Friday, December 27, 2019

ಒಲಿದು ಹೊಲೆದ ಬಂಧ!!!

ಬಲಶಾಲಿಯೇನೂ ಅಲ್ಲ.. ರವೀಶ.. ಆದರೆ ಅವನ ತೋಳಿನ ಸ್ನಾಯುಗಳು ನಿಮಿಷಕ್ಕೊಮ್ಮೆ ಊದಿ ಬಿಡುತ್ತಿದ್ದವು.. ಮತ್ತೆ ಒಂದೈದು ಕ್ಷಣಗಳು ಯಥಾಸ್ಥಿತಿಗೆ ಮರಳುತ್ತಿದ್ದವು.. ಕೋಣೆಯಲ್ಲೆಲ್ಲಾ ಕತ್ತಲೆಯೋ ಕತ್ತಲೆ ಅನುಭವ .. ಏನಾಗುತ್ತಿದೆ ಅರಿವಿಲ್ಲ.. ಕಣ್ಣಿಗೆ ಕಪ್ಪುಗಟ್ಟಿತ್ತು.. ನೋವು ಇದೆ ಅಂದರೆ ಇದೆ ಇಲ್ಲ ಅಂದರೆ ಇಲ್ಲ.. ಈ ರೀತಿಯ ಅವಸ್ಥೆ ಅವನದು..

ಪ್ರಯಾಸ ಪಟ್ಟು ಕಣ್ಣು ತೆರೆದ.. ಎದುರಿನ ಗೋಡೆ ಗಡಿಯಾರ ಒಂಭತ್ತು ನಲವತ್ತು ಅಂತ ಸಮಯ ಸಾರುತ್ತಿತ್ತು.. ಅದು ಬೆಳಿಗ್ಗೆಯೋ ಸಂಜೆಯೋ ಅರಿಯದು.. ಎಲ್ಲೆಲ್ಲೂ ನೀಲಿವರ್ಣದ ಸಮವಸ್ತ್ರಧಾರಿಗಳು.... ಒಬ್ಬಾತ ಬಳಿಬಂದ..

"ರವೀಶ ಏನಾದರೂ ಕುಡಿಯುತ್ತೀರಾ.. "

ತಲೆ ಅಲ್ಲಾಡಿಸಿದ.. ಬಾಯಿಂದ ಮಾತುಗಳು ಹೊರಬರುತ್ತಿಲ್ಲ.. ಅರೆ ಏನಾಯಿತು.. ಮರದ ಬಾಯಿಯಾಗಿದ್ದರೆ ಇಷ್ಟೊತ್ತಿಗೆ ಒಂದು ಹತ್ತು ಜೊತೆ ಒಡೆದು ಹೋಗುತ್ತಿತ್ತು ಎಂದು ಸಿಕ್ಕ ಸಿಕ್ಕವರೆಲ್ಲರ ಹತ್ತಿರ ಪ್ರೀತಿಯಿಂದ ಬಯ್ಸಿಕೊಳ್ಳುತ್ತಿದ್ದ ರವೀಶನ ಗಂಟಲಿಂದ ಮಾತುಗಳಿಲ್ಲ..

ಕೈಯಿಂದಲೇ ಸನ್ನೆ ಮಾಡಿದ.. ಏನಾಗಿದೆ ಅಂತ.. "ಏನಿಲ್ಲ ಸರ್ ಒಂದು ಪುಟ್ಟ ಅಪಘಾತ.. ಸರಿ ಹೋಗುತ್ತೀರಾ ಬಿಡಿ.. " ಮುಂದಿನ ವಿವರ ಆವ ಹೇಳಿದನೋ ಇಲ್ಲ ರವೀಶನಿಗೆ ಕೇಳಿಸಿತೋ ಅರಿಯದು..

ಆಸ್ಪತ್ರೆ ಎಂದರೆ ಅದೊಂದು ರೀತಿಯ ಬಲವಂತದ ಮಾಘ ಸ್ನಾನ ಎಂದುಕೊಂಡಿದ್ದ ರವೀಶನಿಗೆ.. ಇದೊಂದು ರೀತಿಯ ಪರೀಕ್ಷೆ ಎನ್ನಬಹುದು.. ಏನಾಗಿದೆ ಗೊತ್ತಿಲ್ಲ.. ಗೊತ್ತಿದ್ದರೂ ಹೇಳದ ಸಮವಸ್ತ್ರಧಾರಿಗಳು.. ನೀ ಜೊತೆಯಿದ್ದರೆ ನನಗೆ ಆನೆ ಬಲ ಕಣೆ ಎಂದು ಮಾತಿಗೆ ಹೇಳುತ್ತಿದ್ದ ರವೀಶನ ತೋಳುಗಳಿಗೆ ಕ್ಷಣಕ್ಕೊಮ್ಮೆ ಆನೆ ಬಲ ಬರುತ್ತಿತ್ತು..

