Come and fall in the creative world of words. This blog will be all about dear ones, inspirational engines, who are/were engineering the track of my life.
Friday, December 31, 2021
ಅಕ್ಕ ಜನುಮದಿನದ ಶುಭಾಶಯಗಳು... !
Sunday, December 26, 2021
ಮನೋ ನಿರ್ಧಾರ - ಅಪ್ಪನ ಸ್ಥಾನದಲ್ಲಿ ನಿಂತಿರುವ ಅಣ್ಣ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು
ಮನೋ ನಿರ್ಧಾರಕ್ಕೆ, ಧೃಡತೆಗೆ ದೈವ ಸಹಾಯ ಹೇಗಿರುತ್ತದೆ ಎನ್ನುವುದಕ್ಕೆ ಈ ಕೆಳಕಂಡ ಘಟನೆ ಸಾಕ್ಷಿ
ಮತ್ತೊಮ್ಮೆ ಕೆಲವು ದಶಕಗಳ ಹಿಂದಕ್ಕೆ ನಿಮ್ಮನ್ನೆಲ್ಲ ಕರೆದೊಯ್ಯುತ್ತಿದ್ದೇನೆ. ನನ್ನ ಕುಟುಂಬದಲ್ಲಿ ನಡೆದ ಘಟನೆಗಳೇ ಹಾಗೆ..
ಸುಮಾರು ೧೯೭೬-೭೭... ಮೊದಲ ಮಗನಿಗೆ ಹನ್ನೊಂದು ವರ್ಷ ತುಂಬಿದ ಸಂಭ್ರಮ.. ಹನ್ನೊಂದಕ್ಕೆ ಮುಂಜಿ ಅಂದರೆ ಉಪನಯನ ಮಾಡಬೇಕು ಎನ್ನುವುದು ನಮ್ಮ ಅಪ್ಪನ ಆಸೆ. ಪರಿಚಯದವರು ಕೊಟ್ಟ ಮಾಹಿತಿ ಪ್ರಕಾರ, ಸಾಮೂಹಿಕ ಉಪನಯನ ನಡೆಯುತ್ತಿದೆ ಎಂದು ಗೊತ್ತಾಯಿತು.
ಯೋಚನೆಯೇ ಇಲ್ಲ.. ತಕ್ಷಣ ಯೋಚನೆ ಮಾಡದೆ ಪರಿವಾರ ಸಮೇತ ಹೊರಟಿದ್ದು ದಾವಣಗೆರೆ ಚನ್ನಗಿರಿಯ ಬಳಿಯ ಬಸವಾಪಟ್ಟಣಕ್ಕೆ.
ಆ ಸಮಯದಲ್ಲಿ ಅದ್ಭುತ ಎನ್ನಿಸುವಂಥ ಯಾಗ ನಡೆಯುತ್ತಿತ್ತು. ಬಂದ ಭಕ್ತಾದಿಗಳಿಗೆ ಊಟ ಉಪಚಾರ ವ್ಯವಸ್ಥೆ ಬಗ್ಗೆ ನನ್ನ ಅಪ್ಪ ಅಮ್ಮ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಯ್ ಅನ್ನುತ್ತಿದೆ. ಆಪಾಟಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಅನ್ನ, ಸಾರು,ಹುಳಿ, ಮಜ್ಜಿಗೆ ಇರುತ್ತಿದ್ದವು ಎಂದು.
