Monday, April 2, 2018

ಶ್ರೀ ಬೊಬ್ಬೆ ರಾಮಯ್ಯನವರ ಜೊತೆ ಒಂದು ಸುತ್ತು - ಮೊದಲನೇ ಆವೃತ್ತಿ 2018

"ಕೇಳ್ರಪ್ಪೋ ಕೇಳ್ರಿ.. ನಾಳೆ ಪಂಚಾಯತಿ ಕಟ್ಟೆಯ ಹತ್ತಿರ ಎಲ್ಲರೂ ಸೇರಬೇಕು.. ಎಲ್ಲರೂ ಊಟದ ಹೊತ್ತಿಗೆ ಬನ್ನಿ.. ಅಲ್ಲಿಯೇ ಊಟದ ವ್ಯವಸ್ಥೆ ಇರುತ್ತೆ.... "
ಟಂ ಟಂ ಟಾಮ್

ಡಂಗೂರ ಸಾರುವವ ಹೇಳಿಕೊಟ್ಟಿದ್ದನ್ನು ಹೇಳುತ್ತಾ ಬೀದಿ ಬೀದಿ ಸುತ್ತಿ ಹೇಳಿದ... 

ಮರುದಿನ.. ಊಟದ ಸಮಯ.. ಎಲ್ಲರೂ ಅರಳಿ ಕಟ್ಟೆಯ ಸುತ್ತಾ ನೆರೆದಿದ್ದರು.. ಯಾರ ಕೇಸು.. ಯಾರಿಗೆ ಶಿಕ್ಷೆ ಎನ್ನುವ ಮಾತೆ ಇರಲಿಲ್ಲ.. ಅದು ಆನಂದ ಲೋಕ.. ಅರಿಷಡ್ವರ್ಗಗಳ ಪದವೂ ಸುಳಿಯದ ತಾಣವದು... 

ಎಲ್ಲರೂ ಕುತೂಹಲದಿಂದ ಕಟ್ಟೆಯನ್ನೇ ನೋಡುತ್ತಾ ಕೂತಿದ್ದರು.. ಸುಮಾರು ಆರು ಅಡಿ ಎತ್ತರದ ಆಜಾನುಭಾವ ಶರೀರದ ವ್ಯಕ್ತಿ ಕೆಲವರೊಡನೆ ಮಾತಾಡುತ್ತಾ ಬಂದರು.. .. ವಯಸ್ಸಾಗಿದೆ ಎಂಬ ಸೂಚನೆಗಳು ಶರೀರದಲ್ಲಿದ್ದರೂ.. ನೆಡೆಯುವ ಠೀವಿ.. ತನ್ನ ಜೊತೆಯಲ್ಲಿ ಬಂದವರ ಜೊತೆ ಮಾತಾಡುತ್ತಾ ಬರುವಾಗ ಕೇಳುತ್ತಿದ್ದ ಕಂಚಿನ ಕಂಠ.. ಆ ಧ್ವನಿಯನ್ನು ಕೇಳಿಯೇ ಎಲ್ಲರೂ ಗಪ್ ಚುಪ್.. 

ಕೈಯಲ್ಲಿಯೇ ಎಲ್ಲರೂ ಕೂಡಿ.. ಎಂದು ಸನ್ನೆ ಮಾಡಿದರು.. ಅಲ್ಲಿದ್ದವು ಕೈಮುಗಿದು.. ಹೆಗಲ ಮೇಲಿದ್ದ ಟವೆಲನ್ನು ಒಮ್ಮೆ ಜಾಡಿಸಿ... ಕೆಳಗೆ ಕುಳಿತರು..

ಕೂತ ಮೇಲೆ ಸಣ್ಣ ಗುಸು ಗುಸು.. 

"ಸದ್ದು ಸದ್ದು.. " ಆ ಸದ್ದಿಗೆ ಎಲ್ಲರೂ ಬೆಚ್ಚಿ.. ಸೂಜಿ ಬಿದ್ದರು ಕೇಳಿಸುವಷ್ಟು ನಿಶ್ಶಬ್ದದಿಂದ ಕುಳಿತರು.. 

"ನೋಡ್ರಪ್ಪಾ.. ನಾನೆರಡು ದಿನ ಊರಲ್ಲಿ ಇರಲಿಲ್ಲ. .ನೀವೆಲ್ಲರೂ ಗಾಬರಿಯಿಂದ ಹುಡುಕಾಡಿದಿರಿ ಎಂದು ಗೊತ್ತಾಯಿತು.. ನನ್ನ ಮನೆಯ ಹಾದಿಯಲ್ಲಿದ್ದ ಹಿರೀಕರು, ನನ್ನ ಮಡದಿ, ಮಕ್ಕಳು.. ಎಲ್ಲರೂ ಗಾಬರಿಯಾಗಿದ್ದರು ಎನ್ನುವ ವಿಚಾರ ನನಗೆ ತಿಳಿಯಿತು.. ಅದಕ್ಕೆ ಈ ಕಟ್ಟೆಗೆ ಎಲ್ಲರೂ ಬನ್ನಿ ಅಂತ ನಾನೇ ಡಂಗೂರ ಹೊಡೆಸಬೇಕಾಯಿತು .. ಮತ್ತೆ ನಾನೇ ನಿಮನ್ನೆಲ್ಲ ಬರ ಹೇಳಿದ್ದರಿಂದ.. ಊಟದ ವ್ಯವಸ್ಥೆ ನನ್ನದೇ ಆಗಿದೆ.. ನೀವೆಲ್ಲ ಊಟ ಮಾಡಿ ಬನ್ನಿ.. ನಂತರ ಮುಂದುವರೆಸುವ"

ಎಂದು ಹೇಳಿದ್ದೆ.. ತಾವೇ ಖುದ್ದಾಗಿ ಊಟೋಪಚಾರ ವ್ಯವಸ್ಥೆಯನ್ನು ಹೊತ್ತಿದ್ದ ಶಂಕರನ ಕಡೆ ತಿರುಗಿ.. "ನೋಡು ಶಂಕರ.. ಎಲ್ಲರೂ ಅಚ್ಚುಕಟ್ಟಾಗಿ ಊಟ ಮಾಡಬೇಕು.. ಅದರ ಜವಾಬ್ಧಾರಿ ನಿನ್ನದು.. "  

