Monday, August 28, 2023

ಸ್ವರ್ಗ ಸೀಮೆಯ ಕೌಸ್ತುಭ ಹಾರ ...!

ಸಂತಸ ಲೀಲೆಯ ಹಂಸವಿಹಾರ
ಸ್ವರ್ಗ ಸೀಮೆಯ ಕೌಸ್ತುಭ ಹಾರ
ಸೌಂದರ್ಯ ಲಹರಿಯ...
ಲಹರಿ ಲಹರಿ ಲಹರಿ ಲಹರಿ
ಮಧುರ ಸಂಚಾರ
ವೇದಮಾತೆಯು ನಲಿಯುವ ತೀರ
ಮಾನಸ ಸರೋವರ....
ಈ.....ನಿನ್ನಾ ಮನಸೇ...ಮಾನಸ ಸರೋವರ

ಬೆಳಿಗ್ಗೆಯಿಂದಲೂ ಅಣ್ಣ (ಅಪ್ಪ) ಇದೆ ಹಾಡಿನ ಸಾಲುಗಳನ್ನು ತಮ್ಮ ಇಷ್ಟವಾದ ಟೇಪ್ರೆಕಾರ್ಡರಿನಲ್ಲಿ ಹಾಕಿಕೊಂಡು ಮತ್ತೆ ಮತ್ತೆ ತಿರುಗಿಸಿ ಮುರುಗಿಸಿ ಅದನ್ನೇ ಕೇಳುತ್ತಿದ್ದರು.. 

ಅಮ್ಮನಿಗೆ ಕಾರಣ ಗೊತ್ತಿತ್ತು.. ಸುಮ್ಮನೆ ತಮ್ಮ ಪಾಡಿಗೆ ತಮ್ಮ ದಿನ ನಿತ್ಯದ ಕೆಲಸ ಮಾಡುತ್ತಿದ್ದರು.. 

ಸುಮಾರು ಸಂಜೆ  ಏಳು ಘಂಟೆ .. ಅಣ್ಣ ಶುಭ್ರವಾದ ರೇಷ್ಮೆ ಮಗುಟ ತೊಟ್ಟು ತೊಟ್ಟು.. ಹಣೆಗೆ ವಿಭೂತಿ ಹಚ್ಚಿಕೊಂಡು. ಸಂಧ್ಯಾವಂದನೆ ಮಾಡುತ್ತಾ ಕುಳಿತರು.. 
ಅಮ್ಮನೂ ಕೂಡ ಅದೇ ಮಗುಟದ ರೇಷ್ಮೆ ಸೀರೆಯನ್ನು ಧರಿಸಿದ್ದರು.. ಸಂಭ್ರಮದಿಂದ ಬೀಗುತ್ತಿದ್ದರು.. 

ಗಣಾಧಿಪನನ್ನು ಕರೆಸಿ ಪೂಜೆ ಶುರು ಮಾಡಿದ್ದು.. ನಂತರ ಕುಲದೇವತಾ ಪ್ರಸನ್ನ.. ನಂತರ ನವಗ್ರಹ.. ನಂತರ ರಾಕ್ಷೋಜ್ಞ ಯಜ್ಞ.. ಅಂತಹ ಅಂದವಾದ ಮನೆಯನ್ನು ಧೂಮದಿಂದ ಸಿಂಚನ ಮಾಡಲು ಯಜ್ಞಕ್ಕೆ ಬೇಕಾದ ಆಜ್ಯಗಳಾದ  ಸಮಿತ್ತುಗಳು, ತುಪ್ಪ, ನಾರು ಬೇರುಗಳು ಸಿದ್ಧವಾಗಿದ್ದವು.. 

ಅಚ್ಚುಕಟ್ಟಾದ ಹೋಮ ಹವನಗಳು ಶುರುವಾದವು.. 

ಜೀವನದ ಪ್ರತಿ ಹೆಜ್ಜೆಯಲ್ಲೂ ಅಚ್ಚುಕಟ್ಟಾಗಿ ಬದುಕನ್ನು ನಿಭಾಯಿಸಿದ್ದರಿಂದ ಈ ಪೂಜಾ ಕೈಂಕರ್ಯ ಹೊಸದೇನು ಆಗಿರಲಿಲ್ಲ.. ಹಾ ಹೌದು ಕಾಲುನೋಯುತ್ತಿತ್ತು .. ಆದರೆ ಸಾಧಿಸಿದ ಸಂತಸದ ಮುಂದೆ ಇದ್ಯಾವ ಲೆಕ್ಕ.. ಅದು ಅವರ ಮನಸ್ಥಿತಿಯಾಗಿತ್ತು 

ಮನೆಯೆಲ್ಲ ಧೂಮದಿಂದ ಸಿಂಚನವಾಗಿ.. ಮನೆಗೊಂದು ಶಕ್ತಿ, ರಕ್ಷಣೆ ಸಿಕ್ಕಿದೆ ಎನ್ನುವ ಸಂತಸ.. 

ಬ್ರಾಹ್ಮೀ ಮಹೂರ್ತದಲ್ಲಿ ಮತ್ತೆ ಮುಂದುವರೆದ ಕಾರ್ಯಕ್ರಮ.. ಗೋ ಪ್ರವೇಶದಿಂದ ಮುಂದೆ ಸಾಗಿತು.. ಗೋವು ತನ್ನ ಮುದ್ದಿನ ಕರುವಿನ ಜೊತೆಯಲ್ಲಿ ಮನೆಯೊಳಗೇ ಓಡಾಡಿ ಕೊಟ್ಟ ಆಹಾರವನ್ನು ಸ್ವೀಕರಿಸಿದ ಎಲ್ಲರ ಮನಸ್ಸು ಧನ್ಯತಾಭಾವದಿಂದ ಶರಣಾದವು.. 

ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪೃಷ್ಟಿವರ್ಧನಂ.... 
ಓಂ ಗಣಾನಾಂತ್ವ ಗಣಪತಿಮ್ ಹವಾಮಹೇ ಕವಿಂಕವೀನಾಂ ಉಪಮ ಶ್ರವಸ್ತಮಂ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ | ತನ್ನೋ ರುದ್ರ: ಪ್ರಚೋದಯಾತ್
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ | ತನ್ನೋ ವಿಷ್ಣು: ಪ್ರಚೋದಯಾತ್
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತೀ ಪ್ರಚೋದಯಾತ್
ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ | ತನ್ನೋ ಆದಿತ್ಯ ಪ್ರಚೋದಯಾತ್
ಓಂ ಮಹಾಲಕ್ಷ್ಮೀಚ ವಿದ್ಮಹೇ ವಿಷ್ಣುಪತ್ನೀಚ ಧೀಮಹಿ | ತನ್ನೋ ಲಕ್ಷ್ಮೀ: ಪ್ರಚೋದಯಾತ್

ಹೀಗೆ ಗಾಯತ್ರಿ  ಮಂತ್ರಗಳು.. ವೇದ ಘೋಷಗಳು.. ವೇದ ಮಂತ್ರಗಳು ಸ್ಪುರಿಸಿದ ಆ ಸಮಯ ಕರ್ಣಾನಂದಕರ.. 

ಮನೆಯಲ್ಲಿ ಈ ರೀತಿಯ ಕಂಪನಗಳು, ತರಂಗಗಳು ಉತ್ಪತ್ತಿಯಾಗುತ್ತಲೇ ಇರಬೇಕು.. ಆಗ ನೋಡು ಮನೆಯ ಬುನಾದಿಯನ್ನು ಯಾವುದೇ ಋಣಾತ್ಮಕ ತರಂಗಗಳು ಮುಟ್ಟಲಾರವು.. 



ಹೌದು.. ನಿಮ್ಮ ಮಾತು ನಿಜ.. ಆರಂಭಿಕ ಜೀವನದಲ್ಲಿ ಎಡರು ತೊಡರುಗಳಿದ್ದರು.. ಅದನ್ನೇ ಮೀಟಿ ಮೆಟ್ಟಿ ನಿಂತ ಮೇಲೆ.. ನಮ್ಮ ಮನೆಯಲ್ಲಿ ಕಡೇಪಕ್ಷ ಎರಡು ವಸಂತಗಳಿಗೊಮ್ಮೆ ಈ ರೀತಿಯ ಮಂತ್ರ ಘೋಷಗಳಿಂದ ಮನೆ ಮನಗಳು ಸಂಭ್ರಮಿಸಿದ್ದು ನಿಜವಲ್ಲವೇ.. 


ಬಂಧು ಮಿತ್ರರು.. ನೆಂಟರಿಷ್ಟರು ಬಂದು ಹರಸಿ ಹಾರೈಸಿ  ಸಂತಸ ಭೂರಿ ಭೂಜನ ಉಂಡ ಮೇಲೆ.. ಇನ್ನೊಂದು ಸಂತಸ ಕಾದಿತ್ತು.. 

ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಟಾಟಾ.. ನಮ್ಮ ದೇಶದ ಬಗ್ಗೆ ನಮ್ಮ ಹೆಮ್ಮೆಯ ಪ್ರಧಾನಿ ಯುಗ ಪುರುಷ ಶ್ರೀ ನರೇಂದ್ರ ಮೋದಿಯ ಕಾಳಜಿಯ ಹಾಗೆ ಟಾಟಾ ಸಂಸ್ಥೆಯೂ ಕೂಡ.. ಆ ಸಂಸ್ಥೆಯ ಇನ್ನೊಂದು ತಯಾರಿಕೆ ನೆಕ್ಸಾನ್ ಕಾರು ತನ್ನನ್ನು ಸಿಂಗರಿಸಿಕೊಂಡು ಬಂದು ನಿಂತಿತ್ತು.. 

ಮನೆ ಆಯ್ತು.. ಗಾಡಿ ಬಂತು.. ಮಕ್ಕಳು ಸಾಧನೆಯೇ ಹಾದಿಯಲ್ಲಿದ್ದಾರೆ.. ಇನ್ನೇನು ಬೇಕು.. 


ಹೌದು ರೀ.. ಇವತ್ತಿಗೂ ಬಸವಪಟ್ಟಣದ ಉಪನಯನ ಕಾರ್ಯಕ್ರಮದಲ್ಲಿ ನೆಡೆದ ಪವಾಡಗಳನ್ನು ನೆನೆದರೆ ಮೈ ಜುಮ್ ಎನ್ನುತ್ತದೆ.. ಅಂತಹ ಯುಗಕ್ಕೆ ಒಮ್ಮೆ ನೆಡೆಯುವ ಕಾರ್ಯಕ್ರಮದಲ್ಲಿ ನೂರಾರು ಯುಗಪುರುಷರು ಓಡಾಡಿದ ತಪೋ ಭೂಮಿಯಲ್ಲಿ ಮರು ಜನ್ಮ ಪಡೆದ ಕ್ಷಣ ಅಸಾಧಾರಣ ಹಾಗೂ ಅದ್ಭುತ.. ಆ ನೆಲದ ಶಕ್ತಿಯೇ ಇಂದು ಒಂದು ಹೆಮ್ಮರವಾಗಿ ಬೆಳೆಸಿದೆ.. 

