Sunday, October 8, 2017

ಕಗ್ಗ ರಸಧಾರೆಯ ನಾಲ್ಕನೇ (ಹಾಗೂ ಕೊನೆಯ) ಸಂಪುಟ!!!

"ಅಲ್ಲಿಯೇ ನಿಂತಿದ್ದ ಅಜ್ಜ, ತಮ್ಮ ವಾಕಿಂಗ್ ಸ್ಟಿಕ್ಕಿನ ತುದಿಯಿಂದ ನನ್ನ ತಲೆಗೆ ಮೆಲ್ಲಗೆ ಕುಟ್ಟಿ.. ಸರಿ ಮಗೂ.. ನನ್ನ್ನ ಶುಭಾಶೀರ್ವಾದವನ್ನು ರವಿಗೆ ನಿನ್ನ ಬರಹದ ಮೂಲಕ ತಲುಪಿಸು.. ನನ್ನ ಜನುಮದಿನಕ್ಕೂ ಅವನ ಜನುಮದಿನಕ್ಕೂ ನಾಲ್ಕು ದಿನಗಳ ಅಂತರ.. ಹಾಗೆ ನಾಲ್ಕನೇ ಪುಸ್ತಕ ಕಗ್ಗ ರಸಧಾರೆ ಕೂಡ ಬೇಗ ಬರಲಿ ಎಂದು ಹೇಳಿ ಬಿಡು. ನಾ ಹೋಗಿ ಬರುತ್ತೇನೆ.. ಮತ್ತೆ ನಾಲ್ಕನೇ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬರುತ್ತೇನೆ.. ಜೊತೆಯಲ್ಲಿ ಈ ಬಾರಿ ಆ ಸಮಾರಂಭದ ವಿವರಗಳನ್ನು ನಾನೇ ನೀಡುತ್ತೇನೆ ಎಂದು ರವಿಗೆ ಹೇಳಿಬಿಡು.. "

ಕಗ್ಗ ರಸಧಾರೆಯ ಮೊದಲ ಸಂಪುಟ!!!

ಕಗ್ಗ ರಸಧಾರೆಯ ಎರಡನೇ ಸಂಪುಟ!!!

ಕಗ್ಗ ರಸಧಾರೆಯ ಮೂರನೇ ಸಂಪುಟ!!!

ಗುರುಗಳು  ಶ್ರೀ ರವಿ ಅವರ ಜನುಮದಿನಕ್ಕೆ  ಶುಭಾಷಯ ಸಲ್ಲಿಸುವಾಗ ಅಜ್ಜ ಹೇಳಿದ್ದು ನೆನಪಾಯಿತು.. ಅಜ್ಜನನ್ನು ಕರೆಯುವುದು ಹೇಗೆ.. ಈ ಪಾಟಿ ದಿನಗಳೂ ಆದ ಮೇಲೆ ಅಜ್ಜನನ್ನ ಕರೆಯುವುದು ಹೇಗೆ.. ಕರೆದರೆ ಬರುವರೇ...  ಏನಪ್ಪಾ ಮಾಡೋದು.. ಮಕ್ಕಳು ಕಾಗದವನ್ನು ಮುದುರಿದರೆ ಉಂಟಾಗುವ ನೆರಿಗೆಯಂತೆ..  ನನ್ನ ಹಣೆಯ ಮೇಲೆ ರಸ್ತೆಗಳಾದವು.. "ಸಕಲ ಗ್ರಹಗಳ ಬಲ ನೀನೆ ಸರಸಿಜಾಕ್ಷ" ಎಂದು ನೆನೆದು ಸುಮ್ಮನೆ ಕೂತೆ ಬ್ಯುಗಲ್ ರಾಕಿನ ಒಂದು ಬಂಡೆಯ ಮೇಲೆ ಕೂತೆ..