ಮಹಾ ಯಜ್ಞಕ್ಕೆ ತಯಾರಾದ ಶಿಬಿರಗಳು - ಕೃಪೆ ಗೂಗಲೇಶ್ವರ |
ಅಡಿಗೆ ತಯಾರು ಮಾಡಿದ ಸಾಹಸಿ ಬಾಣಸಿಗರು - ಕೃಪೆ ಗೂಗಲೇಶ್ವರ |
|
ಸಾಹಸಿ ಬಾಣಸಿಗರ ಪರಿಶ್ರಮ ಅನ್ನದ ಪರ್ವತ - ಕೃಪೆ ಗೂಗಲೇಶ್ವರ |
ಇರಲಿ, ವಿಷಯ ಏನಂದರೆ, ಉಪನಯನ ಕಾರ್ಯಕ್ರಮ ಶುರುವಾಗಬೇಕಿತ್ತು.. ಉಪಯನಯನದ ಹುಡುಗ ಅರ್ಥಾತ್ ನನ್ನ ಅಣ್ಣ ವಿಜಯನಿಗೆ ಜ್ವರ ಅಂದರೆ ಜ್ವರ. ಸುಡುವ ಕಾವಲಿಯಾಗಿತ್ತು ಮೈ. ಅಪ್ಪ ಅಮ್ಮ ಒಂದು ಮರದ ಕೆಳಗೆ, ಈ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡು, ಕೂತಿದ್ದ ಸ್ಥಿತಿ ನೋಡಿ, ಅಲ್ಲಿ ಓಡಾಡುವ ಜನರೆಲ್ಲಾ, ಮತ್ತು ಜೊತೆಯಲ್ಲಿದ್ದ ಬಂಧುಗಳು, ಅಯ್ಯೋ ಈ ಮಗುವಿಗೆ ಈ ಯಾಕೆ ಉಪಯನಯನ, ಮೊದಲು ಜ್ವರ ಬಿಡಲಿ ಎಂದು ಹೇಳಿದರು ಅಪ್ಪನದು ಒಂದೇ ಮಾತು.
"ಗಾಯಿತ್ರಿ ಉಪದೇಶ ಮಾಡಿಸಲು ಕರೆದುಕೊಂಡು ಬಂದಿದ್ದೀನಿ. ಆ ದೇವಿ ಮತ್ತು ಇಲ್ಲಿನ ಗುರುಗಳು ಅವನನ್ನು ಉಳಿಸಿಕೊಳ್ಳುತ್ತಾರೆ.. ಆ ನಂಬಿಕೆ ನನದು ಇಷ್ಟರ ಮೇಲೆ ಆ ದೇವರ ಇಚ್ಛೆ. ... "
ಇವತ್ತಿಗೂ ಅಣ್ಣ ಹೇಳುತ್ತಾನೆ, "ಅಂದು ಇಡಿ ಉಪಯನಯನ ಕಾರ್ಯಕ್ರಮದಲ್ಲಿ ಅವನಿಗೆ ನೆನಪಲ್ಲಿ ಉಳಿದದ್ದು ತನ್ನ ತಂದೆಯಿಂದ ಉಪದೇಶಿಸಿದ ಗಾಯಿತ್ರಿ ಮಂತ್ರ ಮಾತ್ರ.. ಇನ್ನೇನೂ ನೆನಪಿಲ್ಲ"
ವಟುವಿಗೆ ಈ ಉಪನಯನ ಎರಡನೇ ಜನ್ಮ ಇದ್ದಂತೆ ಅಂದರೆ ಇನ್ನೊಂದು ಕಣ್ಣು ಬಂದಂತೆ. ಆಧ್ಯಾತ್ಮ ಪ್ರಪಂಚಕ್ಕೆ ಕಾಲಿಡಲು ಬೇಕಾದ ಇನ್ನೊಂದು ನಯನ ಉಡುಗೆಯಾಗಿ ಸಿಗುವ ಕ್ಷಣವೇ ಈ ಉಪನಯನ.
