Monday, November 18, 2013

ಗಿಜಿ ಗಿಜಿ ಗುಜು ಗುಜು

ಈ ಲೇಖನವನ್ನು ಪ್ರಕಟ ಮಾಡಿದ ಪಂಜು ಪ್ರಕಾಶನಕ್ಕೂ ಮತ್ತು ತಂಡದ ಸದಸ್ಯರಿಗೂ ಧನ್ಯವಾದಗಳು

ಕೋರವಂಗಲ ವಂಶವೃಕ್ಷದಲ್ಲಿ ನವಗ್ರಹಗಳಾದ ಚಿಕ್ಕಪ್ಪ ದೊಡ್ಡಪ್ಪಂದಿರ ಗಂಡು ಮಕ್ಕಳಲ್ಲಿ ನಡೆಯುವ ತಮಾಷೆ ಮಾತುಗಳಿಗೆ ಮಿತಿಯಿಲ್ಲ. ಅಂಥಹ ಸಾಗರದಷ್ಟು ನಡೆದ, ನೆಡೆಯುವ ಚರ್ಚೆಗಳನ್ನು, ವಿಷಯಗಳನ್ನು ಹೆಕ್ಕಿ ಹೆಕ್ಕಿ ಮೆಲುಕು ಹಾಕುತ್ತ ನಮ್ಮ ಭೇಟಿಗಳನ್ನು ಇನ್ನಷ್ಟು ಸುಮಧುರ ಕ್ಷಣಗಳನ್ನಾಗಿ ಮಾಡಿಕೊಳ್ಳುತ್ತೇವೆ. ಒಂಭತ್ತು ಗ್ರಹಗಳು ಪ್ರಚಂಡ ಪ್ರತಿಭೆಗಳು ಒಬ್ಬರಿಗೊಬ್ಬರು, ಒಬ್ಬರಿಂದ ಒಬ್ಬರು, ಒಬ್ಬರಿಗಾಗಿ ಒಬ್ಬರು ಜೊತೆ ನಿಲ್ಲುತ್ತೇವೆ. ನಮ್ಮ  ಹಿಂದಿನ ಹಾಗು ಮುಂದಿನ ಪೀಳಿಗೆಗೆ ಸೇತುವಾಗಿ ನಿಲ್ಲುವ ನಾವುಗಳು ನಮ್ಮ ಮಕ್ಕಳಿಗೆ ಒಂದು  ಸಂಸ್ಕಾರದ ಹಾದಿಯನ್ನು ತೋರಬೇಕು ಅನ್ನುವುದಷ್ಟೇ ನಮ್ಮ ಕಳಕಳಿ.
ಕೊರವಂಗಲ ಕುಟುಂಬದ ನವಗ್ರಹಗಳು!

ಇಂತಹ ಒಂದು ಸುಮಧುರ ಚಟಾಕಿಗೆ ಪ್ರೇರೇಪಣೆ ಸಿಕ್ಕಿದ್ದು ಇಹಲೋಕ ತೊರೆದ ಮೇಲೆ ಯಮಲೋಕದಲ್ಲಿ ನಡೆಯುವ ಕೆಲವು ಪ್ರಸಂಗಗಳು. ಈ ಲೇಖನದಲ್ಲಿ ಬರುವ ಮಾತುಗಳು ಎಲ್ಲಾ ನವಗ್ರಹಗಳದ್ದು. ಸಾಂಧರ್ಭಿಕವಾಗಿ ರುಚಿಗೆ ಬೇಕಾದ ಮಸಾಲೆ ಜೋಡಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದು ಮಾತ್ರ ….. ಹೇ ಹೇ ಹೇ!!!

