Sunday, November 24, 2019

ಸಹಾಯ....!

ಮೈ ಬೆವರುತ್ತಿತ್ತು.. 

ಒಂದು ಎರಡು ಮೂರು ನಾಲ್ಕು.. ಹತ್ತು .. ಹದಿನೈದು.. ತನ್ನ ಪ್ರೀತಿಯ ಬೈಕ್ ಸಾಮಾನ್ಯ ಎರಡನೇ ಕಿಕ್ಕಿಗೆ ಶುರುವಾಗಬೇಕಿತ್ತು.. ಕತ್ತಲೆ ಗವ್ ಅಂತ ಇತ್ತು.. ಜೀರಂಬೆಗಳ ಸದ್ದು.. ನರಿಗಳು ಊಳಿಡುವ ಶಬ್ದ.. ಯಾಕೋ ಪರಿಸ್ಥಿತಿ ಸರಿಯಿಲ್ಲ ಅನ್ನುವ ಅನುಭವ.. 

ಮತ್ತೆ ಕಿಕ್ ಹೊಡೆಯಲು ಶುರುಮಾಡಿದ... ಹೆಲ್ಮೆಟ್, ಜಾಕೆಟ್ ಎಲ್ಲವು ಒದ್ದೆಮಯವಾಗಿತ್ತು. ಅದನ್ನು ತೆಗೆದು ಬೈಕಿನ ಮೇಲೆ ಇಟ್ಟ  ಸುಸ್ತಾಗಿದ್ದ . ತಲೆ ಕೆಟ್ಟಿತ್ತು.. ಕಿಂಗ್ ಹಚ್ಚಲು ಜಾಕೆಟ್ ಜೇಬಿಗೆ ಕೈ ಹಾಕಿ ಸಿಗರೇಟ್ ತೆಗೆದು ತುಟಿಯ ಮಧ್ಯೆ ಇಟ್ಟು  ಲೈಟರ್ ಫರ್ ಫರ್ ಸದ್ದು ಮಾಡಿತೇ ವಿನಃ.. ಬೆಳಗಲಿಲ್ಲ.. ಥೂ ಥರಿಕೆ ಎಂದು ಬಯ್ದುಕೊಂಡು.. ಎಮರ್ಜೆನ್ಸಿ ಅಂತ ಇಟ್ಟುಕೊಂಡಿದ್ದ ಬೆಂಕಿ ಪೊಟ್ಟಣ ತೆಗೆದ.. ಚರ್ ಕಡ್ಡಿ ಗೀರಿ ಹತ್ತಿಕೊಂಡಿತು... ಆ ಬೆಳಕಲ್ಲಿ ಕಂಡ ದೃಶ್ಯ ಕಂಡು ಹೌಹಾರಿದ.. 

ಅನತಿ ದೂರದಲ್ಲಿಯೇ ಬೆಳ್ಳನೆಯ ಒಂದು ಆಕೃತಿ... ಮೈ ಕೈ ಕಾಲು ನಡುಗ ಹತ್ತಿತು.. ಓಡಿ ಹೋಗೋದಾ . ನಿಲ್ಲೋದ.. ಏನೂ ಯೋಚನೆ ಮಾಡಲಾಗದ ಪರಿಸ್ಥಿತಿ.. ತುಟಿಯಲ್ಲಿದ್ದ ಸಿಗರೇಟ್ ಆ ನಡುಕದಲ್ಲಿ ಬಿದ್ದು ಹೋಗಿತ್ತು.. 

ಬೆಂಕಿ ಕಡ್ಡಿ ಕೊನೆ ತನಕ ಉರಿದು.. ಇನ್ನೂ ನನಗಾಗದು ಅಂತ ಅವನ ಕೈ ಬೆರಳುಗಳಿಗೆ ತನ್ನ ಇರುವನ್ನು ತೋರಿಸಿದ ಮೇಲೆ.. ಗಾಬರಿಯಾಗಿ ಕಡ್ಡಿ ಕೆಳಗೆ ಬೀಳಿಸಿದ.. 

