Wednesday, September 19, 2012

ಅಣ್ಣನಿಲ್ಲದ ಗಣಪನ ಹಬ್ಬ


ಬೆಳಿಗ್ಗೆ ಎದ್ದು ಕಣ್ಣು ಬಿಟ್ಟಾಗ..ಏನೋ ಕೊರತೆ ಎದ್ದು ಕಾಣುತಿತ್ತು..

ಅಮ್ಮನ ಮನೆಗೆ ಬಂದೆ..ಕಾಫಿ ಕುಡಿಯುತ್ತ ಇದ್ದಾಗ...

ಅಮ್ಮ ಕಣ್ಣು ತುಂಬಿಕೊಂಡು..

"ಅವರು ಇದ್ದಿದ್ದರೆ ಎಷ್ಟು ಸಂಭ್ರಮ ಇರ್ತಿತ್ತು....!"

ಮನಸು ಮೂರು ದಶಕಗಳ ಹಿಂದೆ ಓಡಿತು...

"ಅಣ್ಣ (ಅಪ್ಪ)..ಗಣಪತಿ ತರಲು ನಾವು ಬರ್ತೀವಿ..."

"ಸರಿ ಬನ್ನಿ"

ದಾರಿಯುದ್ದಕ್ಕೂ ನಾನು, ನನ್ನ ತಮ್ಮ ಘಂಟೆ ಬಾರಿಸಿಕೊಂಡು..ತ್ಯಾಗರಾಜ ನಗರದಿಂದ ನರಸಿಂಹ ರಾಜ ಕಾಲೋನಿ, ಡಿ.ವಿ.ಜಿ. ರೋಡ್, ಗಾಂಧಿ ಬಜಾರ್ ತನಕ...ಸರದಿಯಲ್ಲಿ ಘಂಟೆ ಬಾರಿಸಿದ್ದೆ ಬಾರಿಸಿದ್ದು..

"ಅಣ್ಣ ಆ ಗಣಪತಿ..ತಗೊಳ್ಳಿ..ಅಣ್ಣ..ಈ ಗಣಪತಿ ತಗೊಳ್ಳಿ.."

"ಆ ಗಣಪತಿಗೆ ನಾಮ ಇದೆ, ಈ ಗಣಪತಿ ವಿಭೂತಿ ಇಟ್ಟುಕೊಂಡಿದೆ...ನಮಗೆ ಗೋಪಿಚಂದನ ಇರುವ ಗಣಪತಿ ಬೇಕು..ನೋಡ್ತಾ ಇರಿ"

ಇಲ್ಲಿ ಜಾತಿ, ಗೀತಿ ಅನ್ನುವ ಪೊಳ್ಳು ನುಡಿಗಳಿಗಿಂತ..ನಮ್ಮ ಅಪ್ಪ..ಸದಾ ಅಚ್ಚುಕಟ್ಟು ಇಷ್ಟ ಪಡ್ತಾ ಇದ್ದರು..ಅವರು ನಂಬಿದ್ದ, ನೆಡೆದುಕೊಂಡಿದ್ದ ದಾರಿಯನ್ನು ಎಂದು ಬದಲಿಸುತ್ತಿರಲಿಲ್ಲ