"ಕೃಷ್ಣ.. ನೀನು ಎಲ್ಲರೂ ಬಂದಿದ್ದಾರೆ ಎಂದು ವಿಚಾರಿಸಿ.. ಪ್ರತಿಯೊಬ್ಬರನ್ನು ಗಮನಿಸಬೇಕು.. "

"ಚೆಲುವಮ್ಮ (ಚೆನ್ನಮ್ಮ) ನೀ ಬಂದ ಹೆಣ್ಣುಮಕ್ಕಳಿಗೆ, ಮಕ್ಕಳಿಗೆ.. ಅರಿಶಿನ ಕುಂಕುಮ ಕೊಡಬೇಕು.. "

"ಏನ್ರಿ.. ಲಕ್ಷ್ಮಿ ದೇವಮ್ಮನವರೇ.. ಎಲ್ಲಾ ವ್ಯವಸ್ಥೆ ಸರಿಯಾಗಿ ಮಾಡಿದ್ದೀರಾ ನೀವು ಅಂತ ಗೊತ್ತು.. ಆದರೂ  ಮಕ್ಕಳ ಸುತ್ತಲೇ ಓಡಾಡುತ್ತಾ.. ಎಲ್ಲವನ್ನು ಗಮನಿಸಬೇಕು.." 

"ನೋಡ್ರಪ್ಪಾ.. ಊಟೋಪಚಾರ ಮುಗಿದ ಮೇಲೆ.. ಮತ್ತೆ ಇದೆ ಅರಳಿಕಟ್ಟೆಯ ಹತ್ತಿರ ಬನ್ನಿ.. "

ಆ ಕಂಚಿನ ಕಂಠಕ್ಕೆ ಇಲ್ಲಾ ಅಂದವರು ಉಂಟೆ.. ತುಟಿ ಪಿಟಿಕ್ ಅನ್ನದೆ ಮುಂದಿನ ಮೂವತ್ತು ನಿಮಿಷಗಳು ಸರ್ ಅಂತ ಕಳೆದೆ ಹೋಯ್ತು.. 

ಹೇಳಿದ ಹಾಗೆ ಎಲ್ಲರೂ ಅರಳಿಕಟ್ಟೆಯ ಹತ್ತಿರ ಮತ್ತೆ ಬಂದು ಕೂತರು.. 

ಎಲ್ಲರ ಕಿವಿಗಳು ನೆಟ್ಟಗಿದ್ದವು.. ಮೊದಲೇ ಸಡ್ಡು ಗದ್ದಲವಿಲ್ಲದ ಲೋಕ ಅದು.. ಇವರ ಧ್ವನಿ ಮತ್ತೆ ಮಾರ್ದನಿಯಾಗುವಷ್ಟು ನಿಶ್ಯಬ್ಧ.. ಭೂಲೋಕದ ಮಲ್ಟಿಪ್ಲೆಕ್ಸ್ ಥೀಯೇಟರ್ ತರಹ ಸೌಂಡ್ ಸಿಸ್ಟಮ್ ಬೇಕೇ ಆಗಿರಲಿಲ್ಲ.. ಅಷ್ಟು ಖಡಕ್ ಆಗಿತ್ತು ಅವರ ಧ್ವನಿ.. 

"ನಿಮಗೆಲ್ಲ ಒಂದು ಸಂತಸದ ವಿಚಾರ.. ನನ್ನ ಕುಟುಂಬದ ವಂಶವೃಕ್ಷ ದೊಡ್ಡದಾಗಿದೆ.. ಜಗದಗಲ ಪಸರಿಸಿದೆ.. ಕಳೆದ ಶನಿವಾರ ಊಟ ಮಾಡಿ ನೆಡೆಕೊಂತ ಹೋಗಿದ್ದ ನಾನು.. ಬಂದದ್ದು ಭಾನುವಾರ ಸಂಜೆ ಐದು ಘಂಟೆಗೆ ಅಲ್ವೇ.. "

ಎಲ್ಲರೂ ಅಭ್ಯಾಸವಾಗಿದ್ದ ಹಾಗೆ ತಲೆ ತೂಗಿದರು.. 

"ನಿಮಗೆಲ್ಲ ಅಚ್ಚರಿ / ಕುತೂಹಲ / ಪ್ರಶ್ನೆ ಇತ್ಯಾದಿ ಎಲ್ಲವೂ ಇದೆ ಅಂತ ನನಗೆ ಗೊತ್ತು.. .ಆದರೆ ನೀವೆಲ್ಲ ನನ್ನ ದನಿಗೆ ಹೆದರಿ.. ಏನೂ ಮಾತಾಡುತ್ತಿಲ್ಲ / ಕೇಳುತ್ತಿಲ್ಲ.. ಅದಕ್ಕೆ ನಾನೇ ಉತ್ತರ ಕೊಡುತ್ತಿದ್ದೇನೆ.. .. ಎಲ್ಲರೂ ಎದುರಿಗೆ ಇರುವ ಪರದೆಯನ್ನು ನೋಡಿ.. ಒಂದು ದಿನದ ಪೂರ್ತಿ ವಿವರ ನಾನೇ ಹೇಳುತ್ತಾ ನಿಮಗೆಲ್ಲ ವಿವರಿಸುತ್ತೇನೆ.. "

