Sunday, February 17, 2013

ಶ್ರೀ ಮಣಿಕಾಂತಕೋಪಾಕ್ಯಾನಾ - "ಅಪ್ಪ ಅಂದ್ರೆ ಆಕಾಶ" - ಒಂದು ಪುಸ್ತಕ ಬಿಡುಗಡೆ ಸಮಾರಂಭ

ಬಾಲ್ಯದಿಂದಲೂ ಭಾದ್ರಪದ ಮಾಸದಲ್ಲಿ ಶುಕ್ಲ ಪಕ್ಷದ ಚಂದ್ರನನ್ನು ನೋಡಿದರೆ ಸ್ಯಮಂತಕೋಪಾಕ್ಯಾನ ಕಥೆ ಕೇಳುವುದು ರೂಡಿಯಾಗಿತ್ತು. ಪಂಚಾಗ ತೆರೆದು ನೋಡಿದಾಗ.ಗೊತ್ತಾದದ್ದು ಇಂದು ರಥ ಸಪ್ತಮಿ...ಸೂರ್ಯನ ಜನುಮದಿನವೆಂದು ಗುರುತಿಸಲಾಗುತ್ತದೆ. ಅಂಥಹ ಶುಭದಿನದಂದು ಸತ್ರಾರ್ಜಿತನಿಗೆ ಸ್ಯಮಂತಮಕ ಮಣಿ ಸಿಕ್ಕಿದ ಹಾಗೆ ಶ್ರೀ ಮಣಿಕಾಂತ್ ಸರ್ ಅವರ "ಅಪ್ಪ ಅಂದ್ರೆ ಆಕಾಶ" ಎಂಬ ಅನರ್ಘ್ಯ ಮಣಿ ಬಿಡುಗಡೆ ಸಮಾರಂಭ ಎಂದು ತಿಳಿಯಿತು.

ಮಣಿಕಾಂತ್ ಸರ್ ಅವರ ಲೆಕ್ಕವಿಲ್ಲದಷ್ಟು ಅಭಿಮಾನಿಗಳು, ಬ್ಲಾಗ್ ಲೋಕದ ಅನೇಕ ತಾರೆಗಳು, ಇನ್ನು ಬರಿ ಫೇಸ್ ಬುಕ್, ಬ್ಲಾಗ್ ಗಳಲ್ಲಿ ಹಲ್ಲು ಗಿಂಚುತ್ತಾ ಇರುವ ಎಷ್ಟೋ ನಕ್ಷತ್ರಗಳು ಅವರ ಸ್ನೇಹದ ಅಂಬರದಲ್ಲಿ ಮಿನುಗಲು ಬರುವವರಿದ್ದರು. ಹಾಗಾಗಿ ಬೇಗ ಬೇಗ ಭಾನುವಾರದ ಕೆಲಸ! ಮುಗಿಸಿ ರವಿಂದ್ರ ಕಲಾಕ್ಷೇತ್ರದ ಕಡೆಗೆ ಹೆಜ್ಜೆ ಹಾಕಿದೆ ಕ್ಷಮಿಸಿ ಬೈಕ್ ಓಡಿಸಿದೆ..!

ಪಂಚಾಂಗದ ಪ್ರಕಾರದಿನ ವಿಶೇಷ  : ರಥಸಪ್ತಮಿ - ರವಿಯ ಜನುಮದಿನ
ವಾರ: ರವಿವಾರ
ಸ್ಥಳ: ರವಿಂದ್ರ ಕಲಾಕ್ಷೇತ್ರ (ರವಿ + ಇಂದ್ರ)
ಲೇಖಕ : ಮಣಿಕಾಂತ್ (ಸ್ಯಮಂತಕಮಣಿಕಾಂತ್)

ನೋಡಿ ಇಂದಿನ ವಿಶೇಷ..ಎಲ್ಲದರಲ್ಲೂ ಸೂರ್ಯ ನಗುತ್ತಿದ್ದಾನೆ.. !