ಸರಿ ಗಣಪತಿ ಸಿಕ್ಕಿತು, ಬಾಳೆ ಕಂದು, ಮಾವಿನ ಎಲೆಗಳು, ಹೂವು ಒಂದೊದಾಗಿ ನಮ್ಮ ಕೈಗೆ ಸೇರುತಿದ್ದವು..ನಾನು ನನ್ನ ತಮ್ಮ ನಮ್ಮ ಶಕ್ತಿ ಮೀಟಿ ಘಂಟೆ ಬಾರಿಸುವದರ ಜೊತೆಗೆ, ಆದಷ್ಟು ಭಾರ ಕೈಯಲ್ಲಿ ಹಿಡಿದು ಸಾಗುತಿದ್ದೆವು..
ಮನೆಗೆ ಬಂದ ನಂತರ..ಬಾಗಿಲಲ್ಲೇ ಗಣಪನಿಗೆ ಆರತಿ ಬೆಳಗಿ ಅಮ್ಮ ಮನೆಯ ಒಳಗೆ ಕರೆಯಿಸಿಕೊಂಡ ಮೇಲೆ..ನಾವು ನಮ್ಮ ಗಣಪನ ಪ್ರವಾಸವನ್ನು ಅಮ್ಮನಿಗೆ ಅರುಹುವ ತನಕ ನೆಮ್ಮದಿ ಇಲ್ಲ..ನಾನು ಹೇಳಿದ್ದನ್ನು ತಮ್ಮ ಸರಿ ಮಾಡುವುದು..ತಮ್ಮ ಹೇಳಿದ್ದನ್ನು ನಾನು ಸರಿ ಮಾಡುವುದು..ಹೀಗೆ ಸಾಗುತಿತ್ತು...

ಆ ದಿನಗಳ ಸೊಗಸೇ ಸೊಗಸು..ಕೈಯಲ್ಲಿ ಕಾಸಿರುತ್ತಿರಲಿಲ್ಲ..ಆದ್ರೆ ಇದ್ದದ್ದರಲ್ಲೇ ಅಪ್ಪ, ಅಮ್ಮ ಕೊಟ್ಟ ಚಿಕ್ಕಾಸುಗಳನ್ನು ಕೂಡಿಸಿಕೊಂಡು..ಬಣ್ಣದ ಕಾಗದ, ಬಲೂನ್, ಗಣಪನ ಅಲಂಕಾರಕ್ಕೆ ಬೇಕಾದ ಸಿದ್ಧತೆ ಮಾಡುವುದರಲ್ಲಿ ಹುಮ್ಮಸ್ಸು..ಅದರ ಮಜವೇ ಬೇರೆ (ಅಪ್ಪನ ಪ್ರೇರಣೆ...ಅದು ಇಂದಿಗೂ ಕುಂದಿಲ್ಲ ಅನ್ನುವುದೇ ನನಗೆ ಸಮಾಧಾನದ ಸಂಗತಿ..)...

ಪ್ರತಿವರುಷವು ಇದೆ ವರಸೆ ಪುನಾರಾವರ್ತನೆ ಆಗುತಿತ್ತು..ಆದ್ರೆ ನಮ್ಮ ಹುಮ್ಮಸ್ಸು ವರುಷದಿಂದ ವರುಷಕ್ಕೆ ಬೆಳೆಯುತ್ತಲೇ ಹೋಯ್ತು...

ಇಂದು ಗಣಪನ ಹಬ್ಬದ ದಿನ..ಮನೆಯಲ್ಲಿ ನೀರವ ಮೌನ..ಎಂದಿನ ಕಲರವವಿಲ್ಲ..ಮನೆಯ ಯಜಮಾನ..ಮನದಲ್ಲೇ ಇದ್ದು ಹರಸುತ್ತ ಇದ್ದಾರೆ..ಗಣಪ ನಮ್ಮ ಮನೆಗೆ ಬರಲು ಇನ್ನೊಂದು ವರುಷ ನೀನು ಕಾಯಲೇಬೇಕು..!! 

22 comments:

 1. ಶ್ರೀಕಾಂತ್ ತಂದೆ ಯವರ ನೆನೆದು ಬರೆದಿರುವ ನಿಮ್ಮ ಲೇಖನ , ನನಗೆ ನನ್ನ ತಂದೆಯ ನೆನಪು ತಂದಿತು. ಹೌದು ತಂದೆಯವರ ಕಾರ್ಯಗಳು ನಮಗೆ ಹಲವು ಸಾರಿ ನೆನಪಿಗೆ ಬರುತ್ತವೆ. ನಾವು ಇಂದು ಮಾಡುತ್ತಿರುವ ಕಾರ್ಯಗಳಿಗೆ ಅವರ ಮಾರ್ಗದರ್ಶನವೇ ಕಾರಣವಾಗಿದೆ . ಒಳ್ಳೆಯ ಲೇಖನ ಇಷ್ಟಾ ಆಯ್ತು.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 2. Your father will always bless you...wherever you are

