"ಗುರು ಇವತ್ತು ಒಂದು ಸಿನಿಮಾಕ್ಕೆ ಹೋಗೋಣ?"
"ಯಾವ ಸಿನಿಮಾ?"..
"ಕತ್ರಿಗುಪ್ಪೆಯ ಕಾಮಾಕ್ಯ ಚಿತ್ರಮಂದಿರದಲ್ಲಿ "ಈವಿಲ್ ಡೆಡ್ ಭಾಗ ಮೂರು" ಇದೆ
"ಸರಿ ಹಂಗಾದ್ರೆ ಒಂದು ಆಲೋಚನೆ..ಈಗ ಸಮಯ ಸಂಜೆ ಆರುವರೆ.. ಎರಡನೇ ಆಟಕ್ಕೆ (ಸೆಕೆಂಡ್ ಶೋ) ಹೋಗಿ ಸಿನೆಮಾ ಮುಗಿದ ಮೇಲೆ ಯಾವುದಾದರೂ ದಾಬಕ್ಕೆ ಹೋಗಿ ಊಟ ಮಾಡಿ ನಂತರ ಮನೆಗೆ ಹೋಗುವ ಏನಂತೀರ"
"ಸೂಪರ್ ಐಡಿಯಾ ಗುರು!.. ಇರು ನಮ್ಮ ಹುಡುಗರಿಗೆ ಫೋನ್ ಮಾಡ್ತೀನಿ ಎಲ್ಲರೂ ಹೋಗುವ!
ಇದು ೧೯೯೯ ಏಪ್ರಿಲ್ ತಿಂಗಳಲ್ಲಿ ನಾನು ಕೆಲಸ ಮಾಡುತ್ತಿದ್ದ ಪೀಣ್ಯ ಬಳಿಯ ಒಂದು ಆಫೀಸ್ ನಲ್ಲಿ ನಡೆದ ಒಂದು ಸಂಭಾಷಣೆ!
ಎಲ್ಲರ ಹತ್ತಿರ ಗಾಡಿ ಇತ್ತು ನಾನು, ಸತೀಶ, ಶ್ರೀಕಂಠ ಮೂರ್ತಿ, ಆಡಿಟರ್ ಮೂರ್ತಿ, ಚಂದ್ರು .. ಸುಮಾರು ಏಳು ಘಂಟೆಗೆ ಅಲ್ಲಿಂದ ಹೊರಟೆವು
ಆಗ ವಾಹನ ದಟ್ಟನೆ ಇಷ್ಟೊಂದು ಇರಲಿಲ್ಲಾವಾದ್ದರಿಂದ ಸುಲಭವಾಗಿ ಸುಮಾರು ಏಳು ಮುಕ್ಕಾಲು ಅಷ್ಟರ ಹೊತ್ತಿಗೆ ಕಾಮಾಕ್ಯ ಮುಂದೆ ತಲುಪಿದೆವು. ಶೋ ರಾತ್ರಿ ೯.೧೫ಗೆ ಇತ್ತು. ಸರಿ ಅಲ್ಲೇ ಕುಳಿತು ಪಾನಿ ಪುರಿ ಮಸಾಲೆ ಪುರಿ ಅಂತ ತಿಂದು ಸಮಯ
ಕಳೆದೆವು.
ಚಿತ್ರಕೃಪೆ - ಅಂತರ್ಜಾಲ |
ಚಿತ್ರಕೃಪೆ - ಅಂತರ್ಜಾಲ |
ಈಗ ಬೆಳೆದು ದೊಡ್ದವರಾಗಿದ್ದೆವು ಭಾಗ ಒಂದು -ಎರಡು ಎರಡನ್ನು ನೋಡಿರದ ನಾನು.. ಸ್ವಲ್ಪ ಧೈರ್ಯ ಪ್ರದರ್ಶನ ಮಾಡುವ ಎಂದು ಮೂರನೇ ಭಾಗ ಸೆಕೆಂಡ್ ಶೋ ನೋಡಿಯೇ ಬಿಡೋಣ ಎಂದು ನಿರ್ಧರಿಸಿ ಗೆಳೆಯರನ್ನೆಲ್ಲ ಕೂಡಿಕೊಂಡು ಕಾಮಾಕ್ಯ ಚಿತ್ರಮಂದಿರದಲ್ಲಿ ಉಸಿರು ಬಿಗಿ ಹಿಡಿದು ಕೂತಿದ್ದೆವು. ತೊಂಭತ್ತರ ದಶಕದಲ್ಲಿ ಕಾಮಾಕ್ಯ ಚಿತ್ರಮಂದಿರ ಅಮೋಘ ಸೌಂಡ್ ಸಿಸ್ಟಮ್ ನಿಂದ ಹೆಸರು ಮಾಡಿದ್ದ ಚಿತ್ರಮಂದಿರ.
