ಹದಿಮೂರನೇ ದಿನವಾಗಿತ್ತು.. ಮನಸ್ಸು ಕದಡಿದ ಕೆರೆಯ ನೀರಾಗಿತ್ತು. ನಮ್ಮ ಜೊತೆಯಲ್ಲಿಯೇ ಇದ್ದ ನದಿ ಕಡಲು ಸೇರಿ ದಿನಗಳು ಉರುಳಿ ಹೋಗಿದ್ದವು..
ಬೈಕಿನಲ್ಲಿ ಅಮ್ಮನ ಮನೆಗೆ ಬರುತ್ತಿದ್ದೆ.. ಮನೆಯ ಹತ್ತಿರ ಬಂದು ಮಾಮೂಲಿ ಅಭ್ಯಾಸದಂತೆ ತಲೆ ಎತ್ತಿ ನೋಡಿದೆ.. ಬಾಲ್ಕನಿ / ಮೆಟ್ಟಿಲ ಹತ್ತಿರ.. ಇಲ್ಲವೇ ಅಡಿಗೆ ಮನೆಯ ಪೋರ್ಟಿಕೋದಲ್ಲಿ ಕಾಣುತಿದ್ದ ದೃಶ್ಯ ಕಾಣಲಿಲ್ಲ..
ಆದರೆ ಒಮ್ಮೆ ಗಾಬರಿಯಾದೆ.. ಮೈಯೆಲ್ಲಾ ಜುಮ್ ಎಂದಿತು.. ಸಣ್ಣಗೆ ಬೆವರು.. ನೋಡಿದರೆ ಅಮ್ಮ ಉಡುತಿದ್ದ ಸೀರೆಯಲ್ಲಿ ಒಂದು ಆಕೃತಿ ಓಡಾಡುತ್ತಿದ್ದ ದೃಶ್ಯ.. ಅದು ಇನ್ನೂ ಬೆಳಗಿನ ಜಾವ ಅಷ್ಟೊಂದು ಬೆಳಕು ಹರಿದಿರಲಿಲ್ಲ.. ಸಣ್ಣಗೆ ಬೆನ್ನು ಹುರಿಯಲ್ಲಿ ನಡುಕ.. ತೀಕ್ಷ್ಣವಾಗಿ ಗಮನಿಸಿದೆ..
ಅರೆ.. ಅಮ್ಮ ಸಾಮಾನ್ಯವಾಗಿ ಉಡುತಿದ್ದ ಸೀರೆಯಲ್ಲಿ ಅಕ್ಕ ಓಡಾಡುತಿದ್ದಳು.. ಭಗವಂತನ ಲೀಲೆಯೇ ಹಾಗೆ ಅಲ್ಲವೇ.. ಸದಾ ಅಮ್ಮ ಇರೋಕೆ ಆಗೋಲ್ಲ ಅಂತ ಅಕ್ಕನ ರೂಪದಲ್ಲಿ ಅಮ್ಮ ನಿಂತಿರುತ್ತಾಳೆ..
ಇದೆಲ್ಲಾ ನೆಡೆದದ್ದು ಹತ್ತು ಸೆಕೆಂಡುಗಳಲ್ಲಿ ..
ಆಗಸದತ್ತ ನೋಡಿದೆ.. ಅಮ್ಮನ ಫೋಟೋದಲ್ಲಿರುವ ಅದೇ ನಗು ಮೊಗ ಕಾಣಿಸಿತು.. ಬಾಪ್ಪಾ ಅಂತ ಕರೆದ ಅನುಭವ.. ಕಣ್ಣು ತುಂಬಿ ಬಂದಿತ್ತು..
ಹಾಗೆ ಕಣ್ಣೊರೆಸಿಕೊಂಡು.. ಮುಂದಿನ ಕಾರ್ಯಗಳ ಕಡೆಗೆ ಗಮನ ಕೊಟ್ಟೆ..
