Sunday, June 15, 2014

"ಸುಧಾ" ಪರಿಮಳ... ಗಾಳಿಯಲ್ಲಿ ಲೀನವಾಯಿತು

"ನಾನು ಎಂಬುದು ಅಜ್ಞಾನ, ನನ್ನದು ಎನ್ನುವುದು ಅವಿವೇಕ, ನನ್ನಿಂದಲೇ ಎನ್ನುವುದು ಅಹಂಕಾರ"

ಅಣ್ಣಾವ್ರ ಭಕ್ತ ಪ್ರಹ್ಲಾದ ಚಿತ್ರದ ಸಂಭಾಷಣೆ ವಿಪರೀತ ಕಾಡ ಹತ್ತಿತು..

ನಾ ಅದು ಮಾಡಿದೆ ನಾ ಇದು ಮಾಡಿದೆ ನಾ ಹಾಗೆ ಸಹಾಯ ಮಾಡಿದೆ ನಾ ಹೀಗೆ ಅವರನ್ನು ಕಷ್ಟದಿಂದ ಮೇಲೆತ್ತಿದೆ.. ನನಗೆ ಅದು ಕಷ್ಟ ನನಗೆ ಇದು ಕಷ್ಟ.. ಅದು ಹೀಗಿದ್ದರೆ ನಾ ಹೀಗಿರುತ್ತಿದೆ.. ಹೀಗೆ ರೆ ಪ್ರಪಂಚದಲ್ಲಿ ಹರಿಯಲಾರದ ವಿಷಯಗಳೇ ಇಲ್ಲ ಆಸೆಗಳೇ ಇಲ್ಲ..

ನನ್ನ ಸಹೃದಯ ಮಿತ್ರ.. ಶ್ರೀ ಪ್ರಕಾಶ್ ಹೆಗ್ಗಡೆಯವರು ಕಷ್ಟ ಎನ್ನುವ ಬಗ್ಗೆ ಒಂದು ಸೂಪರ್ ಲೇಖನ ಬರೆದಿದ್ದರು.. ಅದು ಇತ್ತೀಚಿಗಷ್ಟೇ ನಾಟಕದ ರೂಪವಾಗಿ ಓದುಗರ ಪ್ರೇಕ್ಷಕರ ಮನಸ್ಸನ್ನು ಸೆರೆ ಹಿಡಿದಿತ್ತು..

ಕಷ್ಟದ ಒಂದು ಮಗ್ಗಲಿನ ಬಗ್ಗೆ ಅರಿವಾಗಿದ್ದ ಹೊತ್ತು.... ತಲೆಗೆ ಇನ್ನೊಂದು ಸಮಸ್ಯೆ ಕಾಡ ಹತ್ತಿತು..

ಹೌದು.. ಕತ್ತಲೆಯ ನೆರಳಿಗಿಂತ ಕಾಡುವುದು ಯಾವುದು..?

ಜನನದಿಂದಲೇ ಮರಣವನ್ನು ಬೆನ್ನಿಗೆ ಅಂಟಿಸಿಕೊಂಡು ಬರುವ ನಾವೆಲ್ಲರೂ.. ಯಾವೊತ್ತೋ ಒಂದು ದಿನ ಅದರ ಭೇಟಿ ಆಗಿಯೇ ತೀರುತ್ತದೆ.. ಆದರೆ ಪ್ರತಿ ಕ್ಷಣವೂ ಸಾವಿನ ಅರಮನೆಯಲ್ಲಿ ಕಳೆಯುವುದು.. ಯಾವಾಗಾದರೂ ಕದ ದೂಡಿಕೊಂಡು ಬರಬಹುದು ಎನ್ನುವ ವಿಚಿತ್ರ ಕಾಯುವಿಕೆಯಲ್ಲಿ ಅಥವಾ ನಿರೀಕ್ಷೆಯಲ್ಲಿ ಸುಮಾರು ಐವತ್ತೆರಡು ವಸಂತಗಳನ್ನು ಕಳೆಯುವುದು ಒಂದು ಸವಾಲೇ ಸರಿ..