"ಇಹ ಲೋಕಕ್ಕೆ ಬಂದ  ಮೇಲೆ ಪರಲೋಕಕ್ಕೆ ಹೋಗಬೇಕು
ಪರಲೋಕಕ್ಕೆ ಹೋದಮೇಲೆ ಕರ್ಮದ ಅನುಸಾರ ಜಗಕೆ ಬರಲೇಬೇಕು
ಸಾವಿಲ್ಲದ ಮನೆಯ ಸಾಸಿವೆ ಎಲ್ಲಿದೆ
ಹೊಗೆಯಿಲ್ಲದ ಬೆಂಕಿಯೆಲ್ಲಿದೆ.. ಪುನರಪಿ ಜನನಂ ಮಂಕುತಿಮ್ಮ।

ಸುತ್ತಾ ತಿರುಗಿದೆ.. ಬ್ಯುಗಲ್ ರಾಕಿನಲ್ಲಿ ಅಜ್ಜ ಕೂತಲ್ಲಿಯೇ ಕೂತಿದ್ದರು.. ಧ್ವನಿ ಮಾತ್ರ ಅಲ್ಲಿಂದ ಬರುತ್ತಿತ್ತು.. ನಾ ಲ್ಯಾಪ್ಟಾಪ್ ತೆಗೆದು ಅವರ ಹತ್ತಿರ ಓಡಿದೆ ..

"ಅಜ್ಜ ನಿಮಗೆ ನಮಸ್ಕಾರ.. ದಯಮಾಡಿ ಕ್ಷಮಿಸಿ.. ಬರಲು ಆಗಲೇ ಇಲ್ಲ.. ಕಾರ... "

ನನ್ನ ಮಾತು ಪೂರ್ತಿ ಮುಗಿದಿರಲಿಲ್ಲ.. "ಮಗು ನನಗೆ ಗೊತ್ತು.. ಅದಕ್ಕೆ ಆ ಮೇಲಿನ ಕಗ್ಗ ಹೇಳಿದ್ದು.. ಮಗು ರವಿ ನಾಲ್ಕನೇ ಸಂಪುಟ ಬಿಡುಗಡೆ ಮಾಡಿದ್ದು ಆಯ್ತು ಅಂತ ನನಗೆ ಗೊತ್ತು.. ನಾನೇ ಇದಕ್ಕೆ ವೀಕ್ಷಕ ವಿವರಣೆ ಕೊಡುತ್ತೇನೆ ಎಂದು ಹೇಳಿದ್ದೆ.. (ನಿನಗೆ ನೆನಪಿಲ್ಲವೇ.. ರವಿಯ ಜನುಮದಿನದ ವೇಳೆ ಮೂರು ಸಂಪುಟ ಬಿಡುಗಡೆ ಆಗಿತ್ತು.. ನಾಲ್ಕನೇ ಸಂಪುಟದ ವಿವರಗಳನ್ನು ನಾನೇ ನೀಡುತ್ತೇನೆ ಎಂದು ಹೇಳಿದ್ದೆ.. ಸರಿ ಶುರಮಾಡು ..  ನಾವಿಬ್ಬರೂ ಆಮೇಲೆ ಮಾತಾಡೋಣ"
ಚಂದದ ಆಹ್ವಾನ ಪತ್ರಿಕೆ 

"ಸರಿ ಅಜ್ಜ"

ಶುರುವಾಯಿತು ಅಜ್ಜನ ಲಹರಿ.. ನಾ ಅವರು ಹೇಳಿದ್ದ ವೇಗಕ್ಕೆ ಸಾಟಿಯಾಗಿ  ಬರೆಯಲು ಶುರುಮಾಡಿದ್ದೆ.. ಅಜ್ಜನ ಆಶೀರ್ವಾದ ಇದ್ದ ಮೇಲೆ ಇದು ಅಸಾಧ್ಯವೇ.. ಖಂಡಿತ ಸಾಧ್ಯ ಅಲ್ಲವೇ

                                                                         *****

ಪುಟ ಪುಟಗಳು ಪಟವಾಗಿರಲು
ಪಟವು ಬಾನಲ್ಲಿ ಹಾರಾಡುತ್ತಿರಲು
ಮನವು ಆಗಸದಿ ಆ ಪಟವನ್ನು ಹಿಡಿದಿಡಲು
ಬದುಕಿಗೆ ಸಾರ್ಥಕಥೆ ಉಂಟು ಮಂಕುತಿಮ್ಮ।

ಅಜ್ಜ ಶುರುಮಾಡಿದರು..

