Friday, January 3, 2020

ಆಶಾ ಪಾಶ ಭಾಗ ೧

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಟ್ಯಾಕ್ಸಿ ಕಡೆಗೆ ಬಂದಾಗ.. ಸಂದೀಪ್ ಸ್ವಾಗತ ಎನ್ನುವ ಕನ್ನಡದ ಫಲಕ ಕಂಡಾಗ ಮನಸ್ಸಿಗೆ ಕುಶಿಯಾಯ್ತು ಏಳನೇ ತರಗತಿಯಾದ ಮೇಲೆ ವಿದೇಶಕ್ಕೆ ಹೋದವನು.. ಬರೋಬ್ಬರಿ ೨೦ ವರ್ಷ ಆದ ಮೇಲೆ ತನ್ನ ತಾಯಿನಾಡಿಗೆ ಕಾಲಿಡುತ್ತಿರುವುದು ಸಂತಸದ ಹೊನಲು ಹರಿಸಿತ್ತು..

ಅಪ್ಪ ಅಮ್ಮ ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರಿಂದ.. ತನ್ನ  ತಾಯಿ ನಾಡಿನ ಸೆಳೆತ ಬಲವಾಗಿಯೇ ಇತ್ತು.. ಆ ಗುಂಗಿನಲ್ಲಿ  ಮುಂದಡಿ ಇಟ್ಟಿದ್ದ.. ಒಂದು ಕೈ ತನ್ನ ಭುಜದ ಮೇಲೆ ಬಿತ್ತು.. ಯಾರಪ್ಪ ಇದು.. ಎಂದು ತಿರುಗಿನೋಡಿದಾಗ..

ಆ ಗಾಳಿಗೆ ಕೆದರಿದ ಕೂದಲು ಮುಖದ ಮೇಲೆಲ್ಲಾ ಹರಡಿತ್ತು.. ಮುಖವನ್ನು ಮರೆ ಮಾಡಿತ್ತು.. ಕಡು ನೀಲಿ ಬಣ್ಣದ ಜೀನ್ಸ್.. ಬಿಳಿಯ ಟೀ ಶರ್ಟ್.. ಅದಕ್ಕೆ ಒಪ್ಪುವ ಹೀಲ್ಸ್.. ನನ್ನದೇ ಎತ್ತರದ ಹುಡುಗಿ.. ಆ ಗಾಳಿಗೆ ತನ್ನ ತಲೆಗೂದಲನ್ನು ಸರಿಮಾಡಿಕೊಳ್ಳುವ ಪ್ರಯತ್ನದಲ್ಲಿ ಸೋಲುತ್ತಿದ್ದಳು.. ಸಂದೀಪ್ ಸುಮ್ಮನೆ ನೋಡುತ್ತಿದ್ದ. ಇದೆಲ್ಲ ಸುಮಾರು ಏಳೆಂಟು ಸೆಕೆಂಡುಗಳಲ್ಲಿ ನೆಡೆದಿದ್ದವು..

"ಎಸ್"

"ಆರ್ ಯು ಮಿ. ಸಂದೀಪ್"

"ಎಸ್"

"ಆಮ್ ಲಾವಣ್ಯ" ಎನ್ನುತ್ತಾ ಹಸ್ತ ಚಾಚಿದಳು..

ಒಹ್ ಹೆಸರಿಗೆ ಇವಳು ಬಂದಳ.. ಅಥವಾ ಹೆಸರಿಟ್ಟ ಮೇಲೆ ಇವಳು ಹೀಗಾದಳಾ

ಹಸ್ತ ಚಾಚಿ.. "ಹಲೋ"

"ವೆಲ್ಕಂ ಟು ಬೆಂಗಳೂರು.. ಸ್ವಾಗತ ನಿಮ್ಮ ನಾಡಿಗೆ"

ಕೋಗಿಲೆ ಸ್ವರ.. ಆಹಾ.. ಆ ಗಜಿಬಿಜಿಯಲ್ಲೂ ಅವಳ ಧ್ವನಿ ಗುರುತಿಸಿದ..

