Monday, August 28, 2023

ಸ್ವರ್ಗ ಸೀಮೆಯ ಕೌಸ್ತುಭ ಹಾರ ...!

ಸಂತಸ ಲೀಲೆಯ ಹಂಸವಿಹಾರ
ಸ್ವರ್ಗ ಸೀಮೆಯ ಕೌಸ್ತುಭ ಹಾರ
ಸೌಂದರ್ಯ ಲಹರಿಯ...
ಲಹರಿ ಲಹರಿ ಲಹರಿ ಲಹರಿ
ಮಧುರ ಸಂಚಾರ
ವೇದಮಾತೆಯು ನಲಿಯುವ ತೀರ
ಮಾನಸ ಸರೋವರ....
ಈ.....ನಿನ್ನಾ ಮನಸೇ...ಮಾನಸ ಸರೋವರ

ಬೆಳಿಗ್ಗೆಯಿಂದಲೂ ಅಣ್ಣ (ಅಪ್ಪ) ಇದೆ ಹಾಡಿನ ಸಾಲುಗಳನ್ನು ತಮ್ಮ ಇಷ್ಟವಾದ ಟೇಪ್ರೆಕಾರ್ಡರಿನಲ್ಲಿ ಹಾಕಿಕೊಂಡು ಮತ್ತೆ ಮತ್ತೆ ತಿರುಗಿಸಿ ಮುರುಗಿಸಿ ಅದನ್ನೇ ಕೇಳುತ್ತಿದ್ದರು.. 

ಅಮ್ಮನಿಗೆ ಕಾರಣ ಗೊತ್ತಿತ್ತು.. ಸುಮ್ಮನೆ ತಮ್ಮ ಪಾಡಿಗೆ ತಮ್ಮ ದಿನ ನಿತ್ಯದ ಕೆಲಸ ಮಾಡುತ್ತಿದ್ದರು.. 

ಸುಮಾರು ಸಂಜೆ  ಏಳು ಘಂಟೆ .. ಅಣ್ಣ ಶುಭ್ರವಾದ ರೇಷ್ಮೆ ಮಗುಟ ತೊಟ್ಟು ತೊಟ್ಟು.. ಹಣೆಗೆ ವಿಭೂತಿ ಹಚ್ಚಿಕೊಂಡು. ಸಂಧ್ಯಾವಂದನೆ ಮಾಡುತ್ತಾ ಕುಳಿತರು.. 
ಅಮ್ಮನೂ ಕೂಡ ಅದೇ ಮಗುಟದ ರೇಷ್ಮೆ ಸೀರೆಯನ್ನು ಧರಿಸಿದ್ದರು.. ಸಂಭ್ರಮದಿಂದ ಬೀಗುತ್ತಿದ್ದರು.. 

ಗಣಾಧಿಪನನ್ನು ಕರೆಸಿ ಪೂಜೆ ಶುರು ಮಾಡಿದ್ದು.. ನಂತರ ಕುಲದೇವತಾ ಪ್ರಸನ್ನ.. ನಂತರ ನವಗ್ರಹ.. ನಂತರ ರಾಕ್ಷೋಜ್ಞ ಯಜ್ಞ.. ಅಂತಹ ಅಂದವಾದ ಮನೆಯನ್ನು ಧೂಮದಿಂದ ಸಿಂಚನ ಮಾಡಲು ಯಜ್ಞಕ್ಕೆ ಬೇಕಾದ ಆಜ್ಯಗಳಾದ  ಸಮಿತ್ತುಗಳು, ತುಪ್ಪ, ನಾರು ಬೇರುಗಳು ಸಿದ್ಧವಾಗಿದ್ದವು.. 

ಅಚ್ಚುಕಟ್ಟಾದ ಹೋಮ ಹವನಗಳು ಶುರುವಾದವು.. 

ಜೀವನದ ಪ್ರತಿ ಹೆಜ್ಜೆಯಲ್ಲೂ ಅಚ್ಚುಕಟ್ಟಾಗಿ ಬದುಕನ್ನು ನಿಭಾಯಿಸಿದ್ದರಿಂದ ಈ ಪೂಜಾ ಕೈಂಕರ್ಯ ಹೊಸದೇನು ಆಗಿರಲಿಲ್ಲ.. ಹಾ ಹೌದು ಕಾಲುನೋಯುತ್ತಿತ್ತು .. ಆದರೆ ಸಾಧಿಸಿದ ಸಂತಸದ ಮುಂದೆ ಇದ್ಯಾವ ಲೆಕ್ಕ.. ಅದು ಅವರ ಮನಸ್ಥಿತಿಯಾಗಿತ್ತು 

ಮನೆಯೆಲ್ಲ ಧೂಮದಿಂದ ಸಿಂಚನವಾಗಿ.. ಮನೆಗೊಂದು ಶಕ್ತಿ, ರಕ್ಷಣೆ ಸಿಕ್ಕಿದೆ ಎನ್ನುವ ಸಂತಸ.. 