ಹೌದು ಅಮ್ಮನ ನೆನಪು.. ಅರೆ ನೆನಪೆಲ್ಲ ಅವರ ಛಾಯೆ ಹೋಗೋಲ್ಲ.. ಹೋಗೋಕೆ ಸಾಧ್ಯವೂ ಇಲ್ಲ..
ಅದಕ್ಕೆ ಅಲ್ಲವೇ ಅಣ್ಣಾವ್ರ ಚಿತ್ರದಲ್ಲಿ ಹಾಡಿರುವುದು.. ಸಾವಿರ ನದಿಗಳು ಸೇರಿದರೇನೂ ಸಾಗರಕೆ ಸಮನಾಗುವುದೇನು.. ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು..
ನಲವತ್ತೈದು ದಿನಗಳು ಕಳೆದೆ ಹೋದವು.. ಅಮ್ಮನ ಪಯಣ ಸ್ವರ್ಗದತ್ತ ಸಾಗುತ್ತಲಿದೆ.. ತನ್ನ ಪೂರ್ವಜರನ್ನು.. ಅಲ್ಲಿರುವ ಅನೇಕ ಬಂಧು ಮಿತ್ರರರನ್ನು.. ತನಗೆ ಕುಂಕುಮ ಭಾಗ್ಯ ಕೊಟ್ಟ ಯಜಮಾನರನ್ನು ಕಾಣಲು ಹೋಗುತ್ತಿದ್ದಾರೆ..
ಶ್ರೀಕಾಂತ ಅಂದು ನನ್ನ ಮನೆಯಿಂದ ಹೊರಟಾಗ ಒಂದು ವಿಶೇಷ ಘಟನೆ ನೆಡೆಯಿತು.. ನಿನಗೆ ಅರ್ಥವಾಗಿದೆ.. ಅದನ್ನು ನೀನು ಬರೆಯುತ್ತೀಯ ಅಂತ ಕಾಯುತ್ತಿದ್ದೇನೆ..
ಅಮ್ಮ ಬರೆಯುವೆ.. ಒಂದು ವಿಶೇಷ ದಿನಕ್ಕೆ ಕಾಯುತಿದ್ದೆ.. ಇಂದಿಗೆ ನಲವತ್ತೈದು ದಿನವಾಯಿತು.. ಹಾಗೆ ಕೆಲಸ ಕಾರ್ಯಗಳ ನಡುವೆ.. ಕೊಂಚ ಬರವಣಿಗೆ ಕೂಡ ಕುಂಟುತ್ತಿತ್ತು.. ಅದಕ್ಕೆ ಇವತ್ತು ಸಮಯ ಮಾಡಿಕೊಂಡು ಬರೆಯುತ್ತಿದ್ದೇನೆ..
ಹಾ ಸರಿ.. ಓದಲು ಕಾಯುತ್ತಿರುವೆ..
*******ಆದಿತ್ಯ ಜನಿಸಿದಾಗ ಮನೆಯಲ್ಲಿ ಸಂಭ್ರಮ.. ಅಪ್ಪ ಅಮ್ಮನಿಗೆ ತಮ್ಮ ಮುಂದಿನ ಪೀಳಿಗೆಯ ಸರದಾರ ಬಂದ ಎಂಬ ಸಂಭ್ರಮ.. ನಮಗೆ ಪುಟ್ಟ ಮಗು.. ಅದರ ತುಂಟಾಟಗಳನ್ನು ನೋಡುವ ತವಕ.. ಅಪ್ಪ ಆದಿತ್ಯನನ್ನು ಎತ್ತಿಕೊಂಡ ಫೋಟೋ ಇನ್ನೂ ಹಸಿರಾಗಿದೆ..