ಒಣಗಿದ ಹುಲ್ಲು..  ಅಲ್ಪ ಸ್ವಲ್ಪ ಬೆಂಕಿಯ ಕೆಂಡವಿದ್ದ ಬೆಂಕಿ ಕಡ್ಡಿ.. ಆಗೊಮ್ಮೆ ಈಗೊಮ್ಮೆ ತಣ್ಣಗೆ ಬೀಸುತ್ತಿದ್ದ ಗಾಳಿ.. ಇಷ್ಟು ಸಾಕಾಗಿತ್ತು.. ಎಲ್ಲೋ ಸುಟ್ಟ ವಾಸನೆ.. ಹೊಗೆ ಕಣ್ಣಿಗೆ ಉರಿಕೊಟ್ಟಾಗ ಮತ್ತೆ ಧರೆಗಿಳಿದ ರಾಜೇಶ.. ನೋಡು ನೋಡುತ್ತಿದ್ದಂತೆಯೇ.. ಹತ್ತಿರದ ಹುಲ್ಲಿನ ರಾಶಿಗೆ ಬೆಂಕಿ.. ಕಪ್ಪು ಕತ್ತಲೆಯಿದ್ದ ಪ್ರದೇಶ ಅಚಾನಕ್ ಬೆಳಕಿನ ಹೊಂಡವಾಗಿತ್ತು.. 

ಏನನ್ನೋ ನೆನಸಿಕೊಂಡು.. ಮತ್ತೆ ಆ ಕಡೆ ನೋಡಿದ.. ಆ ಹೊಗೆ.. ಆ ಬೆಂಕಿಯ ಜ್ವಾಲೆಯ ಮಧ್ಯದಲ್ಲಿಯೂ ಆ ಬೆಳ್ಳಗಿನ ಆಕೃತಿ ಕಾಣಿಸಿತು.. ತನ್ನತ್ತ ಬರಲು ಕೈಬೀಸಿದಂತೆ ಭಾಸವಾಯಿತು.. ನಡುಕ.. ಆದರೆ ಬೇರೆ ದಾರಿಯಿಲ್ಲ.. ಮೆಲ್ಲಗೆ ಬೆಂಕಿಯನ್ನು ಬಳಸಿಕೊಂಡು ಅತ್ತ ಕಡೆ ಹೆಜ್ಜೆ ಹಾಕಿದ.. ಒಂದೈವತ್ತು ಮೀಟರ್ ಇರಬಹುದು.. ಹತ್ತಿರ ಬಂದ... ಉದ್ದನೆಯ ಬಿಳಿಯ ನಿಲುವಂಗಿ.. ತಲೆಗೆ ಬಿಳಿಬಣ್ಣದ ಮಂಕಿ ಕ್ಯಾಪ್.. ಪಾದರಕ್ಷೆಯಿಲ್ಲದ ಕಾಲುಗಳು ಹುಲ್ಲಿನ ಹಾಸಿನಲ್ಲಿ ಮುಚ್ಚಿ ಹೋಗಿತ್ತು.. ಬೆಂಕಿ ಇನ್ನೂ ತನ್ನ ಕೆನ್ನಾಲಿಗೆಯನ್ನು ಇಲ್ಲಿಯ ತನಕ ಚಾಚಿರಲಿಲ್ಲ.. ಬೀಸುವ ಗಾಳಿಗೆ ತೊಯ್ದಾಡುತ್ತಿತ್ತು.. 

"ನಾನು ಪಕ್ಕದ ಊರಿನಲ್ಲಿರುವ ಚರ್ಚಿನ ಪಾದ್ರಿ.. ನನ್ನನ್ನು ಆ ಚರ್ಚಿನ ತನಕ ಬಿಡುತ್ತೀಯಾಪ್ಪಾ.. ಚಪ್ಪಲಿ ಇಲ್ಲದ ಕಾಲುಗಳು ಚುಚ್ಚುತ್ತಿವೆ.. "

"ಸರಿ ಫಾಧರ್ ಬನ್ನಿ... ಆದರೆ ನನ್ನ ಬೈಕ್ ಸಮಸ್ಯೆ ಕೊಡುತ್ತಿದೆ.. ಸ್ಟಾರ್ಟ್ ಆಗುತ್ತಿಲ್ಲ.. ಬಹುಶಃ ಪೆಟ್ರೋಲ್ ಖಾಲಿಯಾಗಿರಬಹುದು.. "

