ಅದೊಂದು ಸಣ್ಣ ಹಳ್ಳಿ ... ಹೊಯ್ಸಳರ ಆಳ್ವಿಕೆಗೆ ಒಳಗಾಗಿದ್ದ ಪ್ರದೇಶ.ನೂರಾರು ಕುಟುಂಬಗಳು ಬಾಳಿ ಬದುಕಿದ್ದ ಹಳ್ಳಿಯದು.. ಹತ್ತಾರು ವಕ್ಕಲುಗಳು ವ್ಯವಸಾಯವನ್ನೇ ದುಡಿಮೆ ಮಾಡಿಕೊಂಡಿತ್ತು.. ಕೆಲವಾರು ಕುಟುಂಬಗಳು ಶಾನುಭೋಗಿಕೆ ಮಾಡಿಕೊಂಡಿದ್ದವು..
|
ಹಾಸನದ ಬಳಿಯ ಕೋರವಂಗಲ
|
ಅಂತಹ ಒಂದು ಕುಟುಂಬ ರಂಗಸ್ವಾಮಿ ಅವರದ್ದು.. ಶಾನುಭೋಗರಾಗಿ ಬಹಳ ಹೆಸರುವಾಸಿ .. ಅವರಿಂದ ಲಿಖಿತವಾದ ಅನೇಕ ದಾಖಲೆ ಪತ್ರಗಳು, ಒಕ್ಕಣೆಗಳು, ಅನೇಕಾನೇಕ ಮಾರ್ಗಸೂಚಿಗಳು, ಅಹವಾಲು ಪತ್ರಗಳು ಮರು ತಿದ್ದುಪಡಿ ಕಂಡಿದ್ದ ಉದಾಹರಣೆಗಳೇ ಇರಲಿಲ್ಲ.. ಶಾನುಭೋಗರು ರಂಗಸ್ವಾಮಿಗಳ ಪತ್ರ ಎಂದರೆ ಮರು ಮಾತಿಲ್ಲದೆ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಅಲಿಖಿತ ಸಂಪ್ರದಾಯದವಿದ್ದ ಕಾಲವದು ಅಂದರೆ ಅವರ ಬರವಣಿಗೆ, ಅದರ ಸಾರ, ಅದರಲ್ಲಿ ಅಡಕವಾಗಿದ್ದ ಕಾನೂನು ರೀತಿಯ ಪದಗಳು, ಅದರ ತಿರುಳು ಎಲ್ಲವೂ ಅರ್ಥಗರ್ಭಿತವಾಗಿದ್ದು ಸಂದರ್ಭವನ್ನು ವಿವರಿಸುವಂತಾಗಿದ್ದದ್ದು ಅವರ ಶಕ್ತಿಶಾಲಿ ಬರವಣಿಗೆಗೆ ಸಿಕ್ಕಿದ್ದ ಗೌರವ. .
|
ಕೋರವಂಗಲದ ಅದ್ಭುತ ಕಲೆ - ಬುಚೇಶ್ವರಾ ದೇವಾಲಯ |
ಅವರ ಶ್ರೀಮತಿ ಸುಬ್ಬನರಸಮ್ಮನವರು ಬಹಳ ಹೆಸರುವಾಸಿ ನರಸಮ್ಮ ಅಂತಾನೆ ಅವರು ಎಲ್ಲರಲ್ಲೂ ಜನಜನಿತವಾಗಿದ್ದು.. ಅವರ ಮನೆ ಎಂದರೆ ಹೊಟ್ಟೆ ಹಸಿವಿಗೆ ಜಾಗವಿಲ್ಲ ಆದರೆ ಕರುಣೆಗೆ, ಮಮತೆಗೆ ದೇವಾಲಯವಾಗಿತ್ತು.. ಒಮ್ಮೆ ಆ ಊರಿನ ಒಂದು ಹೆಬ್ಬಾಗಿಲಿನ ಬಳಿಯಲ್ಲಿರುವ ಅರಳಿ ಕಟ್ಟೆಯಲ್ಲಿ ಒಂದು ಮಗುವನ್ನು ಕೂರಿಸಿಕೊಂಡು, ಅರಳಿಯ ಎಲೆಯಲ್ಲಿ ತಟ್ಟಿದ ರೊಟ್ಟಿಯನ್ನು ಒಂದು ಪುಟ್ಟ ಮಗುವಿಗೆ ತಿನಿಸುತ್ತಿದ್ದರು.. ಆ ಊರಿನ ತಿಳುವಳಿಕಸ್ಥರಾಗಿದ್ದವರೊಬ್ಬರು ಲಿಂಗಾಚಾರಿಗಳು.. ಅವರ ಮಾತಿನಂತೆ ಸುಬ್ಬನರಸಮ್ಮನವರು ಆ ಮಗುವಿಗೆ ರೊಟ್ಟಿಯನ್ನು ತಿನಿಸುತ್ತಿದ್ದರು..