ಅದೇನು ಅಂದ್ರಾ.. ಬಿಪಿ ಮಾನಿಟರ್ ಮಾಡೋಕೆ ತೋಳಿಗೆ ಕಟ್ಟಿದ್ದ ಉಪಕರಣದ ಬೆಲ್ಟ್.. ಕ್ಷಣಕ್ಕೊಮ್ಮೆ ಗಾಳಿ ಒತ್ತಡ ಹೇರಿ.. ತೋಳುಗಳು ಸಿಕ್ಸ್ ಪ್ಯಾಕ್ ಸೆವೆನ್ ಪ್ಯಾಕ್ ಯೈಟ್ ಪ್ಯಾಕ್ ಎನ್ನುವಂತೆ ಭಾಸವಾಗುತ್ತಿದ್ದ ಕ್ಷಣಗಳು.. ಏನೋ ಒಂದು ರೀತಿಯ ಖುಷಿ.. ನನಗೂ ಪೈಲ್ವಾನ್ ಆಗುವ ಯೋಗವಿದೆ ಅಂತ..

ಅಂದಿನ ರಾತ್ರಿ ನೋಡಲು ಯಾರೂ ಬರಲಿಲ್ಲ.. ಅಥವಾ ಬಂದಿದ್ದರೂ ಅರಿವಿರಲಿಲ್ಲ..ಮರುದಿನ ನೋಡಲು ಯಾರೋ ಬಂದರು.. ಗುರುತು ಸಿಗಲಿಲ್ಲ.. ಗಗನಯಾತ್ರಿಗಳ ಹಾಗೆ ಕೈಗೆ, ಮೊಗಕ್ಕೆ, ದೇಹಕ್ಕೆ ಎಲ್ಲೆಲ್ಲೂ ಸಮವಸ್ತ್ರ.. ಮೆಲ್ಲಗೆ ಮೊಗದ ಮೇಲಿನ ಬಟ್ಟೆ ತೆಗೆದು.. ನಾನು ಕಣೋ ರವೀಶ ಎಂದಾಗ.. ಏನಾಯಿತು ನನಗೆ ಎಂದು ಕೇಳಿದ.. "ಹೀಗಾಯಿತು.. ಹಾಗಾಯಿತು.. ತಲೆ ಕೆಡಿಸಿಕೊಳ್ಳಬೇಡ.. ಎವ್ರಿಥಿಂಗ್ ವಿಲ್ ಬಿ ಆಲ್ ರೈಟ್" ಅಂತ ಹೇಳಿ ತಲೆ ಸವರಿ ಕಣ್ಣುಗಳಲ್ಲಿ ಜಿನುಗುತ್ತಿದ್ದ ಭೋರ್ಗರೆತ ತಡೆದು ಹೊರಟೆ ಬಿಟ್ಟಿತ್ತು ಆ ವ್ಯಕ್ತಿ..

ಅಂದಿನಿಂದ.. ಅದೊಂತರ ನಿರಂತರ ಕಾಯಕವಾಗಿ ಬಿಟ್ಟಿತ್ತು.. ಬರುವವರು ಬಂದು ಕುಶಲ ಕ್ಷೇಮ ವಿಚಾರಿಸಿ.. ತೋಳುಗಳಲ್ಲಿ ಆನೆ ಬಲವಿದ್ದರೂ ಧೈರ್ಯ ಹೇಳಿ ಹೋಗುತ್ತಿದ್ದರು... ಗಂಜಿ, ಕಾಫಿ, ಮಾತ್ರೆಗಳು, ನೀರು ಬಾಯಿಗೆ ಹೋಗುತ್ತಿದ್ದರೇ.. ಇಂಜೆಕ್ಷನ್ ರೂಪದಲ್ಲಿ ಸುಧಾರಿಸಿಕೊಳ್ಳೋಕೆ ಔಷಧಿಗಳು ನರಗಳ ಮೂಲಕ  ದೇಹವನ್ನು  ಸೇರುತ್ತಿದ್ದವು.. ಕಣ್ಣಿನ ಭಾದೆ ಇದ್ದರೂ, ಅಲ್ಲಿನ ಸಮವಸ್ತ್ರಧಾರಿಗಳ ಹತ್ತಿರ ನಿಮ್ಮ ಊರು, ನಿಮ್ಮ ಕೆಲಸ, ನಿಮ್ಮ ಹೆಸರು ಅದು ಇದು ಮಾತಾಡುತ್ತಾ, ಅವರನ್ನು ನಗಿಸುತ್ತಾ.. "ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವನಿಗೆ ಒಂದು ಚೂರು ರೆಸ್ಟ್ ಎಂದು ಹೀಗಾಗಿದೆ" ಎಂದು ಅವರಿಗೆ ಹೇಳುತ್ತಾ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ ರವೀಶ..

