Sunday, August 23, 2020

ಸವಿತಾರ್ಥಕತೆ ಒಂದು ಬದುಕು

ಸುಮಾರು ಮೂವತ್ತು ವರ್ಷಗಳ ಹಿಂದೆ.. ದೂರದರ್ಶನದಲ್ಲಿ ಅಮಿತಾಭ್ ಅವರ ತ್ರಿಶೂಲ್ ಸಿನಿಮಾ ನೋಡುತಿದ್ದೆ.. ಅಮ್ಮನ ಆಸೆ ನೆರವೇರಿಸೋಕೆ.. ಸಂಜೀವ್ ಕುಮಾರ್ ಬಳಿ ಒಂದು ನಿವೇಶನ ಖರೀದಿ ಮಾಡಲು ಬರುತ್ತಾರೆ.. ಚಟಪಟ ಮಾತುಗಳು ಆಗುತ್ತವೆ.. ಸಂಜೀವ್ ಕುಮಾರ್ ಅವರ ಒಂದು ಮಾತಿಗೆ ಸಿಡಿದು ಅಮಿತಾಭ್ ಹೇಳುವ ಮಾತು.. 

"ಮೇ ಪಾಂಚ್ ಲಾಖ್ ಕ ಸೌಧಾ ಕರ್ನೆ ಆಯಾ ಹೂ.. ಮಗರ್ ಜೆಬ್ ಮೇ ಪಾಂಚ್ ಬೂಟಿ ಕವಡಿಯ ಭೀ ನಹಿ ಹೇ.. !"




ತುಂಬಾ ಪವರ್ ಫುಲ್ ಅನ್ನಿಸ್ತು ಈ ಸಂಭಾಷಣೆ.. ಮೈ ಎಲ್ಲಾ ಜುಮ್ ಅನ್ಸಿತ್ತು .. ಅಂದಿನಿಂದ ಇವತ್ತಿನ ತನಕ ಲೆಕ್ಕವಿಲ್ಲದಷ್ಟು ಬಾರಿ ಈ ಸಿನಿಮಾ ಇದೆ ಸಂಭಾಷಣೆಗಾಗಿ ನೋಡಿದ್ದೀನಿ.. ಅಬ್ಬಬ್ಬಾ ಅನ್ನಿಸುತ್ತೆ.. 

ನನ್ನ ಮನೆ ಮಾಡುವ ಬಯಕೆ ಕೂಡ ಇದೆ ಚಿತ್ರದ ಸಂಭಾಷಣೆಯಂತೆ ನೆಡೆಯಿತು.. ಅಕ್ಕ ತಾನು ಓಡಾಡುವ ಹಾದಿಯಲ್ಲಿ ಕಂಡ ಒಂದು ಜಾಹಿರಾತನ್ನು ನೋಡಿ.. ನನ್ನ ಬಲವಂತ ಮಾಡಿ ಮನೆಯನ್ನು ತೋರಿಸಿದಳು.. ಅಲ್ಲಿದ್ದ ನಿರ್ವಾಹಕಿ ದಿವ್ಯಾ ಮೇಡಂ ಮತ್ತು ಶ್ರೀ ಸಬರೀಶ್ ಕೂಡ ನನಗೆ ಅತ್ಯುತ್ತಮ ಸಹಕಾರ ನೀಡಿ ಮನೆಯನ್ನು ನನದಾಗಿಸಿಕೊಳ್ಳಲು ಸಹಾಯಮಾಡಿದರು... 



ಶ್ರೀ ರಾಮ ಲಂಕೆಗೆ ಸೇತುವೆ ಕಟ್ಟುವಾಗ ವಾನರ ಸೇನೆಯಲ್ಲದೆ.. ಅದೆಷ್ಟೋ ಕಾಣದ ಕೈಗಳು ಸಹಾಯ ಮಾಡಿದ ಹಾಗೆ ನನ್ನ ಭುಜಕ್ಕೆ ಭುಜ ಕೊಟ್ಟು ಸವಿತಾಳ ಕನಸನ್ನು ನನಸು ಮಾಡಿದ ಕೀರ್ತಿ ಅವರಿಗೆಲ್ಲಾ ಸಲ್ಲುತ್ತದೆ.. 





ಯಾವ ಫ್ಲೋರ್ ಅಂದಾಗ.. ನನ್ನ ಅದೃಷ್ಟ ಸಂಖ್ಯೆ ಎಂಟಕ್ಕೆ ಬಂದು ನಿಂತೇ.. ಪೂರ್ವ ದಿಕ್ಕಿನ ಬಾಗಿಲು ಒಳಿತು ಅಂತ ನನ್ನ ಮಾನಸಿಕ ಗುರು ಶ್ರೀ ನಾಗಭೂಷಣ ಹೇಳಿದರು.. 

ಅಂದುಕೊಂಡದ್ದಕ್ಕಿಂತ ಸರಳವಾಗಿ, ಸುಸೂತ್ರವಾಗಿ ಮನೆಯ ರಿಜಿಸ್ಟ್ರೇಷನ್ ಆಯಿತು.. ಹಾಗೂ ಹೀಗೂ ನನ್ನ ಮಗ ಎಂಟಕ್ಕೆ ದಂಟು ಅಂದ ಅನ್ನೋ ರೀತಿಯಲ್ಲಿ ಬೆಂಗಳೂರಿನ ಈ ಮಹಾನಗರಿಯಲ್ಲಿ ನಮ್ಮ ಅಪ್ಪನ ಸಾಹಸಿ ಬದುಕಿಗೆ ಸಾಕ್ಷಿಯಾಗಿ ಇನ್ನೊಂದು ಸದನ ನೆಲೆ ನಿಂತಿತು.. 

