯ ವಾಣಿ ವರ್ಷ ವಿಷ್ಣು ಕೂಡಿ ಆಯೋಜಿಸಿದ್ದು.. ಅದಕ್ಕೆ ಸಮಾರಂಭಕ್ಕೆ ಬಂದಿದ್ದ ಅನೇಕ ಕೈಗಳು ಸಾತ್ ಕೊಟ್ಟಿದ್ದು ಸೂಪರ್ ಸೂಪರ್ ಅಲ್ವೇ.. 



ಪಟಾಕಿ ಯಾರದ್ದದ್ದಾದರೇನು ಪಟಾಕಿ ಹೊಡೆಯೋರು ನಾವಾಗಿರಬೇಕು ಅಂತ ಕೃಷ್ಣವೇಣಿ, ಮುರುಳಿ, ಶೀತಲ್, ಸೀಮಾ ತಮ್ಮ ತಮ್ಮ ಯಥಾಶಕ್ತಿ  ಕೈಜೋಡಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು .. 

ಹೊರದೇಶದಲ್ಲಿರುವ ನನ್ನ ಮೊಮ್ಮಕ್ಕಳು ಆದಿತ್ಯ, ಐಶ್ವರ್ಯ ಇವರಿಬ್ಬರ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಹೊಳಪು ನೀಡುತ್ತಿದ್ದದ್ದು ನಿಜವಾದರೂ ನನ್ನ ಅನುಗ್ರಹದ ಪತಾಕೆಯನ್ನು ಹೊರದೇಶದಲ್ಲಿ ಹರಡಿರುವ ಈ ಮುದ್ದು ಮಕ್ಕಳಿಗೆ ನನ್ನ ಶುಭ ಆಶೀರ್ವಾದಗಳು ..  

ಸಂಗೀತ ಸಂಜೆಯ ಕೊನೆಯಲ್ಲಿ "ಕುಲದಲ್ಲಿ ಕೀಳ್ಯಾವುದೋ  ಹುಚ್ಚಪ್ಪ ಮತದಲ್ಲಿ ಮೆಲ್ಯಾವುದೋ" ಎಂಬ ಹಾಡು ಇರಲೇ ಬೇಕು.. ನನ್ನ ಅನುಗ್ರಹ ಸದನದ ಕಾರ್ಯಕ್ರಮದಲ್ಲಿ ಬಂದವರೆಲ್ಲರನ್ನೂ ನಿಲ್ಲಿಸಿ ಒಂದು ಕೂಡು ಕುಟುಂಬದ ಚಿತ್ರ ಇದ್ದೆ ಇರುತ್ತದೆ.. ಇದು ಕೂಡ ತಪ್ಪಲಿಲ್ಲ.. 




ನಿಜವಾಗಿಯೂ ಕಣೆ.. ನನ್ನ ಕುಟುಂಬ ಅನುಗ್ರಹಿತ ಕುಟುಂಬ.. ಶ್ರೀಕಾಂತನ ಮೆಚ್ಚಿನ ರಾಜಕುಮಾರ್ ಜೀವನ ಚಿತ್ರದಲ್ಲಿ ಹೇಳುವಂತೆ "ಎಂಥ ಮಕ್ಕಳ್ಳನ್ನು ಹೆತ್ತೆ ವಿಶಾಲೂ ಒಂದೊಂದು ಮುತ್ತುಗಳು ಕಣೆ" 

ಅಮ್ಮ ಮೆಲ್ಲನೆ ಕಣ್ಣಂಚಿನಲ್ಲಿ ಒಸರುತ್ತಿದ್ದ ಆನಂದ ಭಾಷ್ಪವನ್ನು ಒರೆಸಿಕೊಂಡು "ಭಾಗ್ಯವಂತರು ನಾವೇ ಭಾಗ್ಯವಂತರು.. " ಹಾಡು ನೆನಪಿಸಿಕೊಳ್ಳುತ್ತಾ "ಕಪ್ಪು ಬಿಳುಪು" ಚಿತ್ರದ ಹಾಡು ನನ್ನ ಮೆಚ್ಚಿನ ಅನುಗ್ರಹ ಸದನಕ್ಕೆ ಅಂತ ಇವಳು ಹೇಳಿದ್ದು.. ಮತ್ತೆ ಆ ವಿಡಿಯೋ ಹಾಡು ಹಾಕಿದ್ದು ಈ ಕಾರ್ಯಕ್ರಮಕ್ಕೆ ಬಂಗಾರದ ಕಳಸ ಇಟ್ಟಂತೆ ಆಯ್ತು.. 


ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ  ಅನುರಾಗದ ಮಳೆ
ಎಂದೆಂದೂ ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲೀ


ನೂತನ ನಂದನ ನಲಿ ನಲಿದಾಡಲಿ
ಪ್ರೀತಿಯ ಸುಮವೂ ಅರಳುತಲಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ನ್ಯಾಯದ ಜ್ಯೋತಿಯು ಬೆಳಗಿರಲಿ


ಈ ಮನೆ ಪ್ರೇಮದ ಮಂದಿರವಾಗಲಿ
ಸವಿಮಾತುಗಳಾ ತವರೂರಾಗಲಿ
ಸಿರಿದೇವತೆಯೂ ಕುಣಿ ಕುಣಿದಾಡಲಿ
ಅರಶಿಣ ಕುಂಕುಮ ನಗುನಗುತಿರಲಿ




Monday, June 16, 2025

Tiger of Anugraha Sadana @ at currv of Golden Miles of Smiles!!!


​ಸಾಮಾನ್ಯವಾಗಿ ಭಾವುಕನಾಗದ  ಮುರುಳಿಯ ಕಣ್ಣುಗಳು ತುಂಬಿ ಬಂದಿದ್ದರೂ ಗಟ್ಟಿ ಹೃದಯದ ಮುರುಳಿ ತನ್ನ ಎಲ್ಲಾ ಭಾವನೆಗಳನ್ನು ಅದ್ಭುತವಾಗಿ ಹಿಡಿದಿಟ್ಟುಕೊಂಡಿದ್ದ.. 

ನನಗೆ ಅನಿಸಿದ್ದು ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಅದ್ಭುತ ಆಣೆಕಟ್ಟು ಕೆಲವರಿಗೆ ಮಾತ್ರ ಲಭ್ಯವಿರುತ್ತೆ.. ಆ ಪರಿಸ್ಥಿತಿಯಲ್ಲಿ ನಾ ಇದ್ದಿದ್ದರೆ ಖಂಡಿತ ಒಂದಷ್ಟು ಟಿಶ್ಯೂ ಅಥವ ಕರವಸ್ತ್ರ ಬೇಕಾಗಿರುತ್ತಿತ್ತು.



ಎಲ್ಲರ ಗಮನ ಒಬ್ಬನ ಮೇಲಿದೆ.. ಹತ್ತಾರು ಮೊಬೈಲು ಫೋನುಗಳು, ವಿಡಿಯೋವಾಲ, ಫೋಟೋಗ್ರಾಫರ್ ಎಲ್ಲರ ಕೇಂದ್ರ ಬಿಂದುವಾಗಿ ನಿಲ್ಲುವುದು.. ಅದರಲ್ಲೂ ಮುರುಳಿ ಒಬ್ಬ ನಾಚಿಕೆ ಸ್ವಭಾವದ ವ್ಯಕ್ತಿ.. ಲೈಮ್ ಲೈಟ್ ಬೇಕು ಅಂತಾರಲ್ಲ ಆ ತರಹದ ಸ್ವಭಾವದ ಹುಡುಗನಲ್ಲ.. ಅಂತರ್ಮುಖಿ ತನ್ನ ನೋವೇ ಆಗಲಿ, ನಲಿವೆ ಆಗಲಿ ಅದರ ಜೊತೆ ತಾನೊಬ್ಬನೇ ಹೆಜ್ಜೆ ಹಾಕಬೇಕೆಂಬ ಗುಣ ಸ್ವಭಾವದ ಹುಡುಗ.. 

ಮೆಲ್ಲನೆ ನೆಡೆದುಬಂದ ಅನೇಕಾನೇಕ ಅಭಿಮಾನಿ ದೇವರುಗಳು ಅವನಿಗೆ ಹಸ್ತಲಾಘವ ಕೊಟ್ಟು.. ಆತ್ಮೀಯ ಅಲಿಂಘನ ಕೊಟ್ಟು.. ಸುವರ್ಣ ಸಂಭ್ರಮದ ಶುಭ ಹಾರೈಕೆಗಳನ್ನು ಕೋರಿದರು.. ಅವನ ಕಣ್ಣಾಲಿಗಳು ತುಂಬುತ್ತಿದ್ದವು.. 