ಒಂದು ಕಣ್ಣು ಮುಚ್ಚಿದ್ದರೂ.. ಇನ್ನೊಂದು ಕಣ್ಣಿನಲ್ಲಿ ಸುತ್ತಮುತ್ತಲ ಜಗತ್ತು ನೋಡುತ್ತಿದ್ದ ರವೀಶನಿಗೆ ಅಚ್ಚರಿ ಕಾದಿತ್ತು.. ಹಸಿರು ಬಣ್ಣದ ಕೋಟು ತೊಟ್ಟ ಒಬ್ಬರು ಬಂದು.. ರವೀಶ ಹೇಗಿದ್ದೀರಾ.. ನಾಲಿಗೆ ತೆಗೆಯಿರಿ.. ಕೈ ಎತ್ತಿ.. ಕೂರೋಕೆ ಆಗುತ್ತಾ.. ಎಲ್ಲಿ ಕಾಲನ್ನು ಆಡಿಸಿ.. ಒಂದು ಕಾಲನ್ನು ಮೇಲೆ ಎತ್ತಿ.. ಆ ಗುಡ್.. ಹುಷಾರಾಗುತ್ತೀರಾ ಯೋಚನೆ ಮಾಡ್ಬೇಡಿ ಎಂದು ಧೈರ್ಯ ತುಂಬಿ ಹೋಗುತ್ತಿದ್ದರು.. ಅವರ ಹೆಸರು ತಿಳಿದುಕೊಳ್ಳುವ ಬಯಕೆ.. ಆದರೆ ಕೇಳುವುದು ಹೇಗೆ.. ಮಾರನೇ ದಿನ ಹೇಗಾದರೂ ಹೆಸರು ಕಂಡು ಹಿಡಿಯಲೇ ಬೇಕು ಎಂದು ಆಕೆ ತೊಟ್ಟಿದ್ದ ಕೋಟಿನ ಅಂಚಿನಲ್ಲಿ ಕಂಡ ಹೆಸರು ಒಂದು ಕ್ಷಣ ಒಂದು ಕಣ್ಣನ್ನು ಅರಳಿಸಿತು..

"ಗೀತಾ" ಅರೆ ವಾಹ್.. ಅವನಿಗೆ ಬಲು ಇಷ್ಟವಾದ ಪ್ರೀತಿಯ ಹೆಸರು.. ಜಗದಲ್ಲಿ ಆ ಹೆಸರನ್ನು ಅವನು ಪ್ರೀತಿಸಿದಷ್ಟು ಯಾರೂ ಪ್ರೀತಿಸಲು ಸಾಧ್ಯವಿಲ್ಲವೇನೋ ಎನ್ನುವಷ್ಟು. ಮೊಗ ನೋಡಿದ.. ಸ್ವಲ್ಪ ಗೋಧಿಬಣ್ಣ.. ಮುಖ ಲಕ್ಷಣ ಅದೇ ಇತ್ತು.. ಮನಸ್ಸು ಮೆಲ್ಲಗೆ ಕಾಲೇಜಿನ ದಿನಗಳಿಗೆ ಜಾರಿತ್ತು..

"ಮೇಡಂ.. ನಿಮ್ಮ ನೋಟ್ಸ್ ಕೊಡುತ್ತೀರಾ.. "

"ಇವತ್ತು ಸ್ವಲ್ಪ ಬರೀಬೇಕು.. ನಾಳೆ ಕೊಟ್ಟರೆ ಆಗುತ್ತಾ.. ನಾಳೆ ಖಂಡಿತ ಕೊಡುವೆ"

"ಸರಿ ಮೇಡಂ"