ನೀವು ನೆಟ್ಟ ಆಲದ ಮರದ ನೆರಳಲ್ಲಿ ಇಂದು ಎಲ್ಲರೂ ಸಂತಸದಿಂದ ಇದ್ದಾರೆ ಎಂದರೆ ಅದಕ್ಕಿಂತ ಇನ್ನೇನು ಬೇಕು.. 

ಕೃಷ್ಣವೇಣಿಯ ಸಾಧನೆ ಒಂದು ಅದ್ಭುತ 
ವಿಜಯನ ಸಾಧನೆ ಇನ್ನೊಂದು ಅದ್ಭುತ.. 

ನಮ್ಮ ಜೊತೆಯಲ್ಲಿ ಕಷ್ಟದ ಸವಾಲಿನ ದಿನಗಳನ್ನು ಕಂಡು ಬೆಳೆದ ಮಕ್ಕಳು ಇವರು.. ಎಲ್ಲೋ ಓದಿದ್ದು.. ನನ್ನ ಕಡೆ ಕಲ್ಲೇಸಿಯಿರಿ ಅದನ್ನೇ ಮೆಟ್ಟಿಲು ಮಾಡಿಕೊಂಡು ಸುದೃಢ ಕೋಟೆಯನ್ನು ಕಟ್ಟಿಕೊಳ್ಳುತ್ತೇನೆ ಎಂದು.. 

ಅದೇ ರೀತಿ ಇವರಿಬ್ಬರು ತಮ್ಮ ಪಾಲಿಗೆ ಬಂದ ಸವಾಲನ್ನು ಮೆಟ್ಟಿ ನಿಂತು.. ತಮಗೆ ಸಮಾಜದಲ್ಲಿ ಒಂದು ಗುರುತನ್ನು ಮೂಡಿಸಿದ್ದಾರೆ.. ಚಂದ್ರಯಾನ -೨ ತನ್ನ ಗುರಿಯನ್ನು ಸಾಧಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ಸುಗಳಿಸಿದರೆ ಹೋದರು ..ಅದರಿಂದ ಕಲಿತ ಅನುಭವವನ್ನು ಚಂದ್ರಯಾನ - ೩ ಗಗನ ನೌಕೆ ಚಂದ್ರನ ದಕ್ಷಿಣ ತುದಿಯನ್ನು ಮುಟ್ಟಿ "ಶಿವ-ಶಕ್ತಿ" ಬಿಂದುವಾದಂತೆ.. ಆರಂಭಿಕ ಜೀವನದ ಸಾಧಾರಣ ಯಶಸ್ಸಿನ ಅನುಭವವನ್ನು ತಮ್ಮ ದೊಡ್ಡ ಮಟ್ಟದ ಯಶಸ್ಸಿಗೆ ಸೋಪಾನ ಮಾಡಿಕೊಂಡದ್ದು ಇವರ ಹೆಗ್ಗಳಿಕೆ.. 

ಹೌದು ಹೌದು.. 
ಸಂತಸ ಲೀಲೆಯ ಹಂಸವಿಹಾರ
ಸ್ವರ್ಗ ಸೀಮೆಯ ಕೌಸ್ತುಭ ಹಾರ
ಸೌಂದರ್ಯ ಲಹರಿಯ...
ಲಹರಿ ಲಹರಿ ಲಹರಿ ಲಹರಿ
ಮಧುರ ಸಂಚಾರ
ವೇದಮಾತೆಯು ನಲಿಯುವ ತೀರ
ಮಾನಸ ಸರೋವರ....
ಈ.....ನಿನ್ನಾ ಮನಸೇ...ಮಾನಸ ಸರೋವರ


ಈ ಹಾಡಿನ ಸಾಲುಗಳಂತೆ ತಮ್ಮ ಜೀವನದ ಅನುಭವ ಮಣಿಗಳನ್ನು ಪೋಣಿಸಿಕೊಂಡು ಕೌಸ್ತುಭ ಹಾರ ಮಾಡಿಕೊಂಡ ಅದ್ಭುತ ಸಮಯವಿದು .. ಅದಕ್ಕಾಗಿಯೇ ನಾ ಈ ಹಾಡನ್ನು ಮತ್ತೆ ಮತ್ತೆ ಕೇಳಿಸಿಕೊಂಡಿದ್ದು.. 

ನನಗೆ ಗೊತ್ತು ನೀವು ಕಾರಣವಿಲ್ಲದೆ ಏನು ಮಾಡೋದಿಲ್ಲ.. ಕಾರಣವಿಲ್ಲದೆ ಏನೂ ಮಾತಾಡುವುದಿಲ್ಲ.. ಎಷ್ಟು ಸುಂದರವಾಗಿ ವರ್ಣಿಸಿದ್ದೀರಿ.. ತುಂಬಾ ಕುಶಿಯಾಯ್ತು.. 

ಎಲ್ಲಾ ನಾ ನೋಡಿದ ಅದ್ಭುತ ಸಿನೆಮಾಗಳ ಅನುಭವ.. ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು, ದೇವರ ದುಡ್ಡು, ಗಾಂಧಿ ನಗರ.. ಹೀಗೆ ಅನೇಕಾನೇಕ ಚಿತ್ರಗಳು ನನಗೆ ಸ್ಫೂರ್ತಿ ನೀಡಿವೆ ಅದನ್ನೇ ನಾ ಶ್ರೀ ಗೆ ಹೇಳಿದ್ದು.. ಅದನ್ನೇ ಅವನು ಬರೆದದ್ದು.. 