ಮಾತಾಡು ಅಂತ ಮೈಕ್ ಕೊಟ್ಟರೆ "ಏನು ಹೇಳಬೇಕು ಗೊತ್ತಾಗ್ತಾ ಇಲ್ಲ.. ಒಂದೆರಡು ದಿನಗಳಿಂದ ಏನೋ ನೆಡೆಯುತ್ತಿದ್ದೆ.. ಏನೋ ಕಾರುಬಾರು ಮಾಡ್ತಾ ಇದ್ದಾರೆ ಅನಿಸಿತ್ತು.. ಆದರೆ ಈ ಮಟ್ಟಕ್ಕೆ ಅಂತ ಗೊತ್ತಿರಲಿಲ್ಲ.. ಅಥವ ಅಂದುಕೊಂಡಿರಲಿಲ್ಲ.. ಅಂತ ಮೈಕ್ ಇನ್ನೊಬ್ಬರಿಗೆ ಕೊಟ್ಟ 

ಮತ್ತಷ್ಟು ಮಾತಾಡು ಅಂದಾಗ ಕೂಡ ಮಾತಾಡೇ ನಿಂತಾಗ. ಯಾಕೋ ಏನೋ ಅವನ ಭುಜದ ಮೇಲೆ ಒಂದು ಚೂರು ತೂಕ ಇಟ್ಟರೆ ಸರಿಯಾಗಬಹುದು ಎನಿಸಿತು.. ಸಾಮಾನ್ಯ ನಾ ಹಾಗೆ ಮಾಡೋನಲ್ಲ ವೇದಿಕೆಯ ಮೇಲೆ ಧುಮಕುವುದು ನನಗೆ ಆಗದ ಕೆಲಸ .. ಆದರೆ ಇವನ ಜೊತೆ ನನ್ನ ಐವತ್ತು ವರ್ಷಗಳ ಪಯಣದಲ್ಲಿ ಒಂದು ಚೂರು ಸಹಕರಿಸೋಣ ಅನಿಸಿ.. ವೇದಿಕೆ ಬಳಿ ಓಡಿ   ಹೋಗಿ ಅವನ ಬೆನ್ನಿನ ಮೇಲೆ ಕೈಯಿಟ್ಟು.. ಸಂತೈಸಿದೆ.. ಪ್ರಾಯಶಃ ಅವನೂ ಕೂಡ ಇದನ್ನು ನಿರೀಕ್ಷಿಸಿರಲಿಲ್ಲ.. ಒಂದು ಕ್ಷಣ ನಿಶ್ಯಬ್ಧ.. ಮತ್ತೆ ತುಂಡು ತುಂಡಾಗಿ ಮಾತಾಡತೊಡಗಿದ.. ಇದೊಂದು ಮನದಾಳದ ,ಮಾತಿನ ಝರಿ.. ಕಬಾಬ್ ಮೇ ಹಡ್ಡಿ ಆಗಬಾರದು ಅಂತ ಸುಮ್ಮನೆ ಅವನ ಬೆನ್ನನ್ನು ತಟ್ಟುತ್ತಾ ನಿಂತಿದ್ದೆ.. 

ಮುಂದೆ ಸುಮಾರು ಒಂದು ಘಂಟೆಗಳ ಕಾಲ.. ತಮಾಷೆ, ಆಟ.. ಕೊಂಚ ಮನಸ್ಸು ನಿರಾಳವಾಗುವಂತಹ ಮಾತುಗಳು.. ಎಲ್ಲರನ್ನು ಒಂದು ಬಕೆಟ್ಟಿನಲ್ಲಿ ಹಾಕಿ ಆಟವಾಡಿಸಿದ "ಅಂಕಲ್, ಬ್ರೋ, ಭಾಯ್, ಅಣ್ಣ, ಗುರು" ಇವರಿಗೆ ವಂದನೆಗಳು.. 

