Sunday, June 21, 2015

ಸ್ನೇಹ ಎಂದರೆ ಅದು ಸ್ನೇಹವೇ.. ಸ್ನೇಹ ಲೋಕ ಒಂದು ಅದ್ಭುತ ಲೋಕ

ಓದಿದ ನೆನಪು.. ಒಂದು ಮಾತಿಂದ ಮುರಿದು ಹೋಗುವ ಸ್ನೇಹ, ಸ್ನೇಹವಲ್ಲ..
ಒಂದು ನಗುವಿಂದ ಅರಳುವ ಸ್ನೇಹ ಅದು ಸ್ನೇಹ..

ಇಂಥಹ ಒಂದು ಕಿರು ನಗುವಿಂದ ಶುರುವಾದ ಸ್ನೇಹ ಲೋಕ ಸಪ್ತ ವರ್ಣಗಳು ಸೇರಿ ಆಗುವ ಕಾಮನಬಿಲ್ಲಿನಂತೆ ಆರೇಳು ಸಮಾನ ಮನಸ್ಕರಿಂದ ಶುರುವಾದ ಈ ನಗುವಿನ ಸ್ನೇಹ ಯಾನ ಇಂದು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು.. ಕೆರೆಯ ನೀರನು ಕೆರೆಗೆ ಚೆಲ್ಲು ಎನ್ನುವಂತೆ.. ಸಮಾಜಕ್ಕೆ ತಮ್ಮ ಕಿರು ಕಾಣಿಕೆ ನೀಡುತ್ತ ಒಂದು ಹೆಜ್ಜೆ ಗುರುತು ಮೂಡುವಷ್ಟು ಬಲಿಷ್ಠವಾಗಿದೆ ಈ ಲೋಕ.

ಒಂದು ಸುಂದರ ಭಾನುವಾರ ದೂರದರ್ಶನದ ಮುಂದೆ, ಅಥವಾ ಎಲ್ಲೋ ಸಮಯ ಕಳೆಯುವ ಅವಕಾಶವಿದ್ದ ನನಗೆ.. ಸ್ನೇಹಲೋಕದ ಕಾರ್ಯಕ್ರಮದ ಆಹ್ವಾನ ನಿರಾಕರಿಸಲು ಸಾಧ್ಯವಿರಲೇ ಇಲ್ಲ.. ಹೋಗಲೇಬೇಕು ಎಂದು ಹಠ ಮಾಡಿ ಹೋದ ಈ ಕಾರ್ಯಕ್ರಮ ಎಂದಿನಂತೆ ಖಂಡಿತ ವ್ಯರ್ಥ ಎನ್ನಿಸಲಿಲ್ಲ..


ಇಬ್ಬರೂ ಸ್ಪುರದ್ರೂಪಿಗಳ ನಿರೂಪಣೆಯಲ್ಲಿ ಶುರುವಾದ ಕಾರ್ಯಕ್ರಮ.. ಸರಿಯಾದ ಟೇಕ್ ಆಫ್ ಸಿಕ್ಕಿತ್ತು.. ಅವರ ನಿರೂಪಣೆಯಲ್ಲಿ ಅವರೇ ಹೇಳಿದಂತೆ ಇದು ಅವರ ಮೊದಲ ನಿರೂಪಣೆ ತಪ್ಪು ಸರಿ ಎಲ್ಲವನ್ನು ಗಮನಿಸಬೇಕು ಎಂದು ಹೇಳಿದ್ದರು. ಆದರೆ ನನಗೆ ಅನ್ನಿಸಿದ್ದು ಇದು ಮೊದಲ ನಿರೂಪಣೆ ಎನ್ನುವುದಕ್ಕೆ ಯಾವುದೇ ರೀತಿಯ ಪುರಾವೆಗಳು ಇರಲಿಲ್ಲ., ಅಷ್ಟು ಅಚ್ಚುಕಟ್ಟಾಗಿತ್ತು ಭಾಷ ಪ್ರಯೋಗ, ಅಂಗೀಕ ಅಭಿನಯ, ಎಲ್ಲೇ ಮೀರದ ನುಡಿಗಳು.. ಒಬ್ಬ ಸಭ್ಯ ಅತ್ಯುತ್ತಮ ನಿರೂಪಕರಿಗೆ ಇರಬೇಕಾದ ಎಲ್ಲಾ ಗುಣ ಲಕ್ಷಣಗಳು ಇವರಿಬ್ಬರ ನಿರೂಪಣೆಯಲ್ಲಿತ್ತು ಎನ್ನುವುದು ಈ ಕಾರ್ಯಕ್ರಮದ ಯಶಸ್ಸಿಗೆ ಪುರಾವೆ ಒದಗಿಸಿತ್ತು.

ಉಷಾ ಉಮೇಶ್ ಅವರ ಪ್ರಾರ್ಥನಾ ಗೀತೆ ಉತ್ತಮವಾಗಿ ಹೊಂದಿ ಬಂದಿತ್ತು. ನಂತರ ಅತಿಥಿಗಳ ಕಿರುಪರಿಚಯ.. ಇವರು ಕಿರು ಅತಿಥಿಗಳೊಂತು ಅಲ್ಲವೇ ಅಲ್ಲ..

ಮತ್ಯ ವಿಜ್ಞಾನಿ, ಪದ ಚಿಂತಾಮಣಿ, ಪದ ಕಮ್ಮಟ, ಹಾಸ್ಯ ಮೂರ್ತಿ, ಖಡಕ್ ಹಾಸ್ಯ ನುಡಿಗಳು, ಸಮಯ ಪ್ರಜ್ಞೆ ಜೊತೆಯಲ್ಲಿ ಸ್ನೇಹದ ಸ್ವಾತಂತ್ರ.. ಇವರು ಇದ್ದ ಕಡೆಯಲ್ಲಿ ಸಂತಸ ತಾಂಡವಾಡುತ್ತಿರುತ್ತದೆ... ತುಂಬಿದ ತುಳುಕೋದಿಲ್ಲ ಎನ್ನುವುದು ಹಳೆಯ ನುಡಿ.. ಇವರು ತುಂಬಿದ ಹಂಡೆ.. ತುಳುಕಲು ಸಾಧ್ಯವೇ ಇಲ್ಲ.. ಇವರ ಬಗ್ಗೆ ಕೇಳಿದಾಗ ಮಾತ್ರ ಇವರೇನಾ ಅನ್ನಿಸುತ್ತದೆ..  ಅವರೇ ಅಜಾದ್ ಸರ್..


ನಾನು ಹಿಮವನ್ನು ನೋಡಿದ್ದೇ.. ಆದರೆ "ಕಂಡಿರಲಿಲ್ಲ.. ಮಾತನ್ನು ಕೇಳಿರಲಿಲ್ಲ.. ಗಂಗಾ ನದಿ ಹಿಮಾಲಯದಲ್ಲಿ ಹುಟ್ಟಿ ತಾನು ಹರಿವ ನೆಲವನ್ನು ಹಸಿರುಗೊಳಿಸುವ ಗಂಗಾ ಮಾತೆಯಂತೆ.. ತಾನಿಟ್ಟ ಹೆಜ್ಜೆಯೆಲ್ಲ ಗುರುತಾಗುವಂತೆ, ಸಮಾಜಕ್ಕೆ ತನ್ನ ಅಳಿಲು ಸೇವೆ ಮಾಡಬೇಕೆಂದು ಅನೇಕ  ಸಮಾಜ ಪರ ಕಾಳಜಿಯುಕ್ತ ಕಾರ್ಯ ಮಾಡುತ್ತಿರುವ ರೂಪ ಸತೀಶ್.

ನಗುವೊಂದು ಇದ್ದರೆ ಸಾಕು ಪರಪಂಚದ ಮೂಲೆ ಮೂಲೆಯನ್ನು ಗೆಲ್ಲಬಹುದು ಎನ್ನುತ್ತದೆ ನಾಣ್ಣುಡಿ.. ಕುಮುದವಲ್ಲಿ ಅರುಣ ಮೂರ್ತಿ ಕೂಡ ಅಂಥಹ ಅದ್ಭುತ ನಗೆಯ ಒಡತಿ. ನಟಿ, ಉತ್ತಮ ವಾಗ್ಮಿ, ಇದಕ್ಕೆಲ್ಲ ಮಿಗಿಲಾಗಿ ಉತ್ತಮ ಮನದ ಒಡತಿ. ಇಂಥಹ ಕಾರ್ಯಕ್ರಮಕ್ಕೆ ಬರುವಾಗ ಎಲ್ಲರಲ್ಲಿ ನಾನು ಎಂಬ ಭಾವ ಹೊತ್ತು ಬಂದಾಗ ಮಾತ್ರ ಗೆಲ್ಲಲು ಸಾಧ್ಯ. ಇವರು ಅಂಥಹ ಸುಮಧುರ ಭಾವದ ಸಂಗಮ.

ಜೋಗದ ಜಲಪಾತ.. ನಾಲ್ಕು ಕವಲುಗಳಾಗಿ ಬೀಳುತ್ತವೆ.. ರೋರರ್, ರಾಕೆಟ್, ಲೇಡಿ.. ಬಳುಕುತ್ತ, ಸದ್ದು ಮಾಡುತ್ತಾ ಸುಮಾರು ಒಂಬೈನೂರು ಅಡಿಗೂ ಮಿಗಿಲಾದ ಕಂದರಕ್ಕೆ ಹಾರಿದರೆ.. ರಾಜ ಕವಲು ಮಾತ್ರ ಒಂದೇ ತೆರನಾಗಿ ಮೇಲಿಂದ ಕೆಳಗಿನ ತನಕ ಒಂದೇ ಜಿಗಿತ ಮತ್ತು ಒಂದೇ ರಭಸ.. ವಿದ್ಯಾ ರಾವ್ ಅವರ ಮಾತುಗಳು, ಅವರ ಧ್ವನಿ.. ಜೊತೆಯಲ್ಲಿ ಅವರು ಮಂಡಿಸುವ ವಿಷಯದ ಮೇಲಿನ ಹಿಡಿತ ಮತ್ತು ಸ್ಪಷ್ಟ ಭಾಷೆ.. ನನಗೆ ಜೋಗದ ರಾಜ ಕವಲು ನೆನಪಿಗೆ ಬಂತು.. ಅದರಲ್ಲೂ ಮಕ್ಕಳಿಗೆ ಬಾಲ್ಯದಲ್ಲಿಯೆ ಕಾಣಸಿಗುವ ಒಂದು ಮನೋ ವೇದನೆ ಅಥವ ದೌರ್ಬಲ್ಯ (ಸರಿಯಾದ ಪದ ಹೊಳೆಯಲ್ಲಿಲ್ಲ.. ಕ್ಷಮೆ ಇರಲಿ) ಅದರ ಬಗ್ಗೆ ಅವರು ಹೇಳಿದ ಅಷ್ಟು ಮಾತುಗಳು ಚಿಂತನಾ ಯೋಗ್ಯ ಮತ್ತು ಎಲ್ಲರೂ ಅಳವಡಿಸಿಕೊಳ್ಳ ಬೇಕಾದ್ದು.


ಇಂಥಹ ಸ್ನೇಹಲೋಕ ಎನ್ನುವ ಅಭಿಮಾನದಿಂದ ಕೂಡಿದ ತಂಡವನ್ನು ಕಟ್ಟಲು ಶ್ರಮ ತೊಟ್ಟ ಸುಮನ ಅವರ ಸಾಧನೆ ಅಬ್ಬ ಎನ್ನಿಸುತ್ತದೆ.. ಒಂದು ಬಸ್ಸಿನಲ್ಲಿ ಬರುವ ಪ್ರಯಾಣಿಕರನ್ನು ಹಿಡಿದಿಡುವುದು ಎಷ್ಟು ಕಷ್ಟವೋ ಹಾಗೆ ಸಮಾಜದ ಎಲ್ಲಾ ತರಹದ ಪ್ರಜೆಗಳನ್ನು ಹಿಡಿದಿಟ್ಟು.. ನಾಲ್ಕು ಮಂದಿಗೆ ಅನುಕೂಲ ಆಗುವ ಸೌಲಭ್ಯ ಒದಗಿಸಲು ತಂಡವನ್ನು ಕಟ್ಟಿ ಬೆಳೆಸಿ ಮುನ್ನೆಡೆಸುವುದು ಕಡಿಮೆ ಸಾಧನೆಯಲ್ಲ.. ಅಂಥಹ ಸಾಧನೆಯಲ್ಲಿ ಗೆದ್ದವರು ಇವರು.

ಅಶೋಕ್ ಶೆಟ್ಟಿ.. ಸಾಲು ಮರವನ್ನು ನೆಟ್ಟು ಪಯಣಿಗರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಶ್ರಮಿಸಿದರು ಸಾಮ್ರಾಟ್ ಅಶೋಕ್.. ಇವರು ಕೂಡ ಹಾಗೆಯೇ ಎಲ್ಲೇ ಇದ್ದರೂ ಒಂದು ಕರೆಗೆ ನಿಮ್ಮ ಮುಂದೆ ನಿಲ್ಲುತ್ತಾರೆ. ಶ್ರಮಿಸುತ್ತಾರೆ.. ನಾನು ಇದ್ದೇನೆ ಎನ್ನುವ ಭಾವ ಕೊಡುತ್ತಾರೆ.. ಇದಕ್ಕಿಂತ ಒಂದು ಸ್ನೇಹದ ಸಂಕೋಲೆಗೆ ಮುನ್ನುಗ್ಗಲು ಬೇರೆ ಕಾರಣ ಬೇಕಿಲ್ಲ. ಇಂಥಹ ಮಧುರ ಮನದ ಸರದಾರರು ಇವರು


ತಾನು, ತನ್ನದು ಎನ್ನುವ ಈ ಕಾಲದಲ್ಲಿ ನಾವು ನಿಮ್ಮದು ಎನ್ನುವ ಮನೋಭಾವ ಬೆಳೆಸಿ ಉಳಿಸಿ ಮರಳಿ ಸಮಾಜಕ್ಕೆ ಮರಳಿಸುತ್ತಿರುವ ಸ್ನೇಹಲೋಕದ ಪ್ರತಿ ಸಾಧಕರಿಗೂ, ಸ್ನೇಹಿತರಿಗೂ ಮತ್ತು ಸದಸ್ಯರಿಗೂ ಈ ಲೇಖನ ಅರ್ಪಿತ. ತೆರೆಯ ಮೇಲೆ ಕಂಡ ಮೊಗಗಳು ಅನೇಕ.. ಆದರೆ ತೆರೆಯ ಹಿಂದೆ ಜೇನುಗಳಂತೆ ಕಠಿಣ ಶ್ರಮವಹಿಸಿ ಇಂಥಹ ಒಂದು ಸುಂದರ, ಅಧ್ಬುತ ದಿನ ಸಮಯವನ್ನು ಕೊಟ್ಟ ಎಲ್ಲರಿಗೂ ಈ ಲೇಖನ ಮೂಲಕ ನಾ ಧನ್ಯವಾದಗಳನ್ನು ಹಾಗೆಯೇ ಅಭಿನಂದನೆಗಳನ್ನು ಸಲ್ಲಿಸಲು ಇಷ್ಟಪಡುತ್ತೇನೆ.

