Sunday, October 20, 2013

ಆತ್ಮ ವಿಶ್ವಾಸ......... or ವಿಶ್ವಾಸದ ಆತ್ಮ......!

"ನಾನಾರು ಕಶ್ಯಪ ಬ್ರಹ್ಮನ ಮಗ
ದಿತಿ ಗರ್ಭ ಸಂಜಾತ
ಚತುರ್ಮುಖ ಬ್ರಹ್ಮನ ಮೊಮ್ಮಗ
ವಿಧಾತನಿಂದ ವಿಧಿಬರಹವನ್ನೇ ಬದಲಾಯಿಸಿ
ಮರಣವನ್ನೇ ಮೆಟ್ಟಿ ನಿಂತ ಮಹಾವೀರ
ಅದಿತಿಯ ಮಕ್ಕಳ ಅಟ್ಟಹಾಸವನ್ನು ಸುಟ್ಟು
ಆದಿತ್ಯನ ಅಟ್ಟಹಾಸವನ್ನು ಮಟ್ಟಹಾಕಿದ ಸಾಹಸಿ
ಅತಲ ವಿತಲ ಸುತಲ ತಲಾತಲ ರಸಾತಲ ನಿರಾತಲ ಪಾತಾಳ ಲೋಕಗಳನ್ನು ಪಾದದಡಿದಲ್ಲಿಟ್ಟುಕೊಂಡ ಪರಾಕ್ರಮಶಾಲಿ
ಅಡಿಯಿಟ್ಟರೆ ಬಿರಿಯುವುದು ಭೂಮಿ ತಲೆಯೆತ್ತಲು ಬೆಚ್ಚುವುದು ಬಾನು ಕೈಯೆತ್ತಲು ನಡುಗುವುದು ಸೃಷ್ಠಿ
ಚತುರ್ಮುಖನ ಸೃಷ್ಠಿಯೇ ನನ್ನ.... "

"ಮಗು ಹಿರಣ್ಯ... !ಏಕಪ್ಪ ಇಷ್ಟು ಕಳವಳ?... ಸದಾ ಆತ್ಮ ವಿಶ್ವಾಸ ತುಂಬಿತುಳುಕುತ್ತಿದ್ದ ನಿನ್ನ ಮನಸಲ್ಲಿ ಏಕೆ ಈ ಅನುಮಾನ. ಏನಾಯಿತು ಕಂದಾ?"

ನಿಧಾನವಾಗಿ ತಲೆಯೆತ್ತಿದ  ಹಿರಣ್ಯಕಶಿಪು ನೋಡುತ್ತಾನೆ...  ಪಿತಾಮಹ ನಿಂತಿದ್ದಾನೆ

"ತಾತ.. ಯಾಕೋ ಅರಿವಿಲ್ಲ ಕೆಲವು ದಿನಗಳಿಂದ ನನ್ನ ಮೇಲೆಯೇ ನನಗೆ ಅನುಮಾನ ಹೆಚ್ಚುತ್ತಿದೆ.. ನೀನು ಕೊಟ್ಟ ವರಗಳು.. ನಾ ತಪ ಮಾಡಿಗಳಿಸಿದ್ದ ಶಕ್ತಿ, ಆತ್ಮ ವಿಶ್ವಾಸ, ಮನೋಬಲ ಸೂರ್ಯನಿಗೆದರು ಕರಗುವ ಮಂಜಿನಂತೆ ಕರಗಿ ಹೋಗುತ್ತಿದೆ. ಸರಿಯಾಗಿ ರಾಜ್ಯಾಭಾರ ಮಾಡಲು ಆಗುತ್ತಿಲ್ಲ. ಹೊಸ ಹೊಸ ಶಾಸನಗಳನ್ನು ಬರೆಯಲು ಆಗುತ್ತಿಲ್ಲ.. ನನ್ನ ಅಭಿಮಾನಿ ದೇವರುಗಳ ಪತ್ರಗಳನ್ನು, ಸಂದೇಶಗಳನ್ನು ಓದಲಾಗುತ್ತಿಲ್ಲ... ಮನಸ್ಸು ಯಾವಾಗಲೂ "ಏನು ಮಾಡಲಿ ನಾನು ಏನು ಹೇಳಲಿ.. " ಎಂಬ ಹಾಡನ್ನೇ ಹಾಡುತ್ತಿರುತ್ತದೆ.. ನಗುವೆಂಬ ಆತ್ಮವಿಶ್ವಾಸದ ಹೂವು ಸದಾ ನನ್ನಲ್ಲಿ ಅರಳುತಿತ್ತು.. ಆದರೆ ಇತ್ತೀಚೆಗೆ ಯಾಕೋ ಸಾಧ್ಯವಾಗುತ್ತಿಲ್ಲ.. ಯಾಕೆ ಪಿತಾಮಹ.. ಸದಾ ನಾ ಹೇಳಲು ಬಯಸುತ್ತಿದ್ದ "ನಾ ನಿರುವುದೇ ನಿಮಗಾಗಿ" ಹಾಡಿನಲ್ಲಿ ನಾ ತೋರುತ್ತಿದ್ದ ಆತ್ಮವಿಶ್ವಾಸ ಪದಗಳು ತೂಕ ಕಳೆದುಕೊಂಡು ತೂರಾಡುತ್ತಿವೆ... ಸೃಷ್ಠಿಕರ್ತನಾದ  ನೀನೇ ಇದಕ್ಕೆ ಒಂದು ಪರಿಹಾರ ನೀಡಬೇಕು"