ನನ್ನ ಅಕ್ಕನ ಮನೆಯ ಗೃಹ ಪ್ರವೇಶವಾದಾಗ.. ಪೂಜೆ ಮಾಡಿಸಿದ ಗುರುಗಳು ಕೇಳಿದರು.. ಶ್ರೀಕಾಂತ್ ನಿಮ್ಮ ಮನೆ ಯಾವಾಗ ಅಂತ.. ಅರಿವಿಲ್ಲದೆ ಹೇಳಿದ್ದೆ.. ಗುರುಗಳೇ ಸಧ್ಯದಲ್ಲಿಯೇ.. ಆದರೆ ಮನೆಯ ಹೆಸರು "ಅನುಗ್ರಹ ಸದನ - ೨" ಅಂತಾನೆ ಇಡೋದು ಅಂದಿದ್ದೆ.. ಸವಿತಾ ಮೆಲ್ಲನೆ ತಲೆ ಮೇಲೆ ಕುಟ್ಟಿದ್ದಳು.. 

ಯಾಕೆ ಶ್ರೀಕಾಂತ್ ಆ ಹೆಸರು ಅಂತ ಗುರುಗಳು ಕೇಳಿದಾಗ 

ನಮ್ಮ ವಿಜಯನಗರದ ಬಾಡಿಗೆ ಮನೆಯ ಹೆಸರು "ಅನುಗ್ರಹ ಸದನ" ಹದಿನಾಲ್ಕು ವರ್ಷ ಆ ಹೆಸರು ಉಪಯೋಗಿಸಿ ರೂಡಿಯಾಗಿ ಅಭಿಮಾನ ಉಕ್ಕಿತ್ತು.. ಅಕ್ಕನ ಮನೆಗೆ ಹೆಸರಿಡಬೇಕು ಎಂದು ಕೇಳಿದಾಗ ಅರಿವಿಲ್ಲದೆ ಬಂದ ಹೆಸರು.. "ಅನುಗ್ರಹ ಸದನ" ಹಾಗಾಗಿ ಆ ಹೆಸರಿನ ಮೇಲಿನ ಲವ್.. ಮುಗಿಯಬಾರದು ಎಂದು.. ಇದಕ್ಕೆ ಅನುಗ್ರಹ ಸದನ - ೨ ಎಂದು ಹೆಸರಿಡಬೇಕು ಎಂದು ನಿರ್ಧರಿಸಿದ್ದೆವು.. ಕೂಸು ಹುಟ್ಟೋಕೆ ಮುಂಚೆನೇ ಕುಲಾವಿ ಅಂತಾರಲ್ಲ ಹಾಗೆ ಇದು ಕೂಡ ಎಂದಿದ್ದೆ.. 

ಗುರುಗಳು ನಗುತ್ತಾ.. ನಿಮ್ಮ ಆಸೆ ಖಂಡಿತ ಈಡೇರುತ್ತೆ.. ಶುಭವಾಗಲಿ ಎಂದು ಹಾರೈಸಿದ್ದರು.. 

ಆದರೆ ಸವಿತಾಳ ಕನಸಾದ ಈ ಗೃಹ.. ನನಸಾಗುವ ವೇಳೆಗೆ ಅವಳು ಹಿರಿಯರನ್ನು ಸೇರಲು ನನ್ನನ್ನು ಬದುಕಿಸಿ ಹೊರಟೆ ಬಿಟ್ಟಿದ್ದಳು.. ಹಾಗಾಗಿ ಮನೆಯ ಹೆಸರಾಯಿತು 

ಸವಿತಾರ್ಥಕತೆ 
(ಅನುಗ್ರಹ ಸದನ - ೨)


ಶ್ರೀ ಮನೆಯೇನೋ ಆಯಿತು.. ಅದಕ್ಕೆ ಚಂದದ ಹೆಸರು ಇಟ್ಟಿರಿ.. ಈ ಮನೆಯೊಳಗೇ ಸದಾ ಶಾಂತಿ ನೆಮ್ಮದಿ ನೆಲಸಿರಲಿ ಎಂದು ಆಶೀರ್ವದಿಸುತ್ತೇನೆ.. ಆದರೆ ಮನೆಗೆ ದೀಪ ಬೆಳಗುವ ಒಂದು ಜೊತೆ ಬೇಕು ಶ್ರೀ.. ಮನಸ್ಸು ಮಾಡಿ ಎಂದಳು ಸವಿತಾ.. 

ತುಂಬಾ ಯೋಚನೆ ಮಾಡಿ.. 

ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ  
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು

ಬೇಡ ಅಂತ ಶುರುವಾಗಿ ಕಡೆಗೆ ಬಂದು ನಿಂತದ್ದು ಬೇಕು ಅಂತ.. 