"ನೋಡು ಚೈಲ್ಡ್.. ಚರ್ಚಿಗಾಗಿ ಪೆಟ್ರೋಲ್ ಬೇಕಿತ್ತು.. ಒಂದು ಬಾಟಲಿಯಲ್ಲಿ ಹಾಕಿಕೊಂಡಿದ್ದೇನೆ.. ಸ್ವಲ್ಪ ನೀನು ಬೈಕಿಗೆ ಹಾಕಿ ಶುರು ಮಾಡು. ಚರ್ಚ್ ತನಕ ಬಂದರೆ ಸಾಕು... ಇವತ್ತು ಅಲ್ಲಿಯೇ ಮಲಗಿದ್ದು.. ಬೆಳಿಗ್ಗೆ ಹೋಗುವಂತೆ.. ನಿನ್ನ ಬೈಕಿಗೆ ಪೆಟ್ರೋಲ್ ಹೊಂದಿಸುವ ಹೊಣೆಗಾರಿಕೆ ನನ್ನದು.. ಆಗಬಹುದಾ"

ಬೇರೆ ದಾರಿಯಿರಲಿಲ್ಲ.. ಒಪ್ಪಿಕೊಂಡ.. 

ಇಬ್ಬರೂ ಸೇರಿ ಅಲ್ಪ ಸ್ವಲ್ಪ ಉರಿಯುತ್ತಿದ್ದ ಬೆಂಕಿಗೆ ಮಣ್ಣು, ಮರಳು, ಕಲ್ಲುಗಳನ್ನು ಹಾಕಿ ಪೂರ್ಣ ಆರಿಸಿದ್ದರು... 

ಪಾದ್ರಿ ಕೊಟ್ಟ ಬಾಟಲಿನಲ್ಲಿದ್ದ ಪೆಟ್ರೋಲ್  ಹಾಕಿ.. ಬೈಕಿಗೆ ಒಂದು ಕಿಕ್.. ಡುಗು ಡುಗು ತನ್ನ ಇಷ್ಟವಾದ ರಾಯಲ್ ಎಂಫಿಎಲ್ಡ್ ಓಡಲು ಶುರುಮಾಡಿತು.. 

ಅಲ್ಲಿಂದ ಹೊರಡುವ ಮೊದಲು.. ಉರಿಯುತ್ತಿದ್ದ ಬೆಂಕಿಯನ್ನೊಮ್ಮೆ ಇಬ್ಬರೂ ನೋಡಿದರು.. ಗಾಳಿಗೆ ಬೆಂಕಿ ಹೊತ್ತಿಕೊಂಡಿದ್ದ ಹುಲ್ಲಿನ ರಾಶಿ ಕ್ರಮೇಣ ತನ್ನ ಶಕ್ತಿಯನ್ನು ಕಳೆದುಕೊಂಡು. ನಿತ್ರಾಣವಾಗತೊಡಗಿತ್ತು.. 
ಹಾಗಾಗಿ ಅದರ ಯೋಚನೆಯಿಲ್ಲದೇ... ಪಾದ್ರಿ ಹೇಳಿದ ಹಾದಿಯಲ್ಲಿ ಬೈಕ್ ಡುಗು ಡುಗು ಸದ್ದು ಮಾಡುತ್ತಾ.. ಕಾಡಿನ ನೀರವತೆಯನ್ನು ಭೇದಿಸಿ ನುಗ್ಗತೊಡಗಿತ್ತು.. 

ಸುಮಾರು ಒಂದು ಘಂಟೆಗಳ ಪಯಣ ಇರಬಹುದು.. ಇಲ್ಲೇ ಕಣಪ್ಪ ಅಂತ ಪಾದ್ರಿ ರಾಜೇಶನ ಬೆನ್ನ ಮೇಲೆ ಕೈ ಇಟ್ಟು ಅಮುಕಿ ಹೇಳಿದಾಗ ಬೈಕ್ ನಿಂತಿತು.. 

