Tuesday, January 5, 2016

ಹರಿಣಿ ಅಮ್ಮ ಎನ್ನುವ ಅಕ್ಷರಶಃ ಜಿಂಕೆಯಂಥಹ ಉತ್ಸಾಹದ ಚಿಲುಮೆ

ವಸಿಷ್ಠ ವಿಶ್ವಾಮಿತ್ರ ಯಥಾ ಪ್ರಕಾರ ವಾದ ವಾಗ್ವಾದದಲ್ಲಿ ತೊಡಗಿದ್ದರು.. ಇಬ್ಬರೂ ಸಾಧಕರೆ. ಒಬ್ಬ ಶಾಂತ ಸ್ವಭಾವ, ಇನ್ನೊಬ್ಬರದು ಹಠ ಸ್ವಭಾವ. ತಮ್ಮ ತಪಶಕ್ತಿಯಿಂದ ಬ್ರಹ್ಮರ್ಷಿಗಳಾದವರು.

ವಿಶ್ವಾಮಿತ್ರರದು ಒಂದೇ ವಾದ "ಭೂಲೋಕದಲ್ಲಿ ಯಾಕೆ ಹೀಗೆ.  ಯಾಕೆ ಒಬ್ಬರನ್ನು ಒಬ್ಬರು ಇಷ್ಟು ಹಚ್ಚಿಕೊಳ್ಳುತ್ತಾರೆ. ನಮ್ಮ ತರಹ ಕಾರ್ಯೇಷು ತಸ್ಮೈ ನಮಃ ಎಂದು ಯಾಕೆ ಇರೋಲ್ಲ. ಒಬ್ಬರನ್ನು ಒಬ್ಬರು ಇಷ್ಟಪಡುತ್ತಾರೆ, ಗೌರವಿಸುತ್ತಾರೆ, ಮಾತಾಡದೆ ಇರಲಾರೆ, ನೋಡದೆ ಬದುಕಲಾರೆ ಎನ್ನುವಷ್ಟು ಪ್ರೀತಿ ವಿಶ್ವಾಸ ತೋಡಿಕೊಳ್ಳುತ್ತಾರೆ., ಒಮ್ಮೆಲೆ ಮರೆಯಾದ ಮೇಲೆ ಬಳಲುತ್ತಾರೆ, ತೊಳಲಾಡುತ್ತಾರೆ, ಒದ್ದಾಡುತ್ತಾರೆ, ಮರುಗುತ್ತಾರೆ, ಜೀವನದ ಅಂತ್ಯಕ್ಕೆ ಬಂದು ಬಿಟ್ಟಿದ್ದೇವೆ ಎನ್ನುತ್ತಾರೆ, ಯಾಕೆ ಹೀಗೆ"

ವಸಿಷ್ಠ ಮಹರ್ಷಿ "ವಿಶ್ವಾಮಿತ್ರರೆ.. ನಿಮ್ಮ ಸಂದೇಹಕ್ಕೆ ನಾ ಉತ್ತರ ಕೊಡುವೆ.. ಆದರೆ ಅದಕ್ಕೆ ಮುಂಚೆ ನೀವು ಈ ಕಥೆಯನ್ನೊಮ್ಮೆ ಕೇಳಿ, ನಂತರ ನಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಆಮೇಲೆ ನಿಮಗೆ ಬೇಕಾದ ವಿವರ ಕೊಡುವೆ"

"ಆಗಲಿ, ಹಾಗೆ ಆಗಲಿ" ತಮ್ಮ ಕಮಂಡಲ, ಬ್ರಹ್ಮ  ದಂಡವನ್ನು ಪಕ್ಕಕ್ಕೆ ಇತ್ತು, ವಸಿಷ್ಠರ ಮುಖವನ್ನೇ ನೋಡುತ್ತಾ ಕಥೆಗಾಗಿ ತೀವ್ರತೆಯಿಂದ ಮಾತುಗಳನ್ನು ಕೇಳಲು ಅಣಿಯಾಗುತ್ತಾರೆ. 

