Tuesday, December 15, 2015

"ಅರಳಿ"ದ ಹೃದಯಗೀತೆ

ಅಮ್ಮನನ್ನು ಅಮ್ಮ, ತಾಯಿ, ಅಬ್ಬೆ, ಹೀಗೆ ನಾನಾ ರೀತಿಯಲ್ಲಿ ಕರೆಯುತ್ತಾರೆ.. ಹೇಗೆ ಕರೆದರೂ ಆ ಕರುಳಿನ ಕರೆಗೆ ಓಗೊಡುವ ಸುಂದರ ಹೃದಯ ತಾಯಿಯದು. ಕನ್ನಡಾಂಬೆಗೆ ಅರ್ಚಿಸಲು ಹೂವು, ಅಕ್ಷತೆ, ಶ್ರೀ ಗಂಧ, ಏನೇ ಇದ್ದರೂ ಇಲ್ಲದಿದ್ದರೂ ಅಕ್ಷರಗಳ ಜಾತ್ರೆಯೇ ಸಾಕು.

3K ಎನ್ನುವ ಸಮಾನ ಮನಸ್ಕರ ತಂಡವೂ ಇಂಥಹ ಅಕ್ಷರಗಳ ಅರ್ಚನೆಯನ್ನು ಹಲವಾರು ವರ್ಷಗಳಿಂದ ಮಾಡುತ್ತಲೇ ಇದ್ದಾರೆ. ಇಂಥಹ ಪರಿಶ್ರಮದ ಹೃದಯಾಳದಿಂದ ಹೊರಹೊಮ್ಮಿದ ಎರಡು ಕೃತಿಗಳು ಭಾವ ಸಿಂಚನ ಹಾಗೂ ಶತಮಾನಂಭಾವತಿ.  ಈ ವಸಂತದಲ್ಲಿ ಮೂಡಿ ಬಂದದ್ದು "ಹೊಂಗೆಮರದಡಿ ನಮ್ಮ ನಿಮ್ಮ ಕಥೆಗಳು". ಹರಿದು ಬಂದ ಅನೇಕ ಕಥೆಗಳಲ್ಲಿ ನಾ  ಬರೆಯಲು ಪ್ರಯತ್ನ ಪಟ್ಟ ಒಂದು ಬರಹವನ್ನು ಪ್ರಕಟಿಸಿ ಹೊಂಗೆ ಮರದಡಿ ನನಗೂ ಒಂದು ಜಾಗ ಕೊಟ್ಟ 3K ತಂಡಕ್ಕೆ ನನ್ನ ಶಿರಸ ನಮನಗಳು. 

*****


ಗಿಜಿ ಗಿಜಿಗುಡುತ್ತಲಿದ್ದರೂ,  ಕೋಟೆ ಕೊತ್ತಲು ಹೊಂದಿದ್ದ ಪುರಾತನ ಅನ್ನಿಸಿದರೂ, ಆಧುನಿಕತೆಯ ಸೋಗು ತೊಟ್ಟ ಮಲೆನಾಡಿನ ಹೆಬ್ಬಾಗಿಲಿನ ಒಂದು ಊರು. ಅಲ್ಲೊಂದು ಪುಟ್ಟ ಮನೆ. ಮನೆಯೊಳಗೆ ಮನದೊಳಗೆ ಸದಾ ನೆಲೆ ನಿಂತ ಪ್ರೀತಿ ತುಂಬಿದ ಉಸಿರು.  ಪುಟ್ಟ ಮಗುವಾಗಿದ್ದಾಗಿಂದ ಒಂದು ರೀತಿಯಲ್ಲಿ ಕೀಳರಿಮೆಯಲ್ಲಿಯೇ ಬೆಳೆಯುತ್ತಿದ್ದ ಮಗು.

ಶ್ಯಾಮಲ ವರ್ಣ.. ಸುಂದರ ಅನ್ನಿಸುವುದಕ್ಕೆ ಅಪವಾದವಾಗಿದ್ದ ರೂಪು, ರೇಷ್ಮೆಯಂತೆ ಗಾಳಿ ಬಂದರೆ ಹುಲ್ಲುಗಾವಲಾಗುತ್ತಿದ್ದ ತಲೆಗೂದಲು, ಯಾರೇ ಬಂದರೂ ಎರಡನೇ ಬಾರಿಗೆ ನೋಡದ ಮಗು ಅದು.