ಕೈ ಹಿಡಿದು ಜೀವನ ನೀಡಿದ ಪತಿರಾಯ.. ತನ್ನ ಕರುಳಿನ ಬಳ್ಳಿಯನ್ನು ಹಂಚಿಕೊಂಡು ವಂಶದ ಬೆಳಕಾದ ಮಗರಾಯ.. ಈ ಎರಡು ಬೆಳಕಲ್ಲಿ ತನ್ನ ಜೀವನದ ಕತ್ತಲೆಯ ಕಾಲನನ್ನು ದೂರದಿಂದಲೇ ನೋಡುತ್ತಾ.. ಒಮ್ಮೆ ಹತ್ತಿರ ಬರುವ ಇನ್ನೊಮ್ಮೆ ದೂರ ಹೋಗುವ ಆ ಜವರಾಯನ ಭೇಟಿ.. ಕಡೆಯಲ್ಲಿ ನಡೆದೆ ಹೋಯಿತು..

ಭಯ, ಆತಂಕ, ಸಂಕಟ ಈ ಪದಗಳಿಗೆ "ಸುಧಾ" (ನನ್ನ ಸೋದರತ್ತೆಯ ಮಗಳು) ಇವಳಿಗೆ ಇರಲಿಲ್ಲವೋ ಅಥವಾ ಇದ್ದರೂ ಪತಿರಾಯ ಮತ್ತು ಮಗರಾಯನ ಸಂಗಡ ಅದು ಬೆನ್ನಿನಿಂದ ಬಹು ದೂರದಲ್ಲಿ ನೆಡೆದು ಬರುತ್ತಿತ್ತೋ ಅರಿಯದು..

ಸರಿ ಸುಮಾರು ೩೪ ವಸಂತಗಳಿಂದ ಅವಳನ್ನು ನೋಡುತ್ತಾ ಬಂದಿದ್ದೆ.. ಎಂದೂ ಕೂಡ ಅವಳ ಮುಖದಲ್ಲಿ, ಮಾತಿನಲ್ಲಿ ಬೇರೆ ಲೋಕಕ್ಕೆ ಪಯಣಿಸಲು ರಹದಾರಿ ಕೈಯಲ್ಲಿ ಹಿಡಿದಿದ್ದರೂ ಒಮ್ಮೆಯೂ ಅದರ ಸುಳಿವು ಮುಖದಲ್ಲಿ ತೋರದಿದ್ದದು ಅವಳ ಅಚಲ ಆತ್ಮ ವಿಶ್ವಾಸ, ತನ್ನ ಮೇಲೆ ಇರುವ  ದೃಢ ನಂಬಿಕೆಗೆ ಒಂದು ಸಾಕ್ಷಿ..

ಒಂದು ವಸ್ತುವನ್ನು ಸುಟ್ಟಾಗ ಒಂದು ಬದಿಯಿಂದ ಅಗ್ನಿಯ ಜ್ವಾಲೆ ನುಂಗುತ್ತಾ ಬರುವ ಹಾಗೆ.. ತನ್ನ ದೇಹದಲ್ಲಿ ನುಗ್ಗುತ್ತಿರುವ ಕಾಲನ ಅತಿಕ್ರಮಣದ ಬಗ್ಗೆ ಅರಿವಾಗಿಯೂ ಕೂಡ ನಗುತ್ತ ನಗುತ್ತ ದೇಹ ದಂಡಿಸುತ್ತಾ ತನ್ನ ಕುಟುಂಬದ ಏಳಿಗೆಗೆ ತನ್ನ ಬದುಕನ್ನು ಮುದಿಪಾಗಿಟ್ಟದ್ದು ಸುಧಾಳ ಹೆಗ್ಗಳಿಕೆ..

ದೇಹದ ಪ್ರತಿ ಅಂಗಗಳು ನನಗೆ ಸಾಕಾಯ್ತು ಎನ್ನುವವರೆಗೂ ದುಡಿಸಿ.. ಅವುಗಳು ಸಾಕು ಎನ್ನುವ ಈ ಘಳಿಗೆಯಲ್ಲಿ ತಾನೂ ಹೊರಟೆ ಎಂದು ಹೇಳುತ್ತಾ ಬಾರದ ಲೋಕಕ್ಕೆ ತನ್ನ ಪೂರ್ವಜರನ್ನು ಸೇರಲು ಹೊರಟೆ ಬಿಟ್ಟಳು..

