Thursday, October 5, 2017

ಸ್ವಾರ್ಥಕತೆಯೇ...or ಸಾರ್ಥಕತೆಯೋ

ಅನೇಕ  ಬಾರಿ  ಸುತ್ತಿ ಸುತ್ತಿ ಚಪ್ಪಲಿ ಸವೆದು ಹೋಗಿದ್ದರೂ ಛಲ ಬಿಡದ ವಿಕ್ರಮನಂತೆ ಮತ್ತೆ ಅದೇ ಕಚೇರಿಗೆ ಹೋದಳು ವೀಣಾ... 

ಸರ್ ತುಂಬಾ ದಿನಗಳಿಂದ ನಿಮ್ಮ ಆಫೀಸಿಗೆ ಅಲೆಯುತ್ತಿದ್ದೇನೆ.. ದಯಮಾಡಿ ನಾ ಕೇಳಿದ ಮಾಹಿತಿ ಕೊಡಿ.. ?

ಆ ಸರಕಾರೀ ಆಫೀಸಿನ ಜವಾನ.. "ನೆಡಿಯಮ್ಮ ಎಷ್ಟು ಸಾರಿ ಹೇಳೋದು..  ಆಗೋಲ್ಲ.. ನಿಮ್ಮನ್ನು ಒಳಗೆ ಬಿಡಲು ಆಗೋಲ್ಲ... ಮಾಹಿತೀನೂ ಇಲ್ಲ..ಏನೂ ಇಲ್ಲ...  ಹೋಗಮ್ಮ.. 

ನಿರಾಶೆ ಮೊಗ ಹೊತ್ತ ವೀಣಾ... ಮತ್ತೆ ಆಫೀಸಿನ ಎದುರು ಇದ್ದ ಅರಳಿ ಮರದ ಕಟ್ಟೆಯಲ್ಲಿ ಕೂತಳು.. ಸೂರ್ಯ ಬಿಸಿಲಿನ ಝಳವನ್ನು ಹಂಡೆಯಲ್ಲಿ ಸುರಿಯುತ್ತಿದ್ದ ಅನ್ನಿಸುತ್ತೆ .. ಬೆವರಿನ ಸ್ನಾನವೇ ಆಗಿತ್ತು.. ಹೊದ್ದುಕೊಂಡಿದ್ದ ದುಪ್ಪಟದಿಂದ ಮೊಗವನ್ನು ಒರೆಸಿಕೊಂಡು  ತನ್ನ ಹ್ಯಾಂಡ್ ಬ್ಯಾಗಿಂದ ಕನ್ನಡಿ ತೆಗೆದು.. ಹಣೆಯಲ್ಲಿದ್ದ ಕುಂಕುಮ ಇರುವುದನ್ನು ಖಚಿತ ಪಡಿಸಿಕೊಂಡಳು.. 

ಆ ಅರಳಿ ಮರದ ತಂಪು ನೆರಳಿನಲ್ಲಿ.. ಸುಯ್ ಎಂದು ಬೀಸುತ್ತಿದ್ದ ಆ ಗಾಳಿಗೆ ಹಾಗೆ ನಿದ್ದೆ ಹತ್ತಲು ಶುರುಮಾಡಿತ್ತು.. ಬೆಳಗಿಂದ ಗಾಡಿಯಲ್ಲಿ ಬಿರು ಬಿಸಿಲಿನಲ್ಲಿ ತಿರುಗಿದ್ದು.. ಊಟವಿಲ್ಲದೆ ಬಸವಳಿದಿದ್ದ ದೇಹ.. ತುಸು ತಂಪುಗಾಳಿಗೆ ಮೈಯೊಡ್ಡಿದಾಗ ಸ್ವಲ್ಪ ಹಾಯ್ ಎನಿಸಿದ್ದು ಸುಳ್ಳಲ್ಲ... ಹಾಗೆ ಮರಕ್ಕೆ ಒರಗಿ ಕುಳಿತ ವೀಣಾಳ ಮನಸ್ಸು ನೆನಪುಗಳು ರೈಲುಬಂಡಿಯನ್ನು ಹತ್ತಿ ಹಿಂದಕ್ಕೆ ಓಡಲು ಶುರುಮಾಡಿತು... 