ಇಂಗ್ಲಿಷ್ ಸಿನಿಮಾಗಳ ಅವಧಿ ಒಂದು ಘಂಟೆ ಆಸು ಪಾಸಿನಲ್ಲೇ ಮುಗಿಯುವ ಚಿತ್ರಗಳಾದ್ದರಿಂದ ನಮ್ಮ ದಾಬ ಕಾರ್ಯಕ್ರಮಕ್ಕೆ ಏನು ಅಡಚಣೆ ಇರಲಿಲ್ಲ.
ಸಿನೆಮಾ ಶುರುವಾಯಿತು. ಭಯಾನಕ ದೃಶ್ಯಗಳು , ಎದೆ ಜಿಲ್ ಎನಿಸುವ ಸೌಂಡ್, ಕ್ಯಾಮೆರ ಕೆಲಸ ಎಲ್ಲವು ಎದೆ ನಡುಕವನ್ನು ಹೆಚ್ಚಿಸಿದ್ದವು. ಒಂದು ಕ್ಷಣಕ್ಕೆ ಮಾಡಿದ ನಿರ್ಧಾರ ತಪ್ಪು ಎನ್ನಿಸಿದ್ದರೂ ಆ ಹರಯದ ಮರ್ಕಟ ಮನಸ್ಸು ತಕ್ಷಣಕ್ಕೆ ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಸರಿ ನೋಡಿಯೇ ಬಿಡೋಣ ಅಂತ ಪೂರ ಚಿತ್ರ ನೋಡಿ ಹೊರಬಂದೆವು. ಎಲ್ಲರ ಮುಖವೂ ಕರೆಂಟ್ ಹೊಡಿಸಿಕೊಂಡ ಕಾಗೆಯ ಹಾಗೆ ಆಗಿತ್ತು. (ಕೆಲವರ್ಷಗಳ ನಂತರ ಈವಿಲ್ ಡೆಡ್ ಭಾಗ ಒಂದು ಮತ್ತು ಎರಡು ನೋಡಿದ ಮೇಲೆ ಮೂರನೇ ಭಾಗ ಒಂದು ತಮಾಷೆ ಚಿತ್ರದಂತೆ ಕಂಡಿತ್ತು)
ಚಿತ್ರಕೃಪೆ - ಅಂತರ್ಜಾಲ |
ಕಡೆಗೆ ಒಕ್ಕುರುಲಿನಿಂದ ನೆಡೆಯಿರೋ ದಾಬಕ್ಕೆ ಹೋಗೋಣ.. ಹೊಟ್ಟೆ ಹಸಿತ ಇದೆ ಅಂತ ನಿರ್ಧಾರ ಮಾಡಿ.. ಧೈರ್ಯದ ಮುಖವಾಡ ಹೊತ್ತು ಬನ್ನೇರುಘಟ್ಟದ ರಸ್ತೆಯಲ್ಲಿದ್ದ ದಾಬ ಕಡೆ ಹೊರಟೆವು.
ಸುಮ್ಮನೆ ಮೇಲುನೋಟಕ್ಕೆ ತಮಾಷೆ ಮಾತಾಡುತ್ತಿದ್ದರೂ ಎಲ್ಲರಿಗೂ ಹೇಗಪ್ಪ ಮನೆ ಸೇರುವುದು ಎನ್ನುವ ಭಯ ಕಾಡುತ್ತಲೇ ಇತ್ತು. ದೆವ್ವದ ಸಿನಿಮಾ ನೋಡಿ, ಮಧ್ಯ ರಾತ್ರಿಯಲ್ಲಿ ಹೇಗೆ ಹೋಗುವುದು, ದಾರಿಯಲ್ಲಿ ಏನೂ ಸಿಗುತ್ತೋ ಏನೋ ಎನ್ನುವ ಭೀತಿ ಕಾಡುತ್ತಲೇ ಇತ್ತು.