ನಮ್ಮ ಯಾವುದೇ ಸಮಾರಂಭವಿರಲಿ ನನ್ನ ಅಪ್ಪ ಹೇಳುತ್ತಿದ್ದ "ಕಟ್ಟೆ ಬಳಗ"ದ ಸದಸ್ಯರು ಬಂದರೆ ಆ ಸಮಾರಂಭಕ್ಕೆ ಎಲ್ಲರೂ ಬಂದಿದ್ದಾರೆ ಅನಿಸುವ ಈ ಗುಂಪು ಕೊಂಚ ಮೊದಲೇ ಬಂದಿದ್ದರು.. ಮುರುಳಿಯನ್ನು ವೇದಿಕೆಯ ಹಿಂಬದಿಗೆ ಕರೆದುಕೊಂಡು ಹೋಗಿ, ತಾವು ತಂದಿದ್ದ ಉಡುಗೊರೆಯನ್ನು ಹಾಕಿಕೊಂಡು ಬರಲೇ ಬೇಕು ಅಂತ ಒತ್ತಾಯಿಸಿ, ಟೀ ಶರ್ಟ್ ಹಾಕಿಸಿಕೊಂಡು ಬಂದರು.. ಲೈಟ್ ಬಣ್ಣಗಳಲ್ಲಿ ಯಾವಾಗಲೂ ಅದ್ಭುತವಾಗಿ ಕಾಣುವ ಮುರುಳಿ ಈ ಸಮಾರಂಭದ ಸಂತಸದ ಕ್ಷಣಗಳಿಂದ ಇನ್ನಷ್ಟು ಹೊಳೆಯುತ್ತಿದ್ದ.. 

ನಂತರ ಈ ಸಮಾರಂಭದ ಆಕರ್ಷಣೆ ಕೇಕ್.. ನಂತರ ವಿಷ್ಣು ರಚಿಸಿದ ತನ್ನ ಚಿಕ್ಕಪ್ಪನ ಚಿತ್ರವನ್ನು ಬಿಡುಗಡೆ ಮಾಡಿದರು.. ಅದ್ಭುತವಾದ ಚಿತ್ರಕಲೆಯದು.. ಮುರಳಿಯ ಸ್ವಿಟ್ಜರ್ಲ್ಯಾಂಡ್ ಪ್ರವಾಸದ ಅದ್ಭುತ ಚಿತ್ರವನ್ನು ಹಾಗೆ ರಚಿಸಿದ್ದ ವಿಷ್ಣುವಿಗೆ ಅಭಿನಂದನೆಗಳು.. ಆರ್ ಸಿ ಬಿಯ ಹುಚ್ಚು ಕೇಕಿನ ಮೇಲೂ ಇತ್ತು.. 

ಡಿಜೆ ಜೋರಾಗಿಯೇ ಹಾಕಿದ್ದ "ಸಲಾಂ ರಾಖಿ ಭಾಯ್" ಹಾಡು ಈ ಸಂದರ್ಭಕ್ಕೆ ಹೊಂದುತ್ತಿತ್ತು .. ಎಲ್ಲರೂ ಹೊರಗೆ ಗೇಟಿನ ಹತ್ತಿರ ಬರಬೇಕು ಅಂತ ಕೇಳಿಕೊಂಡಾಗ ಅಲ್ಲಿ ಇನ್ನೊಂದು ಅಚ್ಚರಿ ಕಾದಿತ್ತು .. ಸುವರ್ಣ ಸಮಾರಂಭಕ್ಕೆ ಬೆಳ್ಳಿಯ ವರ್ಣದ ಹೊಸ ಕಾರು ನಿಗಿ ನಿಗಿ ಅಂತ ನಿಂತಿತ್ತು.. 

ಎಲ್ಲರ ಶುಭಾಶಯಗಳೊಂದಿಗೆ ಕಾರಿನ ಕೀಲಿ ಮುರುಳಿಗೆ ತಲುಪಿದಾಗ.. ಅವನು ತನ್ನ ಸಹೋದ್ಯೋಗಿಗಳಿಗೆ ಬೆರಳು ತೋರಿಸಿ ನಿಮಗಿದೆ ಮಾರಿ ಹಬ್ಬ ಅಂತ ತಮಾಷೆ ಮಾಡಿದ..  ಅಚ್ಚರಿ ಉಡುಗೊರೆ ಅನ್ನೋದು ಇದೆ ಅಲ್ಲವೇ.. 

ಸಮುದ್ರ ಶಾಂತವಾಗಿದ್ದರೆ ಅದನ್ನು ಸಮುದ್ರ ಅಂತ ಕರೆಯುತ್ತಾರೆಯೇ.. ಅದೊಂದು ಕೆರೆ ಅಷ್ಟೇ ಅನಿಸುತ್ತದೆ.. ಆದರೆ ಮುರುಳಿ ಹೃದಯದಲ್ಲಿ ಭಾವಗಳ ಕಡಲನ್ನೇ ಹೊತ್ತಿದ್ದರೂ ಹೊರಗೆ ಶಾಂತತೆಯಿಂದ ನಿಂತಿದ್ದು.. ಮತ್ತೆ ಎಲ್ಲಾ ಸಂತಸದ ಕ್ಷಣಗಳನ್ನು ಅನುಭವಿಸಿದ್ದು ಖುಷಿಕೊಟ್ಟಿತು.. 