"ಮೆಲ್ಲನೆ ಅರಿವಿಲ್ಲದೆ ಶುರುಮಾಡಿದ ಕಾಯಕವೊಂದು ಝರಿ ತೊರೆಯಾಗಿ ನದಿಯಾಗಿ ಕಣಿವೆಯಿಂದ ಕಡಲಿಗೆ ಹರಿಯುವಂತೆ ಮೊದಲನೇ ಮುಕ್ತಕ ಶುರುಮಾಡಿದ್ದ ರವಿ.. ೯೪೫ ನೇ ಮುಕ್ತಕಕ್ಕೆ ವ್ಯಾಖ್ಯಾನ ಬರೆಯಲು ಬಂದಾಗ ಗೌರಿಶಂಕರ ಹತ್ತಿದಷ್ಟೇ ಸಂತಸ ಸಂಭ್ರಮ .. "

"ಹೌದು ಅಜ್ಜಯ್ಯ"

"ಸರಿ ಬರೆದದ್ದು ಆಯಿತು. ಮುಖಪುಸ್ತಕದಲ್ಲಿ ದಾಖಲಾಯಿತು.. ಅದನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು ಎನ್ನುವ ಅವರ ತವಕಕ್ಕೆ ಬೆನ್ನು ತಟ್ಟಿತ್ತು ಹತ್ತಾರು ಕೈಗಳು.. .. ಆ ಹತ್ತಾರು ಕೈಗಳು ನೂರಾರು ಕರಗಳನ್ನು ಕರೆತಂದಿದ್ದು ಫೇಸ್ಬುಕ್ ಮಾಯೆ ಮತ್ತು ಸಹೃದಯರ ಮಿಡಿಯುವ ಮನಸ್ಸು.. "

"ಹೂಂ" (ಅಜ್ಜಯ್ಯ ವಿವರಣೆ ಕೊಡುವಾಗ.. ಹೂಗುಟ್ಟುತ್ತಾ ಇರಬೇಕು ಇಲ್ಲವೇ ವಾಕಿಂಗ್ ಸ್ಟಿಕ್ ಇಂದ ಬೀಳುತ್ತಿತ್ತು ಒಂದು ಏಟು... :-)

ಒಂದು ಕರ ಬರೆಯುತ್ತೆ
ಇನ್ನೊಂದು ಕರ ಹಾಳೆಯನ್ನು ತಿರುಗಿಸುತ್ತೆ
ಈ ಕರಗಳು ಮಾಡಿದ ಕಾರ್ಯವನು ಮೊಬೈಲ್ ಮೂಲಕ ಸಾಗಿಸುವ
ಬೆರಳುಗಳ ಮಾಯೆ ಅರಿಯದಾಗಿದೆ ಮಂಕುತಿಮ್ಮ।

"ಸರಿಯಾಗಿದೆ ಅಜ್ಜಯ್ಯ ನೀವು ಹೇಳಿದ್ದು"

"ಆನಂದ ಎಲ್ಲಿದೇ ಎಂದು ತಿಳಿದೇ
ಓದುವುದರಲ್ಲಿಯೇ
ಬರೆಯುವುದರಲ್ಲಿಯೇ
ಓದಿ ಬರೆದು ಜಪ ಮಾಡುವುದರಲ್ಲಿ ಮಕುತಿಮ್ಮ ।"