ಕನ್ನಡಿಯಲ್ಲೊಮ್ಮೆ ಮೊಗವನ್ನು ನೋಡಿಕೊಂಡ ವೀಣಾ ತನ್ನ ಬಗ್ಗೆ ಒಮ್ಮೆ ಹೆಮ್ಮೆ ಪಟ್ಟು ಕೊಂಡಳು.. ಅಪರೂಪದ ಸುಂದರಿ..  ಕಡು ಕಪ್ಪಾದ ನೀಳಗೂದಲು, ಹಾಲಿನ ಬಟ್ಟಲಲ್ಲಿ ಕರೀ ದ್ರಾಕ್ಷಿ ಹಾಕಿದಂತಹ ಕಣ್ಣುಗಳು.. ಯಾರನ್ನೇ ಆದರೂ ಒಮ್ಮೆಗೆ  ಸೆಳೆಯಬಲ್ಲ ಕಣ್ಣುಗಳು.. ನೀಳವಾದ ಸಂಪಿಗೆಯಂತಹ ನಾಸಿಕ... ಅದಕ್ಕೆ ಒಪ್ಪುವ ಮೂಗು ಬೊಟ್ಟು.. ಕೆನೆ ಹಾಲಿನ ಬಣ್ಣ.. ಎತ್ತರದ ಮೈಮಾಟ.. ಅನುಪಮಾ ಸುಂದರಿಯಾಗಿದ್ದಳು ವೀಣಾ.. ಸೌಂದರ್ಯದ ಜೊತೆಯಲ್ಲಿ ಅಹಂಕಾರ ಇರುತ್ತದೆ ಎನ್ನುವ ನಾಣ್ಣುಡಿಯನ್ನು ಸುಳ್ಳು ಮಾಡುವಂತಹ ವ್ಯಕ್ತಿತ್ವ ವೀಣಾಳದು.. !

ಎಂತಹ ಸ್ನೇಹ ನನ್ನದು.. ಸ್ನೇಹಕ್ಕೆ ಹಾತೊರೆಯುವ ಮನಸ್ಸು.. ತನಗೆ ಅಪಾರ ಸ್ನೇಹ ಬಳಗವನ್ನು ತಂದು ಕೊಟ್ಟಿತ್ತು.. ಸ್ನೇಹ ಬಳಗದಲ್ಲಿ ವೀಣಾ ಎಂದರೆ.. ಉತ್ಸಾಹದ ಚಿಲುಮೆ ಎಂದೇ ಹೆಸರಾಗಿದ್ದಳು.. ಯಾವುದೇ  ಇರಲಿ, ಪ್ರವಾಸವಿರಲಿ, ಸಿನಿಮಾ, ಶಾಪಿಂಗ್ ಏನೇ ಇದ್ದರೂ ಆ ಗುಂಪಿನಲ್ಲಿ ವೀಣಾ ಇರಲೇಬೇಕಿತ್ತು.. ಹಾಗಾಗಿ  ಕೇಂದ್ರ ಬಿಂದುವಾಗಿದ್ದಳು ವೀಣಾ.. 

ಮತ್ತೊಮ್ಮೆ ತನ್ನ ಮೊಗವನ್ನು ನೋಡಿಕೊಂಡಳು... 

ಈ ಸೌಂದರ್ಯಕ್ಕೆ ಅಲ್ಲವೇ ಕಾಲೇಜಿನಲ್ಲಿ ಹುಡುಗರ ಹಿಂದೆ ಬೀಳುತ್ತಿದ್ದದು... ಆದರೆ ಪ್ರೀತಿ ಪ್ರೇಮ ಇದರ ಬಗ್ಗೆ ಯಾವುದೇ ಅಭಿಪ್ರಾಯ ಇಲ್ಲದ ಇವಳಿಗೆ.. ಹುಡುಗರ ಹಿಂಡು ಇದ್ದರೂ.. ಇವಳು ಮಾತ್ರ ತಾವರೆ ಎಲೆಯ ಮೇಲಿನ ನೀರಿನ ಹನಿಯಂತೆ ಇದ್ದಳು.. ಆದರೆ ಯಾರನ್ನೂ ಅವಮಾನ ಮಾಡುವುದಾಗಲಿ ಅಥವಾ ಬಯ್ಯುವುದಾಗಲಿ ಮಾಡುತ್ತಿರಲಿಲ್ಲ.. ಬದಲಿಗೆ.. ಗೆಳೆಯ.. ನನಗೆ ಪ್ರೀತಿ ಪ್ರೇಮ ಇವೆಲ್ಲಾ ಇಷ್ಟವಿಲ್ಲ.. ನಿನ್ನ ಗೆಳತಿಯಾಗಿರುತ್ತೇನೆ.. ಆದರೆ ಪ್ರೀತಿ ಪ್ರೇಮ ಎಲ್ಲಾ ಇಲ್ಲದೆ ಪರಿಶುದ್ಧ ಸ್ನೇಹದ ಹಸ್ತ ಕೊಡುವುದಾದರೆ ಸರಿ .. ಇಲ್ಲದೆ ಹೋದರೆ.. ನನ್ನ  ದಾರಿ ನನಗೆ ನಿನ್ನ ದಾರಿ ನಿನಗೆ ಎಂದು ನಯವಾಗಿಯೇ ಹೇಳುತಿದ್ದಳು.. 

