Saturday, June 30, 2012

ನಮ್ಮ ಅಜ್ಜಯ್ಯ - ಸ್ಮರಣೆ - ೨೫ ವಸಂತಗಳು


ಬೆಳ್ಳಿ, ರಜತ ಇವೆಲ್ಲ ಕೆಲವು ಸುಂದರ ಪದಗಳು...

ಬಿಳಿ ಲೋಹದ ಹೆಸರನ್ನು, ೨೫ ವಸಂತಗಳನ್ನು ಸೂಚಿಸುತ್ತದೆ...

ಹಾಗೆಯೇ ನಾಳೆಗೆ  (೦೧.೦೭.೨೦೧೨) ನಮ್ಮ ಪ್ರೀತಿಯ ಅಜ್ಜಯ್ಯ ಅವರ ಪತ್ನಿ, ಪಿತ, ಪಿತಾಮಹರನ್ನು ಭೇಟಿ ಮಾಡಲು ನಮ್ಮನ್ನಗಲಿ.....ಇಹಲೋಕವನ್ನು ಬಿಟ್ಟು ೨೫ ವಸಂತಗಳೇ  ಕಳೆದವು .

ಇದು ಸಂಭ್ರಮ ಪಡುವ ದಿನವಲ್ಲ...ಆದರೆ ಅಂತಹ ಹಿರಿಯರು, ಮಾರ್ಗದರ್ಶಿಗಳು ಹಾಕಿ ಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆಯಲು ನಾವು ಮಾಡುವ ಒಂದು ಸಣ್ಣ ಪ್ರಯತ್ನ ಅವರ ಶ್ರಮವನ್ನು ಸಾರ್ಥಕಪಡಿಸುತ್ತೆ....ಅಂತಹ ಒಂದು ಪ್ರಯತ್ನವನ್ನು ನೆನಪು ಮಾಡಿಕೊಳ್ಳುವ ಒಂದು ಚಿಕ್ಕ ಯತ್ನ ಈ ಬರಹ..!!!

ನಮ್ಮ ಅಜ್ಜಯ್ಯ "ಕೋರವಂಗಲದ  ವೆಂಕಟಕೃಷ್ಣಯ್ಯ ರಂಗಸ್ವಾಮಿ"ಯವರು (ಕೆ.ವಿ. ರಂಗಸ್ವಾಮಿ)  ವೃತ್ತಿಯಲ್ಲಿ ಶಾನುಭೋಗರು.  

ಒಂದೇ ಮಾತಲ್ಲಿ ಅವರ ಪ್ರತಿಭೆಯ ಬಗ್ಗೆ ಹೇಳುವುದಾದರೆ 
ಆ ದಿನಗಳಲ್ಲಿ ತಾಲೂಕು ಕಛೇರಿಗಳಲ್ಲಿ ಹೇಳುತಿದ್ದ ಮಾತು  
"ಓಹ್ ರಂಗಸ್ವಾಮಿಗಳು ತಯಾರು ಮಾಡಿದ ಪತ್ರವೇ...ಅದನ್ನ ಮತ್ತೆ ನೋಡುವ ಪ್ರಶ್ನೆಯೇ ಇಲ್ಲ...ಎಲ್ಲ ಸರಿಯಾಗುತ್ತದೆ..ಅಧಿಕಾರಿಗಳಿಗೆ ಕಳಿಸಿ" 

ಅಷ್ಟು ಕರಾರುವಾಕ್ ಭಾಷೆ, ತಪ್ಪಿಲ್ಲದ ಸುಂದರ ಬರವಣಿಗೆ, ನಿಖರ ಮಾಹಿತಿ...ನಮ್ಮ ಅಜ್ಜಯ್ಯನದು..

ಅವರ ಜೀವನದಲ್ಲಿ ಬಲಗಾಲಿಟ್ಟು ಬಂದ ನಮ್ಮ ಅಜ್ಜಿ ಸುಬ್ಬನರಸಮ್ಮ  ಪತಿಗೆ ತಕ್ಕ ಪತ್ನಿಯಾಗಿ ಮನೆ ಮನ ತುಂಬಿದವರು.
ಅಜ್ಜಿ-ಅಜ್ಜ್ಯನವರ ಚಿತ್ರ
ಎಂಟು ಮಕ್ಕಳ ತುಂಬು ಸಂಸಾರವನ್ನು ಹಾಸನ ಜಿಲ್ಲೆಯ ಬಳಿ ಇರುವ ಕೋರವಂಗಲದ ಗ್ರಾಮದಲ್ಲಿ ಜೀವನ ಶುರುಮಾಡಿದರು...