ಮನೆಯವರೆಲ್ಲರ ಪ್ರೋತ್ಸಾಹ.. ಗೆಳೆಯ ಗೆಳತಿಯರ ಒತ್ತಾಯ.. ಎಲ್ಲವೂ ಸಾಲಾಗಿ ನಿಂತು ಜೊತೆಗೆ ನನ್ನ ಮುದ್ದಿನ ಗೆಳತೀ ಶೀತಲ್ ತನ್ನ ಒಪ್ಪಿಗೆಯ ಮುದ್ರೆಯನ್ನೊತ್ತಿದಾಗ ನೆಡೆದು ಬಂದವಳೇ ಸೀಮಾ.. ಎಲ್ಲಾ ಸೀಮೆಯನ್ನು ದಾಟಿ....ಮಗಳು ಐಶ್ವರ್ಯ ಜೊತೆ ನನ್ನ ಬದುಕಿಗೆ ಹೆಜ್ಜೆ ಇಟ್ಟಳು.. 



ಶ್ರೀವಿತಲ್ ಜೊತೆ ಸೀಮೈಶ್ವರ್ಯ ಸೇರಿಕೊಂಡು "ಸವಿತಾರ್ಥಕತೆ "ಯನ್ನು ಬೆಳಗುವ ಕಾಯಕ ಶುರುವಾಗಿದೆ.. ಸವಿತಾ ಸ್ವರ್ಗದಿಂದ ಈ ತುಂಬು ಸಂಸಾರವನ್ನು ಹರಸುತ್ತಾ ಸದಾ ನಮ್ಮ ಮನದಲ್ಲಿರುತ್ತಾಳೆ.. 

ಮಕ್ಕಳಿಬ್ಬರ ಬದುಕನ್ನು ಕಟ್ಟಿಕೊಟ್ಟು.. ಅವರ ಕನಸನ್ನು ನನಸು ಮಾಡುವುದು ನಮ್ಮ ಮುಂದಿನ ಕಾಯಕ.. 



ಏಶಿಯನ್ ಪೇಂಟ್ಸ್ ಜಾಹಿರಾತಿನಂತೆ.. ಹೊಸ ಮನೆ...  ಹೊಸ ಮಡದಿ...  ಹೊಸ ಸಂಸಾರ ಎಲ್ಲವೂ ಸುಸೂತ್ರವಾಗಿ ಸಾಗಲೆಂದು ಆ  ಭಗವಂತನನ್ನು ಪ್ರಾರ್ಥಿಸುತ್ತಾ.. ನಿಮ್ಮೆಲ್ಲರ ಶುಭ ಹಾರೈಕೆ ಸದಾ ಇರಲಿ ಎಂದು ಪ್ರಾರ್ಥಿಸುವೆ.. !!!

Wednesday, August 5, 2020

ಜೈ ಶ್ರೀರಾಮ್!

ಕಲ್ಲಾಗಿದ್ದ ಅಹಲ್ಯೆ.. ಯೋಚಿಸುವುದನ್ನೇ ಬಿಟ್ಟಿದ್ದಳು.. ನನ್ನನು ಕಲ್ಲು ಮಾಡಿದ್ದು ದೇವರ ಇಚ್ಛೆ.. ಅದನ್ನು ಮುಕ್ತಿಗೊಳಿಸುವುದು ದೇವರ ಇಚ್ಛೆ.. ಅದಕ್ಕೆ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಕಲ್ಲಾಗಿ ಕುಳಿತಿದ್ದಳು. .. 

ಹಣ್ಣಿನ ಮರದ ಕೆಳಗೆ ಬಿದ್ದಿದ್ದ ರುಚಿಯಾದ ಹಣ್ಣನ್ನೆಲ್ಲ ಆರಿಸಿ ಎತ್ತಿಡುತಿದ್ದ ಹಣ್ಣು ಹಣ್ಣು ಮುದುಕಿ ಮನದಲ್ಲಿ ತಳಮಳ ಆದರೆ ಅದನ್ನು ಮೀರಿಸಿ ಜಪಿಸುತಿದ್ದ ರಾಮ ನಾಮ  ಆಕೆಗೆ ಬಲ ನೀಡುತಿತ್ತು .. ಒಂದಲ್ಲ ಒಂದು ದಿನ ತನ್ನ ಹೃದಯದಲ್ಲಿರುವ ಶ್ರೀ ರಾಮ ಪ್ರಭು ಬಂದೆ ಬರುತ್ತಾನೆ ಅಂತ ಆಕೆಯ ಮನ ಹೇಳುತ್ತಲೇ ಇತ್ತು.. 

ಏಟು ಬಿದ್ದು ಮರಣ ಶಯ್ಯೆಯಲ್ಲಿದ್ದರೂ ಕುಟುಕು ಜೀವ ಉಳಿಸಿಕೊಂಡಿದ್ದ ಜಟಾಯುವಿಗೆ ಅರಿವಿತ್ತು ತನ್ನ ಇಷ್ಟ ದೇವತೆ ರಾಮನನ್ನ ನೋಡಿಯೇ ನೋಡುತ್ತೀನಿ ಅಂತ.. 

ಹೀಗೆ ತ್ರೇತಾಯುಗದ ಈ ಮೂವರು ಮಹನೀಯರು ಒಂದು ಯುಗ ದಾಟಿ ಕಲಿಯುಗಕ್ಕೆ ಬರುತ್ತಾರೆ.. 

