Wednesday, January 2, 2013

ಕಾಲವನ್ನು ತಡೆಯೋರು ಯಾರೂ ಇಲ್ಲ

ಎಲ್ಲರೂ ಶತಪಥ ತಿರುಗುತಿದ್ದರು..ಯಾರಿಗೂ ಏನು ಮಾಡಲು ತೋಚುತ್ತಿಲ್ಲ!

ಯಾರಾದರೂ ಸಮವಸ್ತ್ರ ತೊಟ್ಟವರು ಹೊರಗೆ ಬಂದರೆ...ಏನೋ ಹೇಳುತ್ತಾರೆ!..ಏನೋ ತರಲು ಹೇಳುತ್ತಾರೆ...! ಏನೋ ಸಂತಸದ ವಿಷಯ ಹೇಳುತ್ತಾರೆ...ಹೀಗೆ ಸಾಗುತಿತ್ತು..ಯೋಚನಾ ಲಹರಿ...

ಸಮಯದ ನಡಿಗೆ ಹೃದಯ ಬಡಿತಕ್ಕಿಂತ ನಿಧಾನವಾಗಿತ್ತು..ಘಳಿಗೆ ಘಳಿಗೆಗೂ ಗಡಿಯಾರ ನೋಡಿಕೊಳ್ಳೋದೇ ಕಾಯಕವಾಗಿತ್ತು ...ಈಗ ಬರ್ತಾರೆ ಆಗ ಬರ್ತಾರೆ ಎನ್ನುವ ನಿರೀಕ್ಷೆ ಮುಗಿಲು ಮುಟ್ಟುತಿತ್ತು....ಕಣ್ಣುಗಳು ದ್ವಾರದ ಕಡೆಗೆ ಒಮ್ಮೆ..ಮೆಟ್ಟಿಲುಗಳ ಕಡೆಗೆ ಒಮ್ಮೆ ಹರಿದಾಡುತಿತ್ತು...

ಎಂಟಾಯಿತು, ಒಂಭತ್ತು ಆಯಿತು...ಕೊಳವೆ ಧರಿಸಿದ ಪುಣ್ಯಾತ್ಮರ ದರ್ಶನವಾಗಲಿಲ್ಲ..ಮತ್ತೆ ಬಾಗಿಲ ಕಡೆ, ಮೆಟ್ಟಿಲ ಕಡೆ ನೇಗಿಲಿನಂತೆ ಉಳಲು ಶುರು ಮಾಡಿದ  ಕಣ್ಣಾವೆಗಳು..!

ಮೊಬೈಲಿನಲ್ಲಿ ಯಾರಾದರೂ ಕರೆಮಾಡಬಹುದೇ ಎಂದು ನೋಡಿದರೆ ಅದು ನಿಸ್ತೇಜವಾಗಿ ಹಲ್ಲುಕಿರಿಯುತಿತ್ತು...ಮತ್ತೆ ಅದು ಅಣಕಿಸಿದಂತೆ ಭಾಸವಾಗುತಿತ್ತು...ಕರೆ ಬಂದಾಗ ಕಟ್ ಮಾಡಿ ಬಯ್ದುಕೊಳ್ಳುವೆ..ಈಗ ಮಾತ್ರ ನಾನು ಬೇಕೇ ಎಂಬ ಕುಹಕ ನೋಟ..

ಅಚಾನಕ್ಕಾಗಿ ನೀಲಿಯಾಕಾಶದ ಧಿರಿಸಿನಲ್ಲಿ ಒಂದು ಧ್ವನಿ ತೇಲಿ ಬಂತು..."ಕೆಳಗೆ ಕೂತಿರಿ...ಏನಾದರು ವಿಷಯ ಇದ್ದಾರೆ ಕರೆಯುತ್ತೇವೆ..ನಿಮ್ಮ ನಂಬರ್ ನಮ್ಮ ಹತ್ತಿರ ಇದೆ..."

"ಅಲ್ಲಾ..............ಇಲ್ಲಿ................ಹೆಂಗೆ..............ಏನೂ..................ಮತ್ತೆ....ಪರವಾಗಿಲ್ಲ..ಇಲ್ಲೇ..."

"ಬೇಡ..ಕೆಳಗೆ ಕೂತಿರಿ...ಏನೇ ಇದ್ದರೂ ವಿಷಯ ತಿಳಿಸುತ್ತೇವೆ..." ಬೆಕ್ಕಿನ ನಡಿಗೆ ನಡೆದುಕೊಂಡು ಆ ನೀಲಿ ವಸ್ತ್ರದ ಧ್ವನಿ ಮರೆಯಾಯಿತು...

ಬೇರೆ ದಾರಿ ಇರಲಿಲ್ಲ..ಶಕ್ತಿಗಳು ನಿಧಾನವಾಗಿ ಭಾರವಾದ ಹೃದಯ ಹೊತ್ತು ಮೆಟ್ಟಿಲನ್ನು ಇಳಿದು ಕೆಳಗೆ ಬಂದವು...
ಮತ್ತೆ ಒಂದು ಗುಟುಕು ಕಾಫಿ ಕುಡಿದು..ಒಮ್ಮೆ ಇದುವರೆಗೂ ನಡೆದ ಘಟನೆಗಳನ್ನು ಮೆಲುಕು ಹಾಕುತ್ತ....ಕಾಲದ ಭಾರವಾದ ಬಂಡಿಯನ್ನು ನೂಕಲು ಯತ್ನಿಸುತ್ತಿದ್ದವು!