*******
ವಿಜಯನಗರದ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯ.. ಸುಮಾರು ಐದು ಶತಮಾನಗಳ ಹಿಂದೆ ನಮ್ಮ ಗ್ರಾಮದ ಪೂರ್ವಜರಿಗೆ ಕೊಟ್ಟ ಸ್ಥಳವೇ ನಾ ಹುಟ್ಟಿ ಬೆಳೆದ ಊರು "ಕಿತ್ತಾನೆ"  ನನ್ನ ಮಕ್ಕಳು ಇರುವ ತನಕ ವರ್ಷಕ್ಕೊಮ್ಮೆ ಹೋಗಿ ಬರುತ್ತಿದ್ದೆ.. ಈಗ ನನ್ನೆಲ್ಲ ಮಕ್ಕಳು ನನ್ನ ಬಳಿಗೆ ಬಂದಿದ್ದಾರೆ.. ಈಗ ಹೋಗುವ ಅವಕಾಶವಿರಲಿಲ್ಲ.. ಆದರೆ ನನ್ನ ಮೊಮ್ಮಕ್ಕಳು ಒಂದಾಗಿ ಕೂಡಿ.. ಕುಟುಂಬ ಮಿಲನ ಕಾರ್ಯಕ್ರಮ ಮಾಡುತ್ತಿದ್ದಾರೆ ಎನ್ನುವ ವಿಷಯ ತಿಳಿದಾಗ.. ಬಲು "ಸಂತೋಷ"ವಾಯಿತು.. ಅದಕ್ಕೆ ನಿಮಗೆಲ್ಲ ಹೇಳದೆ ಮೆಲ್ಲನೆ ನಾನೇ ಹೋಗಿ ಬಂದೇ.. "

ಎಲ್ಲರೂ "ಹೋ ಹೋ" ಅಂತ ಕೂಗುತ್ತಾ "ನಾವು ಬರುತ್ತಿದ್ದೆವು.." ಎಂದಾಗ.. 

"ಸದ್ದು ಸದ್ದು" 

ಪಿನ್ ಡ್ರಾಪ್ ಸೈಲೆನ್ಸ್!!!!

"ನನ್ನ ಕುತೂಹಲ ತಣಿಸುವುದಕ್ಕಾಗಿ ನಾ ಹೋಗಿ ಬಂದೆ.. ಅದರ ವಿವರವನ್ನು ಈಗ ಕೊಡುತ್ತೇನೆ.. ಮುಂದಿನ ವರ್ಷವೂ.. ಮತ್ತೆ ಪ್ರತಿ ವರ್ಷವೂ ಈ ಕಾರ್ಯಕ್ರಮ ನೆಡೆಯುತ್ತೆ.. ಮುಂದಿನ ವರ್ಷ ನಾವೆಲ್ಲರೂ ಒಟ್ಟಿಗೆ ಹೋಗೋಣ ..ಈಗ ಕಾರ್ಯಕ್ರಮದ ವಿವರ.. ಅಲ್ಲೇ ನೋಡಿ ಪರದೆಯ ಮೇಲೆ.. ಚಿತ್ರ ಮೂಡುತ್ತಿದ್ದೆ ತಾನೇ.. "

ಎಲ್ಲರೂ ಮಂತ್ರ ಮುಗ್ಧರಾಗಿ ಪರದೆಯ ಮೇಲಿನ ಚಿತ್ರವನ್ನು ನೋಡುತ್ತಾ ಕೂತರು.. 

ಚುಮು ಚುಮು ಚಳಿ.. ಎಲ್ಲೆಡೆಯೂ ಮಂಜು ಮಂಜು.. ಹಳ್ಳಿಯ ಮರಗಿಡಗಳು ಮಂಜನ್ನು ಹೊದ್ದು ಮಲಗಿತ್ತು.. . 




ಅಲ್ಲೊಂದು ಇಲ್ಲೊಂದು ಹಕ್ಕಿಗಳು ಕೂಗುತಿತ್ತು... ವಸಂತಕಾಲ.. ಚಿಗುರು.... ಹಸಿರು.. ಉಸಿರು ತುಂಬಿಕೊಂಡಿದ್ದ ತರುಲತೆಗಳನ್ನು ನೋಡುತ್ತಾ ಹಳ್ಳಿದಾರಿಯಲ್ಲಿ ನೆಡೆಯುತ್ತಾ ಸಾಗಿದೆ.. ಕಳೆದ ಹಲವಾರು ವರ್ಷಗಳಲ್ಲಿ ನಾ ನೋಡಿದ ನನ್ನ ಹಳ್ಳಿ ತುಂಬಾ ಬದಲಾಗಿದೆ... ನೆಡೆಯುತ್ತಾ ಹೋದಂತೆ.. ಅರೆ.. ತುಂಬಾ ದೂರ ಇದೆಯಾ ಅಂತ ಅಕ್ಕ ಪಕ್ಕ ನೋಡಿದೆ.. ಮೈಲಿಗಲ್ಲು ಕಂಡೆ ಬಿಟ್ಟಿತು.. 



ಮನ ಪುಳಕಗೊಂಡಿತು.. ಅರೆ ಅನತಿ ದೂರದಲ್ಲಿಯೇ ಇದೆ ನನ್ನೂರು.. ನನ್ನ ಮನೆ.. ನನ್ನ ಬಾಂಧವರು.. ನನ್ನ ಬಳಗ.. ನನ್ನ ಮೊಮ್ಮಕ್ಕಳು....   ಅರೆ ವಾಹ್.. 




ನಾ ಓಡಾಡಿದ್ದ ಕೆರೆ ಏರಿಗೆ ಟಾರು ಬಂದಿದೆ.. ನಮ್ಮೂರಿಗೆ ಹೆಬ್ಬಾಗಲಾಗಿದ್ದ ಮರ ಹಾಗೆ ಇದೆ.. ನನ್ನ ಸ್ವಾಗತಿಸಲು.. ಹೂಗಳು ಅರಳಿವೆ.. ಅರೆ ಅರೆ ಇನ್ನೂ ನನ್ನೂರಿನಲ್ಲಿ ಸೌದೆ ಓಲೆ ಇದೆ.. ಚಿಮಣಿಯಿಂದ ಬರುವ ಹೊಗೆಯನ್ನು ನೋಡೋದೇ ಅಂದ.. 