ಹೀಗಾಗಿ ಅವಳು ಯಾರಿಗೂ ಸಿಗದ ಸುಂದರಿಯಾಗಿದ್ದಳು ಆದರೂ ಎಲ್ಲರಿಗೂ ಬೇಕಾದ ಪ್ರಾಣ ಸ್ನೇಹಿತಯಾಗಿದ್ದಳು... ಅವಳ ಪರಮಾಪ್ತ ಗೆಳತೀ ಗೀತಾ.... ಇಬ್ಬರೂ ಒಂದು ಪ್ರಾಣ ಎರಡು ದೇಹ ಎಂಬಂತೆ ಇದ್ದರು.. 

ಕಾಲೇಜು ವ್ಯಾಸಂಗದಲ್ಲಿ ಗೀತಾ-ವೀಣಾ ಒಂದೇ ಮುಖದ ಎರಡು ನಾಣ್ಯಗಳಾಗಿದ್ದರು.. ಅಂತಹ ಅದ್ಭುತ ದೋಸ್ತಿ ಅವರಿಬ್ಬರದು... 

ಇಬ್ಬರಿಗೂ ಪ್ರೀತಿ ಪ್ರೇಮ ಇವೆಲ್ಲಾ ಬರಿ ಪುಸ್ತಕದ ಬದನೇಕಾಯಿ ಎಂಬ ತಿಳುವಳಿಕೆ ಇತ್ತು.. ಹಾಗಾಗಿ ಎಲ್ಲರಲ್ಲೂ ಬೆರೆಯುವ ಅವರಿಬ್ಬರನ್ನು ಬಿಟ್ಟು ಸಹಪಾಠಿಗಳು ಇಂದಿಗೂ ದೂರವಿರುತ್ತಿರಲಿಲ್ಲ... 

ಕಾಲೇಜು ವಿದ್ಯಾಭ್ಯಾಸ ಮುಗಿಯುವ ಸಮಯ.. ಮನೆಯಲ್ಲಿ ಆಗಲೇ ಹುಡುಗನನ್ನು ನೋಡಲು ಶುರುಮಾಡಿದ್ದರು.. ವೀಣಾ ಮತ್ತು ಗೀತಾಳ ಕುಟುಂಬ ಹತ್ತಿರವಾಗಿತ್ತು.. ಹಾಗಾಗಿ ಇಬ್ಬರಿಗೂ ಒಮ್ಮೆಲೇ ನೋಡಿದರೆ ಒಟ್ಟಿಗೆ ಮದುವೆ ಮಾಡುವ ಯೋಚನೆಯು ಇತ್ತು :-)

ಸಾಧಾರಣ ಕುಟುಂಬದ ಹೆಣ್ಣು ಮಕ್ಕಳಾಗಿದ್ದ ಇವರಿಬ್ಬರಿಗೂ ಇದ್ದ ಆಸ್ತಿ ಎಂದರೆ ಸೌಂದರ್ಯ.. ಒಬ್ಬರನ್ನು  ಒಬ್ಬರು ಮೀರಿಸುವ ಸೌಂದರ್ಯ... 

ವೀಣಾಳ ಹಾಲಿನ ಬಿಳುಪು.. ಗೀತಾ ಸ್ವಲ್ಪ ಕೃಷ್ಣ ವರ್ಣದವಳಾಗಿದ್ದರೂ ಆಕರ್ಷಕ ಸೌಂದರ್ಯತೆಯಿಂದ ಕೂಡಿದ್ದಳು.. ಅವರಿಬ್ಬರೂ ಹಲವಾರು ಬಾರಿ ಹೇಳಿಕೊಂಡಿದ್ದರು.. "ನಾ ಗಂಡಾಗಿದ್ದರೆ ನಿನ್ನೆ ಮದುವೆಯಾಗುತ್ತಿದ್ದೆ ಕಣೆ'

ವೀಣಾಳ ಮದುವೆ ಮೊದಲು ನಿಶ್ಚಯವಾಯಿತು.. ಗಂಡು ರಾಕೇಶ್ ಬೆಂಗಳೂರಿನ HAL ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಇಂಜಿನೀಯರ್ ಆಗಿದ್ದ... ಹೇಳಿಮಾಡಿಸಿದಂತಹ ಜೋಡಿಯಾಗಿತ್ತು.. ಮದುವೆಯಲ್ಲಿ ಗೀತಾ ಜಿಂಕೆಯಂತೆ ಒದ್ದಾಡಿ ಎಲ್ಲರ ಮನಸ್ಸೆಳೆದಿದ್ದಳು.. ಮತ್ತು ಮದುವೆಗೆ ವೀಣಾಳ ಕುಟುಂಬಕ್ಕೆ ಬಲಗೈಯಾಗಿದ್ದಳು.. ಹೂವಿನ ಸರದಂತೆ ಹಗುರವಾಗಿ ಮದುವೆ ವೀಣಾ ಮತ್ತು ಗೀತಾಳ ಪರೀಕ್ಷೆ ಮುಗಿದ ಒಂದೇ ವಾರಕ್ಕೆ ಮುಗಿದಿತ್ತು.. 

