Saturday, October 1, 2016

ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯ... ಅಣ್ಣ(ಅಪ್ಪ)ನ ಜನುಮದಿನ.. !

ಆಸೆ, ಆಕಾಂಕ್ಷೆಗಳು ಹೇಗೆ ಹುಟ್ಟುತ್ತವೆ, ಬೆಳೆಯುತ್ತವೆ ಇಂದಿಗೂ ಅರಿವಾಗುವುದಿಲ್ಲ.

ಶಾಲಾದಿನಗಳಲ್ಲಿ ಗಣೇಶನ ಹಬ್ಬ ಒಂದು ಬಗೆಯ ಆನಂದ ತಂದು ಕೊಡುತ್ತಿತ್ತು, ನಾಲ್ಕೈದು ಕಿಮಿಗಳಷ್ಟು ನೆಡೆಯುತ್ತಾ ಹೋಗಿ ಗಣಪನನ್ನು ತರುವುದು, ಹಬ್ಬಕ್ಕೆ ಅಕ್ಕ ಬಟ್ಟೆ ತರುತ್ತಾಳೆ ಎಂದು ವಠಾರದ ಬಾಗಿಲ ಬಳಿಯೇ ಕಾಯುತ್ತಾ ನಿಲ್ಲುವುದು, ಅಪ್ಪ ಮಂಟಪ ಕಟ್ಟಲು ನಿಂತಾಗ ಸಹಾಯ ಮಾಡುವುದು, ಮಾವಿನ ತೋರಣ, ಗರಿಕೆಯನ್ನು ಕೀಳುವುದು ಹೀಗೆ ನೂರೆಂಟು ಬಗೆಯಲ್ಲಿ ಆನಂದ ಕೊಡುತ್ತಿತ್ತು.

ಹಬ್ಬದ ದಿನ ಹೊಸ ಬಟ್ಟೆ ತೊಟ್ಟ ಸಡಗರ ಒಂದು ಕಡೆ, ರುಚಿಯಾಗಿ ಅಮ್ಮ ಮಾಡುವ ಅಡಿಗೆಯನ್ನು ಹೊಟ್ಟೆ ತುಂಬಾ ಬಾರಿಸೋದಕ್ಕೆ ಕಾಯುವುದು ಇದೆಲ್ಲ ಎಂದೂ ಮರೆಯಲಾಗುವುದಿಲ್ಲ. ಬಡತನ, ಬವಣೆ,ಸ್ ಸಂಕಟ ಏನೇ ಇದ್ದರೂ ಅಪ್ಪ ಗಣಪನ ಹಬ್ಬಕ್ಕೆ ಮಾತ್ರ ಯಾವುದೇ ರೀತಿಯಲ್ಲೂ ಕಡಿಮೆ ಮಾಡುತ್ತಿರಲಿಲ್ಲ.  ದೇವರ ಪೂಜೆ, ಅಡಿಗೆ, ನೈವೇದ್ಯ ಎಲ್ಲವೂ ಅಚ್ಚುಕಟ್ಟಾಗಿ ನೆರೆವೇರುತ್ತಿತ್ತು. ಹಬ್ಬವಾದ ನಂತರ ಹೊಟ್ಟೆಗೆ ವನವಾಸ ಹಲವಾರು ಬಾರಿ ಇರುತ್ತಿದ್ದರೂ, ಹಬ್ಬದ ಉತ್ಸಾಹ ನಮ್ಮನ್ನು ಇನ್ನೊಂದಷ್ಟು ವಾರಗಳು ಎಳೆದು ಒಯ್ಯುತ್ತಿದ್ದವು.