ಸೂರ್ಯನ ಉದಯಕ್ಕೆ ಕಾದು... ಶಿಸ್ತುಗಾರ ಪುಟ್ಟಸ್ವಾಮಿಯ ಹಾಗೆ ಸಿದ್ಧವಾಗಿ ಕಾಲೇಜಿಗೆ ಬಂದ.. ಅವಳನ್ನು ಕಂಡ ಕೂಡಲೇ.. ಹಲ್ಲು ಕಿರಿದ.. ಅವಳು ನಸು ನಕ್ಕಳು.. ಕಾಲೇಜು ಮುಗಿದು ಮನೆಗೆ ಹೊರಡಲು ತಯಾರಾಗಿದ್ದಾಗ.. ಅವಳೇ ಬಂದು.. "ರವೀಶ.. ಎರಡು ದಿನ ಆದ ಮೇಲೆ ಕೊಡಿ.. " ಎಂದು ನಾ ಅವಧಿ ಕೇಳುವ ಮೊದಲೇ ತನ್ನ ಸಮಯ ಕೊಟ್ಟು ಕೈಬೀಸಿಕೊಂಡು ನಗುತ್ತಾ ರವೀಶನ ಮುಂದೆ ಸಾಗಿದ್ದಳು.. ಸುಂದರ ನೆಡಿಗೆಯ ಆ ಹುಡುಗಿ ಬಸ್ ಸ್ಟಾಪ್ ಹತ್ತಿರ.. ಒಮ್ಮೆ ತಿರುಗಿ ನೋಡಿ... ಕಿಸಕ್ ಅಂತ ಕಣ್ಣಿನಲ್ಲಿಯೇ ನಕ್ಕಾಗ.. ರವೀಶನ ಎದೆ ನಗಾರಿಯಾಗಿತ್ತು..

ಮುದ್ದಾದ ಅಕ್ಷರಗಳು.. ಪುಸ್ತಕದಲ್ಲೆಲ್ಲಾ ಹರಡಿತ್ತು... ಎಷ್ಟು ನಾಜೂಕಾಗಿ ನೋಟ್ಸ್ ಬರೆದುಕೊಂಡಿದ್ದಾಳೆ.. ಹಾಟ್ಸ್ ಆಫ್ ಗೀತಾ.. ಎಂದು.. ಹೇಳುತ್ತಾ.. ತನಗೆ ಬೇಕಾದಷ್ಟು ನೋಟ್ಸ್ ಬರೆದುಕೊಂಡು.. ಅವಳು ಎರಡು ದಿನ ಅವಧಿಕೊಟ್ಟಿದ್ದರೆ.. ಇವನು ಒಂದೇ ದಿನದಲ್ಲಿ ಮುಗಿಸಿ.. ಮಾರನೇ ದಿನವೇ ನೋಟ್ಸ್ ವಾಪಸ್ ಕೊಡಲು ಅವಳನ್ನು ನೋಡಲು ಹೋದ..

"ನಾಳೆ ಕೊಟ್ಟಿದ್ದರೆ ಚೆನ್ನಾಗಿತ್ತು.. ಇವತ್ತು ಆ ಕ್ಲಾಸ್ ಇಲ್ಲ.. ಪುಸ್ತಕ ಸುಮ್ಮನೆ ಹೊರೆ.. ನಾಳೆ ಕೊಡಬಹುದಾ ಇಫ್ ಯು ಡೋಂಟ್ ಮೈಂಡ್.. "

ಆ ಧ್ವನಿಗೆ ಯಾರೇ ಆದರೂ ಮರುಳಾಗಬೇಕಿತ್ತು.. ಅರೆ ನನ್ನ ಗೀತಾ.. ಬೆಟ್ಟದ ಮೇಲಿಂದ ಧುಮುಕು ಅಂದರೂ ಧುಮುಕುವ ರವೀಶನ ಮನಸ್ಸು.. ಅವಳು ಹೇಳಿದ್ದಕ್ಕೆ ಸರಿ ಎಂದಿತ್ತು..

