"ಮಂಜಣ್ಣ ತಗೋ ಈ ಹೊಸ ಶರ್ಟ್ ಹಾಕಿಕೋ..ಬೆಂಗಳೂರಿಗೆ ಹೋಗ್ತಾ ಇದ್ದೀಯ ಅಲ್ವ..?"
ಇದು ಯಾವುದೇ ಚಿಕ್ಕ ಮಗು ಹೇಳಿದ ಮಾತಲ್ಲ..ಸುಮಾರು ಒಂದೇ ವಯಸ್ಸಿನವರಾದ ನಮ್ಮ ಅಪ್ಪ ಮತ್ತು ಅವರ ಚಿಕ್ಕಜ್ಜಿ ಮಗನ ನಡುವೆ ನಡೆದ ಸಂಭಾಷಣೆ..
ನಮ್ಮಪ್ಪ ಬೇಕು ಎಂದು ಕೇಳಲಿಲ್ಲ..ಆದ್ರೆ ಪರಿಸ್ಥಿತಿ ಅರ್ಥ ಮಾಡಿಕೊಂಡು ಆಗ ತಾನೇ ಅಂಗಡಿಯಿಂದ ತಂದಿದ್ದ ಹೊಚ್ಚ ಹೊಸ ಶರ್ಟನ್ನು ಕೊಟ್ಟವರು..ಇವರು
ನಾವು ನಮ್ಮ ವಸ್ತುವನ್ನು ಕೊಡಬೇಕೆಂದು ಸಾಮಾನ್ಯವಾಗಿ ಅನ್ನಿಸುವುದು ವಸ್ತು ಹಳೆಯದಾದಾಗ ಇಲ್ಲವೇ ಅದು ನಮಗೆ ಬೇಡವೆನಿಸಿದಾಗ..ಹೊಸ ವಸ್ತುಗಳನ್ನು ಕೊಡುವುದು ಇರಲಿ...ಇನ್ನೊಬ್ಬರಿಗೆ ತೋರಿಸಿದರೆ ಅವರು ಕೇಳಿಬಿಡುತ್ತಾರೆನೋ ಅನ್ನುವ ಅಳುಕು ಇರುತ್ತೆ..ಅಂಥಹ ಒಂದು ಮುಗ್ಧ ಮನಸಿನ ಯಜಮಾನ "ಪುಟ್ಟು" ಎನ್ನುವ ಈ ಮಹಾನುಭಾವರು.
ಸುಬ್ರಮಣ್ಯ ಎನ್ನುವ ಹೆಸರಿಂದ ನಾಮಾಂಕಿತರಾಗಿ "ಪುಟ್ಟು" ಎನ್ನುವ ಹೆಸರೇ ಶಾಶ್ವತವಾಗಿ ಉಳಿದು ಸಂಬಂಧಿಕರಲ್ಲಿ ಅದೇ ಹೆಸರಿನಿಂದ ಗುರುತಿಸಿಕೊಂಡರು ಇವರು..
ಶಿವಮೊಗ್ಗದಲ್ಲಿ ಎರಡು ಮನೆಯನ್ನು ಕೇವಲ ಒಂದೇ ಒಂದು ಗೋಡೆ ಬೇರೆ ಮಾಡಿತ್ತು..ಆದ್ರೆ ಆ ಗೋಡೆಗೂ ಒಂದು ಬಾಗಿಲು ಇತ್ತು..ಆ ಬಾಗಿಲು ಸದಾ ತೆರೆದೇ ಇತ್ತು..ಇಂತಹ ಎರಡು ಮನೆಯಲ್ಲಿ ಎರಡು ಕುಟುಂಬಗಳು ಒಂದೇ ಕುಟುಂಬದಂತೆ ಸುಮಾರು ಏಳೆಂಟು ವರುಷ ಸಂಸಾರ ಮಾಡಿತ್ತು..ರಕ್ತ ಸಂಬಂಧಕ್ಕಿಂತ ಮಾನವೀಯ ಸಂಬಂಧ ಅಧಿಕವಾಗಿದ್ದ ಆ ಕಾಲದಲ್ಲಿ ನಮ್ಮ ಕುಟುಂಬ ಹಾಗು "ಪುಟ್ಟು" ಅವರ ಕುಟುಂಬ ಎರಡು ಸೇರಿ ಸುಮಾರು ೧೨ ಮಂದಿ ಸುಖವಾಗಿ ಕಳೆದ ಆ ದಿನಗಳು ನಮ್ಮೆಲ್ಲರ ಬದುಕಿನಲ್ಲಿ ಒಂದು ಸುವರ್ಣ ಅಧ್ಯಾಯ ಎನ್ನಬಹುದು..
ಮಗುವಿನ ಮನಸು ಹೇಗೆ ಇರಬೇಕು..ಹೇಗೆ ಇರುತ್ತೆ ಅನ್ನುವುದು ಯಾವಾಗಲೂ ಯಕ್ಷ ಪ್ರಶ್ನೆಯಾಗಿ ಕಾಡಿತ್ತು..ಆದ್ರೆ ಸುಮಾರು ೭೪ -೭೫
ವಸಂತಗಳನ್ನು ಕಂಡರೂ ಮಗುವಿನ ಮುಗ್ದತೆ, ಮೃದು ಮಾತು, ಹಗುರ ಮನಸು ಇವೆಲ್ಲರ ಯಜಮಾನ ಇಂದು(೨೨ನೆ ಸೆಪ್ಟೆಂಬರ್ ೨೦೧೨) ನಮ್ಮೆಲ್ಲರನ್ನೂ ಬೆಳಿಗ್ಗೆ ಸುಮಾರು ಏಳು ಘಂಟೆಗೆ ಅಗಲಿದ್ದಾರೆ.
ಶ್ರೀ ಸುಬ್ರಮಣ್ಯ ("ಪುಟ್ಟು) |
ನಿಮ್ಮ ಆಶಿರ್ವಾದ ನಮ್ಮ ಮೇಲೆ ಇರಲಿ..ನಾವೆಲ್ಲರೂ ನಿಮ್ಮ ಕುಟುಂಬದ ಜೊತೆ ಸದಾ ಇರುತ್ತೇವೆ..