ಗಣೇಶನ ಹಬ್ಬ ಕಳೆದು ಒಂದು ತಿಂಗಳಲ್ಲೇ ಬರುತಿತ್ತು ದಸರಾ.  ಮೊದಲ ಅರ್ಧವಾರ್ಷಿಕ ಪರೀಕ್ಷೆ ಮುಗಿದು ಶಾಲೆಗೆ ರಜೆ ಕೊಡುತ್ತಿದ್ದರೂ, ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಪೂರ್ಣವಾಗಿ ಉತ್ತರಿಸುವ ಮನೆಕೆಲಸ ಕೊಡುತ್ತಿದ್ದವರು ಅಧ್ಯಾಪಕರು, ಆದರೂ ಬೆಳಿಗ್ಗೆಯೆಲ್ಲ ಹೊಟ್ಟೆಗೆ ಇರಲಿ ಬಿಡಲಿ, ಮನಸೋ ಇಚ್ಛೆ ಬೀದಿಯಲ್ಲಿ ಆಟವಾಡಿ ಸಂಜೆಯಾದ ಮೇಲೆ ಅಪ್ಪ ಬರುವ ಹೊತ್ತಿಗೆ ಪುಸ್ತಕ ಹಿಡಿದು ಕೂಡುತ್ತಿದ್ದ ದಿನಗಳವು, ಹೇಗೂ, ಶಾಲೆ ಮತ್ತೆ ತೆರೆಯುವಷ್ಟರಲ್ಲಿ ಕೊಟ್ಟ ಮನೆಕೆಲಸವನ್ನು ಪೂರ್ತಿ ಮಾಡಿ ಅಧ್ಯಾಪಕರಿಗೆ ಸಲ್ಲಿಸಿದಾಗ ನಿಟ್ಟುಸಿರು.

ಇದರ ಮಧ್ಯೆ ದಸರಾ ಗೊಂಬೆಗಳ ಕೂರಿಸುವಿಕೆ. ನನ್ನ ಅಜ್ಜಿ ಅಂದರೆ ಅಪ್ಪನ ಅಮ್ಮ.. ದಸರೆಯಲ್ಲಿ ಸರಸ್ವತಿ ಹಬ್ಬದ ದಿನದಿಂದ ಅಂದರೆ ದಸರಾದ ಏಳನೇ ದಿನದಿಂದ ಪಟ್ಟದ ಗೊಂಬೆಯನ್ನು ಕೂರಿಸಿ, ಅದರ ಜೊತೆ ಇನ್ನಷ್ಟು ಬೊಂಬೆಗಳನ್ನು ಇಡುತಿದ್ದುದು ಪದ್ಧತಿ.  ಅಮ್ಮ ಕೂಡ ಅದನ್ನೇ ಅನುಸರಿಸುತ್ತಿದ್ದರು. ನಾವು ದಸರಾದ ಪಾಡ್ಯದ ದಿನದಿಂದಲೇ ಅಮ್ಮನಿಗೆ ದಂಬಾಲು ಬೀಳುತ್ತಿದ್ದೆವು, ಯಾವಾಗ ಗೊಂಬೆ ಕೂರಿಸೋದು ಅಂಥಾ.  ಅಮ್ಮನ ಉತ್ತರ ಒಂದು ವರ್ಷವೂ ಬದಲಾಗುತ್ತಿರಲಿಲ್ಲ, ಅಜ್ಜಿ ಏಳನೇ ದಿನದಿಂದ ಕೂರಿಸುತ್ತಿದ್ದರು, ನಾವು ಹಾಗೆ ಮಾಡೋಣ ಅಂತ.




ಪ್ರತಿವರ್ಷವೂ ಇದೆ ಪ್ರಶ್ನೆ ಅದೇ ಉತ್ತರ.

ಸರಿ, ಬಕ ಪಕ್ಷಿಯ ಹಾಗೆ ಏಳನೇ ದಿನಕ್ಕೆ ಮೊದಲು, ಅಪ್ಪನಿಗೆ ಕಾಡುವುದು, ಪಟ್ಟದ ಬೊಂಬೆಯ ಗಂಡು ಗೊಂಬೆಗೆ ಅಲಂಕಾರ ಮಾಡೋದಕ್ಕೆ. ಅಪ್ಪ ಅದಕ್ಕೆ ಪ್ಯಾಂಟ್, ಉದ್ದನೆ ಅಂಗಿ, ತಲೆಗೆ ಪೇಟ, ಕತ್ತಿಗೆ ಸರ, ಕೈಗೆ ಬಂಗಾರದ ಕಪ್ಪಾ, ಹಣೆಗೆ ಗಂಧ ಇದಿಷ್ಟೂ ಮಾಡುತ್ತಿದ್ದರು, ನಾವೂ ಬೆರಗುಗಣ್ಣುಗಳಿಂದ ನೋಡುತ್ತಿದ್ದೆವು.  ಸರಿ ಸುಮಾರು ಕಪ್ಪಗೆ ಇರುತ್ತಿದ್ದ ಗೊಂಬೆ, ಹಲವಾರು ನಿಮಷಗಳಾದ ಮೇಲೆ ಮಹಾರಾಜನ ಕಳೆ ಬಂದುಬಿಡುತ್ತಿದ್ದುದು ಚಮತ್ಕಾರ ಎನ್ನಿಸುತ್ತಿತ್ತು ನಮಗೆ.