  ReplyDelete
 3. ಶ್ರೀಕಾಂತ್ ಸರ್,
  ನಿಮ್ಮ ಗಣೇಶ ಹಬ್ಬದ ಹಳೆಯ ನನ್ನ ಹಳೆಯ ನೆನಪುಗಳನ್ನು ನೆನಪಿಸುತ್ತಿದೆ. ನನ್ನ ಅಮ್ಮನ ಜೊತೆ ಪ್ರತಿವರ್ಷವೂ ನಾನು ಗಣೇಶನನ್ನು ತರಲು ಹೋಗುತ್ತಿದ್ದೆ. ಅವರು ಉಪವಾಸವಿದ್ದು ಎಲ್ಲ ಅಲಂಕಾರವನ್ನು ಮಾಡಿ ಮಾಡುತ್ತಿದ್ದ ಪ್ರತಿಷ್ಟಾಪಿಸುತ್ತಿದ್ದ ಗಣೇಶನನ್ನು ನೋಡಿ ಭಕ್ತಿಯಿಂದ ನಮಿಸುತ್ತಿದ್ದೆ. ಆದ್ರೆ ಈ ವರ್ಷ ನಮಗೆ ಗಣೇಶ ಹಬ್ಬ ಇಲ್ಲ. ಏಕೆಂದರೆ ಕಳೆದ ಮೂರು ದಿನದಿಂದ ನನ್ನ ಅಮ್ಮ ನರ್ಸಿಂಗ್ ಹೋಂನಲ್ಲಿದ್ದಾರೆ. ಅವರು ಗುಣವಾದರೆ ಮುಂದಿನ ವರ್ಷ ನಮ್ಮ ಗಣೇಶ ಹಬ್ಬದ ಸಂಭ್ರಮ.
  ಧನ್ಯವಾದಗಳು.

  ReplyDelete
 4. ಅಪ್ಪ ನಮ್ಮ ಮನಸ್ಸಿನಲ್ಲಿ ನಾಟಿ ನಮ್ಮನ್ನು ಸದಾ ಎಚ್ಚರವಾಗಿಡುವ ದೈವ.

  ಗಣಪತಿ ಹಬ್ಬದ ನೆಪದಲ್ಲಿ ತಂದೆಯವರನ್ನು ನೆನೆಸಿಕೊಂಡದ್ದು ನನಗೆ ಖುಷಿಯಾಯಿತು. ನೀವಾದರೂ ನಿಮ್ಮ ತಂದೆಯವ ಜೊತೆ ಮಾತಾಡಿದ್ದೀರಿ, ನಮ್ಮ ತಂದೆ ತೀರಿಕೊಂಡಾಗ ನನಗೆ ಬರೀ ೩ ವರ್ಷ. ಆದ್ದರಿಂದ ಅವರ ಮಾತು ನಡೆ ತಾಕು ನನಗೆ ಅಪರಿಚಿತ.

  ReplyDelete
 5. ಶ್ರೀಕಾಂತ,
  ಎಂದಿನಂತೆ, ತುಂಬ ಆತ್ಮೀಯವಾಗಿ ಬರೆದಿದ್ದೀಯ.
  ನಿಜಕ್ಕೂ, ತ್ಯಾಗರಾಜನಗರದಿಂದ ಹೊರಟು ಗಾಂಧಿ ಬಜಾರ್ ಅನ್ನು ಒಂದು ಸುತ್ತು ಬಂದಂತೆಯೇ ಆಯಿತು.
  (ನೀವಿಬ್ಬರು ಬಾರಿಸುತ್ತಿದ್ದ ಘಂಟೆ ಸದ್ದು ಇನ್ನೂ ಕೇಳಿಸುತ್ತಾ ಇದೆ).

  ನಮ್ಮ "ಖಾಲಿತನ"ವನ್ನ ತುಂಬುವುದು, ಆ ಮಾತುಗಳು, ಆ ಅಚ್ಚರಿಯ ನೋಟ, ಆ ಘಂಟೆ ಸದ್ದು, ಆ ಮೌನ...
  ಮರೆವಿನೊಂದಿಗೆ ನೆನಪನ್ನೂ, ನೆನಪಿನೊಂದಿಗೆ ಮರೆವನ್ನೂ ಕೊಟ್ಟ ದೇವರ ಜಾಣತನವನ್ನ ಏನೆನ್ನೋಣ!
  ಅಷ್ಟಕ್ಕೂ, ದೇವರೆನ್ನುವುದು ನಮ್ಮ "ಪ್ರೀತಿ"ಯ ಅಭಿವ್ಯಕ್ತಿಯೇ ತಾನೇ!

  ಹೊರಗೆ ಕಾಣಲಾಗದ ಯಾವುದೇ ಪ್ರಿಯ ವಸ್ತುವನ್ನು ನಮ್ಮೊಳಗೇ ಕಂಡುಕೊಳ್ಳಲು,ಶಂಕರಾಚಾರ್ಯರದೆಂದು ಹೇಳುವ (ಶಿವಮಾನಸಪೂಜಾ) ಈ ಶ್ಲೋಕ ನೆರವಾಗಬಹುದು:
  "ಆತ್ಮಾ ತ್ವಂ, ಗಿರಿಜಾ ಮತಿ: ಸಹಚರಾ: ಪ್ರಾಣಾ: ಶರೀರಂ ಗೃಹಮ್
  ಪೂಜಾ ತೇ ವಿಷಯೋಪಭೋಗ-ರಚನಾ ನಿದ್ರಾ ಸಮಾಧಿ-ಸ್ಥಿತಿ:
  ಸಂಚಾರ: ಪದಯೋ: ಪ್ರದಕ್ಷಿಣ ವಿಧಿ: ಸ್ತೋತ್ರಾಣಿ ಸರ್ವಾ ಗಿರೋ
  ಯದ್ಯದ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||

  ಅರ್ಥ: (ಶಿವನನ್ನ ಕುರಿತು) ನೀನು ನನ್ನ ಆತ್ಮಾ, ಗಿರಿಜೆಯು ನನ್ನ ಬುದ್ಧಿ, ಈ ಶರೀರವೇ ಮನೆ
  ನನ್ನ ಎಲ್ಲ ಆಸೆಗಳ ಆರೈಕೆ ಪೂರೈಕೆಗಳು ನಿನ್ನದೇ ಪೂಜೆ, ನಿದ್ರೆಯಾದರೋ (ನಿನ್ನದೇ ಧ್ಯಾನದ) ಸಮಾಧಿ-ಸ್ಥಿತಿ, ನನ್ನ ಎರಡು ಕಾಲುಗಳಿಂದ ಮಾಡುವ ನಡೆದಾಟ ನಿನಗೆ ಹಾಕುವ ಪ್ರದಕ್ಷಿಣೆ, ನಾನಾಡುವ ಎಲ್ಲ ಮಾತುಗಳೇ ನಿನ್ನ ಸ್ತುತಿ, (ಒಟ್ಟಿನಲ್ಲಿ) ನನ್ನ ಏನೆಲ್ಲಾ ಚಟುವಟಿಕೆಗಳಿವೆಯೋ ಅವೆಲ್ಲವೂ, ಹೇ ಶಂಭೋಶಂಕರ, ನಿನ್ನ ಆರಾಧನೆಯೇ!

  ನಿನ್ನವ
  rajaneesha

  ReplyDelete
 6. ....Srikanth
  ...It reminded me of my DAD. Nanna magaLige nanna pappana jothe aacharisutidda ganesha habbada bagge nenne heLutidde. Nimma lekhana oDi mattomme nenapaadru.

  ReplyDelete
 7. ನಿಜ ಶ್ರೀಕಾಂತ್...

  ಹೋದವರು ಹೋಗಿಬಿಡುತ್ತಾರೆ...

  ಮರೆಯಲಾಗದ ನೂರಾರು ನೆನಪುಗಳನ್ನು ಬಿಟ್ಟು...