ಮಹಾಭಾರತ ಧಾರವಾಹಿ ಕಡೆಯ ಕಂತು .. ಭೀಷ್ಮ ತನ್ನಿಷ್ಟದ ಹಸ್ತಿನಾವತಿ ಎಲ್ಲಾ ದಿಕ್ಕೂಗಳಿಂದಲೂ ಸುರಕ್ಷಿತವಾಗಿದೆ ಎಂದು ಅರಿವಾದ ಸಮಯ.. ಇಹಲೋಕ ಬಿಟ್ಟು ತನ್ನ ಲೋಕಕ್ಕೆ ಹೊರಡುವ ಸಮಯ.. ಶ್ರೀ ಕೃಷ್ಣನ ಶುಭ ಹಾರೈಕೆ ಪಡೆದು ಓಂಕಾರ ಮಾಡುತ್ತಾ ಸ್ವರ್ಗದ ಹೊರಡುತ್ತಾರೆ.. 

ಎರಡು ದಿನಗಳಿಂದ ವಿಜಯನಿಗೆ ಮತ್ತು ಆತನ ದನಿಗೆ ಒಡತಿಯಾದ ವಾಣಿಗೆ ಸ್ಫೂರ್ತಿ ಶಕ್ತಿ ತುಂಬಿ.. ಶಿವ = ಮಂಜುನಾಥ, ಶಕ್ತಿ - ವಿಶಾಲಾಕ್ಷಿ.. ಶಿವ-ಶಕ್ತಿಯಾಗಿ ಕೌಸ್ತುಭ ಹಾರದಲ್ಲಿ ಮಣಿಯಾಗಲು ಮೆಲ್ಲನೆ ಹೊರಟರು.. 

ಕಾಲುನೋವಿದ್ದರಿಂದ ಅಣ್ಣ ಅರ್ಥಾತ್ ಅಪ್ಪ ಮೆಲ್ಲನೆ ನೆಡೆಯುತ್ತಿದ್ದರು..ಮೆಟ್ಟಿಲುಗಳನ್ನು ಏರುತ್ತ.. ಪಕ್ಕದಲ್ಲಿಯೇ ಇದ್ದ ಮೂರು ದೀಪಗಳನ್ನು ನೋಡುತ್ತಾ.. ಗೋಡೆಯಲ್ಲಿ ಸ್ಥಿರವಾದರು.. .. 


ಅವರ ಆ ನಗು ಮೊಗ ಶುಭಹಾರೈಕೆ ಕೌಸ್ತುಭವನ್ನು ಸಂರಕ್ಷಿಸುತ್ತಿದೆ.. 

Monday, August 14, 2023

ಎಪ್ಪತೈದು ವಸಂತಗಳು.. ಕಾಣುವ ದೇವರಿಗೆ ಶುಭಾಶಯಗಳು

ಎಲ್ಲೆಡೆ ಆಜಾದಿ ಕಿ ಅಮೃತ್ ಮಹೋತ್ಸವ ಅಂತ ದೇಶವಿಡೀ ಫಲಕಗಳು ಹಾರಾಡುತ್ತಿದ್ದವು.. 

ಎಪ್ಪತ್ತೈದು ವರ್ಷಗಳು.. ಅಬ್ಬಬ್ಬಾ ಅನ್ನಿಸುವ ಸಂಭ್ರಮ ಎಲ್ಲೆಡೆ.. ದೇಶಕ್ಕೆ ಅದ್ಭುತ ಸಂಭ್ರಮದ ಸಮಯ 

ಅದೇ ಸಮಯ ಎಪ್ಪತ್ತನಾಲ್ಕು ವರ್ಷಗಳ ಹಿಂದೆ ಕರುನಾಡಿನ ಒಂದು ಹಳ್ಳಿಯಲ್ಲಿ ಬದುಕನ್ನು ಸಂಭ್ರಮಿಸುವ ಒಂದು ಪುಟ್ಟ ಜೀವಿಯ ಉಗಮವಾಗಿತ್ತು.. ದೇವರು ಪುಟ್ಟ ಪೊಟ್ಟಣದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು, ಪರಿಶ್ರಮವನ್ನು, ಮಾತುಗಾರಿಕೆಯನ್ನು, ಸಂಗೀತವನ್ನು ಆಸ್ವಾದಿಸುವ ದೊಡ್ಡಹೃದಯವನ್ನು ಕೊಟ್ಟಿ ಕಳಿಸಿದ್ದ 

ಆ ಪುಟ್ಟ ಜೀವಿ ಬೆಳದಾಗೆಲ್ಲಾ ದೊಡ್ಡ ದೊಡ್ಡ ಕನಸುಗಳೆಲ್ಲಾ ಇನ್ನಷ್ಟು ಬಲಿಷ್ಠವಾದವು.. ಇನ್ನಷ್ಟು ದೊಡ್ಡದಾದವು.. ಪರಿಶ್ರಮ ಗೌರೀಶಂಕರವಾಯಿತು. 