ಹೊಟ್ಟೆಬಾಕರಾದ ನಾವೆಲ್ಲಾ ಏನೂ ಜಾಸ್ತಿ ತಿನ್ನದೇ ಆದಷ್ಟು ಬೇಗ ಮನೆಗೆ ಹೋಗಿ ಬಿದ್ದರೆ ಸಾಕು ಎನ್ನುವ ಹಾಗೆ ಇತ್ತು. ಆದ್ರೆ ಸೋಗಿನ ಮುಖವಾದ ಧರಿಸಿದ್ದ ಕಾರಣ ಹಾಗೆ ಮಾಡುವಂತಿರಲಿಲ್ಲ :-)
ಆಡಿಟರ್ ಮೂರ್ತಿ ಮನೆ ಬನ್ನೇರುಘಟ್ಟದ ರಸ್ತೆಯಲ್ಲಿ ಇತ್ತು ಅವನನ್ನು ಮನೆ ಹತ್ತಿರ ಬಿಟ್ಟು ಮಿಕ್ಕವರು ಹೊರಟೆವು.
ನಾನು ಸತೀಶನಿಗೆ ಹೇಳಿದೆ "ಗುರು ಇವತ್ತು ನೀನು ನಮ್ಮ ಮನೆಗೆ (ವಿಜಯನಗರ) ಬಂದು ಬಿಡು.. ಬೆಳಿಗ್ಗೆ ಹೋಗುವಂತೆ" (ಯಾಕೆ ಹೀಗೆ ಹೇಳಿದೆ.... ಅದಕ್ಕೆ ಕಾರಣ ಬೇಕಿಲ್ಲ ಅಲ್ಲವೇ ಹ ಹ ಹ!)
ಸತೀಶ್ "ಲೋ ಕಾಂತ... ಏನು ಯೋಚನೆ ಬೇಡ ನಿನ್ನ ಮನೆಯ ತನಕ ಬಂದು ನಾನು ನಮ್ಮ ಮನೆಗೆ ಹೋಗುತ್ತೇನೆ" ಎಂದ (ಅವನ ಮನೆ ಮಾಗಡಿ ರಸ್ತೆಯ ತಾವರೆಕೆರೆ). ನನಗೆ ತುಸು ಧೈರ್ಯ ಬಂತು ಕಾರಣ ಅವನ ಮನೆಗೆ ಹೋಗಬೇಕಾದರೆ ನಮ್ಮ ಮನೆಯ ರಸ್ತೆಯಲ್ಲೇ ಹೋಗಬೇಕಿತ್ತು.
ಶ್ರೀಕಂಠ ಮೂರ್ತಿ ಮನೆ ಶ್ರೀನಿವಾಸನಗರದಲ್ಲಿತ್ತು. ಅವನನ್ನು ಬೀಳ್ಕೊಟ್ಟು ನಾನು, ಚಂದ್ರ, ಸತೀಶ ಹೊರಟೆವು. ಪುಕ್ಕಲ ಚಂದ್ರ.. ಗುರು ನಾನು ಇವತ್ತು ಶ್ರೀಕಂಠ ಮೂರ್ತಿ ಮನೆಯಲ್ಲಿ ಇರುತ್ತೇನೆ ನೀವು ಹೋಗಿ ಅಂತ ಹೇಳಿ ನಾವು ಮಾತಾಡುವ ಮುಂಚೆನೇ ಗಾಡಿ ತಿರುಗಿಸಿಕೊಂಡು ಹೊರಟು ಬಿಟ್ಟ.
ನಾನು ಸತೀಶ ಇಬ್ಬರೂ ಅವನನ್ನು ಮನಸಾರೆ "ಕಳ್ಳ.. ಪುಕ್ಕಲ, ಹೇಡಿ" ಅಂತೆಲ್ಲ ಬಯ್ದುಕೊಂಡು ಹೊರಟೆವು. ನನಗೆ ಭಯದ ಹೊಗೆ ಕಾಡುತ್ತಿತ್ತು. ಈ ಸತೀಶ ಕೈ ಕೊಟ್ಟರೆ ಏನು ಮಾಡೋದು ಅಂತ.
