Sunday, June 10, 2018

ಮೆಚ್ಚುವ or Matured!!! - ಮುಂದೇ

ಹೀಗೆ ಸಾಗಿತ್ತು. ಇಬ್ಬರ ಬಾಳಿನ ಬಂಡಿಯ ಹಿಂದಿನ ಚಕ್ರದ ಮಾತುಗಳು..

ಹೊಟ್ಟೆ ಹಸಿದಿತ್ತು.. ಹತ್ತಿರದಲ್ಲಿಯೇ ಇದ್ದ ಒಂದು ಈಟಿಂಗ್ ಪಾಯಿಂಟಿನಲ್ಲಿ ಮಸಾಲೆ ದೋಸೆ.. ಮತ್ತು ಸೆಟ್ ದೋಸೆ ತಿಂದು.. ಕಾಫಿ ಕುಡಿದು.. ಇಬ್ಬರೂ ಕೈ ಕುಲುಕಿ ಹೊರಟಾಗ ರಾತ್ರಿ ಒಂಭತ್ತಾಗಿತ್ತು..

ಮೂರು ಘಂಟೆಗಳ ಮಾತುಕತೆ ಇಬ್ಬರ ಮನದಲ್ಲಿಯೂ ಹಕ್ಕಿಯನ್ನು ಹಾರಿಸುತ್ತಿತ್ತು.... ಮುಂದೇ .... :-)


"ಮನೆಗೆ ಸೇರಿದ ಕೂಡಲೇ ಮೆಸೇಜ್ ಮಾಡಿ ಉಮೇಶ್.. " ಕೋಗಿಲೆಯ ದನಿ ವಾಟ್ಸಾಪಿನಲ್ಲಿ ವಾಯ್ಸ್ ಮೆಸೇಜ್ ಉಲಿಯಿತು.. "ಖಂಡಿತ ಸಿರಿ".. ಮೆಸೇಜ್ ಮಾಡಿದ ಉಮೇಶ್..

ಸರಿ ಸುಮಾರು ೧೧.೩೦ರ ರಾತ್ರಿ ಮನೆಗೆ ತಲುಪಿ.. "ಮನೆಗೆ ಬಂದೆ" ಎನ್ನುವ ಸಂದೇಶ ಕಳಿಸಿದ..ಆ  ಕಡೆಯಿಂದ "ಹುಷಾರು buddy" ಎನ್ನುವ ಭಾವದ ಸಂದೇಶ ಬಂದಿತ್ತು..

ಅದೇ ಗುಂಗಿನಲ್ಲಿ ಇಬ್ಬರೂ ಶುಭರಾತ್ರಿ ಹೇಳಿ ಬೆಳಿಗ್ಗೆ  ಎದ್ದು ಮಾತಾಡುವ ಎನ್ನುವ ಒಪ್ಪಂದಕ್ಕೆ ಸಹಿ ಮಾಡಿ.. ನಿದ್ರಾದೇವಿಗೆ ಶರಣಾದರು..

ಅಂದಿನಿಂದ ಪ್ರತ್ರಿದಿನವೂ ಶುಭಾಷಯ.. ಊಟ ತಿಂಡಿ.. ಉಭಯ ಕುಶೋಲೋಪರಿ ಸಾಂಪ್ರತ ಮಾತುಗಳು.. ಕೆಲವೊಂದು ತೀರಾ ಆತ್ಮೀಯತೆಯಿಂದ ಕೂಡಿದ ಮಾತುಗಳು.. ಪ್ರೀತಿ ವಿಶ್ವಾಸ ತೋರುವ ಮಾತುಗಳು ಹೀಗೆ ಸಾಗಿತ್ತು..

ಹತ್ತಿರ ಹತ್ತಿರ ಒಂದು ತಿಂಗಳಾಗಿತ್ತು.. "ಸಿರಿ ಒಂದು ತಿಂಗಳಾಯಿತು ನಮ್ಮ ಮೊದಲ ಭೇಟಿಯಾಗಿ.. ಮತ್ತೊಮ್ಮೆ ಭೇಟಿಯಾಗುವ?" ಎಂಬ ಸಂದೇಶಕ್ಕೆ ಪಟಕ್ ಅಂತ ಆ ಕಡೆಯಿಂದ "ನಾನೂ ಅದನ್ನೇ ಯೋಚಿಸುತ್ತಿದ್ದೆ.. ಖಂಡಿತ ಭೇಟಿಯಾಗೋಣ.. " ಎಂದು ಹೇಳಿ.. .ದಿನ ಸಮಯ ನಿಗದಿ ಪಡಿಸಿಕೊಂಡರು..

ಹೇಳಿದ ವಿಳಾಸ ಎಡ ಬಲ ಗೊಂದಲವಾಗಿ ಒಂದಷ್ಟು ಸುತ್ತು ಹೊಡೆದ ಮೇಲೆ.. ಆ ಜಾಗಕ್ಕೆ ಬಂದಾಗ ಹೋಟೆಲಿನಲ್ಲಿ ಹಾಕಿದ್ದ ಹಾಡು ಕೇಳಿ ನಗುತ್ತಾ ತನ್ನ ರೇಷ್ಮೆಯಂತಹ ತಲೆಗೂದಲನ್ನು ಕೈಯಿಂದ ಸರಿ ಮಾಡಿಕೊಂಡು.. "ಸಿರಿ ನಮಗೋಸ್ಕರ ಈ ಹಾಡು ಬರುತ್ತಿದೆಯಾ" ಎಂದು ಹಿಂದಿನಿಂದ ಬಂದು ಹೇಳಿದಾಗ.. ಒಮ್ಮೆ ಗಾಬರಿಯಾಗಿ "ಎಲ್ರಿ ಹೋಗಿದ್ದ್ರಿ?".. "ಹಾ.. ಹಾಡಾ.. ಯಾವ ಹಾಡು" ಎಂದು ಗಮನವಿಟ್ಟು ಕೇಳಿದಾಗ..

ಅಣ್ಣಾವ್ರ  ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದ
            "If you come today...its too early..
             If you come tomorrow..its too late
             You pick the time..tick tick tick.. "

ಇಬ್ಬರೂ ಹೈ ಫೈ ಮಾಡಿ ನಕ್ಕರು..

 ಕೃಪೆ : ಗೂಗಲೇಶ್ವರ 
ಮೆಲ್ಲನೆ ಕಾಫೀ ಹೀರುತ್ತಾ.. ಮೊದಲ ಭೇಟಿಯಲ್ಲಿ ನಿಲ್ಲಿಸಿದ್ದ ಮಾತುಗಳಿಂದ  ಶುರುವಾದವು... ಹಾಗೆ  ಮುಂದುವರಿದ ಭಾಗವಾಗಿತ್ತು....      ಕೊಂಚ ಇಬ್ಬರೂ ರಿಲ್ಯಾಕ್ಸ್ ಆಗಿದ್ದರಿಂದ.. ಇಬ್ಬರಿಗೂ ಗೊಂದಲವಿರಲಿಲ್ಲ... ಆರಾಮಾಗಿ ಮಾತಾಡತೊಡಗಿದರು.. ಮನೆ, ಆಫೀಸ್.. ಕಾರ್ಪೊರೇಟ್ ರಾಜಕೀಯ.. ಸಂಬಳ ಹೆಚ್ಚಳ... ರಾಜಕೀಯ.. ಮತದಾನ.. ಕ್ರೀಡೆ.. ಸಿನಿಮಾ.. ಹೀಗೆ ಆಗಸದಿಂದ ಬೀಳುವ ಎಲ್ಲದರ ಬಗ್ಗೆ ಮಾತು ಮುಂದುವರೆಯಿತು..

ಇಬ್ಬರೂ ಮನಸ್ಸಿಗೆ ಹತ್ತಿರವಾಗತೊಡಗಿದರು ..ಅಥವಾ ಇಬ್ಬರಿಗೂ ಆ ರೀತಿಯ ಒಂದು ಭಾವ ಹೊಕ್ಕಿತ್ತು ಮನಸ್ಸಿಗೆ..

ಎರಡನೇ ಭೇಟಿ ಹೆಚ್ಚು ಹೊತ್ತು ಆಗಲಿಲ್ಲ.. ಇಬ್ಬರಿಗೂ ಬೇರೆ ಕೆಲಸವಿದ್ದದರಿಂದ ತುಸು ಬೇಗನೆ ಭೇಟಿ ಮುಗಿಸಿ ಮನೆಗೆ ಹೊರಟರು.. ಮತ್ತೆ ಭೇಟಿಯಾಗುವ ವಿಶ್ವಾಸದಿಂದ..