******

ಯಮಾಲಯದಲ್ಲಿ ಗಿಜಿ ಗಿಜಿ ಗುಜು ಗುಜು.. ಭೂಲೋಕದಿಂದ ರವಾನೆಯಾದ ಎಷ್ಟೋ ಆತ್ಮಗಳು ಓಡಾಡುತ್ತಿದ್ದವು. ಅವುಗಳಿಗೆ ಸರಿಯಾದ ತೀರ್ಪು, ಶಿಕ್ಷೆ ಕೊಡುವ ಕೆಲಸ ಚಿತ್ರಗುಪ್ತ ಹಾಗೂ ಯಮಧರ್ಮನಿಗೆ ಇತ್ತು.. ಶಿಕ್ಷೆ ಕೊಟ್ಟಮೇಲೆ ಸರಿಯಾದ ಶಿಕ್ಷೆಗೆ ಗುರಿಪಡಿಸುವ ಗುರುತರ ಹೊಣೆ ಯಮಕಿಂಕರರ ಮೇಲೆ ಇತ್ತು. ಜೊತೆಯಲ್ಲಿ ಲೆಕ್ಕ ಪತ್ರದ ಪರಿಶೋಧನೆ ನಡೆದಿತ್ತು.

ಲೆಕ್ಕ ಪತ್ರದ ಅಧಿಕಾರಿ "ಚಿತ್ರಗುಪ್ತರೆ ಲೆಕ್ಕ ಪತ್ರ ಶೋಧಿಸುವಾಗ ಒಂದು ಗಮನಾರ್ಹ ವಿಚಾರ ಬೆಳಕಿಗೆ ಬಂತು. ನಿಮ್ಮ ಉಗ್ರಾಣದಲ್ಲಿ ಎಣ್ಣೆಯ ಬಳಕೆ ಅತಿಯಾಗಿದೆ. ಡಬ್ಬಗಳ ಗಟ್ಟಲೆ ಎಣ್ಣೆಯನ್ನು ಶೇಖರಿಸಿಟ್ಟಿದ್ದೀರಿ.. ಜೊತೆಯಲ್ಲಿ ಪ್ರತಿದಿನವೂ ಸಾವಿರಾರು ಲೀಟರ್ ಎಣ್ಣೆ ಬಳಕೆಯಾಗುತ್ತಿದೆ. ಎಲ್ಲಿ ನೋಡಿದರು ಎಣ್ಣೆಯ ಕಮಟು ವಾಸನೆ, ನೆಲವೆಲ್ಲಾ ಜಾರುತ್ತಿದೆ, ಬಾಣಲೆಗಳು ಸೀದು ಕಪ್ಪಾಗಿದೆ.. ಏನು ಇದಕ್ಕೆ ಕಾರಣ. ಗರಗಸಗಳು, ಲೋಹದ ಭರ್ಜಿಗಳು, ಗದೆಗಳು, ಕತ್ತಿಗಳು, ಚಾಕುಗಳು ಇವುಗಳನ್ನೂ  ಉಪಯೋಗಿಸದೆ  ಬಹಳ ಕಾಲವಾಗಿವೆ ಅಂತ ಅವು ತುಕ್ಕು ಹಿಡಿದಿರುವುದನ್ನು ನೋಡಿದರೆ ಅನ್ನಿಸುತ್ತಿದೆ. ಇವಕ್ಕೆ ಸರಿಯಾದ ಉತ್ತರ ಬೇಕೇ  ಬೇಕು. ಉತ್ತರಿಸದೆ ಹೋದರೆ ಯಮರಾಜನ ಬಳಿ ಹೋಗುತ್ತೇವೆ!

"ಅಯ್ಯೋ ಅವರ ಹತ್ತಿರ ಹೋಗ್ತೀರಾ ಹೋಗಿ.. ಅವರಿಗೆ ತಲೆ ಕೆಟ್ಟು ಹೋಗಿದೆ.. ಯಾಕೆ  ಹೀಗೆ ಅಂತ ಅವರಿಗೂ ಅರ್ಥವಾಗಿಲ್ಲ.. ಕೋಣನ ಸಮೇತ ಹೋಗುತ್ತಾ ನಮಗೆ ಹೇಳಿದರು ಈ ಲೆಕ್ಕ ಪತ್ರದ ಪರಿಶೋಧನೆ ಮುಗಿದ ಮೇಲೆ ನನಗೆ ಕರೆ ಮಾಡಿ ಅಲ್ಲಿಯ ತನಕ ನಾನು ತಲೆ ಮರೆಸಿಕೊಂಡು ಇರುತ್ತೇನೆ ಎಂದು"