ಬ್ರಾಹ್ಮೀ ಮಹೂರ್ತದಲ್ಲಿ ಮತ್ತೆ ಮುಂದುವರೆದ ಕಾರ್ಯಕ್ರಮ.. ಗೋ ಪ್ರವೇಶದಿಂದ ಮುಂದೆ ಸಾಗಿತು.. ಗೋವು ತನ್ನ ಮುದ್ದಿನ ಕರುವಿನ ಜೊತೆಯಲ್ಲಿ ಮನೆಯೊಳಗೇ ಓಡಾಡಿ ಕೊಟ್ಟ ಆಹಾರವನ್ನು ಸ್ವೀಕರಿಸಿದ ಎಲ್ಲರ ಮನಸ್ಸು ಧನ್ಯತಾಭಾವದಿಂದ ಶರಣಾದವು.. 

ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪೃಷ್ಟಿವರ್ಧನಂ.... 
ಓಂ ಗಣಾನಾಂತ್ವ ಗಣಪತಿಮ್ ಹವಾಮಹೇ ಕವಿಂಕವೀನಾಂ ಉಪಮ ಶ್ರವಸ್ತಮಂ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ | ತನ್ನೋ ರುದ್ರ: ಪ್ರಚೋದಯಾತ್
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ | ತನ್ನೋ ವಿಷ್ಣು: ಪ್ರಚೋದಯಾತ್
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತೀ ಪ್ರಚೋದಯಾತ್
ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ | ತನ್ನೋ ಆದಿತ್ಯ ಪ್ರಚೋದಯಾತ್
ಓಂ ಮಹಾಲಕ್ಷ್ಮೀಚ ವಿದ್ಮಹೇ ವಿಷ್ಣುಪತ್ನೀಚ ಧೀಮಹಿ | ತನ್ನೋ ಲಕ್ಷ್ಮೀ: ಪ್ರಚೋದಯಾತ್

ಹೀಗೆ ಗಾಯತ್ರಿ  ಮಂತ್ರಗಳು.. ವೇದ ಘೋಷಗಳು.. ವೇದ ಮಂತ್ರಗಳು ಸ್ಪುರಿಸಿದ ಆ ಸಮಯ ಕರ್ಣಾನಂದಕರ.. 

ಮನೆಯಲ್ಲಿ ಈ ರೀತಿಯ ಕಂಪನಗಳು, ತರಂಗಗಳು ಉತ್ಪತ್ತಿಯಾಗುತ್ತಲೇ ಇರಬೇಕು.. ಆಗ ನೋಡು ಮನೆಯ ಬುನಾದಿಯನ್ನು ಯಾವುದೇ ಋಣಾತ್ಮಕ ತರಂಗಗಳು ಮುಟ್ಟಲಾರವು.. 



ಹೌದು.. ನಿಮ್ಮ ಮಾತು ನಿಜ.. ಆರಂಭಿಕ ಜೀವನದಲ್ಲಿ ಎಡರು ತೊಡರುಗಳಿದ್ದರು.. ಅದನ್ನೇ ಮೀಟಿ ಮೆಟ್ಟಿ ನಿಂತ ಮೇಲೆ.. ನಮ್ಮ ಮನೆಯಲ್ಲಿ ಕಡೇಪಕ್ಷ ಎರಡು ವಸಂತಗಳಿಗೊಮ್ಮೆ ಈ ರೀತಿಯ ಮಂತ್ರ ಘೋಷಗಳಿಂದ ಮನೆ ಮನಗಳು ಸಂಭ್ರಮಿಸಿದ್ದು ನಿಜವಲ್ಲವೇ.. 