ಟಿ ಆರ್ ಪಿ ಗೆ ಹಂಬಲಿಸದ ಆದರೆ ದುಂಬಿಗಳ ಹಾಗೆ ತನ್ನಷ್ಟಕ್ಕೆ ತನ್ನ ಕೆಲಸ ಮಾಡಿಕೊಂಡು ಇರುವ ಮುರುಳಿಯ ಇನ್ನೊಂದು ಮೊಗವನ್ನು.. ಅವನ ಕೊಂಚ ಕೋಪದ ಮೊಗವನ್ನು, ಹಾಸ್ಯ ಪ್ರಜ್ಞೆಯನ್ನು ಹಾಗೂ ಹಠದ ಗುಣವನ್ನು ಕೊಂಚ ಪರಿಚಯ ಮಾಡಿಕೊಡಬೇಕು ಅಂತ ಅನಿಸಿತು.. ಅವನ ಕಂಪನಿಯ ಮುಖ್ಯಸ್ಥರಾದ ಬದರಿ ಅವರಿಗೆ ಈ ಮಾತನ್ನು ಹೇಳಿದಾಗ.. ಅಯ್ಯೋ ಶ್ರೀ ನೀವು ಮಾತಾಡಿ.. ನಮಗೆ ಬರೋಲ್ಲ.. ವೇದಿಕೆ ನಿಮ್ಮದು ಅಂತ ವೇದಿಕೆ ಬಿಟ್ಟುಕೊಟ್ಟರು.. 

ಮುರುಳಿಯ ಜೊತೆಯ ತುಂಟ ಬಾಲ್ಯದ ಕೆಲವು ಪುಟಗಳನ್ನೂ ತೆರೆದಿಟ್ಟೆ.. ಮಾತಾಡಿದ್ದು ಸರಿಯಿತ್ತೋ, ತಪ್ಪಿತ್ತೋ ಅಥವ ಅಲ್ಲಿ ಅಗತ್ಯವಿರಲಿಲ್ಲವೋ ನನಗೆ ಗೊತ್ತಿಲ್ಲ.. ಆದರೆ ಅವನ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು ಅನ್ನಿಸಿತ್ತು.. ಹಾಗಾಗಿ ಮಾತಾಡಿದೆ.. 

ಬಾಲ್ಯದಲ್ಲಿ ನಾ ತರಲೆ ಮಾಡಿದರೂ, ಅವನು ತರಲೆ ಮಾಡಿದರೂ ಅಪ್ಪ ಅಮ್ಮನಿಂದ ಒದೆ ಬೀಳುತ್ತಿದ್ದದ್ದು ಮುರುಳಿಗೇನೇ.. 
ಅಮ್ಮನ ಮುದ್ದು ಮಗ.. ಅಮ್ಮನ ಅದ್ಭುತ ಹೋಲಿಕೆ.. ಇದೆಲ್ಲ ಇವನ ವಿಶಿಷ್ಟತೆ.. 

ವೇದಿಕೆಯ ಮೇಲೆ ಆಡದೆ ಮರೆತು ಹೋಗಿದ್ದ ಒಂದು ಮಾತು ಇಲ್ಲಿ.. 

