Wednesday, January 15, 2020

ಆಶಾ ಪಾಶ ಭಾಗ ೨?

ಮುಂದೆ.. ... !!!

ಕಣ್ಣು ಬಿಟ್ಟಾಗ.. ತಲೆ ಜೋಮು ಹಿಡಿದಿತ್ತು.. ಬಲವಾದ ಪೆಟ್ಟು ರಕ್ತಧಾರೆಯಾಗಿತ್ತು ಅನಿಸುತ್ತದೆ... ಸುತ್ತಲೂ ಬಿಳಿ ಬಿಳಿ ಪರದೆ.. ದೊಡ್ಡ ಗಡಿಯಾರ.. ಹಾಸಿಗೆ.. ಹೊದಿಕೆ ಎಲ್ಲವೂ ಬಿಳಿ.. ಪಕ್ಕದಲ್ಲಿದ್ದ ಉಪಕರಣ ಎಂಥದೋ ಸದ್ದು ಮಾಡುತ್ತಾ, ವಿಧ ವಿಧವಾದ ಗೆರೆಗಳನ್ನು ಅಂಕೆಗಳನ್ನು ತೋರಿಸುತ್ತಿತ್ತು.. ಕೈಗೆ ಸೂಜಿ ಚುಚ್ಚಿ ಅದಕ್ಕೆ ಟ್ಯೂಬ್ ಜೋಡಿಸಿ.. ನೇತು ಹಾಕಿದ್ದ ಬಾಟಲಿಯಿಂದ ದ್ರವ ದೇಹದೊಳಗೆ ಹೋಗುತ್ತಿತ್ತು.. ಕಾಲು ಅಲುಗಾಡಿಸೋಕೆ ಆಗುತ್ತಿಲ್ಲ..

ಸುಮಾರು ಹೊತ್ತಾದ ಮೇಲೆ, ಯಾರೋ ಹತ್ತಿರ ಬಂದು ತಲೆ ಸವರಿದ ಅನುಭವ.. ಮೆಲ್ಲನೆ ಕಣ್ಣುಗಳನ್ನು ಅತ್ತ ಹಾಯಿಸಿದ ಸಂದೀಪ್.. ಕಣ್ಣುಗಳು ಅಲ್ಲಿಗೆ ತಲುಪುತ್ತಿಲ್ಲ.. ಕೈಗಳು ತಣ್ಣಗಿನ ಅನುಭವ ನೀಡುತ್ತಿದೆ.. ಹಿತವಾದ ಸ್ಪರ್ಶ.. ಒಂದು ಕೈಯನ್ನು ಹೊದಿಕೆಯೊಳಗಿಂದ ಎತ್ತಿ ಆ ಕೈಗಳನ್ನು ಮುಟ್ಟಿದಾಗ ಅನುಭವ.. ಅದು ಲಾವಣ್ಯ..

ಮೆಲ್ಲಗೆ ಅವಳ ಕೈಯನ್ನು ಎಳೆದುಕೊಂಡು.. ತನ್ನ ಕಣ್ಣಾಲಿಗಳ ನೇರಕ್ಕೆ ತನ್ನ ಬಲಭಾಗಕ್ಕೆ ಅವಳನ್ನು ನಿಲ್ಲಿಸಿಕೊಂಡ ಸಂದೀಪ್.. ಲಾವಣ್ಯಳ ಮುಖ ಬಾಡಿತ್ತು.. ಏನೋ ಕಳವಳ.. ಹೇಳಬೇಕೆಂದು ಚಡಪಡಿಸುತ್ತಿರುವ ತುಟಿಗಳ ಚಲನೆ.. ಆದರೆ ಹೇಳಲಾಗುತ್ತಿಲ್ಲ..

ಮೆಲ್ಲಗೆ ಹಾಸಿಗೆಯ ಮೇಲೆ ಕೂತುಕೋ ಅಂತ ಕಣ್ಣ ಸನ್ನೆಯಲ್ಲಿ ಹೇಳಿ.. ಅವಳು ಕೂತ ಮೇಲೆ ಅವಳ ಬೆರಳುಗಳಲ್ಲಿ ತನ್ನ ಬೆರಳುಗಳನ್ನು ಸವರುತ್ತಾ.. "ಏನಾಯಿತು" ಎನ್ನುವ ಪ್ರಶ್ನೆಯನ್ನು ಕಣ್ಣಲ್ಲೇ ಕೇಳಿದ..