"ಒಂದೂರಿನಲ್ಲಿ ಒಬ್ಬ ರಾಜ ಇದ್ದ.. ಅವನಿಗೆ ತನ್ನ ಪ್ರಜೆಗಳ ಮೇಲೆ ಅಪಾರ ಮೋಹ, ಬೇರೆ ಊರಿನಿಂದ ಯಾವುದೇ ಪ್ರಜೆ ತನ್ನ ಊರಿಗೆ ಬಂದರೂ.. ರಾಜ ಸಹಿಸುತ್ತಿರಲಿಲ್ಲ, ಆದರೆ ಶಿಕ್ಷಿಸುತ್ತಿರಲಿಲ್ಲ, ಬದಲಿಗೆ ತನ್ನ ಊರಿನ ರೀತಿ ರಿವಾಜು, ಉಡುಗೆ ತೊಡುಗೆ ಆಹಾರ ವಿಚಾರಗಳನ್ನು ವಿವರವಾಗಿ ತಾನೇ ಖುದ್ದಾಗಿ ತಿಳಿಸಿ ಅವರನ್ನು ತನ್ನ ಊರಿನ ನೀತಿ ನಿಯಮಗಳಿಗೆ ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತಿದ್ದ, ಹೀಗೆ ಬೇರೆ ಊರಿನಿಂದ ಯಾರೇ ಬಂದರೂ ಕೆಲವೇ ವಾರಗಳಲ್ಲಿ ಅವರು ಈ ಊರಿನಲ್ಲಿಯೇ ಹುಟ್ಟಿದ್ದಾರೆನೋ ಅನ್ನುವಷ್ಟು ಬದಲಾಗಿಬಿಡುತ್ತಿದ್ದರು. 

"ಅಲ್ಲಿನ ಪ್ರಜೆಗಳು ಅಷ್ಟೇ, ಆ ರಾಜನನ್ನು ತಮ್ಮ ಮನೆಯ ಹಿರಿಯ ಎಂಬ ಭಾವನೆಯಲ್ಲಿಯೇ ಆದರಿಸುತ್ತಿದ್ದರು.  ಆ ಊರಿನಲ್ಲಿ ಭಯ ಎಂಬ ಪದಕ್ಕೆ ಅರ್ಥವೇ ಇರಲಿಲ್ಲ, ಬದಲಿಗೆ ಪ್ರೀತಿ,  ಮಮತೆ,  ವಿಶ್ವಾಸ, ಕರುಣೆ ತುಂಬಿತುಳುಕಾಡುತ್ತಿತ್ತು. ಕಾರಣ ರಾಜನೇ ಅದಕ್ಕೆ ಆ ಎಲ್ಲಾ ಗುಣಗಳಿಗೆ ಯಜಮಾನನಾಗಿದ್ದ.  ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಆ ಓರೆ ಒಂದು ಕರುಣೆಯ ಬೀಡಾಗಿತ್ತು"

"ಹೀಗಿರುವಾಗ ಒಮ್ಮೆ ರಾಜನ ಆಸ್ಥಾನಕ್ಕೆ ದೂರದ ದೇಶದಿಂದ ವಿದ್ವಾಂಸ ಬಂದು, ರಾಜನನ್ನು ಮತ್ತು ಅಲ್ಲಿನ ಸಭಿಕರನ್ನು ಪರೀಕ್ಷಿಸಲು ಅನುವಾದ. ಆಗ ರಾಜನು ಎದ್ದು ನಿಂತು, ಪಂಡಿತರೆ, ನೀವು ಎಲ್ಲರನ್ನು ಪರೀಕ್ಷಿಸುವ ಬದಲು, ಒಂದು ತಪ್ಪಲೆಯಲ್ಲಿ ಅನ್ನದ ಅಗುಳು ಬೆಂದಿದೆಯೇ ಎಂದು ನೋಡಲು, ಒಂದು ಅಗುಳನ್ನು ಪರೀಕ್ಷಿಸುವಂತೆ, ಒಬ್ಬರನ್ನು  ಪರೀಕ್ಷಿಸಿ ಸಾಕು, ನಂತರವೂ ನಿಮಗೆ ಇತರರನ್ನು ಪರೀಕ್ಷಿಸಬೇಕು ಎನ್ನಿಸಿದರೆ ನನಗೆ ಅಡ್ಡಿಯಿಲ್ಲ"

"ನನಗೆ ನಿಮ್ಮ ಸವಾಲು ಒಪ್ಪಿಗೆ ಇದೆ ಮಹಾ ಪ್ರಭು, ಆ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇನೆ, ನೀವೇ ಆರಿಸಿ"

ರಾಜ, ತನ್ನ ಹಿರಿದಾದ ಕಣ್ಣುಗಳನ್ನು ಒಮ್ಮೆಲೇ ಎಲ್ಲಾ ಕಡೆ ಬೀರಿದ.. ನಿಧಾನಕ್ಕೆ ನೆಡೆದು ಬಂದು.. ಒಂದು ದೊಡ್ಡ ನಿಲುವುಗನ್ನಡಿಯ ಮುಂದೆ ನಿಂತು, ಪಂಡಿತರೆ, ಈ ಪ್ರತಿಬಿಂಬವೇ ನೀವು ಪರೀಕ್ಷಿಸಬೇಕಾದ ಅನ್ನದ ಅಗುಳು, ಬನ್ನಿ ದಯಮಾಡಿ ಬನ್ನಿ"

ಪಂಡಿತನಿಗೆ ಆಶ್ಚರ್ಯವಾದರೂ, ಅದನ್ನು ತೋರಗೊಡದೆ, ಹಲವಾರು ಪ್ರಶ್ನೆಗಳನ್ನು ಹಾಕಿದ!