ಆಗ ಅಲ್ಲಿಗೆ ಬಂದ ಜೋಗಿ ಸಿದ್ಧರೊಬ್ಬರು.. ಏನಮ್ಮ ಈ ಮಗು.. ಏನಮ್ಮ ಈ ಮಗುವಿನ ಕತೆ... ಶಾಲೆಗೆ ಹೋಗುತ್ತಿಲ್ಲ.. ಆಡುತ್ತಿಲ್ಲ.. ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ ಅನಿಸುವಂತೆ ಸುಮ್ಮನೆ ಇರುವ ಈ ಮಗುವಿನ ಭವಿಷ್ಯ ನಿಮಗೆ ಕಾಣಿಸುತ್ತಿದೆಯೇ ಅಂದರು..
ಸುಬ್ಬನರಸಮ್ಮನವರು ಪಕ್ಕದಲ್ಲಿಯೇ ಇದ್ದ ಒಂದು ಮಡಕೆಯಲ್ಲಿ ಇದ್ದ ನೀರನ್ನು ಕುಡಿದು.. ಒಮ್ಮೆ ಆಗಸ ನೋಡಿ ಕುಮಾರ ಸಂಭವ ಅಂದರು..
ಏನಮ್ಮ ಕುಮಾರ ಸಂಭವವೇ ಇದು ಕಾಳಿದಾಸ ಬರೆದ ಮಹಾಕಾವ್ಯದ ಹೆಸರು . ಅದನ್ನು ಈಗ ಏತಕ್ಕೆ ಹೇಳುತ್ತಿದ್ದೀರಾ..?
ಕಾಳಿದಾಸ ಬರೆದದ್ದು ಕುಮಾರ ಸಂಭವ.. ಈಗ ನಾನು ಹೇಳೋದು ಕುಮಾರನಲ್ಲಿ ಸಂಭವಿಸೋದು..ಕುಮಾರನಿಗೆ ಸಂಭವಾಗೋದು .. ಅಂದರೆ ಕುಮಾರನಿಗೆ ಅಸಂಭವ ಅನ್ನೋದು ಇಲ್ಲ .. ಮಗುವಿಗೆ ಮಾತೆ ಪ್ರಬಲ ಅಸ್ತ್ರವಾಗುತ್ತದೆ.. ಈತನನ್ನು ಕಾಯುವುದೇ ಮಾತು., ಇದು ಅವನ ಮಾತೆಯಾದ ನಾನು ಹೇಳುವ ಮಾತೆ ಇದು .. !
ಈ ಮಗು. ಶಾಲೆಗೇ ತಡವಾಗಿ ಸೇರುತ್ತೆ.. ಮಗುವಿಗೆ ಕಣ್ಣಿನ ತೊಂದರೆ.. ಕಿವಿಯ ತೊಂದರೆ.. ಒಂದು ಮಗುವಿಗೆ ಏನು ತೊಂದರೆ ಇರಬಾರದೋ ಅದೆಲ್ಲವೂ ಇತ್ತು.. ಹಳ್ಳಿಯ ಹುಡುಗರ ಹಾಗೆ ಮೂಲೆಗುಂಪಾಗುವ ಎಲ್ಲಾ ಸಾಧ್ಯತೆಗಳಿದ್ದರೂ, ಕುಮಾರನ ಅಕ್ಕ ನಾಗಲಕ್ಷ್ಮಿಯ ಮಾರ್ಗದರ್ಶನದಲ್ಲಿ ವಿದ್ಯಾವಂತನಾಗುತ್ತಾನೆ.. ನಾಗಲಕ್ಷ್ಮಿ ಒಂದನೇ ಪಾಠ ಹೇಳುತ್ತಿದ್ದರೆ ಈ ಮಗು ಅದರ ಮುಂದಿನ ಪಾಠಗಳನ್ನು ಓದಿ ಒಪ್ಪಿಸುವ ಪರಿಯನ್ನು ಕಂಡು ನನ್ನ ಮಗಳು ನಾಗಲಕ್ಷಿ ಬೆರಗಾಗುತ್ತಿದ್ದಳು.. ಈ ಮನೆ ಪರಿಸ್ಥಿತಿ ಏನೇ ಇದ್ದರೂ ಈತನ ಓದಿಗೆ ಏನೂ ಧಕ್ಕೆ ಬರುವುದಿಲ್ಲ.. ಇವನ ಒಬ್ಬ ಅನುಜಾಗ್ರ ಓದಿನ ಮುಖ್ಯ ಹಂತಕ್ಗೆ ಸಹಾಯ ಮಾಡುತ್ತಾನೆ..