ಸಮಾಜದಲ್ಲಿ ಬೆಳೆಯುತ್ತಿರುವ ಅನೇಕ ಸೌಲಭ್ಯ ವಂಚಿತ ಮಕ್ಕಳನ್ನು ಕಾಪಾಡುತ್ತಿರುವ ಅನೇಕ ಸಮಾಜ ಸಂಸ್ಥೆಗಳು ತಮ್ಮ ಮಕ್ಕಳನ್ನು ಕರೆತಂದು ಅವರ ಪ್ರತಿಭೆಯನ್ನು ಒರೆಗೆ ಹಚ್ಚಿ, ಆ ನಿಟ್ಟಿನಲ್ಲಿ ಅವರ ಪ್ರತಿಭೆಗೆ ಒಂದು ಚೌಕಟ್ಟು ಹಾಗೂ ಪ್ರೋತ್ಸಾಹ ನೀಡುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಸ್ನೇಹಲೋಕದ ತಂಡದ ಸಾಧನೆ.

ಮಕ್ಕಳನ್ನು ಹುರಿದುಂಭಿಸಿ, ಅವರ ಪ್ರತಿಭೆಯನ್ನು ಬೆಳಗಿಸಿ ಎಲ್ಲರಿಗೂ ಮನೋರಂಜನೆಯ ಜೊತೆಯಲ್ಲಿ ಮನಸ್ಸು ಮಾಡಿದರೆ ಏನು ಸಾಧಿಸಬಹುದು ಎಂದು ತೋರಿದರು.  ಇಂದಿನ ಕಾರ್ಯಕ್ರಮದ ಬಗ್ಗೆ ಬರೆಯುತ್ತ ಹೋದರೆ ಪುಟಗಟ್ಟಲೆಯಾಗುತ್ತದೆ.. ಒಂದು ಚಿತ್ರ ನೂರು ಮಾತನ್ನು ಹೇಳುತ್ತದೆ.. ನೂರು ಮಾತು ಒಂದು ಭಾವವನ್ನು ಹೇಳುತ್ತದೆ ಎನ್ನುತ್ತದೆ ಜನಪ್ರಿಯ ನುಡಿಮಾತು.. ಅಂಥಹ ಭಾವ ಸೂಸುವ ಚಿತ್ರಗಳು ನಿಮಗಾಗಿ.. ನಿಮ್ಮ ಗಮನಕ್ಕಾಗಿ..











































ಯುವ ಪಡೆ ಮುಂದೆ ಬಂದು ಸಾಮಾಜಿಕ ತಾಣದಿಂದ ಒಂದು ಸದುಪಯೋಗವಾಗುವಂಥಹ ಕಾರ್ಯಕ್ರಮ ನಡೆದಾಗ ನನಗೆ ಅನ್ನಿಸಿದ್ದು..





ಯಶಸ್ಸಿಗೆ ಮಂತ್ರ ಈ ಮೇಲಿನ ಫಲಕಗಳು..

ಸ್ನೇಹಲೋಕದ ತಂಡಕ್ಕೆ ಒಂದು ಧೀರ್ಘ ದಂಡ ನಮಸ್ಕಾರಗಳು.. ಶುಭವಾಗಲಿ ಶುಭಪ್ರದವಾಗಲಿ ಎಲ್ಲಾ ನಿಮ್ಮ ಮುಂದಿನ ಹೆಜ್ಜೆಗಳಿಗೆ..




Saturday, March 21, 2015

ಅರವತ್ತು ಅರವತ್ತು ಅರವತ್ತು... ವಾಹ್

ಒಂದು ಪ್ರಾಥಮಿಕ ಶಾಲೆ

ಮಾಸ್ತರರು ಹೇಳಿದರು.. "ಮಕ್ಕಳೇ ಇಂದು ಹಾಜರಿ ತೆಗೆದುಕೊಳ್ಳಬೇಕು.. ಎಲ್ಲರೂ ಇಂದು ನಿಮ್ಮ ಹೆಸರಿಗೆ ಬದಲಾಗಿ ನಿಮ್ಮ ನಿಮ್ಮ ಕ್ರಮ ಸಂಖ್ಯೆಯನ್ನು ಹೇಳಿ.. ಆದಷ್ಟು ಜೋರಾಗಿ ಹೇಳಬೇಕು ಆಯಿತೆ"

ಮಕ್ಕಳು ಕೂಡ.. ಮಾಸ್ತರರ ದನಿಯನ್ನೇ ಅನುಕರಿಸಿ ಅವರಿಗಿಂತ ತುಸು ಜೋರಾಗಿಯೇ ತಮ್ಮ ತಮ್ಮ ಕ್ರಮ ಸಂಖೆಯಗಳನ್ನು ಹೇಳುತ್ತಾ ಹೋದರು. 

ಹತ್ತಾಯಿತು, ಇಪ್ಪತ್ತಾಯಿತು, ಮೂವತ್ತಾಯಿತು, ನಲವತ್ತು ಸಾಲಿನ ಸಂಖ್ಯೆಗಳು ಧಾಟಿ ಐವತ್ತರ ಸಾಲಿಗೆ ಬಂದವು..

"ಐವತ್ತು, ಐವತ್ತೊಂದು, ಐವತ್ತೆರಡು, ಐವತ್ತಮೂರು, ಐವತ್ತನಾಲ್ಕು, ಐವತ್ತೈದು, ಐವತ್ತಾರು, ಐವತ್ತೇಳು, ಐವತ್ತೆಂಟು, ಐವತ್ತೊಂಭತ್ತು... "

ಮಕ್ಕಳು ಮೇಲ್ಚಾವಣಿ ಕಿತ್ತು ಹೋಗುವಂತೆ ಜೋರಾಗಿ ಹೇಳುತ್ತಿದ್ದರು..

ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು,

ಗುರುಗಳು "ಐವತ್ತೊಂಭತ್ತು ಅಂಕೆಯನ್ನು ಐವತ್ತೊಂಭತ್ತು ಬಾರಿ ಹೇಳಾಯಿತು.. ಮುಂದಕ್ಕೆ ಹೇಳ್ರೋ.. ."

ಮಕ್ಕಳು ಸುಮ್ಮನೆ ಗುರುಗಳನ್ನು ನೋಡುತ್ತಾ ಕೂತರು.. ತರಗತಿಯಲ್ಲಿ ಐವತ್ತೊಂಭತ್ತು ವಿಧ್ಯಾರ್ಥಿಗಳು ತಮ್ಮ ಹಾಜರಿ ಕೊಟ್ಟಿದ್ದರು.. .. ಯಾಕೋ ಲೆಕ್ಕ ತಪ್ಪಿತೆ ಎಂದು ಅನುಮಾನಗೊಂಡ ಗುರುಗಳು.. ಕಣ್ಣಲ್ಲೇ ಒಟ್ಟು ವಿಧ್ಯಾರ್ಥಿಗಳ  ಲೆಕ್ಕವನ್ನು ಹಾಕತೊಡಗಿದರು.. ಅರೆ ಹೌದು ನನ್ನ ತರಗತಿಯಲ್ಲಿ ಅರವತ್ತು ವಿಧ್ಯಾರ್ಥಿಗಳು ಇರುವುದು..

ಇದೇನು ಅರವತ್ತನೇ ಹುಡುಗ ಎಲ್ಲಿ.. ಕಣ್ಣಲ್ಲೇ ಹುಡುಕಿದರೂ.. ಕಾಣಲಿಲ್ಲ, ಒಂದು ಕ್ಷಣ ಕಣ್ಣು ಮುಚ್ಚಿ ಕೂತರು..

"ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸಫರ್ಡಿನವರು |
ದೇಶಕಾಲವಿಭಾಗ ಮನದ ರಾಜ್ಯದೊಳಿರದು

ಶ್ವಾಸವದು ಬೊಮ್ಮನದು – ಮಂಕುತಿಮ್ಮ. ||"

ಜೋರಾಗಿ ಈ ಕಗ್ಗದ ಪದಗಳು ತರಗತಿಯ ಕೊಠಡಿಯ ಬಾಗಿಲಿನ ಬಳಿ ಯಾರೋ ಓದುತ್ತ ಬಂದದ್ದು ಕೇಳಿಸಿತು..

ಗುರುಗಳಿಗೆ ತಕ್ಷಣ ಅರಿವಾಯಿತು.. ಅರೆ ಇದು ನನ್ನದೇ ಮುಕ್ತಕ.. ಅದು ಅರವತ್ತನೆಯದು.. ಸರಿಯಾಗಿದೆ..

ಗುರುಗಳು "ಬಾ ಬಾರೋ ರವಿ.. ಇದು ಅರವತ್ತನೆಯ ಮುಕ್ತಕ.. ಏನಪ್ಪಾ ಇದು ಓದುತ್ತಾ ಬರುತ್ತಿದ್ದೀಯ.. ಏನು ಸಮಾಚಾರ"
ರವಿ ಹೇಳುತ್ತಾರೆ.. " ಏನಿಲ್ಲ ಗುರುಗಳೇ.. ಇಂದು ಈ ಕಗ್ಗ ತುಂಬಾ ನೆನಪಿಗೆ ಬಂತು ಅದಕ್ಕೆ ಓದುತ್ತಾ ಬಂದೆ.. ನನಗೆ ಅರಿವಿಲ್ಲದೆ ಓದುತ್ತಾ ಓದುತ್ತಾ.. ಶಾಲೆಯೊಳಗೆ ಕಾಲಿಟ್ಟೆ.. ಅರವತ್ತು ಗುರುಗಳೇ.. ಇದು ನನ್ನ ಹಾಜರಿ" ಎಂದನು ಆ ಪುಟ್ಟ ಹುಡುಗ..

ಗುರುಗಳು ಸಂತಸಭರಿತ ತಲೆ ಸವರುತ್ತಾ "ರವಿ ಪುಟ್ಟಾ.. ನನಗೆ ಅರಿವಿದೆ.. ನೀನು ಭೂಮಿಗೆ ಬಂದು ಅರವತ್ತು ವಸಂತಗಳು ಆಯಿತು.. ಹಾಗೆಯೇ ಈ ಮುಕ್ತಕ ಕೂಡ ಅರವತ್ತನೆಯದು.. ಎಷ್ಟು ಹೊಂದಾಣಿಕೆ ಇದೆ... ನೀನು ನನ್ನ ಮುಕ್ತಕಗಳನ್ನು ನಿನ್ನ ಧಾಟಿಯಲ್ಲಿ ಬರೆಯುತ್ತಿರುವ ಸಂಖ್ಯೆ ನಿನ್ನೆಗೆ ೭೯೯ ಆಗಿದೆ.. ಇನ್ನು ಕೆಲವೇ ಮಾಸಗಳಲ್ಲಿ ನಿನ್ನ ಶೈಲಿಯಲ್ಲಿ ಸಕಲರಿಗೂ ಅರಿವಾಗುವ ಹಾಗೆ ವಿವರಿಸುತ್ತಿರುವ ನನ್ನ ಎಲ್ಲಾ ಮುಕ್ತಕಗಳಿಗೂ ವಿವರಣೆ ಸಿಕ್ಕಿಯೇ ಬಿಡುತ್ತದೆ. ನನಗೆ ಬಲು ಸಂತಸವಾಗುತ್ತಿದೆ. ಇಷ್ಟವಾದುದ್ದನ್ನು, ಕಷ್ಟವಾದುದ್ದನ್ನು, ಮುಕ್ತವಾಗಿದ್ದನ್ನು ಎಲ್ಲರಿಗೂ ತಿಳಿಸುತ್ತಿರುವ ರೀತಿ ನನಗೆ ಬಲು ಇಷ್ಟಮಯ"

ಪುಟಾಣಿ ರವಿ ಕಣ್ಣಲ್ಲೇ ಆನಂದ ಭಾಷ್ಪ.. ಗುರುಗಳ ಹೊಗಳಿಕೆಯನ್ನು, ಬೆನ್ನು ತಟ್ಟುವಿಕೆಯನ್ನು ಅನುಭವಿಸುತ್ತಿರುವ ಅವರ ಮನಸ್ಸು ಭಲೇ ರವಿ ಭಲೇ ಎಂದು ಹೇಳುತ್ತಿತ್ತು.

ಗುರುಗಳು ಮಾತನ್ನು ಮುಂದುವರೆಸಿದರು.. "ರವಿ.. ನೀನು ಇಷ್ಟು ಸಾಧಿಸಿದ್ದರು ನೀನು ಏನು ಸಾಧಿಸಿಲ್ಲ ಎನ್ನುವ ನಿನ್ನ ತಾತ್ವಿಕ ಗುಣ.. ಹಾಗೂ ಸಾಧಿಸಬೇಕಾದ್ದು ಬೇಕಾದಷ್ಟು ಇದೆ ಎನ್ನುವ ನಿನ್ನ ನಮ್ರ ಗುಣವೆ ನಿನ್ನನ್ನು ಪ್ರಾಥಮಿಕ ಶಾಲೆಯಲ್ಲಿ ನನ್ನ ವಿಧ್ಯಾರ್ಥಿಯನ್ನಾಗಿ ಮಾಡಿದೆ.. ಆದರೆ ಇಂದು ಜಗತ್ತಿಗೆ ಹೇಳುತ್ತಿರುವೆ.. ನಿನ್ನದು ಗಜ ಗಾತ್ರದ ಸಾಧನೆ.. ಆದರೆ ನಿನ್ನ ನಮ್ರ ಮನಸ್ಸಿಗೆ ಕಾಣುವುದು ಗುಲಗಂಜಿಯಷ್ಟೇ ಸಾಧನೆ ಎಂದು.. ಅದಕ್ಕೆ ನಿನ್ನನ್ನು ಎಲ್ಲರೂ ಇಷ್ಟಪಡುವುದು.. ನಿನ್ನ ಸ್ನೇಹ ಮಂಡಲ ಸೌರ ಮಂಡಲದಷ್ಟೇ ಪ್ರಕಾಶಮಾನ.. "

ನಿನ್ನ ಅರವತ್ತು ವರ್ಷಗಳ ವಸಂತಮಾಸವನ್ನು ಒಮ್ಮೆ ಇಣುಕಿ ನೋಡಿದಾಗ ನಿನ್ನ ಸಾಧನೆ ಕಂಡು ನಿನ್ನ ಗುರುವಾದ ನನಗೆ ಹೆಮ್ಮೆ ಎನಿಸುತ್ತದೆ.. ಹೌದು ಇಂದು ನೀನು ನನ್ನ ತರಗತಿಯಲ್ಲಿ ಹಾಜರಿ ಹೇಳದೆ ನನ್ನ ಅರವತ್ತನೇ ಮುಕ್ತಕ ಓದುತ್ತಾ ಬಂದಾಗ ನನಗೆ ಆದ ಸಂತಸ ಹೇಳ ತೀರದು.