ಸದಾ ತುಂಟತನಕ್ಕೆ ಹೆಸರಾಗಿದ್ದ ಆದಿತ್ಯ.. ಅಜ್ಜಿಯನ್ನು ರೇಗಿಸುತ್ತಲೇ ಇರುತಿದ್ದ.. ಬಾಲ್ಯದಿಂದಲೂ ಅಜ್ಜ ಅಜ್ಜಿಯ ಬಗ್ಗೆ ವಿಶೇಷ ಗೌರವ ಇದ್ದರೂ.. ರೇಗಿಸೋದನ್ನು ಬಿಡುತ್ತಿರಲಿಲ್ಲ.. ಹಲವಾರು ಬರಿ ಅಜ್ಜಿ ಥೂ ಹೋಗಾಚೆ ಅಂತ ಹುಸಿಮುನಿಸಿನಿಂದ ಬಯ್ದಿದ್ದರು ಮತ್ತೆ ಕೆನ್ನೆ ಹಿಂಡುವುದು, ಮೊಸರು ಹಾಕುವುದು, ಅನ್ನ ಹಾಕುವುದು, ನೀರು ಕುಡಿ ಅಜ್ಜಿ ಅಂತ ಕುಡಿಸುವುದು, ಕಾಫಿ ಕುಡಿಯಬೇಡ ಅನ್ನೋದು.. ಬಿಪಿ ಮಾತ್ರೆ ತಗೊಂಡ್ಯಾ.. ಅಂತ ಕಾಳಜಿ ವಹಿಸುವುದು ಮಾಡುತ್ತಲೇ ಇರುತ್ತಿದ್ದ..
ಹಲವಾರು ಬಾರಿ ಆದಿತ್ಯ ಎಷ್ಟು ಕಾಳಜಿ ತೋರಿಸುತ್ತಾನೆ ಅಂತ ನನ್ನ ಬಳಿ ಹೇಳಿದ್ದರು.... ಬಿಂದಾಸ್ ಸ್ವಭಾವದಲ್ಲೂ ಒಂದು ರೀತಿಯ ಪ್ರೀತಿ ಇರುತ್ತಿತ್ತು ಈ ಹುಡುಗನಲ್ಲಿ..
ಪುರೋಹಿತರು ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು.. ಎಲ್ಲವೂ ಕಡೆ ಹಂತಕ್ಕೆ ಬರುತಿತ್ತು.. ಬಂದವರೆಲ್ಲ ಅಂತಿಮ ನಮನ ಸಲ್ಲಿಸಲು ಸಿದ್ಧವಾಗಿದ್ದರು..ಅಕ್ಕ ಬಿಕ್ಕಿ ಬಿಕ್ಕಿ ಅಳುತ್ತಲೇ ತನ್ನ ಗೌರವ ಸಲ್ಲಿಸಿದರು..
"ಕೃಷ್ಣವೇಣಿ ಇರೋತನಕ ಚೆನ್ನಾಗಿ ನೋಡಿಕೊಂಡಿದ್ದೀಯ..ಕಳಿಸುವಾಗ ಅಳಬಾರದು.. ಎಷ್ಟು ದಿನ ಇದ್ದರೂ ಇರಬೇಕು ಅನ್ನುವಂತಹ ಪದಾರ್ಥ "ಅಮ್ಮ" ಅನ್ನೋದು ಆದರೆ ಏನು ಮಾಡೋದು.. ವಿಧಿ ಬರಹ.. ಧೈರ್ಯ ತಂದುಕೊ ಎನ್ನುತ್ತಾ ಅಮ್ಮನ ಸೋದರತ್ತೆಯ ಮಗ ಸತೀಶ ಅಕ್ಕನನ್ನು ಸಮಾಧಾನ ಪಡಿಸಿದ..
ಇಲ್ಲಿ ಸತೀಶನ ಬಗ್ಗೆ ಒಂದೆರಡು ಮಾತುಗಳು.. ತನ್ನ ಬಂಧು ಮಿತ್ರರ ಮನೆಯಲ್ಲಿ ಶುಭ ಅಶುಭ ಯಾವುದೇ ಕಾರ್ಯವಿದ್ದರೂ ಇವನ ಉಪಸ್ಥಿತಿ ಇದ್ದೆ ಇರುತ್ತದೆ.. ಕೊರೊನ .. ಅದು ಇದು ಎನ್ನುವುದನ್ನು ಲೆಕ್ಕಿಸುವುದೇ ಇಲ್ಲ.. ಮೊದಲು ಅವರ ಸಂತಸ ದುಃಖದ ಕ್ಷಣಗಳಲ್ಲಿ ಜೊತೆಯಾಗಿರಬೇಕು.. ಆಮೇಲೆ ಮುಂದಿನದು.. ಎನ್ನುವ ಮನೋಭಾವ ಅವನದು.. ಜೊತೆಯಲ್ಲಿ ಅವನಿಗೆ ಅಸಾಧ್ಯವಾದ ಬೆನ್ನು ನೋವು ಇದ್ದರೂ ಅದನ್ನು ಲೆಕ್ಕಿಸದೆ.. ಎಲ್ಲರಿಗೂ ಸಹಕಾರ ನೀಡುವುದು.. ನಿಜಕ್ಕೂ ಶ್ಲಾಘನೀಯ..