ತಾನು ಕಲ್ಲಾಗಿದ್ದ ತಾಣವನ್ನು ಅಹಲ್ಯೆ ಹುಡುಕಿ.. ಅರೆ ಇಲ್ಲಿಯೇ ನನಗೆ ಶ್ರೀ ರಾಮ ಶಾಪ ವಿಮೋಚನೆ ಮಾಡಿದ್ದು.. ಈ ಜಾಗ ನನ್ನ ನೆಚ್ಚಿನ ಜಾಗ.. ಶಬರಿ.. ಇಲ್ಲಿಯೇ ಸ್ವಲ್ಪ ಹೊತ್ತು ಕೂತು ಮುಂದಕ್ಕೆ ಹೋಗೋಣ ಅಂತ ಮೂವರು ಕೂತರು.. 

ಜಟಾಯು ಅಲ್ಲಿಯೇ ಇದ್ದ ಒಂದು ಮರದ ಮೇಲೆ ಕೂತು ಅತ್ತಿತ್ತ ನೋಡುತ್ತಾ ಮರವನ್ನೊಮ್ಮೆ ಅಲ್ಲಾಡಿಸಿತು.. ಒಂದಷ್ಟು ಹಣ್ಣುಗಳು ಉದುರಿ ಬಿದ್ದವು.. 

ಹಣ್ಣುಗಳು ಬಿದ್ದ ಸದ್ದಿಗೆ ಶಬರಿ ಅತ್ತ ಕಡೆ ತಿರುಗಿ.. ಆಹಾ ಎಷ್ಟು ಸೊಗಸಾಗಿವೆ ಎಂದು ಒಂದು ಹಣ್ಣನ್ನು ಕಚ್ಚಿದಳು.. ಅಬ್ಬಬ್ಬಾ ಎನ್ನುವಷ್ಟು ಸಿಹಿಯಾಗಿತ್ತು.. ನನ್ನ ಪ್ರಭುವಿಗೆ ಈ ಹಣ್ಣನ್ನು ಕೊಡುವೆ ಎನ್ನುತ್ತಾ ತನ್ನ ಉಡಿಯಲ್ಲಿ ಕಟ್ಟಿಕೊಂಡಳು.. 

ಜಟಾಯು ಹಣ್ಣನ್ನು ಉದುರಿಸಿದ್ದಕ್ಕೆ ಶಬರಿ ಧನ್ಯವಾದ ಹೇಳಿದಳು.. ಜಟಾಯುವಿಗೆ ಖುಷಿಯಾಯಿತು.. ತಾನು ಬಿದ್ದಿದ್ದ ತಾಣವನ್ನು ತನ್ನ ದಿವ್ಯ ದೃಷ್ಟಿಯಿಂದಲೇ ನೋಡುತ್ತಾ ಆ ದಿನದ ಘಟನೆ ನೆನೆಯುತ್ತಾ ಸಂಕಟ ವ್ಯಕ್ತಪಡಿಸಿದಾಗ.. ಅಹಲ್ಯೆ ಮತ್ತು ಶಬರಿ, ಜಟಾಯುವಿಗೆ ಸಮಾಧಾನ ಹೇಳಿದರು.. 

ಮತ್ತೆ ಮೂವರು ಎದ್ದು ನೆಡೆಯುತ್ತಾ ಹೊರಟಾಗ.. ತಂಗಾಳಿ ಬೀಸಿತು.. ಗಾಳಿಯಲ್ಲಿ ತೇಲುತ್ತಾ ಒಂದು ಬಿತ್ತಿ ಪತ್ರ ಹಾರಿ ಬಂದಿತು.... 

ಜಟಾಯು ಗಾಳಿಯಲ್ಲಿ ಹಾರಾಡುತ್ತಿದ್ದ ಬಿತ್ತಿ ಪತ್ರವನ್ನು ಹಾರಿ ಕಚ್ಚಿ ಹಿಡಿದು..  ಅಹಲ್ಯೆಗೆ ತಂದು ಕೊಟ್ಟಿತು.. 

ಅಹಲ್ಯೆ ಮುಖ ಊರಗಲವಾಯಿತು... ಶಬರಿಗೆ ತೋರಿಸಿದಳು.. ಶಬರಿ ಇನ್ನಷ್ಟು ಹಣ್ಣನ್ನು ತನ್ನ ಉಡಿಯಲ್ಲಿ ತುಂಬಿಕೊಂಡು ಉತ್ಸಾಹದಿಂದ ನಿಂತಳು.. ಜಟಾಯು.. ಆಹಾ ಮತ್ತೊಮ್ಮೆ .. ತುಂಬಾ ಸಂತೋಷ ಎನ್ನುತ್ತಾ.. ಉತ್ಸಾಹದಿಂದ ...ಮಾತೆಯರೇ.. ನನ್ನ ಬೆನ್ನ ಮೇಲೆ ಕುಳಿತುಕೊಳ್ಳಿ ಆ ದಿವ್ಯವಾದ ಅನುಭವಕ್ಕೆ ನಾವು ಸಾಕ್ಷಿಯಾಗೋಣ ಎನ್ನುತ್ತಾ ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹಾರಿತು.. 

ಆ ತಾಣಕ್ಕೆ ಬಂದರೆ ಆಗಲೇ ತನ್ನಂತೆ ಹಲವಾರು ಯಂತ್ರ ಹಕ್ಕಿಗಳು ಹಾರಾಡುತ್ತಿದ್ದವು.. "ಜಟಾಯು ಗಾಬರಿ ಬೇಡ.. ಅದು ನಿನ್ನ ಬಾಂಧವರಲ್ಲ.. ಆದರೆ ನಿನ್ನಂತೆ ಇರುವವರು.. ಅವುಗಳನ್ನು ಡ್ರೋನ್ ಎನ್ನುತ್ತಾರೆ.. ಊರಿನ ವಿಹಂಗಮ ದೃಶ್ಯಗಳನ್ನು ಸೆರೆ ಹಿಡಿಯುತ್ತದೆ.. " ಅಹಲ್ಯೆ ತಾಂತ್ರಿಕ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದರ ಫಲ ಜಟಾಯುವಿಗೆ ಗೊಂದಲ ದೂರವಾಯಿತು.. 

