Wednesday, December 23, 2015

ಬೇತಾಳನ ಕಥೆಗಳು - ವಿಚಿತ್ರ ವಿಚಿತ್ರ

ಕಪ್ಪು ಅಂದರೆ ಕಾಡುಗಪ್ಪು... ಹುಲುಮಾನವರ ಸುಳಿವಿಲ್ಲಾ..

ಲಕ್ಷ್ಮಿನಾಥ  ಒಬ್ಬನೇ  ನೆಡೆದು ಹೋಗುತ್ತಿದ್ದ... ಬಾಯಲ್ಲಿ ಗಾಯಿತ್ರಿ ಮಂತ್ರ ಸಾಗುತ್ತಿತ್ತು. ಹೆದರಿಕೆ ಎಂದರೆ ಹೆದರಿಕೆ.. ಹೆದರಿಕೆ ಇಲ್ಲ ಅಂದರೆ ಹೆದರಿಕೆ ಇಲ್ಲ. ಒಂದು ರೀತಿಯ ಧೈರ್ಯಶಾಲಿ ಅವನು.. ಯಾವುದೇ ಪರಿಸ್ಥಿತಿ ಬಂದರೂ ಹೆದರಿಕೆ ಇಲ್ಲದೆ ಎದುರಿಸುತ್ತಿದ್ದ. ಆದರೆ ಧೈರ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಾಗಲಿ ಎಂದು ತನ್ನ ಇಷ್ಟವಾದ ಮಂತ್ರ ಜಪಿಸುತ್ತಿದ್ದ.

ಊ ಊ ಎಂದು ಗೂಬೆ ಕೂಗುತ್ತಿತ್ತು. ಸ್ಮಶಾನ ಮೌನ.. ಮರಗಳೋ ದೈತ್ಯಕಾರವಾಗಿತ್ತು.. ಆ ಕತ್ತಲಲ್ಲಿ ಅವೇ ಭೂತವಾಗಿ ಕಾಣುತ್ತಿತ್ತು. ವಿಚಿತ್ರ ವಿಚಿತ್ರ ಆಕಾರ ತಳೆದಿದ್ದ ಆ ಮರಗಳು ಎಂಥಹ ಗಟ್ಟಿ ಗುಂಡಿಗೆ ಇರುವವರ ಎದೆಯನ್ನು ಒಮ್ಮೆ ಝಲ್ ಎನ್ನಿಸುತ್ತಿದ್ದುದು ಸುಳ್ಳಲ್ಲ.

ಬಾಯಾರಿಕೆ ಆಗಿತ್ತು.. ಸುತ್ತಲೂ ನೋಡಿದರೆ ಬರಿ ಕತ್ತಲೆ ಬಿಟ್ಟರೆ ಬೇರೆ ಏನು ಇಲ್ಲ.

ಲಕ್ಷ್ಮಿ ಮನೆಗೆ ಹೋಗಬೇಕಾದರೆ.. ಈ ಸ್ಮಶಾನದ ಹಾದಿಯೇ ಕಾಲು ದಾರಿ.. ಇಲ್ಲವಾದರೆ ಅನೇಕ ಕಿಮೀ ಗಳಷ್ಟು ಹೆಚ್ಚು ನಡೆಯಬೇಕಿತ್ತು. ಅವನಿಗೆ ಹೇಗಿದ್ದರೂ ಗಾಯಿತ್ರಿ ಮಂತ್ರ ಇದೆ ನನ್ನ ಜೊತೆಯಲ್ಲಿ ಎಂದು ಹೊರಟೆ ಬಿಟ್ಟಿದ್ದ. ಇದೇನು ಮೊದಲಲ್ಲ, ಅನೇಕ ಬಾರಿ ಅಮಾವಾಸ್ಯೆ, ಸಂಕ್ರಮಣ, ಹುಣ್ಣಿಮೆ ಎನ್ನದೆ ನೆಡೆದು ಸಾಗಿದ್ದ ಚಿರಪರಿಚಿತ ಹಾದಿ.

