Monday, July 28, 2025

ಸಡಗರದಿಂದ ಗಗನದ ಅಂಚಿಂದ .... !

ಅಣ್ಣ ಪದೇ ಪದೇ ತಮ್ಮ ಸ್ಟೀಲ್ ಕೇಸ್ ವಾಚ್ ನೋಡುತ್ತಿದ್ದರು.. ಸದಾ ತಮ್ಮ ಭಾವಗಳನ್ನು ಮನದೊಳಗೆ ಇಟ್ಟುಕೊಂಡು ಖುಷಿ ಪಡುವ ಅಣ್ಣನ ಸ್ವಭಾವವನ್ನು ಸರಿಯಾಗಿ ಅರಿತಿದ್ದ ಅಮ್ಮ ಅವರೊಡನೆ ಐವತ್ತೆರಡು ವಸಂತಗಳನ್ನು ಕಳೆದ ಅನುಭವ ವರವಾಗಿತ್ತು.. 

ಆದರೂ ಇರಲಿ ಅಣ್ಣನೇ ಹೇಳುತ್ತಾರೆ ಅಂತ ಕಾದು ಕಾದು ಕಡೆಗೆ ಅಮ್ಮನ ಸಾತ್ವಿಕ ಸಿಟ್ಟು "ಏನು ಅವಾಗಿಂದ ಗಡಿಯಾರ ನೋಡ್ತಾ ಇದ್ದೀರಿ.. "

"ಇಲ್ಲ ಕಣೆ ವಾಚನ್ನು ಮೆಲ್ಲನೆ ಹಿಂದಕ್ಕೆ ತಿರುಗಿಸೋಕೆ ಪ್ರಯತ್ನ ಪಟ್ಟಿದ್ದೆ ಅದು ಮೆಲ್ಲನೆ ಹಿಂದಕ್ಕೆ ಹೋಗುತ್ತಿದೆ.. ಅದು ನನಗೆ ಕಾಣುತ್ತಿದೆ.. ಆದರೆ ನನಗೆ ಬೇಕಾಗಿದ್ದ ಕಾಲಕ್ಕೆ ಹೋಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ ಅಷ್ಟೇ.. "

"ನೀವೋ ನಿಮ್ಮ ವಾಚೋ.. ಅದೇನು ಕತೆ ಸರಿಯಾಗಿ ಹೇಳಿ.. ಆ ಶ್ರೀಕಾಂತನೂ ಹಿಂಗೇ ಮುರುಳಿಯನ್ನು ಗೋಳು ಹುಯ್ಕೋತಾ ಇದ್ದ.. ಮುರುಳಿ ನೀರು ಬಾವಿಯಿಂದ ಸೇದಿ ಸೇದಿ ಕೊಡುತ್ತಿದ್ದ, ಶ್ರೀಕಾಂತ ಮನೆಯಲ್ಲಿನ ತೊಟ್ಟಿ, ಬಕೆಟ್, ಕುಡಿಯಲು ನೀರು ಎಲ್ಲದಕ್ಕೂ ತುಂಬುತಿದ್ದ.. ಆದರೆ ಮುರುಳಿಗೆ ಬೇಗ ಕೆಲಸ ಮುಗಿಯಬೇಕು.. ಆದರೆ ಶ್ರೀಕಾಂತ ಅದು ಮುಗಿಯೋ ತನಕ ಹೇಳುತ್ತಿರಲಿಲ್ಲ.. ಯಾವಾಗಲೂ ಇದೆ ಗಲಾಟೆ ಅವರಿಬ್ಬರ ಮಧ್ಯೆ.. ಅದೇ ತರಹ ನೀವು ಇರೋ ವಿಷಯ ಸರಿಯಾಗಿ ಹೇಳಲ್ಲ.. ಆಮೇಲೆ ನಾ ಹೇಳಿದ್ದು ಕೇಳಲ್ಲ ಅಂತ ಕೂಗಾಡ್ತೀರಾ.. "

