ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ
ಬ್ಲಾಗ್ ಲೋಕವೇ ಕಲ್ಲು ಸಕ್ಕರೆ ಕಾಣಿರೋ
ಒಮ್ಮೆ ನನಗೆ ನಾನೇ ಚುಗುಟಿಕೊಂಡೇ.. ಅರೆ ಇದು ಕನಸೋ.. ನನಸೋ ಅರಿವಾಗಲಿಲ್ಲ.. ಮೆಲ್ಲಗೆ ನನ್ನ ಕನಸನ್ನು ಜೂಮ್ ಮಾಡಿದೆ.. ಆಗ ಗೊತ್ತಾಯಿತು.. ಅದು ಅಜಾದ್ ಸರ್ ಅವರು ಅಕ್ಷರ ಮಾರುಕಟ್ಟೆಯಲ್ಲಿ ಹೇಳುತ್ತಿದ್ದ ಹಾಡು..
ನಿಜ.. ಟೆಸ್ಟ್ ಕ್ರಿಕೆಟ್ ಎಂದೂ ಸೊರಗೋದಿಲ್ಲ.. ತಿಳಿಯಾದ ಊಟದ ಮುಂದೆ.. ಪಾನಿ ಪುರಿ ಎಂದಿಗೂ ಸದಾ ನಿಲ್ಲೋಲ್ಲ.. ಈ ತಂತ್ರಜ್ಞಾನದ ಮಾಯಾಜಾಲದ ಲೋಕದಲ್ಲಿ ದಿಢೀರ್ ಯಶಸ್ಸು.. ದಿಢೀರ್ ಹೆಸರುಗಳು ಏನೇ ಬಂದರೂ ಬ್ಲಾಗ್ ಎಂಬ ಮಾಯಾ ಅಕ್ಕರೆಯ ಅಕ್ಕರದ ಕಾನನದಲ್ಲಿ ಮತ್ತೆ ಗಜರಾಜ ಗೀಳಿಟ್ಟು ಎಲ್ಲರನ್ನೂ ಕರೆಯುವಂತೆ.. ಬ್ಲಾಗ್ ಲೋಕದ ಧೃವತಾರೆಗಳನ್ನು ಮತ್ತೆ ಸೇರಿಸುವ ಸಾಹಸ ಮಾಡಿದ್ದಾರೆ..
ಶ್ರೀಮನ್ ಶ್ರೀಮನ್ ಯಾರೋ ಕೂಗಿದ ಹಾಗೆ ಕೇಳಿಸಿತು..
ತಿರುಗಿ ನೋಡಿದೆ... ಅಜಾದ್ ಸರ್.. ಕೂಗಿದರು..
ಶ್ರೀಮನ್ ಈ ಬ್ಲಾಗ್ ಲೋಕದ ಮಾಯಾಲೋಕವನ್ನು ಬಡಿದು ಬಡಿದು ತಟ್ಟಿ ಎಬ್ಬಿಸುತಿದ್ದದ್ದು ಬದರಿ .. ಬ್ಲಾಗ್ ಬ್ಯಾಡರಿ ಅನ್ನೋರನ್ನೆಲ್ಲ ಮತ್ತೆ ಮತ್ತೆ ಕರೆ ಕೊಡುತ್ತಿದ್ದದ್ದು ಅವರೇ.. ಈ ಬ್ಲಾಗ್ ಕೂಟಕ್ಕೆ ಅಧಿಕೃತ ಚಾಲನೆಗೆ ಗೇರ್ ಹಾಕಿದ್ದು.. ಹಾಗಾಗಿ ಯಶಸ್ಸಿನ ಕಿರೀಟ ಅವರಿಗೆ ಸಲ್ಲಬೇಕು.. ನಾನೂರು x ನಾನೂರು ರಿಲೇ ಓಟದಲ್ಲಿ ಬ್ಯಾಟನ್ ಕೊಡುವಂತೆ ನನಗೆ ಕೊಟ್ಟರು ನಾನು ಓಡುತ್ತಿದ್ದೇನೆ ಅಷ್ಟೇ ಶ್ರೀಮನ್ ಎಂದರು..
ಆಗಲಿ ಸರ್..ಹಾಗೆ ಹೇಳುತ್ತೇನೆ ಎಂದು ಮತ್ತೆ ಕೂತೆ..
ಟನ್ ಟನ್ ಅಂತ ಸದ್ದಾಯಿತು.. !
*****
ಒಂದು ಆಲದ ಮರ.. ಅದರ ಸುತ್ತಾ ಒಂದು ಕಟ್ಟೆ .. ಅಲ್ಲಿ ಗುರುಗಳಾದ ಸುನಾಥ್ ಕಾಕಾ ಕೂತಿದ್ದರು..ಬ್ಲಾಗ್ ಲೋಕದ ಬರಹಗಾರರು ಎಲ್ಲರೂ ಕೂತಿದ್ದರು...