"ಮಗು.. ನಿನಗೆ ಒಂದು ಪುಟ್ಟ ಕಥೆ ಹೇಳುತ್ತೇನೆ ಕೇಳು"
--------------------------------
ಹತ್ತಿಗೂ ಉಪ್ಪಿಗೂ ಬಹಳ ಸ್ನೇಹ.. ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ.. ಎಲ್ಲಾ ಕಾಲದಲ್ಲಿಯೂ ಉಪ್ಪು ಮತ್ತು ಹತ್ತಿ ಎಲ್ಲರಿಗೂ ಬೇಕಾಗಿದ್ದವು.. ಹೀಗಿದ್ದಾಗ ಒಮ್ಮೆ ಅವರಿಬ್ಬರಲ್ಲಿ ಯಾರು ಹೆಚ್ಚು ಎನ್ನುವ ಒಂದು ಹುಚ್ಚು ಅನುಮಾನ ಕಾಡತೊಡಗಿತು.

"ತಾಯಿಗಿಂತ ಶ್ರೇಷ್ಠ ಬಂಧುವಿಲ್ಲ .. ಉಪ್ಪಿಗಿಂತ ರುಚಿ ಬೇರೆಯಿಲ್ಲ" ಎನ್ನುವ ಮಾತಿದೆ.. ಈ ಮಾತಿನಂತೆ ಉಪ್ಪು ನಾ ಶ್ರೇಷ್ಠ ಎಂದು ಕುಣಿಯಿತು..

"ತಾಯಿಯಂತೆ ಮಗಳು ನೂಲಿನಂತೆ ಸೀರೆ" ಎನ್ನುವ ಮಾತಿದೆ ಅಂತ ಹತ್ತಿ ಬೀಗಿತು..

ಇಬ್ಬರ ವಾದ ವಿವಾದ ಆಲದ  ಮರದ ಹಾಗೆ ಬೆಳೆಯಿತು.. ಸಿಕ್ಕಲ್ಲೆಲ್ಲ ಜಗಳಗಳು ಮನಸ್ತಾಪಗಳು ಬೇರು ಬಿಟ್ಟು ಬೆಳೆಯಲು ಶುರುವಾಯಿತು..

ಇವರ ವಾಗ್ಯುದ್ಧ ಎಲರಿಗೂ ಅರ್ಥವಾಗತೊಡಗಿತು.. ಎರಡೂ ನಾ ಹೆಚ್ಚು ತಾ ಹೆಚ್ಚು ಅಂಥಾ ಅಸಹಾಕಾರ ನೀಡುತ್ತಾ ಹೋಯಿತು. ಇದರ ಪರಿತಾಪ ಭುವಿಯ ಎಲ್ಲರಿಗೂ ಸುಡಲು ಶುರುವಾಯಿತು ಕಾರಣ ಉಪ್ಪಿಲ್ಲದೇ ಅಡಿಗೆ ರುಚಿಸುತ್ತಿರಲಿಲ್ಲ.. ಹತ್ತಿಯಿಲ್ಲದೆ ಭುವಿಯ ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ ಕಳೆಯುವುದು ಅಸಾಧ್ಯವಾಗತೊಡಗಿತು.

ಎಲ್ಲರೂ ಕೃಷ್ಣನ ಮೊರೆ ಹೋದರು.. ಕೃಷ್ಣನಿಗೆ ಎಲ್ಲವೂ ತಿಳಿದಿತ್ತು.. ತನ್ನ ಟ್ರೇಡ್ ಮಾರ್ಕ್ ನಗು ಬೀರುತ್ತಾ ಕೊಳಲಲ್ಲಿ "ಬಿದಿರಿನ ಕಾಡಿನಲ್ಲಿ ಕೂಗಿದೆ ನಿನ್ನ್ ಹೆಸರ .. ಬಿದಿರೆಲ್ಲ ತಾಯಿಯಾಯ್ತು ಯಾವ ಮಾಯೆ... " ಎಂದಾಗ... ಕೃಷ್ಣ ಸುಂದರ ಯಶೋಧೆಯ ರೂಪದಲ್ಲಿ ಕಾಣಿಸಿಕೊಂಡ...

ಜನರೆಲ್ಲಾ.. ನಿಟ್ಟುಸಿರು ಬಿಟ್ಟರು..  ನಮ್ಮ ಕೃಷ್ಣ ಬಂದಾ.. ಈ ಸಮಸ್ಯೆಗೆ ಪರಿಹಾರ ಶತಸಿದ್ಧ.. ನಡೀರಪ್ಪ ನಮ್ಮ ನಮ್ಮ ಕೆಲಸ ಮಾಡೋಕೆ ಹೋಗೋಣ ಅಂತ ಜಾಗ ಖಾಲಿ ಮಾಡಿದರು.

