Tuesday, December 8, 2015

ಗೌರಮ್ಮಜ್ಜಿ ಒಂದು ಹಿರಿಯ ತಲೆಮಾರಿನ ಕೊಂಡಿ - ಸಡಿಲವಾಯಿತು

ಕ್ರಿಕೆಟ್ ಆಟದಲ್ಲಿ ಹೀಗಾಗುವುದು ಸಹಜ

ಇಬ್ಬರೂ ಬ್ಯಾಟ್ಸಮನ್ ಅಥವಾ ಇಬ್ಬರು ಬೌಲರ್ ಗಳು ಒಟ್ಟಿಗೆ ಒಟ್ಟಿಗೆ ಜೊತೆಯಾಗಿದ್ದಾಗ ನಡುವಿನ ನಂಟು ಯಾವುದೇ ಗೋಂದು ಕೂಡ ಅಷ್ಟು ಗಟ್ಟಿಯಾಗಿರುವುದಿಲ್ಲ..

ಹಾಸನ ಬಳಿಯ ಕೌಶಿಕದ ಗ್ರಾಮದ ನಮ್ಮ ಅಮ್ಮನ ಸೋದರತ್ತೆ ಅರ್ಥಾತ್ ನಮ್ಮ ಅಜ್ಜ ಅಜ್ಜಿ ಈ ರೀತಿಯ ನಂಟಿಗೆ ಹೆಸರಾಗಿದ್ದರು.

ಸಾಮಾನ್ಯ ಮಾನವನ ಜೀವನದ ಅವಧಿ ಸುಮಾರು ಎಪ್ಪತ್ತು ವರ್ಷಗಳು.. ಆದರೆ ನಮ್ಮ ಅಜ್ಜ ಅಜ್ಜಿ ಸುಮಾರು ಎಪ್ಪತ್ತಕ್ಕು ಹೆಚ್ಚು ವರ್ಷಗಳ ಸುಧೀರ್ಘ ವೈವಾಹಿಕ ಜೀವನ ನಡೆಸಿ, ಮೂರು ವರ್ಷಗಳ ಹಿಂದೆ ಅಜ್ಜ ನಮ್ಮನ್ನು ಈ ಭುವಿಯಲ್ಲಿ ಬಿಟ್ಟು ಹೊರಟರು.

ಸುಧೀರ್ಘ ಬಾಳಿನ ಸಂಗಾತಿ ತಮ್ಮನ್ನು ಅಗಲಿದ ದುಃಖವನ್ನು ನುಂಗಿಕೊಂಡು ತಮ್ಮ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳ ತುಂಬು ಕುಟುಂಬವನ್ನು ನೋಡುತ್ತಾ ಅವರ ಏಳಿಗೆಯನ್ನು ನೋಡುತ್ತಾ ಕಳೆದಿದ್ದ ನಮ್ಮ ಅಜ್ಜಿ ಇಂದು ತಮ್ಮ ಬಾಳ ಬಂಧುವನ್ನು ಸೇರಲು ಸ್ವರ್ಗಾರೋಹಣ ಮಾಡಿದ್ದಾರೆ.

ಶಂಖದ ದೇವರ ಭಟ್ಟರ ಕುಟುಂಬದ ಎರಡನೇ ತಲೆಮಾರಿನ ಒಂದು ಕೊಂಡಿ ಇಂದು ಕಳಚಿಕೊಂಡಿತು.

ಪುಟ್ಟ ವಯಸ್ಸಿನಲ್ಲಿಯೇ ಪಡಬಾರದಷ್ಟು ಕಷ್ಟ ಪಟ್ಟು, ಒಂದು ತಲೆಮಾರಿನ ಇತಿಹಾಸದ ಜೊತೆಯಲ್ಲಿಯೇ ಬದುಕಿದ ಅಜ್ಜಿ, ಅಕ್ಷರಶಃ ಇಂದಿನ ಕಾಲಕ್ಕೆ ಅದ್ಭುತ ಮಾಹಿತಿ ಕೇಂದ್ರವಾಗಿದ್ದರು. ಎಲ್ಲರನ್ನೂ ಆತ್ಮೀಯವಾಗಿ ಹೆಸರಿಡಿದು ಮಾತಾಡಿಸುತ್ತಿದ್ದ ಅಜ್ಜಿ, ಅವರ ಅರಿವಿಗೆ ಬರದ ವಿಷಯ ಇಲ್ಲ ಎಂದರೆ ತಪ್ಪಿಲ್ಲ. ಅಷ್ಟು ನಿಖರವಾದ ಮಾಹಿತಿ ಅವರಲ್ಲಿ ಇರುತ್ತಿತ್ತು.

ಅವರ ಅಗಲಿಕೆ ಸಹಿಲಾರದಷ್ಟು ನೋವು ತರುತ್ತದೆ, ಅವರಿಲ್ಲ ಅನ್ನುವ ನೋವು ಇಂದು ನಾಳೆಗೆ ಮುಗಿಯುವುದಲ್ಲ. ಅದು ನಿರಂತರ.