ಬಾಲ್ಯದಲ್ಲಿ ಬಹಳ ಮುದ್ದಾಗಿದ್ದ.. ಈಗಲೂ ಮುದ್ದಾಗಿದ್ದಾನೆ  ಅದು ಹೇಳುವ ಅವಶ್ಯಕತೆಯೇ ಇಲ್ಲ.. ನಾನು ಏಕ್ ದಂ ಪ್ಯಾದೆ ತರಹ ಇದ್ದೆ.. ಚೂಪು ಕೂದಲು, ಕಪ್ಪು ಬಣ್ಣ. ವಿಚಿತ್ರವಾಗಿದ್ದ ತಲೆಯ ಆಕೃತಿ.. ಒಂದು ರೀತಿ ಕೀಳರಿಮೆ ಇತ್ತು.. ಮತ್ತೆ ಬಂದವರೆಲ್ಲರೂ ಮುರುಳಿಯನ್ನು ಮುದ್ದಾಡುತ್ತಿದ್ದರು.. ಅವನನ್ನೇ ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದರು.. ಅದು ನನಗೆ ಇನ್ನಷ್ಟು ಕೀಳರಿಮೆ ಕಾಡಲು ಸಹಾಯ ಮಾಡಿತ್ತು.. ನನ್ನ ಯಾರೂ ಇಷ್ಟಪಡಲ್ಲ.. ಅದಕ್ಕೆ ಇವನೂ ಕಾರಣ ಅನ್ನುವ ಒಂದು ವಿಚಿತ್ರ ಭಾವ ಮೂಡುತಿತ್ತು.. ಆದರೆ ಆಟದಲ್ಲಿ ಇವನ ಜೊತೆ ಇರಲೇ ಬೇಕಿತ್ತು.. ಇಬ್ಬರೂ ಒಟ್ಟಿಗೆ ಶಾಲೆಗೇ ಹೋಗುತ್ತಿದ್ದೆವು.. ನನ್ನ ಗೆಳೆಯರು.. ಇವನ ಗೆಳೆಯರು .. ಹಾಗಾಗಿ ಜೊತೆಯಲ್ಲಿ ಆಟ .. ಆ ದಿನಗಳ ಮಜವೇ ಮಜಾ.. ಆದರೆ ಗಲಾಟೆಯಾದಾಗ ಅಪ್ಪ ಅಮ್ಮ ನನಗೆ ಹೊಡೆಯಲು ಬಂದರೆ. ತಲೆ ನೋವು ಅಂತ ಜೋರಾಗಿ ಅತ್ತು ಬಿಡುತ್ತಿದ್ದೆ (ನಿಜವಾಗಿಯೂ ತಲೆ ನೋವು ಅಸಾಧ್ಯ ಬರುತ್ತಿತ್ತು..) ಆಗ ನನ್ನ ಮೇಲಿನ ಸಿಟ್ಟನ್ನೆಲ್ಲ ಅಪ್ಪ ಅಮ್ಮ ಮುರುಳಿಯ ಮೇಲೆ ತೀರಿಸಿಕೊಳ್ಳುತ್ತಿದ್ದರು.. ನನ್ನ ಕೀಳರಿಮೆಗೆ ಇವನಿಗೆ ಬೀಳುತ್ತಿದ್ದ ಏಟು ಕೊಂಚ ಔಷಧಿಯ ರೂಪದಲ್ಲಿ ಸಹಾಯ ಮಾಡುತ್ತಿತ್ತು ಅನಿಸುತ್ತದೆ (ಹ ಹ ಹ ಹ ಹ) 

ಆದರೆ ಅಂದಿಗೂ ಇಂದಿಗೂ ಎಂದಿಗೂ ಇವನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ.. ಆಗೋಲ್ಲ.. 

ಅಣ್ಣ, ಅಕ್ಕ, ನನ್ನ ಮುದ್ದು ತಮ್ಮನಾಗಿ ಬೆಳೆದು ಸುವರ್ಣ ಸಂಭ್ರಮದಲ್ಲಿ ಮುಳುಗಿ ಏಳುತ್ತಿರುವ ಮುರುಳಿಗೆ ನನ್ನ ಮನೆಗೆ ಬಂದವರು ಅತ್ತಿಗೆಯಾಗಿ, ಮಾತೃ ಸ್ವರೂಪಿಯಾಗಿ ನಿಂತಿರುವ ವಾಣಿ ಅತ್ತಿಗೆ, ನನ್ನ ಮಡದಿ ಸೀಮಾ.. ಜೊತೆಯಲ್ಲಿ ಚಿಕ್ಕಪ್ಪ ಎಂದರೆ ಹೆದರಿಕೆ ..  ಪ್ರೀತಿ..  ಭಯ ಎಲ್ಲವನ್ನೂ ಒಂದು ಬಟ್ಟಲಿನಲ್ಲಿ ಕಲೆಸಿ ಪ್ರೀತಿಸುವ ವರ್ಷ, ವಿಷ್ಣು, ಶೀತಲ್ ... ಮಾವ ಮಾವ ಅಂತ ಕರೆದು ನಂತರ ಆತ್ಮೀಯ ಸ್ನೇಹಿತನಾಗಿರುವ ಅಕ್ಕನ ಮಗ ಆದಿತ್ಯ.. ಎಲ್ಲರ ಪ್ರೀತಿಯ ಹಡಗನ್ನೇ ಏರಿ ಪಯಣಿಸುತ್ತಿದ್ದಾನೆ.. 

