Thursday, April 8, 2021

ಸಂಭ್ರಮ ಸದಾ ಇರಲಿ ಟೀ..

ಪಾಪಾ ನೋಡು ಅಲ್ಲಿಂದ ಟೀ
ನಮ್ಮ ಮನೆಗೆ ಆಶೀರ್ವಾದ ಮಾಡುತ್ತಿದ್ದಾಳೆ 

ಯಾಕೆ ಏನಾಯ್ತು.. ಅದ್ಯಾಕೆ ಮರಿ ಹಾಕಿದ ಬೆಕ್ಕಿನ ಹಾಗೆ ಓಡಾಡ್ತಾ ಇದ್ದೀಯ.. ಪದೇ ಪದೇ ಕಂಪ್ಯೂಟರ್ ಚೆಕ್ ಮಾಡ್ತಾನೆ ಇದ್ದೀಯ.. ?

ಹೌದು ಕಣಮ್ಮ.. ಶ್ರೀ ಯಾಕೋ ನನ್ನ ಮರೆತು ಬಿಟ್ಟಿದ್ದಾರೆ... ಬೆಳಗಿನಿಂದ ಏನಾದರೂ ಬರೀತಾರೆ ಓದೋಣ ಅಂತ ಕಾಯ್ತಾನೆ ಇದ್ದೀನಿ.. ಎಂಥದ್ದು ಇಲ್ಲ.. ನನ್ನ ಮರೆತು ಬಿಟ್ಟಿದ್ದಾರೆ. 

ಎಂಥಹ ಮಾತು ಹೇಳ್ತೀಯ ಸವಿತಾ... ಅವನಪ್ಪ ಇಲ್ಲಿಗೆ ಬಂದು ಒಂಭತ್ತು ವರ್ಷ ಆಯ್ತು. ಒಂದು ದಿನ ಕೂಡ ಅವರನ್ನು ನೆನೆಯದೆ ಮನೆಯಿಂದ ಹೊರಗೆ ಹೋಗೋಲ್ಲ.. ನಾನು ಬಂದು ಹತ್ತಿರ ಹತ್ತಿರ ಆರು ತಿಂಗಳಾಯಿತು.. ಪ್ರತಿ ಕ್ಷಣ ನನ್ನ ಬಗ್ಗೆ.. ನಾ ಅವನಿಗೆ ಊಟ ಮಾಡು ಅಂತ ಹೇಳುತ್ತಿದ್ದ ಬಗ್ಗೆ ಸೀಮಾ ಹತ್ರ ಹೇಳ್ತಾನೆ ಇರ್ತಾನೆ.. ಇನ್ನು ನೀನು ಸಾವಿತ್ರಿಯಂತೆ ಜವರಾಯನ ಜೊತೆ ಹೊಡೆದಾಡಿ ಅವನನ್ನು ಮತ್ತು ನಿನ್ನ ಬಾಳಿನ ಕುಡಿಯನ್ನು ಉಳಿಸಿ ನೀ ಇಲ್ಲಿಗೆ ಬಂದು ನಾಲ್ಕು ವರ್ಷಗಳಾಗುತ್ತಾ ಬಂದಿದೆ... ಅವನ ಬದುಕಿಗೆ ತಿರುವು ಕೊಟ್ಟ ಸೀಮಾಳ ಹತ್ತಿರ ನಿನ್ನ ಬಗ್ಗೆ ಹೇಳದ ದಿನವಿಲ್ಲ.. ಇಷ್ಟಾದರೂ ನಿನಗೆ ಅವನ ಮೇಲೆ ನಂಬಿಕೆ ಇಲ್ವಾ.. 

ಹಾಗಲ್ಲ ಅಮ್ಮ.. ಅವರು ನಮ್ಮನ್ನೆಲ್ಲ ಮರೆಯೋದೆ ಇಲ್ಲ.. ಮರೆಯಬೇಕು ಎನ್ನುವ ಘಟನೆಗಳನ್ನು, ವ್ಯಕ್ತಿಗಳನ್ನು ಅವರು ಎಂದಿಗೂ ತಲೆಗೆ ತಂದುಕೊಳ್ಳದಂತಹ ಹಠವಾದಿ.. ಆದರೆ ಅವರ ನೆನಪಿನ ಸಾಗರಕ್ಕೆ ಹೊಕ್ಕು, ಏನಾದರೂ ಹೊಸ ರೀತಿಯಲ್ಲಿ ಬರೆದು.. ಸಂಭ್ರಮವನ್ನು ಹೆಚ್ಚಿಸುತ್ತಾರೆ ಅಲ್ವ ಅದನ್ನು ಓದೋಕೆ ಖುಷಿ.. ಅಲ್ಲಿಯೇ ನಾ ಇದ್ದೀನಿ ಅನ್ನುವಷ್ಟು ಖುಷಿ ಕೊಡುತ್ತದೆ.. 