"ವಿಶ್ವಾಮಿತ್ರರೆ, ಆ ಪ್ರಶ್ನೆಗಳು ಉತ್ತರಗಳು ಇಲ್ಲಿ ಅನವಶ್ಯಕ ಅನ್ನಿಸಿದ್ದರಿಂದ ಅದನ್ನು ಕಥೆಯಲ್ಲಿ ಹೇಳುತ್ತಿಲ್ಲ.. ಮುಂದುವರೆಸಲೇ"

"ಓಹೋ ಆಗಬಹುದು ಆಗಬಹುದು... ಮುಂದುವರೆಸಿರಿ ವಸಿಷ್ಠರೆ"

ಸರಿ.. ಸುಮಾರು ಘಂಟೆಗಳ ಕಾಲ ಪ್ರಶ್ನೋತ್ತರ ನಡೆದಮೇಲೆ, ಪಂಡಿತ ಮಂಡಿಯೂರಿ ರಾಜನ ಪ್ರತಿಬಿಂಬಕ್ಕೆ ನಮಸ್ಕರಿಸಿ, ರಾಜನ್, ನನ್ನದು ಮಹಾಪರಾಧವಾಯಿತು, ನಿಮ್ಮ ಪ್ರತಿಬಿಂಬವೇ ಇಷ್ಟು ಪ್ರಚಂಡ ಅಂದ ಮೇಲೆ, ನೀವು, ನಿಮ್ಮ ಸಭಿಕರು, ರಾಜ್ಯದ ಪ್ರಜೆಗಳು ಆಹಾ... ನಾ ಹೋಗಿಬರುವೆ.. ಎಂದು ಅಪ್ಪಣೆಗೂ ಕಾಯದೆ ಹೊರತು ಹೋಗುತ್ತಾನೆ. 

"ವಿಶ್ವಾಮಿತ್ರರೆ ನಾ ಕಥೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ.. ಈಗ ನನಗೆ ಉತ್ತರ ಕೊಡಿ.. "

ಇನ್ನೂ ವಸಿಷ್ಠರು ಪ್ರಶ್ನೆಗಳನ್ನು ಕೇಳಿರಲೇ ಇಲ್ಲ.. ಸಾಮಾನ್ಯವಾಗಿ ಹಠಾತ್ ಸೋಲು ಒಪ್ಪಿಕೊಳ್ಳದ ವಿಶ್ವಾಮಿತ್ರರು "ವಸಿಷ್ಠರೆ.. ನಿಮ್ಮ ಕಥೆ ನನಗೆ ಅರ್ಥವಾಯಿತು... ಹಾಗೆಯೇ ನಾ ಕೇಳಿದ ಪ್ರಶ್ನೆಗೆ ಉತ್ತರವೂ ತಿಳಿಯಿತು.. ಅಲ್ಲಿ ನೋಡಿ.. ಒಂದು ಬಟ್ಟೆಯ ಚೀಲ ಹಿಡಿದು ಕೈಯಲ್ಲಿ ಒಂದು ಟ್ಯಾಬ್ ಹಿಡಿದು ನಿಧಾನವಾಗಿ ನಡೆದುಬರುತ್ತಿರುವ ಹರಿಣಿ ಅಮ್ಮನನ್ನು ನೋಡಿ.. ಅವರು ಇಲ್ಲಿಗೆ ಬರುತ್ತಿದ್ದರೆ ಎಂದ ಮೇಲೆ, ಅನುಮಾನಕ್ಕೆ ಎಡೆಯೇ ಇಲ್ಲಾ.. "

ಎಲ್ಲಾ ಗೊತ್ತಿದ್ದರೂ ವಸಿಷ್ಠರು ಏನೂ ಅರಿಯದಂತೆ "ವಿಶ್ವಾಮಿತ್ರರೆ.. ಸ್ವಲ್ಪ ಬಿಡಿಸಿ ಹೇಳಬಾರದೆ"

