Saturday, August 25, 2012

ಐದು ಮುತ್ತುಗಳು...ಆಯ್ದುಕೊಂಡು ಹೋಗೋಣ ಬನ್ನಿ..

ವಾಡಿಯಾ ಸಭಾಂಗಣ...ಸಜ್ಜಾಗುತ್ತ ನಿಂತಿತ್ತು...ಮೈಕ್ ಸೆಟ್, ಕುರ್ಚಿಗಳು, ಪರದೆಗಳು, ಅದರ ಮೇಲೆ ಅಂಟಿಸಿದ್ದ ಪಟ..ಎಲ್ಲವು  ಸುಮ್ಮನೆ ತಮ್ಮಲ್ಲೇ ಮಾತಾಡುತ್ತಿದ್ದವು...
ತೆರೆಗಳು ಅಪ್ಪಳಿಸಲು ಸಿದ್ಧವಾದ ಅಂಗಣ
ಮೈಕ್ ಒನ್ ಟು, ಒನ್ ಟು ಎಂದು ಹೇಳಿ ಗಂಟಲು ಸರಿ ಮಾಡಿಕೊಂಡಿತು....ಕುರ್ಚಿಗಳು ಕೈ ಕಾಲು ಸಡಿಲ ಮಾಡಿಕೊಂಡು..ಶಿಸ್ತಿನ ಸಿಪಾಯಿಗಳ ಹಾಗೆ ನಿಂತವು...ಪರದೆ ತನ್ನ ನೆರಿಗೆಯನ್ನು ಒಮ್ಮೆ ಸರಿ ಮಾಡಿಕೊಂಡಿತು..ಲೈಟ್ ಗಳು ತಮ್ಮ ಹಲ್ಲನ್ನು ಒಮ್ಮೆ ತಿಕ್ಕಿ ತೀಡಿದವು..ಫಳ ಫಳನೆ ಹೊಳೆಯಲಾರಂಭಿಸಿತು ....ಶುರುವಾಯ್ತಪ್ಪ ಹಬ್ಬ...ಅಂದವು...ಎಲ್ಲರು ಒಮ್ಮೆಲೇ...
ತಾರೆಗಳ ನಿರೀಕ್ಷೆಯಲ್ಲಿ 

ತೆರೆಗಳು ಬರುವ ಮುಂಚೆ...ತಾರೆಗಳ ಕಾಯುವಿಕೆಯಲ್ಲಿ 

ಸಂಭ್ರಮದ ದಿನ..ಎಂತ ಮಹನೀಯರು ನನ್ನ ಮುತ್ತುತ್ತಾರೆ...
ಒಬ್ಬರಾಗಿ ಒಬ್ಬರು ನಲಿಯುತ ಹೃದಯ ಹಾಡನು ಹಾಡಿದೆ ಎಂದು ಹೇಳುತ ಬಂದರು..
ಕೆಲವರು..ಅಣ್ಣ, ತಮ್ಮಯ್ಯ, ಅಣ್ಣಯ್ಯ, ಗೆಳೆಯ, ಅಕ್ಕಯ್ಯ, ತಂಗ್ಯವ್ವ ..ಬುದ್ಧಿ, ಗುರುಗಳೇ, ಅತ್ತಿಗೆ..ಹೀಗೆ ದೊಡ್ಡವರು, ಚಿಕ್ಕವರು ತಮಗೆ ತಿಳಿದ, ಗೊತ್ತಾದ ಭಾಂದವ್ಯದ ಕರೆಯನ್ನು ತೋರುತ್ತ...ಒಬ್ಬರಿಗೊಬ್ಬರು ತಮ್ಮ ಗೆಳೆತನದ ಸಂಕೋಲೆಯಲ್ಲಿ ಬಂಧಿತರಾಗುತಿದ್ದ ದೃಶ್ಯ ನೋಡಿ..ಮೇಲಿದ್ದ ಮೇಘರಾಜ..ಒಮ್ಮೆ ತನ್ನ ಕಣ್ಣನ್ನು ಒರೆಸಿಕೊಂಡ...ಮತ್ತು .."ಮೋಡದ ಒಳಗೆ ಹನಿಗಳ ಬಳಗ..ಕೂಡ ಒಂಟಿ ಕಾಲಲಿ ಕಾದು ನಿಂತೆಹೆ ಭೂಮಿಗೆ ಬರಲು.....ಐದು ಮುತ್ತುಗಳನ್ನ ಹೆಕ್ಕಿ ತರುವ ಸಭಾಂಗಣದ  ಕಾರ್ಯಕ್ರಮಕ್ಕೆ ಯಾವುದೇ ಅಡೆ ತಡೆ ಮಾಡುವುದಿಲ್ಲ " ಎಂದು ಶಪಥ ಮಾಡಿದ...

ನೋಡಿ ಮುಂದೆ ನೀವೇ..ಅಮೋಘ ಸಂಕಲನದ ಮಮತೆಯ ಮಡಿಲಲ್ಲಿ ಮಿಂದು ತೇಲುತಿರುವ ನಾವಿಕರನ್ನ...ಬ್ಲಾಗ್ ಲೋಕದ ಮಾಣಿಕ್ಯಗಳನ್ನ...ಒಬ್ಬರ ಹೆಸರು ಉಳಿದರೆ..ಇನ್ನೊಂದು ತೆರೆಗೆ ಅಪ್ಪಳಿಸುತ್ತದೆ..ಹೀಗೆ ಸಾಗಿತ್ತು ಸ್ನೇಹದ ಕಲರವ...ನೀವೇ ನೋಡಿ ಆನಂದಿಸಿ...
ಹಿರಿಯರ ಆಶೀರ್ವಾದ ಸದಾ ಕಾಯುವ ನೆರಳು 

ಬಂದರು ಕವಿಗಳ ರಾಜ ಶ್ರೀ ಬಿ. ಆರ್. ಲಕ್ಷ್ಮಣರಾಯರು

ಪ್ರಕಾಶ ಮಾನವಾದ ಲಕ್ಷ್ಮಣ ರಾಯರು ನಾನು ಅಜಾದ್ ಎಂದರು

ಬ್ಲಾಗ್ ಲೋಕದ ತಾರೆಗಳು "ಬದರಿ, ಬಾಲು, ಪ್ರಕಾಶ್, ಉಮೇಶ್, ದಿನಕರ್ ಮುಂತಾದ ಅನೇಕ ನಕ್ಷತ್ರಗಳು 

ಸುಂದರ ಕಥಾ ನಾಯಕಿ...!!!
ಸುಂದರ ಬ್ಲಾಗ್ ಲೋಕದ ಪರಿವಾರ!!
ಉಮೇಶ್ ದೇಸಾಯಿ ಮತ್ತು ಅಭಿಮಾನಿಗಳ ಬಳಗ...