ವಿದ್ಯುತ್ ಇಲ್ಲದ ಹೊತ್ತು.. ಸುತ್ತಲ ಮುತ್ತಲ ಪ್ರದೇಶ ಸರಿಯಾಗಿ ಕಾಣುತ್ತಿಲ್ಲ.. ಆದರೂ ಇಲ್ಲೊಂದು ಭವ್ಯವಾದ ಕಟ್ಟಡವಿದೆ ಎಂದು ಭಾಸವಾಗುತಿತ್ತು... ಮತ್ತೆ ಲೈಟರ್ ಫರ್ ಫರ್ ಅಂತ ಸದ್ದು ಮಾಡಿ.. ಈ ಬಾರಿ ಹೊತ್ತಿಕೊಂಡಿಯೇ ಬಿಟ್ಟಿತು..  

ಸಿಗರೇಟ್ ಸೇದುವ ಆಸೆಯಿದ್ದರೂ.. ಈ ಪ್ರದೇಶದಲ್ಲಿ ಬೇಡ ಎಂದುಕೊಂಡು ಸುತ್ತಲೂ ಲೈಟರ್ ತಿರುಗಿಸಿ.. ಆ ಮಂದಬೆಳಕಲ್ಲಿ ಅಲ್ಲಿ ಏನಿದೆ ಅನ್ನೋದನ್ನು ತನ್ನ ಕಣ್ಣಿಗೆ ಮತ್ತು ಬುದ್ದಿಗೆ ಅರಿವಾಗುವಷ್ಟು ಗಮನಿಸಿದ.. 

ಪಾದ್ರಿ ಮತ್ತೆ ಬಂದು.. ಹೆಗಲ ಮೇಲೆ ಕೈಯಿಟ್ಟು..ಒಂದು ಪಂಜನ್ನು ಹಿಡಿದು  "'ನಡಿ ಹೋಗೋಣ" ಎಂದು ಒಳಗೆ ಕರೆದುಕೊಂಡು ಹೋದರು... ಭವ್ಯವಾದ ಕಟ್ಟಡ.. ಅದರ ಒಳಾಂಗಣ .. ಆ ಮಂದ ಬೆಳಕಿನಲ್ಲಿಯೂ ಸೌಂದರವಾಗಿ ಕಾಣುತ್ತಿತ್ತು.. 
 
ಒಂದು ಕೋಣೆಗೆ ಕರೆದೊಯ್ದು.. ಇಲ್ಲಿ ನಾನೊಬ್ಬನೇ ಇರುವುದು.. ವರ್ಷಕ್ಕೊಮ್ಮೆ ಯಾವಾಗಲೋ ಕೆಲವರು ಬರುತ್ತಾರೆ.. confess ಮಾಡಿಕೊಳ್ಳೋಕೆ ಬಂದು ಹೋಗುತ್ತಾರೆ.. ಹಾಗಾಗಿ ಯಾವುದೇ ಸೌಲಭ್ಯಗಳಿಲ್ಲ.. ನೀ ಮಲಗಿಕೊ.. ಅತ್ತ ಕಡೆ ಒಂದು ಲೋಟ ಹಾಲನ್ನು ಇಟ್ಟಿರುವೆ.. ಹಣ್ಣುಗಳಿವೆ.. ನಾ ಇಲ್ಲಿಗೆ ಬರುವಾಗ ತಂದದ್ದು. ತಿಂದು ಮಲಗಿಕೊ.. ಬೆಳಿಗ್ಗೆ ನೋಡೋಣ.. 

ಇಷ್ಟು ಹೇಳಿ ಆ ಪಾದ್ರಿ ಹೋಗುತ್ತಾ ಹೋಗುತ್ತಾ ಒಂದು ಕೋಣೆಯೊಳಗೆ ಹೋದರು.. ಅದನ್ನೇ ನೋಡುತ್ತಾ.. ಎಷ್ಟನೇ ರೂಮು ಅಂತ ಲೆಕ್ಕ ಹಾಕಿ.. ಬೆಳಿಗ್ಗೆ ಪಾದ್ರಿಗೆ ಒಂದು ಥ್ಯಾಂಕ್ಸ್ ಹೇಳಿ ಹೊರಡಬಹುದು... ಎಂದು ಕೊಂಡು.. ಹಾಸಿಗೆ ಮೇಲೆ ಮಲಗಿದ್ದೆ ಗೊತ್ತು.. ಗಾಢವಾದ ನಿದ್ರೆ ಆವರಿಸಿಕೊಂಡಿತ್ತು.. 