ಯಶೋಧೆ ರೂಪದಲ್ಲಿದ್ದ ಕೃಷ್ಣ ಸೀದಾ ಹತ್ತಿ ಮತ್ತು ಉಪ್ಪಿನ ಬಳಿ ಸಾಗಿದ.. ರಾಶಿ ರಾಶಿ ಉಪ್ಪು, ಹತ್ತಿ ಬೆಟ್ಟಗಳು ಹಾಯಾಗಿ ಮಲಗಿದ್ದವು.. ಕೃಷ್ಣ ಬಂದದ್ದನ್ನು ನೋಡಿ

ಎರಡು ಕೈ ಮುಗಿದು ನಮಸ್ಕರಿಸಿದವು.. ಏನೋ ಹೇಳಲು ಉಪ್ಪು ಬಾಯಿ ತೆಗೆಯಿತು.. ಹತ್ತಿ ಹೇಗೆ ಹೇಳಲಿ ಎಂದು ತಲೆ ಕೆರೆದುಕೊಳ್ಳಲು  ಶುರು ಮಾಡಿತು ...

ಇಬ್ಬರಿಗೂ ಸನ್ನೆ ಮಾಡಿದ ಯಶೋದೆ ರೂಪದ ಕೃಷ್ಣ...

"ಉಪ್ಪೆ ನೀನು ಸೀದಾ ಹೋಗಿ ಆ ಯಮುನೆ ನೀರಿನಲ್ಲಿ ಧುಮುಕಿ ಎದ್ದು ಬಾ"

ಏನೂ ಯೋಚನೆ ಮಾಡದೆ ಸೀದಾ ತುಂಬಿ ಹರಿಯುತ್ತಿದ್ದ ನದಿಗೆ ಉಪ್ಪು ... ದುಡುಂ ಎಂದು ಬಿದ್ದಿತು.. ಎದ್ದು ಬರಲು ಪ್ರಯತ್ನ ಮಾಡಿತು.. ಆದರೆ ಮೊದಲಿನ ರೂಪವಿರದ ಕಾರಣ.. ತೂರಾಡುತ್ತಾ, ಕಷ್ಟಪಟ್ಟು ಮೇಲೆ ಬರಲು ಶ್ರಮಿಸಿ ಕಡೆಗೆ ನೀರಿನ ರೂಪದಲ್ಲೇ ಮೇಲೆ ಬಂದಿತು..

ಹತ್ತಿ ಉಪ್ಪಿನ ವ್ಯವಸ್ಥೆ ಕಂಡು ಹಲ್ಲು ಬಿರಿಯುತ್ತಾ ನಿಂತಿತ್ತು.. ಯಶೋಧೆ ಹತ್ತಿಗೆ

"ಹತ್ತಿ ಈಗ ನಿನ್ನ ಸರದಿ.. "

ತಲೆ ಕೂದಲು ರಜನಿಕಾಂತನ ಸ್ಟೈಲ್ ನಲ್ಲಿ ಸರಿಮಾಡಿಕೊಂಡು... ಸ್ಪ್ರಿಂಗ್ ಬೋರ್ಡ್ ಮೇಲಿಂದ ಬೀಳುವಂತೆ ಚಕ್ರಾಕಾರವಾಗಿ ಯಮುನೆಗೆ ಬಿದ್ದಿತು.  ಸ್ವಲ್ಪ ದೂರ ತೇಲಾಡಿಕೊಂಡು ಸಾಗಿದ ಹತ್ತಿ..  ತೊಪ್ಪೆಯಾದಮೇಲೆ.. ಸಪೂರವಾಗಿದ್ದ ತನ್ನ ಮೈ ಭಾರವಾಗತೊಡಗಿತು.. ಅಲ್ಲೇ ಇದ್ದ ಬಂಡೆ, ಮರದ ರೆಂಬೆ ಕೊಂಬೆಗಳ ಸಹಾಯದಿಂದ ಪ್ರಯಾಸಪಟ್ಟು ದಡಕ್ಕೆ ಬಂದು ಉಸ್ಸಪ್ಪ ಎಂದು ಬಿದ್ದು ಬಿಟ್ಟಿತು..

ಉಪ್ಪು ಮತ್ತು ಹತ್ತಿ... ಎರಡು  ಜೋಲು ಮುಖ ಹಾಕಿಕೊಂಡು ಒಬ್ಬರಿಗೊಬ್ಬರ ಮುಖ ನೋಡಲಾರದೆ ತಲೆ ತಗ್ಗಿಸಿಕೊಂಡು ಕೂತವು.

ಯಶೋಧೆ ರೂಪದಲ್ಲಿದ್ದ ಕೃಷ್ಣ ಕೊಳಲು ನುಡಿಸಿಕೊಂಡು ಮರೆಯಾದ..  !