ಸುಂದರ ಆಹ್ವಾನ ಪತ್ರಿಕೆ
ಬೈಕ್ ನಿಲ್ಲಿಸಿದಾಗ ಬದರಿ ಸರ್ ಅವರ ಮುಗ್ಧ ನಗೆಯ ಆಲಿಂಗನ ಸಿಕ್ಕಿತು, ಮಾತಾಡುತ್ತಾ ನಿಂತೆವು..ಫೇಸ್ ಬುಕ್ ಗುಂಪಿನ ಪದಾರ್ಥ ಚಿಂತಾಮಣಿಯ "ಪ್ರದೀಪ್ ರಾವ್" ಸಿಕ್ಕರು, ಅಷ್ಟರಲ್ಲಿ ಬಾಲೂ ಸರ್ ಅವರಿಗೆ ಕರೆಮಾಡಿದಾಗ ಕಲಾಕ್ಷೇತ್ರದ ಒಳಗೆ ಇದ್ದೇನೆ ಎನ್ನುವ ಉತ್ತರ ಬಂತು, ಅಲ್ಲಿ ಸತೀಶ್ ನಾಯಕ್, ಸಹೋದರಿಯರಾದ  ಸುಲತ ಶೆಟ್ಟಿ (ಎಸ್ ಎಸ್),  ಸುಷ್ಮಾ ಮೂಡಬಿದರೆ (ಪಿ.ಎಸ್), ಸಂಧ್ಯಾ ಭಟ್ (ಎಸ್.ಪಿ), ರಶ್ಮಿ ತೆಂಡೂಲ್ಕರ್, ವಿನಯ್, ಶಿವೂ ಸರ್ , ಪ್ರಕಾಶಣ್ಣ, ದಿಗ್ವಾಸ್, ಉಮೇಶ್ ದೇಸಾಯಿ ಸರ್, ಸವಿತಾ, ಪುಷ್ಪರಾಜ್ ಚೌಟ, ಸುರೇಶ ಹೆಗಡೆ, ಅಶೋಕ್ ಶೆಟ್ಟಿ, ಪ್ರವೀಣ್ ಸಂಪ, ತಿರುಮಲೈ ರವಿ ಸರ್, ಗಿರೀಶ್ ಸೋಮಶೇಖರ್,  ಗೋಪಾಲ ವಾಜಪೇಯಿ ಸರ್, ಹೀಗೆ ಇನ್ನೂ ಅನೇಕರು ಭೇಟಿಯಾದರು.

ಕಲಾಕ್ಷೇತ್ರದ ಆವರಣದ ಸುಂದರವಾದ ರಂಗ ಮಂಟಪದಲ್ಲಿ  ಶ್ರೀ ಉಪಾಸನ ಮೋಹನ್ ಅವರ ತಂಡದಿಂದ ಸೊಗಸಾದ ಹಾಡುಗಳು ತೇಲಿ ಬರುತಿದ್ದವು, ಎಲ್ಲರು ತಮಗೆ ಬೇಕಾದ ಆಸನಗಳನ್ನೂ ಹುಡುಕಿಕೊಂಡು ಕೂರಲು ಶುರುವಾದರು. ಒಂದಾದ ಮೇಲೆ ಒಂದರಂತೆ ಶ್ರೀ ಮೋಹನ ಅವರ ತಂಡ ಗಾನ ಮಾಧುರ್ಯದ ಅಲೆಗಳಲ್ಲಿ ನಮ್ಮನ್ನೆಲ್ಲ ತೇಲಿಸುತಿದ್ದರು.

ಸಮಾರಂಭದ ಅತಿಥಿಗಳೆಲ್ಲ ಬಂದು ಆಸನ ಗ್ರಹಣ ಮಾಡಿದರು. ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ಟರು (ಕನ್ನಡ ಪ್ರಭ ಮತ್ತು ಸುವರ್ಣ ನ್ಯೂ ವಾಹಿನಿಯ ಮುಖ್ಯ ಸಂಪಾದಕರು), ಮುಖ್ಯ ಅತಿಥಿ ಪ್ರಸಿದ್ಧ ಕವಿಗಳಾದ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿಗಳು, "ಚಂದ್ರಮುಖಿ ಪ್ರಾಣಸಖಿ" ಚಿತ್ರದ ಅಭಿನಯದಿಂದ ನನಗೆ ಬಹಳ ಇಷ್ಟವಾದ ಚಿತ್ರ ತಾರೆ ಭಾವನ, ನನಗೆ ಬಹಳ ಇಷ್ಟವಾದ ಹಾಗೂ ಐವತ್ತು ಹೆಚ್ಚು ಬಾರಿ ನೋಡಿದ "ಮಠ" ಮತ್ತು "ಎದ್ದೇಳು ಮಂಜುನಾಥ" ಚಿತ್ರದ ನಿರ್ದೇಶಕ ಶ್ರೀ ಗುರುಪ್ರಸಾದ ಇವರೆಲ್ಲ ಶ್ರೀ ಮಣಿಕಾಂತ್ ಸರ್ ಅವರ ಪುಸ್ತಕದ ಲೋಕಾರ್ಪಣೆಗೆ ಬಂದಿದ್ದರು.