ಅಲ್ಲಿನ ಫೋನ್ ಒಮ್ಮೆ ಕುಯ್ ಎಂದರೆ ಅದರತ್ತಲೇ ನೋಟ....ಮೊಬೈಲ್ ಸ್ವಲ್ಪ ಅಲುಗಾಡಿದರೂ ಏನೋ ಒಂದು ತವಕ...ಆತಂಕ...

ಹದಿನೈದು ದಿನಗಳಿಂದ ದಣಿದಿದ್ದ ಮೂರು ಶಕ್ತಿಗಳು ಹಾಗೆ ಕೆಲಕ್ಷಣ ಕುರ್ಚಿಗೆ ವರಗಿ ನಿದ್ದೇ ಮಾಡುವ ಆಗದ ಕೆಲಸಕ್ಕೆ ಕೈ ಹಾಕಲು ಪ್ರಯತ್ನಿಸಿದವು....

"ಹ್ಯಾಪಿ ನ್ಯೂ ಇಯರ್...ಹೊಸ ವರ್ಷದ ಶುಭಾಶಯಗಳು...ವಿಶ್ ಯು ಹ್ಯಾಪಿ ನ್ಯೂ ಇಯರ್...ಪೀ....ಹುರ್ರಾ......ಥ್ಯಾಂಕ್ ಯು...ವಿಶ್ ಯು ದಿ ಸೇಮ್....ಧನ್ಯವಾದಗಳು..ನಿಮಗೂ ಸಹ...."

ಆ ಚೀರಾಟ, ಕೇಕೆ, ಕಿರುಚು ಧ್ವನಿಗಳಿಗೆ ಎಚ್ಚರವಾಗಿ...ಅರೆ ಅರೆ ಏನು ಇಷ್ಟೊಂದು ಹೊತ್ತು ನಿದ್ದೆ ಮಾಡಿದ್ದೇವೆ ಛೆ ಛೆ...ಎಂದು ಮತ್ತೆ ಮೆಟ್ಟಿಲು ಹತ್ತಿದವು...ಏನೂ ಬದಲಾವಣೆಯಿಲ್ಲ..ಮೇಲೆ ನೇತು ಹಾಕಿದ ಟಿವಿಯಲ್ಲಿ ಲಕ್ಷದ ಒಂದು ಬಾರಿ ಪ್ರಸಾರವಾದ ಅದೇ ಜಾಹಿರಾತುಗಳು...!

ಹ್ಯಾಪಿ ನ್ಯೂ ಇಯರ್ ಸದ್ದು ಮೆಲ್ಲನೆ ತಣ್ಣಗಾಯಿತು..ಬೆಳಗಿನ ಚಳಿಗೆ ಮೈ..ಮನಸು ಮುದುಡಲು ಶುರುವಾಯಿತು...ಅಲ್ಲೇ ಇದ್ದ ರೊಟ್ಟಿನ ಬಾಕ್ಸ್ ಹರಡಿಕೊಂಡು ತಂದಿದ್ದ ಚಿಕ್ಕ ಚಿಕ್ಕ ಶಾಲುಗಳನ್ನು ಹೊದ್ದು...ಅಲ್ಲೇ ಮಲಗಲು ಪ್ರಯತ್ನ ಪಟ್ಟವು...

"ಹೇ ಎಳ್ರೋ ..ಕಾಫಿ..ತಗೋಳಿ...ಕಾಫಿ..." ಎನ್ನುತ್ತಾ ಆ ಶಕ್ತಿಗಳ ಹಿರಿಯ ಶಕ್ತಿ ಬಂದು ಎಚ್ಚರಿಸಿದಾಗಲೇ ಭುವಿಗಿಳಿದ ಅನುಭವ....

ಕಾಫೀ ಕುಡಿದು ಮತ್ತೆ ಮೆಟ್ಟಿಲು ಹತ್ತಿ ಬಂದರೆ  ಅದೇ ಜಾಹಿರಾತುಗಳು ಪರದೆಯ ಮೇಲೆ .....!

ಮತ್ತೆ ಅದೇ ನಿಧಾನಗತಿಯ ಗಡಿಯಾರ...... ಹೇಗೋ ಮತ್ತೆ ೨೪ ಘಂಟೆಗಳು ಕಳೆದವು...

ಒಂದು ಸಂದೇಶ ಕುಯ್ ಗುಟ್ಟುತ್ತ ಮೊಬೈಲ್ನಲ್ಲಿ ಸದ್ದು ಮಾಡಿತು...."ಸುಂದರವಾಗಿ ಅರಳಿದ ಮಲ್ಲಿಗೆ ಹೂವು ಬಾಡಿಗೆ ಅಲಂಕಾರದಲ್ಲಿ ಇದೆ..."

ಸಂಜೆ ಸುಮಾರು ಐದು ಮೂವತ್ತು ಸಮಯದಲ್ಲಿ ಸಮವಸ್ತ್ರದ ಹುಡುಗಿ ಕಣ್ಣಲ್ಲೇ ನೀರು ತುಂಬಿಕೊಂಡು ಸೌಮ್ಯವಾಗಿ ತಲೆ ಅಲ್ಲಾಡಿಸಿತು...


