ಭೋಜರಾಜನ ಆಸ್ಥಾನ
ಕಾಳಿದಾಸ ಕವಿ
ಡಿಂಡಿಮ ಕವಿ
ಕಮಲೆ ಕಮಲೋತ್ಪತ್ತಿಹಿ
ಡಿಂಡಿಮ
ಇದೆಲ್ಲ ಎಲ್ಲರಿಗೂ ತಿಳಿದ ವಿಷಯ ಅದರಲ್ಲೂ ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರ ನೋಡದವರಿಲ್ಲ ಅಂತ ಧೈರ್ಯವಾಗಿ ಹೇಳಬಹುದು..
ನಮ್ಮ ಅದ್ಭುತ ಕೊರವಂಗಲದ ಬೇರು ಇಷ್ಟೊಂದು ಗಟ್ಟಿಯಾಗಿ ನಿಂತಿರೋದಕ್ಕೆ ಕಾರಣ ಅಜ್ಜಯ್ಯ ಅಜ್ಜಿ ನೆಟ್ಟ ಸಂಸ್ಕಾರ ಎಂಬ ಬೃಹತ್ ವೃಕ್ಷ .. ನಾವುಗಳು ಆ ಬೃಹತ್ ವೃಕ್ಷದ ರೆಂಬೆ ಕೊಂಬೆಗಳು..
ಸಾಕಪ್ಪ ಕೊರೆತ ಅಂದ್ರಾ.. ಸರಿ ವಿಷಯಕ್ಕೆ ಬರ್ತೀನಿ
ಅಲ್ಲಿ ಡಿಂಡಿಮ ಕವಿ ಸರಸ್ವತಿಯನ್ನು ತನ್ನ ಡಮರುಗದಲ್ಲಿ ಸಾಕ್ಷತ್ಕರಿಸಿಕೊಂಡು ಆತ ಪ್ರಶ್ನೆ ಕೇಳಿದಾಗ ಪ್ರತಿದ್ವಂದಿಗಳು ಉತ್ತರಕ್ಕೆ ತಡಕಾಡುವಂತೆ ಆ ಡಮರುಗದ ಶಬ್ದದಿಂದ ಎಲ್ಲರ ಬುದ್ದಿಯನ್ನು ಮಂಕು ಮಾಡಿ ಬಿಡುತ್ತಾನೆ..
ಗೊತ್ತೋ ಗುರು ಮುಂದಕ್ಕೆ ಹೇಳು
ಹೌದು ನಮ್ಮ ರಜನೀಶನೂ ಹಾಗೆ.. ಅನೇಕಾನೇಕ ವಿಷಯಗಳನ್ನು ತಿಳಿದುಕೊಂಡು, ಅದನ್ನು ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸುವ ಅವನ ಜಾಣ್ಮೆಗೆ ತಲೆದೂಗದವರಿಲ್ಲ..
ಭೋಜರಾಜನ ಆಸ್ಥಾನದಲ್ಲಿದ್ದ ಏಕಸಂಧಿಗ್ರಾಹಿ ತರಹ ಇವನು ಕೂಡ. ಒಮ್ಮೆ ಇವನಿಗೆ ವಿಷಯ ತಾಕಿತೆಂದರೆ ಮುಗಿಯಿತು.. ಬ್ರಹ್ಮ ಮತ್ತು ವಿಷ್ಣು ಶಿವನ ಆದಿ ಅಂತ್ಯವನ್ನು ಹುಡುಕುತ್ತಾ ಹೋಗಿ ಕಡೆಯಲ್ಲಿ ಇದು ಚಿದಂಬರ ರಹಸ್ಯ ಎನ್ನುವ ಹಾಗೆ.. ಇವನು ವಿಷಯದ ಆಳಕ್ಕೆ ಇಳಿದು, ಅದರ ಹೂರಣವನ್ನು ಅರಿತು, ಅದನ್ನು ತಕ್ಕ ಹಾಗೆ ಬಳಸುವ ಜಾಣ್ಮೆಕಾರ (ಜಾಣ್ಮೆಕಾರ ಹೊಸ ಶಬ್ದ.. ನನಗೆ ಅನಿಸಿದ್ದು)
ರಜನೀಶನಿಗೆ ಗುಡಿ ಕೊಟ್ಟು ಇದನ್ನು ಸಿಂಗರಿಸು ಎಂದರೆ ಸಾಕು ಅದಕ್ಕೆ ಅದ್ಭುತವಾದ ಕಳಸ ಇಡುವ ಚತುರ.. ನಮಗೆ ಅನಿಸೋದಕ್ಕೆ ಸಾಧ್ಯವೇ ಇಲ್ಲ ಅನ್ನಿಸುವಂತೆ ಆ ಕಾರ್ಯಕ್ಕೆ ಸುವರ್ಣ ಚೌಕಟ್ಟು ಹಾಕಿಕೊಟ್ಟು ಮನಸ್ಸಿಗೆ ಸಂತಸ ನೀಡುವ ಸಂತ ಇವನು..
