Friday, April 13, 2018

ಕುರುಡಲ್ಲದ... ಕುರುಡು.. ಮಾಡುವ ಕಾಂಚಾಣ

ಹಣದಿಂದ ನೆಮ್ಮದಿ ಸಿಗುತ್ತೆ... ... ಅರೆ ಯಾರಪ್ಪ ಸಿಗುತ್ತೆ ಅಂತ ಹೇಳಿದ್ದು.. ಕರೆಕೊಂಡು ಬನ್ರಪ್ಪ ನನ್ನ ಮುಂದೆ.. ಸ್ವಲ್ಪ ಹೊತ್ತು ಮಾತಾಡೋಣ.. ಅಲ್ವಾ

ಹಣದಿಂದ ನೆಮ್ಮದಿ ಸಿಗುತ್ತೆ ಎನ್ನುವುದು ಒಂದು ತಪ್ಪು ಕಲ್ಪನೆ.. ಜಗತ್ತು ಹಣದ ಮೇಲೆ ನಿಂತಿದೆ.. ಇರಬಹುದು.. ಹಣ ಬೇಕು ಬದುಕಲು... ಜೀವಿಸಲು.. ಬಾಳಲು.. ಆದರೆ ಹಣವಿಲ್ಲದ ಜನತೆ ಬದುಕುತ್ತಿಲ್ಲವೇ... ಬಾಳುತ್ತಿಲ್ಲವೇ..

ಹಣವಿರಬೇಕು ನಿಜ.. ಆದರೆ ಅದು ನೆಮ್ಮದಿಗಲ್ಲ..

ಪುಸ್ತಕಗಳಲ್ಲಿ ಓದಿದ ನೆನಪು.. ಹಣದಿಂದ ಹಣ್ಣನ್ನು ಕೊಳ್ಳಬಹುದು.. ಆದರೆ ಹಸಿವನಲ್ಲ, ತೃಪ್ತಿಯನ್ನಲ್ಲ.. ಹಣದಿಂದ ಪ್ರವಾಸಕ್ಕೆ ಹೋಗಬಹುದು.. ಆದರೆ ಸಂತಸವನ್ನ ಕೊಂಡುಕೊಳ್ಳಲು ಆಗುವುದಿಲ್ಲ..

ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ ಅಂತ ಅಣ್ಣಾವ್ರ ಚಿತ್ರದ ಹಾಡಿದೆ.. ನಿಜ.. ಆದರೆ ಹಣ ಎನ್ನುವ ಈ ಮಾಯಾ ಬೊಂಬೆ ಏನೆಲ್ಲಾ ಅನಾಹುತ ಮಾಡುತ್ತದೆ  ಎಂದು ತಿಳಿಯಬೇಕೇ.. ಒಂದು ಪುಟ್ಟ ಕತೆ ಹೇಳುತ್ತೇನೆ ಕೇಳಿ.. ಪುಸ್ತಕದಲ್ಲಿ ಓದಿದ್ದು..

ಒಬ್ಬ ರೈತ.. ಕಷ್ಟ ಪಟ್ಟು ದುಡಿದು ತನ್ನ ಸಂಸಾರವನ್ನು ಸಾಕುತ್ತಿದ್ದ.. ನೆಮ್ಮದಿಯಾಗಿದ್ದ.. ನೆಂಟರು, ಮಿತ್ರರು ಬೇಕಾದಷ್ಟು ಇದ್ದರು.. ಎಲ್ಲರೊಡನೆ ವಿಶ್ವಾಸ, ಪ್ರೀತಿಯಿಂದ ಇರುತ್ತಿದ್ದ.. ದೇವರ ಮೇಲಿನ ಭಕ್ತಿ, ಶ್ರದ್ಧೆ.. ಗುರುಹಿರಿಯರನ್ನು ಕಂಡರೆ ಗೌರವ ಎಲ್ಲವೂ ಇತ್ತು.. ಸುಖ ಸಂತೋಷ ನೆಮ್ಮದಿಗಳಿಗೆ ಅವನ ಮನೆ ತವರು ಮನೆಯಾಗಿತ್ತು..