ಹೆಣ್ಣಿನ ಗೊಂಬೆಯನ್ನು ಅಮ್ಮ ಮತ್ತು ಅಕ್ಕ ಜೊತೆಯಾಗಿ ಸಿಂಗರಿಸುತ್ತಿದ್ದರು. ಸೀರೆ, ಕುಪ್ಪಸ, ತಲೆಗೆ ಬೈತಲೆ ಬೊಟ್ಟು, ಕೈಗೆ ಬಳೆ, ಸೊಂಟಕ್ಕೆ ಡಾಬು, ಕತ್ತಿಗೆ ಕರಿಮಣಿ ಸರ {ಕರಿ ಮಣಿ ಸರದ ಬಗ್ಗೆ ಒಂದು ಮಾತು, ಪ್ರತಿವರ್ಷವೂ ಅಮ್ಮ ಸರ ಮಾಡುತ್ತಿದ್ದರು,  ಹಬ್ಬವಾದ ಮೇಲೆ ನಾನು ನನ್ನ ತಮ್ಮ ಆಟವಾಡುವಾಗ ಆ ಸರವನ್ನು ಮಠ ಸೇರಿಸುತ್ತಿದ್ದೆವು :-) ಇನ್ನೂ ಗಂಡು ಗೊಂಬೆಯ ಬಟ್ಟೆ ಬದಲಿಸುತ್ತೇವೆ ಎಂದು ಆಟವಾಡುತ್ತಾ, ಬಟ್ಟೆ ಬದಲಿಸುವ ಬದಲು ಶ್ರವಣಬೆಳಗೊಳ ಮಾಡುತ್ತಿದ್ದೆವು... ಹಾಗಾಗಿ ಪ್ರತಿ ವರ್ಷವೂ ಪಟ್ಟದ ಗೊಂಬೆಗೆ ಹೊಸ ವಸ್ತ್ರ ಮತ್ತು ಹೊಸ ಆಭರಣ.. ನಾವಾದರೂ ಗೊಂಬೆಗಳಾಗಬಾರದಿತ್ತೇ....  :-) }

ಸರಿ ಸಿದ್ಧವಾದ ಪಟ್ಟದ ಗೊಂಬೆಗಳನ್ನು ಕಲಶ ಜೊತೆಯಲ್ಲಿ ಪ್ರತಿಷ್ಠಾಪನೆ ಮಾಡುವಾಗ, ಅಪ್ಪ ನಮ್ಮಿಬ್ಬರನ್ನು ಕರೆದು ಸರಸ್ವತಿ ಹಬ್ಬಕ್ಕೆ ಪುಸ್ತಕ ಇಟ್ಟು ಪೂಜೆ ಮಾಡಬೇಕು.. ಪುಸ್ತಕಗಳನ್ನು ಕೊಡಿ ಎಂದಾಗ.. ನಾನು ನನ್ನ ತಮ್ಮ ಚೀಲದಲ್ಲಿದ್ದ ಪುಸ್ತಗಳನ್ನು ಪೂರ್ತಿ ಕೊಡುತ್ತಿದ್ದೆವು ಕಾರಣ.. ವಿಜಯದಶಮಿ ಮುಗಿಯುವ ತನಕ ಆ ಪುಸ್ತಕವನ್ನು ಮುಟ್ಟುವ ಹಾಗಿಲ್ಲ.. ಓದುವ ತಲೆನೋವಿಲ್ಲ .. ಹೇಗೆ ನಮ್ಮ ಐಡಿಯಾ.. :-)