ಭಾವನ ಅವರ ಧ್ವನಿ ಒಂದು ತರಹ ಗುಂಗು ಹಿಡಿಸುತ್ತೆ..ಅವರು ಸುಲಲಿತವಾಗಿ ಪುಸ್ತಕದ ಬಗ್ಗೆ, ಪುಸ್ತಕ ಓದುವ ಹವ್ಯಾಸದ ಬಗ್ಗೆ ಚಿಕ್ಕ ಚೊಕ್ಕ ಮಾತುಗಳು ಅವರ ಮಾತನ್ನು ಇನ್ನಷ್ಟು ಕೇಳುವಾ ಅನ್ನಿಸಿತ್ತು ಅವರ ಧ್ವನಿ ಕೇಳಲೇ? ಇಲ್ಲಾ  ಅವರ ಸುಂದರ ಮುಖ ನೋಡಲೇ ಎನ್ನುವ ಗೊಂದಲದಲ್ಲಿದಾಗಲೇ ಅವರ ಮಾತುಗಳು ಮುಗಿದಿದ್ದವು.

ನಂತರ ಪ್ರಸಿದ್ಧ ಮುಖ್ಯ ಅತಿಥಿ ಕವಿಗಳಾದ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿಗಳು ತಮ್ಮ ಕವನಗಳ ಹಾಗೆ ಮುತ್ತು ಪೋಣಿಸಿದ ಮಾತುಗಳು ಮಣಿಕಾಂತ್ ಅವರ ಸಾಧನೆಗೆ ಮುತ್ತಿನ ಮಣಿಹಾರವನ್ನೇ ತೊಡಿಸಿದರು. ಅವರು ಹೇಳಿದಂತೆ ವಾಲ್ಮೀಕಿಯ ಮಾತುಗಳನ್ನು ಉಲ್ಲೇಖಿಸಿದ ಒಂದು ಸಾಲು ನನ್ನನ್ನು ಕೆಲ ಕಾಲ ಮೌನಿಯಾಗಿಸಿತು. ಸಾಧನೆ ಮಾಡುವಾಗ "ಕಂಬನಿಯನ್ನು ಹಿಂಬಾಲಿಸು" ಎಂಥಹ ಮಾತುಗಳು!

ಶ್ರೀ ಗುರುಪ್ರಸಾದ್ ಅವರ ಚಿತ್ರಗಳಂತೆ ಅವರ ಮಾತುಗಳು ಬಂದೂಕಿನಿಂದ ಹೋರಟ ಗುಂಡಿನಂತೆ....ಸರಿಯಾದ ಗುರಿ ಸರಿಯಾದ ಮಾತು. ಹತ್ತು ಹದಿನೈದು ನಿಮಿಷ...ನಾನು ಹಾಗೂ ಸಮಾರಂಭಕ್ಕೆ ಬಂದಿದ್ದ ಎಲ್ಲರೂ ಮಾಡಿದ್ದು ಎರಡೇ ಕೆಲಸ..ಒಂದು ಇರುವ ಹಲ್ಲನ್ನೆಲ್ಲಾ ಬಿರಿಯುವಂತೆ ನಕ್ಕಿದ್ದು...ಎರಡು ಅಂಗೈಗಳು ನೋಯುವ ತನಕ ಚಪ್ಪಾಳೆ ಬಾರಿಸಿದ್ದು.  ಎಂಥಹ ಮಾತುಗಾರಿಕೆ..ನಗೆ ದೇವತೆ ಅವರ ಪ್ರತಿ ಪದಗಳನ್ನು ತಬ್ಬಿ ಹಿಡಿದಿದ್ದಳು. ಎದ್ದೇಳು ಮಂಜುನಾಥ ಚಿತ್ರದಲ್ಲಿ ಮಂಜುನಾಥನ ಪಾತ್ರ ಅವರ ತಾಯಿ ಕೊಟ್ಟಿದ್ದ ಐವತ್ತು ರೂಪಾಯಿ ನೋಟನ್ನು ನಾಣಿಯ ಪಾತ್ರಕ್ಕೆ ಕೊಟ್ಟು ಹೇಳುತ್ತಾರೆ " ಒಳ್ಳೆ ಕೆಲಸ ಮಾಡುವಾಗ ಈ ಹಣವನ್ನು ಉಪಯೋಗಿಸಿಕೊ ಎಂದು ನನ್ನತಾಯಿ ಕೊಟ್ಟಿದ್ದಳು..ಇವತ್ತು ನಿಮಗೆ ಕೊಡ್ತಾ ಇದ್ದೀನಿ...ನಿಮಗೆ ಒಳ್ಳೆದಾಗಲಿ" ...ಅದೇ ರೀತಿಯಲ್ಲಿ ಗುರುಪ್ರಸಾದ ಅವರ ತಂದೆ ಮಣಿಕಾಂತ್ ಸರ್ ಅವರ ಪುಸ್ತಕವನ್ನು ಕೊಂಡು ತರಲು ಆಶೀರ್ವಾದ ಮಾಡಿ ನೂರು ರೂಪಾಯಿಯನ್ನು ಕೊಟ್ಟಿದ್ದರಂತೆ. ಆ ಹಣವನ್ನು ಮಣಿಕಾಂತ್ ಸರ್ ಅವರಿಗೆ ಕೊಟ್ಟು ಈ ನೂರು ರೂಪಾಯಿ ಅಕ್ಷಯವಾಗಲಿ ಎನ್ನುವ ಮಾತನ್ನು ಹೇಳಿದರು. ಒಂದು ಸುಮಧುರ ಭಾವನೆಯನ್ನು ಹೊರಗಿಟ್ಟ ಅಪೂರ್ವ ಘಳಿಗೆ ಅದು. ಗುರುಪ್ರಸಾದ್ ಅವರ ಮಾತುಗಳು ಒಂದಕ್ಕಿಂತ ಒಂದು ಸೊಗಸಾಗಿದ್ದವು. ಅವರ ಚಿತ್ರಗಳು ಇನ್ನಷ್ಟು ಬರಲಿ ಎನ್ನುವ ಆಶಯ ನಮ್ಮೆಲರದು.