**********
"ತಾತ ಇದೇನು ಕಥೆ.. ಮುಂದೆ ಹೇಳು ತಂದೆ.. "

"ಮಗು ನೀನು ಹೇಳು.. ಈ ಕಥೆ ಕೇಳಿದ ಮೇಲೆ ನಿನ್ನ ಮನದಲ್ಲಿ ಓಡುತ್ತಿರುವ ಭಾವಗಳು.. ಇದರ ಬಗ್ಗೆ ಹೇಳು"

"ಪಿತಾಮಹ....  ಹತ್ತಿ ನೀರಲ್ಲಿ ನೆನೆದಾಗ ಆ ಕ್ಷಣಕ್ಕೆ ಭಾರವಾಗುತ್ತದೆ.. ಹಾಗೆಯೇ  ಕೆಲಸದ ಒತ್ತಡಗಳು, ಏನು ಮಾಡಬೇಕೆಂದು ಅರಿಯದೆ ತೋಳಲಾಡುವುದು ಈ ಪರಿಸ್ಥಿತಿಯಲ್ಲಿ ಮನಸ್ಸು ನೆಂದ ಹತ್ತಿಯಂತೆಯೇ ಭಾರವಾಗಿರುತ್ತದೆ.. ಅಲ್ಲಿಂದ ಕೆಲ ಕಾಲ ಹೊರಗೆ ಬಂದು ಸಮಾಧಾನದಿಂದ ನೋಡಿದಾಗ, ಅರಿತಾಗ, ಚಿಂತಿಸಿದಾಗ ಮನಸ್ಸು ಹತ್ತಿಯ ಹಾಗೆಯೇ ಅರಳುತ್ತದೆ.. "

"ಸೂಪರ್ ಕಂದಾ ಇಷ್ಟವಾಯಿತು ನಿನ್ನ ವಿಶ್ಲೇಷಣೆ.. ಮುಂದೆ ಉಪ್ಪಿನ ಕಥೆ"

"ತಾತ.. ಇತರರ ಕಷ್ಟ ಸುಖಃಗಳಲ್ಲಿ ಮಿನುಗಿ ಮಿಂದು ಕರಗಿದಾಗ ಹಲವು ಬಾರಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತೇವೆ.. ಅವರೊಂದಿಗೆ ನಾವು ಬೆರೆತುಹೊಗುತ್ತೇವೆ.. ನಮ್ಮ ಅಸ್ತಿತ್ವವೇ ಕಾಣುವುದಿಲ್ಲ ಆದ್ರೆ ಆ ಕ್ಷಣದಲ್ಲಿ ನಾವಿಲ್ಲದೇ ಹೋದರೆ ಪರಿಸ್ಥಿತಿ ತಿಳಿಯಾಗುವುದಿಲ್ಲ.. ಅಲ್ಲಿ ನಮ್ಮತನ ಕಳೆದುಕೊಂಡರೂ ನಮ್ಮ ಮನಸ್ಸಿನ ಸಾರ ಬೆರೆತಾಗ ಸಿಗವ ಆನಂದವೇ ಬೇರೆ. ಉಪ್ಪು ನೀರಲ್ಲಿ ನೆಂದು ಕರಗಿತು.. ತನ್ನ ತನವನ್ನು ಕಳೆದುಕೊಂಡಿತು. ಆದರೆ ತಾನು ಬೆರೆತ ಸ್ಥಳವನ್ನು ತನ್ನ ಸ್ವಭಾವತಃ ಗುಣದಿಂದ ಬದಲಾಯಿಸಿತು. ಇಲ್ಲಿ ಗಮನದಲ್ಲಿಡಬೇಕಾದ ಅಂಶ ಉಪ್ಪು ತನ್ನ ಮಿತಿಯನ್ನು ಕಾಯ್ದುಕೊಳ್ಳಬೇಕು ಇಲ್ಲದೆ ಹೋದರೆ ತಾನು ಬೆರೆತ ಜಾಗವೇ ತನಗೆ ಪರಕೀಯವಾಗಿಬಿಡುತ್ತದೆ"

"ನಿಜ ಕಂದಾ ಇಷ್ಟವಾಯಿತು ನಿನ್ನ ಮಾತುಗಳು.. ಈಗ ಹೇಳು ಉಪ್ಪು ಹೆಚ್ಚೋ ಹತ್ತಿ ಹೆಚ್ಚೋ"

"ಚತುರ್ಮುಖನೆ.. ಉಪ್ಪಿನ ಗುಣ ಹತ್ತಿಗೆ ಬರಬೇಕು.. ಹಾಗೆಯೇ ಹತ್ತಿಯ ಗುಣ ಉಪ್ಪಿಗೆ ಇರಬೇಕು.. "

"ಬಿಡಿಸಿ ಹೇಳು ಮಗು"