ಅಲ್ಲಿಂದ ಸೀದಾ ಇಳಿದದ್ದು ಹನುಮಂತನ ಗುಡಿಯ ಮುಂದೆ.. 

ಅಲ್ಲಿಯೇ ಮರದ ಮೇಲೆ ಕುಳಿತು.. ಮೂವರು ನೆಡೆಯುತ್ತಿದ್ದ ದೃಶ್ಯಾವಳಿಗಳನ್ನು ನೋಡ ತೊಡಗಿದರು.. 

ಭಾರತಾಂಬೆಯೆ ಹೆಮ್ಮೆಯ ಪುತ್ರ ಶ್ರೀ ನರೇಂದ್ರ ಮೋದಿ ಬರುತ್ತಿದ್ದಾರೆ  ಅಂತ ಮೈಕ್ ಧ್ವನಿಯಿಂದ ತಿಳಿಯಿತು.. 

ಇಲ್ಲಿಂದ ಮುಂದೆ ಶಬರಿ ತನ್ನ ಇಳಿ ದನಿಯಲ್ಲಿ ನಿರೂಪಣೆ ಮಾಡತೊಡಗಿದಳು.. ಅವಳ ಕತ್ತಿನಲ್ಲಿದ್ದ ವಿಡಿಯೋ ಕ್ಯಾಮೆರಾ ಮತ್ತು ಮೈಕ್ರೋಫೋನ್ ಮಾತುಗಳನ್ನು ದೃಶ್ಯಗಳನ್ನು ಪರಿಣಾಮಕಾರಿಯಾಗಿ ಬಿತ್ತರ ಮಾಡುತ್ತಿತ್ತು ತನ್ನ ಆಶ್ರಮ ನಿವಾಸಿಗಳ ತಾಣಗಳಿಗೆ!


"ನೋಡಿ ವೀಕ್ಷಕರೇ.. ಈಗ ತಾನೇ ರೇಷ್ಮೆ ವಸ್ತ್ರಧಾರಿಯಾಗಿ ನಮ್ಮ ಭಾರತದ ಹೆಮ್ಮೆಯ ಪುತ್ರ ಶ್ರೀ ನರೇಂದ್ರ ಮೋದಿ ಬಂದಿದ್ದಾರೆ.. ಹನುಮಂತನಿಗೆ ಆರತಿ ಮಾಡಿ, ಪೂಜೆ ಸಲ್ಲಿಸಿ.. ಗುಡಿಗೆ ಒಂದು ಪ್ರದಕ್ಷಿಣೆ ಬಂದಿದ್ದಾರೆ.. ಅವರ ಮುಖಭಾವ ಹಾಕಿಕೊಂಡಿರುವ ಮಾಸ್ಕಿನಿಂದ ಮರೆಯಾಗಿದ್ದರೂ ಅವರ ದೇಹ ಭಾಷೆ ಅವರ ಭಕ್ತಿ ಭಾವವನ್ನು ತೋರಿಸುತ್ತಿದೆ.. ಧನ್ಯರಾಗಿರುವಂಥಹ ಅವರ ದೇಹ ಭಾಷೆ ನಿಜಕ್ಕೂ ಅನುಕರಣೀಯ.. "

"ಶ್ರೀ ರಾಮಲಲ್ಲಾನ ದೇವಸ್ಥಾನಕ್ಕೆ ಬಂದು.. ಭಕ್ತಿಯಿಂದ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸಾಷ್ಟ್ರಾಂಗ ಮಾಡಿದ್ದು ಈ ಹೆಮ್ಮೆಯ ಭಾರತ ಪುತ್ರನ ಬಗ್ಗೆ ಅಭಿಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ .. ತಾವು ಮಾಡಬೇಕಾದ ಕೆಲಸ ಮುಖ್ಯವೇ ಹೊರತು ಪದವಿಯಲ್ಲ ಎನ್ನುವ ಮಹಾನ್ ಸಂದೇಶ ತಿಳಿಸಿದರು.."


"ಪಾರಿಜಾತ ಗಿಡವನ್ನು ನೆಟ್ಟು, ಅದಕ್ಕೆ ಮಣ್ಣು, ನೀರು ಹಾಕಿ ಕೈ ಮುಗಿದರು.. ಪಾರಿಜಾತ ಹೂವು ದೇವಲೋಕದ ಪುಷ್ಪ, ಅಂತಹ ಗಿಡವನ್ನು ನೆಟ್ಟು, ಭರತ ಭೂಮಿಯನ್ನು ಸ್ವರ್ಗವನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿರುವ ಈ ಮಹಾನ್ ನಾಯಕರಿಗೆ ನಮ್ಮೆಲ್ಲರ ಹೃದಯಪೂರ್ವಕ ಧನ್ಯವಾದಗಳು.. "