ಮಾರನೇ ದಿನ.. ಹೊಸ ವರ್ಷ.. ಶುಭಾಶಯಗಳನ್ನು ಹೇಳಿ ತನ್ನ ಮನದಿಂಗಿತ ಹೇಳಬಹುದು ಎಂದು.. ಎರಡು ಮುದ್ದಾದ ಬಿಳಿ ಪಾರಿವಾಳಗಳು ಪ್ರೀತಿಸುವ ಹೃದಯವನ್ನು ಎತ್ತಿಕೊಂಡು ಹಾರುತ್ತಿರುವ ಒಂದು ಸುಂದರ ಗ್ರೀಟಿಂಗ್ ಕಾರ್ಡ್ .. ಅದರಲ್ಲಿ "ಒಲವಿನ ಗೀತಾ.. ನನಗೆ ನೀವೆಂದರೆ ಇಷ್ಟ.. ನಿಮಗೂ ಇಷ್ಟವಾದರೆ.. ಈ ಹೀರೋ ಪೆನ್ನಿನಲ್ಲಿ ಆಟೋಗ್ರಾಫ್ ಹಾಕಿ.. ಪೆನ್ನನ್ನು ನೀವು ಇಟ್ಟುಕೊಳ್ಳಿ.. ನಿಮ್ಮ ಹೀರೊ ಆಗೋಕೆ ನನಗೆ ಅವಕಾಶ ಕೊಡಿ" ಅಂತ ಪುಟ್ಟದಾದ ನೋಟ್ ಒಂದನ್ನು ಆ ಪುಸ್ತಕದಲ್ಲಿಟ್ಟು.. ಅವಳಿಗೆ ಕೊಟ್ಟ.

ಪುಸ್ತಕ ಪಡೆದವಳು.. ಯಾವುದೇ ಭಾವ ತೋರದೆ ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಥ್ಯಾಂಕ್ಸ್ ರವೀಶ ಎಂದು ಹೇಳಿ ಮಿಲಿಯನ್ ವಾಟ್ ನಗು ಕೊಟ್ಟು ಮನೆಯ ಹಾದಿ ಹಿಡಿದಳು..

ಮರುದಿನ ಅವಳ ಬರುವಿಕೆಗೆ ಕಾಯುತ್ತಿದ್ದ.. ತನಗಿಷ್ಟವಾದ ನೀಲಿ ವರ್ಣದ ಚೂಡಿದಾರ.. ತಲೆಗೆ ಚಂದದ ಮಲ್ಲಿಗೆ ಹೂವು ಅವಳ ನೀಳ ಜಡೆಯನ್ನು ಅಲಂಕರಿಸಿತ್ತು.. ನೀಳ ನಾಸಿಕ.. ಮುದ್ದಾದ ಕಣ್ಣುಗಳು.. ಇನ್ನೇನೂ ನಾವಿಬ್ಬರೂ ಕೂಡಿಬಿಡುತ್ತೇವೆ ಎನ್ನುವಂತಹ ಅವಳ ಹುಬ್ಬು.. ಕುಂಕುಮದ ಬೊಟ್ಟು.. ಎರಡೂ ಕೈಗಳಲ್ಲಿ ಯಾವಾಗಲೂ ಮಿನಿಮಮ್ ಆರು ಆರು ಬಳೆಗಳು.. ಕಾಲಲ್ಲಿ ಗೆಜ್ಜೆ.. ಅದುವರೆವಿಗೂ ಅವಳು ಅಷ್ಟು ಸುಂದರಿ ಎನಿಸಿರಲಿಲ್ಲ

ಹತ್ತಿರ ಬಂದು.. "ರವೀಶ.. ಕಾಲೇಜು ಮುಗಿದ ಮೇಲೆ ಸಿಗುತ್ತೀರಾ.. " ಅಷ್ಟೇ ಹೇಳಿ ತನ್ನ ಗೆಳತಿಯರ ಕೂಡ ಹೊರಟಿದ್ದಳು.. ಅಂದು ಕಾಲೇಜಿನಲ್ಲಿ ಏನು ಪಾಠ ಹೇಳಿದರೋ.. ಏನು ನೋಟ್ಸ್ ಕೊಟ್ಟರೋ ಒಂದೂ ಅರಿವಿಲ್ಲ.. ಕೊನೆ ಪೀರಿಯಡ್ಡಿಗೆ ಕಾಯುತ್ತಿತ್ತು ಮನಸ್ಸು..

ಘಂಟೆ ಜೋರಾಗಿ ಹೊಡೆದಾಗ.. ಅದು ಕೇಳಿಸಲಿಲ್ಲ.. ಕಾರಣ ರವೀಶನ ಹೃದಯ ಅದಕ್ಕಿಂತ ಜೋರಾಗಿ ಹೊಡೆದುಕೊಳ್ಳುತ್ತಿತ್ತು..

ಕಾಲೇಜಿನ ಕ್ಯಾಂಟೀನ್ ಹತ್ತಿರ ನಿಂತಿದ್ದಳು. ಕೈಯಲ್ಲಿ ಒಂದು ಗುಲಾಬಿ ಹೂವು..