"ಎಲ್ಲಾ ಬಲ್ಲ ನೀನು ನನ್ನ ಬಾಯಿಂದ ಕೇಳುವ ಬಯಕೆಯೇ.. ಇರಲಿ ಇರಲಿ.... ಉಪ್ಪು ಬೇರೆಯವರ ಜೊತೆಯಲ್ಲಿ ಬೆರೆಯಬೇಕು...  ಆದರೆ ಪೂರ ಕರಗಿ ಹೋಗಬಾರದು.. ಅಂದ್ರೆ ತನ್ನ ತನವನ್ನೇ ಮರೆತು.. ಕರಗಿ ಹೋದಾಗ ಮತ್ತೆ ಮೊದಲಿನ ಸ್ಥಿತಿಗೆ ಬರಲಾರದಷ್ಟು ದೂರ ಹೋಗಬಾರದು.  ತನ್ನ ಅರಿವಿನ ಮಿತಿ ಇರಬೇಕು.. ಕರಗಿದರು ಮತ್ತೆ ಸಹಜ ಸ್ಥಿತಿಗೆ ಮರಳಲು ಬೇಕಾಗಿರುವುದು ಆತ್ಮ ವಿಶ್ವಾಸ.  ಹತ್ತಿ ನೀರಲ್ಲಿ ನೆನೆಯಿತು.. ಭಾವನೆಗಳಿಗೆ ಮರುಗಿತು, ಆದರೆ ಪರಿಸ್ಥಿತಿಯ ಜೊತೆ ಕರಗಲಿಲ್ಲ.. ಆದರೆ ತನ್ನ ಉಪಸ್ಥಿತಿಯಿಂದ ವಾತಾವರಣವನ್ನು ನಿಭಾಯಿಸುವ ಮನಶಕ್ತಿ ಕೊಟ್ಟಿತು. ಮತ್ತೆ ಅವಕಾಶ ಸಿಕ್ಕಿದಾಗ ತನ್ನ ಯಥಾಸ್ಥಿತಿಗೆ ಮರಳಿತು. ಅಂದರೆ ಇದ್ದೂ ಇದ್ದೆ ಇಲ್ಲದೆಯೂ ಇದ್ದೆ ಎನ್ನುವ ಉದಾತ್ತ  ಭಾವ. ಇಲ್ಲಿ ತನ್ನ ಮಿತಿಯನ್ನು ಅರಿತ ಹತ್ತಿ ಬಲು ದೂರ ಸಾಗದೆ ಮತ್ತೆ ಮರಳಿ ತನ್ನ ಯಥಾಸ್ಥಿತಿಗೆ ಮರಳಿತು. ಇಲ್ಲಿ ಕಲಿಯಬೇಕಾದ್ದು ಎಲ್ಲದರಲ್ಲಿಯೂ, ಎಲ್ಲರಲ್ಲಿಯೂ ನಮ್ಮ ಪರಿಸ್ಥಿತಿಯ ಮಿತಿ ಅರಿತು ಬೆರೆಯಬೇಕು ಹಾಗೆಯೇ ನಮ್ಮ ಮೂಲರೂಪಕ್ಕೆ ಧಕ್ಕೆ ಬಾರದ  ಹಾಗೆ ಇರಬೇಕು.

"ಮುಂದೆ"

"ಉಪ್ಪಿನಲ್ಲಿ ಆತ್ಮ ವಿಶ್ವಾಸ ಕಂಡರೆ.. ಹತ್ತಿಯಲ್ಲಿ ವಿಶ್ವಾಸದ ಆತ್ಮವನ್ನು ಕಂಡೆ.. .. ಹಾಗಾಗಿ ಎರಡು ಹೆಚ್ಚೇ ಎರಡರದ್ದು ಸಮಾನ ತೂಕ.. "

"ಈಗ ನಿನ್ನ ಸಮಸ್ಯೆಗೆ ಉತ್ತರ ಸಿಕ್ಕಿತೆ"

"ಹೌದು ಪಿತಾಮಹ.. ನಾನು ಶಾಪಗ್ರಸ್ತನಾಗಿ ಈ ಜನ್ಮ ತಳೆದಿದ್ದರೂ.. ನನ್ನ ಮೂಲರೂಪ ವೈಕುಂಠವಾಸಿಯ ಚರಣಕಮಲದಲ್ಲಿಯೇ.. ಉಪ್ಪಿನ ಹಾಗೆ ನಾ ಇಲ್ಲೇ ಕರಗಿ ಹೋಗಬಾರದು.. ಅಂದರೆ ಕರ್ತವ್ಯದಲ್ಲಿ ನಮ್ಮನ್ನು ನಾವು ಮರೆಯಬಾರದು.. ಕರ್ತವ್ಯ ಪ್ರಜ್ಞೆ, ಸಾಮಾಜಿಕ ಹೊಣೆ ಎಲ್ಲವೂ ಹೌದು..  ಆದರೆ ಅದರೊಳಗೆ ಕಳೆದು ಹೋಗಬಾರದು...ನಮ್ಮ ಇರುವನ್ನು ಮರೆಯಬಾರದು.. ಹತ್ತಿಯ ಹಾಗೆ ತಮ್ಮೊಳಗೆ ಸಾರವನ್ನು ಹೀರಿಕೊಳ್ಳಬೇಕು.. ಮತ್ತೆ ಅರಳಬೇಕು.. ನಾನು ಎನ್ನುವ ಭಾವ ಮಾಯವಾಯಿತು.. ಅವತಾರಕ್ಕಾಗಿ ನಾರಾಯಣ ಆಗಮಿಸಲಿರುವ ಸಮಯವಾಯಿತು.. ಚತುರ್ಮುಖ ಬ್ರಹ್ಮ ನನ್ನ ಸಮಸ್ಯೆಗೆ ಸಮಸ್ಯೆಯೇ ಪರಿಹಾರವಲ್ಲ.. ಆದರೆ ಆ ಸಮಸ್ಯೆಯಲ್ಲೇ ಪರಿಹಾರವನ್ನು ತಿಳಿಸಿದ ನಿನಗೆ ಶರಣು... "

ಬ್ರಹ್ಮನ ಅಂತರ್ಧಾನನಾದ...