ಕೂದಲನ್ನು ಎತ್ತಿ ಪೋನಿ ಕಟ್ಟಿದಳು.. ಅವಳ ಮೊಗಾರವಿಂದ ಸೊಗಸಾಗಿ ಕಂಡಿತು..

"ಅರೆ ಲಾವಣ್ಯ.. ನೀನು.. ಸೂಪರ್ ಕಣೆ..  ಯಾರಪ್ಪ ಈ ದೇವಕನ್ಯೆ ಮುಖದರ್ಶನವಿಲ್ಲವಲ್ಲ ಅಂದುಕೊಂಡಿದ್ದೆ.. "

"ಸಂದೀಪ್ ಇನ್ನೂ ನೀನು ನಿನ್ನ ತಮಾಷೆ ಬಿಟ್ಟಿಲ್ಲ.. ಗಾಳಿಗೆ ಕೂದಲು ಹಾರಾಡುತ್ತಿದೆ ಏನು ಮಾಡಲಿ.. ನಿನ್ನ ನೋಡುವಷ್ಟರಲ್ಲಿ ಕಟ್ಟಿಕೊಂಡಿದ್ದ ತಲೆಗೂದಲು ಹೀಗಾಗಿ ಮಾರಿಯಮ್ಮ ಆಗಿದ್ದೆ.. "

"ಇರಲಿ ಇರಲಿ.. ಸುಮ್ಮನೆ ರೇಗಿಸಿದೆ.. ಕ್ಯಾಬ್ ಅಲ್ಲಿದೆ .. ಹೋಗೋಣ"

"ಅದನ್ನು ನಾನೇ ಸಿದ್ಧ ಮಾಡಿಸಿದ್ದು ಮೈ ಡಿಯರ್.. " ಡ್ರೈವರಿಗೆ  ಕೈ ತೋರಿಸಿ ಅಲ್ಲಿಗೆ ಬರುವಂತೆ ಹೇಳಿದಳು..

ಲಗೇಜನ್ನು ಇಬ್ಬರೂ ಒಂದೊಂದು ಹಿಡಿದು ತಳ್ಳಿಕೊಂಡು ಕ್ಯಾಬಿನ ಹತ್ತಿರ ಹೋದರು..
ಮೊದಲೇ ನಿಗದಿಯಾದಂತೆ.. ಬೆಂಗಳೂರಿನ ಪ್ರಮುಖ ಬಡಾವಣೆಯಲ್ಲಿನ ಒಂದು ಮನೆಗೆ ಬಂದರು.. ಸಾಮಾನ್ಯ ಮನೆ.. ಮಧ್ಯಮ ತರಗತಿಯ ಮನೆ.. ಸಂದೀಪ್ ಕೂಡ ವಿದೇಶದಲ್ಲಿದ್ದರೂ ಬಿಂಕ ಬಿಗುಮಾನ ಏನೂ ಇರಲಿಲ್ಲ.. ಸಾಮಾನ್ಯವಾಗಿಯೇ ಇದ್ದ..

ಲಾವಣ್ಯ ಅವರ ತಂದೆ ತಾಯಿ ಬಾಗಿಲಿಗೆ ಬಂದು ಮಾತಾಡಿಸಿ ಒಳಗೆ ಕರೆದೊಯ್ದರು.. ಒಬ್ಬಳೇ ಮಗಳು.. ಸಂದೀಪ್ ಮತ್ತು ಲಾವಣ್ಯ ಅವರ ಕುಟುಂಬ ಆಪ್ತರು .. ಅಕ್ಕ ಪಕ್ಕದ ಮನೆಯವಾಗಿದ್ದರು.. ಆ ಸಲುಗೆ ಸಂದೀಪ್ ಮತ್ತು ಲಾವಣ್ಯ ಮದ್ಯೆ ಇತ್ತು.. ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.. ಆನ್ಲೈನ್ ಪ್ರೀತಿ ಅಂತಾರಲ್ಲ.. ಹಾಗೆ  ಸ್ಕೈಪ್, ವಾಟ್ಸಾಪ್, ಹೀಗೆ ಹತ್ತಾರು ಮಾಧ್ಯಮಗಳ ಮೂಲಕ ಮಾತಾಡುತ್ತಲೇ ಇದ್ದರು.. ಒಮ್ಮೆ ಲಾವಣ್ಯ ವಿದೇಶದಲ್ಲಿನ ಸಂದೀಪ್ ಅವರ ಮನೆಗೂ ಹೋಗಿಬಂದಿದ್ದಳು.. ಹಾಗಾಗಿ ಯಾವುದೇ ತಕರಾರಿಲ್ಲದೆ ಮದುವೆಗೆ ಸಿದ್ಧವಾಗಿದ್ದರು.. ಅದಕ್ಕಾಗಿ ಈ ಭೇಟಿ.. ಜೊತೆಯಲ್ಲಿ ಒಂದು ಮುಖ್ಯ ಕೆಲಸವೂ ಇತ್ತು