ಮಕ್ಕಳಿಗೆ ಬೆಳೆಯಲು ಅನುಕೂಲವಾಗುವ ಹಾಲು ಕೊಡುವ ಎಮ್ಮೆಗಳು, ಎತ್ತುಗಳು, ಹಸ್ಸುಗಳು ಇವೆ.. ವಾಹ್ ಎಷ್ಟು ಸುಂದರ ನನ್ನ ಊರು.. ಅರೆ ಉಡುಸಲಮ್ಮ ದೇವಿಗೆ ಹೊಸ ದೇಗುಲವಾಗುತ್ತಿದೆ.. ಮುಂದಿನ ಬಾರಿ ನನ್ನ ಮಡದಿಯನ್ನು ಮಕ್ಕಳನ್ನು ಕರೆತರಬೇಕು.. 

ಹೀಗೆ ಮಾತಾಡುತ್ತಾ ಹೆಜ್ಜೆ ಹಾಕುತ್ತಾ ಬಂದೆ.. ನನ್ನ ದೊಡ್ಡ ಬಳಗದ ಹಾಜರಿ ಆಗಲೇ ಆಗಿತ್ತು.. ಎಲ್ಲರೂ ನಗು ನಗುತ್ತಾ ಮಾತಾಡುತ್ತಾ ಸ್ವಾಗತಿಸುತ್ತಿದ್ದರು.. ಊಟದ ಸಮಯಕ್ಕೆ ಎಲ್ಲರೂ ಸೇರಬೇಕು ಎನ್ನುವ ಮಾತಿನಂತೆ ಬಂದು ಸೇರುತ್ತಿದ್ದರು.. ಎಲ್ಲರೂ ಸೇರಿ ಆನಂದಮಯವಾಗಿ ಊಟ ಮಾಡೋದೆ ಸೊಗಸು.. ಎಲ್ಲರ ಮೊಗದಲ್ಲೂ ಆನಂದ.. ಏನೋ ಸಾಧಿಸಿದ, ಗಳಿಸಿದ ಹುಮ್ಮಸ್ಸು.. 

ಊಟ ಮುಗಿದು ಎಲ್ಲರೂ ಸುಖಾಸೀನರಾದ ಮೇಲೆ.. ಕಾರ್ಯಕ್ರಮದ ವಿವರವನ್ನು ಕೊಟ್ಟಿದ್ದು ನನ್ನ ಮರಿ ಮೊಮ್ಮಕ್ಕಳು.. ಅವರಿಗೆ ಮಾರ್ಗದರ್ಶಿಗಳಾಗಿ ನಿಂತದ್ದು ನನ್ನ ಮೊಮ್ಮಕ್ಕಳು.. ಒಬ್ಬೊಬ್ಬರು ಒಂದೊಂದು ಜವಾಬ್ಧಾರಿ ಹೊತ್ತು ಹಬ್ಬದ ಸಂಭ್ರಮವನ್ನೇ ಸೃಷ್ಟಿ ಮಾಡಿದ್ದರು.. ಪ್ರತಿ ಮನೆಗೂ ಮಾವಿನ ತೋರಣವಿರಲಿಲ್ಲ.. ಆದರೆ ಹಬ್ಬದ ಸಡಗರ ತುಂಬಿತುಳುಕುತ್ತಿತ್ತು... 


ಪ್ರಾರ್ಥನೆ ಗೀತೆ ಬಂತು.. ನನ್ನ ವಂಶಸದ ಆಲದ ಮರದ ಪರಿಚಯ.. ಸುಮಾರು ಐವತ್ತು ವರ್ಷಗಳ ಹಿಂದೆ ಊರು ಬಿಟ್ಟು ಬಂದಿದ್ದ ನನಗೆ ನನ್ನ ವಂಶದ ಮುಂದಿನ ತಲೆಮಾರನ್ನು ನೋಡುವ ತವಕ ಹೆಚ್ಚಾಗುತ್ತಿತ್ತು.. ವಿವರವನ್ನು ಹೇಳುತ್ತಿದ್ದಾಗ ಕಣ್ಣೀರಾದವರು ಕೆಲವರು.. ಸೋಜಿಗವಾಗಿ ನೋಡುತ್ತಿದ್ದವರು ಕೆಲವರು.. ಇದು ನಮ್ಮ ವಂಶ ಎಂದು ಗರ್ವದಿಂದ ನಿಂತಿದ್ದವರು ಕೆಲವರು..  ನನ್ನ ಕುಟುಂಬದ ಪ್ರತಿಯೊಬ್ಬರೂ ಪಾದರಸದ ಚಟುವಟಿಕೆಯಿರುವ ಚಿನ್ನ ಚಿನ್ನ.. " ಹೇಳುತ್ತಾ ಹೇಳುತ್ತಾ ಕಣ್ಣುಗಳು ತುಂಬಿ ಬಂದಿದ್ದವು .. ಅರೆ ಘಳಿಗೆ ಮೌನ.. ಮಾತಿಲ್ಲ..  

ಒಂದು ಹೆಣ್ಣು ಧ್ವನಿ .. "ರೀ ಮುಂದೆ ಹೇಳಿ.. " ತಿರುಗಿ ನೋಡಿದರೆ.. ಅಕ್ಕ ಅಲಿಯಾಸ್ ಲಕ್ಷ್ಮಿ ದೇವಮ್ಮನವರು.. 