ನಸುನಗುತ್ತಾ ವಿಶ್ವಾಮಿತ್ರರು "ಬ್ರಹ್ಮರ್ಷಿಗಳೇ.. ಹರಿಣಿ ಅಮ್ಮನೆ ಆ ಊರಿನ ರಾಜ, ಆ ಊರು ಕರುನಾಡು, ಬೇರೆ ಊರಿನಿಂದ ಬಂದ ಪಂಡಿತನೆ  ಆಂಗ್ಲ ಭಾಷೆ. ಹರಿಣಿ ಅಮ್ಮನ ಪ್ರತಿಬಿಂಬ ಪದಾರ್ಥ ಚಿಂತಾಮಣಿಯ ಸದಸ್ಯರು, ಪದ ಕಮ್ಮಟ ಎಂಬ ಅದ್ಭುತ ಕಾರ್ಯಕ್ರಮಕ್ಕೆ ಹರಿಣಿ ಅಮ್ಮನ ಕೊಡುಗೆ ಅಪಾರ, ಆ ಇಳಿ ವಯಸ್ಸಿನಲ್ಲಿ ತಾರುಣ್ಯವೇ ನಾಚುವಂಥಹ ಚಟುವಟಿಕೆ, ಅವರ ಬಳಿ ಉತ್ತರ ಸಿಗದ ಪ್ರಶ್ನೆಗಳೇ ಇಲ್ಲಾ.. ಹಾಗೆ ಭುವಿಯಲ್ಲಿ ಯಾಕೆ ಅಷ್ಟು ಪ್ರೀತಿ ವಿಶ್ವಾಸ ಇದೆ ಎಂದು ನನ್ನ ಪ್ರಶ್ನೆಗೆ ಉತ್ತರ, ಹರಿಣಿ ಅಮ್ಮನವರ ಮುಖ ಪುಸ್ತಕದ ಖಾತೆಯ ಸಮಯದ ಗೆರೆಯಲ್ಲಿ ಅವರನ್ನು ಅಪಾರವಾಗಿ ಪ್ರೀತಿಸುವ, ಅಮ್ಮ ಅಕ್ಕ, ಅಜ್ಜಿ, ಮೇಡಂ, ಮಾ ಎಂದೇ ಖ್ಯಾತರಾಗಿರುವ ಅವರ ಅಗಲುವಿಕೆಯ ಶೋಕವನ್ನು ತಡೆಯಲಾರದೆ ಹರಿದು ಬರುತ್ತಿರುವ ಸಂದೇಶಗಳ ಮಹಾಪೂರವೇ ಇದಕ್ಕೆ ಸಾಕ್ಷಿ.. ನನಗೆ ಇನ್ನೇನು ಅನುಮಾನವಿಲ್ಲ"

ವಸಿಷ್ಠರು "ಹರಿಣಿ ಅಮ್ಮ ನೀವು  ಇಲ್ಲಿಗೆ ಬಂದದ್ದು ನಮಗೆ ಸಂತಸವಾದರೂ, ನೀವು ಭುವಿಯಲ್ಲಿ ನಿಮ್ಮ ಅಪಾರ ಅಭಿಮಾನಿಗಳ ಬಳಗವನ್ನು, ನಿಮ್ಮ ಬಂಧು ವರ್ಗದವರನ್ನು ಬಿಟ್ಟು ಬಂದದ್ದು ನಮಗೆ ಬೇಸರ ತಂದಿದೆ, ಆದರೆ ಏನು ಮಾಡುವುದು, ಈ ನಾಕದಲ್ಲಿ ಕನ್ನಡ ಬಳಸುವುದು ಹೇಗೆ, ಪ್ರವಾಸ ಮಾಡುವುದು ಹೇಗೆ, ಅದನ್ನು ಎಲ್ಲರಿಗೂ ತಿಳಿಸುವುದು ಹೇಗೆ ಈ ವಿಚಾರಗಳನ್ನು ಹೇಳಿಕೊಡಲಿಕ್ಕೆ ನಮಗೆ ನೀವು ಬೇಕಿತ್ತು, ಹಾಗಾಗಿ ನಿಮ್ಮನ್ನು ಹಠಾತ್ ಕರೆಸಿಕೊಳ್ಳಬೇಕಾಯಿತು..ಅಲ್ಲಿ  ನೋಡಿ ನಿಮ್ಮ ಯಜಮಾನರು ಮತ್ತೊಮ್ಮೆ ಬಾಗ್ದಾದ್ ಕಥೆಯನ್ನು ನಿಮ್ಮ ಬಾಯಿಂದ ಕೇಳಲು ಇತ್ತಲೇ ಬರುತ್ತಿದ್ದಾರೆ"


ನಿಧಾನವಾಗಿ ವಸಿಷ್ಠರು, ವಿಶ್ವಾಮಿತ್ರರು, ಹಾಗೂ ಹರಿಣಿ ಅಮ್ಮ ನಡೆಯುತ್ತಾ ಸಾಗಿದರು, ಅವರು ನಡೆಯುತ್ತಾ ನಡೆಯುತ್ತಾ ಹೋದಂತೆ ಚಿಕ್ಕ ಚಿಕ್ಕದಾಗಿ ಕಡೆಯಲ್ಲಿ ತಾರೆಗಳಾಗಿ ಹೊಳೆಯಲು ಶುರುಮಾಡಿದರು. 