ಸತೀಶ "ಕಾಂತ ಏನೂ ಯೋಚನೆ ಮಾಡಬೇಡ.. ನಾನು ಬರ್ತೇನೆ ನಿನ್ನ ಜೊತೆ" ಅಂತ ಹೇಳಿದ.
ಸರಿ ಶ್ರೀನಿವಾಸ ನಗರದಿಂದ ವಿಜಯನಗರಕ್ಕೆ ಹನುಮಂತನಗರದ ಐವತ್ತು ಅಡಿರಸ್ತೆಯಲ್ಲಿ ಹೋಗುತ್ತಿದ್ದೆವು.
"ಕಾಂತ.. ಯಾಕೋ ನಮ್ಮ ಹುಡುಗರು ನೆನಪಾಗುತ್ತಿದ್ದಾರೆ. ನಿರ್ಮಲ ಸ್ಟೋರ್ಸ್ ಹತ್ತಿರ ಇರುವ ಕಗ್ಗಿಸ್ ಬೇಕರಿಯ ಹತ್ತಿರ ರೂಂನಲ್ಲಿ ಇದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ. ನೀನು ಇಲ್ಲೇ ಇದ್ದು ಬಿಡು ಬೆಳಿಗ್ಗೆ ಹೋಗುವಂತೆ" ಅಂತ ಸತೀಶ ಅಂದ.
ನನಗೆ ನಡುರಾತ್ರಿ ಕೋಪ ಬಂದರೂ ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ "ಲೋ.... ಹೋಗೋ ನೀನಿಲ್ಲದೆ ಹೋದರೆ.... ನಾನು ಮನೆಗೆ ಹೋಗೋಕೆ ಆಗೋಲ್ವಾ. ಒಬ್ಬನೇ ಹೋಗುತ್ತೇನೆ ಬಿಡು.. ಅಂತ ಗಾಡಿ ಸ್ಟಾರ್ಟ್ ಮಾಡಿದೆ. (ಗಾಡಿ ಗಡ ಗಡ ಎನುತ್ತಿತ್ತು.. ನನ್ನ ಬಾಡಿ ಕೂಡ ಮುಂದಿನ ಸೀನ್ ಬಗ್ಗೆ ನೆನೆದು ನಡುಗುತ್ತಿತ್ತು)
ಸಮಯ ನಡುರಾತ್ರಿ ಸುಮಾರು ಒಂದೂವರೆ ಘಂಟೆಯಾಗಿತ್ತು. ಗೆಳೆಯರೆಲ್ಲರೂ ನಾನಾ ಕಾರಣಗಳಿಂದ ಅವರವರ ಸುರಕ್ಷಿತ ಜಾಗಗಳನ್ನು ಸೇರಿಯಾಗಿತ್ತು (ಮಾರನೆ ದಿನ ಅವರನ್ನೆಲ್ಲಾ ಸರಿಯಾಗಿ ವಿಚಾರಿಸಿಕೊಂಡೆ ಅದು ಬೇರೆ ಕಥೆ).
ನಾನೊಬ್ಬನೇ ನಡುರಾತ್ರಿಯಲ್ಲಿ!
ನಿರ್ಮಲ ಸ್ಟೋರ್ಸ್ ನಿಂದ ನಿಧಾನವಾಗಿ ಗಾಡಿ ಓಡಿಸುತ್ತಾ ಗಾಯತ್ರಿ ಜಪ ಮಾಡುತ್ತಾ ಹೊರಟೆ. (ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿ ಮಧ್ಯೆ ರಾತ್ರಿಯಲ್ಲಿ ಒಬ್ಬನೇ ಹೊರಗಿದ್ದದ್ದು ಅದೇ ಮೊದಲು). ಗಾಳಿ ತುಸು ಮೆಲ್ಲನೆ ಬೀಸುತ್ತಿತ್ತು. ನಿರ್ಮಲ ವಾತಾವರಣ. ಸೂಜಿ ಬಿದ್ದರೂ ಸದ್ದು ಕೇಳಿಸಬಹುದೇನೋ ಅನ್ನುವಷ್ಟು ನಿಶ್ಯಬ್ಧ ವಾತಾವರಣ. ಮೈಯಲ್ಲಿ ತುಸು ನಡುಕ. ನನ್ನ ಬಣ್ಣಕ್ಕಿಂತಲೂ ಕಪ್ಪಾಗಿತ್ತು ಆ ರಾತ್ರಿ!
