Thursday, November 16, 2017

ಸ್ವಾರ್ಥಕತೆಯೇ...or ಸಾರ್ಥಕತೆಯೋ - ಮುಂದುವರಿದ ಭಾಗ ೨

ಮೊದಲ ಭಾಗ

"ರೀ ಮೇಡಂ ನಿಮಗೇನು ತಲೆ ಕೆಟ್ಟಿದೆಯಾ... ನೀವು ಬರೆದು ಕೊಟ್ಟ ಅರ್ಜಿಯನ್ನು ಓದಿ ಎಲ್ಲಾ ವಿವರಗಳು ಸರಿ ಇದೆಯೇ ಎಂದು ನೋಡುವುದಷ್ಟೇ ರಾಜಪ್ಪ ಅವರ ಕೆಲಸ.. ನನ್ನ ಮೇಲಾಧಿಕಾರಿಗಳ ಹತ್ತಿರ ಇದರ ಬಗ್ಗೆ ಚರ್ಚೆ ಮಾಡಬೇಕು.. ಅವರು ಒಪ್ಪಿದ ಮೇಲೆ ಮುಂದಿನ ಮಾತುಕತೆ.. "

ಸರ್.. ನನಗೆ.. ಸರ್ .. ಬೇಕಾಗಿತ್ತು... ಸರ್.. ನೋಡಿ ಇಲ್ಲಿ ಒಮ್ಮೆ"

ವೀಣಾಳ ಮಾತುಗಳು ಸಾಹೇಬರ ಕಿವಿಯ ಮೇಲೆ ಬಿತ್ತೋ ಇಲ್ಲವೋ.... ಅವರು ತನ್ನ ಮೇಲಾಧಿಕಾರಿಗಳ ಕಚೇರಿಯತ್ತ ಹೆಜ್ಜೆ ಹಾಕುತ್ತಾ ಹೋದರು..

ಇತ್ತ ರಾಜಪ್ಪ ಬೀಡೀ ಹಚ್ಚಿಕೊಂಡು ಕಾಫಿಗೆ ಅಂತ ಹೊರಟ..

ಮತ್ತೆ ಅರಳೀಮರವೇ ನೆರಳಾಯಿತು ವೀಣಾಳಿಗೆ.

ಸಾಹೇಬರು ಬರ ಬರ ಹೆಜ್ಜೆ ಹಾಕುತ್ತಾ ಹೋದದ್ದನ್ನು ಅರಳಿ ಮರದ ನೆರಳಿನಲ್ಲಿ ಕೂತು ನೋಡುತ್ತಾ ಹಾಗೆ  ನೆನಪಿಗೆ
ಜಾರಿದಳು.. ಎಷ್ಟು ಸಾರಿ ಈ ಕಚೇರಿಯಲ್ಲಿ ಬಯ್ಸಿಕೊಂಡಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳದೆ ತನ್ನ ಕಾರ್ಯದ ಗುರಿಯ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದಳು..

ಮರವನ್ನೇ ದಿಟ್ಟಿಸುತ್ತಾ ಕೂತಿದ್ದಳು... ಎಷ್ಟೊಂದು ಎಲೆಗಳು.. ಎಷ್ಟೊಂದು ಬಣ್ಣಗಳು ... ಹಸಿರು,  ಕಡು ಹಸಿರು , ತಿಳಿ ಹಸಿರು.. ಕಂದು ಬಣ್ಣ .. ಹೀಗೆ ನಾನಾ ರೀತಿಯ ಬಣ್ಣ ಬಣ್ಣದ ಎಲೆಗಳು. .. ಮನುಜನ ಜೀವನವೂ ಹಾಗೆಯೇ ಅನೇಕ ರೀತಿಯ ವ್ಯಕ್ತಿಗಳು ಬಂದು ಬಾಳನ್ನು ಬೆಳಗಿರುತ್ತಾರೆ.. ಒಂದೊಂದು ಕೊಂಬೆಯಲ್ಲಿ ಒಂದೊಂದು ಗೊಂಚಲು ಎಲೆಗಳು .. ತುಂಬು ಸಂಸಾರವನ್ನು ಬಿಂಬಿಸುವಂತೆ ಕಾಣುತ್ತಿತ್ತು.. ಹಾಗೆಯೇ ನೆಲವನ್ನು ನೋಡಿದಳು ಅನೇಕ ಹಣ್ಣಾದ ಎಲೆಗಳು ಮರದಿಂದ ಕಳಚಿಕೊಂಡು ಬಿದ್ದಿದ್ದವು.. ಕೆಲವರು ಆ ಎಲೆಗಳನ್ನು ಎತ್ತಿಕೊಂಡು ತೊಳೆದು ಇಟ್ಟುಕೊಂಡಿದ್ದರೆ... ಹಲವರು ಅದನ್ನು ತುಳಿದುಕೊಂಡೆ ಹೋಗುತ್ತಿದ್ದರು..  ತಮಗೂ ಎಲೆಗಳಿಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ.. 

ಮತ್ತೆ ವೀಣಾಳ ಯೋಚನಾ ಸರಪಳಿ ಹಿಂದಕ್ಕೆ ಓಡಿತ್ತು.. 