ಇಂದೂ ಮನೆಗೆ ಬೇಗ ಹೋಗಬೇಕೆಂದು ಹೊರಟಿದ್ದರೂ, ಅರಿವಿಗೆ ಬಾರದ ಕೆಲಸಗಳು ಅವನನ್ನು ತಡೆಹಿಡಿದಿದ್ದವು. ಸರಿ ಕಚೇರಿಯಿಂದ ಹೊರಟಿದ್ದೆ ಸುಮಾರು ಮಧ್ಯ ರಾತ್ರಿ ಒಂದು ದಾಟಿತ್ತು. ತನ್ನ ಬೈಕ್ ಪಂಚರ್ ಆದ ಕಾರಣ ನಡೆದೆ ಹೊರಟಿದ್ದ.

ಆ ಸ್ಮಶಾನ ಎಷ್ಟು ಚಿರಪರಿಚಿತ ಅಂದರೆ, ಎಷ್ಟೋ ಘೋರಿಗಳ ಮೇಲೆ ಬರೆದಿದ್ದ ಹೆಸರು, ಜನನ, ಮರಣದ ದಿನಾಂಕ ಬಾಯಿಪಾಠ ಆಗಿ ಹೋಗಿತ್ತು. ಎಷ್ಟೋ ದಿನ ಬೇಕಂತಲೇ ಅವನು ತನ್ನ ಬೈಕ್ ಬಿಟ್ಟು ಈ ಕಾಲು ಹಾದಿಯಲ್ಲಿ ನಡೆದದ್ದು ಇತ್ತು.

ಅವನು ತನ್ನ ಯೋಚನೆಯಲ್ಲಿಯೇ ಮುಳುಗಿದ್ದ, ಬರಬರನೆ ಹೆಜ್ಜೆ ಹಾಕುತ್ತಿದ್ದ, ಗಾಯಿತ್ರಿ ಮಂತ್ರ ಸಾಗುತ್ತಿತ್ತು. ಅಚಾನಕ್ ಆ ಸ್ಮಶಾನದ ಮೂಲೆಯಲ್ಲಿ ಒಂದು ಬೆಳಕು ಕಂಡಿತು. ಅಲ್ಲಿ ಒಬ್ಬ ಕಾವಲುಗಾರ ವಾಸವಾಗಿದ್ದ ಮನೆ. ಆದರೆ ತೀರ ಒಂದು ವಾರದ ಕೆಳಗೆ, ಜೀವನದಲ್ಲಿ ಬೇಸತ್ತು, ಅದೇ ಮನೆಯ ಹೊರಗಿನ ಒಂದು ಹುಣಿಸೇಮರಕ್ಕೆ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದ. ಈ ವಿಷಯ ಲಕ್ಷ್ಮಿಗೂ ಗೊತ್ತಿತ್ತು. ಆ ಮನೆಯಿಂದ ಬೆಳಕು ಬಂದದ್ದು ಇವನಿಗೆ ಆಶ್ಚರ್ಯ ಜೊತೆಗೆ ಸ್ವಲ್ಪವೇ ಸ್ವಲ್ಪ ಹಣೆಯಲ್ಲಿ ಬೆವರು ಮೂಡಿತ್ತು.

ಒಮ್ಮೆ ಹಾಗೆ ಆ ಕಾವಲುಗಾರನನ್ನು ನೆನೆಸಿಕೊಂಡಿತು ಮನ. ದಣಿವಾಗಿದ್ದಾಗ ಅಥವಾ ಮಾತಾಡಲು ವಿಷಯ ಬೇಕಿದ್ದಾಗ, ಲಕ್ಷ್ಮಿ ಅನೇಕ ಬಾರಿ ಇದೆ ಕಾವಲುಗಾರನ ಜೊತೆ ಮಾತಾಡಲು ಕೂರುತಿದ್ದದು ಇತ್ತು. ಕಾವಲುಗಾರ ಇವನನ್ನು ನೋಡಿದ ತಕ್ಷಣ, ಅಲ್ಲಿಯ ಯಾವುದೋ ಸಮಾಧಿಯನ್ನು ಕೈಯಿಂದ ಗುಡಿಸಿ, ಬನ್ನಿ ಸರ್ ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ, ಇಬ್ಬರೂ ಲೋಕಾಭಿರಾಮವಾಗಿ ಮಾತಾಡುತ್ತ ಗಣೇಶ್ ಬೀಡಿಯನ್ನು ಎಳೆಯುತಿದ್ದ ನೆನಪು ಹಾಗೆ ಮನದಲ್ಲಿ ಹಾದು ಹೋಯಿತು.