ಅದಕ್ಕಿದ್ದ ಒಂದೇ ಒಂದು ವರ ಅಂದರೆ.. ಅಸಾಧ್ಯ ತಲೆನೋವು. ಹೊಟ್ಟೆ ಹಸಿದರೆ ಮುಗಿಯಿತು ತಲೆಶೂಲೆ ಅಭ್ಯಾಗತ ಅತಿಥಿಯಂತೆ ಒಕ್ಕರಿಸಿಬಿಡುತಿತ್ತು. ಎಷ್ಟೋ ದಿನಗಳು ತಲೆನೋವು ತಾಳಲಾರದೆ ತನ್ನ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆದುಕೊಂಡು ಸಮಾಧಾನ ಮಾಡಿಕೊಳ್ಳುತ್ತಿತ್ತು ಆ ಮಗು. ಅದರಲ್ಲೂ ಹೊಟ್ಟೆ ಹಸಿದರೆ ಮುಗಿಯಿತು, ಮೊದಲೇ ಅಕ್ಕಿಯ ಡಬ್ಬಾ ಯಾವಾಗಲೂ ಕಸ್ತೂರಿ  ನಿವಾಸದ ವಂಶದ ಹಾಗೆ ತಳವನ್ನೇ ತೋರಿಸುತ್ತಿತ್ತು ☺☺☺!

ಹೊಟ್ಟೆಯನ್ನು ಭೂಮಿಗೆ ಒತ್ತುಕೊಂಡು ಆ ಭೂಮಿಯ ಕಾವನ್ನೇ ತನ್ನ ಹೊಟ್ಟೆಗೆ ಆಧಾರ ಮಾಡಿಕೊಂಡು ಮಲಗುತ್ತಿದ್ದ ಅ ಮಗುವಿಗೆ ಆಧಾರವಾಗುತ್ತಿದ್ದದು ಕೋಟೆ ಕೊತ್ತಲಿನ ಆಂಜನೇಯ ದೇವಸ್ಥಾನದ ಪ್ರಸಾದ ಇಲ್ಲವೇ ಮನೆಯ ಮಾಲೀಕರು ನೀಡುತ್ತಿದ್ದ ಉಳಿದ ಅನ್ನ.

ಹೀಗಿದ್ದರೂ ಆ ಮಗುವಲ್ಲಿ ಒಂದು ಅದ್ಭುತ ಭಾವ ಬೆಳೆಯುತ್ತಲಿತ್ತು. ಸದಾ ಆಂಜನೇಯನ ದೇವಸ್ಥಾನದಲ್ಲಿ ಕೇಳುತ್ತಿದ್ದ ಭಗವದ್ಗೀತೆ ಪಠಣ, ತನಗೆ ಅರಿವಿಲ್ಲದೆ ಶ್ರೀ ಕೃಷ್ಣನ ಮೇಲೆ ಮತ್ತು ಗೀತ ಎನ್ನುವ ಹೆಸರಿನ ಮೇಲೆ ಅಪರಿಮಿತ ಪ್ರೀತಿ ಅರಳಿಬಿಟ್ಟಿತು.

ಅರೆ ಆ ಪ್ರೀತಿ ಅರಳಲು ಅರಳಿ ಮರವೂ ಕೂಡ ಜೊತೆಯಾಗಿತ್ತು. ಹೌದು ಅರಳಿಮರ ಎಲೆಯನ್ನು ನೀವೆಲ್ಲರೂ ನೋಡೇ ನೋಡಿರುತ್ತೀರಿ. ಎಲೆಯ ತೊಟ್ಟು ಸಣ್ಣದಾಗಿರುತ್ತದೆ.. ಆಮೇಲೆ ಅಗಲವಾಗುತ್ತದೆ, ನಂತರ ಪ್ರೀತಿಯ ಹೃದಯದ ಆಕೃತಿ ಮೂಡುತ್ತದೆ.. ನಂತರ ಅದರ ಆಕೃತಿ ತೀವ್ರವಾಗುತ್ತಾ ಹೋಗುತ್ತದೆ.
ಚಿತ್ರಕೃಪೆ - ಗೂಗಲ್ 