ಗಾಳಿ.. ಮೊಗದ ಮೇಲೆ ಬೀರುತ್ತಿದ್ದ ದಿನಕರನ ಕಿರಣಗಳು.. ಮಣ್ಣಿನ ವಾಸನೆ.. ಎಲ್ಲೋ ನೀರಿನಲ್ಲಿ ಹಕ್ಕಿಗಳು ಮುಳುಗಿ ಏಳುತ್ತಿದ್ದ ಸದ್ದು.. ಇದನ್ನೆಲ್ಲಾ ಕೇಳಿ ನೋಡಿ.. ಅರೆ ಹೊತ್ತಾಗಿ ಹೋಯ್ತಲ್ಲ.. ಪಾದ್ರಿಗೆ ಹೇಳಿ ಹೊರಡೋಣ ಎಂದುಕೊಂಡು ಹೊರಗೆ ಬಂದರೆ ಅವಕ್ಕಾದ.. 

ಶಿಥಿಲಗೊಂಡಿದ್ದ ಚರ್ಚಿನ ಕಟ್ಟಡ ಅದಾಗಿತ್ತು.. ಯಾವಾಗ ಬೇಕಾದರೂ ಬೀಳಬಹುದೇನೋ ಎನ್ನುವ ಹಾಗಿತ್ತು.. ದೊಡ್ಡ ದೊಡ್ಡ ಮಿನಾರುಗಳು.. ಕಿಟಕಿಗಳು, ಜಾಲಂಧ್ರಗಳು.. ನೆಲಕ್ಕೆ ಹಾಸಿದ್ದ ಟೈಲುಗಳು ಕಿತ್ತುಹೋಗಿ ನನ್ನ ನೋಡ್ರೋ... ಎನ್ನುವ ಹಾಗೆ ಬೇಸರದ ಮೊಗ ಹೊತ್ತಿದ್ದವು.. ಮಾಸಲು ಗೋಡೆ.. ಏನಿಲ್ಲವೆಂದರೂ ಸುಮಾರು ನೂರೈವತ್ತು ವರ್ಷಗಳು ಆಗಿರಬಹುದು ಎನ್ನುವ ಸೂಚನೆ.. ಧೈರ್ಯ ಮಾಡಿಕೊಂಡು ರಾಜೇಶ.. ಪಾದ್ರಿ ನಿನ್ನೆ ರಾತ್ರಿ ಹೋಗಿರಬಹುದಾದ ಕೋಣೆಯ ಕಡೆಗೆ ಹೆಜ್ಜೆ ಹಾಕಿದ.. 

ಕಿರ್ ಕಿರ್ ಬಾಗಿಲು ತೆರೆದುಕೊಂಡಿತು.. ನೀಳ್ಗನ್ನಡಿ.. ಅದರ ಪಕ್ಕದಲ್ಲಿ ಒಂದು ನೀಳವಾದ ಶುಭ್ರ ಬಿಳಿಯ ಕೋಟು.. ಹ್ಯಾಟು.. ಕೈಗವಸು . ಬಿಳಿಯ ವರ್ಣದ ಚಪ್ಪಲಿಗಳು.. ಒಂದು ಮಣಿಯ ಸರ.. ಅದರ ತುದಿಯಲ್ಲಿ ಕ್ರಾಸ್ ಇತ್ತು... ಆದರೆ ಅಲ್ಲಿ ಯಾರೋ ಮಲಗಿದ್ದರು ಎನ್ನುವ ಯಾವ ಸುಳಿವು ಇರಲಿಲ್ಲ.. ಆ ಬಟ್ಟೆಗಳ ಮೇಲೆ ಒಂದು ಚೂರು ಧೂಳಾಗಲಿ.. ಸುಕ್ಕಾಗಲಿ ಇರಲಿಲ್ಲ... ಆದರೆ ಆ ರೂಮಿನೊಳಗೆಲ್ಲಾ ಕಸ ಕಡ್ಡಿ.. ಧೂಳು.. ಜೇಡರ ಬಲೆ ಯಥೇಚ್ಛವಾಗಿತ್ತು.. 