ಅವಳು ಇನ್ನೇನು ಏನೋ ಹೇಳಬೇಕು.. ಅಷ್ಟರಲ್ಲಿ ಖಾಕಿ ಸಮವಸ್ತ್ರ ಧರಿಸಿದ ಇಬ್ಬರು ವ್ಯಕ್ತಿಗಳು ಹಾಸಿಗೆಯ ಎಡಭಾಗಕ್ಕೆ ಬಂದು ನಿಂತರು..

"ಮಿ.. ಸಂದೀಪ್, ಹೇಗಿದ್ದೀರಾ, ಡಾಕ್ಟರ್ ಹತ್ತಿರ ಒಪ್ಪಿಗೆ ಪಡೆದು ಬಂದಿದ್ದೇವೆ. ಇವತ್ತು ಸಂಜೆಗೆ ನೀವು ಮನೆಗೆ ಹೋಗಬಹುದು.. ಪೆಟ್ಟೇನೂ ಬಲವಾಗಿ ಬಿದ್ದಿತ್ತು.. ಆದರೆ ತೀವ್ರವಾದ ಪರಿಣಾಮ ಏನೂ ಮಾಡಿಲ್ಲ.. ರಕ್ತ ಹೋಗಿತ್ತು.. ನೀವು ನಿಸ್ತೇಜವಾಗಿ ಮಲಗಿದ್ದೀರಿ.. ಲಾವಣ್ಯ ಮೇಡಂ ನಮಗೆ ಸಮಯಕ್ಕೆ ಸರಿಯಾಗಿ ಹೇಳದೆ ಹೋಗಿದ್ದರೇ 
ನಿಮ್ಮ ಪರಿಸ್ಥಿತಿ ಗಂಭೀರವಾಗಿರುತ್ತಿತ್ತು.. " ಬಲಭಾಗಕ್ಕೆ ಬರಲು ಸಂದೀಪ್ ಹೇಳಿದಾಗ.. ಅವರಿಬ್ಬರೂ ಇತ್ತ ಕಡೆ ಬಂದರು.. ಧನ್ಯವಾದಗಳನ್ನು ಕಣ್ಣಲ್ಲಿಯೇ ಹೇಳಿದ..

ಸಂದೀಪ್ ಲಾವಣ್ಯಳ ಕಡೆ ನೋಡಿ.. ಕಣ್ಣಲ್ಲೇ ಕೃತಜ್ಞತೆ ಸಲ್ಲಿಸಿದ..

ಅವಳು ಕೈಬೆರಳುಗಳನ್ನು ಒಮ್ಮೆ ಒತ್ತಿದಳು..

"ಸಂದೀಪ್. ಅಲ್ಲಿ ಏನು ನೆಡೆಯಿತು ಎನ್ನುವ ನಿಮ್ಮ ಪ್ರಶ್ನಾರ್ಥಕ ಮುಖಕ್ಕೆ ಉತ್ತರ ಲಾವಣ್ಯ ಮೇಡಂ ಕೊಡುತ್ತಾರೆ.. " ಎಂದು ಲಾವಣ್ಯಳ ಮುಖ ನೋಡಿದರು ಇನ್ಸೆಪಕ್ಟರ್!