ಹೌದು ಕಣೆ.. ಕೋರವಂಗಲದ ಕುಟುಂಬ ಶ್ರೀಕಾಂತನ ಅಯ್ಯೋ ನಿನ್ನ ಮನೆಗೆ ಎಲ್ಲರೂ ಬಂದದ್ದು, ಅವನಿಗೆ ಶುಭ ಹಾರೈಸಿದ್ದು.. ಸೀಮಾ ಸಾಹಸ ಮಾಡಿ ಎಲ್ಲರನ್ನು ಒಂದು ಕಡೆ ಕರೆಸಿ, ಶ್ರೀಕಾಂತನ ಜನುಮದಿನವನ್ನು ಮತ್ತೆ  ಆಚರಿಸಿದ್ದು.. ಎಲ್ಲರೂ ಹೋಗುವಾಗ ರಜನೀಶ.. ಆಗಲೇ ಅವನ ತಲೆಯಲ್ಲಿ ಬರಹ ಸಿದ್ಧವಾಗಿದೆ ಅದನ್ನು ಬರೆಯೋದಷ್ಟೇ ಬಾಕಿ ಅಂತ ಹೇಳಿದ್ದು ಕೇಳಿ ಆಗಲೇ ಒಂದು ತಿಂಗಳಾಗುತ್ತಿದೆ.. ಅದರ ಬಗ್ಗೆ ಓದಬೇಕು ಅಂತ ನನಗೂ ಆಸೆ.. ಆದರೆ ಅವನಿಗೆ ಕೈತುಂಬಾ ಕೆಲಸ.. ತಲೆ ತುಂಬಾ ಯೋಚನೆ.. ಅವನ ತಲೆಗೂದಲಿನ ಹಾಗೆ ಉದ್ದುದ್ದ ಬೆಳೆಯುತ್ತಿದೆ.. ಖಂಡಿತಾ ಅವನು ಬರೆಯುತ್ತಾನೆ.. ಆ ನಂಬಿಕೆ ನಿನಗೆ ಇರಲಿ.. ಅವನ ಜೊತೆಯಲ್ಲಿ ಹದಿನಾಲ್ಕು ವರ್ಷ ಕಳೆದಿದ್ದೀಯ.. ಯೋಚನೆ ಬೇಡಾ.. ಲೇಖನ ಖಂಡಿತಾ ಬರುತ್ತೆ.. 

                                                                            **********

ಹೌದು.. ಜೋಪಾನವಾಗಿ ನೋಡಿಕೊಳ್ಳಿ. ಶ್ರೀಕಾಂತ್.. 

ಮಡದಿಯ ಮೊಗ ನೋಡಿದೆ.. ಅರಳಿತ್ತು.. ಬಭೃವಾಹನದ ಹಾಡು ನೆನಪಿಗೆ ಬಂತು.. 

"ನಿನ್ನೀ ಒಲವಿಗೆ ಅರಳಲು ಒಡಲು 
ನಾಳಿನ ಭಾಗ್ಯಕೆ ಕಾದಿದೆ ಮಡಿಲು
ಬೆರೆತ ಜೀವಕೆ ಹರಕೆಯ ತರಲು 
ಮಳೆಯನ್ನು ಸುರಿಸಿದೆ ಕಪ್ಪನೆ ಮುಗಿಲು.. "

 ಶ್ರೀ ಅಣ್ಣಾವ್ರ ಬಗ್ಗೆ ಮಾತಿಲ್ಲದೆ ಏನೂ ಬರೆಯೋಲ್ಲ ಅಲ್ವ.. ಅಂದಿತು ಅಶರೀರವಾಣಿ.. 

ನೆನಪಿನಾಳಕ್ಕೆ ಜಾರಿದೆ.. ಅಂದು ಡಾಕ್ಟರ್ ನಿಮ್ಮ ಮನೆಗೆ ಹೊಸ ಅತಿಥಿಯ ಬರುವ ಹಾದಿಯಲ್ಲಿದೆ ಅಂದಾಗ.. ಮನಸ್ಸು ಈ ಸಮಯ ಆನಂದಮಯ ಹಾಡೇ ನೆನಪಿಗೆ ಬಂದಿದ್ದು.. 

ಮದುವೆಯ ಮೊದಲನೇ ವರ್ಷದೊಳಗೆ ನಾನು ಕಪಿ ಅರ್ಥಾತ್ ಕನ್ಯಾ ಪಿತೃವಾದ್ದರಿಂದ.. ಬದುಕಿನಲ್ಲಿ ಅಂತಹ ಬಾರಿ ಬದಲಾವಣೆ ಅನಿಸಲಿಲ್ಲ .. 

ಆದರೆ ಪುಟ್ಟ ಮಗು ನಮ್ಮ ಬದುಕಿಗೆ ಬೆಳಕಾಗಿ ಬಂದಿದೆ ಎಂದು ತಿಳಿದಾಗ ಮನಸ್ಸು ಆಗಸದಲ್ಲಿ ಹಾರಾಡಿದ್ದು ನಿಜ.. 

ಅಪ್ಪನ ಸ್ಥಾನಕ್ಕೆ ಬಡ್ತಿ ಸಿಗುವ ಮೊದಲು ಜೀವನ ಸರಳವಾಗಿತ್ತು.. ಮೊದಲಿಂದಲೂ ಪುಟ್ಟ ಮಕ್ಕಳನ್ನು ಎತ್ತಿಕೊಳ್ಳುವ ಹಂಬಲವಿದ್ದರೂ, ಆ ಪುಟ್ಟ ಮಕ್ಕಳ ಮೃದು ಮೈ.. 

ಮೆತ್ತನೆಯ ಮೂಳೆಗಳು ಎಲ್ಲಿ ಘಾಸಿಗೊಳ್ಳುತ್ತವೋ ಎನ್ನುವ ಭಯವಿತ್ತು.. ನನ್ನ ಕುಟುಂಬಕ್ಕೆ ಮಗು ಬಂದಾಗಲೂ ಆ ಭಯ ಇನ್ನಷ್ಟು ಜಾಸ್ತಿ ಆಯ್ತು .. 

