ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? |
ನಾವರಿಯಲಾರದೆಲ್ಲದರೊಟ್ಟು ಹೆಸರೆ? ||
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? |
ಸಾವು ಹುಟ್ಟುಗಳೇನು? – ಮಂಕುತಿಮ್ಮ || ಕಗ್ಗ 5 ||
ನಾವರಿಯಲಾರದೆಲ್ಲದರೊಟ್ಟು ಹೆಸರೆ? ||
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? |
ಸಾವು ಹುಟ್ಟುಗಳೇನು? – ಮಂಕುತಿಮ್ಮ || ಕಗ್ಗ 5 ||
"ಏನಪ್ಪಾ ಬಹಳ ದಿನಗಳ ನಂತರ ಕಗ್ಗದ ಅಂಗಳಕ್ಕೆ ಕಾಲಿಟ್ಟಿದ್ದೀಯ"? ಅಂದರು ಅಜ್ಜ
"ಹೌದು ಅಜ್ಜ.. ಬದುಕಿನ ಜಂಜಾಟಗಳು ಎಳೆದಾಡುತ್ತಿದ್ದವು.. ಅಲ್ಲಿಗೊ ಇಲ್ಲಿಗೋ ಅನ್ನುವ ಎಳೆದಾಟದಲ್ಲಿಯೇ ಸಮಯ ಮುಂದಕ್ಕೆ ಹೋಯಿತು. ಮತ್ತೆ ಆ ಮಹಾಮಹಿಮನು ನನ್ನ ಆ ಕಡೆಯಿಂದ ಈ ಕಡೆಗೆ ಎಳೆದು ತಂದ!"
"ಅಂದರೆ ನೀನು ದೇವರಿದ್ದಾನೆ ಎನ್ನುವ ಪ್ರಶ್ನೆಗೆ ಉತ್ತರವಿದೆ ನಿನ್ನಲ್ಲಿ ಅಂತ ಹೇಳುತ್ತಿದ್ದೀಯ ಅಲ್ಲವೇ"
"ಹೌದು ಅಜ್ಜ.. ಇಂದಿನ ನಿಮ್ಮ ಕಗ್ಗದಲ್ಲಿ ಪ್ರಶ್ನೆಯೂ ಇಟ್ಟಿದ್ದೀರಾ.. ಉತ್ತರವನ್ನು ಕೊಟ್ಟಿದ್ದೀರಾ.. ಸೊಗಸಾಗಿದೆ .. ದೇವರು ಯಾರು ಅಂತಾನೂ ಕೇಳುತ್ತಲೇ.. ಕಾಯುವವನೊಬ್ಬ ಇದ್ದಾನೆ ಅವನೇ ದೇವರು ಅನ್ನುವ ಉತ್ತರವನ್ನು ನೀಡಿದ್ದೀರಾ.. ಹುಟ್ಟು ಸಾವುಗಳ ಬಗ್ಗೆ ಮಾತಾಡಿದರೂ ಕಾಯುವವನು ಇದ್ದಾನೆ ಎಂದ ಮೇಲೆ ಆತನೇ ದೇವರು ಎನ್ನುವ ಉತ್ತರ ಸರಿಯಾಗಿದೆ ಅಜ್ಜ"
"ಈ ಕಗ್ಗಕ್ಕೆ ಸರಿ ಹೊಂದಬಹುದಾದ ದೃಶ್ಯ ಹೇಳು ನೋಡೋಣ?"
"ಅಜ್ಜ ರಾಜಕುಮಾರ್ ಅವರ ಭಕ್ತ ಕುಂಬಾರದಲ್ಲಿ ನಿರ್ದೇಶಕ ಹಾಗೂ ಸಂಭಾಷಣಕಾರ ಹುಣುಸೂರು ಕೃಷ್ಣಮೂರ್ತಿಗಳು ಎಷ್ಟು ಚಂದವಾದ ದೃಶ್ಯ ಕಟ್ಟಿಕೊಟ್ಟಿದ್ದಾರೇ ಅಂತೀರಾ.. ಭಕ್ತ ಗೋರನ ಮನೆಗೆ ಸಂತರಾದ ಜ್ಞಾನದೇವರು, ನಾಮದೇವರು ಮತ್ತು ಶಿಷ್ಯರು ಪಾರಣೆಗೆ ಬರುತ್ತಾರೆ ಅಂತ ಹಳ್ಳಿಯ ಮಂದಿಗೆ ತಿಳಿದಾಗ ಪಂಚಾಯತಿ ಕಟ್ಟೆಯ ಸದಸ್ಯರು ಕುಪಿತರಾಗಿ ಗೋರನಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡಬಾರದು ಅಂತ ಹಳ್ಳಿಯವರಿಗೆ ಕಟ್ಟಪ್ಪಣೆ ಮಾಡುತ್ತಾರೆ
| ಗೋರನ ಮನೆಗೆ ದವಸ ಧಾನ್ಯಗಳನ್ನು ಗಾಡಿಯಿಂದ ಇಳಿಸುತ್ತಿರುವುದು |
ಅದೇ ಕ್ಷಣದಲ್ಲಿ ಗೋರನ ಭಾವ ಮೈದುನ ತನ್ನ ಹಳ್ಳಿಯಿಂದ ಸುಗ್ಗಿಯ ಫಸಲು ಚೆನ್ನಾಗಿ ಬಂದಿದ್ದರಿಂದ ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ತಂದೆ ಅಂತ ಹೇಳುತ್ತಾನೆ ....
ಆಗ ಗೋರಾ "ಕೊಡುವ ಕತೃ ಬೇರೆ ಇರಲು ಬಿಡು ಬಿಡು ಚಿಂತೆಯ " ಅಂತ ಹೇಳುತ್ತಾನೆ.
"ಅಜ್ಜ ನಿಜವಲ್ಲವೇ.. ಮೇಲೆ ಒಬ್ಬನಿರುವವನು ಯಾವ ಯಾವ ಸಮಯದಲ್ಲಿ ಹೇಗೆ, ಯಾರಿಗೆ ಸಹಾಯ ಹಸ್ತ ನೀಡುತ್ತಾನೆ ಅನ್ನುವ ಕಗ್ಗದ ಸಾರಾಂಶ ಅಚ್ಚುಕಟ್ಟಾಗಿ ನಿಂತಿದೆ ಅಲ್ಲವೇ"
ಅಜ್ಜ ನಗುತ್ತಾ "ಸರಿಯಾಗಿದೆ" ಎಂದು ಮೆಟ್ಟಿಲು ಇಳಿದು ಹೊರಟರು!