ರಾಕೇಶ್ ಮತ್ತು ವೀಣಾ ನಗು ನಗುತ್ತಾ ಮಧು ಚಂದ್ರಕ್ಕೆ ತೆರಳಿದ್ದರು.. ಮೊದಲ ಬಾರಿಗೆ ಗೀತಾಳಿಗೆ ಒಂಟಿತನ ಕಾಡಲು ಹತ್ತಿತು... ತನ್ನ ಪ್ರೀತಿಯ ಗೆಳತಿ ಮದುವೆಯ ನಂತರ ತನ್ನಿಂದ ದೂರವಾಗುತ್ತಾಳೆ ಎನ್ನುವ ಒಂದು ಆತಂಕ ಅವಳನ್ನು ಕಾಡತೊಡಗಿತು... 

ಗೀತಾಳ ಮನೆಯಲ್ಲಿಯೂ ಯೋಗ್ಯ ವರನಿಗೆ ಹುಡುಕಾಟ ಇನ್ನೂ ಕ್ಷಿಪ್ರಗತಿಯಲ್ಲಿ ಸಾಗತೊಡಗಿತ್ತು.. ಜೊತೆಯಲ್ಲಿ ಗೀತಾಳ ಸದ್ದಿಲ್ಲದ ಚಲನವಲನ ಅವಳನ್ನು ಬೇಗ ಮದುವೆ ಮಾಡಲೇಬೇಕು ಎನ್ನುವ ತೀರ್ಮಾನಕ್ಕೆ ಇಂಬುಕೊಟ್ಟಿತ್ತು... 

ಗೀತಾ ಒಂಟಿತನಕ್ಕೆ ಮತ್ತಷ್ಟು ಪೆಟ್ಟು ಬಿದ್ದದ್ದು ಕಾಲೇಜು ಮುಗಿದಿತ್ತು.. ಇನ್ನೂ ಫಲಿತಾಂಶ ಬರುವ ತನಕ ಏನೂ ಕೆಲಸವಿಲ್ಲ... ಕರಕುಶಲ ಕೆಲಸಗಳನ್ನ ಕಲಿತಿದ್ದ ಗೀತಾಳಿಗೆ ಅದೇ ಒಂದು ರೀತಿಯ ಸಂಗಾತಿಯಾಗಿತ್ತು.  ಕಾಗದದಲ್ಲಿ ಮಾಡುವ ಆಕೃತಿ, ರಂಗೋಲಿಗಳು, ಪೇಂಟಿಂಗ್, ಮಡಿಕೆ ಕುಡಿಕೆಗಳ ಮೇಲೆ ಚಿತ್ರಗಳನ್ನು ಮೂಡಿಸುವುದು, ಅಲ್ಯೂಮಿನಿಯಂ ಹಾಳೆಗಳ ಮೇಲೆ.. ಹೀಗೆ ಒಂದಷ್ಟು ಕಸವನ್ನು ಕೊಟ್ಟರೂ ರಸವನ್ನಾಗಿ ಅದನ್ನೇ ಒಂದು ಕಲಾಕೃತಿಯಾಗಿ ಮಾಡುವ ತಾಕತ್ತು ಅವಳಿಗಿತ್ತು.. 

ಅದೇ ಅವಳಿಗೆ ಜೊತೆಗಾರನಾಗಿ ಬಂದಿತ್ತು ಅಂದರೆ ಸುಳ್ಳಲ್ಲ..

ವೀಣಾ ಮಧುಚಂದ್ರದಿಂದ ಬಂದ ಮೇಲೆ.. ತನ್ನ ಕುಟುಂಬದ  ಗಮನ ಹರಿಸಲು ಶುರುಮಾಡಿದ್ದಳು .. ರಾಕೇಶನದು ತುಂಬು ಕುಟುಂಬ.. ಇವರಿಬ್ಬರೂ ಸೇರಿ ಹದಿನೈದು ಮಂದಿ ಇದ್ದ ಅವಿಭಕ್ತ ಕುಟುಂಬ ಆಗಿತ್ತು.. ರಾಕೇಶ ಅಪ್ಪ ಅಮ್ಮ.. ಅವರ ಅಪ್ಪ ಅಮ್ಮ ಅಂದರೆ ಅಜ್ಜ ಅಜ್ಜಿ.. ರಾಕೇಶನ ಇಬ್ಬರು ತಂಗಿಯರು ಇಬ್ಬರು ತಮ್ಮಂದಿರು, ತಂದೆಯ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳು ಮತ್ತು ಹುಟ್ಟಿದಾಗಿಂದ ಇಲ್ಲೇ ಇದ್ದು ಬೆಳೆದು ಮನೆಗೆಲಸಗಳಲ್ಲಿ ಸಹಾಯ ಮಾಡಿಕೊಂಡಿರುವ ಆಳು ಮಗ..