ಅಧ್ಯಕ್ಷ ಭಾಷಣ ಮಾಡಿದ ಶ್ರೀ ವಿಶ್ವೇಶ್ವರ ಭಟ್ಟರು ತಮ್ಮ ಹಾಗು ಮಣಿಕಾಂತ್ ಅವರ ಪರಿಚಯ, ಬೆಳೆದುಬಂದ ಹಾದಿ,  ಸಾಧನೆಯ ಶಿಖರದತ್ತ ಪಯಣ ಎಲ್ಲವನ್ನು ಸೊಗಸಾಗಿ ತೆರೆದಿಟ್ಟರು. ಮಣಿಕಾಂತ್ ಒಬ್ಬ ಸುಂದರ ಮಾನವ ಜೀವಿ ಎನ್ನುವ ಅವರ ಮಾತುಗಳು ಅಕ್ಷರಶಃ ನಿಜ.

ತೆರೆಯ ಹಿಂದೆ, ತೆರೆಯ ಮುಂದೆ ಈ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪ್ರತಿಯೊಬ್ಬರನ್ನು ಗೌರವಿಸಿದ್ದು ಶ್ಲಾಘನೀಯ. ಸುಂದರ ಮಾತುಗಳನ್ನು ಹೇಳಿದ ಮಣಿಕಾಂತ್ ಸರ್, ಈ ಪುಸ್ತಕವನ್ನು ಬರೆಯಲು ಅವರಿಗೆ ಹೆಗಲು ಕೊಟ್ಟು ನೆರವಾದ ತಮ್ಮ ಕುಟುಂಬದವರನ್ನು, ಸ್ನೇಹಿತರನ್ನು ನೆನೆದು ಗೌರವ ಸಲ್ಲಿಸಿದರು.

ಇಡಿ ಕಾರ್ಯಕ್ರಮದಲ್ಲಿ ಎದ್ದು ಕಂಡಿದ್ದು ಒಂದು ಸುಂದರ ವಾತಾವರಣ..ಹಾಗು ತಮ್ಮ ಸಾಧನೆಯಾ ಬಗ್ಗೆ ಹೆಚ್ಚು ಮಾತಾಡದೆ ತೆರೆಮರೆಯಲ್ಲಿ ಶ್ಲಾಘನೀಯ ಕೆಲಸ ಮಾಡಿ ತಮ್ಮಷ್ಟಕ್ಕೆ ತಾವು ಇರುವ ಅನೇಕರಲ್ಲಿ ಕೆಲವರನ್ನು ಪರಿಚಯ ಮಾಡಿಕೊಟ್ಟು ಅವರನ್ನು ವೇದಿಕೆಗೆ ಕರೆದು ಗೌರವಿಸಿದ್ದು. ಅನೇಕ ಬ್ಲಾಗ್ ಲೋಕದ ತಾರೆಗಳ ಪುಸ್ತಕ ಬಿಡುಗಡೆಯಲ್ಲಿ ಕೂಡ ಇಂತಹ ಹೃದಯ ಸ್ಪರ್ಶಿ ಘಟನೆಗಳನ್ನು ನಾನು ಕಂಡಿದ್ದೆ.