"ಓ ಭಾವುಕನಾಗಿಬಿಟ್ಟಿದ್ದೆ.. ಸರಿ ಸರಿ.. ಮುಂದಕ್ಕೆ ಹೇಳುತ್ತೇನೆ.. "

"ನನ್ನ ಮೇಲೆ ಹಾಡು ಕಟ್ಟಿ.. ಅದಕ್ಕೆ ರಾಗ ಹಾಕಿ ಹಾಡಿದಾಗ.. ನಾ ಇಲ್ಲಿಯೇ ಇದ್ದು ಬಿಡಬಾರದೇ ಎನ್ನಿಸಿತು ..ಸೊಗಸಾಗಿತ್ತು ಆ ಹಾಡು.. " 

"ನಂತರ ಎಲ್ಲರನ್ನು ಹಿಡಿದಿಡುವುದು ಸುಲಭದ ಮಾತಲ್ಲ.. ಎಲ್ಲ ರೀತಿಯ ಚಟುವಟಿಗೆಗಳು ಬೇಕಿತ್ತು.. ಅದಕ್ಕಾಗಿ ನಾವೆಲ್ಲಾ ಬಾಲ್ಯದಲ್ಲಿ ಆಡಿದ್ದ ಲಗೋರಿ ಆಟದ ಸ್ಪರ್ಧೆ ಆಯೋಜಿಸಿದ್ದರು.. ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಭಾಗವಹಿಸಿ ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದರು.. ಬಾಲ್ಯದ ತುಂಟತನ, ಕಾಲು ಎಳೆದಾಟ, ಗೆಲ್ಲಲೇ ಬೇಕೆಂಬ ಛಲ.. ವಾಹ್. .. ದೊಡ್ಡವರಲ್ಲಿ ಮಕ್ಕಳ ಮನಸ್ಸು ನೋಡಬೇಕೆ.. ಬಾಲ್ಯದ ಆಟವಾಡಿ.. ಲಗೋರಿ, ಚಿನ್ನಿದಾಂಡು,ಮರಕೋತಿ, ಕುಂಟೆಬಿಲ್ಲೆ.." 

"ಅಣ್ಣ ಮುಂದಕ್ಕೆ ಹೇಳಿ.. " ಶಂಕರಪ್ಪ ನವರ ಮೆಲ್ಲನೆ ಹೇಳಿದರು.. 

"ಕುಶಿಯಾಗಿದ್ದೀನಿ.. ಅಲ್ಲೇ ಒಂದೆರಡು ನಿಮಿಷ ಅದರ ಬಗ್ಗೆ ಹೇಳೋಣ ಅಂದ್ರೆ.... ಸರಿ ಕಣಪ್ಪ.. ಮುಂದೆ.. ಲಗೋರಿ ಆಟ ಮುಗೀತು.. ಅದರಲ್ಲಿ ಗೆದ್ದವರು ಹಿಪ್ ಹಿಪ್ ಹುರ್ರೇ ಎಂದು ಕೂಗುತ್ತ ಸಂಭ್ರಮಿಸಿದರು.. 

ಆಟದ ಬಿಸಿ ಕಡಿಮೆಯಾಗಿರಲಿಲ್ಲ.. ಆದರೆ ಮೆಣಸಿನ ಕಾಯಿ ಬಜ್ಜಿಯ ಬಿಸಿ ಎಲ್ಲರನ್ನೂ ಕರೆದಿತ್ತು.. ರುಚಿ ರುಚಿಯಾದ ಬಜ್ಜಿಅನ್ನಿಸಿತು .. ಬಿಸಿ ಬಿಸಿ ಖಾರ ಖಾರ.. ನಾನೂ ಒಂದು ಕೈ ನೋಡಿಯೇ ಬಿಡೋಣ ಅಂತ ಬೋಂಡಾದ ತಟ್ಟೆಗೆ ಕೈ ಹಾಕಿದೆ.. ಅರೆ ಬರುತ್ತಲೇ ಇಲ್ಲ.. ಆಮೇಲೆ ಗೊತ್ತಾಯಿತು.. ನಾ ಇಲ್ಲಿ ಬಂದು ನೋಡಬಹುದೇ ವಿನಃ.. ಯಾವುದನ್ನು ಮುಟ್ಟಲು ಆಗೋಲ್ಲ ಅಂತ.. 

ನನ್ನ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ನನ್ನ ಶಂಕರನ ಹೆಂಡತಿ ಎಲ್ಲರೂ ನಾಟಕದ ಪದಗಳು, ಭಕ್ತಿ ಗೀತೆ, ಭಜನೆ, ಹಿಂದಿ ಹಾಡು, ದೇವರ ನಾಮಗಳನ್ನು ಹಾಡಿದಾಗ, ಮರಿ ಮೊಮ್ಮಕ್ಕಳು ಮಾಡಿದ ನೃತ್ಯ ಸೊಗಸಾಗಿತ್ತು .. ಅದನ್ನೆಲ್ಲ ನೋಡಿದಾಗ ಛೆ ನನ್ನ ಮೊಬೈಲ್ ತಂದಿದ್ದರೆ .. ಅದನ್ನೆಲ್ಲ ರೆಕಾರ್ಡ್ ಮಾಡಿ ನಿಮಗೆಲ್ಲ ಕೇಳಿಸಬಹುದು ಅನ್ನಿಸಿತು..  ಆದರೆ.. ಹೋಗಲಿ ಬಿಡಿ.. ಮುಂದಿನ ವರ್ಷ ಇನ್ನೂ ಭರ್ಜರಿಯಾಗಿ ಮಾಡುತ್ತಾರೆ.. ಆಗ ಜಮಾಯಿಸಿ ಬಿಡೋಣ.. ಏನಂತೀರಾ"

"ಹೋ ಹೊ.. ಆಗಲಿ" ಎನ್ನುತ್ತಾ ಎಲ್ಲರೂ ಕೂಗಿದರು... 
"ಅಣ್ಣ.. ಕಾಯೋಕೆ ಆಗ್ತಿಲ್ಲ.. ಬೇಗ ಬೇಗ ಹೇಳಿ.." ಚೆಲುವಮ್ಮನವರು ಮೆಲ್ಲನೆ ತನ್ನ ಅಮ್ಮನ ಮಡಿಲಲ್ಲಿ ಮಲಗಿಕೊಂಡು ಹೇಳಿದರು.. 