ಬಂಧು ಮಿತ್ರರು.. ನೆಂಟರಿಷ್ಟರು ಬಂದು ಹರಸಿ ಹಾರೈಸಿ  ಸಂತಸ ಭೂರಿ ಭೂಜನ ಉಂಡ ಮೇಲೆ.. ಇನ್ನೊಂದು ಸಂತಸ ಕಾದಿತ್ತು.. 

ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಟಾಟಾ.. ನಮ್ಮ ದೇಶದ ಬಗ್ಗೆ ನಮ್ಮ ಹೆಮ್ಮೆಯ ಪ್ರಧಾನಿ ಯುಗ ಪುರುಷ ಶ್ರೀ ನರೇಂದ್ರ ಮೋದಿಯ ಕಾಳಜಿಯ ಹಾಗೆ ಟಾಟಾ ಸಂಸ್ಥೆಯೂ ಕೂಡ.. ಆ ಸಂಸ್ಥೆಯ ಇನ್ನೊಂದು ತಯಾರಿಕೆ ನೆಕ್ಸಾನ್ ಕಾರು ತನ್ನನ್ನು ಸಿಂಗರಿಸಿಕೊಂಡು ಬಂದು ನಿಂತಿತ್ತು.. 

ಮನೆ ಆಯ್ತು.. ಗಾಡಿ ಬಂತು.. ಮಕ್ಕಳು ಸಾಧನೆಯೇ ಹಾದಿಯಲ್ಲಿದ್ದಾರೆ.. ಇನ್ನೇನು ಬೇಕು.. 


ಹೌದು ರೀ.. ಇವತ್ತಿಗೂ ಬಸವಪಟ್ಟಣದ ಉಪನಯನ ಕಾರ್ಯಕ್ರಮದಲ್ಲಿ ನೆಡೆದ ಪವಾಡಗಳನ್ನು ನೆನೆದರೆ ಮೈ ಜುಮ್ ಎನ್ನುತ್ತದೆ.. ಅಂತಹ ಯುಗಕ್ಕೆ ಒಮ್ಮೆ ನೆಡೆಯುವ ಕಾರ್ಯಕ್ರಮದಲ್ಲಿ ನೂರಾರು ಯುಗಪುರುಷರು ಓಡಾಡಿದ ತಪೋ ಭೂಮಿಯಲ್ಲಿ ಮರು ಜನ್ಮ ಪಡೆದ ಕ್ಷಣ ಅಸಾಧಾರಣ ಹಾಗೂ ಅದ್ಭುತ.. ಆ ನೆಲದ ಶಕ್ತಿಯೇ ಇಂದು ಒಂದು ಹೆಮ್ಮರವಾಗಿ ಬೆಳೆಸಿದೆ.. 

ನೀವು ನೆಟ್ಟ ಆಲದ ಮರದ ನೆರಳಲ್ಲಿ ಇಂದು ಎಲ್ಲರೂ ಸಂತಸದಿಂದ ಇದ್ದಾರೆ ಎಂದರೆ ಅದಕ್ಕಿಂತ ಇನ್ನೇನು ಬೇಕು.. 

ಕೃಷ್ಣವೇಣಿಯ ಸಾಧನೆ ಒಂದು ಅದ್ಭುತ 
ವಿಜಯನ ಸಾಧನೆ ಇನ್ನೊಂದು ಅದ್ಭುತ.. 

ನಮ್ಮ ಜೊತೆಯಲ್ಲಿ ಕಷ್ಟದ ಸವಾಲಿನ ದಿನಗಳನ್ನು ಕಂಡು ಬೆಳೆದ ಮಕ್ಕಳು ಇವರು.. ಎಲ್ಲೋ ಓದಿದ್ದು.. ನನ್ನ ಕಡೆ ಕಲ್ಲೇಸಿಯಿರಿ ಅದನ್ನೇ ಮೆಟ್ಟಿಲು ಮಾಡಿಕೊಂಡು ಸುದೃಢ ಕೋಟೆಯನ್ನು ಕಟ್ಟಿಕೊಳ್ಳುತ್ತೇನೆ ಎಂದು.. 