ಹೇಗೋ ಸಮಯಮಾಡಿಕೊಂಡು.. ತನ್ನ ಪತಿರಾಯನಿಗೆ "ಗೀತಾಳನ್ನು ನೋಡಲೇ  ಬೇಕು ತುಂಬಾ ಡಲ್ ಆಗಿದ್ದಾಳಂತೆ.. ಶನಿವಾರ ಹೋಗಿ ಭಾನುವಾರ ವಾಪಸ್ ಬರುತ್ತೇನೆ..  ನಿಮ್ಮನ್ನು ಏನೂ ಕೇಳಿಲ್ಲ.. ಇದೊಂದು ನೆರವೇರಿಸಿಕೊಡಿ" ಎಂದು ಅಂಗಲಾಚಿ ಬೇಡಿಕೊಂಡಳು.. ರಾಕೇಶ ವೀಣಾಳ ಕೆನ್ನೆಯನ್ನೊಮ್ಮೆ ತಟ್ಟಿ "ಅಯ್ಯೋ ವೀಣಾ ಇದಕ್ಕೆ ಇಷ್ಟು ಯಾಕೆ ಬೇಡಿಕೊಳ್ಳುತ್ತೀಯ.. ಗೀತಾ ಮತ್ತು ನಿನ್ನ ಸ್ನೇಹದ ಬಗ್ಗೆ ನನಗೆ ಗೊತ್ತಿಲ್ಲವೇ.. ನಿಮ್ಮಿಬ್ಬರ ಸ್ನೇಹ ಕಂಡು ನನಗೆ ಎಷ್ಟೂ ಅಸೂಯೆ ಆಗಿದೆ.. ನೀನು ಮಧುಚಂದ್ರದಲ್ಲಿಯೂ ಗೀತಾಳ ಬಗ್ಗೆ ಹೇಳಿದಾಗಲೇ ನನಗೆ ಗೊತ್ತಿತ್ತು.. ನಿಮ್ಮಿಬ್ಬರದೂ ಎಂಥಹ ಸ್ನೇಹ ಎಂದು.. ನೀ ಮದುವೆಯಾಗಿ ನನ್ನ ಜೊತೆ  ಬಂದ ಮೇಲೆ  ಅವಳು  ಒಂಟಿ ಎನ್ನುವ ಭಾವ ನಿನಗೂ ಕಾಡುತ್ತಿದೆ.. ಅವಳಿಗೂ ಕಾಡುತ್ತಿದೆ.. ತಲೆ ಕೆಡಿಸಿಕೊಳ್ಳಬೇಡ.. ನಾ ಶನಿವಾರ ಬೆಳಿಗ್ಗೆ ಆ ಕಡೆಗೆ ಹೋಗಬೇಕು ನಿನ್ನ ಬಿಟ್ಟುಹೋಗುತ್ತೇನೆ .. ಆರಾಮಾಗಿ ಶನಿವಾರ ಭಾನುವಾರ ಜೊತೆಯಲ್ಲಿದ್ದು ಬಾ.. ಭಾನುವಾರ ಸಂಜೆ ನಾನೇ ಅಲ್ಲಿಗೆ ಬಂದು ನಿನ್ನ ಕರೆದುಕೊಂಡು ಬರುತ್ತೇನೆ... ಆಯ್ತಾ ಮೇಡಂ.. ಈಗಲಾದರೂ ನಕ್ಕು ಮಾಮೂಲಿ ಕೊಡುತ್ತೀರೋ ಇಲ್ಲ ಸಾಲ ಬರೆದುಕೊಳ್ಳಬೇಕೋ"

"ತುಂಬಾ ಥ್ಯಾಂಕ್ಸ್ ಕಣ್ರೀ.. " ಎನ್ನುತ್ತಾ ಓಡಿ ಹೋದಳು ತನ್ನ ಕೋಣೆಗೆ.. 

ರಾಕೇಶ "ಆಹಾ ಫ್ರೆಂಡ್ ಅಂದ್ರೆ  ನನ್ನನ್ನೂ ಮರೆತು ಬಿಡುತ್ತಾಳೆ.. "  ನಸು ನಗುತ್ತಾ ಆಫೀಸಿಗೆ ಹೊರಟಿದ್ದ.. 

ಶನಿವಾರವನ್ನೇ ಕಾಯುತ್ತಾ ಕುಳಿತಿದ್ದ ವೀಣಾ..  ಎರಡು ದಿನ ಇರಲು ಬೇಕಾದ ಬಟ್ಟೆ, ಬರೆಗಳನ್ನು ಜೊತೆ ಮಾಡಿಕೊಂಡು ಸಿದ್ಧವಾಗಿದ್ದಳು.. ಗೀತಾಳಿಗೆ ಇಷ್ಟವಾಗಿದ್ದ ನಿಪ್ಪಟ್ಟು, ಕೋಡುಬಳೆ, ಸೆವೆನ್ ಕಪ್ ಸಿಹಿತಿಂಡಿ ಮಾಡಿಕೊಂಡು ಕಾರಿನಲ್ಲಿ ಇಟ್ಟು   ರಾಕೇಶನಿಗೆ ಕಾಯುತ್ತಿದ್ದಳು..

ಗೀತಾಳ ಮನೆ ಮುಂದೆ ಕಾರು ನಿಂತಿದ್ದೆ ತಡ.. ರಾಕೇಶನಿಗೆ  ಬೈ ಹೇಳಿ ಮನೆಯೊಳಗೇ ಓಡಿದಳು.. ಸುದ್ದಿಯಿಲ್ಲದೆ.. ಹೇಳದೆ.. ಕೇಳದೆ ಬಂದಿದ್ದ ವೀಣಾಳನ್ನು ನೋಡಿ ಕಂಗಳು ತುಂಬಿ ಬಂದ ಗೀತಾ.. ಓಡಿ ಬಂದು ತಬ್ಬಿ ಹಿಡಿದಳು.. ಸುಮಾರು  ಹೊತ್ತು ಇಬ್ಬರ ಕಣ್ಣಲ್ಲೂ ಧಾರಾಕಾರವಾದ ನೀರು.. ಸಮಾಧಾನ ಮಾಡಿಕೊಂಡು.. ವೀಣಾಳಿಗೆ ಕಣ್ಣು ಹೊಡೆದು.. "ರಾಕೇಶ ಕಾಯುತ್ತಿದ್ದಾನೆ ನೋಡು.. "..