ತುಂಬು ಮನೆಯ ಈ ಕುಟುಂಬದ ಸಡಗರದಲ್ಲಿ  ವೀಣಾಳಿಗೆ ಗೀತಾಳನ್ನು ಸಂಪರ್ಕ ಮಾಡಲು ಕಷ್ಟವಾಗುತ್ತಿತ್ತು.. ಗೀತಾಳೆ ಸಂದೇಶ ಕಲಿಸಿದ್ದರೂ ಅದನ್ನು ನೋಡುತ್ತಿದ್ದದು ರಾತ್ರಿ ಮಲಗುವ ಮುನ್ನವೇ.. ಓದಿ ಅದಕ್ಕೆ ನಾಳೆ ಪ್ರತಿಕ್ರಿಯೆ ಮಾಡೋಣ.. ಬೇಡ ಬೇಡ ಮಾತಾಡಿಯೇ ಬಿಡೋಣ ನಾಳೆ ದಿನ.. ಎನ್ನುತ್ತಾ ಮಲಗಿದವಳಿಗೆ ಮತ್ತೆ ಮರುದಿನ ರಾತ್ರಿಯೇ ಗೀತಾಳ ನೆನಪಾಗುತ್ತಿದ್ದದು... ಹೀಗೆ ಸ್ಮೃತಿ ಪಟಲದಲ್ಲಿದ್ದರೂ ಸಂಪರ್ಕ ಮಾಡದೆ ಅಂತರ ಹೆಚ್ಚುತ್ತಿತ್ತು.. 

ಗೀತಾಳಿಗೆ ವೀಣಾಳ ಪುರುಸೊತ್ತಿಲ್ಲದ ಚಟುವಟಿಕೆ ಗೊತ್ತಿತ್ತು.. ಯಾಕೆಂದರೆ ಒಮ್ಮೆ ವೀಣಾಳ ಮನೆಗೆ ಹೋಗಬೇಕೆಂದಾಗ ವೀಣಾಳ ಅಪ್ಪ ಅಮ್ಮ ಅವಳ ಕಥೆಯನ್ನು ಹೇಳಿದ್ದರು.. ತವರಿಗೆ ಬರೋದೇ ಕಷ್ಟ  ಬಂದರೂ ನೆಂಟರ  ತರಹ ಬರುತ್ತಾಳೆ ಎಂದು  ಹೇಳಿದ್ದರು.. ಹಾಗಾಗಿ ಕಥೆ ಗೊತ್ತಿದ್ದರಿಂದ ತನ್ನ ಜೀವದ ಗೆಳೆತಿಯನ್ನು ಬಯ್ದುಕೊಳ್ಳದೆ ಅವಳ ಸ್ಥಿತಿಯನ್ನು ನೆನೆದು ಸುಮ್ಮನಾಗಿದ್ದಳು... 

"ಮೋ.. ಮೋ.. ಅಮ್ಮ.. ಮೇಡಂ.. ರೀ.. ಈ ವಮ್ಮ ಏನೂ ಮರದ ಕೆಳಗೆ ಕೂತು ಗೊರಕೆ ಹೊಡಿತಾ ಇದೆ.. ಮೊ ಏಳಮ್ಮ ... "

ಈ ಮಾತುಗಳು ಯಾರೋ ತನ್ನನ್ನು ಕರೆಯುತ್ತಿದ್ದಾರೆ ಎನ್ನಿಸಿತು.. ನಿಧಾನವಾಗಿ ಹಿಂದಿನ ಕಾಲದ ಸಿನಿಮಾ ಪರದೆ ಮೇಲಕ್ಕೆ ಹೋಗುವ ರೀತಿಯಲ್ಲಿ ಕಣ್ಣು ತೆರೆದುಕೊಂಡಿತು.. 

"ಸಾಹೇಬ್ರು ಕರೀತಿದ್ದಾರೆ ಬನ್ರೀ"

ಸಾಹೇಬರ ಕಚೇರಿಗೆ... ದಡ ದಡ ಎಂದು ಓಡಿದಳು... 

"ನಿಧಾನ ಕಣಮ್ಮ... ಅಲ್ಲಿ ಕಲ್ಲು ಚಪ್ಪಡಿ ಸಡಿಲವಾಗಿದೆ"  ಆ ಎಚ್ಚರಿಕೆಯ ದನಿ ಕಿವಿಗೆ ಬಿತ್ತೋ ಇಲ್ಲವೋ ದೇವರಿಗೆ ಗೊತ್ತು.. ಆದರೆ ವೀಣಾಳಿಗೆ ಮಾತ್ರ ಕೇಳಲಿಲ್ಲ ... 