ಇನ್ನೂ ಆಕೆಯ ಪತಿರಾಯ ಶ್ರೀ ಲಕ್ಷ್ಮಿಕಾಂತ.. ಲಕ್ಷ್ಮಿಯ ಶ್ರೀಮನ್  ನಾರಾಯಣನನ್ನು ನೋಡಿಕೊಳ್ಳುವ ಹಾಗೆ.. ನಾರಾಯಣ ತನ್ನ ಮಡದಿಯನ್ನು ತನ್ನ ವಕ್ಷ ಸ್ಥಳದಲ್ಲಿ ಇಟ್ಟುಕೊಂಡು ಜೋಪಾನ ಮಾಡುವ ಹಾಗೆ.. ಕಣ್ಣಲ್ಲಿ ಕಣ್ಣಿಟ್ಟು ತನ್ನ ಮಡದಿಯನ್ನು ನೋಡಿಕೊಂಡರು.. ಯಾವ ಘಳಿಗೆಯಲ್ಲಿ ತನ್ನ ಮುದ್ದಿನ ಮಡದಿ ಇಹಲೋಕ ಬಿಡಬಹುದು ಎಂಬ ಅರಿವಿದ್ದರೂ ಗಂಧದ ಕೊರಡು ತೇಯುವ ಹಾಗೆ ತನ್ನ ಮಡದಿಯ ಶುಶ್ರೂಷೆಯಲ್ಲಿ ತಮ್ಮ ಜೀವನದ ಸಾರ್ಥಕ್ಯ ಪಡೆದುಕೊಂಡರು..

ದೇವನ ನಿಯಮ ವಿಚಿತ್ರ ಆದ್ರೆ ಸದಾ ಅನುಕರಣೀಯ.. ನ್ಯೂನತೆ ಇರುವ ಕಾಯವನ್ನು ಕೊಟ್ಟಿದ್ದರು ಆ ಕಾಯವನ್ನು ಕಾಪಾಡಲು ಸುಂದರ ಮನದ ಸಂಗಾತಿಯನ್ನು ಕೊಟ್ಟಿದ್ದ ಆ ಭಗವಂತ..

ಇನ್ನೂ ಆಕೆಯ ಸುತ.. ಸುಮುಖ ಎಂಬ ಹೆಸರಿನಂತೆ ಪಾರ್ವತಿ ದೇಹದಿಂದ ಬಂದ ಗಣಪನ ಹಾಗೆ ತನ್ನ ಮಾತೆಯ ಸೇವೆಯನ್ನು ಹಗಲು ಇರುಳು ಎಂದು ನೋಡದೆ ಮಾಡಿದ್ದು.... ಆಕೆಯ ಆರೋಗ್ಯವನ್ನು ಕಾಪಾಡಲು, ನೋಡಲು ಜೇನುಗೂಡಿನಲ್ಲಿ ಸೇವೆಮಾಡುವ ಜೇನುನೊಣದ ಹಾಗೆ ಸದಾ ಜಾಗ್ರತೆಯಿಂದ ಮಾತೆಯ ಸೇವೆ ಮಾಡಿ ಕೃತಜ್ಞತ ಭಾವ ಹೊಂದಿದ್ದು ನೋಡಿದವರಿಗೆ ಮಾತ್ರ ಅರಿವಾಗುತ್ತದೆ..

ನಿಜಾ ಒಂದು ಪದಾರ್ಥ ನಮ್ಮ ಜೊತೆ ಬಹಳ ಕಾಲ ಇರಲಾರದು ಎನ್ನುವ ಸತ್ಯ ಗೊತ್ತಿದ್ದರೂ ಅದರ ಬಗ್ಗೆ ಯೋಚಿಸದೇ ಅದನ್ನು ಜತನ ಮಾಡುವುದರ ಬಗ್ಗೆಯೇ ಯೋಚಿಸಿ ಅದನ್ನು ಕಾರ್ಯಗತ ಮಾಡಿಕೊಂಡ ಶ್ರೀ ಲಕ್ಷ್ಮಿಕಾಂತ ಹಾಗೂ ಶ್ರೀ ಸುಮುಖ ನಿಜಕ್ಕೂ ನಮ್ಮ ನಡುವೆ ಇರುವ ಶ್ರವಣ ಕುಮಾರನ ಪಡಿಯಚ್ಚು ಎಂದು ಹೇಳುತ್ತೇನೆ..