ದೂರದಲ್ಲೆಲ್ಲೋ "ನಾನೇ ಎಂಬ ಭಾವ ನಾಶವಾಯಿತು...ನೀನೆ ಎಂಬ ನೀತಿ ನಿಜವಾಯಿತು" ಉಲಿಯುತ್ತಿತ್ತು...ಆತ್ಮ ಮಿಥ್ಯ ಪರಮಾತ್ಮ ಸತ್ಯ ಎನ್ನುವ ಮಾತು ಸತ್ಯವೇ ಆದರೂ ಅದರ ಮೋಹ ಬಿಡಲು ಪಡುವ ಪಾಡು...ಹೇಳರಾರದು...


ಆ ಶಕ್ತಿಗಳು ಗೋಡೆಯ ಕಡೆ ತಿರುಗಿಕೊಂಡು ಚಾವಣಿಯನ್ನು ದಿಟ್ಟಿಸುತ್ತಾ ಕುಳಿತು ಬಿಟ್ಟವು..

ರೇಡಿಯೋದಲ್ಲಿ "ನಗಲಾರದೆ ಅಳಲಾರದೇ ತೊಳಲಾಡಿದೆ ಜೀವಾ..." ಹಾಡು ಎಲ್ಲ ಘಟನೆಗಳಿಗೆ ಮೂಕ ಸಾಕ್ಷಿಯಂತೆ
ತೇಲಿ ಬರುತಿತ್ತು!!!

(ಇಂದಿಗೆ ನನ್ನ ಅಪ್ಪ ಭೌತಿಕವಾಗಿ ಇಹಲೋಕ ತ್ಯಜಿಸಿ ಒಂದು ವರ್ಷ...ಆ ಕಡೆ ಕ್ಷಣಗಳನ್ನು ನೆನಪಿಸಿಕೊಂಡು...ನಮ್ಮೊಳಗೇ ಇರುವ ಆ ಮಹಾಚೇತನಕ್ಕೆ ನಮನ ಸಲ್ಲಿಸುವ ಒಂದು ಪುಟ್ಟ ಪ್ರಯತ್ನ ಈ ಲೇಖನ)

30 comments:

  1. ಹಲವು ಭಾವಗಳನ್ನು ಹೊಮ್ಮಿಸಿ, ಮತ್ತೊಮ್ಮೆ ಮುಗಮ್ಮಾಗಿಸುವ ಬರಹ ಇದು.

    ಅಗಲಿದ ತಂದೆಯ ನೆನಪುಗಳನ್ನು ಪದೇ ಪದೇ ನೆನಪಿಸಿಕೊಳ್ಳುವ ನಿಮ್ಮ ಅವರೆಡೆಯ ಪ್ರೀತಿ ನನಗೂ ಆದರ್ಶವಾಗಲಿ.

    ಜೊತೆಯಲೇ ಇದ್ದ ಅಪ್ಪ ಕಣ್ ಮುಂದೆಯೇ ಅಗಲಿ ಹೊರಟಾಗ ನಿಮ್ಮ ಮನಸ್ಸಿಗಾದ ಆಘಾತ ಅಸದಳ.

    ಅವರ ಆಶೀರ್ವಾದದ ಹಂಬಲದಿಂದ ನಿಮ್ಮ ಕುಟುಂಬ ಅರಳುತಲೇ ಇರಲಿ.

    ಹೊಸ ವರ್ಷದ ಹುರುಪಲ್ಲಿ ನಿಮಗೆ ಜಗತ್ತಿನ ಎಲ್ಲ ಕಡೆ ಪ್ರವಾಸ ಹೋಗಿಬರುವ ಪ್ರಾಪ್ತಿಯಾಗಲಿ.

    ಅಲೆಮಾರೀ ಸುಖೀಭವ.

    ReplyDelete
    Replies
    1. ಬದರಿ ಸರ್ ನಿಮ್ಮ ಪ್ರತಿಕ್ರಿಯೆ ದಣಿದ ಮನಕ್ಕೆ ಸಾಂತ್ವನ ತಂದರೆ..ನಿಮ್ಮ ಹಾರೈಕೆ ಸಂತಸ ತಂದಿತು...ಧನ್ಯವಾದಗಳು

      Delete
  2. ಶ್ರೀಕಾಂತು....

    ಮುಂಜಾನೆ ಈ ಲೇಖನವನ್ನು ಓದಿ ಮನಸ್ಸು ಭಾರವಾಯಿತು..
    ಏನು ಪ್ರತಿಕ್ರಿಯಿಸಬೇಕು ಅಂತ ತೋಚಲೇ ಇಲ್ಲ...

    ಕಳೆದು ಕೊಂಡವರಿಗೆ ಗೊತ್ತು "ಇನ್ನಿಲ್ಲ" ಎನ್ನುವದರ ಮಹತ್ವ...

    ಕ್ಷಣ ಕ್ಷಣಕ್ಕೂ ಎದುರಾಗುತ್ತಾರೆ...
    ನಗುತ್ತಾರೆ..
    ಮಮತೆಯ ಮಂದಹಾಸ ಬೀರುತ್ತಾರೆ..
    ಎಡತಾಕುತ್ತಾರೆ...
    ನೆನಪಾಗುತ್ತಾರೆ..