ಆ ಜಾಗವನ್ನು ನೋಡಬೇಕು, ಅಲ್ಲಿ ಓಡಾಡಬೇಕು ಎನ್ನುವ ಹಂಬಲವಿದೆ .. ಖಂಡಿತ ಆ ಹಂಬಲದ ಗುರಿಯನ್ನು ತಲುಪುತ್ತೇನೆ .. ಆದರೆ ಮನುಷ್ಯನಿಗೆ ಆತುರ ಅಲ್ಲವೇ .. ಅಂತರ್ಜಾಲ ತಾಣವನ್ನು ಪಾತಾಳ ಗರಡಿ ಹಾಕಿ ಶೋಧಿಸುತ್ತಿದ್ದೆ.. ಆಗ ಸಿಕ್ಕಿದ ಅನರ್ಘ್ಯ ಚಿತ್ರಗಳು ಇವು ,. ಮನಸ್ಸಿಗೆ ಖುಷಿಯಾಯಿತು.. ಕೆಲವು ಚಿತ್ರಗಳು ಆ ಸ್ಥಳದ, ಆ ಸಮಯದ್ದು ಅಲ್ಲದೆ ಇರಬಹುದು.. ಆ ಗೂಗಲೇಶ್ವರನ ಮಡಿಲಲ್ಲಿ ಹೆಕ್ಕುವಾಗ ಅನರ್ಘ್ಯ ಮುತ್ತುಗಳ ಜೊತೆಯಲ್ಲಿ ವೈಡೂರ್ಯಗಳು ಸೇರಿಬಿಡುತ್ತದೆ..
ಕೃಪೆ ಗೂಗಲೇಶ್ವರ |
ಕೃಪೆ ಗೂಗಲೇಶ್ವರ |
ನಾವು ಸಿದ್ಧ - ಕೃಪೆ ಗೂಗಲೇಶ್ವರ |
ಮಹಾಭಕ್ತರ ಕಡಲು - ಕೃಪೆ ಗೂಗಲೇಶ್ವರ |
ಅಣ್ಣಾವ್ರು ಇಲ್ಲ ಅಂದರೆ ನನ್ನ ಲೇಖನ ಪೂರ್ಣ ಅನಿಸೋಲ್ಲ - ಕೃಪೆ ಗೂಗಲೇಶ್ವರ |
ವೆಬ್ಸೈಟ್ - ಕೃಪೆ ಗೂಗಲೇಶ್ವರ |
ಇಂದು ಆ ಮಗು ಇನ್ನೊಂದು ವರ್ಷಕ್ಕೆ ಕಾಲಿಟ್ಟು ಸಂಭ್ರಮಿಸುತ್ತಿದೆ.
ನಮ್ಮೆಲ್ಲರ ಹಾರೈಕೆ ವಿಜಯನಿಗೆ..
ಅಪ್ಪನ ಸ್ಥಾನದಲ್ಲಿ ನಿಂತಿರುವ ಅಣ್ಣ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು
ಅಪ್ಪನ ಛಲ, ತಾಳ್ಮೆ ಎರಡನ್ನು ವರವಾಗಿ ಪಡೆದಿದಿರುವ ನಿನಗೆ ಜೀವನದ ಪಥ ಯಶಸ್ವಿ ಹೂವಿನ ಪಥವಾಗಲಿ.
ಹುಟ್ಟು ಹಬ್ಬದ ಶುಭಾಶಯಗಳು...!
Saturday, December 4, 2021
ಶಿವರಾಂ ಸ್ಪೆಷಾಲಿಟಿ.. .ಹೆಗಲು ಕೊಡುತ್ತಿದ್ದ ಭುಜಗಳನ್ನು ಹೊರುವ ಸಮಯ.. ಹೊರಟೆ ಬಿಟ್ಟರು
ನಾಗರಹಾವು
"ಮೇರೇ ಸಪನೋಂಕಿ ರಾಣಿ ಕಬ್ ಆಯೆಗೀತು.. ಈಗಿನ ಕಾಲದ ಹುಡುಗರಿಗೆ ಹಿಂದಿ ಹಾಡು ಹೇಳೋದು ಹುಡುಗಿಯರನ್ನು ರೇಗಿಸೋದು.. ಯಾಕೆ ಕನ್ನಡ ಹಾಡು ಬರೋಲ್ವಾ.. ಅದೇ ಅವರ ಸ್ಪೆಷಾಲಿಟಿ.. "