"ಹೂ ಕಣಮ್ಮ ಮುಂದಕ್ಕೆ ಹೇಳ್ತೀನಿ.. ಇಲ್ಲಿವರೆಗೂ ಜೇನಿನ ಧಾರೆಯಾಗಿ.. ಹರಿಯುತ್ತಿದ್ದ ಕಾರ್ಯಕ್ರಮಕ್ಕೆ ಹಠಾತ್ ವೇಗ ತಂದುಕೊಟ್ಟವರು ತುಂಡು ಹೈಕಳು.. ಪರ ಪರ ಅನ್ನೋ ರೀತಿಯಲ್ಲಿ ವೇಗದ ಗೀತೆಗಳನ್ನು ಹೇಳುತ್ತಾ ಎಲ್ಲರಿಗೂ ಖುಷಿ ಕೊಟ್ಟರು.. "


ಅಷ್ಟೊತ್ತಿಗೆ ಊಟದ ಸಮಯವಾಗಿತ್ತು .. ಊಟ ಮಾಡಿ ನಿದ್ದೆ ಮಾಡೋಕೆ ಹೋದವರು ಕೆಲವರು.. ಇನ್ನೂ ಮರಿ ಮೊಮ್ಮಕ್ಕಳಿಗೆ ಸಮಾಧಾನವಾಗಿರಲಿಲ್ಲ ..ಅಂತ್ಯಾಕ್ಷರಿ.. ಸನ್ನೆಯಿಂದ ಪದಗಳನ್ನು ಕಂಡು ಹಿಡಿಯುವುದು.. ಹೀಗೆ ಇನ್ನೊಂದು ಘಂಟೆ ಆಟವಾಡಿದರು.. ಎಲ್ಲರಿಗೂ ಬೆಳಗ್ಗೆ ಮತ್ತೆ ಇನ್ನೊಂದು ಸುಂದರ ದಿನದ ಕನಸ್ಸು ನನಸಾಗುವ ಆಶಾ ಭಾವ ಹೊತ್ತು ಮಲಗಿದರು .

ನಾನೂ ಕೇಶವ ದೇವರ ಗುಡಿಗೆ ನಮಸ್ಕಾರ ಹಾಕಿ.. ಗರ್ಭಗುಡಿಯ ಒಳಗೆ ಇದ್ದ ಕೇಶವನೊಡಲ ಸೇರಿಕೊಂಡೆ. 

ಬೆಳಿಗ್ಗೆ ಎದ್ದು ಬಂದರೆ.. ನಾ ಓಡಾಡಿದ ರಸ್ತೆಯಲ್ಲಿ ಚಿತ್ತಾರಗಳ ಮಳೆಯೇ ಸುರಿದಿತ್ತು .. ಚಿತ್ತಾಕಾರದ ರಂಗವಲ್ಲಿಯೊಳಗೆ ಮೂಡಿ ಬಂದದ್ದು ಜೀವನ ಬೆಸೆಯುವ ರೇಖೆಗಳು, ಹನುಮ, ಗಣಪತಿ .. ಒಂದೊಂದು ಸುಂದರ ಕಲಾಕೃತಿ.. ರಂಗವಲ್ಲಿ ಸ್ಪರ್ಧೆ ನಿಜಕ್ಕೂ ಅದ್ಭುತವಾಗತ್ತು .. ಸಮಯ ಸಿಕ್ಕಿದ್ದರೆ.. ಇಡೀ ಬೀದಿಯನ್ನೇ ವರ್ಣಮಯ ರಂಗೋಲಿ ಮಾಡುವ ಹುಮ್ಮಸ್ಸಿತ್ತು ಎಲ್ಲರಲ್ಲಿ.. 

ಉಪಹಾರದ ಸಮಯ.. ನಂತರದ್ದೇ ಇನ್ನೂ ಸೊಗಸು... ಶ್ರೀ ಕೃಷ್ಣದೇವರಾಯ ಬಳುವಳಿಯಾಗಿ ಕೊಟ್ಟ ಊರು ನಮ್ಮ ಕಿತ್ತಾನೆ ಎನ್ನುವ ತಾಮ್ರ ಪಟ್ಟಿ ಅದನ್ನು ಹಳೆಯ ದೇವನಾಗರಿ ಭಾಷೆಯಲ್ಲಿ ಇದ್ದರೂ, ಅದರ ಮುಖ್ಯ ಭಾಗವನ್ನು ತರ್ಜುಮೆ ಮಾಡಿ.. ಎಲ್ಲರಿಗೂ ಹೇಳಿದ ನನ್ನ ಮೊಮ್ಮಗ.. ಎಲ್ಲರೂ ಸಂಭ್ರಮಿಸಿದರು.. ಫೋಟೋತೆಗೆದುಕೊಂಡರು . ಕರುನಾಡಿನ ಗೆಜೆಟ್ನಲ್ಲಿಯೂ ಇದರ ಉಲ್ಲೇಖವಿದೆಯೆಂದಾಗ ಮನಸ್ಸು ಕುಣಿಯಿತು.. 

ಮತ್ತೆ ಆಟದ ಸಮಯ..ಕಲ್ಲಾಟ, ಚೌಕಾಭಾರಹ್, ಪಗಡೆ ಎಲ್ಲರೂ ಮತ್ತೆ ಮಕ್ಕಳಾದರು.. 
ನಿನ್ನೆ ವಂಶ ವೃಕ್ಷದ ಪರಿಚಯ ಎಲ್ಲರಿಗೂ ಮಾಡಿಕೊಟ್ಟಿದ್ದರಲ್ಲ.. ಅದನ್ನು ಪರೀಕ್ಷಿಸುವ ಆಟ.. ಶುರುವಾಯಿತು.. ಏಳೆಂಟು ಪ್ರಶ್ನೆಗಳಿಗೆ ಉತ್ತರ ಆ ವಂಶವೃಕ್ಷದಲ್ಲಿಯೇ ಅಡಗಿತ್ತು.. ಜೊತೆಯಲ್ಲಿ ಹಿರಿಯರನ್ನು ಗೌರವಿಸುವ, ಕಿರಿಯರಿಗೆ ಹಿರಿಯರನ್ನು ಪರಿಚಯಿಸುವ ಕಾರ್ಯಕ್ರಮವಾಯಿ ಹೊಮ್ಮಿ ಬಂದಿತ್ತು.. ಈ ನಿಧಿ ಹುಡುಕಾಡುವ ಆಟ.. ನಿಜಕ್ಕೂ ಈ ಆಟ ನಿಧಿ ಹುಡುಕುವ ಆಟವೇ.. ಎಷ್ಟೋ ನಂಟು ಬೆಸೆಯುವ ಈ ಆಟಗಳು ನೂರಕ್ಕೆ ನೂರು ಬಂಧವನ್ನು ಬೆಸೆಯುವ ರೀತಿ ಸೋಜಿಗವೆನಿಸುತ್ತದೆ.. 