ಕೋರವಂಗಲ ಗ್ರಾಮದ ಹೆಬ್ಬಾಗಿಲು

ಕೋರವಂಗಲ ಗ್ರಾಮದ ಪ್ರಮುಖರು

ಅಜ್ಜಯ್ಯನ ಮನೆ ಇದ್ದ ಸ್ಥಳ 

ಸುಂದರ ಬುಚೇಶ್ವರ  ದೇವಸ್ಥಾನ...ಒಂದು ಅದ್ಬುತ ಹೊಯ್ಸಳ ಕಲಾಕೃತಿ 

ಸುಂದರ ಬುಚೇಶ್ವರ  ದೇವಸ್ಥಾನ...ಒಂದು ಅದ್ಬುತ ಹೊಯ್ಸಳ ಕಲಾಕೃತಿ 

ಗ್ರಾಮಕ್ಕೆ ಹತ್ತಿರ ಹಾ ದು  ಹೋಗಿರುವ ರೈಲ್ವೆ ರಸ್ತೆ 
ಕಾಲ ಕ್ರಮೇಣ ಕಾರಣಾಂತರಗಳಿಂದ ಹಾಸನಕ್ಕೆ ವಲಸೆ ಬಂದು ಜೀವನ ಶುರು ಮಾಡಿದರು..

ಅವರ ಹಾರೈಕೆ, ಆಶಿರ್ವಾದಗಳಿಂದ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ!!!
ಸುಂದರ ಬುಚೇಶ್ವರ
ಒಳ್ಳೆಯತನ, ಪ್ರಾಮಾಣಿಕತೆ, ಸತ್ಯ-ಸಂಧತೆ, ಶ್ರಮಜೀವಿ, ಅನುಕಂಪ, ಸ್ನೇಹ ಜೀವಿ ಈ ಗುಣಗಳೆಲ್ಲ ಮೇಳೈಸಿದ ಅಪರೂಪದ ವ್ಯಕ್ತಿ..ನಮ್ಮ ಅಜ್ಜಯ್ಯ 

ಸಾಮಾನ್ಯವಾಗಿ ಹೇಳುವ ಮಾತು "ಕಳೆದ ಮೇಲೆ ಅಥವಾ ಕಳಕೊಂಡ ಮೇಲೆ  ಬೆಲೆ" 

ನಮ್ಮ ಅಜ್ಜಯ್ಯ ನಮ್ಮೆನ್ನೆಲ್ಲ ಭೌತಿಕವಾಗಿ ಬಿಟ್ಟು ಹೋದಾಗ ನಾವು ಮೊಮ್ಮಕ್ಕಳು ಸರಿ ಯಾವುದು  ತಪ್ಪು ಯಾವುದು ಎನ್ನುವದನ್ನು ತಿಳಿಯಲು ಗೊಂದಲ ಪಡುತಿದ್ದ ಹದಿ ಹರೆಯ...ಹಾಗಾಗಿ ನಮ್ಮ ಅಜ್ಜಯ್ಯನ ಬಗ್ಗೆ ಅಪ್ಪ, ಅಮ್ಮ, ಚಿಕ್ಕಪ್ಪಂದಿರು, ದೊಡ್ಡಪ್ಪ ಹೇಳಿದ ಮಾತುಗಳಿಂದ ತಿಳಿದ ವಿಷಯಗಳು...

ಅವರ ಕೈ ಬರಹ, ನೆನಪಿನ ಶಕ್ತಿ, ವಿಷಯಗಳ ಆಳ,  ಮಾತಾಡುವ ಶೈಲಿ, ಸದಾ ಕಾಲ ದೇವರ ಸ್ತೋತ್ರ  ಪಠಣ, ಮಕ್ಕಳ ಹಾಗು ಮೊಮ್ಮಕ್ಕಳ ಮೇಲಿನ ಮಮಕಾರ ಒಂದೇ ಎರಡೇ..ಅವರ ಬಗ್ಗೆ ಹೇಳುತ್ತಾ ಹೋದರೆ ಒಂದು ಪ್ರಬಂಧವನ್ನೇ ಮಂಡಿಸಬಹುದು..