"ಸಾರ್ ನಮ್ಮ ಕಾಲೇಜಿನಲ್ಲಿ ಎರಡು ತರಹ ಗೊರಿಲ್ಲಾಗಳನ್ನು ಕಂಡು ಹಿಡಿದ ಮಾರ್ಗರೇಟ್ ಅವರಿಗೆ ಅಂತಿಥಹ ಪ್ರಶಸ್ತಿ ಅಲ್ಲಾ.. ಒಳ್ಳೆಯ ಪ್ರಶಸ್ತಿಯನ್ನೇ ಕೊಡಬೇಕು"
"ತುಕಾ.. ಡೆಸ್ಕ್ ಮೇಲೆ ಬೀಳುತ್ತಿರುವ ಟಸ್ಸೆ ನಿನ್ನ ಮುಖದ ಮೇಲೆ ಬಿದ್ದಾತು ಕಣೋ.. ನಿನ್ನ ಪ್ಲೇಸ್ ಲಾಸ್ಟ್ ಬೆಂಚ್ ಕಣೋ"
ಈ ರಾಮಾಚಾರಿಗೆ ಇರೋ ಧೈರ್ಯ ನನಗೆ ಯಾಕೆ ಇಲ್ಲ.. ಅದು ನನ್ನ ಸ್ಪೆಷಾಲಿಟಿ
ಉಪಾಸನೆ ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್
ಪಿಟೀಲಿಗೆ ಕಮಾನ್ ಹಾಕೋದು ಕಾಮನ್.. ತಂಬೂರಿಗೆ ಕಮಾನ್ ಹಾಕಿ ಕಮಾಲ್ ಮಾಡಬೇಕು
ಎಡಕಲ್ಲು ಗುಡ್ಡದ ಮೇಲೆ ನಾ ಹೇಳಿದ ಹಾಗೆ ಕೇಳು.. ಆದರೆ ನಾ ಮಾಡಿದಂತೆ ಮಾಡಬೇಡ.. ಲಿಮಿಟ್, ಗಮ್ಮತ್ತು.. ಈ ಎರಡು ಪದಗಳ ಜೊತೆಯಲ್ಲಿ ಆಟವಾಡುವ ಶೈಲಿ ಸೂಪರ್
ಶುಭಮಂಗಳ ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ.
"ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ"
ಕರ್ಣ ನಾ ಅಲ್ಲ ದೊಡ್ಡವರು.. ನೋಡಿ ಈ ಮನೆ ಇವರದ್ದು, ಹೊರಗೆ ನಿಂತಿರುವ ಕಾರು ಇವರದ್ದು, ಎಲ್ಲಾ ಇವರದ್ದು. .ಆದರೆ ಅವರು ಹಾಕಿಕೊಂಡಿರುವ ಜುಬ್ಬಾ ಮಾತ್ರ ನನ್ನದು
ಚಲಿಸುವ ಮೋಡಗಳು ಹೇಳಿದ್ದನ್ನು ನೋಡಿದರೆ ಸಾಕು.. ಐ ಮೀನ್ ನೋಡಿದ್ದನ್ನು ಹೇಳಿದರೇ ಸಾಕು
ಹೊಸ ಬೆಳಕು ನೋಡಿ ರಾಜಾ ಕಿ ರಾವ್.. ನನಗೆ ನನ್ನ ಹೆಣ ಕೊಡಿ.. ನೋಡ್ರಪ್ಪಾ ಇಷ್ಟು ದಿನ ಸುಮ್ಮನಿದ್ದಿರಿ.. ಇನ್ನು ಸ್ವಲ್ಪ ದಿನ ಸುಮ್ಮನಿರಿ.. ಇವರಿಗೆ ಹಣ.. ನಿಮಗೆ ಹೆಣ ಕೊಡ್ತೀನಿ..
ಮಾಂಗಲ್ಯ ಭಾಗ್ಯ ನೋಡು.. ಜೀವನದಲ್ಲಿ ಆಸೆ ಪಡಬಾರದು.. ಪಟ್ಟರೆ ಅದನ್ನು ದಕ್ಕಿಸಿಕೊಳ್ಳಬೇಕು.. you must aim it and get it
ಸರ್ವರ್ ಸೋಮಣ್ಣ
ಏನ್ ಸರ್ ಟೆನ್ಶನ್ ನಲ್ಲಿ ಕಾಯ್ತಾ ಇದ್ದೀರಾ? ಇಲ್ಲಪ್ಪ ಕಾದು ಕಾದು ಟೆನ್ಶನ್ ಗೆ ಬಂದಿದ್ದೀನಿ!