ಕೇವಲ ಎರಡು ದಿನಗಳ ಹಿಂದೆಯಷ್ಟೇ ವಿವಾಹ ಜೀವನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಇಂದು ಸೂತಕದ ಛಾಯೆ.. ಆದರೆ ಸುಧಾಳಿಗೆ ತನ್ನ ಮನೆಯನ್ನು ಒಂದು ದಡಕ್ಕೆ ಮುಟ್ಟಿಸಿದ ನೆಮ್ಮದಿಯಿದ್ದರೆ.. ಕುಟುಂಬದವರಿಗೆ ಕಷ್ಟಗಳು ಮಂಜಿನ ಹನಿಯಾಗಿ ಕರಗಿ ಬೆಳ್ಳಿ ಹೂವು ಅರಳುವ ಸಮಯದಲ್ಲಿ ಸುಧಾಳ ಪರಿಮಳ ಗಾಳಿಯಲ್ಲಿ ಸೇರಿದ್ದು.....

ಯಾಕೋ ಆಗುತ್ತಿಲ್ಲ.. ಇಲ್ಲಿಯೇ ನಿಲ್ಲಿಸುವೆ..

"ಸುಧಾ" ನಾ ಕಂಡ ಕಷ್ಟ ಸಹಿಷ್ಣು, ಮತ್ತು ತಾಳ್ಮೆ ಎನ್ನುವ ಪದಗಳಿಗೆ ಪರ್ಯಾಯ ಪದವೇ ನೀನು.. ನಿನ್ನ ಕುಟುಂಬ ಖಂಡಿತ ನಿನ್ನನ್ನು ಮರೆಯದು.. ಹಾಗೆಯೇ ನಾವೂ ಕೂಡ.. ಹೋಗಿಬಾ ನಿನ್ನ ಪೂರ್ವಜರು.. ನಿನ್ನ ಮಾತಾ ಪಿತೃಗಳು ನಿನಗಾಗಿ.... !!!!

Friday, June 6, 2014

ಆಸೆಯು ಕೈಗೂಡಿತು... ಆಸರೆ "ದೊರೆ"ತಾಯಿತು....!

ನೃಪತುಂಗ ರಸ್ತೆಯ ಮಾರ್ಥ ಆಸ್ಪತ್ರೆ.. ಕೊನೆ ದಿನಗಳನ್ನು ಎಣಿಸುತ್ತಿರುವ ತನ್ನ ತಾಯಿ.. ..

"ಮಂಜಣ್ಣ ಒಂದು ಲೋಟ ಹಾಲು ತಂದು ಕೊಡ್ತೀಯ... ".. ನಮ್ಮ ಅಪ್ಪನಿಗೆ ಅವರ ಅಕ್ಕ ಗೌರಿ ಹೇಳಿದಂತೆ.. "ಅದೇ ಕಡೆಯ ಆಹಾರ ನನ್ನ ಅಜ್ಜಿ ತೆಗೆದುಕೊಂಡದ್ದು.." ನಂತರ ಯಾವ ಆಹಾರ ಕೂಡ ಅವರ ದೇಹಕ್ಕೆ ತಲುಪಲಿಲ್ಲ ಎಂದು ಹೇಳುತ್ತಿದ್ದರು...

ಅದಕ್ಕಿಂತ ಹಿಂದಿನ ಕೆಲ ದಿನಗಳಲ್ಲಿ ಅಜ್ಜಿ ತನ್ನ ಸೊಸೆ ಅಂದ್ರೆ ನನ್ನ ಅಮ್ಮನಿಗೆ ಹೇಳಿದ ಕಿವಿ ಮಾತು.. ಅಮ್ಮ ಹಲವಾರು ಬಾರಿ ಹೇಳುತ್ತಿರುತ್ತಾರೆ .

"ನೋಡು ವಿಶಾಲು.. ನನ್ನ ಮಗನು ಸೇರಿ ನಿನ್ನ ನಾಲ್ಕು ಮಕ್ಕಳು ಸೇರಿ ... ನಿನಗೆ ಐದು ಮಂದಿ ಮಕ್ಕಳು..ಅವರನ್ನೆಲ್ಲ ನೀನು ಕಾಪಾಡುತ್ತೀಯ ಎಂದು ನನಗೆ ಗೊತ್ತು.. ಇಡಿ ಜಗತ್ತನ್ನೇ ನಿನ್ನ ಮನೆಯ ಕಡೆ ತಿರುಗಿ ನೋಡುವ ಹಾಗೆ ಮಾಡು.. ನನ್ನ ಆಶೀರ್ವಾದ ಸದಾ ನಿನ್ನ ತಲೆಯ ಮೇಲೆ ಇರುತ್ತದೆ .. "