ಅದೇ ರೀತಿ ಅಮ್ಮನ ಸೋದರಮಾವನ ಮಗ.. ಶಾಮಣ್ಣ.. ನಿಮ್ಮ ಅಮ್ಮ ಅನ್ನಪೂರ್ಣೇಶ್ವರಿ ಕಣೋ ಶ್ರೀಕಾಂತ ಅನ್ನುತ್ತಿದ್ದ ಸದಾ.. ಅವನು ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೆ ಬರುತ್ತಾನೆ.. ಜೊತೆಯಲ್ಲಿ ಇದ್ದು ಧೈರ್ಯ ಕೊಡುತ್ತಾನೆ.
ಇವರಿಬ್ಬರ ಬದುಕು ಸುಂದರವಾಗಿರಲಿ ಇದು ನನ್ನ ಅಮ್ಮನ ಆಶೀರ್ವಾದ..
ಬಂಧು ಮಿತ್ರರು ಬಂದು ಅಂತಿಮ ನಮನ ಸಲ್ಲಿಸಿ ಆಯ್ತು.. ಅಮ್ಮನನ್ನು ಆಂಬುಲೆನ್ಸ್ ನಲ್ಲಿ ಮಲಗಿಸಿದೆವು.. ಮಡಕೆ ಹಿಡಿದುಕೊಂಡ ಅಣ್ಣ .. ಅವನ ಹಿಂದೆ ಬಂದ ನಾನು. ಅಳುತ್ತಲೇ ಗಾಡಿ ಹತ್ತಿದ ತಮ್ಮ ಮುರುಳಿ.. ನಮ್ಮ ಎದುರಲ್ಲಿ ಸಾಹಸಮಯ ಬದುಕು ನಿಭಾಯಿಸಿ ನಮ್ಮನ್ನೆಲ್ಲ ಒಂದು ದಡಕ್ಕೆ ಸೇರಿಸಿ.. ಕಡೆಗೆ ಸಾಕು ಕಣೋ ಅಂತ ಹೊರಟಿದ್ದ ಅಮ್ಮ..
ಇನ್ನೇನು ಗಾಡಿ ಹೊರಡಬೇಕು... ಆದಿತ್ಯ ಓಡಿ ಬಂದು ಆಂಬುಲೆನ್ಸ್ ಹತ್ತಿದ.. ನಮಗೆ ಬೇಡ ಎನ್ನಲು ಮನಸ್ಸಿಲ್ಲ.. ಆದರೆ ಏನು ಹೇಳೋದು ಅಂತ ಸುಮ್ಮನೆ ಕುಳಿತಿದ್ದೆವು..
ಕಣ್ಣಲ್ಲಿ ನೀರು ತುಂಬಿಕೊಂಡು.. ಮೆಲ್ಲಗೆ ಅಜ್ಜಿಯ ಕೆನ್ನೆಯನ್ನು ಒಮ್ಮೆ ಹಿಂಡಿ.. ಕೆನ್ನೆಯನ್ನು ಸವರಿ ಇಳಿದು ಹೋದ..