"ಎನ್ನುವ ಶ್ರೀ ಜಪಾನಂದಾಸ್ವಾಮಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಶುರುವಾಗಿತ್ತು.. ರವಿಯವರ ಮಾನಸ ಸಹೋದರಿ ಶಕುಂತಲ ಅಯ್ಯರ್ ಅವರ ಉತ್ತಮ ನಿರೂಪಣೆಯಲ್ಲಿ ಸಾಗಿದ ಕಾರ್ಯಕ್ರಮಕ್ಕೆ ಇನ್ನಷ್ಟು ಚೈತನ್ಯ ತುಂಬಿದ್ದು ಡಾ. ಲತಾ ದಾಮ್ಲೆಯವರ ಗಾಯನ..  "

"ವನದ ಸೌಂದರ್ಯ  ಸುಮದೊಳಗೆ ನಲಿಯುವಾಗ
ಸುಮದ  ಕಂಪು ವನದಲ್ಲಿ ಹರಡಿದಾಗ
ಸಿಗುವ ಅನುಭವ ಪದಗಳಲ್ಲಿ ಹಿಡಿದಿಡಲಾಗದು
ಅದಕ್ಕೆ ಅಲ್ಲವೇ ವನಸುಮದೊಳೆನ್ನ  ವಿಕಸಿಸು ಎಂದಿದ್ದು ಮಂಕುತಿಮ್ಮ।"

"ದೀಪವ ಬೆಳಗುತ್ತಾ ಮನದೊಳಗಿರುವ ಕತ್ತಲೆಯನ್ನು ದೂರ ಮಾಡುವ ಕಗ್ಗದ ಕಾರ್ಯಕ್ರಮದಲ್ಲಿ ನಾಲ್ಕನೇ ಸಂಪುಟವನ್ನು ಲೋಕಾರ್ಪಣೆ ಮಾಡಿದರು.. "

"ಮನದಲ್ಲಿದ್ದ ಭಾವಗಳಿಗೆ ಪದಗಳು ಸಾತ್ ನೀಡಿತು
ಕನ್ನಡ, ಹಳಗನ್ನಡ, ಹೊಸಗನ್ನಡ, ಸಂಸ್ಕೃತ ಭಾಷೆಯೆನ್ನದೆ
ಅಲ್ಲಿ ಇಲ್ಲಿ ಸಿಕ್ಕ ಪದಗಳು ಕಗ್ಗಗಳಾದವು
ಒಂದರಿಂದ ಬೆಳೆದದ್ದು ಒಂಬತ್ತುನೂರ ನಲವತ್ತೈದಕ್ಕೆ ಮುಟ್ಟಿತು ಮಂಕುತಿಮ್ಮ।"

"ಕಗ್ಗದ ಕಾರ್ಯಕ್ರಮದ ಆರಂಭಕ್ಕೆ ನಾ ಮಾತಾಡಿದ್ದು ಶ್ರೀ ಜಿಪಿ ರಾಜರತ್ನಂ ಅವರು.. ಅಥವಾ ಜಿಪಿ ರಾಜರತ್ನಂ ಮಾತಾಡಿದ್ದು ನನ್ನ ಹತ್ತಿರ.. ಅಥವಾ ನಾವಿಬ್ಬರೂ ಒಬ್ಬರಿಗೊಬ್ಬರು ಮಾತಾಡಿಕೊಂಡೆವು.. "

"ಶ್ರೀ ಜಪಾನಂದಸ್ವಾಮಿಗಳ ಮಾತು ಹೃದಯಕ್ಕೆ ತಾಕುವಂತಿತ್ತು .. ಮಾತಾಡುವಾಗ ಅವರು ಕಣ್ಣು ಮುಚ್ಚಿ ಹೇಳುತ್ತಿದ್ದ ಕೆಲವು ವಾಕ್ಯಗಳು ಎಲ್ಲರ ಮನದಲ್ಲಿ ಇಳಿಯುತ್ತಿದ್ದದ್ದು ಕಾಣುತ್ತಿತ್ತು.. ಇದು ಉಪನ್ಯಾಸವೂ ಅಲ್ಲ.. ಭಾಷಣವೂ ಅಲ್ಲ.. ಗುರುಕುಲ ಪರಂಪರೆಯನ್ನು ನೆನಪಿಸುವ ಒಂದಷ್ಟು ಘಳಿಗೆಗಳಾಗಿತ್ತು.. "