"ಇಲ್ಲ ಕಣೆ ಬಾ ಇಲ್ಲಿ.. ನೋಡು ಇತ್ತೀಚಿಗೆ ತಾನೇ ಭಾರತದಿಂದ ಶುಭಾಂಶು ಶುಕ್ಲ ಅಂತರಿಕ್ಷಕ್ಕೆ ಹಾರಿ ಹದಿನಾಲ್ಕು ದಿನಗಳ ನಂತರ ಭಾರತಕ್ಕೆ ಮರಳಿದ್ದ .. ಅವನು ಕಳಿಸಿದ್ದ ಭಾರತದ ಚಿತ್ರದಲ್ಲಿ ಬಸವಾಪಟ್ಟಣದ ಚಿತ್ರವೂ ಕಂಡಿತ್ತು .. ಅದನ್ನು ನೋಡುತ್ತಾ ನೋಡುತ್ತಾ ಹಾಗೆ ಬಸವಾಪಟ್ಟಣದ ಯಾಗದ ದೃಶ್ಯ ಕಣ್ಣಿಗೆ ಕಾಣತೊಡಗಿತು.. ಅದನ್ನ ಮತ್ತೊಮ್ಮೆ ನೋಡಲು ನನ್ನ ವಾಚನ್ನು ಹಿಂದಕ್ಕೆ ತಿರುಗಿಸುತ್ತಿದ್ದೆ.. ಆಗೋ ನೋಡು ನೋಡು.. ಆ ದಿನ ಬಂದೆ ಬಿಟ್ಟಿತು.. 

ಒಂದು ಮರ.. ಅಲ್ಲಿ ಸಾವಿರಾರು ಜನರು ಓಡಾಡುವ ಪ್ರದೇಶ.. ನನ್ನ ತೊಡೆಯ ಮೇಲೆ ಸುಮಾರು ಹನ್ನೊಂದು ವರ್ಷದ ವಿಜಯ ತೊಡೆಯ ಮೇಲೆ ಮಲಗಿದ್ದಾನೆ.. ಮೈಯೆಲ್ಲಾ ಬಿಸಿಯಾಗಿತ್ತು.. ಜ್ಞಾನವಿಲ್ಲ.. ಆದರೆ ಅವನ ಉಪನಯನ ನೆಡೆಯಬೇಕಿತ್ತು.. ಬಂದವರೆಲ್ಲ.. ಮರದ ನೆರಳಲ್ಲಿ ಮಲಗಿಸಿಕೊಂಡಿದ್ದ ವಿಜಯನನ್ನು ಕಂಡು .. ಇದೇನು.. ಉಪನಯನ ಮಾಡಲು ಬಂದಿದ್ದೀರೋ ಒಪ್ಪ ಮಾಡಲು ಕರೆದುಕೊಂಡು ಬಂದಿದ್ದೀರೋ.. ಅಂತ ಕೇಳುತ್ತಲೇ ಇದ್ದರು.. ಆದರೂ ಆ ಬಸವಾಪಟ್ಟಣದ ರಾಘವೇಂದ್ರ ಸ್ವಾಮಿಗಳ ಅನುಗ್ರಹ.. ಶಿವಮೊಗ್ಗದ ಕೋಟೆ ಆಂಜನೇಯನ ಆಶೀರ್ವಾದ.. ನನ್ನ ಅಮ್ಮ ಹಾಗೂ ಅಪ್ಪನ ಅಭಯ ಹಸ್ತ ಮತ್ತು ಹೇಳಿದ ಮಾತು "ಮಂಜಣ್ಣ ನಿನ್ನ ಇಚ್ಛೆಯಂತೆ ಎಲ್ಲವೂ ನೆಡೆಯುತ್ತೆ.. " ಆ ಮಾತುಗಳು ವಿಜಯನನ್ನು ಗೆಲ್ಲಿಸುತ್ತಿದೆ .. ಅವನ ಹೆಸರಿನಂತೆ ಗೆಲ್ಲುತ್ತಲೇ ಇರುತ್ತಾನೆ..  ಅಂತ ನನ್ನ ಅಣ್ಣ ಅಂದರೆ ನನ್ನ ಅಪ್ಪ ಹೇಳಿದ್ದು ನೆನಪಾಯಿತು ಕಣೆ.. 

ಸುಯ್ ಸುಯ್ ಅಂತ ಗಡಿಯಾರ ಮುಂದೆ ಓಡಲು ಶುರುವಾಯಿತು.. ೨೭ನೇ ಜುಲೈ ೨೦೨೫.. ಸುಲಗ್ನ  ಸಾವಧಾನ ... ಸುಮೂಹೂರ್ತ ಸಾವಧಾನ.. ಮಂತ್ರಗಳು ತಾರಕದಲ್ಲಿ ಸಾಗಿತ್ತು.. ಮಂಗಳ ವಾದ್ಯದಲ್ಲಿ ಇಬ್ಬರು ಹೆಣ್ಣು ಮಕ್ಕಳು ಸಾಕ್ಸೋಫೋನ್ವಾ ನುಡಿಸುತ್ತಿದ್ದದ್ದು ..  ಅಂತರಪಟ.. ನಂತರ ಇಪ್ಪತ್ತು ವರ್ಷದ ಮಗು ಅರವತ್ತ್ತರ ಹೊಸ್ತಿಲಿಗೆ ಬರುತ್ತಿರುವ ಅಪ್ಪನ ತೊಡೆಯ ಮೇಲೆ ಕೂತು ಗಾಯತ್ರಿ ಮಂತ್ರದ ಉಪದೇಶ.. ಆಹಾ ಆ ದಿನಗಳ ನೆನಪು ಬಂತು.. 

ನನ್ನ ನಾಲ್ಕನೇ ಮೊಮ್ಮಗ ವಿಷ್ಣುವಿನ ಬ್ರಹ್ಮೋಪದೇಶದ ಕಾರ್ಯಕ್ರಮ.. ನನ್ನ ಬಂಧು ಮಿತ್ರರು ಸಡಗರದಿಂದ ಸಭಾಂಗಣಕ್ಕೆ ಬರುತ್ತಿದ್ದಾಗ ರಾಜಕುಮಾರ್ ಅವರ ಜೀವನ ಚಿತ್ರದ ಹಾಡು ನೆನಪಿಗೆ ಬಂತು.. "ಸಡಗರದಿಂದ ಗಗನದ ಅಂಚಿಂದ ಸುರರು ಬಂದು ಹರಿ(ವಿಷ್ಣು)ಯ ಕಂಡು ಅನುಗ್ರಹ ಸದನವೇ ಸ್ವರ್ಗ .. ಅನುಗ್ರಹವೇ ಸ್ವರ್ಗವೆನುತಿರಲು "ಕೌಸ್ತುಭ"ಮಯ ಅನುಗ್ರಹವೆಲ್ಲ ಕೌಸ್ತುಭಮಯ.. 

ಇದು ಅಲ್ಲವೇ ನನ್ನ ಮಕ್ಕಳ ಸಾಧನೆ.. 

ಶಿವಮೊಗ್ಗದ ಸೋಮಣ್ಣ .. ಮಂಜಣ್ಣ ನೀನು ಬೆಂಗಳೂರಿಗೆ ಹೋಗು ಮಕ್ಕಳಿಗೆ ಏಳಿಗೆಯಾಗುತ್ತದೆ ಎಂದಿದ್ದು ನೆನಪಾಯ್ತು 

ನನ್ನ ಸೋದರ ಮಾವನ ಮಗ ಗುಂಡ ಆತ್ಮೀಯವಾಗಿ ದೊರೆ ದೊರೆ ನೀನು ಯಾವಾಗಲೂ ದೊರೆ ಕಣೋ.. ನಿನ್ನ ಮಕ್ಕಳು ರತ್ನಗಳು ಅನ್ನುವುದು 

ಶಿವಮೊಗ್ಗದ ಸೀತಣ್ಣ ನಿನ್ನ ಮಕ್ಕಳು ಅಂದರೆ ಮಕ್ಕಳು ಮಂಜಣ್ಣ ಎಂದಿದ್ದು 

ನನ್ನನ್ನು ತಾಯಿಯಂತೆ ನೋಡಿಕೊಂಡ ನರ್ಸ್ ಸೌಮ್ಯ ಶ್ರೀಕಾಂತನಿಗೆ ಹೇಳಿದ್ದು ನಿಮ್ಮಂಥ ಮಕ್ಕಳನ್ನು ಪಡೆಯಲು ನಿಮ್ಮ ಅಪ್ಪ ಪುಣ್ಯ ಮಾಡಿದ್ದರು ಎಂದಾಗ...  ಅವನು ಕಣ್ಣು ತುಂಬಿಕೊಂಡು "ಇಂತಹ ತಂದೆಯನ್ನು ಪಡೆಯಲು ನಾವುಗಳು ಪುಣ್ಯ ಮಾಡಿದ್ದೇವೆ" ಅಂತ ಹೇಳಿದ್ದನ್ನು ಕೇಳಿಸಿಕೊಂಡಾಗ ಮನಸ್ಸು ತುಂಬಿ ಬಂದಿತ್ತು, 

ವೇದಘೋಷಗಳು.. ಅಚ್ಚುಕಟ್ಟಾಗಿ ಸಜ್ಜಾದ ವೇದಿಕೆ.. ಹೋಮದ ಧೂಮ.. ಬಂಧು ಮಿತ್ರರು ಅಪರೂಪವಾಗಿ ಸಿಕ್ಕಿ ಆತ್ಮೀಯವಾಗಿ ಹರಟುತಿದ್ದದ್ದು.. ಅನೇಕ ಬಾರಿ ಪುರೋಹಿತರು ಮಾತಾಡಬೇಡಿ ಆಶೀರ್ವಚನ ನೆಡೆಯುತ್ತಿದೆ.. ಉಪನಯನದ ಮಹತ್ವ ಹೇಳುತ್ತಿದ್ದಾರೆ ಎಂದಾಗಾಲೂ ಕೂಡ ಒಂದು ಕ್ಷಣ ನಿಶ್ಯಬ್ಧ ಮತ್ತೆ ಅದೇ ಮಾತುಗಳು.. ನಗು.. 

ಮಾತೃ ಭೋಜನ.. ಯಶೋದೆ ಕೃಷ್ಣನನ್ನ ತೊಡೆಯ ಮೇಲೆ ಕೂರಿಸಿಕೊಂಡು ಭೋಜನ ಮಾಡಿಸಿದಂತೆ.. ವಾಣಿ ಮತ್ತು ವಿಷ್ಣುವಿನ ಜೊತೆ ಮತ್ತಷ್ಟು ವಟುಗಳು ಕೂತು ಉಪಹಾರದ ಸಡಗರ.. 

ನಂತರ ಕೇಶ ಮುಂಡನದ ಸಂಸ್ಕಾರ.. ಹಿಂದೆ ವಟುಗಳು ಕೊಬ್ಬರಿಯಾಗುತ್ತಿದ್ದದ್ದು ಮಾಮೂಲಾಗಿತ್ತು.. ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಲ್ಯದ ಅವಸ್ಥೆಯಲ್ಲಿ ಉಪನಯನ ಕಷ್ಟಕಾರ್ಯ.. ಹಾಗಾಗಿ ಹದಿಹರೆಯ ಬಂದಾಗ.. ಅಥವ ದಾಟಿದ ಪ್ರೌಢಾವಸ್ಥೆಯಲ್ಲಿ ಕೊಬ್ಬರಿ ಕಷ್ಟ.. ಹಾಗೆ ಅಸಾಧ್ಯ ಅನ್ನಬಹುದು.. ಶಾಸ್ತ್ರಕ್ಕೆ ಒಂದೆರಡು ಕೂದಲು ತೆಗೆಯುವ ಶಾಸ್ತ್ರ ಮಾಡೋದು ಮಾಮೂಲು.. ಆದರೆ ಶ್ರದ್ಧೆ ಭಕ್ತಿ   ನನ್ನ ಸಂಸಾರದ ಹೆಮ್ಮೆಯ ಗುರುತು .. ವಿಷ್ಣು ಒಪ್ಪಿದ್ದು .. ಕೊಬ್ಬರಿಯಾಗಿದ್ದು ಖುಷಿಯಾಗಿತ್ತು.. ಬಾಲ್ಯದಲ್ಲಿ ಅವನಿಗೆ ಚೌಲ ಮಾಡಿದಾಗ ಕಾರ್ತಿ ನೆನಪಿಸಿಕೊಂಡಂತೆ ;"ಅಯ್ಯೋ ನನ್ನ ಜುಟ್ಟು ಹೋಯ್ತು ಹೋಯ್ತು" ಅಂತ ಅಳುತ್ತಿದ್ದ ಮಗು ಇಂದು ಸ್ವಯಂ ಇಚ್ಛೆಯಿಂದ ಬ್ರಹ್ಮಚರ್ಯದ ಸಂಕೇತ ಶಿಕೆಯನ್ನು ಬಿಟ್ಟುಕೊಂಡು ನಿಂತಿದ್ದು ವಾಹ್ ವಾಹ್ ನನ್ನ ಅನುಗ್ರಹ ಸದನದ ಮಕ್ಕಳೇ ಎನ್ನುವಂತೆ ಮಾಡಿತ್ತು.. 

ಅನೇಕ ಬಾರಿ ಅಕ್ಷತೆ ತಂದು ತಂದು ಕೊಟ್ಟು ಆಶೀರ್ವಾದ ಮಾಡಿ ಅಂತ ಹೇಳಿದಾಗ ಅದೆಷ್ಟು ಬಾರಿ ಅಕ್ಷತೆ ಬರುತ್ತಿದೆ.. ಎಂದು ಹೇಳಿದಾಗ ಕುಮಾರ ಹೇಳಿದ "ಕೊಬ್ಬರಿ ಸಕ್ಕರೆ ಕೊಡಬೇಕು ಅದೇಕೆ ಇಷ್ಟೊಂದು ಬಾರಿ ಅಕ್ಷತೆ ಕೊಡುತ್ತಿದ್ದಾರೆ" ಅಂದು ತಕ್ಷಣವೇ "ಕೊಬ್ಬರಿ ಸಕ್ಕರೆ ಎಸೆಯೋಕೆ ಆಗೋಲ್ಲ.. ಆಶೀರ್ವಾದ ಮಾಡೋಕೆ ಅಕ್ಷತೆ ಅಲ್ಲವೇ" ಅಂತ ತನ್ನ ವಾಗ್ದೇವಿ ಅನುಗ್ರಹಿತ ವಾಕ್ಝರಿಯನ್ನು ಹರಿಸಿಯೇ ಬಿಟ್ಟ!

ತಮಾಷೆಯ ಜ್ಞಾನೇಶ "ಅಕ್ಷತೆ ಹಾಕಿ ಹಾಕಿ ವಿಷ್ಣು ಸಂಜೆ ಮನೆಯಲ್ಲಿ ತನ್ನ ತಲೆಯನ್ನು ನೋಡಿಕೊಂಡಾಗ ಬುಗುರಿ ಆಟದಲ್ಲಿ ಮೂಡುವ ಗುನ್ನದ  ತರಹ ಅಕ್ಷತೆಯು ತಾಕಿ ತಾಕಿ ವಿಷ್ಣು ತಲೆಯ ತುಂಬಾ ಗುನ್ನ ಆಗಿರುತ್ತದೆ" ಎಂದಾಗ ಎಲ್ಲರಿಗೂ ನಗು.. 

ಶಾರ್ವರಿ ವಿಷ್ಣುವಿನ ಭಾವಚಿತ್ರವನ್ನು ಬಿಡಿಸಿ ಕೊಟ್ಟಾಗ ನರೇಂದ್ರ "ವಿಷ್ಣು .... ಸೂರ್ಯನಿಗೆ ಟಾರ್ಚು" ಅಂತ ಹೇಳಿ ವಿಷ್ಣುವಿನ ಚಿತ್ರಕಲೆಯನ್ನು ಪ್ರಶಂಶಿಸಿದ.. 

ರಜನೀಶ ಹೇಳಿದ್ದು ವಿಷ್ಣುವಿನ ಪುಣ್ಯ ಬರದವರು ಕೂಡ ಬಂದಿದ್ದು ಅಂತ ಹೇಳಿದ್ದು... 

ಬಂದವರೆಲ್ಲ ಸಂತಸದಿಂದ ನಕ್ಕು ನಲಿದು.. ಹರಸಿದ್ದು.... ತರಲೆ ಸುಬ್ಬಿಗಳು ಆಶಾ, ರೂಪ, ಸುಮ, ಸೀಮಾ ..ಮೈಕ್ ಹಿಡಿದು ಒಂದಷ್ಟು ತಮಾಷೆ ಮಾತನಾಡಿದ್ದು.. ಅದಕ್ಕೆ ಸಹಯೋಗ ನೀಡಿ ಹುರುಪು ತುಂಬಿದ ರಮ್ರ್ಯ ಮಧುರ..ಜೊತೆಯಲ್ಲಿ ಸಂತಸದಿಂದ ಬೀಗಿದ ಕೋರವಂಗಲದ ಮುದ್ದು ಮೊಮ್ಮಕ್ಕಳು..ಕಾರ್ಯಕ್ರಮವನ್ನು ಎತ್ತರಕ್ಕೆ ಏರಿಸಿತು ಹಾಗೂ ಅಂತಿಮ ಹಂತ ಮುಟ್ಟಿದ್ದು ತೋರಿಸಿತು... 

ದುಂಬಿಗಳ ಹಾಗೆ ಹನಿ ಹನಿಯನ್ನು ಸೇರಿಸಿ, ಸೇರಿಸಿ. ಜೇನುಗೂಡನ್ನು ಕಟ್ಟುವಂತೆ ಕೌಸ್ತುಭ V4 we are for all ಎನ್ನುವ ಹಾಗೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ರೂಪಿಸಿದ್ದು ವಿಜಯ ವಾಣಿ ವರ್ಷ ವಿಷ್ಣು ಕೂಡಿ ಆಯೋಜಿಸಿದ್ದು.. ಅದಕ್ಕೆ ಸಮಾರಂಭಕ್ಕೆ ಬಂದಿದ್ದ ಅನೇಕ ಕೈಗಳು ಸಾತ್ ಕೊಟ್ಟಿದ್ದು ಸೂಪರ್ ಸೂಪರ್ ಅಲ್ವೇ.. 



ಪಟಾಕಿ ಯಾರದ್ದದ್ದಾದರೇನು ಪಟಾಕಿ ಹೊಡೆಯೋರು ನಾವಾಗಿರಬೇಕು ಅಂತ ಕೃಷ್ಣವೇಣಿ, ಮುರುಳಿ, ಶೀತಲ್, ಸೀಮಾ ತಮ್ಮ ತಮ್ಮ ಯಥಾಶಕ್ತಿ  ಕೈಜೋಡಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು .. 

ಹೊರದೇಶದಲ್ಲಿರುವ ನನ್ನ ಮೊಮ್ಮಕ್ಕಳು ಆದಿತ್ಯ, ಐಶ್ವರ್ಯ ಇವರಿಬ್ಬರ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಹೊಳಪು ನೀಡುತ್ತಿದ್ದದ್ದು ನಿಜವಾದರೂ ನನ್ನ ಅನುಗ್ರಹದ ಪತಾಕೆಯನ್ನು ಹೊರದೇಶದಲ್ಲಿ ಹರಡಿರುವ ಈ ಮುದ್ದು ಮಕ್ಕಳಿಗೆ ನನ್ನ ಶುಭ ಆಶೀರ್ವಾದಗಳು ..  

ಸಂಗೀತ ಸಂಜೆಯ ಕೊನೆಯಲ್ಲಿ "ಕುಲದಲ್ಲಿ ಕೀಳ್ಯಾವುದೋ  ಹುಚ್ಚಪ್ಪ ಮತದಲ್ಲಿ ಮೆಲ್ಯಾವುದೋ" ಎಂಬ ಹಾಡು ಇರಲೇ ಬೇಕು.. ನನ್ನ ಅನುಗ್ರಹ ಸದನದ ಕಾರ್ಯಕ್ರಮದಲ್ಲಿ ಬಂದವರೆಲ್ಲರನ್ನೂ ನಿಲ್ಲಿಸಿ ಒಂದು ಕೂಡು ಕುಟುಂಬದ ಚಿತ್ರ ಇದ್ದೆ ಇರುತ್ತದೆ.. ಇದು ಕೂಡ ತಪ್ಪಲಿಲ್ಲ.. 




ನಿಜವಾಗಿಯೂ ಕಣೆ.. ನನ್ನ ಕುಟುಂಬ ಅನುಗ್ರಹಿತ ಕುಟುಂಬ.. ಶ್ರೀಕಾಂತನ ಮೆಚ್ಚಿನ ರಾಜಕುಮಾರ್ ಜೀವನ ಚಿತ್ರದಲ್ಲಿ ಹೇಳುವಂತೆ "ಎಂಥ ಮಕ್ಕಳ್ಳನ್ನು ಹೆತ್ತೆ ವಿಶಾಲೂ ಒಂದೊಂದು ಮುತ್ತುಗಳು ಕಣೆ" 

ಅಮ್ಮ ಮೆಲ್ಲನೆ ಕಣ್ಣಂಚಿನಲ್ಲಿ ಒಸರುತ್ತಿದ್ದ ಆನಂದ ಭಾಷ್ಪವನ್ನು ಒರೆಸಿಕೊಂಡು "ಭಾಗ್ಯವಂತರು ನಾವೇ ಭಾಗ್ಯವಂತರು.. " ಹಾಡು ನೆನಪಿಸಿಕೊಳ್ಳುತ್ತಾ "ಕಪ್ಪು ಬಿಳುಪು" ಚಿತ್ರದ ಹಾಡು ನನ್ನ ಮೆಚ್ಚಿನ ಅನುಗ್ರಹ ಸದನಕ್ಕೆ ಅಂತ ಇವಳು ಹೇಳಿದ್ದು.. ಮತ್ತೆ ಆ ವಿಡಿಯೋ ಹಾಡು ಹಾಕಿದ್ದು ಈ ಕಾರ್ಯಕ್ರಮಕ್ಕೆ ಬಂಗಾರದ ಕಳಸ ಇಟ್ಟಂತೆ ಆಯ್ತು.. 


ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ  ಅನುರಾಗದ ಮಳೆ
ಎಂದೆಂದೂ ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲೀ


ನೂತನ ನಂದನ ನಲಿ ನಲಿದಾಡಲಿ
ಪ್ರೀತಿಯ ಸುಮವೂ ಅರಳುತಲಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ನ್ಯಾಯದ ಜ್ಯೋತಿಯು ಬೆಳಗಿರಲಿ


ಈ ಮನೆ ಪ್ರೇಮದ ಮಂದಿರವಾಗಲಿ
ಸವಿಮಾತುಗಳಾ ತವರೂರಾಗಲಿ
ಸಿರಿದೇವತೆಯೂ ಕುಣಿ ಕುಣಿದಾಡಲಿ
ಅರಶಿಣ ಕುಂಕುಮ ನಗುನಗುತಿರಲಿ




No comments:

Post a Comment