ಬರೆಯಲು ಕಾಗದದ ಕೊರತೆ ಕಂಡಾಗ.. ಶಾಲೆ ಮೈದಾನದಲ್ಲಿ ಸಿಕ್ಕುವ ಸಿಗರೇಟ್ ಬಾಕ್ಸ್ ಉಲ್ಟಾ ಮಾಡಿಕೊಂಡು ಖಾಲಿ ಜಾಗದಲ್ಲಿ ಬರೆದು ಬರೆದು ಅಭ್ಯಾಸ ಮಾಡುತ್ತಾನೆ.. ಶಾಲಾ ಕಾಲೇಜುಗಳಲ್ಲಿ ಬಿಡುವಿನ ತರಗತಿಗಳಿಗೆ ಹೋಗಿ ಅಲ್ಲಿನ ಕಪ್ಪು ಹಲಗೆಯ ಮೇಲೆ ಸೀಮೆ ಸುಣ್ಣದಿಂದ ಬರೆದು ಲೆಕ್ಕಗಳನ್ನು, ವಿಜ್ಞಾನದ ವಿಷಯಗಳನ್ನು ಸಮೀಕರಣಗಳನ್ನು ಬಿಡಿಸುತ್ತಾ ಅಭ್ಯಾಸ ಮಾಡುತ್ತಾ ವಿದ್ಯಾಭ್ಯಾಸದಲ್ಲಿ ಹಂತ ಹಂತವಾಗಿ ಏರುತ್ತಾನೆ.. ವಿದ್ಯಾಭ್ಯಾಸದ ಜೊತೆಯಲ್ಲಿಯೇ ಬಳುವಳಿಯಾಗಿ ಬಂದ ಚಿತ್ರಕಲೆ ಕೈ ಹಿಡಿಯುತ್ತದೆ.. ನೋಡಿದ್ದನ್ನು, ಕಲ್ಪಿಸಿದ್ದನ್ನು, ಹಾಗೆ ಕಾಗದದ ಮೇಲೆ ಮೂಡಿಸುವ ಕಲೆ ಕರಗತವಾಗುತ್ತದೆ.. ಶ್ರೇಷ್ಠ ಕಲಾಕಾರನಾಗುವ ಎಲ್ಲಾ ಅರ್ಹತೆಗಳು ಇದ್ದರೂ, ಕಾರಣಾಂತಗಳಿಂದ.. ಬದುಕಲ್ಲಿ ಗೆಲ್ಲುವ ಛಲದಲ್ಲಿ, ಕಲೆಯನ್ನು ಮುಂದುವರೆಸಲಾಗದಿದ್ದರೂ, ಅವಕಾಶ ಸಿಕ್ಕಿದಾಗೆಲ್ಲ, ಕೋರವಂಗಲದ ಕುಟುಂಬ ಕಾರ್ಯಕ್ರಮದಲ್ಲಿಯೇ ಆಗಲಿ, ಬಂಧು ಮಿತ್ರರ ಮನೆಯ ಸಂಭ್ರಮದಲ್ಲಿಯೇ ಆಗಲಿ ತಮ್ಮ ಚಿತ್ರಕಲೆಯ ಹಸಿವನ್ನು ಬಿಂಬಿಸಿ, ಆ ಸಂಭ್ರಮಕ್ಕೆ ಇನ್ನಷ್ಟು ಹೊಳಪು ನೀಡುತ್ತಾನೆ.. ಹಾಗೆಯೇ ಚಿತ್ರಕಲೆಯಲ್ಲಿ ಬೆಳಕಿಗೆ ಬರುತ್ತಿರುವವರಿಗೆ ಉತ್ಸಾಹ ಹುಮ್ಮಸ್ಸು ಸ್ಪೂರ್ತಿಯ ಸೆಲೆಯಾಗಿದ್ದಾನೆ..