ದ್ವಾಪರದ ಗೋಪಾಲನ ಕೊಳಲಿನ ಗಾನಕ್ಕೆ ಮನಸೋತ ರಾಧೆಯ ಹಾಗೆ.. ಕಲಿಯುಗದ ಗೋಪಾಲ ಎಂಬ ಇವರಷ್ಟೇ ಸಹೃದಯದ ಜೀವಿಗೆ ಮನಸೋತು ಮಂದಸ್ಮಿತರಾದರು .. ಅದರ ಫಲಿತಾಂಶ ಸೀಮೆಯಿಲ್ಲದ ಸೀಮಾ.. ಸೋಲಿಲ್ಲದ ಅಜಿತ. 

ಒಂದು ಚಹಾದಿಂದ ಶುರುವಾದ ಆಧ್ಯಾತ್ಮಿಕ ಜೀವನ ಇಂದು ಅವರ ಬದುಕಿನ ಮುಖ್ಯ ಭಾಗವಾಗಿದೆ..ಮುಖ್ಯ ಉಸಿರಾಗಿದೆ.. ಮನೆಯ ಮನದ ಬೆಳವಣಿಗೆಗೆ ಸಹಕಾರಿಯಾಗಿದೆ.. ಸ್ಮಿತಾ ಎಂಬಾ ಅಂದಿನ ಪುಟ್ಟ ಬಾಲಕಿ ಇಂದು ಎಪ್ಪತ್ತೈದು ವಸಂತಗಳನ್ನು ಅದರ ಜೊತೆಗೆ ಸಂಸಾರವನ್ನು ಹಿಡಿದಿಟ್ಟು ಅದನ್ನು ಪ್ರಗತಿಯ ಹಾದಿಗೆ ತಂದ ಕೀರ್ತಿ ಈ ದಂಪತಿಗಳಿಗೆ ಸೇರಿದೆ.. 

ಕ್ರಿಕೆಟ್ ನಲ್ಲಿ.. ಒಬ್ಬ ಬ್ಯಾಟ್ಸಮನ್ ರನ್ನುಗಳನ್ನು ಬಾರಿಸುತ್ತಿದ್ದರೆ.. ಆ ಬದಿಯ ಬ್ಯಾಟ್ಸಮನ್ ತಾಳ್ಮೆಯಿಂದ ಆಡುತ್ತಿರುತ್ತಾನೆ.. 

ಸಂಗೀತದಲ್ಲಿ ಒಬ್ಬ ಗಾಯಕ ಜೋರಾಗಿ ಸ್ವರಗಳನ್ನು ಹಾಡುತ್ತಿದ್ದರೆ.. ಇನ್ನೊಬ್ಬ ಆ ಸ್ವರಕ್ಕೆ ಜೊತೆಯಾಗಿ ಮೆಲ್ಲನೆ ದನಿಯಲ್ಲಿ  ಅದಕ್ಕೆ ಪರಿಣಾಮಕಾರಿಯಾದ ಸ್ಪರ್ಶ ಕೊಡುತ್ತಿರುತ್ತಾನೆ.. 

ಕಟ್ಟಡ ಕಟ್ಟುವಾಗ ಮೇಸ್ತ್ರಿ ಜೋರಾಗಿ ಕೂಗಿ ಕೆಲಸಗಾರರನ್ನು ಹುರಿದುಂಬಿಸಿ ಕಟ್ಟಡ ಕಾಮಗಾರಿಗೆ ಯಶಸ್ಸಿನ ತಿರುವು ಕೊಟ್ಟರೆ.. ಆ ಮೇಸ್ತ್ರಿಯ ಜೊತೆಗೆ ಇರುವವ ಎಲ್ಲರನ್ನು ಸಂಭಾಳಿಸಿಕೊಂಡು ಕೆಲಸದ ಪೂರ್ಣತೆಗೆ ಗಮನ ಕೊಡುತ್ತಿರುತ್ತಾನೆ.. 

ಅಡಿಗೆ ಮಾಡುವವ ಮುಖ್ಯನಾಗುತ್ತಾನೆ.. ಆದರೆ ಅದರ ಜೊತೆಯಲ್ಲಿ "ಕೊತ್ತಂಬರಿ" ಸೊಪ್ಪನ್ನು ಹೆಚ್ಚುವ, ತರಕಾರಿಯನ್ನು ಹೆಚ್ಚುವ, ಅಡಿಗೆಗೆ ಸಿದ್ಧಮಾಡಿಕೊಡುವವ ಕೂಡ ಮುಖ್ಯನಾಗುತ್ತಾನೆ.. 

ಇಷ್ಟೆಲ್ಲಾ ಯಾಕೆ ಟಿಪ್ಪಣಿ ಅಂತೀರಾ.. ಯಜಮಾನರು ಮೃದು ಮಾತುಗಾರರು.. ಯಜಮಾನತಿ "ಶೋಲೆ" ಚಿತ್ರದ "ಬಸಂತಿ"ಯ ಹಾಗೆ.. ಅವರದು ಮೃದು ಮಾತು.. ಇವರದ್ದು ಸದಾ ಮಾತು.. ಅದ್ಭುತ ಜೋಡಿಯಿದು.. 

ಇವರ ಬದುಕಿನ ಸಂಪತ್ತನ್ನು ಎಣಿಸಲಾಗದು. ಸಂತೃಪ್ತಿ ಇವರ ಬದುಕಿನ ಮುಖ್ಯ ಭಾಗ.. ಹೊಸದು ವಸ್ತುಗಳು ಬಂದರೆ.. ಆಹಾ ಓಕೆ ಓಕೆ .. ಚಂದ ಇದೆ... ಮಸ್ತ್ ಇದೆ.. ಚಲೋ ಇದೆ.. ಅಷ್ಟೇ.. ಎಲ್ಲವನ್ನು ಒಂದೇ ಒಂದೇ ದೃಶ್ಯದಲ್ಲಿ ನೋಡುವ ಇವರ ಮನಸ್ಥಿತಿಗೆ ಭಗವಂತನೂ ಕೂಡ ಸಲಾಂ ಹೊಡೆದಿದ್ದಾನೆ.. 