"ಏನಪ್ಪಾ ಇದು ಏನು ಹೇಳ್ತಾ ಇದ್ದೀರಾ.. ಅಂದ್ರೆ ಎಲ್ಲೋ ಏನೋ ತಪ್ಪಾಗಿದೆ.. ನಿಮ್ಮ ಸಂವಿಧಾನದ ಕಡತವನ್ನು ಪರಿಶೀಲಿಸಬೇಕು. ಯಾಕೆ ಒಂದೇ ತರಹದ ಪದಾರ್ಥ ಬಳಕೆಯಾಗುತ್ತಿದೆ ಎಂದು.. ಆ ಕಡತವನ್ನು ತರಿಸಿ ಚಿತ್ರಗುಪ್ತರೆ"

"ಸರಿ ಸ್ವಾಮೀ"

ಚಿತ್ರಗುಪ್ತರು ಕಡತವನ್ನು ತರುವಷ್ಟರಲ್ಲಿ ಯಮ ಲೋಕವನ್ನು ಒಮ್ಮೆ ನೋಡಿಬರಲು ಅಧಿಕಾರಿಗಳು ಹೊರಟರು…

ಅಲ್ಲಿ ಒಂದು ದೃಶ್ಯವನ್ನು ಕಂಡು ಅವಕ್ಕಾದರು…

ಶಿಕ್ಷೆಗೆ ಗುರಿಯಾಗಿದ್ದ ಆತ್ಮಗಳು ರಭಸವಾಗಿ ಓಡುತ್ತಾ, ದಾರಿಗೆ  ಅಡ್ಡ ಬಂದವರನ್ನು ತಳ್ಳುತ್ತಾ, ದೊಡ್ಡ ದೊಡ್ಡ ಸಾಲೆ ಇದ್ದರೂ, ಓಡುತ್ತಾ, ಓಡುತ್ತಾ, ಎಣ್ಣೆ ಬಾಣಲೆಯೊಳಗೆ ಧುಮುಕಿ ಹತಾತ್ ಮರೆಯಾಗುತ್ತಿದ್ದವು..

ಸ್ವಲ್ಪ ಸಮಯದ ನಂತರ ಏದುಸಿರು ಬಿಡುತ್ತಾ ಬಾಣಲೆಯಿಂದ ಹೊರಗೆ ಬಂದು  ಅಬ್ಬಾ ಅಂತು ನಮ್ಮ ಶಿಕ್ಷೆಯನ್ನು ಮುಗಿಸಿದೆವು..ಎಂದು ಎದೆ ಹಿಡಿದುಕೊಂಡು ಕಿಂಕಕರು ಕೊಟ್ಟ ಚೀಟಿ ಹಿಡಿದು  ಮುಂದಿನ ಜನ್ಮಕ್ಕೆ ಅಣಿಯಾಗ ತೊಡಗುತ್ತಿದ್ದವು.

"ಏನಿದು ವಿಚಿತ್ರ.. ಯಾಕೆ ಹಾಗೆ ಈ ಆತ್ಮಗಳು ದೆವ್ವ ಹಿಡಿದವರ ಹಾಗೆ ಓಡುತ್ತಿವೆ, ಮತ್ತು ಕಾದ ಎಣ್ಣೆ ಬಾಣಲೆಯಿಂದ ಹೊರಗೆ ಹೋಗುವಾಗ ಮೈಯೆಲ್ಲಾ ಸುಟ್ಟಿದ್ದರೂ ನೋವಿನಿಂದ ಚೀರದೆ, ನಸು ನಗುತ್ತಾ ಮುಂದಿನ ಜನ್ಮಕ್ಕೆ ಕಾದು ನಿಂತಿವೆ..   ಆಶ್ಚರ್ಯ .. ಪರಮಾಶ್ಚರ್ಯ!!!"

"ಚಿತ್ರಗುಪ್ತರೆ"  ಎಂದು ಕಿರುಚಿದರು.. "ಬೇಗ ಬನ್ನಿ ಇಲ್ಲಿ ಏನಿದು ಸೋಜಿಗ.. ಯಾಕೆ ಹೀಗೆ ನಡೆಯುತ್ತಿದೆ.. "

ಚಿತ್ರಗುಪ್ತ ಪೇಟ ತೆಗೆದು ತಲೆ ಕೆರೆದುಕೊಂಡು.. ಮತ್ತೆ ಪೇಟ ಹಾಕಿಕೊಂಡು..