"ಸರ್ ಒಳಗೆ ಬರಬಹುದಾ?" ದನಿಯತ್ತ ತಿರುಗಿದ ಸಾಹೇಬರು... "ಬನ್ರೀ.. ನೀವೇ ಆಲ್ವಾ ವೀಣಾ ಅಂದರೆ.. ಹಾ ಹೇಳಿ ಏನು ಸಮಾಚಾರ .. ನೋಡಿ ನನ್ನ ಸಾಹೇಬರು ಮೀಟಿಂಗ್ ಕರೆದಿದ್ದಾರೆ.. ನಿಮಗೆ ಹತ್ತು ನಿಮಿಷ ಕೊಡ್ತೀನಿ.. ಅದೇನು ಮಾಹಿತಿ ಬೇಕು ಪಟಕ್ ಅಂತ ಚಿಕ್ಕದಾಗಿ ಹೇಳಿ"

"ಸರ್.. ನಾನು ಗುರುಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರ ನೋಡುತ್ತಿದ್ದೆ.. "

"ರೀ ಮೇಡಂ .. ಕಥೆ ಬೇಡ.. ಸೀದಾ ವಿಷಯಕ್ಕೆ ಬನ್ನಿ"

"ಸರ್.. ಇದನ್ನ ಹೇಳಿದರೆ ಮಾತ್ರ ನಿಮಗೆ ವಿಷಯ ಅರ್ಥವಾಗೋದು.. ನೀವು ನನಗೆ ೬೦೦ ಸೆಕೆಂಡ್ಸ್ ಕೊಟ್ಟಿದ್ದೀರಾ.. ಈಗಾಗಲೇ ೫೦ ಸೆಕೆಂಡ್ಸ್ ಆಗಿ ಹೋಗಿದೆ.. ನಾ ಅಷ್ಟು ಬೇಗ ಮುಗಿಸ್ತೀನಿ"

"ಸರಿ.. ಏನಾದರೂ ಮಾಡಿಕೊಳ್ಳಿ.. ಹಾ ಬೇಗ ಹೇಳಿ .. ಹೆಚ್ಚು  ಸಮಯವಿಲ್ಲ"

"ಸರ್ ಆ ಚಿತ್ರದಲ್ಲಿ ಕಣ್ಣಿಲ್ಲದ ನಿರ್ದೇಶಕ.. ಕಥೆ ಹೇಳುತ್ತಿರುತ್ತಾನೆ.. ಅಣ್ಣಾವ್ರು  ೨೦೦೫ರಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋದಮೇಲೆ .. ಅವರ ಕಣ್ಣನ್ನು ಇಬ್ಬರಿಗೆ ಹಾಕಿದರಂತೆ.. ಅವರ ವಿಳಾಸವನ್ನು ಹುಡುಕಿಕೊಂಡು ಹೋಗಿ ಆ ಅಭಿಮಾನಿ ದೇವರುಗಳ ಅಭಿಮಾನಿಯನ್ನು  ಕಂಡು ಬರುವ ಕಥೆ" 

"ಹೌದು ಅದನ್ನು ನಾನು ಕೇಳಿದ್ದೀನಿ .. ಅಂದರೆ ಆ ಚಿತ್ರವನ್ನು ನೋಡಿದ್ದೀನಿ.. ಅದಕ್ಕೂ ನಿಮಗೂ ಏನು ಸಂಬಂಧ ..  ?.. ಬೇಗ ಹೇಳಿ ಮೇಡಂ ಸಮಯವಿಲ್ಲ"

"ಸರ್ ಮುನ್ನೂರು ಸೆಕೆಂಡ್ಸ್ ಆಗಿದೆ.. ಇನ್ನೂ ಮುನ್ನೂರು ಸೆಕೆಂಡ್ಸ್ ಇದೆ.. "

"ಹಾ ಸರಿ ಸರಿ"