    ಕೆಲವೊಮ್ಮೆ ಹನಿಗಳಾಗದೆ ಆದೃವಾಗಿಬಿಡುತ್ತಾರೆ...

    ಅವರು ತೋರಿಸಿದ ದಾರಿಯಲ್ಲಿ ನಡೆಯುವದು ನಾವು ಅವರಿಗೆ ಸಲ್ಲಿಸುವ ಗೌರವ...

    ReplyDelete
    Replies
    1. ಪ್ರಕಾಶಣ್ಣ.ನಿಮ್ಮ ಮಾತು ನಿಜ..ಎಲ್ಲೂ ಹೋಗಿಲ್ಲ ಎನ್ನುವ ಮಾತು ನಿಜವಾದರೂ..ಕಣ್ಣೆದುರು ನಿಂತೇ ನಮ್ಮನ್ನು ಹರಸುತ್ತಾರೆ.. ಸುಂದರ ಪ್ರತಿಕ್ರಿಯೆ ಬಿಸಿಯಾದ ಕಲ್ಲಿನ ಮೇಲೆ ಮಳೆ ಸುರಿದಂತೆ ತಂಪಾಯಿತು....ಧನ್ಯವಾದಗಳು

      Delete
  3. ಹುಟ್ಟಿನಿಂದ ನಮ್ಮ ಇಲ್ಲವೇ ಅವರ ಸಾವಿನ ತನಕ ನಮ್ಮ ಜೊತೆಯಿರುವ ಆತ್ಮ - ಕಲಿಸುವ, ನಡೆಸುವ ತಿದ್ದುವ ತೀಡುವ ಜೀವ - ಅಪ್ಪ.
    ನಿಜ ಇಂತಹ ಒಂದು ಜೀವ ಇಲ್ಲವಾದರೆ ??? ನಿಜಕ್ಕೂ ಊಹಿಸಿಕೊಳ್ಳಲೂ ಕಷ್ಟವಿರುವಾಗ ಅನುಭವಿಸಿದ ನಿಮ್ಮ ಮನದ ಭಾರ ಹೇಗಿರಬಹುದು ಎನ್ನುವುದು ವಿದಿತವಾಗಿದೆ..ಶ್ರೀಕಾಂತ್ ಮಂಜು.

    ReplyDelete
    Replies
    1. ಹುಟ್ಟಿನಿಂದ ಜೊತೆಯಲ್ಲೇ ಇರುವ ಸಾವಿನ ಹಾಗೆ..ಮಾರ್ಗದರ್ಶಕರು ಎಡಬಿಡದೆ ಸಲಹುತ್ತಾರೆ, ಅನುಭವ ಧಾರೆಯೆರುತ್ತಾರೆ ..ಹಟಾತ್ ಕಣ್ಮರೆಯಾದಾಗ ಗೊಂದಲಗೊಳ್ಳುವ ಮನಸು ಏನು ಮಾಡಲಾಗದೆ ಚಡಪಡಿಸುತ್ತದೆ..ಅಂತಹ ಚಡಪಡಿಕೆ ಕೆಲ ಪದಗಳಲ್ಲಿ ಹೊರ ಕಾಣಿಸುತ್ತದೆ.ಸುಂದರ ಮಾತುಗಳು ನಿಮ್ಮದು ಧನ್ಯವಾದಗಳು ಆಜಾದ್ ಸರ್...

      Delete
  4. ಆತ್ಮೀಯ ಶ್ರೀಕಾಂತ,
    ಹೌದು, ಕಾಲವನ್ನು ತಡೆಯೋರು ಯಾರು ಇಲ್ಲ! ಹಾಗೆಯೆ ಕಾಲಕ್ಕೆ ಎಲ್ಲವನ್ನು ಮರೆಸುವ ಶಕ್ತಿಯಿದೆ. ಇಲ್ಲವಾಗಿದ್ದಲ್ಲಿ ನಾವೆಲ್ಲಾ ಹುಚ್ಚರಾಗಿಬಿಡುತ್ತಿದ್ದವೇನೋ? ಅಲ್ಲವೇ? ನೆನಪುಗಳು ಯಾವತ್ತು ಕಾಡುತ್ತವೆ ಆದರೆ, ಅದರ ತೀವ್ರತೆಯನ್ನು ಕಾಲವು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ.
    ಪುತ್ರ ಶೋಕಂ ನಿರಂತರಂ ಎನ್ನುತ್ತಾರೆ ಹಿರಿಯರು ಆದರೆ, ಕೆಲವರ ಜೀವನದಲ್ಲಿ ಪಿತ್ರುಶೋಕಂ ಕೂಡ ನಿರಂತರಂ ಆಗಿರುತ್ತದೆ. ದೇಹಭಾವದಿಂದ ದೂರವಾದರು ಆತ್ಮಭಾವದಲ್ಲಿ ಎಂದೆಂದೂ ಇದ್ದೇ ಇರುತ್ತಾರೆ. ಅಣ್ಣ ಇಲ್ಲೇ ಎಲ್ಲೋ ಇದ್ದಾರೆ ಎನ್ನುವ ಭಾವ ಸಾಕು.
    ನಿನ್ನ ಭಾವಪೂರ್ಣ ಮಾತುಗಳು ಮನಸ್ಸನ್ನು ಕಲಕಿಬಿಡುತ್ತವೆ.....................