ನೋಡ್ರಪ್ಪಾ ಬ್ಲಾಗ್ ಲೋಕ ಅನ್ನೋದು ಒಂದು ತಪಸ್ಸಿದ್ದಂತೆ... ಅಕ್ಷರಗಳೇ ಅಲ್ಲಿ ಧ್ಯಾನಕ್ಕೆ ಬೇಕಾಗುವ ಮಂತ್ರಗಳು. .. ಶಾರದಾ ದೇವಿಯೇ ಈ ಬರಹಗಾರರನ್ನು ಪೊರೆಯುವ ತಾಯಿ. ಬೇಂದ್ರೆ ಶರೀಫ ಇವರ ಬರಹಗಳನ್ನು ಓದುತ್ತಾ ಬೆಳೆದ ನನಗೆ.. ನೀವುಗಳು ಬರೆಯುವ ಕಥಾನಕಗಳು ಅಚ್ಚರಿ ಮೂಡಿಸುತ್ತವೆ.. ಆಗಲಿ ನನಗೆ ತಿಳಿದಷ್ಟು... ಅನುಭವ ಪಾಕದಲ್ಲಿ ಸಿಕ್ಕ ಒಂದೆರಡು ಹನಿಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ..
ನೋಡ್ರಪ್ಪಾ ಬರಹ ಅನ್ನುವ ಒಂದು ಪ್ರಯತ್ನ ನೀವುಗಳು ಬಾವಿ ತೆಗೆದಂತೆ.. ನೆಲ ಕೊರೆದಷ್ಟು ಶುದ್ಧ ನೀರು ಸಿಗುವಂತೆ... ಬರೆಯುತ್ತಾ ಹೋದಂತೆ ಮನದೊಳಗೆ ಇನ್ನಷ್ಟು ಸುವಿಚಾರಗಳು ತುಂಬಿಕೊಳ್ಳುತ್ತಾ ಹೋಗುತ್ತದೆ... ಹಾಗಾಗಿ ಬರೆಯೋದನ್ನು ನಿಲ್ಲಿಸಬೇಡಿ.. ಜೊತೆಗೆ ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್... ಇವೆಲ್ಲಾ ನಿಮ್ಮನ್ನು ಹೊರಜಗತ್ತಿಗೆ ಪರಿಚಯಿಸುತ್ತದೆ..
ಜಿಮ್ನಾಸ್ಟಿಕ್ಸ್ ನಲ್ಲಿ ಒಂದು ಮೆತ್ತನೆಯ ಹಾಸು ಅಥವಾ ಸ್ಪ್ರಿಂಗ್ ಇರುವ ಹಾಸಿನ ಮೇಲೆ ಒಮ್ಮೆ ಚಿಮ್ಮಿ ಎತ್ತರಕ್ಕೆ ಏರುವಂತೆ.. ಈ ಜಾಲತಾಣದಲ್ಲಿ ಗುರುತಿಸುಕೊಂಡು ಆ ಗುರುತಿಸುವಿಕೆಯನ್ನು ಬರಹವನ್ನು ಮೊನಚುಗೊಳಿಸಲು ಉಪಯೋಗಿಸಿಕೊಳ್ಳಿ..
ಇಷ್ಟೇ ನನ್ನ ಪುಟ್ಟ ಪುಟ್ಟ ಮಾತುಗಳು!
****
ಅರೆ ಗುರುಗಳೇ ಎಷ್ಟು ಚುಟುಕಾಗಿ.. ಅಗಸ್ತ್ಯರು ಒಂದು ಬೊಗಸೆಯಲ್ಲಿ ಶರಧಿಯನ್ನೇ ಆಪೋಶನ ಮಾಡಿದಂತೆ.. ಎಷ್ಟು ಸರಳವಾಗಿ ಮನಮುಟ್ಟುವಂತೆ ಹೇಳಿಬಿಟ್ಟಿರಿ.. ಧನ್ಯವಾದ ಗುರುಗಳೇ ಎನ್ನುತ್ತಾ ಸುತ್ತಲೂ ನೋಡಿದೆ..
ಅಲ್ಲಿ ಶಿವ ಪಾರ್ವತಿಯರು ಸುಬ್ರಮಣ್ಯ ಮತ್ತು ಗಣಪನಿಗೆ ಒಂದು ಪರೀಕ್ಷೆ ಇಟ್ಟಿದ್ದರು... ಮೂರು ಲೋಕವನ್ನು ಸುತ್ತಿ ಸರಸ್ವತಿಯ ದರ್ಶನ ಮಾಡಿ ಎಂದರು..