"ಬನ್ನಿ ಬನ್ನಿ ನನಗೂ ಇದರ ಬಗ್ಗೆ ಮಾಹಿತಿ ಬೇಕಿತ್ತು.. ಇರಿ ಯಾವುದಾದರೂ ಓಡುತ್ತಿರುವ ಆತ್ಮವನ್ನು ಹಿಡಿದು ಕೇಳಿಯೇ ಬಿಡುತ್ತೇನೆ.. "

ಅದೇ ಹಾದಿಯಲ್ಲಿ ಒಂದು ಆತ್ಮ ಇನ್ನೊಂದು ಆತ್ಮಕ್ಕೆ ಡಿಕ್ಕಿ ಹೊಡೆದು ಬಿದ್ದು ಮತ್ತೆ ಎದ್ದು ಓಡಲು ಪ್ರಯತ್ನ ಪಡುತ್ತಿತ್ತು.. ಚಿತ್ರಗುಪ್ತರು ಆ ಬಿದ್ದ ಆತ್ಮವನ್ನು ಹಿಡಿದೆತ್ತಿ ನಿಲ್ಲಿಸಿ..

" ಎಲೈ ಆತ್ಮವೇ ಯಾಕೆ ಹೀಗೆ ಓಡುತ್ತಿರುವೆ..ಸವಿವರವಾಗಿ ಹೇಳು ಇಲ್ಲದೆ ಇದ್ದರೆ.. ನಿನಗೆ ಘನ ಘೋರ ಶಿಕ್ಷೆ ವಿಧಿಸಬೇಕಾಗುತ್ತದೆ.. "

"ಅಯ್ಯೋ ಚಿತ್ರಗುಪ್ತರೆ.. ಈಗ ನೀವುಗಳು ವಿಧಿಸಿರುವ ಶಿಕ್ಷೆಗಿಂತ  ಇನ್ನೇನು ಘೋರ ಶಿಕ್ಷೆ ಇರಲಾರದು… ಅಲ್ಲಿ ನೋಡಿ ಇನ್ನಷ್ಟು ಆತ್ಮಗಳು ಓಡಿ ಬರುತ್ತಿವೆ.. ಮೊದಲು ನನಗೆ ಜಾಗ ಬಿಡಿ "ಎಂದು ಹೇಳುತ್ತಾ ತಳ್ಳಿಕೊಂಡು ಓಡಿ ಹೋಗಿ ಎಣ್ಣೆ ಬಾಣಲೆಗೆ ದುಡುಂ ಎಂದು ಬಿದ್ದೇ ಬಿಟ್ಟಿತು!

ತಲೆ ಬಿಸಿಮಾಡಿಕೊಂಡ ಅಧಿಕಾರಿಗಳು, ಚಿತ್ರಗುಪ್ತರು ಇನ್ನು ತಡ ಮಾಡುವುದು ಸರಿಯಲ್ಲ ಎಂದು ಬಗೆದು.. ಸೀದಾ ಆತ್ಮಗಳು ಎದ್ದು ಬಿದ್ದು ಓಡುತ್ತಿರುವ ಆ ಜಾಗಕ್ಕೆ ಹೋದರು.. ಅಲ್ಲಿ ನೋಡಿ ಮತ್ತೆ ಗಾಬರಿಗೊಳ್ಳುವ ಸರದಿ ಚಿತ್ರಗುಪ್ತರು ಹಾಗು ಅಧಿಕಾರಿಗಳದ್ದಾಗಿತ್ತು..