ರಥ ಸಪ್ತಮಿಯ ದಿನ ಸೂರ್ಯ ತನ್ನ ಸಪ್ತಾಶ್ವದ ರಥದಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ  ಉತ್ತರ ದಿಕ್ಕಿನೆಡೆ  ಸಂಚರಿಸುತ್ತಾನೆ ಎನ್ನುವಂತೆ..ಕೆಲವು ಸುಂದರ ಪುಟಗಳಲ್ಲಿ ಹಲವಾರು ಹೃದಯ ಸ್ಪರ್ಶಿ ಲೇಖನಗಳ ಮೂಲಕ ನಮಗೆಲ್ಲರಿಗೂ ಪರಿಚಯಿಸುತ್ತಿರುವ ಮಣಿಕಾಂತ್ ಅವರ ನೂತನ ಕೊಡುಗೆ "ಅಪ್ಪ ಅಂದ್ರೆ ಆಕಾಶ" ಎನ್ನುವ ಹೊತ್ತಿಗೆ ಬಿಡುಗಡೆ ಸಮಾರಂಭ ಸೊಗಸಾಗಿತ್ತು
ಸುಂದರ ಹೃದಯವಂತ ಗೆಳೆಯ - ಮಣಿಕಾಂತ್ ಸರ್ ! (ಚಿತ್ರಕೃಪೆ - ಪ್ರಕಾಶ ಹೆಗಡೆ) 


ಅಪ್ಪನ ದುಡ್ಡು ಎಣಿಸೋಕೆ ಆಗಲ್ಲ....ಅಮ್ಮನ ಸೀರೆ ಮಡಚೋಕೆ ಆಗೋಲ್ಲ..ಇದು ಗಾದೆ..ಅಮ್ಮನ ಸೀರೆಯ ಅಂಚಲ್ಲಿ ಕಂಡ ಬರುವ ಪ್ರೀತಿಯನ್ನು "ಅಮ್ಮ ಹೇಳಿದ ಎಂಟು ಸುಳ್ಳುಗಳು" ಎಂಬ ಹೃದಯ ಸ್ಪರ್ಶಿ ಪುಸ್ತಕದಲ್ಲಿ ಎಲ್ಲರ ಬದುಕಿನ ಮನೋಜ್ಞ ಮುಖವನ್ನು ಪರಿಚಯಿಸಿದ ಮಣಿಕಾಂತ್ ಸರ್ ....ಈಗ ಅಪ್ಪನ ದುಡ್ಡನ್ನು ಎಣಿಸದೆ ಅಪ್ಪ ಎನ್ನುವ ಒಂದು ಭಾವ ಜೀವಿ ನಮಗಾಗಿ ಕಟ್ಟಿ ಕೊಡುವ ಸುಂದರವಾದ ಅಂಬರವನ್ನು ಪರಿಚಯಿಸುತ್ತಿರುವ "ಅಪ್ಪ ಎಂದರೆ ಆಕಾಶ" ಹೊತ್ತಿಗೆಯ ಬಿಡುಗಡೆಯನ್ನು ಬರಸೆಳೆದುಕೊಂಡು ಓದಿ ಬಿಡುವ ಆತುರ ಹೆಚ್ಚಾಗುತ್ತಿದೆ..ಆ ಪುಸ್ತಕದ ಸಾರವನ್ನು ಸವಿಯೋಣ ..ನಮ್ಮ ಜೀವನದಲ್ಲಿ ಆ ಲೇಖನಗಳು ಸಾರುವ ಸಂದೇಶಗಳಲ್ಲಿ ಕೆಲವನ್ನಾದರೂ ಅಳವಡಿಸಿಕೊಂಡು ಬೆಳೆಯೋಣ ಎನ್ನುವ ಆಶಯದೊಂದಿಗೆ ಮಣಿಕಾಂತ್ ಸರ್ ಅವರಿಗೆ ಶುಭವಾಗಲಿ...!

Thursday, February 7, 2013

ಆ ದಿನಗಳು

ಹೊಸ ಕ್ಯಾಲೆಂಡರ್ ವರ್ಷ ಆಗತಾನೆ ಶುರುವಾಗಿತ್ತು..ಜನವರಿ ತಿಂಗಳ ಚಳಿಗೆ ರಾತ್ರಿಯ ನಿದ್ದೆ ಇನ್ನು ಕರಗಿರಲಿಲ್ಲ...