"ಸಂದೀಪ್.. ನೀವು ಆ ಮನೆ ಕಡೆಗೆ ಹೋಗುತ್ತೇನೆ ಎಂದಾಗ ನನಗೇನೋ ಮನದಲ್ಲಿಯೇ ಗಲಿಬಿಲಿ ಶುರುವಾಗಿತ್ತು.. ಅದಕ್ಕೆ ನಿಮ್ಮ ಹಿಂದೆಯೇ ನಾನು ನನ್ನ ಸ್ಕೂಟಿಯಲ್ಲಿ ಬಂದೆ. ನೀವು ನಿಮ್ಮ ಆಫೀಸ್ ವಿಚಾರ, ಇಮೇಲ್, ಕರೆ ಅದು ಇದು ಅಂತ ಮುಳುಗಿಹೋಗಿದ್ದಿರಿ, ಹಾಗಾಗಿ ನಿಮ್ಮ ಪಕ್ಕದಲ್ಲಿಯೇ ನಾ ಬರುತ್ತಿದ್ದದು ನಿಮಗೆ ಅರಿವಾಗಿರಲಿಲ್ಲ.. ಇರಲಿ.. ನೀವು ಆ ಕಟ್ಟಡದೊಳಗೆ ಹೋದಿರಿ .. .ಸ್ವಲ್ಪ ಹೊತ್ತಿನ ನಂತರ ಸೆಕ್ಯೂರಿಟಿ ಮನೆಯೊಳಗೇ ಬಂದ .ಸೆಕ್ಯೂರಿಟಿ ಕೇಳಿದ್ದಕ್ಕೆ  ಉತ್ತರಿಸಿ ಒಳಗೆ ಹೋದಿರಿ.. ಸೆಕ್ಯೂರಿಟಿ ತನ್ನ ಕುರ್ಚಿಗೆ ಮರಳಿ ಬಂದು..ಕೈಯನ್ನು ಮೆಲ್ಲಗೆ ಆಡಿಸಿ ಯಾರಿಗೋ ಏನೋ ಸಂದೇಶ ರವಾನಿಸಿದ.. ಆಗ ಅರ್ಥವಾಯಿತು.. ನಿಮಗೇನೋ ತೊಂದರೆ ಇರಬಹುದು ಎಂದು.. "

"ಅಚಾನಕ್.. ಮನೆಯೊಳಗೇ ಯಾರೋ ಹೋದಂತೆ ಭಾಸವಾಯಿತು. ಸೆಕ್ಯೂರಿಟಿ, ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿ.. ಒಳ ಹೊಕ್ಕ.. ನನಗೇನೋ ಗಾಬರಿಯಾಯಿತು.... ಅಪ್ಪನಿಗೆ ಕರೆ ಮಾಡಿ.. ನಾನೂ ಆ ಮನೆಯೊಳಗೇ ಹೊಕ್ಕೆ.. ದಿನವೂ ಓಡಾಡುತ್ತಿದ್ದರಿಂದ ಮೂಲೆ ಮೂಲೆಯೂ ಪರಿಚಯವಿತ್ತು.. ಮೆಲ್ಲಗೆ ನೀವು ಹೋದ ಹಾದಿಯಲ್ಲಿಯೇ ಬಂದೆ.. ಸೆಕ್ಯೂರಿಟಿ.. ಮತ್ತೆ ಮುಖಕ್ಕೆ ಮಂಕಿ ಟೋಪಿ ಹಾಕಿಕೊಂಡಿದವನೊಬ್ಬ ಕೈಯಲ್ಲಿ ಒಂದು ಕಬ್ಬಿಣದ ಸಲಾಕೆ ಹಿಡಿದು.. ನಿಮ್ಮನ್ನೇ ಹಿಂಬಾಲಿಸುತ್ತಿದ್ದ.. ಆ ಮೆಟ್ಟಿಲಿಳಿದು ನೀವು ಹೋದಾಗ.. ಅವರು ನಿಮ್ಮನ್ನುಹಿಂಬಾಲಿಸಿದರು .. ನಾ ಕೂಗುವ ಹಾಗಿರಲಿಲ್ಲ.. ಕೂಗಿದರೆ.. ತಕ್ಷಣ ಅಪಾಯ ಮಾಡುವ ಸಾಧ್ಯತೆ ಇತ್ತು.. ನಿಮ್ಮ ತಲೆಗೆ ಬಲವಾದ ಪೆಟ್ಟು ಕೊಟ್ಟರು.. ಆ ಆಗಂತುಕನು  ಕೊಟ್ಟ ಪೆಟ್ಟು ನಿಮಗೆ ಬೀಳಲಿಲ್ಲ.. ಆದರೆ ಸೆಕ್ಯೂರಿಟಿ ಕೊಟ್ಟ ಏಟು ಬಲವಾಗಿಯೇ ಬಿತ್ತು... ನಾ ಚೀರದೆ.. ಮೆಲ್ಲಗೆ ಹೊರಗೆ ಬಂದು.. ಆ ಪೆಟ್ಟಿಗೆಯ ಮುಚ್ಚಳ ಮುಚ್ಚಿ.. ಅಲ್ಲಿಯೇ ಇದ್ದ ಒಂದು ಕೋಲನ್ನು ಚಿಲಕಕ್ಕೆ ಸಿಕ್ಕಿಸಿ.. ಅಪ್ಪನಿಗೆ ಕರೆಮಾಡಿ ಎಲ್ಲಾ ತಿಳಿಸಿ. ಪೊಲೀಸು ಹಾಗೂ ಆಂಬುಲೆನ್ಸ್ ಕಳಿಸುವಂತೆ ಹೇಳಿದೆ.. "