ಆಯುಧಪೂಜೆ ಬಂದಾಗ ಸಡಗರ ನೂರು ಪಟ್ಟು ಏರುತ್ತಿತ್ತು. ನಮ್ಮ ಹೀರೊ ಅಪ್ಪನ ಹೀರೊ ಸೈಕಲ್ ತೊಳೆದು, ಅಲಂಕರಿಸಿ ಪೂಜೆ ಮಾಡುವ ಸಡಗರ.

ಮುಂದಿನ ಚಕ್ರ ನಿನ್ನದು, ಹಿಂದಿನ ಚಕ್ರ ನನ್ನದು.. (ಅರೆ ಗುರುಶಿಷ್ಯರು ಚಿತ್ರದ ಸಂಭಾಷಣೆ ನೆನಪಿಗೆ ಬಂತೆ.. ಈ ಕಾಲು ನನ್ನದು ಆ ಕಾಲು ನಿನ್ನದು  ಅಂಥಾ.. ಒಂಥರಾ ಹಾಗೆ). ಸರಿ ಸೈಕಲನ್ನು ಭಾಗ ಮಾಡಿಕೊಂಡ ಮೇಲೆ, ಶ್ರದ್ಧೆಯಿಂದ ಒಂದು ಚೂರು ಕೊಳೆ ಇಲ್ಲದ ಹಾಗೆ ಲಕ ಲಕ ಹೊಳೆವಂತೆ ತೊಳೆದು, ನಂತರ ಅಮ್ಮನನ್ನು ಕಾಡಿಬೇಡಿ ಇಪ್ಪತ್ತು ಮೂವತ್ತು ಪೈಸೆಗಳಿಗೆ ಬಣ್ಣ ಬಣ್ಣದ ಕಾಗದಗಳನ್ನು ತರುತ್ತಿದ್ದೆವು, ಅಣ್ಣ ಅಂದರೆ ನನ್ನ ಅಗ್ರಜ ಅದನ್ನು ವಿವಿಧ ವಿನ್ಯಾಸಗಳಲ್ಲಿ ಕತ್ತರಿಸಿ ಸುಂದರವಾಗಿ ಮಾಡಿಕೊಡುತ್ತಿದ್ದ..  ನಾವು ಅದನ್ನು ಕಪಿಗಳಂತೆ ಮನಸ್ಸಿಗೆ ಬಂದಂತೆ ಚಿತ್ರ ವಿಚಿತ್ರವಾಗಿ ಸೈಕಲ್ ಚಕ್ರ, ಹ್ಯಾಂಡಲ್, ಪೆಡಲ್, ಸೀಟು, ಕ್ಯಾರಿಯರ್, ಮುಂದಿನ ರಿಮ್, ಹೀಗೆ ಜಾಗವೇ ಇಲ್ಲದಂತೆ ಬಣ್ಣ ಬಣ್ಣದ ಕಾಗದಗಳಿಂದ ಅಲಂಕಾರ ನೆಡೆಯುತ್ತಿತ್ತು.. ಅಪ್ಪನಿಂದ ವಿಭೂತಿ ತೆಗೆದುಕೊಂಡು, ನಾವು ಸ್ನಾನ ಮಾಡಿರಲಿ, ಇಲ್ಲದಿರಲಿ, ಆ ಕರಿ ಸೈಕಲ್ ಗೆ ಬಿಳಿ ಬಿಳಿ ಪಟ್ಟೆ ಎಲ್ಲಿ ನೋಡಿದರೂ ಕಾಣುವಂತೆ ಬಳಿದುಬಿಡುತ್ತಿದ್ದೆವು. 