*****************

ಬೆಳಿಗ್ಗೆ ಎದ್ದ ಕೂಡಲೇ, ವಾತ್ಸಾಪ್ ಸಂದೇಶ ನೋಡಿದಾಗ ಗಾಬರಿ ಆಯಿತು, ಫೇಸ್ಬುಕ್ ಖಾತೆಯನ್ನು ಜಾಲಾಡಿದೆ, ಅಜಾದ್ ಅವರ ಪೋಸ್ಟ್ ನೋಡಿದೆ, ಎದೆ ಹೊಡೆದುಕೊಳ್ಳಲು ಶುರುಮಾಡಿತು. ಅಯ್ಯೋ ದೇವರೇ ನೀ ಯಾಕೆ ಇಷ್ಟು ಕ್ರೂರಿ ಆದೆ ಎಂದು. ಕೆಲಸಕ್ಕೆ ಹೋಗಲು ಮನಸ್ಸಿಲ್ಲ, ಆದರೆ ಹರಿಣಿ ಅಮ್ಮ ಯಾವಾಗಲೂ ತಮ್ಮ ಕೆಲಸದಲ್ಲಿ ಕ್ರೀಯಾಶೀಲರಾಗಿದ್ದು ನೆನಪಾಗಿ, ಆಅ ನೆನಪು ನನ್ನನ್ನೇ ಅಣುಕಿಸಿತು. ಕೆಲಸದ ಒತ್ತಡ, ಒಲ್ಲದ ಮನಸ್ಸಿಂದ ಕಚೇರಿಗೆ ಹೋದೆ. 

ಕಣ್ಣು ಕೆಂಪಾಗಿಯೇ ಇತ್ತು, ಸಾಮಾನ್ಯ ಎಂದೂ ಅಳದ ನಾನು, ಒಳಗೊಳಗೇ ಅತ್ತು ಅತ್ತು, ಕಣ್ಣೀರು ಆವಿಯಾಗಿ ಕಣ್ಣಿಂದ ಹೊರಗೆ ಬರುತ್ತಿತ್ತು  ಅನ್ನಿಸುತ್ತದೆ. ಭಾರವಾದ ಮನಸ್ಸಿಂದ ಕೆಲಸ ಶುರುಮಾಡಿದೆ, ಯಾಕೋ ತಡೆಯಲಾಗಲಿಲ್ಲ, ಕಚೇರಿಯಲ್ಲಿ ನಾನು ಮಗೂ ಎಂದೇ ಕರೆಯುವ ಶೈಲಜಾ ಸುಬ್ರಮಣಿಯನ್ನು ಕರೆದೆ, ಮಗೂ ನಿನ್ನ ಮಾತುಗಳು ನಿನ್ನ ಒಂದು ಅಪ್ಪುಗೆ ಬೇಕು ಕಣೋ ಅಂದೇ.. ಶ್ರೀ ನಾನಿದ್ದೇನೆ ನಿಮ್ಮ ಜೊತೆ, ಬೇಜಾರಾಗಬೇಡಿ ಎಂದು ಒಂದಷ್ಟು ಹೊತ್ತು ಮಾತಾಡಿದಳು ಮತ್ತು ಸಮಾಧಾನ ಮಾಡಿದಳು. ಮನಸ್ಸು ಎಷ್ಟೋ ಹಗುರವಾಯಿತು. 