ನನಗೆ ಅನೇಕ ಬಾರಿ ಅನುಭವಕ್ಕೆ ಬಂದಿದೆ.. ಗುರು ಇದಕ್ಕೆ ಒಂದು ದಾರಿ ತೋರಿಸು ಎಂದರೆ, ಆತ ಆ ಹಾದಿಯನ್ನು ರಹದಾರಿ ಮಾಡಿ, ಅದಕ್ಕೆ ಬೆಳಕು ಕೊಟ್ಟು... ಎಲ್ಲರೂ ತಲೆದೂಗುವಂತೆ ಮಾಡುವಷ್ಟು ಶಕ್ತ ಇವನು.. ಅಕ್ಷರಗಳನ್ನು ಈತನೆಡೆಗೆ ಇಟ್ಟರೆ ಸಾಕು ಅದನ್ನು ಸುಂದರವಾದ ಪದಗಳ ಮಾಲಿಕೆ ಮಾಡುವ ಚಾಣಾಕ್ಷ..
ಏಕಲವ್ಯ ಶಬ್ದವೇದಿ ವಿದ್ಯೆಯನ್ನು ದ್ರೋಣಾಚಾರ್ಯರ ಮೂರ್ತಿ ನೋಡುತ್ತಾ ಕಲಿತ.. ನಮ್ಮ ರಜನೀಶ ಛಲದಂಕ ಮಲ್ಲ.. ಒಮ್ಮೆ ಅದರ ಕಡೆಗೆ ಗಮನ ಮತ್ತು ಮನ ಹರಿದರೆ ಸಾಕು.. ಅದರ ತಳ ಬುಡ ಜಾಲಾಡಿಸಿ ಅದನ್ನು ಕಲಿತು, ಕಲೆತು ಒಪ್ಪವಾಗಿಸುವವನು ನಮ್ಮ ರಜನೀಶ..
ಭೋಜರಾಜ ಕಂಬದ ಮರೆಯಲ್ಲಿ ನಿಂತು ಕಾಳಿದಾಸನ ಅಮರವಾಣಿಗಳನ್ನು ಕೇಳಿದಂತೆ, ಎಲ್ಲರ ಮಾತುಗಳನ್ನು ವಿಷಯಗಳನ್ನು ಕೇಳಿಸಿಕೊಂಡು ತನ್ನದೇ ದಾಟಿಯಲ್ಲಿ ಅದಕ್ಕೆ ಉತ್ತರ ನೀಡುವ ನಿಷ್ಣಾತ..
ಇದಕ್ಕೊಂದು ಉದಾಹರಣೆ : ಒಂದು ಸುಂದರ ಸಮಾರಂಭಕ್ಕೆ ಬ್ಯಾನರ್ ಮತ್ತು ಕಾರ್ಡ್ ಬೇಕಿತ್ತು.. ಏನು ಮಾಡೋದು.. ಅರಿವಿಗೆ ಬಂದಿರಲಿಲ್ಲ.. ಸುಮ್ಮನೆ ಗಾಳಿಯಲ್ಲಿ ಗುದ್ದಿದಂತೆ ಗುರು ಹೀಗೆ ಬೇಕು ಅಂದೇ... ವಿಷಯ ಕೊಡು ಏನಾದರೂ ಮಾಡೋಣ ಅಂದ.. ಮುಂದಿನ ಹತ್ತು ಹದಿನೈದು ನಿಮಿಷಗಳಲ್ಲಿ ಸಿಕ್ಕಿದ್ದು ಅನರ್ಘ್ಯ ರತ್ನದಂತಹ ಬ್ಯಾನರ್ ಮತ್ತು ಕಾರ್ಡು.. ಈ ರೀತಿಯ ಅನುಭವಗಳು ಎಲ್ಲರಿಗೂ ರಜನೀಶನಿಂದ ಸಿಕ್ಕಿದೆ.. ನನ್ನ ಅನುಭವ ರಜನೀಶ ಎಂಬ ಸಾಗರದಂತಹ ವ್ಯಕ್ತಿತ್ವದಲ್ಲಿ ಒಂದೆರಡು ಆಣಿಮುತ್ತುಗಳು... ಅವನ ಬಳಿ ಆಣಿಮುತ್ತುಗಳ ಖಜಾನೆಯೇ ಇದೆ..