ಅದೇ ಗುಂಗಿನಲ್ಲಿ, ಲಕ್ಷ್ಮಿ ಆ ಬೆಳಕಿನ ಕಿರಣದತ್ತ ಹೆಜ್ಜೆ ಹಾಕಿದ.

ಬಾಗಿಲು ಅರ್ಧವೆ ತೆಗೆದಿತ್ತು, ಚಿಮಣಿ ಬುಡ್ಡಿ ಅಲ್ಪ ಸ್ವಲ್ಪ ಶಕ್ತಿ ಉಳಿಸಿಕೊಂಡು ಬೆಳಕನ್ನು ಬೀರುತ್ತಿತ್ತು. ಬಾಗಿಲನ್ನು ತಳ್ಳಿದ ಲಕ್ಷ್ಮಿ, ಕರ್ ಎಂದು ತುಸು ತುಸುವೇ ತೆರೆದುಕೊಂಡಿತು. ಯಾಕೋ ಮೊದಲ ಬಾರಿಗೆ ಗಾಬರಿ ಆಯಿತು ಲಕ್ಷ್ಮಿಗೆ.

"ಅರೆ ಲಕ್ಷ್ಮಿ ಬಂದೆಯಾ ಬಾ.. ಅಲ್ಲಿ ನೀರಿದೆ.. ಕುಡಿದು ದಣಿವಾರಿಸಿಕೋ"

ಹೃದಯದ ಬಡಿದ ಲಕ್ಷ್ಮಿಗೆ ಕೇಳುವಷ್ಟು ಜೋರಾಗಿ ಹೊಡೆದುಕೊಳ್ಳಲು ಶುರುವಾಯಿತು. ಆ ಮಂದ ಬೆಳಕಲ್ಲಿ ಸುತ್ತಲೂ  ಕಣ್ಣಾಡಿಸಿದ .. ಅರೆ ಬರೆ ಕತ್ತಲು ಬೆಳಕಲ್ಲಿ ಅಸ್ಪಷ್ಟ ದೃಶ್ಯ... ಒಂದಷ್ಟು ಪುಸ್ತಕಗಳ ರಾಶಿಯೇ ಇತ್ತು.. ಕಾವಲುಗಾರ ಅನಕ್ಷರಸ್ತ ಎಂದು ಗೊತ್ತಿದ್ದ ಲಕ್ಷ್ಮಿಗೆ ಸ್ವಲ್ಪ ಸ್ವಲ್ಪವೇ ಹೆದರಿಕೆ ಶುರುವಾಯಿತು. ನಾಲಿಗೆ ಒಣಗುತ್ತಿತ್ತು, ಗಾಯಿತ್ರಿ ಮಂತ್ರದ ಅಕ್ಷರಗಳು  ಲಯ ತಪ್ಪಲು ಶುರುಮಾಡಿದವು. ಯಾರೋ ಮೂಲೆಯಲ್ಲಿ ಕುಳಿತು ಮೆಲು ದನಿಯಲ್ಲಿ ಪುಸ್ತಕ ,ಓದುತ್ತಿದ್ದಂತೆ ಭಾಸವಾಯಿತು. ಹಣೆಯಲ್ಲಿ ಬೆವರಿನ ಹನಿಗಳು ಅಲಂಕಾರಗೊಂಡವು.. ಬೆರಳುಗಳು ನಡುಗಲು ಶುರುಮಾಡಿದವು, ಕಾಲುಗಳು ಸ್ವಾಧೀನ ಕಳೆದುಕೊಂಡೆವು ಎಂದು ಸಾರುತ್ತಿತ್ತು. ಯಾಕಾದರೂ ಈ ದಾರಿಯಲ್ಲಿ ಬಂದೆನೋ ಎಂದು ಮೊದಲ ಬಾರಿಗೆ ಅನಿಸಲು ಶುರುಮಾಡಿದವು.