ಎಲ್ಲಾ ಮಧುರ ಹೃದಯದ ಬಳಗವನ್ನು ಹೊತ್ತು ತಂದ ಸಂಭ್ರಮ.. 
ಪ್ರಾಯಶಃ ಅಪ್ಪನಿಗೆ ಸ್ಫೂರ್ತಿ ಕೊಟ್ಟದ್ದು ಅಜ್ಜಿಯ ತಾಳ್ಮೆಯ ನಡೆ.... ಅಮ್ಮನಿಗೆ ಛಲ ಕೊಟ್ಟದ್ದು ಅಜ್ಜಿಯ ಆ ಕೊನೆಯ ಮಾತುಗಳು..

ಅಲ್ಲಿಂದ ಎಂಥಹ ವಿಷಮ ಪರಿಸ್ಥಿತಿಯಲ್ಲೂ ಅಪ್ಪ ತಾಳ್ಮೆ ಕಳೆದುಕೊಳ್ಳಲಿಲ್ಲ... ಅಮ್ಮ ಎಂದೂ ಛಲದ ಗುರಿಯ ಬೆನ್ನು ಬಿಡಲಿಲ್ಲ.. ಆ ಐದು ಮಕ್ಕಳನ್ನು ಗುಬ್ಬಚ್ಚಿ ಗೂಡಿನಲ್ಲಿ ಬೆಚ್ಚಗೆ ಕಾಪಾಡುವ ಹಾಗೆ ಕಾಪಾಡಿಕೊಂಡು ಬಂದರು...

ಛಲದೊಲ್ ಸುಯೋಧನ ಅನ್ನುವಂತೆ.. ಛಲದಲ್ಲಿ ಅಮ್ಮ ನಿಂತರೆ.. ಅಮ್ಮ ನಿನ್ನಷ್ಟೇ ಛಲ ನನ್ನಲ್ಲಿದೇ.. ಅಪ್ಪನಷ್ಟೇ ತಾಳ್ಮೆ ನನ್ನಲ್ಲಿದೆ ಎಂದು ಸಾಧಿಸಿ ತೋರಿಸಿದ್ದಾಳೆ ನನ್ನ(ಮ್ಮ) ಅಕ್ಕಾ..

*********************
"ಆಸೆಯು ಕೈಗೂಡಿತು.. ಆಸರೆ ದೊರೆತಾಯಿತು.. ಚಿಂತೆ ದೂರವಾಯಿತು.. ಮನಸು ಹಗುರವಾಯಿತು.. "

ಯಾಕೋ ಇಂದು ಈ ಹಾಡು ತುಂಬಾ ಕಾಡುತ್ತಿತ್ತು.. ಅಣ್ಣಾವ್ರ ಸೂಪರ್ ಎಂಟ್ರಿ ಈ ಹಾಡಿನಲ್ಲಿ..

ಸರಿ ಸುಮಾರು ಈ ಸಿನಿಮಾ ಬಿಡುಗಡೆಯಾದ ೧೯೭೮-೭೯ ವರ್ಷದಲ್ಲಿಯೇ ಅಪ್ಪ ಬೆಂಗಳೂರಿಗೆ ಬರಬೇಕೆಂಬ ಹಂಬಲ ಹೊತ್ತಿದ್ದರು.. ಬೆಂಗಳೂರಿಗೆ ಬಂದು ಏನ್ ಮಾಡ್ತೀಯ ಎನ್ನುವ ಕಾಲೆಳೆಯುವ ಪ್ರಶ್ನೆ ಒಂದು ಕಡೆಯಾದರೆ.. ಮಂಜಣ್ಣ ಬೆಂಗಳೂರಿಗೆ ಹೋಗು.. ನಿನ್ನ ಮಕ್ಕಳು ಮುಂದೆ ಬರುತ್ತಾರೆ ಎನ್ನುವ ಸುಂದರ ಬೆನ್ನು ತಟ್ಟುವ ನುಡಿ.. ...