ಅದೇ ರೀತಿ ಇವರಿಬ್ಬರು ತಮ್ಮ ಪಾಲಿಗೆ ಬಂದ ಸವಾಲನ್ನು ಮೆಟ್ಟಿ ನಿಂತು.. ತಮಗೆ ಸಮಾಜದಲ್ಲಿ ಒಂದು ಗುರುತನ್ನು ಮೂಡಿಸಿದ್ದಾರೆ.. ಚಂದ್ರಯಾನ -೨ ತನ್ನ ಗುರಿಯನ್ನು ಸಾಧಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ಸುಗಳಿಸಿದರೆ ಹೋದರು ..ಅದರಿಂದ ಕಲಿತ ಅನುಭವವನ್ನು ಚಂದ್ರಯಾನ - ೩ ಗಗನ ನೌಕೆ ಚಂದ್ರನ ದಕ್ಷಿಣ ತುದಿಯನ್ನು ಮುಟ್ಟಿ "ಶಿವ-ಶಕ್ತಿ" ಬಿಂದುವಾದಂತೆ.. ಆರಂಭಿಕ ಜೀವನದ ಸಾಧಾರಣ ಯಶಸ್ಸಿನ ಅನುಭವವನ್ನು ತಮ್ಮ ದೊಡ್ಡ ಮಟ್ಟದ ಯಶಸ್ಸಿಗೆ ಸೋಪಾನ ಮಾಡಿಕೊಂಡದ್ದು ಇವರ ಹೆಗ್ಗಳಿಕೆ.. 

ಹೌದು ಹೌದು.. 
ಸಂತಸ ಲೀಲೆಯ ಹಂಸವಿಹಾರ
ಸ್ವರ್ಗ ಸೀಮೆಯ ಕೌಸ್ತುಭ ಹಾರ
ಸೌಂದರ್ಯ ಲಹರಿಯ...
ಲಹರಿ ಲಹರಿ ಲಹರಿ ಲಹರಿ
ಮಧುರ ಸಂಚಾರ
ವೇದಮಾತೆಯು ನಲಿಯುವ ತೀರ
ಮಾನಸ ಸರೋವರ....
ಈ.....ನಿನ್ನಾ ಮನಸೇ...ಮಾನಸ ಸರೋವರ


ಈ ಹಾಡಿನ ಸಾಲುಗಳಂತೆ ತಮ್ಮ ಜೀವನದ ಅನುಭವ ಮಣಿಗಳನ್ನು ಪೋಣಿಸಿಕೊಂಡು ಕೌಸ್ತುಭ ಹಾರ ಮಾಡಿಕೊಂಡ ಅದ್ಭುತ ಸಮಯವಿದು .. ಅದಕ್ಕಾಗಿಯೇ ನಾ ಈ ಹಾಡನ್ನು ಮತ್ತೆ ಮತ್ತೆ ಕೇಳಿಸಿಕೊಂಡಿದ್ದು.. 

ನನಗೆ ಗೊತ್ತು ನೀವು ಕಾರಣವಿಲ್ಲದೆ ಏನು ಮಾಡೋದಿಲ್ಲ.. ಕಾರಣವಿಲ್ಲದೆ ಏನೂ ಮಾತಾಡುವುದಿಲ್ಲ.. ಎಷ್ಟು ಸುಂದರವಾಗಿ ವರ್ಣಿಸಿದ್ದೀರಿ.. ತುಂಬಾ ಕುಶಿಯಾಯ್ತು.. 

ಎಲ್ಲಾ ನಾ ನೋಡಿದ ಅದ್ಭುತ ಸಿನೆಮಾಗಳ ಅನುಭವ.. ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು, ದೇವರ ದುಡ್ಡು, ಗಾಂಧಿ ನಗರ.. ಹೀಗೆ ಅನೇಕಾನೇಕ ಚಿತ್ರಗಳು ನನಗೆ ಸ್ಫೂರ್ತಿ ನೀಡಿವೆ ಅದನ್ನೇ ನಾ ಶ್ರೀ ಗೆ ಹೇಳಿದ್ದು.. ಅದನ್ನೇ ಅವನು ಬರೆದದ್ದು.. 

ಮಹಾಭಾರತ ಧಾರವಾಹಿ ಕಡೆಯ ಕಂತು .. ಭೀಷ್ಮ ತನ್ನಿಷ್ಟದ ಹಸ್ತಿನಾವತಿ ಎಲ್ಲಾ ದಿಕ್ಕೂಗಳಿಂದಲೂ ಸುರಕ್ಷಿತವಾಗಿದೆ ಎಂದು ಅರಿವಾದ ಸಮಯ.. ಇಹಲೋಕ ಬಿಟ್ಟು ತನ್ನ ಲೋಕಕ್ಕೆ ಹೊರಡುವ ಸಮಯ.. ಶ್ರೀ ಕೃಷ್ಣನ ಶುಭ ಹಾರೈಕೆ ಪಡೆದು ಓಂಕಾರ ಮಾಡುತ್ತಾ ಸ್ವರ್ಗದ ಹೊರಡುತ್ತಾರೆ.. 