ಮಾತು ಕತೆ ಸ್ನಾನ, ಊಟ  ಎಲ್ಲಾ ಮುಗಿಸಿ.. ಸಿದ್ಧ ಪಡಿಸಿದ್ದ ಕೋಣೆಯಲ್ಲಿ ಬಂದು ಮಲಗಿದ.. ದೇಹಕ್ಕೆ ಆಯಾಸವಾಗಿತ್ತು.. ದೀರ್ಘ ಪಯಣ..

ಬೆಳಿಗ್ಗೆ ಎದ್ದಾಗ ಹೊತ್ತಾಗಿತ್ತು.. ಮನೆಯಲ್ಲಿ ಎಲ್ಲರೂ ತಿಂಡಿಗೆ ಸಿದ್ಧವಾಗಿದ್ದರು..

ಸಾರಿ ಅಂತ ಹೇಳಿ.. ಲಗುಬಗೆಯಿಂದ ಸಿದ್ಧವಾಗಿ ತಿಂಡಿ ತಿಂದು.. ಲೋಕಾಭಿರಾಮವಾಗಿ ಮಾತಾಡುತ್ತಾ.. "ಅಂಕಲ್, ನನಗೆ ಆಫೀಸಿನ ಕೆಲಸ ಇದೆ... ಹಾಗೆ ಇಲ್ಲಿಗೆ ಬಂದಿರುವ ಕೆಲಸ ನಿಮಗೆ ಗೊತ್ತಲ್ಲ.. ಅದನ್ನು ಮುಗಿಸಿಕೊಂಡು ಸಂಜೆ ಹೊತ್ತಿಗೆ ಬರುತ್ತೇನೆ.. ಆಮೇಲೆ ಶಾಪಿಂಗ್ ಹೋಗೋಣ... ಲಾವಣ್ಯ ಅಷ್ಟು ಹೊತ್ತಿಗೆ ನೀನು ನಿನ್ನ ಕೆಲಸ ಮುಗಿಸಿಕೊಂಡಿರು.. ಸಂಜೆಯ ಹೊತ್ತಿಗೆ ನೀ ಫ್ರೀ ಆಗಿರು .. "

"ಸರಿ ಸಂದೀಪ.. ನನ್ನ ಕಾರು ತೆಗೆದುಕೊಂಡು ಹೋಗು.. ಡ್ರೈವರ್ ಇದ್ದಾನೆ.. ನಿನಗೆ ದಾರಿ ಹುಡುಕೋಕೆ ಕಷ್ಟವಾಗೋಲ್ಲ.. "

"ಸರಿ ಅಂಕಲ್.. ಬೈ ಲಾವಣ್ಯ.. "

ಅಲ್ಲಿಂದ ಹೊರಟ..ಮೊಬೈಲಿನಲ್ಲಿ ಜೆಪಿಎಸ್ ಹಾಕಿಕೊಂಡು ಡ್ರೈವರಿಗೆ ಸೂಚನೆ ಕೊಡುತ್ತ ತನ್ನ ಆಫೀಸಿಗೆ ಬಂದ.. ಎರಡು ಘಂಟೆಗಳ ಮೀಟಿಂಗ್. ಅದನ್ನು ಮುಗಿಸಿ ಮತ್ತೆ ಕಾರಿನಲ್ಲಿ ಕೂತು ಹಾಗೆ ಕಣ್ಣು ಮುಚ್ಚಿದ..