"ರಾಕೇಶ ಬನ್ನಿ ಒಳಗೆ.. " ಗೀತಾ ಒಳಗೆ ಕರೆದಾಗ.. ಸಂಕೋಚದಿಂದ ಕಾರಿನಲ್ಲಿಯೇ ಕುಳಿತಿದ್ದ ರಾಕೇಶ  "ಗೀತಾ ಮೇಡಂ.. ನಾಳೆ ಸಂಜೆ ಬರ್ತೀನಿ ಈ ಮೇಡಂನಾ ಕರೆದುಕೊಂಡು ಹೋಗೋಕೆ.. ಆವಾಗ ಬರ್ತೀನಿ .. ಆಫೀಸಿಗೆ ಹೊತ್ತಾಗಿದೆ.. ಬರುವೆ.. ಬೈ ಚಿನ್ನಿ" ಎಂದು ವೀಣಾಳಿಗೆ ಹೇಳಿ ಬುರ್ ಅಂತ ರಾಕೇಶ ಧೂಳೆಬ್ಬಿಸುತ್ತಾ ಹೋದ

ಇನ್ನೂ ೩೮ಘಂಟೆಗಳು ನಮದೆ ಎಂದು ಖುಷಿಯಾಗಿದ್ದರು ಗೀತಾ ಮತ್ತು ವೀಣಾ ..

"ಮೋ.. ಮೋ.. ಅದೆಷ್ಟು ನಿದ್ದೆ ಮಾಡ್ತೀರಾ.. ಸಾಹೇಬ್ರು ಕರೀತಿದ್ದಾರೆ.. ಬನ್ನಿ.. ಆ..  ಆದೆ ಆದೆ.. ಆ ಕಡೆ ಕೊಠಡಿಗೆ ಹೋಗಿ .. " ವೀಣಾಳ ಪ್ರತಿಕ್ರಿಯೆಯನ್ನು ನೋಡದೆ.. ಕೇಳದೆ.. ಹೇಳಬೇಕಿದ್ದ ಮಾತುಗಳನ್ನು ಹೇಳಿ ರಾಜಪ್ಪ ಬೀಡಿ ಹತ್ತಿಸಿಕೊಂಡು ಮರದ ನೆರಳ ಕಡೆ ಹೋದ.. .

ವೀಣಾ ಮತ್ತೊಮ್ಮೆ ತಲೆಗೂದಲನ್ನು ಸರಿಮಾಡಿಕೊಂಡು.. ಪರ್ಸಿನಲ್ಲಿದ್ದ ಕನ್ನಡಿಯಲ್ಲಿ ಮತ್ತೊಮ್ಮೆ ತನ್ನ ಮೊಗವನ್ನು ನೋಡಿ ಆತ ತೋರಿಸಿದ್ದ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದಳು..

"ಏನ್ರಿ ಮೇಡಂ.. ವಿಕ್ರಮನೇ ವಾಸಿ ಬೇತಾಳಕ್ಕೆ ಪುರುಸೊತ್ತು ಕೊಡುತ್ತಿದ್ದ... ಬೇತಾಳ ಪ್ರಶ್ನೆ ಕೇಳುತ್ತಿತ್ತು.. ಅದಕ್ಕೆ ಉತ್ತರ ಹೇಳಿದೊಡನೆ ಬೇತಾಳಕ್ಕೆ ಸ್ವಾತಂತ್ರ.. ನೀವು ಅದಕ್ಕಿಂತಲೂ ಕಡೆ.. ಏನ್ರಿ ನಿಮ್ಮ ಸಮಸ್ಯೆ.. ?" ಸಾಹೇಬರ ಹಠಾತ್  ಮಾತುಗಳ ಸುರಿಮಳೆಯನ್ನು ನಿರೀಕ್ಷೆ ಮಾಡದ ವೀಣಾ ಕೊಂಚ ಗಲಿಬಿಲಿಗೊಂಡಳು..

"ಸಾರ್ ಸ್ವಲ್ಪ ನೀರು ಸಿಗುತ್ತಾ.. "

ಟಿಂಗ್ ಟಿಂಗ್ ಸಾಹೇಬರ ಕೊಠಡಿಯೊಳಗೆ ನೀರು ಬಂತು..

ನೀರು ಕುಡಿದು .. "ಸಾರ್ ಆಗಲೇ ಇನ್ನೊಬ್ಬ ಸಾಹೇಬರು ಕೇಳಿದ್ದಕ್ಕೆ ಪೂರ್ತಿ ವಿವರ ಬರೆದು ಕೊಟ್ಟಿದ್ದೀನಿ .. ನೀವು ಹೇಳು ಅಂದರೆ ಮತ್ತೆ ಹೇಳುತ್ತೇನೆ.." ಕಣ್ಣುಗಳು ತುಂಬಿ ಬರುತ್ತಿದ್ದವು...