ಇಂದು ಸುವರ್ಣ ಸಂಭ್ರಮದಲ್ಲಿ ತೇಲುತ್ತಿರುವ ರಜನೀಶನಿಗೆ.. ತಮಸ್ಸನ್ನು ಓಡಿಸುವ ಕಲೆಗಾರಿಕೆ ಹೊಂದಿರುವ ನಮ್ಮೆಲ್ಲರ ಪ್ರೀತಿಯ ರಜನೀಶನಿಗೆ ಸುವರ್ಣ ಸಂಭ್ರಮದ ಶುಭಾಶಯಗಳು..
ಪ್ರತಿ ಯಶಸ್ಸಿನ ಹಿಂದೆ ಮಾತೃ ಹೃದಯಿಯ ಉಪಸ್ಥಿತಿ ಇದ್ದೆ ಇರುತ್ತದೆ.. ಕೌಶಿಕ ಅಜ್ಜಿಯ ಬದುಕಿನ ಅನುಭವ, ತಮ್ಮ ಮೌನವೇ ಸಾಧನೆಯ ಶಿಖರ ಎಂದು ಸುಂದರ ಬದುಕು ಕಟ್ಟಿಕೊಂಡ ಕೌಶಿಕದ ಅಜ್ಜಯ್ಯ, ಬದುಕಿನ ಸಾರಾಮೃತ್ಯವನ್ನು ಧಾರೆಯೆರೆದ ರಜನೀಶನ ಸೋದರ ಮಾವಂದಿರು, ಅತ್ತೆಯರು ಹಾಗೂ ಚಿಕ್ಕಮ್ಮಂದಿರು, ತುಂಬು ಕುಟುಂಬದ ಕೊರವಂಗಲದ ಅಜ್ಜಯ್ಯ, ಅಜ್ಜಿ, ಚಿಕ್ಕಪ್ಪ,ಚಿಕ್ಕಮಂದಿರು, ಅತ್ತೆ ಮಾವಂದಿರು.. ಅಷ್ಟೇನಾ ಅಂದರೆ ಇರ್ರಪ್ಪ ಮುಖ್ಯವಾಗಿ ತಂದೆ ನಾಗರಾಜ .. ಅವರ ಜ್ಞಾನಾಮೃತ್ಯವನ್ನು ಹಾಗೆ ಧಾರೆಯೆರೆದು ಅವರ ವಿಶ್ಲೇಷಣೆ, ಅವರ ಜ್ಞಾನದ ಆಳ, ಅದರ ಪರಿಭಾಷೆ ಎಲ್ಲವನ್ನೂ ಧಾರೆಯೆರೆದು ಜ್ಞಾನದ ಬೆಳಕಿನಿಂದ ರಜನಿಯನ್ನು ದೂರ ಮಾಡಿ ಅದಕ್ಕೆ ಈಶನಾಗಲು ಸಹಕರಿಸಿದ ಅಪ್ಪ.. ತಾಳ್ಮೆಗೆ ಇನ್ನೊಂದು ಹೆಸರು ತನ್ನ ತಾಯಿ ಪದ್ಮ ಎಂದು ಸದಾ ಹೇಳುವ.. ರಜನೀಶನಿಗೆ ಬೆಂಗಾವಲಾಗಿ ನಿಂತಿದ್ದು ಮನದನ್ನೆ ರೂಪ.. ಜೊತೆಯಲ್ಲಿ ಸಹೋದರರ ಕುಟುಂಬ ನರೇಂದ್ರ, ಸುಮಾ. ಮತ್ತು ಜ್ಞಾನೇಶ ಮತ್ತು ಆಶಾ.. ಇಷ್ಟೇನೆ ಅಂದರೆ ಇಲ್ಲ ಮುಂದಿನ ತಲೆಮಾರುಗಳ ಸರದಾರರು ವೈಷ್ಣವಿ, ಭರತ, ಸುರಭಿ, ಸರಯೂ, ಸೌರವಿ.. ಇವರುಗಳ ಜೊತೆಯಲ್ಲಿ ತನ್ನ ಮಡದಿ, ಮತ್ತು ಸಹೋದರರ ಪತ್ನಿಯರ ಮಾತಾ ಪಿತೃಗಳ ಕುಟುಂಬ.. ಎಲ್ಲರೂ ಇವನ ಯಶಸ್ಸಿನ ಹಾದಿಯಲ್ಲಿ ಬೆಳಕು ತುಂಬಿದವರೇ ಹೌದು..
ನಮ್ಮೆಲ್ಲರ ಪ್ರೀತಿಯ ರಜನೀಶನಿಗೆ ಬಹುಪರಾಕ್ ಬಹುಪರಾಕ್..