"ಸರ್. ನಿಮ್ಮ ಜಾಗ ಬಂತು.. "

ಕಣ್ಣು ಬಿಟ್ಟಾಗ.. ಆ... ಆ .. ಆ ಅಹ್ ಎನಿಸಿತು.. ಲಾವಣ್ಯ ಕಳಿಸಿದ ಚಿತ್ರಗಳು... ಆ ಪ್ರದೇಶವನ್ನು ಪರಿಚಯ ಮಾಡಿಕೊಳ್ಳಲ್ಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ.. ಕಾರಿನಿಂದ ಇಳಿದು.. ಆ ಮನೆಯ ಕಡೆಗೆ ಹೆಜ್ಜೆ ಹಾಕಿದ.. ಸೆಕ್ಯೂರಿಟಿ ಕಾಣಲಿಲ್ಲ.. ಆದರೆ ಬೀಗದ ಕೈ ಇದ್ದದ್ದರಿಂದ ತೋಡಿನರೇ ಇರಲಿಲ್ಲ ..

ಗೇಟಿನ ಬೀಗ ತೆಗೆದ, ಕಿರ್ ಎಂದು ಸದ್ದು ಮಾಡುತ್ತಾ ಗೇಟು ತೆರೆದುಕೊಂಡಿತು. ಒಂದು ಕಾಲದಲ್ಲಿ ಭವ್ಯವಾದ ಮನೆತನವನ್ನು ತನ್ನೊಡಲಲ್ಲಿ ಇಟ್ಟುಕೊಂಡು ಅರಳಿದ್ದ ಸದನ.. ಇಂದು ಅವಶೇಷವಾಗಿ ನಿಂತಿತ್ತು.. ಅಕ್ಕಪಕ್ಕದಲ್ಲಿ ಆಲದ ಮರಗಳು ತನ್ನ ಬಿಳಲುಗಳನ್ನು ಎಂದೋ ಬೇರು ಬಿಟ್ಟಿದ್ದೇನೆ ಎನ್ನುವಂತೆ ಗಟ್ಟಿಯಾಗಿ ನಿಂತಿತ್ತು.. ಮಾವಿನ ಮರ, ಹೂವಿನ ಗಿಡಗಳು, ನೆರಳಿನ ಮರಗಳು.. ಸುತ್ತಲೂ ಆವರಿಸಿಕೊಂಡಿದ್ದವು.. ಮನೆಯ ಮುಂದೆ ಒಂದು ಪುಟ್ಟ ಪೋರ್ಟಿಕೊ.. ಕಮಾನಿನ ಚಾವಣಿ.. ಒಳಗೆ ಕಪ್ಪು ಬಣ್ಣದ ಕಡಪ ಕಲ್ಲಿನ ಹಾಸು.. ಶೂ ಕಳಚಿ.. ಬಾಗಿಲಿನ ಬೀಗ ತೆಗೆದು.. ಒಳಗೆ ಕಾಲಿಟ್ಟ.. ಏನೋ ಒಂದು ರೀತಿಯ ಸಂತೋಷ.. ತನ್ನ ವಂಶದ ಹಿರಿಯರ ಏಳಿಗೆಯನ್ನು ಕಂಡ ಮನೆಯಿದು. ಒಳಗೆಲ್ಲಾ ಓಡಾಡಿಬಂದ..

"ಸರ್ ಕಾಫಿ ತರಲೆ.." ಆ ದನಿಗೆ ಬೆಚ್ಚಿ ತಿರುಗಿದ.. ಸೆಕ್ಯೂರಿಟಿ ನಿಂತಿದ್ದರು..
ಆಗಲೇ ಮತ್ತೆ ಭುವಿಗೆ ಜಾರಿದ್ದು. "ಏನಪ್ಪಾ ಎಲ್ಲಿಹೋಗಿದ್ರಿ ."
"ಸರ್ .. ಕಾಫಿ ಸಿಗರೇಟಿಗೆ ಹೋಗಿದ್ದೆ"
"ಸರಿ ಸರಿ.. ಕಾಫೀ ಬೇಡ.. ಪರವಾಗಿಲ್ಲ.. ನಾ ಅರಾಮಿದ್ದೀನಿ.. ನನಗೇನು ಬೇಡ.."