ಸುಬ್ರಮಣ್ಯ ಹಿಂದೆ ಇದೆ ರೀತಿ ಮಾಡಿದಂತೆ ಮಾಡದೆ.. ಸೀದಾ ಅಪ್ಪ ಅಮ್ಮನನ್ನು ಸುತ್ತಿ ಮೂರು ಲೋಕ ಸುತ್ತಿ ಬಂದೆ.. ನೀವೇ ನನಗೆ ಮೂಲೋಕ.. ನೀವೇ ನನಗೆ ಅಕ್ಷರ ಕಳಿಸಿದ ಗುರುಗಳು ಅಂದಾಗ.. ಯಥಾ ಪ್ರಕಾರ ಗಣಪ.. ವಿಶಿಷ್ಟ ರೀತಿಯ ಆಕಾರಕ್ಕೆ ಅಷ್ಟೇ ಅಲ್ಲದೆ ವಿಶಿಷ್ಟ ಚಿಂತನೆಗೂ ಹೆಸರಾದ ಹಾಗೆ.. ತಕ್ಷಣ ಬ್ಲಾಗ್ ಲೋಕದ ವಾಟ್ಸಾಪ್ ಗ್ರೂಪ್ ನೋಡಿ.. ಅಜಾದ್ ಸರ್ ಅವರು ಕೊಟ್ಟ ಜೂಮ್ ಕೊಂಡಿ ಒತ್ತಿದ ತಕ್ಷಣ.. ಪ್ರಪಂಚದ ನಾನಾ ಮೂಲೆಯಿಂದ ಅಕ್ಷರಗಳ ನುಡಿಯರ್ಚನೆ ಮಾಡುತ್ತಿರುವ ಅನೇಕ ಬರಹಗಳ ಸಮೂಹವೇ ಸಿಕ್ಕಿತು.. ಇವರೇ ಅಲ್ಲವೇ ಅಕ್ಷರ ಪುತ್ರರು ಎಂದು ಗಣಪ ಅದನ್ನೇ ಕಂಡು ನಮಿಸಿದಾಗ.. ಸುಬ್ರಮಣ್ಯಾದಿಯಾಗಿ ಶಿವ ಶಕ್ತಿಯರ ಜೊತೆಯಲಿ ಇಡೀ ದೇವ ಪರಪಂಚವೆ ನಮಿಸಿತು.. !
**
ಹೌದು ಇದು ಉತ್ಪ್ರೆಷೆಯಲ್ಲ.. ಇದೊಂದು ಅದ್ಭುತ ಲೋಕ.. ಈ ಬ್ಲಾಗ್ ಲೋಕದ ಕಾನನದಲ್ಲಿ ಅರಳಿದ ಸುಮಗಳು ಒಂದುಗೂಡಿ ಅಕ್ಷರೋದ್ಯಾನದಲ್ಲಿ ಮತ್ತೆ ಅರಳುತ್ತಿರುವ ಸುಂದರ ಸಮಯ.
ಎಲ್ಲರೂ ಕಿವಿಗೊಟ್ಟು ಕೇಳಿದರು..
ಸಂತಸ ಅರಳುವ ಸಮಯ.. ಮರೆಯೋಣ ಚಿಂತೆಯ (ಇದು ಬ್ಲಾಗ್ ಲೋಕದ) ಇದು ರಮ್ಯಾ ಚೈತ್ರ ಕಾಲ ಇದು ಬ್ಲಾಗ್ ಚೈತ್ರ ಕಾಲ
ಬನ್ನಿ ಮತ್ತೆ ಬ್ಲಾಗಿಸೋಣ.. ಬ್ಲಾಗಿಸೋಣ.. !
****
ಈ ಲೋಕಕ್ಕೆ ದಾಂಗುಡಿಯಿಟ್ಟ
ಸುನಾಥ್ ಕಾಕಾ
ಅಜಾದ್ ಸರ್
ಮಾಧವ್
ಶ್ರೀನಿಧಿ
ಅಮಿತ ರವಿಕಿರಣ್
ದಿನಕರ್
ಗುರು ಪ್ರಸಾದ್
ರಂಗಸ್ವಾಮಿ ಜೆ ಬಿ
ಜಯಲಕ್ಷ್ಮಿ ಪಾಟೀಲ್
ಮಹಿಮಾ
ಪ್ರದೀಪ್
ರಮಾನಾಥ್
ರೂಪ ಸತೀಶ್
ಸವಿತಾ
ಸುಗುಣ
ಮಹೇಶ್
ವನಿತಾ
ಈ ಸುಮಗಳ ಜೊತೆಯಲ್ಲಿ ಉದ್ಯಾನವನದಲ್ಲಿ ನಲಿದ ಸುಂದರ ಅನುಭವ ನನ್ನದು..
ಕಿರುಪರಿಚಯ.. ಅವರುಗಳು ರಚಿಸಿದ ಕವನಗಳು, ಅನುಭವಗಳು ಎಲ್ಲವೂ ದೊಡ್ಡ ಬಾಳೆಯೆಲೆಯಲ್ಲಿ ಬಡಿಸಿದ ಮೃಷ್ಟಾನ್ನ ಭೋಜನದಂತೆ ಸೊಗಸಾಗಿತ್ತು.. ಆನ್ಲೈನ್ ಆಗಿದ್ದರಿಂದ ಚಿತ್ರಗಳು ಇರಲಿಲ್ಲ.. ಆದರೆ ಭಾಗವಹಿಸಿದ ಹೆಸರುಗಳು ಮನದಲ್ಲಿಯೇ ಅಚ್ಚಳಿಯದ ಅನುಭವವನ್ನು ಮೂಡಿಸಿದೆ..
ಎಂದರೋ ಮಹಾನುಭಾವುಲು ಅಂದರೀಕಿ ವಂದನಮು... !