ಹಿರಣ್ಯಕಶಿಪು ತನ್ನ ಮುಖವನ್ನು ನೋಡಿಕೊಳ್ಳುತ್ತಾ ಗಿರಿಜಾ ಮೀಸೆಯ ಮೇಲೆ ಕೈ ಆಡಿಸಿ..

"ನಾನಾರು.. ಕಶ್ಯಪ ಬ್ರಹ್ಮನ ಮಗ..."
"ಛೆ ಮತ್ತೆ ಇದೆ ಸಂಭಾಷಣೆಗಳು.... "
"ನಾ....  ಹೋದರೆ ಹೋದೆನು... ಆ  ಇದು ಸರಿಯಾಗಿದೆ.. ಧನ್ಯೋಸ್ಮಿ ಬ್ರಹ್ಮದೇವ... !

22 comments:

 1. ಇತರರ ಕಷ್ಟ ಸುಖಃಗಳಲ್ಲಿ ಮಿನುಗಿ ಮಿಂದು ಕರಗಿದಾಗ ಹಲವು ಬಾರಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತೇವೆ.. ಅವರೊಂದಿಗೆ ನಾವು ಬೆರೆತುಹೊಗುತ್ತೇವೆ.. ನಮ್ಮ ಅಸ್ತಿತ್ವವೇ ಕಾಣುವುದಿಲ್ಲ ಆದ್ರೆ ಆ ಕ್ಷಣದಲ್ಲಿ ನಾವಿಲ್ಲದೇ ಹೋದರೆ ಪರಿಸ್ಥಿತಿ ತಿಳಿಯಾಗುವುದಿಲ್ಲ.. ಅಲ್ಲಿ ನಮ್ಮತನ ಕಳೆದುಕೊಂಡರೂ ನಮ್ಮ ಮನಸ್ಸಿನ ಸಾರ ಬೆರೆತಾಗ ಸಿಗವ ಆನಂದವೇ ಬೇರೆ................

  ಶ್ರೀಕಾಂತಣ್ಣ ಹೆಚ್ಚು ಬರೆಯಲು ನನಗೆ ಬರುವುದಿಲ್ಲ ........ ನಿಮ್ಮ ಬರಹದ ಶೈಲಿಗೆ ಒಂದು ಸಲಾಂ.........

  ReplyDelete
  Replies
  1. ಮನದ ಕ್ಲೇಷಗಳನ್ನು ಒಮ್ಮೊಮ್ಮೆ ಹೀಗೆ ಹರಿಯಬಿಟ್ಟಾಗ ಮನಸ್ಸು ಹತ್ತಿಯ ಹಾಗೆ ಹಾರುತ್ತದೆ.. ಆಗ ಮನದ ಅಡಿಗೆ ಉಪ್ಪಿನ ರುಚಿ ಕಂಡು ಸವಿಯಾಗಿರುತ್ತದೆ. ಧನ್ಯವಾದಗಳು ಸತೀಶ್..

   Delete
 2. ತುಂಬಾ ಚೆನ್ನಾಗಿದೆ Srikanth sir... ಉತ್ತಮ ನೀತಿಯನ್ನು ಹತ್ತಿ ಹಾಗು ಉಪ್ಪಿನ ನಿದರ್ಶನದೊಂದಿಗೆ ವಿವರಿಸಿದ ನಿಮ್ಮ ನಿರೂಪಣೆ ಶೈಲಿಗೆ Jai Ho!!!

  ReplyDelete
  Replies
  1. ಧನ್ಯವಾದಗಳು ಪದೀಪ್. ಜೀವನದ ಏರು ಇಳಿತಗಳಲ್ಲಿ ಉಪ್ಪಿನ ರುಚಿ ಹತ್ತಿಯ ಬಿಗಿ ಎಂದು ಕಳೆದುಕೊಳ್ಳಬಾರದು. ಸುಂದರ ಪ್ರತಿಕ್ರಿಯೆ ನಿಮ್ಮದು ಧನ್ಯವಾದಗಳು