ಮುಂದಿನ  ಪ್ರಶ್ನೆಗಳಿಗೆ ಅವಕಾಶ ಕೊಡದೆ.. ಎಲ್ಲವನ್ನೂ ಹೇಳಿ ಮುಗಿಸಿದ.. ಸೆಕ್ಯುರಿಟಿಗೆ ಅರ್ಥವಾಯಿತು.. ತನ್ನ ಉಪಸ್ಥಿತಿ ಬೇಡ ಎಂದು.. ಹೊರಗೆ ಬಂದು ತನ್ನ ಕುರ್ಚಿಯಲ್ಲಿ ಆಸೀನರಾದರು..

ಸಂದೀಪ್ ಮನೆಯೊಳಗೆಲ್ಲ ಓಡಾಡಿ.. ಒಂದು ಚಿತ್ರವನ್ನು ತೆಗೆದುಕೊಂಡು... ಅದನ್ನೇ ನೋಡುತ್ತಾ ಹೋದ.. ತನಗೆ ಸಿಕ್ಕ ಮಾಹಿತಿ ಸರಿಯಾಗಿಯೇ ಇತ್ತು.. ಆ ಚಿತ್ರವನ್ನೇ ಗಮನಿಸುತ್ತಾ ಹೋದ.. ಕೊಟ್ಟ ಸುಳಿವು.. ಕೊಟ್ಟ ಮಾಹಿತಿ.. ಲಾವಣ್ಯ ಕಳಿಸಿದ ಚಿತ್ರಗಳು ಎಲ್ಲವೂ ಒಂದಕ್ಕೊಂದು ಹೊಂದಾಣಿಕೆಯಾಗಿ ತನ್ನ ಸುಳಿವನ್ನು ತಾನೇ ಆ ಚಿತ್ರ ನೀಡಿತು..

ಆ ಮನೆಯನ್ನು ಲಾವಣ್ಯಳೇ ಖುದ್ದಾಗಿ ದಿನವೂ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಳು.. ಪ್ರತಿದಿನವೂ ಕೆಲಸಗಾರನನ್ನು ಕರೆತಂದು.. ಕಸ ಗುಡಿಸಿ, ಒರೆಸಿ, ರಂಗೋಲಿ ಹಾಕಿ, ದೇವರ ಮನೆಯಲ್ಲಿ ದೀಪ ಹಚ್ಚಿ ಬರುತ್ತಿದ್ದಳು.. ಬೆಳಿಗ್ಗೆ ಮತ್ತು ಸಂಜೆ ದೇವರ ದೀಪ ಹಚ್ಚಿ ಬರುವ ಕೆಲಸ ಅವಳದ್ದೇ.. ಹಾಗಾಗಿ ವರ್ಷಗಳಿಂದ ವಾಸವಾಗಿರದೆ ಇದ್ದರೂ..ಮನೆಯೊಳಗೆ ಸ್ವಚ್ಛವಾಗಿಯೇ ಇತ್ತು..