"ನೋಡಿ ಮೇಡಂ..ಅಳಬೇಡಿ.. ನೀವು ಬರೆದಿದ್ದದ್ದನ್ನು ಕೊಟ್ಟ ಪತ್ರವನ್ನು ಆ ಸಾಹೇಬರು ಕೊಟ್ಟರು .. ನಾ ಓದಿದೆ.. ನನಗೂ ಕಣ್ಣುಗಳು ತುಂಬಿ ಬಂದವು.. ಇರಲಿ ಈಗ ವಿಷಯಕ್ಕೆ ಬರೋಣ.. ನಿಮಗೆ ಬೇಕಾದ ವಿವರವನ್ನು ನಾ ಕೊಡುತ್ತೇನೆ.. ಆದರೆ ನೀವು ಇದನ್ನು ಗೋಪ್ಯವಾಗಿ ಇಡಬೇಕು .. ಯಾರಿಗೂ ಹೇಳಬಾರದು .. ಹೇಳೊಲ್ಲ ಅಂತ ಒಂದು ಮುಚ್ಚಳಿಕೆ ಕೊಡಬೇಕು .. ಮತ್ತು ಆ ವಿವರದಲ್ಲಿರುವ ವ್ಯಕ್ತಿಗಳ ಹತ್ತಿರ ಯಾವುದೇ ರೀತಿಯ ಸಹಾಯ (ಹಣ ಅಥವಾ ಬೇರೆ ರೀತಿಯ) ಪಡೆದುಕೊಳ್ಳಬಾರದು.. ನೂರು ರೂಪಾಯಿಗಳ ಛಾಪಾ ಕಾಗದ ತೆಗೆದುಕೊಂಡು ಬನ್ನಿ.. ಅದರಲ್ಲಿ ಏನೂ ಬರೆಯಬೇಕು ಎಂದು ರೈಟರ್ ಹೇಳುತ್ತಾರೆ... ಅದರ ಪ್ರಕಾರ ಕಾಗದ ಪತ್ರವಾದ ಮೇಲೆ ನಿಮಗೆ ನೀವು ಕೇಳುವ ವಿವರವನ್ನು ಕೊಡುತ್ತೇನೆ.. ನೋಡಿ ಮೇಡಂ ಭಾರತದಲ್ಲಿ ಈ ರೀತಿಯ  ವಿವರ ಕೊಡುವುದು ಕಷ್ಟ.. ನಾ ನಿಮ್ಮ ಕಷ್ಟವನ್ನು, ದುಃಖವನ್ನು ನೋಡಲಾಗದೆ, ಮತ್ತೆ ಛಲಬಿಡದ ತ್ರಿವಿಕ್ರಮನಂತೆ ಈ ಆಫೀಸಿಗೆ ಹಲವಾರು ವಾರಗಳಿಂದ ಅಲೆದಾಡುತ್ತಿರುವುದು ನನ್ನ ಗಮನಕ್ಕೆತಂದಿದ್ದಾರೆ .. . ನನ್ನ ಅಧಿಕಾರದ ವ್ಯಾಪ್ತಿಯಿಂದ ಹೊರಗೆ ಸಹಾಯಮಾಡುತ್ತಿದ್ದೇನೆ ..ನನ್ನ ನಂಬಿಕೆ ಉಳಿಸಿಕೊಳ್ಳುವುದು ನಿಮ್ಮ ಮೇಲಿದೆ.. ದಯಮಾಡಿ ಅಳಬೇಡಿ.. ನಿಮ್ಮ ಒಳ್ಳೆಯ  ಕೆಲಸಕ್ಕೆ, ಒಳ್ಳೆಯ ಉದ್ದೇಶಕ್ಕೆ ಖಂಡಿತ ದೇವರು ಸಹಾಯ ಮಾಡುತ್ತಾನೆ.. ಸರಿ ನನಗೆ ಇನ್ನೊಂದು ಮೀಟಿಂಗ್ ಇದೆ.. ನೀವು ಛಾಪಾ ಕಾಗದ ಎಲ್ಲಾ ಸಿದ್ಧಮಾಡಿಕೊಂಡು  ನಾಲ್ಕು ಘಂಟೆಗೆ ಇಲ್ಲಿ ಬನ್ನಿ.. ಆಯ್ತಾ.. ಕಣ್ಣೀರು ಒರೆಸಿಕೊಳ್ಳಿ.. .. ರೀ ಕೆಂಪಣ್ಣ.. ಈ ಮೇಡಂಗೆ ಸಹಾಯ ಮಾಡಿ.. ಮತ್ತು ಏನೂ ಬರೆಯಬೇಕು ಎಂದು ಹೇಳಿದ್ದೀನಿ.. ಸ್ವಲ್ಪ ಸಹಾಯ ಮಾಡಿ... ಮೇಡಂ ಕಣ್ಣೀರು ಒರೆಸಿಕೊಳ್ಳಿ.. ಹೆಣ್ಣು ಮಕ್ಕಳು ಅಳೋದು ನೋಡಲಾಗೋದಿಲ್ಲ.. ಸರಿ ನಾ ಬರ್ತೀನಿ.. " ಎಂದು ವೀಣಾಳ ಮೊಗವನ್ನು ನೋಡಿ.. ಸಮಾಧಾನ ಮಾಡಿಕೊಳ್ಳಿ ಅನ್ನುವ ಸನ್ನೆ ಮಾಡಿ.. ಹೊರಟು ಹೋದರು..

ವೀಣಾಳ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಲೇ ಇತ್ತು.. ಅವಳ ದುಪ್ಪಟ್ಟ ಒದ್ದೆ ಮುದ್ದೆಯಾಗಿತ್ತು..