  ನೀವು ಪುಣ್ಯವಂತರು...

  ಇಷ್ಟು ವರ್ಷದವರೆಗೆ ಅವರ ಬಾಂಧವ್ಯವನ್ನು ಸವಿದಿದ್ದೀರಿ....

  ReplyDelete
 8. ಬಾಲೂ ಸರ್..ತಾಯಿ ಜೀವ ಕೊಟ್ಟರೆ..ತಂದೆ ಬಾಳು ಕೊಡುತ್ತಾರೆ ಅಂತ ಓದಿದ ನೆನಪು..ಎಷ್ಟು ಸತ್ಯ..ಅವರ ಮಾರ್ಗ ದರ್ಶನದಲ್ಲಿ ನಡೆವುದೇ ನಮ್ಮ ಕಾಣಿಕೆ ಅವರಿಗೆ..ಧನ್ಯವಾದಗಳು ನಿಮಗೆ..

  ReplyDelete
 9. ಸಂದೀಪ್..ನಿಮ್ಮ ಹಾರೈಕೆಗೆ ಧನ್ಯವಾದಗಳು...

  ReplyDelete
 10. ಶಿವೂ ಸರ್..ನಿಮ್ಮ ಮಾತೃಶ್ರೀ ಅವರ ಆದಷ್ಟು ಬೇಗನೆ ಸುಧಾರಿಸಲಿ ಹಾಗು ಸಂತಸದ ಜೀವನ ಅವರದಾಗಲಿ ಎಂದು ಪ್ರಾರ್ಥಿಸುತ್ತೇನೆ..ನಿಮ್ಮ ಅನಿಸಿಕೆಗೆ ಧನ್ಯವಾದಗಳು

  ReplyDelete
 11. ಧನ್ಯವಾದಗಳು ವೆಂಕಿ..

  ReplyDelete
 12. ಬದರಿ ಸರ್..ಧನ್ಯವಾದಗಳು..ಮಾತಾ ಪಿತೃಗಳು ನಮಗೆ ಕೊಡುವ, ತೋರುವ, ಪ್ರೀತಿ ಸದಾ ದಾರಿದೀಪ..

  ReplyDelete
 13. ರಜನೀಶ..ಆ ಬಾಲ್ಯದ ದಿನಗಳು ಬಹಳ ಖುಷಿ ಕೊಡುತ್ತವೆ..ಚೆನ್ನಾಗಿ ವಿವರಣೆ ಕೊಟ್ಟಿರುವೆ..ಧನ್ಯವಾದಗಳು

  ReplyDelete
 14. ರೂಪ..ಪ್ರತಿಯೊಬ್ಬರ ಜೀವನದಲ್ಲೂ ಮಾತಾ ಪಿತೃಗಳು ಅಚ್ಚಳಿಯದ ನೆನಪು, ಗುರುತು ಮೂಡಿಸಿರುತ್ತಾರೆ. ನನ್ನ ಲೇಖನ ನಿಮ್ಮ ಬಾಲ್ಯದ ನೆನಪನ್ನು ತಂದಿದ್ದು ಖುಷಿಕೊಟ್ಟಿತು..ಧನ್ಯವಾದಗಳು

  ReplyDelete
 15. ಪ್ರಕಾಶಣ್ಣ ನಿಮ್ಮ ಮಾತುಗಳು ಕಣ್ಣಾಲಿಗಳನ್ನು ಒದ್ದೆ ಮಾಡಿದವು..ನೆನಪು ಸದಾ ಮಧುರ..ಧನ್ಯವಾದಗಳು