ರವಿ ನಿನಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಈ ರೀತಿಯಲ್ಲಿ ಹೇಳುತ್ತಿದ್ದೇನೆ.. ಹಾಗೂ ಆಶಿರ್ವದಿಸುತ್ತಿದ್ದೇನೆ.. ನಿನ್ನ ಅರವತ್ತು ವಸಂತಗಳ ಸಾರ್ಥಕ ಜೀವನ ಇನ್ನಷ್ಟು ಪ್ರಜ್ವಲಿಸಲಿ.. ಹೀಗೆ ಯಶಸ್ಸಿನ ಜೀವನ ಮುನ್ನುಗ್ಗಲಿ, ಶತಕದ ಸಾಧನೆ ನಿನ್ನದಾಗಲಿ.

ಕಂದಾ ನಿನಗೆ ಹುಟ್ಟು ಹಬ್ಬದ   ಶುಭಾಶಯಗಳು.. ನನ್ನ ತರಗತಿಯಲ್ಲಿನ ಎಲ್ಲ ವಿಧ್ಯಾರ್ಥಿಗಳಲ್ಲಿ ನೀನು ನನ್ನ ಪ್ರೀತಿಯ ವಿಧೇಯ ವಿಧ್ಯಾರ್ಥಿಗಳಲ್ಲಿ ನೀನು ಮೊದಲ ಸಂಖೆಯಲ್ಲಿ ನಿಲ್ಲುವವನು..

ರವಿ ಪುಟಾಣಿಯ ಕಣ್ಣಲ್ಲಿ ಜೋಗದ ಜಲಧಾರೆ.. ಸಾಕ್ಷಾತ್ ಕಗ್ಗ ಪಿತಾಮಹರೆ ಬಂದು ನನ್ನ ಅರವತ್ತನೇ ವಸಂತಕ್ಕೆ ಶುಭ ಹಾರೈಸಿದ್ದಾರೆ. ಇದಕ್ಕಿಂತ ನನಗೆ ಇನ್ನೇನು ಬೇಕು.. ಕೈಯಲ್ಲಿ ಹಿಡಿದ್ದಿದ ಕಗ್ಗ ಪುಸ್ತಕ ಹಾಗೆ ಜೋಡಿಯಾಗಿ ಆ ಮಹಾನ್ ಕಗ್ಗ ಗುರುಗಳಿಗೆ ನಮಸ್ಕರಿಸುತ್ತಾ ಧನ್ಯೋಸ್ಮಿ ಎಂದಿತು ಆ ಪುಟಾಣಿಯ ಮನಸ್ಸು.

*****

ರವಿ ಗುರುಗಳೇ.. ನಿಮ್ಮ ಜನುಮದಿನಕ್ಕೆ ಶುಭ ಕೋರಬೇಕು ಎಂದು ಹಂಬಲಿಸಿದಾಗ.. ಇಂದು ಯುಗಾದಿ ಹಬ್ಬ.ಹಬ್ಬದ ಸಂಭ್ರಮದಲ್ಲಿ.. ಮನೆ ಮನದಲ್ಲಿ ಇರುವ ಕುಟುಂಬದ ಸದಸ್ಯರೊಡನೆ ಸೇರಿ ನಲಿಯುತ್ತ ಇದ್ದಾಗ.. ದಿನ ಹೇಗೆ ಕಳೆಯಿತು ಎಂದು ಅರಿವಾಗಲೇ ಇಲ್ಲ.. ರಾತ್ರಿ ಮಲಗುವ ಮುನ್ನ ನಿಮಗೆ ಶುಭ ಹಾರೈಸಲೇ ಬೇಕು ಎಂಬ ಹಠ ತೊಟ್ಟು ಬರೆಯಲು ಕೂತಾಗ ಕೆಲವೇ ಕ್ಷಣಗಳಲ್ಲಿ ಈ ಲೇಖನವನ್ನು ನನ್ನ ಮನದೊಳಗೆ ಕೂತು ಬರೆಸಿದ್ದು ನಿಮ್ಮ ಸ್ನೇಹ ಪರ ಮನಸ್ಸು ಹಾಗೂ ಡಿವಿಜಿ ಅಜ್ಜನ ಆಶೀರ್ವಾದ. ಅಜ್ಜನ ಬಾಯಿಂದಲೇ ನಿಮಗೆ ಶುಭಾಶಯಗಳನ್ನು ಹೇಳಿಸಬೇಕು ಎಂಬ ಪಣ ತೊಟ್ಟ ನನ್ನ ಕೀಲಿಮಣೆ .. ನಿಮ್ಮ ಹೆಸರನ್ನು ಹೇಳುವಾಗ ಏಕ ವಚನದಲ್ಲಿ ಬರೆಸಿಯೇ ಬಿಟ್ಟಿತು.. ಬೇರೆ ದಾರಿಯಿಲ್ಲದೆ ಹಾಗೆ ಮಾಡಬೇಕಾಯಿತು. ಕ್ಷಮೆ ಇರಲಿ..
ಕಗ್ಗಗಳ ಪಿತಾಮಹರ ಆಶಿರ್ವಾದದ ನೆರಳಲ್ಲಿ ರವಿ ತಿರುಮಲೈ ಗುರುಗಳು -
(ಚಿತ್ರ ಕೃಪೆ ರವಿ ಸರ್ ಅವರ ಟೈಮ್ ಲೈನ್ )

ನಿಮ್ಮ ಪ್ರತಿದಿನದ ನುಡಿಮುತ್ತುಗಳು, ಕಗ್ಗ ರಸಧಾರೆ, ಜೊತೆಯಲ್ಲಿ ನೀವು ನನ್ನ ಮಾತಾಡಿಸುವಾಗ "ರಾಜ" ಎನ್ನುವ ಆ ಸ್ನೇಹ ಪರ ಧ್ವನಿ ನನಗೆ ಬಲು ಇಷ್ಟ.

ಮತ್ತೊಮ್ಮೆ ನನ್ನ ಸಕಲ ಸ್ನೇಹಲೋಕದ ಸದಸ್ಯರ ಪರವಾಗಿ ಷಷ್ಠಿ ಸಂಭ್ರಮಕ್ಕೆ ಶುಭಾಶಯಗಳು. 

Sunday, March 8, 2015

ಹೀಗೊಂದು ಪರ್ಸ್" ಸಂಗ"

ಹಸ್ತಿನಾಪುರದಲ್ಲಿ ದ್ಯೂತದ  ಆಟದಲ್ಲಿ ಸೋತ ವೀರ ಕಲಿಗಳು ತಲೆ ಬಗ್ಗಿಸಿಕೊಂಡು ಕೂತಿದ್ದರು, ದುರುಳ ದುಷ್ಟ ಚತುಷ್ಟಯರು ಎಂದೇ ಹೆಸರಾಗಿದ್ದ ದುರ್ಯೋಧನ, ದುಶ್ಯಾಸನ, ಕರ್ಣ, ಶಕುನಿ ಕಿರುಚಾಡುತ್ತ ಕೇಕೆ ಹಾಕುತ್ತ ಪಾಂಡವರ ಮಕುಟದ ಮಣಿ ದ್ರೌಪದಿಯನ್ನು ಸಭೆಗೆ ಕರೆದು ತರಲು ಅಪ್ಪಣೆ ಮಾಡಿದರು.

ಈ ಘಟನೆ ನೆಡೆದು ಸುಮಾರು ಇಪ್ಪತ್ತು ವರ್ಷ ಆಯಿತು. 

ಮಿನರ್ವ ಸರ್ಕಲ್ ಬಳಿಯ ಒಂದು ಪುಟ್ಟ ಸಂಸ್ಥೆಯಲ್ಲಿ ಕೆಲಸ ಸಾಗಿತ್ತು. ನನಗೆ ಅರಿವಿಲ್ಲದೆ ನನ್ನನ್ನು ಅಣ್ಣ ಎಂದೋ, ಅಥವಾ ತಾವು ಅವರ ತಂಗಿ ಎನ್ನುವ ಭಾವ ತೋರುವ ಅನೇಕರು ನನಗೆ ಉದ್ಯೋಗ ಯಾತ್ರೆಯಲ್ಲಿ ಸಿಕ್ಕಿದ್ದಾರೆ. ಅದು ಅವ್ಯಾಹತವಾಗಿ ಮುಂದುವರೆದಿದೆ ಇಂದಿಗೂ. 

ನನ್ನ ಸಹೋದ್ಯೋಗಿಯಾಗಿ ಬಂದು ನನ್ನ ಬಾಳಿನಲ್ಲಿ ತಂಗಿಯಾದ ಜ್ಯೋತಿ ಎನ್ನುವ ಹುಡುಗಿ.. ಜೆ ಪಿ ನಗರದಲ್ಲಿ ತನ್ನ ಕೆಲವು ಗೆಳತಿಯರೊಡನೆ ವಾಸವಾಗಿದ್ದಳು. ಮನೆಗೆ ಬನ್ನಿ ಶ್ರೀ ಅಣ್ಣ ಅಂತ ಯಾವಾಗಲು ಕರೆಯುತ್ತಲೇ ಇದ್ದಳು. ನನ್ನ ತರಲೆ ಮಾತುಗಳು(?), ಹಾಸ್ಯ ಲಾಸ್ಯ (?) ಅಂದಿಗೂ ಹಿಟ್ ಎಂದಿದೆಂದಿಗೂ ಹಿಟ್ (?) ಅವಳ ಮನೆಯಲ್ಲಿ ಎಲ್ಲವೂ ರಿಪೀಟ್ ಆಗುತ್ತಿದ್ದವು. ಹಾಗಾಗಿ ಅಲ್ಲಿನ ಎಲ್ಲರೂ ಈ ಜಾಂಬುವಂತನನ್ನು ನೋಡಲು ಕಾಯುತ್ತಿದ್ದರು (:-) ). 

ಆಗ ಸರಸ್ವತಿ ಕೃಪೆ ಅಷ್ಟೋ ಇಷ್ಟೋ ಇದ್ದರೂ.. ತಾಯಿ ಲಕ್ಷ್ಮಿ ದೇವಿಯಾವಾಗಲೂ ಸ್ವಲ್ಪ ಅಂತರದಲ್ಲಿಯೇ ಇರುತ್ತಿದ್ದಳು. ಇವಾಗಲು ಹಾಗೆಯೇ ಅದು ಬೇರೆ ಕಥೆ. 

ಸರಿ ಒಂದು ಭಾನುವಾರ ಇದ್ದ ೫೦ ರೂಪಾಯಿಗಳನ್ನು (೫ ರೂನ ಐದು ನಾಣ್ಯಗಳು, ಹತ್ತು ರೂ ನ ಎರಡು ನೋಟುಗಳು, ಒಂದು ರೂಪಾಯಿಯ ಹತ್ತು ನಾಣ್ಯಗಳು) ತೆಗೆದುಕೊಂಡು ಹೊರಟೆ. ವಿಜಯನಗರದಿಂದ ಜೆ ಪಿ ನಗರಕ್ಕೆ. 

ಎರಡು ಬಸ್ ಬದಲಾಯಿಸಿಕೊಂಡು ಅಲ್ಲಿಗೆ ಸೇರಿದ ಮೇಲೆ ಉಳಿದದದ್ದು ಸುಮಾರು ೩೫ ರೂಪಾಯಿಗಳು (ಐದು ರೂಪಾಯಿಯ ಐದು ನಾಣ್ಯಗಳು ಮತ್ತು ಹತ್ತು ರುಪಾಯಿಯ ಒಂದು ನೋಟು). ವಾಪಸ್ ಹೋಗೋಕೆ ಹೆಚ್ಚು ಕಮ್ಮಿ ೧೫ ರೂಪಾಯಿಗಳು ಬೇಕಿದ್ದವು. ಅಂದರೆ ಜೇಬಿನಲ್ಲಿ ಉಳಿಯಬಹುದಾಗಿದ್ದು ಕೇವಲ ೨೦ ರೂಪಾಯಿಗಳು ಮಾತ್ರ. 

ಅವಳ ಮನೆಗೆ ಹೋದೆ.. ಎಲ್ಲರೂ ಪ್ರೀತಿ ವಿಶ್ವಾಸದಿಂದ ಮಾತಾಡಿಸಿದರು. ಮನಸ್ಸು ಹಕ್ಕಿಯ ಹಾಗೆ ಹಾರುತ್ತಿತ್ತು. ಆದರೆ ಅಲ್ಲಿನ ಕೆಲ ಗೆಳತಿಯರು ಯಾವುದೋ ಮದುವೆಗೆ ಹೊರಟಿದ್ದರು. ಹಾಗಾಗಿ ಹೆಚ್ಚು ಹೊತ್ತು ಇರಲಿಲ್ಲ. ಸರಿ ಎಂದು ಹೊರಟೆ. ನನ್ನ ಜೊತೆ ಈ ಜ್ಯೋತಿ ಕೂಡ ಅಣ್ಣ ನಾ ಸ್ವಲ್ಪ ದೂರ ಬರುತ್ತೇನೆ ಎಂದು ತನ್ನ ಗೆಳತಿ ತ್ರಿವೇಣಿಯನ್ನು ಕಟ್ಟಿಕೊಂಡು ಹೊರಬಿದ್ದಳು. 

ಸರಿ ಬಸ್ ಸ್ಟಾಪ್ ತನಕ ಮಾತ್ರ ಬರುತ್ತಾಳೆ ಎಂದುಕೊಂಡು ನನ್ನ ಮಾಮೂಲಿ ಮಾತುಗಳನ್ನು ಆಡುತ್ತಾ ಬಸ್ ಸ್ಟಾಪ್ ಗೆ ಬಂದು ನಿಂತೆವು. ಅಣ್ಣ ಅಪರೂಪಕ್ಕೆ ಮನೆಗೆ ಬಂದಿದ್ದೀರಾ ಹೋಟೆಲ್ ನಲ್ಲಿ ಏನಾದರೂ ತಿನ್ನೋಣ ಅಂದಳು. ಹೃದಯವನ್ನು ಮತ್ತು ಪರ್ಸು ಎರಡನ್ನು ಮುಟ್ಟಿಕೊಂಡೆ. ಎರಡು ಸದ್ದು ಮಾಡುತ್ತಿತ್ತು.. ಹೃದಯ ತನ್ನ ಬಡಿತವನ್ನು ಹೆಚ್ಚಿಸಿತ್ತು, ಪರ್ಸ್ ನಲ್ಲಿದ್ದ ನಾಣ್ಯಗಳು ನಾವಿಷ್ಟೇ ಜನ ಇರೋದು ಅಂತ ಹೇಳುತ್ತಿದ್ದವು. 

ನಾ ದೇಶಾವಾರಿ ನಗೆ ನಗುತ್ತ ಬೇಡ ಬೇಡ ಈಗ ತಾನೇ ತಿಂಡಿ ತಿಂದು ಹೊರಟಿದ್ದೇನೆ.. ಹೊಟ್ಟೆ ಹಸಿತಾ ಇಲ್ಲ ಎಂದೇ.. ಅವರು ಬಿಡಲಿಲ್ಲ.. ಇಲ್ಲ ಇಲ್ಲ ನೀವು ಏನಾದರೂ ತಿನ್ನಲೇ ಬೇಕು ಎಂದು ಬಲವಂತ ಮಾಡಿ.. ಜಯನಗರದ ಬಳಿಯ ರಾಘವೇಂದ್ರ ಮಠದ ಹತ್ತಿರ ಇದ್ದ ಶಾಂತಿ ಸಾಗರಕ್ಕೆ ಬಂದೆವು. ನಾ ಎಷ್ಟೇ ಬೇಡ ಎಂದರೂ ಅವರು ಬಿಡಲಿಲ್ಲ. 

ಸರಿ ಬರಿ ಎರಡರಲ್ಲಿ ಮೂರು ಕಾಫಿ ಕುಡಿಯೋಣ ಎಂದು ಹೇಳಿದೆ. ಅದಕ್ಕೆ ಮತ್ತೆ ಅವರಿಬ್ಬರೂ ಇಲ್ಲ ಇಲ್ಲ ಏನಾದರೂ ಸಿಹಿ ತಿನ್ನಲೇ ಬೇಕು ಎಂದರೂ. ನಾ ಎಷ್ಟೇ ಬೇಡ ಎಂದರೂ ಬಿಡದೆ ಮೂರು ಮಸಾಲೆ ದೋಸೆಗೆ ಆರ್ಡರ್ ಮಾಡಿಯೇ ಬಿಟ್ಟರು. ನಾನು ಮೆಲ್ಲಗೆ ಮೆನು ಕಾರ್ಡ್ ನೋಡಿದೆ.. ಮೂರು ಮಸಾಲೆ ಆಗಿನ ಕಾಲಕ್ಕೆ ಸುಮಾರು ಮೂವತ್ತೆರಡು ರೂಪಾಯಿಗಳಷ್ಟು ಇದ್ದವು. ಸರಿ ನನ್ನ ಹತ್ತಿರ ಇದ್ದ ಆ ದುಡ್ಡನ್ನೇ ಕೊಟ್ಟು ಅಲ್ಲಿಂದ ನಡೆದೆ ಹೋಗಿ ಮನೆ ಸೇರುವುದು ಎಂದು ಖಾತ್ರಿ ಮಾಡಿಕೊಂಡೆ. 

ಮಸಾಲೆ ದೋಸೆ ಆಯ್ತು.. ಸರಿ ಬಿಲ್ ಕೊಡಲು ನನ್ನ ಹತ್ತಿರ ಇರುವ ಹಣ ಸಾಕು ಎಂದು ತಿಳಿದ ಮೇಲೆ.. ಯಾಕೋ ಹೊಟ್ಟೆ ಸರಿ ಇಲ್ಲ ಕಾಫೀ ಬೇಡ.. ಹೋಗೋಣ ಎಂದೇ.. ಜಯನಗರದಿಂದ ವಿಜಯನಗರಕ್ಕೆ ಎಷ್ಟು ಹೊತ್ತು ನಡೆಯಬೇಕು ಎನ್ನುವ ಅಂದಾಜು ಮಾಡುತ್ತಿತ್ತು ಮನಸ್ಸು. 

ಶ್ರೀ ಅಣ್ಣ ನೀವು ಕಾಫೀ ಬೇಡ ಎನ್ನುವುದುಂಟೆ ಅದು ಕಾಫೀಗೆ ಅವಮಾನ.. ಇರಿ ಸ್ವಲ್ಪ ಸಿಹಿ ತಿನ್ನೋಣ ಎಂದಳು. ನಾ ಪ್ರತಿಭಟಿಸಿದೆ ಅವರನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದೆ.. 

ದುಶ್ಯಾಸನ ದ್ರೌಪದಿಯನ್ನು ಅವಳ ಅಂತಃಪುರದಿಂದ ಎಳೆದು ತರಲು ಶುರು ಮಾಡುತ್ತಾನೆ.. ಮೊದಲು ತನ್ನ ಶಕ್ತಿಯನ್ನು ಉಪಯೋಗಿಸಿ ಅವನನ್ನು ತಡೆಯುತ್ತಾಳೆ, ಆಗುವುದಿಲ್ಲ ನಂತರ ನೆಲದ ಮೇಲೆಯೇ ಬಿದ್ದು ಗಟ್ಟಿಯಾಗಿ ಅಲ್ಲಿದ್ದ ಕುರ್ಚಿ, ಕಂಬಗಳನ್ನು ಹಿಡಿದುಕೊಂಡು ತನ್ನ ಪ್ರತಿಭಟನೆ ಮಾಡುತ್ತಾಳೆ. ಆಗಲೂ ದುಶ್ಯಾಸನ ಜಗ್ಗುವುದಿಲ್ಲ. ನಂತರ ತಲೆಗೂದಲನ್ನೇ ಹಿಡಿದುಕೊಂಡು ದರ ದರ ಎಳೆದುಕೊಂಡು ಸಭೆಗೆ ಬರುತ್ತಾನೆ ದುಶ್ಯಾಸನ. 

ಅಲ್ಲಿದ್ದ ದುಷ್ಟ ಚತುಷ್ಟಯಗಳು ಅವಳ ಸೀರೆಯನ್ನು ಸೆಳೆಯಬೇಕೆಂದು ತೀರ್ಮಾನಕ್ಕೆ ಬರುತ್ತಾರೆ. ಸರಿ ಸೀರೆ ಸೆಳೆಯಲು ಶುರುಮಾಡಿದಾಗ ದ್ರೌಪದಿ ಕಷ್ಟ ಪಟ್ಟು ತನ್ನ ಮಾನವನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಲೇ ಇದ್ದಳು. 

ಶ್ರೀ ಜಾಮೂನು ತಿನ್ನೋಣ ಅಂದ್ರು. ನಾ ಎಷ್ಟೇ ಬೇಡವೆಂದರೂ ಬಿಡದೆ ಮತ್ತೆ ಆರ್ಡರ್ ಮಾಡಿಯೇ ಬಿಟ್ಟರು. ಏನಪ್ಪಾ ಮಾಡುವುದು.. ಇದ್ದ ಹಣ ದೋಸೆಗೆ ಸರಿ ಆಗುತ್ತೆ.. ಜಾಮೂನು ಬಿಲ್ ಏನು ಮಾಡುವುದು.. ಮೆಲ್ಲಗೆ ಪರ್ಸ್ ಮತ್ತೊಮ್ಮೆ ಮುಟ್ಟಿ ನೋಡಿಕೊಂಡೆ. ಅದು ನಗಲೇ ಇಲ್ಲ.. ನಿನ್ನ ಹಣ ಬರಹ.. ಅಷ್ಟು ಹೇಳಿದರೂ ಕೇಳಲಿಲ್ಲ ಏನಾದರೂ ಮಾಡಿಕೊ ಅಂದು ನಕ್ಕ ಹಾಗೆ ಆಯಿತು  ನಾ ಏನು ಹೇಳಿದರೂ ಕೇಳಲಿಲ್ಲ.. ಮಹಿಳಾಮಣಿಗಳು ಯಾರ ಮಾತಾದರೂ ಕೇಳೋದು ಉಂಟೆ. 

ಮೊದಲ ಸೀರೆಯನ್ನು ಎಳೆದಾಗ ಕಷ್ಟ ಪಡುತ್ತ ಸೀರೆಯನ್ನು ಗಟ್ಟಿಯಾಗಿ ಹಿಡಿಕೊಂಡು ಜಗ್ಗಾಡಿದಳು ದ್ರೌಪದಿ. ಉಹೂಂ ದುಶ್ಯಾಸನನ ಶಕ್ತಿಯ ಮುಂದೆ ದ್ರೌಪದಿಯ ಶಕ್ತಿಯೇ.. ಅವನ ಕೈ ಮೇಲಾಯಿತು. 

ನನಗೆ ಏನೂ ತಿಳಿಯಲೇ ಇಲ್ಲ.. ಹೇಗಪ್ಪ ಇಲ್ಲಿಂದ ಹೊರಗೆ ಹೋಗುವುದು.. ಮೆಲ್ಲಗೆ ಎದ್ದು ಹೊರಗೆ ಓಡಿ ಹೋಗೋಣ ಎಂದರೆ.. ಹುಡುಗಿಯರ ಜೊತೆ ಬಂದಿದ್ದೇನೆ.. ಪೂರಾ ಬಿಲ್ ಕೊಡಲು ಹಣವಿಲ್ಲ.. ಮತ್ತೆ ನಾಳೆ ಆಫೀಸ್ ನಲ್ಲಿ ಭೇಟಿಯಾಗಲೇ ಬೇಕು.. ಅವಾಗ ದುಶ್ಯಾಸನ ಬೇಡವೇ ಬೇಡ ನನ್ನ ಮಾನ ಕಳೆಯಲು. ಏನಪ್ಪಾ ಮಾಡುವುದು.. ಯೋಚನೆ ಶುರುವಾಯಿತು.. 

ಮೂರು ಕಾಫೀ.. ಅದರಲ್ಲಿ ಅಣ್ಣನಿಗೆ ಒಂದು ಸ್ಟ್ರಾಂಗ್ ಕಾಫೀ ಆರ್ಡರ್ ಮಾಡಿಯೇ ಆಯಿತು.. "ಆಕಾಶವೇ ಬೀಳಲಿ ಮೇಲೆ" ಹಾಡು ಸಪ್ಪೆಯಾಗಿತ್ತು. ಆ ಧೈರ್ಯ ನನ್ನಲ್ಲಿ ಇರಲಿಲ್ಲ. 

ದ್ರೌಪದಿಗೆ ಅರಿವಾಯಿತು.. ನನ್ನ ಪ್ರಯತ್ನ ಮುಗಿಯಿತು.. ಇನ್ನೇನಿದ್ದರೂ ದೇವರ ಕೃಪೆ ಅಷ್ಟೇ.. ಸೀರೆಯಿಂದ ಕೈಯನ್ನು ತೆಗೆದಳು.. ಮೇಲಕ್ಕೆ ಎರಡು ಕೈಯನ್ನು ಎತ್ತಿ ಮುಗಿಯುತ್ತಾ.. "ಶ್ರೀ ಕೃಷ್ಣ.. ಇದು ನಿನ್ನ ಅವಮಾನದ ಪ್ರಶ್ನೆ.. ನನ್ನ ಪ್ರಯತ್ನ ಮುಗಿಯಿತು.. ನನ್ನ ಮಾನ ಅವಮಾನ ಎಲ್ಲವೂ ನಿನಗೆ ಸೇರಿದ್ದು.. ನಿನ್ನ ಮಾನವನ್ನು ನೀನೆ ರಕ್ಷಿಸಿಕೊ ಎಂದು ಪ್ರಾರ್ಥನೆ ಮಾಡುತ್ತಾ ಕಣ್ಣು ಮುಚ್ಚಿ "ಕೃಷ ಕೃಷ್ಣ" ಜಪಿಸುತ್ತಾ ದುಶ್ಯಾಸನ ಸೀರೆ ಎಳೆಯುತ್ತಾ ಹೋದ ಹಾಗೆ ತಿರುಗುತ್ತಾ  ನಿಂತಳು. 

ಶ್ರೀ ಶ್ರೀ ಅಣ್ಣಾ ಅಣ್ಣ ಕಾಫೀ ಬಂತು.. ಏನು ಧ್ಯಾನ ಮಾಡುತ್ತಿದ್ದೀರಾ.. ನಿಮ್ಮ ಫೇವರಿಟ್ ಕಾಫೀ ಬಂತು ಕುಡಿಯಿರಿ..ಯಾಕೋ ಕಾಫಿ ರುಚಿಸಲಿಲ್ಲ.. . ಆದರೆ ಬೇರೆ ದಾರಿಯೇ ಇಲ್ಲ... ಕಷ್ಟ ಪಟ್ಟು ಸುಮ್ಮನೆ ಮಂಗನ ಹಾಗೆ ನಗುತ್ತ ನಗುತ್ತಾ ಕಾಫೀ ಹೀರಿದೆ. ಬಿಲ್ ಬಂತು..  ಮೊದಲ ಬಾರಿಗೆ ಪಲಾಯನ ಸೂತ್ರ ಇಷ್ಟವಾಗುತ್ತಿತ್ತು... ಕೈ ತೊಳೆದು ಬರುತ್ತೀನಿ ಎಂದು ವಾಶ್ ಬೇಸಿನ್ ಕಡೆಗೆ ಅಕ್ಷರಶಃ ಆಮೆಯ ವೇಗದಲ್ಲಿ ನಡೆದೆ.. ಕೈಯನ್ನು ಸುಧೀರ್ಘವಾಗಿ ತೊಳೆದು.. ಅಂದು ತಾನೇ ಹೇರ್ ಕಟ್ ಮಾಡಿಸಿಕೊಂಡು ಚಿಕ್ಕ ಚಿಕ್ಕದಾಗಿ ಇದ್ದ ಕೂದಲನ್ನು ಬಾಚುತ್ತಲೇ ಒಂದು ಐದು ನಿಮಿಷ ಕಳೆದೆ. 

ಟೇಬಲ್ ಗೆ ಬಂದೆ.. ಅಲ್ಲಿ ಬಿಲ್ ಕಾಣಲಿಲ್ಲ.. ಹೃದಯದ ಬಡಿದ ಹೆಚ್ಚಾಯಿತು.. ಅವರಿಬ್ಬರೂ ಅಣ್ಣ ಕೈ ತೊಳೆದು ಬರುತ್ತೇವೆ ಎಂದು ವಾಶ್ ಬೇಸಿನ್ ಕಡೆ ಓಡಿದರು. .ಢವ ಢವ ಎದೆ ಬಡಿತ ಹೊರಗೆ ಕೇಳಿಸುವಷ್ಟು ಜೋರಾಗಿತ್ತು. ಮನಸ್ಸು ಎಲ್ಲದ್ದಕ್ಕೂ ಸಿದ್ದವಾಗಿತ್ತು. ಸುತ್ತಲು ನೋಡಿದೆ 

ಅವರಿಬ್ಬರೂ ಬಂದರು.. ಅಣ್ಣಾ ಏನೂ ಇನ್ನು ಇಲ್ಲೇ ಕೂತಿದ್ದೀರ.. ಇನ್ನೊಮ್ಮೆ ತಿನ್ನಬೇಕೆ.. 
ಬನ್ನಿ ಹೋಗೋಣ ಎಂದರೂ. ಮನದೊಳಗೆ ಕುಶಿಯಾದರೂ.. ಗಂಡಿನ ಅಹಂ ಕೇಳಬೇಕೆ.. ಅರೆ ಬಿಲ್ ಇನ್ನು ಬಂದಿಲ್ಲ ಕೊಡಬೇಕಲ್ವೆ.. ಅದಕ್ಕೆ.. ಕಾಯ್ತಾ ಇದ್ದೀನಿ. ನಾಲಿಗೆಯಲ್ಲಿನ ದ್ರವ ಖಾಲಿಯಾಗಿತ್ತು.   

ಆಶ್ಚರ್ಯ ಆಶ್ಚರ್ಯ ದುಶ್ಯಾಸನ ಮೊದಲ ಸೀರೆ ಎಳೆಯುತ್ತ ಹೋದಂತೆ.. ಮತ್ತೊಂದು ಸೀರೆ ದ್ರೌಪದಿಯನ್ನು ಸುತ್ತಿಕೊಂಡಿತು.. ಹೀಗೆ ಸೀರೆಗಳು ಸರಮಾಲೆಯೇ ಬರಲು ಶುರು ಮಾಡಿತು.. ಒಂದು ಸೀರೆ ಮುಗಿದನಂತರ ಇನ್ನೊಂದು ಹೀಗೆ. 

ಅಣ್ಣಾ ನೀವು ನಮ್ಮ ಮನೆಗೆ ಬಂದು.. ನಿಮ್ಮ ಹತ್ತಿರ ಬಿಲ್ ಕೊಡಿಸುವುದೇ.. ಆಗಲೇ ಕೊಟ್ಟಾಯಿತು.. ಬನ್ನಿ ಬನ್ನಿ ಎಂದರೂ. 
ಪೇಲವ ನಗೆ ನಗುತ್ತ.. ಪರ್ಸ್  ನ ಒಮ್ಮೆ ಮುಟ್ಟಿ ನೋಡಿದೆ.. ಥೂ ನಾಚಿಕೆ ಇಲ್ಲದವನೇ ಎಂದು ಬಯ್ದ ಹಾಗೆ ಆಯಿತು. 

ಇಂದಿಗೂ ಹೋಟೆಲ್ ಗೆ ಹೋದರೆ.. ಈ ದೃಶ್ಯ ಕಣ್ಣಿಗೆ ಕಾಣುತ್ತದೆ... 

ಈ ಘಟನೆಯಿಂದ ತಿಳಿದದ್ದು ಅರಿತದ್ದು ಕಲಿತದ್ದು : ಪರಿಸ್ಥಿತಿ ನಮ್ಮ ಹತೋಟಿಯಲ್ಲಿ ಇರುವ ತನಕ ನಮ್ಮ ಪ್ರಯತ್ನ ಪಡಬೇಕು.. ಕೈ ಮೀರುತ್ತಿರುವಾಗಲೂ ನಮ್ಮ ಪ್ರಯತ್ನ ಬಿಡಬಾರದು.. ಇನ್ನು ನಮ್ಮ ಕೈಯಲ್ಲಿ ಏನು ಸಾಧ್ಯವಿಲ್ಲ ಎಲ್ಲ ಅವನ ಇಚ್ಚೆ ಎಂದರಿತಾಗ ಆ ಕಾಣದ ಕೈಗೆ  ಶರಣಾಗಬೇಕು.. ಸಮಸ್ಯೆ ನಿರಾಳವಾಗಿ ಬಿಡುತ್ತದೆ.. !!!

ಹೀಗೆ ಸರಿ ಸುಮಾರು ನನ್ನ ಜನುಮ ದಿನದ ಸುತ್ತಾ ಮುತ್ತ ನಡೆದ ಈ ಪ್ರಸಂಗ ಈ ವರ್ಷದ ಜನುಮದಿನದಂದು ತುಂಬಾ ನೆನಪಿಗೆ ಬಂತು. ಕಣ್ಣು ಬಿಟ್ಟು ನೋಡಿದರೆ ಫೇಸ್ ಬುಕ್ ಗೋಡೆಯೆಲ್ಲಾ ತುಂಬಿ.. ಲ್ಯಾಪ್ಟಾಪ್ ಸ್ಕ್ರೀನ್ ಇಂದ ಹೊರಗೆ ದುಮುಕುತಿತ್ತು. ಒಂದೇ ಎರಡೇ ಸುಂದರಾತಿಸುಂದರ ಲೇಖನಗಳು, ಶುಭಾಶಯಗಳು, ಚಿತ್ರಗಳು, ಸಂದೇಶಗಳು, ಇಷ್ಟಗಳು ಅಬ್ಬಾ ಜೀವನಕ್ಕೆ ಇನ್ನೇನು ಬೇಕು. ನಮ್ಮ ಮನದಲ್ಲಿ ಎಲ್ಲರು ಇದ್ದಾರೆ ಅದು ನಮಗೆ ಗೊತ್ತಿರುತ್ತೆ.. ಎಲ್ಲರ ಮನದಲ್ಲೂ ನಾವಿದ್ದೇವೆ ನಮ್ಮ TRP ಏನು ಎಂದು ಅರಿವಾಗುವುದು ಈ ರೀತಿಯ ವಿಶೇಷದಿನಗಳಲ್ಲಿ, 

ಅಕ್ಕರೆಯಿಂದ ಶುಭಾಶಯಗಳ ಪೋಷಾಕು ತೊಡಿಸಿದ ಪ್ರತಿಯೊಬ್ಬರಿಗೂ ನನ್ನ ಪ್ರಯತ್ನ ಮೀರಿ ಅಭಿವಂದನೆಗಳನ್ನು ಸಲ್ಲಿಸಿದ್ದೇನೆ. ಬ್ಲಾಗ್ ಲೋಕದ ತಾರೆಗಳು ಕೊಟ್ಟ ಉಡುಗೆಗಳು ಒಂದೋ ಎರಡೋ ಅಲ್ಲಾ ನೂರಾರು. ಅಭಿಮಾನದ ಫಲಕಗಳನ್ನು ನನ್ನ ಮೇಲೆ ಏರಿಸಿಯೇ ಬಿಟ್ಟಿದ್ದಾರೆ.

ಪ್ರಪಂಚ ತಲೆಕೆಳಗಾದರೂ ಸರಿ ರಾತ್ರಿಗೆ ಶುಭಾಷಯ ಕೋರುವ ನನ್ನ ಮಗಳು ಭಾಗ್ಯ, ಅದ್ಭುತ ಬರಹಗಳ ಒಡತಿ ನಿವೇದಿತ ಕೊಟ್ಟಿರುವ ಭಾವ ಪೂರಿತ ಮಾತುಗಳು, ಅಚ್ಚರಿಯೆನ್ನುವಂತೆ ಪರಕಾಯ ಪ್ರವೇಶ ಮಾಡಿದಂತೆ ಬರೆದಿರುವ ಬಾಲು ಸರ್, ತುಂಬು ಹೃದಯ ಆಶೀರ್ವಾದ ಮಾಡಿರುವ ಹರಿಣಿ ಮೇಡಂ, ಚಿಕ್ಕ ಘಟನೆಯನ್ನು ವಿವರಿಸಿ ಅಭಿಮಾನದಿಂದ ಮೀಯಿಸಿರುವ ಪ್ರಕಾಶಣ್ಣ, ಸೂಪರ್ ವಿಷೆಸ್ ಕೋರಿದ DFR , ಹೇಳಿದ್ದು ಕೆಲವರ ಹೆಸರು ಹೇಳದೆ ಉಳಿದ ಆದ್ರೆ ಪುಟ್ಟ ಪುಟ್ಟ ಪದಗಳನ್ನು ಪ್ರಯೋಗಿಸಿ ನನ್ನ ಬದುಕಿಗೆ ದೊಡ್ಡ ದೊಡ್ಡ ಸಂದೇಶಗಳನ್ನ ಹೇಳಿದ ಎಲ್ಲಾ ಮಿತ್ರರಿಗೂ, ಪುಟ್ಟಿಯರಿಗೂ, ಮೇಡಂ ಗಳಿಗೂ, ಸರ್ ಗಳಿಗೂ, ಗುರುಗಳಿಗೂ ಹಾಗೆಯೇ ಹೇಳದೆ ಉಳಿದಿಹ ಹೆಸರು ಸಾವಿರಾರು ಬಂಧು ವರ್ಗಕ್ಕೆ, ಮಿತ್ರ ವೃಂದಕ್ಕೆ ನನ್ನ ಶಿರಸಾ ಪ್ರಣಾಮಗಳು.

ಎಲ್ಲರಿಗೂ ಚಿರಋಣಿ!!!

ಈ ಜನುಮದಿನಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ ಅನೇಕವು .. ಮನದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ.. ಇನ್ನು ಕೆಲವು ಫೇಸ್ ಬುಕ್ ಗೋಡೆಯಲ್ಲಿ ಭದ್ರವಾಗಿ ನಿಂತು ಬಿಟ್ಟಿದ್ದಾವೆ.

ಬಾಹ್ಯ ಪ್ರಪಂಚಕ್ಕೆ ನನ್ನ ಶ್ರೀ ಪರ್ಪಂಚಕ್ಕೆ ತೋರಿಸಬೇಕಾದ್ದು ಈ ಕೆಳಗಿನವು. ಯಾಕೆಂದರೆ ಇದು ಕೇವಲ ನನಗಾಗಿ ಕಳಿಸಿದ ಉಡುಗೊರೆಗಳು.. ನೋಡಿ ನಿಮಗಾಗಿ..

ನನ್ನ ಮೆಚ್ಚಿನ ನಟ ಶ್ರೀ ಅನಂತನಾಗ್ ಅವರಿಂದ ಶುಭಾಶಯಗಳು ..
ಕೃಪೆ - ನಿವೇದಿತ ಚಿರಂತನ್ 

ಗೆಳೆಯ ಅನಿಲ್ ಬೆಡಗೆ ಅವರಿಂದ ಪದಗಳ ಗುಚ್ಹ 

Saturday, February 7, 2015

ಒಲವು ಅಂದ್ರೆ ಓ ಲವ್ವು!!!!...ಹ್ಯಾಪಿ ಬರ್ತ್ಡೇ

ಒಲವಿನ ಉಡುಗೊರೆ ಕೊಡಲೇನು?

ಬೇಡ ಶ್ರೀ... ಅಂಗಡಿಗೆ ಹೋಗಿ ಕೊತ್ತಂಬರಿ ತನ್ನಿ!!!

ಹೊಸ ಬಾಳಿಗೆ ನೀ ಜೊತೆಯಾದೆ.. ಹೊಸ ಆನಂದ ನೀನಿಂದು ತಂದೆ

ಶ್ರೀ ಮಗು ಸ್ಕೂಲ್ ಗೆ ಹೋಗೋಕೆ ಸಾಕ್ಸ್ ತಂದ್ರಾ 

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ 

ಶ್ರೀ ನಾನು ಜೊತೆಯಲ್ಲಿ ಬರ್ತೀನಿ.. ನೀವು ಆಫೀಸ್ ಗೆ ಹೋಗುವ ದಾರಿಯಲ್ಲಿಯೇ ಇರೋದು ನನ್ನ ಬಿಟ್ಟು ಹೋಗಿ 

ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ 

ಶ್ರೀ.. ಇಲ್ಲ ನನಗೆ ಬೇರೆ ಕೆಲಸ ಇದೆ.. 

ಒಂದು ಮಾತು ಒಂದು ಮಾತು ನಾನು ಹೇಳಲೇ

ಶ್ರೀ ನನಗೆ ಪುರುಸೊತ್ತು ಇಲ್ಲ.. ಆಮೇಲೆ ಫೋನ್ ಮಾಡಿ 

ಹೊಟ್ಟೆ ಹಸಿತಾ ಐತೆ ರಾಗಿ ಮುದ್ದೆ ತಿನ್ನೋ ಹೊತ್ತು 

ಶ್ರೀ.. ಅಡಿಗೆ ಮನೆಯಲ್ಲಿ ಅನ್ನ ಸಾರು ಇದೆ.. ಊಟ ಮಾಡಿ 

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಮಹಾರಾಣಿಯ ಹಾಗೆ 

ಶ್ರೀ.. ಮುದ್ದು ಬಂಗಾರ ನೀವು.. ಎಷ್ಟು ಒಳ್ಳೆಯವರು.. ಲವ್ ಯು ಸೊ ಮುಚ್ 

ಹ ಹ ಹ ಹ ಪುಟ ಗಟ್ಟಲೆ, ಪುಸ್ತಕಗಟ್ಟಲೆ, ಕಪಾಟಿನಲ್ಲಿ ಯಾವುದೇ ಪುಸ್ತಕ ತೆಗೆದರು.. ಒಂದೇ ಮನಸ್ಥಿತಿ, ಒಂದೇ ನಗು, ಒಂದೇ ಅನುಸರಿಸುವ ಗುಣ.. ಹೀಗೆ ವ್ಯಾಖ್ಯಾನ ಅನೇಕ, ಸಾವಿರಾರು ಪದಗಳಲ್ಲಿ ಹರಿದಾಡಿಬಿಟ್ಟಿರುತ್ತದೆ.. 

ಆದರೆ ನನಗೆ ಅನ್ನಿಸುವ ಮಾತು.. ಎರಡು ವಿರುದ್ಧ ಮನಗಳು ಜೊತೆಯಲ್ಲಿ ಹೆಜ್ಜೆ ಹಾಕಿದಾಗ ಬದುಕು ಸುಂದರ.. ಯಾಕೆ ಅಂದರೆ ಉತ್ತರ ಮತ್ತು ದಕ್ಷಿಣ ಧ್ರುವಗಳು ಅಲ್ಲವೇ ಅಯಸ್ಕಾಂತದಲ್ಲಿ ಆಕರ್ಷಣೆ ಹೊಂದುವುದು. 

ಹೀಗೆ ತಾಳ ಮೇಳವೇ ಇಲ್ಲದ ಮೇಲಿನ ಹಾಡಿನ ಸಂಭಾಷಣೆಯ ತರಹ ನನ್ನ ಬಾಳಿನಲ್ಲಿ ಬಂದು  ಶೀತಲವಾದ ಗಾಳಿಯನ್ನು ಬೀಸುತ್ತಲೇ ಮನೆಗೆ ಮನಕ್ಕೆ ಬೆಚ್ಚನೆಯ ಹಿತವಾದ ಶಾಖವನ್ನು ತಂದ ನನ್ನ ಮಡದಿ ಸವಿತಾಳಿಗೆ ಇಂದು ಜನುಮದಿನ.. 

ನಾವಿಬ್ಬರು ಬಾಳಿನ ಪಥದಲ್ಲಿ ಹೆಜ್ಜೆ ಹಾಕುತ್ತಿರುವ ಪಯಣಿಗರು.. ಇಬ್ಬರ ಗುರಿಯು ಒಂದೇ.. ಆದರೆ ಅದನ್ನು ನೋಡುವ ರೀತಿ ಮೇಲಿನ ಸಂಭಾಷಣೆಗಳಂತೆ.. ಎರಡು ವಿಭಿನ್ನ ಆದರೆ ಮನೆಯೊಳಗೆ ಇರುವ ಶಾಖ ಬೆಚ್ಚಗೆ ಇದುವಂತಹ ಪ್ರೀತಿ ಮಮತೆ ವಿಶ್ವಾಸ.. ಇಂಗ್ಲಿಷ್ ನಲ್ಲಿ LOVEEEEEEEEEEEEEEEEEEEEEEEEEEEEEEEEEEEEEEEEEEEEEEE 

ಬಣ್ಣ ವರ್ಣ ಎಲ್ಲಾ ಮನದಲ್ಲಿ .... ಹಾಗೆ ಒಂದು ಸುಂದರ ಚಿತ್ರ 

ಹ್ಯಾಪಿ ಬರ್ತ್ಡೇ ಸವಿತಾಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆ!!!! 



Thursday, January 15, 2015

ಅಜ್ಜಿ ಬನ್ನಿ ಬನ್ನಿ ನಾವೆಲ್ಲಾ ನಿಮಗೋಸ್ಕರ ಕಾಯುತ್ತಿದ್ದೇವೆ.. !!!

"ಮಗು ಶ್ರೀಕಾಂತ ನಿನ್ನ ಮೇಲೆ ನನಗೆ ಕೋಪವಿದೆ.. "

"ಕತ್ತೆತ್ತಿ ನೋಡಿದೆ ಪಟದಲ್ಲಿದ್ದ ಅಜ್ಜಿ ಹುಬ್ಬನ್ನು ಮೇಲೆ ಏರಿಸಿದ್ದು ಚೆನ್ನಾಗಿ ಕಾಣುತ್ತಿತ್ತು"

"ಯಾಕೆ ಅಜ್ಜಿ ಏನಾಯಿತು.. ಏಕೆ ನಿಮ್ಮ ಈ ಮೊಮ್ಮಗನ ಮೇಲೆ ಕೋಪ.. ಎಡಪಂಥೀಯ ನಾಗಿದ್ದ ನನ್ನನ್ನು ಬಲಪಂಥೀಯನ ಮಾಡಿದ್ದೆ ನೀವು ಅಲ್ಲವೇ (ಬಾಲ್ಯದಲ್ಲಿ ನಾ ಎಡಚನಾಗಿದ್ದೆ .. ಅಜ್ಜಿ ಹೊಡೆದು ಹೊಡೆದು ಬಲಗೈಯಗೆ ಬದಲಾಯಿಸಿದರು)

"ಮತ್ತೆ ನೀ ನಿನ್ನ ಅಜ್ಜಯ್ಯನ ಮೂರು ಹಿಂದಿನ ತಲೆಮಾರಿನ ಬಗ್ಗೆ ಸಂಭಾಷಣೆ ಬರೆದಿದ್ದೆ.. ನನ್ನ ಬಗ್ಗೆ ಬರೆಯುತ್ತೀಯ ಎಂದು ಕಾಯುತ್ತಿದ್ದೆ.. ನೀ ಬರೆದೆ ಇಲ್ಲ.. ಅದಕ್ಕೆ ನಿನ್ನ ಮೇಲೆ ಕೋಪ ನನಗೆ"

"ಅಜ್ಜಿ ಅದಕ್ಕೆ ಯಾಕೆ ಕೋಪ.. ನನಗೂ ತುಂಬಾ ಆಸೆ ಇತ್ತು ಬರೆಯಬೇಕು ಎಂದು.. ಆದರೆ ನೀವು  ಇಷ್ಟಪಡುವ ನಿಮ್ಮ ಮೊದಲ ಮೊಮ್ಮಗಳ ಮನೆಗೆ ನೀ ಬಂದ ಮೇಲೆ ಬರೆಯೋಣ ಅಂತ ಕಾಯುತ್ತಿದ್ದೆ.. ಈಗ ನೋಡಿ ನಾಳೆ ನೀವು ಬರುತ್ತಿದ್ದೀರ.. ಅದಕ್ಕೆ ನಾ ಬರೆಯುತ್ತಿದ್ದೇನೆ.. "

"ಓಹ್ ಹೌದಲ್ವಾ..  ಕೃಷ್ಣವೇಣಿಯ ಮನೆಯಲ್ಲಿ ಬರುವುದು ನಾನು.. ಕಂದಾ.. ನಾ ನಾಳೆಗೆ ಕಾಯುತ್ತಿದ್ದೇನೆ.. ಹಾಗೆಯೇ ನಿನ್ನ ಬರಹ ಓದಲು ಕೂಡ"

ಹೀಗೆ ಸಾಗಿತ್ತು ಒಂದು ಸಂಭಾಷಣ ಲಹರಿ.. ತನ್ನ ಮಕ್ಕಳನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸುವ ಎಲ್ಲಾ ತಾಯಿಯಂತೆಯೇ ನಮ್ಮ ಅಜ್ಜಿ ಕೂಡ.. ಆದರೆ ಅವರ ಶಕ್ತಿ ಇದ್ದದ್ದು ಎಲ್ಲಾ ಮಕ್ಕಳಲ್ಲಿರುವ ಉಲ್ಲಾಸ ಉತ್ಸಾಹಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಬೆಳವಣಿಗೆಗೆ ಅವರ ಶಕ್ತಿಗೆ ಅನುಸಾರವಾಗಿ ಮಮತೆಯ ಮಡಿಲು ತುಂಬಿಕೊಂಡು ನಿಂತದ್ದು ಅಜ್ಜಿಯ ಹಿರಿಮೆ.

ಇಂಥಹ ಮಹಾನ್ ಚೇತನದ ಬಗ್ಗೆ ಬರೆಯುವ ಒಂದು ಹಂಬಲ ಇತ್ತು... ಇದೀಗ ಹಾ ಹಾ ಹಾ ಪೂರೈಸಿಕೊಳ್ಳುವೆ.... !

***************
ಅಜ್ಜಿಗೆನೋ ಮಾತು ಕೊಟ್ಟು ಬಿಟ್ಟೆ.. ತಲೆ ನೋಡಿದರೆ ಪೂರ ಖಾಲಿ ಏನೂ ಹೊಳಿತಾ ಇಲ್ಲ.. ಅಜ್ಜಿಯನ್ನು ನೆನೆಸಿಕೊಂಡು ಹಾಗೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕೂತೆ.. ತೆರೆಯಿತು ಒಂದು ಭವ್ಯ ಲೋಕ... 

ಅಜ್ಜಿ, ಮುತ್ತಜ್ಜಿ, ಅವರ ತಾಯಿ (ಮಾತಾ, ಪಿತಾಮಹಿ, ಪ್ರಪಿತಮಹಿ) ಇವರ ಒಂದು ಸಂಭಾಷಣೆ ನಿಮಗಾಗಿ. 

ಪ್ರಪಿತಮಹಿ: ನಮ್ಮ ವಂಶದಲ್ಲಿ ಅದ್ಭುತ ಕಲೆಯನ್ನು ಹೊಂದಿದ್ದ ಗೋಪಾಲನ ಬಗ್ಗೆ ಸ್ವಲ್ಪ ಹೇಳಿ 
ಪಿತಾಮಹಿ : ನರಸು (ನಮ್ಮ ಅಜ್ಜಿ) ಅವರ ಮಾತಿನಲ್ಲೇ ಕೇಳಬೇಕು.. ತಾಯಿ ಹೃದಯ ಆಲ್ವಾ.. ಅದ್ಭುತ ಚೇತನದ ತನ್ನ ಕುದಿಯ ಬಗ್ಗೆ ಅವಳೇ ಹೇಳಲಿ. 
ಅಜ್ಜಿ : ಕಣ್ಣಲಿ ಹಾಗೆ ಒಂದು ಮಿಂಚು ಮೂಡಿತು.. ಹೃದಯ ತುಂಬಿಬಂದಿತು.. ಅಲ್ಲೇ ಚಿತ್ರ ಬರೆಯುತ್ತಿದ್ದ ತನ್ನ ಮಗನನ್ನು "ಗೋಪಾಲ ಬಾರೋ ಇಲ್ಲಿ" ಎಂದರೂ 
ನನ್ನ ಚಿಕ್ಕಪ್ಪ ಅರ್ಥಾತ್ ಗೋಪಾಲ ಚಿಕ್ಕಪ್ಪ (ನಾವುಗಳು ಯಾರೂ ನೋಡಲು ಆಗಲೇ ಇಲ್ಲ.. ಕಡಿಮೆ ಆಯಸ್ಸು ಹೊಂದಿದ್ದ ಚಿಕ್ಕಪ್ಪ ಬಲು ಬೇಗನೆ ನಮ್ಮನ್ನು ಬಿಟ್ಟು ಹೊರತು ಬಿಟ್ಟಿದ್ದರು)

ಅಜ್ಜಿ ನೋಡು ನಿಮಗೆ ಗೊತ್ತಲ್ಲ ಇವನೇ ನನ್ನ ಮಗ ಗೋಪಾಲ.. ಅದ್ಭುತ ಚಿತ್ರಕಾರ.. ಮಕ್ಕಳನ್ನು ಕಂಡರೆ ಅಪರಿಮಿತ ಪ್ರೀತಿ., ಒಮ್ಮೆ ಇವನು ಮೈದಾನದಲ್ಲಿ ಆಡುತ್ತಿದ್ದ ಶಾಲಾ ಮಕ್ಕಳನ್ನು ನೋಡಿದ.. ಎರಡು ಜಡೆಯನ್ನು ಹಾಕಿಕೊಂಡ ಹೆಣ್ಣು ಮಕ್ಕಳು ಕೈ ಕೈ ಹಿಡಿದುಕೊಂಡು ಗಿರಗಟ್ಲೆ ತಿರುಗುತ್ತಿದ್ದುದನ್ನು ನೋಡಿ ಹಾಗೆಯೇ ಬರೆದಿದ್ದ. ಎಷ್ಟು ನಿಜವಾಗಿತ್ತು ಎಂದರೆ ಹೆಣ್ಣು ಮಕ್ಕಳ ಹಾರುತ್ತಿದ್ದ ಜಡೆ, ಸುತ್ತಿಕೊಂಡಿದ್ದ ಲಂಗ ಎಲ್ಲವೂ ಹಾಗೆಯೇ ಮೂಡಿ ಬಂದಿತ್ತು. 

ಇವನಿಗೆ ಚಿತ್ರಕಲೆಯ ಅದ್ಭುತ ಹಿಡಿತ ಇತ್ತು.. ಒಮ್ಮೆ ನೋಡಿದರೆ ಹಾಗೆಯೇ ಬರೆದು ಬಿಡುತ್ತಿದ್ದ. 

ಇವನ ಮುಂದೆ ಯಾರೂ ಕೂಡ ಸಾವಿನ ಬಗ್ಗೆ ಮಾತಾಡಲೇ ಬಾರದು.. ಇವನು ಜೀವನವನ್ನು ಅಷ್ಟೊಂದು ಪ್ರೀತಿಸುತಿದ್ದ. ಮಕ್ಕಳನ್ನು ಕಂಡರೆ ಅಪಾರ ಪ್ರೀತಿ. ನನಗೆ ಇಷ್ಟೊಂದು ಮೊಮ್ಮಕ್ಕಳು ಇರುವುದನ್ನು ನೋಡಿದ್ದರೆ ಎಷ್ಟು ಸಂತಸ ಪಡುತ್ತಿದ್ದಗೊತ್ತಾ.  ಆದರೂ ಒಂದು ಸಮಾಧಾನ.. ನನ್ನ ಮೊಮ್ಮಕ್ಕಳು ಇವನನ್ನು ನೆನೆಸಿಕೊಳ್ಳುತ್ತಲೇ ಇರುತ್ತಾರೆ. ಇವನ ಬಗ್ಗೆ ತಿಳಿದಿರುವುದು ನನ್ನ ಇತರ ಮಕ್ಕಳು ಇವನ ಬಗ್ಗೆ ಹೇಳಿರುವುದರಿಂದ ಇವನ ಬಗ್ಗೆ ಅಪಾರ ಗೌರವ. 

ಇವನಿಗೆ Ten Commendments ಚಿತ್ರ ಬಗ್ಗೆ ವಿಪರೀತ ಹುಚ್ಚು, ಇವನು ಇಲ್ಲಿಗೆ ಬರುವ ಕೆಲ ದಿನಗಳ ಮೊದಲು ಆ ಸಿನೆಮಾವನ್ನು ನೋಡಿ ಬಂದಿದ್ದ. ಚಲನ ಚಿತ್ರಗಳನ್ನು, ಕಲೆಯನ್ನು ಬಹುಮಿತವಾಗಿ ಪ್ರೀತಿಸುತ್ತಿದ್ದ ಇವನನ್ನು  ಕಂಡರೆ ಎಲ್ಲರಿಗೂ ಬಲು ಪ್ರೀತಿ. 

ಹಳ್ಳಿಯನ್ನು, ಹಳ್ಳಿಯ ಆಹಾರ, ಹಳ್ಳಿಯ ಪರಿಸರ ಇವುಗಳನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದ. ಅವನಿಗೆ ಇಷ್ಟವಾದ ಹಳ್ಳಿ ಕಿತ್ತಾನೆಯಾಗಿತ್ತು. ನಮ್ಮ ಮಂಜಣ್ಣನ ಮಡದಿ ವಿಶಾಲು ಜೊತೆಯಲ್ಲಿ ಹೋಗುವ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ ಅಷ್ಟು ಪ್ರೀತಿಸುತಿದ್ದ ಹಳ್ಳಿಯನ್ನು. 

ತನ್ನ ಅಣ್ಣ, ಅಕ್ಕಂದಿರನ್ನು, ತಮ್ಮಂದಿರನ್ನು ಕಂಡರೆ ಅಭಿಮಾನ. ಯಾವುದೇ ಕಾರಣಕ್ಕೂ ಅವರಿಗೆ ನೋವು ಕೊಡುತ್ತಿರಲಿಲ್ಲ. ತಾನು ಜೀವನವಿಡಿ ನೋವಿನಲ್ಲಿದ್ದರೂ ಇನ್ನೋಬರನ್ನು ನೋವಿಗೆ ತಳ್ಳುತ್ತಿರಲಿಲ್ಲ.  ಮಂಜಣ್ಣನನ್ನು ತುಂಬಾ ಪ್ರೀತಿಸುತ್ತಿದ್ದ ಇವನು ಇಲ್ಲಿಗೆ ಬಂದ ಮೇಲೂ ಕೂಡ ಅವಾಗವಾಗ ಮಂಜಣ್ಣನನ್ನು ನೋಡಿ ಬರುತ್ತಿದ್ದ :-)

ಗೋಪಾಲ ಚಿಕ್ಕಪ್ಪ ಹಾಗೆಯೇ ಅನಂದಭಾಷ್ಪದಲ್ಲಿ ಮುಳುಗಿದ್ದರು.. "ಅಮ್ಮ ನನ್ನ ಬಗ್ಗೆ ಅದೆಷ್ಟು ಹೇಳುತ್ತೀಯ.. ನನ್ನ ವಂಶವಾಹಿನಿಯ ಬಗ್ಗೆ ನನಗೆ ಅಭಿಮಾನವಿದ್ದೆ ಇದೆ. ಅಣ್ಣ, ನೀನು, ಅಜ್ಜ ಅಜ್ಜಿ, ಅಪ್ಪು, ಮಂಜಣ್ಣ, ಗೌರಕ್ಕ ಎಲ್ಲರೂ ನನಗೆ ಪ್ರೀತಿ ಪಾತ್ರರು.

ಪಿತಾಮಹಿ. ಪ್ರಪಿತಮಹಿ ನಿಶ್ಯಭ್ಧರಾಗಿದ್ದರು... ಅವರ ಎಲೆ ಅಡಿಕೆ ಸಂಚಿ ಕೂಡ ಯಾವುದೇ ಸದ್ದು ಮಾಡುತ್ತಿರಲಿಲ್ಲ. ಹಾಗೆ ಒಂದು ರೀತಿಯಲ್ಲಿ ಕಾಲ ಗರ್ಭದಲ್ಲಿ ಹೊಕ್ಕು ಬಂದ ಅನುಭವ. 

ಗೋಪಾಲ ಚಿಕ್ಕಪ್ಪ ಹಾಗೆ ಎಲ್ಲರನ್ನು ಒಮ್ಮೆ ಎಚ್ಚರಿಸಿ ನೋಡಿ ಅನೇಕ ದಿನಗಳಿಂದ ಗೂಗಲ್ ಗ್ರೂಪ್ ನ ಕೋರವಂಗಲ ತಂಡ ನಿಷ್ಕ್ರಿಯವಾಗಿದೆ.. ಅದಕ್ಕೆ ಹುಟ್ಟು ಹಬ್ಬಕ್ಕೆ ಶುಭ ಹಾರಿಸಲು ಅಮ್ಮ ನೀನು ಹೇಗೂ ನಾಳೆ ನನ್ನ ಪ್ರೀತಿ ಪಾತ್ರಳಾದ ಮಗಳು ಕೃಷ್ಣವೇಣಿಯ ಮನೆಗೆ ಹೋಗುತ್ತಿದ್ದೀಯ ನನ್ನ ಶುಭಾಶಯಗಳನ್ನು ಈ ಕೆಳಕಂಡ ಮಕ್ಕಳಿಗೆ ತಿಳಿಸಿಬಿಡು. (ಆಶಾ ಮತ್ತು ಜ್ನಾನೇಶ ಅವರ ವಿವಾಹದಿನಕ್ಕೆ ಶುಭ ಕೋರಿದ್ದೆ ಕಡೆಯ ಪತ್ರವಾಗಿತ್ತು)

ವಿಜಯ  :ಕೋರವಂಗಲದ ಮೊದಲ ಮೊಮ್ಮಗ..ಯಾವುದೇ ಕೆಲಸವಿರಲಿ ಮುನ್ನುಗ್ಗುವ ಕಲೆ ಸಿದ್ಧಿಸಿರುವ ಇವನಿಗೆ, ಆಗಲ್ಲ ಎನ್ನುವ ಪದದ ಅರ್ಥವೇ ತಿಳಿದಿಲ್ಲ.. ಇವನಿಗೆ ಹುಟ್ಟು ಹಬ್ಬದ ಶುಭಾಶಯಗಳು (ತಡವಾಗಿ ತಲುಪಿಸುತ್ತಿರುವೆ)
ಕೃಷ್ಣವೇಣಿ : ಮೊದಲ ಮೊಮ್ಮಗಳು ಇವು.. ಛಲ, ಸಾಧನೆ.. ಆಹಾ ಇವಳ ಬಗ್ಗೆ ಹೇಳುವುದೇ ಒಂದು ಕುಶಿ.. ಜೀವನದ ಸೋಲಿನಿಂದ ಪಾಠವನ್ನು ಕಲಿಯಬೇಕು ಜೊತೆಯಲ್ಲಿ ಗೆಲುವಿನ ಕಡೆ ಹೆಜ್ಜೆ ಹೇಗೆ ಹಾಕಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ. ಹುಟ್ಟು ಹಬ್ಬದ ಶುಭಾಶಯಗಳು (ತಡವಾದ ಶುಭಾಶಯಗಳು)
ರಮ್ಯ : ತನ್ನ ಪಾಡಿಗೆ ತಾನು ಇದ್ದು, ನಗು ಮೊಗವನ್ನು ಧರಿಸಿರುವ, ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ರಮ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು (ತಡವಾಗಿ ತಲುಪಿರುವ ಶುಭಾಶಯಗಳು)
ಅಖಿಲ : ಓದಿನಲ್ಲಿ, ಸಾಧನೆಯಲ್ಲಿ ಯಶಸ್ಸಿನ ಹೆಜ್ಜೆ ಇಡುತ್ತಾ ತನ್ನ ಅಪ್ಪ ಅಮ್ಮನ ಮನವನ್ನು ಬೆಳಗುತ್ತಿರುವ ಈ ಕಂದನಿಗೆ ಹುಟ್ಟು ಹಬ್ಬದ ಶುಭಾಶಯಗಳು (ತಡವಾದ ಶುಭಾಶಯ ಪತ್ರ)
ರೂಪ ಅಕಾ ನಾಗಲಕ್ಷ್ಮಿ : ಈಕೆ ವೀರ ಮಾತೆ.. ಕುಮಾರ ಭರತನನ್ನು ಭಾರತ ಭೂಮಿಗೆ ತಂದಿರುವ ಇವರಿಗೆ ಭರತನ ಭವಿಷ್ಯಕ್ಕೆ ವರ್ಷ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಆ ಚೈತನ್ಯದ ಚಿಲುಮೆಯನ್ನು ಅತ್ಯುತ್ತಮವಾಗಿ ರೂಪಿಸುತ್ತಿರುವ ರೂಪ ಅಕಾ ನಾಗಲಕ್ಷ್ಮಿಯವರಿಗೆ ತಡವಾದ ಶುಭಾಷಯ ಹಾರೈಕೆಗಳು. 


ಅಮ್ಮ ನೀ ಹೋಗಿ ಬಾ.. ಹಾಗೆ ನನ್ನ ನೆನಪುಗಳನ್ನು ಕೋರವಂಗಲದ ಎಲ್ಲಾರಿಗೂ ತಲುಪಿಸಿಬಾ.. 

*************

ಅಜ್ಜಿಗೆ ಬಹಳ ಕುಶಿಯಾಯಿತು.. ಮೇಲಿನ ಪತ್ರವನ್ನು ನೋಡಿ.. ತನ್ನ ಚೀಲವನ್ನು ತೆಗೆದುಕೊಂಡು ಭುವಿಗೆ ಬರಲು ಹೊರಟೆ ಬಿಟ್ಟರು.. 

ಅಜ್ಜಿ ಬನ್ನಿ ಬನ್ನಿ ನಾವೆಲ್ಲಾ ನಿಮಗೋಸ್ಕರ ಕಾಯುತ್ತಿದ್ದೇವೆ.. !!!

Monday, January 5, 2015

ಕರ್ತಾರನ ಕಮ್ಮಟದಲ್ಲಿ ಪದಕಮ್ಮಟದ ಮೊದಲ ಹೆಜ್ಜೆ

ಭಕ್ತ ಕುಂಬಾರ ವಿಠಲನ ಬಳಿ ಮಾತಾಡುತ್ತಾ ಹೇಳುತ್ತಿದ್ದ.. 

"ಸ್ವಾಮೀ ಪಾಂಡುರಂಗ.. ಇದುವರೆಗೂ ನಾನು ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. ಮಣ್ಣಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದ ಕುಂಬಾರ ನಾನು... ಜೀವಿಗಳೆಂಬೋ ಬೊಂಬೆಯ ಮಾಡೋ ಬ್ರಹ್ಮನ ತಂದೆ ಕುಂಬಾರ ನೀನು ಎಂದು ಸದಾ ಹಾಡುತ್ತಿದ್ದೆ.. ಆದರೆ" 

"ಗೋರಾ.. ಏನು ಆದರೆ"

"ಇಂದು... ಕರ್ತಾರನ ಕಮ್ಮಟದಲ್ಲಿ ಒಂದು ವಿಭಿನ್ನ ಬೆಳವಣಿಗೆ ನಡೆಯಿತು.. "

ಬಭ್ರುವಾಹನದ ಚಿತ್ರಾಂಗಧಳ ಶೈಲಿಯಲ್ಲಿ "ಏನು ಗೋರಾ.. ಅದು.. ನನಗೂ ಸ್ವಲ್ಪ ಹೇಳು.. ನಿನ್ನ ಆನಂದದಲ್ಲಿ ನನಗೂ ಸ್ವಲ್ಪ ಪಾಲು ಕೊಡು"

"ಮುಖ ಪುಸ್ತಕದ ಗುಂಪಿನಲ್ಲಿ ಪದಾರ್ಥ ಚಿಂತಾಮಣಿ ತಂಡ ಆಯೋಜಿಸಿದ್ದ ಒಂದು ದಿನದ ಪದಕಮ್ಮಟ ಸಮಾರಂಭವನ್ನು  ನನಗೆ ಅನ್ನಿಸಿದ ರೀತಿಯಲ್ಲಿ ಹೇಳುತ್ತೇನೆ.. ಕೇಳುವೆಯ ಪ್ರಭು"

"ಗೋರಾ ಮಣ್ಣಿನಲ್ಲಿ ನೀ ಮಾಡುವ ಗೊಂಬೆಗಳನ್ನು ನೋಡಿ ಬೆರಗಾಗಿದ್ದೇನೆ.. ಇನ್ನು ಪದಗಳನ್ನು ಕಲಸಿ ನೀ ಮಾಡುವ ಪದಗೊಮ್ಮಟವನ್ನು ನಾ ಓದಲು ನೋಡಲು ಕಾಯುತ್ತೇನೆ.. ಶುರು ಮಾಡು ಭಕ್ತ"

"ಪದಾರ್ಥ ಚಿಂತಾಮಣಿಯ ಸುಂದರ ತಂಡದ ಮನದಲ್ಲಿ ರೂಪುಗೊಂಡ ಈ ಕಾರ್ಯಕ್ರಮ ಶುರುವಾಗಿದ್ದು ವಾಮನನ ತರಹ.. ಆದರೆ ನಿಂತದ್ದು ತ್ರಿವಿಕ್ರಮನ ರೂಪದಲ್ಲಿ"

"ಹನಿ ಹನಿಗೂಡಿದರೆ ಹಳ್ಳ ಎನ್ನುವ ಹಾಗೆ ಪ್ರತಿಯೊಬ್ಬರೂ ಸೇರಿಸಿ ಕೂಡಿಸಿ ಜೋಡಿಸಿಟ್ಟ ಪದಗಳ ಮೆಟ್ಟಿಲ ಮೇಲೆ ಶುರು ಆಗಿದ್ದು ಈ ಕಮ್ಮಟ. ಅನೇಕ ಸಹೃದಯರ ಜೊತೆಯಲ್ಲಿ ವಿಷ್ಣುವಿನ ಪತ್ನಿಯ ಕೃಪಾಕಟಾಕ್ಷ ಸೇರಿಕೊಂಡು ಝರಿಯಂತಿದ್ದ ಸಣ್ಣ ಎಳೆ.. ಹೊನಲಾಯಿತು. ನದಿಯಾಯಿತು..ಕಡಲಾಯಿತು"

"ಸುಮಾರು ತಿಂಗಳುಗಳ ಸತತ ಪರಿಶ್ರಮ.. ಜನವರಿ ನಾಲ್ಕನೇ ತಾರೀಕು ೨೦೧೫ ರ ಭಾನುವಾರದಂದು ಬಿ ಪಿ ವಾಡಿಯ ಸಭಾಂಗಣದಲ್ಲಿ ಬೆಳಿಗ್ಗೆ ಸುಮಾರು ಒಂಭತ್ತು ಘಂಟೆಯಿಂದ ಶುರುವಾಯಿತು. "

"ಶತಾಯು ಶ್ರೀ ಪ್ರೊ. ಜಿ ವೆಂಕಟಸುಬ್ಬಯ್ಯನವರ ಪರಿಚಯ ಎಲ್ಲರಿಗೂ ಇದ್ದೆ ಇದೆ. ವಯಸ್ಸಿನಲ್ಲಿ ಶತಕ ಹೊಡೆದಿದ್ದರೂ ನವ ಯುವಕರಂತೆ ಇರುವ ಅವರ ಸೊಗಸಾದ ಮನಸ್ಸು.. ಅವರನ್ನು ಎಲ್ಲರ ಮನೆ ಮನದಲ್ಲಿ ಕೂರುವಂತೆ ಮಾಡಿದೆ. ಅವರ ಅಮೃತ ಹಸ್ತದಲ್ಲಿ ಉದ್ಘಾಟನೆ ಕಂಡ ಈ ಸಮಾರಂಭ ಮುಂದೆ ನಡೆದಿದ್ದು ಗಜ ಮಾರ್ಗದಲ್ಲಿ."

"ಪ್ರೊ ಕರಿಮುದ್ದೀನ್, ಶ್ರೀ ವಸಂತ್ ಕುಮಾರ್ ಪೆರ್ಲ,  ಪ್ರೊ ಸುಧೀಂದ್ರ ಹಾಲ್ದೊಡ್ದೇರಿ, ಡಾ. ಎಂ ಏನ್ ಪಂಡಿತಾರಾಧ್ಯ, ಶ್ರೀ ಮಂಜುನಾಥ ಕೊಳ್ಳೇಗಾಲ ಇವರ ಜೊತೆಯಲ್ಲಿ ಪದಾರ್ಥ ಚಿಂತಾಮಣಿಯ ಅನೇಕ ಬಹುಮುಖ ಪ್ರತಿಭೆಯ ಸದಸ್ಯರು ಸೇರಿ 
ನಡೆಸಿದ ಈ ಕಾರ್ಯಕ್ರಮ ಸುಂದರ ಅತಿ ಸುಂದರವಾಗಿತ್ತು"

"ಅಲ್ಲಿನ ಸಡಗರ ನೋಡಬೇಕಿತ್ತು.. ಪ್ರತಿಯೊಬ್ಬರಲ್ಲೂ ಹಬ್ಬದ ಸಡಗರ.. ತಳಿರು ತೋರಣಗಳನ್ನು ತಮ್ಮ ಹೃದಯದಲ್ಲಿ ಕಟ್ಟಿಕೊಂಡು ಹಸಿರು ಮನಸ್ಸಿನಿಂದ ನಿರ್ಮಲ ನಗೆಯನ್ನು ಹೊತ್ತು ಓಡಾಡುತ್ತಿದ್ದ ರೀತಿಯನ್ನು ನೋಡಿದಾಗ ನನಗೆ ಅಚ್ಚರಿಯಾಗುತ್ತಿತ್ತು. ಅರೆ ಭೂತಾಯಿ ಕೊಡುವ ಯಾವುದೇ ಮಣ್ಣಿನಿಂದ ಗೊಂಬೆಯನ್ನು ಮಾಡುವ ನಾನು ಕೆಲವೊಮ್ಮೊ ಒಂದೇ ತರಹದ  ಮಡಿಕೆ, ಕುಡಿಕೆಗಳನ್ನು ಮಾಡಲು ಕೊಂಚ ಕಷ್ಟವಾಗುತ್ತದೆ. ಆದರೆ ಇಲ್ಲಿ ಪ್ರಪಂಚದ, ದೇಶದ, ರಾಜ್ಯದ, ನಗರದ ನಾನಾ ಮೂಲೆಯಿಂದ ಬಂದ ಈ ಸಹೃದಯದ ಮನಸ್ಕರು ಸಮಾನ ಮನೋಭಾವನೆಯಿಂದ ಕೂಡಿಕೊಂಡು ಸಮುದ್ರ ಮಂಥನ ಮಾಡಿ ಅಮೃತ ಕಡೆದಂತೆ ಒಂದು ಸುಂದರ ಸಮಾರಂಭವನ್ನು ಆಯೋಜಿಸಿ ಯಶಸ್ವೀ ಯಾಗಿದ್ದಾರೆ"

"ಪಾಂಡುರಂಗ ನನ್ನಲ್ಲಿರುವ ಪದ ಸಂಪತ್ತು ಖಾಲಿಯಾಗುತ್ತಿದೆ.. ಪದಗಳಿಗಾಗಿ ಪದಕಮ್ಮಟದ ಸಮಿತಿಯನ್ನೆ ಕೇಳಿ ಕಡ ತೆಗೆದುಕೊಳ್ಳಬೇಕು ಒಂದಷ್ಟು ಪದಗಳನ್ನು ಕೊಡಿ ಈ ಸಮಾರಂಭವನ್ನು ಬಣ್ಣಿಸಲು ಎಂದು"

"ಅರೆ ಗೋರಾ ಇದೇನು ಹೀಗೆ ಹೇಳಿಬಿಟ್ಟೆ.. ಈಗ ನಾ ಏನು ಮಾಡಲಿ.. ನನಗೆ ಈ ಸಮಾರಂಭದ ಬಗ್ಗೆ ಮಾಹಿತಿ ಬೇಕು.. ಹೇಗಾದರೂ ಕೊಡು.."

"ಪಾಂಡುರಂಗ.. ಸ್ವಲ್ಪ ತಾಳ್ಮೆ ಇರಲಿ.. ಪದಗಳ ಬದಲಾಗಿ ಚಿತ್ರಗಳ ಮೂಲಕ ಈ ಸಮಾರಂಭವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತೇನೆ.. ಈ ಕೆಳಗಿನ ಚಿತ್ರಗಳನ್ನು ನೋಡುತ್ತಾ ಇರು ಹಾಗೆ ಅದಕ್ಕೆ ಇರುವ ಅಡಿ ಟಿಪ್ಪಣಿಯನ್ನು ನೋಡುತ್ತಿರು... ಆಗ ತಿಳಿಯುತ್ತದೆ.."

"ಸರಿ ಗೋರಾ.. ಚಿತ್ರವಾರ್ತೆಯನ್ನು ಶುರು ಮಾಡು" 

"ಇಲ್ಲಿ ನೋಡು ರಂಗಾ ಬಯಾಸ್ಕೋಪಿನಲ್ಲಿ.. ಚಿತ್ರವಾರ್ತೆ ಶುರು.. "


ವಿಧ್ಯೆಯಲ್ಲಿ ವಿನಯವಿದೆ. .. ಮೊದಲ ಹೆಜ್ಜೆ ಎಂಬ ವಿನಯವಂತಿಗೆ ತೋರಿದ ಪಟ.. 

ಸುಂದರವಾದ ಆಹ್ವಾನ ಪತ್ರಿಕೆ



ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಅಷ್ಟೇ ಅಚ್ಚುಕಟ್ಟಾದ ವಿವರಗಳು..


ಕಾರ್ಯಕ್ರಮದ ವಿವರಗಳು 

ಪದಗಳ ಬ್ರಹ್ಮರಿಂದ ದೀಪವನ್ನು ಬೆಳಗುವಿಕೆ.. (ಚಿತ್ರಕೃಪೆ - ಪ್ರಕಾಶ್ ಹೆಗಡೆ)

ಬಹುಮುಖ ಪ್ರತಿಭೆ ಆಜಾದ್ ಸರ್ - (ಚಿತ್ರಕೃಪೆ - ಪ್ರಕಾಶ್ ಹೆಗಡೆ)

ಸುಂದರ ಮನದ ಸುಗಣಕ್ಕಯ್ಯ  - (ಚಿತ್ರಕೃಪೆ - ಪ್ರಕಾಶ್ ಹೆಗಡೆ)

ಪರಿಶ್ರಮ ಹೊರುವ ಉಷಾ ಉಮೇಶ್ - (ಚಿತ್ರಕೃಪೆ - ಪ್ರಕಾಶ್ ಹೆಗಡೆ)
ಉತ್ಸಾಹಕ್ಕೆ ಚೈತನ್ಯಕ್ಕೆ ಇನ್ನೊಂದು ಹೆಸರು ರೂಪ ಸತೀಶ್  - (ಚಿತ್ರಕೃಪೆ - ಪ್ರಕಾಶ್ ಹೆಗಡೆ

ಔಟ್ಪುಟ್ಬ ತೋರಿಸುವ ಚಿನ್ಮಯ್ ಭಟ್ - (ಚಿತ್ರಕೃಪೆ - ಪ್ರಕಾಶ್ ಹೆಗಡೆ)
ದೈತ್ಯ ಪ್ರತಿಭೆಗಳು ವೇದಿಕೆಯಲ್ಲಿ  - (ಚಿತ್ರಕೃಪೆ - ಪ್ರಕಾಶ್ ಹೆಗಡೆ)

ನೆನಪಿನ ಸಂಚಿಕೆ ಅನಾವರಣಗೊಂಡ ಮಧುರ ಕ್ಷಣ  - (ಚಿತ್ರಕೃಪೆ - ಪ್ರಕಾಶ್ ಹೆಗಡೆ)

ಕಿಕ್ಕಿರಿದು ನೆರೆದಿದ್ದ ಆಸಕ್ತ ಪ್ರತಿಭೆಗಳು - (ಚಿತ್ರಕೃಪೆ - ಪ್ರಕಾಶ್ ಹೆಗಡೆ)

ಆಶೀರ್ವಚನ ನೀಡಿದ ಪ್ರೊ ಜಿ ವೆಂಕಟಸುಬ್ಬಯ್ಯ ಗುರುಗಳು - (ಚಿತ್ರಕೃಪೆ - ಪ್ರಕಾಶ್ ಹೆಗಡೆ)

ವಿಶಾಲ ಪ್ರತಿಭೆ - ಪ್ರೊ ಕರಿಮುದ್ದೀನ್ - ಮೈಸೂರಿನಿಂದ
ಈ ಕಾರ್ಯಕ್ರಮಕ್ಕೆ ಬಂದರು - (ಚಿ
ತ್ರಕೃಪೆ - ಪ್ರಕಾಶ್ ಹೆಗಡೆ)

ಸೂಪರ್ ಗುರುಗಳು ಶ್ರೀ ಮಂಜುನಾಥ ಕೊಳ್ಳೇಗಾಲ - (ಚಿತ್ರಕೃಪೆ - ಪ್ರಕಾಶ್ ಹೆಗಡೆ)

ಪದಗಳ ಜಾದುಗಾರರು - ಪ್ರೊ. ಅ ರಾ ಮಿತ್ರ 

ಅಧ್ಯಕ್ಷರು - ಪ್ರೊ. ವಸಂತ್ ಕುಮಾರ್ ಪೆರ್ಲ

ಸಿದ್ಧವಾದ ವೇದಿಕೆ 

ಪದವಷ್ಟೇ ಅಲ್ಲ ಚೆನ್ನಾದ ಪದಾರ್ಥ ಹಾಕಿ ಮಾಡಿದ ಭೂರಿ ಭೋಜನವೂ ಇತ್ತು

ಇಬ್ಬರು ದೈತ್ಯ ಪ್ರತಿಭೆಗಳು 

ಪದಾರ್ಥ ಚಿಂತಾಮಣಿಯ ಮೊದಲ ಎರಡು ಇಟ್ಟಿಗೆಗಳು 

ಬಂದವರು ನೂರಾರು.. ಚಿತ್ರಕ್ಕೆ ಸಿಕ್ಕವರು ಈ ಪಾಟಿ ಆಸಕ್ತರು

ಮಕ್ಕಳ ಮೊಗದಲ್ಲಿ ಸಂತಸ ತಂದರೆ ಆ ಕಾರ್ಯಕ್ರಮದ
ಯಶಸ್ಸು ಕಟ್ಟಿಟ್ಟ ಬುತ್ತಿ.. ಅದನ್ನು ಪ್ರತಿಪಾದಿಸಿದ ಪುಟಾಣಿ

ಮಕ್ಕಳ ಮೊಗದಲ್ಲಿ ಸಂತಸ ತಂದರೆ ಆ ಕಾರ್ಯಕ್ರಮದ 
ಯಶಸ್ಸು ಕಟ್ಟಿಟ್ಟ ಬುತ್ತಿ.. ಅದನ್ನು ಪ್ರತಿಪಾದಿಸಿದ ಪುಟಾಣಿ

ಮೊಗ ಎಂದರೆ ಪದ.. ಪದ ಎಂದರೆ ಕಮ್ಮಟ
ಎನ್ನುವಷ್ಟು ಯಶಸ್ಸು ಈ ಕಾರ್ಯಕ್ರಮಕ್ಕೆ ಸಿಕ್ಕಿತು 

" ಗೋರಾ ಏನಪ್ಪಾ ನಿನ್ನ ಲೀಲೆ.. ಎಷ್ಟು ಸುಂದರವಾಗಿ ಇಡಿ ಕಾರ್ಯಕ್ರಮವನ್ನು ಬಣ್ಣಿಸಿದೆ.. ತುಂಬಾ ಸಂತೋಷ ಆಯಿತು.. ನನ್ನ ಅಭಯಪ್ರದ ಹಸ್ತ ಪದಾರ್ಥ ಚಿಂತಾಮಣಿಯ ಪ್ರತಿ ಸದಸ್ಯರ ಮೇಲೆ ಹಾಗೂ ಅವರು ಇಡುವ ಮುಂದಿನ ಹೆಜ್ಜೆಗಳು ಯಶಸ್ವಿಯಾದ ಮೈಲುಗಲ್ಲಾಗಲಿ ಎಂದು ವರ ನೀಡುವೆ.. "

"ರಂಗಾ ಪಾಂಡುರಂಗ ಕರುಣಾಂತರಂಗ.. ಕೊಡುವವನು ನೀನೆ ತೆಗೆದುಕೊಳ್ಳುವವನು ನೀನೆ.. ಕೊಟ್ಟು ಉದ್ದರಿಸುವವನು ನೀನೆ ಕೃತಾರ್ಥನಾದೆ ತಂದೆ.. ನಿನ್ನ ಅಭಯ ಹಸ್ತ ನಮ್ಮ ಈ ಕಮ್ಮಟದ ಪ್ರತಿಯೊಬ್ಬರ ಮೇಲೂ ಪ್ರಕಾಶಮಾನವಾಗಿ ಬೆಳಗಲಿ."

ಸರ್ವೇ ಜನೋ ಸುಖಿನೋ ಭವ೦ತು!!!!

ಕನ್ನಡ ಬೆಳೆಯಲಿ .... ಮೊಳಗಲಿ... ಬೆಳಗಲಿ.. !!!!