ಎರಡು ದಿನಗಳಿಂದ ವಿಜಯನಿಗೆ ಮತ್ತು ಆತನ ದನಿಗೆ ಒಡತಿಯಾದ ವಾಣಿಗೆ ಸ್ಫೂರ್ತಿ ಶಕ್ತಿ ತುಂಬಿ.. ಶಿವ = ಮಂಜುನಾಥ, ಶಕ್ತಿ - ವಿಶಾಲಾಕ್ಷಿ.. ಶಿವ-ಶಕ್ತಿಯಾಗಿ ಕೌಸ್ತುಭ ಹಾರದಲ್ಲಿ ಮಣಿಯಾಗಲು ಮೆಲ್ಲನೆ ಹೊರಟರು.. 

ಕಾಲುನೋವಿದ್ದರಿಂದ ಅಣ್ಣ ಅರ್ಥಾತ್ ಅಪ್ಪ ಮೆಲ್ಲನೆ ನೆಡೆಯುತ್ತಿದ್ದರು..ಮೆಟ್ಟಿಲುಗಳನ್ನು ಏರುತ್ತ.. ಪಕ್ಕದಲ್ಲಿಯೇ ಇದ್ದ ಮೂರು ದೀಪಗಳನ್ನು ನೋಡುತ್ತಾ.. ಗೋಡೆಯಲ್ಲಿ ಸ್ಥಿರವಾದರು.. .. 


ಅವರ ಆ ನಗು ಮೊಗ ಶುಭಹಾರೈಕೆ ಕೌಸ್ತುಭವನ್ನು ಸಂರಕ್ಷಿಸುತ್ತಿದೆ.. 

3 comments:

  1. "ಕೌಸ್ತುಭ"ದ ವರ್ಣನೆಯನ್ನು ಬಲು ನವಿರಾಗಿ ವರ್ಣಿಸಿರುವೆ ನಿಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳು ಭಕ್ತಿ ಶ್ರದ್ಧೆಯಿಂದ ಬಂಧುಬಳಗದವರನ್ನು ಆಹ್ವಾನಿಸಿ ಆಚರಿಸುತ್ತೀರಾ, ಸಮಾರಂಭ ಹೋಮ ಹವನ, ನಾನಾಬಗೆಯ ಭೋಜನ, ಅಥಿತಿ ಸತ್ಕಾರ ನಿಮಗೆ ವಿಶಾಲಾಕ್ಷಿ ಭಾವ ಅವರು ಹಾಕಿಕೊಟ್ಟ ಮಾರ್ಗ ಬಹು ಸುಂದರ.ಆಂದಿನ ಕಾರ್ಯಕ್ರಮದಲ್ಲಿ ಅವರಿಬ್ಬರ ಭೌತಿಕವಾಗಿ ಇಲ್ಲದಿದ್ದರೂ ಅವರ ಆಶೀರ್ವಚನ ಸದಾ ಸಕಾರಾತ್ಮಕವಾಗಿತ್ತು.
    ನಿಜಕ್ಕೂ ಅಪರೂಪದ ಕಾರ್ಯಕ್ರಮ ಶ್ರದ್ಧೆ ಭಕ್ತಿ ಯಿಂದ ಮಾಡುತ್ತೀರಾ.ಸುಪ್ರೀತೋ ಸುಪ್ರಸನ್ನೋ ಭಾವ ಎಂಬಂತೆ , ಖುಷಿ ಆಯ್ತು.ನೀನು ಬರೆದ ಒಂದೊಂದು ಪದ ಸಾಲುಗಳು ಅಮೋಘ.ದೇವರು ನಿಮ್ಮ ಕುಟುಂಬದ ಎಲ್ಲರನ್ನೂ ಚೆನ್ನಾಗಿ ಇಟ್ಟಿರಲೀ
    ನಮೋ ವೆಂಕಟೇಶ.

    ReplyDelete
  2. ಎಂತಹ ಸಂಸ್ಕಾರವಂತ ಮನೆತನ ನಿಮ್ಮದು. ಮನಸ್ಸು ತುಂಬಿ ಹೋಯಿತು.

    ReplyDelete