  ReplyDelete
 16. ಆತ್ಮೀಯ ಶ್ರೀಕಾಂತ,
  ನಿನ್ನ ಮಾನಸಿಕತೆಯ ತುಮುಲ ಚನ್ನಾಗಿ ಮೂಡಿದೆ. ಯಾವುದೇ ವ್ಯಕ್ಯಿಯ ಇರುವಿಕೆಯ ಗೌರವ ಮತ್ತು ಮಹತ್ವ ಅವರ ಅನುಪಸ್ಥಿತಿಯಲ್ಲಿ ಹೆಚ್ಚು ಕಾಡುತ್ತದೆ. ಸ್ವಾಭಾವಿಕವಾಗಿ ನೆನಪು ಭಾದಿಸುತ್ತದೆ. ಆದರೆ, ಈ ನೆನಪುಗಳು ನಮ್ಮ ಒಳಗಿನ ಭಾವನೆಗಳನ್ನು ತಿದ್ದಿ ತೀಡಿ ಹಿರಿಯರ ಆದರ್ಶಗಳನ್ನು ಕಣ್ಣಮುಂದೆ ತರಿಸುತ್ತವೆ.
  ಇವಿಷ್ಟು ನಿನ್ನ ನೆನಪಿನ ಅಂಗಳದಲ್ಲಿ ಚೆನ್ನಾಗಿ ಬಿಂಬಿತವಾಗಿದೆ. ಬದುಕು ಕ್ಷಣಿಕವಾದರೂ ನೆನಪು ಅಮರ. ನಿನ್ನ ಸ್ಪಂದನೆಯಲ್ಲಿ ನಾವೂ ಭಾಗಿಗಳೇ. ಉತ್ತಮ ನೆನಪು.
  ವಿನಾಯಕ ಚತುರ್ಥಿಯ ಅಂಗವಾಗಿ ಅವನ ವಾಹನ ನನಗೆ ಕೈ ಕೊಟ್ಟು ಬಿಟ್ಟ. ಅವನನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳಲು ಈವತ್ತು ಕಾಲ ಕೂಡಿ ಬಂತು. ಹೀಗಾಗಿ ನಿಧಾನ.
  ನಿನ್ನ ಆತ್ಮೀಯ

  ReplyDelete
  Replies
  1. ಧನ್ಯವಾದಗಳು ಚಿಕ್ಕಪ್ಪ..ನಿಮ್ಮ ಪ್ರತಿಕ್ರಿಯೆ ಸದಾ ಹುರುಪನ್ನು ಕೊಡುತ್ತದೆ.

   Delete
 17. ಶ್ರೀಕಾಂತ್ ಸರ್...ಒಬ್ಬ ಮನುಷ್ಯ ನಮ್ಮನ್ನು ಬಿಟ್ಟು ಹೋದ ಮೇಲೇ ..ನಮಗೆ ಆ ವ್ಯಕ್ತಿಯ ಮಹತ್ವ ತಿಳಿಯುವುದು...ಅವರ ನೆನಪೇ ನಮ್ಮಲ್ಲಿ ಸದಾ ಉಳಿಯುವುದು..ಇದು ಪ್ರಕೃತಿ ನಿಯಮ.. :)

  ReplyDelete
  Replies
  1. ನಿಮ್ಮ ಮಾತು ನಿಜ..ಇಲ್ಲದೆ ಹೋದಾಗ ಅದು ಬಿಟ್ಟು ಹೋದ ನೆನಪು ಕಾಡುವುದು, ಕೆಣಕುವುದು ಬಹಳ.ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

   Delete
 18. ಭಾವುಕನಾಗಿಸುವ ಮನಮುಟ್ಟಿದ ಲೇಖನ.. ನಿಜ ಹೋದವರ ಬೆಲೆ ಇದ್ದಾಗ ತಿಳಿಯುವುದಿಲ್ಲ...(ರಾಜಕಾರಣಿಗಳೂ ಸೇರಿ, ಬೇರೆ ಕಾರಣಕ್ಕೆ). ಚನ್ನಾಗಿದೆ

  ReplyDelete
  Replies
  1. ಅಜಾದ್ ಸರ್ ತುಂಬು ಹೃದಯದ ಧನ್ಯವಾದಗಳು..ಇದ್ದಾಗ ಬೆಲೆ ಮಾತಿನಲ್ಲಿ ಇರುತ್ತೆ..ಇರದಿದ್ದಾಗ ಪದಗಳಾಗಿ ಬಿಡುತ್ತದೆ..

   Delete