"ಸರ್ ಇದೆ ರೀತಿಯಲ್ಲಿ ನನ್ನ ಜೀವದ ಗೆಳತಿಯೊಬ್ಬಳ ದೇಹದ ಮುಖ್ಯ ಅಂಗಗಳನ್ನು ದಾನ ಮಾಡಿದ್ದಾರೆ. ಅದನ್ನು ಯಾರ ದೇಹಕ್ಕೆ ಅಳವಡಿಸಿದ್ದಾರೋ ಅವರ ವಿಳಾಸ ಬೇಕಿತ್ತು ಸರ್.. ವಿದೇಶದಲ್ಲಿ ಈ ರೀತಿಯ ಅಂಗಗಳನ್ನು ದಾನ ಕೊಟ್ಟ ಹಾಗೂ ಪಡೆದ   ವೆಬ್ ಸೈಟ್ ನಲ್ಲಿ ಹಾಕುತ್ತಾರೆ ಎಂದು ಓದಿದ್ದೆ.. ದಯಮಾಡಿ ನನಗೆ ಆ ವಿವರ ಬೇಕು.. ಸರ್ ಇಷ್ಟೇ ನನ್ನ ಕೋರಿಕೆ.. ನೋಡಿ ಸರ್ ನನ್ನ ಕೋರಿಕೆಯ ಬಗ್ಗೆ ಪೂರ್ಣ ವಿವರ ಈ ಅರ್ಜಿಯಲ್ಲಿದೆ.. ಅಷ್ಟು ಮಾಹಿತಿ ಒದಗಿಸಿದರೆ ಸಾಕು.. ನೋಡಿ ಸರ್ ಸರಿಯಾಗಿ ನೀವು ಕೊಟ್ಟ ೬೦೦ ಸೆಕೆಂಡ್ಸ್ ಒಳಗಡೆಯೇ ಮುಗಿಸಿದ್ದೇನೆ.... "

"ರೀ ರಾಜಪ್ಪ.. ನೋಡ್ರಿ.. ಈ ಮೇಡಂ ಅರ್ಜಿಯನ್ನು.. ಒಮ್ಮೆ ಓದಿ ಎಲ್ಲಾ ವಿವರಗಳು ಇವೆಯೇ ಎಂದು ಹೇಳಿ.. ಮೇಡಂ ನಾನು ಒಂದು ಮೀಟಿಂಗಿಗೆ ಹೋಗಲೇ ಬೇಕು.. ನಿಮಗೆ ಆಗಲೇ ಹೇಳಿದ್ದೇನೆ.. ಇವರು ರಾಜಪ್ಪ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನನಗೆ ಹೇಳುತ್ತಾರೆ.. "

"ಸರ್ ನಾ ಎಷ್ಟು ಹೊತ್ತು ಕಾಯಬೇಕು.. ಇಲ್ಲಿಯೇ ಇರುತ್ತೇನೆ.. ನೀವು ಹೋಗಿ ಬನ್ನಿ.. ನಾ ರಾಜಪ್ಪ ಸರ್ ಜೊತೆಯಲ್ಲಿಯೇ ಇರುತ್ತೇನೆ"

"ರೀ ಮೇಡಂ ನಿಮಗೇನು ತಲೆ ಕೆಟ್ಟಿದೆಯಾ... ನೀವು ಬರೆದು ಕೊಟ್ಟ ಅರ್ಜಿಯನ್ನು ಓದಿ ಎಲ್ಲಾ ವಿವರಗಳು ಸರಿ ಇದೆಯೇ ಎಂದು ನೋಡುವುದಷ್ಟೇ ರಾಜಪ್ಪ ಅವರ ಕೆಲಸ.. ನನ್ನ ಮೇಲಾಧಿಕಾರಿಗಳ ಹತ್ತಿರ ಇದರ ಬಗ್ಗೆ ಚರ್ಚೆ ಮಾಡಬೇಕು.. ಅವರು ಒಪ್ಪಿದ ಮೇಲೆ ಮುಂದಿನ ಮಾತುಕತೆ.. "

ಸರ್.. ನನಗೆ.. ಸರ್ .. ಬೇಕಾಗಿತ್ತು... ಸರ್.. ನೋಡಿ ಇಲ್ಲಿ ಒಮ್ಮೆ"

ವೀಣಾಳ ಮಾತುಗಳು ಸಾಹೇಬರ ಕಿವಿಯ ಮೇಲೆ ಬಿತ್ತೋ ಇಲ್ಲವೋ.... ಅವರು ತನ್ನ ಮೇಲಾಧಿಕಾರಿಗಳ ಕಚೇರಿಯತ್ತ ಹೆಜ್ಜೆ ಹಾಕುತ್ತಾ ಹೋದರು.. 

ಇತ್ತ ರಾಜಪ್ಪ ಬೀಡೀ ಹಚ್ಚಿಕೊಂಡು ಕಾಫಿಗೆ ಅಂತ ಹೊರಟ.. 

ಮತ್ತೆ ಅರಳೀಮರವೇ ನೆರಳಾಯಿತು ವೀಣಾಳಿಗೆ... 