"ಅಲ್ಲಿಂದ ಹೊರಟ ಈ ಪುತ್ರ, ಶಿಲಾನ್ಯಾಸದ ಸ್ಥಳಕ್ಕೆ ಬಂದಿದ್ದಾರೆ.. ಇಡೀ ದೇಶವನ್ನು ಮುನ್ನೆಡೆಸಿ, ಇಡೀ ಪ್ರಪಂಚವೇ ಇವರತ್ತ ತಿರುಗಿ ನೋಡುವಂತೆ ಮಾಡಿರುವ ಈ ಮಹಾನ್ ಜೀವಿ, ಅಲ್ಲಿದ್ದ ಪುರೋಹಿತರ ಪ್ರತಿಯೊಂದು ವಾಕ್ಯವನ್ನು, ಮಂತ್ರವನ್ನು, ಶ್ಲೋಕಗಳನ್ನು ಸರಿಯಾಗಿ ಧನ್ಯತಾಭಾವದಿಂದ, ಭಕ್ತಿಯಿಂದ ಕೇಳಿಸಿಕೊಳ್ಳುತ್ತಾ, ಅವರು ಹೇಳಿದಂತೆ ಸುಮಾರು ಒಂದು ಘಂಟೆಗೂ ಮಿಗಿಲಾಗಿ ಪಾಲಿಸಿದ್ದು, ಅವರ ಧರ್ಮ ಶ್ರದ್ಧೆ, ಭಕ್ತಿ ಮಾರ್ಗವನ್ನು ಜಗತ್ತಿಗೆ ತೋರಿಸುವಂತಿತ್ತು. ಆ ಕ್ಷಣಕ್ಕೆ ಅವರಿಗೆ ಆ ಕಾರ್ಯ ಬಿಟ್ಟು ಬೇರೆ ಏನೂ ತಲೆಯಲ್ಲಿರಲಿಲ್ಲ ಎನಿಸಿತು"

"ಅವರು ಪ್ರತಿ ಬಾರಿಯೂ ಹೂವು, ಮಂತ್ರಾಕ್ಷತೆಯೊಡನೆ ಅರ್ಘ್ಯ ಬಿಟ್ಟಾಗ, ಧಾರೆಯೆರೆದಾಗ.. ತಾವು ಇಷ್ಟ ಪಡುವ ಭರತ ಭುವಿಗೆ ತಮ್ಮ ಶ್ರಮವನ್ನ, ಸಮಯವನ್ನು, ಮನಸ್ಸನ್ನು   ಧಾರೆಯೆರೆಯುತ್ತಿದ್ದಾರೆ ಎನಿಸಿತು.. ಅದ್ಭುತ ದೃಶ್ಯವದು"

"ಅಕ್ಷತೆ ಹಿಡಿದ ಕೈಗಳು ಮೆಲ್ಲನೆ ಕಂಪಿಸುತ್ತಿದ್ದದ್ದು ಕಂಡಾಗ.. ಅವರು ಎಷ್ಟು ಭಾವುಕರಾಗಿದ್ದಾರೆ.. ಮತ್ತು ಆ ಜನ್ಮಭೂಮಿಯ ಶಕ್ತಿಶಾಲಿ ಕಂಪನಗಳು ಅವರ ದೇಹದಲ್ಲಿ ಮೂಡಿಸುತ್ತಿರುವ ಕಂಪನವನ್ನು ಬಿಂಬಿಸುತಿತ್ತು.. "



"ಶಿಲಾನ್ಯಾಸ ಮಾಡಿ... ಅಷ್ಟೆಲ್ಲಾ ಹೊತ್ತು ಅಲ್ಲಿ ಕುಳಿತಿದ್ದರೂ.. ದಣಿವರಿಯದ ಇವರು.. ಎಲ್ಲರೂ ಮಾತುಗಳನ್ನು ಮುಗಿಸಿದ ಮೇಲೆ.. ಅದ್ಭುತವಾಗಿ ಸುಮಾರು ಮೂವತ್ತು ನಿಮಿಷಗಳ ಮಾತುಗಳು ಚೈತನ್ಯ ನೀಡುವ ಶಕ್ತಿಯಾಗಿತ್ತು.. ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಿಕೊಳ್ಳುವ ಹಾದಿಯಲ್ಲಿ ಇವರ ಪರಿಶ್ರಮ ಭಾರತಕ್ಕೆ ಬೇಕಾಗಿತ್ತು.. ನೋಡುತ್ತಲೇ ಇರಿ ಭಾರತ ಇಡೀ ವಿಶ್ವಕ್ಕೆ ಸನಾತನ ಧರ್ಮದ ಗುರುವಾಗುವುದರಲ್ಲಿ ಅಚ್ಚರಿಯೇ ಇಲ್ಲ.. "



"ತಮ್ಮ ಮಾತುಗಳನ್ನು ಮುಗಿಸಿದ ತಕ್ಷಣ, ಕಾರ್ಯನಿರತ ಶ್ರೀ ನರೇಂದ್ರ ಮೋದಿಯವರು ತಮ್ಮ ಮುಂದಿನ ಕಾಯಕಕ್ಕೆ ಹೊರಟೆ ಬಿಟ್ಟರು.. ಅಲ್ಲಿಗೆ ನಮ್ಮೆಲ್ಲರ ನೆಚ್ಚಿನ ಪ್ರಭು ಶ್ರೀ ರಾಮಚಂದ್ರರ ಭವ್ಯ ದೇವಾಲಯಕ್ಕೆ ಭೂಮಿ ಪೂಜೆ ನೆರೆವೇರಿತು.. ಇನ್ನೊಂದಷ್ಟು ವರ್ಷಗಳಲ್ಲಿ ಭವ್ಯವಾದ ಆ ದೇವಾಲಯದ ದರ್ಶನಕ್ಕೆ ಬಂದಾಗ ಮತ್ತೆ ಸಿಗುತ್ತೇವೆ.. " ಎನ್ನುತ್ತಾ ಶಬರಿ ತನ್ನ ಮಾತನ್ನು ಮುಗಿಸಿದಳು.. 