ಕಾರಣ ನನ್ನ ಆಸ್ತಿಯಿದು, ನನ್ನ ರಕ್ತ ಹಂಚಿಕೊಂಡು ಹುಟ್ಟಿರುವ ಈ ಕಂದನನ್ನು ಎತ್ತಿಕೊಂಡಾಗ ಏನಾದರೂ ಘಾಸಿಯಾದರೆ ಅನ್ನುವ ಆತಂಕ.. 

ಏನು ಆಗಲ್ಲ.. ಶ್ರೀ.. ನಿಧಾನವಾಗಿ ಎತ್ತಿಕೊಳ್ಳಿ ಅಂದರೂ ನನ್ನ ಕಂದನನ್ನು ಅದು ಹುಟ್ಟಿದ ಮೇಲೆ ಹಲವಾರು ತಿಂಗಳು ಎತ್ತಿಕೊಂಡೆ ಇರಲಿಲ್ಲ.. 

ಮಗು ಹಾಸಿಗೆಯಲ್ಲಿ, ತೊಟ್ಟಿಲಿನಲ್ಲಿ, ಅಥವ ನನ್ನ ಮಡದಿಯ ಮಡಿಲಲ್ಲಿ ಮಲಗಿದಾಗ ಮಾತ್ರ ಮುದ್ದಿಸುತ್ತಿದ್ದೆ.. ಎತ್ತಿಕೊಳ್ಳುವ ಸಾಹಸಕ್ಕೆ ಕೈ ಹಾಕಿರಲೇ ಇಲ್ಲ.. 

ಒಂದು ದಿನ ಅಚಾನಕ್ ನನ್ನ ಮಡದಿ, ಶ್ರೀ ತಗೊಳ್ಳಿ ಅಂತ ನನ್ನ ತೊಡೆಯ ಮೇಲೆ ಮಲಗಿಸಿದಳು.. ಅದ್ಭುತ ಅನುಭವ.. ಮೆತ್ತನೆಯ ಮಗು, 

ನನ್ನದೇ ರಕ್ತ ಮಾಂಸ ಹೊತ್ತು ಧರೆಗಿಳಿದ ಕಂದ ಎಷ್ಟು ಮೃದು.. ಜೊತೆಗೆ ಮೊದಲಿಂದಲೂ ಗುಂಡು ಗುಂಡಗೆ ತುಸು ದಪ್ಪವೇ ಇದ್ದ ಮಗು.. 

ಅಯ್ಯೋ ಇಷ್ಟು ತಿಂಗಳು ಎತ್ತಿಕೊಳ್ಳಲಿಲ್ಲ ಅಂತ ಬೇಸರವಾಯ್ತು.. 

ನಂತರ ನಿಧಾನವಾಗಿ ಎತ್ತಿಕೊಳ್ಳುವುದು, ಆಟಾಡಿಸುವುದು ಶುರುಮಾಡಿದೆ.. 

ಜೀವನದಲ್ಲಿ ಬದಲಾವಣೆಯ ಆರಂಭ ಶುರುವಾಯಿತು.. ನಾ ನಾಲಿಗೆ ಉದ್ದಕ್ಕೆ ಚಾಚಿ.. ಪಾಪಾ ಅಂತ ಕರೆದರೆ ಸಾಕು.. ತಾನು ನಾಲಿಗೆ ಉದ್ದ ಮಾಡಿ, ನಗೋದನ್ನು ನೋಡಿ ಮನಸ್ಸು ಮನಸ್ಸು ಹಗುರಾಗುತಿತ್ತು.. ನನಗೆ ಇರುವ ಹಾಗೆ ಗದ್ದದಲ್ಲಿ ಗುಳಿ.. ಅದೇ ರೀತಿ ನಗು.. ಆಹಾ ಬದುಕು ಸುಂದರ ಅನಿಸಲಿಕ್ಕೆ ಶುರುವಾಯಿತು.. 

ಅಪ್ಪನ ಸ್ಥಾನಕ್ಕೇರುವುದು ಮತ್ತು ಆ ಸ್ಥಾನದ ಸಂತಸ ಅನುಭವಿಸೋದು ಮಸ್ತ್..  

ಒಡಲು ತುಂಬಿದ ಮಡದಿಯ ಜೊತೆಯಲ್ಲಿ ಆಫೀಸಿಂದ ಬಂದ ಮೇಲೆ  ಪುಟ್ಟ  ವಾಕಿಂಗ್ ಹೋಗುತ್ತಿದ್ದೆ.. ಅದು ನಿಲುಗಡೆಗೆ ಬಂದಿತು.. ಕಾರಣ ಮಗುವಿಗೆ ಥಂಡಿ ಆಗುತ್ತೆ ಹೊರಗೆ ಹೋಗಬೇಡಿ ಅಂತ ಕಟ್ಟಾಜ್ಞೆ.. ಹಾಗಾಗಿ ಮನೆಯಲ್ಲಿಯೇ ಮಗು ಮಡದಿಯ ಜೊತೆ ನಲಿದಾಟ.. 