ಸ್ವಲ್ಪ ಹೊತ್ತಿನ ನಂತರ ಪ್ರಕಾಶಣ್ಣ (ಪ್ರಕಾಶ್ ಹೆಗ್ಡೆ) ಕರೆ ಮಾಡಿದರು, ತಮ್ಮಯ್ಯ, ನೀನು ಅಂದು ಅವರ ಮನೆಗೆ ಹೋದೆ, ನಾ ಕೂಡ ಬಂದೆ, ಅಂದಿನಿಂದ ಹರಿಣಿ ಅಮ್ಮ ನಮ್ಮ ಕುಟುಂಬಕ್ಕೆ ಇನ್ನಷ್ಟು ಹತ್ತಿರವಾದರು. ಇಂಥಹ ಅಗಲಿಕೆ ನಿಜವಾಗಿಯೂ ಆಘಾತವೇ ಸರಿ, ನನಗೆ ಇನ್ನು ನಡುಕ ನಿಂತಿಲ್ಲ ಎಂದರು. ಅವರ ಹತ್ತಿರ ಇನ್ನಷ್ಟು ಹೊತ್ತು ಮಾತಾಡಿದೆ, ಸ್ವಲ್ಪ ಸಮಾಧಾನವಾಯಿತು. ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ ಪರಿವಾರ ಈ ಸುದ್ದಿ ಸುಳ್ಳು ಆಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುವಂತಾಗಿತ್ತು. 

ನನ್ನ ಬೆಸ್ಟ್ ಗೆಳತಿ ನಿವಿ (ನಿವೇದಿತ ಚಿರಂತನ್), ಅದ್ಭುತ ಮಾತುಗಳನ್ನು ಹೇಳಿದರು, ಸುಮಾರು ಹೊತ್ತು ಚಾಟ್ ಮಾಡಿದೆವು, ನನ್ನ ನೋವು, ನಲಿವುಗಳನ್ನು ಕರಾರುವಾಕ್ ಆಗಿ ಪತ್ತೆ ಹಚ್ಚುವ ನಿವಿ, ನನ್ನ ನೋವುಗಳಿಗೆ, ಮನಸ್ಸಿನ   ಭಾವಗಳಿಗೆ  ಉತ್ತರ ಮತ್ತು  ಸಾಂತ್ವನ ಹೇಳಿದರು. ಅವರ ಮಾತುಗಳು ನಾ ಮರಳಿ ಬರಲು ಸಹಾಯ ಮಾಡಿದವು. 

ಗುರು ಸಮಾನರಾದ ಗೆಳೆಯ ಅಜಾದ್ ಸರ್ ಹೇಳಿದ್ದು ಬತ್ತಿದ ಕಣ್ಣೀರು ಮತ್ತೆ ಹೊರ ಚಿಮ್ಮಿತು.. ಕೆಲವಷ್ಟು ದಿನ ಫೇಸ್ ಬುಕ್ ಖಾತೆಯಿಂದ ಹೊರಬಿದ್ದಿದ್ದೆ. ಹರಿಣಿ ಅಮ್ಮ ಸುಮಾರು ಮಂದಿಯ ಹತ್ತಿರ ಕೇಳಿದ್ದರಂತೆ ಶ್ರೀಕಾಂತ್ ನನ್ನನ್ನು ಬ್ಲಾಕ್ ಮಾಡಿದ್ದರೆ ಯಾಕೆ ಏನಾಯಿತು ಅಂತ. ಅವರು ತಮ್ಮ ಮಿತ್ರರನ್ನು ನೋಡಿಕೊಳ್ಳುತ್ತಿದ್ದ ಬಗೆ ಹಾಗಿತ್ತು. ಯಾರಿಗಾದರೂ ನೋವಾಯಿತೇ, ಆರೋಗ್ಯವಾಗಿದ್ದಾರ, ಹೇಗಿದ್ದಾರೆ ಹೀಗೆ ಎಲ್ಲರ ಬಗೆಯೂ ಕಳಕಳಿಯಿದ್ದ ಅವರನ್ನು ದೇವರು ಕೂಡ ಬಿಟ್ಟಿರಲಾರದೇ ಕರೆಸಿಕೊಂಡನೇನೋ ಎನ್ನಿಸಿತು. ಅಜಾದ್ ಸರ್ ಅಕ್ಕ ಎಂದೇ ಕರೆಯುತ್ತಿದ್ದ ಹರಿಣಿ ಅಮ್ಮನನ್ನು ಕಳೆದುಕೊಂಡು ಎಷ್ಟು ವ್ಯಥೆ ಪಡುತ್ತಿದರು ಎಂದು ಅವರು ದೂರದ ಕುವೈತ್ ನಲ್ಲಿದ್ದರು ಅವರ ಬರಹಗಳಿಂದ ಅರ್ಥವಾಗುತ್ತಿತ್ತು. ಎಲ್ಲರ ಜೊತೆಯಲ್ಲಿ ನಗುನಗುತ್ತಾ ಮಾತಾಡುವ ಅಜಾದ್ ಸರ್ ಅವರ ಇನ್ನೊಂದು ಮುಖವನ್ನು ಇಂದು ನೋಡಿದೆ. 