    ReplyDelete
    Replies
    1. ಸಾಂತ್ವಾನದ ನಿಮ್ಮ ಪ್ರತಿಕ್ರಿಯೆ ಬಹಳ ಇಷ್ಟವಾಯಿತು ಸರ್ .

      Delete
    2. ಚಿಕ್ಕಪ್ಪ...ನಿಮ್ಮ ಮಾತುಗಳು ಎಷ್ಟು ನಿಜವಲ್ಲವೆ..ಮರೆವು ದೈವ ಕೊಟ್ಟ ವರವೇ ಸರಿ...ಸುಂದರವಾದ ಮಾತುಗಳು ಮೌನವನ್ನು ಇನ್ನಷ್ಟು ಸಾತ್ವಿಕವನ್ನಾಗಿ ಮಾಡುತ್ತದೆ...ಧನ್ಯವಾದಗಳು

      Delete
    3. ಫ್ರೆಂಡ್..ಸಾತ್ವನ ಹೇಳುವ ಮಾತುಗಳನ್ನು ಬೆನ್ನು ತಟ್ಟುವ ಮಾತುಗಳು ಕೂಡ ಸಮಾಧಾನ ಕೊಡಿಸಿ..ಅದಕ್ಕೆ ಒಂದು ಸುಂದರ ಚೌಕಟ್ಟನ್ನು ಹಾಕಿ ಕೊಡುತ್ತದೆ.ಧನ್ಯವಾದಗಳು ಫ್ರೆಂಡ್..

      Delete
  5. ಶ್ರೀಕಾಂತ್ ಅವರೇ...

    ಏನು ಹೇಳಬೇಕೆಂದು ತೋಚುತ್ತಿಲ್ಲ...

    ReplyDelete
    Replies
    1. ಮಾತುಗಳು ಹೇಳಲಾರದ ಮಾತುಗಳನ್ನು ನಿಮ್ಮ ಕೆಲವೇ ಶಬ್ದಗಳು ಸಾರಿ ಸಾರಿ ಹೇಳಿವೆ..ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ರಶ್ಮಿ

      Delete
  6. ಏನು ಹೇಳೋದು... ಅಪ್ಪಾ ಎಂದರೇ ಅದೇನೋ ಪುಳಕ ಅಂತಹ ಪುಳಕವೇ ಇಲ್ಲವಾದಾಗ ಮನಸ್ಸು ಮುದುಡಿಹೋಗುತ್ತದೆ... ನಿಮ್ಮ ತಂದೆ ನಿಮ್ಮೊಳಗೆ ಸದಾ ಇರುತ್ತಾರೆ ಒಳಿತನ್ನು ಬಯಸುತ್ತಲೇ ಇರುತ್ತಾರೆ.

    ReplyDelete
    Replies
    1. ಸುಗುಣ ಮೇಡಂ...ಒಳಗೆ ಕೂತು ಆಡಿಸುವ ಆತ್ಮಕ್ಕೆ ಧಾತನೆ ಅಪ್ಪ...ಹೊರಗಿನ ಜಗತ್ತನ್ನು ಪರಿಚಯಿಸುವ ಪರಿ ಅನುಭವಿಸಿಯೇ ತೀರಬೇಕು..ಧನ್ಯವಾದಗಳು ನಿಮ್ಮ ಸುಂದರ ಪ್ರತಿಕ್ರಿಯೆಗೆ..

      Delete
  7. ಪ್ರತಿ ಸಾಲುಗಳು ಹಾಗೂ ಪದಗಳ ಜೋಡಣೆ ಅದ್ಭುತವಾಗಿದೆ. ಪ್ರತಿ ಪದಗಳು (ಸಮವಸ್ತ್ರ, ಮೊಬೈಲ್ ಸಾಮಾನ್ಯವಾಗಿ ಎಲ್ಲರ ಬರಹಗಳಲ್ಗಿರುವುದಕ್ಕಿಂತ ಭಿನ್ನವಾಗಿವೆ... ಕೌತುಕತೆಯನ್ನು ಕಾಯ್ದುಕೊಂಡಿವೆ.

    (ಇಂದಿಗೆ ನನ್ನ ಅಪ್ಪ ಭೌತಿಕವಾಗಿ ಇಹಲೋಕ ತ್ಯಜಿಸಿ ಒಂದು ವರ್ಷ...ಆ ಕಡೆ ಕ್ಷಣಗಳನ್ನು ನೆನಪಿಸಿಕೊಂಡು...ನಮ್ಮೊಳಗೇ ಇರುವ ಆ ಮಹಾಚೇತನಕ್ಕೆ ನಮನ ಸಲ್ಲಿಸುವ ಒಂದು ಪುಟ್ಟ ಪ್ರಯತ್ನ ಈ ಲೇಖನ) -ಈ ಸಾಲು ಓದಿದಾಗಲೇ ತಿಳಿದಿದ್ದು. ಇದು ಅಪ್ಪನ ನೆನಪಿನಲ್ಲಿ ಒಡಮೂಡಿದ ಬರಹವೆಂದು... ಸಾಂತ್ವನ ಹೇಳುವಷ್ಟು ನನ್ನಲ್ಲಿ ಪದಗಳಿಲ್ಲ...