ಒಂದೆರಡು ದಿನ ಆದ ಮೇಲೆ ಉಮೇಶನ ಸಂದೇಶ ನೋಡಿ ಸಿರಿಗೆ ನೆಗೆದಾಡುವಷ್ಟು ಖುಷಿಯಾಯಿತು..

ತಮ್ಮ ಎರಡು ಭೇಟಿಯ ಬಗ್ಗೆ ತನಗನ್ನಿಸಿದ ಕೆಲವು ಮಾತುಗಳಲ್ಲಿ ತನ್ನ ಹೃದಯವನ್ನು ಬಿಚ್ಚಿಟ್ಟಿದ್ದ..

*****
​ಪ್ರೀತಿಯ ಸಿರಿ

ನನ್ನ ಒಂದಷ್ಟು ಮಾತುಗಳು

ಮೊದಲ ಭೇಟಿ:

ನೀವು ನನ್ನ ಹುಡುಕುತ್ತಾ ಕರೆ ಮಾಡಿದಾಗ.. ನಾ ಇದ್ದ ಜಾಗ ನಿಮಗೆ ಗೊತ್ತಾಯಿತು.. ಆದರೆ ನಾ ನಿಮ್ಮನ್ನು ಹುಡುಕುವ ಪ್ರಯತ್ನ ಮಾಡದೆ.. ನಿಮ್ಮ ಬರುವಿಕೆಗೆ ಎದುರುನೋಡುತ್ತಿದ್ದೆ..

ನೀವು ಹೇಳಿದ್ದು.. "ಒಬ್ಬರನ್ನು ಅವರಿಗೆ ಕಾಣದೆ ಗಮನಿಸುವುದು ಚೆನ್ನಾಗಿರುತ್ತದೆ.. " ಎಂದು ಹೇಳಿದಿರಿ.. ನನ್ನ ಹಿಂದಿನಿಂದ ಬಂದು.. ಪವ್ ಎಂದು ಸದ್ದು ಮಾಡಿದಿರಿ..

ಮೊದಲ ಭೇಟಿಗೆ ಐಸ್ ಬ್ರೇಕರ್ ಸೆಶನ್ ಅಂತಾರಲ್ಲ ಹಾಗೆ .. ಇಬ್ಬರ ಮಾತಿಗೆ ಪರ್ಫೆಕ್ಟ್ ವೇದಿಕೆ ಸಿದ್ಧವಾಗಿತ್ತು..

ನಿರರ್ಗಳ ಮಾತು.. ಹೃದಯ ಬಿಚ್ಚಿ ಆಡಿದ ಮಾತುಗಳು ಇಷ್ಟವಾಯಿತು..

ಎರಡನೇ ಭೇಟಿ..
ಕಾಯುತ್ತಾ ಕಾಯುತ್ತಾ ಒಂದು ಕಪ್ ಕಾಫಿ ಮುಗಿಸುವ ಹಂತಬಂದಿದ್ದರೂ ..ಕಾಯುವ ತಾಳ್ಮೆ ಇಷ್ಟವಾಯಿತು.. ಬಂದನಂತರ ಆಗಿದ್ದ ಗೊಂದಲದ ಬಗ್ಗೆ ತುಸು ಮಾತಾಡಿ.. ಇಬ್ಬರಿಗೂ ಬೇಜಾರು ತರದೇ ನೆಡೆದುಕೊಂಡ ನಮ್ಮಿಬ್ಬರ ರೀತಿ ಇಷ್ಟವಾಯಿತು..

ಮೊದಲ ಭೇಟಿಯ ಮುಂದುವರೆದ ಭಾಗದಂತಿದ್ದ ಈ ಮಾತುಕತೆ ತುಸು ಕಡಿಮೆ ಸಮಯವಾದರೂ ನೆನಪಲ್ಲಿ ಉಳಿಯುವಂತಾಯಿತು.. ಮತ್ತು ಮುಂದಿನ ಭೇಟಿಯ ಬಗ್ಗೆ ಕುತೂಹಲ ಮೂಡಿಸುವಂತಿದೆ..

ನಮ್ಮಿಬ್ಬರ ಬಗ್ಗೆ ಇಬ್ಬರಿಗೂ ಪೂರ್ಣ ತಿಳಿದಿಲ್ಲವಾದರೂ.. ಈಗ ಹೇಗಿದ್ದೀವಿ ಎನ್ನುವುದು ಮುಖ್ಯವಾಗುತ್ತದೆ.. ಮತ್ತೆ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡು ಪಿ ಎಚ್ ಡಿ ಮಾಡುವ ಅವಶ್ಯಕತೆ ಇಬ್ಬರಿಗೂ ಎಲ್ಲಾ ಎಂದುಕೊಳ್ಳುತ್ತೇನೆ..

ಮುಂದುವರೆಯಲಿ ಈ ಸ್ನೇಹದ ಪಯಣ.

*****

ಈ ಸಂದೇಶವನ್ನು ಓದಿ.. ಸಿರಿಗೆ ತಾಳಲಾರದಷ್ಟು ಸಂತೋಷ.. ಅದಕ್ಕೆ ಪ್ರತಿಕ್ರಿಯೆ ಕೊಡುತ್ತಾ
"ಎಷ್ಟು ಸುಂದರವಾಗಿ ಆ ನಮ್ಮ ಎರಡು  ಭೇಟಿಯನ್ನು ಅಕ್ಷರಗಳಲ್ಲಿ ಸೆರೆ ಹಿಡಿದಿದ್ದೀರಾ.. ನನಗೆ ಒಬ್ಬ ಅದ್ಭುತ ಸ್ನೇಹಿತ ಸಿಕ್ಕ ಎನ್ನುವ ಸಂತೋಷ.. ಜೊತೆಯಲ್ಲಿ ನಿಮ್ಮೊಳಗೆ ಒಬ್ಬ ಸುಂದರ ಜೀವಿ ಇದ್ದಾನೆ ಎನ್ನುವ ಅಂಶ ನನಗೆ ಇಷ್ಟವಾಯಿತು.. "

ನೋಡಿ ಈ ಹಾಡು ನನಗೆ ತುಂಬಾ ಇಷ್ಟ.. "ಇಸ್ ಪ್ಯಾರುಕೋ ಮೇ ಕ್ಯಾ ನಾಮು ದೂ.. " 

ಹಾಗೆ ಈ ಬಂಧಕ್ಕೆ ಹೆಸರಿಡೋದೆ ಬೇಡ.. ಹೀಗೆ  ಸಾಗಲಿ ನಮ್ಮ ಪಯಣ ಉಮೇಶ್"

ಇಬ್ಬರೂ ಖುಷಿ ಪಟ್ಟರು.. ಹೀಗೆ ಹಲವಾರು ಭೇಟಿಗಳಾಯಿತು.. ಒಂದೆರಡು ಬಾರಿ ಊಟದ ಸಮಯಕ್ಕೆ ಭೇಟಿ ಮಾಡಿ.. ಇಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ.. ಮಾತಾಡಿ ತಮ್ಮ ಹೃದಯದ ಮಾತುಗಳನ್ನು ಹೇಳಿಕೊಂಡಿದ್ದರು..

"ರೀ ಉಮೇಶ್.. ಮುಂದಿನ ವಾರ ಭೇಟಿ ಮಾಡೋಣ ಕಣ್ರೀ.. ಸ್ವಲ್ಪ ಶಾಪಿಂಗ್ ಇದೆ.. ಹಾಗೆ ಒಂದು ಮೂವಿಗೆ ಹೋಗಿ ಬರೋಣ.. ಏನಂತೀರಾ"

"ಅಪ್ಪಣೆ ಮೇಡಂ" ಉತ್ತರ ಬಂದಿತ್ತು ವಾಟ್ಸಾಪ್ಪಿನಲ್ಲಿ

ಮಳೆ ಧೋ ಎಂದು ಸುರಿಯುತ್ತಿತ್ತು.. ಆದರೆ ಇವರಿಬ್ಬರ ಹೃದಯದಲ್ಲಿ ಸಣ್ಣ ಝರಿಯಾಗಿದ್ದ ಪ್ರೀತಿ ಎತ್ತ ಕಡೆ ಹರಿಯುತ್ತದೆಯೋ ಇಬ್ಬರಿಗೂ ಗೊತ್ತಾಗದೆ ಮಳೆಯ ನೀರು ರಸ್ತೆಯಲ್ಲಿ ನಿಂತ ಹಾಗಿತ್ತು ... ಆದರೆ ಕೆಲವೊಮ್ಮೆ ಇವರಿಬ್ಬರ ಮಾತುಗಳಲ್ಲಿ ಹಲವಾರು ಬಾರಿ ಇಣುಕುತಿತ್ತು.. ಸಿಂಗಲ್ ಫ್ಯೂಸ್ ನಲ್ಲಿ ಬಲ್ಬ್ ಉರಿಯುವ ಹಾಗೆ..