ಕಡೆಯಲ್ಲಿ ನನ್ನ ಹಾಸನದಲ್ಲಿರುವ ಪ್ರಕಾಶ್ ಚಿಕ್ಕಪ್ಪ "ಶ್ರೀಕಾಂತ.. ನಿಜವಾಗಿಯೂ ಅವರು ಜೀವನವನ್ನು ಸಾಧಿಸಿ ಬದುಕಿದರು, ನೀವೆಲ್ಲ ಅವರ ಬಗ್ಗೆ ಇಷ್ಟು ಹಚ್ಚಿಕೊಂಡಿದ್ದೀರಾ ಮತ್ತು ಅವರು ನಿಮ್ಮೆನ್ನೆಲ್ಲ ಅಷ್ಟು ಪ್ರೀತಿ ವಿಶ್ವಾಸಗಳಿಂದ ನೋಡುತ್ತಿದ್ದರು ಎಂದರೆ ಅವರ ಬದುಕಿನ ಸಾಧನೆ ಮತ್ತು ಸಾರ್ಥಕತೆ ನೋಡು. ಅಂಥಹ ಅದ್ಭುತ ಜೀವಿಯ ಜೊತೆಯಲ್ಲಿ ನೀವೆಲ್ಲ ಇದ್ದೀರಿ ಎಂದರೆ, ಅದು ನಿಮ್ಮ ಪೂರ್ವ ಜನ್ಮದ ಪುಣ್ಯ ಎನ್ನದೆ ಬೇರೆ ನನಗೆ ಕಾಣುತ್ತಿಲ್ಲ. ಅವರ ಜೀವನಕ್ಕೆ ಮತ್ತು ಬಾಳಿದ ಜೀವನದ ಪಥಕ್ಕೆ ನನ್ನ ನಮನಗಳು" ಎಂದರು. ಎಂಥಹ ಅದ್ಭುತ ಮಾತುಗಳು. 
ಹರಿಣಿ ಅಮ್ಮನ ಪ್ರೀತಿಯ ಸೆಳೆತಕ್ಕೆ ಸಿಕ್ಕದವರೇ ಇರಲಿಲ್ಲ. ಅವರ ಜೊತೆ ಒಂದಷ್ಟು ವರ್ಷಗಳು, ಮಾಸಗಳು ಮಾತಾಡಿದ್ದು, ಒಡನಾಡಿದ್ದು, ನಕ್ಕಿದ್ದು, ಹರಟಿದ್ದು, ಅವರ ಕೈ ರುಚಿ ಕಂಡದ್ದು ಇವೆ ನಮಗೆ ಉಳಿದಿರುವ ನೆನಪುಗಳು. 

ಹರಿಣಿ ಅಮ್ಮ ನಿಮ್ಮ ಬಗ್ಗೆ ಬರೆದಷ್ಟು ಬರೆಸುತ್ತಲೇ ಇದ್ದಾಳೆ ಆ ತಾಯಿ ಶಾರದೆ. ಅವಳಿಗೂ ಕೂಡ ನಿಮ್ಮ ಪ್ರವಾಸಿ ಕಥನ, ದೇವಾಲಯಗಳ ಬಗ್ಗೆ ಮಾಹಿತಿ, ಶ್ಲೋಕಗಳು, ಮಂತ್ರಗಳು ಇವೆಲ್ಲಾ ಬೇಕಾಗಿದ್ದವು ಅನ್ನಿಸುತ್ತದೆ. 

ಆ ಶಾರದ ಮಾತೆಯ ಸನ್ನಿಧಾನದಲ್ಲಿ ಅಮರ ಜೀವಿಯಾಗಿರಿ ಹರಿಣಿ ಅಮ್ಮಾ!!!  

7 comments:

 1. ಶ್ರೀಮನ್
  ಮತ್ತೊಮ್ಮೆ..ತೇವವಾಯ್ತು ಕಣ್ಣು.
  ಅಕ್ಕ ಕೇಳಿದ್ದು ಖರ್ಜೂರ ಸ್ನೇಹಿತರಿಗೂ ಹಂಚಿದರು
  ವಿಶ್ವಾಮಿತ್ರರಿಗೂ ಒಂದ್ಚೂರ್ ಸಿಗಬಹುದು
  ನಿಮ್ಮ ಶೈಲಿಗೆ ಅಕ್ಕ ಮೇಲಿಂದ ತಲೆ ದೂಗಿರುವುದಂತೂ ದಿಟ

  ReplyDelete
 2. ನಮ್ಮ ಮನಸಿನ ಮಾತುಗಳು ನಿಮ್ಮ ಲೇಖನದಲ್ಲಿ ಅಶ್ರುತರ್ಪಣವಾಗಿ ಬಂದಿವೆ ಶ್ರೀಕಾಂತ್, ಒಬ್ಬ ಮಹಾನ್ ಚೇತನ ನಮ್ಮನ್ನು ಅಗಲಿದ್ದು ನೋವಿನ ಸಂಗತಿ. ನಿಮ್ಮ ಬರೆಯುವ ಶೈಲಿಗೆ ಖಂಡಿತಾ ಹರಿಣಿ ಅಮ್ಮ ನಿಮ್ಮನ್ನು ಹರಸುತ್ತಾರೆ .