ಕೊನೆಯ ಕ್ಷಣಗಳಲ್ಲೂ  ಕೂಡ ಇತಿಹಾಸದ ಪುಟಗಳಲ್ಲಿನ ಘಟನೆಗಳನ್ನು ಹೇಳುತಿದ್ದುದು ಅವರ ಆತ್ಮ ಶಕ್ತಿಗೆ ಒಂದು ಚಿಕ್ಕ ಉದಾಹರಣೆ.

ನಮ್ಮ ಅಜ್ಜಯ್ಯನ ಸುಂದರ ಜೀವನಕ್ಕೆ ನುಡಿ ಬರಹ ಬರೆಯಬೇಕು ಎನ್ನುವುದು, ಅವರ ಜೀವನದ ಯಶೋಗಾಥೆ ನಮ್ಮ ಮುಂದಿನ ಪೀಳಿಗೆಗೂ ಸಿಗಬೇಕು ಎನ್ನುವುದು ನನ್ನ ಹಂಬಲ..ನಮ್ಮ ವ್ಯಾಪ್ತಿ ಬರಿ ಅಪ್ಪ, ಅಮ್ಮ, ಅಕ್ಕ, ತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅಜ್ಜ, ಅಜ್ಜಿ ಇಷ್ಟಕ್ಕೆ ನಿಲ್ಲಬಾರದು ಇನೊಂದು ಹೆಜ್ಜೆ ಸಾಗಿ ಮುತ್ತಾತ, ಮುತ್ತಜ್ಜಿ ಹೀಗೆ ಕವಲೊಡೆದು ಸಾಗಬೇಕು ಎನ್ನುವುದು ಆಸೆ..!!!!

6 comments:

  1. ಶ್ರೀಕಾಂತ್..........

    ನಿಮ್ಮ ಅಜ್ಜನವರ ಕುರಿತು ಓದಿದಾಗ ನನ್ನ ಅಜ್ಜನವರೂ ನೆನಪಾದರು..

    ಆ ಹಿರಿಯರೆ ಹಾಗೆ.. ಅವರ ಬದುಕು ನಮಗೆ ಸ್ಪೂರ್ತಿ...

    ಅವರ ಆಶೀರ್ವಾದ ಸದಾ ನಿಮ್ಮಮೇಲಿರಲಿ... ಜೈ ಹೋ !!

    ReplyDelete
  2. ನಿಮ್ಮೊಲೋಮೆ ನಮಗಿರಲಿ ಪಿತಾಮಹ..ಕೈ ಹಿಡಿದು ನೀವ್ ನಡೆಸಿ ಮುಂದೆ...
    ಧನ್ಯವಾದಗಳು ಪ್ರಕಾಶಣ್ಣ...