ಕೃಪೆ : ಗೂಗಲೇಶ್ವರ 
ಶಾಪಿಂಗ್ ಮುಗಿಯಿತು.. ಸಂಜೆ ಬಿಸಿ ಬಿಸಿ ಪಾನಿ ಪುರಿ ಸೇವನೆ ಆಯಿತು... ದಾವಣಗೆರೆ ಬೆಣ್ಣೆ ದೋಸೆ ಆಯಿತು..
"ಸಿರಿ ಯಾಕೋ ಸಿನಿಮಾ ಬೇಡ ಅನ್ನಿಸುತ್ತಿದೆ ಕಣ್ರೀ.. ಆರಾಮಾಗಿ ಒಂದು ಕಡೆ ಕೂತು ಮಾತಾಡೋಣ ಅನ್ಸುತ್ತೆ.... "

"ಓಕೇ ಸಾಹೇಬ್ರೆ.. ನಿಮ್ಮ ಆಸೆಗೆ ನಾ ಯಾಕೆ ಬೇಡ ಅನ್ಲಿ.. ಬನ್ನಿ ಎಂ ಜಿ ರಸ್ತೆಯ ಮೆಟ್ರೋ ಸ್ಟೇಷನ್ ಕೆಳಗೆ ರಂಗೋಲಿ ಅಂಗಳ ಇದೆಯಲ್ಲ.. ಇವತ್ತು ಯಾವುದೇ exhibition ಇಲ್ಲ .. ಅಲ್ಲಿ ಕೂತು ಮಾತಾಡಬಹುದು.. ತಣ್ಣನೆ ಮಳೆ.. ತಣ್ಣನೆ ಗಾಳಿ.. ಜನಗಳ ಓಡಾಟ.. ಹೆಚ್ಚಿಲ್ಲದ ವಾಹನ ಸಾಂಧ್ರತೆ.. ನೆಡೆಯಿರಿ ಹೋಗೋಣ.. "

ಬ್ರಿಗೇಡ್  ರೋಡಿಂದ ಮೆಲ್ಲನೆ ಮಳೆಯಲ್ಲಿ ಛತ್ರಿ ಹಿಡಿದು ಒಬ್ಬರಿಗೊಬ್ಬರು ತಾಕುವ ಹಾಗೆ ಅಂಟಿಕೊಂಡು ನೆಡೆಯತೊಡಗಿದರು.. ಉಮೇಶನಿಗೆ ಸಂಕೋಚ.. ಅವನ ಅರ್ಧ ದೇಹ ಛತ್ರಿಯಿಂದ ಹೊರಗೆ ಇದ್ದು.. ಅರ್ಧ ಭಾಗ ಮಳೆಯಿಂದ ನೆನೆಯಲು ಶುರು ಮಾಡಿತ್ತು.. ಸಿರಿ ಗಮನಿಸಿದಳು.. ಒಂದೆರಡು ಬಾರಿ ಹೇಳಿದರು ಕೇಳದೆ ಇದ್ದಾಗ.. ತನ್ನ್ನ ಕೈಯನ್ನು ಅವನ ಭುಜದ ಮೇಲೆ ಹಾಕಿ.. "ಕಮಾನ್ buddy" ಎಂದು ಹೇಳಿ ತನ್ನತ್ತ ಎಳೆದುಕೊಂಡಳು..

ಮುಜುಗರ ಪಡುತ್ತಾ ಮೆಲ್ಲನೆ ಹೆಜ್ಜೆ ಹಾಕಿದ.

ರಂಗೋಲಿ ಅಂಗಳ ಬಂತು

ಆಗಲೇ ಒಂದೆರಡು ಜೋಡಿಗಳು ಅಲ್ಲಿ ಕೂತಿದ್ದವು.. ಪಿಸಿ ಪಿಸಿ ಮಾತಾಡುತ್ತಿದ್ದವು.. ಕಡಲೇಕಾಯಿ ಮಾರುವವ ತನ್ನ ಮೊಬೈಲಿನಲ್ಲಿ ಹಾಡು ನೂರು ಮೀಟರ್ ಕೇಳುವ ಹಾಗೆ ಜೋರಾಗಿ ಹಾಕಿಕೊಂಡಿದ್ದ.. "ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಆಡದೆ ಉಳಿದಿಹ ಮಾತು ನೂರಿದೆ" ಮುಗಿಯದ ಕಥೆ ಚಿತ್ರದ ಹಾಡು ಬರುತ್ತಿತ್ತು

"ಸಿರಿ ಒಂದು ಮಾತು ಹೇಳಬೇಕಿತ್ತು ನಿನಗೆ"

"ಹೇಳು ಉಮೇಶ್"

ವಚನ ಬದಲಾಗಿದ್ದು ಇಬ್ಬರಿಗೂ ಅರಿವಿಗೆ ಬರಲಿಲ್ಲ..

"ನಮ್ಮಿಬ್ಬರ ಪರಿಚಯವಾಗಿ ಆರು ತಿಂಗಳಾಯಿತು..ಜೀವನದಲ್ಲಿ ಮತ್ತೆ ವಸಂತವನ್ನು ಕಾಣಬೇಕೆಂಬ ಬಯಕೆ ನಮ್ಮಿಬ್ಬರನ್ನು ಹತ್ತಿರ ತಂದಿದೆ.. ಇನ್ನು ಮುಂದಕ್ಕೆ ಹೇಗೆ ಎನ್ನುವ ವಿಚಾರ ಬಂದಾಗ.. ನನಗೆ ಈ ಮಾತನ್ನು ಹೇಳಬೇಕೆನಿಸಿತು.. "

"ಹೂಂ"

"ಸಿರಿ ಐ ಲವ್ ಯು ಕಣೆ.. "

ಒಂದು ಕ್ಷಣ ಮಾತಿಲ್ಲದೆ ಸಿರಿ ಉಮೇಶನ ಮೊಗವನ್ನೇ ನೋಡುತ್ತಿದ್ದಳು.. !

"ಸಿರಿ ಐ ಲವ್ ಯು ಕಣೆ.. "ನನ್ನ ಜೊತೆ ಜೀವನದಲ್ಲಿ ಹೆಜ್ಜೆ ಹಾಕುತ್ತೀಯ.. ನಿನಗೆ ಇಷ್ಟ ಅನಿಸಿದರೆ.. ನಿನ್ನ ಒಪ್ಪಿಗೆ ಹೇಳು.. ಇದರಲ್ಲಿ ಬಲವಂತವಿಲ್ಲ.. ಆದರೆ ನಮ್ಮಿಬ್ಬರ ನಿರ್ಧಾರ ಏನೇ ಆಗಲಿ.. ನಮ್ಮ ಗೆಳೆತನ ಎಂದಿಗೂ ಕಳೆದುಕೊಳ್ಳಬಾರದು.. ಸ್ನೇಹಿತರಾಗಿ ಇರೋಣ.. ಇದು ನನ್ನ ಮನದ ಭಾವ.. ನಿನಗೆ ಏನು ಅನಿಸುತ್ತದೆ ಹೇಳು.. "

ಇಬ್ಬರ ಮಧ್ಯೆ ಮೌನ.. ತಲೆಯ ಮೇಲೆ ಮೆಟ್ರೋ ಟ್ರೈನ್ ಸದ್ದು ಮಾಡುತ್ತಾ ಓಡುತ್ತಿತ್ತು.. ವಾಹನಗಳ ದಟ್ಟಣೆ ಹೆಚ್ಚುತ್ತಿತ್ತು.. ಮಳೆ ನಿಂತ ಆಗಸ ಶುಭ್ರವಾಗಿತ್ತು.. ಹಾಗೆಯೇ ಉಮೇಶನ ಹೃದಯವೂ ಕೂಡ.. ಹೇಳಬೇಕಾದ್ದು ಹೇಳಿದ್ದರಿಂದ ಮನಸ್ಸು ಹಗುರಾಗಿ ಹತ್ತಿಯ ಹಾಗೆ ಹಿಂಜಿಕೊಂಡು ಆಗಸದ ಮೋಡಗಳ ತರಹ ಹಾರುತಿತ್ತು..