ಇದಕ್ಕೆ ನಾ ಮೊದಲೇ ಹೇಳಿದ್ದು ಕುಮಾರ ಸಂಭವ ಅಂತ :-)
ಇದು ಒಂದು ಹಂತದ ಕುಮಾರ ಸಂಭವ..ಇದು ಕುಮಾರನಲ್ಲಿ ಸಂಭವಿಸೋದು..
ಮುಂದೆ ಮಾಯಾನಗರಿ ಬೆಂಗಳೂರಿನಲ್ಲಿ ಕೆಲಸ ಸಿಕ್ಕಾಗ ಕೂಡ, ಬರುವ ಅಲ್ಪ ಆದಾಯದಲ್ಲಿ ಹೊಟ್ಟೆ ಬಟ್ಟೆ ಮಾಡಿಕೊಂಡು ತನ್ನ ಬದುಕಿಗೂ ಒಂದು ಗುರಿ ಇಟ್ಟುಕೊಂಡು.. ಮುಂದೆ ಒಂದು ಅತ್ಯುತ್ತಮ ಸಾರ್ವಜನಿಕ ಸಂಸ್ಥೆಯಲ್ಲಿ ಸೇರಿಕೊಂಡು ಉತ್ತಮ ಅವಕಾಶಗಳನ್ನು ಮೇಳೈಸಿಕೊಂಡು ಬೆಳೆದ.. ಇವನ ಮ್ಯಾನೇಜರ್ ಏನಪ್ಪಾ ಕುಮಾರ್ ಆ ಮಾಹಿತಿ ಬೇಕಿತ್ತು ನಾಳೆ ಕೊಡಬೇಕು ಎಂದರೆ.. ಆಗಲೇ ಬರೆದಿಟ್ಟುಕೊಂಡಿದ್ದ ಮಾಹಿತಿಯನ್ನು ರಪ್ಪನೆ ಕೊಟ್ಟು ಶಭಾಷ್ ಗಿರಿ ಗಳಿಸುತ್ತಿದ್ದನು..ಇದೆ ಇವನ ಜಾಣ್ಮೆ.. ಆಫೀಸಿನ ಎಲ್ಲಾ ಟೆಲೆಫೋನಿನ ಸಂಖ್ಯೆಗಳು, ಫ್ಯಾಕ್ಟರಿಯಲ್ಲಿ ಉತ್ಪಾದಿಸಲು ಉಪಯೋಗಿಸುತ್ತಿದ್ದ ವಸ್ತುಗಳ ಪಾರ್ಟ್ ನಂಬರ್ ಎಲ್ಲವೂ ಅಂಗೈ ರೇಖೆಯಷ್ಟೇ ಚಿರಪರಿಚಿತ.. ಹಾಗಾಗಿ ಇವರ ತಂಟೆಗೆ ಮ್ಯಾನೇಜ್ಮೆಂಟ್ ಹೋಗುತ್ತಲೇ ಇರಲಿಲ್ಲ..
ತನಗೆ ಬರುವ ಚೂರು ಪಾರು ಸಂಪಾದನೆಯಲ್ಲಿ ಅಲ್ಪ ಸ್ವಲ್ಪ ಉಳಿಸುತ್ತಾ ತನ್ನ ಅಕ್ಕ ಗೌರಿಯ ಮನೆಗೆ ಆಗಾಗಿ ಹೋಗಿ ಬರುತ್ತಾ ತನ್ನ ಕೈಲಾದಷ್ಟು ಸಹಾಯ ಮಾಡುತ್ತಲೇ ಇರುತ್ತಾನೆ..
ಇನ್ನು ಮುಂದಿನ ಹಂತ ಸಂಭವ ಆಗಲೇ ಬೇಕು ಎಂದು ಹಠ ತೊಟ್ಟು ಒಂದು ರೀತಿಯಲ್ಲಿ ವಿಧಿಗೆ ಸವಾಲೆಸೆದು ಸಂಭವಿಸಿಕೊಂಡ ಕುಮಾರನ ಸಾಹಸಗಾಥೆಯಿದು .. ಎಲ್ಲವನ್ನೂ ತಿಳಿದವರಿಗೂ ಸವಾಲಸೆದು ಗೆಲ್ಲುವ ಛಲಗಾರ..