ಎಲ್ಲರನ್ನೂ ಒಂದೇ ಅಂಗಳದಲ್ಲಿ ನಿಲ್ಲಿಸಬೇಕೆನ್ನುವ ಈ ಆಶಯದಲ್ಲಿ ಸ್ಪರ್ಧೆಗಳು ಕೇವಲ ಸ್ಪರ್ಧೆಗಳು ಮಾತ್ರವಾಗದೆ.. ಎಲ್ಲರನ್ನೂ ಬೆಸೆಯುವ ಕೊಂಡಿಯಾಗಿತ್ತು.. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಸಾಂಕೇತಿಕವಾಗಿ ಬಹುಮಾನವನ್ನು ನನ್ನ ಮೊಮ್ಮಕ್ಕಳ ಮೂಲಕ ಕೊಡಿಸಿದರು.. ಎಲ್ಲರ ಮನಸ್ಸು ಹಾಯ್ ಹಾಯ್ ಎನ್ನುತ್ತಿದ್ದಾಗ ನನ್ನ ಮನಸ್ಸು ಭಾರವಾಗುತ್ತಾ ಹೋಯಿತು.. ಅರೆ ಎಲ್ಲರೂ ಹೊರಡುತ್ತಾರೆ.. ಅನಿಸಿದರೂ.. ಮುಂದಿನ ಬಾರಿ ಇನ್ನಷ್ಟು ಬಳಗ ಬಂದು ಸೇರಿ.. ಇನ್ನೂ ದೊಡ್ಡ ಮಟ್ಟಕ್ಕೆ ಸಾಗುತ್ತದೆ ಎನ್ನುವ ಆಶಯ ಹೊತ್ತು ಎಲ್ಲರೂ ಹೊರಡಲು ಅನುವಾದರು.. ಅಷ್ಟರಲ್ಲಿ ಒಂದು ಮ್ಯಾಜಿಕ್ ನೆಡೆಯಿತು.. 

ನನ್ನ ಜೀವಮಾನದಲ್ಲಿ ಈ ಕ್ಯಾಮೇರಾ ಸರಿಯಾಗಿ ನೋಡಿದವನಲ್ಲ.. ಮುಸುಕು ಹಾಕಿಕೊಂಡು ಚಿತ್ರಗಳನ್ನು ತೆಗೆಯುವ ಆ ಜಾದೂ ಪೆಟ್ಟಿಗೆಯಲ್ಲಿ ನಾ ಮೂಡಿ ಬಂದಿದ್ದೇನೋ ಇಲ್ಲವೋ ಗೊತ್ತಿಲ್ಲ.. ಆದರೆ ನನ್ನ ಪ್ರತಿರೂಪಿಯನ್ನು ಚಿತ್ರಿಸಿದ ಈ ನೈಪುಣ್ಯಕ್ಕೆ ಭಲೇ ಭಲೇ ಎಂದಿತು.. ನೋಡ್ರಪ್ಪಾ.. ನಾ ಹೆಚ್ಚು ಕಮ್ಮಿ ಹೀಗೆ ಇದ್ದೆ ನನ್ನ ಪ್ರಾಯದಲ್ಲಿ.. 


ಎಲ್ಲರೂ ಹೊರಟರು.. ದಾರಿ ಬುತ್ತಿ ಕಟ್ಟಿಕೊಂಡು ಎಲ್ಲರೂ ಕೆರೆಯ ಏರಿ ಮೇಲೆ ಹೋಗುತ್ತಾ ಒಮ್ಮೆ ತಿರುಗಿನೋಡಿದಾಗ ಮಗುವನ್ನು ಎತ್ತಿಕೊಂಡು ಸಂತೈಸುವ ತಾಯಿಯ ಚಿತ್ರ ನನ್ನ ಕಣ್ಣ ಮುಂದೆ ಬಂತು.. ಕಣ್ಣು ತುಂಬಿದವು.. ಮೆಲ್ಲನೆ ನನ್ನ ಉತ್ತರೀಯದಲ್ಲಿ ಒರೆಸಿಕೊಂಡು.. ಕೇಶವ ದೇವರ ಗುಡಿಯತ್ತ ಹೆಜ್ಜೆ ಹಾಕುತ್ತಾ ಇಲ್ಲಿಗೆ ಬಂದೆ.. 

ನನಗೆ ಗೊತ್ತು.. ನಿಮಗೆ ಇನ್ನೂ ಸಂಧಾನವಾಗಿಲ್ಲ ಅಂತ.. ಅದಕ್ಕೆ ಈ ಕಾರ್ಯಕ್ರಮದ ಚಿತ್ರಗಳನ್ನೆಲ್ಲ ಈ ಕೊಂಡಿಯಲ್ಲಿ ತುಂಬಿಸಿಕೊಂಡು ತಂದಿದ್ದೇನೆ. .ನೋಡಿ ಖುಷಿ ಪಡಿ.. ಮತ್ತೆ ಮುಂದಿನ ವರ್ಷ ನಾವೆಲ್ಲರೂ ಒಟ್ಟಿಗೆ ಹೋಗಿ ಸಂಭ್ರಮಿಸೋಣ. ಏನಂತೀರಾ.. !!!


ಖಂಡಿತ.. ಹೋಗೋಣ..!!!