ಅಚ್ಚರಿಯಾಗಿ ಒಂದು ಸುತ್ತು ಬಂದ.. ಯಾರೂ ಕಾಣಿಸಲಿಲ್ಲ.. ಅನತಿ ದೂರದಲ್ಲಿ ಒಂದು ಪುಟ್ಟ ಕೆರೆ.. ಈ ಚರ್ಚು ಕೆರೆಯ ನೀರಿನಿಂದ ತುಸು ಎತ್ತರದಲ್ಲಿದ್ದರಿಂದ.. ಮಳೆಗಾಲದಲ್ಲಿ ಪೂರ್ಣಪ್ರಮಾಣದ ಮಳೆಯಾದರೆ ಮಾತ್ರ ಚರ್ಚು ಮುಳುಗಡೆಯಾಗಬಹುದು ಎನ್ನುವ ಸೂಚನೆ ಇತ್ತು ಅನಿಸಿತ್ತು.. 

ಪುಟ್ಟ ತೆಪ್ಪದಲ್ಲಿ ಒಬ್ಬ ಹರಿಗೋಲನ್ನು ಹಾಕುತ್ತ.. "ಸ್ವಾಮಿ.. ಅಲ್ಲಿ ಹೆಚ್ಚು ಹೊತ್ತು ಇರಬೇಡಿ.. . ನಾ ಕರೆದೊಯ್ಯುವೆ ಆ ದಡಕ್ಕೆ ಹೋಗೋಣ.. ಅಲ್ಲಿ ನಮ್ಮಳ್ಳಿ ಇದೆ.. "

ಏನೂ ಯೋಚಿಸದೆ.. ತನ್ನ ಬೈಕನ್ನು ಅಲ್ಲಿಯೇ ಬಿಟ್ಟು.. ಲಗುಬಗೆಯಿಂದ.. ತೆಪ್ಪ ಬರುವ ಕಡೆಗೆ ಓಡಿದ... ಐದು ನಿಮಿಷ ತೆಪ್ಪ ಬಂತು.. ಅದರೊಳಗೆ ಕುಳಿತ.. 

"ಏನಪ್ಪಾ ಇದು ವಿಚಿತ್ರ.. ನಿನ್ನೆ ರಾತ್ರಿ ಭವ್ಯವಾದ ಕಟ್ಟಡದ ಹಾಗೆ ಆ ಪಂಜಿನ ಬೆಳಕಲ್ಲಿ ಕಂಡಿತ್ತು.. ಇಂದು ನೋಡಿದರೆ ಎಲ್ಲವೂ ವಿಚಿತ್ರ.. ಏನಪ್ಪಾ ಇದರ ಕತೆ.. "

ಇರಿ ಸ್ವಾಮಿ.. ಎಂದು ಸನ್ನೆ ಮಾಡಿ ಜೇಬಿನಿಂದ ಒಂದು ಪುಟ್ಟ ಪತ್ರವನ್ನು ತೆಗೆದುಕೊಟ್ಟ.. ಓದಿ ಎಂದ.. 

"ಈ ಊರಿನ ಜನಕ್ಕೆ.. 