ಶಾಪ ಮುಕ್ತವಾಗಿದ್ದ ಅಹಲ್ಯೆ.. ಶಬರಿಯ ಮಾತುಗಳನ್ನು ಕೇಳುತ್ತ.. ಅಲ್ಲಿ ನೆಡೆಯುತಿದ್ದ ಕಾರ್ಯಕ್ರಮವನ್ನು ನೋಡುತ್ತಾ ಅಕ್ಷರಶಃ ಕಲ್ಲಾಗಿಯೇ ಹೋಗಿದ್ದಳು.. ಶಬರಿಯೇ ಒಮ್ಮೆಲೇ.. ಮಾತೆ ಅಹಲ್ಯೆ ಎಂದು ಅಲುಗಾಡಿಸಿದಾಗ.. "ಅರೆ ಶಬರಿ.. ಇದೆಲ್ಲ ಕನಸೋ ನನಸೋ ಅರಿಯದಾಗಿದೆ... ನಿಜಕ್ಕೂ ಇದೊಂದು ಅದ್ಭುತ ಕ್ಷಣ.. ಯುಗ ಯುಗ ದಾಟಿ ಬಂದ ನಮಗೆ ಇಂತಹ ಕ್ಷಣಕ್ಕೆ ಸಾಕ್ಷಿಯಾಗುತ್ತೇವೆ ಎನ್ನುವ ಒಂದು ಚೂರು ಕಲ್ಪನೆ ಕೂಡ ನಮಗಿರಲಿಲ್ಲ.. ಜಟಾಯು ನಿನ್ನ ಸಹಾಯ ಎಂದಿಗೂ ಮರೆಯಲಾರದು.. ಅಂದು ಶ್ರೀ ರಾಮಚಂದ್ರನಿಗೆ ಸೀತೆಯ ಅಪಹರಣದ ಬಗ್ಗೆ ಸುಳಿವು ನೀಡಿದ್ದು ನೀನು.. ಇಂದು ಆ ಪ್ರಭುವಿನ ಮಂದಿರದ ನಿರ್ಮಾಣಕ್ಕೆ ನೆಡೆಯುತಿದ್ದ ಪೂಜೆಗೆ ಸಾಕ್ಷಿಯಾಗಲು ಕರೆತಂದದ್ದು ನೀನೆ.. ನೀ ಧನ್ಯ ಜಟಾಯು... ನಿನಗೆ ಧನ್ಯವಾದಗಳು.. "

"ಮಾತೆ ಅಹಲ್ಯೆ, ಮಾತೆ ಶಬರಿ.. ನಿಮ್ಮಿಂದಾಗಿ ನನಗೆ ಈ ಗೌರವ ಸಿಕ್ಕಿಗೆ.. ನಿಮಗೆ ಧನ್ಯವಾದಗಳು..ಹೂವಿನಿಂದ ನಾರು ಸ್ವರ್ಗಕ್ಕೆ ಸೇರಿದ ಅನುಭವ ನನಗೆ" ಎನ್ನುತ್ತಾ ಮತ್ತೆ ಅವರಿಬ್ಬರನ್ನು ಕೂರಿಸಿಕೊಂಡು ಸ್ವರ್ಗ ಲೋಕದತ್ತ ಪಯಣ ಶುರು ಮಾಡಿತು.. !

****

ಅಂದು ದೇಶವೆಲ್ಲಾ ಗಲಭೆಯಿಂದ ಕೂಡಿತ್ತು.. ನಾವು ಮೂವರು ಅಣ್ಣ ತಮ್ಮಂದಿರು.. ಸುಮಾರು ಹನ್ನೆರಡು ವರ್ಷಗಳಾದ ಮೇಲೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಹೋಗಿ.. ಅಲ್ಲಿಂದ ಅದ್ಭುತ ಜೋಗದ ಜಲಪಾತದ ದರ್ಶನ.. ಮತ್ತೆ ಜಲಪಾತದ ಬುಡದ ತನಕ ಹೋಗಿ, ಮಿಂದು ಬಂದಿದ್ದ ಸಾರ್ಥಕತೆ.. ಶಿವಮೊಗ್ಗಕ್ಕೆ ಬಂದಾಗ ಅರಿವಾಗಿದ್ದು.. ಕರ್ಫ್ಯೂ ಹಾಕಿದ್ದಾರೆ ಅಂತ.. ಆದರೆ ಬಸ್ಸಿನ ಟಿಕೇಟನ್ನು ಮುಂಗಡವಾಗಿಯೇ ಕಾದಿರಿಸಿದ್ದರಿಂದ ಸಮಸ್ಯೆ ಇರಲಿಲ್ಲ.. ನಮ್ಮ ಬಂಧುಗಳು ನಟೇಶ ಮತ್ತು ಸುಬ್ಬರಾಮು ತಮ್ಮ ಸೈಕಲ್ಲಿನಲ್ಲಿ ಬಸ್ ನಿಲ್ದಾಣದ ತನಕ ಬಿಟ್ಟರು.. ಹಾದಿಯಲ್ಲಿ ಪೊಲೀಸರು ತಡೆಯೊಡ್ಡಿದಾಗ ನಾವು ಬೆಂಗಳೂರಿಗೆ ಹೋಗುತ್ತಿರುವ ವಿಷಯ ಹೇಳಿದೆವು.. ಸರಿ ಬೇಗ ಸೇರಿಕೊಳ್ಳಿ ಎಂದು ನಮ್ಮನ್ನು ಬಿಟ್ಟರು.. ಆದರೆ ನಟೇಶ್ ಮತ್ತು ಸುಬ್ಬರಾಮು ವಾಪಸ್ಸು ಹೋಗುವಾಗ ಅವರಿಗೆ ಕಾರಣ ಹೇಳಲು ಏನೂ ಇರಲಿಲ್ಲ. ಸುಮ್ಮನೆ ತಿರುಗಾಡುತ್ತಿದ್ದಾರೆ ಎಂದು ಒಂದೆರಡು ಬಿಟ್ಟು ಕಳಿಸಿದ್ದರಂತೆ.. 