"ರವೀಶ..ನಿಮ್ಮ ಪ್ರೀತಿಗೆ ನಾ ಚಿರಋಣಿ.. ನಿಮ್ಮನ್ನು ನಾಯಕನಾಗಿ ನನ್ನ ಬಾಳಿನಲ್ಲಿ ಮೂಡಿಸಬೇಕು ಎಂಬ ಆಸೆ ನನಗೂ ಇತ್ತು.. ನೀವು ಅದನ್ನು ಹೇಳಿ ನನ್ನ ಕೆಲಸ ಹಗುರ ಮಾಡಿದಿರಿ..ನೀವು ಕೊಟ್ಟ ಗ್ರೀಟಿಂಗ್ ಕಾರ್ಡ್ ಅದ್ಭುತವಾಗಿದೆ.. ಖಂಡಿತ ಪ್ರೀತಿಯನ್ನು ಆ ಎತ್ತರಕ್ಕೆ ಏರಿಸಬಲ್ಲವು ನಾವು.. ಆದರೆ.. "

"ಸರ್.. ಸರ್... ಮಾತ್ರೆ ತೆಗೆದುಕೊಳ್ಳಬೇಕು ಏಳಿ ಸರ್"

ನರ್ಸಮ್ಮ ಬಂದು ಎಬ್ಬಿಸಿದಾಗ ಹಳೆ ನೆನಪುಗಳು ಕೈಗೆ ಹಾಕಿದ ಗ್ಲುಕೋಸ್ ಡ್ರಿಪ್ ತರಹ ಕರಗಿಹೋಗಿತ್ತು..

ಮಾತ್ರೆ ನುಂಗಿ ನೀರು ಕುಡಿದ ಮೇಲೆ.. ಒಂದು ರೀತಿಯ ಮಂಪರು.. ಕಣ್ಣುಗಳು ಮತ್ತೆ ನೆನಪಿನಾಳಕ್ಕೆ ಜಾರಿದವು.. 

"ಆದರೆ ರವೀಶ.. ನಿಮ್ಮ ಅಚ್ಚುಮೆಚ್ಚಿನ ಗೆಳೆಯ ಇದ್ದಾನಲ್ಲ.. ಸುಧೀಂದ್ರ.. ಅವನನ್ನು ಮದುವೆಯಾಗುತ್ತಿದ್ದೇನೆ.. ಅವನು ನನ್ನ ಬಾಲ್ಯದ ಗೆಳೆಯ.. ನಮ್ಮ ಮನೆ ಅವನ ಮನೆ ಮೊದಲಿಂದಲೂ ಪರಿಚಯ.. ಹಾಗಾಗಿ ಅವನ ಜೊತೆ ನನ್ನ ಹೆಜ್ಜೆಗಳು.. ಆದರೆ ಒಂದು ಮಾತು ರವೀಶ.. ಅವನಿಲ್ಲದಿದ್ದರೆ.. ನೀವೇ ನನ್ನ ಮೊದಲ ಆಯ್ಕೆಯಾಗಿರುತ್ತಿದ್ದಿರಿ  ".. ಮಿಕ್ಕ ಮಾತುಗಳು ಕಿವಿಗೆ ಮಾತ್ರ ಬೀಳುತ್ತಿದ್ದವೇ ಹೊರತು.. ಹೃದಯಕ್ಕೆ ಅಲ್ಲ.. ಮ್ಲಾನಮುಖವಾಗಿತ್ತು.. ಆದರೂ ತೋರ್ಪಡಿಸಿಕೊಳ್ಳದೆ.. ಕೈಕುಲುಕಿ ಹೆಜ್ಜೆ ಹಾಕಿದ್ದ ತನ್ನ ಮನೆಯ ಕಡೆಗೆ ...

ನಂತರ ಕಾಲೇಜಿನಲ್ಲಿ ಮತ್ತೆ ಅವಳನ್ನು ನೋಡಲಿಲ್ಲ.. ಅವಳು ಕಂಡರೂ ಕಾಣದ ಹಾಗೆ ಓಡಾಡುತ್ತಿದ್ದ.. ಪರೀಕ್ಷೆ.. ಫಲಿತಾಂಶ.. ಅವರಿಬ್ಬರನ್ನೂ ತಮ್ಮ ತಮ್ಮ ಹಾದಿಗೆ  ಎಳೆದೊಯ್ದವು.. ಮತ್ತೆ ಭೇಟಿ ಆಗಿರಲೇ ಇಲ್ಲ..