Wednesday, August 22, 2012

ಒಂದು ಮಾತು...ಹೇ ನನಗೊತ್ತು...ಅದಲ್ಲ..


ಧರ್ಮಸೆರೆ ಅದ್ಭುತ ಸಿನಿಮಾ..ಹ..ಪುಟ್ಟಣ್ಣ ಅವರ ಸಿನಿಮಾಗಳೇ ಹಾಗೆ..
ಆ ಚಿತ್ರದಲ್ಲಿ ಒಂದು ಹಾಡು.."
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ...
ಅತಿ ನವ್ಯ ರಸ ಕಾವ್ಯ..ಮಧುರ ಮಧುರ ಮಧುರ..."

ಹೆಚ್ಚು ಕಡಿಮೆ..ಸಂಭಾಷಣೆಯನ್ನೇ ಕೇಂದ್ರ ಬಿಂದು ಮಾಡಿಕೊಂಡು ರಚಿಸಿರುವ ಹಾಡು ಅದು

ಹುಣುಸೂರು ಕೃಷ್ಣಮೂರ್ತಿ, ಕು.ರಾ. ಸೀತಾರಾಮಶಾಸ್ತ್ರಿ, ಚಿ. ಸದಾಶಿವಯ್ಯ, ಚಿ.ಉದಯಶಂಕರ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಪುಟ್ಟಣ್ಣ ಕಣಗಾಲ್, ಗೀತಪ್ರಿಯ, ಆರ್. ಎನ್. ಕುಟುಂಬ (ನಾಗೇಂದ್ರ ರಾಯರು, ಜಯಗೋಪಾಲ್), ಜಿ.ವಿ. ಅಯ್ಯರ್, ನನ್ನ ಅಚ್ಚುಮೆಚ್ಚಿನ ಬಾಲಣ್ಣ (ಕೆಲವು ಚಿತ್ರಗಳಿಗೆ) ಹಾಗೆ ಇನ್ನು ಎಷ್ಟು ಹೆಸರಿಸಲಾಗದ ಮಹನೀಯರು ಬರೆದ ಸಂಭಾಷಣೆಗಳು ಇನ್ನು ಮೈ ನವಿರೇಳಿಸುತ್ತದೆ..ಹಾಗೆ ಮೈ ಪುಳಕಗೊಲಿಸುತ್ತದೆ....ಅಂತಹವರ ಸಂಭಾಷಣೆ ಕೇಳಿ, ನೋಡಿ ಬೆಳೆದ ಈ ಕಿವಿಗಳು, ಕಣ್ಣುಗಳು ಇತ್ತೀಚಿನ ಚಲನ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಬರುವ ಸಂಭಾಷಣೆಗಳನ್ನು ನೋಡಿ ಕೇಳಿ ಕಿವಿಗಳು ಪಾವನವಾದವು....

ಕೆಲವು ಉದಾಹರಣೆಗಳು ನಿಮಗಾಗಿ...
ಮುಕ್ತ ಮುಕ್ತ : 
ಚಿದಾನಂದನನ್ನು  ನೋಡಲು ಬರುವ ಡಾಕ್ಟರ್ಗೆ ಶಾರದಮ್ಮ ಕೇಳುವ ಪ್ರಶ್ನೆ..
"ಡಾಕ್ಟ್ರೆ ನಿಮಗೆ ಕಾಫಿ ನ ಅಥವಾ ಟೀ ನ .." 
ಆಗ ಡಾಕ್ಟ್ರು....  
".... ಕುಡಿಯೋಕಾ...?...ಬೇಡ ಬೇಡ"
(ನಗು ಬಂತು...ಇದುವರೆಗೂ ಮನುಜರು ನೀರಲ್ಲಿ, ದೇವರಿಗೆ ಪಂಚಾಮೃತದಲ್ಲಿ ಸ್ನಾನ/ಅಭಿಷೇಕ ಇರುತ್ತೆ...ಇನ್ನು ಕಾಫಿಯಲ್ಲಿ ದೇವರೇ...?)

ನನ್ನ ಜೀವ ನೀನು: 
ತಲೆ ಹರಟೆ ಭೂಮಿಕ ಪಾತ್ರಧಾರಿನ ಸೂರ್ಯ ಎನ್ನುವ ಅಷ್ಟೇ ತಲೆಹರಟೆ ಪಾತ್ರಧಾರಿ ಶೀಲ ಭಂಗ ಮಾಡಿರುತ್ತಾನೆ...ಆ ನೋವಿನಲ್ಲಿ ಭೂಮಿಕ ಅವಳ ತಾತ ಎನ್ನುವ ಪಾತ್ರಧಾರಿಯನ್ನ ಕೇಳುವ ಮಾತು..."ತಾತ ನನಗೆ ಜೀವನ ಸಾಕಾಗಿ ಹೋಗಿದೆ...ಒಂದು ಚೂರು ವಿಷ ತಂದು ಕೊಡಿ ತಾತ?
(ನಗು ಬಂತು...ನೆಂಟರ ಮನೆಗೆ ಹೋಗಿ..ಒಂದು ಲೋಟ ಕಾಫಿ ಕೊಡಿ ಎಂದು ಕೇಳಿದ ಹಾಗೆ)