    ದೂರದಲ್ಲೆಲ್ಲೋ "ನಾನೇ ಎಂಬ ಭಾವ ನಾಶವಾಯಿತು...ನೀನೆ ಎಂಬ ನೀತಿ ನಿಜವಾಯಿತು"
    ನಗಲಾರದೆ ಅಳಲಾರದೇ ತೊಳಲಾಡಿದೆ ಜೀವಾ..."- ಸಾಂಧರ್ಭಿಕ ಸಾಲುಗಳು ಬಹಳ ಇಷ್ಟವಾಯಿತು..

    ReplyDelete
    Replies
    1. ಫ್ರೆಂಡ್ ಎಷ್ಟು ಸೊಗಸಾಗಿ ಹೇಳಿದ್ದೀರಿ....ಬರೆದು ಕಳಿಸಿದಾಗ.ಹಲವರು ಏನಾಯಿತು ಎನ್ನುವ ಪ್ರತಿಕ್ರಿಯೆ ಬಂದಿತು..ಹಾಗಾಗಿ ಆ ಟಿಪ್ಪಣಿಯನ್ನು ಹಾಕಬೇಕಾಯಿತು..ನಿಮ್ಮ ಪ್ರತಿಕ್ರಿಯೆಗಳಿಗೆ ನಾನು ಆಭಾರಿ...

      Delete
  8. ಬದುಕಿನ ಕರಾಳ ಸತ್ಯವನ್ನ ಅನುಭವಿಸಿದಾಗ ಆಗುವ ನೋವು ನೆನಪಿಸಿಕೊಂಡಾಗಲೂ ಆಗುವುದು ಕೂಡ ಅಷ್ಟೇ ನಿಜ. "ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೆ..." ನಿಮ್ಮ ತಂದೆಯವರ ಮುಂದಿನ ಪೀಳಿಗೆಯವರ ನೋಡಿ... ಮನ ಸಂತೈಸಿಕೊಳ್ಳಿ... ಹಾಗೆಯೇ ಈ ಲೇಖನ ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡಲಿ...

    ReplyDelete
    Replies
    1. ಕಳೆದುಕೊಂಡ ಕಹಿನೆನಪನ್ನು ಮರೆ ಮಾಡಲು ಬರುವ ಆ ನೆನಪುಗಳೇ ಒಂದು ಅನುಭವ..ನೀವು ಹೇಳಿದಂತೆ ಆಡಿಸುವಾತನ ಕೈಚಳಕ ಏನು ಎಂದು ಯಾರಿಗೂ ಅರಿವಿರೋದಿಲ್ಲ..ಮುಂದಿನ ಚಕ್ರ ಉರುಳುತ್ತಿರುವಾಗ ಹಿಂದಿನ ಚಕ್ರ ಜೊತೆ ನೀಡುತ್ತ ಸಾಗುತ್ತೆ...ಸುಂದರ ಮಾತುಗಳು ಧನ್ಯವಾದಗಳು ಸುರೇಶ ಸರ್..

      Delete
  9. ಬರಹ ಓದಿ ಮೊನ್ನೆ ಹೋದವರೊಬ್ಬರ ನೆನಪಾಯಿತು.
    ಹರಸೋ ಹಿರಿಯರು ಕಿರಿಯರಲ್ಲಿ ಸದಾ ಜೀವಂತ

    ReplyDelete
    Replies
    1. ಅನುರಾಗ ಸಂಗಮದ ಹಾಡು.ಹೋದೋರೆಲ್ಲ ಒಳ್ಳೆಯವರು..ಹರಸೊ ಹಿರಿಯರು..ಅನ್ನುವ ಹಾಗೆ..ಹಿರಿಯರ ಆಶೀರ್ವಾದ ನಮ್ಮನ್ನು ಸದಾ ಕಾಯುವ ಚಾವಣಿ...ಸುಂದರ ಮಾತುಗಳು ಸ್ವರ್ಣ ಮೇಡಂ...ಧನ್ಯವಾದಗಳು

      Delete
  10. ಅಬ್ಬಬ್ಬ ತಂದೆಯ ನೆನಪಿನ ಬಗ್ಗ ಎಂತಹ ಅಭಿಮಾನದ ಬರಹ. ನಿಮ್ಮಂತಹ ಸಂಸ್ಕಾರವಂತ ಮಗನ ಪಡೆದ ಆ ತಂದೆ ನಿಜವಾಗಿಯೂ ಪುಣ್ಯವಂತರು. ಬದುಕಿದ್ದಾಗಲೇ ಹೆತ್ತವರನ್ನು ಬೀದಿ ಪಾಲು ಮಾಡುವ ಜನರ ನಡುವೆ ಇಂತಹ ವಿಚಾರಗಳು ಹಾಗು ನಿಮ್ಮ ಈ ಬರಹ ಅಗತ್ಯವಾಗಿದೆ. ನೆನಪಿನ ಮುನ್ನುಡಿ ಚೆನ್ನಾಗಿ ಬಂದಿದೆ, ನಿಮಗೆ ಶಭಾಶ್ ಹೇಳಬೇಕಿನ್ನಿಸುತ್ತದೆ. ಶಭಾಶ್ ಶ್ರೀಕಾಂತ್ .