ಈ ಅರಳಿ ಎಲೆಯ ಆಕಾರ ಅವನ ಮನಸ್ಸನ್ನು ಬಹಳ ಸೆಳೆದಿತ್ತು. ಆ ಅರಳಿಮರವನ್ನು ಪ್ರದಕ್ಷಿಣೆ ಹಾಕಲು ಅಲ್ಲೊಂದು ಹುಡುಗಿ ದಿನವೂ ಬರುತ್ತಲಿತ್ತು. ಅವಳನ್ನು ನೋಡುತ್ತಲೇ ಬೆಳೆದ ಆ ಮಗು, ಸುಂದರ ಅಯ್ಯೋ ಅಯ್ಯೋ ತಪ್ಪು ತಪ್ಪು ಸುಂದರವಲ್ಲ.....ಆದರೆ ಪ್ರಾಯಕ್ಕೆ ಬಂದಿತು. ಆ ಹುಡುಗಿಯೂ ಪ್ರಾಯಕ್ಕೆ ಬಂದಿದ್ದಳು. ಬಾಲ್ಯದಿಂದಲೂ ಕಿರುಗಣ್ಣಲ್ಲೇ ನಿಂತಿದ್ದ ನೋಟ, ಯೌವನಕ್ಕೆ ಬಂದಾಗ ಅದು ಮೆಲ್ಲಗೆ ಪ್ರೀತಿಯ ಹಾದಿಯಲ್ಲಿ ಸಾಗುತ್ತಿತ್ತು.

ಅರಳಿ ಎಲೆಯ ಹಾಗೆಯೇ ಅವನ ಕಣ್ಣುಗಳಲ್ಲಿ ಮತ್ತು ಹೃದಯದಲ್ಲಿ ಆರಂಭವಾದ ಒಂದು ಸಣ್ಣ ನೋಟ, ಮೆಲ್ಲಗೆ ವಿಸ್ತರಿಸುತ್ತಾ ಹೋಗಿ, ಹಾಗೆಯೇ ಮುಂದುವರೆದು ಅರಿವಿಲ್ಲದ ಪ್ರೀತಿಯ ಆಕೃತಿ ಪಡೆಯುತ್ತಾ ಅದು ಪ್ರೇಮದ ತೀವ್ರತೆಯನ್ನು ಪಡೆಯುತ್ತಲಿತ್ತು.

ಆ ಹುಡುಗಿಯ ಹೆಸರು... ಇನ್ನೇನು ನಿಮಗೆ ಗೊತ್ತೇ ಇದೆಯಲ್ಲ ಅವನ ಪ್ರೀತಿಯ ಹೆಸರು "ಗೀತ". ಆ ಹುಡುಗಿ ಸುಂದರವಾಗಿದ್ದಳು. ಅವನು ಇಷ್ಟಪಡುವ ಉದ್ದನೆ ಜಡೆ, ಹೊಳಪು ಕಣ್ಣುಗಳು, ನೀಳ ನಾಸಿಕ, ಅದಕ್ಕೆ ಹೇಳಿ ಮಾಡಿಸಿದ ಹಾಗೆ ಹೊಳೆಯುವ ಮೂಗುಬೊಟ್ಟು, ಎರಡು ಹುಬ್ಬುಗಳ ನಡುವೆ ಇಡುವ ಹಣೆ ಬೊಟ್ಟಿನ ಕೆಳಗೆ ಒಂದು ಚಿಕ್ಕ ದೇವರ ಕುಂಕುಮ ಇಡುವ ಅವಳ ಮೊಗವನ್ನು ನೋಡುವುದರಲ್ಲಿಯೇ ಅವನಿಗೆ ಆನಂದ. ಅವಳ ಬಣ್ಣ, ಅರೆ ಬಣ್ಣ ಬಿಡಿ ಅವನಿಗೆ ಯಾವಾತ್ತಿಗೂ ಬಣ್ಣದ ಬಗ್ಗೆ ಮೋಹ ಇರಲೇ ಇಲ್ಲ. ಇಬ್ಬರೂ ಶ್ಯಾಮಲಾ ವರ್ಣದ ಕುಸುಮಗಳು.

ಕಣ್ಣಲ್ಲೇ ಗೋಪುರ ಕಟ್ಟಿಕೊಂಡರು. ಅವನು ಒಮ್ಮೆ ಧೈರ್ಯ ಮಾಡಿ ಕೇಳಿಯೇ ಬಿಟ್ಟಾ.