ಕೆಂಪಣ್ಣ  ಜೋರಾಗಿ "ಲೋ ಮರಿ.. ಎರಡು ಕಾಫಿ ತಗೊಂಡು ಬಾರೋ.. ಮೇಡಂ ನೀವು ಇಲ್ಲಿ ಕೂತುಕೊಳ್ಳಿ.. ಅಳಬೇಡಿ.. ಜೀವನದಲ್ಲಿ ಇದೆಲ್ಲ ಇದ್ದದ್ದೇ .. ಇಂದು ಅವರು ನಾಳೆ ನಾವು.. ಅಳಬೇಡಿ.. ಲೋ ಮರಿ ಬಂದ್ಯೇನೋ.. "

"ಸರ್ ನಾ ಕಾಫಿ ಕುಡಿಯೋಲ್ಲ.. ಕಾಫಿ ಬೇಡ... ಆ ಕಾಗದ ಪಾತ್ರಗಳೇನೋ ಹೇಳಿ.. ಸಿದ್ಧ ಮಾಡಿಕೊಳ್ತೀನಿ.. ಮತ್ತೆ ಸಾಹೇಬರು ಬರುವಷ್ಟೊತ್ತಿಗೆ ಸಿದ್ಧವಿಲ್ಲಾ ಅಂದರೆ ಕಷ್ಟವಾಗುತ್ತದೆ.. "

"ಹಾಗೆಲ್ಲ ಏನೂ ಆಗೋಲ್ಲ.. ನೋಡಿ ನೂರಿಪ್ಪತ್ತು ರೂಪಾಯಿ ಆ ಹುಡುಗನ ಹತ್ತಿರ ಕೊಡಿ.. ಕಾಫಿ ಮತ್ತು ಛಾಪಾ ಕಾಗದ ತಂದು ಕೊಡುತ್ತಾನೆ.."  ಬೆಂದ ಮನೆಯಲ್ಲಿ ಗಳು ಹಿರಿಯುವುದು ಅಂದರೆ ಇದೆ ಅಲ್ಲವೇ.. ದುಃಖತಪ್ತಳಾಗಿದ್ದವಳಿಂದ ಕಾಫಿಗೆ ವಸೂಲಿ ಮಾಡಿದ ಕೆಂಪಣ್ಣ.. ವೀಣಾ ಏನೂ ಮಾತಾಡದೆ ನೂರಾ ಐವತ್ತು ರೂಪಾಯಿ ಕೊಟ್ಟಳು..

"ಮರಿ ಮಿಕ್ಕಿದ್ದಕ್ಕೆ ಸಿಗರೇಟ್ ತಗೊಂಡು ಬಾ.. "

ವೀಣಾ  ಮನದಲ್ಲಿ ನಕ್ಕಳು .. ಆದರೆ ತುಟಿಯಲ್ಲಿ ನಗೆಯ ಹೂವು ಬತ್ತಿ ಹೋಗಿತ್ತು..

ಶೀಟಿ ಹೊಡೆಯುತ್ತಾ.. ಆ ಹುಡುಗ ಕಾಗದ ಮತ್ತು ಕಾಫಿ, ಸಿಗರೇಟ್ ಕೆಂಪಣ್ಣನಿಗೆ ಕೊಟ್ಟು.. ಆವ ಕೊಟ್ಟ ಹತ್ತು ರೂಪಾಯಿ ಟಿಪ್ಸನ್ನು ಜೇಬಲ್ಲಿ ಹಾಕಿಕೊಂಡು ನಲಿಯುತ್ತಾ "ಲಾಭ" ಎಂದು ತುಸು ಜೋರಾಗಿ ಹೇಳಿಕೊಂಡು ಹೋದ..

ವೀಣಾ ಆ ಹುಡುಗ ಹೋದ ದಾರಿಯನ್ನೇ ನೋಡುತ್ತಾ ಕೂತಳು ..

ಕೆಂಪಣ್ಣ .. ವೀಣಾಳಿಂದ ದುಡ್ಡು ಕಿತ್ತಿದ್ದರೂ... ಕಾಗದ ಪತ್ರಗಳನ್ನು ನೀಟಾಗಿ ಮಾಡಿಕೊಟ್ಟ.. ವೀಣಾಳ ಸಹಿ ಪಡೆಯಬೇಕಾದ ಸ್ಥಳದಲ್ಲಿ ಸಹಿ ಪಡೆದು.. "ಮೇಡಂ.. ನೋಡಿ ಈ  ಪತ್ರವನ್ನು ಇಟ್ಟುಕೊಂಡು ಸಾಹೇಬರ ಕೊಠಡಿಯೊಳಗೆ ಕೂತಿರಿ.. ಇನ್ನೊಂದು ಅರ್ಧ ಘಂಟೆಯೊಳಗೆ ಬರುತ್ತಾರೆ .. "

"ತುಂಬಾ  ಉಪಯೋಗವಾಯಿತು ಸರ್.. ಥ್ಯಾಂಕ್ ಯು ಸರ್" ಎಂದು ಎದ್ದಳು..

"ಮೇಡಂ.. ನೂರು ಕೊಡಿ.. ಕಾಗದ ಪಾತ್ರ ಸಿದ್ಧ ಮಾಡಿದೆನಲ್ಲ.. ಕಾಫಿಗೆ ಕೊಡಿ.. " ಹಲ್ಲುಗಿಂಚಿದ..

ಮರುಮಾತಾಡದೆ ನೂರರ ಎರಡು ನೋಟು ಕೊಟ್ಟು "ನಮಸ್ಕಾರ" ಎಂದು ಹೊರಟಳು ಸಾಹೇಬರ ಕೋಣೆಗೆ

"ಮೇಡಂ ಮತ್ತೆ ಏನಾದರೂ ತೊಂದರೆ ಆದರೆ ನಾ ಸಹಾಯ ಮಾಡುತ್ತೀನಿ.. ಆಗ ಏನೂ ಕೊಡೋದು ಬೇಡ.. ಸ್ವಲ್ಪ ಕಷ್ಟ  ಇತ್ತು.. ಅದಕ್ಕೆ ನಿಮ್ಮ ಹತ್ತಿರ ದುಡ್ಡು ಕೇಳಿದೆ.. ಬೇಜಾರು ಮಾಡ್ಕೋಬೇಡಿ.. ನಿಮ್ಮ ಕಷ್ಟದಲ್ಲಿ ನಿಮ್ಮನ್ನು ಸುಲಿಗೆ ಮಾಡುತ್ತಿದ್ದೀನಿ ಎಂದು ಕೊಳ್ಳಬೇಡಿ.. ಹೋಗಿ ಬನ್ನಿ ದೇವರಿದ್ದಾನೆ ಎಲ್ಲದೂ ಒಳ್ಳೆಯದಾಗುತ್ತದೆ.. "

ಕೆಂಪಣ್ಣ ಹೇಳಿದ ಮಾತಿಗೆ ಒಂದು ಕ್ಷಣ ಅವಕ್ಕಾದ ವೀಣಾ.. ಒಂದು ಹೂನಗೆಯನ್ನು ಕೊಟ್ಟು ಸಾಹೇಬರ ಕೋಣೆಗೆ ಹೋದಳು..