    ReplyDelete
    Replies
    1. ಬಾಲೂ ಸರ್ ನಿಮ್ಮ ಪ್ರತಿಕ್ರಿಯೆ ಓದಿ..ಹೃದಯ ತುಂಬಿ ಬಂತು...ಮನಸಲ್ಲಿ ಇದ್ದದ್ದು ಭಾವವಾಗಿ ಬಂದು ಅದು ಅನೇಕರನ್ನು ತಲುಪಿದೆ ಎನ್ನುವಾಗ ಸಿಗುವ ಆನಂದ..ಆಹಾ ಅದನ್ನು ಹೇಳಲಾಗದು...ನಿಮ್ಮ ಪ್ರತಿಕ್ರಿಯೆ ನನ್ನ ಧನ್ಯವಾದಗಳು...

      Delete
  11. ಶ್ರೀಕಾಂತ್ ಸರ್,: ಲೇಖನ ಓದಿ ಮನಸ್ಸಿನಲ್ಲಿ ವಿಷಾದ ಉಂಟಾಯಿತು. ನನಗೂ ನನ್ನ ಅಪ್ಪನ ಸಾವು ನೆನಪಾಗಿ ಕಣ್ಣು ತುಂಬಿಬಂತು...

    ReplyDelete
    Replies
    1. ತುಂಬಾ ತಡೆ ಹಿಡಿದಿದ್ದೆ...ಬರೆಯಲೇ ಬೇಡವೇ ಎನ್ನುವ ಗೊಂದಲವು ಕಾಡುತಿತ್ತು...ಅವರಿಲ್ಲದ ೩೬೫ ದಿನಗಳು...ಭಾವ ಬರೆಯಲು ಪ್ರೆರೇಪಿಸಿದವು....ನೆಲ ಬಗೆದರೆ..ನೀರು...ಮನ ಬಗೆದರೆ ಅಕ್ಷರಗಳ ಕೀರು..ಎನ್ನುವ ಹಾಗೆ ಆ ಕಡೇ ಕ್ಷಣಗಳು ಹಾಗೆ ಪದಗಳಾಗಿ ಬಂದವು..ಲೇಖನದಿಂದ ನಿಮ್ಮ ಶಕ್ತಿಯ ಅಗಲುವಿಕೆಯ ನೆನಪಿಗೆ ಹೊರಳಿದ್ದು.......ಮನಸು ಭಾರವಾಯಿತು ಶಿವೂ ಸರ್...

      Delete
  12. ಶ್ರೀ ಸಾರ್.. ಎಂದಿನಂತೆ ಬಹಳ ಆಪ್ತತೆ ಕೂಡಿದ ಬರಹ..
    ಮೊದ ಮೊದಲು ಅಷ್ಟು ಅರ್ಥವಾಗಲಿಲ್ಲ ವಸ್ತು ಸ್ಥಿತಿ ಅರಿವಾಗಲಿಕ್ಕೆ ನಾಲ್ಕನೇ ಸಾರಿ ಓದಲೇ ಬೇಕಾಯ್ತು..
    ಬರವಣಿಗೆಯಾ ತಾಕತ್ತೇ ಅದು.. ಅರ್ಥವಾಗಲಿಲ್ಲ ಅಂತ ಬಿಟ್ಟು ಹೋಗೋದು ಸ್ಕಿಪ್ ಮಾಡೋ ತರಹದ್ದಲ್ಲ..
    ಏನಿರಬಹುದು ಎಂದು ಕೆದಕಿ ಅರ್ಥವಾಗುವ ತನಕ ಬಿಡದೆ ಪುನಃ ಪುನ ಓದಿಸಿಕೊಳ್ಳುವ ಜಾಯಮಾನ ಎಲ್ಲಾ ಬರಹಕ್ಕೂ ಅಷ್ಟು ಸುಲಭಕ್ಕೆ ದಕ್ಕೋದಿಲ್ಲ..
    ಅಪೂರ್ವ ನಿರೂಪಣೆ.. ನೇರಾ ನೇರ ಹೇಳುತ್ತಿದ್ದ ನಿಮ್ಮ ಬರಹಗಳು ಪರೋಕ್ಷವಾಗಿಯೂ ಸಶಕ್ತವಾಗಿ ಮನ ಮುಟ್ಟಬಲ್ಲವು.
    ಪ್ರತೀ ಬಾರಿಯೂ ನಿಮ್ಮ ತಂದೆಯವರೆಡಿಗಿನ ನಿಮ್ಮ ಪ್ರೀತಿ ಮತ್ತು ಅಭಿಮಾನ ನಮ್ಮಂಥವರಿಗೆ ಹಲವು ಪಾಠಗಳನ್ನೂ ಒಪ್ಪಿಸುತ್ತವೆ.
    ಬರಹ ತುಂಬಾನೇ ಚೆನ್ನಾಗಿದೆ ಸಾರ್..