ನಿಮ್ಮೂರನ್ನು ತಲುಪುವುದು ಇಂದಿಗೂ ದುಸ್ತರವಾಗಿರೋದಿಂದ.. ನನಗೆ ಕಾಡು ದಾರಿಯಲ್ಲಿ ಸಿಗುವ ಅಲೆಮಾರಿಯನ್ನು ಇಲ್ಲಿಗೆ ಕರೆತರುತ್ತೇನೆ.. ಉಪಚಾರ ಮಾಡಿ. ಬೆಳಿಗ್ಗೆ ಅವರ ಹಾದಿ ಅವರು ಹಿಡಿಯಬಹುದು.. ಸುಪ್ತ ಮನಸ್ಸು.. ಒಳ್ಳೆಯ ವಿಚಾರಗಳು.. ಸದ್ಭಾವನೆ ಇದ್ದವರು ಮಾತ್ರ ನನ್ನಿಂದ ಉಪಚಾರ ಪಡೆದುಕೊಳ್ಳುತ್ತಾರೆ.. ಮತ್ತು ಆ ಹೊತ್ತಿಗೆ ಈ ಕಟ್ಟಡ ಭವ್ಯವಾಗಿ ಕಾಣುತ್ತದೆ.. ಮರುದಿನ ಅವರ ವಿಚಾರಧಾರೆಗಳು ಸಹಜ ಸ್ಥಿತಿಗೆ ಮರಳುವುದರಿಂದ ಅವರಿಗೆ ಯಥಾವತ್ ಕಾಣುತ್ತದೆ.. 

ಮಿಕ್ಕವರಿಗೆ ನಾನೇನೂ ತಂಟೆ ಮಾಡುವುದಿಲ್ಲ.. ಆದರೆ ಜೇಡ ತಾನು ಹೆಣೆದ ತನ್ನ ಬಲೆಯಲ್ಲಿ ತಾನೇ ಸಿಕ್ಕಿಕೊಳ್ಳುವಂತೆ ತಮ್ಮ ಯೋಚನೆಗಳಿಂದ ತಾವೇ ತೊಂದರೆಗೀಡಾಗುತ್ತಾರೆ.. 

ಈ ಕಾಯಕ ಮುಂದುವರೆಯುತ್ತದೆ.. "

"ಏನಪ್ಪಾ ಇದೆಲ್ಲ"

"ಪಾದ್ರಿ ತನ್ನ ಜೀವನದಲ್ಲಿ ಯಾರಿಗೂ ಉಪಕಾರ ಮಾಡದೆ.. ಈ ಚರ್ಚ್ ಸುತ್ತ ಮುತ್ತಲಿನ ಪ್ರದೇಶ ನೀರಿನಿಂದ ಆವೃತವಾಗಿದ್ದಾಗ..  ಹೋಗಿ ಬಿಟ್ಟ.. ಜೀವನದಲ್ಲಿ ಸಹಾಯ ಮಾಡಬೇಕಾದ ಸಂದರ್ಭದಲ್ಲಿ ಸ್ವಾರ್ಥ, ದ್ವೇಷ ಎಂದು ಒದ್ದಾಡಿ.. ಸತ್ತು ಹೋಗಿ.. ಈಗ ಪ್ರೇತಾತ್ಮನಾಗಿದ್ದಾನೆ.. ಆದರೆ ಅಂದು ಮಾಡಲಾಗದ ಸೇವೆಯನ್ನು ಇಂದು ಮಾಡುತ್ತಿರುವುದು.. ವಿಶೇಷ.. ನೀವು ಪುಣ್ಯ ಮಾಡಿದ್ದೀರಿ.. ನಿನ್ನೆ ನಿಮ್ಮನ್ನು ಆ ಕಗ್ಗತ್ತಲಿನ ಕಾಡಿನಿಂದ ಹೊರಗೆ ತರದಿದ್ದರೆ.. ಇಷ್ಟು ಹೊತ್ತಿಗೆ ಯಾವುದೋ ಕಾಡು ಪ್ರಾಣಿಗೆ ಆಹಾರವಾಗಿ ಬಿಡುತ್ತಿದ್ದಿರಿ.. "

"ಹೌದಾ . ಆದರೂ ನನಗ್ಯಾಕೋ ನಂಬಿಕೆ ಬರುತ್ತಿಲ್ಲ.. ನಿನ್ನೇ  ಬರುವಾಗ ಪೆಟ್ರೋಲ್ ಖಾಲಿಯಾಗಿತ್ತು.. ಆ ಪಾದ್ರಿ ಕೊಟ್ಟಿದ್ದು.. ಪುಟ್ಟ ಬಾಟಲಿಯಲ್ಲಿ ಪೆಟ್ರೋಲ್.. ನೋಡೋಣ ಬನ್ನಿ..ಈಗ ಖಾಲಿ ಆಗಿರಬೇಕು.. ಯಾಕೆ ಅಂದರೆ ಸುಮಾರು ಒಂದು ಘಂಟೆ ಪ್ರಯಾಣ ಮಾಡಿದ್ವಿ"