  ReplyDelete
 3. ಕೆಲವು ಚೇತನಗಳೆ ಹಾಗೆ, ಇರುವಾಗ ಬೆಳಕಿನ ಅನುಭವ, ಹೋದಾಗ ಕತ್ತಲೆ ಪ್ರಭಾವ. ಹರಿಣಿಯವರ ಪರಿಚಯ ಬಹಳ ಕಮ್ಮಿಯಾದರೂ ನಾನು ಅವರು ಅಭಿಮಾನಿ. ಆಗಿದ್ದೆ ಹೇಳಲಾರೆ ಯಾಕೆಂದರೆ ಈಗಲೂ ಅಭಿಮಾನಿಯೇ. ಅವರಿಗೊಂದು ಅದ್ಭುತವಾದ ಶ್ರದ್ಧಾಂಜಲಿ ನೀಡಿದ್ದೀರಿ.

  ReplyDelete
 4. Sri, kantumbibanthu.... adenu bareyoku tochutilla.. avara nade nudi reeti neetigalu namage paatavaagali... ammana paadakke namana.

  ReplyDelete
 5. ಅಮ್ಮ, ಬಹುಮುಖ ಪ್ರತಿಭೆ. ಆಕೆಯ ಸರಳತನ, ನಿಗರ್ವೀ ವ್ಯಕ್ತಿತ್ವ ಮತ್ತು ಪರಿಪೂರ್ಣತೆಯಿಂದ ಪ್ರಶಾಂತತೆ ಸೂಸೋ ಆ ಕಣ್ಣುಗಳ ತೇಜಸ್ಸು ನಾನು ಮರೆಯಲಾಗದ ದಾಖಲುಗಳು.


  ಅಮ್ಮನ ಕುರಿತಂತೆ ಶ್ರೀಮಾನ್, ತಮ್ಮ ಈ ಬ್ಲಾಗ್ ಬರಹ ಸಂಗ್ರಹ ಯೋಗ್ಯ ಮತ್ತು ಉತ್ತಮ ನುಡಿ ನಮನ.

  ReplyDelete
 6. ಶ್ರೀ ನಿನ್ನೆಯಿಂದ ಒಂದು ಹತ್ತು ಬಾರಿ ಅತ್ತದ್ದಾಯಿತು ಈಗ ನನ್ನನ್ನು ಹನ್ನೊಂದನೇ ಬಾರಿ ಅಳಿಸಿದ್ದು ನಿಮ್ಮ ಲೇಖನ. ಸಹೃದಯತೆಯ ಸಾಕಾರ ಮೂರ್ತಿ ಹರಿಣಿಯಕ್ಕನ ನನ್ನ ಮುಂದೆ ತಂದು ಬಿಟ್ಟಿದ್ದೀರಿ. ಎಷ್ಟು ಅತ್ತರೇನು ಕಣ್ಣೇರು ಹರಿಸಿದರೇನು ಹೋದವರು ಬರುವುದೇ ಇಲ್ಲ. ಹೊಗಿಬಂದವರಿಲ್ಲ ವರದಿ ತಂದವರಿಲ್ಲ ಎನ್ನುತ್ತಾರೆ ಗುಂಡಪ್ಪನವರು, ಅವರನ್ನೂ ಮೀರಿಸಿ ಹರಿಣಿಯಕ್ಕನ ವರದಿ ತಂದಿದ್ದೀರಿ. ಧನ್ಯವಾದಗಳು ಶ್ರೀ

  ReplyDelete
 7. ಎಷ್ಟು ಚಂದ ಹೇಳಿದ್ದಿರಿ ಶ್ರೀಕಾಂತ್ ಭಾಯ್. ಕಣ್ಣು ತುಂಬಿತು ಎನ್ನುವುದು ಎಲ್ಲರ ಅನುಭವ.
  ಅವರ ಹಾದಿಯಲ್ಲಿ ನಡೆಯುವ ಶಕ್ತಿಯನಿತ್ತು ಅವರೇ ಹರಸಲಿ

  ReplyDelete