"ಸಂದೀಪ್.. ಆ ಸೆಕ್ಯೂರಿಟಿ ನಮ್ಮ ಕುಟುಂಬಕ್ಕೆ ಚಿರಪರಿಚಿತ.. ಅದ್ಯಾಕೆ ಹಾಗೆ ಮಾಡಿದನೋ ಗೊತ್ತಿಲ.. ಸರ್..ನೀವೇ ನಿಜವನ್ನು ಹೊರಗೆ ತರಬೇಕು.. "

ಇನ್ಸ್ಪೆಕ್ಟರ್ ಸ್ವಲ್ಪ ಹೊತ್ತು ಸುಮ್ಮನಿದ್ದು.. "ಮೇಡಂ .. ನೀವೇನು ಯೋಚಿಸಬೇಡಿ.. ಆಗಲೇ ಘಟನೆ ನೆಡೆದು ನಾಲ್ಕು ದಿನವಾಗಿದೆ, ನಮ್ಮ ಕೆಲಸ ಆಗಲೇ ಶುರುಮಾಡಿದ್ದೇವೆ"

"ಹಾ ನಾಲ್ಕು ದಿನವೇ" ಸಂದೀಪ್ ಕಣ್ಣಲಿಯೇ ಪ್ರಶ್ನೆ ಕೇಳಿದ..

"ಹೌದು ಸಂದೀಪ್.. ನಾಲ್ಕು ದಿನದಿಂದ ನಿಮಗೆ ಪ್ರಜ್ಞೆ ಇರಲಿಲ್ಲ.. ನಿಮ್ಮ ಪರಿಸ್ಥಿತಿ ಸುಧಾರಿಸಿದೆ.. ನೀವು ಮೊದಲಿನಂತೆ ಆಗುತ್ತೀರಿ.. ಒಂದು ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು.. ಲಾವಣ್ಯ.. ಮೇಡಂ.. ಇದರ ಹಿಂದೆ ಇರುವ ವ್ಯಕ್ತಿಯನ್ನು ನಮ್ಮ ಕಸ್ಟಡಿಗೆ ತೆಗೆದುಕೊಂಡ್ಡಿದ್ದಾಯ್ತು.. ಈಗ ಅವರನ್ನು ನಮ್ಮ ಠಾಣೆಯಲ್ಲಿ ಇಟ್ಟು ಇಲ್ಲಿಗೆ ಬಂದೆವು.. "

"ಅಚ್ಚರಿಯ ಮೇಲೆ ಅಚ್ಚರಿ.. ಇಷ್ಟು ಬೇಗ ಸುಳಿವು ಸಿಕ್ಕಿತೇ ಸರ್.. ನಿಜವಾಗಿಯೂ ಸಂತೋಷ.. "