ಅಲ್ಲಿ ಹೆಜ್ಜೆ ಇಡಲು ಜಾಗ ಸಾಲದಾಗಿತ್ತು.. .. ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ ಚಿತ್ರಗುಪ್ತರು

"ನೋಡಿ ಸ್ವಾಮಿ ನಾವಿರೋದೆ ಹೀಗೆ… ಎನ್ನಬೇಡ.. ಯಾಕೆ ಹೀಗಾಯ್ತು.. "

"ಏನು ಮಾಡಲಿ ನಾನು ಹೇಗೆ ಹೇಳಲಿ..  ಯಮರಾಜರು  ಇಲ್ಲಿಗೆ ಬಂದ ಆತ್ಮಗಳ ಪಾಪ ಪುಣ್ಯ ಲೆಕ್ಕಾಚಾರ ಮಾಡಿ ಅವುಗಳಿಗೆ ಒಂದು ದಿನಕ್ಕೆ ೧೦ ಇತ್ತೀಚಿನ ಕನ್ನಡ ಚಿತ್ರಗಳನ್ನು ನೋಡಬೇಕೆಂಬ ಶಿಕ್ಷೆ ವಿಧಿಸಿದರು. ಇಲ್ಲವೇ ಎಣ್ಣೆಯ ಬಾಣಲೆಯೊಳಗೆ ಧುಮುಕಬೇಕು  ಆಜ್ಞೆ ಮಾಡಿದ್ದರು..    ಮೊದ ಮೊದಲು ಆನಂದವಾಗಿದ್ದ ಆತ್ಮಗಳು ಹತ್ತೇನು ಹದಿನೈದು ಚಿತ್ರಗಳನ್ನು ದಿನವೆಲ್ಲ ನೋಡುತ್ತಿದ್ದವು.. ಕ್ರಮೇಣ ತಲೆ ಕೆರೆದುಕೊಳ್ಳಲು ಶುರುಮಾಡಿದವು..ಮುಖವನ್ನು ಪರಚಿಕೊಂಡವು.. ಬಾಯಿ ಬಾಯಿ ಬಡಿದು ಕೊಂಡವು, ತಲೆಗೂದಲನ್ನು ಕಿತ್ತು ಕೊಂಡವು… "

"ಯಾಕೆ ಏನಾಯಿತು?"

"ಕೆಟ್ಟ ಕೆಟ್ಟ ಸಾಹಿತ್ಯ, ದ್ವಂದ್ವಾರ್ಥ ಸಂಭಾಷಣೆ.. ಹೊಡಿ ಬಡಿ ಚಚ್ಚು ಕೊಲ್ಲು ಎನ್ನುವ ಸಿದ್ಧಾಂತ ಬೀರುವ ರಕ್ತ ಸಿಕ್ತ ಚಿತ್ರಗಳು.. ಮಂಗನ ಮುಸುಡಿ ಇರುವ ತಾರಾಬಳಗ..  ಬರೆದಿದ್ದೆ ಸಾಹಿತ್ಯ ಬಾರಿಸಿದ್ದೆ ಸಂಗೀತ ಎನ್ನುವ ಮಂಡೆ ಬಿಸಿ ಇರುವ ಮಂದಿ,  ಹಿಂದೆ ಮುಂದೆ ನೋಡದೆ.. ದುಡ್ಡು ಯಾರು ಹಾಕುತ್ತಾರೋ ಅವರೇ ನಾಯಕ ನಾಯಕಿಯರು ಅಂತ ನಿರ್ಧರಿಸೋ ಚಿತ್ರಗಳು.. ಇವನೆಲ್ಲಾ ನೋಡಿ ಬೇಸತ್ತ ಆತ್ಮಗಳು.. ದಿನಕ್ಕೆ ಹತ್ತು ಸಿನಿಮಾಗಳನ್ನು ನೋಡುವ ಬದಲು.. ಎಣ್ಣೆ ಬಾಣಲಿಯ ಶಿಕ್ಷೆಯೇ ವಾಸಿ ಎಂದುಕೊಂಡು ಅಲ್ಲಿಗೆ ಹೋಗಿ ಬೀಳುತ್ತಿವೆ.. ಅಲ್ಲಿ ನೋಡಿ ಬಲವಂತವಾಗಿ ಕುರ್ಚಿಗೆ ಕಟ್ಟಿ ಹಾಕಿದರೂ.. ಉರುಳಿಕೊಂಡು ಕೊಂಡು ಹೋಗಿ ಬಿಸಿ ಬಿಸಿ ಎಣ್ಣೆಯನ್ನು ಮೈ ಮೇಲೆ ಸುರಿದುಕೊಳ್ಳುತ್ತಿವೆ.. ಮೊನ್ನೆ ಒಂದು ಆತ್ಮ ನನಗೆ ಎಣ್ಣೆ ಬಾಣಲಿಯಲ್ಲಿ ಬೀಳಲು ಒಂದೇ ಒಂದು ಅವಕಾಶ ಕೊಡಿ.. ಎಂದು ಚೀರಾಡುತ್ತಿತ್ತು.. ನಾ ಬಂದೆ ನಾ ಓಡ್ದೆ . ನಾ ಬಿದ್ದೆ ಎನ್ನುತ್ತಾ ಅಷ್ಟು ಮೇಲೆ ಹಾರಿ ದುಡುಂ ಅಂತ ಬಾಣಲೆಗೆ ಬಿದ್ದು ಬಿಡ್ತು.. ನೋಡಿ ಆ ಕಾದ ಎಣ್ಣೆ ಹಾರಿ ನನ್ನ ಕೈ ಕೂಡ ಸುತ್ತು ಬಿಟ್ಟಿದೆ.. " ಎಂದು ಸುಟ್ಟ ಕೈ ತೋರಿಸಿದರು ಅಲ್ಲಿನ ಅಧಿಕಾರಿಗಳು.. ಪಾಪ ಕೈ ಕೆಂಪಾಗಿ ಬೊಬ್ಬೆ ಬಂದು ಬಿಟ್ಟಿತ್ತು..