ಅಪ್ಪ, ಒಂದು ಚೂರು ಬೇಸರವಿಲ್ಲದೆ, ನಮ್ಮಿಬ್ಬರ ಬೆನ್ನು ತಟ್ಟಿ ಪೂಜೆ ಮಾಡಿ, ಸೈಕಲ್ ತಗೊಂಡು ಒಂದು  ರೌಂಡ್ ಹೋಗಿ ಬರುತ್ತಿದ್ದರು. ನಮಗೆ ಅದೇ ಖುಷಿ.. ಅವರು ಸೈಕಲಿಂದ ಇಳಿದರೆ, ಕೈಗೆ ಮೈಗೆ ಎಲ್ಲಾ ವಿಭೂತಿ ಪಟ್ಟೆಗಳು ಹತ್ತಿಕೊಂಡಿರುತ್ತಿದ್ದವು, ಜೊತೆಯಲ್ಲಿ ಅವರ ಬಟ್ಟೆಗೂ ಕೂಡ ಹಹಹಹಹಹಹಃ

ಪಾಪ, ಸೈಕಲ್ ಹ್ಯಾಂಡಲ್ ಹಿಡಿಕೊಳ್ಳುವ ಜಾಗದಲ್ಲೂ ಬಣ್ಣ ಬಣ್ಣದ ಕಾಗದಗಳು ಮಿಂಚುತ್ತಿರುತ್ತಿದ್ದವು. ಹಾಗೆ ಅವರು ಒಂದೆರಡು ದಿನ ಅವರ ಆಫೀಸ್ ಗೂ ಹೋಗುತ್ತಿದ್ದರು.  ಗಾಳಿಗೆ, ಮಳೆಗೆ ಆ ಕಾಗದಗಳು ಬಣ್ಣ ಕಳೆದುಕೊಂಡು, ನಾವು ಹಚ್ಚಿದ್ದ ಗೋಂದು ಸಡಿಲವಾಗಿ ದಾರಿಯಲ್ಲೆಲ್ಲ ಹಾರಾಡಿ ಹೋಗುತ್ತಿದ್ದವು, ಒಂದು ವಾರದನಂತರ ಅಪ್ಪನ ಸೈಕಲ್ ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತಿತು. ನಮಗೆ ಆಗ ಅನ್ನಿಸುತ್ತಿತ್ತು ಬಹುಶಃ ಸೈಕಲ್ ಕೂಡ ನಾವು ಮಾಡುವ ಸಿಂಗಾರಕ್ಕೆ ಕಾಯುತ್ತಿತ್ತೇನೋ!

ಇರಲಿ, ಇಂದು, ಬೈಕ್ ಇದೆ,  ಕಾರು ಇದೆ.. ಲಕ್ಷ ಲಕ್ಷ ಬೆಲೆಬಾಳುತ್ತದೆ, ಆದರೆ ಅಂದಿನ ಏಳುನೂರು ಎಂಟುನೂರು ಸೈಕಲ್ಲಿನ ಅಲಂಕಾರ, ಅದರ ಜೊತೆಗಿನ ಒಡನಾಟ, ಪೂಜೆ ಆದ ಮೇಲೆ ಅಪ್ಪ ನಮ್ಮ ಕಡೆ ಕೊಡುತ್ತಿದ್ದ ಆ ಅಭಿಮಾನ ತುಂಬಿದ ನೋಟ, ಬೇಸರವಿಲ್ಲದೆ, ನಾವು ಮಾಡಿದ ಅಲಂಕಾರವನ್ನು ಮೆಚ್ಚಿಕೊಂಡು, ಆ ವಾಹನಕ್ಕೆ ಪೂಜೆ ಮಾಡುತ್ತಿದ್ದ ಪರಿ ಎಲ್ಲವೂ ಮನಃಪಟಲದಲ್ಲಿ ಸದಾ ಅಚ್ಚಾಗಿ ನಿಂತಿದೆ.

ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯದ ದಿನ ಅಂದರೆ, ಕರುನಾಡಿನ ಜನತೆಗೆ ದಸರಾ ಸಂಭ್ರಮ.. ನಮಗೆ ಅಪ್ಪನ ಜನುಮದಿನ. ಖಚಿತ ದಿನಾಂಕ ಗೊತ್ತಿರದೆ ಇದ್ದರೂ ನಮ್ಮ ಅಜ್ಜಿ ಹೇಳುತ್ತಿದ್ದದು ಪಾಡ್ಯದ ದಿನವೇ ಮಂಜಣ್ಣನ ಹುಟ್ಟು ಹಬ್ಬ ಎಂದು.. ಅದೇ ನಾವೂ ಪಾಲಿಸಿಕೊಂಡು ಬಂದಿದ್ದೇವೆ.
ನನ್ನ ಆತ್ಮದ ಮಾಲೀಕನಿಗೆ ಇಂದು ಜನುಮದಿನ.. !
ಈ ಬರಹದ ಮೂಲಕ ಬಾಲ್ಯದ ದಿನಕ್ಕೆ ಮತ್ತೆ ನನ್ನನ್ನು ಕರೆದುಕೊಂಡು ಹೋದ ಅಪ್ಪನ ನೆನಪು ತಂದ ಸಂಭ್ರಮ ಮರೆಯಲಾಗದ್ದು..

ಅಣ್ಣಾ ಜನುಮದಿನದ ಶುಭಾಶಯಗಳು ನಿಮಗೆ.. ನನ್ನೊಳಗೆ ಇರುವ ಚೇತನ ನೀವು.. ನನ್ನ ಮೂಲಕ ನೀವು ಹೇಳುವ ವಿಚಾರವನ್ನು ನನ್ನ ಸಹ ಓದುಗರಿಗೆ ತಲುಪಿಸುವ ಕೆಲಸ ಮಾತ್ರ ನನ್ನದು.. ನೆನಪು ತರುವ ಸಂಭ್ರಮ ಇಂದಿಗೂ ಅಮರ ಮಧುರ. 

6 comments:

  1. ಈ ಬರಹಕ್ಕೆ ಭಾಗ ಭಾಗ ತುಂಡು ಹಾಕೇ ಕಮೆಂಟ್ ಬರೆಯಬೇಕು. ಅಷ್ಟು ಸರಕಿದೆ!

    ಮೊದಲು, ನಿಮ್ಮ ಮನೆ ಮಂದಿಗೆಲ್ಲ ದಸರಾ ಶುಭಾಶಯಗಳು.

    ೧. ಬಡತನದಲ್ಲೂ ಗಣಪತಿ ಬರುವಿಕೆಗಾಗಿ ಸಜ್ಜಾಗುತ್ತಿದ್ದ ಮನೆ ಮತ್ತು ಆಚರಿಸುತ್ತಿದ್ದ height of interest ಬಹಳ ಖುಷಿ ಕೊಟ್ಟಿತು.

    ೨. ದಸರಾ ರಜೆಗಳನ್ನು ನಾನೂ ಉಡಾಯಿಸುತ್ತಿದ್ದೆ ನಿಮ್ಮಂತೆಯೇ ಸಾರ್! ಊರು ಪೂರ ನನ್ನದೇ ತರಲೆ!

    ೩. ನಮ್ಮ ಮನೆತನದಲ್ಲಿ ಗೊಂಬೆ ಕೂಡಿಸೋ ಪದ್ಧತಿ ಇಲ್ಲ. ಹಾಗಾಗಿ ತಾವು ಕೊಟ್ಟ ವಿವರಗಳು ಬಹಳ ಮಾಹಿತಿ ಪೂರ್ಣವಾಗಿವೆ.

    ೪. ಅಂದು ಮನೆಯ ಸಾರಿಗೆ ಪ್ರತಿಷ್ಠೆಯಾಗಿದ್ದ ಸೈಕಲನ್ನು ಲಕಲಕ ತೊಳೆದು, ವಿವಿಧವಾಗಿ ಸಿಂಗರಿಸಿ ಊರು ಮೆರವಣಿಗೆ ಹೋಗಿಬರುವ ಸನ್ನಿವೇಸಲಶವು ಸಾದೃಶ್ಯವಾಗಿದೆ.
    ಇಂದು ಮನೆಯಲ್ಲಿ ಹಲವು ಆಧುನಿಕ ವಾಹನಗಳಿದ್ದರೂ, ಬಾಲ್ಯದ ಆ ಸಂಭ್ರಮ ಮರೆಯಲಾರದ್ದು.