"ಹೌದು ಮೇಡಂ ನಮಗೂ ಇಷ್ಟುಬೇಗ ಈ ಕೇಸ್ ದಡ ಮುಟ್ಟುತ್ತದೆ ಎನ್ನುವ ಅರಿವಿರಲಿಲ್ಲ.. ಸೆಕ್ಯುರಿಟಿಗೆ ಮತ್ತು ಇನ್ನೊಬ್ಬನಿಗೆ ಸಿಕ್ಕಾಪಟ್ಟ ಬಿಸಿ ಮುಟ್ಟಿಸಿ, ನಮ್ಮ ಭಾಷೆಯಲ್ಲಿ ಕೇಳಿದ ಮೇಲೆ ಮೂರು ದಿನವಾದ ಮೇಲೆ ಬಾಯಿ ಬಿಟ್ಟರು.. ಪಾಪ್ ಮುಂಡೇವು ಮೊದಲೇ ಹೇಳಿದ್ದಾರೆ ಮೂರು ದಿನ ಅವರಿಗೆ ಸಿಕ್ಕ ಶಿಕ್ಷೆ ತಪ್ಪುತ್ತಿತ್ತು... "

"ಇನ್ನೂ ಕುತೂಹಲ ಬೇಡ ಎಂದು "ಸರಿ ಸರಿ.. ಇರಿ.. ಹೇಳುತ್ತೇನೆ.. ಆ ಸೆಕ್ಯೂರಿಟಿ ಜೊತೆಗಿದ್ದವ ಅವನ ಬಂಟ.. ಆದರೆ ಇವರಿಬ್ಬರಿಗೂ ಬಾಸ್ ಯಾರು ಗೊತ್ತೇ.. "

ಲಾವಣ್ಯ ಮತ್ತು ಸಂದೀಪ್ ಅವರ ಹಣೆಗಳಲ್ಲಿ ಗೆರೆ ಮೂಡಿದವು..