ಅಣ್ಣ ವಿಜಯ್ ಮತ್ತೆ ಇವನು ಇಬ್ಬರೂ ಸ್ನೇಹಿತರಂತೆ.. ತಮಾಷೆ, ಮಾತುಗಳು, ಎಲ್ಲಾ ಯೋಜನೆಗಳಲ್ಲಿ ಸಹಕಾರ.. 
ಅಕ್ಕ ಇವನಿಗೆ ಎರಡನೇ ತಾಯಿಯಾಗಿದ್ದಾಳೆ.. ಪ್ರತಿ ಹಂತದಲ್ಲೂ ಇವನನ್ನು ರಕ್ಷಿಸುವ, ಸಲಹುವ ರಕ್ಷಾ ಕವಚವಾಗಿದ್ದಾಳೆ.. 

ಈ ಸಮಾರಂಭದಲ್ಲಿ ಮುರುಳಿಯ ಹಿತೈಷಿಯಾಗಿ ಬದರಿ, ಮತ್ತು ಅವರ ಕಚೇರಿಯ ಎಲ್ಲರೂ ಶುಭ ನುಡಿ ಹಾರೈಸಿದ್ದು.. 
ಆರ್ ಸಿ ಬಿ ತಂಡದ ಹಾಗೆ ಹದಿನೆಂಟು ವರ್ಷಗಳ ಬದರಿ ಮತ್ತು ಮುರುಳಿಯ ಬಂಧ.. ಅವನ ಹುಟ್ಟು ಹಬ್ಬದ ಕೇಕಿನಲ್ಲೂ ಕಂಡಿತ್ತು.. "ಆಫೀಸಿನಲ್ಲಿ ಕಿತ್ತಾಡಿದ್ದೇವೆ, ಕೂಗಾಡಿದ್ದೇವೆ, ಆದರೆ ನಮ್ಮ ಸ್ನೇಹ ಹೊಸದಾಗುತ್ತಲೇ ಇದೆ.. ಮುರುಳಿ ನಮ್ಮ ಆಸ್ತಿ" ಎನ್ನುವಂತಹ ಮಾತುಗಳು.. ಅದ್ಭುತವಾಗಿತ್ತು 

ಅವನ ತುಂಟತನ, ಹಠಮಾರಿತನ, ಕೋಪ ಎಲ್ಲವನ್ನೂ ಸಹಿಸಿಕೊಂಡಿರುವ ಅವನ ಕಟ್ಟೆ ಬಳಗದ (ನನ್ನ ಅಪ್ಪ ಮುರುಳಿಯ ಸ್ನೇಹಿತರನ್ನು ಕರೆಯುತ್ತಿದ್ದದ್ದು ಹೇಗೆ .. ಗುರುಗಳು, ನರೇಂದ್ರ, ಜೈ, ರಾಜ, ಅರುಣ್, ರಮೇಶ, ಮಲ್ಲಿಕ್)  ಸ್ನೇಹಿತರು ಶುಭಕೋರಿದರು.. ಇವನನ್ನು ಬಿಟ್ಟು ಅವರು ಎಲ್ಲೂ ಹೋಗೋಲ್ಲ.. ಇವನು ಬರೋಲ್ಲ ಅಂದರೆ ಕಾರ್ಯಕ್ರಮವನ್ನೇ ರದ್ದು ಪಡಿಸುವಷ್ಟು ಇವನ ಮೇಲೆ ಪ್ರೀತಿ.. , ಕಟ್ಟೆ ಬಳಗದ ಅಧ್ಯಕ್ಷರು ಮುರುಳಿಯ ಬಗ್ಗೆ ಆಡಿದ ಅಭಿಮಾನ ಪೂರಿತ ಮಾತುಗಳು ಈ ಸಮಾರಂಭಕ್ಕೆ ಅದ್ಭುತ ಸ್ಪರ್ಶ ನೀಡಿತು.. ಮುರುಳಿಯ ಮೊಬೈಲ್ ಹೆಲ್ಲೊ ಟ್ಯೂನ್ "ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ" ಹಾಡಿನಂತೆ ಮುರುಳಿಯ ಜೊತೆಗೆ ನಾವು .. ಅಂದ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದರು.. ಬದುಕಿನ ಸಾರ್ಥಕತೆಯ ಕ್ಷಣಗಳು ಅಂದರೆ ಇದೆ ಅಲ್ಲವೇ.. ಯಾರಿಗೂ ಹೇಳದೆ. .ಇಷ್ಟೊಂದು ಅವನ ಬಂಧು ಮಿತ್ರರು ಬಂದಿದ್ದಾರೆ.. ಇನ್ನೂ ಎಲ್ಲರಿಗೂ ಹೇಳಿದ್ದರೆ ಬಹುಶಃ ಈ ಸಭಾಂಗಣ ಸಾಕಾಗುತ್ತಿರಲಿಲ್ಲ.. ವಾಹ್ ಇದು ಮಾತು ಅಂದರೆ.. ಇದು ಸ್ನೇಹ ಬಂಧ ಅಂದರೆ ಅಲ್ಲವೇ.. 