ಸಿನಿಮಾದಲ್ಲಿ ನೋಡಿದ ಭೂತಗಳು ಕಣ್ಣ ಮುಂದೆ ಅಕ್ಕ ಪಕ್ಕದಲ್ಲಿ ಸುಳಿದಾಡುತ್ತಿರುವ ಹಾಗೆ ಅನ್ನಿಸುತಿತ್ತು. ಗಾಯತ್ರಿ ಮಂತ್ರ ತಾರಕಕ್ಕೆ ಏರುತಿತ್ತು. ಮಧ್ಯೆ ಮಧ್ಯೆ ಭಯದ ಕಾರಣ ಮರೆತು ಹೋಗುತ್ತಿತ್ತು. ಮತ್ತೆ ನೆನಪಿಸಿಕೊಂಡು ಜಪ ಶುರುವಾಗುತ್ತಿತ್ತು. (ಉಪನಯನವಾದಾಗ ಗುರುಗಳು ಹೇಳಿಕೊಟ್ಟಿದ್ದರು.. ಬೇಸರವಾದಾಗ, ಭಯವಾದಾಗ, ಏನೂ ಮಾಡಲು ತೋಚದಾದಾಗ ಗಾಯತ್ರಿ ಮಂತ್ರ ನೆನಪಿಸಿಕೋ ಅಂತ)
ಮಂತ್ರವನ್ನು ಅದೆಷ್ಟು ಬಾರಿ ಹೇಳಿಕೊಂಡೇನೋ ಅರಿವಿಲ್ಲ.. ಅನತಿ ದೂರದಲ್ಲಿ ಒಂದು ಲಾರಿ ಸಾಗುತಿತ್ತು. ಸರಿ ಅದರ ಹಿಂದೆಯೇ ಹೋಗೋಣ ಅಂತ ಹೋಗುತ್ತಿದ್ದೆ.
ನನ್ನ ಹಣೆಬರಹ.. ಆ ಲಾರಿ ಸ್ವಲ್ಪ ದೂರ ಸಾಗಿ ಒಂದು ಕಟ್ಟುತ್ತಿದ್ದ ಕಟ್ಟಡದ ಬಳಿ ನಿಂತು ಬಿಟ್ಟಿತು.
ಗೆಳೆಯರನ್ನೆಲ್ಲ ಬಯ್ದುಕೊಂಡು, ಪ್ರಾಯಶಃ ನನ್ನ ನಿರ್ಧಾರ ತಪ್ಪಾಯಿತು. ಮೊದಲು ಸಿನೆಮಾಕ್ಕೆ ಹೋಗಬಾರದಿತ್ತು, ನಂತರ ದಾಬದ ಊಟ, ಕಡೆ ಪಕ್ಷ ಗೆಳೆಯರ ಮನೆಯಲ್ಲೇ ಉಳಿದುಬಿಡಬೇಕಿತ್ತು.. ಛೆ ನನ್ನ ಅವಿವೇಕತನ.. ಹೀಗೆ ನನ್ನನ್ನೇ ಹಳಿದುಕೊಳ್ಳುತ್ತಾ ಗಿರಿನಗರ ತಲುಪಿದೆ. ಅಲ್ಲಿಂದ ಹೊಸಕೆರೆಹಳ್ಳಿ ಕ್ರಾಸ್ ರಸ್ತೆಯಲ್ಲಿ ಸಾಗಿದರೆ ಮೈಸೂರು ರಸ್ತೆ ಸಿಗುತ್ತಿತ್ತು. ಅಲ್ಲಿಂದ ವಿಜಯನಗರದ ಮನೆ ಕೇವಲ ಎರಡು ಕಿ.ಮಿ.ಗಳು.
ವಿಧಿಯಿಲ್ಲ.. ಬೇರೆ ದಾರಿ ಕಾಣದ ಮುಂದುವರೆದೆ. ದೆವ್ವಗಳು ಮರದ ಮೇಲೆ ಕೂತು ನನ್ನ ಕಡೆ ಕೈ ತೋರಿಸಿ ಕುಹಕ ನಗೆ ಬೀರಿದಂತೆ ಕಂಡಿತು. ಜಪ ಜೋರಾಯಿತು.. ಇನ್ನಷ್ಟು ದೆವ್ವಗಳು ದಾರಿಯಲ್ಲಿ ನನ್ನ ಹೆಸರು ಕೂಗಿದಂತೆ ಭಾಸವಾಯಿತು.
ಢವಗುಟ್ಟುವ ಎದೆಯ ಬಡಿತ ಜೊತೆಯಲ್ಲಿ ಮುಂದೆ ಸಾಗಿದೆ. ಮೈ ಬೆವರಲು ಶುರುವಾಯಿತು, ಕೈ ನಡುಕ ಹತ್ತಿತು, ಕಾಲುಗಳು ಅದುರಲು ಶುರುಮಾಡಿದವು. ಭಯದಿಂದ ನೀರು ಆವಿಯಾದ ತುಟಿಗಳು ಜಪ ಮಾಡಲು ನಿರಾಕರಿಸಿದವು. ಸುಮಾರು ೫೦ ಮೀಟರುಗಳಷ್ಟು ದೂರದಲ್ಲಿ ಹತ್ತಾರು ದೇಹಗಳು ಕೈಯಲ್ಲಿ ಬಲೂನ್ ಹಿಡಿದು ಕೇಕೆ ಹಾಕುತ್ತ, ಕುಣಿಯುತ್ತಾ ಬರುತಿದ್ದವು.
"ಅಯ್ಯೋ ದೇವರೇ. ನನ್ನ ಅವಿವೇಕವನ್ನು ಮನ್ನಿಸಿಬಿಡು. ಈ ದೆವ್ವಗಳಿಂದ ನನ್ನನ್ನು ರಕ್ಷಿಸು" ಎಂದು ಬೇಡಿಕೊಳ್ಳುತ್ತಾ ನಿಧಾನವಾಗಿ ಮುಂದುವರೆದೆ. ನನ್ನ ಕಡೆ ವಕ್ರ ದೃಷ್ಟಿ ಬೀರುತ್ತಾ, ಹಲ್ಲು ಕಿರಿಯುತ್ತಾ, ಕೈ ತೋರಿಸಿಕೊಂಡು ನಗುತ್ತಾ ಆ ದೇಹಗಳು ನನ್ನನ್ನು ದಾಟಿ ಹಿಂದೆ ಹೋದವು.
ನಿಟ್ಟುಸಿರು ಬಿಡುತ್ತಾ ಮೈಸೂರು ರಸ್ತೆಗೆ ಬಂದೆ. ನನ್ನ ಹೃದಯ ಒಂದು ಕ್ಷಣ ನಿಂತೇ ಬಿಟ್ಟಿತು. ಅಲ್ಲಿನ ದೃಶ್ಯವನ್ನು ನೋಡಿ ಕಣ್ಣುಗಳ ರೆಪ್ಪೆ ಕೂಡ ಹಾಗೆಯೇ ಕೆಲ ಕ್ಷಣಗಳು ನಿಂತು ಬಿಟ್ಟವು. ಬಾಯಿಂದ ಮಂತ್ರದ ಶಬ್ಧಗಳು ಇಲ್ಲಾ, ಗಾಡಿ ಸದ್ದು ನನಗೆ ಕೇಳಿಸುತ್ತಿಲ್ಲ!
ಸಾವರಿಸಿಕೊಂಡು ನೋಡಿದೆ. ದೊಡ್ಡ ತೇರು, ಜನ ಸಾಗರ, ಪೊಲೀಸರು ಜನಗಳಿಗೆ ಹೋಗಿ ಹೋಗಿ ಬೇಗ ಹೋಗಿ ಎಂದು ಜನಸಾಗರವನ್ನು ಸರಿಸುತ್ತಿದ್ದರು. ಶ್ರೀರಾಮನವಮಿ ಪ್ರಯುಕ್ತ ತೇರು ಎಳೆದು ಮುಗಿದಿದ್ದರೂ.... .. ಜನಗಳು ಅಲ್ಲಿ ಇಲ್ಲಿ ಓಡಾಡುತ್ತಾ ತಿಂಡಿ ತಿನಿಸುಗಳನ್ನು ತಿನ್ನುತ್ತಾ, ಅದು ಇದು ನೋಡುತ್ತಿದ್ದರು.
ಶ್ರೀ ರಾಮನಿಗೆ ಮನದಲ್ಲಿ ನಮಿಸಿ, ಪವನ ಸುತ ಹನುಮಂತನಿಗೆ ಮನದಲ್ಲಿ ನಮಸ್ಕರಿಸಿ ಇಂದು ನನ್ನನ್ನು ರಕ್ಷಿಸಿದೆ ಎಂದೆ.
ಭರ್ರನೆ ವಿಜಯನಗರದ ಕಡೆಗೆ ಓಡಿತು ಗಾಡಿ.
"ನಾನು ಶ್ರೀಕಾಂತ" ಎಂದೇ
ಬಾಗಿಲು ತೆರೆದು "ಯಾಕೋ ಇಷ್ಟೊತ್ತಲ್ಲಿ ಬಂದೆ. ಅಲ್ಲೇ ಗೆಳೆಯರ ಮನೆಯಲ್ಲಿ ಇರಬಾರದಿತ್ತೆ. ಈ ಸರಿ ಹೊತ್ತಿನಲ್ಲಿ ಹಾಗೆಲ್ಲ ಬರಬಾರದು ಆಯ್ತಾ" ಅಂತ ಹುಸಿ ಮುನಿಸಿನಿಂದ ಗದರಿ, "ಊಟ ಮಾಡಿದೆಯ?"ಅಂದ್ರು ಅಣ್ಣ (ನನ್ನ ಅಪ್ಪ)
ಎಲ್ಲಿ ಹೋಗಿದ್ದೆ, ಏನು ಮಾಡುತಿದ್ದೆ ಎನ್ನುವ ಪ್ರಶ್ನೆಗಳ ಸುರಿಮಳೆ ನಿರೀಕ್ಷಿಸಿದ್ದ ನನಗೆ ಅವರ ಮಾತುಗಳಿಂದ ಹೃದಯ ತುಂಬಿ ಬಂತು. ತಂದೆಗೆ ಮಕ್ಕಳ ಮೇಲೆ ನಂಬಿಕೆಯಿದ್ದಾಗ ಅವರ ಹೆಸರಿಗೆ ಮಸಿಬಳಿಯುವ ಕೆಲಸ ಮಾಡೋಲ್ಲ ಎನ್ನುವ ತತ್ತ್ವ ನನ್ನ ಅಪ್ಪನದು!
(೨೦ನೆ ಏಪ್ರಿಲ್ ೨೦೧೩ ರ ಶನಿವಾರ ಗಾಳಿ ಅಂಜನೇಯ ದೇವಸ್ಥಾನದ ಹತ್ತಿರ ನಿಂತಿದ್ದ ಜನಸಾಗರ, ತೇರು, ಕಡಲೆ ಪುರಿ, ಬತ್ತಾಸು ಇವನ್ನೆಲ್ಲ ನೋಡಿ ಮನಸ್ಸು ೧೪ ವರ್ಷಗಳ ಹಿಂದೆ ನಡೆದಿದ್ದ ಈ ಪ್ರಸಂಗವನ್ನು ಮತ್ತೆ ಕಣ್ಣ ಮುಂದೆ ತಂದೊಡ್ಡಿತು. ಆ ಪ್ರಸಂಗವಾದ ನಂತರ ಅನೇಕ ಬಾರಿ ಮಧ್ಯ ರಾತ್ರಿಯ ನಂತರ ಓಡಾಡಿದಿದ್ದೇನೆ, ಕಾಡಲ್ಲಿ ಓಡಾಡಿದ್ದೇನೆ, ಬೆಟ್ಟ ಗುಡ್ಡಗಳಲ್ಲಿ ಮಲಗಿದ್ದೇನೆ. . ಆದರೆ ಇವತ್ತಿಗೂ ಅವತ್ತಿನ ಕ್ಷಣ ನೆನೆದರೆ ಮೈ ತುಸು ಕಂಪಿಸುವುದು ಸುಳ್ಳಲ್ಲ)