"ನಿಮ್ಮ ಅಪ್ಪ ಮೇಡಂ.. ಕಾರಣವಿಷ್ಟೇ.. ಯಾವುದೋ ವ್ಯವಹಾರದಲ್ಲಿ ಕುತ್ತಿಗೆ ತನಕ ಹಣದ ಮುಗ್ಗಟ್ಟು ಬಂದು ಬಿಟ್ಟಿತ್ತು.. ಹೇಗಾದರೂ ಅದನ್ನು ಅಡ್ಜಸ್ಟ್ ಮಾಡುವ ತವಕ..ಯಾರಿಗೂ ಗೊತ್ತಾಗದ ಹಾಗೆ ಒಂದು ಕಳ್ಳ ವ್ಯವಹಾರ ಮಾಡುತ್ತಿದ್ದರು.. ಅದು ವಿಪರೀತಕ್ಕೆ ಹೋಗಿ ಅಪಾರ ದುಡ್ಡು ಬೇಕಾಗಿತ್ತು.. ಅದರಿಂದ ತಪ್ಪಿಸಿಕೊಳ್ಳಲು ನಾನಾ ಮಾರ್ಗ ಹುಡುಕುತ್ತಿದ್ದಾಗ.. ಅರಿವಿಗೆ ಬಂದದ್ದು ಸಂದೀಪನ ಅಪ್ಪ ತಮ್ಮ ಮನೆಯ ಯಾವುದೋ ಕೋಣೆಯೊಳಗೆ ಸಿಗಬಹುದು / ಇರಬಹುದು ಎನ್ನುವ ನಿಧಿಯ ನಕ್ಷೆ.. ಅದನ್ನು ಹೇಗಾದರೂ ಹುಡುಕಿಸಿದರೆ ತನ್ನ ಕಷ್ಟಗಳು ಮರೆಯಾಗಬಹುದು ಎಂದು .. ಆತನೇ ಲಾವಣ್ಯ ಮೇಡಂ ಅವರಿಗೆ ನಿಮ್ಮ ಬಗ್ಗೆ ಪ್ರೀತಿ ನಂಬಿಕೆಯೆಲ್ಲಾ ಹುಟ್ಟಿಸಿ, ಆ ಮನೆಯನ್ನು ವಾಸವಾಗಿದ್ದ ಮನೆಯ ತರಹ ಕಾಣಿಸಲು ನಿತ್ಯವೂ ದೀಪ ಹಚ್ಚಿ ಬರೋದನ್ನು ಲಾವಣ್ಯ ಮೇಡಂ ಅವರಿಗೆ ಹೇಳಿ ಮಾಡಿಸುತ್ತಿದ್ದರು.. ಮೇಡಂ ಹೋದ ಮೇಲೆ ಮನೆಯನ್ನೆಲ್ಲ ಶೋಧಿಸುವ ಕೆಲಸ ಮಾಡುತ್ತಿದ್ದರು.. ಆದರೆ ಯಶಸ್ಸು ಸಿಕ್ಕಿರಲಿಲ್ಲ.. ಮೇಡಂ ಪಾಪ ನಿಮಗೇನೂ ಇದರ ಬಗ್ಗೆ ಗೊತ್ತಿಲ್ಲ.. ಸಂದೀಪ್ ಅವರ ಅಪ್ಪನ ಜೊತೆಯಲ್ಲಿ ಫೋನಿನಲ್ಲಿ ಮಾತಾಡುವುದು ಕದ್ದು ಕೇಳಿದ್ದ ಅವರು ಇದಕ್ಕೆ ಒಂದು ವ್ಯೂಹ ರಚಿಸಿದ್ದರು.. ಮನೆಯೊಳಗೇ ಬಂದು ನೀವು ಆ ನಕ್ಷೆಯನ್ನು ಹುಡುಕಿದ ಮೇಲೆ ಅದನ್ನು ತಾನು ತೆಗೆದುಕೊಂಡು ತಮ್ಮ ಕಷ್ಟಗಳಿಂದ ಪಾರಾಗುವ ಪ್ಲಾನ್ ಅವರದ್ದು.. ಎಲ್ಲವೂ ಅವರಂದು ಕೊಂಡಂತೆ ಆಯಿತು.. ಆದರೆ ಪೆಟ್ಟು ಬೀಳುವ ಮುನ್ನ ಸಂದೀಪ್ . ತನ್ನ ಅಪ್ಪನಿಗೆ  "ಸಿಕ್ಕಿತು"  ಎಂದು ವಾಟ್ಸಾಪ್ ಸಂದೇಶ ಕಳಿಸಿದ್ದು.. ಅವರು ಅದನ್ನು ಲಾವಣ್ಯ ಅವರ ಅಪ್ಪನಿಗೆ ರವಾನಿಸಿದ್ದು.. ನಂತರ ಲಾವಣ್ಯ ಅವರ ಅಪ್ಪ ಸೆಕ್ಯುರಿಟಿಗೆ ಕರೆ ಮಾಡಿ ... ಮುಂದೆ... ನಿಮಗೆ ಹೀಗೆ ಆಗಿದ್ದು..ಇರಿ ಇರಿ.. ಹೇಳ್ತೀನಿ.. ಅವರ ಅಪ್ಪ ಸೆಕ್ಯೂರಿಟಿ ಮತ್ತೆ ಅವನ ಬಂಟನ ಜೊತೆಯಲ್ಲಿ ಈ ವ್ಯೂಹ ರಚಿಸಿದ ಮೇಲೆ.. ನಿಮಗೆ ತಲೆಗೆ ಪೆಟ್ಟು ಬಿತ್ತು.. ತಕ್ಷಣ ಸೆಕ್ಯೂರಿಟಿ ಗಾಬರಿಯಲ್ಲಿ ಮೇಡಂ ಅವರ ಅಪ್ಪನಿಗೆ ಕರೆ ಮಾಡಿ.. ಸರ್ ಏಟು ಜೋರಾಗಿಯೇ ಬಿದ್ದಂಗಿದೆ.. ಬೇಗ ಬನ್ನಿ ಸರ್.. ಆಮೇಲೆ ಏನಾದರೂ ಹೆಚ್ಚು ಕಮ್ಮಿಯಾದರೆ ನಮ್ಮ ತಲೆಗೆ ಬರುತ್ತದೆ..  ಎಂದು ಹೇಳಿದ.. ನಂತರ ಯಾರೋ ನೆಡೆದು ಬರುತ್ತಿರುವ ಸದ್ದು.. ಗೆಜ್ಜೆಯ ಸದ್ದು.. ಅದು ನೀವೇ ಅಂತ ಗೊತ್ತಾದ ಮೇಲೆ.. ಇನ್ನೂ ಗಾಬರಿ ಹೆಚ್ಚಾಗಿ..  ಜಾರಿ ಬಿದ್ದ .. ಸಂದೀಪನನ್ನ ಮೆಲ್ಲಗೆ ಎಳೆದು ಇತ್ತ ಕಡೆ ಕೂರಿಸಿ.. ಅವನು ಮತ್ತು ಅವನ ಬಂಟ.. ಅಲ್ಲಿಯೇ ಮರೆಯಾಗಿ ಕೂತರು.. ಅಷ್ಟು ಪುಟ್ಟ ಸಮಯದಲ್ಲಿಯೇ.. ಸೆಕ್ಯೂರಿಟಿ ತನ್ನ ತಲೆ ಉಪಯೋಗಿಸಿ... ಆ ನಕ್ಷೆಯನ್ನು ಕಸಿದುಕೊಂಡು ತನ್ನ ಜೇಬಿನಲ್ಲಿ ಇಟ್ಟುಕೊಂಡು.. . ಛಾವಣಿಯಿಂದ ನೇತಾಡುತ್ತಿದ್ದ ಕಬ್ಬಿಣದ ಸರಳು ಸಂದೀಪನ ಮೇಲೆ ಬಿದ್ದಿದೆ ಎಂದು ನಂಬಿಕೆ ಬರುವಂತೆ ಮಾಡಿ ತಾನು  ಕೂತಿದ್ದ.. ನೀವು ಚಿಲಕಕ್ಕೆ ಕಡ್ಡಿ ತೂರಿಸಿ.. ಅವರಿಬ್ಬರೂ ಹೊರಗೆ ಬರದಂತೆ ನೋಡಿಕೊಂಡಿರಿ.. ನೀವು  ಸಂದೀಪ್ ಅವರನ್ನು ಆಸ್ಪತ್ರೆಗೆ ಸೇರಿಸಿದಿರಿ.. ನಿಮ್ಮ ಅಪ್ಪ ಪೋಲಿಸಿಗೆ  ಕರೆ ಮಾಡಿ.. ಕಂಪ್ಲೇಂಟ್ ಕೊಟ್ಟು FIR ದಾಖಲಿಸಿದರು.. ಇವುಗಳ ನಡುವೆ..  ಸೆಕ್ಯುರಿಟಿಗೆ ಕರೆ ಮಾಡಿ ಏನಾಯಿತು ಎಂದು ವಿವರವಾಗಿ ಕೇಳಿದರು ..ಎಲ್ಲವೂ ತಾನು ಅಂದುಕೊಂಡಂತೆಯೇ ಆಗಿದೆ ಎಂದು ಅರಿವಾದ ಮೇಲೆ.. ನಿರಾಳವಾಗಿ ಸಹಜ ಸ್ಥಿತಿಯಲ್ಲಿ ಎಲ್ಲರೊಡನೆ ಸಹಜವಾಗಿ ವರ್ತಿಸಲು ಶುರುಮಾಡಿದರು.. ನಮ್ಮ ಟ್ರೀಟ್ಮೆಂಟ್ ಕೊಟ್ಟ ಮೇಲೆ  ಸೆಕ್ಯೂರಿಟಿ ಎಲ್ಲವನ್ನು ಬಾಯಿ ಬಿಟ್ಟಾ.. ಈಗ ನಿಮ್ಮ ತಂದೆ, ಸೆಕ್ಯೂರಿಟಿ ಮತ್ತು ಆ ಬಂಟ ನಮ್ಮ ಠಾಣೆಯಲ್ಲಿ ಬೆಂಚನ್ನು ಕಾಯುತ್ತಿದ್ದಾರೆ.. 