"ಏನ್ರಿ! ನಾ ನಿಮಗೆ ಇಷ್ಟವಾದರೆ ನೀವು ಒಂದು ಎಳೆಯ, ಹಸಿರಾದ ಅರಳಿ ಎಲೆಯನ್ನು ಕೊಡಿ.. ಇಷ್ಟವಿಲ್ಲದೆ ಹೋದರೆ ನನ್ನ ಹಲ್ಲುಗಳ ಹಾಗೆ ಹಣ್ಣಾದ ಹಳದಿಯಾಗಿರುವ ಅರಳಿ ಎಲೆಯನ್ನು ಕೊಡಿ"

ಆ ಹುಡುಗಿಗೂ ಇವನ ಹೆಸರು ಮತ್ತು ಈತನ ಮನಸ್ಸು ಇಷ್ಟವಾಗಿತ್ತು. ಅವನು ತನ್ನ ಗೆಳೆಯರ ಜೊತೆಯಲ್ಲಿ ಆಡುತ್ತಿದ್ದ ಹಿತ ಮಿತ ಮಾತುಗಳು ಇಷ್ಟವಾಗುತ್ತಿದವು. ಎಂದೂ ನೇರವಾಗಿ ತನ್ನ ಜೊತೆಯಲ್ಲಿ ಮಾತಾಡದ ಆ ಹುಡುಗನಲ್ಲಿ ಇಷ್ಟವಾಗುತ್ತಿದ್ದ ಗುಣ ಎಂದರೆ  ಸದಾ ಹಸನ್ಮುಖ ಮುಖಭಾವ. ನಗು ಎಂಬುದು ಅವನಿಗೆ ಭಗವಂತ ಕೊಟ್ಟ ದೊಡ್ಡ ಬಳುವಳಿ. ಎಂಥಹ ವಿಷಮ ಪರಿಸ್ಥಿತಿಯಲ್ಲೂ ಅವನ ನಗುವೇ ಅವನನ್ನು ಸಮಸ್ಯೆಗಳಿಂದ ಹೊರ ಬರಲು ಸಹಾಯ ಮಾಡುತ್ತಿತ್ತು. ಅದು ಅವಳಿಗೆ ಬಹು ಪ್ರಿಯವಾಗಿದ್ದ ವಿಷಯ.

ಯಾವುದೇ ಸಮಸ್ಯೆ ಬಂದರೂ ಸಮಾಧಾನ ಅವನ ಬಳಿಯಿದ್ದ ಬಹು ದೊಡ್ಡ ಅಸ್ತ್ರವಾಗಿತ್ತು ಎಂದು ಅವನ ಬಗ್ಗೆ ಇತರರು ಆಡುತ್ತಿದ್ದ ಮಾತಿನಿಂದ ಅರಿತ್ತಿದ್ದಳು.   ಅವನ ರೂಪ ಬಣ್ಣ ಯಾವುದು ಅವಳ ಕಣ್ಣ ಮುಂದಕ್ಕೆ ಕಾಣುತ್ತಲೇ ಇರಲಿಲ್ಲ, ಬದಲಿಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಅವನ ವ್ಯಕ್ತಿತ್ವ ಮತ್ತು ತನ್ನ ಕಡೆ ಅವಾಗವಾಗ ಕಿರುಗಣ್ಣಲ್ಲೇ ನೋಡುತ್ತಿದ್ದ ನೋಟ ಅವಳಿಗೆ ಅವನ ಹೃದಯದಲ್ಲಿ ಸದಾ "ಗೀತ ಗೀತ ಗೀತ ಗೀತ" ಎನ್ನುವ ಬಡಿತ ಇದ್ದೀತು ಎಂದು ಅನ್ನಿಸಿತ್ತು. 

ಹೊಳಪು ಕಣ್ಣುಗಳನ್ನು ಅತ್ತಿತ್ತ ತನ್ನೂರಿನಲ್ಲಿ ಅಡ್ಡಾದಿಡ್ಡಿ ಓಡಾಡುವ ಆಟೋಗಳ ಹಾಗೆ ಹರಿದಾಡಿಸಿದಳು. ಮಲಯಮಾರುತ ಹೊತ್ತು ತರುತ್ತಿದ್ದ ತಂಗಾಳಿ ಬರಿ ಹಳದಿ ಎಲೆಗಳನ್ನೇ ತೂರಾಡಿಸುತ್ತಿತ್ತು. ಅವಳ ಹೃದಯದ ಬಡಿತ ತೀವ್ರವಾಯಿತು.