****

"ತಾತಾ ನಾವೂ ನಿಮ್ಮ ಆಶೀರ್ವಾದ ಪಡೆಯಲು ಮುಂದಿನ ವರ್ಷ ಕಾಯುತ್ತಿರುತ್ತೇವೆ.. ನಿಮ್ಮ ಪರಿವಾರ ಸಮೇತರಾಗಿ ಬಂದು ಆಶೀರ್ವದಿಸಿ ಹರಸಿ.. ನಿಮ್ಮ ಹರಕೆ ನಮ್ಮ ಮುಂದಿನ ಏಳು ತಲೆಮಾರುಗಳನ್ನು ಕಾಯುವ ವಜ್ರ ಕವಚ.. ಯಾಕೆ ಗೊತ್ತೇ ನಿಮ್ಮ ಬ್ರಾಂಡ್ ಯಾವುದು ಹೇಳಿ.."

"ಯಾವುದಪ್ಪಾ ನನ್ನ ಬ್ರಾಂಡ್" 

"ಈ ಚಿತ್ರ ನೋಡಿ ತಾತಾ"

"ಹ ಹ ಹ ಹ" ಭುವಿಯೇ ಅಲ್ಲಾಡುವಂಥಹ ನಗು.. "ಸರಿಯಾಗಿ ಹೇಳಿದೆ.. ಬೈ ಗಯ್ಸ್.. "  ಎಂದು ಹೇಳುತ್ತಾ ಬಾನಲ್ಲಿ ನಕ್ಷತ್ರವಾಗಿದ್ದ ತಾತಾ ಒಂದು ಕಣ್ಣು ಹೊಡೆದು ಮತ್ತೆ ಮುಗುಳುನಕ್ಕರು. 

ಶ್ರೀ ಬೊಬ್ಬೆ ರಾಮಯ್ಯ ವಂಶದ ಕೆಲವು ಕುಡಿಗಳು 


28 comments:

  1. Amazing synopsis....Keep writing Srikantha....awesome..!!!!

    ReplyDelete
  2. ಒಂದು ಇತಿಹಾಸವನ್ನು ಸಹ ಎಷ್ಟು ಸ್ವಾರಸ್ಯಕರವಾಗಿ, ವಿನೋದದ ಶೈಲಿಯಲ್ಲಿ ಹೇಳಬಹುದು ಎನ್ನುವುದಕ್ಕೆ ನಿಮ್ಮ ಈ ಲೇಖನ ಸಾಕ್ಷಿ. ಜೈ ಹೊ, ಶ್ರೀಕಾಂತ!

    ReplyDelete
    Replies
    1. ಧನ್ಯವಾದಗಳು ಗುರುಗಳೇ..

      ನಿಮ್ಮ ಆಶೀರ್ವಾದ ಮತ್ತಷ್ಟು ಬರೆಯಲು ಪ್ರೇರೇಪಿಸುತ್ತದೆ

      Delete
  3. ನಮ್ಮವರು ಅನ್ನುವವರೊಂದಿಗೆ ಕೂಡಿ ಬೆರೆಯುವುದೇ ನಮ್ಮನ್ನು ಒಂದು ಅದಮ್ಯ ಚೇತನದೆಡೆಗೆ ಕೊಂಡೊಯ್ಯುತ್ತದೆ.. ಅದರಲ್ಲೂ ಸಹಜ ಸುಂದರ ವಸಂತದ ಪ್ರಕೃತಿಯಲ್ಲಿ ನಿಮ್ಮ ವಂಶಜರೆಲ್ಲ ಒಂದೆಡೆ ಸೇರಿ ಅನುಭವಿಸಿದ ದಿನ ವಿಶೇಷವನ್ನು ಅಚ್ಚುಕಟ್ಟಾಗಿ ವಿವರಿಸಿದ್ದೀರಿ.. ಜೊತೆಗೊಂದಿಷ್ಟು ಮುದ ನೀಡುವ ಫೋಟೋಗಳ ಜೊತೆಯಲ್ಲಿ.. ವಂಶವ್ರಕ್ಷ ಹೀಗೆ ರೆಂಬೆ ಕೊಂಬೆ ಎಲೆ ಚಿಗುರುಗಳೊಂದಿಗೆ ವಿಸ್ತರಿಸಿ ವ್ಯಾಪಿಸುತ್ತಿರಲಿ..

    ReplyDelete
    Replies
    1. ಮುದ್ದಾದ ಪ್ರತಿಕ್ರಿಯೆ.. ಧನ್ಯವಾದಗಳು ಎಂ ಎಸ್

      ಬರೆದಿರುವ ಪ್ರತಿ ಸಾಲುಗಳು ಮತ್ತೆ ಮತ್ತೆ ಓದಬೇಕೆನಿಸುತ್ತದೆ

      Delete
  4. ನಿರೂಪಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು

    ReplyDelete
  5. Nanage avarannu nodidanthe kannu thumbitu danyavadagalu

    ReplyDelete
  6. ಮನ ಮುಟ್ಟಿದ ಬರಹ ಒಂದು ದಿನದ ಅನುಭವ ಒಂದು ವರ್ಷಕ್ಕೆ ಸಾಲುವಷ್ಟಿದೆ. ಎರಡನೇ ಕುಟುಂಬದ ಮಿಲನದವರೆಗೂ ಮೆಲುಕು ಹಾಕೋಣ

    ReplyDelete
  7. Very well narrated Srikanth. Thanks for sharing the pics and blog is on spot.
    If everything goes as planned next time, some of us could be part of it thru Skype

    ReplyDelete
  8. ರಾಮಯ್ಯನವರ ಎರಡು ದಿನಗಳ ಕಿತ್ತಾನೆ ಕುಟುಂಬ ಮಿಲನದ ಡೈರಿ..... ತುಂಬಾ ಚೆನ್ನಾಗಿದೆ.

    ReplyDelete
  9. Srikanthanna super fantastic

    ReplyDelete
  10. Blog is super, thanks

    ReplyDelete
  11. .ninu bareda ee baraha yellara mana mutti nagisi, alisi, santhosha thandide thumba danyavadagalu ee kaleyannu munduvarisu devaru olleayadumadali ����

    ReplyDelete
  12. Sundaravaada baraha, tumba adbutavaada varnane

    ReplyDelete