ಬರುವ ಸಂಕಷ್ಟದ ಸವಾಲುಗಳು ಮಂಜಿನ ಹಾಗೆ ಕರಗಿ ಹೋಗಿದ್ದನ್ನು ನಾನೇ ನೋಡಿದ್ದೇನೆ.. 

ಕೃಷ್ಣ ಸುಧಾಮ ಅದ್ಭುತ ಸ್ನೇಹಿತರು.. ಸುಧಾಮ ಕೃಷ್ಣನನ್ನು ನೋಡಲು ತನ್ನ ಹರಿದ ಪಂಚೆಯ ಅಂಚಿನಲ್ಲಿ ಒಂದಷ್ಟು ಅವಲಕ್ಕಿ ಕಟ್ಟಿಕೊಂಡು ತಂದಿರುತ್ತಾನೆ.. ಅದನ್ನು ಸುಧಾಮನನ್ನು ಉಪಚರಿಸುವ ಸಮಯದಲ್ಲಿ ನೋಡಿ ಕೃಷ್ಣ ಸಂತೃಪ್ತಿಯಿಂದ ತಿನ್ನುತ್ತಿರುತ್ತಾನೆ.. ಆಗ ಬರುವ ರುಕ್ಮಿಣಿ ಅರೆ ನಿಮ್ಮ ಸ್ನೇಹಿತ ತಂದ ಉಡುಗೊರೆಯನ್ನು ನೀವೊಬ್ಬರೇ ತಿಂದರೆ ಹೇಗೆ ನನಗೂ ಕೊಡಿ, ಅಂತ ಹೇಳಿ ಒಂದಷ್ಟು ಅವಳಕ್ಕೆ ಆಕೆಯೂ ತಿನ್ನುತ್ತಾಳೆ. 

ಸುಧಾಮ ಕೃಷ್ಣನ  ಅರಮನೆಯಿಂದ ಹೊರಡುವಾಗ .. ತನ್ನ ಸಿರಿವಂತ ಸ್ನೇಹಿತ ತಾನು ಕೊಟ್ಟ ಕನಿಷ್ಠವಾದ ಉಡುಗೊರೆಯನ್ನು ಪ್ರೀತಿಯಿಂದ ಸ್ವೀಕರಿಸಿದ ಎಂದು  ಮನಸ್ಸಿಗೆ ಸಂತಸವನ್ನು ಮುಖಭಾವದಲ್ಲಿ ವ್ಯಕ್ತ ಪಡಿಸಿದರೆ.. ಶ್ರೀ ಕೃಷ್ಣನಿಗೆ ತನ್ನ ಗೆಳೆಯ ಸುಧಾಮನನ್ನು ಉಪಚರಿಸಿದ್ದು ಹಾಗೆ ತನ್ನ ಆತ್ಮೀಯ ಗೆಳೆಯ ಏನನ್ನು ಕೇಳದೆ ಇದ್ದರೂ ಅವನಿಗೆ ಹೇಳದೆ ಸುಧಾಮನಿಗೆ ಸೇರಬೇಕಾದ ಎಲ್ಲವನ್ನು ಕರುಣಿಸಿದೆ ಎಂಬ ಸಂತಸ.. 

ಗೋಪಾಲ-ಸ್ಮಿತಾ ಕುಟುಂಬವೂ ಈ ಆದ್ಯಾತ್ಮಿಕ ಪರಪಂಚದಲ್ಲಿ ಭಗವಂತನಿಂದ ಏನನ್ನು ಬೇಡದೆ ನಿತ್ಯ ಅವನ ಧ್ಯಾನದಲ್ಲಿ, ಅವನ ಸಂಯೋಗದಲ್ಲಿ, ಅವನ ನೆನಪಿನಲ್ಲಿ, ಅವನ ಸೇವೆಯಲ್ಲಿ ನಿರತವಾಗಿ.. ಈ ಲೌಕಿಕ ಪ್ರಪಂಚದ ಆಸೆ, ನಿರಾಸೆ, ಕೋಪ, ತಾಪ, ಬೇಗೆಗಳು, ಖುಷಿ, ನಲಿವುಗಳು ಯಾವುದೂ ಅವರನ್ನು ಭಾದಿಸದೆ ತಮ್ಮ ಇತಿಮಿತಿಯಲ್ಲಿ ಬಂದವನ್ನು ಆದರಿಸುತ್ತ, ಅಪರಿಮಿತವಾದ ಪ್ರೀತಿ ವಿಶ್ವಾಸ ತೋರುತ್ತಾ,... ವಿಶ್ವಾಸ ತೋರುತ್ತಿರುವ ಈ ಕುಟುಂಬದ ಶಕ್ತಿಗೆ ಇಪ್ಪತ್ತೈದು ವಸಂತಗಳು.. 

ಹೇ ಶ್ರೀ .. ಇದು ತಪ್ಪಲ್ವಾ. ಆಕಿಗೆ ಎಪ್ಪತ್ತೈದು.. ಈಕಿಗೆ ಐವತ್ತು.. ಸರಿಯಾಗಿ ಹೇಳು.. ತಪ್ಪು ತಪ್ಪು ಬರೀಬೇಡ.. 