ಸುಮಾರು ಹದಿನೈದು ನಿಮಿಷ.. ಇಬ್ಬರ ಮಧ್ಯೆ ಮೌನ ಬಿಟ್ಟು ಬೇರೆ ಇಲ್ಲ..

ಕಡಲೆಕಾಯಿ ಹುಡುಗನ ಮೊಬೈಲು ಅಣ್ಣಾವ್ರ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ "ಯಾವ ಕವಿಯೂ ಬರೆಯಲಾರ ಒಲವಿನಿಂದ ಕಣ್ಣೋಟದಿಂದ ಹೃದಯದಲ್ಲಿ ನೀ ಬರೆದ  ಈ ಪ್ರೇಮ ಗೀತೆಯಾ..ಯಾವ ಕವಿಯೂ ಬರೆಯಲಾರ" ಹಾಡು..

ಇಬ್ಬರ ಕಣ್ಣುಗಳು ಸಂಧಿಸಿದವು..

ಸಿರಿ ತಲೆ ಬಗ್ಗಿಸಿಕೊಂಡು ಮತ್ತೆ ಸ್ವಲ್ಪ ಹೊತ್ತು ಕೂತಳು..

"ಈ ಮೌನವ ತಾಳೆನು.. ಮಾತಾಡೇ ದಾರಿಯ ಕಾಣೆನು.. ಓ ರಾಜ" ಮಯೂರ ಚಿತ್ರದ ಹಾಡು ನೆನಪಿಗೆ ಬಂತು ಸಿರಿಗೆ..

ನಿಧಾನವಾಗಿ ತನ್ನ ವ್ಯಾನಿಟಿ ಬ್ಯಾಗಿಗೆ ಕೈ ಹಾಕಿ.. "ಉಮೇಶ್ ಹೀಗೆ ಮಾಡೋಣ.. ನಾಣ್ಯ ಚಿಮ್ಮುತ್ತೇನೆ .. ಹೆಡ್ಸ್ ಬಿದ್ದರೆ ಜೊತೆಯಾಗಿರೋಣ ...  ಓಕೆ  .. ಟೈಲ್ಸ್ ಬಿದ್ದರೆ ಫ್ರೆಂಡ್ಸ್ .. ಆಗಬಹುದಾ"

ಸುಮ್ಮನೆ ನಕ್ಕ

ನಾಣ್ಯ ಚಿಮ್ಮಿ ಕೈಯಲ್ಲಿ ಹಿಡಿದಳು.. "ಹೇಳಿ ಉಮೇಶ್"

ಅವಳ ಎರಡು ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು.. "ಅದು ಹಾಗೆ ಇರಲಿ.. ಸಿರಿ. .ತೆಗೆಯೋದೆ ಬೇಡ.. ನೀ ನನ್ನ ಜೊತೆಯಾಗು ಸಾಕು.. "

ಸಿರಿ ಸುಮ್ಮನೆ ಒಂದು ಮುಗುಳು ನಗೆ ಬೀರಿ.. ಅವನ ತಣ್ಣನೆ ಕೈಗಳ ಮೇಲೆ ತನ್ನ ಬಿಸಿ ಕೈಗಳನ್ನು ಇಟ್ಟು.. ಮೆಲ್ಲನೆ ಕಣ್ಣು ಹೊಡೆದು ತಲೆ ತೂಗಿದಳು..

ಗೋಲ್ಗಪ್ಪಾ ಮಾರುವವನ ಬಳಿಯಿದ್ದ ಒಬ್ಬ ಹುಡುಗನ ಮೊಬೈಲಿನಲ್ಲಿ "ಜೊತೆಯಾಗಿ ಹಿತವಾಗಿ ಸೇರಿ ನೆಡೆವ ಸೇರಿ ನುಡಿವ.. ನನ್ನ  ಉಸಿರಲ್ಲಿ ನೀ ಎಂದು ಉಸಿರಾಗಿರು.. ನಿನ್ನ ಬಿಡಲಾರೆ ನಾನೆಂದಿಗೂ"  ರಥಸಪ್ತಮಿ ಚಿತ್ರದ ಹಾಡು ಇಬ್ಬರಿಗೂ ಕೇಳಿಸಿತು..

ಜೋರಾಗಿ ನಗುತ್ತಾ.. ಇಬ್ಬರು ಕೈಹಿಡಿದುಕೊಂಡು .. "ಇವತ್ತಿಂದ ಹೊಸ ಪಥದಲ್ಲಿ ನೆಡೆಯೋಣ.. "

ಇಬ್ಬರೂ ಕೈ ಕೈ ಹಿಡಿದು ಮೆಲ್ಲನೆ ಮೆಟ್ರೋ ಸ್ಟೇಷನ್ ಹತ್ತಿರ ನೆಡೆಯ ತೊಡಗಿದರು..

ಮೆಟ್ರೋ ಟ್ರೈನಿಗೆ ಟೋಕನ್ ತೆಗೆದುಕೊಳ್ಳುವಾಗ ಎಫ್ ಎಂ ನಲ್ಲಿ ಹಾಡು ಬರುತ್ತಿತ್ತು..

"ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು"

ಇಬ್ಬರೂ ಮಂದಹಾಸ ಬೀರಿದರು..

ಸಿರಿ ತನ್ನ ಕೈಯಲ್ಲಿಯೇ ಇದ್ದ ನಾಣ್ಯವನ್ನು ಮತ್ತೊಮ್ಮೆ ನೋಡಿಕೊಂಡಳು.. ಎರಡು ಕಡೆ ಹೆಡ್ಸ್ ಇತ್ತು :-)

ಕೃಪೆ : ಗೂಗಲೇಶ್ವರ 

Friday, June 1, 2018

ಮೆಚ್ಚುವ or Matured!!!

ಗಿಜಿ ಗಿಜಿ ಎನ್ನುವ ಮೆಟ್ರೋ ರೈಲು... ಟೋಕನ್ ಪಡೆದು ಉಮೇಶ ಓಡುತ್ತಿದ್ದ.. ಎಸ್ಕಲೇಟರ್ ಇದ್ದರೂ.. ಹೊಸದಾಗಿ ಖರೀದಿಸಿದ್ದ ಸ್ಯಾಮಸಂಗ್ ಮೊಬೈಲ್ನಲ್ಲಿ ಹೆಲ್ತ್ ಆಪ್ ಹೆಜ್ಜೆಗಳನ್ನು ಎಣಿಸುತ್ತಿದ್ದರಿಂದ.. ದಿನವೂ ಹತ್ತು ಸಾವಿರ ಹೆಜ್ಜೆ ಹಾಕಲೇ ಬೇಕೆಂಬ ಕಟುವಾದ ನಿಯಮ ಹಾಕಿಕೊಂಡಿದ್ದ. ಮೆಟ್ಟಿಲುಗಳನ್ನು ಏರುತ್ತಾ ಓಡಿದ.. ಹೆಜ್ಜೆಗಳ ಸಂಖ್ಯೆ ಹೆಚ್ಚಾದಂತೆ ಅವನ ಹೃದಯಬಡಿತವೂ ಏರುತ್ತಿತ್ತು..
ಕೃಪೆ - ಗೂಗಲೇಶ್ವರ 
ಸೆಕ್ಯೂರಿಟಿ "ಸರ್ ಟ್ರೈನ್ ಬರುತ್ತೆ ಬೇಗ ಬನ್ನಿ" ಎಂದು ಕೂಗಿದ.. ಓಡುತ್ತಾ ಅಂತೂ ಇಂತೂ ಮೆಟ್ರೋ ಒಳಗೆ ನುಗ್ಗಿಯೇ ಬಿಟ್ಟಾ.. ಮೊಗದಲ್ಲಿ ಹರಿಯುತ್ತಿದ್ದ ಬೆವರು.. ಅವನ ಹಣೆಯ ಕುಂಕುಮವನ್ನು ಕರಗಿಸುತ್ತಿತ್ತು.. ಕಿವಿಗೆ ಹಾಕಿಕೊಂಡಿದ್ದ ಇಯರ್ ಫೋನಿನಲ್ಲಿ "ನನ್ನ ಕುಂಕುಮ ಬೆವರಲಿ ಕರಗಿ ಹರಿಯುತಿದೆ" ನಾ ನಿನ್ನ ಬಿಡಲಾರೆ ಚಿತ್ರದ ಜಾನಕಿಯಮ್ಮನ ಕಂಠದಲ್ಲಿ ಹಾಡು ಬಿತ್ತರವಾಗುತಿತ್ತು.. ಹಾಗೆ ಮೊಗದ ಮೇಲೆ ಕಿರುನಗೆ ..ಬೆವರು ಒರೆಸಿಕೊಳ್ಳೋದಾ ಅಥವಾ ಮೆಟ್ರೋ ಹವಾ ನಿಯಂತ್ರಿತವಾಗಿದ್ದರಿಂದ ಹಾಗೆ ತಣ್ಣಗಾಗಲೂ ಬಿಡೋದ ಎನ್ನುವ ಗೊಂದಲಕ್ಕಿಂತ ಜೇಬಿನಿಂದ ಕರವಸ್ತ್ರ ತೆಗೆದು ಒರೆಸಿಕೊಳ್ಳಲು ಜಾಗವಿರಲಿಲ್ಲ.. ಜೇಬಿಗೆ ಕೈಹಾಕಿದರೆ ಪಕ್ಕದವರ ಪ್ಯಾಂಟಿಗೆ ಕೈ ಹೋಗುವ ಸಾಧ್ಯತೆ ಹೆಚ್ಚಿತ್ತು.. ಹಾಗೆ ಪೇಲವ ನಗೆ ನಗುತ್ತಾ.. ಹಾಡು ಕೇಳುತ್ತಾ ಮೈ ಮರೆತು ನಿಂತಿದ್ದ..