ಕಿಟಕಿಗಳು ಕರ್ ಕರ್ ಎಂದು ಸದ್ದು ಮಾಡುತ್ತಾ ಮುಚ್ಚಿಕೊಂಡವು. ಗಾಬರಿ ಇನ್ನಷ್ಟು ಹೆಚ್ಹಾಗಿ ಹೆದರಿಕೆ ಶುರು ಆಯಿತು. ಕಿಟಕಿಗಳು ಮುಚ್ಚಿದ ರಭಸಕ್ಕೆ ದೀಪ ಜೋರಾಗಿ ನೃತ್ಯ ಮಾಡುತ್ತಾ ತನ್ನ ಕೆಲಸ ಆಯಿತು ಎಂದು ಸಾರಲು ಶುರುಮಾಡಿದವು.
ರಫ್ ಪಟ್..... ತಿರುಗಿ ನೋಡಿದ.. ಬಾಗಿಲು ರಪಾರನೆ ಮುಚ್ಚಿಕೊಂಡಿತು.

ಮೂಲೆಯಲ್ಲಿದ್ದ ಒಂದು ಆಕೃತಿ.. ಗಹಗಹಿಸಿ ನಗುವಂತೆ ಭಾಸವಾಯಿತು.. ಸದ್ದು ಜೋರಾಗಿಯೇ ಕೇಳುತ್ತಿತ್ತು..ಲಕ್ಷ್ಮಿಗೆ ಇಂದು ಭ್ರಮೆಯೋ ಅಥವಾ ನಿಜವೋ ಅರಿಯದೆ ಹೋಯಿತು. ಹೆದರಿಕೆಯಿಂದ ಬಟ್ಟೆ ಪೂರ ಒದ್ದೆಯಾಯಿತು. ಗಂಟಲು ಪೂರ್ಣ ಹೂತು ಹೋಗಿತ್ತು.. ಕಿರುಚಿಕೊಂಡರೂ ಯಾರಿಗೂ ಕೇಳದ ಹಾದಿ ಅದು.

ತಗೋ.. ಇದನ್ನು ತಗೋ.. ಇದು ಬಾಗಿಲಿನ ಬೀಗದ ಕೈ.. ಇದನ್ನು ನಿನ್ನ ಜೇಬಿನಲ್ಲಿ ಇಟ್ಟುಕೋ...
ಇಲ್ಲಿ ಕುಳಿತು.. ಈ ಪುಸ್ತಕಗಳನ್ನು ಓದಿಯೇ ನೀನು ಹೊರಗೆ ಹೋಗಬೇಕು.   ನಾನೇ ನಿನ್ನ ಜೇಬಿನಿಂದ ಈ ಕೀ ಯನ್ನು ತೆಗೆದು ನಿನಗೆ ಹೊರ ಹೋಗಲು ಅನುಮತಿ ಕೊಡುತ್ತೇನೆ.. ಅಲ್ಲಿಯ ತನಕ ನಿನಗೆ ಹೊರಗೆ ಹೋಗಲು ಅನುಮತಿಯಿಲ್ಲ..

ಕಣ್ಣುಗಳು ತೇಲಾಡ ತೊಡಗಿದವು.. ಹೃದಯ ಒಡೆದೇ ಹೋಗುತ್ತೇನೋ ಅನ್ನುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು.. ಬೇರೆ ದಾರಿಯಿರಲಿಲ್ಲ.. ಮೈಯಲ್ಲಿ ಇದ್ದ ನೀರೆಲ್ಲಾ ಬೆವರಾಗಿ ಹರಿದು ಹೋಗುತ್ತಿತ್ತು. ದೇಹ ಕಂಪಿಸುತ್ತಿತ್ತು..