ಹಿಂದಿನ ದಿನ ಮಾತಾಡಿದ್ದು ನೆನಪಲ್ಲಿ ಇತ್ತು...ಅಮ್ಮ "ಏಳಲ್ವೇನೋ..ಎಲ್ಲಿಗೋ ಹೋಗ್ಬೇಕು ಅಂತ ಹೇಳಿದ್ದೆ...ಎದ್ದೇಳು ಮಗು" ಎಂದು ಎಲ್ಲೋ ಯೋಜನಗಳಷ್ಟು ದೂರದಲ್ಲಿ ಹೇಳುತಿದ್ದುದು ಮಂದವಾಗಿ ಕಿವಿಗೆ ಬೀಳುತ್ತಿತ್ತು....

ಅರೆ ಇದೇನಿದು..ಹೊತ್ತಾಗಿ ಬಿಟ್ಟಿದೆ..ಎಂದು ತನ್ನನ್ನೇ ತಾನು ಬಯ್ದುಕೊಳ್ಳುತ್ತಾ...ಅಲ್ಲೇ ಇದ್ದ ಅಮ್ಮನಿಗೆ ಇರುವ ಹಲ್ಲುಗಳನ್ನು ಬೀರಿ...ಪ್ರಾತಃ ಕರ್ಮಗಳನ್ನು ಮುಗಿಸಿ ಬಂದಾಗ ಆಗಲೇ ೯.೩೦ ಆಗಿತ್ತು. ಇದ್ದುದರಲ್ಲಿ ಚೆನ್ನಾಗಿ ಕಾಣಿಸುತ್ತೇನೆ ಎನ್ನುವ ಉಡುಗೆ ತೊಡುಗೆಗಳನ್ನು ತೊಟ್ಟು..ಅಮ್ಮ ಕೊಟ್ಟ ಬಿಸಿ ಬಿಸಿ ದೋಸೆಯನ್ನು ತಿಂದು..ಹಾರಾಡುತಿದ್ದ ಮನಸ್ಸನ್ನು ತಹಬದಿಗೆ ತಂದುಕೊಂಡು ಅಮ್ಮನಿಗೆ ಹೇಳಿ ಹೊರ ಹೊರಟಿತು!

ಮನಸ್ಸಲ್ಲಿ ಏನೋ ಆನಂದ...ಕೆಲವೊಮ್ಮೆ ಒಂದು ನೂರು ಮೀಟರ್ ನೆಡೆಯುವುದಕ್ಕೂ ಸೋಮಾರಿಸುತಿದ್ದ ದೇಹ..ಇಂದು ಸುಮಾರು ಒಂದೆರಡು ಕಿ.ಮಿ. ಗಳನ್ನೂ ಓಡುತ್ತಲೇ ಬಂದು ಬಿಟ್ಟಿತ್ತು.

ಕಣ್ಣುಗಳು ಸಾವಿರಾರು ಮಂದಿಗಳಲ್ಲಿ ಯಾರನ್ನೋ ಹುಡುಕುತಿತ್ತು...ಸಣ್ಣಗೆ ಕಣ್ಣಲ್ಲಿ ಮಿಂಚುಗಳು ಹೊಳೆದವು. ಸ್ವಾಮೀ ವಿವೇಕಾನಂದರ ಶೈಲಿಯಲ್ಲಿ ನಿಂತವರನ್ನು ಕಂಡಾಗ..ದಂತ ಪಂಕ್ತಿಗಳು ತಾನಾಗೆ ತೆರೆದುಕೊಂಡವು..ಆ ಕಡೆಯೂ ಅದೇ ಪುನರಾವರ್ತನೆ...!

ನಾಲ್ಕು ಹುಬ್ಬುಗಳು ಮೇಲೆ ಏರಿದೆವು..ಕಣ್ಣುಗಳು ಸಮ್ಮತಿಸಿದವು...ಎಲ್ಲಿಗಾದರೂ ಸರಿ ಎನ್ನುವ ಮುಖಭಾವ...