ಶುಭಮಂಗಳ: ಮಾಯಿ ಪಾತ್ರ ಸತ್ತರೆ ಸಾಕು ಅಂತ ಎಲ್ಲರು ಕೈ ಮುಗಿಯುತ್ತ ಇರ್ತಾರೆ..ಒಂದು ದಿನ ಮಾಯಿ ಮಾಯವಾಗಿ ಬಿಡುತ್ತಾಳೆ..ಆಗ ಕ್ರಾಕ್ ಪಾತ್ರ ದೇವಕಿ ತನಗೆ ತಾನೇ ಹೇಳಿಕೊಳ್ಳುವ ಮಾತು "ಎಲ್ಲಿ ಹೋದರು ಮಾಯಿ, ಹೆಂಗೆ ಇರುತ್ತಾರೋ, ಮನೇಲಿ ಏನು ತೊಂದ್ರೆ ಇರಲಿಲ್ಲ...ಆದರು ಎಲ್ಲಿಗೆ ಹೋದರು..
ಇನ್ನು ಮಾಯಿ ಹೋದ ನಂತರ..ಎಲ್ಲರು ಒಬ್ಬೊಬ್ಬರೇ ಮಾತಾಡುವುದು "ಮಾಯಿ ಎಲ್ಲಿ ಹೋದರು..ಹೋಗುವಾಗ ನಮಗೆ ಹೇಳಬಾರದಿತ್ತೆ..ನಮಗೆ ಏಕೆ ಹೇಳಲಿಲ್ಲ..ಮೊಬೈಲ್ಗಾದರೂ ಫೋನ್ ಮಾಡಿ ನೋಡಿ..."
(ಇದೆ ಮಾತನ್ನು ಶತಕ ಅನ್ನುವ ರೀತಿ ನೂರಾರು ಸಾರಿ ಹೇಳುವ ಪರಿ..ನಗೆ ತರಿಸುತ್ತದೆ) 

ಸುವರ್ಣ ವಾಹಿವಾಹಿನಿಯಲ್ಲಿ ಬರುತಿದ್ದ ಶ್ರೀ ಗುರುರಾಯರ ಧಾರಾವಾಹಿಯಲ್ಲಿ ಕೆಲವು ಪಾತ್ರಗಳು ಆಡುತಿದ್ದ ಗ್ರಾಂಥಿಕ ಸಂಭಾಷಣೆಗಳು..ಕಿವಿಗೆ ಆಹಾ.....ಮಾತೆ ಇಲ್ಲ)
ನನ್ನ ಮಗಳು ಒಂದು ಸಂಭಾಷಣೆ ಕೇಳಿ ನಗಲು ಶುರು ಮಾಡಿದ್ದಳು..ಗುರು ರಾಯರ ಪಾತ್ರದ ಪೂರ್ವಾಶ್ರಮದಲ್ಲಿ ಪತ್ನಿ ಪಾತ್ರ ಸರಸ್ವತಿ ಹೇಳುವ ಮಾತು..."ಇಂದೇಕೋ ಸ್ವಾಮಿ ಎಷ್ಟು ನೋಡಿದರು ಕಣ್ಣುಗಳು ತುಂಬುತ್ತಲೇ ಇಲ್ಲ..." ಅಷ್ಟರಲ್ಲಿ ನನ್ನ ಮಗಳು ಹೇಳಿದಳು "ಅಪ್ಪ ತುಂಬ್ತಾ ಇಲ್ಲ ಅಂತ ಹೇಳ್ತಾ ಇದ್ದಾರಲ್ಲ ಮೋಟೊರ್ ಹಾಕಬಹುದಲ್ವ (ನೀರೆತ್ತುವ ಪಂಪ್ ಮೋಟರ್ ತರಹ ಅಂದು ಕೊಂಡಿದ್ದಳು)  

ಮುಂಗಾರು ಮಳೆ : ಏನಮ್ಮ ಇಷ್ಟು ಖುಷಿಯಾಗಿದ್ದೀಯ ಅಪ್ಪ ಏನಾದರು ಡೈವುರ್ಸ್ ಕೊಡ್ತೀನಿ ಅಂದ್ರ...(ಮಗ ತನ್ನ ಅಮ್ಮನಿಗೆ ಕೇಳುವ ಪ್ರಶ್ನೆ - ದೇವರೇ ಭಟ್ರನ್ನ ಕಾಪಾಡಿ)

ಕರಿ ಚಿರತೆ : ಒಂದು ಹಾಡಿನ ಸಾಲು...ಮನೆ ಅಂದ್ರೆ ಬಾತ್ ರೂಂ ಇರುತ್ತೆ..ನನ್ನ ಹೆಸರು ಕರಿ ಚಿರತೆ...(ಯಪ್ಪಾ...ಎಲ್ಲಿಂದ ಎಲ್ಲಿಗೆ)

ಅದ್ದೂರಿ : ಒಂದು ಹಾಡಿನ ಸಾಲು ...ನೀವು ನಗಲೇ ಬೇಕು ಒಂದು ಸಾರಿ...ಇದು ಅಚ್ಚು ರಚ್ಹು ಲವ್ ಸ್ಟೋರಿ..(ಸಂಬಂಧ...ದೇವರಿಗೆ ಗೊತ್ತು)

ಇವೆಲ್ಲ ಕೆಲವು ಉದಾಹರಣೆಗಳು...ಚಿಂತನೆಗೆ ಆಹಾರ ಕೊಡತಕ್ಕ ಕತೆಗಳು, ಸಂಭಾಷಣೆಗಳು, ಗೀತೆಗಳು ಎಲ್ಲಿವೆ ಎಂದು ಹುಡುಕಬೇಕು...ದೋಸೆ ಹಿಟ್ಟಲ್ಲಿ ಇಡ್ಲಿ ಮಾಡಿ, ಇಡ್ಲಿ ಹಿಟ್ಟಲ್ಲಿ ವಡೆ ಮಾಡಿ..ಹೀಗೆ ಒಂದಕೊಂದು ಅರ್ಥ ಇಲ್ಲದ ಮಾತುಗಳು...ಬರೆಯುವ ಪಿತಮಹರಿಗೆ ತಮ್ಮ ಮಕ್ಕಳ, ಮುಂದಿನ ಪೀಳಿಗೆ ಬಗ್ಗೆ ಯೋಚನೆ ಇಲ್ಲವ ಅಂತ ವಾಕರಿಕೆ ಬರುತ್ತೆ...

ನಮ್ಮ ತಾತ, ಅಪ್ಪ ಅಮ್ಮ...ಇವರೆಲ್ಲ ಒಂದು ಒಳ್ಳೆಯ ಪ್ರಪಂಚವನ್ನ ನಮಗೆ ಬಿಟ್ಟಿದ್ದಾರೆ..ಆದ್ರೆ ನಾವು ನಮ್ಮ ಮಕ್ಕಳಿಗೆ ಬಿಟ್ಟು ಹೋಗುವ ಪ್ರಪಂಚ...ನೆನಸಿಕೊಂಡರೆ.........ಬೇಡ ಬಿಡಿ..

ಕಾಲಾಯ ತಸ್ಮೈ ನಮಃ...

Thursday, August 9, 2012

ಕೃಷ್ಣ...ಕೃಷ್ಣ...ಕೃಷ್ಣ...ಶ್ರೀಕೃಷ್ಣ ಜನ್ಮಾಷ್ಟಮಿ...


ಕೃಷ್ಣ...ಕೃಷ್ಣ...ಕೃಷ್ಣ...

ಹೆಸರೇ ಒಂದು ಶಕ್ತಿ ಸಂಚಲನ ತರುವ ಹುಮ್ಮಸ್ಸು ಕೊಡುತ್ತೆ..ಕೃಷ್ಣನಂತ ಇನ್ನೊಬ್ಬ ಮೇಧಾವಿ ನಮ್ಮ ಇತಿಹಾಸದಲ್ಲಿ ದೊರಕದು..ಮಹಾನ್ ಜ್ಞಾನಿ ಚಾಣಕ್ಯ ಕೃಷ್ಣನ ಇನ್ನೊಂದು ನೆರಳು ಅನ್ನಬಹುದು..ಇದನ್ನ ಬಿಟ್ಟರೆ ಬೇರೆಯೆಲ್ಲು ಕಾಣ ಸಿಗೋಲ್ಲ..ಅಂಥಹ ಅದ್ಭುತ ವ್ಯಕ್ತಿತ್ವ...

ಬಾಲ್ಯದಿಂದಲೂ ಇಷ್ಟವಾಗುತಿದ್ದ ಇನ್ನೊಂದು ಚಿತ್ರ...ಕೃಷ್ಣ, ಮತ್ತು ಅರ್ಜುನ ರಥಾರೂಢರಾಗಿ ಕುರುಕ್ಷೇತ್ರದಲ್ಲಿ ಹರಿದಾಡುತಿರುವ ದೃಶ್ಯ..

ಈ ಚಿತ್ರವನ್ನ  ಗಮನಿಸಿದರೆ...  ಇದರಲ್ಲಿ ಪ್ರತಿಯೊಂದು ಕ್ರೀಯಾಶೀಲವಾಗಿದೆ..ಯಾವುದು ನಿಶ್ಚಲವಾಗಿಲ್ಲ..
ಧ್ವಜ ಲಾಂಛನದಲ್ಲಿ ಹನುಮಂತ ಬೆಟ್ಟ ಹೊತ್ತು ಸಾಗುತಿರುವುದು...
ರಥದ ಪರದೆ ಗಾಳಿಯಲ್ಲಿ ಹಾರುತಿದೆ..
ಶ್ವೇತಾಶ್ವಗಳು ಓಡುತ್ತಿವೆ..
ಅರ್ಜುನ ಬಾಣ ಹೂಡಲು ಸಿದ್ದನಾಗುತಿದ್ದಾನೆ..
ಸುತ್ತ ಮುತ್ತಲ ಸೈನಿಕರು ಯುದ್ಧದಲ್ಲಿ ಹೋರಾಡುತಿದ್ದಾರೆ
ಇವಕ್ಕೆಲ್ಲ ಕಳಶಪ್ರಾಯ... ಶ್ರೀ ಕೃಷ್ಣ ರಥವನ್ನು  ಮಂದಹಾಸದಿಂದ ಮುನ್ನಡೆಸುತಿದ್ದಾನೆ..

ಜೀವನದಲ್ಲಿ ಸಕ್ರಿಯರಾಗಿರಬೇಕು...ಕುಶಲತೆ, ಕ್ಷಮತೆ ಜಡವಾಗಿದ್ದಾಗ ಸಿಗುವುದಿಲ್ಲ..
ಹೊಸ ಹೊಸ ಅವಿಷ್ಕಾರ, ಚಿಂತನೆಗಳು ನಾಗಾಲೋಟದಿಂದ ನಮ್ಮಿಂದ ಹೊರಗೆ ಅಶ್ವಗಳ ರೂಪದಲ್ಲಿ ಹೊರ ಹೊಮ್ಮಿ, ಅರ್ಜುನನ ಬಾಣದ ಗುರಿಯ ತೀವ್ರತೆಯಲ್ಲಿ ,  ಹನುಮಂತನಲ್ಲಿ ಸುಪ್ತವಾಗಿ ಅಡಗಿದ ಸಾಮರ್ಥ್ಯದಂತೆ, ಶ್ರೀ ಕೃಷ್ಣನಂತ ಗುರು  ಹಿರಿಯರ ಮಾರ್ಗದರ್ಶನದಲ್ಲಿ ಸಾಗಿದರೆ ಜೀವನದ ಗುರಿ ಸದಾ ಹಣ್ಣಿನ ಮರದಲ್ಲಿ ದೊರಕುವ ರುಚಿಯಾದ ಹಣ್ಣಿನಷ್ಟೇ ಸ್ವಾದಿಷ್ಟ

ಶ್ರೀ ಕೃಷ್ಣ ಜೀವನ, ಸಂದೇಶ, ಕಾರ್ಯ ಸಾಧಿಸುವ ಪರಿ, ಚಾಣಕ್ಷತನ, ಬುದ್ದಿಮತ್ತೆ, ಸಮಯ ಪ್ರಜ್ಞೆ ಸದಾ ಅನುಕರಣೀಯ...

ಶಾಂತಿ, ನೆಮ್ಮದಿ, ಸಂತೋಷ, ಸ್ಪೂರ್ತಿ, ಕೀರ್ತಿ, ಯಶಸ್ಸಿಗೆ ಪ್ರೇರಕ, ಕಾರಕ ಶ್ರೀಕೃಷ್ಣ....

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು...

Tuesday, July 31, 2012

ಓಹ್ ಸಾವೇ ನೀನೆಷ್ಟು ಅನಪೇಕ್ಷಿತ ಅತಿಥಿ.


ಓಹ್ ಸಾವೇ ನೀನೆಷ್ಟು ಅನಪೇಕ್ಷಿತ ಅತಿಥಿ..

ಸಂಭ್ರಮ, ಸಂತಸ, ಸುಖ ಎಲಾವನ್ನು ಹೊತ್ತು ತರುವ ತಿರುವಿನಲ್ಲಿ ನೀನು ಬಂದು ನಿಂತಾಗ...ಸಿಗುವ ನೋವು, ತುಮುಲಗಳು ಕೊಡುವ ಆಘಾತ...ಪ್ರಪಾತಕಿಂತಲೂ ಆಳ...

ಕೇವಲ ಎರಡು ಘಂಟೆಗಳು ಒಂದು ಸುಮಧುರ ಹಿರಿಯ ಚೇತನದ ಜೀವನದಲ್ಲಿನ ಎರಡು ಪುಟಗಳು ಸಿಕ್ಕವು..

ನನ್ನ ತಂಗಿ ಅಂದ್ರೆ ತಾಯಿಯ ತಂಗಿಯ ಮಗಳು ನಿಶ್ಚಿತಾರ್ಥ ಆಗಸ್ಟ್ ೧೨ ನೆ ತಾರೀಕು ಅಂತ ಕರೆ ಬಂದಾಗ ಬಹಳ ಖುಷಿ ಆಯಿತು..ಸರಿ ನನ್ನ ತಾಯಿಯ ತವರೂರಿನ ದರುಶನ ಅಂತ ಮನಸು ಹಾರಾಡಿತು..

ಅದರ ಬೆನ್ನಲ್ಲೇ ಬಂದಿತು ಇನ್ನೊಂದು ಆಘಾತಕಾರಿ ಸುದ್ದಿ..ಆ ಹುಡುಗಿಯ ಅಪ್ಪ ಅರ್ಥಾತ್ ನನ್ನ ಚಿಕ್ಕಪ್ಪ ಆಸ್ಪತ್ರೆಯಲ್ಲಿ ವಿಧಿವಶರಾದ ಸುದ್ದಿ ಬಂತು..

ಸರಳ ಸಜ್ಜನಿಕೆಯ ಸಂಕೋಚ ಸ್ವಭಾವದ ನನ್ನ ಚಿಕ್ಕಪ್ಪನ ನಂಟು ನಮಗೆ ಚಿರಪರಿಚಿತ...

ಅವರ ಮಾತುಗಳು, ಹಾಸ್ಯ ಸಂಭಾಷಣೆ ಸೂಜಿ ಮೊನಚಂತೆ ಕಂಡರೂ ಕೂಡ ಅಪಾರ ಅಭಿಮಾನದ ತೀವ್ರತೆ ಅವರಲ್ಲಿ ಕಾಣುತಿತ್ತು..ಪ್ರತಿಸಾರಿ ಸಿಕ್ಕಾಗೂ ಕೂಡ "ಏನಯ್ಯ ನಮ್ಮನೆಗೆ ಬರೋಲ್ವಾ ನೀನು..ಈ ಸಾರಿ ಬರಲೇಬೇಕು"..ಅಂತ ಪ್ರತಿಸಾರಿಯೂ ಬಲವಂತವಾಗಿ ಕರೆಯುತಿದ್ದರು..ಸಮಯದ ಅಭಾವ..ಆಗಿರಲಿಲ್ಲ..

ಕಳೆದ ಅಕ್ಟೋಬರ್ ನಲ್ಲಿ ಬಲವಂತಾಗಿ ನಾನೇ ಸಮಯ ಮಾಡಿಕೊಂಡು ಅವರ ಜೊತೆ ಕೆಲ ಘಂಟೆಗಳು ಕಳೆದ ಸಂತೃಪ್ತಿ ನನಗಿದೆ...

ಪ್ರೀತಿಯ ಚಿಕ್ಕಪ್ಪ..ನನ್ನ ತಾಯಿಯ ತವರನ್ನು ಬೆಳಗಿದವರು...

ನಮ್ಮೆಲ್ಲರ ಕಡೆಯಿಂದ ಒಂದು ನುಡಿ ನಮನ ನಿಮಗೆ...

Monday, July 30, 2012

ಬಾಳೆ ಎಲೆ ಊಟ


ಶಾಲೆಯಲಿದ್ದಾಗ ಹೇಳಿಕೊಟ್ಟ ಹಾಡಿನ ಊಟದ ಪಾಠ...
  
ಒಂದು ಎರಡು.... ಬಾಳೆಲೆ ಹರಡು
ಮೂರು ನಾಕು.... ಅನ್ನ ಹಾಕು 
ಐದು ಆರು.... ಬೇಳೆ ಸಾರು
ಏಳು ಎಂಟು.... ಪಲ್ಯಕೆ ದಂಟು
ಒಂಭತ್ತು  ಹತ್ತು... ಎಲೆ ಮುದುರೆತ್ತು
ಒಂದರಿಂದ ಹತ್ತು.... ಹೀಗಿತ್ತು..
ಊಟದ ಆಟವು ....ಮುಗಿದಿತ್ತು..

ಎಷ್ಟು ಸೊಗಸಾಗಿ ಆಟ, ಪಾಠ, ಊಟ ಕಲೆಸಿದ್ದರು ಒಂದು ಚಿಕ್ಕ ಹಾಡಿನ ಕವಿತೆಯಲ್ಲಿ..

ಬಾಳೆ ಎಲೆಯಲ್ಲಿ ಊಟ ಮಾಡುವಾಗೆಲ್ಲ..ಬಗೆ ಬಗೆಯ ತಿನಿಸುಗಳನ್ನು ಬಡಿಸುವ ವಿಧಾನ, ಒಂದೊಂದಾಗಿ ಬಡಿಸಿ, ಕಡೆಗೆ ತುಪ್ಪ, ತೊವ್ವೆ  ಹಾಕುವ ತನಕ ಕಾದಿದ್ದು..ನಂತರ ಒಂದೊಂದಾಗಿ ತಿಂದು ಮುಗಿಸಿ, ಮುಂದಿನ ಅಡಿಗೆ ಪದಾರ್ಥಗಳಿಗೆ ಕಾಯುತ್ತ, ಎಲೆಯಲ್ಲಿ ಜಾಗ ಮಾಡಿಕೊಂಡು ಕಾಯುತ್ತಿದ್ದುದು ಎಷ್ಟು ಚಂದ..... 


ಎಲ್ಲ 31 ಬಗೆಯಾ ಅಡಿಗೆ ಬಡಿಸಿದ ಎಲೆಯಾ ಚಿತ್ರ ಸಿಗಲಿಲ್ಲ.ಹಾಗಾಗಿ ಸಿಕ್ಕ ಚಿತ್ರವನ್ನು ಮಾತ್ರ ಹಾಕಿದ್ದೀನಿ..ಬೇಸರ ಬೇಡ..ಹ. ಹ. ಹ 

ಅದನ್ನೆಲ್ಲ ಗಮನಿಸುತ್ತ..ಕಳೆದ ವರುಷಗಳು ಹತ್ತಿರ ಹತ್ತಿರ ನಾಲ್ಕು ದಶಕಗಳು ...

ಎಂತಹ ಸುಲಭ ಸಮೀಕರಣವನ್ನು ನಮ್ಮ ಹಿರಿಯರು, ಪೂರ್ವಜರು ನಮಗೆ ಬಿಟ್ಟು ಹೋಗಿದ್ದಾರೆ ಅಂತ ಆಲೋಚಿಸುತ್ತ ಇದ್ದಾಗ ಯಾಕೆ ಇದರ ಬಗ್ಗೆ ಒಂದಷ್ಟು ಪದಗಳನ್ನು ಬರೆಯಬಾರದು ಎನ್ನಿಸಿತು..ಇಗೋ.....ತಗೊಳ್ಳಿ..ನಿಮ್ಮ ಮುಂದೆ...

ಅನ್ನ, ಸಾರು ಬರುವಷ್ಟರಲ್ಲಿ ಹೊಟ್ಟೆಯೊಳಗೆ..ಇಲಿಗಳು ಕಬಡ್ಡಿ ಆಡುತಿದ್ದವು..ನಂತರ ತೊವ್ವೆ..ಕಡೆಗೆ ತುಪ್ಪ, ..ಸುತ್ತ ಮುತ್ತಲು ನೋಡಿ... ಉಪನಯನ ಆದವರು ಪರಿಷಿಂಚನ ಮಾಡಿ ತಲೆ ಆಡಿಸಿದಾಗ..ಓಹ್ ಬ್ಯಾಟಿಂಗ್ ಗೆ ಅನುಮತಿ ಸಿಕ್ಕಿತು ಅಂತ ಬಾರಿಸೋಕೆ ಶುರು ಮಾಡುತಿದ್ದೆವು... 

ಅನ್ನ ಸಾರು ನಮ್ಮ ಗುರಿ ಇದ್ದರು ಕೂಡ, ಅದರ ಸುತ್ತಲು ಪರಿವಾರ ದೇವತೆಗಳಂತೆ ಕುಳಿತಿದ್ದ ಅನೇಕ ಭಕ್ಷ್ಯಗಳು ಹೊಟ್ಟೆ ಸೇರಲು ತವಗುಡುತಿದ್ದದ್ದು ಗೊತ್ತಾಗುತ್ತಿತ್ತು..ನಂತರ ಬರುವ, ಸಿಹಿ, ಖಾರ, ಬೋಂಡ, ಬಜ್ಜಿ,ಹಪ್ಪಳ, ಎಲ್ಲವನ್ನು ತಿಂದು..ಕಡೆಗೆ ಮಜ್ಜಿಗೆ ಅನ್ನ ತಿನ್ನುವಷ್ಟರಲ್ಲಿ ಹೊಟ್ಟೆ ಕನ್ನಂಬಾಡಿ ಕಟ್ಟೆ ಆಗಿರುತಿತ್ತು..

ಎಷ್ಟು ನಿಯಮ ಬದ್ದವಾಗಿ ಎಲ್ಲ ತರಹದ ಪದಾರ್ಥಗಳನ್ನು ಬಡಿಸಿ, ತಿನ್ನಿಸಿ, ಹೊಟ್ಟೆಗೆ ಏನು ಅಡಚಣೆಯಾಗದಂತೆ ಕಡೆಗೆ ಮಜ್ಜಿಗೆ ಅನ್ನ..ಎಲ್ಲವನ್ನು ಎಷ್ಟು ಚಂದೊಬದ್ದವಾಗಿ ಜೋಡಿಸಿ ಬಡಿಸುತ್ತಾರೆ..ಇದನ್ನ ನೋಡಿದಾಗ ನನಗನಿಸಿದ್ದು...

ಅನ್ನ ಪರಮ ಭಕ್ಷ್ಯವಾದರು ಕೂಡ ಅದಕ್ಕೆ ಸಹಕಾರಿಯಾಗಿ ಬರುವ ಉಪ್ಪಿನಕಾಯಿ, ಕೋಸಂಬರಿ, ಪಲ್ಯ, ಚಿತ್ರಾನ್ನ, ಪಾಯಸ, ಬೋಂಡ, ಸಿಹಿ, ಹುಳಿ, ಮಜ್ಜಿಗೆ, ಗೊಜ್ಜು ಮುಂತಾದ ಪದಾರ್ಥಗಳು  ...ಅನ್ನವನ್ನು ಸರಿಯಾದ ಪ್ರಮಾಣದಲ್ಲಿ, ಮತ್ತು ಸರಿಯಾದ ಕ್ರಮದಲ್ಲಿ ಭುಂಜಿಸಲು ಅನುವು ಮಾಡಿಕೊಡುತ್ತದೆ..

ಹಾಗೆಯೇ ನಾನೊಬ್ಬನೇ ಪ್ರಪಂಚದಲ್ಲಿ ಈಜಲು ಆಗುವುದಿಲ್ಲ..ಅಪ್ಪ-ಅಮ್ಮಂದಿರಿಂದ ಹಿಡಿದು ಅನೇಕ ಗೆಳಯರು, ಗೆಳತಿಯರು, ಸಹೋದ್ಯೋಗಿಗಳು, ಬಂಧು-ಬಳಗ, ಎಷ್ಟೋ ಅನಾಮಿಕರು, ಅನಾಮಧೇಯರು ಬಾಳಿನಲ್ಲಿ ಬಂದು ಸಹಾಯ ಮಾಡುತ್ತಾರೆ..

ಮಾನವ ಸಂಘ ಜೀವಿ ಎನ್ನುವದಕ್ಕೆ ಉತ್ತಮ ಉದಾಹರಣೆ..ಬಾಳೆ ಎಲೆ ಊಟ...!!!!

Thursday, July 26, 2012

ಪುಸ್ತಕದ ಮನೆ ಪರಿಚಯ...ದೂರದರ್ಶನ ಚಂದನದಲ್ಲಿ ಬಿತ್ತರವಾಯಿತು.


ಇಂದು ಮುಂಜಾನೆ ಕಛೇರಿಗೆ ಹೋಗುವ ತರಾತುರಿಯಲ್ಲಿದ್ದೆ.....(೨೬.೦೭.೨೦೧೨ ಬೆಳಿಗ್ಗೆ ೭.೦೦ - ೭.೩೦)

ಅವಸರ ಅವಸರವಾಗಿ ಹೊರಡುವ ತಯಾರಿ ನಡೆದಿತ್ತು...

ಹಿಂದಿನ ರಾತ್ರಿ ಒಂದು ಸಮಾರಂಭಕ್ಕೆ ಹೋಗಿ ಬಂದಿದ್ದು ರಾತ್ರಿ ಹನ್ನೆರಡಾಗಿತ್ತು..ಹಾಗಾಗಿ ಬೆಳಿಗ್ಗೆ ಎದ್ದದ್ದು ತಡವಾಗಿ ಕಛೇರಿಯ
ವಾಹನ ತಪ್ಪಿಸಿಕೊಂಡಿದ್ದರಿಂದ..ಹೊರಡುವ ಆತುರ ಇನ್ನು ಹೆಚ್ಚಿತ್ತು..

ಅಷ್ಟರಲ್ಲಿ..."ಅಪ್ಪಾಆಆಆ...ಅಪ್ಪಾಆಆಆಆಆಆ" ಮಗಳು ಕೂಗಿದಳು (ಕಿರುಚಿದಳು ಅಂದ್ರು ಪರವಾಗಿಲ್ಲ)
"ಏನು ಪಾಪ?"..ಅಂತ ಸಿದ್ದವಾಗುತ್ತ ಆ ಎಳೇ ಸ್ವರಕ್ಕೆ ಪೈಪೋಟಿಯಾಗಿ  ಕರ್ಕಶವಾಗಿಯೇ ನಾನು ಕಿರುಚಿದೆ..ಹೊರಡುವ

ಆತುರ... ಸಮಯ ಕಳೆದಂತೆ.... ಬಂಗಾರದ ದರದಂತೆ ಏರುತಿತ್ತು...

"ಅಪ್ಪ..ನಾವು ಬಸ್ಸಿನಲ್ಲಿ ಪುಸ್ತಕ ನೋಡೋಕೆ ಹೋಗಿದ್ದೆವಲ್ಲ ಅದು ಬರ್ತಾ ಇದೆ..."

ನನಗೆ ಅರ್ಥ ಆಗ್ಲಿಲ್ಲ..ಯಾವುದೋ  ಅರ್ಥವಾಗದ ಭಾಷೆಯ ಚಿತ್ರಗೀತೆ ಕೇಳಿದಂತೆ ಭಾಸವಾಯಿತು..

"ಯಾವುದು ಪಾಪ...?"

ಅಷ್ಟರಲ್ಲಿ..ನನ್ನ ಮುದ್ದಿನ (?) ಮಡದಿ.."ರೀ..ಬಾಲು ಸರ್, ಪ್ರಕಾಶ ಹೆಗ್ಗಡೆ ಅವರ ಜೊತೆ ಹೋಗಿದ್ದೆವಲ್ಲ.....ಅಂಕೆ ಗೌಡರ ಬಗ್ಗೆ ಟಿ.ವಿ. ಲಿ ಬರ್ತಾ ಇದೆ..."

ಭರದಿಂದ ಟಿ.ವಿ. ಮುಂದೆ ನಿಂತೇ...
ದೂರದರ್ಶನ ಚಂದನ ವಾಹಿನಿಯಲ್ಲಿ ಶ್ರೀ.ಅಂಕೆ ಗೌಡರ ಸಂದರ್ಶನ  ಬಿತ್ತರ ಆಗ್ತಾ ಇತ್ತು...
ನನ್ನ ವ್ಯಾವಹಾರಿಕ ಪ್ರಪಂಚದಿಂದ ಹೊರಗೆ ಬಂದು..ಅದರಲ್ಲೇ ಲೀನವಾದೆ..ಸುಮಾರು ಅರ್ಧ ಘಂಟೆ ಕಾರ್ಯಕ್ರಮ..ಸಮಯವಿರಲಿಲ್ಲ..ಆದ್ರೆ ಮನಸು ಬಿಡಲಿಲ್ಲ..

ಅರೆ..ನಾವು ನೋಡಿದ, ಓಡಾಡಿದ ಸ್ಥಳದ ಬಗ್ಗೆ ಎಲ್ಲಿಯಾದರೂ ನೋಡಿದರೆ..ಒಂದು ಹಿರಿಮೆ, ಗರಿಮೆ ಮನದಲ್ಲಿ ಮೂಡುತ್ತದೆ..ಆ ಭಾವ..ಬೇರೆ ಪರಿವೆಯನ್ನು ಬರಗೊಡದೆ...ತಡೆಯುತ್ತದೆ..

ಸಂದರ್ಶನ ಮುಗಿದಾಗ ಮನಸಿಗೆ ಸಂತೋಷ ವಾಯಿತು..ಮಕ್ಕಳಿಗೆ ಈ ಮಹಾನುಭಾವರ ಸಾಧನೆ, ಶ್ರಮ ತಲುಪುತ್ತಿದೆ ಅಂದ್ರೆ..ಅದು ಒಂದು ಮೆಟ್ಟಿಲಿನ ಗೆಲುವು ಅನ್ನಿಸಿತು....

ಬಹಳ ಉಪಯುಕ್ತ ಸಂದರ್ಶನ...ಅವರ ಪುಸ್ತಕದ ಮನೆ ಬೆಳಕಿಗೆ ಬರುತಿದೆ ಅನ್ನುವದಕಿಂತ..ಅದು ಅವಾಗಿನಿಂದಲೂ ಇತ್ತು...ನಮಗೆ ಅವರ ಬಗ್ಗೆ ಇತ್ತೀಚಿಗೆ ತಿಳಿದುದರಿಂದ..ನಮ್ಮ ಆಸಕ್ತಿ ಅಲ್ಲಿಗೆ ಸೆಳೆಯುತ್ತದ ಎನ್ನುವುದು ಸತ್ಯ...ಮಾಮೂಲಿ ದಿನದಲ್ಲಿ ಅಯ್ಯೋ ಬಿಡು ಅದೊಂದು ತಲೆನೋವಿನ ಸಂದರ್ಶನ ಎಂದು ಬೇರೆ ಚಾನೆಲ್ ಹಾಕುವ ಪ್ರವೃತ್ತಿಯಿಂದ..ಅರೆ..ನಾವು ಇದನ್ನ ನೋಡಿದ್ದೇವೆ..ಪೂರ ಸಂದರ್ಶನ ನೋಡಿಯೇ ಬಿಡೋಣ ಅನ್ನುವ ಮನಸ್ಥಿತಿ ತಲುಪಿದ್ದಕ್ಕೆ ಕಾರಣ..ಅಲ್ಲಿಗೆ ಭೇಟಿ ನೀಡಿದ್ದರಿಂದ ಅಲ್ಲವೇ...

ಸಂದರ್ಶನದಲ್ಲಿ ಬಹಳ ಅಚ್ಚುಕಟ್ಟಾಗಿ ಮಾತಾಡಿದರು ಶ್ರೀಮಾನ್ ಅಂಕೆ ಗೌಡರು..ಸಮಯದ ಪರಿಮಿತಿ ಅವರ ಉತ್ಸಾಹಕ್ಕೆ ತಡೆಯೊಡ್ದುತಿತ್ತು  ...ಅವರ ಅಗಾಧ ಹುಮ್ಮಸ್ಸು, ಮತ್ತು ತನ್ನ ಪುಸ್ತಕದ ಮನೆ ನಾಡಿನ ಮೂಲೆ ಮೂಲೆಗೂ ತಲುಪಬೇಕು..ಎಲ್ಲರಿಗೂ ಸಹಾಯವಾಗಬೇಕು ಅನ್ನುವ ಕಳಕಳಿ, ತವಕ ಅವರ ಮಾತಿನಲ್ಲಿ ಗೋಚರವಾಗುತಿತ್ತು..

ಇಂತಹ ಅಮೋಘ ಸ್ಥಳಕ್ಕೆ  ನನ್ನನ್ನು ಪರಿಚಯಿಸಿದ ಬಾಲು ಸರ್, ಪ್ರಕಾಶ್ ಹೆಗ್ಗಡೆ ಮತ್ತು ಬ್ಲಾಗಿಗರ ಗುಂಪು..ಎಲ್ಲರಿಗೂ ನನ್ನ ಅನಂತಾನಂತ ವಂದನೆಗಳು...

Sunday, July 15, 2012

ನನ್ನ ಸೋದರತ್ತೆ ಗೌರಿ ಅತ್ತೆಯಾ ಒಂದು ವರ್ಷದ ನೆನಪು


ಶ್ರೀಕಾಂತ...ಈಗ ನೀನು ನೋಡಬಹುದು...!!!!

ಯಾರದು ಈ ಧ್ವನಿ ಎಂದು ತಿರುಗಿ ನೋಡಿದಾಗ..ನಾಗರಾಜ ಚಿಕ್ಕಪ್ಪ..ಹೇಳಿದ ಮಾತಿದು...

ಹಾಗೆ ತಲೆ ಎತ್ತಿ ಗೌರಿ ಅತ್ತೆ ಫೋಟೋ ನೋಡಿದೆ...ಚಿಕ್ಕಪ್ಪ ಹೇಳಿದ್ದು ನಿಜ ಎನ್ನಿಸಿತು..

ಗೌರಿ ಅತ್ತೆ ಅವರ ಭಾವ ಚಿತ್ರದ ಮುಖೇನ ಹೇಳಿದ ಮಾತು ಹಾಗೆ ತೇಲಿ ಬಂತು...

ಕೋರವಂಗಲದ ಎಲ್ಲ ಸದಸ್ಯರಿಗೂ ನನ್ನ ಆಶೀರ್ವಾದಗಳು...
ನಾನು ಇಂದು ನಿಮ್ಮನ್ನು ಅಗಲಿ ಸರಿ ಸುಮಾರು ಒಂದು ವರುಷ ಆಯಿತು...
ನನ್ನನ್ನು ಪ್ರೀತಿಸುವ ಕೆಲ ಹೃದಯಗಳಿಂದ..ನನ್ನ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿತು...
ನನ್ನ ಅಪ್ಪ, ಅಮ್ಮ, ನನ್ನ ಯಜಮಾನರು, ನನ್ನ ಮಗಳು, ಅಳಿಯ, ತಂಗಿಯ ಗಂಡ, ಇಬ್ಬರು ತಮ್ಮಂದಿರು ಇವರೆನಲ್ಲ ಸೇರುತಿದ್ದೇನೆ ಎಂದು ಒಂದು ಕಡೆ ಸಂತೋಷ..

ಇನ್ನೊಂದು ಕಡೆ ನಿಮ್ಮನೆಲ್ಲ ಬಿಟ್ಟು ಬಂದೆನಲ್ಲ ಇನ್ನು ಭಾರವಾದ ಮನಸು..ಏನು ಮಾಡುವುದು..
ಜಾತಸ್ಯ ಮರಣ ಧ್ರುವಂ...
ಹುಟ್ಟಿದವರು ಒಂದು ದಿನ ಹೋಗಲೇಬೇಕು..ಹೋದವರು ತಿರುಗಿ ಬರಲೇ ಬೇಕು...

ಕಾರ್ಯಕರಮವು ಅಚ್ಚುಕಟ್ಟಾಗಿ ನೆರವೇರಿತು...
ನನ್ನ ತಮ್ಮಂದಿರು, ಅವರ ಪತ್ನಿಯರು, ಅವರ ಮಕ್ಕಳು ಬಂದಿದ್ದು ಬಹಳ ಖುಷಿಯಾಯಿತು...
ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಆಶೀರ್ವಾದಗಳು...
ಇನ್ನೇನು ಕೆಲ ತಿಂಗಳಲ್ಲಿ ಮಂಜಣ್ಣ ಬರುತ್ತಿದ್ದಾನೆ ಎನ್ನುವ ವಿಷಯ ತಿಳಿದು ದುಃಖವಾಯಿತು..

ನಿಮ್ಮೆಲ್ಲರಿಗೂ ನನ್ನ ಆಶೀರ್ವಾದಗಳು..ಜೀವನದಲ್ಲಿ ನೀವು ಕಾಣುವ ಕನಸುಗಳು, ಇಟ್ಟುಕೊಂಡಿರುವ ಗುರಿ ಎಲ್ಲವು ನೆರವೇರಲಿ ಎಂದು ಆಶಿಸುತ್ತೇನೆ..ಹಾಗು ಹಾರೈಸುತ್ತೇನೆ...ಮತ್ತೆ ಬರುತ್ತೇನೆ...

ಇಂತಿ ನಿಮ್ಮ ಗೌರಿ ಅಕ್ಕ (ಅತ್ತೆ, ಅಜ್ಜಿ, ಅತ್ತಿಗೆ, ಹೀಗೆ ನೂರಾರು ಭಾವನೆ ಬೆಸೆಯುವ ಬಾಂಧವ್ಯಗಳು)