ಬೆಳಿಗ್ಗೆ ಇಂದ ಸಂಜೆ ತನಕ ಮಗುವಿನ ಆಟೋಟಗಳ ಬಗ್ಗೆ ಮಡದಿ ವರದಿ ಒಪ್ಪಿಸಿ ಸಂತಸಪಡುವಾಗ ಆ ಸಂತಸದ ಸಾಗರದಲ್ಲಿ ನಾನು ಮುಳುಗಿ ತೇಲುತಿದ್ದೆ.. ಮೆಲ್ಲಗೆ ಎತ್ತಿಕೊಳ್ಳುವ ಅಭ್ಯಾಸವಾಗಿದ್ದು ಒಂದು ಕಡೆ ಸಂತಸವಾದರೂ.. ಇನ್ನೊಂದು ಕಡೆ ಅದೇ ಶಿಕ್ಷೆ ಅನಿಸುತಿತ್ತು.. ಕಾರಣ ಡುಮ್ಮು ಡುಮ್ಮುಗೆ ಇದ್ದ ನನ್ನ ಮುದ್ದು ಮಗಳನ್ನು ಸ್ವಲ್ಪ ಹೊತ್ತು ಎತ್ತಿಕೊಳ್ಳೋಕೆ ಖುಷಿಯಾದರೂ ...ಮೆಲ್ಲನೆ ಭಾರ ಹೆಚ್ಚಾಗುತಿತ್ತು.. ಮಡದಿ ಹಲ್ಲು ಬಿಡುತ್ತಾ.. ನೋಡಿ ಮಗು ನೋಡಿಕೊಳ್ಳೋದು ಎಷ್ಟು ಕಷ್ಟ ಅಂತ ನಗುತಿದ್ದಳು.. ಆದರೆ ಆ ಭಾರದಲ್ಲೂ ಖುಷಿ ಇರುತಿತ್ತು.. ನಾ ಹೇಳುತಿದ್ದೆ..ನೋಡು ನೀನು ಮಗುವನ್ನು ಒಂಭತ್ತು ತಿಂಗಳು ಒಡಲಲ್ಲಿ ಇಟ್ಟುಕೊಂಡಿದ್ದೆ.. ಈಗ ನನ್ನ ಸರದಿ. .. 

ಹಾಗಾಗಿ ನಾ ಮಗುವನ್ನು ಎತ್ತಿಕೊಂಡು ಓಡಾಡಲು ಶುರುಮಾಡಿದೆ.. ನನ್ನ ಮಗಳು ಕೂಡ ಅದಕ್ಕೆ ಸ್ಪಂದಿಸೋಕೆ ಶುರು ಮಾಡಿದಳು..ಮನೆಯಲ್ಲಿದ್ದಾಗ ಅಮ್ಮನ ಮಗಳಾಗಿದ್ದವಳು.. ಮನೆಯಿಂದ ಹೊರಗೆ ಬಂದ ಕೂಡಲೇ ಅಪ್ಪನ ಮಗಳಾಗುತ್ತಿದ್ದಳು.. ನಾ ಹೇಳಿದ್ದು ವೇದವಾಕ್ಯ.. ನಾ ಹೇಳಿದ್ದು ಇಂಚಿಂಚು ಪಾಲಿಸುತ್ತಿದ್ದಳು..

ಮಗುವನ್ನು ಗಣೇಶನ ತರಹ ಎತ್ತಿಕೊಂಡು ಓಡಾಡುತಿದ್ದೆ.. ಹಾದಿಯಲ್ಲಿ ನೋಡಿ ಎಲ್ಲರೂ ಹಲ್ಲು ಬಿಡೋರು.. ಮಡದಿ ಕೂಡ ಥೂ ಇದು ಯಾಕ್ರೀ ಹೀಗೆ ಎತ್ತಿಕೊಳ್ಳುತ್ತೀರಾ ಅಂತ ಬಯ್ಯುತ್ತಿದ್ದರೂ.. ನಾನು ಏನೂ ಏನೂ ಹೇಳದೆ ಸಾಗುತಿದ್ದೆ.. 

ಮಗಳು ದಿನೇ ದಿನೇ ಬೆಳೆಯುತಿದ್ದಳು.. ಎತ್ತಿಕೊಳ್ಳುವ ಸ್ಥಾನದಿಂದ ಪುಟ್ಟ ಪುಟ್ಟ ಹೆಜ್ಜೆ ಹಾಕುವ ಹಂತಕ್ಕೆ ಬಂದಾಗ..ಕೈ ಹಿಡಿದು ನೆಡೆಸುವ ಬದಲು ಪಾಪಾ ನೀನೆ ಹೆಜ್ಜೆ ಹಾಕು ನಿನ್ನ ಬೆನ್ನ ಹಿಂದೆ ನಾ ಇದ್ದೇನೆ ಎನ್ನುತಿದ್ದೆ.. ಮಗಳಿಗೂ ನನ್ನ ಮೇಲೆ ಏನೋ ವಿಶ್ವಾಸ ಹಾಗೆ ಮಾಡುತಿದ್ದಳು.. 

ಮಡದಿಗೆ ಈ ಕಮಂಗಿ ಏನೋ ಮಾಡುತ್ತಿದೆ ಆದರೆ.. ಇದರ ಆಲೋಚನೆ ಏನು ಅಂತ ಹೊಳೆಯದೆ ನನ್ನ ಮೇಲೆ ಕೆಲವೊಮ್ಮೆ ರೇಗುತಿದ್ದಳು.. ಆದರೆ ನನ್ನ ಆಲೋಚನೆ ಮತ್ತು ಯೋಜನೆಯ ಮೇಲೆ ನನಗೆ ನಂಬಿಕೆ ಇತ್ತು ಹಾಗಾಗಿ ನಾ ನನ್ನ ಪಾಡಿಗೆ ನನ್ನ ಸಿದ್ಧಾಂತದ ಹಾದಿಯಲ್ಲಿ ಸಾಗುತಿದ್ದೆ.. 