"ಕಗ್ಗದ ಭಟ್ಟರೆಂದೇ ಹೆಸರಾದ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಕೆಲವು ಕಗ್ಗದ ವ್ಯಾಖ್ಯಾನಗಳು ಮತ್ತೆ ನನ್ನನ್ನು ಆ ದಿನಗಳಿಗೆ  ಕರೆದೊಯ್ದವು.. "

"ನಗುಮೊಗದ ಶ್ರೀ ಹಂ. ಪಾ. ನಾಗರಾಜಯ್ಯ ತಮ್ಮ ಹಾಸ್ಯಮಿಶ್ರಿತ ಮಾತುಗಳಿಂದ ಎಲ್ಲರ ಮನಸ್ಸನ್ನು ಸೆಳೆದರು.. ಕಗ್ಗದ ಬಗ್ಗೆ ಅವರಾಡಿದ ಮಾತುಗಳು ನನ್ನ ಹೃದಯಕ್ಕೆ ತಾಕಿದವು.. ತಾಯಿ ಶಾರದೆಯ ಅನುಗ್ರಹದಿಂದ ನಾ ಸೃಷ್ಠಿ ಮಾಡಿದ ಕೆಲವು ಸಾಲಿನ ಪದಗಳು ಈ ಪಾಟಿ ಜನಮಾನಸದಲ್ಲಿ ಅರಳಿದ್ದು ಹೆಮ್ಮೆ ಮೂಡಿಸುತ್ತಿತ್ತು.. ಆ ತಾಯಿ ಶಾರದೆಗೆ ನಾ ನಮಿಸಿದೆ ... "

"ಸರಕಾರೀ ಅಧಿಕಾರಿಯಾಗಿರುವ ಶ್ರೀ ಕೆ ವಿ ದಯಾನಂದ್ ಅವರು ಈ ಮುಕ್ತಕಗಳನ್ನು ಅಂತರ್ಜಾಲದಲ್ಲಿ ಹೆಚ್ಚಾಗಿ ಬಳಕೆಯಾಗುವಂತೆ ಸರಕಾರಿ ವೆಬ್ಸೈಟ್ ನಲ್ಲಿ ಸೇರಿಸಲು ಅನು ಮಾಡಿಕೊಡುವೆ ಎಂದರು.. ಈ ಮೊಬೈಲ್ ಯುಗದಲ್ಲಿ ಒಂದು ಕಡೆ ಶುರುವಾದರೆ ಅದು ಹರಡುವ ಪ್ರಮಾಣ ಅಗಾಧ.. ಈ ಪ್ರಯತ್ನ ಯಶಸ್ವಿಯಾಗುವಂತೆ ನಾ ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ.. "ಲೋ.. ಬರಿ ನಾ ಹೇಳಿದ್ದು ಕೇಳುತ್ತಿದ್ದೆಯೋ, ಬರೆಯುತ್ತಿದ್ದೀಯೋ ಅಥವಾ  ನಿದ್ದೆ ಗಿದ್ದೆ ಮಾಡಿಬಿಟ್ಟೆಯ.. "

ಅವಿರತವಾಗಿ ಮಾತಾಡುತ್ತಿದ್ದ ಅಜ್ಜಯ್ಯನ ಕೊನೆ ಮಾತು ಚುರುಕು ಮುಟ್ಟಿಸಿತು.. ಅವರ ಮಾತುಗಳನ್ನು ಕೇಳುತ್ತಾ ನಾ ಒಂದು ರೀತಿಯಲ್ಲಿ ಬೇರೆ ಲೋಕಕ್ಕೆ ಹೋಗಿಬಿಟ್ಟಿದ್ದೆ.. ಆದರೆ ಅವು ಹೇಳಿದ್ದನ್ನು ಕೈಗಳು ಲ್ಯಾಪ್ಟಾಪಿನ ಕೀಲಿ ಮಣೆಯ ಸಹಾಯದಿಂದ ದಾಖಲಿಸುತ್ತಿದ್ದೆ..