ಒಮ್ಮೆ ದೇವನು ಅವನನ್ನು ಪರೀಕ್ಷಿಸಲು.. ಅವನ ಮನೆಯ ಮುಂದೆ ಒಂದು ಪುಟ್ಟ ಚೀಲ... ಚೀಲ ಅಂದರೆ ಹಳ್ಳಿಯ ಹಿರಿಯವರು ಸೊಂಟದಲ್ಲಿ ಸಿಕ್ಕಿಸಿಕೊಳ್ಳುವ ಎಲೆ ಅಡಿಕೆ ಚೀಲ ಎಂದುಕೊಳ್ಳಿ .. ಆ ತರಹ ಪುಟ್ಟ ಚೀಲದಲ್ಲಿ ಒಂದಷ್ಟು ಬಂಗಾರದ ನಾಣ್ಯಗಳನ್ನು ತುಂಬಿ ಮನೆಯ ಮುಂದೆ ಇಟ್ಟ.. ಬೆಳಿಗ್ಗೆ ಎದ್ದ ರೈತ ಅದನ್ನು ನೋಡಿ.. ಖುಷಿಯಿಂದ ಅತ್ತಿತ್ತ ನೋಡಿದ.. ಯಾರೂ ಕಾಣಲಿಲ್ಲ.. ಒಂದೆರಡು ದಿನ ಕಾದು ನೋಡಿದ.. ಯಾರಾದರೂ ಕೇಳಿಕೊಂಡು ಬರುತ್ತಾರೋ ಅಂತ..

ಸರಿ.. ದೇವರೇ ಕರುಣಿಸಿರಬೇಕು ಎಂದು.. ಆ ಚೀಲವನ್ನು ಬಿಚ್ಚಿ ನೋಡಿದ.. ಖುಷಿಯಾಯಿತು.. ತನ್ನ ಬಡತನ ನಿವಾರಣೆಯಾಯಿತು ಎಂದು ಸಂತಸ ಪಟ್ಟ.. ಒಂದೊಂದೇ ನಾಣ್ಯಗಳನ್ನು ಎಣಿಸಿದ.. ೯೯ ಇತ್ತು.. ಅರೆ ತಪ್ಪಾಗಿದೆ ಎಂದು ಮತ್ತೆ ಎಣಿಸಿದ.. ಮರು ಎಣಿಸಿದ.. ನಿಧಾನವಾಗಿ ಎಣಿಸಿದ.. ಉಫ್.. ೯೯ ಇತ್ತು..

ಯೋಚನೆ ಶುರುವಾಯಿತು.. ಇದನ್ನು ನೂರು ಮಾಡಬೇಕು ಎಂದು.. ಅಂದಿನಿಂದ ಅವನ ಜೀವನ ಶೈಲಿ ಬದಲಾಯಿತು.. ಹಣ ಉಳಿಸಲು ಶುರುಮಾಡಿದ, ದುಡಿಮೆ ಮಾಡುವಾಗ ಹೇಗಾದರೂ ಅಧಿಕ ಹಣ ಗಳಿಸಿ ೯೯ ನಾಣ್ಯವನ್ನ ನೂರು ಮಾಡಬೇಕು ಎಂದು ಹಠ ಹಿಡಿದ.. ಮೋಸ ವಂಚನೆ, ಸುಳ್ಳು ಎಲ್ಲವೂ ಅವನ ಬಳಿ ಬಂದವು.. ಮನೆಯಲ್ಲಿ ನೆಮ್ಮದಿ ಹೋಯಿತು.. ಬಂಧು ಮಿತ್ರರು ದೂರವಾದರು.. ಕಡೆಗೂ ಅವನಿಗೆ ೯೯ ಇಂದ ೧೦೦ ಮಾಡಲು ಆಗಲೇ ಇಲ್ಲ..

