Wednesday, December 19, 2018

ಆಹ್ಲಾದ ಕೊಟ್ಟ ಒಂದು ದಿನ 16-Dec-2018!!!

"ಶ್ರೀಕಾಂತಾ ಭಾನುವಾರ ಹೀಗಿದೆ ಒಂದು ಕಾರ್ಯಕ್ರಮ.. ಬಾ ನೀನು ನಿನಗೆ ಇಷ್ಟವಾಗುತ್ತದೆ.. " ನನ್ನ ಸಹೋದರ ರಜನೀಶನ ಕರೆಗೆ ಒಪ್ಪಿಕೊಂಡಿದ್ದೆ..

ಕೆಲವು ಬಾರಿ ಹೀಗಾಗುತ್ತದೆ.. ಯಾವ ಕಾರ್ಯಕ್ರಮ, ಏನು ಅದರ ವಿಶೇಷ, ಯಾರ್ಯಾರು ಬರ್ತಾರೆ ಏನೂ ಗೊತ್ತಿರೋಲ್ಲ / ಗೊತ್ತುಮಾಡಿಕೊಳ್ಳುವ ಪ್ರಯತ್ನ ನಾ ಮಾಡೋಲ್ಲ..ಸುಮ್ಮನೆ ಆ ಕ್ಷಣವನ್ನು ಸುಖಿಸುವ ಮನಸ್ಥಿತಿ ಹೊತ್ತು ಹೋಗುತ್ತೇನೆ.. ಭಾನುವಾರ ಕಿಕ್ಕಿರಿದು ಸೇರಿಕೊಂಡಿದ್ದ ಎರಡು ಕಾರ್ಯಕ್ರಮಗಳು ಒಂದು ರಜನೀಶ ಹೇಳಿದ ಕಾರ್ಯಕ್ರಮ (ಇನ್ನೂ ಹೇಳಿಲ್ಲ ಆಲ್ವಾ ನಾನು :-) ) ಇನ್ನೊಂದು ನನ್ನ ನೆಚ್ಚಿನ ೩ಕೆ ತಂಡದಿಂದ ಆಚರಿಸುವ ರಾಜ್ಯೋತ್ಸವ.. ೩ಕೆ ಕಾರ್ಯಕ್ರಮದ ಬಗ್ಗೆ ನಿಮಗೆಲ್ಲಾ ಕಿವಿ ತೂತಾಗುವಷ್ಟು ಹೇಳಿದ್ದೇನೆ.. ಹಾಗಾಗಿ ಮತ್ತೆ ನಿಮಗೆಲ್ಲ ಬೋರ್ ಹೊಡೆಸೋಲ್ಲ

ಅಕ್ಕ ಬರ್ತೀನಿ ಅಂದ್ಲು, ಅಣ್ಣ ಬರ್ತೀನಿ ಅಂದ.. ನಮ್ಮ ಚಿಕ್ಕಪ್ಪ ಬರ್ತಾ ಇದ್ದೀನಿ ಅಂದ್ರು, ನನ್ನ ಸಹೋದರ ಮಡದಿ ಸುಮಾ ಮಾತೆ ಬರ್ತೀನಿ ಅಂದಿದ್ರು.. ಆ ಕಾರ್ಯಕ್ರಮದ ಸ್ಥಳಕ್ಕೆ ಅಕ್ಕನ ಜೊತೆಯಲ್ಲಿ ಹೋದಾಗ , ಅಣ್ಣ, ಚಿಕ್ಕಪ್ಪ, ಸುಮಾ ಮಾತೆ, ಮತ್ತು ರಜನೀಶ ಸಿಕ್ಕಿದರು..

ಭಾನುವಾರದ ಚಳಿ ಚಳಿ... ಬಿಸಿಬಿಸಿ ರುಚಿ ರುಚಿ ಉಪ್ಪಿಟ್ಟು.. ಕೇಸರಿಬಾತ್ ವಾಹ್.. ರುಚಿಯಾಗಿತ್ತು.. ಮಾತಾಡುತ್ತಾ ಕೆಲವು ಆತ್ಮೀಯರ ಪರಿಚಯ ಮಾಡಿಕೊಂಡು.. ಒಂದು ಕೋಣೆಯೊಳಗೆ ಸೇರಿಕೊಂಡಾಗ ಕಾರ್ಯಕ್ರಮದ ಪೂರ್ಣ ವಿವರ ಸಿಕ್ಕಿತು..

ಶಾಲಾ ಮಕ್ಕಳಿಗೆ ನಮ್ಮ ಭವ್ಯ ಗ್ರಂಥಗಳಾದ ಶ್ರೀ ಮಹಾಭಾರತ ಮತ್ತು ಶ್ರೀ ರಾಮಾಯಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ  ಪರೀಕ್ಷೆಗಳನ್ನು ಏರ್ಪಡಿಸುತ್ತಾರೆ.. ಆ ಮಕ್ಕಳು ಉತ್ಸಾಹದಿಂದ ಬರೆದ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ಕಾಯಕಕ್ಕೆ ಅಳಿಲು ಸೇವೆ ಮಾಡೋದು ನಮ್ಮ ಕೆಲಸವಾಗಿತ್ತು.. ಕರ್ನಾಟಕದಿಂದ ಸುಮಾರು ೬೦-೬೫ ಸಾವಿರ ವಿದ್ಯಾರ್ಥಿಗಳು ಬರೆದ ಉತ್ತರಪತ್ರಿಕೆಯನ್ನು ಅಂಕ ಎನ್ನುವ ಕಲ್ಲಿಗೆ ಒರೆ ಹಚ್ಚುವ ಕೆಲಸ..

ಶಾಲಾದಿನಗಳಲ್ಲಿ ನಾವು ಓದಿರಲಿ ಓದದೇ ಪರೀಕ್ಷೆ ಬರೆದಿರಲಿ.. ಅಂಕಗಳು ಕಡಿಮೆ ಬಂದಾಗ.. ಮೇಷ್ಟ್ರು ಯಾವುದೋ ಕೆಟ್ಟ ಮನಸ್ಥಿತಿಯಲ್ಲಿ ಅಂಕ ಕೊಟ್ಟಿದ್ದಾರೆ ಇನ್ನೊಂದು ಹತ್ತು ಅಂಕ ಕೊಟ್ಟಿದ್ದಾರೆ ಅವರ ಆಸ್ತಿಯೇನು ಕರಗುತ್ತಿತ್ತೇ. .ಹೀಗೆ ಅನೇಕ ರೀತಿಯ ಯೋಚನೆಗಳು ಮಾತಾಗಿ ಹೊರಬರುವುದು ಸರ್ವೇಸಾಮಾನ್ಯ.. ಅಂದು ನಾವು ಆ ಚಾಲಕನ ಕುರ್ಚಿಯಲ್ಲಿ ಕೂತಾಗ ಅರಿವಾಗಿತ್ತು.. ಆ ಕಷ್ಟದ ಪರಿ.. :-)

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳು.. ಅದಕ್ಕೆ ಮಾದರಿ ಉತ್ತರ ಹೊಂದಿದ್ದ ಪ್ರಶ್ನೆ ಪತ್ರಿಕೆ.. ಅಂಕ ಪಟ್ಟಿ.. ಪ್ರಶ್ನೆ ಪತ್ರಿಕೆ ಇವೆಲ್ಲವನ್ನೂ ಕೊಟ್ಟು ಜೊತೆಗೆ ಕೆಂಪು ಬಣ್ಣದ ಲೇಖನಿಯನ್ನು ಕೊಟ್ಟು ಶ್ರೀ ಸತೀಶ್ ಅವರು ಹೇಗೆ ಮೌಲ್ಯಮಾಪನ ಮಾಡಬೇಕು ಎನ್ನುವ ಒಂದು ಪುಟ್ಟ ತಿಳುವಳಿಕೆ ಕೊಟ್ಟರು..

ಆಯ್ಕೆ ನಮ್ಮದಾಗಿತ್ತು ಭಾರ ಹೊರಬಹುದಾದ ಮಹಾಭಾರತವೋ ಅಥವಾ ನಮ್ಮ ಬದುಕಿನ ರಾಮಾಯಣದ ಜೊತೆಗೆ ಶ್ರೀ ರಾಮಾಯಣವೋ..

ನನಗೂ ಒಂದು ಪುಟ್ಟ ಕವರ್ ಕೊಟ್ಟರು.. ನಾ ಶುರು ಮಾಡಿದೆ.. ಕೊನೆಯಲ್ಲಿ ಲಘುವಾಗಿ ನಗು, ಹಾಸ್ಯದ ಜೊತೆಗೆ ಮೌಲ್ಯ ಮಾಪನ ಶುರುವಾಯಿತು.. ವಿದ್ಯಾರ್ಥಿಗಳು ಉತ್ತರಿಸಿದ ರೀತಿ ಕೆಲವೊಮ್ಮೆ ನಗು ತಂದರೂ ಅವರ ಕ್ರಿಯಾಶೀಲತೆಗೆ ಉದಾಹರಣೆಯಾಗಿತ್ತು.. ಜೊತೆಯಲ್ಲಿ ನಮ್ಮ ಧರ್ಮಗ್ರಂಥಗಳು ಎಂದು ಪ್ರಪಂಚವೇ ಒಪ್ಪುವ ಈ ಪೌರಾಣಿಕ ಕಥೆಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸಿ ಇನ್ನಷ್ಟು ಹೆಚ್ಚಿನ ಅರಿವು ಮೂಡಿಸಬೇಕು ಎನ್ನುವ ಅಂಶವೂ ಹೊಳೆಯಿತು..

ನನಗೆ ತುಂಬಾ ಇಷ್ಟವಾದ ಉತ್ತರ :
ಗಾಂಧಾರಿಗೆ ಆ ಹೆಸರು ಬರಲು ಕಾರಣವೇನು?
ಆಕೆ ಗಂಧ ಹಚ್ಚಿಕೊಳ್ಳುತ್ತಿದ್ದರಿಂದ ಗಾಂಧಾರಿ ಎಂದು ಹೆಸರು ಬಂತು.. !

ಇನ್ನೊಬ್ಬರು ಮೇಡಂ ಹೇಳುತ್ತಿದ್ದರು.. : ರಾಮಾಯಣದ ಒಂದು ಪ್ರಶ್ನೆಗೆ ಹುಡುಗ ಬರೆದ ಉತ್ತರ
(ಆ ಹುಡುಗನಿಗೆ ಏನು ಬರೆಯಬೇಕು ಎಂಬ ಗೊಂದಲವಿತ್ತು ಅನ್ನಿಸುತ್ತೆ) ಇದು ಯಾರು ಬರೆದ ಕಥೆಯೋ ನನಗಾಗಿ ಬಂಡ ವ್ಯಥೆಯೋ :-)

ಸುಂದರ ಸಮಾಗಮದ ದಿನ.. ಒಂದು ವಿಭಿನ್ನ ಅನುಭವ ಕೊಟ್ಟ ದಿನವಾಗಿತ್ತು.. ಜೊತೆಯಲ್ಲಿ ಫೇಸ್ಬುಕ್ ಪರಿಚಯದ ಸ್ವರ್ಣ ಪುಟ್ಟಿ ಅಲ್ಲಿ ಸಿಕ್ಕಿದ್ದು ಮಾತಾಡಿದ್ದೂ ವಿಶೇಷ..

ಊಟ ಸೊಗಸಾಗಿತ್ತು.. ಬಿಸಿಬೇಳೆ ಬಾತ್, ಮೊಸರನ್ನ, ಉದ್ದಿನ ವಡೆ, ಖಾರವಾದ ಚಟ್ನಿ, ಪಾಯಸ .. ಆಹಾ ಏನೋ ಹೇಳೋದು.. ಸೊಗಸು ಸೊಗಸು.. ಭಾನುವಾರದ ಅರ್ಧ ದಿನವನ್ನು ಸಾರ್ಥಕವಾಗಿ ವಿಭಿನ್ನ ಅನುಭವದೊಂದಿಗೆ ಕಳೆದ ಖುಷಿ ನನ್ನದಾಗಿತ್ತು..

ಅಲ್ಲಿಂದ ನೆಡೆದದ್ದು ೩ಕೆ ರಾಜ್ಯೋತ್ಸವಕ್ಕೆ (ಬೆಚ್ಚಿ ಬೀಳದಿರಿ.. ಮತ್ತೆ ಅದನ್ನೇ ಹೇಳಿ ಕೊರೆಯೋಲ್ಲ)

ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಕಾಂತ್ ಮಂಜುನಾಥ್ ಈ ಚಿತ್ರದ ಬಗ್ಗೆ ಹೇಳುವ ಕವನವನ್ನು ಅವರ ಬಾಯಲ್ಲಿಯೇ ಕೇಳೋಣ ಎಂದು ನನ್ನ ಗೆಳೆಯ ನೂತನ್ ಹೇಳಿದಾಗ ಕೈಲಿದ್ದ ಕ್ಯಾಮೆರಾ ನನ್ನ ಮಗಳಿಗೆ ಕೊಟ್ಟು ಆರಾಮಾಗಿ ವೇದಿಕೆ ಹತ್ತಿದೆ..

"ಎಲ್ಲರಿಗೂ ನಮಸ್ಕಾರ" (ಗಂಟಲು ಕೆಳಗೆ ಕೂತಿತ್ತು,  ಸರಿ ಮಾಡಿಕೊಂಡು)
ನಮ್ಮ ಮನ ಮನೆಯಲ್ಲಿ ಸದಾ ನೆಲೆಸಿರುವ ಹರಿಣಿ ಮೇಡಂ ಯಾವಾಗಲೂ ಹೇಳುತ್ತಿದ್ದರು .. ಶ್ರೀಕಾಂತ ಪೀಠಿಕೆ ಇಲ್ಲದೆ ನೀನು ಏನೂ ಹೇಳೊಲ್ಲ.. ಅದೇ ಅಪವಾಧ, ಆಪಾದನೆ,  ಪ್ರಶಂಸೆ ಹೊತ್ತು ಶುರು ಮಾಡುತ್ತೇನೆ .. ನನಗೆ ಬಂದ ಭಾವಕ್ಕೆ ಒಂದಷ್ಟು ವಿಚಿತ್ರ ಪದಗಳನ್ನು ಸೇರಿಸಿ ಇದನ್ನು ಮಾಡಿದ್ದೇ, ನೀವು ಅದನ್ನೇ ಮಾಡಿ, ಕೇಳಿ, ನೋಡಿ....


ಮೊದಲಿಗೆ ಶಶಿಕಿರಣ್ ಮುಲ್ಲೂರು ಸೆರೆ ಹಿಡಿದ ಈ ಚಿತ್ರ ತುಂಬಾ ಮನಸ್ಸಿಗೆ ತಾಕೀತು.. ಈ ಚಿತ್ರದಲ್ಲಿ ಏನೋ ಇದೆ ಎನ್ನುವ ವಿಚಾರಗಳು ಮನದಲ್ಲಿ ಮೂಡಿದವು.. ರವಿ ಕಾಣದ್ದನ್ನು ಕವಿ ಕಂಡ.. ಕವಿ ಕಾಣದನ್ನು ಈ ಕಪಿ ಕಂಡ .. ಕಪಿ ಅಂದರೆ ಕನ್ಯಾ ಪಿತೃ ನನ್ನ ಮಗಳಿಗೆ ತಂದೆ..

(ಕಿಸಿಕಿಸಿ ನಕ್ಕರು ಅಲ್ಲಿದ್ದವರು)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ.. ಸುಮ್ಮನೆ ಕೂತಿಲ್ಲ)

ಗೋಡೆ ಶಿಥಿಲವಾಗಿದೆ,
ಬಾಗಿಲು ಹಳೆಯದಾಗಿದೆ,
ಅದಕ್ಕೆ ತಗಲಾಕಿದ ಬೀಗ ಪುಟ್ಟದಾಗಿದೆ!

(ಗೋಡೆ ಶಿಥಿಲವಾಗಿದೆ, ಬಾಗಿಲು ಹಳೆಯದು ಆದರೂ ಅಲ್ಲೊಂದು ಆಶಾ ಭಾವವಿದೆ.. ಬಾಗಿಲಿಗೆ ಹಾಕಿದ ಬೀಗ ಪುಟ್ಟದಾಗಿದೆ ಅಂದರೆ.. ಸಮಸ್ಯೆಗಳು ದೊಡ್ಡದಾಗಿರಬಹುದು ಆದರೆ ಅದಕ್ಕೆ ಪರಿಹಾರ ಪುಟ್ಟದಾಗಿರುತ್ತದೆ ಎನ್ನುವ ಭಾವನೆ ನನಗೆ ಕಾಣಿಸಿತು)

ಬಾಗಿಲುಗಳು ಅಳಕವಾಗಿದೆ,
ಹಾಕಿದ ಬೀಗದ ಹಂಗಿಲ್ಲ,
ಚಿಲಕ ನಿಲ್ಲೋಲ್ಲ !

(ಬಾಗಿಲುಗಳು ಸಡಿಲವಾಗಿದೆ, ಬೀಗದ ಹಂಗಿಲ್ಲ.. ಚಿಲಕವಿಲ್ಲದಿದ್ದರೆ ಬೀಗಕ್ಕೆ ಬೆಲೆಯಿಲ್ಲ)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಎಂದು ಹೇಳುತ್ತೇನೆ)

ಅಲ್ಲೊಂದು ಆಶಾಭಾವವಿದೆ
ಅಲ್ಲೊಂದು ಉತ್ಸಾಹವಿದೆ
ಅಲ್ಲೊಂದು ಚೈತನ್ಯವಿದೆ!

ಬಾಗಿಲಿಗೆ ಸಿಕ್ಕಿಸಿದ ಅಂಚೆ ಪೆಟ್ಟಿಗೆ,
ಬಾಗಿಲ ಕೊನೆಯಲ್ಲಿ ಅರಳುತ್ತಿರುವ ಗಿಡ,
ಗೋಡೆ, ಬಾಗಿಲುಗಳನ್ನ ಕಾಯುತ್ತಿರುವ ಕಂಡೂ ಕಾಣದಂತಿರುವ ಚಾವಣಿ!

(ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಪುಟ್ಟ ಗಿಡ ಅರಳುತ್ತಿದೆ.. )

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಇಲ್ಲ ಎಂದು ಹೇಳುತ್ತೇನೆ)

ಅಂಚೆ ಡಬ್ಬದ ಕೇಸರಿ ಬಣ್ಣ,
ಬಾಗಿಲ ಕೊನೆಯಲ್ಲಿ ಹಸಿರು ವರ್ಣ,
ಗೋಡೆಗೆ ಬಳಿದಿರುವ ಬಿಳಿ ರಂಗು,
ಮಾಸಲಾಗಿದ್ದರೂ ಕಾಣುವ ನೀಲಿ,
ನಮ್ಮ ಧ್ವಜವನ್ನೇ ಹೋಲುತ್ತದೆ ಅಲ್ಲವೇ!

(ಇಷ್ಟಾದ ಮೇಲೆ.. ಅಂಚೆ ಡಬ್ಬದ ಬಣ್ಣ ಕೇಸರಿ, ಗಿಡ ಬಣ್ಣ ಹಸಿರು, ಗೋಡೆಯ ಬಣ್ಣ ಬಿಳಿ, ನೀಲಿ ಬಣ್ಣವಿದೆ.. ಇದೆಲ್ಲ ನೋಡಿದಾಗ ೧೯೪೭ ಇಂದ ನಮಗೆ ಗೊತ್ತಿರೋದು ಈ ಬಣ್ಣಗಳು ನಮ್ಮ ಧ್ವಜದ ಸಂಕೇತ.. )

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಇಲ್ಲ)

ಶಿಥಿಲವಾದದನ್ನು ಬಿಗಿ  ಮಾಡುತ್ತಿದ್ದಾರೆ
ನಮ್ಮ ಧ್ವಜದ ಮತ್ತೆ ಹಾರಾಡಲು ಸಿದ್ಧವಾಗುತ್ತಿದೆ
ನಮ್ಮ ದೇಶದ ಪ್ರಗತಿಯ ಪಥದಿ ಸಾಗುತ್ತಿದೆ
ಎಂಬ ಭಾವವನ್ನು ಬಿತ್ತರ ಮಾಡುತ್ತಿದ್ದಾರೆ
(Present condition ಗಮನಿಸಿದಾಗ ಬೆಳವಣಿಗೆಯ ಹಾದಿಯಲ್ಲಿದೆ.. ಇದು political agenda ಅಲ್ಲ.. ನಮ್ಮ ದೇಶ ಸಾಗುತ್ತಿರುವ ಹಾದಿ ಎಂದು ಹೇಳುತ್ತೇನೆ)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಲ್ಲ
ಸುಭದ್ರ ಭಾರತಕ್ಕೆ ಅಡಿಪಾಯ ಹಾಕುತ್ತಿದ್ದಾರೆ!!!

(ಖಂಡಿತ ಸುಮ್ಮನೆ ಕುಳಿತಿಲ್ಲ ಬದಲಿಗೆ ಇನ್ನಷ್ಟು ಭದ್ರ ಪಡಿಸುತ್ತಿದ್ದಾರೆ.. ಇದು ನನ್ನ ಕವಿತೆಯ ಆಶಯ..)

(ಪುಟ್ಟ ಚಪ್ಪಾಳೆಗಳು ಬಂದವು)

೩ಕೆ ತಂಡಕ್ಕೆ ಒಂದು ಸಲಾಂ !!!

ಕೊನೆಯ ಮಾತು.. ಈ ಚಿತ್ರವನ್ನು ನೋಡಿದಾಗ Law Associates board ನೋಡಿದಾಗ ಮನಸ್ಸಿಗೆ ಬಂದದ್ದು ..

೧) ಕಳೆದ ವರ್ಷ (೨೦೧೭) ನನಗೆ ಕಾನೂನಿನ ಮಾರ್ಗದರ್ಶನ ಬೇಕಿದ್ದಾಗ ಸಹಾಯ ಮಾಡಿದ ನನ್ನ ಹೈಸ್ಕೂಲ್ ಗೆಳೆಯ
     ​ಕೃಷ್ಣೋಜಿ‌ ರಾವ್, ವೃತ್ತಿಯಲ್ಲಿ ವಕೀಲ.
೨) ನನ್ನ ಅದ್ಭುತ ಗೆಳತಿ ನಿವೇದಿತಾ ಚಿರಂತನ್,  ಕಾನೂನು ಪದವೀಧರರು.
೩) ೩ಕೆ ತಂಡದ ಜೆವಿಎಂ ನಾಯ್ಡು, ಇವರು ನನ್ನ ಸ್ನೇಹಿತರು ಹಾಗೂ ವೃತ್ತಿಯಲ್ಲಿ ವಕೀಲರು..

ಈ ಮೂವರು ಅದ್ಭುತ ಗೆಳೆಯರಿಗೆ ನನ್ನ ಕವನವನ್ನು ಅರ್ಪಿಸುತ್ತಿದ್ದೇನೆ.. ಮತ್ತು ಈ ಅವಕಾಶ ನೀಡಿದ ೩ಕೆ ತಂಡಕ್ಕೆ ಒಂದು ಸಲಾಂ ಎಂದು ಹೇಳಿ ಮಾತು ಮುಗಿಸಿದೆ..!


ಮನದೊಳಗೆ ಇದ್ದ ಭಯ ಎಂಬ ಭೂತವನ್ನು ಅಟ್ಟಿ ಹೊರಹಾಕಿದ ಖುಷಿ ಮನದಲ್ಲಿ ಮೂಡಿತ್ತು.. !!!

ರಾತ್ರಿ ಮನೆಗೆ ಹೋದಾಗ.. ಒಂದು ಸುಂದರ ಭಾನುವಾರವನ್ನು ಭಾವನೆಗಳ ಕಣಜದಲ್ಲಿ ಹೊತ್ತು ಓಡಾಡಿದ ಸಾರ್ಥಕ ಭಾವ ಮೂಡಿತ್ತು.. !!!

6 comments:

  1. ಚಿತ್ರ ಕವನಕ್ಕೆ ಸದ್ಯದ ದೇಶದ ಸ್ಥಿತಿಯನ್ನು ಸಮೀಕರಿಸಿದ ಕವಿ ಚಮತ್ಕಾರ ಮೊದಲು ಮನಸು ಮುಟ್ಟಿತು.

    ಕವನವನ್ನು ಕೈಹಿಡಿದು ನಡೆಸಿಕೊಂಡು ಹೋದ ಕವಿಯ ಮನಸ್ಸಿನಲ್ಲಿ ಹೀಗೊಂದು concept ಹುಟ್ಟಬಹುದು ಎನ್ನಲು ಬರೆದವರು ಶ್ರೀಮಾನ್!

    ಉಘೇ... ಉಘೇ... ಎಂದರು ಬದರಿಯಾದಿ ಶ್ರೀಮಾನ್ ಅಭಿಮಾನಿಗಳು.

    ReplyDelete
  2. ಸರಳ ಸಂಪೂರ್ಣ ಸವಿವರ ವರದಿ

    ReplyDelete