ಕುರ್ಚಿಯಲ್ಲಿ ಕೂತಳು.. ಬೆಳಗಿನಿಂದ ಓಡಾಟ ಅಂತಿಮ ಘಟ್ಟ ಮುಟ್ಟುವತ್ತ ಸಾಗಿತ್ತು.. ಹಾಗೆ ಕುರ್ಚಿಗೆ ಒರಗಿಕೊಂಡು ಕಣ್ಣು ಮುಚ್ಚಿದಳು..

ಗೀತಾಳ ಖುಷಿ ಹೇಳತೀರದು.. ಮನೆಯಲ್ಲಿ ಆಹಾ ಒಹೋ ಎನ್ನುವಂತೆ ಇಲ್ಲದಿದ್ದರೂ.. ತಕ್ಕ ಮಟ್ಟಿಗೆ ಇದ್ದ ಮನೆ.. ಗೀತಾ ವೀಣಾಳನ್ನು ತಬ್ಬಿಕೊಂಡು ಅಳಲು ಶುರುಮಾಡಿದಳು..

"ಏನಾಯಿತೆ.. ಗೀತು.. ನಾ ಇದ್ದೀನಿ  ನಿನ್ನ ಜೊತೆ.. ಗಾಬರಿಯಾಗಬೇಡ.. ನಾಳೆ ಸಂಜೆ ತನಕ ಇಲ್ಲಿ ಇರುತ್ತೇನೆ.. ಯಾತಕ್ಕೆ ಅಳುತ್ತಿದ್ದೀಯ .. ನೀ ಅತ್ತರೆ ನನಗೂ ಅಳು ಬರುತ್ತದೆ.. ದಯಮಾಡಿ ಏನಾಯಿತು ಹೇಳು.. "

"ಮನೆಯಲ್ಲಿ ಮದುವೆ ಮಾತು ಕತೆ ನಡೀತಾ ಇದೆ.. ಆ ಹುಡುಗ ನನಗೆ ಇಷ್ಟವಿಲ್ಲ.. ಮನೆಯಲ್ಲಿ ಬಲವಂತ.. ಜಾತಕ ದೋಷದ ಹೆಣ್ಣನ್ನು ಯಾರೂ ಮದುವೆ ಮಾಡಿಕೊಳ್ಳುವುದಿಲ್ಲ.. ಹಾಗಿದ್ದರೂ ಆ ಹುಡುಗ ಒಪ್ಪಿಕೊಂಡಿದ್ದಾನೆ.. ಅವನ ಮನೆಯಲ್ಲಿಯೂ ತಕ್ಕ ಮಟ್ಟಿಗೆ ಇದ್ದಾರೆ.. ಆ ಹುಡುಗ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.. ಇನ್ನೇನು ನಿನಗೆ ಗುನುಗು.. ಎಂದು ಬಯ್ತಾ ಇದಾರೆ.. ಏನೂ ಮಾಡೋದು ಗೊತ್ತಿಲ್ಲ.. ಯಾಕೋ ಆ ಹುಡುಗ ಬೇಡ ಅನ್ನಿಸುತ್ತದೆ ಕಣೆ.. "

"ಹೌದಾ.. ಸರಿ ನಾ ನಿನ್ನ ಅಪ್ಪನೊಡನೆ ಮಾತಾಡುತ್ತೇನೆ.. ಏನೂ ಯೋಚಿಸಬೇಡ.. ನಾ ಇದ್ದೇನೆ ನಿನ್ನ ಜೊತೆ.. ಎಲ್ಲಾ ಸರಿ ಹೋದಮೇಲೆಯೇ ನಾ ಇಲ್ಲಿಂದ ಹೋಗೋದು.. ಅಂದರೆ ನಾಳೆ ಸಂಜೆ ರಾಕೇಶ ಬರುವ ಹೊತ್ತಿಗೆ ನಿಮ್ಮ ಮನೆಯ ವಾತಾವರಣ ಸರಿ ಮಾಡುತ್ತೇನೆ.. ಯೋಚಿಸಬೇಡ... ಸರಿ ಈಗ ಒಮ್ಮೆ ನಗು.. ನೆಡಿ ಹೊರಗೆ ಒಂದು ಸುತ್ತು ಹೋಗಿ ಬರೋಣ.. "

ಇಬ್ಬರೂ ಕೈ ಕೈ ಹಿಡಿದು.. ಹೊರಗೆ ಹೊರಟರು.. ಗೀತಾ ಮನೆಯ ಬಾಗಿಲಿನಿಂದಲೇ.. "ಅಮ್ಮ ವೀಣಾ ಜೊತೆ ಹೊರಗೆ ಹೋಗಿಬರುತ್ತೇನೆ.. ಊಟದ ಹೊತ್ತಿಗೆ ಬರುತ್ತೇವೆ.. " ಅನುಮತಿಗೂ ಕಾಯದೆ ಇಬ್ಬರೂ ಆಗಲೇ ಬೀದಿಯಲ್ಲಿದ್ದರು..