ಮಗಳು ಬಂದ ಮೇಲೆ ನನ್ನ ಜೀವನ ಬದಲಾಯಿತು ಅಂದುಕೊಳ್ಳೋದಕ್ಕಿಂತ ನನಗೆ ಅದ್ಭುತ ಗೆಳತೀ ಸಿಕ್ಕಿದಳು ಅಂತ ಹೇಳೋಕೆ ನನಗೆ ಖುಷಿ.. ಯಾಕೆ ಅಂದರೆ ನಾ ಅವಳಿಗೆ ತಿಳಿ ಹೇಳುತ್ತಿದ್ದ ಮಾತುಗಳೆಲ್ಲ ನನ್ನ ಜೀವನಕ್ಕೆ ದಾರಿ ದೀಪವಾಗುತಿತ್ತು.. ನನಗರಿವಿಲ್ಲದೆ ಅವಳಿಗೆ ಹೇಳುತ್ತಿದ್ದ ಮಾತುಗಳು ನನಗೆ ಪಾಠ ಕಲಿಸಲು ಶುರು ಮಾಡುತ್ತಿದ್ದವು.. 

ಅವಳ ಶಾಲೆಯ ಮೊದಲ ದಿನ.. ಅಳದೆ.. ಶಾಲೆಗೆ ಹೊರತು ನಿಂತಾಗ ಭಲೇ ಹುಡುಗಿ ಅಂದುಕೊಂಡೆ.. ಶಾಲೆಯಲ್ಲಿ ಕೂತು ಅವರ ಟೀಚರ್ ನಮಗೆ ನೀವು ಹೋಗಿ ಅಂದಾಗ.. ಅಚಾನಕ್ ಅಳಲು ಶುರು ಮಾಡಿದಾಗ ನನಗೆ ಪಿಚ್ ಅನಿಸಿತು.. ಆದರೆ ಅಲ್ಲಿಂದ ಮತ್ತೊಂದು ಅಧ್ಯಾಯ ಶುರುವಾಯಿತು.. 

ಆಕೆಯ ಓದು ಬರಹ.. ನಾ ಶಾಲೆಯಲ್ಲಿ ಕಾಣದ ಆನಂದ ಆಕೆಯ ಮೊಗದಲ್ಲಿ ಕಂಡು ಧನ್ಯನಾಗುತ್ತಿದ್ದೆ.. ಶಾಲೆಯಲ್ಲಾಗುವ ಪ್ರತಿ ಪೋಷಕರು ಮತ್ತು ಅಧ್ಯಾಪಕರ ಭೇಟಿಯಲ್ಲಿ ನಾ ಎಂದಿಗೂ  ಆಕೆಯ  ಅಂಕ ಪಟ್ಟಿಯನ್ನು ನೋಡದೆ.. ಆಕೆಯ ಸ್ವಭಾವ, ಆಕೆಯ ನಡೆವಳಿಕೆ, ಆಕೆಯ ಸಹಪಾಠಿಗಳ ಜೊತೆಯಲ್ಲಿ ಆಕೆ ಬೆರೆಯುತಿದ್ದ ರೀತಿ, ಆಕೆಯ ಗುರುಗಳ ಜೊತೆಯಲ್ಲಿ ಮಾತಾಡುತಿದ್ದ ರೀತಿ, ತೋರುತ್ತಿದ್ದ ಗೌರವ ಬರೀ ಇದರ ಸುತ್ತ ಮುತ್ತಲೇ ನನ್ನ ಮಾತುಗಳು ಸುತ್ತಾಡುತ್ತಿದ್ದವು... ಆಗ ಆಕೆಯ ಅಧ್ಯಾಪಕರೊಬ್ಬರು.. ಇದೊಳ್ಳೆ ಕತೆ ಸರ್ ನಿಮ್ಮದು.. ಎಲ್ಲಾ ಪೋಷಕರು ಬಂದು ಅಂಕಗಳು ಕಡಿಮೆಯಾಗಿವೆ.. ಹೆಚ್ಚಾಗೋಕೆ ಏನು ಮಾಡಬೇಕು, ಟ್ಯೂಷನ್ ಕಲಿಸಬೇಕು, ಸಮಯವಿಲ್ಲ ಅದು ಇದು ಅಂತ ತಮ್ಮ ಮಕ್ಕಳ ಬಗ್ಗೆ ದೊಡ್ಡ ದೂರನ್ನೇ   ದಾಖಲಿಸುತ್ತಿದ್ದರೆ..ನೀವು ಉಲ್ಟಾ ಮಾತಾಡುತ್ತಿದ್ದೀರಲ್ಲ.. ಅಂದಾಗ ನಾ ಸುಮ್ಮನೆ ನನ್ನ ಮಗಳ ಮುಖ ನೋಡಿ.. "ಜೀವನದಲ್ಲಿ ಅಂಕಗಳು ಮುಖ್ಯವಲ್ಲ.. ಅಂಕೆಗಳು ಮುಖ್ಯ ಅಂದೇ". 

ನನ್ನ ಮಗಳ ಮೊಗದಲ್ಲಿ ಸಾವಿರ ವಾಟ್ ಬಲ್ಬ್ ಹತ್ತಿದ್ದು ಕಂಡೆ.. ಆದರೆ ಅವಳಿಗೆ ಪೂರ್ಣ ಅರ್ಥವಾಗಿರಲಿಲ್ಲ... ಅದಕ್ಕೂ ಒಂದು ಸಮಯ ಬರುತ್ತೆ ಅಂತ ಅವಳಿಗೂ ಗೊತ್ತಿತ್ತೋ ಅಥವ ನನ್ನ ತಲೆಯಲ್ಲಿನ ಯೋಚನೆಯನ್ನು ಗ್ರಹಿಸಿದಳೋ ಕಾಣೆ..  