    ೫. ಅಪ್ಪನ ಜನುಮದಿನ ಮತ್ತು ಅದು ತಳಕು ಹಾಕಿಕೊಂಡಿರುವ ಪಂಚಾಗದ ದಿನ ಎರಡನ್ನೂ ತಾವು ಕಟ್ಟಿಕೊಟ್ಟ ಪರಿಯಲ್ಲೇ ಮನಗೆಲ್ಲುತ್ತವೆ. ಅವರೆಲ್ಲೇ ನೆಲಸಿರಲಿ ಅನುಕ್ಷಣ ನಿಮ್ಮನ್ನು ಹರಸುತ್ತಲೇ ಇರುತ್ತಾರೆ.

    Over all, well penned from heart.

    ReplyDelete
    Replies
    1. ಸೂಪರ್ ಪ್ರತಿಕ್ರಿಯೆ ಸರ್ಜಿ

      ಬಾಲ್ಯ ಒಂದು ಮಜಾ ಕೊಡುವ ಲೋಕ.. ಮತ್ತಷ್ಟು ಮೊಗೆದಷ್ಟು ಬರುತ್ತಲೇ ಇರುತ್ತದೆ

      ನೀವು ಪಟ್ಟಿ ಮಾಡಿದ ಎಲ್ಲಾ ವಿಷಯಗಳು ಸರಿಯೇ.. ಧನ್ಯವಾದಗಳು

      Delete
  2. ನಿಮ್ಮ ಮನೆಯ ಗಣಪತಿ ಹಬ್ಬದ ಹಾಗೆ ನಮ್ಮ ಮನೆಯ ಗಣಪತಿ ಹಬ್ಬಕ್ಕೆ ನಾವು ಕಾಯ್ತಾ ಇದ್ವಿ, ಅದರಲ್ಲೂ ಅಮ್ಮ ಮಾಡ್ತಿದ್ದ ಕಾಯಿ ಕಡುಬುಗಾಗಿ ಕಾಯುವಿಕೆ ಇನ್ನು ಜಾಸ್ತಿ. ಮೊದಲಿನ ಜನ ಹಬ್ಬಗಳನ್ನು ಆಚರಿಸುವುದಕ್ಕೆ ಇದು ಒಂದು ಕಾರಣ ಅನ್ಸುತ್ತೆ, ನೆನಪುಗಳನ್ನು ಮಾಡಲು. ನಿಮ್ಮ ಬರಹ ನಮ್ಮ ನೆನಪುಗಳಿಗೂ ಜೀವ ನೀಡಿತು. ನಿಮ್ಮ ಸುಂದರವಾದ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧ್ಯನವಾದ. ಹಾಗೆ ನಿಮ್ಮ ತಂದೆಯವರಿಗೆ ಒಂದು ಹ್ಯಾಪಿ ಹ್ಯಾಪಿ ಬರ್ತಡೆ... ಅವರ ಆಶ್ರಿವಾದ ನಿಮ್ಮ ಮೇಲೆ ಸಾದಾ ಇರಲಿ

    ReplyDelete
    Replies
    1. ಆಹಾ.. ಸೂಪರ್ ಸಿಬಿ

      ಬಾಲ್ಯದ ದಿನಗಳನ್ನು ನೆನೆದಷ್ಟು ದಟ್ಟವಾಗುತ್ತದೆ.

      ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  3. ದಸರೆಯ ಸಂಭ್ರಮವನ್ನು ಹಾಗು ನಿಮ್ಮ ತಂದೆಯ ವಾತ್ಸಲ್ಯವನ್ನು ಬಿಂಬಿಸುವ ನಿಮ್ಮ ಲೇಖನ ತುಂಬ ಸೊಗಸಾಗಿದೆ. ಅಭಿನಂದನೆಗಳು.

    ReplyDelete
    Replies
    1. ಗುರುಗಳೇ ಅನಂತ ವಂದನೆಗಳು
      ಓದಿ ಪ್ರತಿಕ್ರಿಯೆ ರೂಪದಲ್ಲಿ ಆಶೀರ್ವದಿಸಿದ ನಿಮಗೆ ಧನ್ಯವಾದಗಳು

      Delete