   Delete
 3. ವಾಹ್ ಶ್ರೀಕಾಂತ್ ಜಿ , ಉತ್ತಮವಾದ ಸಂದೇಶ ಹೊತ್ತ ಲೇಖನ, ಒಮ್ಮೆ ಓದಿದರೆ ಯಾರಿಗಾದರೂ ಇದು ನಮ್ಮ ಬಗ್ಗೆ ಬರೆದಿದ್ದಾರೆ ಅನ್ನಿಸುತ್ತದೆ. ಇಂತಹ ತೊಳಲಾಟ ಎಲ್ಲರ ಅನುಭವಕ್ಕೂ ಬನ್ದಿರುತ್ತದೆ. ನಿಮ್ಮ ಈ ಲೇಖನ ಓದಿದರೆ ಸ್ವಲ್ಪ ಸಮಾಧಾನ ತರುತ್ತದೆ. ಜೈ ಹೊ ಜಿ

  ReplyDelete
  Replies
  1. ಗುಂಗಿ ಹುಳು ತಲೆಯೊಳಗೆ ಹೊಕ್ಕಾಗ ಮನಸಲ್ಲಿ ಏಳುವ ತರಂಗಳ ಮೇಲೆ ಪಯಣಿಸಿದಾಗ ಒಮ್ಮೊಮ್ಮೆ ಈ ರೀತಿಯ ಲೇಖನಗಳು ತಲೆಗೆ ಬರುತ್ತವೆ. ಧನ್ಯವಾದಗಳು ಬಾಲೂ ಸರ್ ಸುಂದರ ಪ್ರತಿಕ್ರಿಯೆ ನಿಮ್ಮದು.

   Delete
 4. ಶ್ರೀಕಾಂತ್;ಸುಂದರ ಸಂದೇಶ ಉಳ್ಳ ಬರಹ.ತುಂಬಾ ಇಷ್ಟವಾಯಿತು.

  ReplyDelete
  Replies
  1. ಡಾಕ್ಟ್ರೆ ಕೊಳಲಿನ ಗಾಯನದ ಜೊತೆಯಲ್ಲಿ ಅಮೋಘ ಲೇಖನಗಳನ್ನೂ ನೀಡಿರುವ ನಿಮ್ಮಿಂದ ಬರುವ ಪ್ರತಿ ಮಾತುಗಳು ತಾಯಿ ಮಗುವಿಗೆ ಕೊಡುವ ಪ್ರೀತಿಯ ಮುತ್ತಿನ ಹಾಗೆ. ಧನ್ಯೋಸ್ಮಿ ಗುರುಗಳೇ

   Delete
 5. 'ಬೇರೆಯವರ ಜೊತೆಯಲ್ಲಿ ಬೆರೆಯಬೇಕು' - 'ತನ್ನ ತನವನ್ನೇ ಮರೆತು.. ಕರಗಿ ಹೋದಾಗ' ಎರಡೂ ಭಾವಗಳಿಂದ ನನ್ನಂತಹ ಎಲ್ಲೋ ಕಳೆದು ಹೋಗಿ, ಬಚ್ಚಿಟ್ಟುಕೊಳ್ಳುವವರು ಕಲಿಯಬೇಕಿದೆ. ಇನ್ನಾದರೂ ಕಲಿತೇನೆ ಶ್ರೀಮಾನ್?

  ತನ್ನೊಳಗೇ ಸಿಹಿ ಅಡಗಿದ್ದರೂ
  ಹಾಲು ಸ್ವೀಕರಣ ಮಾತೃ ಹೃದಯೀ,
  ಸೀಕರ್ಣ ಕಲೆಸುವಾಗ ಬೆರೆತರೇ
  ಸಕ್ಕರೆಗೂ ಧನ್ಯತೆ ಹಾಲಿನ ಜೊತೆಗೆ

  ReplyDelete
  Replies
  1. ಭೂಮಿ ಗುಂಡಗಿದೆ ಮತ್ತು ಪುಟ್ಟುದಾಗಿದೆ. ಎಲ್ಲಿ ಕಳೆದು ಹೋಗುತ್ತೀರಾ ಬದರಿ ಸರ್.. ಎಲ್ಲೇ ಹೋದರು ನಾವು ನಿಮ್ಮ ಹಿಂದೆಯೇ. ಸುಂದರ ಚುಟುಕು ಕವನದ ಪ್ರತಿಕ್ರಿಯೆ ಹಿತ ನೀಡಿತು. ಧನ್ಯವಾದಗಳು

   Delete
 6. hi Sri,
  ಚೆನ್ನಾಗಿದೆ ಲೇಖನ.... ಪ್ರತಿ ಬಾರಿಯೂ ಹೊಸದೊ೦ದು ಕಾನ್ಸೆಪ್ಟ್ ತ೦ದು, ಅದನ್ನು ಅಚ್ಚುಕಟ್ಟಾಗಿ ಪ್ರಸ್ತುತಿ ಪಡಿಸುತ್ತೀರಿ..... ಇಷ್ಟವಾಯ್ತು.... ಒಳ್ಳೆ ನೀತಿ ಪಾಠ

  ReplyDelete
  Replies
  1. ಅಣ್ಣಾವ್ರ ಭಕ್ತ ಪ್ರಹ್ಲಾದ ಚಿತ್ರದ ಸಂಭಾಷಣೆಯಿಂದ ಒಂದು ಲೇಖನ ಬರೆಯಬೇಕು ಎನ್ನುವ ಹಂಬಲ ಬಹಳ ವರ್ಷಗಳಿಂದ ಇತ್ತು. ತಲೆಯೊಳಗೆ ಹೊಕ್ಕ ವಿಷಯ ಎಳೆದಾಡಿಸಿತು.. ಹಾಗಾಗಿ ಲೇಖನ ನಿಮ್ಮ ಮುಂದೆ. ಸುಂದರ ಪ್ರತಿಕ್ರಿಯೆ ನಿಮ್ಮದು. ಧನ್ಯವಾದಗಳು ಡಿ ಎಫ್ ಅರ್!