"ಓಹ್ ಹಾಗೋ.. ಮತ್ತೆ ಈ ಪಾಟಿ ಚಿತ್ರಗಳನ್ನೇಕೆ ತರಿಸಿದ್ದೀರಿ.. ನಿಲ್ಲಿಸಬಾರದೆ.. "

" ಇಲ್ಲಾ ಸ್ವಾಮೀ.. ನರಕಲೋಕದಲ್ಲಿ ಮಲ್ಟಿಪ್ಲೆಕ್ಸ್ ಇದೆ ಅಂಥಾ ಗೊತ್ತಾದ ತಕ್ಷಣ ಸ್ಯಾಟಲೈಟ್ ಹಕ್ಕು ಹೊಂದಿರುವವರು ಸೀದಾ ಇಲ್ಲಿಗೆ ಕಳಿಸಿಬಿಟ್ಟಿದ್ದಾರೆ.. ಬೇರೆ ದಾರಿ ಇಲ್ಲದೆ ಇದನ್ನೆಲ್ಲಾ ಶೇಖರಿಸಿ ಇಟ್ಟುಕೊಂಡಿದ್ದೇವೆ… "

ಸರಿ ಸರಿ ವಿಚಿತ್ರ ನಿಮ್ಮದು.. ನವೆಂಬರ್ ೩೧ ಹತ್ತಿರ ಬರುತ್ತಿದೆ ಬ್ಯಾಲೆನ್ಸ್ ಶೀಟ್ ಮುಗಿಸಬೇಕು.. ಹಾಗಾಗಿ ಇವಕ್ಕೆಲ್ಲ ನೋಟ್ ಬರೆದು ಯಮರಾಜರಿಗೆ .. ಮತ್ತು ಇಲ್ಲಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ಬ್ರಹ್ಮ ವಿಷ್ಣು ಮಹೇಶ್ವರ ಇವರಿಗೆ ಒಂದು ಕಾಪಿ ಕಳಿಸುತ್ತೇನೆ.. ಅವರೆಲ್ಲ ಸಹಿ  ಮಾಡಿದ ಮೇಲೆ ಕುಬೇರನ ಬಳಿ ಬ್ಯಾಲೆನ್ಸ್ ಶೀಟ್ ಫೈಲ್ ಮಾಡಬೇಕು ಆಯ್ತಾ.. ಯಮಧರ್ಮ ರಾಜನಿಗೆ ತಿಳಿಸಿಬಿಡಿ… ಹೊತ್ತಾಯಿತು ನಾವು ಬರುತ್ತೇವೆ.. ಹಾಗೆ ಆಡಿಟ್ ನೋಟ್ ನಲ್ಲಿ ಕನ್ನಡದಲ್ಲಿ ಒಳ್ಳೆ ಚಿತ್ರಗಳನ್ನು ಆದಷ್ಟು  ಹೆಚ್ಚು ತಯಾರಿಸಿ   ಲೋಕದಲ್ಲಿ ಬಾಣಲೆ, ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ ಅಂತ ಬರೆಯುತ್ತೇವೆ..  ಶುಭವಾಗಲಿ"