ಸುಮಾರು ನಿಮಿಷಗಳು ಮೌನ ಮಾತಾಡಿದವು..ಎಲ್ಲಿಂದ ಮಾತು ಶುರು ಮಾಡುವುದು, ಹೇಗೆ ಶುರು ಮಾಡುವುದು ಎನ್ನುವ ಗೊಂದಲ ತುಂಬಿದ ಮೌನ...ಕಡೆಗೆ ಉಭಯ ಕುಶೋಲೋಪರಿ ಸಾಂಪ್ರತವಾಯಿತು.  ಲೋಕದ ವಿಷಯಗಳೆಲ್ಲ ಮಾತಾದವು..ಬಸ್ಸಿಗೆ ಹತ್ತಿದಷ್ಟು ಇನ್ನಷ್ಟು ಜನರು ನಿಲ್ದಾಣದಲ್ಲಿ  ಇರುವಂತೆ..ವಿಷಯಗಳು, ಮಾತುಗಳು ಮುಗಿಯುತ್ತಲೇ ಸೇರುತ್ತಲೇ ಇತ್ತು.. .ತಣ್ಣಗೆ ಹೊಟ್ಟೆ ಹಸಿಯುತ್ತಿತ್ತು...ಜನವರಿಯ ಛಳಿ ಮಿಶ್ರಿತ ಬಿಸಿ ಇನ್ನಷ್ಟು ನೀರಡಿಕೆಯನ್ನು ಹೆಚ್ಚಿಸಿತ್ತು..ಆದರೆ ಮನಸ್ಸಿಗೆ ಯಾವುದೂ ಬೇಡವಾಗಿತ್ತು...ಹಕ್ಕಿಯ ಹಾಗೆ ಹಾರಾಡುತ್ತಲೇ ಇತ್ತು...

ಗೋತ್ರ, ನಕ್ಷತ್ರ, ರಾಶಿ, ಹೆಸರು ಹೇಳಿ ಎಂದು ಅರ್ಚಕರು ಹೇಳಿದಾಗ ಪ್ರಪಂಚಕ್ಕೆ ಮತ್ತೆ ಬಂದದ್ದು...ತಡಬಡಾಯಿಸಿ ಅವರು ಕೇಳಿದಕ್ಕೆ ಉತ್ತರ ಕೊಟ್ಟ ಮೇಲೆ...ಮಂಗಳ ವಾದ್ಯ ಮೊಳಗಿತು...ತೀರ್ಥ ಪ್ರಸಾದವಾಯಿತು...ದೇವರಿಗೆ ನಮಸ್ಕರಿಸಿ..ಮತ್ತೆ ಹೊರಗಿನ ಕಟ್ಟೆಯ  ಮೇಲೆ  ಶುರುವಾಯಿತು ಮಾತುಗಳು....

ಪ್ರಪಂಚವನ್ನೇ ಮರೆತು ಮಾತಾಡುತಿದ್ದ ಆ ಮನಸ್ಸುಗಳಿಗೆ ಈ ಜಗತ್ತನ್ನೇ ಗೆದ್ದ ಸಂತೋಷ. ಮನದ ಕಡಲಲ್ಲಿ   ಹೇಳಿಕೊಳ್ಳಲಾಗದಷ್ಟು ಅಲೆಗಳ ಆರ್ಭಟ..ಒಂದು ರೀತಿಯಲ್ಲಿ ರೆಕ್ಕೆಯಿಲ್ಲದಿದ್ದರೂ ಹಾರಬೇಕು ಎನ್ನುವ ಹಂಬಲ , ಹಾರಬಲ್ಲೆ ಎನ್ನುವ ಪ್ರಚಂಡ ವಿಶ್ವಾಸ..ಕೆಲ ಘಂಟೆಗಳು ಉರುಳಿದ್ದು ಗೊತ್ತಾಗಲೇ ಇಲ್ಲ...

"ಕಣಿ ಹೇಳ್ತೀವಮ್ಮ ಕಣಿ...ಸುಂದರ ಜೋಡಿಗಳಿಗೆ ಹಾಲಕ್ಕಿ ನುಡಿತೈತೆ" ಅಂತ ಗೊಗ್ಗರು ಧ್ವನಿ ಬಂದಾಗ ತಾರಮಂಡಲದಲ್ಲಿದ್ದ ಪಕ್ಷಿಗಳು ನಿಧಾನವಾಗಿ ಧರೆಗಿಳಿದವು..ಬೇಡ ಬೇಡವೆಂದರೂ ಹಿಂಸೆ ಮಾಡಿ...ಇಲ್ಲದ,  ಇರದ, ಬೇಡವಾದ ಮಾತುಗಳನ್ನು ಹೇಳಿ...ದಕ್ಷಿಣೆ ತೆಗೆದುಕೊಂಡು ಜಾಗ ಖಾಲಿ ಮಾಡಿದವು ಕೊರವಂಜಿಗಳು...