ಆ ಫೋಟೋವನ್ನು ಗೋಡೆಯಿಂದ ತೆಗೆದು.. ಮತ್ತೆ ಗಮನಿಸಿ.. ಅದು ಕೊಟ್ಟ ಸುಳಿವಿನ ಮೂಲ ಹುಡುಕುತ್ತಾ ಹೋದ.. ಮನೆಯ ಮಾಳಿಗೆ ಹತ್ತಿ.. ಅಲ್ಲಿನ ಕೋಣೆಯಲ್ಲಿ ಕೂತು. ಆ ಸುಳಿವಿನ ಆಧಾರದ ಮೇಲೆ.ಒಂದು ದೊಡ್ಡ ಪೆಟ್ಟಿಗೆಯ ಮುಚ್ಚಳ ತೆಗೆದ .. ಅಚ್ಚರಿ ಕಾದಿತ್ತು .. ಆ ಪೆಟ್ಟಿಗೆ ಮುಚ್ಚಳ ತೆಗೆದರೆ ಅದರೊಳಗೆ ಮೆಟ್ಟಿಲುಗಳು ಕಂಡಿತು.. ಪೆಟ್ಟಿಗೆ ಹತ್ತಿ.. ಆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದ.. ಜೊತೆಯಲ್ಲಿದ್ದ ಮೊಬೈಲ್ ಟಾರ್ಚ್ ಸಹಾಯ ಮಾಡಿತು.. ಈ ವಿಚಾರ ತಮ್ಮಿಬ್ಬರ ಕುಟುಂಬಕ್ಕೆ ಮಾತ್ರ ಗೊತ್ತಿದ್ದರಿಂದ.. ಮನೆಯನ್ನು ಪಾಳು ಬಿಟ್ಟರೆ ರಿಯಲ್ ಎಸ್ಟೇಟ್ ತಂಡ ಕಿರಿ ಕಿರಿ ಮಾಡುತ್ತೆ ಅಂತ ಗೊತ್ತಿದ್ದರಿಂದ.. ಅದಕ್ಕೊಂದು ಸೆಕ್ಯೂರಿಟಿ.. ಜೊತೆಯಲ್ಲಿ ದೀಪದ ವ್ಯವಸ್ಥೆ. ಸಿಸಿ ಟಿವಿ.. ಮತ್ತೆ ಲಾವಣ್ಯ ಕುಟುಂಬ ವಾರಕ್ಕೊಮ್ಮೆ ಇಲ್ಲಿಗೆ ಬಂದು.. ಸಂಜೆ ತನಕ ಇದ್ದು ಹೋಗುವುದು ಅಭ್ಯಾಸವಾಗಿತ್ತು.. ಹಾಗಾಗಿ ವಾಸ ಮಾಡುತ್ತಿರುವ ಎಲ್ಲಾ ಸೂಚನೆಗಳು ಇರುವ ಹಾಗೆ ನೋಡಿಕೊಂಡಿದ್ದರು..

ಮೆಟ್ಟಿಲುಗಳನ್ನು ಇಳಿದು ಬಂದ ಮೇಲೆ.. ಅಲ್ಲೊಂದು ಪುಟ್ಟಾ ಕೋಣೆ. ಅದಕ್ಕೊಂದು ಬೀಗ.. ತನ್ನ ಬ್ಯಾಗಿನಲ್ಲಿದ್ದ ಕೀ ಗೊಂಚಲನ್ನು ತೆಗೆದು.. ಅದರ ನಂಬರ್ ನೋಡಿ, ಬೀಗ ತೆಗೆದು .. ಒಳಗೆ ಅಡಿ ಇಟ್ಟ.. . . ತಲೆಗೆ ಬಲವಾದ ಪೆಟ್ಟು ಬಿದ್ದಂತೆ ಆಯ್ತು.. ಹಾಗೆ ಕುಸಿದು ಬಿದ್ದ.. ಕಣ್ಣು ಮುಚ್ಚುವ ಮುನ್ನ .. ಅಸ್ಪಷ್ಟವಾದ ಮಾತು "ನೀನಾ.. ನೀನು ಹೀಗೆ..... ನಾ ಏನು .....  "


ಮುಂದೆ.. ... ಬರುತ್ತೆ.. !!!

5 comments:

 1. Anna prerthi jothege horror suspense thriller yeniduuuu
  Munde yaavaga ????

  ReplyDelete
 2. ದೂರದರ್ಶನದ logo ತಿರುಗುತ್ತ ನಮಗೆ ಫ್ಲಾಶ್‌ back ತಿಳಿಸುವುದು ಯಾವಾಗ?

  ReplyDelete
 3. ಶ್ರೀಕಾಂತ, ನಿಮ್ಮ ಕಿತಾಪತಿ ಸುರುವಾಯ್ತು. ನಮ್ಮನ್ನು ಸಸ್ಪೆನ್ಸ್ ಒಳಗೆ ತಿರುಗಿಸಿ ಕೊಲ್ಲುತ್ತೀರಾ?

  ReplyDelete
 4. ಸೊಗಸಾದ ಆರಂಭ..👌👌

  ReplyDelete
 5. I saw this post which is good. Plz check mine also Bheemeshwari

  ReplyDelete