ಸರಿ ಸ್ವಾಮೀ ಹಾಗೆಯೇ ಆಗಲಿ.. ನಿಮಗೂ ಶುಭವಾಗಲಿ"

8 comments:

 1. ಆಹಾ ನರಕಲೋಕದಲ್ಲಿ ಮಲ್ಟೀಪ್ಲೆಕ್ಸು ! ಒಳ್ಳೆಯ ಕಲ್ಪನೆ ಶ್ರೀಮಾನ್. ಹ್ಹಹ್ಹಹ್ಹ...

  ReplyDelete
 2. ಆಹಾ..!! ಎಂಥಾ ಕಲ್ಪನಾತೀತ ಲೇಖನ... ನಿಮಗೆ ಶುಭವಾಗಲಿ ಮತ್ತಷ್ಟು ಕಲ್ಪನೆಗಳು ಹುಟ್ಟಲಿ ಹಹಹಹ ಸೂಪರ್ ಶ್ರೀಕಾಂತ್

  ReplyDelete
 3. ಸುಪೆರ್!

  ReplyDelete
 4. nimma barahakke comment haakadu kasta ne srikantanna...adellinda tarteero hosa kalpanegalanna...

  ReplyDelete
 5. life is not user friendly :p :p sooper anna ..
  ಅಗೈನ್ ಕಥೆಯಲ್ಲೇನೋ ವಿಶಿಷ್ಟತೆ..ದೇವರ ಜೊತೆ ದೇವರ ಭಾವದಲ್ಲಿ ಅಲ್ಲೆಲ್ಲಿಂದಲೋ ಒಂದು ಲಿಂಕ್ ಕೊಟ್ಟು ಬದುಕ ಭಾವಗಳ ಹಾಗೆಯೇ ಹರವಿಡೋ ನಿಮಗೊಂದು ನಮನ .
  ಇಷ್ಟ ಆಯ್ತಂತ ಮತ್ತೆ ಹೇಳ್ಬೇಕಿಲ್ಲ ಅಲ್ವಾ ?

  ReplyDelete
 6. ಕನ್ನಡಾ ಸಿನಿಮಾಗಳ ದುರ್ಗತಿಯನ್ನ ಅದ್ಹೇಗೆ ಸಲೀಸಾಗಿ ಇಷ್ಟು ರಸವತ್ತಾಗಿ ಕ್ರಿಯಾಶೀಲವಾಗಿ ಹೇಳಿ ಬಿಟ್ರಿ.. ಇನ್ನಾದರೂ ಸಿನಿಮಾಗಳು ಸುಧಾರಿಸಲಿ. ಯಮಲೋಕದಲ್ಲಿ ಬೇರೆ ಆಯುಧಗಳಿಗೂ ಕೆಲಸ ಸಿಗಲಿ, ಭವಿಷ್ಯದ ಹಿತ ದೃಷ್ಟಿ ಇಂದ ಸ್ವಲ್ಪ ಎಣ್ಣೆ ಮಿಗಲಿ.. :D :D

  ReplyDelete
 7. ha ha ha.. Hasyadondige chitrarangakke sanna bare hakiddu.. super anna..:)

  ReplyDelete
 8. ಕನ್ನಡ ಚಿತ್ರಗಳು ಎಂಬ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ದಿನಗಳಲ್ಲಿ ಬೆಳೆದ ನನಗೆ ಇವತ್ತಿನ ಚಿತ್ರಗಳು ವಾಕರಿಕೆ ತರಿಸುತ್ತದೆ. ಆ ನೋವಿನಲ್ಲಿ ಬೆಂದ ಬರವಣಿಗೆ. ಮೆಚ್ಚಿದ್ದಕ್ಕೆ ಧನ್ಯವಾದಗಳು ಎಲ್ಲರಿಗೂ.

  ReplyDelete