ಬೆನ್ನು ತಟ್ಟುವ ನುಡಿಯ ಜಾಡಲ್ಲೇ ಬೆಂಗಳೂರಿಗೆ ಬಂದು.. ಈ ಮಾಯಾನಗರಿಯಲ್ಲಿ ಕೇವಲ ಒಂದು ನೂರು ರೂಪಾಯಿಗೆ ಮನೆ ಬಾಡಿಗೆಗೆ ಕೊಡಿಸಿದವರು ಅವರ ಮಾವನ ಮಗನಾದ ಗುಂಡ ಎನ್ನುವವರು... ನಮ್ಮ ಮನೆಯ ಪ್ರತಿ ಏಳಿಗೆಯನ್ನು ನೋಡಿದ ಆ ಮಹನೀಯ ನಮ್ಮ ಮೆಚ್ಚಿನ "ಗುಂಡ ಮಾವ" ನಮ್ಮನ್ನು ಅಗಲಿ ಐದಾರು ವರ್ಷ ಆಯಿತು.. ಅವರ ಆಶೀರ್ವಾದ ನಮ್ಮ ಮನೆಯನ್ನು ಕಾಪಾಡುತ್ತಿದೆ ಎಂದರೆ ತಪ್ಪಿಲ್ಲ..
ಹಾಲಿನಂಥ ಮನಸ್ಸು ಉಕ್ಕಿದಾಗ ಸಿಗುವ ಸಂತಸ... ಆಹಾ!!!

ನನ್ನ ಅಪ್ಪನನ್ನು ಯಾವಾಗಲೂ "ದೊರೆ" ಎನ್ನುತ್ತಿದ್ದರು.. ಅವರು ಸುಮಾರು ಮೂವತ್ತು ವರ್ಷಗಳ ಹಿಂದೆ ಮಾತು ಇನ್ನೂ ನನ್ನ ಕಿವಿಯಲ್ಲಿ ಪ್ರತಿಧ್ವನಿಯಾಗುತ್ತಿರುತ್ತದೆ..

"ನೋಡು ದೊರೆ.. ಕಷ್ಟ ಬರುತ್ತೆ ಹೋಗುತ್ತೆ.. ನಿನ್ನ ಮಕ್ಕಳು ನಿನ್ನನ್ನು ದೊರೆಯ ಹಾಗೆ ನೋಡಿಕೊಳ್ಳುತ್ತಾರೆ.."

ಚದುರಿ ಹೋದ ಕಷ್ಟಗಳು ಸುಖದ ಊಟವನ್ನು ಹೊತ್ತು ತರುತ್ತವೆ.. !

ಅಜ್ಜಿ ಹೇಳಿದ ಮಾತಿನಂತೆ.. ನಮ್ಮ ಅಮ್ಮ ಅಪ್ಪ ನಮ್ಮನ್ನು ಯಾರ ಮನೆಯ ಬಾಗಿಲಿಗೂ ಹೋಗಲು ಬಿಡದೆ.. ಎಲ್ಲರೂ ನಮ್ಮ ಮನೆಯ ಕಡೆ ತಿರುಗಿನೋಡುವಂತೆ ಮಾಡಿದ್ದು ನನ್ನ ಅಪ್ಪ ಅಮ್ಮನ ಸಾಹಸವೆ ಸರಿ.. ಸೋದರ ಮಾವನ ಮಾತು ನಿಜವಾಗಿತ್ತು.. ದೊರೆಯ ಹಾಗೆ ಬಾಳಿದ ನನ್ನ ಅಪ್ಪ ಕಂಡ ಕನಸ್ಸನ್ನು ನನಸಾಗಿದ್ದನ್ನು ನೋಡಲು ನಮ್ಮೊಂದಿಗೆ ದೈಹಿಕವಾಗಿ ಇರಲಿಲ್ಲ.. ಆದರೆ ನಮ್ಮ ಮನದಲ್ಲಿ ಮನೆಮಾಡಿದ್ದರು....

ಕನಸ್ಸಿನ ಸದನ ಕಣ್ಣ ಮುಂದೆ ನಿಜವಾದಾಗ!!!

*********************

ದೇವಲೋಕದಲ್ಲಿ ಹಾಗೆಯೇ ಹವಾ ಸೇವನೆಗೆ ಹೋಗಿದ್ದ ಅಪ್ಪ.. ಸಂತಸದಿಂದ ಹಾಡಿ ಕೊಂಡು ಬರುತ್ತಿದ್ದರು..