ಆಪ್ತ ಮಿತ್ರ
ನಾನು ಹೊರಗೆ ಹೋಗೋದರ ಬಗ್ಗೆ ಯೋಚಿಸುತ್ತಿಲ್ಲ... ನೀವು ಒಳಗೆ ಹೋಗೋದರ ಬಗ್ಗೆ ಯೋಚಿಸುತ್ತಿದ್ದೀನಿ
ಹೀಗೆ ಹಾಸ್ಯ, ವೇದಾಂತ, ಉಡಾಫೆ, ಸಿಟ್ಟು, ಯಾವುದೇ ರೀತಿಯ ಮಾತುಗಳಿಗೆ ತಮ್ಮ ಛಾಪು ಕೊಟ್ಟು ಅದನ್ನು ಚಿರಸ್ಥಾಯಿಯಾಗಿ ನಿಲ್ಲಿಸುವ ತಾಕತ್ತು ಶಿವರಾಂ ಅವರಲ್ಲಿ ಅಪಾರವಾಗಿತ್ತು ಎಂಬುದು ಅವರ ಅವಿಸ್ಮರಣೀಯ ಚಿತ್ರಗಳಲ್ಲಿ ಕಾಣುತ್ತದೆ..
ಕನ್ನಡ ಚಿತ್ರಗಳ ಅಭಿಮಾನಿಯಾಗಿ ಸುಮಾರು ಐವತ್ತರ ದಶಕದ ಸಿನಿಮಾಗಳಿಂದ ಇತ್ತೀಚಿನ ಚಿತ್ರಗಳವರೆಗೆ ನೂರಾರು ಚಿತ್ರಗಳನ್ನು ನೋಡಿದ್ದೀನಿ.. ಶಿವರಾಂ ಅವರ ಪ್ರತಿ ಪಾತ್ರವು ವಿಭಿನ್ನ.. ಮತ್ತು ಪ್ರತಿ ಚಿತ್ರಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವಾಗಿ ತೆರೆಯ ಮೇಲೆ ತರಲು ಪ್ರಯತ್ನ ಮಾಡುತ್ತಿದ್ದರು.. ಹಾಗಾಗಿ ಅವರ ಪ್ರತಿ ಪಾತ್ರವೂ ವಿಭಿನ್ನ ಛಾಪು ಮೂಡಿಸಿತ್ತು.. ಅವರ ಎಲ್ಲಾ ಚಿತ್ರಗಳ ಪಾತ್ರಗಳನ್ನೂ ಅಕ್ಕ ಪಕ್ಕದಲ್ಲಿ ಇಟ್ಟು ಜೋಡಿಸಿದರೆ ಪ್ರತಿ ಪಾತ್ರವೂ ಸೋಮವಾರ ಮಂಗಳವಾರ ಬುಧವಾರದ ಹಾಗೆ ಪ್ರತಿ ಪಾತ್ರವೂ ವಿಭಿನ್ನವಾಗಿ ಕಾಣುತ್ತದೆ..
ನೀವು ನನಗೆ ಬಯ್ತಾ ಇದ್ದೀರಾ ಅಂತ ಗೊತ್ತು.. ಶಿವರಾಂ ಅವರನ್ನು ಶರಪಂಜರ ಶಿವರಾಂ ಅಂತ ಮೊದಲು ಮೊದಲು ಗುರುತಿಸುತ್ತಿದ್ದ ಶರಪಂಜರದ ಭಟ್ಟನ ಪಾತ್ರದ ಬಗ್ಗೆ ಬರೆದಿಲ್ಲ ಅಂತ.. ಹೌದು ಹೌದು.. ನನಗೆ ಶಿವರಾಂ ಅಂತ ಮೊದಲು ಪರಿಚಯವಾಗಿದ್ದು ಇದೆ ಚಿತ್ರದಿಂದ..