    ಹೊಸ ವರ್ಷದ ಶುಭಾಶಯಗಳು.. :) :)

    ReplyDelete
    Replies
    1. ಸತೀಶ್..ಸುಂದರ ಅಭಿಪ್ರಾಯ ನಿಮ್ಮದು..ಎಲ್ಲರಲ್ಲೂ ಆ ಅಭಿಮಾನದ ಪ್ರವಾಹ ಇರುತ್ತದೆ..ಕೆಲವರಿಗೆ ಆಣೆಕಟ್ಟು ಕಟ್ಟಲು ಶಕ್ತಿ ನೀಡಿದರೆ.ಕೆಲವರಿಗೆ ಪದಗಳಾಗಿ ಇಳಿಯಲು ಸಹಾಯ ಮಾಡುತ್ತದೆ...ನಿಮ್ಮ ಹಾರೈಕೆಗೆ ಧನ್ಯವಾದಗಳು ನಿಮಗೂ ಸಹ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು

      Delete
  13. ಶ್ರೀ,
    ನಾನೂ ಸತೀಶರ ಥರಹವೇ ಮೊದಲ ಬಾರಿಗೆ ಅರ್ಥವಾಗದೇ ತಿಣುಕಾಡಿದೆ...ಆಮೇಲೆ ಅರ್ಥವಾಯ್ತು..
    ಭಾವಪೂರ್ಣ ಬರಹ....
    ಭೌತಿಕವಾಗಿ ತ್ಯಜಿಸಿದರೂ ನಮ್ಮೊಂದಿಗೇ ಇರುವ..........
    ಎನ್ನುವ ಭಾವನೆ ದುಃಖದಲ್ಲಿರುವ ಎಲ್ಲರಿಗೂ ಮಾದರಿಯಾಗಲಿ...
    ಬರೆಯುತ್ತಿರಿ..
    ನಮಸ್ತೆ :)

    ReplyDelete
    Replies
    1. ಮನೆದೇವ್ರು ಚಿತ್ರದಲ್ಲಿ ಬರುವ ಇದು ಜೀವನ...ಒಮ್ಮೆ ನೋವು ಒಮ್ಮೆ ನಲಿವು...ಇದು ಜೀವನ...
      ಹೀಗೆ ಇರುತ್ತದೆ..ಧನ್ಯವಾದಗಳು ಚಿನ್ಮಯ್

      Delete
  14. ನೀವು ನಿಮ್ಮ ತಂದೆಯನ್ನು ಎಷ್ಟು ಪ್ರೀತಿಸುತಿದ್ದೀರಿ ಎನ್ನುವುದಕ್ಕೆ ಅವರ ನೆನಪುಗಳಲ್ಲಿ ಬರೆದ ಪ್ರೀತಿಯ, ಆಪ್ತ ಬರಹಗಳೇ ಸಾಕ್ಷಿ....ನಿಮ್ಮಂತ ಮಗನನ್ನು ಪಡೆದ ಆ ತಂದೆ ನಿಜವಾಗಿಯೂ ಧನ್ಯರು....ನಮಗೆ ಅತೀ ಹತ್ತಿರದವರು ನಮ್ಮನ್ನು ಬಿಟ್ಟು ಹೋದಾಗ ಅವರ ನೆನಪು ಕುಳಿತಲ್ಲಿ, ನಿಂತಲ್ಲಿ ಕಾಡುವುದು ನಿಜ.....ನಾವು ಏನಾದರೂ ಮಾಡುವಾಗ ಅವರು ನಮ್ಮೊಡನೆ ಇರುವಂತೆಯೇ ಭಾಸವಾಗುವುದು ಕೂಡ...ಅವರ ನೆನನಪುಗಳು ನಮ್ಮನ್ನು ಕಾಡುತ್ತಿವೆ ಎಂದರೆ ಅವರು ನಮ್ಮ ಜೊತೆಯಲ್ಲಿ ಇದ್ದಂತೆ....ನಿಮ್ಮ ತಂದೆ ಭೌತಿಕವಾಗಿ ನಿಮ್ಮ ಜೊತೆ ಇಲ್ಲದೆ ಇದ್ದರೂ ಮಾನಸಿಕವಾಗಿ ಅವರು ಮತ್ತು ಅವರ ಆಶೀರ್ವಾದ ಸದಾ ನಿಮ್ಮೊಂದಿಗಿರುತ್ತದೆ.... ತುಂಬಾ ಆಪ್ತ ಬರಹ.....ಸುಂದರವಾಗಿ ನಿರೂಪಿಸಿದ್ದೀರಿ......ಶುಭವಾಗಲಿ......ಸದಾ ನಗು ನಗುತ್ತಾ ಇರಿ....

    ReplyDelete
    Replies
    1. ಅಶೋಕ್ ಸರ್ ತುಂಬಾ ಮನಕ್ಕೆ ನಾಟುವ ಮಾತುಗಳು ನಿಮ್ಮದು...ಇಲ್ಲ ಎನ್ನುವ ಭಾವ ಕಾಡದೆ ನಮ್ಮೊಳಗೇ ಇದ್ದು ಹರಸುವ ಇಂತಹ ಭಾವ ಕೊಡುವ ಮಾತುಗಳು ನಿಜಕ್ಕೂ ಸಂತಸವೀಯುತ್ತದೆ. ಧನ್ಯವಾದಗಳು

      Delete