    ReplyDelete
  3. ಆತ್ಮೀಯ ಶ್ರೀಕಾಂತನಿಗೆ,
    ಇಂದಿನ ಬಿಡುವೆ ಇಲ್ಲ ಎನ್ನುವವರ ಮಧ್ಯೆ, ಅದರಲ್ಲೂ ನಮ್ಮ ಹಿರಿಯರ ಬರೆಯುವ ಬಗ್ಗೆ ಮೆಚ್ಚುಗೆಯ ಮಾತುಗಳು, ಅವರ ಜೀವನದ ಸಾಫಲ್ಯಗಳನ್ನು ನೆನೆಸಿಕೊಳ್ಳುವಷ್ಟು ಸಮಯ ನಿನಗೆ ಇದೆ ಎಂದರೆ ಈಗಿನವರ ಅಂಬೋಣ " ಇಲ್ಲ, ನಿನಗೇನೂ ಕೆಲಸವಿಲ್ಲ, ಅಥವಾ ಮಾಡಲು ಬೇರೆ ಬದುಕಿಲ್ಲ. " ಇಂತಹವರ ಮಧ್ಯೆ ನೀನು ಹಿರಿಯರ ನೆನಪು ಮಾಡಿ ಕೊಟ್ಟು, ನೀವು ಇದನ್ನು ಏಕೆ ಮಾಡುತ್ತಿಲ್ಲ?ಎಂದು ಪ್ರಶ್ನಿಸುವಂತಿದೆ ನಿನ್ನ ಈ ಲೇಖನ.
    ನಿನ್ನ ಕಳಕಳಿಗೆ ಎರಡನೇ ಮಾತಿಲ್ಲ. ಯಾವಾಗ ನಾವು ನಮ್ಮ ಹಿರಿಯರ ಗುಣಗಳಬಗ್ಗೆ ಒಂದೆರಡು ಮಾತುಗಳನ್ನು ಎಲ್ಲರ ಮುಂದೆ ಹೇಳುತ್ತೇವೋ ಆಗ ಅವರಿಗೆ ಸಲ್ಲಿಸುವ ಗೌರವದ ಜೊತೆಗೆ ನಮ್ಮ ತನವನ್ನು ಹೆಚ್ಚಿಸಿಕೊಂಡ ಹಾಗೆ. ದೋಷಗಳು ಯಾರಲ್ಲಿ ಇಲ್ಲ? ಆದರೆ, ಅವರಲ್ಲಿದ್ದ ಒಳ್ಳೆಯ ಗುಣಗಳನ್ನು ಗುರುತಿಸುವುದು ನಮ್ಮ ವಿಶಾಲತೆಯನ್ನು ಮತ್ತು ವ್ಯಕ್ತಿಯ ಮೇಲಿನ ಗೌರವವನ್ನು ಸೂಚಿಸುತ್ತದೆ. ಇದು ಪ್ರತಿ ಮನೆಯಲ್ಲೂ ಮಕ್ಕಳ ಮುಂದೆ ಪ್ರದರ್ಶಿಸಿದರೆ ನಾವು ನಮ್ಮ ಮುಂದಿನ ಪೀಳಿಗೆಗೆ ಒಂದು ಒಳ್ಳೆಯ ಸಂಸ್ಕಾರ ಕೊಟ್ಟಂತೆ. ನಿನ್ನ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ನಿನ್ನನ್ನು ಹೊಗಳುತ್ತಿಲ್ಲ, ಹೊಗಳಿಕೆ ಎನ್ನವ ಪದ ಇಲ್ಲಿ ಏನೇನೂ ಸಾಲದು.
    ನಿನ್ನ ಪ್ರಯತ್ನ ಬೇರೆಯವರಿಗೆ ಆದರ್ಶವಾಗಲಿ.
    ಪ್ರಕಾಶ್

    ReplyDelete
  4. ಚಿಕ್ಕಪ್ಪ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..ಯಾವುದೋ ತರಗತಿಯ ಪಾಠದಲ್ಲಿ ಓದಿದ ನೆನಪು...ಮಂದಿ ಏನು ಮಾಡಿದರು ಮಾತಾಡುತ್ತಾರೆ...ಸುಮ್ಮನೆ ಕೂತರೆ..ಕೆಲಸ ಮಾಡೋಲ್ಲ ಅಂತಾರೆ...ಕೆಲಸ ಮಾಡುತ ಇದ್ದರೆ..ಇವನು ಸುಮ್ಮನೆ ಕೂರೋಲ್ಲ..ಅಂತಾರೆ..ನಕ್ಕರೆ ಅಳೋಲ್ಲ ಅಂತಾರೆ, ಅತ್ತರೆ ನಗೋಲ್ಲ ಅಂತಾರೆ...ಈ ಜನವನ್ನು ಮೆಚ್ಚಿಸುವ ಬದಲು ಮನ ಮೆಚ್ಚಿಸಬೇಕು..ಇದು ನನ್ನ ಶಾಲೆಯಲ್ಲಿ ಒಬ್ಬ ಮಾಸ್ತರಿಂದ ಕಲಿತ ಪಾಠ...ಅದನ್ನು ಚಾಚು ತಪ್ಪದೆ ಪಾಲಿಸುತಿದ್ದೇನೆ..ಮನಕನಿಸಿದದನ್ನು ಯಾರಿಗೂ ನೋವು ಕೊಡದೆ ಮಾಡುವುದು...
    ಒಳ್ಳೆಯ ಹವ್ಯಾಸ ಮನದಲ್ಲಿರುವ ವ್ಯಾಸವನ್ನು ಹಿಗ್ಗಿಸುತ್ತದೆ..ಆಗ ಒಳ್ಳೆಯ ಯೋಚನೆ, ಧ್ಯೇಯಗಳು ತುಂಬುತ್ತವೆ..ಇದು ನನ್ನ ಅಭಿಪ್ರಾಯ...ಹಿರಿಯರು ನಮಗೋಸ್ಕರ ಪ್ರೀತಿ, ಪ್ರೇಮ, ಅಕ್ಕರೆ ಹಾರೈಕೆ ತೋರಿಸುತ್ತಾರೆ..ಅವರಿಗೆ ನಮನ ಸಲಿಸಲು...ಇದು ನಮ್ಮ ಒಂದು ಸಣ್ಣ ಪ್ರಯತ್ನ...