ಅಜ್ಜಿ ನಿಮ್ಮಂತಹ ತಾಳ್ಮೆ, ಕಷ್ಟ ಸಹಿಷ್ಣುವನ್ನು ಆ ಭಗವಂತ ನಮ್ಮೆಲ್ಲರ ಬದುಕನ್ನು ಹರಸಲು ಈ ಭುವಿಗೆ ಕಳಿಸಿದ್ದ. ನಿಮ್ಮ ಹಾರೈಕೆ, ಆಶೀರ್ವಾದ ಎಂಬತ್ತೆಂಟು ವಸಂತಗಳನ್ನು ಬೆಳಗಿದೆ ಎಂದಾಗ ನಮಗೆಲ್ಲಾ ಒಂದು ಅದ್ಭುತವಾದ ಅನುಭವ ಹೃದಯಕ್ಕೆ ತಾಗುತ್ತದೆ.

ಕಷ್ಟಗಳನ್ನು ಬಂದ ಹಾಗೆ ಸ್ವೀಕರಿಸಿ, ಮನೆ ಮನವನ್ನು ಬೆಳಗುತ್ತಾ, ಆಚಾರ ವಿಚಾರಗಳು ಹೀಗೆ ಇರಬೇಕು ಎಂದು ನಿಮ್ಮ ಪರಿಧಿಯಲ್ಲಿ ಬಂದ ಎಲ್ಲರಿಗೂ ತಿಳಿಸುತ್ತಾ ಬದುಕು ಸಾಗಿಸಿದ ಬಗೆ ನಮಗೆಲ್ಲ ಅತ್ಯಂತ ಗೌರವ ಇದೆ. ಸಂಪ್ರದಾಯ, ಹಬ್ಬ ಹರಿದಿನಗಳ ಆಚರಣೆಯ ಬಗ್ಗೆ ಏನೇ ಅನುಮಾನ ನನ್ನ ಅಮ್ಮನಿಗೆ ಬಂದರೂ, ಇರು ಗೌರಮ್ಮನನ್ನು ಒಮ್ಮೆ ಕೇಳುತ್ತೇನೆ ಎಂದು ಧೈರ್ಯವಾಗಿ ತನ್ನ ಸೋದರತ್ತೆಯ ಬಳಿ ತಮ್ಮ ಅನುಮಾನ ಬಗೆ ಹರಿಯುತ್ತದೆ ಎನ್ನುವಷ್ಟು ಆತ್ಮ ವಿಶ್ವಾಸ ತುಂಬಿ ಕೊಂಡಿದ್ದರ ಹಿಂದೆ, ಈ ಹಿರಿಯ ಅಜ್ಜಿಯ ಬಳಿ ಇದ್ದ ಜ್ಞಾನದ ಅರಿವಾಗುತ್ತದೆ.

ಅಜ್ಜಿ ನಿಮ್ಮ ಕಾಲದಲ್ಲಿ ನಾವು ಇದ್ದೆವು, ನಿಮ್ಮನ್ನು ನೋಡಿದ್ದೆವು, ನಿಮ್ಮ ಆಶೀರ್ವಾದ ಪಡೆದಿದ್ದೆವು, ನಿಮ್ಮ ಆಶೀರ್ವಚನದ ಕವಚ ತೊಟ್ಟಿದ್ದೆವು ಎನ್ನುವ ಭಾವವೇ ನಮಗೆ ಶಕ್ತಿಯನ್ನು ಕೊಡುತ್ತದೆ. ಬಹುಶಃ ಆ ಸೃಷ್ಟಿ ಕರ್ತನಿಗೂ ಈ ರೀತಿಯ  ಶಕ್ತಿ ಬೇಕು ಎನ್ನಿಸುತ್ತದೆ, ಅದಕ್ಕಾಗಿ ತನ್ನ ಬಳಿಗೆ ನಿಮ್ಮನ್ನು ಬರಮಾಡಿಕೊಂಡಿದ್ದಾನೆ.

ತುಂಬಿದ ಬದುಕನ್ನು ನಿರ್ವಹಿಸಿದ ಪರಿಗೆ ನಾವೆಲ್ಲರೂ ಶಿರಸ ನಮಿಸುತ್ತೇವೆ...

ಹೋಗಿ ಬನ್ನಿ ಅಜ್ಜಿ.. ನಿಮ್ಮ ಆಶೀರ್ವಾದ.. ನೀವು ಶ್ರೀಕಾಂತಾ ಎಂದು ಕರೆಯುವ ಆ ದನಿ ನನ್ನ ಕಿವಿಯಲ್ಲಿ ಸದಾ ಗುನುಗುತ್ತಲಿರುತ್ತದೆ..
                                      

ಅಜ್ಜಿ ನಿಮ್ಮ ಬದುಕಿಗೆ ಅಕ್ಷರಗಳಿಂದ ಒಂದು ನಮನ.

1 comment:

  1. ಫೋಟೋದಲ್ಲಿಯ ಅವರ ಮುಖವೇ ಗೌರವಭಾವವನ್ನು ಉಕ್ಕಿಸುತ್ತದೆ. ನಿಮಗೆ ಸಾಂತ್ವನ ಹೇಳಬಯಸುತ್ತೇನೆ. ನಿಮ್ಮ ಅಜ್ಜಿಗೆ ನನ್ನ ವಂದನೆಗಳು.

    ReplyDelete