11 comments:

  1. ಶ್ರೀಕಾಂತರೆ, ಈ ಸಲ ಒಂದು ಅತ್ಯಂತ ವಿಭಿನ್ನವಾದ ಕಥೆಯನ್ನು ಕೊಡುತ್ತಲಿದ್ದೀರಿ. ಮೊದಮೊದಲು, ಇದು ಒಂದು ರೋಮ್ಯಾಂಟಿಕ್ ಕಥೆ ಮಾತ್ರ ಎಂದು ಅನಿಸಿತ್ತು. ಓದುತ್ತ ಹೋದಂತೆ, ಇದರಲ್ಲಿ ಹೆಚ್ಚಿನದು ಇದೆ ಎಂದು ಭಾಸವಾಗತೊಡಾಗಿದೆ. ಈ ಸಲ,ನಿಮ್ಮ ಕಥೆಯಲ್ಲಿ ಒಂದು ಸುಂದರವಾದ ಉಪಮೆಯನ್ನು ನೀವು ಕಟ್ಟಿದ್ದು ನನಗೆ ತುಂಬ ಇಷ್ಟವಾಯಿತು:ಹಾಲಿನ ಬಟ್ಟಲಲ್ಲಿ ಕರೀ ದ್ರಾಕ್ಷಿ ಹಾಕಿದಂತಹ ಕಣ್ಣುಗಳು!
    ಉತ್ತಮವಾದ, ಆದರೆ ನೀವು ಯಾವಾಗಲೂ ಬರೆಯುವಂತೆ suspense-filled ಬರಹ. ಅಭಿನಂದನೆಗಳು.

    ReplyDelete
    Replies
    1. ನಮೋನಮಃ ಗುರುಗಳೇ.. ಅದ್ಭುತವಾದ ಆಶೀರ್ವಾದ ತುಂಬಿದ ಪ್ರತಿಕ್ರಿಯೆ..
      ಧನ್ಯವಾದಗಳು ಗುರುಗಳೇ

      Delete
  2. ಕಥೆ ಅನ್ನುವುದೇ ಕುತೂಹಲ.. ನಿಮ್ಮ ಕಥೆಯಲ್ಲಿ ಕುತೂಹಲಕ್ಕೆ ಎಲ್ಲಿಯೂ ಕುಂದಾಗದಂತೆ ಓದುಗರಗನ್ನು ಸೆಳದಿಟ್ಟುಕೊಂಡ ರೀತಿ ವಿಶೇಷ..
    ಜೀವದ ಗೆಳತಿ ಯರಿಬ್ಬರ ಜೀವನ ಕಥೆಯ ಮೂಲವಸ್ತು ಅನ್ನಿಸಿದರೂ ನೀವು ಹೇಳ ಹೊರಟಿರುವುದು ಸ್ವಾರ್ಥ ಮತ್ತು ಸಾರ್ಥಕತೆಯ ಬಗ್ಗೆ..
    ಕಥಾ ನಾಯಕಿಯಾಗಿ ವೀಣಾ ಮಿಂಚುತ್ತಿರುವಂತೆ ಅನ್ನಿಸಿದರೂ ಎಲ್ಲೋ ಗೀತಾಳ ಸಾರ್ಥಕ ಬದುಕಿಗೆ ಬೆಳಕ ಚೆಲ್ಲುವ ಉದ್ದೇಶ ನಿಮ್ಮ ಕೊನೆಯ ಸಾಲುಗಳಲ್ಲಿ ಮೂಡಿದೆ..
    ಇನ್ನೊಂದು ಭಾಗ ಅರಿಯದೇ ಕಥೆ ವಿಮರ್ಶಿಸುವದು ತಪ್ಪಾದೀತು..
    ಆದರೂ ಓದುಗರ ಮನದಲ್ಲೂ ಕಲ್ಪನೆಯ ಬೀಜ ಬಿತ್ತಿದ್ದು ಇಷ್ಟವಾಯ್ತು..

    ReplyDelete
    Replies
    1. ಧನ್ಯವಾದಗಳು ಓದುಗರ ಈ ಪ್ರತಿಕ್ರಿಯೆ ಇನ್ನಷ್ಟು ಉತ್ಸಾಹ ತುಂಬುತ್ತದೆ.. ಮನಸ್ಸಿಗೆ ಹೊಳೆದ ಒಂದು ಎಲೆಯನ್ನು ಹಿಗ್ಗಿಸಿದ್ದನ್ನು ಓದುಗರ ಮನ ಮುಟ್ಟಿಸುತ್ತಿದೆ ಎಂದರೆ.. ಆ ಭಗವಂತನಿಗೆ ಒಂದು ಸಲಾಂ ಹೇಳಬೇಕು
      ಧನ್ಯವಾದಗಳು ಎಂ ಎಸ್

      Delete
  3. Wow super Sri! Suspense tadiyakke agtha illa munde yenu? ��

    ReplyDelete
  4. Wow nice story with suspense waiting for next part Sri������

    ReplyDelete
  5. Chennagide sri awaiting for next edition

    ReplyDelete