"ಅಜ್ಜಯ್ಯ ನೋಡಿ.. ನೀವು ಹೇಳಿದ್ದನ್ನು ಒಂದು ಪದ ಬಿಡದೆ ಬರೆಯುತ್ತಿದ್ದೇನೆ.. "

ಅಜ್ಜಯ್ಯ ತನ್ನ ಕೋಲಿನಿಂದ ನನ್ನ ತಲೆಗೆ ಒಂದು ಪೆಟ್ಟು ಕೊಟ್ಟರು.. "ಲೋ ಮಂಕುತಿಮ್ಮ ಕಡೆ ವಾಕ್ಯ ನೋಡು"

ನಾ ನೋಡಿದೆ.. ಗಹಗಹಿಸಿ ನಕ್ಕೆ.. "ಅಜ್ಜಯ್ಯ ಅಜ್ಜಯ್ಯ ಅಜ್ಜಯ್ಯ"

"ಹೇಳಿದ್ದನ್ನು ಬರೆಯುವೆಯಾ
ಬರೆದದ್ದನ್ನು ಓದುವೆಯಾ
ಕಗ್ಗದ ಕಾರ್ಯಕ್ರಮದ ವಿವರ ಮಾತ್ರ ಬರಿ
ಅದು ಬಿಟ್ಟು ಹೇಳಿದ್ದನ್ನೆಲ್ಲ ಬರಿಯಬೇಡವೋ ಮಂಕುತಿಮ್ಮ।"

"ಸರಿ ಅಜ್ಜ.. ಕಡೆಯ ಸಾಲನ್ನು ಅಳಿಸಿ ಹಾಕುವೆ"

"ಗಾಯಕಿಯ ಮತ್ತು ವಿದುಷಿಯಾಗಿರುವ ಶ್ರೀಮತಿ ಆಶಾ ಜಗದೀಶ್ ಅವರ ಕೆಲವು ಮುಕ್ತಕಗಳ ಗಾಯನ.. ಮಾತುಗಳು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಹೊಳಪನ್ನು ತಂದವು.. "

"ಬಂದಿದ್ದ ಜನಸಾಗರ ಒಂದಷ್ಟು ಅಲುಗಾಡದೇ ಇಡೀ ಕಾರ್ಯಕ್ರಮವನ್ನು ಆನಂದಿಸಿದ್ದು ಇಷ್ಟವಾಯಿತು.. ಮೂರು ತಾಸುಗಳು ಮೂರು ನಿಮಿಷಗಳಂತೆ ಸಾಗಿತ್ತು.. "
ಮಾತುಗಳಿಲ್ಲ ಇವರನ್ನು ಬಣ್ಣಿಸಲು 

"ಇದು ಬರಿ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾತ್ರ ಆಗಿರಲಿಲ್ಲ.. ಈ ಬಿಡುವಿಲ್ಲದ ಈ ತಾಂತ್ರಿಕ ಜಗತ್ತಿನಲ್ಲಿ ಭಾನುವಾರ ಬೆಳಿಗ್ಗೆ ಉಪಹಾರದಿಂದ ಊಟದ ಸಮಯದ ತನಕ ಎಲ್ಲರೂ ಭಾಗಿಯಾಗಿದ್ದು.. ತಮ್ಮ ಅನೇಕ ಮಿತ್ರರನ್ನು, ಸಹೋದರಿ, ಸಹೋದರರು, ಗುರುಗಳನ್ನು ಕಂಡು ನಲಿದ ದಿನವಾಗಿತ್ತು.. "