ಹುಡುಗ ಆಸೆಗಣ್ಣುಗಳಿಂದ ನೋಡುತ್ತಲೇ ಇದ್ದಾ.. ಆದರೆ ಅವನ ಕಣ್ಣಿಗೆ ಅವನ ಹಲ್ಲಿನ ಬಣ್ಣದ ಎಲೆಗಳೇ ಕಾಣುತ್ತಿದ್ದವು. ಒಂದು ಕ್ಷಣ ಕಣ್ಣು ಮುಚ್ಚಿದ, ಆಂಜನೇಯನನ್ನು ನೆನೆದ, "ದೇವ ನನಗೆ ಯೋಗ್ಯತೆ ಇದ್ಡರೆ, ಗೀತಳನ್ನು ಸಾಕುವ ತಾಕತ್ತು ಇದ್ದರೆ, ನಿಜವಾಗಿಯೂ ಅವಳು ನನ್ನೊಡನೆ ಸುಖವಾಗಿ ಇರಬಲ್ಲಳು ಎನ್ನುವ ವಿಶ್ವಾಸ ನೀ ನನ್ನ ಮನದೊಳಗೆ ತುಂಬುವುದಾದರೆ..... ಇನ್ನು ನಿನ್ನ ಇಷ್ಟ" ಎಂದು ಕಣ್ಣು ತೆರೆದ.

ಹುಡುಗಿ ಇನ್ನೂ ಹಸಿರು ನವಿರು ಎಲೆಯನ್ನು ಹುಡುಕುತ್ತಲೇ ಇದ್ದಳು.. ಹಸಿರು ಸಿಕ್ಕಿದರೆ ಹುಡುಗನ ಉಸಿರಲ್ಲಿ ಹಸಿರಾಗುತ್ತೇನೆ ಎನ್ನುವ ಆಸೆ ಅವಳಿಗೆ. ಆದರೆ ಸುತ್ತ ಮುತ್ತಲೂ ಬರಿ ಹಳದಿ ಹಳದಿ ಹಳದಿ... !

ಅವಳು ಒಂದು ಕ್ಷಣ ತನ್ನ ಇಷ್ಟದೇವನಾದ ಶ್ರೀ ಕೃಷ್ಣನನ್ನು ನೆನೆಯುತ್ತಾ "ಕೃಷ್ಣ ನಿನ್ನ ಕಂಡರೆ ನನಗೆ ಇಷ್ಟ.. ನೀ ಭೋದಿಸಿದ ಹೆಸರನ್ನೇ ನಾ ಇಟ್ಟುಕೊಂಡಿದ್ದೇನೆ... ಅವನ ಬಾಳಿನಲ್ಲಿ ಹುಣ್ಣಿಮೆಯನ್ನು ತರಬೇಕೆಂಬುದು ನನ್ನ ಆಸೆ. ನಾ ಒಲಿದರೆ ಅವನ ಬಾಳು ಇನ್ನೂ ಹಸನು. ನಾ ನನಗಾಗಿ ಏನೂ ಬೇಡುವುದಿಲ್ಲ.. ಆದರೆ ಅವನಿಗಾಗಿ ನಾ ಮಿಡಿಯುತ್ತಿರುವೆ.. ಇನ್ನು ನಿನಗೆ ನಾ... !

ಶ್ರೀ ಕೃಷ್ಣ ಮತ್ತು ಆಂಜನೇಯ ಇಬ್ಬರೂ ಒಮ್ಮೆ ಕಣ್ಣು ಮುಚ್ಚಿ ಕುಳಿತರು.. ಇಬ್ಬರ ಬಳಿಯೂ ತಮ್ಮ ತಮ್ಮ ಭಕ್ತರ ಅರ್ಜಿಯ ಕಡತ ಬಂದು ನಿಂತಿದೆ. ಇಬ್ಬರಿಗೂ ತಮ್ಮ ಭಕ್ತರಿಗೆ ಒಳ್ಳೆಯದನ್ನೇ ಮಾಡುವ ಬಯಕೆ. ಜೊತೆಯಲ್ಲಿ ಅರಳಿ ಮರದ ಬುಡದಲ್ಲಿ ಅರಳಿದ ಅವರ ಹೃದಯದ ಪ್ರೀತಿಯನ್ನು ಹಣ್ಣು ಮಾಡುವ ತವಕ. ಆದರೆ ಅವರಿಬ್ಬರ ಆಸೆ ಇಬ್ಬರೂ ನಿಂತಲ್ಲಿಯೇ ನಿಲ್ಲದೆ,  ಪ್ರೇಮವನ್ನು ತಮ್ಮ ಪರಿಶ್ರಮದಿಂದ  ಗುರಿ ತಲುಪಿಸಲಿ ಎನ್ನುವ ಬಯಕೆ.