   Delete
 7. ಆತ್ಮ ವಿಶ್ವಾಸ ಮತ್ತೆ ವಿಶ್ವಾಸದಲ್ಲಿ ಆತ್ಮ .......... ವಾಹ್ ಎಂದು ಮಾತ್ರ ಹೇಳಲು ಪದಗಳು ಸಿಗುತ್ತಿವೆ. :)

  ReplyDelete
  Replies
  1. ಅದ್ಭುತ ಕಥೆಗಾರ್ತಿ ನೀವು ನಿವಿ... ಲೇಖನ ಇಷ್ಟವಾಯಿತು ಎಂದರೆ ಬರೆದದ್ದು ತಲುಪಿದೆ ಎಂದಾಯ್ತು. ಧನ್ಯವಾದಗಳು

   Delete
 8. Replies
  1. ಬಹಳ ಮಾಸಗಳಾದ ಮೇಲೆ ನನ್ನ ಲೋಕದಲ್ಲಿ ನೀವು ಧನ್ಯವಾದಗಳು ಚಿಕ್ಕಪ್ಪ..

   Delete
 9. ಕರ್ತವ್ಯ ಪ್ರಜ್ನೆಯಲ್ಲಿ ಅಹಂಕಾರವಿರಬಾರದೆಂದು ಹೇಳಿದ ಮಾತು ಹಲವರಿಗೆ, ಅವರ ಮನಸ್ಸಿಗೆ ಹಿಡೀದ ತೆರೆದ ಕನ್ನಡಿಯಂತೆ. ಒಳ್ಳೆಯ ಲೇಖನ.

  ReplyDelete
  Replies
  1. ಗುರಿಮುಟ್ಟುವ ಛಲವಿರುವ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ವಿನಾಯಕ್ .

   Delete
 10. ಶ್ರೀ ಸಾರ್.. ಬಹಳ ದಿನಗಳ ನಂತರ ಬ್ಲಾಗ್ ಲೋಕದ ಕಡೆ ಬರ್ತಾ ಇದಿನಿ.. ಇಷ್ಟು ದಿನ ಏನ್ ಮಿಸ್ ಮಾಡ್ಕೊಂಡಿದ್ದೆ ಅನ್ನೋದನ್ನ ನಿಮ್ಮ ಬರಹ ತೋರಿಸಿ ಕೊಡುವ ಹಾಗಿದೆ.. ಉಪ್ಪು ಹತ್ತಿಯ ಹಾಗೆ ನಾವೆಲ್ಲಾ.. ಯಾರು ಯಾರಿಗೂ ಹೆಚ್ಚಲ್ಲ.. ಯಾರು ಯಾರಿಗೂ ಕಡಿಮೆಯಲ್ಲ.. :)

  ReplyDelete
  Replies
  1. ಜೀವನದಲ್ಲಿ ನಾವೆಲ್ಲಾ ಏತದ ಹಾಗೆ ಬಾಗಿದರೆ ನೀರು ಸಿಗುತ್ತದೆ.. ತಲೆ ಎತ್ತಿ ನಿಂತರೆ ಗಿಡಗಳಿಗೆ ನೀರಾಗುತ್ತೇವೆ.. ಯಾವಾಗ ಬಾಗಬೇಕು ಏಳಬೇಕು ಎನ್ನುವ ಅರಿವಿದ್ದರೆ ಸಾಕು. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶ್

   Delete
 11. ಕಾಲಿಟ್ಟ ಕೂಡಲೇ ಬಂಪರ್ ಸಿಕ್ಕಿ ಬಿಡುತ್ತಲ್ಲ ಅಂತಹ ಖುಷಿ ನನ್ನದು.. ಬಹಳ ದಿನಗಳ ಮೇಲೆ ಬ್ಲಾಗ್ ಅಂಗಳಕ್ಕೆ ಕಾಲಿಟ್ಟಾಗ ಅಣ್ಣನ ಸೂಪರ್ ಬರಹ... ಮಸ್ತ್ ಮಸ್ತ್ ...

  ReplyDelete
  Replies
  1. ಸಮಯಕ್ಕೆ ಸಿಕ್ಕ ಮದ್ದು ಸಾಗರದ ಮುತ್ತಿಗಿಂತ ಬೆಲೆಜಾಸ್ತಿ ಎನ್ನುತ್ತಾರೆ. ಸುಂದರ ಪ್ರತಿಕ್ರಿಯೆಗೆ ನಿನ್ನದು ಪಿ ಎಸ್

   Delete