ಮುಂದೆ ಇನ್ನು ಒಂದು ಹಂತದ ಸಂಭವ ನೆಡೆಯುತ್ತದೆ.. ಇವನ ಬಾಳಿನಲ್ಲಿ ಉಷೋದಯವಾಗುತ್ತದೆ.. ಸರ್ಕಾರಿ ಸ್ವಾಮ್ಯ ಸಂಸ್ಥೆಯಲ್ಲಿ ಲೆಕ್ಕಾಚಾರ ವಿಭಾಗದಲ್ಲಿ ಕೆಲಸ ಮಾಡುವ .. ಚೆಲುವೆ.. ದಕ್ಷಿಣ ಭಾರತದ ಚಿತ್ರ ಪ್ರಪಂಚದ ತಾರೆ ಸರಿತಾ .. ಈ ನಮ್ಮ ಉಷಾಳನ್ನು ಹೋಲುತಿದ್ದದ್ದು ವಿಶೇಷ... ಅವಳ ಅಪ್ಪನ ಮನೆಯಲ್ಲಿ ಅನೇಕ ಮಂದಿ ಇವಳನ್ನು ಸರಿತಾ ಅಂತ ಗುರುತಿಸುತ್ತಿದ್ದದ್ದು ಉಂಟು.. ಆದರೆ ಈ ಮಗಳು ನನ್ನ ಕುಟುಂಬದವಳು.. ಇವಳು ಸರಿತಾಳನ್ನು ಹೋಲುತ್ತಿದ್ದಳು ಎಂದರೆ ನನ್ನ ಮನಸ್ಸಿಗೆ ಕಷ್ಟ.. ಸರಿತಾ ಇವಳನ್ನು ಹೋಲುತಿದ್ದಳು ಎನ್ನುವುದು ನನಗೆ ಸರಿ ಕಾಣುತ್ತೆ....
ಅರಳಿ ಕಟ್ಟೆಯ ಸುತ್ತಲೂ ನೆರೆದಿದ್ದ ಹಳ್ಳಿಯ ಮಂದಿ ಒಮ್ಮೆ ನಕ್ಕರೂ .. ಅದ್ಭುತವಾದ ನಾಳಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ನರಸಮ್ಮನವರ ಮುಂದಿನ ಮಾತುಗಳು ಮಿಸ್ ಆಗಬಾರದೆಂದು ಮತ್ತೆ ಗಮನವಿಟ್ಟು ಕೇಳತೊಡಗಿದರು.. ಜೋಗಿ ಸಿದ್ದರು ಯಾವುದೋ ಮಾಯಾಜಾಲದಲ್ಲಿ ಇರುವವರಂತೆ ಅರಳಿ ಕಟ್ಟೆಯಲ್ಲಿ ಮೈ ಮರೆತು ಕೂತುಬಿಟ್ಟಿದ್ದರು.
ಕಿರಿಯರ ಜೊತೆ ಕಿರಿಯರಾಗಿ.. ಹಿರಿಯರ ಜೊತೆ ಹಿರಿಯರಾಗಿ.. ಮಕ್ಕಳ ಜೊತೆ ಮಕ್ಕಳಾಗಿ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತಾಡುವ. .ತನ್ನ ಜೊತೆ ಬೆಳೆದ ತಮ್ಮಂದಿರನ್ನು, ತಂಗಿಯರನ್ನು ತನ್ನ ಮಕ್ಕಳಂತೆ ಪೋಷಿಸಿದ ತಾಯಿ ನನ್ನ ಸೊಸೆ ಉಷಾ. ನೋಡಲು ಸುಂದರಿ.. ನಗುವಾಗ ಅವಳ ಮೊಗವನ್ನು ನೋಡಲು ಚೆನ್ನ.. ಕುಮಾರ ಈ ಚಲುವೆಗೆ ಮನಸೋತಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲಸ ಮಾಡುತ್ತಿದ್ದರೂ ಓದುವ ಹಸಿವು ಇಂಗಿರಲಿಲ್ಲ.. ಸ್ಪರ್ಧಾತ್ಮಕ ಪರೀಕ್ಷೆಗಳು, ಮತ್ತಿತರ ಪರೀಕ್ಷೆಗಳು ಹೀಗೆ ಯಾವುದೇ ರೀತಿಯಲ್ಲಿ ಓದುವುದು ಪ್ರಶ್ನೆಗಳನ್ನು ಮನೆಯಲ್ಲಿಯೇ ಕೂತು ಉತ್ತರಿಸುವುದು, . ಅಂಚೆ ಮೂಲಕ ಕಳಿಸುವುದು.. ಹೀಗೆ ಓದುವುದರ ಹಸಿವು ಸಾಗಿತ್ತು.. ಪದರಂಗ, ಪದಬಂಧ ನೆಚ್ಚಿನ ಹವ್ಯಾಸ.. ಸಂಗೀತದಲ್ಲಿ ಅಪಾರ ಆಸಕ್ತಿ, ಕಾನಡ, ಹಂಸ, ಶಿವರಂಜಿನಿ, ದರ್ಬಾರಿ ಹೀಗೆ ಅನೇಕಾನೇಕ ರಾಗಗಳನ್ನು ಗುರುತಿಸುವುದು ಈಕೆಯ ವಿಶೇಷತೆ..