ಆ ಕ್ಷಣಕ್ಕೆ ತಾವೇ ಶ್ರೀನಿವಾಸ ಪದ್ಮಾವತಿ  ಜೋಡಿ ಎಂದು ಬೀಗಿದ ಮನಸ್ಸುಗಳು.... ಸರಿ ಹೊತ್ತಾಯಿತು ಎಂದು ಹೊಸ ವರ್ಷಕ್ಕೆ ಶುಭಾಶಯಗಳನ್ನು ಕೋರುತ್ತ...ಆ ವಾತಾವರಣದಲ್ಲೂ ಬಿಸಿಯಾದ ಮನಸ್ಸನ್ನು ತಣ್ಣಗೆ ಮಾಡಿಕೊಳ್ಳಲು ಐಸ್ ಕ್ರೀಂ ತಿಂದು...ಮತ್ತೆ ಸಿಗುವ ಭರವಸೆ ಮಾತುಕೊಡುತ್ತಾ..ತಮ್ಮ ತಮ್ಮ ಮನಗಳು ತುಂಬಿದ ಮನೆಗಳಿಗೆ ಹೊರಟವು...

ಹೊಸ ವರ್ಷಕ್ಕೆ  ಕಾಲಿಟ್ಟ ಆ ದಿನವನ್ನು ಸಾರ್ಥಕವಾಗಿ ಕಳೆದ ನೆಮ್ಮದಿ ಸಂತಸ ಜೋಡಿಗೆ...ಬೆಟ್ಟವನ್ನೇ ಹೊತ್ತು ನಿಂತಿದ್ದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಆಶೀರ್ವಾದದ ಹಸ್ತ ತೋರುತ್ತಾ  ಹರಸಿ ಕಳುಹಿಸಿದ...

ಬಸ್ ನಿಲ್ದಾಣಕ್ಕೆ ಬಂದರೆ ಗುಣ ನೋಡಿ ಹೆಣ್ಣು ಕೊಡು ಚಿತ್ರದ "ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ" ಹಾಡು ಬರುತಿತ್ತು...ಸುಮ್ಮನೆ ತನ್ನನ್ನೇ ನೋಡಿಕೊಂಡ ಮನಸು ಹೇಳಿತು...ಅರೆ ಬಾಳು ಹಸಿರಾಗುತ್ತಿದೆ...ತಾನು ತೊಟ್ಟ ಬಳೆಯು ಹಸಿರು...ಹುಡುಗ ತೊಟ್ಟ ಅಂಗಿಯೂ ಹಸಿರು....

ಹಸಿರಲ್ಲೇ ಉಸಿರು ಬೆರೆತಾಗ ಜಗವೆಲ್ಲ ಹಸಿರು ಅಲ್ಲವೇ...!

ಅಂದು ಭೇಟಿ ಮಾಡಿದ ಆ ಹುಡುಗಿ ಇಂದು ನನ್ನ ಮನೆ ಬೆಳಗಿ ಹನ್ನೊಂದು ವಸಂತಗಳು ಆಯಿತು...ಮುದ್ದಾದ ಪ್ರೇಮದ ಕಾಣಿಕೆ ಕೊಟ್ಟ ಆ ಹುಡುಗಿ ನನ್ನ ಮನದಗುಡಿಯ ದೇವಿಯಾಗಿದ್ದಾಳೆ..ಇಂದು ಅವಳ ಜನುಮ ದಿನ...ಕಾಣಿಕೆಯಾಗಿ ಸದಾ ಮೆಲುಕು ಹಾಕುವ ಲೇಖನ ಮಾಲೆ ಅವಳ ಕೊರಳಿಗೆ ಹುಟ್ಟು ಹಬ್ಬದ ಕಾಣಿಕೆ!


ಜನುಮ ದಿನದ ಶುಭಾಶಯಗಳು ಸವಿತಾ.....ನೀನು ಬಂದೆ...ಮಿನುಗುತಿದ್ದ ಬಾಳು ಇನ್ನಷ್ಟು ಬೆಳಗಿತು...ಹೀಗೆಯೇ ಇನ್ನಷ್ಟು ಮಿನುಗುತ್ತ...ಬೆಳಗುತ್ತಾ...ಹೊಳೆಯುತ್ತಾ ಇರಲಿ......!

"ನೀ ಇರಲು ಜೊತೆಯಲ್ಲಿ 
ಬಾಳೆಲ್ಲ ಹಸಿರಾದಂತೆ...
ನಗುತ ನೀ ಕರೆದರೆ 
ಮನದಿ ಸಂತೋಷ ಹಾಡಾದಂತೆ..!"