ಯೋಚಿಸುತ್ತಾ ಕುಳಿತು ಆರೋಗ್ಯ ಹಾಳಾಯಿತು, ನಿದ್ದೆ ದೂರಾಯಿತು.. ನೆಮ್ಮದಿ ಎಗರಿ ಹೋಯಿತು...

ದೇವ ಕನಸಲ್ಲಿ ಬಂದು ಹೇಳಿದ.. "೯೯ ನ್ನು ಮರೆತು ಬಿಡು.. ಅದು ನಿನಗೆ ಶಾಪ.. ನೀ ಸಂಪಾದಿಸುವ ಹಣವೇ ಸಾಕು.. ನಿನ್ನ ಬದುಕಿಗೆ ಎಷ್ಟು ಬೇಕೋ ಅಷ್ಟು ಹಣವೇ ಸಾಕು.. "

ಬೆಳಿಗ್ಗೆ ಎದ್ದು.. ಸೀದಾ ಕೆರೆಯ ಹತ್ತಿರ ಹೋಗಿ.. ಆ ಬಂಗಾರದ ನಾಣ್ಯಗಳನ್ನು ನೀರಿಗೆ ಬಿಟ್ಟ.. ಮನಸ್ಸಲ್ಲಿ ಇದ್ದ ದೆವ್ವ ಕೂಡ ಮರೆಯಾಯಿತು.. ಕೆಲವೇ ದಿನಗಳು ಮತ್ತೆ ಮೊದಲಿನಂತಾದ

ಈಗ ಹೇಳಿ.. ಹಣ ಮಾಡಿದ ಕೆಲಸ.. ಅವನದ್ದು ದುರಾಲೋಚನೆ ಅಥವಾ ಅಸೆಬುರುಕತನವಾಗಿರಲಿಲ್ಲ.. ಆದರೆ ೯೯ ನಾಣ್ಯ ನೂರು ಮಾಡಲು ಹೋಗಿದ್ದು ತಪ್ಪೇ ಆದರೂ.. ೯೯ ಸಿಗದೇ ಇದ್ದಿದ್ದರೆ.. ನಾ ನಿಮ್ಮ ಮುಂದೆ ಈ ಮಾತುಗಳನ್ನು ಹೇಳೋಕೆ ಕಥೆ ಇರುತ್ತಿರಲಿಲ್ಲ ಅಲ್ಲವೇ


ಹಣ ಎಷ್ಟು ಬೇಕೋ ಅಷ್ಟು ಇರಬೇಕು.. ಆದರೆ ಹಣದಿಂದ ನೆಮ್ಮದಿ ಎನ್ನುವ ಮಾತು.. ಮಾವಿನ ವಾಟೆ ಬಿತ್ತಿ ಬೇವಿನ ಕಾಯಿ ಬಿಟ್ಟ  ಅಲ್ವೇ ..

ಇನ್ನೂ ಉದಾಹರಣೆ ಬೇಕೇ.. ಅಣ್ಣಾವ್ರ ಒಂದು ಮುತ್ತಿನ ಕಥೆ ಸಿನಿಮಾ ನೋಡಿ :-)

4 comments:

  1. Havdu Anna duddu manasina nemmadi haalu maadutthe... ondu mutthina katheyu hanada melina aase torisidare ... Bhagyada lakshmi baramma chitradalli koda haasyamavagi duddu sambhandagalannu doora maadutthe annodu toorisiddare...

    Chandada baraha Anna ... preethi sambhandagalu kodo nemmadi duddu kodola annodu aksharasaha nija Anna....

    ReplyDelete
  2. ಕಣ್ಣು ತೆರೆಯಿಸುವ ಕಥೆಯನ್ನು ಮನ ಮುಟ್ಟುವಂತೆ ಹೇಳಿದ್ದೀರಿ,ಶ್ರೀಕಾಂತ. ಧನ್ಯವಾದಗಳು

    ReplyDelete
    Replies
    1. ಧನ್ಯವಾದಗಳು ಗುರುಗಳೇ.. ಸುಂದರವಾದ ಸ್ಪೂರ್ತಿದಾಯಕ ಪ್ರತಿಕ್ರಿಯೆ

      Delete