ಈ ಮುದ್ದು ಕುಟುಂಬ ಮಾಯಾನಗರಿಯಲ್ಲಿ ಇಬ್ಬರೂ ತಮ್ಮತಮ್ಮ ಬದುಕನ್ನು ರೂಪಿಸಿಕೊಳ್ಳಲು ಹೊರಟಾಗ ಸಂಭವಿಸಿದ್ದು ಎರಡು ನಕ್ಷತ್ರಗಳು. ಒಂದು ಮನೋಜವಂ ಮಾರುತ ತುಲ್ಯ ವೇಗಂ ಎನ್ನುವಂತೆ ಹುಟ್ಟಿದ ಮಗು ಮನೋಜ ಅರ್ಥಾತ್ ದೀಪಕ್.. ಇನ್ನೊಂದು ಮಗು ಹಿಂದೂಗಳ ಹಬ್ಬಗಳಿಗೆ ಬೆಳಕು ನೀಡುವ..ತಮಸ್ಸು ಕಳೆಯುವ ಕಾರ್ತಿಕ ಮಾಸದ ಹೆಸರು ಹೊತ್ತ ಕಾರ್ತಿಕ್..
ಎರಡು ಮುದ್ದಾದ ಗೊಂಬೆಗಳ ಜೊತೆಯಲ್ಲಿ ಸಂಸಾರವೂ ಬೆಳೆಯಿತು. .ಹಾಗೆಯೇ ಕಂಡ ಕನಸ್ಸುಗಳು ನನಸಾಯಿತು... ಮಕ್ಕಳ ಜೊತೆಯಲ್ಲಿ ಸಣ್ಣ ಪುಟ್ಟ ಪಿಕ್ಣಿಕ್. ಹೋಗುವುದು .. ಫೋಟೋಗಳನ್ನು ತೆಗೆಯುವುದು.. ಅದನ್ನು ಮುದ್ರಿಸಿ ಖುಷಿ ಪಡುವುದು.. ಊರೂರು ಪ್ರವಾಸ.. ಮನಸ್ಸಿಗೆ ಬಂದಾಗ ತಿಂಡಿಗಳನ್ನು.. ಪಾನೀಯಗಳನ್ನು ಚೀಲಕ್ಕೆ ಹಾಕಿಕೊಂಡು ಹೊರಟರೆ ಮುಗೀತು ವಾಪಸ್ ಬರುವಾಗ ಅದ್ಭುತ ನೆನಪುಗಳನ್ನು ಹೊತ್ತು ತರುತ್ತಿದ್ದರು.. ಇದೆ ಈ ಮುದ್ದು ಕುಟುಂಬದ ಮಂತ್ರವಾಗಿತ್ತು.. ಕುಮಾರನಂತೂ ಹಿಮಾಲಯ ಶ್ರೇಣಿಗಳ ಕಡೆಗೆ ಅನೇಕ ಚಾರಣಗಳನ್ನು ಮಾಡಿ ಅಲ್ಲಿನ ಅನುಭವಗಳನ್ನು ಅವಕಾಶ ಸಿಕ್ಕಿದ ಕಡೆಯೆಲ್ಲಾ ಹೇಳುತ್ತಾನೆ..
ಬೆಂದಕಾಳೂರಿನಲ್ಲಿ ಒಂದು ಸೂರು ನಿಲ್ಲಿಸುವುದು ಎಲ್ಲರ ಕನಸ್ಸು ಹೌದು.. ಅದನ್ನು ನನಸ್ಸು ಮಾಡೋದಕ್ಕೆ ಎಲ್ಲರೂ ಪ್ರಯತ್ನಿಸುವುದು ಹೌದು.. ಉಳಿದುಕೊಂಡದ್ದು, ಉಳಿಸಿಕೊಂಡದ್ದು. . ಜೊತೆ ಮಾಡಿದ್ದು ಎಲ್ಲವನ್ನು ಸೇರಿಸಿ ಒಂದು ಸೂರು ಮಾಡಿಕೊಂಡರು ನಮ್ಮ ಕುಮಾರ-ಉಷಾ..ಕುಮಾರ-ಉಷಾರ ಮಕ್ಕಳು ಬೆಳೆದವು ವಿದ್ಯಾವಂತರಾದವು..