ಕೋರವಂಗಲ ಕುಟುಂಬದ ರಜನೀಶ ನಮ್ಮನ್ನು ನಾಲ್ಕು ದಶಕಗಳ ಹಿಂದಕ್ಕೆ ಕರೆದೊಯ್ದು ಅಂದಿನ ಕತೆಯನ್ನು ಹೇಳಿದ್ದು ಬಾಲ್ಯದ ನೆನಪನ್ನು ಹಸಿರಾಗಿಸಿತು.. 

ಕೋರವಂಗಲ ಕುಟುಂಬದ ನಮ್ಮ ಪದ್ಮ ಚಿಕ್ಕಮ್ಮ, ನರೇಂದ್ರ, ರಜನೀಶ, ಕಾರ್ತಿಕ್, ಸು"ಮಗಳೇ", ನಾಗಲಕ್ಷ್ಮಿ, ಮಧುರ ಪುಟ್ಟಿ, ಮಕ್ಕಳಾದ ವೈಷ್ಣವಿ, ಭರತ, ಸರಯೂ, ಸೌರವಿ, ಸುರಭಿ, ವಿಷ್ಣು, ಶೀತಲ್, ವರ್ಷ, ಇಂಪನಾ, ಸಿಂಚನ ಇವರೆಲ್ಲ ಜೊತೆಯಲ್ಲಿ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸುವರ್ಣ ಚೌಕಟ್ಟು ಒದಗಿಸಿತು.. 

ಈ ಕಾರ್ಯಕ್ರಮಕ್ಕೆ ತೆರೆಯ ಹಿಂದೆ ಶ್ರಮಿಸಿದ ಬದರಿ ಮತ್ತು ಅವರ ಆಪ್ತ ತಂಡಕ್ಕೆ (ಬದರಿ, ರೂಪ, ಸುರೇಶ, ಮಾಧವ, ಮಧು ..  ಇತರ ಆತ್ಮೀಯ ಗೆಳೆಯರು ... ಕ್ಷಮಿಸಿ ಎಲ್ಲರ ಹೆಸರು ನೆನಪಿಗೆ ಬರುತ್ತಿಲ್ಲ) ಜೊತೆಗೆ ಬದರಿ ಮತ್ತು ಈ ಕಾರ್ಯಕ್ರಮಕ್ಕೆ ನಮ್ಮ ಮನೆಯ ಕೊಂಡಿಯಾಗಿ ನಿಂತ ನನ್ನ ಅಣ್ಣ ವಿಜಯ್ ಮತ್ತು ಆತನ ಕಾರ್ಯಶೀಲ ಕುಟುಂಬಕ್ಕೆ ಧನ್ಯವಾದಗಳು.. 

ಅಚ್ಚರಿ ಅನ್ನುವುದು ಹೀಗೆ ಬರಬೇಕು.. ಹೀಗೆ ಇರಬೇಕು.. !

ಭರ್ಜರಿ ಊಟ.. ಭರ್ಜರಿ ಫೋಟೋಗಳು.. ಎಲ್ಲವೂ ಸೊಗಸಾಗಿದ್ದವು.. 

ಎಲ್ಲರನ್ನೂ ಬೀಳ್ಕೊಟ್ಟು ಹೊರಡುವಾಗ ಮುರುಳಿಯ ಮನದಲ್ಲಿ ಹಾಡುತ್ತಿದ್ದ ಹಾಡು 

"ಕಂಗಳು ವಂದನೆ ಹೇಳಿದೆ 
ಹೃದಯವೂ ತುಂಬಿ ಹಾಡಿದೆ.. 
ಆಡದೆ ಉಳಿದಿಹ ಮಾತು ನೂರಿದೆ"