ಒಂದು ಕಡೆ ದೆವ್ವಾ ಅಂದು ಕೊಳ್ಳಬಹುದಾದ ಆಕೃತಿ ... ಇನ್ನೊಂದು ಕಡೆ ಓದಬೇಕಾದ ಪುಸ್ತಕ... ಅದರ ಗಂಭೀರ ದ್ವನಿಯಿಂದ ಅನ್ನಿಸಿದ್ದು ಇದು ಕಲ್ಲು ಮನಸ್ಸಿನ ದೆವ್ವವಲ್ಲ.. ಸರಿ ಧೈರ್ಯ ಮಾಡಿ ಮಾತಾಡೋಣ ಅನ್ನಿಸಿ..

"ನೀ ಯಾರಪ್ಪ... .. ನನ್ನ ಹೋಗಲು ಬಿಡು.... ಎಂದು ಹೇಳುತ್ತಾ ನಿಧಾನವಾಗಿ ಬಾಗಿಲನ್ನು ಕಾಣದೆ ಅಸ್ಪಷ್ಟ ರೀತಿಯಲ್ಲಿ ಹೆಜ್ಜೆ ಹಾಕಿ ಬಾಗಿಲಿನ ಹತ್ತಿರ ಬಂದಾಗ... ಒಂದು ದೊಡ್ಡ ಪುಸ್ತಕದ ಗಂಟಿಂದ ಯಾರೋ ತಲೆಗೆ ಬಡಿದ ಹಾಗೆ ಆಯಿತು.. ಎಚ್ಚರ ತಪ್ಪಿ ಬಿದ್ದ.. ಬಾಯಿಂದ ರಕ್ತ ಜಿನುಗಿತ್ತು..

ಕಣ್ಣು ಬಿಟ್ಟಾಗ.. ಆಸ್ಪತ್ರೆಯ ಒಂದು ಹಾಸಿಗೆಯಲ್ಲಿ.. ಗ್ಲುಕೋಸ್ ಚುಚ್ಚಿಸಿಕೊಂಡು ಮಲಗಿದ್ದ.. ಹಾಗೆ ಕಣ್ಣು ಹಾಯಿಸಿದ.. ಎಲ್ಲಿದ್ದೇನೆ ಎಂದು ತಿಳಿದುಕೊಳ್ಳಲು..

ಕಣ್ಣುಗಳು ಪಕ್ಕಕ್ಕೆ ವಾಲಿದವು.. ಅಲ್ಲಿನ ದೃಶ್ಯ ಕಂಡು ಹೃದಯ ಹೊಡೆದುಕೊಳ್ಳಲು ಶುರುಮಾಡಿದವು...

ಆಸ್ಪತ್ರೆಯ ತನ್ನ ಮಂಚದ ಮೂಲೆಯಲ್ಲಿ ಒಂದು ಭಯಾನಕ ಆಕೃತಿ ದೊಡ್ಡ ಪುಸ್ತಕದ ಗಂಟನ್ನು ಇಟ್ಟುಕೊಂಡು ಓದುತ್ತಾ ಕೂತಿತ್ತು..


3 comments:

 1. ಅಯ್ಯಪ್ಪಾ, ಎಂತಹ ಭಯಾನಕ ಕತೆ ಇದು. (ನಾನು ರಾತ್ರಿಯ ಹೊತ್ತಿನಲ್ಲಿ ಇದನ್ನು ಓದಬಾರದಿತ್ತು!)

  ReplyDelete
 2. Superaagide.. olle suspense story barediddeeri.. nimma normal stylegintha tumba vibhinnavaagide.. sakat ishta aythu... continue to write some more stories :)

  ReplyDelete
 3. ha ha :) boothavilla.... pishaachiyilla iddaru kaanolla..... :p
  ಆ ಸ್ಮಶಾನ ಎಷ್ಟು ಚಿರಪರಿಚಿತ ಅಂದರೆ, ಎಷ್ಟೋ ಘೋರಿಗಳ ಮೇಲೆ ಬರೆದಿದ್ದ ಹೆಸರು, ಜನನ, ಮರಣದ ದಿನಾಂಕ ಬಾಯಿಪಾಠ ಆಗಿ ಹೋಗಿತ್ತು.... kaadida saalu idu Sri :)

  ReplyDelete