ಅರೆ ಅಜ್ಜ.. ನಿನ್ನ ಸಂಪರ್ಕಕ್ಕೆ ಬಂದಿದ್ದು ಒಂದು ಚಹಾದ ಮೂಲಕ.. ಆ ಚಹಾದ ಶಕ್ತಿ ಆಕೆಯನ್ನು ಇಪ್ಪತೈದು ವರ್ಷದವಳನ್ನಾಗಿ ಮಾಡಿದೆ.. 

ಬೇಕಾದರೆ ರಾಜೇಂದ್ರ ಕುಮಾರ್ ಹಾಡುಗಳು ಬರಲಿ.. ಆಕೆ ಇಪ್ಪತ್ತೈದರ ತರುಣಿಯಾಗುತ್ತಾರೆ  

ಲೆಕ್ಕ ಒಪ್ಪಿಸುವಾಗ ಕೊತ್ತಂಬರಿಯನ್ನು ಕೇಳು .. ನಾಚುವ ಇಪ್ಪತ್ತೈದರ ತರುಣಿಯಾಗುತ್ತಾರೆ 

ಟಿವಿಯಲ್ಲಿ ಯಾವುದೇ ಹಾಡು ಬರಲಿ ತನ್ನ ಮಗಳ ನಾಟ್ಯ ಮಾಡುತ್ತಾ  ಇಪ್ಪತ್ತೈದರ ತರುಣಿಯಾಗುತ್ತಾರೆ 

ಟಿವಿ ಧಾರಾವಾಹಿಗಳನ್ನು ನಿರ್ದೇಶಕನಿಗಿಂತ ಹೆಚ್ಚು ನೋಡಿ ಖುಷಿ ಪಡುತ್ತಾರೆ.  

ಯೋಗ ಮಾಡುವಾಗ...  ಹೌದು ಅಡೆ ತಡೆಗಳು ಬರುತ್ತವೆ. ಅದರ ಬಗ್ಗೆ ಕೇಳು ನಸು ನಗುವ ಇಪ್ಪತೈದರ ತರುಣಿಯಾಗುತ್ತಾರೆ 

ಅಜ್ಜನ ಬಗ್ಗೆ ಕೇಳು.. ಇಪ್ಪತ್ತೈದರ ತರುಣಿಯ ಹಾಗೆ ಪ್ರತಿಯೊಂದು ವಿಚಾರವನ್ನು ಹೇಳುತ್ತಾರೆ ..

ಪ್ರವಾಸಕ್ಕೆ ಹೊರಡು ಇಪ್ಪತ್ತೈದರ ತರುಣಿಯಾಗುತ್ತಾರೆ.. 

ಹಾಗಾಗಿಯೇ ಅವರು ಇಪ್ಪತ್ತೈದರ ತರುಣಿ ಅಂತ ಬರೆದಿದ್ದು ಅಜ್ಜ.. 

ಓಹ್ ಹಾಗೆ ಇದು ಸೂಪರ್ ಶ್ರೀ..  ಅಂದರೆ ನೀ ಹೇಳಿದು.. ಇಷ್ಟೆಲ್ಲಾ ಯಾಕೆ ಒಂದೇ ಮಾತಿನಲ್ಲಿ ಹೇಳುವುದಾದರೆ.. 

ಇವರು ಕೊತ್ತಂಬರಿ ಸೊಪ್ಪಿನ ಹಾಗೆ.. 

ತರಕಾರಿ ಅಂಗಡಿಯಲ್ಲಿದ್ದರೂ ಘಮಘಮ.. 

ಕೈ ಚೀಲದಲ್ಲಿದ್ದರೂ ಘಮ ಘಮ 

ಮನೆಯಲ್ಲಿ ರೆಫ್ರಿಜಿರೇಟರ್ ನಲ್ಲಿದ್ದರೂ ಘಮಘಮ 

ಅಡಿಗೆಗೆ ಉಪಯೋಗಿಸಿದಾಗ ಅಡಿಗೆ ಘಮ ಘಮ 

ಅದನ್ನು ಹೆಚ್ಚಿದ ಕೈಗಳು ಕೂಡ ಘಮ ಘಮ 

ಒಮ್ಮೆ ನೀವು ಈಕಿ ಜೊತೆ ಮಾತಾಡಿದರೆ ಸಾಕು ಆಕಿಯ ಅಕ್ಕರೆ ಸದಾ ಹಸಿರಾಗಿರುತ್ತದೆ.. 

ಅರ್ಜುನ ಕುರುಕ್ಷೇತ್ರದಲ್ಲಿ ಗೊಂದಲದಲ್ಲಿದ್ದಾಗ.. ಶ್ರೀ ಕೃಷ್ಣ ಅರ್ಜುನನಿಗೆ ಭಗವಂತ ಉಪದೇಶಿಸಿದ್ದ ಭಗವದ್ಗೀತೆಯನ್ನು ಹೇಳುತ್ತಾನೆ .. ನಂತರ ಗೊಂದಲವನ್ನು ದೂರ ಮಾಡಲು.. ನೋಡು ಈ ಜೀವಿಯನ್ನು ನೋಡು.. ತಾನು ಮಾಡುವ ಕೆಲಸದಲ್ಲಿ, ತಾನು ಆಡುವ ಮಾತಿನಲ್ಲಿ  ಎಂದಿಗೂ ಗೊಂದಲ ಇರೋದೇ ಇಲ್ಲ ... ಹಾಗೆ ನೀನು ಇರಬೇಕು ಅರ್ಜುನ.. 