ಒಬ್ಬ ವೃತ್ತಿಪರತೆಯಿಂದ ಕ್ರೀಡಾಕ್ಷೇತ್ರದಲ್ಲಿ ಬೆಳಗುತ್ತಿದ್ದಾನೆ.. ಅವನೇ ದೀಪಕ್.. ಅವನ ಮುದ್ದಿನ ಮನೋರಮೆ ರಮ್ಯಾ.. ಅವಳು ಬಂದಳು ರಮ್ಯಾ ಚೈತ್ರ ಕಾಲ ಶುರುವಾಯಿತು.. ಆ ಚೈತ್ರಕಾಲದಲ್ಲಿ ಮಾವಿನ ಹೂವು ಹಣ್ಣಾಗಿ ಸಂಭವವಾಗಿದ್ದು ಶಾರ್ವರಿ.. ನನ್ನ ಮಗನ ಸೊಸೆ ತನ್ನ ಎತ್ತರದಷ್ಟೇ ಎತ್ತರ ನಿಂತು ಹೆಗಲಿಗೆ ಹೆಗಲು ಕೊಟ್ಟು ಜೊತೆ ನಿಂತು ಗಟ್ಟಿಯಾಗಿಸಿದ್ದು ಈ ಜೋಡಿಯ ಮುದ್ದಾದ ಸಂಸಾರ..
ಸೈಬರ್ ಯುಗದೊಳ್ ಒಂದು ಮಧುರ ಪ್ರೇಮ ಕಾವ್ಯ….ಮಾಹಿತಿ ತಂತ್ರಜ್ಞಾನದಲ್ಲಿ ಬೆಳೆದ ಕಾರ್ತಿಕ್ ಬದುಕನ್ನು ಪ್ರೇಮಮಯಗೊಳಿಸಿದವಳು ಮಧುರ.. ಬ್ಯೂಟಿ ವಿಥ್ ಬ್ರೈನ್ ಎನ್ನುವ ಮಾತು ಇವಳಿಗೆ ಅನ್ವಯಿಸುತ್ತದೆ ... ಮಧುರ ತನ್ನ ಮುದ್ದಾದ ಪತಿರಾಯನ ಜೊತೆ ಬದುಕಿನ ಸಮೀಕರಣ ಬಿಡಿಸುತ್ತಾ ಮುದ್ದಾದ ಮಕ್ಕಳು ಪ್ರೀತಿಯ ಸಿಂಚನ.. ಮಧುರ ಮಾತಿನ ಇಂಪನಳಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿದ್ದಾರೆ.. ..
ಇಂತಹ ಅಮರ ಮಧುರ ಪ್ರೇಮ ತುಂಬಿದ ಕುಟುಂಬ ಬೆಂದಕಾಳೂರಿನಲ್ಲಿ ಕಾಲೂರಿ ನಿಂತಿದ್ದು.. ಬೆಳೆದದ್ದು.. ಬೆಳೆಯುವುದು.. ಹರಡುವುದು ನೋಡುವುದೇ ಒಂದು ಭಾಗ್ಯ..