ಮುಂದಿನ ನಿಲ್ದಾಣ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಎಂದು ಕೂಗಿತು.. ತನ್ನ ಸ್ಥಳ ಬಂತು ಎಂದು ಅರಿವಾಗಿ.. ಇಯರ್ ಫೋನು ತೆಗೆದು.. ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು .. ಮತ್ತೆ ಮೆಟ್ಟಿಲು ಇಳಿಯತೊಡಗಿದ .. ಒರಾಯನ್ ಮಾಲಿಗೆ ಇದೆ ಮೊದಲ ಬಾರಿ ಅಲ್ಲವಾದರೂ.. ಏನೋ ಹೊಸದು ಎನ್ನಿಸುತ್ತಿತ್ತು.. ಸುಂದರವಾದ ಕಾರಂಜಿ.. ಮಕ್ಕಳು ಗಿಜಿ ಗಿಜಿ ಎನ್ನುತ್ತಿದ್ದ ವಾತಾವರಣ.. ಯುವ ಜೋಡಿಗಳ ಸೆಲ್ಫಿ ಸಂಭ್ರಮ.. ವಯಸ್ಸಾದವರು ಈ ಯುವಜೋಡಿಗಳೇ ಹೀಗೆ .. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಹೇಳಿಕೊಂಡು ಆ ದಿನಗಳನ್ನು ನೆನೆಯುತ್ತಿದ್ದರು..
ಕೃಪೆ - ಗೂಗಲೇಶ್ವರ 
ಸುಮ್ಮನೆ ಒಂದು ಕಲ್ಲು ಬೆಂಚಿನ ಮೇಲೆ ಕೂತು.. ಸುತ್ತ ಮುತ್ತಲ ಪರಿಸರವನ್ನು ಗಮನಿಸುತ್ತಾ.. ಮೊಬೈಲಲ್ಲಿ ಆಫೀಸ್ ಇಮೇಲ್ ಚೆಕ್ ಮಾಡಿ.. ಹಾಗೆ ಅದಕ್ಕೆ ಉತ್ತರಿಸಿ.. ವಾಟ್ಸಾಪ್ ಸಂದೇಶಗಳನ್ನು ನೋಡಿ.. ಕೆಲವೊಂದಕ್ಕೆ ನಕ್ಕು.. ಕೆಲವೊಂದು ವಿಚಾರಗಳಿಗೆ ಸ್ಪಂದಿಸಿ.. ಸಂಜೆ ಶುಭಾಶಯ ತಿಳಿಸಿ.. ಸುಮ್ಮನೆ ಆಕಾಶ ನೋಡುತ್ತಾ ಕೂತ..

ಎರಡು ವಾರದ ಹಿಂದೆ  ನೆಡೆದ ಘಟನೆಗಳು ಹಾಗೆ ಸ್ಮೃತಿ ಪಟಲದ ಮೇಲೆ ಮೂಡಿ ಬಂತು..

ತನ್ನ ಜೀವದ ಗೆಳೆಯ ಭರತ್ ಆಫೀಸಿಗೆ ಹೋಗಿದ್ದ ಉಮೇಶ.. ಕಾಫಿ ಕುಡಿಯುತ್ತಾ ಮಾತಾಡುತ್ತಿದ್ದಾಗ.. ಅವನ ಗೆಳೆಯನನ್ನು ಮಾತಾಡಿಸಿಕೊಂಡು ಒಬ್ಬಳು ಬಂದಳು.. ಉಭಯಕುಶಲೋಪರಿ ಸಾಂಪ್ರತ ಮಾತಾಡುತ್ತಾ.. "ಓಯ್ ಸಿರಿ ನೋಡು ಇವನು ನನ್ನ ಬೆಸ್ಟ್ ಫ್ರೆಂಡ್ ಉಮೇಶ" ಎಂದು ತನ್ನನ್ನು ಪರಿಚಯ ಮಾಡಿಕೊಂಡಿದ್ದ.. "ಉಮೇಶ ಇವಳು ನನ್ನ ಬೆಸ್ಟ್ ಗೆಳತೀ ಸಿರಿ" ಎಂದ.. ಅವಳು "ಹಲೋ"  ಎಂದಾಗ ಅವಳ ದನಿಗೆ ಮಾರು ಹೋದ ಉಮೇಶ.. ಆ ಕ್ಷಣಕ್ಕೆ..

ಅಷ್ಟರಲ್ಲಿ ಅವಳಿಗೆ ಮೊಬೈಲ್ ಕರೆ ಬಂತು.. ಹಿಡಿದ ಕಪ್ಪಿನಿಂದ ಕಾಫಿ   ಕುಡಿಯುತ್ತಾ.. ಮೊಬೈಲ್ನಲ್ಲಿ ಮಾತಾಡುತ್ತಾ ಬೈ ಎಂದು ಕಣ್ಣಿನಲ್ಲಿ ಹೇಳಿ ಮರೆಯಾದಳು..

ಭರತ್ ಹತ್ತಿರ ಅವಳ ನಂಬರ್ ಪಡೆದು.. ವಾಟ್ಸಾಪ್ಪಿನಲ್ಲಿ ಸಂದೇಶ ಕಳಿಸಿದ.. "ನಿಮ್ಮ ಜೊತೆ ಮಾತಾಡುವ ಬಯಕೆ ಇದೆ.. ನಾಳೆ ಬೆಳಿಗ್ಗೆ ೧೧.೩೦ಕ್ಕೆ ಕರೆ ಮಾಡಬಹುದಾ?"

ತನ್ನ ಕೆಲಸದಲ್ಲಿ ಮುಳುಗಿಹೋಗಿದ್ದ ಉಮೇಶನಿಗೆ ಟಂಗ್ ಅಂತ ಮೊಬೈಲ್ ಸದ್ದು ಮಾಡಿದ್ದು ಅರಿವಾಗಿರಲಿಲ್ಲ.. ಆವ ಮೊಬೈಲ್ ನೋಡಿದಾಗ ರಾತ್ರಿ ಹನ್ನೊಂದಾಗಿತ್ತು.. ಸಿರಿಯ ಉತ್ತರ.. "ಖಂಡಿತ ಮಾಡಿ.. ಮಾತಾಡೋಣ"... ಸವಿಯಾದ ನಿದ್ದೆಯಲ್ಲಿ ಮುಳುಗೆದ್ದಾಗ ಬೆಳಗಾಗಿತ್ತು... .

ಕಂಪನಿಯ ಹೆಡ್ ಆಫೀಸ್ ಅಮೆರಿಕಾದಲ್ಲಿತ್ತು.. ಅಲ್ಲಿಂದ ಕೆಲವು ಮುಖ್ಯಸ್ಥರು ಬಂದಿದ್ದರು. ಅವರ ಜೊತೆ ಮೀಟಿಂಗ್, ಮಾತು ಕತೆ. ಊಟ ಸಂಜೆ ಉಪಹಾರ.. ಕಾರ್ಪೊರೇಟ್ ಸಂಜೆಯಲ್ಲಿ ಸ್ವಲ್ಪ ಗುಂಡಿನ ಪಾರ್ಟಿ ಇತ್ತು.. .ಉಮೇಶನಿಗೆ ಕುಡಿಯುವ ಹವ್ಯಾಸವೂ ಇರಲಿಲ್ಲ.. ಅಭ್ಯಾಸವೂ ಇರಲಿಲ್ಲ.. ಆದರೆ ಅವನು ಹೋಗಲೇ ಬೇಕಿತ್ತು.. ಹಾಗಾಗಿ ಮನೆಗೆ ಬಂದಾಗ ಕ್ಯಾಲೆಂಡರ್ ನನ್ನ ದಿನ ಮುಗಿದಿದೆ.. ನನ್ನನ್ನು ಬದಲಿಸೋ ಎಂದು ಕಿರುಚುತಿತ್ತು.. ಸುಸ್ತಾಗಿ ಮಲಗಿಬಿಟ್ಟಿದ್ದ..

ಬೆಳಿಗ್ಗೆ ಗೋಲ್ಡನ್ ಹವರ್ ಎನ್ನುವ ಮೂರು ಘಂಟೆಯಿಂದ ಐದು ಘಂಟೆಯ ನಡುವೆ "ಛೆ ಸಿರಿಗೆ ಕರೆ ಮಾಡಬೇಕಿತ್ತು.. ಛೆ ಮಾಡೋಕೆ ಆಗಲೇ ಇಲ್ಲವಲ್ಲ ಎಂದು ಬೇಸರಿಸಿಕೊಂಡು.. ಆಫೀಸಿಗೆ ಬಂದು ತಿಂಡಿ ಆದ ಮೇಲೆ ಸಂದೇಶ ಕಳಿಸಿದ.. "ಈಗ ಕರೆ ಮಾಡಬಹುದೇ... "

"ಓ ಎಸ್" ಉತ್ತರ ಬಂದಿತ್ತು..

"ಹಲೋ" ಸಿರಿಯ ಮಧುರವಾಣಿ..

ಇಬ್ಬರೂ ಒಟ್ಟಿಗೆ ಹೇಳಿದರು.. "ಸಾರಿ.. ನಿನ್ನೆ ಬ್ಯುಸಿ ಇದ್ದೆ.. ನೀವು ನನಗೆ ಕರೆ ಮಾಡಿದ್ದಿರೋ ಏನೋ.. ಸಾರಿ ಬ್ಯುಸಿ ಇದ್ದೆ"

"ಸಿರಿ ತೊಂದರೆ ಇಲ್ಲ.. ನಾನೂ ಬ್ಯುಸಿ ಇದ್ದೆ.. ಇನ್ಫ್ಯಾಕ್ಟ್ ನಾ ನಿಮಗೆ ಕರೆ ಮಾಡೋಕೆ ಆಗಲೇ ಇಲ್ಲ.. ಕೆಲಸ ಕೆಲಸ ಮತ್ತು ಕೆಲಸ.. "

ಇಬ್ಬರೂ ಮತ್ತೊಮ್ಮೆ ಒಟ್ಟಿಗೆ ಸಾರಿ ಅಂದಾಗ ಇಬ್ಬರ ಮನಸ್ಸು ಹಗುರಾಗಿತ್ತು..

"ಹೇಳಿ ಸಿರಿ.. ಏನ್ ಸಮಾಚಾರ.. ಓಹ್ ನೋ.. ನಾನೇ ನಿಮ್ಮ ಹತ್ತಿರ ಮಾತಾಡಬೇಕು ಎಂದು ಹೇಳಿದ್ದೆ ಅಲ್ವ.. "

ಕಿಲ ಕಿಲ ನಗು ಆ ಕಡೆಯಿಂದ

"ನೋಡಿ ಸಿರಿ.. ಸುತ್ತಿ ಬಳಸಿ ಮಾತಾಡೋ ಅವಶ್ಯಕತೆ ನನಗೂ ಇಲ್ಲ.. ನಿಮಗೂ ಇಲ್ಲ ಅಂದ್ಕೋತೀನಿ.. ನೋಡಿ ನಿಮ್ಮ ಬಗ್ಗೆ ಭರತ್ ಹತ್ತಿರ ವಿಷ್ಯ ತಿಳಿದುಕೊಂಡೆ.. ನಿಮ್ಮ ಜೀವನದಲ್ಲಿ ನೆಡೆದ ಘಟನೆ ತಿಳಿಯಿತು.. ಜೀವನದಲ್ಲಿ ಇದೆಲ್ಲ ಕಾಮನ್.. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.. ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲಕ್ಕಿಂತ ಆಸಕ್ತಿ ಹೆಚ್ಚಾಗಿತ್ತು.. ಅದಕ್ಕೆ ನಿಮ್ಮ ಜೊತೆ ಮಾತಾಡೋಣ ಅನ್ನಿಸಿತು.. "

"ಉಮೇಶ್ ನಿಮ್ಮ ಸರಳತೆ ಮತ್ತು ನೇರ ನುಡಿ ಇಷ್ಟವಾಯಿತು.. ಹೌದು ಭರತ್ ನಿಮ್ಮ ಬಗ್ಗೆ ಹೇಳಿದ್ದ.. ನನಗೆ ನಿಮ್ಮ ಸರಳತೆ ಮತ್ತು ಸ್ನೇಹ ಪರತೆ ಭರತ್ ಮಾತುಗಳಿಂದ ತಿಳಿದಿತ್ತು ..ನಿಮ್ಮನ್ನು ಒಮ್ಮೆ ಭೇಟಿ ಮಾಡಬೇಕೆನ್ನುವ ಆಸೆಗೆ ನಿಮ್ಮ ಸಂದೇಶ ನೀರೆರೆಯಿತು.. ಅದಕ್ಕೆ ನೀವು ಕೇಳಿದ ತಕ್ಷಣ ಆಗಲಿ ಎಂದು ಹೇಳಿದ್ದು.. "

"ಓಕೇ ಸರಿ.. ಇವತ್ತು ನಾ ಸ್ವಲ್ಪ ಬ್ಯುಸಿ ಇದ್ದೀನಿ.. ನಾಳೆ ಸಂಜೆ ಆರು ಘಂಟೆಗೆ ಒರಾಯನ್ ಮಾಲಿನಲ್ಲಿ ಸಿಗಬಹುದೇ.. ಒಂದಷ್ಟು ಮಾತಾಡೋಣ.. "

 "ಖಂಡಿತ ಉಮೇಶ್.. ನಾಳೆ ಸಂಜೆ ಸಿಗೋಣ ಹಾಗಾದರೆ.. ಬೈ" ಎಂದು ಹೇಳಿ ಫೋನ್ ಕರೆ ನಿಂತಿತ್ತು..

ಏನು ಮಾತಾಡೋದು. .ಹೇಗೆ ಮಾತಾಡೋದು.. ಹೀಗೆ ನೂರಾರು ಗೊಂದಲಗಳು ಮನದಲ್ಲಿ ಜೇಡರಬಲೆಯನ್ನು  ನೇಯುತ್ತಿತ್ತು.. ನಿಗದಿಯಾಗಿದ್ದ ಒರಾಯನ್ ಮಾಲೊಳಗೆ ಬಂದು ಕೂತಿದ್ದ .. ಸುಮ್ಮನೆ ಆಕಾಶ ನೋಡುತ್ತಾ ಕೂತಿದ್ದವನಿಗೆ ಭುವಿಗೆ ಕರೆತಂದದ್ದು.. ಒಂದು ಕರೆ

"ಉಮೇಶ್ ಎಲ್ಲಿದ್ದೀರಾ.. ನಾ ಆಗಲೇ ಬಂದಿದ್ದೀನಿ.. "

"ಸಿರಿ..ಕಾರಂಜಿ ಇರುವ ಜಾಗದಲ್ಲಿ ಒಂದು ದೊಡ್ಡನೆಯ ಕಾರಂಜಿ ಇದೆಯಲ್ಲ.. ಅದರಿಂದ ಮೂರನೇ ಬೆಂಚಿನಲ್ಲಿ ಕುಳಿತಿದ್ದೇನೆ..  ನೀವೆಲ್ಲಿ ಇದ್ದೀರಾ"

"ಮೂರನೇ ಬೆಂಚು.. ದೊಡ್ಡ ಕಾರಂಜಿ.. ಹಾ.. ಹಾ.. ಗೊತ್ತಾಯಿತು.. ನಾ ನಿಮ್ಮನ್ನು ನೋಡಿದೆ.. ಅರಿವಿಲ್ಲದೆ ಇನ್ನೊಬ್ಬರನ್ನು ಗಮನಿಸುವುದು ಚಂದ ಇರುತ್ತೆ ಆಲ್ವಾ.. "

"ಹೌದು ಸಿರಿ. ಇನ್ನೊಬ್ಬರು ನಮ್ಮನ್ನು ನೋಡುತ್ತಿದ್ದಾರೆ ಎನ್ನುವಾಗ ಮಂಗನ ಆಟ ಆಡುವುದು.. ನಾ ಸುಂದರ ಎನ್ನುವ ಧಿಮಾಕು ತೋರಿಸುವುದು.. ಇವೆಲ್ಲ ಸಹಜ.. ಸೊಗಸಾಗಿರುತ್ತೆ.. ಗೋ ಆನ್.. ನಾ ಇಲ್ಲಿಯೇ ಕುಳಿತಿರುತ್ತೇನೆ.. ನೀವೇ ಬನ್ನಿ.. ನಿಮ್ಮನ್ನು ಹುಡುಕಿಕೊಂಡು ನಾ ಓಡಾಡೋದು.. ನನ್ನನ್ನು ಹುಡುಕಿ ನೀವು ಒದ್ದಾಡೋದು ಬೇಡ.. "

"ಸರಿಯಾದ ಯೋಚನೆ.. ಅಲ್ಲೇ ಇರಿ ಬರ್ತೀನಿ"

ಕರೆ ಕಟ್ಟಾಯಿತು..

ಉಮೇಶ ಮೊಬೈಲಿನ ಸಂದೇಶ ನೋಡುತ್ತಾ ಮೈಮರೆತು ಕೂತಿದ್ದ. ಹಿಂದಿನಿಂದ "ಬೌ" ಎನ್ನುವ ಸದ್ದು ಬಂದಾಗ.. ಕೊಂಚ ಹೆದರಿ.. ಹಿಂದೆ ತಿರುಗಿ ನೋಡಿದ.. ಚಾಂದಿನಿ ಹಾಗೆ ಬಿಳಿ ಬಣ್ಣದ ಉಡುಪು ತೊಟ್ಟ ಸಿರಿ ಸುಂದರವಾಗಿ ಕಾಣುತ್ತಿದ್ದರು.. ಹಿಂದೆ ಬಾಚಿ ಕಟ್ಟಿದ್ದ ಕೂದಲು.. ರೇಷ್ಮೇಯಂತೆ ಹಾರಾಡುತ್ತಾ ಅವರ ಭುಜದ ಎರಡು ಬದಿಯಲ್ಲಿ ಹರಡಿಕೊಂಡಿತ್ತು.. ಪುಟ್ಟದಾದ ಬಿಂದಿ.. ಆಕರ್ಷಕವಾದ ಕಣ್ಣುಗಳು.. ತುಸು ಕುಳ್ಳಗಿದ್ದರೂ ಆಕರ್ಷಣೆಯಿರುವಂತಹ ಹುಡುಗಿಯಾಗಿದ್ದರು ಸಿರಿ.. ಒಂದೇ ನೋಟದಲ್ಲಿ ಗಮನಿಸಿದ್ದ ಉಮೇಶ..

"ಹಲೋ ಉಮೇಶ್ ಅವರೇ.. ಎಲ್ಲಿ ಕೂರೋಣ.. "

"ಇಲ್ಲಿಯೇ ಕೂರೋಣ ಸಿರಿ.. "

ತಣ್ಣನೆ ಗಾಳಿ.. ಕಾರಂಜಿಯಿಂದ ಹಾರಿ ಬರುವ ಕಿರು ಹನಿಗಳು.. ಸಣ್ಣದಾಗಿ ಬರುತ್ತಿರುವ ಸಂಗೀತ.. ಇಡೀ ವಾತಾವರಣಕ್ಕೆ ಮಾಂತ್ರಿಕ ಸ್ಪರ್ಶ ನೀಡಿತ್ತು.. ಬಣ್ಣ ಬಣ್ಣದ ದೀಪಗಳು.. ಮಳೆ ಬಂದು ನಿಂತು ಹೋಗಿದ್ದರಿಂದ ಆಗಸದಲ್ಲಿ ಬಣ್ಣ ಬಣ್ಣದ ಮೋಡಗಳು ಹತ್ತಿಯ ಹಾಗೆ ಹಿಂಜಿಕೊಂಡು ಸಾಗುತ್ತಿತ್ತು..

ಇಬ್ಬರಿಗೂ ಹೇಗೆ ಮಾತು ಶುರು ಮಾಡಬೇಕೆಂಬ ಗೊಂದಲ ಕಾಡುತ್ತಿತ್ತು.. "ಲೇಡೀಸ್ ಫಸ್ಟ್"ಎಂದಾಗ ಕಿಲ ಕಿಲ ಎಂದು ನಕ್ಕು.. ನೀವೇ ಶುರು ಮಾಡಿ ಎಂದರು ಸಿರಿ..

"ಸಿರಿ.. ನಾ ಒಬ್ಬನೇ ಮಗ.. ನಾನು ಕಳೆದ ವರ್ಷ ಮದುವೆಯಾದೆ.. ಸುಖದಲ್ಲಿದ್ದ ಸಂಸಾರ ನನ್ನದು.. ನಾ ಮೆಚ್ಚಿ ಮದುವೆಯಾಗಿದ್ದೆ. ನನ್ನ ಸಹೋದ್ಯೋಗಿ ಅವಳು.. ಇಬ್ಬರೂ ಹನಿಮೂನಿಗೆ ಕೊಡೈಕೆನಾಲಿಗೆ ಹೋಗಿದ್ದೆವು.. ಈ ಅಮೃತವರ್ಷಿಣಿ ಸಿನೆಮಾ ತೆಗೆದಿದ್ದಾರಲ್ಲ ಆ ಜಾಗದಲ್ಲಿ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದೆವು.. ಸೆಲ್ಫಿ ಹುಚ್ಚು ಇರಲಿಲ್ಲ.. ಚಂದದ ಪ್ರಕೃತಿ.. ಕ್ಯಾಮೆರಾದಲ್ಲಿ ಸೆರೆ ಹಿಡಿಯುತಿದ್ದೆ.. ಅವಳು ನನ್ನ ಜೊತೆ ನಿಂತು.. ಅದನ್ನು ತೆಗೀರಿ.. ಇಲ್ಲಿ ನೋಡಿ ಚೆನ್ನಾಗಿದೆ.. ಎನ್ನುತ್ತಿದ್ದಳು.. ಹೀಗೆ ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ಒಂದು ಕಲ್ಲು ಬಂಡೆಯ ಮೇಲೆ ಕುಳಿತು ಮಾತಾಡುತ್ತಿದ್ದೆವು... ಮೋಡಗಳು ಮುತ್ತಲು ಶುರುಮಾಡಿದವು.. ನನಗೆ ಮೋಡಗಳ ಮಧ್ಯೆ ಸೂರ್ಯನನ್ನು ಸೆರೆಹಿಡಿಯುವ ಅಸೆ.. ಮಿಂಚು.. ಗುಡುಗು ಸದ್ದು ಮಾಡುತ್ತಿದ್ದವು.. ನಾ ಕ್ಯಾಮೆರಾ ಚಾಲೂ ಮಾಡಿ.. ಒಂದಷ್ಟು ಫೋಟೋ ತೆಗೆಯುತ್ತಿದ್ದೆ.. ಅಷ್ಟರಲ್ಲಿ.. ಅವಳು ಮನೆಗೆ ಕರೆ ಮಾಡುತ್ತೀನಿ ಎಂದು.. ನಾ ನಿಂತ ಜಾಗದಿಂದ ತುಸು ಮೇಲೆ ಏರಿ .ಮಾತಾಡುತ್ತಿದ್ದಳು.. ಅಚಾನಕ್ ದೊಡ್ಡ ಶಬ್ದ.. ಮಿಂಚು.. ಸಿಡಿಲು.. ಗುಡುಗು.. ಸಿಡಿಲು ಅವಳ ಬಳಿಯೇ ಇದ್ದ ಮರಕ್ಕೆ ಬಡಿಯಿತು.. ಆ ಮರ ಹಾಗೆ ಸುಟ್ಟು ಕರಕಲಾಗಿ ಅವಳ ಮೇಲೆ ಅನಾಮತ್ ಬಿದ್ದೆ ಬಿಟ್ಟಿತು.. "ರೀ" ಅಂತ ಕೂಗಿದ್ದಷ್ಟೇ ಕೇಳಿದ್ದು ನನಗೆ.. ನಾ ಎಡವಿ ಬಿದ್ದೆ.. ಅವಳಿಗೆ ಏನಾಯಿತು ಎಂದು ನನಗೆ ತಿಳಿದದ್ದು ಹದಿನೈದು ದಿನಗಳಾದ ಮೇಲೆ.. ನಮ್ಮನ್ನೆಲ್ಲ ಬಿಟ್ಟು ಹೊರಟೆ ಹೋಗಿದ್ದಳು.. ಆ ಮರ ಅವಳ ಮೇಲೆ ಬಿದ್ದು.. ಅವಳ ಎದೆಗೆ ಬಲವಾದ ಪೆಟ್ಟು ನೀಡಿತ್ತು.. ಆ ನೋವಿಗೆ ಅವಳು ಎರಡು ದಿನ ಒದ್ದಾಡಿ ಕಡೆಗೆ ಇಹಲೋಕದಿಂದ ಹೊರಟು ಬಿಟ್ಟಳಂತೆ... ನಾ ಎಡವಿ ಬಿದ್ದಾಗ.. ನನ್ನ ತಲೆಗೆ ಕಲ್ಲು ಬಡಿದು.. ನಾ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದನಂತೆ.. ಅಲ್ಲಿದ್ದ ಪ್ರವಾಸಿಗರು ನಮ್ಮಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು.. ಮಿಂಚಾಗಿ ವಿಧಿ ಬಂದು ನನ್ನ ಬಾಳಿನ ಬೆಳಕನ್ನೇ ಹೊತ್ತೊಯ್ದಿತ್ತು... ಇದೆ ನನ್ನ ಕಥೆ.. "
ಕೃಪೆ - ಗೂಗಲೇಶ್ವರ 

"ಸಾರಿ ಉಮೇಶ.. ನಿಮ್ಮ ಕತೆಯನ್ನು ಕೇಳಿ.. ನಿಮ್ಮ ಹಳೆಯ ನೆನಪನ್ನು ಮತ್ತೆ ಕೆದಕಿದೆ.. ಸಾರಿ"

ಸಿರಿಯಾ ಕೈಯನ್ನು ಮುಟ್ಟಿ.. "ಛೆ ಹಾಗೇನು ಇಲ್ಲ.. ಜೀವನದಲ್ಲಿ ಇವೆಲ್ಲ ಇದ್ದದ್ದೇ.. ಹುಟ್ಟು ಸಾವು ಬಾಳಿನಲ್ಲಿ  ಎರಡು ಕೊನೆಗಳು ಅಂತ ಅಣ್ಣಾವ್ರು ಹೇಳಿಲ್ಲವೇ.. " ಉಮೇಶ ಪೇಲವವಾಗಿ ನಕ್ಕು ... ವಾತಾವರಣವನ್ನು ತಿಳಿ ಮಾಡಿದ..

"ಉಮೇಶ್ ನನ್ನದು ನಿಮ್ಮಷ್ಟು ದುಃಖಭರಿತ ಅಂತ್ಯವಲ್ಲ.. ನಾ ಮದುವೆಯಾಗಿ ಆರು ವರ್ಷಗಳಾಗಿತ್ತು.. ಸ್ವಲ್ಪ ಬೇಗನೆ
ಮದುವೆಯಾಗಿದ್ದೆ.   ಸುಖಿ ಜೀವನ ನನ್ನದಾಗಿತ್ತು.. ಅವರಿಗೆ ಬೇರೆ ದೇಶದಲ್ಲಿ ಕೆಲಸ ಸಿಕ್ಕಿತ್ತು.. ಅಲ್ಲಿಗೆ ಹೋಗಿ ನೆಲೆಸೋಣ ಅಂದರು.. ನಾ ಬೇಡ...  ನನ್ನ ದೇಶ.. ನನ್ನ ಭಾಷೆ.. ನನ್ನ ನೆಲ. . ನನ್ನ ನಿನ್ನ ತಂದೆ ತಾಯಿ ಎಲ್ಲರನ್ನೂ ಬಿಟ್ಟು.. ಪರದೇಶಕ್ಕೆ ಹೋಗಿ ಅಲ್ಲಿ ಪರದೇಶಿಯಾಗಿ ಬಾಳೋಕ್ಕಿಂತ ಹೀಗೆ ಇಲ್ಲಿಯೇ ಇದ್ದು ಬದುಕೋಣ ಎಂದಾಗ.. ನೀ ಹೇಳೋದು ಸರಿ ಎಂದು ಹೇಳಿದರೂ.. ಅವರ ತಲೆಯೊಳಗೆ ಅದೇ ಓಡುತ್ತಿತ್ತು.. ಒಂದು ದಿನ ಮತ್ತೆ ಇದನ್ನೇ ಹೇಳಿ ಮತ್ತೆ ನಿರ್ಧಾರ ನನ್ನದು ಎನ್ನುವ ಹಂತಕ್ಕೆ ಬಂದರು.. ನಾ ಬೇಡವೆಂದರೂ.. ಕೇಳಲಿಲ್ಲ.. ಒಳ್ಳೆಯ ಸಂಪಾದನೆ ಆಗುತ್ತೆ.. ಜೀವನವನ್ನು ನೆಮ್ಮದಿಯಾಗಿ.. ಜಾಲಿಯಾಗಿ ಕಳೆಯಬಹುದು ಎನ್ನುವ ಉತ್ತರ.. ಇದೆ ವಿಷಯವಾಗಿ ಹಲವಾರು ಬಾರಿ  ಮಾತಾಡಿದರೂ ಬಗೆ ಹರಿಸಲಾಗುತ್ತಿರಲಿಲ್ಲ.. ಕಡೆಗೆ ಒಂದು ದಿನ.. ಅರುಣರಾಗ ಚಿತ್ರದ "ನಾನೊಂದು ತೀರಾ.. ನೀನೊಂದು ತೀರಾ" ಎನ್ನುತ್ತಾ ಹೊರಟೆ ಬಿಟ್ಟರು.. ಆ ಹಾಡು ಹೇಗಿತ್ತು ಅಂದರೆ.. ನಾ ನೊಂದು ತೀರಾ.. ನೀ ನೊಂದು ತೀರಾ.. ಮನಸು ಮನಸು ದೂರ ಎನ್ನುತ್ತಾ ದೂರವಾದೆವು.. ಈಗ ನನ್ನ ಬದುಕು ನನ್ನದು.. ನನ್ನ ಬಾಳು ನನ್ನದು ಎನ್ನುವ ಹಂತಕ್ಕೆ ಬಂದಿದ್ದೇನೆ.. "
ಕೃಪೆ - ಗೂಗಲೇಶ್ವರ 
ಹೀಗೆ ಸಾಗಿತ್ತು. ಇಬ್ಬರ ಬಾಳಿನ ಬಂಡಿಯ ಹಿಂದಿನ ಚಕ್ರದ ಮಾತುಗಳು..

ಹೊಟ್ಟೆ ಹಸಿದಿತ್ತು.. ಹತ್ತಿರದಲ್ಲಿಯೇ ಇದ್ದ ಒಂದು ಈಟಿಂಗ್ ಪಾಯಿಂಟ್ ನಲ್ಲಿ ಮಸಾಲೆ ದೋಸೆ.. ಮತ್ತು ಸೆಟ್ ದೋಸೆ ತಿಂದು.. ಕಾಫಿ ಕುಡಿದು.. ಇಬ್ಬರೂ ಕೈ ಕುಲುಕಿ ಹೊರಟಾಗ ರಾತ್ರಿ ಒಂಭತ್ತಾಗಿತ್ತು..

ಮೂರು ಘಂಟೆಗಳ ಮಾತುಕತೆ ಇಬ್ಬರ ಮನದಲ್ಲಿಯೂ ಹಕ್ಕಿಯನ್ನು ಹಾರಿಸುತ್ತಿತ್ತು.... ಮುಂದೇ .... :-)