    ReplyDelete
  5. ಶ್ರೀಕಾಂತ
    ನಿನ್ನ ಲೇಖನ ನೋಡಿದರೆ ನೀನು ಏಕೆ ಗಂಭೀರ ವಿಷಯಗಳ ಬಗ್ಗೆ ಗಮನಹರಿಸಬಾರದು ಎಂದೆನಿಸುತ್ತದೆ. ಆ ಸಾಮರ್ಥ್ಯ ನಿನ್ನಲ್ಲಿದೆ ನಿನ್ನ ಆ ಸಾಮರ್ಥ್ಯ ಪ್ರತಿಭೆ ಬೆಳಕಿಗೆ ಬರಲಿ. ಈ ದಿಸೆಯಲ್ಲಿ ಪ್ರಯತ್ನಿಸು. ನೀನೊಬ್ಬ ಯಶಸ್ವೀ ಬರಹಗಾರನಾಗುವದರಲ್ಲಿ ಸಂಶಯವಿಲ್ಲ. ಆದರೆ ಲೇಖನ ನಮ್ಮ ನಮ್ಮ ಕುಟುಂಬ ಅಥವಾ ಸಂಸಾರ ಗಳಿಗೆ ಸೀಮಿತವಾಗಬಾರದು. ಇತ್ತ ಗಮನವಿರಲಿ. ಯಾವುದೇ ಸಲಹೆ ಸ್ವೀಕಾರದ ಸ್ವಾತಂತ್ರ್ಯ ನಿನ್ನದು.

    ಶುಭ ಹಾರೈಕೆಗಳೊಡನೆ,
    ನಾಗರಾಜ್ ಚಿಕ್ಕಪ್ಪ

    ReplyDelete
  6. ಸೂಪರ್ ಚಿಕ್ಕಪ್ಪ..

    ಕೋರವಂಗಲದ ಕ್ಷೀರಸಾಗರದಲ್ಲಿ ಅಮೃತ ಮಂಥನ ಮಾಡುವ ಶಕ್ತಿ, ಯುಕ್ತಿ ಇರುವ ನಾಗರಾಜ ಚಿಕ್ಕಪ್ಪ ಪಾದಾರ್ಪಣೆ ಮಾಡಿರುವುದು, ಆಶೀರ್ವದಿಸಿರುವುದು ತುಂಬಾ ಸಂತೋಷ ಕೊಡುತ್ತೆ...

    ಈಗಾಗಲೇ ಲೇಖನ ಪ್ರವಾಸ, ಸಿನಿಮಾ, ಸ್ನೇಹಿತರ ಬಗ್ಗೆ, ಸ್ನೇಹದ ಬಗ್ಗೆ, ನನಗಿಷ್ಟವಾಗುವ ವಿಷಯಗಳ ಬಗ್ಗೆ ಬರೆಯುತ್ತ ಇದ್ದೇನೆ...ನಿಮ್ಮೆಲ್ಲ ಆಶೀರ್ವಾದ ಇನಷ್ಟು ಬರೆಯುವ ಉತ್ಸಾಹ ತುಂಬುತ್ತಿದೆ..

    ಖಂಡಿತ ನಿಮ್ಮ ಸಲಹೆ ಗಣನೀಯವಾದದ್ದು...

    ReplyDelete