"ಆಸೆಯು ಕೈಗೂಡಿತು.. ಆಸರೆ ದೊರೆತಾಯಿತು.. ಚಿಂತೆ ದೂರವಾಯಿತು.. ಮನಸು ಹಗುರವಾಯಿತು.. "

ಅಲ್ಲಿಯೇ ಅವರ ಅಮ್ಮ ತಡೆದು "ಏನೋ ಮಂಜಣ್ಣ.. ಸಂತಸದಲ್ಲಿ ಹಾಡುತ್ತಿದ್ದೀಯ.. ಏನಾಯಿತು..." ಅಂದರು

"ಅಮ್ಮಾ ನಿನ್ನ ಮಾತಿನಂತೆ.. ಆಯಿತಮ್ಮ.. ನನ್ನ ಸಂಸಾರ ಗೆದ್ದು ಬಿಟ್ಟಿತು.... ನಿನ್ನ ಅನುಗ್ರಹ ತುಂಬಿದ ಮಾತುಗಳು ನನ್ನ ಸದನದಲ್ಲಿ ನೆಲೆಯಾಗಿ ನಿಂತು ಬಿಟ್ಟಿದೆ.. ಅಲ್ಲಿ ನೋಡಮ್ಮ ನನ್ನ ಮುದ್ದು ಮಗಳು ಹಾಡುತ್ತಾ ಆನಂದ ಭಾಷ್ಪದಲ್ಲಿ ಮುಳುಗುತ್ತಿದ್ದಾಳೆ.. ಎಲ್ಲರಿಗೂ ನನ್ನದೇ ಚಿಂತೆ.. ಅಯ್ಯೋ ದೇವರೇ.. ಈ ಸುಂದರ ದೃಶ್ಯ ನೋಡಲು ನಾನು ಕೂಡ ಅವರ ಜೊತೆ ಇರಬಾರದಿತ್ತೆ ಅನ್ನುವಷ್ಟು ಭಾವ ಉಕ್ಕಿ ಹರಿಯುತ್ತಿದೆ..

ಆನಂದ ದುಃಖ ಎರಡರ ಮಧ್ಯದ ಹಾದಿಯಲ್ಲಿ!!!

"ನನ್ನ ಮಡದಿ ಬಿಕ್ಕುತ್ತಿದ್ದಾಳೆ, ನನ್ನ ಮಗಳು ಕಣ್ಣೀರಾಗುತ್ತಿದ್ದಾಳೆ.. ನನ್ನ ಮಗ ಸೊಸೆ ಇವರ ಜೊತೆಯಲ್ಲಿ ಭಾವುಕರಾಗಿದ್ದಾರೆ.."

ಅಮ್ಮ ಯಾಕೋ ಈ ಹಾಡು ಹೇಳಬೇಕೆನಿಸುತ್ತಿದೆ

"ಕಂದಾ ನೊಂದು ಅತ್ತಾಗ,
ಯಾರೂ ಕಾಣದಾದಾಗ
ಸಂತೈಸಲೆಂದು ಓಡೋಡಿಬರುವ ತಾಯಂತೆ ನೀನು ಬಂದೆ

ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
 ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ
ಉಸಿರಾಡುವಾಸೆ ತಂದೆ

ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು"

ಅಪ್ಪ ದೇವಲೋಕದಲ್ಲಿ ತನ್ನ ಅಮ್ಮನಿಗೆ ಹೇಳುತ್ತಿದ್ದರು.. "ಅಮ್ಮ ನೀನೆ ನನಗೆ ಶಕ್ತಿ ಕೊಟ್ಟದ್ದು.. ನಿನ್ನ ಪದಗಳೇ ನನಗೆ ಶಕ್ತಿ"

ಇಲ್ಲಿ ಭೂಲೋಕದಲ್ಲಿ ಮಕ್ಕಳು ಹೇಳುತ್ತಿದ್ದರು.. "ಅಪ್ಪ ನಿಮ್ಮ ತಾಳ್ಮೆಯ ಶಕ್ತಿಯೇ ನಮಗೆ.. ಅಮ್ಮನ ಛಲವೇ ನಮಗೆ ಶ್ರೀ ರಕ್ಷೆ"

                                                        *********************

 ಪ್ರಿಯ ಓದುಗರೇ ಏನೇನೋ ಬರೆದೆ ಅನ್ನಿಸುತ್ತಿದ್ದೆಯೇ..

ಹೌದು ಈ ಸಮಾರಂಭ ಒಂದು ರೀತಿಯಲ್ಲಿ ನನಸಾಗಲೇ ಬೇಕು ಎಂಬ ಹಠ ಹೊತ್ತ ಕನಸ್ಸಿನ ದಾರಿಯ ಒಂದು ತಿರುವು .. !