ಶ್ರೀ ಕೃಷ್ಣ ಆಂಜನೇಯನಿಗೆ ಹೇಳಿದ "ಹನುಮ ನೀ ಹಸಿರು ಎಲೆಯನ್ನು ಅವನಿಗೆ ತೋರಿಸು.. ನಾ ಅವಳನ್ನು ಅಲ್ಲಿಗೆ ಕರೆತರುವೆ"

ಮರದ ತುದಿಯಲ್ಲಿದ್ದ ಗೊಂಚಲು ಗೊಂಚಲು ಹಸಿರೆಲೆಗಳನ್ನು ಹನುಮ ತನ್ನ ಬಾಲದಿಂದ ಆ ಹುಡುಗ ಕೂತ ಕಡೆಗೆ ಬಗ್ಗಿಸಿದ, ಶ್ರೀ ಕೃಷ್ಣ ಆ ಹುಡುಗನ ಹಿಂದೆ ನಿಂತು ತನ್ನ ಕೊಳಲಿನ ನಾದದಿಂದ ಆ ಹುಡುಗಿಯ ಗಮನವನ್ನು ಹುಡುಗನ ಕಡೆಗೆ ಸೆಳೆದ.

ಅಲ್ಲಿಯ ತನಕ ಮೌನಗೌರಿಯಾಗಿದ್ದ ಹುಡುಗಿ.. ಮೊತ್ತ ಮೊದಲ ಬಾರಿಗೆ ತಾನೂ ಧೈರ್ಯ ಮಾಡಿ ಹುಡುಗನನ್ನು ಮಾತಾಡಿಸಿದಳು ಅದೂ ಏಕವಚನದಲ್ಲಿ (ಪ್ರೀತಿ ಹೃದಯದಲ್ಲಿದ್ದಾಗ ಗೌರವವಾಚಕ ಪರಿ ಪದ ಎಂದು ತಿಳಿದ ಹುಡುಗಿ ಅವಳು) " ಹೇ ಹುಡುಗ ನೀ ಅಂದರೆ ನನಗೂ ಇಷ್ಟ ಕಣೋ.. ನನ್ನನು ಒಮ್ಮೆ ಎತ್ತಿಕೊಳ್ಳೋ.. ಆ ಹಸಿರು ಎಲೆಯನ್ನು ತೆಗೆದು ಕೊಡುವೆ.. ಅಲ್ಲಿ ಇಲ್ಲಿ ಬಿದ್ದ ಎಲೆ ತರಹ ಅಲ್ಲಾ ಕಣೋ ನಿನ್ನ ಪ್ರೀತಿ.. ಅದು ಸದಾ ಹಸಿರಾದ ಉಸಿರಾಗಿಯೇ ಇರುವ ಪ್ರೀತಿ.. "

ಹುಡುಗನ ಕಣ್ಣಲ್ಲಿ ಜೋಗದ ಜಲಪಾತ.. ತಾ ಇಷ್ಟ ಪಟ್ಟ ಹುಡುಗಿ ನದಿಯಾಗಿ ತನ್ನನ್ನು ಸೇರುತ್ತಿದ್ದಾಳೆ ಎಂದು... ಹುಡುಗಿಗೆ ತಾನು ಪ್ರೀತಿಯ ಕಡಲು ಸೇರುತ್ತಿದ್ದೇನೆ ಎನ್ನುವ ಸಂತಸ.. ಅವಳ ಹೊಳಪು ಕಣ್ಣುಗಳು ಇನ್ನಷ್ಟು ಪ್ರಖರಗೊಂಡವು.. ಅವನ ಕಣ್ಣಲ್ಲಿ ಅವಳು ಇನ್ನಷ್ಟು ರೂಪಸಿಯಾಗಿ ಕಂಡರೆ.. ಅವಳಿಗೆ ಅವನ ಹೃದಯ ಹಾಡುತ್ತಿದ್ದ ಹಾಡು ಹೇಳಿಸಿತು "ಈ ಹೃದಯ ಹಾಡಿದೆ ಆಸೆಗಳ ತಾಳದೆ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನೂ ಕೇಳದೆ"

No comments:

Post a Comment