ಈ ರೀತಿಯ ಅಚಾನಕ್ ಭೇಟಿ ಅದು ಆಸ್ಪತ್ರೆಯಲ್ಲಿ.. ಅವಳು ಡಾಕ್ಟರ್ ಆಗಿ ತಾನು ಅವಳಿಂದ ಚಿಕಿತ್ಸೆ ಪಡೆದುಕೊಳ್ಳುವವನಾಗಿ.. ದೇವಾ ಏನಪ್ಪಾ ನಿನ್ನ ಜಾಯಿಂಟ್.. ಒಂದಕ್ಕೊಂದು ಸಂಬಂಧಕ್ಕೆ ಬೆಸುಗೆ ಹೊಡೆದು ರಿವೇಟ್ ಹೊಡೆದು ಬಿಟ್ಟಿದ್ದೀಯಲ್ಲಪ್ಪ.. ಎಂದುಕೊಂಡು ಕಣ್ಣು ಮುಚ್ಚಿದ..

ಮರುದಿನ.. ಕಣ್ಣುಗಳು ಭಾರವಾಗಿದ್ದವು.. ತೆಗೆಯಲು ಕಷ್ಟವಾಗುತ್ತಿತ್ತು. ನೋವು ಭಾದಿಸುತ್ತಿತ್ತು.. ಕಿಸಿ ಕಿಸಿ ನಗೆ.. ಕಣ್ಣು ಬಿಟ್ಟಾಗ.. ಛಾವಣಿಯಲ್ಲಿ ದೀಪಗಳೇ ದೀಪಗಳು.. ಸುತ್ತಮುತ್ತಲು ಕಣ್ಣು ಬಿಟ್ಟು ನೋಡಿದ .. ಚೂರಿ ಚಾಕು, ಇಕ್ಕಳ ತರಹದ ಹಲವಾರು ಹತಾರಗಳು ಇದ್ದವು.. ಕಣ್ಣುಗಳು ಭಾರವಾಗಿ ಹಾಗೆ ಕಣ್ಣು ಮುಚ್ಚಿದವು..

"ಮಗನೆ.. ನಿನ್ನ ಹುಡುಕಿ ಹುಡುಕಿ ನನ್ನ ಕಣ್ಣುಗಳು ಬಿದ್ದು ಹೋಗಿದ್ದವು.. ಈ ರೀತಿ ಸಿಗುತ್ತೀಯ ಅಂತ ತಿಳಿದಿರಲಿಲ್ಲ ಮಗಾ.. " ಎಂದು ಮೆಲ್ಲನೆ ಹೊಟ್ಟೆಯ ಮೇಲೆ ಒಂದು ಪೆಟ್ಟು ಕೊಟ್ಟ ಮಾತುಗಳನ್ನು ಕೇಳಿ.. ಮೆಲ್ಲಗೆ ತಿರುಗಿದಾಗ ಬಾಲ್ಯದ ಗೆಳಯ ಸುಧೀಂದ್ರ.. ಫ್ರೆಂಚ್ ಗಡ್ಡ.. ಕಪ್ಪು ಫ್ರೇಮಿನ ಕನ್ನಡಕ.. ಚೆಲುವ.. ಬಿಳಿಕೋಟಿನಲ್ಲಿ ಮಿಂಚುತ್ತಿದ್ದ..

"ಏನ್ಲಾ ನೀ ಇಲ್ಲಿ" ಗುರುತು ಹಿಡಿದು ಮಾತಾಡಿಸಿದಾಗ..

ಇಬ್ಬರು ಹಳೆಯ ಗೆಳೆಯರು ಭೇಟಿಯಾದ ಸಂದರ್ಭ..

ಇತ್ತ ಗೀತಾ ಬಂದು.. "ನೋಡಿ ಸುಧಿ.. ಅವತ್ತು ತಪ್ಪಿಸಿಕೊಂಡವ ಇವತ್ತು ನಮ್ಮ ಆಸ್ಪತ್ರೆಯಲ್ಲಿ ಗಾಯಾಳುವಾಗಿ ಬಂದಿದ್ದಾನೆ..  "

"ಸುಧಿ.. ಒಂದು ಉಪಕಾರ ಕಣೋ.. ನೀ ಆಪರೇಷನ್ ಏನಾದರೂ ಮಾಡಿಕೊ.. ಆದರೆ ನನಗೆ ಅರವಳಿಕೆ ಕೊಡದ ಹಾಗೆ ಮಾಡಬಹುದೇ.. " 

"ಇಲ್ಲ ಕಣೋ.. ಹಾಗೆ ಮಾಡಲು ಸಾಧ್ಯವಿಲ್ಲ.. ಆದರೆ ನಿನಗೆ ಆಪರೇಷನ್ ಮಾಡೋದು ವಿಡಿಯೋ ಮಾಡೋಕೆ ಗೀತಾಗೆ ಹೇಳುತ್ತೀನಿ.. ನೀ ಆಮೇಲೆ ನೋಡುವೆಯಂತೆ..