"ಮೇಡಂ.. ಮತ್ತೆ ನಿದ್ದೆ.. ಹೋಗತ್ತ.. ರೀ ಕೆಂಪಣ್ಣ.. ಏನ್ರಿ ಇವರ ಕತೆ. .. ಇದ್ಯಾಕೆ ಈ ಪಾಟಿ ನಿದ್ದೆ ಮಾಡುತ್ತೆ ಈ ವಮ್ಮ.. ರೀ ಮೇಡಂ.. ಏಳ್ರಿ.... "

ಸಾಹೇಬರ ಖಡಕ್ ಧ್ವನಿಗೆ  ಬೆಚ್ಚಿ ಬಿದ್ದು ಗಾಬರಿಯಿಂದ "ಸರ್ ಹೇಳಿ ಸಾರ್.. ಸುಸ್ತಾಗಿತ್ತು... ಹಾಗೆ ನಿದ್ದೆ ಬಂತು.. ಕ್ಷಮಿಸಿ ಸಾರ್.. "

"ಇರಲಿ ಬಿಡಿ ಮೇಡಂ.. .. ಕೂತುಕೊಳ್ಳಿ.. ಕೆಂಪಣ್ಣ ನಿಮಗೆ ಸಹಾಯ ಮಾಡಿದ್ರಾ.. ಎಲ್ಲಾ ಕಾಗದ ಪತ್ರವಾಯಿತೇ.. "

"ಹೌದು ಸರ್.. . ತಗೊಳ್ಳಿ ನೀವು ಹೇಳಿದ ಹಾಗೆ ಕಾಗದ ಪತ್ರಗಳನ್ನು ಸಿದ್ಧ ಮಾಡಿಕೊಟ್ಟಿದ್ದಾರೆ .. "

"ಸರಿ ಸರಿ.. ಕುಳಿತುಕೊಳ್ಳಿ.. ಒಮ್ಮೆ ನೋಡುವೆ.. "

ಮತ್ತೆ ಕುರ್ಚಿಗೆ ಹೋಗಿ ಕುಳಿತುಕೊಂಡಳು..

"ರೀ ಕೆಂಪಣ್ಣ.. ಬನ್ರೀ ಇಲ್ಲಿ.. ಎಲ್ಲಾ ಸರಿಯಾಗಿ ಮಾಡಿದ್ರ.. " ಕೆಂಪಣ್ಣ ತಲೆಯಾಡಿಸುತ್ತಲೇ ಬಂದ್ರು.. "ಎಲ್ಲಾ ಓಕೇ ಸರ್"

"ಓಕೆ ನೀವು ಹೋಗ್ರಿ.. ಮೇಡಂ ಬನ್ನಿ ಇಲ್ಲಿ.. ಇಲ್ಲಿ ಸಹಿ ಮಾಡಿ.. "

"ಒಂದು ಅರ್ಧ ಘಂಟೆ ಹೊರಗೆ ಕೂತಿರಿ.. ವಿವರ ಕೊಡುತ್ತೇನೆ.. "

ಅರ್ಧ ಘಂಟೆ ಒಂದು ಯುಗದಂತೆ ಕಳೆಯಿತು... ಅಳಬಾರದು ಮತ್ತು ಸಾಹೇಬರು ಕರೆಯುವ ತನಕ ಒಳಗೆ ಒಳಗೆ ಹೋಗ ಬಾರದು ಎಂದು ಧೃಡ ನಿರ್ಧಾರ ಮಾಡಿ ಹೊರಗೆ ಕೂತಳು..

ಅರ್ಧ ಘಂಟೆ ಮುಗಿದು.. ಇನ್ನೊಂದು  ಘಂಟೆ ಆಗಿತ್ತು .. ಸುಮ್ಮನೆ ಕೂತಿದ್ದ ವೀಣಾಳಿಗೆ ಸಾಹೇಬರ ಕೋಣೆಯಿಂದ ಘಂಟೆ ಮೊಳಗಿದ್ದು ಗೊತ್ತಾಗಲಿಲ್ಲ.. ಕೆಂಪಣ್ಣನೇ ಮತ್ತೆ ಕೂಗಿದ..

ಲಗುಬಗೆಯಿಂದ ಒಳಗೆ ಹೋದ ವೀಣಾಳಿಗೆ.. ಸಾಹೇಬರು ಒಂದು ಕವರ್ ಕೊಟ್ಟು.. "ನೋಡಿ ವೀಣಾ ಮೇಡಂ.. ನನ್ನ ವ್ಯಾಪ್ತಿಯಿಂದ ಹೊರಗೆ ಕಷ್ಟು ಪಟ್ಟು ವಿವರ ಸಿದ್ಧ ಮಾಡಿಕೊಟ್ಟಿದ್ದೀನಿ.. ನನ್ನ  ಮರ್ಯಾದೆ ಗೌರವ ಉಳಿಸೋದು ನಿಮ್ಮ ಮೇಲೆ.. ಶುಭವಾಗಲಿ ಹೋಗಿ ಬನ್ನಿ.. "

"ಸರ್.. ಏನೂ ಹೇಳಬೇಕೋ ಗೊತ್ತಾಗುತ್ತಿಲ್ಲ.. ತುಂಬಾ ಧನ್ಯವಾದಗಳು ಸರ್.. ಎಂದು ಸಾಹೇಬರ ಮೇಜಿನ ಆ ಬದಿಗೆ ಹೋಗಿ ಹಠಾತ್ ಅವರ ಕಾಲಿಗೆ ನಮಸ್ಕರಿಸಿದಳು..