"ಪ್ರತಿ ಪಂಗಡಕ್ಕೂ ಒಂದೊಂದು ಬಾವುಟ.. ಒಂದು ಬಾವುಟ ಕೇಳುತ್ತದೆ ಹಣ,, ಇನ್ನೊಂದು ಬಾವುಟ ಕೇಳುತ್ತದೆ ಕೆಲಸ.. ಆದರೆ ಈ ನಮ್ಮ ಬಾವುಟ ಹಿಡಿದರೆ ರುಚಿ ರುಚಿಯಾದ ಊಟವೋ ಊಟ.. "
"ಕಿಟಕಿ ಕಾಮಾಕ್ಷಮ್ಮ ಅಂತ ಹೆಸರಿಟ್ಟಿದ್ದೀನಿ.. ನೋಡಿ ನೋಡಿ ಕೊಂಕಳಲ್ಲಿ ಇಟ್ಟಿರುವ ಆ ಬಟ್ಟಲನ್ನು ಕೊಡಿ.. ಅದೇನು ಬೇಕೋ ಕೇಳಿ.. ನೋಡಿ ಮುಂಡೇದು ಸಾಲ ಕೇಳೋಕೆ ಅಂತಾನೆ ಹುಟ್ಟಿರುವ ಈ ಬಟ್ಟಲು.. "
"ನೋಡಿ ತೆಗೆದುಕೊಂಡಿರುವ ಸಾಲವನ್ನು ಕೊಡೊ ಅಭ್ಯಾಸ ಅವರಿಗೆ ಇಲ್ಲ . ನಿಮಗೆ ಕೇಳೋ ಅಭ್ಯಾಸವಿಲ್ಲ.. ನೋಡಿ.. ಅವರ ಮನೇಲಿ ಎಷ್ಟು ಜನರಿದ್ದಾರೋ ಕೇಳಿ.. ಇಲ್ಲೇ ಅಡಿಗೆ ಮಾಡಿ ಇದೆ ಹಾದಿಯಲ್ಲಿ ಸಾಗಿಸೋಣ"
ನುಣ್ಣನೆ ತಲೆ.. ಹಣೆಯ ಉದ್ದಕ್ಕೂ ನಾಮ.. ಸದಾ ಎಲೆ ಅಡಿಕೆ ಮೆಲ್ಲುವ ಬಾಯಿ.. ಸದಾ ಪಟ ಪಟ ಅಂತ ಮಾತಾಡುವ ಪಾತ್ರ.. ಶಿವರಾಂ ಸದಾ ಜೀವಂತ..
ಹಾಸ್ಯ ಪಾತ್ರ, ಮೆಲ್ಲನೆ ಸಮಯ ಸಾಧಿಸುವ ಬುದ್ದಿವಂತ ಪಾತ್ರ.. ಅವರ ಜೀವನದ ಉತ್ತರಾರ್ಧದಲ್ಲಿ ತೂಕದ ಪಾತ್ರ ಮಾಡುತ್ತಾ.. ಸಂದೇಶ ಕೊಡುವ ಸಂಭಾಷಣೆ ಹೇಳುವ ಶೈಲಿ ಸೊಗಸು..
ಅವರ ಭಾಷಾ ಸ್ಪಷ್ಟತೆ..ಚಿತ್ರರಂಗದ ಇತಿಹಾಸವನ್ನು ಜತನದಿಂದ ನೆನಪಲ್ಲಿ ಇಟ್ಟುಕೊಂಡು.. ಕೇಳಿದಾಗ ಸ್ಪಷ್ಟತೆ ಇಂದ ಹೇಳುವ ಚಂದ.. ಎಲ್ಲವೂ ಯು ಟ್ಯೂಬ್ ಗಳಲ್ಲಿ ಜೀವಂತವಾಗಿದೆ..
ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ, ಅನೇಕ ಚಿತ್ರಗಳಿಗೆ ದುಡಿದ ಹೆಚ್ಚುಗಾರಿಕೆ ಅವರದ್ದು..
ರಾಶಿ ಸಹೋದರರು ಎಂದು ಹೆಸರಾಗಿ.. ತಮ್ಮ ಸಹೋದರ ರಾಮನಾಥ್ ಜೊತೆಗೂಡಿ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದೇ ಅಲ್ಲದೆ, ಹಿಂದಿಯಲ್ಲಿ ಕೂಡ ಅಮಿತಾಬ್ ನಾಯಕತ್ವದಲ್ಲಿ ಚಿತ್ರಮಾಡಿ ಹೆಸರಾಗಿದ್ದರು..
ಆರಂಭಿಕ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಜೀವ ತುಂಬಿ ಎಲ್ಲಾ ಘಟಕಗಲ್ಲಿಯೂ ಕೆಲಸ ಮಾಡಿ, ಪುಟ್ಟಣ್ಣ ಅವರಿಗೆ ಅಕ್ಷರಶಃ ಬಲಗೈ ಆಗಿದ್ದರು.. ಶರಪಂಜರ, ಗೆಜ್ಜೆಪೂಜೆ, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ಉಪಾಸನೆ, ಶುಭಮಂಗಳ ಚಿತ್ರಗಳಲ್ಲಿ ಅವರ ತೆರೆಯ ಮೇಲಿನ ಪಾತ್ರದಷ್ಟೇ ಅವರ ತೆರೆಯ ಹಿಂದಿನ ಪರಿಶ್ರಮವೂ ಅಷ್ಟೇ ವಿಶಿಷ್ಟ.
ಅಣ್ಣಾವ್ರ ಹಲವಾರು ಚಿತ್ರಗಳಲ್ಲಿ ವಿಶಿಷ್ಟ ಅಭಿನಯ, ಸಂಭಾಷಣೆ, ಹಾಡುಗಳು ಎಲ್ಲದರಲ್ಲಿಯೂ ಮೆರೆದವರು ಶಿವರಾಂ..
ಅವರ ಜೀವನವನ್ನು ಪ್ರಣಯ ರಾಜ ಶ್ರೀನಾಥ್ ಅವರು ಒಂದು ಮಾತಿನಲ್ಲಿ ಒಂದು ಸಂದರ್ಶನದಲ್ಲಿ ಹೇಳಿದರು..
"ಕನ್ನಡ ಚಿತ್ರರಂಗದಲ್ಲಿ ಯಾರೇ ಇಹಲೋಕ ತ್ಯಜಿಸಿದರು ಒಂದು ಜೊತೆ ಭುಜ ಸದಾ ಸಿದ್ಧವಾಗಿರುತ್ತೆ.. ಅದು ಶಿವರಾಮಣ್ಣ ಅವರದ್ದು"
ಇದು ಅಲ್ಲವೇ ಬದುಕಿನ ಸಾರ್ಥಕತೆ.. ಅನೇಕಾನೇಕ ಜೀವಗಳನ್ನು ಹೊತ್ತು ಅಂತಿಮ ಯಾತ್ರೆಗೆ ಸಹಕರಿಸಿದ ಅವರ ಭುಜಗಳು ಇಂದು ನಾಲ್ಕು ಭುಜಗಳ ಮೇಲೆ ಹೋರಾಡಲು ಸಿದ್ಧವಾಗಿದೆ..
ಬದುಕೇ ಹಸಿರು ಪ್ರೀತಿ ಬೆರೆತಾಗ.. .ಇದು ಅಣ್ಣಾವ್ರ ಒಂದು ಹಾಡಿನ ಸಾಲು.. ಶಿವರಾಂ ಅವರು ಇದೆ ರೀತಿ ಬದುಕಿ ಬಾಳಿದ್ದರು.. ಇಂದು ಅವರು ಬೆಳ್ಳಿ ತೆರೆಯಲ್ಲಿ ಅಜರಾಮರ.. !!!