ಇದೆಲ್ಲ ಒಂದು ಟ್ರಾಕಿನಲ್ಲಿ ಓಡುತ್ತಿದ್ದರೆ ... ಚಟುವಟಿಕೆಯ ಕುಮಾರ ಇದರ ಜೊತೆಯಲ್ಲಿ ಗ್ರಹಗತಿಗಳ ಬಗ್ಗೆ ಮಾಹಿತಿ ಕಲಿತು.. ಅದರಲ್ಲಿ ಉನ್ನತ ಮಟ್ಟದಲ್ಲಿ ವಿದ್ಯಾರ್ಹತೆ ಸಂಪಾದಿಸಿ. ಅನೇಕ ಕಿರಿ ಹಿರಿಯರಿಗೆ ಮಾರ್ಗದರ್ಶನ ಮಾಡುತ್ತಾ.. ಅನೇಕಾನೇಕ ಬದುಕಿಗೆ ಬೆಳಕಾಗಿದ್ದಾನೆ .. ನನ್ನ ಮಗಳು ನಾಗಲಕ್ಷ್ಮಿಯ ಮಗ ನಾಗಭೂಷಣ ಮುಂದೆ ಜ್ಯೋತಿಶ್ಯಾಸ್ತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಾ ಹಾಗೂ ಆಧ್ಯಾತ್ಮಿಕ ಜಗತ್ತಿನಲ್ಲಿ ತನ್ನದೇ ಒಂದು ಸ್ಥಾನ ಕಂಡುಕೊಳ್ಳುತ್ತಾ ಇರುವ.. ಅವನ ಜೊತೆಯಲ್ಲಿ ಕುಮಾರನು ನೆಡೆಯುತ್ತಾ ತನಗೆ ತಿಳಿದ ವಿಷಯಗಳನ್ನು ಹರಡುತ್ತ್ತಾ ಬೆಳೆಯುತ್ತಿದ್ದಾನೆ .. ಬೆಳೆಸುತಿದ್ದಾನೆ…
ಸುಬ್ಬನರಸಮ್ಮನವರು ಆಗಸ ನೋಡುತ್ತಾ "ನೋಡಿ ಚಾರಿಗಳೇ ಮೇರಾ ನಾಮ್ ಜೋಕರ್ ಚಿತ್ರದ ಹಾಡಿನಂತೆ.. ಕಲ್ ಖೇಲ್ ಮೇ ಹಮ್ ಹೊ ನಹೋ ಗರ್ಧಿಶ್ ಮೇ ತಾರೆ ರಹಂಗೆ ಸದಾ ಎನ್ನುವಂತೆ.. ಕುಮಾರ ಸಂಭವಂ ಲೇಖನದಿ ಹೇಳಿರುವಂತೆ ಕುಮಾರನ ಕುಟುಂಬದ ಅತ್ಯುತ್ತಮ ಮಜಲನ್ನು ನಾವು ಭುವಿಯಿಂದ ನೋಡದೆ ಇರಬಹದು ಆದರೆ ಧ್ರುವ ನಕ್ಷತ್ರದ ಹಾಗೆ ಆಗಸದಿಂದ ಖಂಡಿತ ನೋಡುತ್ತಿರುತ್ತೇವೆ ... ಹರಸುತ್ತಿರುತ್ತೇವೆ.. ಅವನ ಹಠ ಸಾಧನೆಯಂತೆ ಸದಾ ಶುಭವೇ ಆಗುತ್ತದೆ.. ಆಗುತ್ತಿರುತ್ತದೆ.. "
ಕುಮಾರ ಸಂಭವಂ
ಉಷಾ ಮಾರ್ಗದರ್ಶನಂ
ರಮ್ಯಾ ಚೈತ್ರ ಕಾಲದಿ ದೀಪಕ ರಾಗ ಹಾಡಿತಂ
ಸೈಬರ್ ಯುಗದೊಳ್ ಅಮರ ಮಧುರ ಕಾರ್ತಿಕ ಪ್ರೇಮಂ
ಇವರುಗಳೆಲ್ಲ ಕೈಜೋಡಿಸಿರುವಾಗ ಎಲ್ಲವೂ ಸಂಭವಂ ಸಂಭವಂ ಸಂಭ್ರಮಂ !!!!
ಕುಮಾರನಿಗೆ ಎಪ್ಪತ್ತೈದರ ಸಂಭ್ರಮಂ!!!
ಅಂದು ಕಾಳಿದಾಸ ಬರೆದದ್ದು ಕುಮಾರ ಸಂಭವಂ ,, ನನ್ನ ಕಿರಿಮಗನಿಗೆ ನಾ ಭವಿಷ್ಯ ರೂಪಿಸಿ ಅವನಿಗೆ ಹೇಳಿದ್ದು ಕುಮಾರನಿಗೆ ಎಲ್ಲವೂ ಸಂಭವಂ!!!
|
ಅಂದದ ಬದುಕಿಗೆ ಚಂದದ ಚೌಕಟ್ಟು ಎಪ್ಪತೈದರ ಸಂಭ್ರಮ !!! |
(ಮಾತೃ ದೇವೋಭವ ಶ್ರೀಮತಿ ಸುಬ್ಬನರಸಮ್ಮನವರ ನಿರೂಪಣೆಯಾಗಿರುವುದರಿಂದ ಏಕವಚನದ ಉಪಯೋಗವಾಗಿದೆ.. ಮತ್ತೆ ಭೂತ ಭವಿಷ್ಯತ್ ವರ್ತಮಾನದಲ್ಲಿ ಓಡಾಡುತ್ತಾ ನಿರೂಪಣೆ ಮಾಡಿರುವುದರಿಂದ ಎರಡು ಆಯಾಮದಲ್ಲಿ ಈ ಲೇಖನ ಮೂಡಿ ಬಂದಿದೆ.. )