ನಾನು ನಾಲ್ಕೈದು ಲೇಖನಗಳನ್ನು ಬರೆದಿರಬಹುದು.. ನಾವೆಲ್ಲರೂ ಒಂದಷ್ಟು ಕಣ್ಣೀರು ಹಾಕಿ..ಅಗಲಿದ ಆ ಹಿರಿಯ ಜೀವದ ಬಗ್ಗೆ ಒಂದಷ್ಟು ಅಭಿಮಾನದ ಮಾತುಗಳನ್ನು ಆಡಿರಬಹುದು.. ಆದರೆ ಆ ಒಂದು ಸ್ಪರ್ಶದಲ್ಲಿ ಆದಿತ್ಯ ಎಲ್ಲರ ಭಾವನೆಗಳನ್ನು ಹೊತ್ತ ಸರದಾರನಾಗಿ ಬಿಟ್ಟ..
ಥೋ ಸುಮ್ಮನಿರೋ ಆದಿತ್ಯ.. ಯಾಕೆ ಹಾಗೆ ಗೋಳು ಹುಯ್ಕೋತೀಯೋ ಅಂತ ಅಜ್ಜಿ ಕೂಗಿದ ಹಾಗೆ ಅನಿಸಿತು.
***
ವಾಹ್ ಸೊಗಸಾಗಿದೆ ಶ್ರೀಕಾಂತ.. ನೀನು ಇದರ ಬಗ್ಗೆ ಯಾಕೆ ಬರೆದಿಲ್ಲ ಅಂತ ಯೋಚಿಸುತ್ತಿದ್ದೆ.. ಈಗ ಸಮಾಧಾನ ಆಯ್ತು.. ಸರಿ ನೀವುಗಳೆಲ್ಲ ಗುರುಗಳ ಆಜ್ಞಾನುಸಾರ ಕಾರ್ಯಗಳನ್ನು ಮಾಡುತ್ತಿದ್ದೀರಾ.. ನನ್ನ ಆಶೀರ್ವಾದ ಸದಾ ಇರುತ್ತೆ.. ಆದಿತ್ಯನಿಗೆ ಈ ಮೂಲಕ ಜನುಮದಿನಕ್ಕೆ ತಡವಾದ ಶುಭಾಶಯಗಳನ್ನು ತಿಳಿಸು.. ಅವತ್ತೇ ಆಶೀರ್ವಾದ ಮಾಡಬೇಕಿತ್ತು.. ಆದರೆ ನಿನ್ನ ಬರಹ ಬರಲಿ ಅಂತ ಕಾಯ್ತಾ ಇದ್ದೆ ಕಣೋ..!
ಆಗಲಿ ಅಮ್ಮ.. ಅವನಿಗೆ ಖಂಡಿತ ಆಶೀರ್ವದಿಸುತ್ತೇನೆ.. ಮೊದಲನೇ ಮೊಮ್ಮಗ.. ಅಲ್ಲವೇ.. ಪ್ರೀತಿ ತುಸು ಹೆಚ್ಚೇ..
ಮತ್ತೆ ಬರುವೆ.. ಹದಿನಾಲ್ಕು ದಿನಗಳ ಯಾತ್ರೆಯನ್ನೊಮ್ಮೆ ಮೆಲುಕು ಹಾಕೋಣ.. ಏನಂತೀಯಾ.. !!!
ನೀವು ಕಟ್ಟಿಕೊಡುವ ರೀತಿಯಲ್ಲೇ ಇಡೀ ಕಥನವು ದೃಶ್ಯ ರೂಪಕ್ಕೆ ಪರಿವರ್ತಿತವಾಗುತ್ತಾ ಹೋಗುತ್ತದೆ.
ReplyDeleteಈ ಐದೂ ಭಾಗಗಳನ್ನು ಓದಿದೆ. ಮನಸಿಗೆ ನಾಟಿತು.
ಮೊದಲು ಮನಸ್ಸಿಗೆ ಹಿಡಿಸಿದ್ದು ತಾವು ಇತ್ತ ಶೀರ್ಷಿಕೆಯಲ್ಲಿನ ಧೀಶಕ್ತಿ.
Very emotional, Shrikant. ಕಣ್ಣೀರು ತರಿಸುತ್ತದೆ.
ReplyDelete