ಅವಳು ಬೆಳೆದಾಗೆಲ್ಲ ನನ್ನ ಮತ್ತು ಅವಳ ಬಾಂಧವ್ಯ ಗೆಳೆಯರ ತರಹ ಆಯಿತು... ದಿನದಲ್ಲಿ ಮೊದಲ ಬಾರಿಗೆ ನೋಡಿದಾಗ ಸಲ್ಯೂಟ್ ಮಾಡೋದು.. ಆಫೀಸಿನಿಂದ ಬಂದ ಮೇಲೆ ಸಲ್ಯೂಟ್ ಹೊಡೆದು ಅವಳು ನನ್ನ ಬ್ಯಾಗ್ ತೆಗೆದುಕೊಂಡು ಹೋಗೋದು, ಹೈ ಪೈ ಹೊಡೆಯೋದು, ನಾ ಯೋಚಿಸೋ ಧಾಟಿಯಲ್ಲಿಯೇ ಆಕೆಯೂ ಯೋಚಿಸೋದು.. ಅಥವ ಆಕೆಯ ರೀತಿಯಲ್ಲಿ ನಾ ಯೋಚಿಸೋದು ಹೀಗೆ ಬದುಕು ತಿರುವನ್ನು ಪಡೆಯುತ್ತಲೇ ಸಾಗಿತ್ತು.. 

ನಮ್ಮ ಮಾತುಗಳು ಕೂಡ ಇಬ್ಬರು ಗೆಳೆಯರ ತರಹನೇ ಇರುತ್ತಿದ್ದವು.. 

ಒಮ್ಮೆ ಶಾಲೆಯ ಒಂದು ತಿಂಗಳ ಪರೀಕ್ಷೆಯಲ್ಲಿ ಅವಳ ಅಂಕಗಳು ಸುಮಾರಾಗಿ ಬಂದವು.. ಒಂದು ವಿಷಯದಲ್ಲಿ ಅತಿ ಕಡಿಮೆ ಅಂಕ ಬಂದಿತ್ತು.. ಹಾಗೂ ಹೀಗೂ ಪಾಸಾಗುವಷ್ಟೇ ಬಂದಿದ್ದವು.. ಅಂದು ಆಫೀಸಿನ ಕೆಲಸದ ಒತ್ತಡ ತುಸು ಅದವಾಗಿಯೇ ಬಂದಿದ್ದೆ.. ಅವಳ ಮೊಗ ಕಮಲದ ಹೂವಿನಂತೆ ಅರಳೋದರ ಬದಲಿಗೆ ಬಾಡಿದ ಹೂವಾಗಿತ್ತು.  ನಾ ಸುಮ್ಮನೆ ಅವಳಾ ಮೊಗವನ್ನೊಮ್ಮೆ ನೋಡಿ, ನನ್ನ ಪಾಡಿಗೆ ನನ್ನ ನಿತ್ಯ ಕೆಲ್ಸದಲ್ಲಿ ತೊಡಗಿಕೊಂಡೇ.. ಸ್ವಲ್ಪ ಹೊತ್ತಾದ ಮೇಲೆ ಬಂದು ಅಪ್ಪಾ ಅಂತ ತೋಡಿ ರಾಗ ಶುರು ಮಾಡಿದಳು.. ಹೇಳು ಪಾಪಾ ಅಂದೇ.. 

ಅಪ್ಪ.. ಮತ್ತೆ ರಾಗ ಶುರು ಶುರು.. ಒಂದು ವಿಷಯದಲ್ಲಿ ಕಡಿಮೆ ಅಂಕ ಅಂತ ಹೇಳಿದಳು. ಹೌದ ಸರಿ ಮುಂಚಿನ ಪರೀಕ್ಷೆಯಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕ ಪಡಿ ಅಂದೇ.. ಅವಳ ಕಣ್ಣಲ್ಲಿ ನೀರು ತುಂಬಿತ್ತು.. ನಾ ಚೆನ್ನಾಗಿ ಬಯ್ತೀನಿ ಅಂತ ಅಂದುಕೊಂಡಿದ್ದವಳಿಗೆ ನನ್ನ ಈ ನೆಡವಳಿಕೆ ಅಚ್ಚರಿ ತಂದಿದ್ದು ಸುಳ್ಳಲ್ಲ.. 

ಅಪ್ಪ.. ನನ್ನ ಸ್ನೇಹಿತೆ ಕಡಿಮೆ ಅಂಕ ತೆಗೆದುಕೊಂಡಳು ಅಂತ.. ಅವಳ ಅಪ್ಪ ಬಾಯಿಗೆ ಬಂದಂತೆ ಬಯ್ದರಂತೆ .. ನೀವು ನೋಡಿದರೆ ಉತ್ತೇಜನ ಕೊಟ್ಟು ಸ್ಫೂರ್ತಿ ಬರುವ ಹಾಗೆ ಬೆನ್ನು ತಟ್ಟುತ್ತೀರಾ.. ನಿಮ್ಮಂಥ ಅಪ್ಪನನ್ನು ಪಡೆದ ನಾನೇ ಧನ್ಯ ಅಂದಳು.. 