ಹಠಾತ್ ಈ ಘಟನೆ ನೆಡೆದಿದ್ದರಿಂದ ಸಾಹೇಬರಿಗೆ ಏನೂ ಹೇಳಲೂ ಗೊತ್ತಾಗಲಿಲ್ಲ .. ಮೆಲ್ಲನೆ ವೀಣಾಳನ್ನು ಹಿಡಿದೆತ್ತಿ.. ಹಾಗೆಲ್ಲ ಮಾಡಬಾರದು.. "ಹೋಗಿ ಬನ್ನಿ ನಿಮ್ಮ ಉತ್ಸಾಹ, ಒಳ್ಳೆಯದಾಗಬೇಕು ಎನ್ನುವ ನಿಮ್ಮ ಇಂಗಿತವೇ ನಿಮ್ಮನ್ನು ಕಾಪಾಡುತ್ತದೆ.."

ಕೊಟ್ಟ ಕವರನ್ನು ತನ್ನ ಬ್ಯಾಗಿನೊಳಗೆ ಇಟ್ಟುಕೊಂಡು ಮತ್ತೊಮ್ಮೆ ತುಂಬಿದ ಕಣ್ಣಲ್ಲೇ ಧನ್ಯವಾದ ಹೇಳಿ ಹೊರಗೆ ಬಂದಳು..

ಮುಂದಿನ ಗುರಿ ಸಿದ್ಧವಾಗಿತ್ತು... ರಾಕೇಶನಿಗೆ ಮೊಬೈಲಿನಲ್ಲಿ ಸಂದೇಶ ಕಳಿಸಿದಳು.. ಅತ್ತ ಕಡೆಯಿಂದ  "ಸೂಪರ್ ಚಿನ್ನಿ" ಎಂಬ ಉತ್ತರ ಬಂತು.

ಗರಿಗೆದರಿದ ಉತ್ಸಾಹ.. ಹಲವಾರು ವಾರಗಳಿಂದ ಪಡುತ್ತಿದ್ದ ಪರಿಶ್ರಮಕ್ಕೆ ಒಂದು ಪ್ರತಿಫಲ ಸಿಕ್ಕಿದ ಸಂತೋಷಕ್ಕೆ ವೀಣಾಳ ಮನಸ್ಸು ಹತ್ತಿಯ ಹಾಗೆ ಹಗುರವಾಗಿತ್ತು..

ಗಾಡಿಯ ಹತ್ತಿರ ಬಂದು.. ಕವರನ್ನು ಬ್ಯಾಗಿನಿಂದ ಹೊರಗೆ ತೆಗೆದು.. ಅದಕ್ಕೊಂದು ಮುತ್ತು ಕೊಟ್ಟು.. ಆಗಸವನ್ನು ನೋಡುತ್ತಾ " "ಥ್ಯಾಂಕ್ ಯು" ಎಂದು ತನ್ನ ಮುಂದಿನ ಗುರಿಯತ್ತ ಹೊರಟಳು.. 

4 comments:

  1. ಸಸ್ಪೆನ್ಸ್! ಸಸ್ಪೆನ್ಸ್!!
    ಶ್ರೀಕಾಂತ, ನೀವು ಸಸ್ಪೆನ್ಸ್ ಮಾಸ್ಟರ ಆಗಿದ್ದೀರಿ! ಪ್ರತಿ ಪೋಸ್ಟಿನ ಕೊನೆಗೆ ಮುಂದೇನಾಗುವುದೊ ಎನ್ನುವ ಕುತೂಹಲದಲ್ಲಿ ಸಿಕ್ಕಂತಹ ನಮ್ಮನ್ನು ಗೋಳು ಹೊಯ್ದುಕೊಳ್ಳುತ್ತೀರಿ!

    ReplyDelete
    Replies
    1. ಹಹಹ.. ಏನೂ ಮಾಡೋದು ಗುರುಗಳೇ.. ಕಥೆ ಹಾಗೆ ಬರೆಸುತ್ತೆ ನನ್ನ ಕೈಲಿ..

      ಧನ್ಯವಾದಗಳು ಗುರುಗಳೇ

      Delete
  2. ಕೊನೆಗೂ ವೀಣಾಳಿಗೆ ತಾಂನಂದುಕೊಂಡ ಕೆಲಸ ಸಾಧಿಸಿಯಾಯ್ತು..ಅವಳ ಪರಿಶ್ರಮಕ್ಕೋ ಕಣ್ಣೀರಿಗೊ ಬೇಕಾದ ವಿವರವೆಲ್ಲ ಕೈಗೆ ಬಂತು..
    ಓದುಗರಿಗೆ ಮಾತ್ರ ಇನ್ನೂ ಕುತೂಹಲ ಲಕೋಟೆಯ ಒಳಗೆ ಇಟ್ಟಿದ್ದಿರಾ..
    ಸಾರ್ಥಕತೆಯಾ ಅಥವಾ ಸ್ವಾರ್ಥ ಅಂತ ಗೊಂದಲ ..
    ತೆರೆದಿಡೊವರೆಗೂ ಕುತೂಹಲ..
    ಅದ್ಭುತವಾದ ಕಥೆ...ತಾಳ್ಮೆಯಿಂದ ಕಥೆ ವಿವರಿಸಿದ ಪರಿ ಮೆಚ್ಚುವಂತಿದೆ..👍🙏

    ReplyDelete
    Replies
    1. ಉತ್ತಮ ಪ್ರತಿಕ್ರಿಯೆ ಎಂ ಎಸ್.. ಸಾರ್ಥಕ ಭಾವ ಬರುವುದೇ.. ಓದುಗರು ಈ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ..

      ಧನ್ಯವಾದಗಳು ಎಂ ಎಸ್

      Delete