"ಸರಿ.." 

ಆಪರೇಷನ್ ಮುಗಿದಿತ್ತು.. ವಾರ್ಡಿಗೆ ಶಿಫ್ಟ್ ಮಾಡಿದ್ದರು..

ಗಂಡ ಹೆಂಡತಿ ಇಬ್ಬರೂ ತಮ್ಮ ಜೀವದ ಗೆಳೆಯನನ್ನು ಮಾತಾಡಿಸಲು ಬಂದರು.. "ಏನೋ ಮಗ ಹೇಗಿದ್ದೀಯಾ.." ಸುಧೀಂದ್ರನ ಚಿರಪರಿಚಿತ ಧ್ವನಿ..

"ಹೇ ಹೇ ಹೇ.. ಆರಾಮ್ ಕಣೋ.. ಗೀತಾ ಆ ವಿಡಿಯೋ ತೋರಿಸಿ  ಪ್ಲೀಸ್.. "

ವಿಡಿಯೋ ನೋಡತೊಡಗಿದ.. ಮೂಗು.. ಕಣ್ಣಿಗೆ ಬಲವಾದ ಪೆಟ್ಟು ಬಿದ್ದದರಿಂದ.. ಪ್ಲಾಸ್ಟಿಕ್ ಸರ್ಜರಿ ಮಾಡಿ ಮೊದಲಿನ ಸ್ಥಿತಿಗೆ ತರಲು ಗಂಡ ಹೆಂಡತಿ ಹೆಣಗುತ್ತಿದ್ದದ್ದು.. ನಂತರ ಯಶಸ್ವಿಯಾದದ್ದು.. ಜೊತೆಯಲ್ಲಿ ಕೈಸನ್ನೆಯಲ್ಲಿಯೇ ತನ್ನನ್ನು ತೋರಿಸಿ.. ಹೀ ವಿಲ್ ಬಿ ಆಲ್ ರೈಟ್ ಅಂತ ಹೇಳಿದ್ದು ಎಲ್ಲವೂ ಖಂಡಿತು..

ದಶಕಗಳ ಹಿಂದೆ ಸ್ನೇಹದ  ಕೊಂಡಿ ಕಳಚಿಕೊಂಡದ್ದು ನಿಜವಾದರೂ.. ಗೀತಾ ಬರಿ ತನ್ನ ಕಣ್ಣಿಗೆ ಮತ್ತು ಮೂಗಿಗೆ ಹೊಲಿಗೆ ಮಾತ್ರವಲ್ಲದೆ.. ನಮ್ಮ ಅಪೂರ್ವ ಗೆಳೆತನಕ್ಕೂ ಹೊಲಿಗೆ ಹಾಕುತ್ತಿದ್ದಳು..ಎನಿಸಿತು ರವೀಶನಿಗೆ !!!

2 comments:

 1. ಎಷ್ಟು ಚೆಂದದ ಕಥೆ ಬರಿದಿದ್ದೀರಿ, ಶ್ರೀಕಾಂತ! ಓದಿದಾಗ, ಬದುಕಿನಲ್ಲಿ ಹೊಸ ಹುರುಪು ಬರುತ್ತದೆ. ಅನಿರೀಕ್ಷಿತ ತಿರುವು, ಸೊಗಸಾದ ಶೈಲಿ, Appropriate ಪದಗಳು ಇವು ಕಥೆಯನ್ನು ಚೆಲುವಾಗಿ ಮಾಡಿವೆ. ನಿಮ್ಮ ಎಲ್ಲ ಕಥೆಗಳ ಒಂದು ಸಂಕಲನ ಹೊರಬರಬೇಕು. ನಿಮ್ಮ ಅಭಿಮಾನಿಗಳಿಗೆ ಅದೊಂದು ಉಡುಗೊರೆಯಾಗುತ್ತದೆ.

  ReplyDelete
  Replies
  1. ಅಬ್ಬಬ್ಬಾ ಗುರುಗಳೇ ಧನ್ಯೋಸ್ಮಿ.. 
   ಸುಂದರ ಉತ್ತೇಜನ ಕೊಡುವ ಪ್ರತಿಕ್ರಿಯೆ ಮತ್ತು ಆಶೀರ್ವಾದ.. ಶರಣಾದೆ ನಿಮ್ಮ ಮಾತುಗಳಿಗೆ 

   Delete