"ನೋಡಪ್ಪ ಈ ಕಾರ್ಯಕ್ರಮಕ್ಕೆ ಬಂದವರನ್ನು ಮಾತಾಡಿಸಿ, ಅವರನ್ನು ಸ್ಮರಿಸಿ, ನೆನಪಿನ ಪುಸ್ತಕರೂಪದಲ್ಲಿ ತಮ್ಮ ಹಸ್ತಾಕ್ಷರ ನೀಡುವ ಮೂಲಕ ಎಲ್ಲರಿಗೂ ಗೌರವ ಸೂಚಿಸಿದ ನನ್ನ ಶಿಶು ರವಿ ತಿರುಮಲೈಗೆ ನನ್ನ ಶುಭ ಆಶೀರ್ವಾದಗಳು.. ಇವರ ಈ ಸಾಹಸದಿಂದ ನನಗೆ ಆದ ಅನುಕೂಲ ಏನು ಗೊತ್ತೇ.. ನನ್ನ ಜೀವನದ ಕೆಲವು ದಿನಗಳ ಮೆಲುಕು ಹಾಕುತ್ತ. ಆ ದಿನಗಳನ್ನು ನನ್ನ ಕಣ್ಣ ಮುಂದೆ ತಂದ ನನ್ನ ಮುಂದಿನ  ಪೀಳಿಗೆಯ ಕುಡಿಯ ಮಾತುಗಳು ಇಷ್ಟವಾದವು ಎಂದು ಹೇಳಲೇಬೇಕಿಲ್ಲ"

"ನನಗೆ ಒಂದು ಪುಸ್ತಕ ತಂದು ಕೊಡು.. ನಾ ಹೋರಡುತ್ತೇನೆ.. "

"ಅಜ್ಜಯ್ಯ ನಿಮಗಾಗಿ ಆಗಲೇ ಒಂದು ಪುಸ್ತಕ ರವಿ ತಿರುಮಲೈ ಅವರು ಮೀಸಲಾಗಿಟ್ಟಿದ್ದಾರೆ.. ತೆಗೆದುಕೊಳ್ಳಿ.. "

"ಈ ಕಾರ್ಯಕ್ರಮದ ಯಶಸ್ಸಿಗೆ ಹಗಲು ಇರಲು ಎನ್ನದೆ ರವಿಯ ಜೊತೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ ಎಲ್ಲರಿಗೂ ನನ್ನ ಆಶೀರ್ವಾದಗಳು"

"ಸರಿ ಮಗು ನಾ ಹೋಗಿ ಬರುತ್ತೇನೆ.. ಮತ್ತೆ ಮತ್ತೆ ಈ ರೀತಿಯ ಕಾರ್ಯಕ್ರಮಗಳು ಆಗುತ್ತಿರಲಿ.. ಕಗ್ಗದ ಪರಿಮಳ ಹರಡುತ್ತಲಿರಲಿ.. "

ಅಜ್ಜಯ್ಯ ಕೋಲೂರಿಕೊಂಡು ನಿಧಾನವಾಗಿ ಬ್ಯುಗಲ್ ರಾಕಿನ ಒಳಗೆ ನೀರಿನ ಟ್ಯಾಂಕ್ ಬಳಿಯ ಅವರ ಮೂರ್ತಿಯ ಒಳಗೆ ಹೋದರು.. ನಾ ಕಣ್ಣೊರೆಸಿಕೊಂಡು ಅಜ್ಜಯ್ಯನ ಪಾದದ ಧೂಳನ್ನು ಕಣ್ಣಿಗೆ ಒತ್ತಿಕೊಂಡೆ..