"ಯೋಚನೆ ಮಾಡಬೇಡಿ ಸ್ವಾಮಿ.. ಮಧ್ಯಾನ್ಹದ ಹೊತ್ತಿಗೆ ಮತ್ತೆ ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇನೆ... ನಿಮ್ಮದೇನಿದೆಯೋ ಅದನ್ನೆಲ್ಲ ತೆಗೆದುಕೊಳ್ಳಿ.. ನಿಮಗೆ ಅಚ್ಚರಿ ಕಾದಿರುತ್ತದೆ.. ನೀವೇ ನಂಬುತ್ತೀರಿ"

"ಸರಿ ನೆಡೆಯಪ್ಪ "  

ಮಧ್ಯಾನ್ಹದ ನಂತರ ಮತ್ತೆ ಅಲ್ಲಿಗೆ ಬಂದಾಗ ಆತ ಹೇಳಿದಂತೆ ಅಚ್ಚರಿ ಕಾದಿತ್ತು!

ಜಾಕೆಟ್, ಹೆಲ್ಮೆಟ್ ಎಲ್ಲವೂ ಸ್ವಚ್ಛವಾಗಿದ್ದವು.. ಬೈಕ್ ನಿನ್ನೆ ಧೂಳುಮಯವಾಗಿತ್ತು.. ಆದರೆ ಇಂದು ಥಳ ಥಳ ಹೊಳೆಯುತ್ತಿತ್ತು.. ಯಾಕೋ ಅನುಮಾನ ಬಂದು ಪೆಟ್ರೋಲ್ ಟ್ಯಾಂಕ್ ಮುಚ್ಚಳ ತೆಗೆದರೆ.. ತುತ್ತ ತುದಿಯ ತನಕ ಪೆಟ್ರೋಲ್ ನಾನಿದ್ದೀನಿ ಎಂದು ನಗುತ್ತಿತ್ತು.. 


ತನ್ನ ಜಾಕೆಟ್ ಜೇಬಿನಿಂದ ಒಂದು ಪುಟ್ಟ ಕಾರ್ಡ್ ಕಾಣುತ್ತಿತ್ತು.. ತೆಗೆದ.. ಓದಿದ.. ಕೈ ಮೇಲೆತ್ತಿ ಒಂದು ಸಲ್ಯೂಟ್ ಹೊಡೆದ.. ಅಲ್ಲಿಂದ ಹೊರಟ 

ಆ ಬರಹದ ಸಾಲು ಅವನ ಮನದಲ್ಲಿ ಗುಯ್ ಗುಡಲು ಶುರುಮಾಡಿತು.. 

"ಪ್ರಪಂಚವು  ಆ ಸೂತ್ರಧಾರ ರಚಿಸಿದ ಒಂದು ರಂಗ ಮಂಟಪ.. ಇಲ್ಲಿ ಪ್ರತಿನಿತ್ಯವೂ ಸುಂದರ ಅನುಭವ ಸಿಕ್ಕೇ ಸಿಗುತ್ತದೆ"

2 comments:

  1. ಭಯಾನಕವಾಗಬಹುದಾಗಿದ್ದ ಕಥೆಯು, ಒಂದು ನೀತಿಬೋಧೆಯೊಂದಿಗೆ ಸುಖಾಂತವಾಗಿದ್ದರಿಂದ ಸಂತೋಷವಾಯಿತು. ನಿಮ್ಮ ಕಥನಶೈಲಿಗೆ ಅಭಿನಂದನೆಗಳು.

    ReplyDelete
    Replies
    1. ಧನ್ಯವಾದಗಳು ಗುರುಗಳೇ.. ಹೊಳೆಯುತ್ತೆ ಬರೆಯುತ್ತೇನೆ.. ನಿಮ್ಮ ಆಶೀರ್ವಾದಗಳು ಸದಾ ಇರಲಿ 

      Delete