ಬೆಂಗಳೂರಿಗೆ ಬಂದ ಮೇಲೆ ತಿಳಿಯಿತು.. ರಾಮನ ಜನುಮ ತಾಣದಲ್ಲಿದ್ದ ಕಟ್ಟಡವನ್ನು ನೆಲಸಮ ಮಾಡಿ.. ಅಲ್ಲಿ ರಾಮ ಮಂದಿರ ನಿರ್ಮಿಸುವ ಹೋರಾಟ ಶುರುವಾಗಿದೆ ಅಂತ.. ಅಂದು ೧೯೯೨ ಡಿಸೆಂಬರ್ ಆರು.. 

ಇಂದು ಆಗಸ್ಟ್ ೫ ೨೦೨೦.. ಬರೋಬ್ಬರಿ ೨೮ ವಸಂತಗಳು ಮತ್ತು ಅದಕ್ಕೂ ಮುನ್ನ ಇತಿಹಾಸ ಇರುವ ಸುಮಾರು ಐದು ಶತಮಾನಗಳಿಗೂ ಹೆಚ್ಚಿನ ಹೋರಾಟಕ್ಕೆ ಇಂದು ಬಿಡುಗಡೆ.. ಅಂದಿನ ಕನಸ್ಸು ಇಂದಿನ ನನಸಾಗಿದೆ.. 

****

ಕಲ್ಲಾಗಿದ್ದಳು ಅಹಲ್ಯೆ ಅಂದು 
ಶ್ರೀ ರಾಮ ಪ್ರಭುವಿನ ಪಾದ ಸ್ಪರ್ಶ 
ಸಿಕ್ಕಿತು ಅಹಲ್ಯೆಗೆ ಶಾಪ ವಿಮೋಚನೆ 

ಕಾದಿದ್ದಳು ಶಬರಿ 
ರಾಮ ಬರುವನೆಂದು 
ರುಚಿಯಾದ ಹಣ್ಣುಗಳನ್ನು
ತೆಗೆದಿಡುತ್ತಿದ್ದಳು 
ರಾಮಚಂದ್ರ ಬಂದಾಗ 
ಖುಷಿಯಿಂದ ಕಣ್ಣಾಲಿಗಳು ತುಂಬಿ ಬಂದು 
ಕಣ್ಣೀರಿನಿಂದ ಸಿಹಿಯಾದ ಹಣ್ಣು 
ಉಪ್ಪಾಯಿತೇನೋ ಎನ್ನುವ 
ಆತಂಕ ಶಬರಿಗೆ!

ಅಹಲ್ಯೆಯನ್ನು ಶಾಪವಿಮೋಚನೆಗೊಳಿಸಿದ ರಾಮ 
ಶಬರಿಗೆ ಮುಕ್ತಿ ಕೊಟ್ಟ ಶ್ರೀ ರಾಮ 
ತನ್ನ ಜನ್ಮಭೂಮಿಯ ಮಂದಿರಕ್ಕೆ 
ಇದ್ದ ಕಾನೂನಿನ ತೊಡಕನ್ನು ಗೆದ್ದು  
ಮೋದಿಗೆ ಆಶೀರ್ವಾದ ನೀಡಿದಾಗ 
ಶುರುವಾಗಿದ್ದೇ ಜಯಘೋಷ 
ಜೈ ಶ್ರೀರಾಮ್ ಜೈ ಶ್ರೀ ರಾಮ್!

***

ಇಂತಹ ಒಂದು ಐತಿಹಾಸಿಕ ಕಾಲಘಟ್ಟದಲ್ಲಿ ಇಂತಹ ಭವ್ಯ ಘಟನೆಗೆ ನಾವು ಸಾಕ್ಷಿಯಾಗುತ್ತೇವೆ, ಸಾಕ್ಷಿಯಾಗಿದ್ದೀವಿ, ಸಾಕ್ಷಿಯಾಗಿದ್ದೆವು ಎನ್ನುವುದೇ ಮನ ತುಂಬುವ ಘಳಿಗೆಗಳು!!!

ಜೈ ಶ್ರೀರಾಮ್!