ಆಗ ಅವಳಿಗೆ ಅರ್ಥವಾಗುವ ಹಾಗೆ ಹೇಳಿದೆ.. "ಪಾಪಾ ನೀನು ಮಗುವಾಗಿದ್ದಾಗ ಗಣೇಶನ ತರಹ ಎತ್ತಿಕೊಂಡು ಓಡಾಡುತ್ತಿದ್ದೆ.. ಕಾರಣ ನಿನ್ನ ಮುಖ ನನ್ನ ಭುಜದ ಮೇಲೆ ಬರುವಂತೆ ಎತ್ತಿಕೊಂಡರೆ.. ನನಗೆ ಆಯಾಸ ಖಂಡಿತ ಕಡಿಮೆಯಾಗುತ್ತಿತ್ತು.. ಆದರೆ ನೀನು ನನ್ನ ಹಿಂದೆ ಕಾಣುವ ದೃಶ್ಯಗಳನ್ನು ಮಾತ್ರ ಗಮನಿಸುತ್ತಿದ್ದೆ.. ಅಲ್ಲಿ ನನ್ನ ತಪ್ಪುಗಳು ಕಾಣುತ್ತಿದ್ದವು.. ಜಗತ್ತಿನ ಸರಿ ನಿನಗೆ ಕಾಣುತ್ತಿರಲಿಲ್ಲ.. ನೀನು ಮುಂದೆ ನೋಡಿಕೊಂಡು ಬದುಕು ಸಾಗಿಸಬೇಕು.. ನನ್ನ ಹಿಂದಿನ ಅನುಭವಗಳು ನಿನಗೆ ಅಡ್ಡಿಯಾಗದೆ, ನಿನಗೆ ನನ್ನ ಅನುಭವದ ಮೂಸೆಯಿಂದ ಸಿಗುವ ಸಾರಾಂಶ ಮಾತ್ರ ದಾರಿದೀಪವಾಗಬೇಕು ಅಂತ ಅದರ ಉದ್ದೇಶ ಇತ್ತು.. ಅದೇ ಪಾಠ ನೀನು ಕಡಿಮೆ ಅಂಕಗಳನ್ನು ತೆಗೆದಾಗಲೂ ನಾ ಹೇಳಿದ್ದು ಅದೇ.. ಹಿಂದೆ ಆದ ತಪ್ಪಿನಿಂದ, ಅಥವಾ ಸೋಲಿನಿಂದ ಕಂಗೆಡದೆ ಮುಂದೆ ಹೆಜ್ಜೆ ಹಾಕಬೇಕು.. .. "

ಅವಳಿಗೆ ಈ ಹೇಳಿದ ಪಾಠ ನಾ ಎಲ್ಲಿಯೂ ಹೇಳಿಕೊಟ್ಟದ್ದಲ್ಲ.. ಬದಲಿಗೆ ಅಪ್ಪನಾದ ಮೇಲೆ ನಾನೇ ಜೀವನದಲ್ಲಿ ಕಲಿತ ಪಾಠ.. ಇದರ ಯಶಸ್ಸಿನ ಭಾಗ ನನ್ನ ಅಪ್ಪನಿಗೂ ಸಲ್ಲಲೇ ಬೇಕು.. ಕಾರಣ.. ಅಪ್ಪ ಅಂದರೆ ಹೇಗಿರಬೇಕು ಅಂತ ಮಾದರಿಯಾಗಿ ಬದುಕಿ, ಪಾಠ ಹೇಳಿಕೊಡದೆ, ಪಾಠ ಕಳಿಸಿದ ಗುರು ಅವರು.. 

ಅಪ್ಪ ಅಂದರೆ ಅಪ್ಪ ಅಲ್ಲ ಅದೊಂದು ಶಕ್ತಿ.. ! ಮಗಳು ಅಂದರೆ ಬರಿ ಮಗಳಲ್ಲ.. ನಮ್ಮ ಬದುಕಿಗೆ ಪಾಠಗಳನ್ನು ನಮ್ಮಿಂದಲೇ ಹೇಳಿಕೊಡುವ ಗುರು.. !

                                                                         **************

ಸವಿತಾಳ ಮೊಗ ಅರಳಿದ್ದು ಕಂಡು.. ಅಂತೂ ಬಂತಾ.. ಓದಿದೆಯಾ.. ಸಮಾಧಾನ ಆಯ್ತಾ.. 

ಆಯ್ತು ಅಮ್ಮ.. ನಿಮ್ಮ ಮಗರಾಯ ಅದೆಂಗೆ ಆ ದಿನಗಳನ್ನು ಕಣ್ಣೆದುರು ತರುತ್ತಾರೋ.. ಅದ್ಭುತ.. 

ಎಲ್ಲದಕ್ಕೂ ಆ ಭಗವಂತನ ಅನುಗ್ರಹ ಕಣೆ ಸವಿತಾ. .. ಇವತ್ತು ನಿನ್ನ ವಿವಾಹವಾದ ಸಂಭ್ರಮ.. ನನಗೆ ಗೊತ್ತು.. ಅದಕ್ಕೆ ನಾನು ಸುಮ್ಮನಿದ್ದೆ ಏನೂ ಹೇಳದೆ.. ಏನು ಅವನ ಲೇಖನ ಓದಿದ ಮೇಲೆ ನಿನ್ನ ಮೊಗದ ಮೇಲೆ ನಗು ತರುತ್ತೀಯ ಅಲ್ವ.. ಅದನ್ನು ಕಂಡೆ ನಿನಗೆ ಶುಭ ಆಶೀರ್ವಾದ ಮಾಡಬೇಕು ಅಂತ ಕಾದಿದ್ದೆ.. ನೋಡಲ್ಲಿ ಎಲ್ಲರೂ ಅಲ್ಲಿ ನಿನಗೆ ಹಾರೈಸಿದ್ದಾರೆ.. 