*****

ತಾವು ಹೇಳಿದಂತೆ ಈ ನಾಲ್ಕನೇ ಸಂಪುಟದ ಕಾರ್ಯಕ್ರಮವನ್ನು ಅವರ ಮಾತಿನಲ್ಲಿ ಹೇಳಲು ಪ್ರಯತ್ನ ಪಟ್ಟಿದ್ದೇನೆ!! !

ಅಂದಿನ ಸಮಾರಂಭದ ಒಂದೆರಡು ತುಣುಕುಗಳು ನಿಮಗಾಗಿ..




*******
ಗುರುಗಳೇ.. ನಾನಾ ಕಾರಣಗಳಿಂದ ಆ ಕಾರ್ಯಕ್ರಮದ ವಿವರಗಳನ್ನು ಬರೆಯಲಿಕ್ಕೆ ಆಗಲಿಲ್ಲ.. ಆದರೆ ಅಜ್ಜಯ್ಯ ಮನದಲ್ಲಿ ಹೇಳಿದ್ದನ್ನು ಅಕ್ಷರ ರೂಪದಲ್ಲಿ ತಂದು ನಿಮ್ಮ ಮುಂದೆ ಇಟ್ಟಿದ್ದೇನೆ..

ಬಡವನಗೀತೆಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಅದ್ಭುತ ಕೃತಿಯಾಗಿರುವ ಮಂಕುತಿಮ್ಮನ ಕಗ್ಗಗಳಿಗೆ ಜನರು ಸ್ಪಂದಿಸಿರುವ ರೀತಿಯೇ ದೊಡ್ಡ ಪ್ರಶಂಸೆ.. ಮತ್ತು ಬಹುಮಾನ..

ಆ ಪೀಠ ಈ ಪೀಠ ಎಂದೇಕೆ ಮಾತಾಡುವೆ
ಜ್ಞಾನಕ್ಕೆ ಸಿಗದ ಪೀಠವುಂಟೆ
ಅಜ್ಞಾನದ ಕತ್ತಲೆಯನ್ನು ಅಟ್ಟುವ
ಆ ಪೀಠವೇ ಜ್ಞಾನ ಪೀಠವಾಗಿದೆ ಮಂಕುತಿಮ್ಮ।


ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ!

6 comments:

  1. ಮಂಕುತಿಮ್ಮನಿಗೆ ಪ್ರಣಾಮಗಳು; ನಿಮಗೆ ಧನ್ಯವಾದಗಳು.

    ReplyDelete
    Replies
    1. ಧನ್ಯವಾದಗಳು ಗುರುಗಳೇ ನಿಮ್ಮ ಬೆನ್ನು ತಟ್ಟುವಿಕೆ ನೂರಾನೆ ಬಲ ಬರುತ್ತದೆ

      Delete
  2. ನಾನು ಸಂಪೂರ್ಣ ಮೂಕಸ್ಮಿತ. ಏನು ಹೇಳುವುದು. ನಿಮ್ಮ ಪ್ರೀತಿಯ ಧಾರಾಪ್ರವಾಹದಲ್ಲಿ ನಾ ಕೊಚ್ಚಿಹೋಗಿದ್ದೇನೆ. ನಮಸ್ಕಾರ. ಧನ್ಯವಾದಗಳು

    ReplyDelete
    Replies
    1. ನಿಮ್ಮ ಆಶೀರ್ವಾದ ನನ್ನ ಬರಹಕ್ಕೆ ಇಂಬು ಕೊಡುತ್ತದೆ.. ಧನ್ಯೋಸ್ಮಿ ಗುರುಗಳೇ

      Delete
  3. ಶರಣು ನಿಮ್ಮ ಪ್ರೀತಿಗೆ
    ಅದರ ರೀತಿಗೆ

    ReplyDelete
    Replies
    1. ಧನ್ಯೋಸ್ಮಿ ರಾಧಾಕೃಷ್ಣ ಸರ್.. ನನ್ನ ಬರಹದ ಲೋಕಕ್ಕೆ ಸ್ವಾಗತ

      Delete