"ಸಂದೀಪ್.. ಏನೂ ಯೋಚನೆ ಬೇಡ.. ಲಾವಣ್ಯ ಮೇಡಂ ಅವರ ಅಪ್ಪನ ಬಗ್ಗೆ ಪೂರ್ತಿ ವಿಚಾರಿಸಿ.. ಯಾಕೆ ಹಾಗೆ ಮಾಡಿದರು, ಎಲ್ಲಿ ಏನಾಯಿತು ಎಲ್ಲವನ್ನು ಹೊರಗೆ ತರುತ್ತೇವೆ.. ನೀವು ಏನೂ ಯೋಚಿಸಬೇಡಿ ಮೇಡಂ.. ನಿಮ್ಮ ಅಪ್ಪ ಒಳ್ಳೆಯವರು.. ಯಾವುದೋ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.. ಅದನ್ನು ನಾವು ಕಂಡು ಹಿಡಿಯುತ್ತೇವೆ.. ನೀವು ಆರಾಮಗಿರಿ.. ಅದರ ಸುಳಿವು ನಮಗೆ ಆಗಲೇ ಸಿಕ್ಕಿದೆ.. ಇನ್ನೊಂದು ವಾರ ನಂತರ ಎಲ್ಲವೂ ತಿಳಿಯಾಗುತ್ತದೆ.. "