ಧನ್ಯವಾದಗಳು ಅಮ್ಮ.. ನಿಮ್ಮ ಆಶೀರ್ವಾದ ನನ್ನ ಶ್ರೀ ಮನೆಯ ಮೇಲೆ ಸದಾ ಇರಲಿ.. ಸೀಮಾ ಒಂದೊಂದೇ ಹೆಜ್ಜೆ ಹಾಕುತ್ತ ಮನೆಯನ್ನು ಮುನ್ನೆಡೆಸುತ್ತಿದ್ದಾಳೆ... ಶ್ರೀ ಗೆ ಭುಜಕ್ಕೆ ಭುಜ ಕೊಟ್ಟು ನಿಂತಿದ್ದಾಳೆ.. ಶೀತಲ್ ಇವರಿಬ್ಬರ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾಳೆ.. ಖಂಡಿತ ನಮ್ಮ ಅನುಗ್ರಹ ಸದನ ಎಂದಿಗೂ ಹಸಿರಾಗಿರುತ್ತದೆ.. ಹಸಿರಾಗಿರಲೇಬೇಕು.. ಸದ್ಯದ ಸಮಸ್ಯೆಗಳು ತಾತ್ಕಾಲಿಕ.. ಅದನ್ನು ಮೆಟ್ಟಿ ನಿಲ್ಲುತ್ತಾರೆ..ನಿಲ್ಲಲೇಬೇಕು.. 

                                                                           ***************

5 comments:

  1. The best gift I have received is u guys...U r the ones who taught me what life is...I am lucky to tell that I have been raised by great parents like u..U both are always an inspiration to lead life..My Life is incomplete without u guys... She is and will be there with us forever...
    This writing needs a big bow..Really happy seeing this...
    19 years of celebration goes on in our hearts!!
    Happy Wedding Anniversary Mr. and Mrs. Srikanth

    ReplyDelete
  2. Super maga..sakkattagide baraha

    ReplyDelete
  3. ನಿಮ್ಮ ಈ ಬರಹ, ಕೇವಲ ನಿಮ್ಮ ಹಾಗು ನಿಮ್ಮ ಮಗಳ ಸಂಭ್ರಮಕಥನವಾಗಿರದೆ, ಎಲ್ಲ ಅಪ್ಪ-ಅಮ್ಮಂದರಿಗೂ ಒಂದು ದಾರಿದೀವಿಗೆಯಾಗಿದೆ. ಅಭಿನಂದನೆಗಳು.

    ReplyDelete
  4. Super..very nice..the birthday programme was very good memorable.credit goes to all family memembers..and you sri.becouse of you I got the family .thanks to all elders
    .angels for believing me..its very nice you wrote about angel Sheetal.. realy a gift for me too.super writing..

    ReplyDelete
  5. ನೋ ಕಾಮೆಂಟ್ಸ್ ಅಂತ ಬೇರೆ ಮಾಡಿದ್ದೀಯಾ. ನಿಜಕ್ಕೂ ಅದ್ಭುತ ಪವಾಡವೇ ಸರಿ, ಪ್ರತಿಯೊಂದು ಘಟನೆಗಳನ್ನು ಮೈರೋಮಾಂಚನ ಗೊಳ್ಳುವ ರೀತಿ ವಿವರಿಸಿರುವೆ.ಈ ಪರಿಕಲ್ಪನಾ ಶೈಲಿ ಆವರಿಸುವುದು ನಿನ್ನಂತವನಿಗೆ ಆ ಗಣೇಶ ವರದಾನದಿಂದ ಮಾತ್ರ ಸಾಧ್ಯ.
    ನನಗೆ ಘೋರ ಕಷ್ಟಬಂದಿತ್ತು ಆಗ ನಮ್ಮ ಮಾವನ ಮಗ ವಿಶ್ವಣ್ಣ ಯಾಕೆ ಯೋಚನೆ ಮಾಡ್ತೀಯಾ ನಮ್ಮ ನಾಗಭೂಷಣ ಇದ್ದಾರೆ ಎಂದು ಅವರು ಭೇಟಿ ಮಾಡಿಸಿದ್ದು,ಆಗ ಅವರು ಕೂಲಂಕಷವಾಗಿ ಗಮನಿಸಿ ವೈಜ್ಞಾನಿಕ ಉದಾಹರಣೆಗಳೊಂದಿಗೆ ಎಲ್ಲಾ ವಿವರಿಸಿದ ಪರಿ, ಅದು ಇಂದಿಗೂ ಮೆಲುಕು ಹಾಕುತ್ತಾ ಹೋದರೆ ಸತ್ಯದ ಅರಿವನ್ನು ತೋರಿಸುತ್ತಿದೆ.
    ನೀನು ಬರೆದ ಲೇಖನ ಪೂರ್ತಿ ಓದಿದೆ, ಇದೆಲ್ಲ ದೈವಾನುಗ್ರಹದಿಂದ ಮಾತ್ರ ಸಾಧ್ಯ.
    ಇದನ್ನು ಕೈಪಿಡಿ ರೂಪದಲ್ಲಿ ಹೊರತಂದರೆ ಉಪಯುಕ್ತ ಮಾಹಿತಿಗಾಗಿ ಹೊರಹೊಮ್ಮುವುದು.
    ನಾಗಭೂಷಣ ಗುರುಗಳಿಗೆ ನನ್ನ ನಮನಗಳನ್ನು ತಿಳಿಸುತ್ತನೆ.ಜೈಗಣೇಶ.

    ReplyDelete