ನಿಜ ಅಜ್ಜ ಶ್ರೀ ಕೃಷ್ಣ ಹೇಳಿದಂತೆ.. ಪ್ರತಿನಿತ್ಯ ಮುರುಳಿ ನುಡಿಸಿದಂತೆ.. ಇವರ ಮುರುಳಿಗಾನ.. ಅಮೃತ ಪಾನವೇ ಹೌದು.. 

ಅದಕ್ಕೆ ಈಕಿ ಯಾವಾಗಲೂ ಹಾಡೋದು "ತೆರೆ ಯಾದ್ ಕಿ ಅಮೃತ್ ಪೀತೆ ಹೈ" ನಿಜ ಇವರ ಜೊತೆಯಲ್ಲಿ ಒಂದು ಕ್ಷಣ ಮಾತಾಡಿದರೂ ಸರಿ .. ಜೊತೆಯಿದ್ದವರೂ "ಆಪ್ ಕಿ ಸಾತ್ ಬಾತ್ ಕರ್ತೆ ಹೇ.. ಓಹ್ ಸದಾ ಯಾದ್ ಮೇ ರೆಹತೇ ಹೈ "

ನಿಜ ಶ್ರೀ ನಿನ್ನೆ ಇವರ ಮನೆಯನ್ನು ನೋಡಿ ಬಹಳ ಸಂತಸವಾಯಿತು.. ಆಕೆಯ ಎಷ್ಟೊಂದು ಅಭಿಮಾನಿಗಳು, ಬಂಧು ಮಿತ್ರರು ಆಕೆಯನ್ನು ಹಾರೈಸಿದ್ದು, ಶುಭ ಕೋರಿದ್ದು, ಬಗೆ ಬಗೆಯ ಉಡುಗೊರೆಯನ್ನು ನೀಡಿದ್ದು, ಭರ್ಜರಿ ಊಟ, ನೃತ್ಯ.. ಹಾಡುಗಾರಿಕೆ.. ನನ್ನ ಸ್ವೀಟಿ ಮಾಮಿ ಅಂತ ಮುದ್ದು ಮಾಡುವವರು, ನನ್ನ ಸ್ವೀಟ್ ಸಹೋದರಿ, ನನ್ನ ಸ್ವೀಟ್ ಅಮ್ಮ..  ಕಿರಿಯರೆಲ್ಲ ಬಂದು ಆಕೆಯ ಚರಣ ಕಮಲಗಳಿಗೆ ನಮಸ್ಕರಿಸುತ್ತಾ  ಎಲ್ಲರೂ ಅವರ ಮನದಲ್ಲಿ ಕೇಳಿಕೊಂಡಿದ್ದು ಒಂದೇ ಮಾತು.. ಈಕೆಯ ಚಟುವಟಿಕೆಯ ಶಕ್ತಿಯಲ್ಲಿ ಒಂದು ಕಾಲು ಭಾಗ ನಮಗೆ ಸಿಕ್ಕರೂ ಸಾಕು ನಾವು ಅಸಾಧ್ಯವನ್ನು ಸಾಧ್ಯವನ್ನಾಗಿಸುತ್ತೇವೆ ಎಂದು.. 

ಈಕಿಯ ಕಡೆಯ ಸಹೋದರಿಯರು, ಅವರ ಮಕ್ಕಳು, ನಾದಿನಿಯ ಮಕ್ಕಳು, ಅವರ ಪರಿವಾರ.. ಅಜಿತನ ಸಹೋದ್ಯೋಗಿಗಳು.. ಎಲ್ಲರೂ ಸೇರಿ ಒಂದು ಸಣ್ಣ ಜಾತ್ರೆಯೇ ಆಗಿತ್ತು.. 

ಪ್ರತಿಕ್ಷಣವನ್ನೂ ಸಂಭ್ರಮಿಸುವ ಪರಿವಾರಕ್ಕೆ ಇದಕ್ಕಿಂತ ಸಂಭ್ರಮಿಸುವ ಕ್ಷಣಗಳು ಬೇಕೇ.. ಒಂದು ಸಾರ್ಥಕ ಕ್ಷಣವನ್ನು ಕಂಡ ಕ್ಷಣವಿದು.. 

ಹೌದು ಅಜ್ಜ.. ಸದಾ ಚಟುವಟಿಕೆಯಲ್ಲಿ ನಿರತರಾಗಿರುವ ಇವರ ಕೆಲಸದಲ್ಲಿರುವ ಶಿಸ್ತನ್ನು ನೀ ನೋಡಬೇಕಾದರೆ "ಬಟ್ಟೆ ಒಣಗಿ ಹಾಕುವ ಕಾಯಕ ನೋಡು... ಅದೇ ಅವರ ವ್ಯಕ್ತಿತವನ್ನು ತೋರಿಸುತ್ತದೆ.. 

ಅದು ಮಾತು ಅಂದರೆ ಶ್ರೀ.. ಈಕಿಗೆ ನನ್ನ ಕಡೆಯಿಂದ ಶುಭಾಶಯ ತಿಳಿಸೋದಷ್ಟೇ ನನ್ನ ಕೆಲಸ ಉಳಿದಿದೆ... ಅಷ್ಟೇ.. ನನ್ನ ಶುಭ ಹಾರೈಕೆಗಳು ಸದಾ ಈಕಿಗೆ ... ಮತ್ತೆ ಈಕಿಯ ಕುಟುಂಬಕ್ಕೆ..