ಸಂದೀಪನಿಗೆ ಬೆಸ್ಟ್ ವಿಷಸ್ ಹೇಳಿ.. ಲಾವಣ್ಯಳಿಗೆ ಹೋಗಿ ಬರುತ್ತೇನೆ ಮತ್ತೆ ಈ ಕೇಸಿನ ಪೂರ್ಣ ವಿವರ ಕೊಡುತ್ತೇನೆ ಎಂದು ಹೇಳಿ.. ತಮ್ಮ ಸಿಬ್ಬಂದಿಯೊಂದಿಗೆ ಹೊರಟರು..

ಇತ್ತ ಸಂದೀಪ ಲಾವಣ್ಯಳ ಕೈ ಹಿಡಿದು.. ಅವಳ ಮೊಗದಲ್ಲಿ ಕಾಣುತ್ತಿದ್ದ ಅಪರಾಧಿ ಮನೋಭಾವ ಸರಿಯಿಲ್ಲ ಅಂತ ಕಣ್ಣಲ್ಲೇ ಹೇಳಿ.. ಒಸರುತ್ತಿದ್ದ ಕಣ್ಣೀರನ್ನು ಒರೆಸಿ.. ಅವಳ ಕೈಗೆ ಹೂ ಮುತ್ತನ್ನು ನೀಡಿದನು..

ಮುಂಬರುವ ಆತಂಕದ ಕ್ಷಣಗಳ ಬಗ್ಗೆ ಯೋಚಿಸುತ್ತಾ.. ಸಂದೀಪನ ಬೆರಳುಗಳಿಗೆ ತನ್ನ ಕೆನ್ನೆಯ ಸ್ಪರ್ಶ ನೀಡಿ.. ಒಂದು ಹೂಮುತ್ತನ್ನು ಕೊಟ್ಟಳು.. !!!

ಸಂದೀಪನಿಗೆ ತಂಡ ಮಾತ್ರೆಗಳ ಕವರಿನಲ್ಲಿ ಒಂದು ಫ್ಲೈಯರಿನಲ್ಲಿ ಕಂಡ ಬರಹ
"ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಿ.. ಅಡ್ಡ ದಾರಿ ಹಿಡಿಯಬೇಡಿ"  ಅದನ್ನು ಕಂಡು ಭಾರವಾದ ಮನಸ್ಸಿನಿಂದ ಸಂದೀಪ್ ಮತ್ತು ಲಾವಣ್ಯ ಹಾಗೆ ತುಟಿಯರಳಿಸಿ ಪೇಲವ ನಗೆ ನಕ್ಕರು  !!!


1 comment:

  1. ಆತಂಕ ಮತ್ತು ರೋಮಾನ್ಸ್ ಇವುಗಳು ಹೆಣೆದ ಬಲೆಯಲ್ಲಿ ಸಿಕ್ಕಿ ಬಿದ್ದ ನಾಯಕ-ನಾಯಕಿಯರು. ದೇವರೇ, ಬೇಗನೇ ಎಲ್ಲವೂ ಸರಿಯಾಗಲಪ್ಪಾ! ನಾನೂ ಸಹ ಆತಂಕದಲ್ಲಿಯೇ ಇದ್ದೇನೆ!

    ReplyDelete