ಕಷ್ಟಗಳನ್ನೇ ಹೂವಿನ ದಾರಿಯನ್ನಾಗಿ ಮಾಡಿಕೊಂಡರೆ!!!
ಅವಮಾನ, ತಿರಸ್ಕಾರ, ಬಡತನದ ಬಿಸಿಲ ಚಾಟಿ ಏಟು, ನಿಂದನೆ, ಇದರ ಜೊತೆಯಲ್ಲಿ ಜೀವನ ತಾನಂದುಕೊಂಡ ಹಾಗೆ ಆಗದೆ ಬೇರೆ ಮಾರ್ಗವನ್ನು ತುಳಿದಾಗ.. ಆ ಕಲ್ಲು ಮುಳ್ಳಿನ ಹಾದಿಯನ್ನೇ ಹೂವಿನ ಹಾದಿಯನ್ನಾಗಿ ಮಾಡಿಕೊಂಡ ಅಪ್ಪ ಒಂದು ಕಡೆಯಾದರೆ... ಅಪ್ಪನಿಗಿಂತ ತಾನೂ ಏನು ಕಮ್ಮಿಯಿಲ್ಲ.. ಅಮ್ಮನ ಛಲ..  ಅಪ್ಪನ ತಾಳ್ಮೆ ಎರಡನ್ನು ಮೇಳೈಸಿಕೊಂಡು..ಅಪ್ಪನ ಕನಸ್ಸನ್ನು ನನಸು ಮಾಡಿದ ಸುಂದರ ಮನದ ಅಕ್ಕ ಇನ್ನೊಂದು ಕಡೆ!!!

ಖಾಲಿ ಜಾಗವನ್ನು ಭಾವನೆಗಳಿಂದ ತುಂಬಲು ಸಿದ್ಧವಿರುವ ಸ್ಥಳ.... 

ಕೋರವಂಗಲ ರಂಗಸ್ವಾಮಿ ಮಂಜುನಾಥ ಅವರ ಕುಟುಂಬ ಭದ್ರವಾಗಿ ಈ ಮಾಯಾನಗರಿ ಬೆಂಗಳೂರಿನಲ್ಲಿ ನೆಲೆ ಊರಲು.. . ಎಲ್ಲರ ಅನುಗ್ರಹದ ಆಶೀರ್ವಾದ ಪಡೆದು ಸದನವನ್ನು "ಅನುಗ್ರಹ ಸದನ" ಮಾಡಿಕೊಂಡ ಅಪರೂಪದ ಸಂಭ್ರಮ ನನ್ನಿಂದ ಹೀಗೆಲ್ಲ ಬರೆಯಿಸಿತು.. ..

ಗುದ್ದಲಿ ಪೂಜೆಯ ಸಂಭ್ರಮದಲ್ಲಿ ಅಕ್ಕಾ

ಸ್ಫೂರ್ತಿ ಎಲ್ಲ ಕಡೆಯೂ ಇರುತ್ತದೆ... ಮನಸ್ಸಿನ ಕಣ್ಣಿಟ್ಟು ನೋಡಬೇಕು ಎಂದು ಹೇಳುತ್ತಾರೆ.. ನಿಜ ನನ್ನ ಅಕ್ಕ, ನನ್ನ ಅಪ್ಪ, ನನ್ನ ಅಮ್ಮ, ನನ್ನ ಅಣ್ಣ ಇವರ ಜೀವನದ ಏರಿಳಿತಗಳು ಕೊಡುವ ಸ್ಫೂರ್ತಿ ನಿಜಕ್ಕೂ ಅವರ್ಣನೀಯ....

ಸಾಧನೆಯ ಸಂಭ್ರಮದಲ್ಲಿ

ಅಕ್ಕಾ ನಿನಗೊಂದು ಹಾಟ್ಸ್ ಆಫ್.. ಅಪ್ಪನ ಕನಸ್ಸನ್ನು ನನಸು ಮಾಡಿ.. ನಾವಿಂದು ಹಾಡುವ ಹಾಡಿಗೆ ನೀ ಸ್ಪೂರ್ತಿಯಾಗಿರುವೆ....

"ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ 
ಉಸಿರಾಡುವಾಸೆ ತಂದೆ

ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು"