ಏನು ಜೀವನಾರ್ಥ? ಏನು ಪ್ರಪಂಚಾರ್ಥ?||
ಏನು ಜೀವ ಪ್ರಪಂಚಗಳ ಸಂಬಂಧ?||
ಕಾಣದಿಲ್ಲಿರ್ಪುದು ಏನಾನುಮುಂಟೆ? ಅದೇನು?||
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ|| ೪||
ಅಜ್ಜ ತಮಗೆ ಇಷ್ಟವಾದ ಆಂಬೊಡೆ ಜೊತೆಗೆ ಕಾಫೀ ಸೇವಿಸುತ್ತಿದ್ದರು..
"ಅಜ್ಜ ನಿಮಗೆ ತೊಂದರೆ ಕೊಡಬಹುದೇ"
"ಓಹ್ ಬಾರಪ್ಪ.. ಬಾ.. ತಗೋ ಆಂಬೊಡೆ ಸುಬ್ಬಮ್ಮನ ಅಂಗಡಿದೂ.. "
ಅಜ್ಜ ಕೊಡುವ ಯಾವುದೇ ವಸ್ತುವಾದರೂ ಪ್ರಸಾದ ಎನ್ನುವ ಭಾವ.. ಒಂದು ಆಂಬೊಡೆ ತೆಗೆದುಕೊಂಡೆ.. ಬಹಳ ರುಚಿಯಾಗಿತ್ತು.. ಅಜ್ಜ ನೆನಪಿಸಿದ ಮೇಲೆ ಯಾಕೆ ಬಂದದ್ದು ಎಂದು ಅರಿವಾದದ್ದು..
"ಆಂಬೊಡೆ ಪ್ರಭಾವದಲ್ಲಿ ಬಂದ ವಿಷಯ ಮರೆಯಬೇಡ,, ಏನು ಹೇಳು"
"ಅಜ್ಜ ಈ ಕಗ್ಗದ ಆಂತರ್ಯವನ್ನು ಈ ಹಾಡಿನ ಕೆಲವು ಸಾಲುಗಳಲ್ಲಿ ಹಿಡಿದಿಟ್ಟಿದ್ದಾರೆ ಒಂದು ಬಾರಿ ನಿಮ್ಮ ಅಭಿಪ್ರಾಯ ಕೇಳಿ ಪ್ರಕಟಿಸೋಣ ಅಂದು ಕೊಂಡೆ"
"ಹೇಳಪ್ಪ ದಶಕಗಳ ಹಿಂದೆ ನನ್ನ ಮನಸ್ಸಿಗೆ ಬಂದದ್ದನ್ನು ಗೀಚಿದ್ದೇ.. ಅದನ್ನು ಎಷ್ಟು ಮಂದಿ ತಮ್ಮ ರೀತಿಯಲ್ಲಿ ಬರೆಯುತ್ತಿದ್ದೀರಾ.. ಖುಷಿಯಾಗುತ್ತಿದೆ. ಹೇಳಪ್ಪ ಅದ್ಯಾವ ಹಾಡು ಏನು ಕಥೆ"
ಪಾಂಡುರಂಗ ವಿಠಲನ ಪರಮ ಭಕ್ತ ಗೋರಾ ಕುಂಬಾರ ವೃತ್ತಿಯನ್ನು ಮಾಡುತ್ತಲೇ ಅನವರತ ವಿಠಲನ ಧ್ಯಾನ ಮಾಡುತ್ತಿರುತ್ತಾನೆ.. ಆತ ತನ್ನ ವೃತ್ತಿಯನ್ನು ವಿಠಲ ಮಾಡುವ ಸ್ಥಿತಿಯ ಕಾರ್ಯವನ್ನು ಸಮೀಕರಿಸುತ್ತ
"ನಾನು ನೀನು ನೆಂಟರಯ್ಯ..
ನಮಗೆ ಭೇದ ಇಲ್ಲವಯ್ಯಾ..
ಮಣ್ಣಲಿ ಮಡಿಕೆ ಕುಡಿಕೆ ಮಾಡೋ
ಕಾಯಕವಿಡಿದ ಕುಂಬಾರ ನಾನು
ಜೀವಿಗಳೆಂಬ ಬೊಂಬೆಯ ಮಾಡೋ
ಬ್ರಹ್ಮನ ತಂದೆ ಕುಂಬಾರ ನೀನು..
ಅದೇ ರೀತಿ ಇನ್ನೊಂದು ಹಾಡು ತನ್ನ ವಂಶದ ಕುಡಿಗೆ ಜೀವನದರ್ಥ ಹೇಳುತ್ತಾ.. ಹಾಡುವ ಹಾಡು
ಹರಿ ನಾಮವೇ ಚಂದ
ಅದ ನಂಬಿಕೊ ಕಂದ
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು
ಮುಂದಿನ ಬದುಕು ಬಂಧುರವೆನಿಸೋ
ಗುರಿ ಸಾಧಿಸೋ ಕಂದ
ನಿಮ್ಮ ಅಭಿಪ್ರಾಯ ಅಜ್ಜ!
ಈ ಹಾಡುಗಳಲ್ಲಿ ಕಗ್ಗದಲ್ಲಿ ನಾ ಹೇಳಿದ ಅರ್ಥವನ್ನುಭಟ್ಟಿ ಇಳಿಸಿದ ಸಾರವನ್ನು ಹರಡಿದ್ದಾರೆ..
ನಿಜ ಮನುಜನ ಜನ್ಮದ ಅರ್ಥ.. ಪಾರಮಾರ್ಥ.. ಸೃಷ್ಟಿಯ ತಂದೆಯ ಹಾಗೂ ಮನುಜನ ಕಾಯಕದ ಬಂಧ.. ಮಕ್ಕಳ ಮುಂದಿನ ಬದುಕನ್ನು ವಿಸ್ತರಿಸಿ ಹೇಳುವ ರೀತಿ.. ಈ ಎರಡೂ ಹಾಡುಗಳಲ್ಲಿ ಚೆನ್ನಾಗಿ ಮೂಡಿಸಿದ್ದಾರೆ.. ಎಪ್ಪತ್ತರ ದಶಕದ ಈ ಹಾಡು ಮತ್ತೆ ಕಗ್ಗದ ಅರ್ಥೈಸಿದ ಸಾರಕ್ಕೆ ಹೊಂದಾಣಿಕೆಯಾಗುತ್ತಿದೆ..
ಅಜ್ಜನ ಆಂಬೊಡೆ ಪಟ್ಟಣ ಖಾಲಿಯಾಗಿತ್ತು.. ಇನ್ನೊಂದು ಪೊಟ್ಟಣ ತೆಗೆದರು... ಅವರಿಂದ ಒಂದು ಆಂಬೊಡೆ ತೆಗೆದುಕೊಂಡೆ.. ಅಜ್ಜ ಆ ಪೊಟ್ಟಣವನ್ನು ಹಿಡಿದು ಮೆಲ್ಲಗೆ ಕಹಳೆ ಬಂಡೆಯಿಂದ ಹೊರನೆಡೆಯ ತೊಡಗಿದರು.
ತಿರುಗಿ ನೋಡಿದರು.. ಹೆಬ್ಬೆರಳು ಎತ್ತಿ ಮತ್ತೆ ಸಿಗೋಣ ಅನ್ನುವಂತೆ ಚಿನ್ಹೆ ತೋರಿಸಿ ಅಂತರ್ಧಾನರಾದರು!
ಡಿ.ವಿ.ಜಿ ಯವರ ಕಗ್ಗಗಳ ಅರ್ಥವನ್ನು ಸರಸ ಶೈಲಿಯಲ್ಲಿ ಸುಂದರವಾಗಿ ವಿವರಿಸುತ್ತಿದ್ದೀರಿ. ಧನ್ಯವಾದಗಳು, ಶ್ರೀಕಾಂತ.
ReplyDelete